Monday, August 20, 2012

ನಾಗಮಣಿ ರಹಸ್ಯ


ನ್ನ ಬಾಲ್ಯದ ಒಂದು ಸಾಹಸ ಈಗಲೂ ಮನದಲ್ಲಿ ಹಚ್ಚ ಹಸುರಾಗಿದೆ. ವಿದ್ಯುತ್‌ ಇಲ್ಲದ ರಾತ್ರಿಗಳು ನಮಗೆ ಅದ್ಭುತ ಲೋಕಕ್ಕೆ ದಾರಿಗಳಾಗಿದ್ದವು. ಕತ್ತಲಾಗುತ್ತಿದ್ದಂತೆ ಊಟ ಮಾಡಿ ಹಾಸಿಗೆ ಸೇರುತಿದ್ದೆವು. ಗೋಣಿಚೀಲದ ಮೇಲೆ ಕವದಿ ಹಾಸಿ ಹಳೆಯ ಸೀರೆಯ ತಲೆದಿಂಬು ಇದ್ದರೆ ಅದೆ ನಮಗೆ ಸುಪ್ಪತ್ತಿಗೆ. ಊಟವಾಗುವ ತನಕ ಲಾಟೀನು ಬೆಳಕು ಕೊಟ್ಟರೆ ನಂತರ ಚಿಮಣೀ ಎಣ್ಣೆ ಬುಡ್ಡಿ ನಮಗೆ ನಿದ್ದೆ ಬರುವ ತನಕ ಮಂಕು ಬೆಳಕು ಚೆಲ್ಲುವುದು. ಬಿಳಿ ಗೋಡೆಗಳ ಮೇಲೆ ನೆರಳುಗಳ ಆಟ ನಮಗೆ  ರಮ್ಯಲೋಕಕ್ಕೆ ರಹದಾರಿ ನೀಡುತಿತ್ತು. ನಿದ್ದೆ ಬರುವ ತನಕ ಕಥೆ ಕೇಳುವುದೆ ಒಂದು ದೊಡ್ಡ ಕೌತುಕ.. ಎಲ್ಲ ರಾಜ ರಾಣಿಯರ, ರಾಮಾಯಣ, ಮಹಾಭಾರತದ ಕಥೆಗಳು. ವಾಸ್ತವ ಮತ್ತು ಕಲ್ಪನಾಲೋಕದ ನಡುವಿನ ಗೆರೆ ಬಹುತೇಕ ಮಾಯವಾಗಿರುತಿತ್ತು. ಅದೊಂದು ಅದ್ಭುತ ರಮ್ಯಲೋಕ. ಕೇಳುತ್ತಾ ಕೇಳುತ್ತಾ ನಿದ್ರೆಗೆ ಜಾರಿದ ಮೇಲೆ ಕನಸಲ್ಲೂ ಅದೆ ಮುಂದುವರಿಯುತಿತ್ತು.
ಆಗ ಅಜ್ಜಿ ಹೇಳುತಿದ್ದ ಕಥೆಗಳಲ್ಲಿ ನಾಗಮಣಿಯ ಹೆಸರು ಸದಾ ಬರುತಿತ್ತು. ಅದನ್ನು ನಾಗರತ್ನ ಎಂತಲೂ ಕರೆಯುತಲಿದ್ದರು. ಅತಿ ಪುರಾತನವಾದ ಸರ್ಪದ ತಲೆಯಲ್ಲಿ ನಾಗರತ್ನವಿರುವುದು ಎಂಬ ನಂಬಿಕೆ ಬಲವಾಗಿತ್ತು.. ಸಂಪತ್ತಿಗೂ ಹಾವಿಗೂ ಅವಿನಾಭಾವ ಸಂಬಂಧ ಆ ನಂಬಿಕೆ ನಮ್ಮ ದೇಶದಲ್ಲಿ ಮಾತ್ರವಲ್ಲ ಎಲ್ಲ ಸಂಸ್ಕೃತಿಗಳಲ್ಲೂ ಇದೆ. ಇನ್ನು ಕೆಲವು ಕಡೆ ಅವನ್ನು ಡ್ರಾಗನ್‌ ಎನ್ನುವರು.. ಎಷ್ಟೋ ನಿಧಿ ಶೋಧನೆಯ ಸಿನೇಮಾಗಳಲ್ಲಿ ಇದನ್ನು ನಾವು ನೋಡಬಹುದು. ಅದರಲ್ಲೂ ಈಗಿನ ಡಿಜಿಟಲ್‌ ಯುಗದಲ್ಲಂತೂ ಮೈ ನವಿರೇಳುವ ದೃಶ್ಯಗಳಿರುತ್ತವೆ. ನಮ್ಮಲ್ಲಿ ಮಾತ್ರ ನಿಧಿ ಕಾಯುವುದು ಬರಿ ಹಾವು ಅಲ್ಲ, ಅದು ಘಟ ಸರ್ಪ. ಅದಕ್ಕೆ ಮೈ ಮೇಲೆ ರೋಮಗಳು ಬೇರೆ ಇರುವವು ಎನ್ನಲಾಗಿದೆ. ಕೆಲವು ಸಲ ಅದಕ್ಕೆ ಸಂದರ್ಭಕ್ಕ ತಕ್ಕಂತೆ ಐದು ಹೆಡ, ಏಳು ಹೆಡೆ ಇರುವದು ಎಂದು ವರ್ಣಿಸುವರು. ಅದರ ಬಗ್ಗೆ ನಮಗಂತೂ ಎಳ್ಳಷ್ಟೂ ಅನುಮಾನವಿರುತ್ತಿರಲಿಲ್ಲ. ಅಷ್ಟೆ ಏಕೆ ನಮ್ಮ ಪುರಾಣಗಳೆ ಹೇಳುತ್ತವಲ್ಲ ಆದಿಶೇಷನಿಗೆ ಸಾವಿರ ಹೆಡೆ ಇದೆ, ಅದರ ಮೇಲೆ ಭೂಮಂಡಲವೆ ನಿಂತಿದೆ ಎಂದು, ಹಾಗಿದ್ದ ಮೇಲೆ ಎಳೆಯ ಹುಡುಗರಾದ ನಾವು ನಾಗಮಣಿ ರಹಸ್ಯವನ್ನು ನಂಬದಿರುವುದು ಸಾಧ್ಯವೆ? ಆಗ ನಾನು ಕೇಳಿ ತಿಳಿದುಕೊಂಡಂತೆ ನಾಗಮಣಿಯನ್ನು ಹೊಂದಿರುವ ಸರ್ಪವು ಬಹು ದೊಡ್ಡದು. ಅಲ್ಲದೆ ವಯಸ್ಸಾಗಿರುವುದು. ಅದಕ್ಕೆ ಕತ್ತಲಲ್ಲಿ ಕಣ್ಣು ಮಸಕು. ಮನುಷ್ಯರಿಗೆ ವಯಸ್ಸಾದ ಮೇಲೆ ಕಣ್ಣು ಮಂದವಾಗುವುದು ಅದರಂತೆ ಎಲ್ಲ ಪ್ರಾಣಿಗಳಿಗೂ ಅದು ಸಹಜ ಲಕ್ಷಣ. ನಾವು ಕನ್ನಡಕ ಹಾಕುತ್ತೇವೆ. ಅವಕ್ಕೆ ಕನ್ನಡಕ ಹಾಕುವ ಸೌಲಭ್ಯವೂ ಇಲ್ಲ ಹಾವೂ ಕೂಡಾ ವಯಸ್ಸಾದಂತೆ ಜಡವಾಗುವುದು. ಅದು ರಾತ್ರಿಯಲ್ಲಿ ಮಣಿಯನ್ನು ಕೆಳಗೆ ಇಟ್ಟು ಆಹಾರ ಹುಡುಕುತ್ತಾ ಹೋಗುವುದು. ಕಾರಣ ಅದು ಮಣಿಯನ್ನು ಧರಿಸಿ ಹೊರಟರೆ ಇದು ಬರುವುದು ಇತರ ಬಲಿಯಾಗುವ ಪ್ರಾಣಿಗೂ ಗೊತ್ತಾಗಿಬಿಡುವುದು. ಆಗ ಅದು ಸುಲಭವಾಗಿ ತಪ್ಪಿಸಿಕೊಳ್ಳುವುದು. ಅದಕ್ಕೆ ಅದು ಮಣಿಯನ್ನು ನೆಲದ ಮೇಲೆ ಇಟ್ಟು ಸುತ್ತ ಮುತ್ತ ಹರಿದಾಡಿ ಆಹಾರ ಪಡೆಯುವುದು ಎಂಬ ವಿವರಣೆ ಕೇಳಿದ್ದೆವು. ಅಕಸ್ಮಾತ್‌ ಯಾರಾದರೂ ಆ ಮಣಿಯನ್ನು ಕದಿಯಲು ಬಂದರೆ ತಕ್ಷಣ ಧಾವಿಸಿ ಬಂದು ಕಚ್ಚುವುದು. ಅದರಿಂದ ಯಾರೂ ಅದರ ತಂಟೆಗೆ ಹೋಗುವುದಿಲ್ಲ.

ವಜ್ರ, ವೈಢೂರ್ಯ, ಮಾಣಿಕ್ಯ ಧಾರಾಳವಾಗಿ ಸಿಗಬಹುದು. ಆದರೆ ನಾಗರತ್ನ ಬಹು ವಿರಳ.  ಆದರೂ ಲಕ್ಷಕೊಬ್ಬರು ಧೈರ್ಯ ಮಾಡಿ ನಾಗಮಣಿಯನ್ನು ಪಡೆದವರಿದ್ದಾರಂತೆ. ಅವರದು ಬಹು ಮುನ್ನೆಚ್ಚರಿಕೆಯ ಕಾರ್ಯ ವಿಧಾನ. ಸರ್ಪ ಬದುಕಿರುವವರೆಗೆ ಮಣಿ ಪಡೆಯುವುದ ಆಗದ ಮಾತು. ಇನ್ನು ಅದನ್ನು ಕೊಲ್ಲುವುದು ಸಾಧ್ಯವೇ ಇಲ್ಲ. ಅದಕ್ಕಾಗಿ ಅವರು ಯೋಜನೆ ರೂಪಿಸುವರು.. ವರ್ಷಗಟ್ಟಲೆ ಕಾದು ಆ ಘಟ ಸರ್ಪದ ಸುಳಿವು ಪಡೆಯುತ್ತಾರೆ. ಅದು ಹರಿದಾಡುವ ಹಾದಿ, ಆಹಾರ ಹುಡುಕುವ ಸಮಯ ಗುರುತಿಸುವರು. ನಂತರ ಒಂದು ಕಬ್ಬಿಣದ ಜರಡಿಯಾಕಾರದ ವಿಶೇಷ ಉಪಕರಣ ತಯಾರಿಸುವರು. ಅದರ ತುಂಬ ಚಿಕ್ಕ ಚಿಕ್ಕ ರಂದ್ರಗಳಿರಬೇಕು. ಅದನ್ನ ನಾಗಮಣಿಯ ಮೇಲೆ ಮುಚ್ಚಿದಾಗಲೂ ನಾಗಮಣಿಯ ಕಿರಣಗಳು ಪ್ರಕಾಶಮಾನವಾಗಿ ಹೊರ ಸೂಸಬೇಕು. ಮತ್ತು ಆ ರಚನೆಯ ಮೇಲು ಭಾಗದಲ್ಲಿ ಮೊನಚಾದ ಡಬ್ಬಣದ ಗಾತ್ರದ ನೂರಾರು ಚೂಪಾದ ಮೊಳೆಗಳನ್ನು ಬೆಸೆದಿರುವುರು. ಆ ಘಟ ಸರ್ಪ ಓಡಾಡುವ ಜಾಗದಲ್ಲೆ ಅವಿತಿರುವರು. ಅದು ಬಂದು ನಾಗಮಣಿಯನ್ನು ನೆಲದ ಮೇಲೆ ಇಟ್ಟು ಆಹಾರ ಅರಸುತ್ತಾ  ಹೋದಾಗ ಕಬ್ಬಿಣದ ಸೂಜಿಯಂತಹ ಚೂಪಾದ ಮೊನೆ ಇರುವ ಆ ಉಪಕರಣವನ್ನು ಮಣಿಯ ಮೇಲೆ ಬೋರಲು ಹಾಕುವರು. ತಕ್ಷಣ ಅಲ್ಲಿಂದ ದೂರ ಓಡುವರು. ಆಗ ತುಸು ಪ್ರಕಾಶ ಕಡಿಮೆಯಾಗುವುದು. ಸರ್ಪದ ಗಮನಕ್ಕೆ ಬಂದರೂ ಅದು ಜಾಸ್ತಿ ಯೋಚನೆ ಮಾಡುವುದಿಲ್ಲ. ಹೇಗಿದ್ದರೂ ಬೆಳಕು ಕಾಣುತ್ತಿರುವುದಲ್ಲ.. ಅದರಲ್ಲೆ ಆಹಾರ ಹುಡುಕಿ ತಿಂದು ಸಾವಕಾಶವಾಗಿ ಮಣಿ ಇಟ್ಟ ಜಾಗಕ್ಕೆ ಬರುವುದು. ಸಾಧಾರಣವಾಗಿ ಹಾವುಗಳು ಒಮ್ಮೆ ಆಹಾರ ತಿಂದ ಮೇಲೆ ಹಾವುಗಳು ಜಡವಾಗುವವು.. ಆಹಾರ ಜೀರ್ಣಸಿಕೊಳ್ಳಲು ಹದಿನೈದು ದಿನ ಬೇಕು. ಸೋಮಾರಿಗಳನ್ನು `ಕಪ್ಪೆ ತಿಂದ ಹಾವಿನಂತೆ ಇದ್ದಾನೆ ಏಳುವುದೂ ಕಷ್ಟ ಎದ್ದ ಮೇಲೆ ನಡೆಯುವುದು ಇನ್ನೂ ನಿದಾನ' ಎಂದು ಹಂಗಿಸುವರು. ಆಹಾರ ಸೇವಿಸಿದ ಹಾವು ಬಂದು ನೋಡಿದರೆ ಬೆಳಕು ಕಾಣುವುದು ಆದರೆ ಮಣಿ ಹತ್ತಿರ ಹೋಗಲಾಗುವುದಿಲ್ಲ. ಅತ್ತಿತ್ತ ನೋಡುವುದು. ಯಾರೂ ಇಲ್ಲ. ಕೋಪ ಉಕ್ಕೇರುವುದು. ರಭಸದಿಂದ ಹೆಡೆ ಬಿಚ್ಚಿ ಮುಚ್ಚಿದ್ದ ಉಪಕರಣದ ಮೇಲೆ ಅಪ್ಪಳಿಸುವುದು. ತಕ್ಷಣ ಅದಕ್ಕೆ ಚೂಪಾದ ಮೊನೆಗಳಿಂದ ಗಾಯವಾಗುವುದು. ಅದು ಇನ್ನೂ ರೋಷದಿಂದ ಮತ್ತೊಮ್ಮೆ ಹೊಡೆಯುವುದು ತಕ್ಷಣವೆ ಅದರ ಸಾವು ಶತಃಸಿದ್ಧ. ನಂತರ ಹೊತ್ತೇರಿದ ಮೇಲೆ ಅವರು ಬಂದು ಸರ್ಪಕ್ಕೆ ಸಂಸ್ಕಾರ ಮಾಡಿ ಮಣಿಯನ್ನು ಪಡೆಯುವರು. ಸರ್ಪ ಸಂಸ್ಕಾರವಂತೂ ನಮ್ಮಲ್ಲಿ ಮರೆಯಲಾರದ ಆಚರಣೆ.
ಮನೆಯಲ್ಲಿ ಹಾವು ಬರುವುದು ಸಹಜ. ಅದರಲ್ಲೂ ಮಣ್ಣಿನ ಮನೆಗಳಲ್ಲಿ ಇಲಿಗಳ ಹಾವಳಿ ಬಹಳ. ಇಲಿ ಹುಡುಕಿ ಹಾವೂಗಳೂ ಬರುತಿದ್ದವು. ದೇವರೆಂದು ನಾಗರ ಕಲ್ಲನ್ನು ವರ್ಷಕೊಮ್ಮೆ ಪೂಜೆ ಮಾಡಿದರೂ, ಮನೆಯಲ್ಲಿ ದೇವರ ಜೊತೆ ಬೆಳ್ಳಿನಾಗಪ್ಪನನ್ನು ಇಟ್ಟಿದ್ದರೂ ನಿಜವಾದ ಹಾವು ಬಂದಾಗ ಮಾತ್ರ ಅದನ್ನು ಜೀವಸಹಿತ  ಬಿಡುತ್ತಿರಲಿಲ್ಲ. ಜಂತೆಯಲ್ಲಿದ್ದ ಹಾವನ್ನು ಹೊಡೆಯಲು ವಿಶೇಷವಾದ ಭರ್ಚಿಗಳೆ ಇದ್ದವು. ಅವುಗಳ ತುದಿಯು ಚೂಪಾಗಿದ್ದ ಅರ್ಧ ಅಂಗುಲ ಕೆಳಗೆ ಕೊಕ್ಕೆಯಂತಿರುತಿತ್ತು. ಅದನ್ನು ಸಂದಿಯಲ್ಲಿದ್ದ ಹಾವಿನ ಮೈಗೆ ಚುಚ್ಚಿದಾಗ ಕೊಕ್ಕೆ ಅದರ ಮೈನಲ್ಲಿ ಸಿಕ್ಕಿಹಾಕಿಕೊಂಡು ಬಿಡುವುದು. ಆಗ ಎಳೆದರೆ ಹಾವೂ ಹೊರಬರುವುದು. ಅದನ್ನು ಎಳೆದು ಕೊಂದು ಹಾಕುವರು. ಅಕಸ್ಮಾತ್‌ ಹಾವೇನಾದರೂ ಬಿಲದಲ್ಲಿ ಅಡಗಿದ್ದು ಖಂಡಿತವಾದರೆ ಕಪ್ಪೆ ಹಿಡಿದು ಅದಕ್ಕೆಉದ್ದನೆ ತಂತಿಗೆ ಜೋಡಿಸಿದ ಕೊಕ್ಕೆ ಗಾಳ ಸಿಕ್ಕಿಸುವರು. ಅದನ್ನು ಬಿಲದಲ್ಲಿ ಬಿಡುವರು.. ಹಾವು ಆ ಕಪ್ಪೆಯನ್ನು ನುಂಗಿದಾಗ ನಂತರ ಅದು ಪುರ್ಣವಾಗಿ ನುಂಗುವವರೆಗೆ ಬಿಟ್ಟು ನಂತರ ತಂತಿಯನ್ನು ಎಳೆಯುತಿದ್ದರು. ಕಪ್ಪೆ ನುಂಗಿದ ಹಾವು ಹೊರ ಬರುತಿತ್ತು. ಸಾಧಾರಣವಾಗಿ ಹೆಂಡತಿ ಬಸುರಿ ಇದ್ದವರು ಹಾವನ್ನು ಕೊಲ್ಲುತಿದ್ದಿಲ್ಲ. ಬಸುರಿ ಹೆಂಗಸಿನ ನೆರಳು ಬಿದ್ದರೆ ಹಾವಿಗೆ ಪರೆ ಬರುವುದು. ಅದರ ಕಣ್ಣು ಕಾಣಿಸುವುದಿಲ್ಲ. ಅದರ ಚಲನೆ ನಿಧಾನವಾಗುವುದು ಎಂದೂ ನಂಬಿಕೆ ಇದೆ. ಅದಕ್ಕೆ ಅದು ಹೆರಿಗೆಯಾಗುವವರೆಗೆ ಅಲ್ಲಿಯೇ ಸುತ್ತಾಡುವುದು ಎಂದು ನಂಬಿದ್ದರು. ಹಾವಿನ ಪೊರೆಯನ್ನಂತೂ ನಾನು ಸಾಕಷ್ಟು ಸಲ ನೋಡಿರುವೆ. ಅದನ್ನು ಪುಸ್ತಕದೊಳಗೆ ಇಟ್ಟರೆ ಹಾವಿನ ಭಯ ಇರುವುದಿಲ್ಲ. ಇನ್ನು ಹಾವನ್ನು ಹಿಡಿಯುವವರೂ ಇದ್ದರೂ. ಅವರಿಗೆ ಕೈನಲ್ಲಿ ಗರುಡರೇಖೆ ಇದೆ ಎನ್ನುವರು. ಅವರನ್ನು ನೋಡಿದರೆ ಹಾವು ಚಕ್ಕನೆ ನಿಂತು ಬಿಡುವುದು. ಆದರೆ ಅಂಥವರು ಬಹು ವಿರಳ. ಹಾವನ್ನು ಹೊಡೆದ ಮೇಲೆ ಅದರ ಬಾಯಲ್ಲಿ ತೂತಿನ ಬಿಲ್ಲೆ ಇಟ್ಟು ಅದನ್ನು ಸುಟ್ಟುಹಾಕುವರು. ನಂತರ ಅದರ ಬೂದಿಯಿಂದ ತೂತಿನ ಬಿಲ್ಲೆಯನ್ನು ಆಯ್ದು ಅದನ್ನು ಮಕ್ಕಳ ಉಡದಾರದಲ್ಲಿ ಕಟ್ಟಿದರೆ ಸರ್ಪದೋಷ ಪರಿಹಾರವಾಗುವುದು ಎಂದು ನಂಬಿದವರು ಬಹಳ.
ಮಕ್ಕಳಾಗದಿದ್ದರೆ ಸರ್ಪದೋಷವಿದೆ ಎಂದು ಪೂಜೆ ಮಾಡಿಸಿ ಮಗುವಾದ ನಂತರ ಅದಕ್ಕೆ ನಾಗರಾಜ, ನಾಗರತ್ನ, ಸುಬ್ರಾಯ, ಸುಬ್ಬುಲಕ್ಷಿ ಎಂದೆ ಹೆಸರಿಡುವರು. ಕಜ್ಜಿ ಹುರುಕು ಮೊದಲಾದ ಚರ್ಮವ್ಯಾದಿಗಳಿಗೆ ಅದರಲ್ಲೂ ಸರ್ಪ ಸುತ್ತು ಆದರೆ ಅದಕ್ಕೆ ನಾಗರ ಕಾಟವೆ ಕಾರಣ. ಬೆನ್ನಿಗೆ ಜಾಜಿನಿಂದ ಗರುಡನ ರೇಖಾಚಿತ್ರ ಬರೆಯುವರು. ಆಗ ಅದು ಹರಡುವುದು ನಿಲ್ಲುವುದು. ನಾಗರ ಪಂಚಮಿಯ ಮೊದಲೆ ಪೂಜೆಗೆ ಮೊದಲೆ ಎಳೆ ಹುಣಿಸೆಕಾಯಿ ತಿಂದರೆ ಕಜ್ಜಿ ಬರುವುದೆಂದು ಗಾಢವಾಗಿ ನಂಬಿದ್ದರು. ಈಗಲೂ ಸರ್ವ ಸಂಕಟ ನಿವಾರಣೆಗೆ ಕುಕ್ಕೆ ಸುಬ್ರಮಣ್ಯದಲ್ಲಿ ಆಶ್ಲೇಷಬಲಿ ಪೂಜೆ ಮಾಡಿದರೆ ಪರಿಹಾರವಾಗುವುದು ಎಂಬುದನ್ನು ರಾಜಕಾರಣಿಗಳು, ಸಿನೆಮಾ ನಟರಾದ ಅಮಿತಾಬ್‌, ಅಭಿಷೇಕ್‌ ಐಶ್ವರ್ಯ ರಾಯ್‌, ಕ್ರಿಕೆಟ್‌ ದೇವರು ಸಚಿನ್‌ ಮೊದಲಾದವರೂ ನಂಬಿ ನಡೆದುಕೊಂಡಿದ್ದಾರೆ. ನಾಗರಹಾವಿನ ತಳಕನ್ನು ನೋಡಬಾರದು ಎಂದು ನಿಷೇಧವಿದೆ. ಅಪರೂಪಕ್ಕೆ ನಾಗರಹಾವು ಕೇರೆ ಹಾವು ಜೋಡಿಯಾಗಿ ಕೂಡಿ ಆಡುವುದೂ, ಒಂದೊಕ್ಕೊಂದು ಸರಪಳಿಯಂತೆ ಸೇರಿ ಮೈಥುನದಲ್ಲಿ ತೊಡಗಿದಾಗ ಅವನ್ನು ತಡವಿದರೆ ಸಹಜವಾಗಿ ಕೋಪದಿಂದ ಹಾನಿ ಮಾಡಬಹುದೆಂಬ ಕಾರಣದಿಂದ ಈ ನಂಬಿಕೆ ಬಂದಿರಬಹುದು.
ಈ ರೀತಿಯಾದ ನಾಗಮಣಿಗಳು ಪ್ರಪಂಚದಲ್ಲಿ ಐದಾರು ಮಾತ್ರ ಇರಬಹುದು. ಅದನ್ನು ನೋಡಿದವರು ಬಹಳ ವಿರಳ. ಇದು ನಾವು ಕೇಳಿದ ಕಥಾನಕದ ಸಾರ. ಲಕ್ಷಕೊಬ್ಬರಿಗೆ ನಾಗಮಣಿ ನೋಡುವ ಅವಕಾಶ ಸಿಕ್ಕರೆ ಅದೆ ಅವರ ಪೂರ್ವಾಜಿತ ಪುಣ್ಯ. ನಮ್ಮ ಮನಸ್ಸಲ್ಲಿ ಈ ಮಾಹಿತಿ ಅಚ್ಚು ಒತ್ತಿದಂತೆ ಕೂತುಬಿಟ್ಟಿತ್ತು. ಒಂದು ದಿನ ಶಾಲೆಯಿಂದ ಮನೆಗೆ ಬರುವಾಗ ರಾತ್ರಿಯಾಗಿತ್ತು. ಪೂರ್ತಿ ಕತ್ತಲು. ಪುಣ್ಯಕ್ಕೆ ನನ್ನ ಜತೆಗೆ ಗಿರಿ ಇದ್ದ. ಇನ್ನೇನು ಊರ ಹತ್ತಿರ ಬಂತು ಎಂದುಕೊಂಡು ಧೈರ್ಯಗೊಂಡೆವು. ಆಗ ನಾವು ಕೆಮ್ಮಣ್ಣ ಕುಣಿಯ ಹತ್ತಿರವಿದ್ದೆವು. ಆದು ಮಳೆಗಾಲ ಕೆಮ್ಮಣ್ಣು ಕುಣಿಯಲ್ಲಿ ವಂಡು ನೀರು ತುಂಬಿತ್ತು. ಅದರಲ್ಲಿರುವ ಕಪ್ಪೆಗಳ ವಟವಟ ದನಿ ಕಿವಿಗೆ ರಾಚುತಿತ್ತು. ಅಷ್ಟರಲ್ಲಿ ಕುಣಿಯ ದಂಡೆಯ ಮೇಲಿದ್ದ ಕಳ್ಳಿಸಾಲಿನಲ್ಲಿ ಏನೋ ಹರಿದ ಸಳ ಸಳ ಸಪ್ಪಳ ಕೇಳಿಬಂತು. ನಮಗೆ ಖಾತ್ರಿಯಾಯಿತು ಅಲ್ಲಿ ಹಾವು ಹರಿದಾಡುತ್ತಿದೆ ಎಂದು. ನಾವು ತುಸು ದೂರದಲ್ಲೆ ರಸ್ತೆಯ ಮೇಲೆ ಇದ್ದೆವು. ಗಾಬರಿಗೆ ಕಾರಣವಿರಲಿಲ್ಲ. ಕುತೂಹಲದಿಂದ ತಿರುಗಿ ನೋಡಿದೆವು. ಕಳ್ಳಿಗಿಡದ ಬೊಡ್ಡೆಯ ಪಕ್ಕದಲ್ಲಿ ಥಳ ಥಳ ಹೊಳೆಯುವ ವಸ್ತುವೊಂದು ಕಾಣಿಸಿತು. ನಮಗೆ ಅನುಮಾನವೆ ಉಳಿಯಲಿಲ್ಲ. ಅಲ್ಲಿ ಘಟಸರ್ಪ ಪುನಃ ಬಂದಿದೆ. ಮಣಿಯನ್ನು ಇಟ್ಟು ಆಹಾರ ಹುಡುಕಲು ಹೊರಟಿದೆ ಎಂದು. ತುಸು ಹೊತ್ತು ನಿಂತು ನೋಡಿದೆವು. ದಿಕ್ಕು ತೋಚದಂತಾಯಿತು. ಲಕ್ಷಕೊಬ್ಬರಿಗೆ ನಾಗಮಣಿ ಕಾಣಿಸುವುದು ಎಂದು ಹೇಳಿದ ಮಾತು ನೆನಪಿಗೆ ಬಂತು. ಅದು ಸಿಕ್ಕುವುದಂತೂ ಕೋಟಗೊಬ್ಬರಿಗೆ. ಎದೆ ತುಂಬಿ ಬಂತು. ಆದರೂ ಘಟಸರ್ಪದ ಗೊಡವೆ ಬೇಡ ಎಂದು ಮನೆಗೆ ಬಂದೆವು. ಹಾದಿಯಲ್ಲಿ ಬರುವಾಗ ನಾಗಮಣಿಯ ಸುಳಿವನ್ನು ಬೇರೆ ಯಾರಿಗೂ ಕೊಡಬಾರದೆಂದು ಆಣೆ ಇಟ್ಟುಕೊಂಡೆವು. ಮನೆ ತಲುಪಿದಾಗ ನಮ್ಮ ಅಮ್ಮ, `ಏನಪ್ಪಾ ಇದು ಇಷ್ಟು ತಡಮಾಡಿದಿ. ಹುಳು ಹುಪ್ಪಡಿ ಓಡಾಡುವ  ಹೊತ್ತು ಒಬ್ಬನೆ ಬಂದಿಯಲ್ಲ', ಎಂದು ಕಾಳಜಿಯಿಂದ ಕೇಳಿದಳು.
`ಇಲ್ಲಮ್ಮಾ, ಜತೆಗೆ ಗಿರಿ ಇದ್ದ. ಸಾಲಿ ಬಿಡುವುದೆ ತಡವಾಯಿತು' ಸಮಜಾಯಿಷಿ ಹೇಳಿದೆ. ನಾಗಮಣಿಯ ಮಾತು ತುಟಿತನಕ ಬಂದಿತು. ಆದರೆ ಆಣೆ ಇಟ್ಟು ಕೊಂಡಿದ್ದರಿಂದ ಅದನ್ನು ಹೊರ ಹಾಕದೆ ನುಂಗಿಕೊಂಡೆ. ಅಂದು ರಾತ್ರಿ ನಿದ್ದೆ ಬೇಗ ಬರಲಿಲ್ಲ. ಕಣ್ಣು ಮುಚ್ಚಿದರೆ ಥಳ ಥಳ ಹೊಳೆವ ನಾಗಮಣಿ. ಕಿವಿಯಲ್ಲಿ ಭುಸುಗುಟ್ಟುವ ಸರ್ಪದ ಸದ್ದು. ನಿದ್ದೆಯ ಮಧ್ಯ ಮೆಟ್ಟಿ ಬಿದ್ದೆನೆಂದು ಕಾಣುತ್ತದೆ. ಅಮ್ಮನ ಕೈ ನನ್ನ ತಲೆ ಸವರುತಿತ್ತು. ರಾತ್ರಿ ಎಲ್ಲ ಬುಕ್ಕಸಾಗರದ ಏಳು ಹೆಡೆ ನಾಗಪ್ಪ ಮನೆ ಬಾಗಿಲಿಗೆ ಬಂದು ನಿಂತಂತೆ ಕನಸು. ಸುಬ್ರಮಣ್ಣಕ್ಕೆ ಹೋದಾಗ ನೋಡಿದ ಹುತ್ತದಲ್ಲಿನ ನಾಗರಾಜ ಮುಗಿಲೆತ್ತರ ನಿಂತಿದ್ದಾನೆ. ಅವನ ತಲೆ ಒನೆಯುವುದನ್ನು ನೋಡಿದರೆ ಸಾಕು ಭಯವಾಗುತ್ತಿದೆ. ನಾಗರ ಪಂಚಮಿಯ ದಿನ ಹಾಲು ಹಾಕಲು ಹೋಗುವ ಅಶ್ವತ್ಥ ಎಲ್ಲ ನಾಗರಕಲ್ಲುಗಳೂ ಜೀವಂತವಾಗಿ ಕಟ್ಟೆಯ ಮೇಲೆ ಹರಿದಾಡುತ್ತಿವೆ. ಅಲ್ಲಿರುವ ಅಶ್ವತ್ಥ ಗಿಡದ ರೆಂಬೆ ರೆಂಬೆಗಳಿಗೂ ಬಿಳಲುಗಳಂತೆ ಹಾವುಗಳು ಜೋಲು ಬಿದ್ದಿದಿವೆ. ಮರದ ಕೆಳಗೆ ಹೋಗುವವರನ್ನು ನೋಡಿ ಭುಸ್‌ ಎಂದು ತಮ್ಮೆರಡು ನಾಲಿಗೆ ಚಾಚುತ್ತಿವೆ. ಕಿಟಾರನೆ ಕಿರುಚಿ ಎದ್ದು ಕುಳಿತೆ. ಹಾಸಿಗೆ ಒದ್ದೆಯಾಗಿತ್ತು
ಯಾಕಪ್ಪಾ, ಹೆದರಿದ್ದೀಯಾ. ಕೆಟ್ಟ ಕನಸು ಏನಾದರೂ ಬಿದ್ದಿತೆ? ನಾನಿದ್ದೇನೆ ಏನೂ ಆಗಲ್ಲ ಮಲಗು, ಎಂದು ಅಮ್ಮ ಚುಕ್ಕಿ ತಟ್ಟಿದಳು. ಆಗ ಮಂಪರು ಬಂತು.


No comments:

Post a Comment