Monday, August 20, 2012

ಪದವಿ ಶಿಕ್ಷಣದ ಕುರಿತು


ರಸಾಯನಶಾಸ್ತ್ರ ಮೇಜರ್‌ ವಿಷಯವಾಗಿ ಆರಿಸಿಕೊಂಡೆ. ಗಣಿತ ಮೈನರ್‌ ಆಗಿತ್ತು ಎರಡುವಾರ ತರಗತಿಗೆ ಹೋಗಿರಲಿಲ್ಲ, ನನಗೆ ಅದೇಕೋ ರಸಾಯನಶಾಸ್ತ್ರದ  ಪ್ರಯೋಗಾಲಯದಲ್ಲಿ ವಾರಕ್ಕೆ ಎರಡುದಿನ ಕೆಲಸ ಮಾಡುವುದು ಆಗದು ಎನ್ನಿಸಿತುಇಂಜನಿಯರಿಂಗ್‌ ಸೇರುವ ಕನಸು ಒಡೆದ ಮೇಲೆ ಬಿಎಸ್ಸಿ ಸೇರಲು ಸಿದ್ಧನಾದೆ. ನ್ಯಾಷನಲ್‌ ಕಾಲೇಜಿಗೆ ನಮಸ್ಕಾರ ಹೇಳಲೆ ಬೇಕಾಯಿತು. ಅಲ್ಲಿಗೆ ಅರ್ಜಿಯನ್ನು ಹಾಕಿರಲೆ ಇಲ್ಲ. ನ್ಯಾಷನಲ್‌ ಕಾಲೇಜಿನಲ್ಲಿ ಬಿ.ಇ ಸಂದರ್ಶನ ಮುಗಿಯುವ ಮೊದಲೆ ಪ್ರವೇಶ ಮುಗಿಸುವರು. ಅವರು ಆಗಲೆ ಪಾಠ ಪ್ರವಚನ ಪ್ರಾರಂಭಿಸಿದ್ದರು. ಕೆಲವರು ಅಲ್ಲಿಯೂ ಪ್ರವೇಶ ಪಡೆದು ನಂತರ ಬಿಇ ಸೀಟು ಸಿಕ್ಕಿದರೆ ಆ ಕಾಲೇಜಿಗೆ ಹೋಗುತಿದ್ದರು. ಕಟ್ಟಿದ ಶುಲ್ಕ ಹೋಗುತಿತ್ತು. ನಾನು ಯಥಾರೀತಿ ದುಡ್ಡು ದಂಡವಾಗುವುದೆಂದು ಅದರ ಯೋಚನೆ ಮಾಡಲೆ ಇಲ್ಲ. ಬೇರೆ ಕಡೆ ಸೇರಲೆ ಬೇಕಾಯಿತು. ಸೆಂಟ್ರಲ್‌ ಕಾಲೇಜಿನ ಭವ್ಯತೆ ಭಯ ಹುಟ್ಟಿಸಿತು. ಸಮೀಪ ಎಂದು ಆನಂದರಾವ್‌ ಸರ್ಕಲ್ಲಿನ ಹತ್ತಿರದ ರೇಣುಕಾಚಾರ್ಯ ಕಾಲೇಜು ಆರಿಸಿದೆ. ಅದು ಮೊದಲು ಬಸಪ್ಪ ಇಂಟರಮಿಡಿಯಟ್‌ ಕಾಲೇಜು ಎಂದು ಹೆಸರಾಗಿತ್ತು. ಆಗ ಪಿಯುಸಿ ಬದಲು ಎರಡು ವರ್ಷದ ಇಂಟರ್‌ಮಿಡಿಯಟ್‌ ಇದ್ದಿತು... ಅಲ್ಲಿಯೆ ಬಿಎಸ್‌ಸಿ ತರಗತಿಗೆ  ಪ್ರವೇಶ ಪಡೆದೆ. ಆಗ ಪದವಿಗೆ ಎರಡು ಮೇಜರ್‌ ಮತ್ತು ಒಂದು ಮೈನರ್‌ ಓದಬೇಕಿತ್ತು. ಭೌತಶಾಸ್ತ್ರ. ಅಲ್ಲಿನ ವಾಸನೆ ಹಿಡಿಸಲಿಲ್ಲ. ಜತೆಗೆ ಕಡ್ಡಾಯವಾಗಿ ಪ್ರತಿವಾರ ಎರಡು ಪ್ರಯೋಗಗಳ  ರೆಕಾರ್ಡ್ ಗಳನ್ನು ಬರೆಯಲೇಬೇಕಿತ್ತು. ಅದಕ್ಕೆ ಗಣಿತವನ್ನೆ ಮೇಜರ್‌ ವಿಷಯವಾಗಿ ಆಯ್ದುಕೊಂಡೆ.
ಪದವಿ ತರಗತಿಗೆ ಸೇರಿದ ಮೇಲೆ ಓದಿನ ವಿಷಯದಲ್ಲಿನ ಒತ್ತಡ ತುಸು ಕಡಿಮೆಯಾಯಿತು. ಮೊದಲ ವರ್ಷ ಪರೀಕ್ಷೆಯೆ ಇರಲಿಲ್ಲ. ಎರಡನೆಯ ವರ್ಷ  ವಿಷಯಗಳಾದ ಕನ್ನಡ ಇಂಗ್ಲಿಷ್ ಮತ್ತು ಸಾಮಾಜಿಕ ಅಭ್ಯಾಸ ಎನ್ನುವ ನಾಲ್ಕನೆ ವಿಭಾಗದ ಪರೀಕ್ಷೆ. ಅಂತಿಮವಾಗಿ ಪ್ರಧಾನವಾದ ಎರಡು ವಿಷಯಗಳ ಮತ್ತು ಅವುಗಳ ಜೊತೆ ಮೈನರ್‌ ಪರೀಕ್ಷೆ ಎದುರಿಸಬೇಕಿತ್ತು.
ಹಾಗಾಗಿ ಪದವಿ ತರಗತಿಗೆ ಸೇರಿದೊಡನೆ ಪೊರೆ ಬಿಚ್ಚಿದ ಹಾವಾದೆವು. ಸಾಹಿತ್ಯ, ಸಂಗೀತ, ನಾಟಕ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಿನೆಮಾಗಳ ಕಡೆ ಗಮನ ಹರಿಯಿತು. ಯಥಾರೀತಿ ಹಾಸ್ಟೆಲ್‌ನ ವಾಸ ಮುಂದುವರಿಯಿತು. ಆಗಲೆ ಬೆಂಗಳೂರಿಗೆ ಹಳಬನಾಗಿದ್ದೆ.
ಪದವಿ ಓದುವಾಗ ಚಳುವಳಿಗಳಲ್ಲಿ ಭಾಗವಹಿಸಿದೆ. ಮೊದಲನೆಯದು ವಿದ್ಯಾರ್ಥಿ ಚಳುವಳಿ. ಆಗ ಪದವಿ ಪಡೆಯುವವರು ತಾವು ಆಯ್ದ ಪ್ರಧಾನ ವಿಷಯ ಮತ್ತು ಮೈನರ್‌ಗಳ ಜೊತೆಗೆ, ಎರಡು ಭಾಷೆ ಇಂಗ್ಲಿಷ್‌ ಮತ್ತು ಕನ್ನಡ (ಸಂಸ್ಕೃತ), ವಿಷಯ ಮತ್ತು ಕಲಾವಿಭಾಗದವರು ಸಮಾನ್ಯವಿಜ್ಞಾನ ಮತ್ತು ವಿಜ್ಞಾನ ಶಿಸ್ತಿನವು ಕಲಾ ವಿಷಯಗಳನ್ನು ಒಂದು ನೂರು ಅಂಕಗಳಿಗೆ ಓದಲೇ ಬೇಕಿತ್ತು. ಅದನ್ನು IV ಪಾರ್ಟ್ ಎನ್ನುವರು, ಕಲಾ ವಿಭಾಗದವರಿಗಂತೂ ವಿಜ್ಞಾನ ವಿಷಯ ಓದುವುದು ಬಹು ಕಠಿಣವೆನಿಸುವುದು. ಎಲ್ಲ ಪಾಸಾದರೂ ಅದೆ ಬಾಕಿ ಉಳಿದು ಬಿಡುವುದು. ವಿಜ್ಞಾನ ಪದವಿಗೆ ಓದುವವರಿಗೆ ಇತಿಹಾಸ ಭೂಗೋಳ, ಇತ್ಯಾದಿಗಳ ಅಧ್ಯಯನ ತಲೆಗೆ ಹತ್ತುತ್ತಿರಲಿಲ್ಲ. ಅದಕ್ಕಾಗಿ ರಾಜ್ಯಾದ್ಯಂತ ದೊಡ್ಡ ಚಳುವಳಿಯೆ ನಡೆಯಿತು ಆಗ ಎಸ್‌ ಆರ್‌ ಕಂಠಿ ಶಿಕ್ಷಣ ಸಚಿವರಾಗಿದ್ದರು. ಅವರು ಮುಖ್ಯಮಂತ್ರಿ ನಿಜಲಿಂಗಪ್ಪನವರ ಆಪ್ತರು. ಅವರಲ್ಲಿ ಅಪಾರ ವಿಶ್ವಾಸ. ಅದಕ್ಕೆ ಮುಖ್ಯಮಂತ್ರಿಗಳು ಹೊಳಲ್ಕೆರೆಯಲ್ಲಿ ಯಾರೂ ಅರಿಯದ ಅಭ್ಯರ್ಥಿಯಿಂದ ಪರಾಜಿತರಾದರು. ಅನಿವಾರ್ಯವಾಗಿ ಮುಖ್ಯಮಂತ್ರಿ ಪಟ್ಟಕ್ಕೆ ಬೇರೆಯವರು ಬರಬೇಕಾಯಿತು. ಆದರೆ ಪಕ್ಷದಲ್ಲಿ ನಿಜಲಿಂಗಪ್ಪನವರಿಗೆ ಅಪಾರ ಬೆಂಬಲ. ಅದಕ್ಕೆ ತಮ್ಮ ಬದಲಾಗಿ ನಂಬುಗೆಗೆ ಅರ್ಹರಾದ ಎಸ್ ಆರ್ ಕಂಠಿಯವರನ್ನ ಮುಖ್ಯಮಂತ್ರಿ ಗಾದಿಯ ಮೇಲೆ ಕೂಡಿಸಿದರು. ಅಂದರೆ ಲಾಲು ಪ್ರಸಾದ ಯಾದವರ ಬದಲು ರಾಬ್ಡಿದೇವಿ, ಜಯಲಲಿತಾ ಬದಲು ಪನ್ನೀರ ಶೆಲ್ವಂ, ಈಗ ಯಡಿಯುರಪ್ಪನ ಬದಲು ಸದಾನಂದಗೌಡರು ಮುಖ್ಯಮಂತ್ರಿಯಾದಂತೆ. ಈ ಅಧಿಕಾರವನ್ನು ಹೇಗಾದರೂ ಉಳಿಸಿಕೊಳ್ಳುವ ಸಂಪ್ರದಾಯಕ್ಕೆ ನಾಲ್ಕು ದಶಕಗಳ ಇತಿಹಾಸವಿದೆ. ಆದರೆ ಒಂದೆ ವ್ಯತ್ಯಾಸ ನಿಜಲಿಂಗಪ್ಪನವರು ಭ್ರಷ್ಟಾಚಾರದ ಆಪಾದನೆಯಿಂದ ಕಳಂಕಿತರಾಗಿರಲಿಲ್ಲ. ಶ್ರೀ ಕಂಠಿ ಅವರನ್ನು ಭರತ ಎಂದೆ ಕರೆಯಲಾಗುತಿತ್ತು. ರಾಮನು ವನವಾಸ ಮುಗಿಸಿ ಬರುವವರೆಗ ಸಿಂಹಾಸನ ಕಾದುಕೊಂಡು ಬಂದ ತಕ್ಷಣ ಒಪ್ಪಿಸಿದಂತೆ ಕಂಠಿಯವರೂ ನಿಜಲಿಂಗಪ್ಪನವರು ಶಿಗ್ಗಾವಿಯ ಉಪಚುನಾವಣೆಯಲ್ಲಿ ಗೆದ್ದು ಬರುವವರೆಗೂ ಮುಖ್ಯಮಂತ್ರಿಯಾಗಿದ್ದು ನಂತರ ನಿಯತ್ತಿನಿಂದ ಪದವಿಯನ್ನು ಒಪ್ಪಿಸಿದರು. ನಂತರವೂ ಮಂತ್ರಿಯಾಗೆ ಮುಂದುವರೆದಂತೆ ನೆನಪು. ಅವರು ಶಿಕ್ಷಣ ಮಂತ್ರಿಯಾಗಿದ್ದಾಗಲೆ ವಿದ್ಯಾರ್ಥಿ ಚಳುವಳಿ ಶುರುವಾದದ್ದು. ಗೊಣಗಾಟದಿಂದ ಶುರುವಾದದ್ದು ತೀವ್ರ ಚಳುವಳಿಯ ರೂಪ ತಾಳಿತು abolish IV part  ಎಂಬ ಘೋಷಣೆ ರಾಜ್ಯಾದ್ಯಂತ ಮೊಳಗತೊಡಗಿತು. ನಾವೆಲ್ಲ ದಿನಗಟ್ಟಲೆ ಘೋಷಣೆ ಕೂಗುತ್ತಾ ಪ್ರದರ್ಶನ ಮಾಡಿದೆವು. ನಮ್ಮ ಕಾಲೇಜಿನ ಗುಂಪಿಗೆ ನನ್ನನ್ನೆ ಮುಂದೆ ಮಾಡಿದರು. ಎಲ್ಲ ಸೇರಿ ಸರ್ಕಾರಿ ಕಾನೂನು ಕಾಲೇಜಿಗೆ ಹೋದೆವು. ಆಗ ಅರಿವಾಯಿತು. ಚಳುವಳಿ ಒಂದು ರೀತಿಯಲ್ಲಿ ಸಮೂಹ ಸನ್ನಿ ಎಂದು. ಕೆಲವರು abolish IV parts ಎಂದು ಘೋಷಣೆ ಕೂಗಿದರೆ ಇತರರು abolish all parts ಎಂದು ಬೇಡಿಕೆ ಮಂಡಿಸಿದರು. ಯಾವುದೆ ಚಳುವಳಿ ಪ್ರಾರಂಭ ಸುಲಭ. ಆದರೆ ಅದರ ನಿಯಂತ್ರಣ ಸರಳವಲ್ಲ. ಚಳುವಳಿಯಲ್ಲಿ ಆರ್‌ಸಿ ಕಾಲೇಜು ಮತ್ತು ಗ್ಯಾಸ್ ಕಾಲೇಜು ಹಾಗೂ ಸೆಂಟ್ರಲ್ ಕಾಲಜಿನವರದೆ ಪ್ರಾಬಲ್ಯ. ಸಾವಿರಾರು ಯುವಜನರು ಮೆರವಣಿಗೆ ಹೊರಟೆವು. ಹಾದಿಯುದ್ದಕ್ಕೂ ಧಿಕ್ಕಾರ, ಎಲ್ಲಿಯವರೆಗೆ ಹೋರಾಟ ಗೆಲ್ಲುವವರೆಗೆ ಹೋರಾಟ ಮೊದಲಾದ ಸಿದ್ಧ ಘೋಷಣೆಗಳು ಜತೆಗೆ, ಎಲ್ಲಿಯವರೆಗೆ ಹೋರಾಟ ಎಂದರೆ ಗಲ್ಲಿಯವರೆಗೆ ಹೋರಾಟ ಎನ್ನುತ್ತಾ ಮಧ್ಯದಲ್ಲೆ ಕಳಚಿಕೊಳ್ಳುವವರೂ ಇದ್ದರು. ಶಿಕ್ಷಣ ಮಂತ್ರಿ ಮಹಾಕಂತ್ರಿ, ಶುದ್ಧ ಶುಂಠಿ, ಫೋರ್‌ಟ್ವೆಂಟಿ ಮೊದಲಾದ ಪ್ರಾಸಬದ್ದ ಅಪದ್ದಗಳು ಬೇರೆ. ನನಗೆ ತುಸು ಭ್ರಮನಿರಸನವಾಯಿತು. ಆದರೂ ಆ ಚಳುವಳಿ ಯಶಸ್ವಿಯಾಯಿತು. ನಾಲ್ಕನೆ ವಿಭಾಗ ರದ್ದಾಯಿತು. ಆ ಮಟ್ಟಿಗೆ ಪದವಿ ವಿದ್ಯಾರ್ಥಿಗಳಿಗೆ ಹೊರೆ ಕಡಿಮೆಯಾಯಿತು. ಅದರ ದೂರಗಾಮಿ ಪರಿಣಾವನ್ನು ಯಾರೂ ಗಮನಿಸಲಿಲ್ಲ. ಅದರಿಂದ ನಷ್ಟವಾದುದು ವಿದ್ಯಾರ್ಥಿಗಳಿಗೆ. ವಿಜ್ಞಾನದ ಪದವೀಧರರಿಗೆ ಮಾನವಿಕ ಶಾಸ್ತ್ರದ ಗಂಧಗಾಳಿಯು ಇಲ್ಲದೆ ಅವರು ಕಲಿಕೆ ಬರಿ ಶುಷ್ಕವಾಯಿತು. ಕಲಾ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ವಿಧಾನದ ಪರಿಚಯವಿಲ್ಲದೆ ಶಿಸ್ತುಬದ್ಧವಾಗಿ ಕೆಲಸ ಮಾಡುವ ಅವಕಾಶದಿಂದ ವಂಚಿತರಾದರು.
ಅದೆ ಹುರುಪಿನಲ್ಲಿ ಪದವಿಯ ಎರಡನೆ ವರ್ಷದ ಪ್ರಾರಂಭದಲ್ಲಿ ವಿದ್ಯಾರ್ಥಿ ಸಂಘದಲ್ಲಿ ಉಪಾಧ್ಯಕ್ಷನ ಹುದ್ದೆಗೆ ನಿಲ್ಲಲು ಒತ್ತಾಸೆ ಬಂದಿತು. ಸರಿ ಎಂದು ಚುನಾವಣೆಗೆ ನಿಂತೆ. ನನ್ನೆದುರು ನಿಂತವರು ಹಿಂದೂಪುರದ ವೆಂಕಟಸುಬ್ಬಾರೆಡ್ಡಿ. ಇಬ್ಬರಿಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಲು ಅವಕಾಶ ಕೊಟ್ಟರು, ನಾನು ಮಾತನಾಡಿದೆ. ಆದರೆ ವೇದಿಕೆಗೆ ರೆಡ್ಡಿ ಬರಲೆಇಲ್ಲ. ಆದರೆ ವಿದ್ಯಾರ್ಥಿಗಳನ್ನು ಗುಂಪುಗುಂಪಾಗಿ ಹೋಟೆಲಿಗೆ ಕರೆದುಕೊಂಡು ಹೋಗಿ ತಿಂಡಿಕಾಫಿ ಸಮಾರಾಧನೆ ಶುರುಮಾಡಿದ, ನಾನು ಬರಿಗೈ ಬಂಟ. ಬೇಕಾದರೆ ಮತ ಹಾಕಲಿ ಬೇಡವಾದರೆ ಬಿಡಲಿ ನನಗಂತೂ ಕಾಫಿ ಕುಡಿಸುವುದೂ ಆಗದ ಮಾತು ಎಂದು ಖಡಾಖಂಡಿತವಾಗಿ ಹೇಳಿದೆ. ಬೀರು ಬಾರು ಬೇಡ, ಕೊನೆಗೆ ಸಿಗರೇಟು ಕಾಫಿ ಇಲ್ಲದಿದ್ದರೆ ಹೇಗೆ? ಇವನು ಮರಿಗಾಂಧಿಯ ಹಾಗೆ ಆಡುತ್ತಾನೆ ಎಂದು ಆಕ್ಷೇಪಿಸಿದವರು ಹಲವರು. ಕೆಲವರಂತೂ ಇವನು ಆರ್ ಎಸ್‌ಎಸ್‌ ನವನು ಎಂದೂ ಹೀಯಾಳಿಸಿದರು. ಆದರೆ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಚುನಾವಣೆ ಮುಗಿಯಿತು. ನಾನು ಒಂದೆ ಮತದಿಂದ ಸೋತೆ. ನನಗೆ ಒಂದೆ ಸಮಾಧಾನ. ಅಷ್ಟೊಂದು ಜನ ನಾನು ಯಾವುದೆ ಆಮಿಷ ಒಡ್ಡದಿದ್ದರೂ ಮತಹಾಕಿದರಲ್ಲ ಎಂದು. ಇದೆ ಹುರುಪಿನಲ್ಲಿ ಹಾಸ್ಟೆಲ್‌ನಲ್ಲಿಯೂ ಚುನಾವಣೆ ಸ್ಪರ್ಧಿಸಿದೆ. ಆದರೆ ಅಲ್ಲಿ ಅವಿರೋಧವಾಗಿ ಆಯ್ಕೆಯಾದೆ.
ಅಂತರ್ ಕಾಲೇಜು ಮತ್ತು ಹಾಸ್ಟೆಲ್‌ ಚರ್ಚಾ ಸ್ಪರ್ಧೆಗಳು ಮಾತುಗಾರಿಕೆ ಬೆಳೆಯಲು ಉತ್ತೇಜನ ಕೊಡುತಿದ್ದವು. ಲಾ ಕಾಲೇಜಿನ ನರಸಿಂಹಸ್ವಾಮಿ ಮತ್ತು ಇಂಜನಿಯರ್‌ ವಿದ್ಯಾರ್ಥಿ ಜಯರಾಂ ಉತ್ತಮ ವಾಗ್ಮಿಗಳಾಗಿದ್ದರು. ಅವರಲ್ಲಿ ಒಬ್ಬರು ಮುಖ್ಯಮಂತ್ರಿಗಳ ಚುನಾವಣಾ ಪ್ರಚಾರಕ್ಕೂ ಹೋದರು. ನಂತರ ದೊಡ್ಡ ಅಧಿಕಾರಿಯಾದರು.ಇನ್ನೊಬ್ಬರು ಫುಲ್ ಬ್ರೈಟ್‌ ವಿದ್ಯಾರ್ಥಿ ವೇತನದ ಪಡೆದು ಅಮೇರಿಕಾಕ್ಕೂ ಹೋದರು. ನಾನು ತಕ್ಕಮಟ್ಟಿಗೆ ಭಾಗವಹಿಸಿದೆ.
ವಿದ್ಯಾರ್ಥಿಗಳಿಗೆ ಬರಿ ತರಗತಿಯ ಓದೆ ಮುಖ್ಯವಾಗಿರಲಿಲ್ಲ. ನಾಟಕದ ಪ್ರಭಾವವೂ ಬಲವಾಗಿತ್ತು ಕಾಲೇಜು ದಿನಾಚರಣೆಗೆ ನಾಟಕ ಇರಲೆಬೇಕು. ಪರ್ವತವಾಣಿ, ಗುಂಡಣ್ಣ, ಬೇಲೂರು, ರಾಮಮೂರ್ತಿ, ಕ್ಷೀರಸಾಗರ ಮತ್ತು ಎಎಸ್ ಮೂರ್ತಿ ಅವರ ನಾಟಕಗಳು ಕಾಲೇಜಿನವರಿಗೆ ಅಚ್ಚುಮೆಚ್ಚು. ಕೈಲಾಸಂ ಮತ್ತು ಶ್ರೀರಂಗರ ನಾಟಕ ಪ್ರದರ್ಶಿಸಲು ತುಸು ಹೆಚ್ಚಿನ ಅಭ್ಯಾಸ ಬೇಕಿತ್ತು. ಕಾಲೇಜು ವಿದ್ಯಾರ್ಥಿಗಳಲ್ಲಿ ಸುಪ್ತವಾದ ಕಲೆಯನ್ನು ಜಾಗೃತಿಗೊಳಿಸಲು ಅನೇಕ ಸ್ಪರ್ಧೆಗಳು ಇದ್ದವು. ಅದರಲ್ಲೂ ೧೯೬೩ ರಲ್ಲಿ ವಿಶ್ವ ಕವಿ ರವೀಂದ್ರನಾಥ ಠಾಕೂರರ ಶತಮಾನೋತ್ಸವದ ಸ್ಮರಣಾರ್ಥ ರವೀಂದ್ರ ಕಲಾಕ್ಷೇತ್ರ ನಿರ್ಮಾಣವಾಯಿತು. ಅದುವರೆಗೆ ಯಾವುದೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ಪುಟ್ಟಣ್ಣ ಚೆಟ್ಟಿ ಟೌನ್ ಹಾಲನ್ನೆ ಆಶ್ರಯಿಸಬೇಕಿತ್ತು. ಕಲಾಕ್ಷೇತ್ರವಾದ ಮೇಲೆ ಉಲ್ಲಾಳ ಷೀಲ್ಡ್ ಬಹು ಆದರಣಿಯ ರಾಜ್ಯಮಟ್ಟದ ಕಾಲೇಜು ವಿದ್ಯಾರ್ಥಿಗಳ ನಾಟಕ ಸ್ಪರ್ಧೆಯಾಗಿತ್ತು. ಸಾಮಾಜಿಕ ನಾಟಕಗಳ ಜೊತೆಗೆ ಅಂಗುಲಿಮಾಲ, ಕಿಸಾಗೌತಮಿ, ಸ್ಮಶಾನ ಕುರುಕ್ಷೇತ್ರ, ಬೆರಳ್ಗೆ ಕೊರಳ್‌ ನಂತಹ ಮೌಲ್ಯಯುತ ನಾಟಕಗಳೂ ಮನ ಸೆರೆ ಹಿಡಿಯುತ್ತಿದ್ದವು. ಈ ನಾಟಕಗಳನ್ನು ನೋಡಲು ವಿದ್ಯಾರ್ಥಿಗಳು ಮುಗಿ ಬೀಳುತಿದ್ದರು, ಅದಕ್ಕೆ ಪುಟ ಕೊಡಲು ಪ್ರಜಾವಾಣಿ ದಿನಪತ್ರಿಕೆಯು ನಾಟಕ ವಿಮರ್ಶೆ ಸ್ಪರ್ಧೆ ನಡೆಸಿ ದೊಡ್ಡ ಮೊತ್ತದ ಬಹುಮಾನ ನೀಡುತಿತ್ತು. ಒಂದು ವರ್ಷ ನಾನೂ ಭಾಗವಹಿಸಿದೆ. ಬಹುಮಾನ ಬರಲಿಲ್ಲ ಅದು ಬೇರೆ ಮಾತು ಆದರೆ ವಾರಗಟ್ಟಲೆ ವಿವಿಧ ತಂಡಗಳ ರಂಗ ಪ್ರಯೋಗ ನೋಡುವ ಭಾಗ್ಯ ನನ್ನದಾಯಿತು ಇದರಿಂದ ನಾಟಕ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಿತು.
ಸಾಹಿತ್ಯ ಸಮಾರಂಭಗಳಿಗೆ ಸಾಹಿತ್ಯ ಪರಿಷತ್ತು, ಮಲ್ಲೇಶ್ವರದಲ್ಲಿ ಗಾಂಧಿ ಭವನಸಂಗೀತ ಕಚೆರಿಗಳಿಗೆ ಗಾಯನ ಸಮಾಜ ರಾಮನವಮಿಯಲ್ಲಂತೂ ಅನೇಕ ಕಡೆ ಸಂಗಿತ ಸಮಾರಾಧನೆ ನಡೆದೆ ನಡೆಯುವುದು. ಆದರೆ ಹಾಸ್ಟೆಲಿನಲ್ಲಿದ್ದುದರಿಂದ ರಾತ್ರಿ ಊಟಕ್ಕೆ ಸಮಯ ಹೊಂದಿಸಿಕೊಳ್ಳಲಾರದೆ ಆ ಕಡೆ ಹೆಚ್ಚು ಹೋಗಲು ಆಗಲೆ ಇಲ್ಲ.
ಅದೆ ಅವಧಿಯಲ್ಲಿ ಸಾಹಿತ್ಯ ಲೋಕದಲ್ಲೂ ಹೊಸಗಾಳಿ ಬೀಸ ತೊಡಗಿತು. ನವೋದಯ ಕಾವ್ಯದ ಕಾಲ ಮುಗಿಯುತ್ತಾ ಬಂದು ನವ್ಯ ಕಾವ್ಯ ಜನಮನ ಸೆಳೆಯಿತು. ಗೊಪಾಲಕೃಷ್ಣ ಅಡಿಗರ ಚಂಡೆ ಮದ್ದಳೆಯ ದನಿ ಯುವಕರನ್ನು ಆಕರ್ಷಿಸಿತು. ಕೆಎಸ್‌ ನರಸಿಂಹಸ್ವಾಮಿಯವರು ಮೈಸೂರು ಮಲ್ಲಿಗೆಯ ಪ್ರಭಾವ ಬೀಳದ ಕಾಲೇಜು ವಿದ್ಯಾರ್ಥಿಯೆ ಇರಲಿಲ್ಲ. ಎಲ್ಲರ ಬಾಯಲ್ಲೂ ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು”  ಸಾಲು ಗುಣುಗುಣಿಸುವುದು... ಅದರಷ್ಟೆ ಜನಪ್ರಿಯವಾದವು ರಾಜರತ್ನಂ ಅವರ ರತ್ನನ ಪದಗಳು. ಯಾವುದೆ ಸುಗಮ ಸಂಗೀತ ಕಾರ್ಯಕ್ರಮದಲ್ಲೂ ಅನಿವಾರ್ಯವಾಗಿ ಅವನ್ನು ಹಾಡಲೇಬೇಕು. ಅದರಲ್ಲೂ ಪಿ. ಕಾಳಿಂಗರಾಯರು ಹಾಡುವರೆಂದರೆ ನಾವೆಲ್ಲ ಎಷ್ಟೆ ದೂರವಿರಲಿ ಅಲ್ಲಿಗೆ ಹೋಗಿ ಕೇಳುತಿದ್ದೆವು. ಅದರ ಪ್ರಭಾವಕ್ಕೆ ಒಳಗಾಗದ ಯುವಕರೆ ಇರಲಿಲ್ಲ. ಕಾಳಿಂಗರಾಯರು ಶಿಸ್ತಾಗಿ ಸೂಟು ಧರಿಸಿ ಅಕ್ಕಪಕ್ಕದಲ್ಲಿ ಮೋಹನ ಕುಮಾರಿ ಸೋಹನ್‌ ಕುಮಾರಿಯರು ಸಾತ್‌ ನೀಡುತ್ತಿರಲು ಇಳಿದು ಬಾ ತಾಯೆ ಇಳಿದು ಬಾ ಎಂದು ತಾರಕದಲ್ಲಿ ಹಾಡುವಾಗ ದೇವಗಂಗೆಯೆ ಧರೆಗೆ ಇಳಿದು ಬಂದಂತಾಗುವ ಅನುಭವ. ಅದೆ ಸುಮಾರಿಗೆ ಶ್ಯಾಮಲಾಭಾವೆಯವರ ಸಂಗೀತವೂ ಯುವ ಜನರ ಆಕರ್ಷಣೆಯಾಗಿತ್ತು.
ಅದೆ ಸಮಯದಲ್ಲಿ ಅನಕೃ ನೇತೃತ್ವದಲ್ಲಿ ಪ್ರಗತಿಶೀಲ ಚಳುವಳಿ ಹಿರಿಯರ ವಿರುದ್ಧ ಷೆಡ್ಡು ಹೊಡೆಯಿತು. ಅವರ ನಗ್ನ ಸತ್ಯ, ಶನಿಸಂತಾನ, ತರಾಸು ಅವರ ಮಸಣದ ಹೂವು ಸಂಪ್ರದಾಯಸ್ಥ ಓದುಗರ ಹುಬ್ಬು ಮೇಲೇರುವಂತೆ ಮಾಡಿದವು. ಉತ್ತರ ಕರ್ನಾಟಕ ಭಾಗದಲ್ಲಿ ಬಸವರಾಜ ಕಟ್ಟಿಮನಿಯವರ ಜರತಾರಿ ಜಗದ್ಗುರು, ಮೋಹದ ಬಲೆಯಲ್ಲಿ ಬಿರುಗಾಳಿಯನ್ನೆ ಎಬ್ಬಿಸಿದವು. 
ವಿದ್ಯಾರ್ಥಿಗಳಿಗೆ ಸೆಂಟ್ರಲ್‌ ಕಾಲೇಜಿನ ಕನ್ನಡ ತರಗತಿ ಎಂದರೆ ಆದಮ್ಯ ಆಕರ್ಷಣೆ.  ಅಲ್ಲಿ ಜಿ.ಪಿ. ರಾಜರತ್ನಂ ಅವರ ಕನ್ನಡ ಪಾಠ ಕೇಳಲು ಸದಾ ನೂಕು ನುಗ್ಗಲು. ಅವರ ವಿದ್ಯಾರ್ಥಿಗಳಲ್ಲದೆ ಬೇರೆ ತರಗತಿಯವರೂ ಅವರ ತರಗತಿಗೆ ಬಂದು ಕೂಡುತಿದ್ದರು. ಅವರದು ಕಂಚಿನ ಕಂಠ. ನೂರೈವತ್ತು ಇನ್ನೂರು ವಿದ್ಯಾರ್ಥಿಗಳಿದ್ದರೂ ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ದ. ಒಂದು ಗಂಟೆಯ ಹೊತ್ತು ಅವರ ಮಾತಿನ ಮೊರೆತ. ಬಿಳಿ ಅಡ್ಡ ಪಂಚೆ ಜುಬ್ಬ ಧರಿಸಿ ಸಾಧರಣ ಎತ್ತರದ ಕೆಂಪನೆ ಮುಖದಲ್ಲಿ ಎದ್ದು ಕಾಣುಹಾಗೆ ನಾಮ ಹಾಕಿ ಪುಟಪುಟನೆ ನಡೆದು ಬರುವ ಅವರನ್ನು ನೋಡಿದರೆ ತನ್ನಿಂದ ತಾನೆ ತಲೆ ಬಾಗುತಿತ್ತು. ಅವರ ಪುಸ್ತಕ ಪರಿಚಾರಿಕೆ ಅನನ್ಯ. ಅವರನ್ನು ಯಾವದೆ ಸಮಾರಂಭಕ್ಕೆ ಅತಿಥಿಯಾಗಿ ಆಹ್ವಾನಿಸಲು ಹೋದಾಗ ಅವರ ನೇರವಂತಿಕೆ ಪುಸ್ತಕ ಪ್ರೀತಿ, ಕಾರ್ಯಕ್ರಮದ ಸಂಘಟಕರನ್ನು ಬೆಚ್ಚಿ ಬೀಳಿಸುವಂತಿತ್ತು. ``ಏನ್ರಯ್ಯಾ ಶೇಷಾದ್ರಿಪುರದಲ್ಲಿ ಸಮಾರಂಭ ಎನ್ನುವಿರಿ, ಬಾಡಿಗೆ ಕಾರು ಜೀಪು ಮಾಡಿಕೊಂಡು ತರಬೇಡಿ. ನಾನು ನೆಡೆದೆ ಬರುವೆ. ಅಲ್ಲಿ ಹಾರ ತುರಾಯಿ ಬೇಡ. ಆದರೆ ನೀವು ನೂರು ರುಪಾಯಿ ಪುಸ್ತಕ ಕೊಂಡರೆ ಮಾತ್ರ ಬಂದು ಭಾಷಣ ಮಾಡುವೆ’’ ಎನ್ನುವರು.
ನೇರವಾಗಿ ಅವರು ಹೀಗೆ ಹೇಳಿದುದು ಅನೇಕರಿಗೆ ಜೀರ್ಣಿಸಿಕೊಳ್ಳಲಾಗಲಿಲ್ಲ. ಬೇರೆಯವರೆಲ್ಲ ಕಾರು ಕಳುಹಿಸಿ, ಎಂದರೆ ಇವರು ಪುಸ್ತಕ ಕೊಳ್ಳಿ ಎನ್ನುವರಲ್ಲ ಎಂದು ಅಚ್ಚರಿಯಾಯಿತು. ಅದರಲ್ಲೂ ಮೂರು ನಿಂಬೆಹಣ್ಣು ತರಲು ಕಾರು ಮಾಡಿಕೊಂಡು ಹೋಗುತಿದ್ದ ಕೆಲವು ವಿದ್ಯಾರ್ಥಿನಾಯಕರಿಗೆ ಮಾತ್ರ ಇದು ಹಿಡಿಸುತ್ತಿರಲಿಲ್ಲ. ಆದರೆ ಅವರ ಕನ್ನಡ ಪರಿಚಾರಿಕೆಯ ಪರಿ ಮೆಚ್ಚುವಂತಹದು.
ಆಗ ಸೆಂಟ್ರಲ್‌ ಕಾಲೇಜು ಹಾಸ್ಟೆಲ್‌ ಮಹಾರಾಣಿ ಕಾಲೇಜಿಗೆ ಹೋಗುವ ರಸ್ತೆಯ ಆ ಬದಿ ಬಹುಶಃ ಈಗಿನ ಜನರಲ್‌ ಹಾಸ್ಟೆಲ್‌ ಇದೆ ಎಂದು ಕಾಣುವುದು. ನೇರವಾಗಿ ಕಾಲೇಜಿನ ಕಾಂಪೌಂಡಿನ ಎದುರುಗಡೆ. ಅದರಲ್ಲಿ ಪದವಿ ಕಾಲೇಜು ವಿದ್ಯಾರ್ಥಿಗಳ ವಸತಿ. ಸಾಧಾರಣವಾಗಿ ಅವರಿಗೆ ಗೇಟಿನಲ್ಲಿ ನಿಂತು ಕಾಲೇಜಿಗೆ ಹೋಗಿ ಬರುವ ಹುಡುಗಿಯರನ್ನು ಚುಡಾಯಿಸುವ ಹವ್ಯಾಸ. ಒಂದು ಸಲ ನಾಲ್ಕಾರು ಹುಡುಗರು ತಮ್ಮ ನಿತ್ಯಕಾಯಕದಲ್ಲಿ ನಿರತರಾಗಿದ್ದಾಗ ರಾಜರತ್ನಂ ಅದೆ ಮಾರ್ಗದಲ್ಲಿ ಬಂದಿದ್ದಾರೆ. ಇವರ ಮಂಗಚೇಷ್ಟೆ ನೋಡಿದವರೆ ಕೋಪ ಗೊಂಡು, `ಏನು ನೀವೆಲ್ಲಾ ಮಹಾ ಗಂಡಸರೋ!   ಬನ್ನಿ ಒಂದು ಕೈ ನೋಡಿಯೆ ಬಿಡುವೆಎಂದು ತೋಳೇರಿಸಿದಾಗ ರೋಡ್‌ ರೋಮಿಯೋಗಳು ಅಲ್ಲಿದ್ದರೆ ಅವರಪ್ಪನಾಣೆ, ಸತ್ತೆವೋ ಕೆಟ್ಟೆವೋ ಎಂದು ಓಡಿದ್ದಾರೆ. ಅಂದಿನಿಂದ ಒಬ್ಬರಾದರೂ ಹುಡುಗರು ಹೊರಗೆ ಬಂದರೆ ಕೇಳಿ. ಅ ಹಾದಿಯಲ್ಲಿ ಕಾಲೇಜು ಹುಡುಗಿಯರು ಎಗ್ಗಿಲ್ಲದೆ ಓಡಾಡುವಂತಾಯಿತು.
ಆಗ ಸೆಂಟ್ರಲ್‌ ಕಾಲೇಜಿನಲ್ಲಿ ಎದ್ದು ಕಾಣುವವರೆಂದರೆ ಲಂಕೇಶ್‌. ಅವರದು ಇಂಗ್ಲಿಷ್‌ ವಿಭಾಗ. ಉಪನ್ಯಾಸಕರಾಗಿದ್ದಾಗಿನ ಅವರ ಹೆಸರು ಲಂಕೇಶಪ್ಪ. ಅವರು ಪಾಠಗಳಿಂದಾಗಿ ಅಷ್ಟೇನೂ ಜನಪ್ರಿಯರಾಗದಿದ್ದರೂ ಸಾಹಿತಿಯಾಗಿ, ಸಂಘಟಕರಾಗಿ ಮತ್ತು ತಮ್ಮ ವಿಚಾರಧಾರೆಯಿಂದ ಯುವಜನರ ಆಕರ್ಷಣೆಯ ಕೇಂದ್ರವಾಗಿದ್ದರು. ಅದೆ ಸಮಯದಲ್ಲೆ ಬೆಂಗಳೂರು ವಿಶ್ವವಿದ್ಯಾನಿಲಯದ ಅಂಕುರಾರ್ಪಣವೂ ಆಯಿತು.

No comments:

Post a Comment