Tuesday, August 21, 2012

ಕಲಬುರ್ಗಿಯ ಕಲರವ



ದಸರೆ ರಜೆ ಯಲ್ಲೆ ವರ್ಗಾವಣೆ ಯಾದ್ದರಿಂದ  ಏನು ಮಾಡುವುದು ಎಂದು ತೋಚಲಿಲ್ಲ. ಯಾವದಕ್ಕೂ ಒಂದು  ಸಾರಿ  ಹೊಸ ಊರು  ನೋಡಿ ಕೊಂಡು ಬರಲು ನಿರ್ಧರಿಸಿದೆ. ಜತೆಗೆ ಗೆಳೆಯರಾದ ಶರ್ಮ ಮತ್ತು ವೀರಪ್ಪ ಸಹಾ ಬಂದರು. ರಾತ್ರಿಯಿಡಿ ಪಯಣಿಸಿ ಬೆಳಗಿನ ಏಳಕ್ಕೆ ಕಲಬುರ್ಗಿಗೆ ಬಂದು ಅಲ್ಲಿಂದ ಬೀದರ್‌ ಬಸ್ಸು ಹಿಡಿದೆವು.ಒಂದು ತಾಸು ಕಳೆಯಿತು.ಕಲಬುರ್ಗಿಯಿಂದ ೩೦ ಕಿಲೋ ಮೀಟರ್‌ಹೋಗುತ್ತಿದ್ದಂತೆ ರಸ್ತೆಯಲ್ಲಿ ಬಸ್ಸು ನಿಂತೊಡನೆ ನಾಲಕ್ಕಾರು ಜನ ಕಿಟಕಿ ಹತ್ತಿರ ಬಂದು “ಲಾಲ್ ಕೇಲಾ ಲಾಲ್‌ಕೇಲಾ” ಎಂದು ಕೂಗ ತೊಡಗಿದರು. ಕಣ್ಣು ಹಾಯಿಸಿದಾಗ ಅವರ ಕೈನಲ್ಲಿ ಕೆಂಪನೆಯ ಹಣ್ಣು ಕಾಣಿಸಿದವು ನಂತರ ಗೊತ್ತಾಯಿತು ಅವು ಬಾಳೆ ಹಣ್ಣು ಎಂದು.ನನಗೆ ವರ್ಗವಾದ ಊರು ಕೆಂಪು ಬಾಳೆ ಹಣ್ಣಿಗೆ ಪ್ರಸಿದ್ಧಿ ಎಂದು ಆಗ ಅರಿವಾಯಿತು. ಹಂಪೆಯ ಹತ್ತಿರದ ನನಗೆ ಬಾಳೆ ಹಣ್ಣು ಚಿರ ಪರಿಚಿತ.  ನಾನು ಪಚ್ಛ ಬಾಳೆ, ಏಲಕ್ಕೆ ಬಾಳೆ , ರಸ ಬಾಳೆ ನೇಂದ್ರಬಾಳೆ ನೋಡಿದ್ದೆ. ಕೆಂಪುಬಾಳೆ ಹಣ್ಣು ನೋಡಿದ್ದು ಅದೆ ಮೊದಲು. . ತುಸು ದಪ್ಪ ಮತ್ತು ನಸು ಸುವಾಸನೆ. ಅಷ್ಠೇನೂ ಸಿಹಿಯಿಲ್ಲ.ಬೆಲೆ ಸ್ವಲ್ಪ ಹೆಚ್ಚೆ. . ಒಂದೆ ಸಂತೋಷದ ಸಂಗತಿ ಎಂದರೆ ಈವರೆಗೆ ಎಲ್ಲಿ ನೋಡಿದರೂ ಕಣ್ಣು ಹರಿಯುವ ತನಕ ಕರಿ ನೆಲ. ಹಸಿರಿನ ಸುಳಿವೆ ಇರಲಿಲ್ಲ.ಆದರೆ  ಇಲ್ಲಿ ತುಸು ನೀರಾಸರೆ ಅದೂ ಭಾವಿಯಿಂದ ಇದೆ., ಅದಕ್ಕೆ ಅದು ಕೆಂಪುಬಾಳೆ ಬೆಳೆಗೆಹೆಸರುವಾಸಿ.
ಕಾಲೇಜು ಎಲ್ಲಿ ? ಎಂದು ಕೇಳಿದಾಗ ಹೆದ್ದಾರಿಯಲ್ಲಿಯೆ ಊರಾಚೆಇರುವ ಕಲ್ಲಿನ ಕಟ್ಟಡವನ್ನು ತೋರಿಸಿದರು. ಅದು ಟಿಸಿಎಚ್‌  ಕಲೇಜು. ಅಲ್ಲಿನವರಗೆ ಕಾಲೇಜು ಎಂದರೆ ಅದೆ.   ಕಾರಣ ಅಲ್ಲಿ ಪ್ರಾಥಮಿಕ ಶಿಕ್ಕರು ಮನೆಗೊಬ್ಬರು. ಪದವಿ ಪೂರ್ವಕಾಲೇಜು ಹೈಸ್ಕೂಲು ಎಂದೆ ಪರಿಚಿತ.ಅದು ಊರಿಗೆ ಬರುವ ಮುಂಚೆಯೆ ಇದ್ದಿತು. ಭವ್ಯ ವಾಗಿತ್ತು.  ಒಳಗೆ ಹೋಗಿ ನೋಡಲು ಯಾರೂ ಇರಲಿಲ್ಲ. ಊರಲ್ಲಿ ಹೋಗಿ ವಿಚಾರಿಸೋಣ ಎಂದು ಹೊರಟೆವು.ದಸರೆ ರಜೆ. .ಮುಖ್ಯರಸ್ತೆಯಿಂದ  ಅರ್ಧ ಕಿಲೋ ಮೀಟರ್‌ನಡೆದರೆ  ಎದುರಿಗೆ ಒಂದು ಬೆಟ್ಟ ಅದರ ಸುತ್ತಲೂ ಸಣ್ಣ ದೊಡ್ಡ ಮನೆಗಳು.  ವಿಚಾರಿಸುತ್ತಾ ಊರ ಒಳಗೆ ನಡೆದಾಗ ಸ್ಥಳೀಯ ಶಿಕ್ಷಕರೊಬ್ಬರ ಮನೆ ತೋರಿದರು. ಹಾದಿಯುದ್ದಕ್ಕೂ ಹೊಸ ಮಾಸ್ತರ ಬಂದಾರ ಎಂದು ಮಿಕಿಮಿಕಿ ನೋಡುವವರೆ  ನಾಲ್ಕು ನೂರು  ಮೈಲು ದೂರದ ಊರು. ನೋಡಿಕೊಂಡು ಹೋಗಲೆಂದು ಜತೆಗೆ ಶರ್ಮ ಹಾಗೂ  ವೀರಪ್ಪ ಎಂಬ ಗೆಳೆಯರೂ ಜತೆಗೆ  ಬಂದಿದ್ದರು. ನಾವು ಅಲ್ಲಿನ ರೆಡ್ಡಿ ಮಾಸ್ತರ್ಮನೆಗೆ ಹೋದೆವು. ಅವರು ಸ್ಥಳಿಯರಾದ್ದರಿಂದ ಅವರೆ ರಜೆಯಲ್ಲಿ ಪ್ರಭಾರೆ ಯಲ್ಲಿ ಇದ್ದರು..ಮನೆ ದೊಡ್ಡದು.. ಹೆಬ್ಬಾಗಿಲು ದಾಟಿದೊಡನೆ ವಿಶಾಲವಾದ ಅಂಗಳ. ಅಲ್ಲಿ ನಾಲಕ್ಕೆಂಟು ದನಗಳು ಅವುಗಳಿಗೆ ನೀರು ಕುಡಿಯಲು ಕಲಗಚ್ಚು ಅದಕ್ಕೆ ಹೊಂದಿ ಕೊಂಡಂತೆ ಬಾಗಿಲು ಅಲ್ಲಿ ಮತ್ತೆ ದನಗಳು ಅದನ್ನು ಅಂಗಳದ ಮೂರು ಕಡೆ ಸಾಲಾಗಿ ಕೋಣೆಗಳು. ಮುಂದೆರ ನಾಲಕ್ಕು ಅಡಿ ಕಟ್ಟೆ ಅದಕ್ಕೆ ತಗಡಿನ ಛಾವಣಿ.. ಹಳೆಯ ಕಾಲದ ಮನೆಗಳೆಲ್ಲ ವಾಡೆಯ  ರೀತಿಯಲ್ಲಿವೆ.  ಹೊರಗಿನವರಿಗೆ ಏನೂ ಕಾಣದ ಮತ್ತು ಸುಲಭ ವಾಗಿ ಒಳಬಾರದ ಎತ್ತರದ ಗೋಡೆಗಳಿ ಆವರಣ.. ಕೋಟೆಯ ಬಾಗಿಲನಂತಿರುವ ತಲಬಾಗಿಲು. ನಿಜಾಮರ ಆಡಳಿತದ ಫಲಶೃತಿಯೆ ಇದಕ್ಕೆ ಕಾರಣ
ರೆಡ್ಡಿ ಸರಿ ಸುಮಾರು ನನ್ನ ವಯಸ್ಸಿನವರೆ.ಹೋದ ಕೋಡಲೆ ಕನಾತ ಹಾಸಿಕೂಡ್ರಿಸಿದರು.
ಈಗ ಕಾಲೇಜು ಬಂದ ಅದರಿ ಸರ,. ಸಾಹೇಬರು ಕಲಬುರ್ಗಿನಾಗ ಹಾರಿ ,ನೀವು ಸೂಟಿ ಮುಗದಮೇಲೆ ಬಂದರೂ ಆತರಿ ಎಂದರು.
ನಮಸ್ಕಾರ ಹೇಳಿ ಹೊರಡಲು ಎದ್ದೆವು.
ಅದೆಂಗ ಆಗತದರೀ ಸರ,  ಜರಾ ದಮ್ಮ ಹಿಡೀರಿ, . ಮೊದಲು ಕೈಕಾಲುತೊಳೆದುಕೊಳ್ಳಿ ಎಂದರು
ಇಲ್ಲ ನಾವು ಕಲಬುರ್ಗಿಗೆ ಹೋಗುತ್ತೇವೆ, ಎಂದೆವು.
ಅದೇನ್ರೀ ಸರ, ನೀವು ಅಷ್ಟು ದೂರದಿಂದ ಬಂದು ಹಾಗ ಹೋಗೋದ, ನ್ಯಾರಿ ಮುಗಿಸಿ ಕೊಂಡ ಹೋಗ್ರೀ , ಎಂದು ಪಡಶಾಲೆಯಲ್ಲಿ  ಒತ್ತಾಯ ಮಾಡಿ ಕೂಡ್ರಿಸಿದರು.,
ಅಷ್ಟರಲ್ಲೆ ಪಟಪಟ ರೊಟ್ಟಿ ಬಡಿಯುವ ಶಬ್ದ ಕೇಳಿಸಿತು. ಹತ್ತೆ ಮಿನಿಟಿನಾಗ ಕೈಗೆ ಗಂಗಾಳ ಬಂತು. ಬಿಸಿ ಬಿಸಿ ಬಿಳಿ ಜೋಳದ ರೊಟ್ಟಿ, ಖಾರ ಬ್ಯಾಳಿ,ಸೇಂಗಾಪುಡಿ , ಮೇಲೆ ಗಜಗದ ಗಾತ್ರದ ಬೆಣ್ಣಿ ಮುದ್ದೆ.
ಬೇಡ ಬೇಡ ಎನ್ನುತ್ತಲೆ  ತಲಾ ಮೂರು ಹಂಚಿನ ಮೇಲಿನಿಂದ  ಬರುವ  ಬಿಸಿ ಬಿಸಿ ರೊಟ್ಟಿ ತಿಂದೆವು..
.ಬೇಡ ಬೇಡವೆಂದರೂ ಒತ್ತಾಯಮಾಡಿ ಹಾಕಿದ ಗಟ್ಟಿ  ಮೊಸರು ಅನ್ನ  ಉಂಡು  ಡರ್‌ ಎಂದು ಡೇಗಿದೆವು.
ಕಣ್ಣು ಕಾಣದ ದೇಶಕ್ಕೆ ಹಾಕಿರುವರಲ್ಲ ಎಂಬ ಶಂಕೆ ಮಾಯವಾಯಿತು.
ಜೀವನ ರೆಡ್ಡಿ ಮಾಸ್ತರ್‌ ಅವರ ಹೆಸರಿಗೆ ತಕ್ಕಂತೆ ಇರುವ ಅವರ  ಜೀವನ ಪ್ರೀತಿಗೆ ಮನಸು ಮಾರು ಹೋಯಿತು.
ನನ್ನ ಗೆಳೆಯರಿಬ್ಬರೂ ಫುಲ್‌ಖುಷ್‌.  ಬಿಡಪ್ಪಾ ನಮ್ಮಿಂದ ದೂರವಾದರೂ ಸುಖವಾಗಿ ಇರಬಹುದು. ಒಳ್ಳೆಯ ಜನ. ಹೊಸ ಜಾಗವಾದರೂ ಹಸನಾದ ಪ್ರದೇಶ. ಎಂದುತೃಪ್ತಿ ವ್ಯಕ್ತ ಪಡಿಸಿದರು.
.ಎಲ್ಲ ಕೆಲಸ ಹೂ ವೆತ್ತಿದಂತೆ ಆದುದರಿಂದ ಹಗುರ ಮನಸ್ಸಿನಿಂದ ಹೊರಟೆವು. ಉರಿಬಿಸಿಲ ಕರಿಮಣ್ಣಿನ ಆ ಪ್ರದೇಶದಲ್ಲಿನ  ಜನರ ಆತಿಥ್ಯಕ್ಕೆ ನಾನು ಮೊದಲ ಭೇಟಿಯಲ್ಲೆ ಮಾರು ಹೋದೆ.ಒಂದುಕ್ಷಣ ಮೊದಲ ಸಲ ಮಲೆ ನಾಡಿಗೆ ಕೊಟ್ಟ ಭೇಟಿ ನೆನಪಾಯಿತು. ಇಲ್ಲಿ ನಯ ನಾಜೂಕು ಕಡಿಮೆ. ಹೆಚ್ಚಿನ ನಾಗರೀಕ  ಸೌಲಭ್ಯವಿಲ್ಲದ ಊರು. ಅವರಲ್ಲಿನ ಮಾನವೀಯತೆ ಮನ ಗೆದ್ದಿತು.
ರಜೆ ಮುಗಿಸದ ಮೇಲೆ ಕಾಲೇಜಿಗೆ ಬಂದು ವರದಿಮಾಡಿಕೊಂಡೆ. ಬಹಳ ಹಳೆಯ ಕಾಲೇಜು. ಸುಸಜ್ಜಿತ ಕಟ್ಟಡ.ಗುಲ್ಬರ್ಗ ಜಿಲ್ಲೆಯ ವಿಶೇಷತೆ ಎಂದರೆ ಅಲ್ಲಿ ಎಲ್ಲೂ ಕಟ್ಟಡದ ಕೊರತೆ ಇಲ್ಲ. ಅಲ್ಲಿನವರೆ ಮುಖ್ಯ ಮಂತ್ರಿಗಳಾಗಿದ್ದ ಪರಿಣಾಮ. ಅಲ್ಲಿ ಲವಕುಶರೆಂದೆ ಹೆಸರಾದ ಖರ್ಗೆಮತ್ತು  ಧರ್ಮ ಸಿಂಗ್‌ ಸತತ ಮಂತ್ರಿಗಳಾಗಿರುವುದರಿಂದ ಕಾಮಗಾರಿ ಕೆಲಸ ಆಗಿತ್ತು.ಕಣ್ಣಿಗೆ ಕಾಣವ ತನಕ ಕರಿ ನೆಲದ ಮೇಲೆ ಗೆರೆ ಹೊಡೆದಂತಹ ರಸ್ತೆಗಳು. ಆದರೂ  ಶಿಕ್ಷಕರ ಕೊರತೆ ಬಹಳ.ಮತ್ತು ಶೈಕ್ಷಣಿಕವಾಗಿ ಬಹಳ ಹಿಂದುಳಿದ ಪ್ರದೇಶ. ಉಪನ್ಯಾಸಕರಾದ ಮಸ್ಕಿಯ ಮಲ್ಲಣ್ಣ, ಬಿಜಾಪುರದ ಹಿರೆ ಗೌಡರ, ಮಹಾರಾಷ್ಟ್ರದ ಮಾರುತಿ ಧಾನೆ, ಉಪನ್ಯಾಸಕರು ಶಿವಮೊಗ್ಗದ ವರು ಪ್ರಾಂಶುಪಾಲರು.ಬಹುತೇಕ ಎಲ್ಲರೂ ಹೊರಗಿನವರೆ. ಗೆಳೆಯರ ಕೋಣೆಯಲ್ಲಿ ತಂಗಿದೆ. ಊಟಕ್ಕೆ ಒಂದೆ ಒಂದು ಖಾನಾವಳಿ. ಕುಂಬಾರಣ್ಣನ ಗುಡಿಸಲ ಹೋಟೆಲಿನಲ್ಲೆ ನಮ್ಮೆಲ್ಲರ ಊಟ .ಈ ವರೆಗೆ ನನಗೆ ಮನೆ ಯಿಂದ  ಹೊರಗೆ ಊಟ ಮಾಡಿ ಅಭ್ಯಾಸ ಇರಲಿಲ್ಲ.ಈಗ ಆಪದ್ದರ್ಮವೆಂದು   ತಟ್ಟಿ ಹೋಟೇಲ್‌ನಲ್ಲಿ ಊಟ. .
ಅಲ್ಲಿನ ಕನ್ನಡದ ಪರಿಚಯ  ಮನೆ ಹುಡುಕಲುಹೋದಾಗ ಆಯಿತು. ಎರಡು ಖೊಲ್ಲಿ ಮಕಾನ ಅದರಿ .ಆಜೂ ಬಾಜೂದರ  ಖೂನಾ ಆದಮ್ಯಾಲ ಚೊಲೋಆಗತದ. . ಖಟ್ಲೆ ತರಲಿಕ್ಕೆ ಆರಾಮ. , ಎಂದಾಗ ಇದೇನಪ್ಪ ಮನೆ ಹುಡುಕಲು ಬಂದರೆ ಖೂನಿ, ಕಟ್ಲೆ  ಎನ್ನುವರು, ಎಂದು ಗಾಬರಿಯಾಯಿತು.  ನೀವು ಬರೋದ್ರಾಗೆ ಸುಣ್ಣ ಕಾರಣಿ ಮಾಡಸ್ತೀವಿ. ಎಂದರು ಸಣ್ಣ ಬಳಿಸುವುದು ನಮಗೆ ಗೊತ್ತು. ಈ ಕಾರಣಿ ಎಂದರೇನು ಎಂಬುದು ತಿಳಿಯಲಿಲ್ಲ.
ಹೋದ ಒಂದೆ ವಾರದಲ್ಲಿ ಮನೆ ಸಿಕ್ಕಿತು. ಅಲ್ಲಿನ ಕುಲಕರ್ಣಿಯವರದೆ ಮನೆ. ಎರಡು ಕೋಣೆಗಳು ಗಚ್ಚಿನವು. ಮುಂದೆ ತಗಡಿನ ಮಾಳಿಗೆ. ಅವರು ತುಂಬ ಗಟ್ಟಿಕುಳ. ಎಲ್ಲರೂ ಸುಶಿಕ್ಷಿತರು ಮತ್ತು ಒಳ್ಳೆಯ ನೌಕರಿಯಲ್ಲಿದ್ದರು.ಅಲ್ಲದೆ ಮನೆ ಮುಖ್ಯ ರಸ್ತೆಯಲ್ಲಿಯೆ ಇತ್ತು. ಅಲ್ಲಿನ ವಿಶೇಷ ವೆಂದರೆ ಮುಖ್ಯ ರಸ್ತೆ ಈಗಿನ ವರ್ತುಲರಸ್ತೆ ಯಂತೆ. ಊರ ಮಧ್ಯದಲ್ಲಿ ಒಂದು ಚಿಕ್ಕ ಬೆಟ್ಟ ಅದರ ಸುತ್ತೂ ರಸ್ತೆ ಬಹುಶಃ ಒಂದುಅರ್ಧ ಕಿಲೋ ಮೀಟರ್‌ ಉದ್ದವಿರಬಹುದು. ಅದರ ಆಚೀಚೆ ಮನೆಗಳು ಮತ್ತು ಅದರಲ್ಲಿಯೆ ಅಂಗಡಿ ಮುಂಗಟ್ಟು. ಅದೆಮುಖ್ಯ ವಾಣಿಜ್ಯ ಕೇಂದ್ರ. ಅಷ್ಟೆ ಅಲ್ಲ ವಾರಕೊಮ್ಮೆ ಆಗುವ ಸಂತೆಯೂ ಸಹಾ ಅಲ್ಲಿಯೇ.ಅಲ್ಲಿ ನಿತ್ಯ ತರಕಾರಿ ಸಿಕ್ಕದು.  ಏನಿದ್ದರೂ ವಾರದ ಸಂತೆಯಲ್ಲಿಯೇ ಕೊಂಡಿಟ್ಟಿರಬೇಕು.ನನಗೆ ಅಚ್ಚರಿಯಾದ ಸಂಗತಿ ಎಂದರೆ ಅಲ್ಲಿ ಸಂತೆಗ ಬರುತಿದ್ದ ಒಂಟೆಗಳು. ಬೀದರಿನ ಕೆಲಭಾಗದಲ್ಲಿ ಒಂಟೆಯೆ  ಸಾಮಾನು ಸಾಗಣಿಕೆಗೆ ಸಾಧನ .. ಸರ್ಕಸ್ಸಿನಲ್ಲಿ ಮಾತ್ರ ಒಂಟೆ ನೋಡಿದ್ದ ನಮಗೆ ಅಚ್ಚರಿಯೋ ಅಚ್ಚರಿ. ಸಂತೆಯಲ್ಲಿ ಕಾಳು ಕಡಿ, ಬೆಣ್ಣೆ ತರಕಾರಿ ಬಟ್ಟೆ ಬರೆ ಎಲ್ಲ ಮಾರಲು ಸಿಗುತಿತ್ತು. ಒಂದೆರಡು ಕಡೆ ಗೋಣೀ ಚೀಲಹಾಸಿ ಅವುಗಳ ಮೇಲೆ ರಾಸಿ ರಾಸಿ ಕಂದು ಬಣ್ಣದ ಎಲೆಗಳನ್ನು ಹಾಕಿ ಮಾರುತ್ತಿರುವುದು ಗಮನಿಸಿದೆ. ಅದನ್ನು ಪಾವು ಸೇರು ಆಧಾ ಸೇರು ಲೆಕ್ಕದಲ್ಲಿ ಕೊಳ್ಳುವರು.ಜೀವನ ರೆಡ್ಡಿಯವರನ್ನೂ ನಾವೂ ಅದನ್ನು ತೆಗೆದುಕೊಳ್ಳೋಣ ಎಂದಾಗ, ಅವರು ಜೋರಾಗಿ ನಕ್ಕರು. ಚಾ ಕಾಪಿ ಕುಡಿಯದ ನೀವು ಅದನ್ನೇನು ಮಾಡುವಿರಿ ಎಂದರು. ನಾನು ಹುಬ್ಬು ಏರಿಸಿದೆ.
ಅದುತಂಬಾಕ. ಎಲೆ ಅಡಿಕೆ ಹಾಕುವವರು ಅದನ್ನು ಇಲ್ಲಿ ಧಾರಾಳವಾಗಿ ಬಳಸುವರು. ಹೆಂಗಸರು ಕಡ್ಡಿ ಪುಡಿ ತಿನ್ನುವರು ಎಂದು ವಿವರಣೆ ಕೊಟ್ಟಾಗ ನನ್ನ ಅಜ್ಞಾನಕ್ಕೆ ನಾಚಿಕೆಯಾಯಿತು.ನಾನು ಹಳ್ಳಿಯ ಹಿನ್ನೆಲೆಯಿಂದ ಬಂದವನೆ ಆದರೂ ಮೊಳ ಉದ್ದ ತಂಬಾಕಿನ ಎಲೆಗಳನ್ನು ನೋಡಿದ್ದು ಇದೆ ಮೊದಲು. ಅದಕ್ಕೆ ಕಾಣುತ್ತದೆ ಇಲ್ಲಿ  ಬಸ್‌ ನಿಲ್ದಾಣದಲ್ಲಿ ಓಕಳಿ ಆಡಿದಂತೆ ಕೆಂಪು ಕಲೆಗಳು. ಅವು ತಾಂಬೂಲ ತಿಂದ ಉಗುಳಿದುದರ  ಕಲೆಗಳು ಮೊದಮೊದಲು ಸಂತೆಯಲ್ಲಿನ ದೀಡ, ಅಡೀಚ ಸವಾ , ಪಾವು ಚಟಾಕು ವೀಸ,ಎಂದರೆ ಎನೆಂದೇ ತಿಳಿಯುತ್ತಿರಲಿಲ್ಲ
ಅಲ್ಲಿನ ಇನ್ನೊಂದು ವೈಶಿಷ್ಟ್ಯವೆಂದರೆ ಮನೆಯಂತಿರುವ ಕಟ್ಟಡದಲ್ಲಿ  ಶಿವ ದೇವಾಲಯ ಮತ್ತು ಗುಡಿಯಂತಿರುವ ಕಟ್ಟಡದಲ್ಲಿ ಮೇಲೆ ಹಸಿರು ನಿಶಾನೆ.ರಜಾಕಾರರ ಹಾವಳಿಯನಂತರ ಅಲ್ಲಿ ಕೋಮು ಗಲಭೆ ಯಾಗಿಯೆ ಇಲ್ಲ.ಅಲ್ಪ ಸಂಖ್ಯಾತರು ಹೆಚ್ಚಿನ ಪ್ರಮಾಣದಲ್ಲೆಇದ್ದರೂ ಸಾಮರಸ್ಯಕ್ಕೆ ಕುಂದಿಲ್ಲ.
ಅಲ್ಲಿ ತಲೆಯ ಮೇಲೆ ಟೊಪ್ಪಿಗೆ ಇಲ್ಲದವರೆಂದರೆ ಮೈಸೂರು ಕಡೆ ಮಂದಿ ಮಾತ್ರ. ಎಲ್ಲರ ತಲೆಗಳ ಮೇಲೂ ಬಹುತೇಕ ಬಡವ ಬಲ್ಲಿದ ನೆಂಬ ಬೇಧವಿಲ್ಲದೆ ಗಾಂಧಿ ಟೊಪ್ಪಿಗೆ ರಾರಾಜಿಸುತಿದ್ದವು ಅಲ್ಲಿಲ್ಲಿ ವಿಭಿನ್ನವಾದ ಟೋಪಿಗಳು ಇದ್ದವು. ಸುಶಿಕ್ಷತರನ್ನು ಬಿಟ್ಟರೆ ಉಳಿದವರು ಬಿಳಿ ಪೈಜಾಮಾ , ತುಂಬುತೋಳಿನ ಅಂಗಿ ಧಾರಿಗಳು. ಜಾತಿ ಭೇಧವಿಲ್ಲದ ಹೊಕ್ಕು ಬಳಕೆ..  ಅಬ್ದುಲ್ಅಣ್ಣ, ಕರೀಂ ಕಾಕಾ ಮಾಬೂ ಮಾಮ, ಬೀಯಮ್ಮ, ಬೂಬಕ್ಕ, ರೆಡ್ಡಿ ಮಾಮ,ಗೌಡಜ್ಜ , ಲೂಥರಣ್ಣ   ಎಂದು ಸಂಬಂಧ ಹಚ್ಚಿ ಆತ್ಮೀಯ ಸಂಬೋಧನೆ. ಇಲ್ಲವಾದರೆ ಅವರ ಮನೆತನದ ಹೆಸರಾದ ಗೌಡ್ರು, ಪಾಟೀಲ, ಮಾಲಿ ಪಾಟೀಲ್. ಬಿರಾದಾರ , ಕುಲಕರ್ಣಿ ಬಳಕೆ. , ವಿದ್ಯಾವಂತರಾದರೆ ಎಲ್ಲರೂ ಸಾಹೇಬರೆ. ಪಾಟೀಲ್‌ಸಾಬ್‌ ,ರಾವ್‌ಸಾಬ್. ಆಚಾರ್‌ಸಾಬ್‌  ಮೊದಲಾಗಿ. ಕಾಲೇಜು ಬಂದ ಮೇಲೆ ಹುಡುಗರ ಕ್ರಾಪು ಮತ್ತು ಪ್ಯಾಂಟು ಕಾಣುವಂತಾಯಿತಂತೆ . ಅಲ್ಲಿಯ ತನಕ ಶಾಲೆಯಲ್ಲೂ ಟೊಪ್ಪಿಗೆ ಕಡ್ಡಾಯ. ಇನ್ನು ಹೆಂಗಸರೂ ಅಷ್ಟೆ. ಎಲ್ಲರದೂ ತಲೆಯ ಮೇಲೆ ಸೆರಗು.ಕೆಲವಿದ್ಯಾವಂತರು ಮಾತ್ರ ಅದಕ್ಕೆ ಅಪವಾದ. ಹಳೆಯ ತಲೆ ಮಾರಿನವರೆಲ್ಲರಿಗೂ ಹೈದ್ರಾಬಾದಿನೊಡನೆ ಹೆಚ್ಚು ಒಡನಾಟ.ಉನ್ನತ ಶಿಕ್ಷಣ ಅಲ್ಲಿಯೆ. ಅದರಿಂದಾಗಿಯೆ ವೀರೆಂದ್ರ ಪಾಟೀಲ, ಮಲ್ಲಿಕಾರ್ಜುನ ಖರ್ಗೆ ,ಧರಮ್‌ಸಿಂಗ್‌ ಅವರ ಉರ್ದು ಭಾಷಣ ನಿಂತು ಕೇಳುವಷ್ಟು ಮಧುರ.ಜನಸಾಮಾನ್ಯರಿಗೂ ಉರ್ದು ಮಾತು ನೀರು ಕುಡಿದಷ್ಟು ಸಲೀಸು. ವ್ಯಾಪಾರ ವ್ಯವಹಾರಕ್ಕೆ  ಹೈದ್ರಾಬಾದು ಆದರೆ ರೋಗ ರುಜಿನಕ್ಕೆ ಷೊಲ್ಲಾಪುರ ಮತ್ತು ಮೀರಜ ಆಸ್ಪತ್ರೆಗಳು. ಯಾತ್ರೆ ಎಂದರೆ ಕೊಲ್ಲಾಪುರದ ಮಹಾಲಕ್ಷ್ಮಿ  ಪಂಡರಾಪುರದ ವಿಠೋಬ . ಅನೇಕರ ಪಾಲಿಗೆ ರಾಜಧಾನಿಯಾದ ಬೆಂಗಳೂರು ಪರಕೀಯ ಪ್ರದೇಶ.. ನಾನು ಯೋಚನೆ ಮಾಡಿದಾಗ ಹೊಳೆಯಿತು ಅದಕ್ಕೆ ಕಾರಣ ಅಲ್ಲಿರುವ ರಣರಣ  ಬಿಸಲು. ಅದರಿಂದ ಅವರು ಉಡುಪು ಅದಕ್ಕೆ ಅನುಗುಣ ವಾಗಿಯೆ ಇತ್ತು
ಇನ್ನು ಅಲ್ಲಿನ ಸಂಬೋಧನೆ ನನಗೆ ಮಜಾ ಕೊಡುತಿತ್ತು  . ಅಲ್ಲಿನ ಎಲ್ಲ ಗಂಡಸರೂ ಅಣ್ಣೋರು , ಎಲ್ಲ ಹೆಂಗಸರೂ ಅಕ್ಕೋರು.
ಮನೆಯವರು ಬಾಯೇರು.  ಬಹು ತೇಕ  ಹೆಣ್ಣು ಮಕ್ಕಳದು ಮದುವೆಯಾದ ಮೇಲೆ . ಬಾಯಿ ಜೋರು ಆಗುವುದರಿಂದ  ಬಾಯೇರು ಎನ್ನುವರು ಎಂದು ನಾವು ಹಾಸ್ಯ ಮಾಡುತ್ತಿದ್ದೆವು.
ಹೋದ ಹೊಸದರಲ್ಲಿ ನಮ್ಮ ಜವಾನನ್ನೂ ಕಾಸೀಮ್‌ ಎಂದುಶಿಕ್ಷಕರೊಬ್ಬರು ಕೂಗಿದರು.. ಅವನು ಇದ್ದಲಿಂದಲೆ “ಹೋರೀ”  ಎಂದ
 ನನಗೆ ಇಲ್ಲಿಯಾಕೆ  ಹೋರಿ ಬಂತು  ಎಂದುಕೊಂಡೆ.  ನಂತರ ತಿಳಿಯಿತು ಅಲ್ಲಿ ಯಾರನ್ನಾದರೂ ಕರೆದರೆ ಗೌರವ ಪೂರ್ಣವಾಗಿ . ಓ ಎಂದು ಹೇಳದೆ ಮರ್ಯಾದೆಯಿಂದ ಓರಿ ಎನ್ನವರು , ಅದೆ ಹೋರಿ ಯಾಗಿತ್ತು..
 ಒಂದು ದಿನ ನಮ್ಮ ಕಾಸೀಂ ಬಂದು , ಸರ, ಪಾರುಗೋಳು ಖೋಲ್ಯಾಗ ದಾಂಧಲೆ ನಡಸ್ಯಾವ  ತಾಬಡ ತೋಬಡ ಬರ್ರಿ ,ಸಾಹೇಬರು ಕೂಗಾಕ ಹತ್ಯಾರ  ಎಂದಾಗ , ನನಗೆ ತಲೆ ಬುಡ ತಿಳಿಯಲಿಲ್ಲ. ನಂತರ ಅಲ್ಲಿಯವರೊಬ್ಬರು ತಿಳಿಸಿದರು.. ತರಗತಿಯಲ್ಲಿ ಹುಡುಗರು ಗಲಾಟೆ ಮಾಡುತ್ತಿರುವರು ಪ್ರಿನ್ಸಿಪಾಲರು ಕರೆಯುತ್ತಿರುವುರು.ಎಂದು.
ಇಲ್ಲಿ ಹುಡುಗರು ಪಾರುಗೋಳು , ಹುಡುಗಿಯರಿಗೆ ಪಾರಿ ಎನ್ನುವರು. ಪೋರ ಮತ್ತು ಪೋರಿಯ ಶಬ್ದಗಳ ಗ್ರಾಮ್ಯವಾಗಿ ಪಾರ ,ಪಾರಿ ಆಗಿವೆ.
ಒಂದುಸಲ ನನ್ನ ಹೆಂಡತಿಗೆ ,ಅಕ್ಕೋರೆ  “ ಸಂಜಿಮುಂದ ತಟ್ಟಿ ಮುಂದ ಮಾಡ್ರಿ ಇಚಾಬತ್ ಬರ್ತಾವ ಎಂದರೆ  “,ನನ್ನ ಹೆಂಡತಿ ಪಿಳಿಪಿಳಿ ನೋಡುತ್ತಾ ನಿಂತಿದ್ದಳು.
ಹೋದ ಹೊಸದರಲ್ಲಿ ನೆರೆ ಮನೆಯವರು, ಅಕ್ಕೋರೆ ರಜಗಿಲ್ಲು ಬಳಸೋ ಮುಂದ ಮದುವಿ ಮಾಡಬೇಕರಿ ಎಂದರೆ , ರಜಗಿಲ್ಲು ಯಾರು ಗಂಡೋ,  ಹೆಣ್ಣೋ ? ಅದಕ್ಕೆ ಸಂಗಾತಿ ಹುಡುಕಿ ಮದುವೆ ಮಾಡುವುದು ಎಂದರೆ ಹುಡುಗಾಟದ ಮಾತೆ  ? ಎಲ್ಲ ಅಯೋ ಮಯವೆನಿಸಿತು .
ನಂತರ ಇನ್ನೊಬ್ಬರಿಂದ ತಿಳಿಯಿತು. ರಜಗಿಲ್ಲು ಎಂದರೆ ಕಸಬರಿಕೆ ಹೊಸ ಬಾರಿಗೆಯ ಹಂಚಿ ಕಡ್ಡಿಗಳ  ಚುಚ್ಚುವ ತುದಿಗಳನ್ನು ತುಸುವೆ ಸುಡುವುದಕ್ಕೆ ಅವರು ಮದವಿ ಮಾಡುವುದು ಎನ್ನುವರು..
ಬಾಜೂ ಮನೆಗೆ ಹೋದಾಗ ಕಲ್ಲಿ ಯಾಕ ನಿಂತೀರಿ ಕಿಲ್ಲಿ ಕೂಡ  ಬರ್ರಿ ,ಎಂದಾಗ ಕಲ್ಲಿನಂತೆ ನಿಂತಳು ನನ್ನ ಮಡದಿ.ಕಲಬುರ್ಗಿಯ ಭಾಷೆಯ ಸೊಗಡು ಅವಳಿಗೆ ತಿಳಿಯಲೆ ಇಲ್ಲ.  ಇಲ್ಲಿ ಎಂಬುದಕ್ಕೆ ಅವರು  ಕಿಲ್ಲಿ ಮತ್ತು ಅಲ್ಲಿ ಎನ್ನಲು ಕಲ್ಲಿ ಎನ್ನುವರು
ಕನ್ನಡವನ್ನೆ ಮಾತನಾಡಿದರೂ  ಅನೇಕ ಸಲ ನಾವು ಕಕ್ಕಾವಿಕ್ಕಿಯಾಗಲು ಅವರು  ಬಳಸುತಿದ್ದ ಪ್ರಾದೇಶಿಕ  ಭಾಷೆ. ಜತೆಗೆ ಮರಾಠಿ ಮತ್ತು ಹಿಂದಿ ಪದಗಳ ಬಳಕೆ ಕಾರಣ ವಾಗುತಿದ್ದವು.ನೃಪ ತುಂಗನ ನಾಡಿನ ಕನ್ನಡದ ಪರಿಚಯ ಕಲಬುರ್ಗಿಯಲ್ಲಿ ನಮಗಾಯಿತು.  ಜತೆಗೆ ಹೈದ್ರಾಬಾದ್‌  ಕರ್ನಾಟಕ ಪ್ರದೇಶದ ಶೈಕ್ಷಣಿಕ  ಪರಿಸ್ಥಿತಿಯ ಪರಿಚಯವೂ ಆಗ ಹತ್ತಿತು.


No comments:

Post a Comment