Tuesday, August 21, 2012

ನಮಸ್ಕಾರ ನನಗಲ್ಲ !



ಹುಡುಗನಾಗಿದ್ದಾಗ ಹಳ್ಳಿಯಿಂದ ಐದು ಮೈಲು ದೂರದ  ಶಾಲೆಗೆನಡೆದು  ಹೋಗಿ ಬರುವುದೆ ವಾಯು ವಿಹಾರವಾಗಿತ್ತು. ಈ ಗಾಳಿ ಸಂಚಾರವು ಜೀವನದುದ್ದಕ್ಕೂ ಬಲವಾದ ಗೀಳಾಯಿತು. ಒಂಟಿಯಾಗಿರುವಾಗ ಹೊರಗೆ  ತಿರುಗುವನು, ಜಂಟಿಯಾದಮೇಲೆ ಕೋಣೆ ಶಂಕರನಾಗುವನು ಎಂದುಕೊಂಡು ಮನೆಯಲ್ಲಿ. ಸುಮ್ಮನಿದ್ದರು ಮದುವೆಯಾದ ಮೇಲೆ ಇಬ್ಬರೂ ಹೋಗ ತೊಡಗಿದೆವು. ನಾನು ಉಪನ್ಯಾಸಕನಾಗಿ ಹೋದ ಎಲ್ಲ ಕಡೆ ನಮ್ಮಿಬ್ಬರ ಓಡಾಟ ಜನರ ಕಣ್ಣುಕುಕ್ಕುತಿತ್ತು . ಬಳ್ಳಾರಿ ಜಲ್ಲೆಯ ಕಾಲೇಜೊಂದಕ್ಕೆ ವರ್ಗ ವಾದ ಮೆಲೂ ಅಭ್ಯಾಸ ಮುಂದುವರಿಯಿತು. ಮನೆಯೂ ಕಾಲೇಜಿಗೆ ಹತ್ತಿರ. ಕಾಲೇಜು ಊರ ಹೊರಗೆ.ಹಾಗಾಗಿ ಏನೆ ಸಾಮಾನು ಬೇಕಾದರೂ ಇಬ್ಬರೂ ಜೊತೆಯಾಗೆ ಹೋಗಿತರುತಿದ್ದವು. ನಮ್ಮ ಪಾಡಿಗೆ ನಾವು ಹೋಗಿ ಬರುತಿದ್ದೆವು  ಯಾವಾಗಲಾದರೂ ಒಮ್ಮೆ ಶಿಷ್ಯರು ಸಿಕ್ಕರೆ ನಮಸ್ಕಾರ ದೊರೆಯುತಿತ್ತು ಬಹುತೇಕ ವಿದ್ಯಾರ್ಥಿಗಳು  ಹಳ್ಳಿಯವರು . ಹಾಗಾಗಿ ನಮಸ್ಕಾರದ  ಚಮತ್ಕಾರ ಅವರಿಗೆ ಒಗ್ಗಿರಲಿಲ್ಲ.
 ಅಲ್ಲಿಗೆ ಹೋಗಿ  ಒಂದು ವರ್ಷದ ಮೇಲೆ. ನನ್ನ ಮಡದಿಗೆ ಬಹಳ ಅಚ್ಚರಿಕಾದಿತ್ತು.. ಊರಿನ ಬೀದಿಯಲ್ಲಿ ಹೋಗುವಾಗ  ನಮಸ್ಕಾರದ ಪ್ರಮಾಣ ಏಕದಂ ಹೆಚ್ಚಾಯಿತು. ಅದೂ  ಜತೆಗೆ  ನಿಂತು ಮಾತು ಕಥೆ ಬೇರೆ!. .
ಇದೇನು ಒಮ್ಮಿಂದೊಮ್ಮೆಲೆ  ಜನಪ್ರಿಯರಾಗಿರುವರಿ. ಹಾದಿಯುದ್ದಕ್ಕೂ ನಮಸ್ಕಾರಗಳು, ಎಂದು ಕಿಚಾಯಿಸಿದಳು.
ಈ ನಮಸ್ಕಾರ ನನಗಲ್ಲ. ಎಂದು ನಗುತ್ತಾ ಉತ್ತರಿಸಿದೆ.
ನಿಮಗಲ್ಲದಿದ್ದರೆ ,  ನನಗೆ ಹೇಳುವರೆ.? ಜತೆಗೆ ಉಭಯ ಕುಶಲೋಪರಿ  ಬೇರೆ, ಎಂದು ಕುಟುಕಿದಳು
ಇಲ್ಲ ಆ  ನಮಸ್ಕಾರ  ನನಗಲ್ಲ,  ಅದು ಸಲ್ಲ ಬೇಕಾದುದು ಸಕ್ಕರೆಗೆ !! , ಎಂದಾಗ ಅವಳು ಕಣ್ಣು ಕಣ್ಣು  ಬಿಟ್ಟಳು.
ಕಳೆದ ಶತಮಾನದ ಎಪ್ಪತ್ತರ ದಶಕದ ಮಾತು. ಆಗ ಸಕ್ಕರೆ ಬಹು ಜನರ ಪಾಲಿಗೆ ಕಹಿ.ಪೂರ್ತಿ ಸರ್ಕಾರಿ ನಿಯಂತ್ರಣ. ತಿಂಗಳಿಗೊಮ್ಮೆ ಸಹಕಾರ ಸಂಘಗಳ ಮೂಲಕ ಮೂರು- ನಾಲಕ್ಕು  ಕೆಜಿ ಮಾತ್ರ ಹಂಚುವರು.. ಸಹಕಾರ ಸಂಘದಲ್ಲಿ ಸಾರ್ವನಿಕರ ಸರತಿಯಲ್ಲಿ ನಿಂತು ಸಕ್ಕರೆ ತರಬೇಕು.  ಸಕ್ಕರೆ ಯಾವಾಗ ಬರುವುದೋ ಯಾರಿಗೂ ಗೊತ್ತಿಲ್ಲ. ಕೊಡುವ ಸಮಯವಂತೂ ದೇವರಿಗೇ ಗೊತ್ತು. ಬಕ ಪಕ್ಷಿಯಂತೆ ಕಾದು ತರಬೇಕಿತ್ತು ಅಕಸ್ಮಾತ್ ಕೊಡುವ ಸಮಯದಲ್ಲಿ ಹೋಗದಿದ್ದರೆ ಸ್ಟಾಕ್‌ಮುಗಿಯಿತು , ಎಂದು ಕೈಯಾಡಿಸುವರು. ಕಾಳ ಸಂತೆಯಲ್ಲಿ ಸಕ್ಕರೆ ಕೊಂಡು ಮಾಡಿದ ಕಾಫಿ ಬಹು ಕಹಿ ಎನಿಸುತಿತ್ತು ಅದಲ್ಲದೆ ಈ ರೀತಿ ಅಂಡಲೆದು ಸಕ್ಕರೆ ಪಡೆಯುವುದು ಸರ್ಕಾರಿ ನೌಕರರ ಮರ್ಯಾದೆಗೆ ಕುಂದು ಎನಿಸಿತು . ಹೇಗಿದ್ದರೂ ಸರ್ಕಾರಿ ನೌಕರರ ಸಂಘ ವಿತ್ತು. ಅದರ ಮೂಲಕ ಸರ್ಕಾರಿ ನೌಕರರಿಗೆ ಏಕೆ ಸಕ್ಕರೆ ವಿತರಿಸಬಾರದು ಎಂಬ ಯೋಚನೆ ಬಂತು. ಹೆಚ್ಚಿನ ಸಂಖ್ಯೆಯಲ್ಲಿದ್ದ ಸರ್ಕಾರಿ ನೌಕರರೆಂದರೆ ಶಿಕ್ಷಕರು ಮತ್ತು ಪೋಲಿಸರು. ಅದರಲ್ಲೂ ನಮ್ಮ ಕಾಲೇಜಿನಲ್ಲಿ ಮೂವತ್ತಕ್ಕೂ ಹೆಚ್ಚು ಜನ ಅದರಲ್ಲಿ ೧೦ ಜನ ಪತ್ರಾಂಕಿತ ಅಧಿಕಾರಿಗಳು, ನಾವೆ ಈ ವಿಷಯದಲ್ಲಿ  ಒಂದು ಸಭೆ ಕರೆದೆವು. ಅಲ್ಲಿ ವಿವಿಧ ಇಲಾಖೆಗಳಿಂದ ಆಯ್ದ ಒಂಬತ್ತು ಪ್ರತಿ ನಿಧಿಗಳ ಸಮಿತಿ ರಚನೆಯಾಯಿತು, ಕಾರ್ಯದರ್ಶಿಯಾಗಿ ಆಯ್ಕೆ ಮಾಡಿ ಈ ಹೊಸ ಹೊಣೆ ನನಗೆ ವಹಿಸಿದರು. ನನಗೂ ಇನ್ನೂ ಹುಮ್ಮಸ್ಸು. ಜತೆಗೆ ಗೆಳೆಯರ ಒತ್ತಾಸೆ.ಸರಿ ಗುಂಪಾಗಿ ತಹಶಿಲ್ದಾರರನ್ನು ಭೇಟಿಯಾಗಿ ವಿಷಯ ನಿವೇದನೆ ಮಾಡಿದೆವು ಸುಮಾರು ಎರಡು ನೂರಕ್ಕು ಹೆಚ್ಚಿನ ಸರ್ಕಾರಿನೌಕರರಿದ್ದಾರೆ. ಅವರ ಹಿತ ದೃಷ್ಟಿಯಿಂದ ಸರ್ಕಾರಿನಿಯಂತ್ರಣದ ವಸ್ತುಗಳ ವಿತರಣೆಯನ್ನು ಸಂಘಕ್ಕೆ ವಹಿಸಲು ಕೋರಿದೆವು.ಹೇಗೂ ಸರ್ಕಾರಿ ನೌಕರರ ಕ್ಲಬ್‌ ಕಟ್ಟಡ ತಾಲೂಕು  ಆಫೀಸಿನ ಆವರಣದಲ್ಲೆ ಇದ್ದಿತು. ಅದರ ಮುಂಭಾಗದಲ್ಲಿ ದಿನಾಸಂಜೆ ಕಾಲಕ್ಷೇಪಕ್ಕಾಗಿ ಕ್ಲಬ್ಬಿನ ಚಟುವಟಿಕೆ .ಚೆಸ್‌, ಷಟಲ್‌ಕಾಕ್‌  ಮತ್ತು ಕೇರಂ ಹೆಸರಿಗೆ ಮಾತ್ರ. . ನಡೆಯುತ್ತಿದ್ದುದು ೧೩ ಪುಟದ ಪುಸ್ತಕದ ಪಠನೆ. ಎಲ್ಲಾ ಇಲಾಖೆಯವರೂ ಅದರಲ್ಲಿ ಭಾಗಿ ಹಾಗಾಗಿ ಸಂಜೆ ಐದರಿಂದ ಒಂತ್ತರವರೆಗೆ  ಅದು ಜನ ಭರಿತ.ಅದರ ಹಿಂಭಾಗದಲ್ಲಿದ್ದ ಎರಡು ಚಿಕ್ಕಕೋಣೆಗಳನ್ನು ಸಕ್ಕರೆವಿತರಣೆ ಗೆ ಬಳಸಬಹುದೆಂದು ತೀರ್ಮಾನಿಸಲಾಯಿತು
ತಹಶಿಲ್ದಾರರು ಈ ವ್ಯವಸ್ಥೆಗೆ ಒಪ್ಪಿದರು. ಸರಿ ಸುಮಾರು ೮-೧೦  ಚೀಲ ಸಕ್ಕರೆಯನ್ನು ಸಂಘದ ಹೆಸರಿಗೆ ಅಲಾಟಮೆಂಟ್‌ ಕೊಡುವರು. ಅದನ್ನು ಹತ್ತಿರದ ಹೋಬಳಿಯ ಎಪಿಎಂಸಿ ಯಿಂದ ತಂದು ಹಂಚ ಬೇಕು. ನಾವಿರುವುದು ತಾಲೂಕು ಕೇಂದ್ರವಾದರೂ ಹತ್ತಿರದ ಹೋಬಳಿ ದೊಡ್ಡದಾಗಿತ್ತು ಮತ್ತು ಅಲ್ಲಿಯೆ  ಸಕ್ಕರೆ ತರಬೇಕಿತ್ತು. ಅಂದರೆ ಲಾರಿಯಲ್ಲಿ ಸಾಗಣಿಕೆ ಮಾಡಿ ತರಬೇಕಿತ್ತು.
ಮೊದಲ ಸಲಕ್ಕೆ ಒಂದು ಸಮಸ್ಯೆ ಧುತ್ತೆಂದು ಎದುರಾಯಿತು. ಎಂಟು  ಕ್ವಿಂಟಲ್‌ ಸಕ್ಕರೆಗೆ ಅನುಮತಿ ಚೀಟಿ ಬಂದಿತು ಆದರೆ  ಸಂಘದಲ್ಲಿ ಹಣವೆ ಇಲ್ಲ. ಸುಮಾರು ನಾಲಕ್ಕು ಸಾವಿರ ರೂಪಾಯಿ ಬೇಕು. ಆಗ ನನ್ನ ಸಂಬಳ ಮೂರು ನೂರನ್ನೂ ದಾಟಿರಲಿಲ್ಲ. ಬಹುತೇಕರು ಕುಚೇಲನ ಸಂಬಂಧಿಗಳೆ.  ಅಳೆದೂ ಸುರಿದು ಕೊನೆಗೆ ವಾರದ ಮಟ್ಟಿಗೆ ರಿಯಾಯಿತಿ ಬಡ್ಡಿದರದಲ್ಲಿ ಸಾಲಪಡೆದು ಮಾಲು ತುರುವುದು ನಂತರ  ಸಕ್ಕರೆ ಮಾರಿದ ಮೇಲೆ ಹಣ ಸಂದಾಯ ಮಾಡಲು ವ್ಯವಸ್ಥೆಯಾಯಿತು.ನಾವೆಲ್ಲ ಹೋಗುತಿದ್ದ ಹೋಟೇಲ್‌ ಮಾಲಕರು ಹಣ ನೀಡಲು ಒಪ್ಪಿದರು
ಮೂಲ ಬೆಲೆಯ ಮೇಲೆ ಕೆಜಿಗೆ ನಾಲ್ಕಾಣೆ ಹೆಚ್ಚುವರಿಯಾಗಿ ದರ ನಿಗದಿ ಮಾಡಿದರೆ ಒಂದು ಚೀಲಕ್ಕೆ ೨೫ ರುಪಾಯಿ ಉಳಿಯುವುದು ಅದರಲ್ಲಿ ಲಾರಿ ಬಾಡಿಗೆ ಮತ್ತು ಹಮಾಲಿ  ಖರ್ಚು ಆಗುವುದು ಎನಿಸಿತು.
ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಶರ್ಮ ಮತ್ತು ಸೆಟ್ಟರು ಸಂಜೆ ಮೂರುದಿನ ಮೂರುತಾಸು ಉಚಿತ ಸೇವೆಗೆ ಮುಂದೆ ಬಂದರು.
ಮೊದಲ ಅಲಾಟ್‌ಮೆಂಟ್‌ ಬಂದಾಗ ಸಮಸ್ಯೆಯ ಆಳದ ಅರಿವಾಯಿತು. ೨೫  ಕಿಲೋ ಮೀಟರ್‌ ದೂರದ ದಿಂದ ಸಕ್ಕರೆ ಸಾಗಿಸಿ ತರಬೇಕು . ಹೋಗುವರು ಯಾರು ಅರ್ಧ ದಿನವಾದರೂ ಬೇಕು. ಕೆಲಸದ ಗತಿ!  ರಜೆ ಹಾಕಲೇ ಬೇಕಾಯಿತು..ಅಲ್ಲಿ ಹೋದ ಮೇಲೆ ಸಕ್ಕರೆ ಪಡೆದೆವು. ಸಾಗಣಿಕೆ? ಒಂಬತ್ತು ಚೀಲಕ್ಕೆ ಯಾವ ಲಾರಿ ಬರುವುದು. ನಂತರ ವಿಚಾರಿಸಿದಾಗ ಅಲ್ಲಿಂದ ನಮ್ಮಲ್ಲಿಗೆ ಮಾಲು ತರುವ ಲಾರಿಗಳಿಗೆ ಕಾದು ಅದರಲ್ಲಿ ತಂದರೆ ತುಸು ಸೋವಿ ಬೀಳುವುದು ಗೊತ್ತಾಯಿತು.ಕೃಷಿ ಮಾರು ಕಟ್ಟೆಯ ಗುದಾಮದಿಂದ ಹೊರತರಲು ಹಮಾಲಿ, ಅಲ್ಲಿಂದ ಲಾರಿಗೆ ಏರಿಸಲು ನಂತರ ಲಾರಿಯಿಂದ ನಮ್ಮ ಜಾಗದಲ್ಲಿ ಇಳಿಸಲು ಮಜೂರಿ  ತೆರ ಬೇಕಾಯಿತು.ಚೀಲಕ್ಕೆ ಎರಡು ರೂಪಾಯಿ ಅಲ್ಲಿಯೆ ಆರು ರೂಪಾಯಿ ಛಟ್‌. ಜತೆಗೆ ಲಾರಿ ಬಾಡಿಗೆ ಬೇರೆ. ಹೋಗಿ ಬರಲು ಬಸ್‌ ಛಾರ್ಜು ಊಟ ತಿಂಡಿ ವೆಚ್ಚ. ಚೀಲಕ್ಕೆ ಹದಿನೈದು ರೂಪಾಯಿ ಹೋಯಿತು
ಸಕ್ಕರೆ ಬಂದ ಮಾರನೆ ದಿನ  ಮುಂಜಾನೆಯೇ ಎಲ್ಲ ಕಚೇರಿಗಳಿಗೆ ಮೂರುದಿನಗಳ ಕಾಲ ಸಂಜೆ ಆರರಿಂದ ಎಂಟರವರೆಗೆ ಸಕ್ಕರೆ ಹಂಚುವುದಾಗಿ ಸುತ್ತೋಲೆ ಹೋಯಿತು.
ಸಂಜೆ ಮೂವರೂ ಕುಳಿತೆವು . ಹೇಗಿದ್ದರೂ ಎಲ್ಲ ಕಚೇರಿಗಳಿಂದ ಬಂದ ಸಿಬ್ಬಂದಿಯ ಪಟ್ಟಿ ನಮ್ಮಲ್ಲಿತ್ತು ಅದನ್ನು ನೋಡಿ ಒಬ್ಬರು ಹಣ ತೆಗೆದುಕೊಂಡು ಕಿಟಕಿಯ ಮೂಲಕ  ಅವರಿಗೆ ಚೀಟಿ ಕೊಡುವರು. ಇನ್ನೊಬ್ಬರು ಬಾಗಿಲಲ್ಲೆ ಚೀಟಿ ಪಡೆದು ಸಕ್ಕರೆ ತೂಗಿ ಕೊಡುವರು.. ನಮಗೆಲ್ಲರಿಗೂ ಮೊದಲ ಮಗು ಹುಟ್ಟಿದಾಗ ಸಕ್ಕರೆ ಹಂಚಿದಷ್ಟೆ ಖುಷಿಯಾಯಿತು ಮೊದಲ ದಿನವೆ ನಾಲಕ್ಕು ಚೀಲ ಖಾಲಿಯಾಯಿತು. . ಲೆಕ್ಕ ಹಾಕಿದಾಗ ನಮಗೆ ೧೦ ಕೆಜಿ ಹಣ ಕಡಿಮೆ ಬಂದಿತ್ತು ಅಂದರೆ ತೂಕದಲ್ಲಿ ಹೆಚ್ಚು ಕಡಿಮೆ ಯಾಗಿತ್ತು
ಮುಂದಿನ ಎರಡು ದಿನ ಎಚ್ಚರಿಕೆಯಿಂದ ತೂಗಿದರು. ಆದರೂ ಚೀಲಕ್ಕೆ ಒಂದು ಒಂದೂವರೆ ಕೆಜಿ ಸಕ್ಕರೆ ಕೊರತೆ ಬಂದೇ ಬರುತಿತ್ತು
ಇದನ್ನು ನಾವು ನಿರೀಕ್ಷಿಸಿರಲಿಲ್ಲ. ಜೊತೆಗೆ ಇಪ್ಪತ್ತು ಕೆಜಿ ಸಕ್ಕರೆ ಮಿಕ್ಕಿದ ಸಕ್ಕರೆ ಸೇರಿಸಿದರೆ. ಅಂತೂ ಹಾಕಿದ್ದ ಹಣ ಹಿಂದೆ ಬಂತು
 ನಾಲಕ್ಕನೆ ದಿನ ಹೋಟೇಲ್‌ ಮಾಲಕನಿಗೆ ಅವರ ಹಣ ಹಿಂತಿರುಗಿಸಿದೆವು.
ಅಂತೂ ಇಂತೂ ನಮ್ಮಸರ್ಕಾರಿ ನೌಕರರಿಗೆ ಸೊಸೈಟಿಯ ಮುಂದೆ ಸರತಿಯಲ್ಲಿನಿಂತು ಕಾಯುವುದುರಿಂದ ಮುಕ್ತಿ ದೊರೆಯಿತು.ಮುಂದಿನ ತಿಂಗಳೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆವು. ಅಲಾಟ್‌ ಮೆಂಟ್‌ ಪತ್ರ ಪಡೆಯುವುದು. ಅದನ್ನು ಹಿಡಿದು ಹೋಗಿ ಸಕ್ಕರೆ ಚೀಲಗಳನ್ನು ಸಾಗಿಸಿ ತರುವುದು ನಂತರ ಎಲ್ಲ ಕಚೇರಿಗಳಿಗೂ ಸುತ್ತೋಲೆ  ತೋರಿಸುವ ಕೆಲಸಕ್ಕೆ ಒಬ್ಬ ಸಹಾಯಕ ಅತ್ಯಗತ್ಯವೆನೆನಿಸಿತು.ನೂರು ರೂಪಾಯಿ ಅದಕ್ಕೆ ಬೇಕಾಗುವುದು. ಕೊನೆಗೆ ಯೋಚನೆ ಮಾಡಿ ಬಡ ವಿದ್ಯಾರ್ಥಿಯೊಬ್ಬನ ಸಹಾಯ ಪಡೆದು ಅವನಿಗೆ  ಹಣ ಕೊಡಲು ತೀರ್ಮಾನಿಸಿದೆವು.
 ಮುಂದಿನ ತಿಂಗಳು ಯಥಾರೀತಿ ಹೋಟೆಲ್‌ಮಾಲಕರ ಹತ್ತಿರ ಹಣ ಪಡೆದೆವು. ಈಸಲ ಅವರು ತಮಗೆ ಇಪ್ಪತ್ತೈದು ಕೆಜಿ ಸಕ್ಕರೆ ಕೊಡಲು ವಿನಂತಿಸಿದರು.ಅಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡೆವು. ಅವರಿಗೆ ಸಕ್ಕರೆ ಕೊಟ್ಟರೆ ನಮ್ಮವರಿಗೆ ಕಡಿಮೆಯಾಗಬಹುದು. ಅಕಸ್ಮಾತ್‌ ಉಳಿದರೂ ಅದನ್ನು ಕೊಟ್ಟರೆ ಮಾರಿಕೊಂಡರು ಎಂಬ ಅಪವಾದ.ಕೊನೆಗೆ ಹಣದ ರೂಪದಲ್ಲಿ ಬಡ್ಡಿ ಕೊಟ್ಟರೂ ಸರಿ ನೌಕರಲ್ಲದವರಿಗೆ ಸಕ್ಕರೆ ಕೊಡಬಾರದು ಎಂದು ಸಮಿತಿ  ತೀರ್ಮಾನಿಸಿತು.
ಹೀಗೆ ಮೂರುತಿಂಗಳು ಸಕ್ಕರೆ ನೀಡುವಷ್ಟರಲ್ಲಿ ಪರಿಚಿತರು ಹೆಚ್ಚಿದರು..  ಏನಾದರೂ ಕಾರಣ ಹೇಳಿ ಹೆಚ್ಚು ಸಕ್ಕರೆ  ಕೇಳುವರು. ಮಿಕ್ಕಿದರೆ ಮೊದಲು  ಬಂದವರಿಗೆ ಕೊಡುತ್ತಿದ್ದೆವು.ಕಾರಣ ನಮಗೆ ನಗದು ಹಣ ಬೇಕಿತ್ತು ಆದರೆ ಇದರಿಂದ ಅಸಮಧಾನ ಹೊಗೆಯಾಡ ತೊಡಗಿತು. ನಾಲಕ್ಕು ಸಲ ಹೆಚ್ಚಿಗೆ ಪಡೆದಿದ್ದರೂ ಒಂದು ಸಲ ಕೊಡದಿದ್ದರೆ ಮುಖ ಗಂಟಾಗುತಿತ್ತು.ಜತೆಗೆ ಸಕ್ಕರೆ ಕೊರತೆ ಬೇರೆ. ಸಾಗಣಿಕೆ ಮಾಡುವಾಗಲೆ ಲಾರಿಯಲ್ಲೆ ಗುತ್ತಿ ಹಾಕಿಸಕ್ಕರೆ ಸೋರಿಸುವರೆಂಬ  ಮಾಹಿತಿ ಬಂತು. ಅದು ಹಮಾಲಿಗಳ ಕೆಲಸ. ಅನ್ನುವ ಹಾಗಿಲ್ಲ. ಅನುಭವಿಸುವ ಹಾಗಿಲ್ಲ.ಅನಿವಾರ್ಯವಾಗಿ  ಹೆಚ್ಚುವರಿ ಕೊಡುವುದನ್ನು ನಿಲ್ಲಿಸಲಾಯಿತು.   ಉಳಿದುದನ್ನು ಮುಂದಿನ ತಿಂಗಳು ಸಮನಾಗಿ ಹಂಚಲು ಮೊದಲು ಮಾಡಿದೆವು   ಇದರಿಂದ ಸಮಿತಿ ಸದಸ್ಯರ ಗೊಣ ಗಾಟ ಶುರುವಾಯಿತು.ಅವರ ಶಿಫಾರಸ್ಸಿನಮೇಲೆ ಐದು ಹತ್ತು ಕೆಜಿ ಕೊಡಿಸುವುದಕ್ಕೆ ಕತ್ತರಿ ಬಿತ್ತು.
ನೂರಾರು ಮನೆಗಳಲ್ಲಿ ಸಕ್ಕರೆ ದೊರೆಯುವಂತಾದುದು ಸಂತೋಷ ತಂದಿತು.ಇನ್ನೊಂದು ಬೆಳವಣಿಗೆಯೂ  ತೃಪ್ತಿ ತಂದಿತು.ಆಗ  ಬರಗಾಲ . ಧಾನ್ಯದ ಕೊರತೆ ತೀವ್ರವಾಗಿತ್ತು. ಸರ್ಕಾರ ಕೆಂಪು ಜೋಳವನ್ನು ಬಡ ಬಗ್ಗರ ಸಲುವಾಗಿ ಕಡಿತದ ದರದಲ್ಲಿ ಹಂಚಲು ಯೋಜನೆ ಹಾಕಿತು.ಪಿಎಲ್‌ ೪೮೦ ಯೋಜನೆಯ ಅಡಿಯಲ್ಲಿ ಅಮೇರಿಕಾದಿಂದ ಮಿಲೋ ಬಂದಿತು  ಧಾನ್ಯದ ಕೊರತೆ ಇರಲಿಲ್ಲ. ಆದರೆ ಹಂಚಿಕೆಯದೆ ಸಮಸ್ಯೆ. ಬರ ಪರಿಸ್ಥಿತಿ ತೀವ್ರವಾಗಿರುವುದರಿಂದ ಬಡ ಜನರಿಗೆ ರಿಯಾಯತಿ ದರದಲ್ಲಿ  ಕಾಳು ಮತ್ತು ಸೀರೆ  ಹಂಚ ಬೇಕಿತ್ತು.   ಕೆಂಪು ಜೋಳ  ಮಾರುಕಟ್ಟೆಯಲ್ಲಿಗಿಂತ ಅರ್ಧಕ್ಕೂಕಡಿಮೆ ಬೆಲೆಯಲ್ಲಿ.. ಮತ್ತು ಸೀರೆ ಬರಿ ಹತ್ತುರೂಪಾಯಿ ಚೌಕಳಿವಿನ್ಯಾಸ.. ಮೂರು ನಾಲಕ್ಕು ಬಣ್ಣದ. ಗಟ್ಟಿ ಮುಟ್ಟಾದ ಕಾಟನ್‌ ಸೀರೆಗಳು. ಇಂದಿರಾಗಾಂಧಿ ಸೀರೆ ಎಂದೆ ಹೆಸರಾಗಿದ್ದವು. ತಹಸಿಲ್ದಾರರು ಸಭೆ ಕರೆದು ಸಹಕರಿಸಲು ಕೋರಿದರು.ನಾವೂ ಒಪ್ಪಿದೆವು. ವಾರಕ್ಕೆ  ನಾಲಕ್ಕು ಕ್ವಿಂಟಾಲ್‌ ಮಿಲೋ ಮತ್ತು ೨೦ ಸೀರೆ  ಹಂಚಲು ನಿಗದಿಯಾಯಿತು..ನಿತ್ಯ ಅವನ್ನೂ ಹಂಚಲು ನಮ್ಮಲ್ಲಿ ಸಿಬ್ಬಂದಿ ಇಲ್ಲ. ಅದಕ್ಕೆ ವಾರದ ಸಂತೆಯ ದಿನ ಸಂತೆ ಮೈದಾನದಲ್ಲಿ  ನಮ್ಮ ಹುಡುಗನ ಸಹಾಯದಿಂದ ಮಾರಾಟ ಮಾಡಲು ನಿರ್ಧರಿಸಿದೆವು.ಜತೆಗೆ ಒಬ್ಬ ಕೆಲಸಗಾರನನ್ನೂ ನೇಮಿಸಿಕೊಂಡೆವು ಮಿಲೋ ಮಾರಾಟ ಸಬ್ಸಿಡಿ ದರದಲ್ಲಿ. ಯಾವುದೆ ಲಾಭ  ಪಡೆಯದೆ ಮಾರಿದ್ದರಿಂದ ಸಹಜವಾಗಿ ಜನ ಮುಕುರಿದರು..   ಸೀರೆಗಳು ಅಷ್ಟೆ ಬಿಸಿ ರೊಟ್ಟಿಯಂತೆ ಖರ್ಚಾದವು ನನ್ನ ಹೆಂಡತಿಗೂ ಎರಡು ಸೀರೆ ತಂದುಕೊಟ್ಟೆ. ಒಬ್ಬರಿಗೆ ಗರಿಷ್ಟ ಐದು ಕೆಜಿಕಾಳು ಒಂದೆ ಸೀರೆ ಎಂದು  ನಿಗದಿಯಾಗಿತ್ತು.. ಹತ್ತು  ಗಂಟೆಗೆ ಮಾರಾಟ ಮೊದಲಾಯಿತು. ೧೨ ಗಂಟೆಯ ಹೊತ್ತಿಗೆ  ಚೀಲ ಝಾಡಿಸ ಬೇಕಾಯಿತು. ನಾನು ಅರ್ಧ ದಿನ ರಜೆ ಹಾಕಿ ಪ್ರಾಂಶುಪಾಲರ ಅನುಮತಿ ಪಡೆದು ಸಂತೆಯಲ್ಲಿಯೆ ನಿಂತೆ. ಕಾಳಿಗಾಗಿ ಕಿತ್ತಾಡುವ ಜನರನ್ನು ಕಂಡು ಕಳವಳವಾಯಿತು. ಹಳ್ಳಿಯ ಜನ ಸಂತೆಗ ಬಂದವರು ಚೀಲವಿಲ್ಲ ಎಂದು  ಸೀರೆಯ ಸೆರಗಿನಲ್ಲಿ , ಗಂಡಸರು ಟವಲಿನಲ್ಲಿ ೩-೪ ಕೆಜಿ ಕೆಂಪುಜೋಳ ಹಾಕಿಸಿ ಕೊಂಡು ಹೋಗುವುದು ಕಂಡ ಕರುಳು ಕಿತ್ತು ಬರುತಿತ್ತು . ನನ್ನ ಈ ನಡೆ ಕೆಲವರ ನಗೆಗೆ ಈಡಾಯಿತು.ನನಗೆ ನಾಚಿಕೆಯ ಕೆಲಸ  ಅನಿಸಲಿಲ್ಲ. ನನಗೆ ಕೈಲಾದಷ್ಟು ಬಡವರಿಗೆ ಸಹಾಯಮಾಡಿದ . ತೃಪ್ತಿ ದಕ್ಕಿತು.  ಸುಮಾರು ಎರಡು ತಿಂಗಳು ಸಂತೆಯಲ್ಲಿ ಸೀರೆ ಮತ್ತು ಮಿಲೋ ಮಾರಾಟ  ಸಾಗಿತು. ಸಕ್ಕರೆಯ ಹಂಚಿಕೆ ಕೆಲಸ  ಒಂದುವರೆ ವರ್ಷದ ಮೇಲೆ ನಡೆಯಿತು. ಅದರ ಜೊತೆ ಅಸಮಧಾನವೂ ಹೆಚ್ಚ ತೊಡಗಿತು. ಹಣಕಾಸಿನ ಬಗ್ಗೆ  ದೂರು ನೀಡುವ ಹಾಗಿರಲಿಲ್ಲ. ಕಾರಣ ನಮ್ಮಲ್ಲಿ ಹಣವೆ ಇರಲಿಲ್ಲ. ಕಾಳ ಸಂತೆಯಲ್ಲಿ ಸಕ್ಕರೆ ಮಾರುತ್ತಿರಲಿಲ್ಲ. ಸರ್ವರೂ ಸಮಾನ ಎಂದು ಪರಿಗಣಿಸಿದ್ದ ನಾನು ಕೆಲವರು ಹೆಚ್ಚು ಸಮಾನ ಎಂಬ ವಿವೇಚನೆ ಹೊಂದಿರಲಿಲ್ಲ. ಒಂದು ರೀತಿಯ ಏಕಮುಖ ರುದ್ರಾಕ್ಷಿ ತರಹ ನನ್ನ ನಡೆ.. ಒಳ್ಳೆಯ ಕೆಲಸ ಮಾಡುತ್ತಿರುವೆ ಎಂಬ ಹೆಮ್ಮೆ ಬೇರೆ. ಪ್ರಾಮಾಣಿಕರು ಯಾರಿಗೂ ಅಂಜ ಬೇಕಿಲ್ಲ ಎಂಬ ಹುಂಬತನ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರೀತಿ , ಸಂಘದಲ್ಲಿ ಸದಸ್ಯರ ವಿಶ್ವಾಸ ಇದೆ.  ಇನ್ನು ಏನು ಬೇಕು ಎಂದುಕೊಂಡಿದ್ದೆ.ಸಾರ್ವಜನಿಕ ರಂಗದಲ್ಲಿ ಪದಾಧಿಕಾರಿಗಳಿಗೆ ವ್ಯವಹಾರಿಕತೆ ಇರಬೇಕು ಎಂಬ ಪರಿಜ್ಞಾನ ಆಗ ಇರಲಿಲ್ಲ. ಮುಂದೆಯೂ ಬರಲಿಲ್ಲ. ಜನರ ವಿಶ್ವಾಸ ಹೆಚ್ಚತೊಡಗಿತು.ನೌಕರ ಸಂಘಟನೆ ಬಲವಾಯಿತು. ವೇತನ ಆಯೋಗದ ಬೇಡಿಕೆ ಇಟ್ಟು ಮಾಡಿದ ಚಳುವಳಿ ನಮ್ಮಲ್ಲೂ ಯಶಗಳಿಸಿತು.ಅದನ್ನೆ ನನ್ನ  ಜನಪ್ರಿಯತೆ  ಎಂದುಕೊಂಡು ಕರುಬಿದವರು ಹಲವರು.ನಮ್ಮ ಹೈಸ್ಕೂಲು ವಿಭಾಗದಲ್ಲಿ ಒಬ್ಬ ಶಿಕ್ಷಕರಿಗೆ ರೂಲ್‌೩೨ ಮೇಲೆ ಇಂಗ್ಲಿಷ್‌ ಉಪನ್ಯಾಸಕರೆಂದು ಬಡ್ತಿಯ ಮೇಲೆ ಗುಲ್ಬರ್ಗ ಜಿಲ್ಲೆಗೆ ವರ್ಗವಾಯಿತು.ನನ್ನಬಗ್ಗೆ ಅಸಮಧಾನವಿದ್ದವರು ನನ್ನ ಜಾಗಕ್ಕೆ ಬರಲು ಅವರನ್ನು  ಪುಸಲಾಯಿಸಿದರು. ಹಿಂದೆ ಸಕ್ಕರೆ ಹಂಚುತಿದ್ದ ಸಹಕಾರಿ ಸಂಘಗಳ ಧುರೀಣರೂ ತಮಗಾದ ನಷ್ಟಕ್ಕೆ ಕುದಿಯುತಿದ್ದರು. ಅವರೂ ಕೈ ಜೋಡಿಸಿದರು. ಇವರ ಹಣ ಮತ್ತು ಅವರ ಪ್ರಭಾವ ಜೊತೆಗೂಡಿದವು.. ಈ ವಿಷಯ ನಮ್ಮನೌಕರ ಸಂಘದ  ಜಿಲ್ಲಾಧ್ಯಕ್ಷರ ಗಮನಕ್ಕೆ ಬಂತು.  ಸರ್ಕಾರಿ ನೌಕರರ  ಸಂಘದ ಪದಾಧಿಕಾರಿಗಳನ್ನು ಮೂರುವರ್ಷ ವರ್ಗ ಮಾಡಬಾರದೆಂಬ ನಿಯಮವಿದೆ.. ಅದನ್ನು ಎನ್‌ಜಿಒ  ರಾಜ್ಯ ಅಧ್ಯಕ್ಷರಾದ ಕೇಶವ ಮೂರ್ತಿಯವರು   ಇಲಾಖೆಯ ಗಮನಕ್ಕೆ ತಂದರು.. ಆದರೆ  ಆ  ಮನವಿ ಪತ್ರದ ಮೇಲೆ ನಾನು ಭಾರ ಇಡಲಿಲ್ಲ. ಅದು  ಗಾಳಿಗೆ ಹೋಯಿತು. ಹಣದ ಮುಂದೆ ನಿಯಮ ನಿಲ್ಲಲಿಲ್ಲ. ನನ್ನ ಗೆಳೆಯ  ವರ್ಗಾವಣೆ ಆದೇಶ ರಾತ್ರಾನುರಾತ್ರಿ  ತಂದು ದಸರೆಯ ರಜೆ ಪ್ರಾರಂಭ ವಾಗುವ ಕೊನೆಯದಿನ ಬೆಳಗ್ಗೆಯೆ ಹಾಜರಾದ. ನನಗೆ ತಕ್ಷಣ ಬಿಡುಗಡೆ ಮಾಡಿದರು. ವಿದ್ಯಾರ್ಥಿಗಳು ಮುಷ್ಕರ ಹೂಡಿದರು ಆದರೆ ಮಾರನೆ ದಿನದಿಂದ ೧೫ ದಿನ ದಸರೆ ರಜೆ., ಸರಕಾರಿ ನೌಕರರು ಸಾಂಕೇತಿಕವಾಗಿ ಪ್ರತಿಭಟಿಸಿದರು.ಅದೆಲ್ಲ ನನಗಂತೂ ಅನಗತ್ಯ ಎನಿಸಿತು .ಸ್ವಂತ ಊರು ಬಿಟ್ಟು ಬಂದ ಮೇಲೆ ಎಲ್ಲಿದ್ದರೆ ಅದೆ ನಮ್ಮ ಊರು ಎಂಬ ತತ್ವ ನನ್ನದು . ಕೊನೆಯ ಬಾರಿಗೆ ಎಲ್ಲರಿಗೂ ಸಕ್ಕರೆ ಹಂಚಿ ಗುಲ್ಬರ್ಗಕ್ಕೆ ಹೋಗಿ ವರದಿ ಮಾಡಿಕೊಂಡೆ.  ಆ ಸಲ ಸಕ್ಕರೆ ಅನೇಕರಿಗೆ ಅಷ್ಟು ಸಿಹಿ ಅನಿಸಲಿಲ್ಲ. ಆದರೆ ನಾನು ಸಕ್ಕರೆಗಿಂತಲೂ ಸಿಹಿಯಾದ ನೆನಪು ಹೊತ್ತು ಹೊಸ ಊರಿಗೆ ಹೊರಟೆ.ಹೊಸ ಜಾಗದಲ್ಲಿ ಹಲವಾರು ವರ್ಷ ನನ್ನ ಹೆಂಡತಿ ಇಂದಿರಾಗಾಂಧಿ ಸೀರೆ ಉಟ್ಟಾಗಲೆಲ್ಲ ಹಳೆಯ ನೆನಪು ಬರುತಿತ್ತು. ಆ ಸೀರೆಗಳು ಐದಾರು ವರ್ಷ  ಬಾಳಿಕೆ ಬಂದವು ನಂತರವೂ  ಕೌದಿ ಹೊಲೆಯಲು ಬಳಕೆಯಾದವು.


No comments:

Post a Comment