Monday, August 20, 2012

ನಕಲು ಮಾಡಿದ ನಾಗಪ್ಪ

ಅಪ್ಪಾಜಿರಾಯರ ಸರಣಿ:ನಕಲು ಮಾಡಿದ ನಾಗಪ್ಪ    http://kendasampige.com/images/xml.gif
http://kendasampige.com/images/trans.gif
http://kendasampige.com/images/trans.gif
ಗಾಂಧೀಜಿಯವರ ಸತ್ಯಶೋಧನೆಓದಿದವರಿಗೆ ಅವರು ಪರೀಕ್ಷೆಯಲ್ಲಿ ನಕಲು ಮಾಡುವುದಕ್ಕೆ ನಿರಾಕರಿಸಿದ ಸಂಗತಿ ಮನಸ್ಸಿಗೆ ಮುಟ್ಟುವುದು. ಶಿಕ್ಷಕರೆ ಹೇಳಿದರೂ ಅವರು ನಕಲು ಮಾಡಲಿಲ್ಲ. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಅಣ್ಣಾ ಹಜಾರೆಯವರೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡುವುದು ಕೂಡಾ ಭ್ರಷ್ಟಾಚಾರವೆ ಎಂದು ತಿಳಿಸಿದರು. ಅಂದರೆ ಈ ನಕಲು ಹಾವಳಿ ಸರ್ವವ್ಯಾಪಿ ಮತ್ತು ಶತಮಾನಗಳ ಇತಿಹಾಸ ಹೊಂದಿದೆ ಎಂದಾಯಿತು.
ಪಬ್ಲಿಕ್‌ ಪರೀಕ್ಷೆ ಬಂದರೆ ವಿದ್ಯಾರ್ಥಿಗಳ ಜತೆಗೆ ಪಾಲಕರಿಗೂ ಮತ್ತು ಶಿಕ್ಷಕರಿಗೂ ಆತಂಕ. ಅನೇಕ ಪೋಷಕರು ಮಕ್ಕಳು ಹೆಚ್ಚಿನ ಅಂಕ ಪಡೆಯಲೆಂದು ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಅವರ ಜತೆಗೆ ಕಷ್ಟ ಪಡುತ್ತಾರೆ. ಕಾರಣ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಗಳ ಜೀವನದಲ್ಲಿನ ಪ್ರಮುಖ ಹಂತಗಳು. ಅಲ್ಲಿ ದೊರೆತಿರುವ ಅಂಕಗಳೆ ಮುಂದಿನ ಜೀವನದ ಗತಿ ಬದಲಿಸಬಲ್ಲವು.. ಇನ್ನು ಪರೀಕ್ಷೆ ನಡೆಸುವುದಂತೂ ಕಳ್ಳ ಪೊಲೀಸ್‌ ಆಟದಂತೆ. ಹೇಗಾದರೂ ಮಾಡಿ ಉತ್ತಮ ಅಂಕ ಪಡೆಯುವುದು ಮಕ್ಕಳ ಗುರಿಯಾದರೆ. ಪ್ರೀತಿ ಮತ್ತು ಭೀತಿಯಿಲ್ಲದೆ ಸರಿಯಾಗಿ ಪರೀಕ್ಷೆ ನಡೆಸುವುದು ಶಿಕ್ಷಕರ ಉದ್ದೇಶ. ಮಾರ್ಚಿ ತಿಂಗಳಲ್ಲಿ ಬರುವ ಈ ಪರೀಕ್ಷಾ ಜ್ವರಕ್ಕೆ ಸರಿಯಾದ ಮದ್ದು ಇನ್ನೂ ಹುಡುಕಬೇಕಿದೆ.
ಅನೇಕ ಖಾಸಗಿ ಸಂಸ್ಥೆಗಳ ಉಳಿವು ಅಳಿವು ಫಲಿತಾಂಶವನ್ನೆ ಅವಲಂಬಿಸಿದೆ. ಉತ್ತಮ ಫಲಿತಾಂಶ ಬಂದರೆ ಅವರ ಕಿರೀಟಕ್ಕೊಂದು ಗರಿ. ಇಲ್ಲವಾದರೆ ಅನುದಾನಕ್ಕೆ ಖೋತಾ. ಏನಕೇನ ಉತ್ತಮ ಫಲಿತಾಂಶ ಅವರ ಗುರಿ.
ಆದರೆ ಅನೇಕರು ವರ್ಷಪೂರ್ತಿ ಪಾಠ ಮಾಡುವುದಕ್ಕಿಂತ ಪರಿಕ್ಷಾ ಸಮಯದಲ್ಲೆ ಶ್ರಮಿಸಿ ಫಲಿತಾಂಶ ತರ ಬಯಸುವರು. ಆಗ ವಿದ್ಯಾರ್ಥಿಗಳಿಗೆ ಹಬ್ಬ, ಇನ್ನು ಕೆಲ ಮೇಲ್ವಿಚಾರಕರು ಜನಪ್ರಿಯರಾಗಲು ಕಂಡೂ ಕಾಣದಂತೆ ಇರುವರು. ಹಲವರು ತಮಗೆ ಗೊತ್ತಿಲ್ಲದಿದ್ದರೂ ಸರ್ವಜ್ಞರಂತೆ ತಪ್ಪು ಉತ್ತರ ಬರೆಸಿ ಹುಸಿ ಗೌರವ ಭಾಜನರಾಗುವರು. ಕೆಲವು ಕಡೆ ಪರೀಕ್ಷಾರ್ಥಿಗಳು ಡೆಸ್ಕನ ಮೇಲೆ ಚಾಕು ಚುಚ್ಚಿ ಎಚ್ಚರಿಸಿದರೆ, ಹಲವು ಕಡೆ ಪ್ರತಿ ಪರೀಕ್ಷಾರ್ಥಿಯ ಕಂಪಾಸಿನಲ್ಲಿ ಹಣ ಇಟ್ಟು ಸಹಕರಿಸುವರು.
ಈ ಕೆಲಸದಲ್ಲಿ ಸಂಸ್ಥೆಯು ಶಾಮೀಲಾಗುವದೂ ಉಂಟು. ಗುಲ್ಬರ್ಗ ಜಿಲ್ಲೆಯ ಕಾಲೇಜೊಂದರಲ್ಲಿ ಪ್ರಶ್ನೆಪತ್ರಿಕೆ ಪಾಲಕನಾಗಿ ಹೋದಾಗ ಒಂದು ಅನುಭವವಾಯಿತು. ಅಲ್ಲಿ ಐದಾರು ನೂರು ಅಭ್ಯರ್ಥಿಗಳು. ವಿಜ್ಞಾನದ ವಿದ್ಯಾರ್ಥಿಗಳನ್ನೆಲ್ಲ ಒಂದು ದೊಡ್ಡ ಹಾಲಿನಲ್ಲಿ ಹಾಕಿ ಇಬ್ಬರನ್ನು ಮೇಲ್ವಿಚಾರಣೆಗೆ ನೇಮಿಸಿದ್ದರು. ತುಸುವೂ ಗಡಿಬಿಡಿ ಇಲ್ಲ. ಅಲ್ಲಿನ ಪ್ರಾಂಶುಪಾಲರು ಜಿಲ್ಲೆಯ ಅವಳಿ ಜವಳಿ ಮಂತ್ರಿಗಳ ಗೆಳೆಯರು. ತಮ್ಮ ಕಾಲೇಜಿನಲ್ಲಿ ಎಲ್ಲ ಸರಿಯಾಗಿದೆ ಎಂಬುದು ಅವರ ಹೆಗ್ಗಳಿಕೆ. ಸುಮಾರು ೨೦ ಕೋಣೆಗಳಲ್ಲಿ ಪರೀಕ್ಷೆ ಬರೆಯುತಿದ್ದರು. ಒಂದು ಸುತ್ತು ಹಾಕಿ ಬರಬೇಕೆಂದರೆ ಮುಕ್ಕಾಲುಗಂಟೆ ಹಿಡಿಯುವುದು. ನನ್ನ ಕಣ್ಣಿಗೆ ಅಸಹಜವಾಗಿರುವುದು ಏನೂ ಬೀಳುತ್ತಿರಲಿಲ್ಲ.. ನನಗಂತೂ ಈ ಶಿಸ್ತುಬದ್ಧ ನಡವಳಿಕೆ ಖುಷಿ ತಂದಿತು. ರಸಾಯನ ಶಾಸ್ತ್ರದ ಪರೀಕ್ಷೆಯ ದಿನ ನಾನು ಮೊದಲಿನಿಂದ ಕೊನೆವರೆಗೂ ಅದೆ ಹಾಲಿನಲ್ಲಿ ಸುಮ್ಮನೆ ಕುಳಿತೆ. ಯಾರನ್ನೂ ತಪಾಸಣೆ ಮಾಡಲಿಲ್ಲ.  ಆದರೂ ಏನೋ ಒಂದುರೀತಿಯ ಕಸಿವಿಸಿ ಕಂಡಿತು. ಪರೀಕ್ಷೆಯಾದ ಮೇಲೆ ಪ್ರಾಂಶುಪಾಲರು,
``ಏನು, ಸಾರ್‌ ಹೀಗೆ ಮಾಡಿದಿರಿ?’’ ಎಂದು ಆಕ್ಷೇಪಿಸಿದರು.
ಮಕ್ಕಳು ತುಂಬ ಶಿಸ್ತಿನಿಂದ ಬರೆಯುತಿದ್ದರು, ಅದನ್ನೆ ಗಮನಿಸುತ್ತಾ ಕುಳಿತೆ. ಹೇಗಿದ್ದರೂ ನಿಮ್ಮಲ್ಲಿ ಅವ್ಯವಹಾರದ ಸುಳಿವೆ ಇಲ್ಲ, ಎಂದು ಸಮಜಾಯಿಷಿ ಹೇಳಿದೆ. ಫಲಿತಾಂಶ ಬಂದ ನಂತರ ಗೊತ್ತಾಯಿತು ಆ ವರ್ಷ ಎಲ್ಲ ವಿದ್ಯಾರ್ಥಿಗಳೂ ಒಂದೆ ವಿಷಯದಲ್ಲಿ ನಪಾಸು! ಪಾಪ, ವಿಷಯ ಪರಿಣಿತ ಮೇಲ್ವಿಚಾರಕರಿಗೆ ಅವಕಾಶವೆ ದೊರಕಿರಲಿಲ್ಲ.
ಆದರೆ ಎಲ್ಲ ಕಡೆ ಈ ಸೂಕ್ಷ್ಮಜ್ಞತೆ ಇರುವುದಿಲ್ಲ. ಎಲ್ಲವೂ ಮುಕ್ತ ಮುಕ್ತ. ಪರೀಕ್ಷೆಗೆ ಕುಳಿತವರಿಗಿಂತ ಹೊರಗೆ ಸಹಾಯಕ್ಕಾಗಿರುವವರ ಗುಂಪೆ ದೊಡ್ಡದಿರುವುದು. ಅನೇಕ ವೇಳೆ ಪಾಲಕರೆ ಕಿಟಕಿಯ ಮೂಲಕ ಸಹಾಯ ಹಸ್ತ ಚಾಚುವರು.. ಒಂದೆ ದುರಂತವೆಂದರೆ ಬಹುತೇಕರಿಗೆ ತಿಳಿದಿರುವುದು ಅಷ್ಟಕಷ್ಟೆ.
ಒಂದು ಆ ಪ್ರದೇಶದಲ್ಲೆ ಅತಿ ದೊಡ್ಡ ಕಾಲೇಜು. ಅವರವು ಜಿಲ್ಲೆಯಾದ್ಯಂತ ಅನೇಕ ವಿದ್ಯಾ ಸಂಸ್ಥೆಗಳು. ಅಲ್ಲಿನ ಮುಖ್ಯಸ್ಥರದು ಒಂದೆ ವಾದ. ಪ್ರಶ್ನ ಪತ್ರಿಕೆ ಪಾಲಕರದು. ಅದು ಬಯಲಾಗದಂತೆ ನೋಡಿಕೊಳ್ಳುವ ಕೆಲಸ ಮಾತ್ರ ಉಳಿದೆಲ್ಲ ಚಿಂತೆ ಅನಗತ್ಯ. ಈ ಸೂಚನೆಯನ್ನು ಬರಹದಲ್ಲಿ ಕೊಡಿ ಎಂದಾಗ ಆಸಾಮಿ ಗಪ್‌ಚುಪ್‌.
ಚಿನ್ನದ ನಾಡಿನ ಒಂದು ಸಂಸ್ಥೆಯು ಬಹಳ ಹೆಸರುವಾಸಿ, ಎಲ್ಲ ಉಳ್ಳವರ ಮಕ್ಕಳು ಸೇರುವುದು  ಅಲ್ಲಿಯೆ. ಓದಿನಲ್ಲಿ ಬಹು ಮುಂದು. ಶಿಕ್ಷಕರೂ ಅಷ್ಟೆ ಉತ್ತಮ ಬೋಧಕರೆಂದು ಜಿಲ್ಲೆಗೆ ಹೆಸರಾದವರು. ಪ್ರತಿವರ್ಷ ನೂರಕ್ಕೆ ನೂರು ಫಲಿತಾಂಶ. ಅಲ್ಲಿ ಪ್ರವೇಶಕ್ಕೆ ನೂಕುನುಗ್ಗಲು ಯಾಕೋ ಒಬ್ಬ ಅಧಿಕಾರಿಗೆ ಅನುಮಾನ ಬಂದು ಬೇರೆ ಮುಖ್ಯ ಅಧೀಕ್ಷಕರಿಗೆ ಪರೀಕ್ಷೆಯ ಹೊಣೆ ಕೊಟ್ಟರು. ಅವರು ಎಲ್ಲ ಪರೀಕ್ಷಾ ಸಿಬ್ಬಂದಿಯನ್ನು ಹೊರಗಿನಿಂದ ಕರೆಸಿ ಪರೀಕ್ಷೆ ನಡೆಸಿದರು.
``ನಮ್ಮ ಸಂಸ್ಥೆಗೆ ಅವಮಾನವಾಯಿತು, ಯಾರು ಬೇಕಾದರೂ ಬಂದು ಚೆಕ್‌ ಮಾಡಲಿ. ಒಂದು ಚೀಟಿ ಸಿಕ್ಕಿದರೆ ರಾಜಿನಾಮೆ ಕೊಡುವೆ’’ ಸಂಸ್ಥೆಯ ಮುಖ್ಯಸ್ಥರು ಗುಡುಗಿದರು. ಶಾಲೆಯ ಅಭಿಮಾನಿಗಳು ತುಸು ಗೊಂದಲ ಉಂಟು ಮಾಡಿದರು. ಆದರೂ ಪಟ್ಟು ಬಿಡದೆ ಪರೀಕ್ಷೆ ನಡಸಿದರು ಫಲಿತಾಂಶ ಬಂದಾಗ ಆ ಶಾಲೆಯ ಇತಿಹಾಸದಲ್ಲೆ ಮೊದಲಬಾರಿ ಶೇಕಡಾ ೫೦ ರಷ್ಟು ಮಾತ್ರ ಫಲಿತಾಂಶ. ಮಕ್ಕಳು ಚೀಟಿ ಪಾಟಿ ತರದಂತೆ ನೋಡಿಕೊಂಡು, ಐವತ್ತಕ್ಕೂ ಹೆಚ್ಚು ಅಂಕಗಳಿಗೆ ಶಿಕ್ಷಕರೊಬ್ಬರು ಕೋಣೆಯಿಂದ ಕೋಣೆಗೆ ಹೋಗಿ ಸರಿ ಉತ್ತರ ಬರೆಸುತಿದ್ದರು. ಅದು ಅವರ ಸಾಧನೆಯ ಒಳಗುಟ್ಟು.
ಸರ್ಕಾರಿ ಸಂಸ್ಥೆಗಳದು ಬೇರೆಯದೆ ಕಥೆ. ಅಲ್ಲಿ ಸಿಬ್ಬಂದಿಯ ಕೊರತೆ. ವರ್ಷಪೂರ್ತಿ ಪಾಠ ಪ್ರವಚನ ನಡೆಯುವುದೆ ಇಲ್ಲ. ಆದರೆ ಪರೀಕ್ಷೆ  ಮಾತ್ರ ನಿಯಮಾನುಸಾರ ನಡೆಸ ಬಯಸುವರು. ಕಲಿಯದ ಮಕ್ಕಳು ಬರೆವುದಾದರೂ ಏನು? ಅನಿವಾರ್ಯವಾಗಿ ಅವ್ಯವಹಾರಕ್ಕೆ ಮುಂದಾಗುವರು.
ಪ್ರಜ್ಞಾವಂತರೆಲ್ಲ ಚಿಂತನೆ ನಡೆಸಬೇಕಾದ ವಿಷಯೊಂದಿದೆ. ಸರ್ಕಾರಿ ಶಾಲೆಗಳಲ್ಲಿ ಅರ್ಹತೆಯ ಮೇಲೆ ನೇಮಕವಾಗುತ್ತದೆ. ಕೈತುಂಬ ಸಂಬಳ. ಹೆಚ್ಚಿನ ಕಿರಿಕಿರಿ ಇಲ್ಲ ಆದರೆ ಫಲತಾಂಶ ಮಾತ್ರ ಹೇಳಿಕೊಳ್ಳುವ ಹಾಗಿಲ್ಲ. ಆದರೆ ಖಾಸಗಿ ಸಂಸ್ಥೆಗಳಲ್ಲಿ ಕಡಿಮೆ ಸಂಬಳ, ಅಧಿಕ ಹೊರೆ. ಅಲ್ಲಿಗೆ ಬರುವವರ ಶೈಕ್ಷಣಿಕ ಸಾಧನೆ ಹೇಳಿಕೊಳ್ಳುವಂತಹದಲ್ಲ. ಆದರೆ ಉತ್ತಮ ಫಲಿತಾಂಶ ಬರುವುದು. ಮೇಲುನೋಟಕ್ಕೆ ಇದು ವಿಪರ್ಯಾಸ ಎನಿಸಿದರೂ ಇದು ಸತ್ಯಕ್ಕೆ ಸಮೀಪ.
ನಕಲು ಮಾಡುವ ಹವ್ಯಾಸ ವಿಶ್ವವ್ಯಾಪಿ. ಅಮೇರಿಕಾ ಯೂರೋಪುಗಳೂ ಇದಕ್ಕೆ ಹೊರತಲ್ಲ. ಅಲ್ಲಿನ ಬಹಳಷ್ಟು ವಿದ್ಯಾರ್ಥಿಗಳಿಗೆ ನಕಲು ಮಾಡುವ ವ್ಯವಧಾನವಿಲ್ಲ. ಕೆಲ ಸಂಸ್ಥೆಗಳು ಉತ್ತಮ ಫಲಿತಾಂಶಕ್ಕಾಗಿ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲೆ ಕೈವಾಡ ನಡೆಸಿದ ವರದಿಯಾಗಿತ್ತು.
ಸಮಸ್ಯೆಗೆ ಸರ್ಕಾರದ ಶಿಕ್ಷಣ ನೀತಿಯ ಕೊಡುಗೆಯೂ ಗಣನೀಯ. ಸರ್ವರಿಗೂ ಶಿಕ್ಷಣ ನಮ್ಮ ನೀತಿ. ಒಂದನೆ ತರಗತಿಯಿಂದ ಹತ್ತನೆ ತರಗತಿವರೆಗೆ ಯಾವುದೆ ಕಾರಣಕ್ಕೂ ಫೇಲು ಮಾಡುವಂತಿಲ್ಲ. ಸರಿ ಒಂದರಿಂದ ಹತ್ತರ ವರೆಗೆ ಅವರನ್ನು ಮುಂದಿನ ತರಗತಿಗೆ ದೂಡುತ್ತಾ ಹೋಗಲಾಗುವುದು. ಅಲ್ಲಿ ಧಡಕ್ಕನೆ ಎಡವಿ ಬೀಳುವರು. ಇತ್ತೀಚೆಗೆ ವಿಶೇಷ ಕಾಳಜಿ ವಹಿಸಿ ಗಮನ ಕೊಡಲಾಗುತಿದ್ದರೂ ಮಾಡಬೇಕಾದದ್ದು ಬಹಳವಿದೆ.
ಪರೀಕ್ಷೆ ಪ್ರಾರಂಭವಾದ ದಿನದಿಂದ ಪ್ರತಿ ದಿನ ಪತ್ರಿಕೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದವರ ವಿವರ ಬರುತ್ತದೆ. ಜತಗೆ ಪರೀಕ್ಷೆಗಳಲ್ಲಿ ಅನೇಕ ನಕಲಿ ವಿದ್ಯಾರ್ಥಿಗಳು ಸಿಕ್ಕಿಬೀಳುವರು ಪರೀಕ್ಷಾ ವಿಧಾನದಲ್ಲಿ ಸುಧಾರಣೆ ಬರುತ್ತಲಿದೆ. ಇಲಾಖೆಗೆ ಆ ಅವಧಿ ಅಗ್ನಿದಿವ್ಯದ ಕಾಲ. ಸೈಬರ್‌ ಯುಗದಲ್ಲಿ ಪರೀಕ್ಷೆಯಲ್ಲಿ ಅಗುತ್ತಿರುವ ಅವ್ಯವಹಾರಗಳಿಗೆ ಕಾರಣವೇನು ಎಂಬ ಚಿಂತನೆಯ ಅಗತ್ಯವಿದೆ. ವಂಚನೆ ಮಾಡುವುದು ಇಂದು ನಿನ್ನೆಯದಲ್ಲ. ಎಂದೆಂದಿಗೂ ಇತ್ತು. ಆದರೆ ಆಗ ಅದು ಕದ್ದು ಮುಚ್ಚಿ ಇತ್ತು. ಇಂದು ರಾಜಾರೋಷವಾಗಿ ನಡೆಯುತ್ತದೆ.
ಆಗ ಅದು ತಪ್ಪು ಎಂಬ ಭಾವನೆ ಬಲವಾಗಿ ಬೇರೂರಿತ್ತು. ಈಗಿನ ಹೈ ಟೆಕ್‌ ಯುಗದಲ್ಲಿ ಅದಕ್ಕೆ ತಂತ್ರಜ್ಞಾನದ ಮೆರಗು ಬೇರೆ ‌ಬಂದಿದೆ. ಮೇಲಾಗಿ ಅದು ಒಂದು ದೊಡ್ಡ ಸಾಧನೆ ಎಂದು ಹಾಡಿ ಹೊಗಳುವವರೂ ಇದ್ದಾರೆ. ಈಗ ಆನ್‌ ಲೈನ್‌ ಟೆಸ್ಟ್ ಗಳು ಬರೆಯುವವರ ಶ್ರಮವನ್ನು ಬಹುತೇಕ ಕಡಿಮೆಗೊಳಿಸಿವೆ. ಟೆಲಿಫೋನಿಕ್‌ ಸಂದರ್ಶನಗಳು ಮುಖಾಮುಖಿ ಆಗುವುದು ಕಡಿಮೆ. ಅಮೆರಿಕಾದಲ್ಲಿದಾಗ ಅಲ್ಲಿನ ಭಾರತದ ಒಂದು ರಾಜ್ಯದ ಜನ ತಮ್ಮವರಿಗೆ ಸಹಾಯ ಮಾಡಲು ಒಬ್ಬರ ಬದಲಾಗಿ ಇನ್ನೊಬ್ಬರು ಪ್ರಾಥಮಿಕ ಹಂತದ ಪರೀಕ್ಷೆಗಳನ್ನು  ಆನ್‌ ಲೈನ್‌ನಲ್ಲಿ ಮತ್ತು ಟೆಲಿಫೋನ್‌ನಲ್ಲಿ ಮುಗಿಸಿಕೊಟ್ಟ ವಿಷಯ ಅಗಾಗ ಗಮನಕ್ಕೆ ಬರುತ್ತಿತ್ತು.  ಅದು ಅವರಿಗೆ ನಾಚಿಕೆಯ ಸಂಗತಿಯಾಗಿರದೆ ಹೆಮ್ಮೆಯ ವಿಷಯವಾಗಿರುವುದು ಬದಲಾದ ಮೌಲ್ಯಗಳ ಸೂಚಕವಾಗಿದೆ. ಅಷ್ಟು ದೂರದಲ್ಲಿ ಏಕೆ ನಮ್ಮಲ್ಲಿಯೇ ಕೆಎಎಸ್‌ ಪರೀಕ್ಷೆಯಲ್ಲಿಯೇ ಸಂಬಂಧಿಸಿದವರು ಷಾಮೀಲಾಗಿ ಅಡಳಿತ ಸೇವಾ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿ  ಪಡೆಯಲು ಸಹಾಯ ಮಾಡಿರುವುದನ್ನು ಪತ್ರಿಕೆಗಳಲ್ಲಿ ಓದಿದಾಗ ಮನಸ್ಸು ನಾಲಕ್ಕು ದಶಕಗಳ ಹಿಂದಿನ ಘಟನೆಯನ್ನು ನೆನೆಯಿತು.
ಕೆಲಸಕ್ಕೆ ಸೇರಿದ ಹೊಸತು. ಕಗ್ಗಲ್ಲನ್ನು ಕಟೆದು ವಿಗ್ರಹ ಮಾಡಬಲ್ಲೆ ಎಂಬ ಆತ್ಮವಿಶ್ವಾಸ. ಎಲ್ಲ ಸರಿಯಾಗಿರಬೇಕು.. ನಿಯಮ ಮೀರಿ ನಡೆಯಲು ಅವಕಾಶ ನೀಡಬಾರದು ಎನ್ನುವ ಅತ್ಯುತ್ಸಾಹ. ನಾನು ಕೆಲಸಕ್ಕೆ ಸೇರಿದ ಒಂದೆ ವಾರದಲ್ಲಿ ಅರ್ಧ ವಾರ್ಷಿಕ ಪರೀಕ್ಷೆ. ಹತ್ತನೆ ತರಗತಿಯ ವಿದ್ಯಾರ್ಥಿಗಳ ಕೋಣೆಗೆ ನನ್ನನ್ನು ಮೇಲ್ವಿಚಾರಕನನ್ನಾಗಿ ಹಾಕಿದರು. ಪ್ರಶ್ನೆ ಪತ್ರಿಕೆ ಹಂಚಿದ ಮೇಲೆ  ಎಲ್ಲರನ್ನೂ ಕಣ್ಣಲ್ಲಿ ಕಣ್ಣಿಟ್ಟು ಕಾಯತೊಡಗಿದೆ. ಆಗಿನ್ನೂ ಅವರು ಹದಿ ಹರೆಯದವರು. ಅತ್ತಿತ್ತ ಅಲುಗಲೂ ಅವಕಾಶ ಕೊಡಲಿಲ್ಲ. ಅವರೆಲ್ಲರಿಗೂ ಡೆಸ್ಕ ಸಹ ಇರಲಿಲ್ಲ. ಕೆಲವರು ನೆಲದ ಮೇಲೆ ಕುಳಿತು ತೊಡೆಯ ಮೇಲೆ ರಟ್ಟು ಇಟ್ಟುಕೊಂಡು ಬರೆಯಬೇಕಿತ್ತು. ಪರೀಕ್ಷೆ ಪ್ರಾರಂಭದ ಮೊದಲೆ ಎಲ್ಲರನ್ನೂ ತಪಾಸಣೆ ಮಾಡಿದ್ದೆ. ನಕಲು ಮಾಡಲು ಅವಕಾಶವಿಲ್ಲ ಎಂದು ಎಚ್ಚರಿಕೆ ನೀಡಲಾಗಿತ್ತು. ಮಕ್ಕಳೆಲ್ಲ ತುಂಬಾ ಚೆನ್ನಾಗಿ ಬರೆಯುತ್ತಿದ್ದರು. ಅತಿತ್ತ ಅಲುಗದೆ ಬರೆಯುವುದರಲ್ಲಿ  ಮಗ್ನರಾಗಿದ್ದರು. ಎಷ್ಟು ಸ್ಟಿಕ್ಟ್ರಾಗಿ ಮೇಲ್ವಿಚಾರಣೆ ಮಾಡುತ್ತಿರುವೆ ಎಂದು ಎದೆಯುಬ್ಬಿ ಬಂತು.
ಇನ್ನು ಪರೀಕ್ಷೆ ಮುಗಿಯಲು ಅರ್ಧ ಗಂಟೆ ಇತ್ತು.. ಬಾಗಿಲ ಹತ್ತಿರ ಕೂಳಿತ ಹುಡುಗನೊಬ್ಬ ಬಹಳ ಬಾಗಿರುವುದು ಗಮನಕ್ಕೆ ಬಂತು. ಯಾಕೋ ಅನುಮಾನ ಬಂತು. ಎದ್ದು ನಿಲ್ಲಿಸಿದೆ. ಅವನ ರಟ್ಟು ನೋಡಿದೆ. ಕ್ಲಿಪ್ಪಿನ ಅಡಿಯಲ್ಲಿ ಚಿಕ್ಕ ಚೀಟಿ ಕಾಣಿಸಿತು. ಮಾಲು ಸಮೇತ ಕಳ್ಳನನ್ನು ಹಿಡಿದ ಹೆಮ್ಮೆ ನನ್ನದಾಯಿತು. ಅವನು ಹೆದರಿಕೆಯಿಂದ ನಡುಗತೊಡಗಿದ. ತಪ್ಪಾಯಿತು ಬಿಟ್ಟುಬಿಡಿ ಎಂದು ಅಂಗಲಾಚಿದ. ನಾನು ಅವನ ಉತ್ತರಪತ್ರಿಕೆ, ಪ್ರಶ್ನೆಪತ್ರಿಕೆ ಕಸಿದುಕೊಂಡು ಅವನನ್ನು ಮುಖ್ಯೋಪಾಧ್ಯಾಯರಲ್ಲಿಗೆ ಕರೆದೊಯ್ದೆ.
ಸಾರ್, ಇವನು ಕಾಪಿ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ನಿಮ್ಮಲ್ಲಿಗೆ ಕರೆತಂದಿದ್ದೇನೆ. ಕ್ರಮ ತೆಗೆದುಕೊಳ್ಳಿ ಎಂದು ವರದಿ ಒಪ್ಪಿಸಿದೆ.
ಅವರು ಘೊಳ್ಳನೆ ನಗತೊಡಗಿದರು.
ನನಗೆ ಬಹಳ ಅವಮಾನ ಎನಿಸಿತು. ಏನು ಸಾರ್‌, ತಪ್ಪು ಮಾಡಿದವನನ್ನು ಹಿಡಿದು ತಂದರೆ ಅವನಿಗೆ ಶಿಕ್ಷೆ ಕೊಡುವುದು ಬಿಟ್ಟು ನಗುತ್ತಿರುವಿರಿ, ಖಾರವಾಗಿ ಕೇಳಿದೆ.
ಅವರು ನಗು ನಿಲ್ಲಿಸಲೇ ಇಲ್ಲ. ನನ್ನ ಮಾತಿಗೆ ಗಮನ ಕೊಡಲೂ ಇಲ್ಲ. ಅವರ ಜತೆ ಅಲ್ಲಿಯೇ ಇದ್ದ  ಹಿರಿಯ ಶಿಕ್ಷಕರೂ ಮತ್ತು ಗುಮಾಸ್ತರೂ ನಗತೊಡಗಿದರು.
ಈಗ ಕಕ್ಕಾಬಿಕ್ಕಿಯಾಗುವ ಸರದಿ ನನ್ನದಾಯಿತು. ನಾನು ಅವರ ಮುಖ ಮಿಕಮಿಕ ನೋಡತೊಡಗಿದೆ.
ಅವರು ನಗುವನ್ನು ತಡೆಹಿಡಿದು ಆ ಹುಡುಗನಿಗೆ, ನೀನು ಮೊದಲು ಮನೆಗೆ ಹೋಗು, ತಕ್ಷಣ ಹೊರಡು ಎಂದು ಒತ್ತಾಯಿಸಿದರು. ಅಷ್ಟೆ ಅಲ್ಲ, ಜವಾನನ್ನು ಕರೆದು ಇವನನ್ನು ಹೊರಗೆ ಕರೆದುಕೊಂಡು ಹೋಗು ಎಂದರು.
ಕದ್ದ ಮಾಲು ಸಮೇತ ಕಳ್ಳನನ್ನು ಹಿಡಿದು ಕೊಟ್ಟಾಗ ಅವನನ್ನು ಬಿಟ್ಟರಲ್ಲ ಇವರು ಎಂದು ಮನಸ್ಸಿಗೆ ಬೇಸರವಾಯಿತು.
ಏನು ಸಾರ್‌ ಹೀಗೆ ಮಾಡಿದಿರಿ. ಹೀಗಾದರೆ ಇನ್ನು ಮೇಲೆ ಶಾಲೆಯಲ್ಲಿ ಶಿಸ್ತು ಇರುವುದೆ? ಎಂದು ಅವರನ್ನು ಗಟ್ಟಿಸಿ ಕೇಳಿದೆ.
ನೀವು ಅವನನ್ನು ಸರಿಯಾಗಿ ನೋಡಿದಿರಾ? ಎಂದು ಕೇಳಿದರು.
ನೋಡಿಯೇ ಹಿಡಿದು ತಂದೆ, ಎಂದು ದೃಢವಾಗಿ ನುಡಿದೆ.
ಅದನ್ನಲ್ಲ ನಾನು ಹೇಳಿದ್ದು. ಅವನು ಚಡ್ಡಿ ಒದ್ದೆ ಮಾಡಿಕೊಂಡಿದ್ದಾನೆ. ಎಷ್ಟು ಹೆದರಿಸಿರುವಿರಿ ಎಂದರು.
ಆಗ ನನಗೆ ಗೊತ್ತಾಯಿತು ಅವರೆಲ್ಲರ ನಗುವಿನ ಕಾರಣ. ಪಾಪ. ಸಭ್ಯಸ್ಥನಾದ ಹುಡುಗ ಗಾಬರಿಯಾಗಿ ಹಿಡಿದ ತಕ್ಷಣ ಚೆಡ್ಡಿಯಲ್ಲೆ ಮೂತ್ರ ಮಾಡಿಕೊಂಡಿದ್ದ. ನಾನು ಏನೋ ಮಹಾ ಸಾಧಿಸಿದೆ ಎಂಬ ಭ್ರಮೆಯಲ್ಲಿ ಅದನ್ನು ಗಮನಿಸಿಯೇ ಇರಲಿಲ್ಲ,
ಅವನು ನಿಜವಾಗಿಯೂ ಜಾಣ. ಏನೋ ಅಕಸ್ಮಾತ್ತಾಗಿ ಚೀಟಿಯೊಂದು ಸಿಕ್ಕಿದೆ. ಅದನ್ನೆ ನಾನು ವಿಪರೀತ ಮಾಡಿದ್ದೆ. 
ಆ ಹುಡುಗ ಆ ವರ್ಷ ಎಸ್ಎಸ್‌ಎಲ್‌ಸಿಯಲ್ಲಿ ಶಾಲೆಗೆ ಪ್ರಥಮನಾಗಿ ಬಂದ. ನಂತರವೂ ಚೆನ್ನಾಗಿ ಕಲಿತ. ಈಗ ದೊಡ್ಡ ಕಾರ್ಖಾನೆಯೊಂದರ ಪ್ರಧಾನ ವ್ಯವಸ್ಥಾಪಕ. ಇದಕ್ಕೆ ಕಾರಣ ಅವನ ಸರಿ ತಪ್ಪು ಅರಿಯುವ ಪ್ರಜ್ಞೆ.
ಮಕ್ಕಳಲ್ಲಿ ಕಲಿಯುವ ಹಂಬಲ ಹುಟ್ಟಿಸುವದೆ ನಕಲುಮಾಡುವ ವ್ಯಾಧಿಗೆ ಮಹಾನ್ ಮದ್ದು . ಇದರ ಹೊಣೆಯನ್ನು ತಾಯ್ತಂದೆ, ಶಿಕ್ಷಕರು, ಸರಕಾರ ಮತ್ತು ಸಮಾಜ ಒಟ್ಟಾಗಿ ಹೊರಬೇಕಿದೆ.
(ಮುಂದುವರಿಯುವುದು

http://kendasampige.com/images/trans.gif


No comments:

Post a Comment