Monday, August 20, 2012

ಪುಸ್ತಕ ಮಿತ್ರ



ಶಿಕ್ಷಣ ಸೌಲಭ್ಯವು ನಗರ ಪ್ರದೇಶದ ಮತ್ತು ಮೇಲುವರ್ಗದ ಜನಾಂಗದವರಿಗೆ ಮಾತ್ರ ದೊರಕುತಿತ್ತು. ಇತರರಿಗೆ ಅದರ ಅಗತ್ಯದ ಅರಿವು ಇರಲಿಲ್ಲ. ವಿದ್ಯಾರ್ಥಿ ವೇತನ ವಿದ್ಯಾರ್ಥಿ ನಿಲಯ ಮೊದಲಾದ ಅನುಕೂಲಗಳು ಇರಲಿಲ್ಲ. ಹಾಗಾಗಿ   ಸಮಾಜದ ಸೀಮಿತ ವರ್ಗ ಮಾತ್ರ ಮಕ್ಕಳನ್ನು ಓದಿಸಲು ಬಯಸುತಿದ್ದರು. ಅಲ್ಲದೆ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೆ ಮೇಲು ಎಂಬ ಮಾತನ್ನು ಅಕ್ಷರಶಃ ನಂಬಿದ್ದರು. ಅಕಸ್ಮಾತ್‌ ಸೇರಿದರೂ ಬಹುತೇಕರದು ಪಾಸಾದರೆ ಕಾಲೇಜು ಫೇಲಾದರೆ ಮೆರೇಜು ಎನ್ನುವ ತತ್ವ.
ಹಳ್ಳಿಯಿಂದ ಬರುವ ನನಗೆ ಶಾಲಾನಂತರದ ಇನ್ನಿತರ ಚಟುವಟಿಕೆಯಲ್ಲಿ ಭಾಗವಹಿಸುವುದು ಆಗುತ್ತಿರಲಿಲ್ಲ. ಹಾಗಾಗಿ ಗೆಳೆಯರೂ ಇರಲಿಲ್ಲ. ಜತೆಗೆ ಬಡತನ. ಹೋಟೆಲು ಮಾತು ಇರಲಿ, ಶಾಲೆಯ ಮುಂದೆ ಮಾರುವ ಮೂರುಕಾಸಿನ ಬಠಾಣಿ ಕೊಳ್ಳುವದೂ ಆಗದ ಮಾತಾಗಿತ್ತು. ಅದರಿಂದ ಒಳ್ಳೆಯದೆ ಆಯಿತು. ಓದುವ ಹವ್ಯಾಸವಿದ್ದುದರಿಂದ ಪುಸ್ತಕವೆ ಸಂಗಾತಿಯಾಯಿತು. ನಮ್ಮ ಊರಿನಲ್ಲಿದ್ದ ಪಂಚಾಯತಿಯಲ್ಲಿ ವಯಸ್ಕರ ಶಿಕ್ಷಣ ಸಮಿತಿಯ ನೂರಾರು ಪುಸ್ತಕಗಳ ಗ್ರಂಥಾಲಯ ಇತ್ತು. ಅವುಗಳು ನನಗೆ ಒಳ್ಳೆಯ ಜತೆಯಾದವು. ಅವನ್ನು ಓದುವವನು ಊರಲ್ಲೆ ನಾನೊಬ್ಬನೆ. ಅದರಿಂದ ಸುಲಭವಾಗಿ ನನಗೆ ಬೇಕೆಂದಾಗ ಪುಸ್ತಕ ದೊರೆಯುತಿದ್ದವು. ಆಗಿನ ಪುಸ್ತಕ ಪ್ರಪಂಚ ಮತ್ತು ಬೆಳಕು ಪತ್ರಿಕೆಗಳಲ್ಲಿ ಬಹಳ ಉತ್ತಮವಾದ ಮಾಹಿತಿ ದೊರಕುತಿತ್ತು.
ನಂತರ ನನಗೆ ಅಭಿರುಚಿ ಬೆಳಸಿದ ಪುಸ್ತಗಳೆಂದರೆ ಗಳಗನಾಥರ ಕಾದಂಬರಿಗಳು. ರಾಣಿ ಮೃಣಾಳಿನಿ, ಕ್ಷಾತ್ರ ತೇಜ, ಇತ್ಯಾದಿ ಕಾದಂಬರಿಗಳು ಮೈ ನವಿರೇಳಿಸುತಿದ್ದವು. ವಿಜಯನಗರದ ಇತಿಹಾಸ ಚಿತ್ರಿಸಿರುವ ಮಾಧವಕರುಣ ವಿಲಾಸ ಮತ್ತು ಕನ್ನಡಿಗರ ಕರ್ಮಕಥೆ ಹಗಲು ರಾತ್ರಿಗಳನ್ನು ಮರೆತು ಓದುವಂತೆ ಮಾಡಿದವು. ಮೇಲಾಗಿ ಅದು ನಮ್ಮ ಊರಿನ ಕಥೆ. ನನಗೆ ಇನ್ನೊಂದು ಅನುಕೂಲವೆಂದರೆ ನಾನು ರಜೆಯಲ್ಲಿ ಹರಿಹರದ ನಮ್ಮ ತಾಯಿಯ ತವರುಮನೆಗೆ ಹೋಗುತಿದ್ದುದು. ಅಲ್ಲಿಗೆ ಗಳಗನಾಥರ ಕಾರ್ಯ ಕ್ಷೇತ್ರವಾದ ಅಗಡಿ ಇದ್ದುದು. ಹಾವೇರಿ ಸಮೀಪ. ಅದು ಗಳಗನಾಥರ ಕಾರ್ಯ ಕ್ಷೇತ್ರ. ಆಗೀಗ ಪುಸ್ತದ ಗಂಟು ಹೊತ್ತುಕೊಂಡು ಊರೂರಿಗೆ ತಿರುಗುತಿದ್ದ ಗಳಗನಾಥರು ನಮ್ಮ ಮಾವನವರಿಗೆ ಆಪ್ತರು. ಬಂದು ಊಟ ಮುಗಿಸಿ, ವಿಶ್ರಾಂತಿ ತೆಗದುಕೊಂಡು ಪುಸ್ತಕದ ಮಾರುತಿದ್ದರಂತೆ. ಅವರ ಸದ್ಭೋಧ ಚಂದ್ರಿಕೆ ಪತ್ರಿಕೆ ಅಲ್ಲಿಗೆ ಬರುತಿತ್ತು. ಹೆಸರಿಗೆ ತಕ್ಕಂತೆ ಓದುಗರ ಮನಸ್ಸಿಗೆ ಮುದ ನೀಡುತಿತ್ತು. ಈ ಎಲ್ಲ  ಪುಸ್ತಕಗಳ ಸಹವಾಸದಲ್ಲಿ ನನಗೆ ಒಂಟಿತನ ಕಾಡಲೆ ಇಲ್ಲ.
ಅದೆ ಸಮಯದಲ್ಲಿ ನಮ್ಮೂರಿಗೆ ಮೈಸೂರು ಕಡೆಯ ಕೃಷಿ ಸಹಾಯಕರು ವರ್ಗವಾಗಿ ಬಂದರು. ಅವರ ಹೆಂಡತಿಯು ವಿದ್ಯಾವಂತೆ. ಅವರಲ್ಲಿ ನರಸಿಂಹಯ್ಯನವರ ಕಾದಂಬರಿಗಳ ಸಂಗ್ರಹವಿತ್ತು. ಅದರ ಫಲ ನನಗೆ ಪುರುಷೋತ್ತಮ ಮತ್ತು ರಾಮನಾಥರೆಂಬ ಪತ್ತೆದಾರರ ಪಾತ್ರ ಪರಿಚಯವಾಯಿತು. ಪುರುಷೋತ್ತಮನ ಸಾಹಸದ ಸುಮಾರು ನೂರು ಕಾದಂಬರಿ ಓದಿದ ನೆನಪು. ಅವುಗಳಿಗೆ ಸಾಹಿತ್ಯ ಮೌಲ್ಯವಿಲ್ಲದೆ ಇದ್ದರೂ ಮೊದಲಲ್ಲಿ ಓದುವ ಚಟ ಬೆಳಸುವಲ್ಲಿ ಅವುಗಳ ಪಾತ್ರ ಬಹಳ ಹಿರಿದು. ಹೈಸ್ಕೂಲು ಮುಗಿದ ಮೇಲೆ ನಾನು ಅವನ್ನು ಓದಲೆ ಇಲ್ಲ ಎಂಬುದು ಬೇರೆ ಮಾತು.
ನನಗೆ ಈಗಲೂ ಕಾಲೇಜಿನಲ್ಲಿದ್ದಾಗ ಚಿಕ್ಕಪೇಟೆಯ ಸರ್ಕ್ಯಲೇಟಿಂಗ್‌ ಲೈಬ್ರರಿಯಲ್ಲಿನ ಘಟನೆಯೊಂದನ್ನು ನೆನಸಿಕೊಂಡರೆ ಈಗಲೂ ಮುಜುಗರವಾಗುತ್ತದೆ. ಕಾರಂತರ ಕಾಧಂಬರಿಗಳು ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಇತ್ತು ಅದಕ್ಕೆ ಸರ್ಕಲೇಟಿಂಗ್‌ ಲೈಬ್ರರಿಯ ಸದಸ್ಯನಾಗಿದ್ದೆ. ಒಂದು ಪುಸ್ತಕಕ್ಕೆ ಒಂದು ದಿನಕ್ಕೆ ಎರಡಾಣೆ. ಆಗ ಮಸಾಲೆ ದೋಸೆ ನಾಲಕ್ಕಾಣೆ. ಒಂದು ಸಲ ನಾನು ಪುಸ್ತಕ ಆರಿಸಲು ಅಲ್ಲಿನ ಕಪಾಟುಗಳನ್ನು ತಡಕಾಡುತ್ತಿದ್ದೆ. ಆಗ ಅಲ್ಲಿರುವವರು, ನರಸಿಂಹಯ್ಯನವರ ಹೊಸ ಪುಸ್ತ ಬಂದಿದ  ಕೊಡಲೆ? ಎಂದು ಕೇಳಿದರು.
ತಲೆ ಇದ್ದವರು ಯಾರಾದರೂ ಆ ಪುಸ್ತಕ ಓದುವುರೆ?ಎಂದು ಮರುನುಡಿದೆ. ಅವರು ಕಣ್ಣು ಬಾಯಿಬಿಡುತ್ತಾ ಅಲ್ಲೆ ಸ್ಟೂಲಿನ ಮೇಲೆ ಕುಳಿತಿದ್ದ ವ್ಯಕ್ತಿಯ ಕಡೆ ನೋಡಿದರು. ಅಲ್ಲಿ ಕಡು ಹಸಿರು ಬಣ್ಣದ ಅರ್ಧ ತೋಳಿನ ಅಂಗಿ ಮಾಸಿದ ಪಂಚೆ ಉಟ್ಟ ಅರೆನೆರೆತ ತಲೆಯ ಮಧ್ಯಮ ಆಕಾರದ ವ್ಯಕ್ತಿ ಕುಳಿತಿದ್ದರು. ಅವರು ನಸುನಗುತ್ತಾ ಎದ್ದು ಹೋದರು. ಲೈಬ್ರರಿಯವರು, “ಏನು ಸಾರ್‌ ನರಸಿಂಹಯ್ಯನವರೆ ಇಲ್ಲಿಯೆ ಕುಳಿತಿರುವರು, ಅವರ ಪುಸ್ತಕಗಳ ಬಗ್ಗೆ ಹಗುರವಾಗಿ ಮಾತನಾಡುವಿರಲ್ಲ’’ ಎಂದು ಆಕ್ಷೇಪಿಸಿದರು. ನಾನೂ ನಾಲಿಗೆ ಕಚ್ಚಿಕೊಂಡೆ. ಗುಣಮಟ್ಟ ಹೇಗೆ ಇರಲಿ ಆದರೆ ಸಂಖ್ಯಾದೃಷ್ಟಿಯಿಂದ ಅವರ ಸಾಧನೆ ಹಿರಿದು. ಅವರದೆ ಆದ ಓದುಗ ವರ್ಗ ಇತ್ತು. ನಾನು ಆ ರೀತಿ ಮಾತನಾಡಿದಕ್ಕೆ ಪರಿತಪಿಸಿದೆ. ಆದರೆ ಅಚಾತುರ್ಯ ಆಗಿ ಹೋಗಿತ್ತು. ಅಷ್ಟು ದೊಡ್ಡ ಸಂಖ್ಯೆಯಲ್ಲಿ ಪುಸ್ತಕ ಬರೆದವರಾದರೂ ಅವರ ಹಣಕಾಸಿನ ಸ್ಥಿತಿ ಹೆಚ್ಚು ಸುಧಾರಿಸಿರಲಿಲ್ಲ. ಸಾಹಿತ್ಯ ಲೋಕದಲ್ಲೂ ಗುರುತಿಸಿಕೊಂಡಿರಲಿಲ್ಲ. ಇತ್ತೀಚೆಗೆ ಅವರ ಕೊಡುಗೆಯನ್ನು ಗಮನಿಸಿ ಗೌರವ ಸಮರ್ಪಿಸಿರುವುದನ್ನು ಓದಿ ತುಸು ನೆಮ್ಮದಿಯಾಯಿತು.
ವಿಶ್ವದಲ್ಲಿ ಎಲ್ಲ ಬಗೆಯ ಸಾಹಿತ್ಯಕ್ಕೂ ಅದರದೆ ಆದ ಸ್ಥಾನವಿದೆ. ವಿಶೇಷವಾಗಿ ಇಂಗ್ಲಿಷ್‌ ಸಾಹಿತ್ಯದಲ್ಲಿ ಕಾನನ್ ಡೈಲ್‌, ಅಗಥಾ ಕ್ರಿಸ್ಟಿ, ಸ್ಟೇನ್ಲಿ ಗಾರ್ಡನರ್‌ ಮತ್ತು  ಹ್ಯಾಡ್ಲಿ ಚೇಜ್‌ ಮೊದಲಾದ ಪತ್ತೆದಾರಿ ಕಾದಂಬರಿಕಾರರು ಗಳಿಸಿರುವ ಹೆಸರು ಹಣ ನೋಡಿದರೆ ನಮ್ಮ ಎನ್‌ ನರಸಿಂಹಯ್ಯನವರಿಗೆ ನ್ಯಾಯ ದೊರೆತಿಲ್ಲ ಎನಿಸುವುದು ಸಹಜ. ನನಗೆ ರಜೆಯಲ್ಲಿ ಕಾಲಕಳೆಯುವ ಜಾಗ ಎಂದರೆ ಲೋಕಲ್‌ ಲೈಬ್ರರಿ. ಅದೂ ನಮ್ಮ ಊರಿಗೆ ಬರುವ ಹಂಪೆ ರಸ್ತೆಯಲ್ಲೆ ಇತ್ತು. ಊರಿಗೆ ಪ್ರವೇಶಿಸುವ ಮೊದಲೆ ಅದು ಬರುತಿತ್ತು. ಈಗ ಅಲ್ಲಿ ಕಾಲೇಜು ಆಗಿದೆ. ದಿನವೂ ಅಲ್ಲಿಗೆ ಹೋಗಿ ಓದುತಿದ್ದೆ. ಕಾಲೇಜು ಸೇರಿದ ಮೇಲಂತೂ ಅದು ನನ್ನ ಮೆಚ್ಚಿನ ತಾಣವಾಗಿತ್ತು. ಅದರಲ್ಲೂ ರಜೆಯಲ್ಲಿ ಬಂದಾಗ ದಿನಕ್ಕೆ ಎರಡು ಸಲ ಮೂರು ಮೂರು ಮೈಲಿ ನಡೆದುಬಂದು ಓದುತಿದ್ದೆ. ಅಲ್ಲಿ ಬಹುತೇಕ ಪುಸ್ತಕಗಳಿಗೆ ಅದರಲ್ಲೂ ಕವನ ಸಂಗ್ರಹಗಳಿಗೆ ನಾನೆ ಮೊದಲ ಓದುಗ. ಅವನ್ನು ಓದುವವರೆ ಇರಲಿಲ್ಲ. ಪದವಿಯಲ್ಲಿ ನನಗೆ ಷೇಕ್ಸ್ ಸ್ಪಿಯರ್‌ನ ಮೇಕಬೆತ್‌ ಪಠ್ಯವಾಗಿತ್ತು. ಆ ಇಂಗ್ಲಿಷ್‌ ಓದಿದ ಮೇಲೆ ರುಚಿ ಹತ್ತಿತು. ಬಹುತೇಕ ನಾಟಕಗಳನ್ನೂ ಓದಿದೆ. ನಂತರ ಬರ್ನಾಡ್‌ ಷಾ, ಇಬ್ಸನ್‌ ನಾಟಕಗಳಿಗೆ ಗಂಟುಬಿದ್ದೆ. ಲಾರೆನ್ಸ್, ಡಿಕನ್ಸ್, ಹಾರ್ಡಿ ಪರಿಚಯವಾದದ್ದು. ಇಂಗ್ಲಿಷ್‌ಸಾಹಿತ್ಯ ಆಪ್ತವಾಯಿತು.  ಭಾರತೀಯ ವಿದ್ಯಾಭವನದ ಪ್ರಕಟಣೆಗಳು ಮನಸೆಳದವು. ಕೆಎಂ ಮುನ್ಷಿಯವರ ಬಹುತೇಕ ಪುಸ್ತಕಗಳು ಓದಿಬಿಟ್ಟೆ. ಅನಕೃ, ತರಾಸು, ವೀರಕೇಸರಿ, ಕೃಷ್ಣ ಮೂರ್ತಿ ಪುರಾಣಿಕ ಹೀಗೆ ಒಂದುಕಡೆಯಿಂದ ಎಲ್ಲವನ್ನೂ ಮುಗಿಸಿದೆ. ಆಗ ಬೇಂದ್ರೆಯವರ ಕವನಗಳು ಅಚ್ಚು ಮೆಚ್ಚಾದವು. ಏಕೋ ಕುವೆಂಪು ಅವರ ಬರಹಗಳು ತುಸು ಕಷ್ಟ ಎನಿಸಿದವು. ಕನ್ನಡದ ನವೋದಯ ಕವಿಗಳ ಪರಿಚಯವಾಯಿತು. ಪತ್ರಿಕೆಗಳಲ್ಲಿ ಗೋಕುಲ, ಪಂಚಾಮೃತ, ಪ್ರಪಂಚ, ಜೀವನಜನಪ್ರಗತಿ ಮತ್ತು ಪ್ರಜಾಮತ ಓದಿನ ಹಂಬಲಕ್ಕೆ ಅನುವು ಕೊಟ್ಟವು. ಬ್ಲಿಟ್ಜ್, ರೀಡರ್ಸ್ ಡೈಜೆಸ್ಟ್ ಮತ್ತು ಮದರ್‌ ಇಂಡಿಯಾ ತಪ್ಪದೆ ಓದುತಿದ್ದೆ. ಹೀಗೆ ನನಗೆ ಪುಸ್ತಕ ಸಂಸ್ಕೃತಿಗೆ ಭದ್ರವಾದ ಬುನಾದಿ ಬಿದ್ದಿತು. ಅದರಿಂದ ಒಂದು ಅನುಕೂಲವೂ ಆಯಿತು. ನನಗೆ ಪದವಿ ಮುಗಿಯುವ ಮೊದಲೆ ಶಿಕ್ಷಕನ ಕೆಲಸ ದೊರೆಯಿತು. ಆಮೇಲೆ ಒಂದು ಬಾರಿ ಎಂಎ ಇಂಗ್ಲಿಷ್‌ ಗೆ ನಿಗದಿಪಡಿಸಿದ ಪುಸ್ತಗಳ ಪಟ್ಟಿ ನೋಡಿದೆ. ಬಹುತೇಕ ಎಲ್ಲ ನಾನು ಓದಿದ ಪುಸ್ತಕಗಳೆ ಇದ್ದವು.  ಧೈರ್ಯವಾಗಿ ಬಾಹ್ಯವಿದ್ಯಾರ್ಥಿಯಾಗಿ ಇಂಗ್ಲಿಷ್‌ ಎಂಎಗೆ ಕಟ್ಟಿದೆ. ಪಾಸೂ ಆಯಿತು. ತಕ್ಷಣ ಉಪನ್ಯಾಸಕನಾಗಿ ಬಡ್ತಿಯೂ ದೊರೆಯಿತು. ನನ್ನ ಓದುವ ಹವ್ಯಾಸವೆ ವೃತ್ತಿ ಜೀವನದಲ್ಲೂ ನನಗೆ ಉನ್ನತಿ ಪಡೆಯಲು ಸಹಾಯವಾಯಿತು. ಆ ಅಭ್ಯಾಸ ಮದುವೆಯಾಗುವವರೆಗೆ ಅತಿಯಾಗಿತ್ತು. ನಂತರವರ್ಷ ಕಡಿಮೆಯಾಯಿತು. ಆದರೂ ೧೯೭೦ ರೊಳಗೆ ಪ್ರಕಟಿತವಾದ ಎಲ್ಲ ಕನ್ನಡ ಪುಸ್ತಗಳನ್ನೂ ಓದಿ ಮುಗಿಸಿದೆ. ಒಬ್ಬ ಲೇಖಕರ ಒಂದು ಪುಸ್ತ ಓದಿದರೆ ಅವರ ಇನ್ನು ಎಲ್ಲ ಪುಸ್ತಕಗಳನೂ ಓದಿ ಮುಗಿಸುವ ತನಕ ಬಿಡುತ್ತಿರಲಿಲ್ಲ. ಬಹುತೇಕ ಎಲ್ಲವನ್ನೂ ಗ್ರಂಥಾಲಯದಲ್ಲೆ ಓದುತಿದ್ದೆ. ದೊರಕದವನ್ನು ಸರ್ಕುಲೇಟಿಂಗ್ ಲೈಬ್ರರಿಯಲ್ಲಿ ಪಡೆಯುತಿದ್ದೆ. ಕೊಂಡು ಓದಿದ್ದು ಕಡಿಮೆ.
ಹೈಸ್ಕೂಲು ಅವಧಿ ಮುಗಿಯಲು ಹತ್ತಿರ ಬಂದಿತು. ಶಾಲೆಯಲ್ಲಿ ಉತ್ತಮವಾಗಿ ಪಾಠ ಪ್ರವಚನಗಳು ಆಗುತ್ತಿದ್ದವು. ಹಾಗಾಗಿ ಮನೆಯಲ್ಲಿ ಹೆಚ್ಚು ಓದುವ ಅವಶ್ಯತತೆಯೆ ಇರಲಿಲ್ಲ. ಸ್ಥಳೀಯ ಮುನ್ಸಿಪಲ್‌ ಅಧ್ಯಕ್ಷರ ಮಗ ಹೆಸರಾಂತ, ವಕೀಲರೊಬ್ಬರ ಮಗ, ಬ್ಯಾಂಕ್‌ ಮೆನೇಜರರ ಮಗ ನನ್ನ ಸಹಪಾಠಿಗಳು. ಅವರು ಬಹು ಜಾಣರು. ಜತೆಗೆ ಮನೆಗೆ ಬಂದು ಪಾಠ ಹೇಳುತಿದ್ದರು, ಬೇರೆ ಹೋಗುತಿದ್ದರು. ಈಗಲೂ ನನಗೆ ಆಗಿನ ನೆನಪು ಬಂದಾಗ ಎದ್ದು ಕಾಣುವುದು ಬ್ಯಾಂಕ್ ಅಧಿಕಾರಿಯೊಬ್ಬರ ಮಗ ಶ್ರೀನಿವಾಸ. ಅವನು ಚೆನ್ನಿಗ. ಟಿಪ್‌ ಟಾಪ್ ಪ್ಯಾಂಟು ಹಾಕಿ ಇನಸರ್ಟ ಮಾಡಿ   ಕ್ಯಾನವಾಸ್‌ ಷೂ ಹಾಕಿಕೊಂಡು ನಿತ್ಯವೂ ಶಾಲೆಗೆ ಚಿಕ್ಕ ಸೈಕಲ್ ಸವಾರಿ ಮಾಡಿ ಬರುತಿದ್ದ. ಅವನು ಬರುವಾಗ  ಅಟದ ಮೈದಾನದಲ್ಲಿ ಎರಡೂ ಹ್ಯಂಡಲ್‌ ಬಿಟ್ಟು ಎರಡೂ ಕೈಯನ್ನು ಬಾಯಲ್ಲಿ ಇಟ್ಟುಕೊಂಡು ಸಿಳ್ಳು ಹಾಕುವುದು ನಮಗೆಲ್ಲ ಭಾರಿ ಆಶ್ಚರ್ಯವೆನಿಸುತಿತ್ತು. ನಾನೂ ಸೈಕಲ್ಲು ಓಡಿಸುವುದನ್ನು ಕಲಿತಿದ್ದೆ. ಆದರೆ ಇನ್ನೂ ಅಡ್ಡಗಾಲು ಹೊಡೆಯುತಿದ್ದೆ. ದೊಡ್ಡವರಂತೆ ಸೀಟಿನ ಮೇಲೆ ಕುಳಿತು ಕೈ ಬಿಟ್ಟು ಹೊಡೆಯುವುದು ಬಹಳ ಸಾಹಸಮಯ ಎನಿಸಿತು. ಅವನು ಸಹಾ ಖಾಸಗಿಪಾಠಕ್ಕೆ ಹೋಗುತಿದ್ದ. ಅವನು ಆಮೇಲೆ ಬ್ಯಾಂಕಿನಲ್ಲೆ ಕೆಲಸಕ್ಕೆ ಸೇರಿದ. ಆಗ ಬ್ಯಾಂಕುಗಳ ರಾಷ್ಟ್ರೀಕರಣವಾಗಿರಲಿಲ್ಲ. ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿದಾಗ ಗುಮಾಸ್ತನಾದರೂ ನಂತರ ಇಲಾಖಾ ಪರೀಕ್ಷೆಗಳನ್ನೂ ಮುಗಿಸಿದ. ಇತ್ತೀಚೆಗೆ ಉನ್ನತ ಹುದ್ದೆಯಲ್ಲಿ ನಿವೃತ್ತನಾದ. ಅಧ್ಯಾತ್ಮದಲ್ಲಿ ಒಲವು ಬೆಳೆಸಿಕೊಂಡಿರುವ.
ಪರೀಕ್ಷೆ ನಡೆಸಿ ನೇಮಕಾತಿಯಾಗುತ್ತಿರಲಿಲ್ಲ. ಸ್ಥಳೀಯ ಶಾಖೆಯ ವ್ಯವಸ್ಥಾಪಕರೆ ವಿವೇಚನೆಯ ಮೇರೆಗೆ ಜಾಣ ವಿದ್ಯಾರ್ಥಿಗಳನ್ನು ಇಲ್ಲವೆ ಅತಿ ಗಣ್ಯರ ಶಿಫಾರ್ಸು ಇರುವವರನ್ನು ಕೆಲಸಕ್ಕೆ ತೆಗೆದುಕೊಳ್ಳುತಿದ್ದರು. ಕರ್ನಾಟಕ ಬ್ಯಾಂಕು ಯಾರಾದರೂ ಒಂದು ಲಕ್ಷಕ್ಕಿಂತ ಹೆಚ್ಚು ಠೇವಣಿ ಇಟ್ಟರೆ ಅವರ ಶಿಫಾರ್ಸಿನ ಮೇಲೆ ನೌಕರಿ ಕೊಡುತಿದ್ದರು. ಲಕ್ಷ ಎಂದರೆ ಈಗಿನ ಕಾಲಕ್ಕೆ ಕೋಟಿ ರೂಪಾಯಿಗೂ ಮಿಗಿಲು. ಬ್ಯಾಂಕು ಆಗ ಕೇವಲ ಕೆಲವರಿಗೆ ಮಾತ್ರ ಪರಿಚಯವಾಗಿತ್ತು. ವ್ಯಾಪಾರಿಗಳು ಮತ್ತು ಉನ್ನತ ಅಧಿಕಾರಿಗಳು ಮಾತ್ರ  ಬ್ಯಾಂಕಿನ ವ್ಯವಹಾರ ಮಾಡುವರು. ಸಾಧಾರಣ ಜನರು ಬ್ಯಾಂಕಿನ ಕಟ್ಟೆ ಹತ್ತುತ್ತಿರಲಿಲ್ಲ. ಅವರಿವರೇಕೆ ಸರ್ಕಾರಿ ನೌಕರರೂ ಬ್ಯಾಂಕಿಗೆ ಹೋಗುತ್ತಿರಲಿಲ್ಲ. ಶಿಕ್ಷಕರಿಗೆ ಬ್ಯಾಂಕ್‌ ಖಾತೆಯ ಮೂಲಕ ಸಂಬಳ ಜಮಾ ಮಾಡುವ ನಿಯಮ ಬರುವವರೆಗೆ ಅದು ದೂರದ ಬೆಟ್ಟವಾಗಿತ್ತು.
ರಮೇಶಬಾಬು ಎಂಬ ಇನ್ನೊಬ್ಬ ಬಹುಮೃದು ಸ್ವಭಾವದವ. ಅವನು ಎಂ.ಡಿ ಮಾಡಿ ಪ್ರಾಧ್ಯಾಪಕನಾದ. ಉತ್ತಮ ವೈದ್ಯ ಎಂದು ಹೆಸರುಮಾಡಿದ. ಆಗೀಗ ಸರ್ಕಾರಿ ಆಸಪತ್ರೆಗೆ ಹೋದಾಗ ಕಾಣ ಸಿಗುತಿದ್ದ. ಸಾಹಿತ್ಯದಲ್ಲೂ ಆಸಕ್ತ. ಸುಧಾದಲ್ಲಿ ಲೇಖನಗಳನ್ನು ನೋಡಿದ ನೆನಪು.
ಆ ದಿನಗಳಲ್ಲಿ ನನಗೆ ತುಸು ಹತ್ತಿರವಾದವನು ಗುಂಡಾಚಾರ್‌ ಎಂಬ ಹುಡುಗ. ಅವನೂ ಹತ್ತಿರದ ಹಳ್ಳಿಯವನು. ವ್ಯಾಸನಕೇರಿಯ ಶ್ಯಾನುಬೋಗರ ಮಗ. ರಾಣಿಪೇಟೆಯಲ್ಲಿ ಮನೆ ಮಾಡಿಕೊಂಡು ಅವರ ಅಜ್ಜಿಯ ಜತೆ ಇರುತಿದ್ದ. ಅವರ ಮನೆ ನಮಗೆ ಶಾಲೆಗೆ ಹೋಗುವ ಹಾದಿಯಲ್ಲಿದ್ದುದರಿಂದ ಯಾವಾಗಲಾದರೂ ಅಲ್ಲಿಗೆ ಹೋಗಿ ನೀರು ಕುಡಿಯುತಿದ್ದೆ. ಅವನೂ ಬಹಳ ಜಾಣ. ನಮ್ಮ ಸಹಪಾಠಿಗಳಲ್ಲಿ ಅವನಿಗೆ ದಾವಣಗೆರಿಯಲ್ಲಿ ಇಂಜನಿಯರಿಂಗ್‌ ಸೀಟು ಸಿಕ್ಕಿತು. ಆದರೆ ಎರಡನೆ ವರ್ಷದಲ್ಲಿ ಅದನ್ನು ಬಿಟ್ಟು ಸಂಸ್ಕೃತ ತೆಗದುಕೊಂಡು ಬಿ.ಎ ಸೇರಿದ. ಆಗಿನ ಕಾಲದಲ್ಲಿ ಬಿ.ಇ ಎಂದರೆ ಬಹು ಬಹುಮಾನ್ಯತೆ ಇತ್ತು. ಆಗ ಇದ್ದದ್ದೆ ನಾಲಕ್ಕು ಕಾಲೇಜುಗಳು. ಎಲ್ಲರೂ ಎಂತಹ ಮೂರ್ಖ ಎಂದು ನಕ್ಕರು. ಆದರೆ ಅವನು ಸಂಸ್ಕೃತದಲ್ಲಿ ಎಂಎ ಮಾಡಿ ಉಪನ್ಯಾಸಕನಾದ. ಅದರಲ್ಲಿ ತುಂಬ ಕೃಷಿ ಮಾಡಿದ. ನಂತರ ದ್ವೈತ ಸಿದ್ಧಾಂತದಲ್ಲಿ ಅಪಾರ ಅಧ್ಯಯನ ಮಾಡಿ ಈಗ ಹೆಸರಾಂತ ವಿದ್ವಾಂಸನಾಗಿದ್ದಾನೆ. ಜತೆಯಲ್ಲಿ ಹೆಸರೂ ಬದಲಾಗಿದೆ. ಪ್ರಭಂಜನಾಚಾರ್‌ ಎಂದರೆ ವೈದಿಕ ಜಗತ್ತಿನಲ್ಲಿ ಬಹುದೊಡ್ಡ ಹೆಸರು. ದೈತ ಲೋಕದಲ್ಲಿ, ಆದ್ಯಾತ್ಮಿಕ ರಂಗದಲ್ಲಿ ಇದ ಮಿತ್ಥಂ ಎಂದು ಹೇಳುವ ಎತ್ತರಕ್ಕೆ ಬೆಳವಣಿಗೆಯಾಗಿದೆ. ಅವರ ಪ್ರವಚನ ಮತ್ತು ಗ್ರಂಥಗಳ  ರಚನೆಯಿಂದ ಅರಮನೆ ಮತ್ತು ಗುರುಮನೆಗಳ ಗೌರವಕ್ಕೆ ಭಾಜನರಾಗಿದ್ದಾರೆ. ನನಗೆ ಹೈಸ್ಕೂಲ ನಂತರ ಸಂಪರ್ಕ ತಪ್ಪಿತು. ಆಮೇಲೆ ಬೆಂಗಳೂರಿಗೆ ಬಂದರೂ ದೂರದಿಂದಲೆ ನೋಡಿ ಸಂತೋಷ ಪಡುವೆ.
ಇನ್ನೊಬ್ಬ ಒಡನಾಡಿ ಗಿರಿಯಪ್ಪ. ಅವನು ಬಹಳ ಅಚ್ಚುಕಟ್ಟು. ತಂದೆ ಕಾಲೇಜು ಓದುವಾಗಲೆ ತೀರಿಕೊಂಡರು. ಅವರು ತುಂಗಭದ್ರ ಅಣೆಕಟ್ಟು ನಿರ್ಮಾಣವಾದಾಗ ಮುಳುಗಡೆಯಾದ ಪ್ರದೇಶದವರು ಸಾಕಷ್ಟು ಪರಿಹಾರ ಬಂದಿತ್ತು. ಈಗ ನಮ್ಮ ಊರ ಪಕ್ಕದವರು. ತಂದೆ ಕಾಲೇಜಿನಲ್ಲೆ ಇರುವಾಗ ತೀರಿಹೋದರು. ಆದರೂ ಎಂಎ ಮಾಡಿ ಅರ್ಥಶಾಸ್ತ್ರದ ಪ್ರಾಧ್ಯಾಪಕನಾದ. ಅವನು ಅಂತರ್‌ ಜಾತಿ ವಿವಾಹ ಮಾಡಿಕೊಂಡಿದ್ದು ಅವರ ಕುಟುಂಬದಲ್ಲಿ ಸಣ್ಣ ಆಂದೋಳನವನ್ನೆ ಮಾಡಿತು. ಅವನು ಬಹಳ ನೇರ ನುಡಿಯವನು. ನಡುವಯಸ್ಸಿನಲ್ಲೆ ಕಾಲವಾದ. ಈಗ ಎಲ್ಲ ಮಕ್ಕಳೂ ವಿದೇಶದಲ್ಲಿ ಇರುವರು. ಅಲ್ಲಿ ಓದಿದ ಮುರಳಿ, ಪ್ರಭಾಕರ, ವಾದಿರಾಜ, ಗೌತಮ ಇನ್ನೂ ಅನೇಕರು ವೃತ್ತಿಯಲ್ಲಿ ಉನ್ನತ ಮಟ್ಟ ತಲುಪಿರುವರು. ಕೋಶ ಓದುವ ಹವ್ಯಾಸ ಮೊದಲೆ ಇತ್ತು ನೌಕರಿಯ ನೆಪದಲ್ಲಿ ದೇಶ ಸುತ್ತಿದೆ. ಮುವತ್ತಾರು ವರ್ಷದ ಸೇವೆಯಲ್ಲಿ ಕರ್ನಾಟಕದಾದ್ಯಂತ ಹತ್ತಾರು ಊರುಗಳಲ್ಲಿ ಕೆಲಸ ಮಾಡಿದ ನನಗೆ ಹೈಸ್ಕೂಲು ಸಹಪಾಠಿಗಳ  ಸಂಪರ್ಕವೆ ತಪ್ಪಿತು.


No comments:

Post a Comment