Monday, August 20, 2012

ಪಾಠದಷ್ಟೆ ಊಟ ಮುಖ್ಯ


ಬೆಂಗಳೂರು ಪ್ರಖ್ಯಾತ ವಿದ್ಯಾಕೇಂದ್ರ. ಸುತ್ತಮುತ್ತಲಿಂದ ಅಷ್ಟೆ ಏಕೆ ಪಕ್ಕದ ಆಂಧ್ರಪ್ರದೇಶದ  ಹಿಂದೂಪುರ , ತಮಿಳುನಾಡಿನ ಹೊಸೂರುಗಳಿಂದಲೂ ಇಲ್ಲಿಗೆ ಓದಲು ಬರುವರು. ಅದಕ್ಕಾಗಿ ಸಾಕಷ್ಟು ವಿದ್ಯಾರ್ಥಿನಿಲಯಗಳು ಇದ್ದವು . ತೋಟದಪ್ಪನ ಛತ್ರ, ತುಳಸಿ ತೋಟ ಮೊದಲಾದ ಕಡೆ ಉಚಿತ ವಾಸಕ್ಕೆ ಅನುಕೂಲವಿದ್ದಿತು, ಮರಿಯಪ್ಪನವರ ಹಾಸ್ಟೆಲ್‌, ಈಡಿಗ ಹಾಸ್ಟೆಲ್‌, ಜಯದೇವ ಹಾಸ್ಟೆಲ್‌, ಬಡಗುನಾಡು ಹಾಸ್ಟೆಲ್‌, ಬೊಬ್ಬರಕಮ್ಮಿ, ಹೊಯ್ಸಳಕರ್ನಾಟಕ, ಕಾಳಿದಾಸ ಮೊದಲಾಗಿ ಅನೇಕ ಹಾಸ್ಟೆಲ್‌ಗಳುಇದ್ದವು .  ಸೆಂಟ್‌ಜೋಸೆಫ್ ಕಾಲೇಜಿನವರಿಗೆ ಅವರದೆ ಪ್ರತ್ಯೇಕ ಹಾಸ್ಟೆಲ್‌ ಸೌಲಭ್ಯದೊರಕುತಿತ್ತು. ರಾಮಕೃಷ್ಣ ಆಶ್ರಮ ತುಸು ದುಬಾರಿಯಾದರೆ ರಾಮಕೃಷ್ಣ ಸ್ಟೂಡೆಂಟ್‌ಹೋಂ ಉಚಿತ ವಸತಿ ನೀಡುತಿತ್ತು.. ಕೆಲವು ಉಚಿತ , ಕೆಲವು ನಾಮ ಮಾತ್ರ ಶುಲ್ಕ ಪಡೆಯುವರು.ಕಾಲೇಜಿಗೆ ಪ್ರವೇಶ ದೊರಕಿದ ಮೇಲೆ ವಿದ್ಯಾರ್ಥಿನಿಲಯದಲ್ಲಿ ಸೇರಬೇಕಿತ್ತು.  ನನಗೆ ಇಲ್ಲಿ ಬಂದ ಮೇಲೆಯೆ ಗೊತ್ತಾಯಿತು ಪ್ರತಿ ಜಾತಿಯಲ್ಲೂ . ಉಪ ಜಾತಿಗಳು ಬಹಳ ಇವೆ ಎಂದು. ನನಗೆ ನಮ್ಮದು ಯಾವ ಪಂಗಡ ಎಂಬ ಮಾಹಿತಿಯೆ ಇರಲಿಲ್ಲ. ನಗರ ಪ್ರದೇಶದಲ್ಲಿ ಮಾತ್ರ ಈ ವಿಭೇಧ ಹೆಚ್ಚು. ಹಳ್ಳಿಗಳಲ್ಲಿ ಅವನ್ನು ಯಾರೂ ಅಷ್ಟಾಗಿ ಹಚ್ಚಿಕೊಳ್ಳುವುದಿಲ್ಲ.. ಅಂದಿನ ವಿಶೇಷವೆಂದರೆ ಹುಡುಗರಿಗೆ ಇದ್ದ ಅನುಕೂಲ ಹುಡುಗೆಯರಿಗೆ ಇರಲಿಲ್ಲ. ಬಹುತೇಕ ಹುಡುಗಿಯರಿಗೆ  ಒಂದೋ ಎರಡೋ ಕಾಲೆಜು ಹಾಸ್ಟೆಲ್‌ ಬಿಟ್ಟು ಬೇರೆ ಇರಲೆ ಇಲ್ಲ ಎನ್ನಬಹುದು ನಾನು ಒಂದೆರಡು ಹಾಸ್ಟೆಲ್‌ ಸಂದರ್ಶನಕ್ಕೆ ಹೋಗಿದ್ದೆ. ಒಂದು ಕಡೆ  ಕಾದು ಕಾದು ಸಾಕಾಯಿತು. ಮಹಡಿಯ ಮೇಲೆ ಸಂದರ್ಶನ. ಮೆಟ್ಟಿಲ ಮೇಲೆ ಕಟಾಂಜನಕ್ಕೆ ಒರಗಿ ನಿಂತಿದ್ದೆ. ಯಾರೋ ಬಂದು ಹಾಗೆಲ್ಲ ನಿಲ್ಲಬಾರದು ಅದು ಅಶಿಸ್ತು ಎಂದರು. ನಾನೋ ಹಳ್ಳಿಗಮಾರ. ಅಲ್ಲಿ ಕಾಲು ಅಲ್ಲಾಡಿಸುತ್ತಾ ನಿಂತಿದ್ದೆ. ಅವರ ಶಿಸ್ತಿನ ನಿಯಮ ನೋಡಿ ನಾನು ಸುಸ್ತಾದೆ. ಇನ್ನೋದು ಕಡೆ  ಇಂಜನಿಯರಿಂಗ್‌ ವಿದ್ಯಾರ್ಥಿಯೊಬ್ಬ ಸಂದರ್ಶನ ಮುಗಿಸಿ ಸಪ್ಪೆ ಮುಖ ಹಾಕಿಕೊಂಡು ಬಂದ.
ಎಲ್ಲರೂ,” ಏನಾಯಿತು ? ನಿನಗೆ  ಯಾವ ಪ್ರಶ್ನೆ ಕೇಳಿದರು ? “ ಎಂದು ಕುತೂಹಲದಿಂದ ಕೇಳಿದರು. ಅವನು  ಫಸ್ಟ್‌ ಕ್ಲಾಸ್‌ನಲ್ಲಿ ಪಸಾದವನು. ಸಂದರ್ಶನದಲ್ಲಿ  ” ನನಗೆ ಫಸ್ಟ  ಕ್ಲಾಸ್‌ ಬಂದಿದೆ ಸೀಟು ಕೊಡಿ ಎಂದು ವಿನಂತಿಸಿದ್ದ.”
 ಸಮಿತಿಯಲ್ಲಿ ಒಬ್ಬರು,” ಏನಯ್ಯಾ ನಾವು ಬಿ. ಇ. ಯಲ್ಲಿ ಸಿಂಗಲ್‌ ಅರ್ಡಿನೆನ್ಸ , ಡಬಲ್‌ ಆರ್ಡಿನೆನ್ಸ ಬಂದವರಿಗೆ ಸೀಟು ಕೊಟ್ಟಿಲ್ಲ ನಿನ್ನ ಫಸ್ಟ್‌ ಕ್ಲಾಸ್‌ ಏನು ಮಹಾ ಎಂದು”  ಗದರಿ ಕಳುಹಿಸಿದರಂತೆ.   ಇಂಜನಿಯರಿಂಗ್‌ನಲ್ಲಿ ಸಿಂಗಲ್‌ ಅರ್ಡಿನೆನ್ಸ ಎಂದರೆ ಒಂದು ವಿಷಯದಲ್ಲಿ ಫೇಲ್‌ ಆಗಿರುವುದು, ಡಬಲ್‌ ಆರ್ಡಿನೆನ್ಸ ಎಂದರೆ ಎರಡು ವಿಷಯದಲ್ಲಿ ಫೇಲಾಗಿರುವುದು. ಆಗ ಎರಡು ವಿಷಯಗಳಲ್ಲಿ ಫೇಲಾದರೂ ಮುಂದಿನ ತರಗತಿಗೆ ಹೋಗಬಹುದಿತ್ತು . ಆದರೆ ಅವನ್ನು ಮುಂದಿನ ವರ್ಷದ ವಾರ್ಷಿಕ ಪರೀಕ್ಷೆ ಮುಗಿಯುವುದರಲ್ಲಿ ಬಾಕಿ ವಿಷಯ ಕಟ್ಟಿ ಪಾಸು ಮಾಡಬೇಕಿತ್ತು. ಸಮಿತಿಯ ಸದಸ್ಯರಿಗೆ ಏನೂ ಗೊತ್ತಿರಲಿಲ್ಲ. ದಾನಿಗಳಾದ್ದರಿಂದ ಆಯ್ಕೆ ಸಮಿತಿಯಲ್ಲಿದ್ದರು . ತಮ್ಮ ಪ್ರಭಾವ ತೋರಿಸಲು ಮಾತನಾಡುತಿದ್ದರು.
ಇನ್ನೊಂದು ಸಂದರ್ಶನದಲ್ಲಿ ನನ ಗೆ  log 10  ಬೆಲೆ  ಎಷ್ಟು ಎಂದು ಕೇಳಿದರು. ನಾನು ಬೆಪ್ಪಾಗಿನಿಂತೆ. ನನಗೆ ಗೊತ್ತಿರಲಿಲ್ಲ. ಪರಿಣಾಮ ಹೇಳ ಬೇಕಾಗಿಲ್ಲ. ನನಗೆ ಸೀಟು ಸಿಗಲಿಲ್ಲ. ಹೀಗೆ ಮೂರು ನಾಲಕ್ಕು ಕಡೆ ಪ್ರಯತ್ನ ಮಾಡಿ .ಕೊನೆಗೆ  ಅಗಷ್ಟ ತಿಂಗಳಲ್ಲಿ  ಶೇಷಾದ್ರಿಪುರದಲ್ಲಿನ ಹಾಸ್ಟೆಲ್‌ ಒಂದಕ್ಕೆ ಸೇರಿದೆ. ಅಲ್ಲಿ ತಿಂಗಳಿಗೆ ಮೂವತ್ತು ರೂಪಾಯಿ .  ನನಗೆ ಅರ್ಧ ಶುಲ್ಕ ಮಾಫಿಯಾಗಿತ್ತು. ನಮ್ಮ ಸೋದರ ಮಾವ ಯಾರೋ ಪರಿಚಿತರನ್ನು ತಲಾಶ್‌ ಮಾಡಿ ಅವರಿಂದ ಹೇಳಿಸಿದ್ದರಿಂದ ನನಗೆ ಸೀಟು ದೊರಕಿತು.ಅಲ್ಲಿ ಸೇರಿದಾಗಿನಿಂದ ನಮ್ಮದು ಅದೆ ಪಂಗಡ ಎಂದು ಹೇಳಿಕೊಳ್ಳ ಬೇಕೆಂದು ಕಡ್ಡಾಯವಾಗಿ ನಮ್ಮ ಮಾವ ತಿಳಿಸಿದರು..
 ಶೇಷಾದ್ರಿಪುರದಿಂದ ಬಸವನಗುಡಿಯಲ್ಲಿನ ಕಾಲೇಜಿಗೆ ಏನಿಲ್ಲವೆಂದರೂ ನಾಲಕ್ಕು ಐದು ಮೈಲುದೂರ. ಒಂದು ಗಂಟೆಯಿಂದ ಒಂದೂವರೆ ತಾಸಿನ ಹಾದಿ.ಸಿಟಿ ಬಸ್ಸುಗಳು ಹೆಚ್ಚಿರಲಿಲ್ಲ. ಆಟೋ ಬಂದಿರಲಿಲ್ಲ. ಜಟಕಾಗಳೆನೋ ಇದ್ದವು ಆದರೆ ಅವುಗಳಲ್ಲಿ ಹೋಗುವ ಹಣಕಾಸಿನ ತಾಕತ್ತು ನನಗಿರಲಿಲ್ಲ. ಕಾಲಕಾಲೇಶ್ವರ ಮೋಟಾರು ಸರ್ವೀಸು ಶುರುಮಾಡಿದೆ. ಹೇಗೂ ನನಗೆ ಮೊದಲಿನಿಂದ  ನೆಡೆದ ಅಭ್ಯಾಸವಿದ್ದೆ ಇತ್ತು. ಆದರೆ ಬಹಳ ಸಮಯ ಹಾಳಾಗುವುದು ಓದಲು ಆಗುವುದಿಲ್ಲ , ಎಂದು ನನಗೆ ಒಂದು ಸೈಕಲ್‌ ಕೊಡಿಸಿದರು . ಅದೂ ಸೆಕೆಂಡ್‌ ಹ್ಯಾಂಡ್‌. ಅದು ಎಷ್ಟು ಹಳತಾಗಿತ್ತೆಂದರೆ ಅದಕ್ಕೆ ಬೀಗ ಹಾಕದೆ ಎಲ್ಲಿಯೇ ಬಿಟ್ಟರೂ ಅದನ್ನು ಯಾರೂ ಕದ್ದು ಒಯ್ಯುವ ಸಾಹಸ ಮಾಡುತ್ತಿರಲಿಲ್ಲ. ಆದರೆ ಅದು ನನಗಂತೂ ಒಳ್ಳೆಯ ಸೇವೆ ಕೊಟ್ಟಿತು . ಹೋಗುವಾಗ ಕಾಟನ್‌ ಪೇಟೆಯ ಮೂಲಕ ಹೋಗಿ,  ಬರುವಾಗ ಗುಡ್‌ ಷೆಡ್‌ ಮಾರ್ಗವಾಗಿ ಆನಂದರಾವ್‌ ಸರ್ಕಲ್‌ ಮೂಲಕ ಗೂಡು ಸೇರುತಿದ್ದೆ ನಮ್ಮ ಕಾಲೇಜು ಪಠ್ಯೇತರ ಚಟುವಟಿಕೆಗೆ ಹೆಸರುವಾಸಿ ಪ್ರತಿ ಶನಿವಾರ ಒಂದಲ್ಲ ಒಂದುಕಾರ್ಯ ಕ್ರಮ ತಿಂಗಳಿಗೊಂದು ನಾಟಕ. ವರ್ಷದ ಕೊನಗೆ ಅಂತರ್ ತರಗತಿ ನಾಟಕಸ್ಪರ್ಧೆ. ಅದಕ್ಕೆ ಕೆಲವು ನಾಟಕದ ಕಾಲೇಜು ಎಂದು ಹಾಸ್ಯ ಮಾಡುತಿದ್ದರು.ನಾನು ಶೇಷಾದ್ರಿ ಪುರದಿಂದ ಬರಬೇಕಾದ್ದರಿಂದ ಭಾಗವಹಿಸುವ ಅವಕಾಶ ವಂಚಿತನಾದೆ..ಕಲೆ ಮತ್ತು ಕಲಿಕೆಗಳೆರಡೂ ಸಮನಾದ ಅವಕಾಶ ಪಡೆದಿರುತ್ತಲಿದ್ದವು.ಅದರಿಂದಾಗಿಯೆ  ಖ್ಯಾತ ಆಟಗಾರರಾದ ಬಿಎಸ್‌ ಚಂದ್ರಶೇಖರ್‌, ಪ್ರಸನ್ನ , ಕುಂಬಳೆ ಮತ್ತು ಕಲಾವಿದರಾದ ವಿಷ್ಣುವರ್ಧನ, ಶ್ರೀನಾಥ್, ಸಿಆರ್‌ಸಿಂಹ , ಚಂದ್ರಶೇಖರ್‌, ರಮೇಶ್‌ ಅರವಿಂದ್‌,ವಿನಾಯಕ ಜೋಷಿ ಮೊದಲಾದವರು ಅಲ್ಲಿಂದಲೆ  ಬಂದಿರುವುದು. ಶಿಕ್ಷಣ, ಇಂಜನಿಯರಿಂಗ್‌ ಮತ್ತು ವೈಜ್ಞಾನಿಕ ಕ್ಷೇತ್ರದ ಹಿರಿಯ ತಲೆಗಳು ಅಲ್ಲಿನ ವಿದ್ಯಾರ್ಥಿಗಳು.ಸಿಎನ್‌ಆಎರ್ ರಾವ್‌ ಓದಿದ್ದು ಅಲ್ಲಿಯೆ. ಹೆಸರಾಂತ ಉದ್ಯಮಿಗಳು ಅದರ ಹಳೆಯ ಹುಡುಗರು. ಆ ಹಿರಿಮೆ ಇತ್ತೀಚಿನ ವರೆಗೂ ಮುಂದುವರಿದಿದೆ. ಅವರಿವರೇಕೆ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಗಳು ಅಲ್ಲಿನ ಹಳೆಯ ವಿದ್ಯಾರ್ಥಿ.
ಬೆಂಗಳೂರು ಸೈನ್ಸ ಫೋರಂ ಒಂದು ತಿಂಗಳುಕಾಲ ಉಪನ್ಯಾಸಗಳು, ಮಕ್ಕಳಿಂದ ವೈಜ್ಞಾನಿಕ ವಿಷಯಗಳ ಕುರಿತ ಭಾಷಣ ಸ್ಪರ್ಧೆ   ನಡೆಸುತಿತ್ತು.

ಒಬ್ಬ ಹುಡುಗ ಚಂದ್ರನ ಕುರಿತಾದ ಎಲ್ಲ ಮಾಹಿತಿ ನೀಡಿದ. . ಕೊನೆಗೆ ಐದು ನಿಮಿಷ ಕೇಳುಗರು  ಯಾವುದೆ ಪ್ರಶ್ನೆ ಕೇಳಬಹುದಿತ್ತು  ಚಂದ್ರನ ಬಗ್ಗೆ ಮಾತನಾಡಿದ ಹುಡುಗನಿಗೆ ಛೇಡಿಸಲು,
“ ಚಂದ್ರನ ಮೇಳೆ ಮಧುಚಂದ್ರ ಸಾಧ್ಯವೆ ?” ಎಂದು ಒಬ್ಬರು ಕೇಳಿದರು.
ಅದಕ್ಕೆ ಆ ಚಾಲಾಕಿ ಹುಡುಗ ಏಕೆ ಸಾಧ್ಯವಿಲ್ಲ ಎಂದ. ಆಗ ಇನ್ನೂ ಚಂದ್ರನ ಮೇಲೆ ಮಾನವನ ಪಾದಾರ್ಪಣೆಯಾ ಗಿರಲಿಲ್ಲ.  ಹೇಗೆ ? ಎಂದು ಅಚ್ಚರಿಯಿಂದ  ಕೇಳಿದರು ,
ಅವನು ಕನಸಸಿನಲ್ಲಿ ಮತ್ತು  ಕಾವ್ಯದಲ್ಲಿ ಸಾಧ್ಯ, ಎಂದು ಉತ್ತರಿಸಿದ.
ಎಲ್ಲರೂ ಗೊಳ್ಳನೆ ನಕ್ಕರು.

ನನಗೆ ನೆನಪಿರುವ ಇನ್ನೊಂದು ಭಾಷಣ ಎಂದರೆ ಸೂರ್ಯನ ಕುರಿತಾದುದು.
ಆ ಹುಡುಗ  ಸೂರ್ಯನ ಕುರಿತು ಸುಧೀರ್ಘವಾಗಿ ಮಾತನಾಡಿದ. ಪ್ರಶ್ನೋತ್ತರ ವೇಳೆಯಲ್ಲಿ ಒಬ್ಬರು  sun ಮತ್ತು  son  ನಡುವೆ ವ್ಯತ್ಯಾಸವೇನು? ಎಂದು ಕೇಳಿದರು
ಮಧ್ಯದ ಅಕ್ಷರ, ಎಂದ
ಅಷ್ಟೇನಾ , ಪುನಃ ಕೇಳಿದರು.” ಎರಡೂ ಮಾನವನ ಜೀವನಕ್ಕೆ ಅಗತ್ಯವಲ್ಲವೇ ?”
ಅವನು ತುಸು ಯೋಚಿಸಿ ಉತ್ತರಿಸಿದ. ಹೌದು ಎರಡೂ ಬೇಕೆ ಬೇಕು. ಆದರೆ ಒಬ್ಬ ಸನ್‌ ( son) ಹತ್ತಿರವಿದ್ದರೆ  ಸಂತೋಷ  ಇನ್ನೊಬ್ಬ ಸನ್‌ (sun)  ದೂರವಿದ್ದರೆ ಕ್ಷೇಮ ಎಂದ .
ಚಪ್ಪಾಳೆಯ ಸುರಿಮಳೆಯಾಯಿತು..
ಪ್ರಸಂಗಾವಧಾನದ ಪ್ರಾಧಾನ್ಯತೆಯ  ಹಿರಿಮೆ ಅಂದು ಅರ್ಥವಾಯಿತು.ಆದರೆ ಅದು ಎಲ್ಲರಿಗೂ ದಕ್ಕದ ಗುಣ.
ಎಲ್ಲರೂ ಗೊಳ್ಳನೆ ನಕ್ಕರು.
ವರ್ಷದ ಕೊನೆಯಲ್ಲಿ ಮೂರು ವಿಭಾಗದರಿಂದ ಗುರುಗಳಿಗೆ ವಿದಾಯ ಸಮಾರಂಭ ಮಾಡಲಾಯಿತು. ಬೋಧಕರಿಂದ ವಿದ್ಯಾರ್ಥಿಗಳಿಂದ ಭಾಷಣಗಳಾದವು. ಎ ವಿಭಾಗದ ಉಪನ್ಯಾಸಕರು ತಮ್ಮವಿಭಾಗವು ಯಾವಾಗಲೂ  A 1 ಎಂದಾಗ ಚಪ್ಪಾಳೆಯ ಸುರಿಮಳೆ ಯಾಯಿತು.,  ಬಿ ವಿಬಾಗದವು ನಮ್ಮವಿಭಾಗದವರೆ   ಬೆಸ್ಟ ಎಂದರು.  ಅದಕ್ಕೂ ಕರತಾಡನ  ಸಿಕ್ಕಿತು ಆಗ ಸಿ ವಿಭಾಗದವರು ನಾವು ಸದಾ ಸ್ವೀಟ್‌ ಎನ್ನಲು ಎಲ್ಲರೂ ಸುಮ್ಮನೆ ಕುಳಿತಿದ್ದರು. ಯಾರೂ ಚಪ್ಪಾಳೆ ತಟ್ಟಲಿಲ್ಲ.
ಅವರು ಸಿ ಹೇಗೆ ಸ್ವೀಟ್ ಆಗುವುದು ಎಂದು  ಯೋಚಿಸುತ್ತಿದ್ದಿರಾ ?. ಎಂದು ಕೇಳಿದಾಗ ಎಲ್ಲರೂ ಮಿಕಿಮಿಕಿ ನೋಡಿದರು
. ಅವರು ನಾವು ಕನ್ನಡಿಗರು ಸಿ ಎಂದರೆ ಕನ್ನಡದಲ್ಲಿ ಸಿಹಿ. ಅದೆ ಇಂಗ್ಲಿಷ್ ನಲ್ಲಿ ಸ್ವೀಟ್‌ ಎಂದು ದ್ವಿಭಾಷಾ ಪಾಂಡಿತ್ಯ ಮೆರೆದರು. ಎಲ್ಲರೂ ಹೋ ಎಂದು ನಕ್ಕರು.

ಪರೀಕ್ಷೆ ಮುಗಿಯಿತು  ಫಲಿತಾಂಶವೂ ಬಂದಿತು. ರಾಜ್ಯದಲ್ಲಿನ ಮೊದಲ ಹತ್ತು  ಸ್ಥಾನಗಳಲ್ಲಿ   ಆರು ನಮ್ಮ ಕಾಲೇಜಿಗೆ ಬಂದಿದ್ದವು . ಪ್ರಥಮ ದರ್ಜೆಯಲ್ಲಿ ಪಾಸಾದವರ ಹೆಸರಿನ  ಪಟ್ಟಿ ಬಹು ದೊಡ್ಡದಿತ್ತು .ದ್ವಿತಿಯ ದರ್ಜೆಯದು ಅದರ ಕಾಲು ಭಾಗದಷ್ಟು , ತೃತಿಯ ದರ್ಜೆಯ ಪಟ್ಟಿ ಬಹುಕಿರಿದು. ಅನುತ್ತೀರ್ಣರಾದವರು ಇಲ್ಲವೆ  ಇಲ್ಲ. ನನ್ನ ಹೆಸರು ಪ್ರಥಮ ದರ್ಜೆಯ ಪಟ್ಟಿಯಲ್ಲಿ ಕೊನೆಯವರೆಗೆ ನೋಡಿದರೂ  ಇರಲಿಲ್ಲ. ಆದರೆ ದ್ವಿತೀಯ ದರ್ಜೆಯ ಮೇಲುಭಾಗದಲ್ಲೆ ಇದ್ದಿತು.ಎರಡೆ ಅಂಕಗಳಿಂದ ಪ್ರಥಮ ದರ್ಜೆ ತಪ್ಪಿ ಹೋಗಿತ್ತು. ಆದರೆ ವಿಜ್ಞಾನದ ವಿಷಯದಲ್ಲಿ 67% ಬಂದಿತ್ತು.ನನಗೆ ಅಷ್ಟರಿಂದಲೆ ತೃಪ್ತಿಯಾಯಿತು.
 ಆ ಕಾಲದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ಇರಲಿಲ್ಲ. ಪಿಯುಸಿ ಅಂಕಗಳ ಆಧಾರದ ಮೇಲೆ ಸೀಟು ಹಂಚಿಕೆಯಾಗುತಿತ್ತು. ಮೌಖಿಕ ಪರೀಕ್ಷೆಗೆ ಹತ್ತು ಅಂಕಗಳು ಇದ್ದ ನೆನಪು. ಆಗ ಬೆಂಗಳೂರು ಮತ್ತು ಧಾರವಾಡದಲ್ಲಿ ಎರಡು ಕಡೆ ಸಂದರ್ಶನ ನಡೆಯುತಿತ್ತು. ಮೈಸೂರು ವಿಶ್ವ ವಿದ್ಯಾನಿಲಯಕ್ಕೆ ಸೇರಿದ ಕಾಲೇಜುಗಳಿಗೆ ಬೆಂಗಳೂರಿನಲ್ಲಿ , ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿದ ಕಾಲೇಜುಗಳಿಗೆ ಧಾರವಾಡದಲ್ಲಿ  ಸಂದರ್ಶನ ನಡೆಯುತಿದ್ದವು ಆಗ ಇದ್ದದ್ದು ಎರಡೆ ವಿಶ್ವವಿದ್ಯಾಲಯಗಳು.. ಎರಡು ಸರ್ಕಾರಿ ಕಾಲೇಜುಗಳು ಕೆಲವೆ ಖಾಸಗಿ ಕಾಲೇಜುಗಳು. ನನಗೆ ಇಂಜನಿಯರಿಂಗ್‌ ಸೀಟು ಸಿಗುವುದೆಂಬ ಖಾತ್ರಿ ಇತ್ತು.  ಆದ್ದರಿಂದ ನ್ಯಾಷನಲ್‌ ಕಾಲೇಜಿನಲ್ಲಿ  ನಾನು ಬಿಎಸ್ಸಿ ಪದವಿ ಪ್ರವೇಶಕ್ಕೆ ಅರ್ಜಿ ಹಾಕಲೆಇಲ್ಲ.. ನ್ಯಾಷನಲ್‌ ಕಾಲೇಜಿನಲ್ಲಿ ಇಂಜನಿಯರಿಂಗ್‌ ಪ್ರವೇಶ ಪಟ್ಟಿ ಬರುವ ವರೆಗೆ ಕಾಯುವುದೆ  ಇಲ್ಲ. ಮೊದಲೆ ಪ್ರವೇಶ ಪ್ರಕ್ರಿಯೆ ಮುಗಿಸುವರು. ಅಷ್ಟೆ ಅಲ್ಲ ಅವರು ಪಾಠವನ್ನೂ ಪ್ರಾರಂಭಿಸುವರು.ಆದರೆ ಪ್ರವೇಶವಾದ ನಂತರ ವರ್ಗಾವಣೆ ಪತ್ರ ನೀಡಿದರೂ ಶುಲ್ಕವಂತೂ ಮರಳಿ ಕೊಡುತ್ತಿರಲಿಲ್ಲ.ಅನೇಕರು ಹಣ ಹೋದರೂ ಹೋಗಲಿ ಎಂದು ಮುನ್ನೆಚ್ಚರಿಕೆಯ ಕ್ರಮವಾಗಿ ಇಲ್ಲಿಯೂ ಪ್ರವೇಶ ಪಡೆಯುವರು. ಆದರೆ ನಾನು ಎರಡೆರಡು ಕಡೆ ಶುಲ್ಕ  ಕಟ್ಟಿ. ಅನವಶ್ಯಕ  ಹಣ  ಏಕೆ  ಹಾಳು ಮಾಡಬೇಕು . ಎಂದು ಪದವಿ ತರಗತಿಗೆ ಅರ್ಜಿ ಹಾಕಲೆ  ಇಲ್ಲ. 
ನಮ್ಮ ಮಾವ ಸಂದರ್ಶನಕ್ಕೆ ಹೋಗುವ ಮುಂಚೆಯೆ ನಮ್ಮ ಅಪ್ಪನನ್ನು , “ ಇಂಜನಿಯರಿಂಗ ಓದಿಸುವುದು ಅಷ್ಟು ಸುಲಭದ ಮಾತಲ್ಲ.  ದೊಡ್ಡ ಮೊತ್ತದ ಹಣ  ಬೇಕಾಗುವುದು, ನಿನಗೆ ಓದಿಸಲಾಗುವುದೆ? ಎಂದು ಕೇಳಿದರು.
ಅದಕ್ಕೆ “ ಸಾಲ ಸೋಲ ಮಾಡಿ ಓದಿಸುವೆ ’ ಎಲ್ಲರಿಗೂ ಈ ಅವಕಾಶಸಿಗುವುದಿಲ್ಲ.” ಎಂದು ಒಪ್ಪಿಕೊಂಡರು ಅಪ್ಪ.
ಕಳೆದ ಸಲ 63% ಬಂದವರಿಗೆ ದಾವಣಗೆರೆಯಲ್ಲಿ ಸೀಟು ಸಿಕ್ಕಿತ್ತು. ಅದು ಹೇಗಿದ್ದರೂ ಹರಿಹರಕ್ಕೆ ಹತ್ತಿರ. ಅಲ್ಲಿ  ಸಿಗುವ ಭರವಸೆ ಇತ್ತು.ಕಾರಣ ಆಗಇಂಜನಿಯರಿಂಗ್‌ ಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಇರಲಿಲ್ಲ. ಪಿಯುಸಿ ಅಂಕಗಳನ್ನೆ ಆಧಾರವಾಗಿಟ್ಟುಕೊಂಡು ಪ್ರವೇಶ ನೀಡುವರು. ಆದರೆ ಮೌಖಿಕ ಪರೀಕ್ಷೆಗೆ 10 ಅಂಕಗಳು. ಅಲ್ಲಿಯೆ ಕೈಚಳಕ ನಡೆಯುತಿತ್ತು 60 ಅಂಕ ಬಂದವರಿಗೆ 9 ಕೊಡುವರು. 66 ಬಂದವರಿಗೆ 2 ಅಂಕ  ಕೊಟ್ಟರೆ ಆಯಿತು ಆರು ಅಂಕ ಕಡಿಮೆ ಇದ್ದವನಿಗೆ ಸೀಟು ದಕ್ಕುವುದು. ಈ ರೀತಿ ಆಗುವ ಸಂಭವವೂ ಇತ್ತು. ಸರಿಯಾದ ಸಂಪರ್ಕವಿದ್ದವರಿಗೆ ಮಾತ್ರ ಅದು ಸಾಧ್ಯವಿತ್ತು. ನಮ್ಮ ಮಾವ ಕಂಟ್ರಾಕ್ಟರ್‌ ಆದ್ದರಿಂದ ಆಗ ಶಿಕ್ಷಣ ಮಂತ್ರಿಯಾದ ಎಜಿ ರಾಮಚಂದ್ರರಾಯರ ಹತ್ತಿರ ನನ್ನನ್ನು ಕರೆದುಕೊಂಡು ಹೋದರು “ನಮ್ಮ ಹುಡುಗನಿಗೆ ಫಷ್ಟ ಕ್ಲಾಸ್‌ ಬಂದಿದೆ. ಸೀಟು ಸಿಗಬಹುದು. ಆದರೆ  ಅಂಚಿನಲ್ಲಿದೆ, ತಾವು ಒಂದು ಮಾತು ಹೇಳಿದರೆ ಖಾತ್ರಿಯಾಗುವುದು”, ಎಂದುವಿನಂತಿಸಿದರು.
ಅವರು ರಾಮಣ್ಣ  , “ಈ ವಿಷಯದಲ್ಲಿ ನಾನು ತಲೆ ಹಾಕುವುದಿಲ್ಲ. ನೋಡು, ದಡ್ಡ ಇಂಜನಿಯರ್‌ ಸೇತುವೆ ಕಟ್ಟಿದರೆ ಏನಾಗುವುದು? ನೀನೆ ಯೋಚಿಸು”. ಎಂದರು.
 ನನಗೂ ಅವರ ಮಾತು ಸರಿ ಎನಿಸಿತು
ಆಗ ಸಂದರ್ಶನವು ಬೆಂಗಳೂರು ಮತ್ತು ಧಾರವಾಡದಲ್ಲಿ ನಡೆಯುತಿದ್ದವು. ಆಗ ಇದ್ದ ಯುನಿವರ್ಸಿಟಿಗಳೆ ಎರಡು. ತಮ್ಮ ವ್ಯಾಪ್ತಿಯ ಕಾಲೇಜಿಗೆ ಆಯ್ಕೆ ಮಾಡುವುದು ಅವರ ಹೊಣೆ. ಆದರೆ ನನಗೆ  ಇಂಜನಿಯರಿಂಗ್‌  ಸೀಟು ಸ್ವಲ್ಪದರಲ್ಲೆ ತಪ್ಪಿತು. ಕೆಲವರು ರಿಟ್‌ ಹಾಕಿದರು. ಆಗ ಗಾಂಧಿನಗರದಲ್ಲಿ ರಿಟ್‌ ಅಯ್ಯಂಗಾರ್‌ ಎಂದೆ ಖ್ಯಾತಿವೆತ್ತ ವಕೀಲರಿದ್ದರು. ಅವರು ಹಾಕಿದ್ದ ಎಲ್ಲ ಕೇಸು  ಗೆದ್ದೆ ಗೆಲ್ಲುತಿದ್ದರು ನನಗಿಂತ ಒಂದರಡು ಅಂಕ ಕಡಿಮೆ ಬಂದವರೂ ರಿಟ್‌ ಅರ್ಜಿ ಹಾಕಿದರು.ನಂತರ ಸೀಟನ್ನೂ ಪಡೆದರು. ಆದರೆ  ನನಗೆ ಕೋರ್ಟು ಕಟ್ಟೆ ಹತ್ತಬೇಕು ಎನಿಸಲಿಲ್ಲ ಜತೆಗೆ ಹಣದ ಅಭಾವದಿಂದ ಅದರ ಯೋಚನೆ ಬರಲೆ ಇಲ್ಲ..  ಇಂಜನಿಯರಿಂಗ್  ಕನಸು ನೆನಸಾಗಲಿಲ್ಲ.ನಮ್ಮ ಮಾವನವ ಮನಸ್ಸು ಮಾತ್ರ ಮುದುಡಿತು ಆದರೆನನಗೆ ಅಂಥಹ ಬೇಸರವೇನೂ ಆಗಲಿಲ್ಲ.ಅಪ್ಪನಿಗೆ ಹೆಚ್ಚಿನ ಹೊರೆತಪ್ಪಿತಲ್ಲ ಎಂದು ಹಾಯಾಗಿದ್ದೆ.

No comments:

Post a Comment