Tuesday, August 21, 2012

ಬಿರು ಬಿಸಿಲಿನಿಂದ ಕೊರೆವ ಚಳಿ ನಾಡಿಗೆ ಮುಂಬಡ್ತಿ


http://kendasampige.com/images/trans.gif
http://kendasampige.com/images/trans.gif
ಧಾರವಾಡದಿಂದ ಎಂಎ ಪರೀಕ್ಷೆ ಮುಗಿಸಿ ಬಂದು ಒಂದು ತಿಂಗಳೂ ಆಗಿರಲಿಲ್ಲ. ಜೂನ್‌ ಮೊದಲ ವಾರದಲ್ಲೆ ಫಲಿತಾಂಶ ಪತ್ರಿಕೆಯಲ್ಲಿ ಬಂದಿತು. ಆತುರದಿಂದ ನನ್ನ ನಂಬರು ಹುಡಕಿದೆ. ಪಾಸಾದವರ ಪಟ್ಟಿಯಲ್ಲಿ ಇಲ್ಲವೆ ಇಲ್ಲ. ಆಘಾತವಾದಂತಾಯಿತು. ಕಷ್ಟಪಟ್ಟು ಓದಿದ್ದು ನೀರಿನಲ್ಲಿ ಹೋಮ ಮಾಡಿದಂತಾಯಿತು. ಇಂಗ್ಲಿಷ್‌ನಲ್ಲೆ ಕನಸು ಬೀಳುವಷ್ಟರಮಟ್ಟಿಗೆ ಮನಸ್ಸಿಗೆ ಹಚ್ಚಿಕೊಂಡಿದ್ದೆ. ಎಲ್ಲ ವ್ಯರ್ಥವಾಯಿತು. ಅರ್ಧ ದಿನ ರಜೆ ಹಾಕಿ ಮನೆಗ ಹೋದೆ. ಹೆಂಡತಿಗೆ ಅಚ್ಚರಿ ಎಂದೂ ಬಾರದವರು ಬಂದರಲ್ಲ ಎಂದು. ಕೋಣೆಗೆ ಹೋಗಿ ಮುಸುಗಿಟ್ಟು ಮಲಗಿದೆ. ಏನಾಯಿತು ಎಂದು ಗಾಬರಿಯಿಂದ ಕೇಳಿದಳು, ವಿಷಯ ತಿಳಿಸಿದೆ. ಅವಳೂ ಮೊದಲು ನಂಬಲಿಲ್ಲ. ಕೊನೆಗೆ ಹೋದರೆ ಹೋಗಲಿ ಬಿಡಿ, ಹೇಗಿದ್ದರೂ ನೀವು ಕನ್ನಡ ಚೆನ್ನಾಗಿ ಓದಿಕೊಂಡಿರುವಿರಿ ಕನ್ನಡ ಎಂಎ ಮಾಡಿ ಎಂದು ಪರಿಪರಿಯಿಂದ ಸಂತೈಸಿದಳು. ಮಾರನೆ ದಿನ ಕನ್ನಡ ಎಂಎ ಕಟ್ಟಬೇಕೆಂದು ನಿರ್ಧರಿಸಿ ಶಾಲೆಗೆ ಹೋದೆ. ಆ ದಿನದ ಪೇಪರ್‌ ನೋಡಿದರೆ ಇಂಗ್ಲಿಷ್‌ ಎಂಎ ಫಲಿತಾಂಶ ಎಂದು ಚಿಕ್ಕ ಕಾಲಂ ಇತ್ತು. ನೋಡಿದರೆ ನನ್ನದೊಂದೆ ರಿಜಿಸ್ಟರ್‌ಬನಂಬರ್‌ ಇದೆ. ನಾನು ಮೂರು ಇಂಗ್ಲಿಷ್‌ ಮತ್ತು ಒಂದು ಕನ್ನಡ ಪೇಪರ್‌ ತೆಗೆದುಕೊಂಡಿದ್ದರಿಂದ ಪ್ರತ್ಯೇಕವಾಗಿ ಈ ದಿನ ಫಲಿತಾಂಶ ಬಂದಿತ್ತು. ನನಗೆ ಸಂತೋಷ ತಡೆಯಲಾಗಲಿಲ್ಲ. ಮತ್ತೆ ಅರ್ಧದಿನ ರಜೆ ಹಾಕಿ ಮನೆಗೆ ದೌಡಾಯಿಸಿದೆ. ಇದೇನು ಮತ್ತೆ ಬಂದಿರಿ ಎಂದಳು.
ನಿನ್ನೆ ಬೇಸರವನ್ನು ಬೀರಿದ್ದೆ. ಇಂದು ಸಂತಸವನ್ನು ಹಂಚುವೆ ಎಂದು ವಿಷಯ ತಿಳಿಸಿದೆ. ಅವಳಿಗೂ ಸ್ವರ್ಗ ಮೂರೆ ಗೇಣು. ನನಗೆ ಗೊತ್ತಿತ್ತು ನೀವು ಫೇಲಾಗುವುದು ಸಾಧ್ಯವಿಲ್ಲ, ಎಂದು ಮೊಗ ಅರಳಿಸಿದಳು. ಮತ್ತೆ ಸಂಭ್ರಮಾಚರಣೆಯಲ್ಲೆ ಸಂಜೆಯಾದುದು ಗೊತ್ತಾಗಲೆ ಇಲ್ಲ.
ನನ್ನ ಅದೃಷ್ಟಕ್ಕೆ ಅದೇ ವರ್ಷ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರೌಢಶಾಲೆಗಳನ್ನು ಸರ್ಕಾರ ತೆಗೆದುಕೊಂಡಿತ್ತು. ನಮ್ಮ ಜಿಲ್ಲೆಯವರೆ ಆದ ಎನ್‌.ಎಮ್.ಕೆ. ಸೋಗಿ ಶಿಕ್ಷಣಮಂತ್ರಿ. ಅವರು ಶಿಕ್ಷಕರನ್ನು ಸ್ಥಳೀಯ ನಾಯಕರ ಹಿಡಿತದಿಂದ ಬಿಡುಗಡೆ ಮಾಡಲು ದಿಟ್ಟ ನಿರ್ಧಾರ ತೆಗೆದುಕೊಂಡು ಎಲ್ಲ ಮುನ್ಸಿಪಲ್‌ ಮತ್ತು ತಾಲೂಕ್ ಬೋರ್ಡು ಶಾಲೆಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಂಡಿದ್ದರು. ಆದರೂ ನಮ್ಮ ತಾಲೂಕು ಬೋರ್ಡಿನವರು ಇದ್ದ ಒಂದೆ ಪದವಿಪೂರ್ವ ಕಾಲೇಜನ್ನು ಸರಕಾರಕ್ಕೆ ವಹಿಸಿದ್ದರೂ, ಸೇವೆಯಲ್ಲಿ ಇದ್ದ ನನ್ನ ಅರ್ಹತೆಯನ್ನು ಕಡೆಗಣಿಸಿ ಹೊರಗಿನವರೊಬ್ಬರನ್ನು ಇಂಗ್ಲಿಷ್‌ ಉಪನ್ಯಾಕರನ್ನಾಗಿ ನೇಮಿಸಿದ್ದರು. ವಿಧಿ ಇಲ್ಲದೆ ನಾನು ಇಲಾಖೆಯ ನಿದೇರ್ಶಕರಿಗೆ ನನಗಾದ ಅನ್ಯಾಯ ಸರಿಪಡಿಸದಿದ್ದರೆ ನ್ಯಾಯಾಲಯಕ್ಕೆ ಹೋಗುವುದಾಗಿ ನಿವೇದನೆ ಸಲ್ಲಿಸಿದೆ. ಒಂದೆ ವಾರದಲ್ಲಿ ನನಗೆ ಚಿಕ್ಕಮಗಳೂರು ಜಿಲ್ಲೆಯ ಕಾಲೇಜೊಂದಕ್ಕೆ ಉಪನ್ಯಾಸಕನಾಗಿ ಬಡ್ತಿ ನೀಡಿ ವರ್ಗಾವಣೆಯಾಗಿತ್ತು. ಆದರೆ ಹುದ್ದೆ ಮಾತ್ರ ಉಪನ್ಯಾಸಕ ಎಂದು ವೇತನ ಮತ್ತು ಶ್ರೇಣಿ ಈಗ ಇರುವುದೆ.
ಆಗಿನ ಕಾಲದಲ್ಲಿ ತಪ್ಪು ಮಾಡಿದವರನ್ನು ಕೊಪ್ಪಕ್ಕೆ ಹಾಕುವರು ಎಂಬ ಪ್ರತೀತಿ ಇತ್ತು. ಅದು ಮಲೆನಾಡ ಮೂಲೆ. ನಾನು ನ್ಯಾಯಾಲಯಕ್ಕೆ ಹೋಗುವೆ ಎಂದುದರಿಂದ ಅಲ್ಲಿಗೆ ಹಾಕಿದ್ದಾರೆ ಎಂದು ಕೆಲವರ ವಿಶ್ಲೇಷಣೆ. ನಮ್ಮ ಹೆಡ್‌ಮಾಸ್ಟರ್‌ ಅಂತೂ ಬಿಲ್‌ಕುಲ್‌ ಹೋಗಬೇಡಿ ಎಂದರು. ಅಲ್ಲಿಯೂ ಇಲ್ಲಿಯ ಸಂಬಳ ಮತ್ತೆ ಇಲ್ಲಿ ಸಂಬಳಕ್ಕಿಂತ ಹೆಚ್ಚು ಖಾಸಗಿ ಪಾಠದ ಆದಾಯ. ಮೇಲಾಗಿ ಸ್ವಂತ ಮನೆಯ ವಾಸ. ಕೊಪ್ಪದ ಹತ್ತಿರ ಎಂದರೆ ಮಲೆನಾಡ ಕೊಂಪೆ ಖಂಡಿತ ಬೇಡ ಎಂದರು. ಅವರ ಮಾತೂ ಸತ್ಯವಾಗಿತ್ತು. ಉಪನ್ಯಾಸಕನ ವೇತನ ನೀಡಿದರೂ ಅದು ನನ್ನ ಈಗಿನ ಆದಾಯಕ್ಕಿಂತ ಕಡಿಮೆಯೇ ಆಗುತಿತ್ತು.
ನಾನೂ ಬಹಳ ಯೋಚಿಸಿದೆ. ಕೆಲವರ ಸಲಹೆ ಕೇಳಿದೆ. ನನಗೆ ಉಪನ್ಯಾಸಕನ ವೇತನ ನೀಡುವುದು ಖಚಿತ. ಅಲ್ಲದೆ ಇದು ಪತ್ರಾಂಕಿತ ಅಧಿಕಾರಿಯಯ ಶ್ರೇಣಿ. ಹೆಡ್‌ಮಾಸ್ಟರ್‌ ಗಿಂತ ತುಸು ಹೆಚ್ಚು. ಜತೆಗೆ ಕೆಲಸದ ಹೊರೆಯೂ ಕಡಿಮೆ. ಸಾಮಾಜಿಕ ಅಂತಸ್ತು ಉನ್ನತ. ಒಂದೆ ಅನಾನುಕೂಲವೆಂದರೆ ಸ್ವಂತ ಊರು ಬಿಟ್ಟು ಹೋಗಬೇಕು. ಜತೆಗೆ ರಾಜ್ಯಾದ್ಯಂತ ವರ್ಗಾವಣೆ. ನಿಜ ಮನೆಪಾಠದ ಆದಾಯ ಚೆನ್ನಾಗಿತ್ತು. ಆದರೆ ಅದಕ್ಕೆ ಬೆಳಗೂ ಬೈಗೂ ಮೈಬಗ್ಗಿಸಿ ದುಡಿಯಲೇಬೇಕು. ಅದು ಹೇಳಿಕೇಳಿ ನಾಯಿ ತಲೆಯ ಮೇಲಿನ ಬುತ್ತಿ. ನಾನೆ ಬಿಡಬಹುದು. ಇಲ್ಲವೆ ಇಲಾಖೆಯವರೆ ತಡೆಯಬಹುದು. ಹೋಗುವುದೆ ಸರಿ ಎಂದುಕೊಂಡೆ. ನನಗೆ ಸೇರಲು ೧೫ ದಿನ ಗಡುವು ಇತ್ತು. ಆಗಲೆ ಗಣೇಶ ಚೌತಿ ಬಂದಿತ್ತು. ಹಬ್ಬ ಎಂದು ಉಳಿದರೆ ಕೊನೆ ದಿನಾಂಕ ಮುಗಿಯುತಿತ್ತು. ನಮ್ಮ ಅಮ್ಮ ಕೆಲವು ವಿಷಯದಲ್ಲಿ ನ್ಯಾಯನಿಷ್ಠುರಿ. ಹಬ್ಬ ಪ್ರತಿವರ್ಷ ಬರುತ್ತದೆ. ಆದರೆ ಅವಕಾಶ ಮತ್ತೆ ಬಾರದು. ಆದ್ದರಿಂದ ಹಿಂದು ಮುಂದು ನೋಡದೆ ಹೊರಡು ಅಂದಳು. ಸೂಟ್‌ಕೇಸ್‌, ಹೋಲ್ಡಾಲು, ಸೊಳ್ಳೆಪರದೆ ಸಮೇತ ಹೊರಟೆ.
ಬೆಳಂಬೆಳಗ್ಗೆ ಬಿಟ್ಟರೆ ಶಿವಮೊಗ್ಗಕ್ಕೆ ಹೋಗಿ ಬಸ್ಸು ಬದಲಿಸಿ ಆ ಊರು ತಲುಪುದಾಗ ಸಂಜೆ ಐದೂವರೆ. ಅದು ಭದ್ರಾ ಜಲಾಶಯದ ಹಿನ್ನೀರಿನ ದಡದಲ್ಲಿದ್ದ ಗ್ರಾಮ. ತಾಲೂಕು ಕೇಂದ್ರ ಆದರೂ ಚಿಕ್ಕದೆ. ಕಿಲೋಮೀಟರ್‌ ಉದ್ದದ ಒಂದೆ ನೇರ ಬೀದಿ ಅದರ ಅಕ್ಕ ಪಕ್ಕದಲ್ಲೆ ಮನೆಗಳು. ವಸತಿ ಗೃಹಗಳೂ ಇಲ್ಲ. ಐಬಿ ಊರ ಹೊರಗೆ. ಸುಮಾರು ದೂರ. ಕಾಲೇಜು ಹತ್ತಿರದಲ್ಲೆ ಇತ್ತು. ಹಳೆಯ ಕಾಲೇಜು. ದೊಡ್ಡದಾಗಿಯೆ ಇತ್ತು. ಆಗಲೆ ಎಲ್ಲ ಹೊರಟಾಗಿತ್ತು. ಜವಾನ ಕಸ ಗುಡಿಸುತಿದ್ದ. ಅಲ್ಲಿ ನನ್ನ ಸಾಮಾನು ಇಟ್ಟು ಪ್ರಿನ್ಸಿಪಾಲರ ಮನೆ ವಿಚಾರಿಸಿಕೊಂಡು ಅವರನ್ನು ಕಾಣಲು ಹೋದೆ. ಅವರ ದರ್ಶನವಾಗಲಿಲ್ಲ. ಮಾರನೆ ದಿನ ಹತ್ತು ಗಂಟೆಗೆ ಕಾಲೇಜಿನಲ್ಲಿ ಕಾಣಬಹುದೆಂದು ತಿಳಿಸಲಾಯಿತು. ನನಗೆ ಮನಸ್ಸು ಪಿಚ್ಚೆಂದಿತು. ಕಾಲೇಜಿಗೆ ಬಂದಾಗ ಜವಾನ ಸ್ಟಾಫ್‌ ರೂಂ ಬಾಗಿಲು ತೆರೆದು ಕೊಟ್ಟ. ಅಲ್ಲೆ ಠಿಕಾಣಿ ಹೂಡಿದೆ. ನವಂಬರ್‌ ತಿಂಗಳು ಬೇಗ ಕತ್ತಲಾಯಿತು. ಸುತ್ತಲೂ ದಟ್ಟ ಕಾಡು. ಝೀ ಎಂದು ಸದ್ದು ಮಾಡುವ ಜೀರುಂಡೆಗಳು. ಒಂದುಕ್ಷಣ ಮನ ಅಳುಕಿತು. ಗುರ್ತು ಇಲ್ಲ, ಪರಿಚಯವಿಲ್ಲ. ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟಂತೆ ಆಗಿದೆ. ಜನಸಂಚಾರವೂ ಇಲ್ಲ. ನೀರಲ್ಲಿ ಬಿದ್ದಾಗಿದೆ. ಈಜಲೇಬೇಕು. ಊರಿನಿಂದ ತಂದ ಬುತ್ತಿ ಹೇಗಿದ್ದರೂ ಇತ್ತು. ಅದನ್ನು ಬಿಚ್ಚಿ ಚಪಾತಿ ತಿಂದೆ. ದೊಡ್ಡ ಮೇಜಿನ ಮೇಲೆ ಹಾಸಿಗೆ ಹಾಕಿ ಪರದೆಯನ್ನೂ ಕಟ್ಟಿಕೊಂಡೆ ಮಲೆನಾಡಿನ ಸೊಳ್ಳೆಗಳ ಬಗ್ಗೆ ಮೊದಲೆ ಮಾಹಿತಿ ಇತ್ತು. ಮಲೇರಿಯಾ ಆದರೆ ಮುಗಿಯಿತು ತಿಂಗಳುಗಟ್ಟಲೆ ಜ್ವರ. ಹೊಟ್ಟೆಯಲ್ಲಿ ಗಡ್ಡೆಯಾದರಂತೂ ಮುಗಿಯಿತು. ಅದಕ್ಕೆ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೆ. ಫುಲ್‌ತೋಳು ಸ್ವೆಟರ್‌ ತಲೆಗೆ ಮಫ್ಲರ್‌ ಸುತ್ತಿ ಮಲಗಲು ಸಿದ್ಧನಾದಾಗ ಯಾರೋ ಇಬ್ಬರು ಮೂವರು ಬಂದರು. ಅವರು ಕಾಲೇಜಿನ ನೌಕರರು.
ಬಯಲುಸೀಮೆಯಿಂದ ಇಂಗ್ಲಿಷ್‌ ಉಪನ್ಯಾಸಕ ಬರುವನೆಂಬ ವಿಷಯ ಅವರಿಗೆ ತಿಳಿದಿತ್ತು. ನಾನು ಬಂದ ಸುದ್ದಿ ಮುಟ್ಟಿದಾಗ ನೋಡಲು ಬಂದಿದ್ದರು. ನಾನು ನೆಮ್ಮದಿಯಾಗಿ ಮಲಗಲು ಸಿದ್ಧನಾಗಿರುವುದು ಅವರಿಗೆ ತುಸು ಅಚ್ಚರಿ ತಂದಿತು. ಅದೂ ಇದೂ ಮಾತನಾಡಿ ಬ್ರಹ್ಮಚಾರಿಗಳು ಸೇರಿ ಒಂದು ಮನೆ ಮಾಡಿಕೊಂಡಿರುವುದಾಗಿಯೂ ಅಲ್ಲಿಗೆ ಬರಬಹುದೆಂದು ತಿಳಿಸಿದರು. ಹೇಗಿದ್ದರೂ ಹಾಸಿಗೆ ಹಾಸಿಯಾಗಿತ್ತು. ಮಾರನೆ ದಿನ ಬರುವೆನೆಂದು ತಿಳಿಸಿ ಅವರ ಕಾಳಜಿಗೆ ವಂದಿಸಿದೆ. ಇದೆ ಮೊದಲ ಬಾರಿಗೆ ನಾನು ಮನೆ ಬಿಟ್ಟು ಹೊರ ಬಂದಿರುವುದು. ಅದೂ ಕಾಡ ನಡುವೆ ಇರುವ ಊರಿಗೆ. ಆಗಲೆ ಒಂಟಿತನದ ಅಸಹಾಯಕತೆ ಅರಿವಿಗೆ ಬಂದಿತು. ಈ ಅನುಭವದಿಂದ ಮುಂದೆ ನಾನು ಪ್ರಿನ್ಸಿಪಾಲನಾದಾಗ ಯಾರೆ ಹೊಸಬರು ಬರುವರೆಂದು ಗೊತ್ತಾದ ಕೂಡಲೆ ಅವರು ನೆಮ್ಮದಿಯಾಗಿ ನೆಲಸಲು ವ್ಯವಸ್ಥೆ ಮಾಡುತಿದ್ದೆ.
ಬೆಳಗಾದ ಮೇಲೆ ಅಲ್ಲಿನ ಹಸಿರು ಮುರಿಯುವ ಸಸ್ಯರಾಶಿ ನೋಡಿ ದಂಗಾದೆ. ಬೇವು, ಹುಣಿಸೆ ಮತ್ತು ಜಾಲಿಮರ ಮಾತ್ರ ನೋಡಿದ್ದ ನನಗೆ ಎಲ್ಲ ಕಡೆ ತಲೆಎತ್ತಿ ನೋಡಿದರೂ ತುದಿಕಾಣದ ಮರಗಳು ಕಣ್ಣಿಗೆ ಹಬ್ಬವೆನಿಸಿದವು. ಮಾರನೆ ದಿನ ಪ್ರಾರ್ಥನೆಯಲ್ಲಿ ನನ್ನ ಪರಿಚಯ ಮಾಡಿಕೊಡಲಾಯಿತು. ಪ್ರಾಂಶುಪಾಲರು ಹಿರಿಯರು. ಅವರದೂ ಇಂಗ್ಲಿಷ್‌ ಎಂಎ. ಶಿಸ್ತಿನ ಶಿಪಾಯಿ. ಹೆಚ್ಚು ಮಾತು ಇಲ್ಲ. ಅಲ್ಲಿನ ಸಿಬ್ಬಂದಿಗೆ ಅವರೊಡನೆ ಮುಖವಿಟ್ಟು ಮಾತನಾಡಲೂ ಹಿಂಜರಿಕೆ. ಏನೆ ಮಾತಿದ್ದರೂ ಗುಮಾಸ್ತರ ಮೂಲಕ. ಮೊದಲ ದಿನವೆ ನನಗೆ ವೇಳಾಪಟ್ಟಿ ನೀಡಿದರು. ಅವರ ಎಲ್ಲ ತರಗತಿಗಳನ್ನೂ ನನಗೆ ವಹಿಸಲಾಗಿತ್ತು. ನಾನು ಅವರನ್ನು ಭೇಟಿ ಮಾಡಿ, ನಾನು ಹೊಸಬ ಮಾರ್ಗದರ್ಶನ ನೀಡಿ ಎಂದು ಕೋರಿದೆ. ನೀವು ಸ್ನಾತಕೋತ್ತರ ಪದವೀಧರರು. ಇಲಾಖೆ ನಿಮ್ಮನ್ನು ಇಂಗ್ಲಿಷ್‌ ಉಪನ್ಯಾಸಕರೆಂದು ನೇಮಿಸಿದೆ, ಕಾರ್ಯ ನಿರ್ವಹಿಸಿ ಎಂದರು. ಕೆಲವು ದಿನ ತಮ್ಮ ಪಾಠವನ್ನು ಗಮನಿಸುವೆ, ಅನುಮತಿ ಕೊಡಿ ಎಂದೆ. ಅದು ಅಗತ್ಯವಿಲ್ಲ. ಒಬ್ಬರು ಮಾಡಿದಂತೆ ಇನ್ನೊಬ್ಬರು ಪಾಠ ಮಾಡಬೇಕಿಲ್ಲ. ನಿಮ್ಮದೆ ಶೈಲಿ ರೂಢಿಸಿಕೊಳ್ಳಿ ಎಂದರು. ಆಗ ನನಗೆ ತುಸು ಮುಜುಗರವಾದರೂ ಅವರ ನಿಲುವು ಸರಿಯಾದದ್ದು ಎಂದು ಸಾವಧಾನವಾಗಿ ಅರಿವಿಗೆ ಬಂದಿತು. ಹೊಸದಾಗಿ ನಡೆಯುವವರು ಕೈಗೋಲಿನ ಆಸರೆ ಬಯಸಬಾರದು ಎದ್ದೂ ಬಿದ್ದೂ ಸ್ವತಃ ನಡೆಯಲು ಕಲಿಯಲೆ ಬೇಕು.
ಹೊಸ ವಾತಾವರಣ ಸಾವಕಾಶವಾಗಿ ಹೊಂದಿಕೆಯಾಗತೊಡಗಿತು. ಅದು ಸಂಯುಕ್ತ ಪದವಿ ಪೂರ್ವಕಾಲೇಜು. ಎಂಟು ನೂರುಕ್ಕೂ ಮಿಕ್ಕಿ ಮಕ್ಕಳು. ಪಿಯುಸಿಯಲ್ಲೆ ಇನ್ನೂರಕ್ಕೂ ಹೆಚ್ಚು ಹತ್ತಾರು ಉಪನ್ಯಾಸಕರು ಮತ್ತು ಇಪ್ಪತ್ತಕ್ಕೂ ಹೆಚ್ಚು ಶಿಕ್ಷಕರು ಇದ್ದರು. ಅಲ್ಲಿನ ಒಂದು ವಿಶೇಷ ಗಮನಿಸಿದೆ. ಅಲ್ಲಿ ಯಾರನ್ನೂ ಹೆಸರು ಹಿಡಿದು ಕರೆಯುವ ಪದ್ಧತಿ ಇಲ್ಲ. ಬರಿ ಇನಷಿಯಲ್‌ಗಳೆ ರಾಮರಾವ್- ಆರ್‌ಆರ್‌ ಆದರೆ, ಕೆ. ಲಕ್ಷ್ಮಿದೇವಿ- ಕೆ.ಎಲ್‌. ನನಗಂತೂ ಅವರನ್ನು ಗುರುತಿಸಲು ತಿಂಗಳುಗಳೇ ಬೇಕಾಯಿತು. ನನ್ನ ಗಮನ ಸೆಳೆದದ್ದು ಕಾರಿಡಾರ್‌ ನಲ್ಲಿ ಕಂಬಕ್ಕೆ ಉದ್ದಕ್ಕೆ ಬಿಗಿದಿದ್ದ ಕೋಲುಗಳು ಮತ್ತು ಅವುಗಳಿಗೆ ನೇತು ಹಾಕಿದ್ದ ಛತ್ರಿಗಳು. ನಮ್ಮಲ್ಲಿ ಕೊಡೆ ಎಂದರೆ ಬಹು ಅಪರೂಪದ್ದು. ಆದರೆ ಇಲ್ಲ ಪ್ರತಿಯೊಬ್ಬರೂ ಛತ್ರ ಪತಿಗಳೆ. ಹುಡುಗಿಯರೂ ಬಣ್ಣ ಬಣ್ಣದ ಛತ್ರಧಾರಿಗಳೆ. ಅಷ್ಟೆ ಅಲ್ಲ, ಒಂದು ಕೋಣೆಯಲ್ಲಿ ಅಗ್ಗಿಷ್ಟಕ ಇರುವುದು ಕಂಡಿತು. ಅಲ್ಲಿ ಚಳಿಗಾಲದಲ್ಲಿ ಬೆಂಕಿಹಾಕಿ ಕಾಯಿಸಿಕೊಳ್ಳಲು ಅನುವು ಮಾಡಿರುವರು. ನಮ್ಮಲ್ಲಿ ಮನೆಗೊಂದು ಕೊಡೆ ಇರುವದೂ ಅನುಮಾನ. ಆದರೆ ಅಲ್ಲಿ ತಲೆಗೊಂದು ಕೊಡೆ. ಕಾರಣ ಅಲ್ಲಿನ ದಟ್ಟ ಮಳೆ ಜೂನ್‌ ಏಳರಂದು ಶುರುವಾದದ್ದು ನವಂಬರ್‌ ಕೊನೆಯವರೆಗೆ ತೆರಪಿಲ್ಲದೆ ಬರುವುದು. ಅದಕ್ಕೆಂದೆ ಮೃಗಶಿರಾ ನಕ್ಷತ್ರ ಬಂದಾಗ ದೊಡ್ಡಹಬ್ಬ. ವಿಶೇಷವಾಗಿ ಮುರ್ಗಿ ಹಬ್ಬವೆಂದೆ ಹೆಸರುವಾಸಿ. ರೈತರು ಅಂದು ಕೋಳಿ ಕೊಯ್ಯುವುದರಿಂದ ಮುರುಗಿ ಹಬ್ಬ ಎಂಬ ಹೆಸರು ಬಂದಿದೆ ಎಂದು ಮೊದಮೊದಲಲ್ಲಿ ಅಂದುಕೊಂಡಿದ್ದೆ.
ಅಲ್ಲಿನ ಉಪನ್ಯಾಸಕರ ಉಡುಪು ನೋಡಿ ನಾನು ದಂಗಾದೆ. ಎಲ್ಲರೂ ಸೂಟು ಬೂಟುಧಾರಿಗಳೆ. ಕೋಟು ಹಾಕದಿದ್ದರೆ ಇನಸರ್ಟ್ ಮಾಡಿ ಟೈ ಕಟ್ಟಿ ಥಳ ಥಳ ಹೊಳೆವ ಬೂಟು ಧರಿಸಿ ಬರುವರು. ಪ್ಯಾಂಟು ಬುಷ್‌ ಷರ್ಟ್ ಹಾಕಿದ್ದ ನನ್ನನ್ನು ನೋಡಿ ಅವರಿಗೆ ತುಸು ಹೇವರಿಕೆ. ಹುದ್ದೆಯ ಘನತೆಗೆ ತಕ್ಕಂತೆ ಉಡುಪಿರಬೇಕೆಂದು ಅಲ್ಲಿನ ಅಲಿಖಿತ ನಿಯಮ. ನನಗೆ ಅದನ್ನು ಸೂಚ್ಯವಾಗಿ ತಿಳಿಸಿದರು. ನಾನು ಪ್ರಾಂಶುಪಾಲರು ಅಡ್ಡ ಪಂಚೆ ಅರ್ಧ ತೋಳಿನ ಅಂಗಿ ಧರಿಸಿ ಬರುವರಲ್ಲ, ಅದು ಹೇಗೆ ಎಂದು ಪಶ್ನಿಸಿದಾಗ ಗಾಬರಿಯಾದರು. ಅವರ ಪ್ರಕಾರ ಸಂಸ್ಥೆಯ ಮುಖ್ಯಸ್ಥರು ಪ್ರಶ್ನಾತೀತರು. ಮುಕ್ತ ವಾತಾವರಣದಿಂದ ಬಂದಿದ್ದ ನನಗೆ ಆ ಸೂಕ್ಷ್ಮ ಅರ್ಥವೆ ಆಗಲಿಲ್ಲ. ಶಿಕ್ಷಕರ ಸಭೆಯಲ್ಲೂ ಬಿಗುವಿನ ವಾತಾವರಣ ಎದ್ದು ಕಾಣುತಿತ್ತು. ಅಲ್ಲಿ ಎಲ್ಲ ಏಕಮುಖ. ಅವರು ಹೇಳುವುದು. ಉಳಿದವರು ಕೇಳುವದು. ನಾನು ಹೋಗಿ ಎರಡು ತಿಂಗಳಾದರೂ ವೇತನವಾಗಿರಲಿಲ್ಲ. ಅದನ್ನು ನಾನು ಸಭೆಯಲ್ಲಿ ಆ ವಿಷಯ ಕೇಳಿದಾಗ ಎಲ್ಲರಿಗೂ ಅಚ್ಚರಿ. ಹೊಸದಾಗಿ ಬಂದವ ಪ್ರಿನ್ಸಿಪಾಲರನ್ನೆ ಪ್ರಶ್ನಿಸುವನಲ್ಲ ಎಂದು. ಇನ್ನೊಂದು ಸಲ ನಾನು ಏನೋ ವಿವರಣೆ ಕೇಳಿದಾಗ ಪ್ರಾಂಶುಪಾಲರು, ಗಂಭೀರವಾಗಿ ಇಷ್ಟೆಲ್ಲ ಮಾತನಾಡುವ ನೀವು ಎಂತಹ ಕೆಲಸ ಮಾಡಿರುವಿರಿ ಗೊತ್ತೆ ಎಂದು ಕೇಳಿದರು. ಎಲ್ಲರೂ ಕುತೂಹಲದಿಂದ ಕಣ್ಣುಕಣ್ಣು ಬಿಟ್ಟರು. ನೀವು ರಸೀದಿಗೆ ಸಹಿ ಮಾಡದೆ ಕೊಟ್ಟಿರುವಿರಿ ಎಂದರು. ಅಲ್ಲಿ ಶಾಲಾ ಶುಲ್ಕವನ್ನು ತಿಂಗಳ ನಿಗದಿಯಾದ ದಿನಾಂಕದಂದು ಮೊದಲ ಅವಧಿಗೆ ಹೋದವರು ವಿದ್ಯಾರ್ಥಿಗಳಿಂದ ಹಣ ಪಡೆದು ಅವರಿಗೆ ರಸೀತಿ ನೀಡಿ ಹಣದ ಲೆಕ್ಕವನ್ನು ಕಚೇರಿಗೆ ಕೊಡಬೇಕಿತ್ತು. ನನಗೂ ಒಂದು ತರಗತಿ ವಹಿಸಿದ್ದರು. ಅದು ನನಗೆ ಹೊಸ ಕೆಲಸ. ನಾನು ಗಡಿಬಿಡಿಯಲ್ಲಿ ಕೆಲ ಮಕ್ಕಳಿಗೆ ಕೊಟ್ಟ ರಸೀತಿಗೆ ಸಹಿ ಮಾಡಿರಲಿಲ್ಲ. ನಾನು ಎದ್ದುನಿಂತು ಹೇಳಿದೆ. ಈ ಕೆಲಸ ನನಗೆ ಹೊಸತು. ಗೊತ್ತಿಲ್ಲದೆ ಇರುವುದರಿಂದ ಕಣ್‌ತಪ್ಪಿನಿಂದ ದೋಷವಾಗಿರಬಹುದು. ನಾನು ವಸೂಲಿಯಾದ ಹಣವನ್ನು ತಿಂದುಹಾಕಿಲ್ಲ. ಅದನ್ನು ತಿಳಿಸಿ ಹೇಳುವದು ಕಚೇರಿಯವರ ಕರ್ತವ್ಯ. ಅದನ್ನೆ ದೊಡ್ಡ ಅಪರಾಧವೆಂದು ಬಿಂಬಿಸಿದರೆ ಹೇಗೆ ಎಂದೆ.
ಎಲ್ಲರೂ ಗರಬಡಿದವರಂತೆ ಕೂತರು. ಅಷ್ಟರಲ್ಲೆ ಒಬ್ಬರು, `ಏನು ಎಚ್‌ಎಸ್‌ಆರ್ ತುಸುವೂ ಭಯ ಭೀತಿ ಇಲ್ಲದೆ ಪ್ರಾಂಶುಪಾಲರೆದುರೇ ಹೀಗೆ ಮಾತನಾಡುವುದೇ?’ ಎಂದು ಸೇರಿಸಿದರು.
ನಾನು `ಏನು ಸ್ವಾಮಿ ಪ್ರಾಂಶುಪಾಲರೇನು, ಹುಲಿಯೇ, ಕರಡಿಯೇ ಭಯಪಡಲು?’ ಎಂದೆ. ಎಲ್ಲ ಕಡೆ ಮೌನ ಆವರಿಸಿತು.
ಕಾಲೇಜು ಮೊದಲು ತಾಲೂಕು ಬೋರ್ಡಿನದು. ಅಲ್ಲಿರುವವರೆಲ್ಲ ಸ್ಥಳೀಯರೆ ಹೆಚ್ಚು. ಹತ್ತಾರು ವರ್ಷದಿಂದ ಮನೆ ಜಮೀನು ಮಾಡಿಕೊಂಡು ಅಲ್ಲೆ ತಳ ಊರಿದ್ದಾರೆ. ಈಗ ಸರ್ಕಾರಕ್ಕೆ ಸೇರಿದ್ದರಿಂದ ಎಲ್ಲಿ ವರ್ಗ ಮಾಡಿಸುವರೋ ಎಂಬ ಭಯ. ಅದಕ್ಕೆ ಅಷ್ಟು ತಗ್ಗಿ ಬಗ್ಗಿ ನಡೆಯುವರು. ನಾನೋ ನಮ್ಮ ಊರು ಬಿಟ್ಟು ನಾನೂರು ಮೈಲು ದೂರ ಬಂದಿರುವೆ. ಮೊದಲಿನಿಂದ ಅರಸರ ಅಂಕೆ, ದೆವ್ವದ ಕಾಟ ಅರಿಯದ ಅಲಕ್‌ನಿರಂಜನ್‌ ಎಂಬ ಪ್ರವೃತ್ತಿಯವ. ನನ್ನ ಕರ್ತವ್ಯ ಪ್ರಾಮಾಣಿಕವಾಗಿ ಮಾಡಿದರೆ ಮುಗಿಯಿತು ಎಂದುಕೊಂಡವ. ಹೀಗಾಗಿ ನನ್ನ ನೇರ ನಡೆ, ದಿಟ್ಟ ನುಡಿ ಕೆಲವೆ ದಿನಗಳಲ್ಲಿ ಹಲವರ ಅಭಿಮಾನ ಗಳಿಸಿಕೊಟ್ಟಿತು. ಶಿಕ್ಷಕರ ಸಭೆಯಲ್ಲಿ ಅರ್ಥಪೂರ್ಣ ಸಂವಹನ ಸಾಧ್ಯವಾಯಿತು. ಅಂತೂ ಬಿರು ಬಿಸುಲಿನ ಬಳ್ಳಾರಿ ಜಿಲ್ಲೆಯ ನಾನು ಕೊರೆವ ಚಳಿಯ, ಜಡಿ ಮಳೆಯ ಮಲೆನಾಡ ಮಡಿಲಲ್ಲಿ ನೆಲೆಗೊಂಡೆ.


No comments:

Post a Comment