Monday, August 20, 2012

ಗುರುಬಸಯ್ಯನವರ ಒಬ್ಬನೇ ಮಗ!


ಗುರುಬಸಯ್ಯನವರು ನಮ್ಮ ಹೊಸ ಸಾಲಿಯಲ್ಲಿನ ಸಹಾಯಕ ಶಿಕ್ಷಕರು. ಅವರಿಗೆ ಆಗಲೆ ಐವತ್ತರ ಮೇಲೆ ವಯಸ್ಸಾಗಿತ್ತು. ಕೆಂಪು ಬಣ್ಣ, ಸಾಧಾರಣ ಮೈಕಟ್ಟು, ಬಿಳಿ ಮಲ್ಲಿನ ಅಂಗಿ ದೋತರ, ತಲೆಯಲ್ಲಿ ದಟ್ಟ ಬಿಳಿ ಕೂದಲು. ಹಣೆ ತುಂಬ ವಿಭೂತಿಪಟ್ಟಿ. ಅವರು ಕನ್ನಡ ಮತ್ತು ಕೆಳ ತರಗತಿಗಳಿಗೆ ಲೆಕ್ಕ ಹೇಳಿ ಕೊಡುತ್ತಿದ್ದರು. ಅವರು ಮೃದು ಸ್ವಭಾವದವರು. ಮಾತೆತ್ತಿದರೆ ಶಿವ ಶಿವಾ ಎನ್ನುವರು. ಸಾಲಿ ಗುಡಿಯಲ್ಲಿ ಕಲಿತವರಿಗೆ ಅಂತೂ ಅವರು ದೇವರ ಸಮಾನ. ಹೊಡೆತ ಬಡಿತ ಇಲ್ಲ, ಬೈಗುಳೂ ಇಲ್ಲ. ಅವರ ಬಾಯಲ್ಲಿ ಕೆಟ್ಟ ಮಾತೆ ಇಲ್ಲ. ಯಾವಾಗಲೂ ಅಪ್ಪಾ, ಅಣ್ಣಾ, ಮರಿ ಎಂದೆ ಸಂಬೋಧನೆ. ಅದರ ಲಾಭ ಪಡೆದ ಕೆಲವು ಮಕ್ಕಳು ಗಲಾಟೆ ಮಾಡುತ್ತಿದ್ದರು. ಅದು ಹೆಡ್‌ ಮಾಸ್ತರ್‌ ಗಮನಕ್ಕೆ ಬಂದಾಗ ಅವರಿಗೆ ಸರಿಯಾದ ಶಾಸ್ತಿಯಾಗುತ್ತಿತ್ತು. ಇಲ್ಲಿ ಮರಳ ಮೇಲೆ ಬೆರಳು ತೂತು ಬೀಳುವವರೆಗೆ ಬರೆವ ಪದ್ಧತಿ ಇರಲಿಲ್ಲ. ಆಗಲೆ ಸ್ಲೇಟು ಬಳಪ ಬಳಕೆಗೆ ಬಂದವು. ಅಕ್ಷರ ಕಲಿಕೆಯ ಆ ಕಠಿಣ ಪದ್ಧತಿ ಕೊನೆ ಕಂಡಿತು. ಇನ್ನು ಮಗ್ಗಿ ಕಂಠ ಪಾಠಕ್ಕೂ ಮೊದಲಿನ ತರಹದ ಅತಿ ಒತ್ತು ಇರಲಿಲ್ಲ. ಅದರ ಜತೆಗೆ ಶಿಕ್ಷೆಯ ಸ್ಥಾನಮಾನ ಬಹಳ ಬದಲಾದವು. ನಾವು ಹಿಂದೆ ಓದಿದ ಸಾಲಿ ಗುಡಿಯಲ್ಲಿ ಕ್ರಮೇಣ ಮಕ್ಕಳ ಸಂಖ್ಯೆ ಕಡಿಮೆಯಾಗಿ ಆ ಅಯ್ಯನವರು ಊರು ಬಿಟ್ಟರು. ಗುರು ಬಸಯ್ಯನವರು ಕಾಯಕ ಶಾಲೆಯ ಪ್ರಾರಂಭದ ಸಮಯದಿಂದಲೆ ಶುರುವಾಗುತಿತ್ತು. ಅದಕ್ಕೆ ಕಾರಣ ಅವರು ಶಾಲೆ ಇದ್ದ ಊರಲ್ಲೆ ಮನೆ ಮಾಡಿರುವುದು. ಅವರು ಮುಂಚೆಯೆ ಶಾಲೆಗೆ ಬಂದು ದೊಡ್ಡ ಹುಡುಗರನ್ನು ಹಿಡಿದು ಕಸ ಗುಡಿಸಿ ಶಾಲೆಯನ್ನು ನೀಟು ಮಾಡುತಿದ್ದರು. ನಂತರ ಗಂಟೆ ಹೊಡೆಸುವರು. ಪ್ರಾರ್ಥನೆಯಿಂದ ಕೆಲಸ ಮೊದಲಾಗುತಿತ್ತು. ಅದಕ್ಕೆ ಎಲ್ಲ ಮಕ್ಕಳು ಸಾಲೆಯ ಹೊರಗಿನ ಅಂಗಳದಲ್ಲಿ ಸಾಲಾಗಿ ನಿಲ್ಲಬೇಕು. ನಾವೆಲ್ಲ ಕೈಮುಗಿದು ನಿಲ್ಲುತಿದ್ದೆವು ಎಂದು ನೆನಪು. ಅವರು ರಾಗವಾಗಿ ಪ್ರಾರ್ಥನಾ ಪದ ಹೇಳುವರು, ನಾವೆಲ್ಲ ಅವರನ್ನು ಅನುಸರಿಸಿ ಹಾಡಬೇಕು.
ಸ್ವಾಮಿದೇವನೆ ಲೋಕ ಪಾಲನೆ ತೇ ನಮೋಸ್ತುತೆ ನಮೋಸ್ತುತೆ ಪ್ರೇಮದಿಂದಲಿ ಪಾಲಿಸೆಮ್ಮನು ತೇ ನಮೋಸ್ತುತೆ ನಮೋಸ್ತುತೆ ಹಸ್ತ ಪಾದಗಳಿಂದಲೂ ಮನದಿಂದಲೂ ನಾವು ಮಾಡುವ ಪಾಪವೆಲ್ಲವ ಹೋಗಲಾಡಿಸು ದೇವನೆ...  ಪದ ಇನ್ನೂ ದೊಡ್ಡದಿತ್ತು ಎಂದುಕೊಂಡಿರುವೆ. ಆದರೆ ಸದ್ಯಕ್ಕೆ ನನ್ನ ನೆನಪಲ್ಲಿರುವುದು ಇಷ್ಟು ಮಾತ್ರ. ಈ ಪದ್ಯ ಸ್ಕೂಲ್ ಮಾಸ್ಟರ್ ಚಲನಚಿತ್ರದ ಪ್ರಾರ್ಥನಾ ಗೀತೆಯೂ ಆಗಿತ್ತು. ಅದರ ಪುಟ್ಟ ವಿಡಿಯೋ ಇಲ್ಲಿದೆ. ಈ ಕ್ಲಿಪ್ಪಿಂಗಿನಲ್ಲಿ ಅದು 6.30 ನಿಮಿಷದಿಂದ ಆರಂಭವಾಗುತ್ತದೆ.


ಇದರ ಜತೆ ಜನಗಣ ಮನವನ್ನೂ ಹೇಳಬೇಕಿತ್ತು. ಸಿಂಗ್‌ ಮಾಷ್ಟ್ರು ಪ್ರಾರ್ಥನೆ ಸಮಯಕ್ಕೆ ಸರಿಯಾಗಿ ಟಕ್‌ ಅಂತ ಹಾಜರಾಗುವರು. ಅವರು ವಾರಕ್ಕೆಕೊಮ್ಮೆ ಸಂಜೆ ಎಲ್ಲರನ್ನೂ ಹೊರಗೆ ಬಯಲಿನಲ್ಲಿ ನಿಲ್ಲಿಸಿ ಕೈ ಕಾಲು ತಿರುಗಿಸುವುದನ್ನು ಹೇಳಿ ಕೊಡುವರು. ಗುರಬಸಯ್ಯನವರು ನಮಗೆಲ್ಲ ಹೆಚ್ಚು ಹತ್ತಿರವಾದ್ದು ಅವರು ಹೇಳಿಕೊಡುತಿದ್ದ ಪದ್ಯಗಳಿಂದ. ಅವರು ತಮ್ಮ ಸುಮಧುರ ಕಂಠದಲ್ಲಿ ಹಾಡುತಿದ್ದ ಶಿಶುಗೀತೆಗಳು ಇನ್ನೂ ಕಿವಿಯಲ್ಲಿ ಗಂಯ್ ಗುಡುತ್ತಲಿವೆ. ``ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ", "ನಾಗರ ಹಾವೆ ಹಾವೊಳು ಹೂವೆ'', ``ಅಜ್ಜನ ಕೋಲಿದು ನನ್ನಯ ಕುದುರೆ'' ಮೊದಲಾದುವನ್ನು ಅವರು ಅಭಿನಯಿಸಿ ಹೇಳುತಿದ್ದದು ಕಣ್ಣಿಗೆ ಕಟ್ಟಿದಂತೆ ಇದೆ. ಆಗ ಒಂದು ಅನುಕೂಲವಿತ್ತು, ಪ್ರತಿ ತರಗತಿಗೂ ಬೇರೆ ಬೇರೆ ಕೊಠಡಿ ಇರಲಿಲ್ಲ. ಇರುವುದು ಮೂರು ಕೋಣೆಗಳು. ಇಬ್ಬರು ಶಿಕ್ಷಕರು. ಹಾಗಾಗಿ ಯಾರಿಗೆ ಪಾಠ ಮಾಡಿದರೂ ಆಸಕ್ತಿ ಇದ್ದ ಎಲ್ಲರೂ ಕೇಳಬಹುದಿತ್ತು. ಆಗ ಕಿವಿಗೆ ಬಿದ್ದ ಎರಡು ಕಥನ ಕವನಗಳು ಇಂದಿಗೂ ನನಗೆ ನೆನಪಿವೆ..
ತುಂಗಾತೀರದ ಬಲಗಡೆಯಲ್ಲಿ ಹಿಂದಲ್ಲಿದ್ದಿತು ಬೊಮ್ಮನಹಳ್ಳಿ ಅಲ್ಲೇನಿಲಿಗಳ ಕಾಟವೆ ಕಾಟ ಅಲ್ಲಿಯ ಜನರಿಗೆ ಅತಿ ಗೋಳಾಟ ಎಂದು ಪ್ರಾರಂಭವಾಗುವ ಕವನ ಕೊನೆಯ ತನಕ ಗಮನ ಸೆಳೆಯುತಿತ್ತು. ಇದು ಕುವೆಂಪು ಅವರ ಕಿಂದರಿಜೋಗಿಯ ಪದ್ಯ ಎಂದು ಗೊತ್ತಿರಲಿಲ್ಲ. ಆದರೂ ಅದು ನಮ್ಮ ಮನ ಮುಟ್ಟಿತ್ತು. ಇನ್ನೊಂದು ನಮಗೆಲ್ಲರಿಗೂ ಹಿಡಿಸಿದ ಪದ್ಯವೆಂದರೆ: ಪುಣ್ಯ ಕೋಟಿಯ ಕಥೆ.
ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟ ದೇಶದೊಳು ಇರುವ ಕಾಳಿಂಗನೆಂಬ ಗೊಲ್ಲನ ಪರಿಯನಾನೆಂತು ಪೇಳ್ವೆನು ಎಂದು ಪ್ರಾರಂಭವಾಗುವ ಸರಿಸುಮಾರು ಉದ್ದವಿದ್ದ ಈ ಪದ್ಯದ ಕೆಲವು ಭಾಗವನ್ನು ಅವರು ಅಭಿನಯಿಸಿ ತಿಳಿಸುವಾಗ ಕಣ್ಣಲ್ಲಿ ನೀರು ಬರುವುದು.
ಅಮ್ಮ ನೀನು ಸಾಯಲೇಕೆ ನನ್ನ ತಬ್ಬಲಿ ಮಾಡಲೇಕೆ ಸುಮ್ಮನಿಲ್ಲಿಯೆ ನಿಲ್ಲು ಎಂದು ಅಮ್ಮನಿಗೆ ಕರು ಹೇಳಿತು ಎಂಬ ಕರುವಿನ ನುಡಿಯು ನಮ್ಮೆಲ್ಲರ ಭಾವನೆಯೆ ಆಗಿತ್ತು. ನಮಗಂತೂ ಹೇಗೋ ತಪ್ಪಿಸಿಕೊಂಡು ಬಂದ ಹಸು ಮತ್ತೆ ತಾನಾಗಿಯೆ ಹುಲಿಯ ಬಾಯಿಗೆ ಬೀಳಲು ಏಕೆ ಹೋಗುವುದು ಎಂದು ಅರ್ಥವೆ ಆಗಿರಲಿಲ್ಲ.
ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ ಕಂದ ನಿಮ್ಮವನೆಂದು ಕಾಣಿರಿ ತಬ್ಬಲಿಯನೀ ಕರುವನು ಎಂಬ ಹಸುವಿನ ಮನವಿಯನ್ನು ಕೇಳುವಾಗ ನಾವೆ ತಬ್ಬಲಿಗಲಾದಂತೆ ಅನಿಸುತಿತ್ತು. ಈ ಪದ್ಯವು ನಮಗೆ ಗೊತ್ತಿಲ್ಲದಂತೆ ಬಾಯಿ ಪಾಠವಾಗಿತ್ತು. ಇಂದಿಗೂ ಸುಮ್ಮನೆ ಕುಳಿತು ನೆನಸಿಕೊಂಡರೆ ತನ್ನಿಂದ ತಾನೆ ಬಾಯಿಗೆ ಬರುವುದು. ಈ ಹಾಡನ್ನು ನೆನಪಿಸಿಕೊಳ್ಳಲು ಈ ಮುಂದಿನ ವಿಡಿಯೋ ನೋಡಿ.
 

 ಮಕ್ಕಳಿಗೆ ಕಲಿಸಲು ಹಾಡು ಅಭಿನಯ ಬಹು ಉತ್ತಮ ಮಾಧ್ಯಮ ಎಂದು ಹೊಸ ಶೈಕ್ಷಣಿಕ ಸಂಶೋಧನೆಗಳು ಒತ್ತಿ ಹೇಳುತ್ತವೆ. ಆದರೆ ಏಳನೆ ತರಗತಿಯ ವರೆಗೆ ಮಾತ್ರ ಓದಿರಬಹುದಾದ ನಮ್ಮ ಗುರುಗಳು ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದರು. ಗುರು ಬಸಯ್ಯನವರು ಮಕ್ಕಳಂತೆಯೆ ಅವರ ಹೆತ್ತವರಿಗೂ ಬಹು ಪ್ರಿಯರಾಗಿದ್ದರು. ಅವರು ಸಣ್ಣ ಪುಟ್ಟ ಕಾಯಿಲೆಗೆ ನಾಟಿ ಔಷಧಿ ಕೊಡುತಿದ್ದರು. ಅದೂ ಅಲ್ಲದೆ ಹಟ ಮಾಡಿ ಅಳುವ ಮಕ್ಕಳಿಗೆ ಮಂತ್ರ ಹಾಕಿದರೆ ಅವು ಅಳು ನಿಲ್ಲಿಸುವವು ಎಂಬ ನಂಬಿಕೆ ಇತ್ತು. ಜಾನುವಾರಗಳು ಕಳೆದರೆ ಅವರು ಮಂತ್ರವನ್ನು ಒಂದು ಚೀಟಿಯನ್ನು ಬರೆದುಕೊಡುವರು. ಅದನ್ನು ಆ ರಾಸನ್ನು ಕಟ್ಟುವ ಗೂಟಕ್ಕೆ ಕಟ್ಟಿದರೆ ಜಾನುವಾರು ಎಲ್ಲಿದ್ದರೂ ಬರುವುದು ಎಂಬ ನಂಬಿಕೆ ವ್ಯಾಪಕವಾಗಿತ್ತು. ನಮ್ಮಮನೆಯಲ್ಲಿ ಕರುವೊಂದು ತಪ್ಪಿಸಿಕೊಂಡಿತ್ತು. ನಮ್ಮ ಅಜ್ಜಿ ಅವರಿಂದ ಚೀಟಿ ಬರೆಸಿಕೊಂಡು ಬಂದಳು. ಅದನ್ನು ಗೂಟಕ್ಕೆ ಕಟ್ಟು ಎಂದು ತಿಳಿಸಿದಳು. ನನಗೆ ಕುತೂಹಲ ನಾನು ಚೀಟಿಯನ್ನು ಬಿಚ್ಚಿ ನೋಡಿದೆ. ಅದರಲ್ಲಿ "ಶ್ರೀ ಕಾರ್ತವೀರ್ಯಾರ್ಜುನ ನಮಃ" ಎಂದು ಬರೆದಿದ್ದರು. ಜಮದಗ್ನಿ ಋಷಿಯ ಆಶ್ರಮದಲ್ಲಿದ್ದ ದೇವ ಧೇನುವನ್ನು ಕದ್ದು ನಂತರ ಪರಶುರಾಮನಿಂದ ಹತನಾದ ಆ ರಾಜನಿಗೂ ಕಳೆದುಹೋದ ದನಕ್ಕೂ ಏನು ಸಂಬಂಧ ಎಂದು ನನಗೆ ಗೊತ್ತಾಗಲೆ ಇಲ್ಲ. ಬಹುಶಃ ಅವನು ನಿನ್ನನ್ನೂ ಕದ್ದೊಯ್ಯುವನು ಎಂದು ದನಕ್ಕೆ ಹಾಕುವ ಬೆದರಿಕೆ ಇದಾಗಿರಬೇಕು. ಇದಲ್ಲದೆ ಅವರು ಮನೆಯ ಪಕ್ಕದಲ್ಲೆ ಒಂದು ಚಿಕ್ಕ ಕಿರಾಣಿ ಅಂಗಡಿ ಇಟ್ಟಿದ್ದರು. ಅವರ ಮಗನಿಗೆ ವಿದ್ಯೆ ಹತ್ತಿರಲಿಲ್ಲ. ಅವನನ್ನು ಹಾದಿ ಹತ್ತಿಸಲು ಮಾಡಿದ ಪ್ರಯತ್ನ ಅದಾಗಿತ್ತು. ಶಾಲೆಯ ನಂತರ ಅವರೆ ಕುಳಿತು ವ್ಯಾಪಾರ ಮಾಡುವರು. ಶಾಲೆಯ ಸಮಯದಲ್ಲಿ ಅವರ ಹೆಂಡತಿ ಗಲ್ಲೆಯ ಮೇಲೆ ಕೂಡುವರು. ಅಲ್ಲಿ ಸಿಗುವ ಕಮ್ಮಾರಗಟ್ಟಿ ಮಕ್ಕಳಿಗೆ ಅತಿ ಪ್ರಿಯ. ಅವರದು ಇನ್ನೊಂದು ಹೆಗ್ಗಳಿಕೆ ಎಂದರೆ ಶಾಲೆ ನಡೆಯುವ ಹೊತ್ತಿನಲ್ಲಿ ಯಾವ ಮಕ್ಕಳೂ ಅಂಗಡಿಗೆ ಬರುವಂತಿಲ್ಲ. ಹಾಗೇನಾದರೂ ಬಂದರೆ ತನಿಖೆ ಪ್ರಾರಂಭಿಸಿ ತಂದೆ ತಾಯಿಯರಿಗೆ ಸುದ್ದಿ ಮುಟ್ಟಿಸುತ್ತಿದ್ದರು. ಮಕ್ಕಳಿದ್ದ ತಾಯಿ ತಂದೆಯರಿಗೂ ಅಂಗಡಿಗೆ ಬಂದಾಗ ತಮ್ಮ ಮಕ್ಕಳನ್ನು ಸಾಲಿಗೆ ಹಚ್ಚಲು ತಿಳಿ ಹೇಳುವರು. ಆಗಲೆ ಅವರು ಸರ್ವ ಶಿಕ್ಷಣ ಅಭಿಯಾನದ ಕೆಲಸ ಮಾಡುತಿದ್ದರು. ಇದರಿಂದ ಶಾಲೆಯ ಹಾಜರಾತಿಯೂ ಹೆಚ್ಚಿತು. ಈ ಸರಕಾರಿ ಶಾಲೆ ಶುರುವಾದ ಒಂದೆರಡು ವರ್ಷದ ವರೆಗೆ ಸಾಲಿಗುಡಿ ಕುಟುಕು ಜೀವ ಹಿಡಿದಿತ್ತು. ಬರುಬರುತ್ತಾ ಹುಡುಗರ ಸಂಖ್ಯೆ ಕಡಿಮೆಯಾಗಿ ಒಂದು ದಿನ ಮುಚ್ಚಿಯೂ ಹೋಯಿತು. ಊರಿಗೆ ಹೋಗಿದ್ದ ಅಲ್ಲಿನ ಅಯ್ಯನವರು ಮತ್ತೆ ನಮ್ಮೂರಿಗೆ ಬರಲೇ ಇಲ್ಲ.
 

ಗುರುಬಸಯ್ಯನವರ ಒಬ್ಬನೇ ಮಗ!


ಗುರುಬಸಯ್ಯನವರ ಒಬ್ಬನೆ ಮಗ. ಶಿವಲಿಂಗ ಅವನ ಹೆಸರು. ಅವನನ್ನು ಮುದ್ದಿನಿಂದ ಶಿವಯ್ಯ ಎಂದು ಕರೆಯುತಿದ್ದರು. ಅವರು ಊರಿನ ಮಕ್ಕಳಿಗೆಲ್ಲ ಕಲಿಸುವ ಮೇಷ್ಟ್ರಾದರೂ ಅವನು ಮಾತ್ರ ಪಂಡಿತ ಪುತ್ರ. ಅವನಿಗೆ ಮಾತ್ರ ಓದು ಬರಹ ತಲೆಗೆ ಹತ್ತಲೇಇಲ್ಲ. ಅವನಿಗಾಗಿಯೇ ಅವರು ಅಂಗಡಿ ತೆರದದ್ದು. ದುಡ್ಡು ಬೇಕಾದಾಗ ಅಂಗಡಿಗೆ ಬರುತಿದ್ದ, ಎರಡೋ ಮೂರೊ ರೂಪಾಯಿ ವ್ಯಾಪಾರವಾದೊಡನೆ ಜಾಗ ಖಾಲಿ ಮಾಡುತಿದ್ದ. ಅವನೋ ಗುಂಡ್ರ ಗೂಳಿ. ಎಲ್ಲಿಯೂ ಕಾಲೂರಿ ಕುಳಿತವನಲ್ಲ. ಅವನು ಅಲ್ಲಿ ಇಲ್ಲಿ ಮೋಟಾರು ರಿಪೇರಿ ಕಲಿಯುವೆನೆಂದು ಓಡಾಡಿದ. ಹೊಸಪೇಟೆಯಲ್ಲಿ ವಾಹನ ದುರಸ್ತಿ ಕೆಲಸ ಮಾಡುತ್ತಿರುವೆ ಎಂದು ಹೇಳಿಕೊಳ್ಳುತ್ತಿದ್ದ. ಒಳ್ಳೆ ಕಟ್ಟುಮಸ್ತಾದ ಆಳು. ತಂದೆಯಂತೆಯೆ ಆಕರ್ಷಕ ಬಣ್ಣ. ಜತೆಗೆ ಬಹು ಜರ್ಬಾಗಿ ಉಡುಪು ಹಾಕುತಿದ್ದ. ಅವನೆಂದರೆ ಊರಿನ ಪಡ್ಡೆಗಳಿಗೆ ಅತೀವ ಆಕರ್ಷಣೆ. ಅವನು ಒಂದು ಸೈಕಲ್‌ ಇಟ್ಟಿದ್ದ. ಸೈಕಲ್‌ನ ಹ್ಯಾಂಡಲ್‌ ತೆಗೆದು ಅದಕ್ಕೆ ಮೋಟಾರಿನ ಸ್ಟೀರಿಂಗ್‌ ಜೋಡಿಸಿದ್ದ. ಅವನು ಸೈಕಲ್ಲು ಹತ್ತಿ ಬರುವ ಮೋಡಿಗೆ ಮರುಳಾಗದವರೆ ಇರಲಿಲ್ಲ. ಅದನ್ನು ನೋಡಿದವರೆಲ್ಲ ಕಣ್ಣರಳಿಸುತಿದ್ದರು. ಆದರೆ ಬಸಯ್ಯನವರು ಮಾತ್ರ ಸದಾ ಅವನನ್ನು ಯಾವುದೆ ಉಪಯೋಗಕ್ಕೆ ಬಾರದವನು, ಕೆಲಸಗೇಡಿ ಎಂದೆ ಬಯ್ಯುತಿದ್ದರು. ಅವನು ಅವರಿಗೆ ಒಬ್ಬನೆ ಮಗ. ತಾಯಿಯ ಪ್ರೀತಿಯ ಮಗ. ಹಾಗಾಗಿ ಮಾತು ನಡತೆ ಎಲ್ಲದರಲ್ಲೂ ಉಡಾಫೆ. ಮಜಾ ಉಡಾಯಿಸಿಕೊಂಡು ಓಡಾಡುತಿದ್ದ. ಎಲ್ಲಕ್ಕೂ ಕಳಶವಿಟ್ಟಂತೆ ಅವನು ಊರಲ್ಲಿ ಒಂದು ಘನಂದಾರಿ ಕೆಲಸ ಮಾಡಿದ. ಹೇಗೆ ಹಣ ಹೊಂಚಿದನೋ ತಿಳಿಯದು, ಆದರೆ ಗ್ರಾಮದ ದೇವದಾಸಿಯೊಬ್ಬಳ ಮಗಳನ್ನು ಹೆಣ್ಣು ಮಾಡಿದ. ಆಗ ಇನ್ನೂ ದೇವದಾಸಿ ಪದ್ಧತಿ ಪ್ರಚಲಿತವಿದ್ದಿತು. ಊರಿನ ಹಣವಂತರು, ಕುರುಬಗೌಡರು ಈ ಕೆಲಸದಲ್ಲಿ ನಾಮುಂದು ತಾಮುಂದು ಎಂದು ಬರುತ್ತಿದ್ದರು. ಅದು ಅವರ ಘನತೆಯ ಕುರುಹು. ಹೆಣ್ಣು ಮಾಡುವುದು ಅಂದರೆ ವಿಶೇಷ ಗೌರವ. ಹುಡುಗಿ ದೊಡ್ಡವಳಾದ ಮೇಲೆ ಯಾರು ಹೆಚ್ಚು ಹಣ ಕೊಡುವರೋ ಅವರ ಜತೆ ಅವಳಿಗೆ ಆ ಸಮಾರಂಭ. ಅದೂ ಒಂದು ಸಣ್ಣ ಮದುವೆಯಂತೆ. ಆದರೆ ಬೀಗರು ಬಿಜ್ಜರು ಮಾತ್ರ ಇಲ್ಲ. ಮೊದಲು ದೇವರ ಹೆಸರಲ್ಲಿ ತಾಳಿ ಕಟ್ಟಿಸುವರು. ನಂತರ ಆರತಿ, ಮೆರವಣಿಗೆ ಇತ್ಯಾದಿ ಸಂಭ್ರಮಗಳು. ಒಂದು ವರ್ಷ ಅವಳು ಅವನ ಜತೆ ಮಾಡಿಕೊಂಡ ಹೆಂಡತಿಯಂತೆ ನಿಯತ್ತಿನಿಂದ ಬಾಳಬೇಕು. ಮೊದಲೆ ನಿಗದಿಯಾದಂತೆ ಹಣ, ವಡವೆ, ವಸ್ತ್ರ ಕೊಟ್ಟು ಅವಳ ಎಲ್ಲ ಖರ್ಚನ್ನು ಒಂದು ವರ್ಷ ಅವನು ನಿಭಾಯಿಸಬೇಕು. ಶಿವಲಿಂಗಯ್ಯ ಅದೆಲ್ಲಿ ಹಣ ಹೊಂಚಿದನೋ ಯಾರಿಗೂ ತಿಳಿಯದು. ಪರ ಊರಿನಿಂದ ಬಂದವನಾದರೂ, ಸ್ಥಳೀಯರಾದ ಪ್ರಬಲರ ಮೀಸೆ ಮಣ್ಣಾಗುವಂತೆ ಮಾಡಿದ. ನಿವೃತ್ತಿಯ ಅಂಚಿನಲ್ಲಿದ್ದ ಬಸಯ್ಯನವರಿಗೆ ಇದನ್ನು ಸಹಿಸುವುದು ಆಗಲಿಲ್ಲ. ಸಮಾಜದಲ್ಲಿ ಶಿಕ್ಷಕರು ಆದರ್ಶವಾಗಿರಬೇಕು ಎಂಬುದು ಅಂದಿನ ನಂಬಿಕೆ. ಬೇರೆ ಯಾರು ಏನು ಮಾಡಿದರೂ ಪರವಾ ಇಲ್ಲ, ಅಕ್ಷರ ಕಲಿಸುವರು ಮಾದರಿಯಾಗಿರಬೇಕು. ಅದೆ ಅಳತೆಗೋಲು ಅವರ ಮನೆಯಲ್ಲಿನ ಜನರಿಗೂ ಇರುತಿತ್ತು.
ಶಿವಲಿಂಗುವಿನ ಧಾಡಸಿತನ ಅನೇಕರಿಗೆ ನುಂಗಲಾರದ ತುತ್ತಾಯಿತು. ಏನು ಅಯ್ಯನವರೆ ನಿಮ್ಮಮಗ ಹೀಗೆ ಮಾಡಿದ, ಎಂದು ಎಲ್ಲರೂ ಕೇಳುವವರೆ. ಅದರಲ್ಲಿ ಕಾಳಜಿಗಿಂತಲೂ ಕಟಕಿಯೇ ಜಾಸ್ತಿ. ಅವರ ಅನುಕಂಪಕ್ಕಿಂತಲೂ ತಮಗೆ ದಕ್ಕಬೇಕಿದ್ದ ಗೌರವ, ಸುಖ ಅವನಿಗೆ ಸಿಕ್ಕಿತಲ್ಲ ಎಂಬ ಅಸೂಯೆ ಹೆಚ್ಚಾಗಿರುತಿತ್ತು. ಅವನ ದುಂದುವೆಚ್ಚಕ್ಕೆ ಹಣ ಹೊಂದಿಸಲಾರದೆ ಅವರು ಅಂಗಡಿ ಮುಚ್ಚಿದರು. ಅವರಿಗೂ ಮಾತು ಕೇಳಿ ಕೇಳಿ ಸಾಕು ಬೇಕಾಗಿತ್ತು. ಊರೂ ಸಾಕಾಗಿತ್ತು, ಗೌಡನೂ ಬೇಡ ಎಂದ, ಎಂಬ ಮಾತಿನಂತೆ, ಅವರು ವರ್ಗ ಪಡೆದು ತಮ್ಮೂರಿನ ಕಡೆ ನಡೆದರು. ನಮಗೆ ಬಹು ಒಳ್ಳೆಯ ಮೇಷ್ಟ್ರನ್ನು ಕಳೆದುಕೊಂಡು ದುಃಖವಾಯಿತು. ಊರ ಜನರೂ ಅವರು ಅವರು ಹೋಗುವುದನ್ನು ತಡೆಯಲು ಬಹಳ ಹೇಳಿದರು. ಆದರೆ ಅವರು ಕೊನೆಗಾಲದಲ್ಲಿ ಊರ ಹತ್ತಿರ ಹೋಗಿ ಇದ್ದ ಸ್ವಲ್ಪ ಜಮೀನು ನೋಡಿಕೊಂಡು ಕಾಲ ಕಳೆಯುವ ನಿರ್ಧಾರಕ್ಕೆ ಅಂಟಿಕೊಂಡರು. ಆಗ ಊರ ಜನ ಮಾತ್ರ ಎಂತಹ ತಂದೆಗೆ ಎಂತಹ ಮಗ! ಎಂದು ಮಮ್ಮಲ ಮರುಗಿದರು. ಅವರು ಕೊಡುತಿದ್ದ ಔಷಧಿ, ಹಾಕುತಿದ್ದ ಮಂತ್ರ ಅನೇಕರನ್ನು ಮೋಡಿ ಮಾಡಿತ್ತು. ಅವರು ಹೋದ ಸರಿ ಸುಮಾರಿಗೆ ನಾನು ಹತ್ತಿರದ ಪಟ್ಟಣದ ಶಾಲೆಗೆ ದಾಖಲಾಗಿದ್ದೆ. ನನ್ನ ಹಳ್ಳಿ ಶಾಲೆಯ ಓದು ಅಲ್ಲಿಗೆ ಮುಗಿಯಿತು.  

No comments:

Post a Comment