Monday, August 20, 2012

ಜಾತ್ರೆ ಶಕ್ತಿ ವರ್ಧಕ ಮಾತ್ರೆ


ನಮ್ಮದು ಹಂಪೆಯ ಹತ್ತಿರದ ಪುಟ್ಟ ಹಳ್ಳಿ. ಅಂಥಹ ಮುಂದುವರೆದ ಗ್ರಾಮವಾಗಿರಲಿಲ್ಲ.ಹಂಪೆ ಹೊಸಪೇಟೆಯ ಮಧ್ಯದ ರಸ್ತೆಯಲ್ಲಿ ಇರುವುದೆ ಅದರ ವಿಭಿನ್ನತೆಗೆ ಕಾರಣ ಹಂಪೆಯ ಜಾತ್ರೆ ತುಂಬ ಪ್ರಸಿದ್ಧವಾದುದು .ಬಸ್ಸಿನ ಸೌಕರ್ಯ ಅಷ್ಟಾಗಿ ಇರಲಿಲ್ಲ.ಜಾತ್ರೆಗೆ ಬರುವವರು ಎತ್ತಿನ ಬಂಡಿಯಲ್ಲಿಯೇ ಬರಬೇಕು.ಜಾತ್ರೆ ಇನ್ನೂ ಒಂದು ವಾರವಿದೆ ಎನ್ನುವಾಗಲೆ ಬಂಡಿಗಳಸಾಲು ಸಾಲು..ಎಲ್ಲ ಬಂಡಿಗಳೂ ನಮ್ಮ ಊರ ಮೂಲಕವೆ ಹಾದು ಹೋಗಬೇಕು.ನಾವು ಸಾಲಿಗುಡಿಯಲ್ಲಿ ನೆನಪಿಸಿಕೊಳ್ಳುತ್ತಿದ್ದ ಅಮವಾಸ್ಯೆ ಮತ್ತು ಹುಣ್ಣಿಮೆಗಳ ಪಟ್ಟಿಯಲ್ಲಿ ಚೈತ್ರ ಶುದ್ಧ ದವನದ ಹುಣ್ಣಿಮೆಯೆ ಪ್ರಪ್ರಥಮ.  ಅದನ್ನೆ ಹಂಪೆ ಹುಣ್ಣಿಮೆ ಎಂದೂ ಕರೆಯುವರು.ಜಾತ್ರೆ ನಡೆಯುವುದು ಒಂದು ಎರಡು ದಿನ , ಅಥವ ವಾರವಲ್ಲ. ಪುಟ್ಟ ಪೂರ್ತಿ ಒಂದು ತಿಂಗಳು.ಹೊಸದಾಗಿ ಮದುವೆಯಾದವರು ಜೋಡಿ ಕಳಸ ನೋಡಲೆ ಬೇಕೆಂಬ ಪದ್ದತಿ ಇದ್ದಿತು. ಹೊಸ ದಂಪತಿಗಳನ್ನು ಇಬ್ಬರನ್ನೆ ಕಳುಹಿಸುವುದು ಉಂಟೆ ? ಅದರಲ್ಲೂ ಇನ್ನೂ ಅರಸಿನ ಮೈಯವರನ್ನು.  ಅದಕ್ಕೆ ಮನೆ ಮಂದಿ ಎಲ್ಲ ಹೊರಡುವರು. ನವ ದಂಪತಿಗಳ ಜತೆಗೆ ನೆಂಟರಿಷ್ಟರೂ ಜಮಾಯಿಸುತಿದ್ದರು.  ಹಂಪೆಯಲ್ಲಿ ಜೋಡು ತೇರುಗಳು. ಒಂದು ಪಂಪಾಪತಿಯದು ಇನ್ನೊಂದು ಹಂಪಮ್ಮನದು. ಅವುಗಳನ್ನು ಒಟ್ಟಿಗೆ ಎಳೆಯುತ್ತಿದ್ದುದು  ವಿಶೇಷ. ಪಂಪಾಪತಿ ಮತ್ತು ಹಂಪಮ್ಮ ಅಲ್ಲಿನ ಅಧಿ ದೇವತೆಗಳು.ಆ ರಥಗಳು ಸುತ್ತಮುತ್ತಲಿನ ಪ್ರದೇಶಲ್ಲಿ ಹೆಸರುವಾಸಿ. ಗಾತ್ರದಲ್ಲೂ ಬೃಹತ್ತಾಗಿದ್ದವು.ನಾಲಕ್ಕು ಕಲ್ಲಿನ ಗಾಲಿಗಳು .ಎತ್ತರದ ಆಳು ಅವುಗಳ ಬದಿಯಲ್ಲಿ ನಿಂತರೆ ಅವುಗಳ ಅಚ್ಚಿಗಿಂತ ತುಸು  ಮೇಲೆ ಬರುಬಹುದು, ಅಚ್ಚಿನ ಮೇಲೆ  ಮೇಲೆ ಏಳು ಹಂತದಲ್ಲಿ ಕಟ್ಟಿಗೆಯಲ್ಲಿ ಕೆತ್ತನೆ . ದೇವಾನು ದೇವತೆಗಳಿಂದ ಹಿಡಿದು ಒಂದು ಹಂತದಲ್ಲೀ ವಿವಿಧ ಭಂಗಿಯಲ್ಲಿ ಸುಖದಲ್ಲಿ  ನಿರತರಾದ ಚಿತ್ರಗಳು ತರುಣ ತರುಣಿಯರಿಗೆ ಪ್ರೇಮ ಪಾಠವನ್ನು ಹೇಳಿಕೊಡುವಂತಿದ್ದವು.ಹಿರಿಯರ ಕಣ್ಣುತಪ್ಪಿಸಿ ಕಿರಿಯರು , ಮಕ್ಕಳೆದುರಿಗೆ ನೋಡಬಾರದೆಂಬ ನಟನೆ ಮಾಡಿ ಅದರ ಅಂದ ಸುಖಿಸುವ ವಯಸ್ಸಾದವರು, ಯಾರದೂ ಎಗ್ಗಿಲ್ಲದೆ ನೆಟ್ಟ ನೋಟದಲ್ಲಿ ನೋಡುತ್ತಾ ನಿಲ್ಲುವ ಯುವಕರ ವರ್ತನೆ ಮಾನವ ಸಹಜ ಪ್ರವೃತ್ತಿಯ ಉತ್ತಮ ನಿದರ್ಶನವಾಗುತಿತ್ತು. ತೇರಿನ ಮೇಲೆ ದಶಕಗಳಿಂದ ಸುರಿದ ಎಣ್ಣೆಯ ಫಲವಾಗಿ ತೇರುಗಳು ಕಪ್ಪಗೆ ಮಿರಿಮಿರಿ ಮಿಂಚುತಿದ್ದವು.. ಹಾಗೆ ಎಣ್ಣೆ ಹಾಕುವುದು ಭಕ್ತಿಯ ಭಾಗವೋ ? ಇಲ್ಲವೆ ಮಳೆ,ಗಾಳಿ, ಬಿಸಿಲಿಗೆ ಕಟ್ಟಿಗೆಯು ಹಾಳಾಗದಿರಲಿ ಎಂದು ತೆಗೆದುಕೊಂಡ ಎಚ್ಚರಿಕೆಯ ಕ್ರಮವೋ ಆ ದೇವರೆ ಬಲ್ಲ.ಅದು ಅನೂಚೀನವಾಗಿ ನೆಡೆದುಬಂದ ಪದ್ದತಿ. ಬಹುಶಃ  ಆ ತೇರುಗಳು ಹಿಂದಿನ ವಿಜಯನಗರದ ಅರಸರ ಕಾಲದಿಂದಲೂ ಬಂದಿರುವ ಐತಿಹಾಸಿಕ ಆಚರಣೆಯ ಅಂಗಗಳಾಗಿವೆ. ಕಾರಣ ಜಾತ್ರೆಯ ದಿನ ಆನೆಗುಂದಿಯ ಅರಸು ಮನೆತನದವರು ಬಂದು ತೇರಿಗೆ ಪ್ರಥಮ ಪೂಜೆ ಸಲ್ಲಿಸಿದ ಮೇಲೆಯೆ ರಥ ಮುಂದೆ ಸಾಗುವುದು. ಅಲ್ಲಿ ಪ್ರಭುಗಳಿಗೆ ಜಾತ್ರೆಯಲ್ಲಿ ನೀಡಿದ ಪ್ರಾಧಾನ್ಯದಂತೆ ಪ್ರಜೆಗಳಿಗೂ  ಅವರದೆ ಆದ ಪಾತ್ರ ಇದೆ .ಹಂಪೆಯ ಮಠದ ಸ್ವಾಮಿಗಳದೂ ಇದರಲ್ಲಿ ಜಾತ್ರೆಯಲ್ಲಿ ಬಹು ಮುಖ್ಯ ಪಾತ್ರವಿದೆ. ಹಂಪೆಯ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದ ವಿದ್ಯಾರಣ್ಯರು ಅಲಂಕರಿಸಿದ  ಪೀಠ ಅದು. ರಾಜಗುರುಗಳಾಗಿದ್ದ ಅವರ ಅನುಮತಿಯಂತೆ ಎಲ್ಲ ಧಾರ್ಮಿಕ ಕ್ರಿಯೆ ನಡೆಯುತ್ತಲಿದ್ದವು. ಈಗಲೂ ಆ ಪೀಠದಲ್ಲಿರುವ ಸ್ವಾಮಿಗಳ ಸಮ್ಮುಖದಲ್ಲೆ ಜಾತ್ರೆಯಾಗುವುದು. . ಹಕ್ಕಬುಕ್ಕರ ಪಡೆಯ ಸೈನ್ಯದ ಬೆನ್ನೆಲುಬಾಗಿದ್ದ  ಅಲ್ಲಿನ ಬೇಡರ ಸಮುದಾಯಕ್ಕೆ  ಹಲವು ಹಕ್ಕುಗಳು ಇವೆ.ಹಂಪೆಗೆ ಅಂಟಿಕೊಂಡಿರುವ ಕಮಲಾಪುರದ ಏಳು ಕೇರಿಯ ಬೇಡರ ಪಡೆಯೆ ತೇರಿನ ಮಿಣಿ ಮೊದಲು ಹಿಡಿಯಬೇಕು.ಮಿಣಿ ಎಂದರೆ ಮೊಳಗಾತ್ರದ ವಿಶೇಷ ಹಗ್ಗ.ಉದ್ದವಾಗಿದ್ದು ನೂರಾರು ಮಂದಿ ಹಿಡಿದು ಎಳೆಯಲು ಅನುವಾಗುವಂತಹದು. ಅದರಲ್ಲಿ ಮನ್ಮಥಕೇರಿಯವರು ಮಿಣಿ ಹಿಡಿದರೆ , ಸನ್ನೆ ಹಾಕುವುದು ಚೌಡಿಕೆ ಕೇರಿಯವರದು. ಹಿರಿಕೇರಿ , ಕಿರಿಕೇರಿ ಹೀಗೆ ಎಲ್ಲರಿಗೂ  ದೇವರ ಕೆಲಸದ ಹಂಚಿಕೆಯಾಗಿದೆ ಎಲ್ಲ ಕೇರಿಯವರಿಗೆ ಇದು ಗೌರವದ ಹಕ್ಕು. ಸನ್ನೆ ಎಂದರೆ ತೇರಿನ ಚಲನೆಯ ನಿಯಂತ್ರಣ ಮಾಡುವ ಸಾಧನ . ಸಾವಿರಾರು ಜನ ಹರಹರ ಮಹಾದೇವ ಎಂದು ಭಕ್ತಿಯಿಂದ ಮುಗಿಲುಮುಟ್ಟುವಂತೆ  ದೇರನ್ನು ಸ್ಮರಿಸುತ್ತಾ ಹಗ್ಗ ಜಗ್ಗುವಾಗ ಹರಿಯುವ ತೇರಿನ ಗಾಲಿಗೆ ಸಿಕ್ಕು ಒಂದೆರಡು  ಸಲ ಭಕ್ತರು ಪ್ರಾಣ ಕಳೆದುಕೊಂಡಿರುವುದೂ ಇದೆ. ಆದರೆ ಅದು ಪೂರ್ವ ಜನ್ಮದ ಸುಕೃತ ಎಂದು  ಅವರ ನಂಬಿಗೆ.  ತೇರಿನ ಮಿಣಿ ಮೊಳ ಗಾತ್ರದ್ದು . ಅದನ್ನು ಮುಟ್ಟಿದರೆ ಸಾಕು ಧನ್ಯತಾಬಾವ. ಯಾವುದೆ ಸಾಮೂಹಿಕ ಕಾರ್ಯದ ಪರಿಯೆ ಹಾಗೆ. ಸಾವಿರಾರು ಜನ ಎಳಯುವಾಗ ನಾವು ಕೈಗೂಡಿಸಿದರೆ ತೇರನ್ನೆಳೆದೆವು ಎಂಬ ಧನ್ಯತಾ  ಭಾವ  ನಮಗೆ . ಒಬ್ಬರಿಂದ ಆಗದ ಕೆಲಸ .ಸಹಸ್ರಾರು ಕೈಗಳು ಕೂಡಿದಾಗ ರಥ ದುಡುದುಡುನೆ ಹರಿಯುವುದು.
 ಹೀಗೆ  ಗುರುಮನೆ ,ಅರಮನೆ ಮತ್ತು ನೆರೆ ಹೊರೆಯ ಮನೆ ಮನೆಯವರೂ ಒಂದಾಗಿ ಸೇರಿದ ಪರಿಣಾಮವಾಗಿ  ಜಾತ್ರೆ ಸುಸೂತ್ರವಾಗಿ ಜರುಗುವುದು.
ಜಾತ್ರೆ ಹದಿಹರೆಯದವರಿಗೆ ಶಕ್ತಿವರ್ಧಕ ಮಾತ್ರೆ.ಇದ್ದಂತೆ. ರೇಷ್ಮೆ ಸೀರೆಯಟ್ಟು , ತಲೆ ತುಂಬ ಹೂವೂ ಮುಡಿದು ,ಕೈ ತುಂಬ ತೊಟ್ಟ ಗಾಜಿನ ಬಳೆಗಳನ್ನು ಘಿಳಗ ಘಿಲ್‌ ನಾದ ಮಾಡುತ್ತಾ ಗೆಳತಿಯರೊಡನೆ ಜಾತ್ರೆಯಲ್ಲಿ ಓಡಾಡುವ ಯುವತಿಯರು ಕಣ್ಣಿಗೆ ಹಬ್ಬ . ಅವರ ಹಿಂದೆ ಹೋದಲೆಲ್ಲ ಹಿಂಬಾಲಿಸುವುದೆ ಹಲವು ಯುವಕರ ಕಾಯಕ.ಜಾತ್ರೆಯ ದಿನವಂತೂ ಅವರು ಹಲವು ಹತ್ತುಬಾರಿ ನೂಕು ನುಗ್ಗಲಿದ್ದರೂ ಬಿಷ್ಟಪ್ಪಯ್ಯನ ಗೋಪುರದಿಂದ ಗುಡಿಯ ಬಾಗಿಲವರೆಗೆ ಹತ್ತಾರು ಬಾರಿಯಾದರೂ ಹೋಗಿಬರುವರು. ಅವರು ಬಂದು ಹೋಗುವುದು ದೇವರ ದರ್ಶನಕ್ಕೆ ಅಲ್ಲ.  ದೇವರನ್ನು ನೋಡಲು ಬರುವ ಚಂದದ ಹುಡುಗಿಯರ ಸ್ಪರ್ಶನಕ್ಕೆ. ಎಳ್ಳು ಹಾಕಿದರೆ ನೆಲಕ್ಕೆ ಬೀಳದಷ್ಟು ಜನಸಂದಣಿ ಇದ್ದಾಗ ತಳ್ಳಾಟದಲ್ಲಿ ಬೇರೆ ಸಮಯದಲ್ಲಿ ದೂರ ನಿಂತು ನೋಡಲಾಗದವರನ್ನೂ ಹತ್ತಿರದಲ್ಲೆ ಒತ್ತಿಕೊಂಡು ನಡೆಯುವ ಭಾಗ್ಯ ದೊರಕಿದರೆ ಬಿಟ್ಟಾರೆಯೆ ನಮ್ಮ ಹಳ್ಳಿಯ ಹೈಕಳುಗಳು .ಮನೆ ಬಿಟ್ಟು ಹೊರಬಾರದು, ಸದಾ ಹಿರಿಯರ ಕಣ್ಗಾವಲಿನಲ್ಲೆ ಇರುವ ಹುಡುಗಿಯರು ಈ ಸಮಯದಲ್ಲಿ ಹಿರಿಯರು ಭಕ್ತಿಯ ಆವೇಶದಲ್ಲಿರುವಾಗ ದೊರೆಯುವ ಈ ನಿರಪಾಯಕರಿ ಸಂತಸದ ಕ್ಷಣಗಳನ್ನು ಬಹುಪಾಲು ಜನ ಖುಷಿಯಿಂದಲೆ ಸ್ವೀಕರಿಸುವರು. ತೇರನ್ನೆಳೆಯುವಾಗ ಅದರ ಮೇಲೆ ಬಾಳೆಹಣ್ಣು ಎಸೆಯುವುದೆ  ಒಂದು ಚಂದದ ಕಾಯಕ. ಅದಕ್ಕಾಗಿಯೆ ವಿಶೇಷವಾದ ಚಿಕ್ಕ ಹಣ್ಣುಗಳು ಭರದಿಂದ ಮಾರಾಟವಾಗುವವು. ಅದನ್ನುಎಲ್ಲರೂ ತೇರಿನೆಡೆಗೆ ಎಸೆದಾಗ ಅದನ್ನು ಪ್ರಸಾದವೆಂದು ಬುತ್ತಿ ಹಿಡಿಯಲು ನಾನು ನೀನು ಎಂದು ನುಗ್ಗಾಟವಾಗುವುದು. ಹಣ್ಣು ಹಿಡಿಯುವ  ಗಡಿಬಿಡಿ ಕೆಲವರಿಗಾದರೆ,  ಬೇಕಾದವರಿಗೆ ಗುರಿಇಟ್ಟು ಹೊಡೆಯುವ  ಹವಣಿಕೆ ಹಲವರದು. ತಮ್ಮ ಪ್ರೀತಿ ಪಾತ್ರರ ಗಮನ ಸೆಳೆದು ತಮ್ಮ ಇರುವನ್ನು ಖಚಿತಪಡಿಸಲು ಪಡ್ಡೆ ಹುಡುಗರು ತೇರಿಗೆ ಒಗೆಯುವ ಹಣ್ಣನ್ನು ನಾರಿಯರ ಕಡೆ ಎಸೆಯುವ  ರಸಿಕತೆ ಮೆರೆಯುವರು.ಇನ್ನು ಗುಂಪಿನಲ್ಲಿ ಭಕ್ತಿ ಭರದಿಂದ ಮಹಿಳೆಯರು ಎರಡೂ ಕೈಗಳನ್ನು ತಲೆಯ ಮೇಲೆತ್ತಿ  ಪಾರ್ವತಿಪತೆ ಹರ ಹರಹ ಮಹದೇವ ಎಂದು ಕಳಸಕ್ಕೆ ಕೈಮುಗಿಯುತ್ತ , ಆ ಸುಂದರ ದೃಶ್ಯದ ನೋಟದಲ್ಲಿ ತನ್ಮಯರಾಗಿರುವಾಗ ಅವರ ಹಿಂದೆ ನಿಂತು ಒಂದೆ ಕೈನಲ್ಲಿ ದೇವರಿಗೆ ವಂದಿಸುವ ತುಂಟರೂ ಅಲ್ಲಲ್ಲಿ ಕಾಣುವರು. ದೈನಂದಿನ ಜೀವನದಲ್ಲಿ ಮನಸ್ಸಿಲ್ಲದಿದ್ದರೂ  ಹೆದರಿ ಬೆದರಿದಂತೆ ನಟಿಸ ಬೇಕಾದವರು  ಹಿರಿಯರು ಎಂದು ಹಮ್ಮಿನಲ್ಲಿರುವವರಿಗ  ಕೈತಪ್ಪಿ ಬಿತ್ತು ಎನ್ನವ ರೀತಿಯಲ್ಲಿ ಫಲ ಸೇವೆ ಮಾಡಿ  ಸೇಡು ತೀರಿಸಿಕೊಂಡು ತೃಪ್ತಿ ಪಡೆಯಲೆಳಸುವವರೂ ಒಬ್ಬಿಬ್ಬರಿದ್ದರು. ಅದು  ಹಿರಿಯರಿಗೆ ಗೊತ್ತಾದರೂ ಜಾತ್ರೆಯಲ್ಲಿ  ಇದೆಲ್ಲ ಸಾಮಾನ್ಯ ಎಂದು  ಎಲ್ಲವನ್ನೂ ಲಘುವಾಗಿ ತೆಗೆದುಕೊಂಡು ಮುಗುಳ್ನಗು ಬೀರುವರು.ವರ್ಷವಿಡೀ ಗಾಣದ ಎತ್ತಿನಂತೆ ಕೆಲಸದಲ್ಲಿ ಮುಳುಗಿದವರಿಗೆ ಜಾತ್ರೆ ಒಂದು  ಮೋಜಿನ ಯಾತ್ರೆ.
 ನೂರಾರು ವರ್ಷ ಗಾಳಿ ಮಳೆಗಳ ಹೊಡೆತಕ್ಕೆ ಜುಮ್ಮೆನ್ನದ ತೇರು ಮುಂದೆ ಒಂದು ದಿನಬೆಂಕಿಗೆ ಆಹುತಿಯಾಯಿತು. ಎಣ್ಣೆಮಯವಾಗಿದ್ದ ತೇರಿಗೆ  ರಾತ್ರಿ ಹೇಗೆ ಕಿಡಿತಗಲಿತೋ ಏನೋ ಅದು ಧಗಧಗನೆ ಹತ್ತಿ ಉರಿಯುವಾಗ ಜ್ವಾಲೆಯು ತೇರು ತೆಗ್ಗು  ಪ್ರದೇಶದಲ್ಲಿದ್ದರೂ ಸುತ್ತಲಿನ ಗುಡ್ಡ ಬೆಟ್ಟಗಳನ್ನೂ ಬೆಳಗಿಸಿತಂತೆ. ನಂತರ ಹಲವಾರು ದಿನಗಳ ಕಾಲ ಎಲ್ಲ  ಆಸ್ತಿಕರ ಮನದಲ್ಲೂ ಸೂತಕದ ಛಾಯೆ. ಮನೆಯಲ್ಲಿನ  ಯಾರೋ ಹಿರಿಯರನ್ನು ಕಳೆದುಕಂಡ ನೋವು.ಏನೋ  ಅನಾಹುತ ಆಗುಬಹುದೆಂಬ ಅಳಕು.  ಕಾಲ ಕೆಟ್ಟಿತು ಅದಕ್ಕೆ ಹೀಗೆ . ಬರುವ ಕೇಡಿನ  ಮುನ್ಸೂಚನೆ ಇದು ಎಂಬ ಭಯ. ಮುಂದೆ ಎನಾಯಿತೋ ಏನೋ ಒಳ್ಳೆಯದು ಕೆಟ್ಟದ್ದು ಎರಡೂ ಆಗಿರಬಹುದು. ಆದರೆ  ಸುಟ್ಟುಹೋದ ತೇರಿನ ಮಾತು ಮಾತ್ರ  ಮತ್ತೆ ಮತ್ತೆ  ಬರುತಿತ್ತು.  ಉಳಿದ ಇನ್ನೊಂದು ತೇರನ್ನು ಮೊದಲಿನಂತೆ ಎದುರು ಬಸವಣ್ಣನ ತನಕ ಎಳೆದು ವಾಪಸ್ಸು ಬರತರುವ ಪದ್ದತಿಯನ್ನು ಮೊಟಕುಗೊಳಿಸಲಾಯಿತು.  ಮುಂದೆ ಹತ್ತಾರು ವರ್ಷಗಳ ನಂತರ ಇನ್ನೊಂದು ತೇರು ಶಿಥಿಲವಾಗಿ ಕುಸಿಯಿತು. ಈಗ ಎರಡೂ ತೇರುಗಳನ್ನು ಹೊಸದಾಗಿ ನಿರ್ಮಿಸಿಲಾಗಿದೆ. ಹಿಂದಿನ ತೇರಿನ ಭವ್ಯತೆಯ ಇವಕ್ಕಿಲ್ಲ. ಅವುಗಳಿಗೆ ಹೋಲಿಸಿದರೆ ಇವು ಏನೇನೂ ಅಲ್ಲ. ಆಟಿಕೆಯಂತೆ ತೋರುತ್ತವೆ.   ಬದಲಾದ ಭಕ್ತಿಯ ಪ್ರಮಾಣದ ಸಂಕೇತವಾಗಿವೆ ಹೊಸ ರಥಗಳು. ಇತ್ತೀಚೆಗೆ ಜಾತ್ರೆಗೆ ಎರಡುದಿನ ಮುಂಚೆ ಹಂಪೆಗೆ ಹೋಗಿ ನೋಡಿದಾಗ ಬೆಪ್ಪಾದೆ.ನೂರಾರು ಮಂಡಾಳು ಡಾಣಿ ಮಿಠಾಯಿ ಅಂಗಡಿಗಳೂ, ಜತೆ ಜತೆ ಯಾಗಿ ಬಣ್ಣಬಣ್ಣದ ಬಳೆ ಮಾರುವ ಬಳೆ ಆಂಗಡಿಗಳು , ಬೀದಿಯಲ್ಲೆ  ಒಡೆ ಮೆಣಸಿನಕಾಯಿ ಕರಿದು ಬಿಸಿ ಬಿಸಿ ಯಾಗಿ  ಸಿದ್ಧವಾಗುವ ತಿಂಡಿ ಯಾವದೂ ಇಲ್ಲ. ಜಾತ್ರೆ ಯಾವುದೆ ತಯಾರಿಯ ಗಡಿಬಿಡಿ ಕಾಣಲಿಲ್ಲ. ಅಂಗಡಿಗಳು ಕಾಣಲಿಲ್ಲ. ತೇರನ್ನೂ ಇನ್ನೂ ಕಟ್ಟಿ ಮುಗಿಸಿರಲಿಲ್ಲ.ಅಂದರೆ ಕಟ್ಟಿಗೆಯತೇರಿನ ಮೇಲೆ ಹಂತ ಹಂತವಾಗಿ ಮಾಡಿ ಅವನ್ನು ಬೇರೆ ಬರೆ ರೀತಿಯಲ್ಲು ಸಿಂಗರಿಸಿ ಅತಿ ಮೇಲೆ ಇದಿರಿನ ಡುಬರಿಮಾಡಿ ಅದಕ್ಕೆ ಬಣ್ಣಾ ಬಣ್ಣದ ಬಟ್ಟೆಹೊದಿಸಿ ಅದರ ಮೇಲೆ ಕಳಸ ಇರಿಸಿರುವರು. ಅದಾವುದೂ ಇರಲಿಲ್ಲ.
ಜಾತ್ರೆಯಾದಾಗ ದಾಸೋಹ ನಡೆಯುತಿತ್ತು. ಬ್ರಾಹ್ಮಣರಿಗೆ  ಅವರ ಮಠದಲ್ಲಿ ಊಟವಾದರೆ, ಶೆಟ್ಟರಿಗೆ ಅವರ ಛತ್ರದಲ್ಲಿ ಸಂತರ್ಪಣೆ . ವೀರ ಶೈವರ ದಾಸೋಹದ ಮಂಟಪಗಳೂ ಅನೇಕ. ಜಾತಿ ಭೇದವಿಲ್ಲದೆ ಹಸಿದವರಿಗೆ ಅನ್ನ ನೀಡುವವರೂ ಇದ್ದರು. ಈಗ ಅವುಗಳ ಸುಳಿವೂ ಕಾಣಲಿಲ್ಲ.ಕೆಲವು ದಾನಿಗಳು ಜ್ಯಾತೀತವಾಗಿ ದಾಸೋಹ ನಡೆಸುವ ವಿಷಯ ತಿಳಿಯಿತು. ಆದರೆ ಕೊಡುವೆನೆಂದರೂ ಪಡೆಯುವವರೆ ಇಲ್ಲ.ಹೆಜ್ಜೆಗೊಂದು ಹೋಟೆಲು,ಹೊಸ ರುಚಿಯ ತಿಂಡಿಗಳು  ಕೈಬೀಸಿ  ಕರೆವಾಗ ಸಾಂಪ್ರದಾಯಿಕ ದಾಸೋಹಕ್ಕೆ ಕಾಯುವವರು ಯಾರು ?
 ಅಲ್ಲಿನವರನ್ನು ಏನು ಹೀಗೆ ?  ಎಂದು ಕೇಳಿದಾಗ “ಸ್ವಾಮಿ , ಈಗ ಮೊದಲಿನಂತೆ ಜನ ಮುಂಚಿತವಾಗಿ ಸೇರುವುದಿಲ್ಲ. ಫಟಾಪಟ್ ಜಾತ್ರೆಯ ಹೊತ್ತಿಗೆ ಬರುತ್ತಾರೆ ರಾತ್ರಿ ಎಂಟರ ಹೊತ್ತಿಗೆ ಕಸ ಗುಡಿಸಲು ಶುರು ಮಾಡುವರು. ಅಷ್ಟು ವಾಹನ ಸೌಕರ್ಯ ಇದೆ ಇಲ್ಲಿ ತಂಗುವವರು ಬಹು ಕಡಿಮೆ “. ಜಾತ್ರೆಯ ದಿನ ನೂರಾರು ಕೆಂಪು ಬಸ್ಸುಗಳು ನಿಮಿಷ ಕ್ಕೊಂದರಂತೆ ಬರುತ್ತಲೆ ಇರುತ್ತವೆ.ಇನ್ನು ಖಾಸಗಿ ವಾಹನಗಳಾದ ಕಾರು, ಟೆಂಪೋ , ಬೈಕುಗಳಂತೂ  ಸಾವಿರ ಸಂಖ್ಯೆಯಲ್ಲಿ ಆದರೆ ಅವೆಲ್ಲವನ್ನು ಹಂಪೆಗೆ  ಮೈಲು ದೂರದಲ್ಲಿ ನಿಲುಗಡೆ ಮಾಡಲಾಗುವುದು. ಅಲ್ಲಿನವರ ಪ್ರಕಾರ ಇತ್ತೀಚೆಗೆ ಆಚರಿಸುತ್ತಿರುವ   ಸರಕಾರಿ ಪ್ರಾಯೋಜಿತ ಹಂಪೆ ಉತ್ಸವ  ಬಲು ಜೋರು. ಅಲ್ಲಿನ ನಾಲಕ್ಕಾರು ವೇದಿಕೆಗಳಲ್ಲಿನ ಸಂಗೀತ , ನೃತ್ಯ , ನಾಟಕ ಧ್ವನಿ ಮತ್ತು ಬೆಳಕಿನ ಪ್ರದರ್ಶನ. ಬಂಡೆ ಬಂಡೆಗೂ ದೀಪಾಲಂಕಾರ. ರಾತ್ರಿ ಲೇಸರ್‌ ಪ್ರದರ್ಶನ  ಇಷ್ಟೆಲ್ಲ ನೋಡಲು  ಇರುವಾಗ ಉತ್ಸಾಹ ಜಾತ್ರೆಯಬಗ್ಗೆ ಕಂಡು ಬಾರದೆ ಇರುವುದ ಅಚ್ಚರಿಯಲ್ಲ..ಮೂರು ದಿನದ ಮಟ್ಟಿಗೆ ವಿಜಯನಗರದ ವೈಭವ ಮರುಕಳಿಸಿದಂತಿರುವುದು. ನೂರಾರು ಕೋಟಿ ಹಣ ಹರಿಯುವುದು ಮಿರಿ ಮಿರಿ ಮಿಂಚುವ ರಾಜಕಾರಣಿಗಳು ಮತ್ತು   ಹೊಳೆಯುವ ಚಿತ್ರತಾರೆಯರ ಮುಂದೆ ಪಂಪಾಪತಿಯೂ ತುಸು ಮಂಕಾಗಿ ಕಾಣುವುದು. ಇದೆಲ್ಲ ಯುಗಧರ್ಮಕ್ಕೆ ಸರಿಯಾಗೆ ಇದೆ.


18

No comments:

Post a Comment