Monday, August 20, 2012

ಹೊಯ್ಯಕೊಂಡ ಬಾಯಿಗೆ ಹೋಳಿಗೆತುಪ್ಪ


ಹೋ
ಳಿ ಹುಣ್ಣಿಮೆ ಬಂದರೆ ಅಗಸರಿಗೆ ಆ ಹದಿನೈದು ದಿನ ಅರೆ ನಿದ್ದೆಯ ಸಮಯ. ಹುಡುಗರು ಬರಿ ಕತ್ತೆಯ ಮೇಲೆ ಹತ್ತಿ ಸವಾರಿ ಮಾಡಿದರೆ ಅವರು ಚಿಂತೆ ಮಾಡುತ್ತಿರಲಿಲ್ಲ. ಆದರೆ ಅವರ ತುಂಟಾಟ ಜಾಸ್ತಿ. ಅದರ ಬಾಲಕ್ಕೆ ಖಾಲಿಡಬ್ಬ ಕಟ್ಟಿ ಅದರಲ್ಲಿ ಕಲ್ಲುಗಳನ್ನು ಹಾಕಿ ಓಡಿಸುತ್ತಿದ್ದರು. ಅದು ಓಡಿದಾಗ ಡಬ್ಬ ಕಾಲಿಗೆ ಬಡಿದು ಅದು ಗಡಗಡ ಶಬ್ದ ಮಾಡುತ್ತಿತ್ತು. ಅದು ಗಾಬರಿಯಾಗಿ ದಿಕ್ಕೆಟ್ಟು ಓಡುತ್ತಿತ್ತು. ಅದರ ಜೊತೆ ಬಾಯಿ ಬಡಿದುಕೊಳ್ಳುತ್ತಾ ಹುಡುಗರ ಪಡೆ ಸಾಗುತಿತ್ತು. ಕೆಲವು ಕಿಡಿಗೇಡಿಗಳು ಆ ಡಬ್ಬದಲ್ಲಿ ಪಟಾಕಿ ಹಚ್ಚಿ ಹಾಕಿದರಂತೂ ಅದರ ಸ್ಥಿತಿ ದೇವರೆ ಗತಿ.  ಹಾಗಾದಾಗ ಓಡಿ ಹೋದ ಕತ್ತೆಯನ್ನು ಹುಡುಕುವುದಕ್ಕೆ ಅಗಸರು ಕೆಲಸ ಬಿಟ್ಟು ದಿನವೆಲ್ಲ ಅಲೆಯಬೇಕಿತ್ತು. ಸಾಧಾರಣವಾಗಿ ಅವರು ಕೆಲಸದ ದಣಿವನ್ನು ಮರೆಯಲು ಸೇಂದಿ ಕುಡಿದು ಮಲಗುವರು. ಅವರು ಕತ್ತೆ ಕಾಯುತ್ತಾ ರಾತ್ರಿಯೆಲ್ಲ ಜಾಗರಣೆ ಮಾಡಲಾಗುವುದೆ. ಮೇಲಾಗಿ ರಾತ್ರಿ ಮೇಯಲು ಬಿಡಲೇಬೇಕಲ್ಲ. ಆಗ ನಮಗೆಲ್ಲ ಚಿನ್ನಾಟ.
ಕಾಮದಹನ ಇನ್ನೂ ಆರೆಂಟು ದಿನ ಇರುವ ಮುನ್ನವೆ ಪ್ರತಿಸಂಜೆ ಮನೆ ಮನೆಗೆ ಕುಳ್ಳು ಕಟ್ಟಿಗೆ ಬೇಡಲು ಗುಂಪಿಗೆ ಗುಂಪೆ ಹೊರಡುವುದು. ಪ್ರತಿ ಮನೆಯ ಮುಂದೆ ನಿಂತು ಕಾಮನ ಮಕ್ಕಳು ಬಂದಿದ್ದೇವೆ. ಕುಳ್ಳು, ಕಟ್ಟಿಗೆ ಕೊಡಿ ಎಂದು ಬಾಯಿ ಬಡಿದುಕೊಳ್ಳುವುದು. ಈ ಗದ್ದಲ ತಾಳಲಾರದೆ ಅವರು ಕೊಟ್ಟು ಕಳುಹಿಸುವರು. ಸಾಧಾರಣವಾಗಿ ಎಲ್ಲರ ಮನೆಯಲ್ಲಿ ಕಟ್ಟಿಗೆ ಕುಳ್ಳನ್ನೆ ಮುಖ್ಯ ಉರುವಲಾಗಿ ಬಳಸುತಿದ್ದರು. ಸೀಮೆ ಎಣ್ಣೆಯನ್ನು ದೀಪಕ್ಕೆ ಬಳಸುವರು. ಹೀಗಾಗಿ ಉರುವಲು ಸಾಕಷ್ಟು ಸಂಗ್ರಹವಾಗುತಿತ್ತು. ಈಗ  ಕಾಮದಹನ ಬಹು ವಿರಳವಾಗುತ್ತಿದೆ. ಎಲ್ಲರ ಮನೆಯಲ್ಲೂ ಗ್ಯಾಸ್‌. ಸ್ಟೋವ್ಗಳು. ಇನ್ನು ಕಟ್ಟಿಗೆ ಒಲೆ ಎಲ್ಲಿ. ಅದರಿಂದ ಕಾಮದಹನದ ಖದರು ಕಡಿಮೆಯಾಗಿದೆ.
ನಾವು ಸಂಜೆ ಕುಳ್ಳು ಕಟ್ಟಿಗೆ ಬೇಡಲು ಹೋದಾಗ ಕಿರಿ ಕಿರಿ ಮಾಡಿದ ಮನೆಯ ಗುರುತು ಮಾಡಿಕೊಂಡು ಸರಿ ರಾತ್ರಿ ದಾಳಿ ಮಾಡುತಿದ್ದೆವು. ಅವರ ಮನೆಯ ಮುಂದೆ ಇದ್ದ ಕೊರಡು, ಕುಂಟೆಗಳನ್ನು, ಹಿತ್ತಲಲ್ಲಿನ ಆವರಣದ ಬಾಗಿಲು ಕದ್ದು ಸಾಗಿಸಲಾಗುವುದು. ಬೆಳಗ್ಗೆ ನೋಡಿದಾಗಲೆ ಅದರ ಸುಳಿವು ದೊರೆಯುತಿತ್ತು. ಅನ್ನುವ ಹಾಗಿಲ್ಲ. ಅನುಭವಿಸುವ ಹಾಗಿಲ್ಲ. ಬಾಯ್ತುಂಬ  ಬೈದು ಸಮಾಧಾನ ಮಾಡಿಕೊಳ್ಳುತಿದ್ದರು.
ಆ ಸಮಯದಲ್ಲಿ ಇನ್ನೊಂದು ಮೋಜು ಜರುಗುತಿತ್ತು. ಅಷ್ಟೇನು ಆಧುನಿಕವಲ್ಲದ ಊರಿನಲ್ಲಿ ಎರಡೋ ಮೂರೋ ಬೋರ್ಡುಗಳು. ಅವೂ ಹಜಾಮತಿ ಅಂಗಡಿಗಳವು ಮತ್ತು ವೈದ್ಯರವು. ಬೆಳಗಾಗುವದರೊಳಗೆ ಡಾಕ್ಟರ ಷಾಪು ಮಾಡರ್ನ್ ಸೆಲೂನ.. ಸೆಲೂನಿನ ಹೆಸರು ಧನ್ವಂತರಿ ಚಿಕಿತ್ಸಾಲಯ. ಮಧ್ಯಾಹ್ನ ಅವನ್ನು ಬದಲಾಯಿಸುವವರೆಗೆ ನೋಡುಗರಿಗೆ ಮೋಜೆ ಮೋಜು.
ಹೋಳಿ ಹುಣ್ಣಿಮೆ ಬಂದರೆ ಪುಸ್ತಕ ಪರೀಕ್ಷೆ ಪರಿಗಣನೆಗೆ ಬರಿತ್ತಲಿರಲಿಲ್ಲ. ಕಾಮನನ್ನುಕೂಡಿಸಿದ ಮೇಲೆ ನಿತ್ಯ ರಾತ್ರಿ ಅದರ ಮುಂದೆ ಹದಿ ಹರೆಯದವರ, ಗಂಡುಮಕ್ಕಳ ಜಂಗುಳಿ. ಹಿರಿಕಿರಿಯರೆನ್ನದೆ  ಹಾಸ್ಯಮಾಡುವ ಹಾಡುಗಳು, ತಪ್ಪಡಿ ಬಡಿತ. ಹಾರವಯ್ಯ, ಜಂಗಮಯ್ಯ, ಶಾನುಭೋಗ, ಊರ ಶೆಟ್ಟಿ ಯಾರಿಗೂ ಉಳಿಗಾಲವಿಲ್ಲ. ಆ ಹಾಡುಗಳೋ ಶೀಲ, ಅಶ್ಲೀಲದ ಅಂಚು ದಾಟಿದವು. ಕುಣಿಯುವುದು ಕೇಕೆ ಹಾಕುವುದು ಮಾತು ಮಾತಿಗೆ ಅಯ್ಯೋ! ಈಗ ಇದ್ದ, ಸತ್ನಲ್ಲಪ್ಪೋ ಎಂದು ಬಾಯಿ ಬಡಿದುಕೊಳ್ಳುವುದು. ಸಂಬಂಧಪಟ್ಟವರು ಸುಮ್ಮನಿದ್ದರೆ ಸರಿ. ಅವರೇನಾದರೂ ಗದರಿದರೆ ಒಂದಕ್ಕೆ ನಾಲಕ್ಕುಪಟ್ಟು ಹೆಚ್ಚು ಮಾಡಿ  ಹಾಡಾಡಿಕೊಂಡು ಅಳುವುದು, ಬಾಯಿ ಬಡಿದುಕೊಳ್ಳುವುದು. ಅದೂ ಸಾಮೂಹಿಕವಾಗಿ. ಬೇಸಿಗೆ ಎಂದು ಅಂಗಳದಲ್ಲಿ ಹೊರಸುಹಾಕಿ ಮಲಗಿದವರನ್ನು ಅನಾಮತ್ತು ಹೊರಸಿನ ಸಮೇತ ಎತ್ತಿ ಕಾಲುವೆ ದಂಡೆಯಲ್ಲಿ ಇಡುವುದು ಬಹು ಮೋಜಿನ ವಿಷಯ.. ಅವರು ಬೆಳಗ್ಗೆ  ಎದ್ದು ಕಣ್ಣು ಬಿಟ್ಟಾಗ ಎಲ್ಲಿರುವೆ ಎಂದು ತಿಳಿಯದೆ ಕಕ್ಕಾಬಿಕ್ಕಿ. ಮುಂಜಾನೆ ಎದ್ದು ಹೊರಸು ಹೊತ್ತುಕೊಂಡು ಮನೆಗೆ ಬರುತ್ತಿರುವ ಅವರನ್ನು ನೋಡಿ ಎಲ್ಲ ಗೊತ್ತಿದ್ದರೂ ಎಲ್ಲಿಗೆ ಹೋಗಿದ್ದಿರಿ? ಎಂದು ಕುವಾಡ ಮಾಡುತಿದ್ದರು.
ವರ್ಷದಲ್ಲಿ ಮುನ್ನೂರು ಐವತ್ತು ದಿನ ತಗ್ಗಿ ಬಗ್ಗಿ ಹೆದರಿ ನಡೆಯುತಿದ್ದವರು, ಆಚಾರ ವಿಚಾರಕ್ಕೆ ಹೆಸರಾದವರ ಮನೆಯ ಹರೆಯದ ಹುಡುಗರು, ಪಡ್ಡೆಗಳು ಯಾವುದೆ ಎಗ್ಗಿಲ್ಲದೆ ಎಲ್ಲರಲ್ಲಿ ಒಂದಾಗುತಿದ್ದರು. ಹಿರಿಯರು ಹುರಿದುಂಬಿಸಲು ಮುಗಳ್ನಗುತ್ತಾ ಕಟ್ಟೆಯ ಮೇಲೆ ಕೂತಿರುತಿದ್ದರು. ಹೆಂಗಸರಿಗೆ ಇಲ್ಲಿ ಪ್ರವೇಶ ಇಲ್ಲ. ಹಿರಿಯ ಹೆಂಗಸರು ಧೈರ್ಯವಾಗಿ ಬಾಗಿಲಿಗೆ ಬಂದರೆ, ಹರೆಯದವರು ಬಾಗಿಲ ಸಂದಿಯಿಂದ ಕಿಟಕಿಯ  ಮರೆಯಲ್ಲಿ ನಿಂತು ಕಿಸಿ ಕಿಸಿ ನಗುತ್ತಾ ಸ್ವಾರಸ್ಯವನ್ನು ಸವಿಯುತಿದ್ದರು.  ವರ್ಷ ಪೂರ್ತಿ ಅದುಮಿಟ್ಟಿದ್ದ ಭಾವನೆಗಳು ಮಹಾಪೂರದಂತೆ ಆ ಸಮಯದಲ್ಲಿ ಮಾತಿನ ಮೂಲಕ, ಹಾಡಿನ ಮೂಲಕ ಹರಿದು ಬರುತಿದ್ದವು. ಒಂದು ರೀತಿಯಲ್ಲಿ ಈಗಿನ ವಾರಾಂತ್ಯದ ಪಾರ್ಟಿಗಳಲ್ಲಿ ಗಂಡು ಹೆಣ್ಣು  ಎಗ್ಗಿಲ್ಲದೆ ಕುಣಿದು ಕುಪ್ಪಳಿಸುವಂತೆ. ಆಗ ವರ್ಷಕೊಮ್ಮೆ ಗಂಡಸರು ಮಾತ್ರ ಸರ್ವ ಸ್ವಾತಂತ್ರ್ಯ ಅನುಭವಿಸುತ್ತಿದ್ದರು ಅದು ಮಾತಿನಲ್ಲಿ ಮಾತ್ರ.. ಕಾಮ ದಹನವಾದ ಮೇಲೆ ಎಲ್ಲ ಕಡೆ ಶಾಂತಿ. ಎಲ್ಲರೂ ಎಂದಿನಂತೆ ಸಾಮಾಜಿಕ  ಕಟ್ಟು ಕಟ್ಟಳೆಗಳಿಗೆ ತಲೆ ಬಾಗಿ ನಡೆಯುತ್ತಿದ್ದರು.
ಅರ್ಧ ರಾತ್ರಿಯ ನಂತರ ಕಾಮದಹನವಾಗುತಿತ್ತು. ಆಗಿನ ಸಂಭ್ರಮ ಮುಗಿಲು ಮುಟ್ಟುತಿತ್ತು. ಎಲ್ಲರೂ ಸತ್ತನಲ್ಲೋ ಎಂದು ಬಾಯಿ ಬಡಿದುಕೊಳ್ಳುವುದು. ಆದರೆ ಅದರ ಅಡಿಯಲ್ಲಿ ಖುಷಿಯ ಕೇಕೆ. ಇದು  ನಿಜಕ್ಕೂ ಸಾಮಾಜಿಕ ಅಧ್ಯಯನಕ್ಕೆ ಇದು ಒಂದು ಅತಿ ಮುಖ್ಯವಾದ ವಿಷಯವಾಗಬಹುದು. ಎಲ್ಲ ವಿಡಂಬನೆ. ಎಲ್ಲ ಕುಚೋದ್ಯ. ಒಬ್ಬನನ್ನು ಸತ್ತವನಂತೆ ಚಟ್ಟದ ಮೇಲೆ ಮಲಗಿಸಿ ಅದನ್ನು ನಾಲಕ್ಕು ಮಂದಿ ಹೊತ್ತು ಉಳಿದವರು ಜತೆಗೂಡಿ ಊರಲ್ಲಿ ಬಾಯಿ ಬಡಿದುಕೊಳ್ಳತ್ತಾ ಮೆರವಣಿಗೆ ಮಾಡುವುದು. ಅದರಲ್ಲೆ ಒಬ್ಬನಿಗೆ ಸೀರೆ ಉಡಿಸಿ ವಿಧವೆ ವೇಷದ ಅನುಕರಣೆ  ಬೇರೆ. ದುಃಖದ ನಟನೆಯಿಂದ ಸುಖಿಸುವುದು ವಿಪರ್ಯಾಸ ಎನಿಸಿದರೂ  ಸುಖ ದುಃಖಗಳು ಒಂದೆ ನಾಣ್ಯದ ಎರಡು ಮುಖಗಳು ಎಂಬುದರ    ಸಂಕೇತ ಈ ಆಚರಣೆಯಲ್ಲಿ ಇರಬಹುದೇನೋ ಎನಿಸುವುದು. ಅಲ್ಲದೆ ಎಲ್ಲರ ಜೀವನದಲ್ಲಿ ಬರಬಹುದಾದ ಸಾವಿಗೆ ಮಾನಸಿಕವಾಗಿ ಸಿದ್ಧ ಮಾಡುವ ಅಪರೋಕ್ಷ  ಪ್ರಯತ್ನ ಎಂದರೂ ತಪ್ಪಲ್ಲ.
ಕಾಮನನ್ನು ಸುಟ್ಟ ಮೇಲೆ ಅದರ ಬಿಸಿ ಬೂದಿಯಲ್ಲಿ ಉಳ್ಳಾಗಡ್ಡಿ, ನೆನಗಡಲೆ ಕೊಬ್ಬರಿ ಸುಟ್ಟುಕೊಂಡು ತಿನ್ನುವುದ ರೂಢಿ. ಅದು ಆರೋಗ್ಯಕ್ಕೆ ಒಳ್ಳೆಯದು ಎಂಬ ನಡೆಯು ಬಹು ಅರ್ಥಪೂರ್ಣ. ಮಾನವನ ಮನಸ್ಸುನ ಒಳಿತು ಕೆಡುಕಗಳ ಮಿಶ್ರಣದ ಮೂಟೆ. ನೋವು ನಲಿವುಗಳ ಆಗರ, ನಿಸರ್ಗದತ್ತ ಬಾಳಿನಲ್ಲಿ ಕೆಟ್ಟದ್ದು, ಆಡಬಾರದ್ದು, ಮಾಡಬಾರದು ಎಂದು ಯಾವುದು ಇಲ್ಲ. ಅದೆಲ್ಲ ಸುಗಮ ಸಾಮಾಜಿಕ ವ್ಯವಸ್ಥೆಗಾಗಿ ನಾವೆ ಹಾಕಿಕೊಂಡ ಕಟ್ಟುಪಾಡು. ಒತ್ತಿಟ್ಟ ಭಾವನೆ ಒಂದಲ್ಲ ಒಂದು ಸಲ ಕಿತ್ತು ಬರುವುದು ಸಹಜ. ಅದಕೆಂದೆ ಹಬ್ಬದ ಹೆಸರಲ್ಲಿ ಆ ಹತ್ತು ದಿವಸ, ಕಟ್ಟಿಗೆ ಕುಳ್ಳುಗಳ ಕಳ್ಳತನ, ಕೆಟ್ಟ ಕೊಳಕು ಮಾತುಗಳಿಂದ  ಮನದಲ್ಲಿದ್ದ ದುರ್ಭಾವನೆಗಳು ಮೊಳಕೆಯಲ್ಲೆ ನಾಶ ಮಾಡುವ ಯತ್ನ.
ಮಾರನೆ ಬೆಳಗ್ಗೆ ಓಕುಳಿ ಆಟ. ಅದೂ ಸಾಮೂಹಿಕವಾಗಿ. ಎಲ್ಲರೂ ಪಟ್ಟಿ ಹಾಕಿಕೊಂಡು ಬಣ್ಣವನ್ನು ತರುತಿದ್ದರು. ಆಗ ಇನ್ನೂ ಪೇಂಟುಗಳ ಹಾವಳಿ ಇರಲಿಲಿಲ್ಲ. ಚಿಕ್ಕಮಕ್ಕಳು ಮನೆಯಲ್ಲೆ ಬಣ್ಣದ ಪುಡಿತಂದು ನೀರಲ್ಲಿ ಕಲಸಿ ಒಬ್ಬರ ಮೇಲೆ ಒಬ್ಬರು ಹಾಕಿ ಖುಷಿಪಡುವರು. ಅದು ಮುಗಿದರೆ ಸುಣ್ಣ ಮತ್ತು ಅರಿಸಿನ ಸೇರಿಸಿದರೂ ಕಂಪು ಬಣ್ಣ ಬರುವುದು. ಅದನ್ನೆ ಬಳಸುವವರು.  ಯಾರಲ್ಲಾದರೂ ಪಿಚಕಾರಿ ಇದ್ದರೆ ಅವನೆ ನಾಯಕ. ಉಳಿದವರು ಸಾಮೂಹಿಕ ಓಕಳಿಯಲ್ಲಿ ಭಾಗಿಗಳಾಗುವರು. ಎತ್ತಿನ ಗಾಡಿಯಲ್ಲಿ ಡ್ರಮ್ಮುಗಳನ್ನು ಹಂಡೆಗಳನ್ನು ಓಕಳಿಯಿಂದ ತುಂಬಿರುವರು. ಸಾಧಾರಣ ಕೆಂಪು ಮತ್ತು  ಹಸಿರುಬಣ್ಣಗಳೆ ಜಾಸ್ತಿ. ಹಾದಿಯುದ್ದಕ್ಕೂ ಬರುವವರ ಹೋಗುವವರ ಮೇಲೆ ಬಣ್ಣ ಎರಚುವರು. ಸುಮ್ಮನೆ ಇದ್ದರೆ ಸರಿ. ಸ್ವಲ್ಲ ಪ್ರತಿರೋಧ ತೋರಿದರೆ ಬಟ್ಟೆ ಪೂರ್ತಿ ಬಣ್ಣ. ವಿಶೇಷವಾಗಿ ಯಾರಾದರೂ ತಾವು ಗಣ್ಯರು, ಬೇರೆಯವರಿಗಿಂತ ಭಿನ್ನರು ಎಂದು ಬಿಂಕದಿಂದ ಮನೆಯಲ್ಲೆ ಇದ್ದರೆ, ಹುಡುಕಿಕೊಂಡು ಹೋಗಿ ಅವರಿಗೆ ಬಣ್ಣದ ಸ್ನಾನ ಮಾಡಿಸುವರು. ಆಗ ಹೆಂಗಸರು ಭಾಗವಹಿಸುತಿರಲಿಲ್ಲ. ರೈತಾಪಿ ಜನರು ಹೆಚ್ಚಾಗಿ ಬರುತಿರಲಿಲ್ಲ. ಅವರು ಯುಗಾದಿ ಮಾರನೆ ದಿನ ಬಣ್ಣ ದಾಟ ಆಡುತಿದ್ದರು ಅವರ ವಿಶೇಷವೆಂದರೆ ಅದರಲ್ಲಿ ಗಂಡು ಹೆಣ್ಣು ಭೇದವಿಲ್ಲದೆ ಭಾಗವಹಿಸುತಿದ್ದರು. ಅದರಲ್ಲೂ ಮದುವೆಯಾಗದವರು ಮಾಮ, ಸೊಸೆ ಎಂದು ಹುಡುಕಿ ಹುಡುಕಿ ಬಣ್ಣ ಹಾಕುತಿದ್ದರು. ಈಗ ಹಿನ್ನೋಟದಲ್ಲಿ ನನಗೆ ಅನಿಸುತ್ತಿದೆ. ದಿನನಿತ್ಯದ ಜಂಜಡದಲ್ಲಿ ನೀರಸ ಬದುಕಿಗೆ ಬಣ್ಣ ತರಲು, ಆನಂದ ಮೂಡಿಸಲೆಂದೆ ಇರುವುದು ಈ ಹಬ್ಬ. ಭೇದ ಭಾವ ಮರೆಸಿ ಎಲ್ಲರು ನಗುನಗುತ್ತಾ ಇರಲಿ ಎಂಬುದೆ ಆಚರಣೆಯ ಹಿಂದಿನ ಉದ್ದೇಶ ಎನಿಸುವುದು.. ಅದು ಸಾಸಿರ ಸಾಸಿರ ವರ್ಷದಿಂದ ಬಂದಿದೆ. ಜನ ಜೀವನದಲ್ಲಿ ಹಾಸು ಹೊಕ್ಕಾಗಿದೆ ಎಂದರೆ ನಮ್ಮ ಸಂಸ್ಕೃತಿಯ ಹಿರಿಮೆಯ ಬಗ್ಗೆ ಹೆಮ್ಮೆಯಾಗುವುದು. ಆದರೆ ಈಗ ಅದರ ಜೋರು ಕಡಿಮೆಯಾಗಿದೆ.
ಬಣ್ಣ ಆಡಿದವರೆಲ್ಲ ಮಧ್ಯಾಹ್ನದ ಹೊತ್ತಿಗೆ ಕಾಲುವೆ, ಬಾವಿಗೆ ಹೋಗಿ ಮನದಣಿಯೆ ಬಣ್ಣ ಹೋಗುವಂತೆ ನೀರಾಟ ಆಡುವರು. ಅಂದು ಎಲ್ಲರ ಮನೆಯಲ್ಲೂ ಸಿಹಿ ಊಟ. ಹೊಯ್ಯಕೊಂಡ ಬಾಯಿಗೆ ಹೋಳಿಗೆ ತುಪ್ಪ ಎಂದೆ ಅದರ  ಆಚರಣೆ. ಅಂದು ರಾತ್ರಿ ಸಾಮೂಹಿಕ ಭೋಜನ. ಅಲ್ಲಿಗೆ ಮುಗಿಯುತಿತ್ತು ಹೋಳಿಯ ಹಾವಳಿ. ಮತ್ತೆ ಅದಕ್ಕೆ ಒಂದು ವರ್ಷ ಚಾತಕಪಕ್ಷಿಯಂತೆ ಕಾಯುತ್ತಿದ್ದೆವು.
ಏಳನೆ ತರಗತಿಯವರೆಗೆ ನಾನು ನಮ್ಮ ಅತ್ತೆಯ ಮನೆಯಲ್ಲಿಯೇ ಇದ್ದು ಅಲ್ಲಿನ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿದೆ. ಆಗಲೆ ಸಲೀಸಾಗಿ ನಾಲ್ಕಾರು ಮೈಲು ನಡೆವಷ್ಟು ದೊಡ್ಡವನಾಗಿದ್ದೆ. ಯಥಾರೀತಿ ಒಳ್ಳೆಯ ಅಂಕಗಳೊಂದಿಗೆ ಪಾಸಾಗಿದ್ದೆ. ಹೈಸ್ಕೂಲಿಗೆ ನಮ್ಮ ಊರಿನಿಂದಲೆ ಓಡಾಡಬಹುದು ಎಂದು ಹಳ್ಳಿಗೆ ಹಿಂತಿರುಗಿದೆ.



No comments:

Post a Comment