Monday, August 20, 2012

ಗುಂಪಿನಲ್ಲಿ ಗೋವಿಂದ

ಹೊ
ಸಪೇಟೆಯ ಶಾಲೆಗೆ ಸೇರಿದನಂತರ ಮೂರು ವರ್ಷ ಅಲ್ಲಿ ನಮ್ಮ ಸೋದರ ಅತ್ತೆಯ ಮನೆಯಲ್ಲಿ ವಾಸ. ನಮ್ಮ ತಂದೆಗೆ ಒಬ್ಬಳೆ ತಂಗಿ. ಅವರ ವಾಸ ಚಿತ್ತವಾಡಿಗೆಯಲ್ಲಿ. ಅದು ಹೊಸಪೇಟೆಯ ಭಾಗವೆ ಆದರೂ ಪೇಟೆಯಂತೂ ಅಲ್ಲ. ಆದರೆ ಅಲ್ಲಿ ಏಳನೆ ತರಗತಿಯವರೆಗ ಓದಬಹುದಿತ್ತು. ಅಲ್ಲಿನ ಶಾಲೆಯಲ್ಲಿ ಐದನೆ ತರಗತಿಗೆ ಸೇರಿದೆ. ನಮ್ಮ ಅತ್ತೆಯ ಗಂಡ ಪ್ರಾಥಮಿಕ ಶಾಲಾ ಶಿಕ್ಷಕರು, ಅವರೂ ಅಲ್ಲಿಯೇ ಕೆಲಸ ಮಾಡುತಿದ್ದರು. ಕಟ್ಟುಮಸ್ತಾದ ಆಳು. ಹುಡುಗರಾಗಿದ್ದಾಗ ವ್ಯಾಯಾಮ ಪಟು. ಅದರಿಂದ ಹುರಿಗಟ್ಟಿದ ಮೈ. ಎದೆಯ ಮೇಲೆ ಬಂಡೆ ಇರಿಸಿಕೊಂಡು ಅದನ್ನು ಸುತ್ತಿಗೆಯಿಂದ ಒಡೆಯುವ ತನಕ ಉಸಿರು ಹಿಡಿದು ಜಯಸಿದವರು. ಮರಳು ತುಂಬಿದ ದೊಡ್ಡ ಕೊಡವನ್ನು ಹಲ್ಲಿನಲ್ಲಿ ಕಚ್ಚಿ ಎತ್ತುತ್ತಿದ್ದ ತಾಕತ್ತು ಅವರದು. ಆದರೆ ತುಂಬಾ ಸಾಧು ಪ್ರಾಣಿ. ಹೆಂಡತಿ ಕಂಡರೆ ಅವರಿಗೆ ಕಡು ಮಮತೆ. ಅವರ ಮದುವೆಯಾದ ಹೊಸದರಲ್ಲಿ ಇನ್ನೂ ಕೆಲಸಕ್ಕೆ ಸೇರಿರಲಿಲ್ಲ. ಹಗರಿಬೊಮ್ಮನಹಳ್ಳಿ ಹತ್ತಿರದ ಗ್ರಾಮದಲ್ಲಿ ಅವರ ವಾಸ ಹೊಸದಾಗಿ ಮದುವೆಯಾಗಿದೆ.  ಹೆಂಡತಿ ಕೊಪ್ಪಳದ ಹತ್ತಿರದ ಹ್ಯಾಟಿ ಎಂಬ ಊರಲ್ಲಿ ತಾಯಿಯ ತವರುಮನೆಯಲ್ಲಿ ಇರುತಿದ್ದರಂತೆ. ಅದು ಈಗ ತುಂಗಭದ್ರ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಿಹೋಗಿದೆ. ಹೆಂಡತಿಯ ನೆನಪದಾಗ ನಡೆದು ಹೋಗುವರು. ವಾಹನ ಸೌಕರ್ಯ ಇರಲಿಲ್ಲ. ಸುಮಾರು ಅರವತ್ತು ಎಪ್ಪತ್ತು ಮೈಲು ದೂರ. ಹೆಂಡತಿಯ ಊರು ಸೇರುವ ಹೊತ್ತಿಗೆ ಸುಸ್ತೋ ಸುಸ್ತು. ಜತೆಗೆ ಸಣ್ಣಗೆ ಮೈ ಬಿಸಿಯಾಗುತಿತ್ತು. ಇದ್ದ ಮೂರು ದಿನ ಕಷಾಯ ಕುಡಿದು ಪಥ್ಯದ ಊಟ ಮಾಡಬೇಕು. ಬಲು ಸಂಕೋಚದ ಪ್ರಾಣಿ, ಬಹಳ ಸ್ವಾಭಿಮಾನ. ಅತ್ತೆಯ ಮನೆಯಲ್ಲಿ ಹೆಚ್ಚುದಿನ ಇರಬಾರದು ಎಂಬ ಬಿಗುಮಾನ ಬೇರೆ. ಆಗ ಅಳಿಯತನದ ಉಪಚಾರ ಬಹಳ ಸಂಭ್ರಮ. ಆದರೆ ಇವರು ಮೊದಲು ಹಾಕು ಮಣೆ. ಎರಡನೆ ದಿನ ನೂಕು ಮಣೆ ಇನ್ನೂ ಹೆಚ್ಚುದಿನ ಇದ್ದರೆ ಯಾಕೆ ಮಣೆ ಎನ್ನುವರೇನೊ ಎಂಬ ಹಿಂಜರಿಕೆಯಿಂದ ಎಷ್ಟು ಒತ್ತಾಯ ಮಾಡಿದರೂ ಕೇಳದೆ ಬಂದ ಮೂರನೆ ದಿನವೆ ಹೊರಟೆ ಬಿಡುವರು. ತಿಂಗಳಿಗೆ ಒಂದೋ ಎರಡೋ ಸಾರಿ ಬರುವರು. ಪ್ರತಿಬಾರಿಯೂ ಇದೆ ಅನುಭವ. ಅದರಿಂದ ವಿಶೇಷ ಅಡುಗೆ ಇಲ್ಲದ ಸಪ್ಪೆ ಅನ್ನಸಾರಿನ ಉಪಚಾರ. ಅದು   ಶಕ್ಕಮ್ಮನ ಗಂಡನ ಅಳಿಯತನ ಎಂದೆ ಹೆಸರುವಾಸಿಯಾಗಿತ್ತಂತೆ. ನೌಕರಿ ದೊರೆತ ಕೂಡಲೆ ಮಾಡಿದ ಮೊದಲ ಕೆಲಸ ಮನೆ ಮಾಡಿದ್ದು. ನಂತರ ಹೆಂಡತಿಯನ್ನು ಬಿಟ್ಟು ಇದ್ದವರೆ ಅಲ್ಲ.
ಇವರು ಶಾಲಾ ಶಿಕ್ಷಕರು. ಮೂರು ಮಕ್ಕಳು. ಹಳ್ಳಿಯಲ್ಲಿ ಆಸ್ತಿ ಇತ್ತು. ತುಂಬು ಕುಟುಂಬ.  ಅವರ ತಂದೆಗೆ ಆರು ಜನ ಮಕ್ಕಳು. ಅವಿಭಕ್ತ  ಕುಟುಂಬ. ಅವರ ತಂದೆ ಮತ್ತು ದೊಡ್ಡಪ್ಪನ ಎರಡೂ ಕುಟುಂಬಗಳು ಜತೆಯಲ್ಲಿಯೇ ಇದ್ದವು. ಅವರು ಹತ್ತು ಹಳ್ಳಿಯ ಶಾನುಭೋಗರಾಗಿ ಇದ್ದರು. ಬಲು ಜೋರಿನ ವ್ಯಕ್ತಿ. ಆ ಕುಟುಂಬದಲ್ಲಿ ಓದಿ ಸರಕಾರಿ ಕೆಲಸ ಹಿಡಿದವರು ಇಬ್ಬರು ಮಾತ್ರ. ಅದಕ್ಕೆ ಇವರ ಮೇಲೆ ಹೆಚ್ಚಿನ ಮಮಕಾರ. ಮನೆಗೆ ಬೇಕಾದ ಜೋಳ ಕಾಳುಗಳನ್ನು ವರ್ಷಕ್ಕಾಗುವಷ್ಟು ಮಗನಿಗೆ ಕಳುಹಿಸುತ್ತಿದ್ದರು. ರಜೆಯಲ್ಲಿ ಎಲ್ಲರೂ ಹಳ್ಳಿಗೆ ಹೋಗುತಿದ್ದರು. ಹೀಗಾಗಿ ನೆಮ್ಮದಿಯಿಂದ ಸಂಸಾರದ ರಥ ಸಾಗುತಿತ್ತು.
ನಾನು ಅಲ್ಲಿದ್ದಾಗ ಅವರ ಮಕ್ಕಳಲ್ಲಿ ಒಬ್ಬ ನನ್ನ ವಾರಗೆಯವ. ಆಟದಲ್ಲಿ ಮುಂದು. ಮಹಾ ಗಟ್ಟಿಗ. ಹುಡುಗನಿದ್ದಾಗ ಹರಿಯುವ ಚೇಳನ್ನೆ ಹಿಡಿದವ. ಇನ್ನೊಬ್ಬ ನನಗಿಂತ ಒಂದೂದುವರೆ ವರ್ಷ ದೊಡ್ಡವನು. ಓದಿನಲ್ಲಿ ಚುರುಕು. ಆಟ ನಾಟಕಗಳಲ್ಲಿ ಮುಂದು. ಮತ್ತೊಬ್ಬನು ಮೂರು ವರ್ಷ ಚಿಕ್ಕವನು ಅವನಿಗೆ ಚಿತ್ರ ಬಿಡಿಸುವ ಖಯಾಲಿ. ನಮ್ಮ ಅಜ್ಜಿ ಸದಾ ಅಲ್ಲಿ ಇರಲೇಬೇಕಿತ್ತು. ನಮ್ಮ ಅತ್ತೆಯದು ಆರು ತಿಂಗಳ ಕೂಸು ಮೂರು ತಿಂಗಳ ಬಸಿರು ಎಂಬ ಲೆಕ್ಕಾಚಾರ. ನಾನು ಅಲ್ಲಿದ್ದ ಮೂರು ವರ್ಷದಲ್ಲಿ ಅವರಿಗೆ ಎರಡು ಹೆರಿಗೆಯಾದ ನೆನಪು. ಹೀಗಾಗಿ ಸದಾ ಮಗಳ ಯೋಗ ಕ್ಷೇಮ ನೋಡಿಕೊಳ್ಳಲು ನಮ್ಮಜ್ಜಿ ಅಲ್ಲೆ ಇರುತ್ತಿದ್ದರು. ಮನೆ ಒಂದು ಛತ್ರದಂತೆ. ಸಾಲಾಗಿ ಊಟಕ್ಕೆ ಕುಳಿತರೆ ಜಿದ್ದಿನ ಮೇಲೆ ಊಟ ಮಾಡುವರು. ಮಲಗಲಂತೂ ಹಜಾರದಲ್ಲಿ ಹಾಸಿದ ಗುಡಾರ ಇರುವುದು. ಎಲ್ಲರೂ ಒಟ್ಟಿಗೆ ಮಲಗುವುದು. ದೀಪ ಅರಿಸಿದರೂ ಗುನುಗುಟ್ಟುವದು ನಡೆದೆ ಇರುತಿತ್ತು. ಒಳಗಿನಿಂದ ಗದರಿಕೆ ದನಿ ಬಂದಾಗಲೆ ಎಲ್ಲ ಸುಮ್ಮನಾಗುವರು.
ಅವರ ಮೂರು ಗಂಡುಮಕ್ಕಳ ಜತೆ ನಾನು ನಾಲ್ಕನೆಯವನು. ಜತೆಗೆ ನಮ್ಮ ಮಾವನ ಅಣ್ಣನ ಮಗನೂ ಸಹಾ ಹಳ್ಳಿಯಿಂದ ಓದಿನ ಸಲುವಾಗಿ ಅಲ್ಲಿಗೆ ಬಂದಿದ್ದ. ಅದರ ಜತೆ ಶಾಸ್ತ್ರಿ ಎಂಬ ವಾರನ್ನದ ಹುಡುಗ. ವಾರದಲ್ಲಿ ಒಂದು ದಿನ ಇಲ್ಲಿಯೆ ಊಟ. ಬಡ ವಿದ್ಯಾರ್ಥಿಗಳು ವಾರಕ್ಕೆ ಒಂದು ದಿನ ಒಬೊಬ್ಬರ ಮನೆಯಲ್ಲಿ ಊಟ ಮಾಡಿ ಶಾಲೆ ಕಲಿಯುತಿದ್ದರು. ಅವರು ಊಟ ಹಾಕುವವರ ಮನೆಯಲ್ಲಿ ಚಿಕ್ಕಪುಟ್ಟ ಕೆಲಸ ಮಾಡಬೇಕಿತ್ತು. ಒಂದು ಮನೆಯಲ್ಲಿ ಅನಾನುಕೂಲವಾದರೆ ಅಥವ ಯಾವುದಾದರೂ  ಮನೆಯವರು ಊರಿಗೆ ಹೋದರೆ ಆ ದಿನದ ಊಟ ನಮ್ಮ ಮನೆಯಲ್ಲೆ ಆಗುತಿತ್ತು. ಕಾರಣ ಅವನು ಮನೆಯ ಹಿರಿಯ ಮಗನ ಸಹಪಾಠಿ. ನಮ್ಮ ಮನೆಯಲ್ಲಿಯೆ ಅವನ ವಾಸ. ಹೀಗೆ ಓದಿ ಮುಂದೆ ಬಂದವರು ಬಹಳ ಜನ. ಹೀಗಾಗಿ ಹೊತ್ತಿಗೆ ಎರಡು ಸೇರು ಹಿಟ್ಟಿನ ರೊಟ್ಟಿ ಚಟ್‌ ಫೈಸಲ್‌. ಶನಿವಾರ, ಭಾನುವಾರ, ಬೇರೆ ಯಾವುದೆ ಹಬ್ಬ ಹರಿದಿನ ಎಂದು ರಜೆ ಬಂದರೆ ಎಲ್ಲ ಟೋಳಿಯು ನಮ್ಮ ಊರಿಗೆ ಹಾಜರು. ಹೇಳಿ ಕೇಳಿ ಎರಡು ಊರುಗಳ ನಡುವಿನ ಅಂತರ ನಾಲಕ್ಕು ಮೈಲು. ಅಲ್ಲಿ ತಿಂಡಿ ತಿಂದು ಬಿಟ್ಟರೆ ಆಟ ಆಡುತ್ತಾ ನಡೆದುಕೊಂಡು ಊಟದ ಹೊತ್ತಿಗೆ ನಮ್ಮೂರಿನಲ್ಲಿ  ಹಾಜರು.
ಸುಗ್ಗಿಯ ಕಾಲವಾದರೆ ಯಾರದಾದರೂ ಹೊಲಕ್ಕೆ ಹೋಗುವದು. ಅಲ್ಲಿ ಹೆಸರು ಅಲಸಂದಿಕಾಯಿಯ ರುಚಿ. ಜೋಳ ಮತ್ತು ಸೆಜ್ಜೆಯ ತೆನೆಯ ಹಾಲುಗಾಳುಗಳ ಬೆಳಸಿ ತಿನ್ನುವದು. ನಮ್ಮ ಗದ್ದೆಗೆ ಹೋದಾಗಲಂತೂ ಕಬ್ಬಿನ ಸಮಾರಾಧನೆ. ಹತ್ತಿರ ಕಬ್ಬಿನ ಗಾಣ ಆಡುತಿದ್ದರೆ ಅಲ್ಲಿಗೂ ಭೇಟಿ. ಜಿನ್ನಿನ ಸೋಮೇರ ಮನೆ ಹುಡುಗರು. ಹಾಗಾಗಿ ನಿರಾಳವಾಗಿ ಓಡಾಟ ಸಾಗುತಿತ್ತು. ಕೆಲವುಸಲ ಮನೆಗೆ ಅನುಕೂಲವಾಗುವ ಕೆಲಸವೂ ಆಗುತಿತ್ತು. ಜೋಳದ ಬೆಳೆ ಕಟಾವು ಆಗಿದ್ದರೆ ಎಲ್ಲರೂ ಸೇರಿ ಎರಡು ಮೂರು ಹೊರೆ ಕೋಲಿಯನ್ನು ತರುವುದಿತ್ತು. ಕೋಲಿ ಎಂದರೆ  ಜೋಳದ ದಂಟನ್ನು ತೆನೆ ಸಮೇತ ಕತ್ತರಿಸಿದ ಮೇಲೆ ಭೂಮಿಯಿಂದ ಮೇಲೆ ಒಂದೆರಡಡಿ ಉಳಿದಿರುವ ದಂಟಿನ ಭಾಗ. ಅದನ್ನು ಬೇರು ಸಮೇತ ಕಿತ್ತು ತಂದರೆ ಅದರಿಂದ ಹೊಲದವರಿಗೂ ಭೂಮಿ ಹಸನಾಗುವುದು. ಅದಕ್ಕೆ ಯಾರು ಬೇಕಾದರೂ ಅವನ್ನು ತೆಗೆದುಕೊಂಡು ಹೋಗಬಹುದಿತ್ತು. ಅದು ನೀರೊಲೆಗೆ ತಿಂಗಳುಗಟ್ಟಲೆ ಉರುವಲಾಗುತಿತ್ತು.
ವರ್ಷಕೊಮ್ಮೆ ಮುತ್ತುಗದ ಎಲೆ ತರಲು ಹೋಗುವುದಿತ್ತು. ಮುತ್ತುಗದ ಮರಗಳು ವರ್ಷದಲ್ಲಿ ಕೆಲವುಕಾಲ ಅಗಲವಾದ ಎಲೆಗಳಿಂದ ಸೊಂಪಾಗಿ ಇರುತಿದ್ದವು. ಗೋಣಿ ಚೀಲ ತೆಗೆದುಕೊಂಡು ಹೋಗಿ ಗದ್ದೆ ಬದುವಿನಲ್ಲಿದ್ದ ಮುತ್ತುಗದ ಮರವನ್ನು ಒಬ್ಬರು ಹತ್ತಿ ಬಲಿತ, ಅಗಲವಾದ ಎಲ್ಲೆಗಳನ್ನು ಕಿತ್ತು ಕಿತ್ತು ಕೆಳಗೆ ಹಾಕಿದರೆ ಉಳಿದವರು ಅವುಗಳನ್ನು ಜೋಡಿಸಿ ಚೀಲದಲ್ಲಿ ತುಂಬುವರು. ಮನೆಗೆ ಹೋದ ಮೇಲೆ ಅವುಗಳನ್ನು ನೀರಿನಲ್ಲಿ ತೋಯಿಸಿ ಒಟ್ಟಾಗಿ ಜೋಡಿಸಿ ಬೀಸುವ ಕಲ್ಲಿನ ಕೆಳಗೆ ಇಟ್ಟು ಅವು ಸಪಾಟಾದ ಮೇಲೆ ಎಲೆ ಸರ ಮಾಡಿ ನೇತು ಹಾಕುತಿದ್ದರು. ಪುರುಸೊತ್ತಾಗಿದ್ದಾಗ ಅಮ್ಮ ಅಜ್ಜಿ ಜೋಳದ ದಂಟಿನ ಸಿಬರು ಮಾಡಿ ಅವುಗಳಿಂದ ಎಲೆ ಹಚ್ಚುತಿದ್ದರು. ಅದರಿಂದ ವರ್ಷಾವಧಿ ಊಟಕ್ಕೆ ಹಬ್ಬ ಹುಣ್ಣಿಮೆ ದಿನ, ಹೆಚ್ಚು ಜನ ಬಂದಾಗ ಅನುಕೂಲವಾಗುತಿತ್ತು. ಮನೆಯಲ್ಲಿ ಸದಾ ಹಚ್ಚಿದ ಪತ್ರೊಳಿ ಎಲೆಗಳ ಪೆಂಡಿ, ದೊನ್ನೆಗಳ ಕಟ್ಟು ಇರುತಿತ್ತು.
ಹಂಪೆ ಹತ್ತಿರವಿದ್ದುದರಿಂದ ಬುತ್ತಿ ಕಟ್ಟಿಕೊಂಡು ಬೆಳಗ್ಗೆ ಹಂಪೆಗೆ ನಡೆದು ಹೊರಟರೆ ಹಾಳು ಪಟ್ಟಣ ಸುತ್ತಾಡಿ, ಚಕ್ರತೀರ್ಥ, ಪುರಂದರ ಮಂಟಪದಲ್ಲಿ ಬುತ್ತಿ ತಿಂದು ರಾತ್ರಿಯ ವೇಳೆಗೆ ಮನೆಗೆ ಬರುವುದೂ ಇತ್ತು. ಈ ಪಟಾಲಂ ಇದ್ದಾಗಲೆ ವರ್ಷಕ್ಕೆ ಬೇಕಾಗುವ ಹಪ್ಪಳ ಸಂಡಿಗೆ ತಯಾರಿಯಾಗುತಿತ್ತು. ಆಗ ಮಾಳಿಗೆಯ ಮೇಲೆ ಒಣ ಹಾಕಿದ ಅವನ್ನು ಕಾಯುವ ಕೆಲಸ ನಮ್ಮದು. ಕೋತಿ ಮತ್ತು ಕಾಗೆಗಳಿಂದ ಅವನ್ನು ತಡೆಯಲು ಕೋಲು ಹಿಡಿದು ಕಾಯುತಿದ್ದೆವು. ನಮ್ಮನ್ನು ಕಾಯಲು ಆಗೀಗ ದೊಡ್ಡವರು ಬರುತಿದ್ದರೂ. ಅವರ ಕಣ್ಣು ತಪ್ಪಿಸಿ ನಾವು ಹಸಿಯಸಂಡಿಗೆ ತಿನ್ನುತಿದ್ದೆವು ನಮ್ಮಲ್ಲಿನ ಮೀರ್‌ ಸಾಧಕ್‌ ಚಾಡಿ ಹೇಳಿದರೆ ಬೈಗಳು ಬೀಳುತಿದ್ದವು. ಮಾಳಿಗೆಯ ಮೇಲೆ ಗುಡಾರ ಹೊದಿಕೆಗಳಿಂದ ತಾತ್ಕಾಲಿಕ ತಂಬೂ ಮಾಡಿಕೊಂಡು ಅದರ ನೆರಳಲ್ಲೆ ಅದು ಇದು ಆಡುತ್ತಾ ಕಾಲ ಹಾಕುತಿದ್ದೆವು. ಜತೆಗೆ ಅತ್ತೆ ಬಂದರಂತೂ ಮುಗಿಯಿತು. ಅವರು ಬ್ಯಾಳಿಯಲ್ಲಿ ಬೆಲ್ಲ ಬಿದ್ದರೂ ಬಂದೆ ಬರುತಿದ್ದರು. ಆಗ ಅವಲಕ್ಕಿ, ಅರಳಿಟ್ಟು, ಸ್ಯಾವಗಿ ತಯಾರಿಗೆ ತೊಡಗುತಿದ್ದರು.
ನಮಗಂತೂ ಲಂಗಿಲ್ಲ ಲಗಾಮಿಲ್ಲ. ತೋಟ ತುಡುಗೆ ಎಂದು ತಿರುಗಿದ್ದೆ ಬಂತು. ಹೇಗೆ ಇದ್ದರೂ ಹಂಪಿ ನಮಗೆ ನಾಲಕ್ಕೆ ಮೈಲು. ಪ್ರತಿ ಸಲವೂ ಹಂಪಿಯಲ್ಲಿನ ಒಂದೊಂದು ಜಾಗಕ್ಕೆ ದಾಳಿ ಇಡುತಿದ್ದೆವು. ಅಲ್ಲದೆ ಯಾವುದಾದರೂ ಆರಾಧನೆ ಇದ್ದರೆ ಅದಕ್ಕೆ ನಮ್ಮ ಹಾಜರಿ ಹಾಕುತಿದ್ದೆವು. ಒಪ್ಪತ್ತಿನ ಊಟಕ್ಕೆ ಇಪ್ಪತ್ತು ಮೈಲಿ ನಡೆವ ಕಾಲ ಅದು. ನಿತ್ಯ ಸ್ನಾನಕ್ಕೆ ಪವರ್ ಕೆನಾಲ್‌ಗೆ ಭೇಟಿ. ನಮ್ಮ ಊರಲ್ಲಿ ಕುಡಿಯುವ ನೀರಿನ ಕೊರತೆಯಿದ್ದರೂ ಹತ್ತಿರದಲ್ಲೆ ಇರುವ ಕಾಲುವೆಗಳು ಮೂರು. ಆದರೆ ಇದ್ದದು ಮಾತ್ರ ಮೈಲು ದೂರದಲ್ಲಿ. ಅಲ್ಲಿ ನೀರಿನ ವಿಷಯದಲ್ಲಿ ನಮಗೆ ಬಹು ಸಮೃದ್ಧಿ. ಊರ ಮುಂದೆ ಬಸವನ ಕಾಲುವೆ ಒಂದು ಮೈಲು ಹೋದರೆ ದೊಡ್ಡ ಕಾಲುವೆ. ಅಲ್ಲಿ ಸದಾ ರಭಸದಿಂದ ಹರಿವ ಎಂಟು ಅಡಿ ಆಳದ ನೀರು. ಅದರಲ್ಲಿ ಈಜುವುದೆಂದರೆ ಸಾಹಸದ ಕೆಲಸ. ಅಷ್ಟು ಸೆಳವು. ಕೈ ಸೋತು ಸೆಳವಿಗೆ ಸಿಕ್ಕರೆ ಗೋವಿಂದನೆ ಗತಿ. ಅಲ್ಲದೆ ಅದರಲ್ಲಿ ತಿಂಗಳಿಗೊಮ್ಮೆಯಾದರು ಒಂದು ಹೆಣ ಬಂದೆ ಬರುವುದು. ಅದಕ್ಕೆ ಒಬ್ಬೊಬ್ಬರೆ ಈಜುವುದೆಂದರೆ ಭಯ.
ಆದರೆ ಕಲಿತ ಮೇಲೆ ಅದರ ಮಜವೆ ಬೇರೆ. ಪಣುವಿನ ಮೇಲೆ ನಿಂತು ಹಾರುವ ವೈವಿಧ್ಯ ಹೇಳತೀರದು. ಅದರಲ್ಲೂ ಅಲ್ಲಿಯೆ ಬಟ್ಟೆ ಒಗೆಯಲು ಹರೆಯದ ಹುಡುಗಿಯರು ಕೂತಿದ್ದರಂತೂ ಎಲ್ಲರೂ ಸಾಹಸ ಭೀಮರೆ. ವಯಸ್ಸಿನ ಮಹಿಮೆ. ಬೇಡ ಬೇಡ ಎಂದರೂ ಹುರುಪಿನಿಂದ ಹಾರುವುದು. ನೀರಲ್ಲಿ ಮುಳುಗಿ ಮತ್ತೆಲ್ಲೋ ತೇಲುವುದು ಮೊದಲಾದ ಚೇಷ್ಟೆ ಮಾಡುವರು.
ಒಂದು ರೀತಿಯಲ್ಲಿ ಬಾವಿಯಲ್ಲಿ ಈಜುವುದು ಬಹು ಕ್ಷೇಮ. ಅಲ್ಲಿ ಕೊಚ್ಚಿಕೊಂಡು ಹೋಗುವ ಭಯ ಇಲ್ಲ. ಈಗಿನ ಈಜುಕೊಳದ ತರಹ ಆದ್ದರಿಂದ ಈಜು ಕಲಿಯುವುದಕ್ಕೆ ಬಾವಿಯೆ ಬಲು ಉತ್ತಮ. ಅದಕ್ಕಾಗಿ ವಿಶೇಷ ಶ್ರಮ ಬೇಕಿರಲಿಲ್ಲ. ನುಗ್ಗೆಗಿಡ ಕಡಿದು ಅದರ ಟೊಂಗೆಗಳನ್ನು ಎರಡು ಅಡಿ ಉದ್ದ ವಿರುವಂತೆ ಕತ್ತರಿಸಿ ಆರೆಂಟು ತುಂಡುಗಳನ್ನುಸೇರಿಸಿ ಕಟ್ಟಿದರೆ ಮುಗಿಯಿತು. ನಮ್ಮನ್ನು ತೇಲಿಸುವ ಸಾಧನ ಸಿದ್ಧ. ಅದನ್ನು ನಡಕ್ಕೆಕಟ್ಟಿಕೊಂಡು ನೀರಿಗೆ ಇಳಿದರೆ ಮುಳುಗುವ ಮಾತೆ ಇಲ್ಲ. ಭಯದಿಂದ ಕೈಕಾಲು ಬಡಿದರೂ ಸಾಕುದಂಡೆಗ ಬಂದು ಬಿಡುವೆವು. ಹೀಗೆ ಒಂದು ವಾರ ಮಾಡಿದರೆ ಆಯಿತು, ಈಜು ಬಂದಂತೆ. ಕೆಲವರು ಒಣಗಿದ ಸೋರೆ ಬುರಡೆಗಳನ್ನು ಬಳಸಿ ಈಜು ಬುರುಡೆ ತಯಾರಿಸುವರು. ಇನ್ನು ಹಲವರು ಖಾಲಿ ಸೀಮೆಎಣ್ಣೆ ಡಬ್ಬಿ ಬಳಸುವರು. ಅದರಲ್ಲಿನ ರೂಪಾಯಿಗಿಂತ ಅಗಲವಾದ ಚಿಕ್ಕಬಾಯಿಗೆ ದಪ್ಪನೆಯ ಈರುಳ್ಳಿ ಸಿಕ್ಕಿಸಿದರೆ ಅಯಿತು. ಅದನ್ನು ಕಟ್ಟಿಕೊಂಡರೆ ಆನೆ ಮರಿಯಂತಹವನು ಸಹ ಮುಳುಗಲಾರ. ಹೀಗಾಗಿ ನಮಗೆ ನಿಂತ ನೀರಾಗಲಿ ಹರಿವ ನೀರಾಗಲಿ ಈಜುವುದು ಸಲೀಸಾದ ಕೆಲಸ.
ಹರಿವ ನೀರಲ್ಲಿ ಸೆಳವಿಗೆ ಸಿಲುಕಿ ಅಪಾಯ ಆದದ್ದು ಉಂಟು. ಬಾವಿಯಲ್ಲಿ ಅಸಂಭವ ಬಹುತೇಕ ವಿರಳ. ಆದರೆ ಬಾವಿಯಲ್ಲಿ ಕೆಸರು ಅಥವ ಕಲ್ಲು ಇದ್ದಾಗ ಸುರಂಗ ಹೊಡೆದರೆ ಮಾತ್ರ ಅಪಾಯ. ಸುರಂಗ ಹೊಡೆಯುವುದು ಎಂದರೆ ಬಾವಿಯ ದಡದ ಮೇಲೆ ನಿಂತು ತಲೆ ಕೆಳಗಾಗಿ ಹಾರುವುದು. ಅಪರಿಚಿತ ನೀರಾದರೆ ಆ ಸಾಹಸ ಸಲ್ಲ. ಕಬ್ಬೇರ ಬರಮ ಒಳ್ಳೆ ಈಜುಗಾರ. ನೀರಿನಲ್ಲಿ ಅವನು ಮೀನಿನ ಮರಿಗಿಂತಲು ಚುರುಕು. ಇನ್ನು ಅವನು ಹಾರುವ ವಿಧಾನವಂತೂ ಎಲ್ಲರ ಬೆರಗಿಗೆಕ ಕಾರಣ. ನೀರಿನಲ್ಲಿ ಹಾರುವಾಗ ಪಲ್ಟಿ ಹೊಡೆಯುವುದು, ಬಿಟ್ಟಬಾಣದಂತೆ ನೀರನ್ನು ಸೀಳಿಕೊಂಡು ಹೋಗುವುದು ನಮಗೆಲ್ಲ ಬೆರಗು ಮೂಡಿಸುತಿತ್ತು. ಆದರೆ ಅವನು ನೀರಲ್ಲೆ ಸಾವನ್ನಪ್ಪಿದ. ಒಂದು ಸಲ ಬೇರೆ ಯಾವುದೋ ಬಾವಿಗೆ ಹೋದಾಗ ಅಲ್ಲಿನ ನೀರನ್ನು ನೋಡಿ ಖುಷಿಯಾಗಿ ಮೇಲಿನಿಂದ ತಲೆಕೆಳಗಾಗಿ ಹಾರಿದ್ದೆ ಬಂತು. ನೀರೊಳಗಿಂದ ಗುಳ್ಳೆಗಳು ಬಂದಿವೆ. ಅವನು ಮೇಲೆ ಏಳಲೆ ಇಲ್ಲ. ಜತೆಗಿದ್ದವರು ಗಾಬರಿಯಾಗಿ ನೀರಿಗಿಳಿದು ನೋಡಿದಾಗ ಅವನ ಕಾಲುಗಳು ಅಲ್ಲಾಡುವುದು ಕಾಣಿಸಿವೆ. ಹಾಗೂ ಹೀಗೂ ಅವನ ಕಾಲು ಹಿಡಿದು ಎಳೆದಿದ್ದಾರೆ. ಅಂಥ ಒಳ್ಳೆಯ ಈಜುಗಾರನೂ ಅಕಾಲ ಮರಣಕ್ಕೆ ತುತ್ತಾಗಿದ್ದ, ಆಗಲೆ ಅವನು ನೀರು ಕುಡಿದು ಉಸಿರಾಟ ನಿಂತಿದೆ. ಅವನು ಮೇಲಿನಿಂದ ಹಾರಿದಾಗ ತಳದಲ್ಲಿದ್ದ ಕೆಸರಿನಲ್ಲಿ ಅವನ ತಲೆ ಸಿಕ್ಕಿಹಾಕಿಕೊಂಡು ಹೊರಗೆ ಬರಲು ಆಗಿಲ್ಲ.
ಇರುವ ಮೂರು ವರ್ಷ ಆಡಾಡುತ್ತಾ ಕಳೆದೆ. ಅಲ್ಲಿನ ಒಂದೆ ತೊಡಕು ಎಂದರೆ ಅಭ್ಯಾಸಕ್ಕೆ ಅಲ್ಲಿ ಆದ್ಯತೆ ಇಲ್ಲ. ನಮ್ಮ ಮಾವ ಉತ್ತಮ ಶಿಕ್ಷಕರು. ಪಾಠ ಏನಿದ್ದರೂ ಶಾಲೆಯಲ್ಲಿ ಮಾತ್ರ. ಒತ್ತಾಯದ ಮೇರೆಗೆ ಆ ಊರಿನ ಅತಿ ದೊಡ್ಡ ಶ್ರೀಮಂತರಾದ ಉಳ್ಳಾಗಡ್ಡೇರ ಮನೆಗೆ ಹೋಗಿ ಪಾಠ ಹೇಳುತಿದ್ದರು. ಅವರದು ಅವಿಭಕ್ತ ಕುಟುಂಬ. ಆ ಒಂದು ಮನೆಯಲ್ಲಿಯೆ ಆರೆಂಟು ಮಕ್ಕಳು. ಸಂಜೆ ಆರಕ್ಕ ಹೋದರೆ ರಾತ್ರಿ ಎಂಟಕ್ಕೆ ಬರುವರು ಅಷ್ಟುಹೊತ್ತಿಗೆ ನಮ್ಮ ತಲೆಗಳು ತಕ್ಕಡಿ ತೂಗುತ್ತಿದ್ದವು. ಮನೆಯಲ್ಲಿ ಮಕ್ಕಳಿಗೂ ಅಷ್ಟು ಆಸಕ್ತಿ ಇರಲಿಲ್ಲ. ಅವರಿಗೂ ಪುರುಸೊತ್ತಿರಲಿಲ್ಲ. ಹಾಗಾಗಿ ನಮಗೆ ಮನೆಯಲ್ಲಿ ಓದಲು ಒತ್ತಾಯವಿರಲಿಲ್ಲ. ನಾನೋ ಆಗಲೆ ಓದು ಗುಳಿ. ಆದ್ದರಿಂದ ನಾನು ನಾನು ತರಗತಿಗೆ ಮೊದಲಿಗನಾಗುತ್ತಿದ್ದೆ. ಅದು ತುಸು ದುಸುಮುಸಿಗೆ ಕಾರಣ ಮೇಷ್ಟ್ರ ಮಕ್ಕಳಾದ ಅವರಿಗಿಂತ ಮೇಸ್ತ್ರಿ ಮಗ ನಾನು ಹೆಚ್ಚು ಅಂಕ ಗಳಿಸುವುದು ಎಂದರೆ ಕಣ್ಣು  ಕೆಂಪಾಗಿಸಿತು. ನಮ್ಮ ಅತ್ತೆಗೆ ಬಹಳ ಖುಷಿ. ನನ್ನ ಅಣ್ಣನ ಮಗ ಜಾಣ ಎಂದು. ನಮ್ಮ  ಮಾವ ನಿರ್ಲಿಪ್ತ. ತಾನಾಯಿತು ತನ್ನ ಶಾಲೆಯಾಯಿತು. ಹೊತ್ತಿಗೆ ಸರಿಯಾಗಿ ಊಟವಾದರೆ ಮುಗಿಯಿತು. ಮಕ್ಕಳು ತಾವೆ ಓದಿಕೊಳ್ಳುತ್ತಾರೆ ಎಂಬ ನಂಬಿಕೆ. ಆದರೆ ಸದಾ ಆಟಗುಳಿಯಾಗಿದ್ದ ನನ್ನ ಓರಗೆಯವರೆ ತುಸು ಕಿರಿ ಕಿರಿ ಮಾಡಿಕೊಳ್ಳುತಿದ್ದರು. ಅದೂ ಪರೀಕ್ಷೆ ಮುಗಿದು ಉತ್ತರ ಪತ್ರಿಕೆ ಕೊಟ್ಟಾಗ ಮಾತ್ರ. ನಂತರ ಮತ್ತೆ ಮಾಮೂಲಿನಂತೆ ಆಟ.


No comments:

Post a Comment