Monday, August 20, 2012

ಮೌನ ವಿದಾಯ


ಹೈ
ಸ್ಕೂಲಿನ ಅವಧಿ ಮುಗಿಯುತ್ತ ಬಂದಿತು. ಶಾಲೆಯಲ್ಲಿ ಉತ್ತಮವಾಗಿ ಪಾಠ ಪ್ರವಚನಗಳು ಆಗುತ್ತಿದ್ದವು. ಹಾಗಾಗಿ ಮನೆಯಲ್ಲಿ ಹೆಚ್ಚು ಓದುವ ಅವಶ್ಯಕತೆಯೆ ಇರಲಿಲ್ಲ. ಅಲ್ಲದೆ ರಾತ್ರಿ ಹೊತ್ತಿನಲ್ಲಿ ಬೆಳಕಿಗೆ ಚಿಮಣಿ ಬುಡ್ಡಿಯನ್ನೆ ಅವಲಂಬಿಸಬೇಕಿತ್ತು. ಅದರಿಂದ ಕತ್ತಲಾದೊಡನೆ ಊಟ ಮುಗಿಸಿ ಹಾಸಿಗೆ ಹಾಸುತ್ತಿದ್ದೆವು. ಎಸ್‌ಎಸ್‌ಎಲ್‌ಸಿ ತರಗತಿಯ ಪೂರ್ವ ತಯಾರಿ ಪರೀಕ್ಷೆ ಮುಗಿದು ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆ ಹಂಚುವಾಗ ಎಲ್ಲರಿಗೂ ಒಂದು ಅಚ್ಚರಿ ಕಾದಿತ್ತು. ಯಾರ ಕಣ್ಣಿಗೂ ಬೀಳದ ಅನಾಕರ್ಷಕ ವ್ಯಕ್ತಿತ್ವದ ಹಳ್ಳಿಯ ಹುಡುಗ ತರಗತಿಗೆ ಮೊದಲ ಸ್ಥಾನ ಪಡೆದಿದ್ದ. ಅನುಕೂಲವಿದ್ದವರ, ವಿದ್ಯಾವಂತರ, ಅಧಿಕಾರಿಗಳ ಮಕ್ಕಳು ವರ್ಷದ ಮೊದಲಿನಿಂದಲೆ ಖಾಸಗಿ ಪಾಠ ಹೇಳಿಸಿಕೊಳ್ಳುತಿದ್ದರು. ಕೆಲವರಿಗಂತೂ ಶಿಕ್ಷಕರು ಮನೆಗೆ ಹೋಗಿ ಪಾಠ ಮಾಡುತಿದ್ದರು. ಆದರೆ ಇವರೆಲ್ಲರನ್ನೂ ಹಿಂದೆ ಹಾಕಿ ಹಳ್ಳಿಯ ಹುಡುಗನೊಬ್ಬ ಹೆಚ್ಚು ಅಂಕ ಗಳಿಸಿದುದು ಎಲ್ಲರ ಹುಬ್ಬು ಮೇಲೇರುವಂತೆ ಮಾಡಿತು. ಅದರಲ್ಲೂ ವಿಜ್ಞಾನದಲ್ಲಿ 88% ಬಂದದ್ದು ಆ ಶಿಕ್ಷಕರಿಗೆ ಬಹು ಖುಷಿ ಕೊಟ್ಟತು.
ವಿಜ್ಞಾನ ಶಿಕ್ಷಕರು ನಂತರ ನನ್ನನ್ನು ಕರೆಸಿ ಅವರ ಮನೆಗೆ ಪಾಠ ಹೇಳಿಸಿಕೊಳ್ಳಲು ಬರಲು ತಿಳಿಸಿದರು. ನಾನು ತುಸು ಹಿಂದೆ ಮುಂದೆ ನೋಡಿದೆ. ಎಂದಿನಿಂದ ಬರುವೆ? ಎಂದು ಒತ್ತಾಯ ಮಾಡಿದರು ನನಗೆ. ಖಾಸಗಿ ಪಾಠದ ಶುಲ್ಕ ಕೊಡಲು ಆಗುವುದಿಲ್ಲ, ಎಂದೆ.
ನಿನಗೆ ಉಚಿತವಾಗಿ ಹೇಳುವೆ. ದುಡ್ಡು ಏನೂ ಕೊಡಬೇಡ ಎಂದರು.
ನನಗೆ ಹಳ್ಳಿಯಿಂದ ಓಡಾಡಲು ತೊಂದರೆಯಾಗುವುದು, ಸಬೂಬು ಹೇಳಿದೆ.
ಇಲ್ಲಿಯೆ ಪೆಂಡಕೂರರ ಮನೆಯಲ್ಲಿ ಹೇಳುವೆ. ಅವರ ಹುಡುಗನ ಜತೆಯಲ್ಲಿ ಅವರ ಮನೆಯಲ್ಲಿಯೆ ಇದ್ದು ಓದಬಹುದು. ಪ್ರತ್ಯೇಕ ಕೋಣೆ ಇದೆ. ಅಂದರೆ ಹೊತ್ತಿಗೆ ಸರಿಯಾಗಿ ಪಾಠಕ್ಕೆ ಬರಬಹುದು. ವಾರಕ್ಕೊಮ್ಮೆ ಊರಿಗೆ ಹೋಗಿಬಾ, ಎಂದರು. ಬಹಶಃ ಅವರು ಎಲ್ಲವನ್ನೂ ಮೊದಲೆ ಯೋಚಿಸಿದಂತೆ ಕಾಣಿಸಿತು.
ಜಾಣನಾದ ಬಡ ಹುಡುಗನಿಗೆ ಸಹಾಯ ಮಾಡಬೇಕೆಂಬ ಅವರ ಸಹೃದಯತೆ ಮೆಚ್ಚಿಗೆಯಾಯಿತು. ಅವರು ಇದೆ ಮಾತು ವರ್ಷದ ಪ್ರಾರಂಭದಲ್ಲಿ ಹೇಳಿದ್ದರೆ ಒಪ್ಪುತಿದ್ದೆನೇನೂ. ಈಗ ಪರೀಕ್ಷೆ ಕೆಲವೆ ತಿಂಗಳಿರುವಾಗ ಇದೆಲ್ಲ ತೊಂದರೆಯ ವಿಷಯ ಎನಿಸಿತು.
ಅವರು ಬಹು ಬೇಡಿಕೆಯಲ್ಲಿದ್ದ ಗಣಿತದ ಶಿಕ್ಷಕರು. ಅವರಲ್ಲಿ ಪಾಠಕ್ಕೆ ಸೇರವುದು ಬಹು ಪ್ರಯಾಸದ ವಿಷಯ. ಹಣದ ವಿಷಯದಲ್ಲಿ ಬಹು ಬಿಗಿ. ಜತೆಗೆ ಬಹು ಶಿಸ್ತಿನ ವ್ಯಕ್ತಿ. ಅದೃಷ್ಟವೆ ಮನೆ ಬಾಗಿಲನ್ನು ತಟ್ಟಿತು. ಆದರೆ ಎಲ್ಲ ಹಳ್ಳಿಗರಂತೆ ನನಗೆ ಹಿಂಜರಿಕೆ. ಪಾಠ ಮತ್ತು ವಸತಿಗೆ ಅನುಕೂಲವಾಯಿತು. ಇನ್ನು ಊಟದ ವ್ಯವಸ್ಥೆ. ಊರಿನಿಂದ ಬುತ್ತಿ ತರಿಸಬೇಕು. ಇಲ್ಲವೆ ಶೆಟ್ಟರ ಮನೆಯಲ್ಲಿಯೆ ಊಟ  ಮಾಡಬಹುದಿತ್ತು.
ಬಡವರಿಗೆ ಬಿಂಕ ಬಿಗುಮಾನ ಬಹಳ. ನನಗೆ ಅಲ್ಲಿ ಇಲ್ಲಿ ಊಟ ಮಾಡಲು ಮನಸ್ಸು ಒಪ್ಪಲಿಲ್ಲ. ಊರಿನಿಂದ ತರಿಸಲು ಆಗುತ್ತಿರಲಿಲ್ಲ. ಹೇಗಿದ್ದರೂ ಚೆನ್ನಾಗಿ ಅಂಕಗಳು ಬಂದಿವೆ. ಖಾಸಗಿ ಪಾಠ ಏಕೆ? ಎಂಬ ಹುಂಬ ಧೈರ್ಯ. ಅದರಿಂದ ಅವರ ಮಾತನ್ನು ನಾನು ನಯವಾಗಿ ನಿರಾಕರಿಸಿದೆ. ಅವರಿಗೆ ತುಸು ಬೇಸರವಾಯಿತು. ವಿದ್ಯೆಯ ಬೆಲೆ ಅರಿಯದವ ಎಂದುಕೊಂಡಿರಬಹುದು.
ಏನಾದರೂ ವಿವರಣೆ ಬೇಕಿದ್ದರೆ ಬಂದು ಕೇಳು. ಪರೀಕ್ಷೆಯ ಮುನ್ನ ಬಂದು ಕಾಣು. ಅತಿ ಮುಖ್ಯವಾದ ಪ್ರಶ್ನೆಗಳನ್ನು ಹಾಗೂ ವಿಷಯಗಳನ್ನು ತಿಳಿಸುವೆ. ಅವನ್ನೆ ಶ್ರದ್ಧೆಯಿಂದ ಓದು ಎಂದರು.
ನಾನೂ ಒಪ್ಪಿ ತಲೆಯಾಡಿಸಿದೆ. ಆದರೆ ಪರೀಕ್ಷೆ ಹತ್ತಿರ ಬಂದಂತೆ ನನ್ನ ಲೋಕದಲ್ಲಿ ನಾನಿದ್ದೆ. ಅವರ ಬಳಿ ಹೋಗಬೇಕೆಂಬ ನೆನಪೆ ಆಗಲಿಲ್ಲ. ನಂತರ ಗೊತ್ತಾಯಿತು. ಅವರು ರಾಜ್ಯದಲ್ಲೆ ಹೆಸರಾಂತ ಶಿಕ್ಷಕರು. ಅನೇಕ ಸಲ ಪ್ರಶ್ನೆ ಪತ್ರಿಕೆ ತಯಾರಿಸಿರುವವರು. ಪರೀಕ್ಷೆಯ ಎಲ್ಲ ಒಳಗುಟ್ಟನ್ನೂ ಬಲ್ಲವರು. ಹಾಗಾಗಿ ಒಳ್ಳೆ ಮಾರ್ಗದರ್ಶನ ನೀಡಬಲ್ಲವರಾಗಿದ್ದರು ಎಂದು.
ಆದರೆ ಎಲ್ಲ ಶಿಕ್ಷಕರೂ ಶಾಲೆಯಲ್ಲಿಯೇ ನಿರ್ವಂಚನೆಯಿಂದ ಪಾಠ ಮಾಡುತ್ತಿದುದರಿಂದ ನನಗೆ ಹೆಚ್ಚುವರಿ ಮಾರ್ಗದರ್ಶನದ ಅಗತ್ಯ ಬೀಳಲೆ ಇಲ್ಲ.
ನಮಗೆ ಎರೂಡೂವರೆ ತಾಸು ಬರಹದ ಪರೀಕ್ಷೆ. ಎಲ್ಲ ಪ್ರಬಂಧ ಮಾದರಿ ಪ್ರಶ್ನೆಗಳು, ಕಿರು ಪ್ರಶ್ನೆ, ಜೋಡಿಸುವುದು, ಖಾಲಿಜಾಗ ತಂಬುವುದು, ಸರಿ ತಪ್ಪು ಮತ್ತು ಬಹು ಆಯ್ಕೆ ಮೊದಲಾದ ಹೊಸ ಮಾದರಿಯ ಪ್ರಶ್ನೆಗಳು ಇರತ್ತಿರಲಿಲ್ಲ. ಎಲ್ಲ ಪುಟಗಟ್ಟಲೆ ಬರೆಯಬೇಕಾದವುಗಳು. ಪರೀಕ್ಷೆಯಲ್ಲಿ ಪಾಸಾಗಲು ಅಡ್ಡದಾರಿಯ ಯೋಚನೆ ಯಾರಿಗೂ ಬರುತ್ತಿರಲಿಲ್ಲ. ಪ್ರಶ್ನೆ ಪತ್ರಿಕೆ ಕೈಗೆ ಬಂದ ನಂತರ ಅತಿತ್ತ ತಲೆ ತಿರುಗಿಸಲು ಸಮಯ ಸಿಗತ್ತಿರಲಿಲ್ಲ. ನಾನು ಪರೀಕ್ಷೆಯಲ್ಲಿ ಮೂವತ್ತರಿಂದ ಮೂವತ್ತೆರಡು ಪುಟ ಬರೆಯುತಿದ್ದ ನೆನಪು. ಪರೀಕ್ಷಾ ಮೇಲ್ವಿಚಾರಕರು ಹೆಚ್ಚುವರಿ ಹಾಳೆಗಳನ್ನು ಕೊಟ್ಟೂ ಕೊಟ್ಟೂ ಸುಸ್ತಾಗಬೇಕು.
ಎಲ್ಲರೂ ಹಾಗೆ ಬರೆಯುತಿದ್ದರು ಎಂದೇನೂ ಅಲ್ಲ. ಅರ್ಧ ಗಂಟೆಗೆ ಎದ್ದು ಹೋಗುವ ಭೂಪರು ಆಗಲೂ ಇದ್ದರು. ಆದರೆ ಸರಿಯಾಗಿ ಬರೆಯಬೇಕೆಂದರೆ ಸಮಯ ಸಾಕಾಗುತ್ತಿರಲಿಲ್ಲ. ಅನೇಕ ಸಲ ಮೇಲ್ವಿಚಾರಕರು ಬಂದು ಕೊನೆಯ ಗಂಟೆಯಾದ ಮೇಲೆ ಕೈನಿಂದ ಪೇಪರ್‌ ಕಿತ್ತುಕೊಂಡು ಹೋಗುವುದೂ ಇತ್ತು. ಈಗಿನ ಮಕ್ಕಳಿಗೆ ಅಚ್ಚರಿ ಎನಿಸಬಹುದು. ಗಣಿತ ಮತ್ತು ವಿಜ್ಞಾನದಲ್ಲಿ ಅಷ್ಟು ಬರೆಯಬೇಕಿತ್ತೆ ಎಂದು. ಆಗಿನ ವಿಧಾನವೆ ಹಾಗಿತ್ತು. ಅಂಕ ಗಣಿತದ ಪ್ರಶ್ನೆಗಳಿಗೆ ಪುಟಗಟ್ಟಲೆ ಉತ್ತರ ಬರೆಯಬೇಕಿತ್ತು. ಗಣಿತದಲ್ಲಿ ಫೈಥಾಗರಸ್‌ ಪ್ರಮೇಯವನ್ನು ಪೂರ್ತಿಯಾಗಿ ಬರೆಯಬೇಕಿತ್ತು. ಇನ್ನುಅಂತರ್‌ ವೃತ್ತ, ಬಹಿರ್‌ ವೃತ್ತ, ನೇರ ಮತ್ತು ವ್ತ್ಯತ್ಯಸ್ತ ಸಮಾನ್ಯ ಸ್ಪರ್ಶಗಳ ರಚನೆ ಮಾಡಲು ಅರ್ಧ ಗಂಟೆ ಯಾವ ಮೂಲೆಗೂ ಸಾಕಾಗುತ್ತಿರಲಿಲ್ಲ. ವಿಜ್ಙಾನದಲ್ಲಿ ಪ್ರಯೋಗಶಾಲೆಯಲ್ಲಿ ಅನಿಲಗಳ ತಯಾರಿಕೆ ಮತ್ತು ಅವುಗಳ ಗುಣಲಕ್ಷಣ ಚಿತ್ರಸಹಿತ ಬರೆಯಬೇಕಿತ್ತು. ಹೀಗಾಗಿ ಸಮಯದ ಅಭಾವ ಎನಿಸುತಿತ್ತು.
ಆದರೆ ಒಂದು ಮಾತು ಮಾತ್ರ ಸತ್ಯ. ಗಣಿತದ ಪರೀಕ್ಷೆ ಇದ್ದಾಗ ಯಾರೂ ಹಿಂದಿನ ದಿನ ಓದುತ್ತಲೆ ಇರಲಿಲ್ಲ. ಒಬ್ಬರಿಗೊಬ್ಬರು ನಾಳೆ ಲೆಕ್ಕದ ಪರೀಕ್ಷೆ ಇದೆ, ರಾತ್ರಿ ಎಲ್ಲ ಓದಬೇಕು ಎಂದು ಹಾಸ್ಯ ಮಾಡಿಕೊಳ್ಳುತ್ತಿದ್ದೆವು. ಶಾಲೆಯಲ್ಲಿಯೇ ಎಲ್ಲವನ್ನು ಮನನ ಮಾಡಿ ಕೊಂಡುದುದರಿಂದ ಗಡ್ಡಕ್ಕೆ ಬೆಂಕಿಹತ್ತಿದಾಗ ಬಾವಿ ತೋಡುವ ಅಗತ್ಯವಿರಲಿಲ್ಲ.
ನನಗೆ ಆದ ಅನುಭವ ಈಗಿನವರಿಗೆ ವಿಚಿತ್ರ ಎನಿಸಬಹುದು. ಪರೀಕ್ಷೆ ಇನ್ನೂ ಒಂದು ವಾರ ಇರುವಾಗ ನನ್ನ ಕನ್ನಡ ಪುಸ್ತಕ ಕಳೆದುಹೋಗಿತ್ತು. ಆಗ ಈಗಿನಂತೆ ಗೈಡು, ನೋಟ್ಸುಗಳ ಹಾವಳಿ ಇರಲಿಲ್ಲ. ಅಮ್ಮನನ್ನು ಹುಡುಕಿ ಕೊಡಲು ಕೇಳಿದೆ. ಅಮ್ಮನು ಮನೆ ಎಲ್ಲ ಜಾಲಾಡಿದಳು.. ಎಷ್ಟೆ ಹುಡುಕಿದರೂ ಸಿಗಲಿಲ್ಲ. ಹೊಸ ಪುಸ್ತಕ ಕೊಳ್ಳುವುದು ಯೋಚಿಸಲಾಗದ ವಿಷಯ. ಅಮ್ಮನಿಗೆ ಸ್ವಲ್ಪ ಗಾಬರಿಯಾಯಿತು. ನಾನು ಅಮ್ಮನಿಗೆ ಸಮಾಧಾನ ಹೇಳಿದೆ. ಚಿಂತೆ ಮಾಡಬೇಡಮ್ಮ. ನನಗೆ ತರಗತಿಯಲ್ಲಿ ಪಾಠ ಮಾಡುವಾಗಲೆ ಎಲ್ಲ ಮನದಟ್ಟಾಗಿದೆ. ನಿನಗೆ ನಾನು ಪಾಸಾಗಬೇಕು ತಾನೆ. ನೆಮ್ಮದಿಯಾಗಿರು ನಾನು ಖಂಡಿತ ಉತ್ತಮ ಅಂಕ ಪಡೆಯುವೆ, ಎಂದು ಭರವಸೆ ನೀಡಿದೆ. ಅದು ಒಂದು ರೀತಿ ಉಡಾಫೆ ಎನ್ನಬಹುದು. ಆದರೆ ಫಲಿತಾಂಶ ಬಂದ ಮೇಲೆ ನೋಡಿದರೆ ನನಗೆ ಕನ್ನಡದಲ್ಲಿ 92% ಅಂಕಗಳು ಬಂದಿದ್ದವು. ಅದಕ್ಕೆ ಕಾರಣ ನಮ್ಮ ಗುರುಗಳ ಪಾಠ ಮಾಡುವ ರೀತಿ. ಒಂದು ಸಲ ಶ್ರದ್ಧೆಯಿಂದ ಕೇಳಿದರೆ ಮರೆಯುವ ಮಾತೇ ಇಲ್ಲ.
ಫಲಿತಾಂಶ ಬಂದಿತು. ಆಗ ಫಲಿತಾಂಶ ಪತ್ರಿಕೆಯಲ್ಲಿ ಪ್ರಕಟವಾಗುತಿತ್ತು ನಾನು ಪ್ರಥಮ ದರ್ಜೆಯಲ್ಲಿ ಪಾಸಾದೆ. ಶಾಲೆಗೆ ಹೋಗಿ ನೋಡಿದಾಗ ನಾನು ಶಾಲೆಗೆ ಮಾತ್ರವಲ್ಲ ಪರೀಕ್ಷಾ ಕೇಂದ್ರಕ್ಕೆ ಪ್ರಪ್ರಥಮನಾಗಿದ್ದೆ. ಆಗ ಎರಡು ಮೂರು ತಾಲೂಕಿಗೆ ಒಂದು ಪರಿಕ್ಷಾ ಕೇಂದ್ರವಿರುತಿತ್ತು. ದೊಡ್ಡ ಶಾಲೆಯಲ್ಲಿಯೆ ಪರೀಕ್ಷಾಕೇಂದ್ರ.. ಬೇರೆ ಊರಿನಿಂದ ಶಿಕ್ಷಕರೆ ಮಕ್ಕಳನ್ನು ಕರೆದುಕೊಂಡು ಬಂದು ಛತ್ರದಲ್ಲಿ ಇಳಿದುಕೊಂಡು ಪರೀಕ್ಷೆ ಮುಗಿಯುವವರೆಗೆ ಜತೆಯಲ್ಲೆ ಇದ್ದು ಅವರಿಗೆ ತರಬೇತಿ ನೀಡುತಿದ್ದರು. ಕೆಲವರು ತಮ್ಮ ನೆಂಟರ ಪರಿಚಿತರ ಮನೆಯಲ್ಲೂ ಉಳಿದುಕೊಳ್ಳುವರು. ಅದು ಒಂದು ಸಂಭ್ರಮದ ವಿಷಯ. ನಮ್ಮ ಹುಡುಗ ಎಸ್‌ಎಸ್ಎಲ್ಸಿ ಪರೀಕ್ಷೆ ಕಟ್ಟಿರುವನು ಎಂಬುದೆ ಹೆಮ್ಮೆಯ ವಿಷಯ. ಅವರಿಗೆ ಉಚಿತ ವ್ಯವಸ್ಥೆ ಮಾಡುವ ಸಂಘ ಸಂಸ್ಥೆಗಳು ಇದ್ದವು.. ರೊಟ್ಟಿ ಬುತ್ತಿ ಕಟ್ಟಿಕೊಂಡು ಬರುವವರೂ ಇದ್ದರು.
ವರ್ಗಾವಣೆ ಪತ್ರ ಪಡೆಯಲು ಮುಖ್ಯೋಪಾಧ್ಯಾಯರ ಬಳಿಗೆ ಹೋಗಬೇಕಿತ್ತು. ಅಲ್ಲಿ ಹೊದಾಗ ನಮ್ಮ ಇತರ ಶಿಕ್ಷಕರೂ ಅಲ್ಲಿಯೆ ಕುಳಿತಿದ್ದರು. ಅವರು ಫಲಿತಾಂಶವನ್ನು ವಿಶ್ಲೇಷಿಸುತ್ತಲಿದ್ದರು.
ಅವರಲ್ಲಿ ಒಬ್ಬರು, ಇದೇನು ಸಾರ್‌ ನಮ್ಮ ಪ್ರೆಸಿಡೆಂಟ್‌ರ ಮಗ ಬಹು ಜಾಣ. ಅವನೆ ಶಾಲೆಗೆ ಪ್ರಪ್ರಥಮನಾಗಬೇಕಿತ್ತು. ಅವನಲ್ಲದಿದ್ದರೆ ಲಾಯರ್‌ ಮಗನಾದರೂ ಬರಬೇಕಿತ್ತು ಎಂದು ಹಲುಬುತಿದ್ದರು. ಅವರಲ್ಲಿ ಒಬ್ಬರು ಆ ಹುಡುಗರ ಮನೆಪಾಠ ಹೇಳುತಿದ್ದವರು. ನಾನು ಅಲ್ಲಿ ಪೆಚ್ಚಾಗಿ ನಿಂತಿದ್ದೆ. ಕೇಂದ್ರಕ್ಕೆ ಪ್ರಪ್ರಥಮನಾಗಿ ಬಂದಿದ್ದರೂ ನನ್ನನ್ನು ಮಾತನಾಡಿಸುವ ಗೋಜಿಗೆ ಯಾರೂ ಹೋಗಲಿಲ್ಲ. ಮುಂದೆ ಏನು ಮಾಡುವೆ? ಎಲ್ಲಿ ಕಾಲೇಜು ಸೇರುವೆ ಎಂದೂ ಕೇಳಲಿಲ್ಲ. ನಾನು ನನ್ನ ವರ್ಗಾವಣೆ ಮತ್ತು ನಡತೆ ಪ್ರಮಾಣ ಪತ್ರಕ್ಕೆ ಮುಖ್ಯಸ್ಥರ ಸಹಿ ಪಡೆದು ಹೊರ ಬಂದೆ. ಯಾಕೋ ನನಗೆ ಅನಾಥಪ್ರಜ್ಞೆ ಕಾಡಿತು. ಮೇಲುವರ್ಗ ಕೀಳುವರ್ಗ ಎಂಬುದು ಹುಟ್ಟಿನಿಂದ ಬರುವುದು ಎಂಬ ನಂಬಿಕೆ ಇದೆ. ಆದರೆ ನೈಜವಾಗಿಯೂ ಇರುವುದು ಎರಡೆ ವರ್ಗ ಬಡವರು ಮತ್ತು ಶ್ರೀಮಂತರು. ಎಂಬ ಸತ್ಯದರ್ಶನವಾಯಿತು. ಮುಂದೆ ಕಾರ್ಲ್ ಮಾರ್ಕ್ಸ್ ಸಹ ಅದೇ ವಾದ ಮಂಡಿಸಿರುವುದು ತಿಳಿಯಿತು. ಗ್ರಾಮೀಣ ಮತ್ತು ನಗರವಾಸಿಗಳ ನಡುವಿನ ಅಂತರದ ಅರಿವಾಯಿತು. ಏಳುವರ್ಷ ಓದಿದ ಶಾಲೆಗೆ ಮೌನವಿದಾಯ ಹೇಳಿದೆ.
ಮುಂದೆ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ಇಟ್ಟುಕೊಂಡು ರೋಟರಿ ಸಂಸ್ಥೆಯ ವತಿಯಿಂದ ಬಹುಮಾನ ನೀಡಿದರಂತೆ. ಮಾಹಿತಿಯ ಕೊರತೆಯಿಂದ ಸಮಾರಂಭಕ್ಕೆ ಹೋಗಲಾಗಲಿಲ್ಲ. ಆದರೆ ನಂತರವಾದರೂ ಹೋಗಿ ಪಾರಿತೋಷಕವನ್ನು ಪಡೆಯಲು ಯಾಕೋ ಅಭಿಮಾನ ಅಡ್ಡಬಂದಿತು. ಹತ್ತಾರು ವರ್ಷಗಳ ನಂತರ ಹೋದಾಗ ಅಲ್ಲಿದ್ದ ಪ್ರತಿಭಾ ಪುರಸ್ಕೃತರ ಫಲಕದ ಮೇಲೆ ನನ್ನ ಹೆಸರೂ ಬರೆದಿರುವುದು ನೋಡಿ ಸಂತೋಷವಾಯಿತು.
ಮೊನ್ನೆ ಊರಿಗೆ ಹೋದಾಗ ನನ್ನ ಮೊಮ್ಮಗಳು ತಾತನ ಶಾಲೆ ನೋಡಲು ಹೋಗಿದ್ದಳು. ಈಗ ಅಲ್ಲಿ ಒಂದೆ ಕಟ್ಟಡದಲ್ಲಿ ಮೂರು ವಿದ್ಯಾಸಂಸ್ಥೆಗಳು ಇವೆಯಂತೆ. ಹೈಸ್ಕೂಲು, ಪದವಿ ಪೂರ್ವಕಾಲೇಜು ಮತ್ತು ಪ್ರಥಮದರ್ಜೆ ಕಾಲೇಜು. ಆದರೆ, ಮೊದಲಿನ ಗುಣಮಟ್ಟ, ಹಿರಿಮೆ ಈಗಿಲ್ಲ. ಖಾಸಗಿ ಶಾಲೆಗಳ ಪೈಪೋಟಿಯಲ್ಲಿ ನಮ್ಮ ಪ್ರತಿಷ್ಠಿತ ಹೈಸ್ಕೂಲು ಹಿನ್ನೆಡೆ ಪಡೆದಿದೆ. ಸಾವಿರಾರು ಮಕ್ಕಳು ಕಲಿಯುತಿದ್ದ ಜಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೆಲವೆ ನೂರಕ್ಕೆ ಇಳಿದಿದೆ. ಎಲ್ಲ ಸರ್ಕಾರಿ ಸಂಸ್ಥೆಗಳಂತೆ ಅದೂ ದೀನಾವಸ್ಥೆ ತಲುಪಿದೆ. ಜನರು ಇಂಗ್ಲಿಷ್ ಮಾಧ್ಯಮದ ಮರೀಚಿಕೆಯ ಬೆನ್ನು ಹತ್ತಿರುವುದೆ ನೂರಾರು ಕನ್ನಡ ಸರಕಾರಿ ಶಾಲೆಗಳು ಮುಚ್ಚುತ್ತಿರುವುದರ ಹಿಂದಿನ ನಿಜವಾದ ಕಾರಣ. ಕನ್ನಡ ಶಾಲೆಗಳು ಮುಚ್ಚುತ್ತಿರುವುದಕ್ಕೆ ಸರ್ಕಾರದ ನಿರ್ಲಕ್ಷ್ಯ ಮತ್ತು ಶಿಕ್ಷಕರ ನಿಷ್ಕಾಳಜಿ ಎಂದು ಬೊಬ್ಬೆ ಹೊಡೆಯುತ್ತಿರುವುದು ವಿಪರ್ಯಾಸ.
ಪ್ರತಿಭಾ ಪುರಸ್ಕತರ ಪಟ್ಟಿಯಲ್ಲಿ ತಾತನ ಹೆಸರು ನೋಡಲು ಬಯಸಿ ರೋಲ್‌ ಆಫ್ ಆನರ್‌ ಎಲ್ಲಿದೆ ಎಂದು ಕೇಳಿದಾಗ. ಅದು ಎಷ್ಟು ಹುಡುಕಿದರೂ ಸಿಗಲೆ ಇಲ್ಲ. ಹೊಸದೂ ಇಲ್ಲ, ಹಳೆಯದೂ ಇಲ್ಲ. ಗುಜರಿಗೆ ಹಾಕಿರುವುದಾಗಿ ಅಲ್ಲಿನ ಅತ್ಯಂತ ಹಿರಿಯ ನೌಕರರೊಬ್ಬರು ತಿಳಿಸಿದರು. ಅದೃಷ್ಟಕ್ಕೆ ಶಾಲೆಯ ಆರಂಭದ ಕಾಲದ ಹಿರಿಯ ಮುಖ್ಯೋಪಾಧ್ಯಾಯ ಎಂ.ಎಂ. ಭಟ್ಟರ ಭಾವಚಿತ್ರ ಇದೆ ಎಂದು ಕೇಳಿ ನೆಮ್ಮದಿಯಾಯಿತು. ಹಳೆಯ ಜನರೆ ಎಲ್ಲ ಇದ್ದೂ ಏನೂ ಇಲ್ಲದವರಾಗುತ್ತಿರುವ ಈ ದಿನ ಮಾನಗಳಲ್ಲಿ ಹಳೆಯ ವಸ್ತುಗಳನ್ನೆಲ್ಲ ಇಟ್ಟುಕೊಳ್ಳಲು ಹೈಸ್ಕೂಲು ವಸ್ತು ಸಂಗ್ರಹಾಲಯವೆ!
ಆದರೆ ಆಗಿನ ಅನುಭವ ನನ್ನ ಮೇಲೆ ಬಹು ಒಳ್ಳೆಯ ಪರಿಣಾಮ ಬೀರಿತು. ನನ್ನ ಸೇವಾವಧಿಯಲ್ಲಿ  ಹಳ್ಳಿಗರ ಮತ್ತು ಹಿಂದುಳಿದವರ ಪರ ಕಾಳಜಿಯನ್ನ ಹೆಚ್ಚಿಸಿತು. ಪಾಠ ಪ್ರವಚನದ ಜತೆಗೆ ಒಂದೆರಡು ಉತ್ತೇಜನಕಾರಿಯಾದ ಮಾತನಾಡಿದರೆ, ಅವರಿಗೆ ಇನ್ನಿಲ್ಲದ ಆತ್ಮವಿಶ್ವಾಸ ಬರುವುದು. ಸಿರಿವಂತರಿಗೆ, ಸುಶಿಕ್ಷಿತರ ಮಕ್ಕಳಿಗೆ ಮನೆಯಲ್ಲಿ ಮಾರ್ಗದರ್ಶನ ಸಿಗುವುದು. ಅವರಿಗೆ ಅನೇಕ ಅವಕಾಶಗಳು ಲಭ್ಯ. ಆದರೆ ಹಳ್ಳಿಗರದು ಹಾಗಲ್ಲ, ಆ ಕಾಲೇಜು ಎಂದರೆ ಕಣ್ಣು ಕಟ್ಟಿ ಕಾಡಲ್ಲಿ ಬಿಟ್ಟಂತೆ. ತುಸುವೆ ಕಾಳಜಿ ತೋರಿದರೂ, ಮಕ್ಕಳು ನಮ್ಮ ಪಾಠ ಮರೆತರೂ, ಅವರ ಪ್ರೀತಿವಿಶ್ವಾಸ ಮಾತ್ರ ಸದಾ ಹಸಿರು. ಎದೆಯುದ್ದದ ಮಕ್ಕಳು ಇದ್ದರೂ ನನ್ನನ್ನು ಕಂಡಾಗ ಕೈಕಟ್ಟಿ ನಿಲ್ಲುವ ಪರಿ, ಮೂವತ್ತು ನಲವತ್ತು ವರ್ಷದ ಹಿಂದಿನ ವಿದ್ಯಾರ್ಥಿಗಳು ಹುಡುಕಿಕೊಂಡು ಬಂದು ತಮ್ಮ ಮಕ್ಕಳಿಗೆ ಪರಿಚಯ ಮಾಡಿಸಿ, ಅವರಿಂದಲೂ ನಮಸ್ಕಾರ ಮಾಡಿಸಿ ಇವರಿಂದಲೆ ನಾವು ಮುಂದೆ ಬಂದೆವು ಎಂದಾಗ ಆಗುವ ಸಂತೋಷ ಅನುಭವಿಸಿಯೆ ತಿಳಿಯಬೇಕು.

1 comment: