Monday, August 20, 2012

ಶಾಲೆಯಲ್ಲೇ ಸರ್ಕಸ್‌ ಟಿಕೆಟ್ಟು


ಮು
ತ್ತುರಾಜ್‌ ಸಿನಿಮಾಗೆ ಸೇರಿ ರಾಜಕುಮಾರ್‌ ಎಂದು ಹೆಸರಾದ ಮೇಲೂ ಅವರು ಮತ್ತೆ ಮತ್ತೆ ನಮ್ಮ ಊರಿಗೆ ಬರುತಿದ್ದರು. ಆಗ ರಾಜಕುಮಾರ್‌, ಜಿವಿ ಅಯ್ಯರ್‌, ನರಸಿಂಹರಾಜು ಮತ್ತು ಬಾಲಕೃಷ್ಣ ಒಟ್ಟಾಗಿ ನಾಟಕವಾಡುತಿದ್ದರು. ಅವರ ಜತೆ ಪಂಡರಿಬಾಯಿ ನಾಯಕ ನಟಿ. ಕನ್ನಡ ಸಿನೆಮಾಗಳು ಅಷ್ಟು ಹೆಚ್ಚಾಗಿ ಇರುತ್ತಿರಲಿಲ್ಲ ಪುರುಸೊತ್ತು ಇದ್ದಾಗಲೆಲ್ಲ ಅವರು ಬಂದು ಅಭಿನಯಿಸುತಿದ್ದ ನಾಟಕಗಳು ಬಹು ಜನಪ್ರಿಯವಾಗಿದ್ದವು.
ನಮ್ಮ ತಾಯಿಗೆ ಪಂಡರಿಬಾಯಿ ತುಂಬ ಪರಿಚಯ. ಬೆಂಗಳೂರಿನಲ್ಲಿ ನಮ್ಮ ಸೋದರ ಮಾವನ ನೆರೆಯವರು. ಅವರು ಚಿಕ್ಕವರಿದ್ದಾಗ ಅಣ್ಣಂದಿರ ಜತೆ ಅವರು ಹರಿಕಥೆ ಮಾಡಲು ಹೋಗುತಿದ್ದರಂತೆ. ಆಗ ಮಲ್ಲೇಶ್ವರದ ೮ನೆ ಕ್ರಾಸಿನಲ್ಲಿ  ದತ್ತಾತ್ರೇಯ ಗುಡಿಯ ಆವರಣದಲ್ಲಿ ನಮ್ಮಮಾವನ ಮನೆಯ ಪಕ್ಕದಲ್ಲಿದ್ದರು. ಅದು ಇನ್ನೂ ಸಿನೆಮಾ ನಟಿಯಾಗುವ ಮುಂಚಿನ ಕಾಲ. ಅವರು ಅಷ್ಟು ಅನುಕೂಲಸ್ಥರಾಗಿರಲಿಲ್ಲ. ರಾಜಾ ಮಿಲ್‌ ಸೊಸೈಟಿಯಲ್ಲಿ ಕೆಲಸ ಮಾಡುತಿದ್ದ ನಮ್ಮ ಮಾವನ ಮನೆಯಲ್ಲಿ ಆ ಯುದ್ಧಾನಂತರದ ಕಾಲದಲ್ಲಿ ದಿನಸಿ ಕೊರತೆ ಇರಲಿಲ್ಲ. ಬಚ್ಚಲ ಮನೆಯಲ್ಲಿ ಇಟ್ಟಿದ್ದ ಗೋದಿ ಹಿಟ್ಟಿನ ಚೀಲ ಬೂಸ್ಟು ಹಿಡಿದು ಹೋಗಿತ್ತಂತೆ. ಅದನ್ನು ನೋಡಿದ ಅವರು: ವಿಶಾಲಮ್ಮ, ನೀವೆ ಪುಣ್ಯವಂತರು, ಮನೆಯಲ್ಲಿ ಚೀಲಗಟ್ಟಲೆ ದಿನಸಿ ಇದೆ ಎನ್ನುವರು. ಆಗೀಗ ಕಡ ಕೊಡುವುದು ತೆಗೆದುಕೊಳ್ಳುವುದು ನಡೆಯುತಿತ್ತು. ಚಿಕ್ಕವನಾದ ನನ್ನನ್ನು ಕರೆದುಕೊಂಡು ಬೆಂಗಳೂರಿಗೆ ಹೋದ ನಮ್ಮ ಅಮ್ಮ ಅಲ್ಲಿ ತಿಂಗಳುಗಟ್ಟಲೆ ಇರುವುದು ವಾಡಿಕೆ.  ಅಲ್ಲಿ ಹೆಚ್ಚು ಮನೆಗಳು ಇರಲಿಲ್ಲ. ಆಗ ಎಲ್ಲೆಲ್ಲೂ ಬಯಲು. ಅಲ್ಲೊಂದು ಇಲ್ಲೊಂದು ಮನೆ. ಮನೆಯ ಮುಂದಿನ ಚರಂಡಿಯ ತುದಿಯೆ ನಮಗೆಲ್ಲ ಕಕ್ಕಸು. ಅಲ್ಲಿ ಕುಳಿತಾಗ ತಲೆಯ ಮೇಲೆ ಆಕಾಶದಲ್ಲಿ ಆಗೀಗ ಹಾರಾಡುತಿದ್ದ ವಿಮಾಗಳನ್ನು ಮೈ ಮರೆತು ನೋಡುತಿದ್ದ ನೆನಪು ಮಾತ್ರ ಇದೆ. ಪಂಡರಿಬಾಯಿಯವರ ನೆನಪು ಇಲ್ಲ.
ಆದರೆ ಅವರು ಮದರಾಸಿಗೆ ಹೋದರೂನ ಮ್ಮ ತಾಯಿಯವರನ್ನು ಮರೆತಿರಲಿಲ್ಲ. ನಾಟಕಕ್ಕೆನಮ್ಮೂರಿಗೆ ಬಂದಾಗ ಅಮ್ಮನನ್ನು ಕಂಡು ಪ್ರೀತಿಯಿಂದ ಮಾತನಾಡಿಸಿದರು. ಆಮೇಲೆ ನಮ್ಮ ಮನೆಗೆ ಬಂದಿದ್ದರು. ನನ್ನನ್ನು ನೋಡಿ ಏನು ನಮ್ಮ ಕಡ್ಡಿ ಪೈಲವಾನ ದಪ್ಪವೆ ಆಗಿಲ್ಲ, ಎಂದು ಹಾಸ್ಯ ಮಾಡಿದರು. ನಮ್ಮ ಅಮ್ಮ, ಏನಮ್ಮ ಪಂಡರಿ ಸಿನೆಮಾ ತಾರೆಯಾದರೂ ನಿನ್ನ ಕುಬಸದ ತೋಳು ಮೊದಲಿನಂತೆಯೆ ಇದೆಯಲ್ಲಾ? ಎಂದು ಕೇಳಿದರು. ಕಾರಣ ನಿನಗೆ ಗೊತ್ತಲ್ಲ ಎಂದು ಅವರು ಮುಗುಳುನಕ್ಕರು.ತುಂಬುತೋಳಿನ ಪಂಡರಿಬಾಯಿ
ಆ ದಿನ ಮಾನಗಳಲ್ಲಿ ಬಫ್ ತೋಳಿನ ಬ್ಲೌಜು ಜನಪ್ರಿಯ. ವಸಂತ ಸೇನೆ ಸಿನಿಮಾದ ನಾಯಕಿಯದೂ ಮುಕ್ಕಾಲು ತೋಳು ಕಾಣುವ ಡುಬರಿ ಇರುವ ತೋಳಿನ ರವಿಕೆ.. ಅದು ಕ್ರಮೇಣ ಕೆಳಗೆ ಇಳಿದು ಪೂರ್ಣ ತೋಳು ಫ್ಯಾಷನ್‌ ಅಗಿ ಕಾಲ ಕಳೆದಂತೆ ಮತ್ತೆ ಮೇಲೇರಿ ಕೊನೆಗೆ ಮಾಯವಾಗಿ ತೋಳಿಲ್ಲದ ರವಿಕೆ ಚಾಲತಿಗೆ ಬಂತು. ಈಗಂತೂ ಬೆನ್ನಿಲ್ಲದ ಕರ ಪತ್ರದ ಅಗಲದ ರವಿಕೆಗಳು ಬಂದಿವೆ. ಆದರೆ ಪಂಡರಿಬಾಯಿ ಮಾತ್ರ ನಾಯಕಿಯಾದಾಗಿನಿಂದ ಅಜ್ಜಿ ಪಾತ್ರ ಮಾಡಿದಾಗಲೂ ಅರ್ಧ ತೋಳಿನ ರವಿಕೆಯನ್ನೆ ಧರಿಸುತಿದ್ದರು. ನಾನು ಯಾವಾಗಲೋ ಒಮ್ಮೆ ಅಮ್ಮನನ್ನು ಈ ವಿಷಯ ಕೇಳಿದೆ. ಆಗ ಅವರು ಪಂಡರಿಬಾಯಿಗೆ ತೋಳಿನ ಮೇಲೆ ಗಾಯದ ಗುರುತು ಇದೆ. ಅದಕ್ಕೆ ಯಾವಾಗಲೂ ಆ ರೀತಿಯ ರವಿಕೆ ಮಾತ್ರ ಧರಿಸುವರು ಎಂದು ತಿಳಿಸಿದರು. ಆದರೆ ಅನಿವಾರ್ಯವಾಗಿ ಅವರು ಧರಿಸಿದ್ದೆ ಸಂಪ್ರದಾಯಸ್ಥ ಮಹಿಳೆಯರ ಕುರುಹಾಗಿ ಉಳಿದಿದೆ.
ಅವರು ಆಗ ಆಡುತಿದ್ದ ಸದಾರಮೆ, ಸಾಹುಕಾರ ಮತ್ತು ಬೇಡರಕಣ್ಣಪ್ಪ ನಾಟಕಗಳು ಬಹಳ ಜನಪ್ರಿಯ. ಅದರಲ್ಲೂ ನರಸಿಂಹರಾಜು ಅವರು ಊಟಕ್ಕೆ ಬಾ ಎಂದಕೂಡಲೆ ಕ್ಷಣಾರ್ಧದಲ್ಲಿ ಅಂಗಿ ಬನಿಯನ್ನುಗಳನ್ನು ಕಿತ್ತೆಸೆದು ಬರಿ ಮೈನಲ್ಲಿ ನಿಲ್ಲುತಿದ್ದುದು ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಂತೆ ನಗಿಸುತಿತ್ತು. ಜಿವಿ ಅಯ್ಯರದು ತಂದೆಯ ಪಾತ್ರ, ನರಸಿಂಹರಾಜು ಮಗ. ನಾಟಕದಲ್ಲಿ ತಂದೆ ಮಗನನ್ನು ಕಾಶಿ ಎಂದು ಗದರಿಸಿದಾಗ, ನರಸಿಂಹರಾಜು ಅವರು `ನೀನು ಸುಮ್ಮನಿದ್ದರೆ ವಾಸೀಎಂದು ಉತ್ತರ ಕೊಡುವ ದಾಟಿ ಇನ್ನೂ ನೆನಪಿದೆ. ಆದೆಲ್ಲ ನಮ್ಮ ನೆನಪಲ್ಲಿ ಉಳಿಯಲು ಇನ್ನೊಂದು ಕಾರಣವಿದೆ. ಇವರ ನಾಟಕದ ಕಂಟ್ರಾಕ್ಟ್‌ ಅನ್ನು ನಮ್ಮ ಹರಿಹರದ ಸೋದರ ಮಾವಂದಿರು ಹಿಡಿದಿದ್ದರು. ಅದರಿಂದ ನಮಗೆ ನಿತ್ಯ ನಾಟಕ ನೋಡಲು ಅವಕಾಶವಿತ್ತು.
ಹೊಸಪೇಟೆ ಒಂದು ರೀತಿಯಲ್ಲಿ ಕಲಾ ಪೋಷಕ ಪ್ರದೇಶವೆಂದೆ ಹೆಸರಾಗಿತ್ತು. ಅಲ್ಲಿಗೆ ಬರುವ ನಾಟಕ ಕಂಪನಿಗಳ ಪೈಕಿ ಗುಬ್ಬಿ ವೀರಣ್ಣನವರ ಗುಬ್ಬಿ ಚೆನ್ನಬಸವೇಶ್ವರ ನಾಟಕ ಮಂಡಳಿಯು ಬಹು ಜನಪ್ರಿಯ.ಅವರ ಎರಡು ನಾಟಕಗಳಂತೂ ಬಹು ಹೆಸರುವಾಸಿ. ಕುರುಕ್ಷೇತ್ರ ಮತ್ತು ದಶಾವತಾರ ತಿಂಗಳುಗಟ್ಟಲೆ ನೆಡಯುತಿದ್ದವು. ದಶಾವತಾರದ ಮೊದಲ ಅಂಕದಲ್ಲಿ ವೈಕುಂಠದ ಬಾಗಿಲು ತೆರೆದುಕೊಳ್ಳುವ ದೃಶ್ಯ ಅಮೋಘ. ಹಾಲುಕಡಲಲ್ಲಿ ಆದಿಶೇಷನ ಮೇಲೆ ಮಲಗಿದ ವಿಷ್ಣು ಪರಮಾತ್ಮನನ್ನು ನೋಡಿ ಜೀವನ ಪಾವನವಾಯಿತೆಂಬ ಧನ್ಯತಾಭಾವವನ್ನು ಪ್ರೇಕ್ಷಕರು ಪಡೆಯುತಿದ್ದರು. ಭಾವುಕರು ಕೈ ಕೈ ಮುಗಿಯುತಿದ್ದರು. ಕುರುಕ್ಷೇತ್ರದಲ್ಲಂತೂ ಮೊದಲು ಜೀವಂತ ಕುದುರೆಗಳೆ ರಂಗದ ಮೇಲೆ ಬರುತಿದ್ದವಂತೆ. ಅರ್ಜುನನ ಮೇಲೆ ಕರ್ಣ ಸರ್ಪಾಸ್ತ್ರ ಬಿಟ್ಟಾಗ ಕೃಷ್ಣ  ಬೆರಳಿನಿಂದ ಕೆಳಗೆ ಒತ್ತಿದಾಗ ರಥವು ತಟ್ಟನೆ ಅರ್ಧ ಅಡಿ ಕುಸಿಯುವುದು ಅಚ್ಚರಿಯ ವಿಷಯವಾಗಿತ್ತು. ಅರ್ಜುನನ ತಲೆ ಕತ್ತರಿಸುವ ಬದಲು ಬಾಣವು ಕೀರೀಟವನ್ನು ಮಾತ್ರ ಹೊತ್ತೊಯ್ಯುವುದನ್ನು ತೆರೆದ ಬಾಯಿಯಿಂದ ಜನ ನೋಡುತಿದ್ದರು. ನಂತರದ ಅವರ ಲವ ಕುಶ ನಾಟಕದಲ್ಲಿ ವಯಸ್ಸಾದರೂ ಗುಬ್ಬಿ ವೀರಣ್ಣನವರು ಮತ್ತು ಜಯಮ್ಮ ಮಾಡುತಿದ್ದ ಅಗಸ ದಂಪತಿಗಳ ಪಾತ್ರ ಎಲ್ಲರನ್ನೂ ನಗೆ ಗಡಲಲ್ಲಿ ತೇಲಿಸುತಿತ್ತು. ಅಷ್ಟು ವಯಸ್ಸಾದರೂ, ಗಂಟಲು ಗೊಗ್ಗರಾದರೂ ಅವರ ಲವಲವಿಕೆ ಮತ್ತು ಸಮಯ ಸ್ಪೂರ್ತಿಯಿಂದ ಪಾತ್ರಕ್ಕೆ ಜೀವ ತುಂಬುತಿದ್ದರು. ಲವ ಕುಶನ ಪಾತ್ರ ಮಾಡುತ್ತಿದ್ದವರು ಅವಳಿ ಹುಡುಗೆಯರು ಅಂದು ತಿಳಿದು ನಮಗೆಲ್ಲ ನಂಬಲು ಆಗುತ್ತಿರಲಿಲ್ಲ. ಅಷ್ಟು ನೈಜವಾಗಿರುತಿತ್ತು ಅವರ ಅಭಿನಯ. ನಟಿ ಶೃತಿ ಅವರ ಮಗಳು ಎಂದು ಗೊತ್ತಾದ ಮೇಲೆ ಕಲೆಯು ವಂಶಪಾರಂಪರೆಯಾಗಿ ಬಳುವಳಿಯಾಗಿ ಬಂದಿರುವುದು ಸಹಜ ಎಂದುಕೊಂಡೆ.
ನಾಟಕದಲ್ಲಿ ದೃಶ್ಯ ಬದಲಾವಣೆಗೆ ಸಮಯವೆ ಹಿಡಿಯುತ್ತಿರಲಿಲ್ಲ. ದೀಪ ಆರಿ ಗಂಟೆಯ ಸದ್ದು ನಿಲ್ಲುವ ಮೊದಲೆ ಅರಮನೆಯು ಕಾಡಾಗಿ ಬದಲಾಗುತಿತ್ತು. ಅದಕ್ಕೆ ತಿರುಗುವ ರಂಗಮಂಟಪದ ತಂತ್ರ ಜ್ಞಾನ ಬಳಸುವರು ಎಂದು ನಂತರ ಗೊತ್ತಾಯಿತು. ರಂಗದ ಪರಿಕರಗಳೆ ನಾಲಕ್ಕಾರು ಲಾರಿ ತುಂಬ ಬರುತಿದ್ದವು. ನಾಟಕ ನೋಡಲು ಸುತ್ತ ಮುತ್ತಲ ಹಳ್ಳಿಗಳಿಂದ ಬಂಡಿ ಕಟ್ಟಿಕೊಂಡು ಬರುವರು. ನಾಟಕದ ಥೇಟರ್‌ ಸುತ್ತಲೂ ನೂರಾರು ಎತ್ತಿನ ಬಂಡಿಗಳು ಬೀಡು ಬಿಡುತಿದ್ದವು.
ಶಾಲಾ ಮಕ್ಕಳು ಕಾತುರದಿಂದ ಕಾಯುತಿದ್ದುದು ಸರ್ಕಸ್‌ ನೋಡಲು. ಅಲ್ಲಿನ ಪ್ರಾಣಿಗಳಂತೂ ಮಕ್ಕಳಿಗೆ ಹೆಚ್ಚಿನ  ಆಕರ್ಷಣೆ. ಆನೆ, ಕುದುರೆ, ಒಂಟೆಗಳು ಹಗಲಲ್ಲಿ ಊರ ಬೀದಿಯಲ್ಲಿ ಮೆರವಣಿಗೆ ಹೊರಡುವವು. ಅವುಗಳ ಸವಾರಿಗೂ ಅವಕಾಶವಿತ್ತು. ಅವುಗಳಿಗೆ ಉಚಿತ ಆಹಾರ ಜೊತೆಗೆ ಕಂಪನಿಗೆ ಸಾಕಷ್ಟು ಪ್ರಚಾರ ದೊರೆಯುತಿತ್ತು. ಸೈಕಲ್‌ ತುಳಿವ ಆನೆ, ಹುಲಿಯ ಬಾಯಲ್ಲಿ ತಲೆ ಇಡುವ ಹುಡುಗಿ, ನೃತ್ಯ ಮಾಡುವ ಕುದುರೆಗಳು ನಗೆ ಬುಗ್ಗೆ ಉಕ್ಕಿಸುವ ಜೋಕರುಗಳು ಮಕ್ಕಳನ್ನು ಸೂಜಿಗಲ್ಲಿನಂತೆ ಆರ್ಷಿಸುತಿದ್ದವು. ಕಮಲಾ ತ್ರೀ ರಿಂಗ್‌ ಸರ್ಕಸ್‌ ಅಂತೂ ಬಹು ವಿಸ್ಮಯಕಾರಿಯಾಗಿತ್ತು. ಒಂದೆ ಸಲ ಮೂರು ಕಡೆಯಲ್ಲಿ ಒಂದೆ ರೀತಿಯ ಪ್ರದರ್ಶನ. ಬಟ್ಟೆ ಬರೆ, ಆಕಾರ ಆಕೃತಿ ಎಲ್ಲ ಒಂದೆ ತರಹ. ಕಲಾವಿದರೂ ಮತ್ತು ಪ್ರಾಣಿಗಳೂ ಸಹ ತ್ರಿವಳಿಗಳಂತೆ ಗೋಚರವಾಗುತಿದ್ದವು. ಜೋಕರುಗಳು ಸಹಾ ಹಾಗೆಯೇ. ಜತೆಗೆ ಸರಕಸ್ಸಿನಲ್ಲಿ ಜೋಕಾಲಿ ಜೀಕುವ ಪರಿ ಎಲ್ಲರ ಮನ ಸೆಳೆಯುತಿತ್ತು ಈ ಸರ್ಕಸ್ಸು ಪ್ರದರ್ಶಿಸುವ ಪ್ರತಿಯೊಂದೂ ಅಂಶವು ಒಂದೆ ರೀತಿ. ಮೂರರಲ್ಲಿ ಯಾವುದು ನೋಡಿದರೂ ಒಂದೆ. ಅಷ್ಟು ಹೊಂದಾಣಿಕೆ.. ಅದು ಬಂದಾಗ ರಾತ್ರಿಯಲ್ಲಿ ಅವರು ಬಿಡುವ ಸರ್ಚ ಲೈಟ್‌ ಸುತ್ತಲ ಹತ್ತಾರು ಊರಿಗೆ ರಾತ್ರಿಯಲ್ಲಿ ಕತ್ತಲ ಆಕಾಶದಲ್ಲಿ ಚಲಿಸುವ ಬೆಳಕಿನ ಕಂಬದಂತೆ ಕಾಣುತಿತ್ತು. ಇನ್ನೂ ಚಿಮಣಿ ಎಣ್ಣೆಯ ಮಿಣುಕು ದೀಪದಲ್ಲಿರುವ ನಮಗೆಲ್ಲ ಅದೆ ದೊಡ್ಡ ಆಕರ್ಷಣೆ. ಆಗಿನ ಸರ್ಕಸ್‌ ಒಂದು ರೀತಿಯ ಪ್ರಾಣಿ ಸಂಗ್ರಹಾಲಯ. ಹುಡುಗರಿಂದ ಮುದುಕರವರೆಗ ಎಲ್ಲರೂ ನೋಡಲು ಮುಕುರುವರು. ಈಗ ಆ ಸರ್ಕಸ್‌ ಕಂಪನಿ ಇಲ್ಲ. ಅದು ವಿದೇಶದಿಂದ  ಹಡಗಿನಲ್ಲಿ ಬರುವಾಗ ಮುಳುಗಿಹೋದದ್ದು ಸರ್ಕಸ್‌ ರಂಗಕ್ಕೆ ಬಹು ದೊಡ್ಡ ನಷ್ಟ.
ಈಗಂತೂ ಸರಕಸ್ಸು ಬರಿ ಕಸರತ್ತಿನ ಪ್ರದರ್ಶನ. ಸುಧಾರಿತ ಡೊಂಬರಾಟ. ಕಾರಣ ಪ್ರಾಣಿ ದಯಾ ಸಂಘದ  ಚಳುವಳಿಯಿಂದ ಯಾವ ಪ್ರಾಣಿಗಳನ್ನು ಸರ್ಕಸ್ಸಿನಲ್ಲಿ ಬಳಸುವಂತಿಲ್ಲ. ಪ್ರಾಣಿಗಳನ್ನು ಬೋನಿನಲ್ಲಿ ಇಟ್ಟರೆ ಮಾಲಕ ಕಂಬಿಯ ಹಿಂದೆ. ಅವನಿಗೆ ಜೈಲೆ ಗತಿ. ಅಲ್ಲಿನ ಎಲ್ಲ ಪ್ರಾಣಿಗಳು ಬಿಡುಗಡೆ ಪಡೆದು ಪ್ರಾಣಿ ಸಂಗ್ರಹಾಲಯ ಸೇರಿವೆ.  ಇತ್ತೀಚೆಗೆ ಸುಪ್ರೀಂಕೋರ್ಟನ ಆದೇಶದಂತೆ ಮಕ್ಕಳನ್ನೂ ಸಹಾ ಸರ್ಕಸ್ಸಿನಲ್ಲಿ ಬಳಸುವಂತಿಲ್ಲ. ಹೀಗಾಗಿ ಸರ್ಕಸ್‌ ಅವಸಾನದ ಅಂಚಿನಲ್ಲಿದೆ. ಎಳವೆಯಲ್ಲಿ ಕಲಿತರೆ ಮಾತ್ರ ಮೈಬಗ್ಗುವುದು. ಮೂಳೆ ಬಲಿತಮೇಲೆ ಬಾಗಿಸಲಾಗದು. ಆದ್ದರಿಂದ ಸರ್ಕಸ್‌ ಕಲೆ ಕೊನೆಯುಸಿರು ಎಳೆಯುತ್ತಿದೆ.
ಆದರೆ ಇತ್ತೀಚೆಗೆ ಅಮೆರಿಕಾದ ನ್ಯೂಯಾರ್ಕನಲ್ಲಿ ಸರ್ಕಸ್ಸಿನ ಹೊಸ ರೂಪ ನೋಡಿದೆ. `ಝಾರ್‌ಖಾನಎಂದು ಅದರ ಹೆಸರು. ಅದು ಸಂಗೀತ, ಸಾಹಿತ್ಯ, ನೃತ್ಯ, ಆಧುನಿಕ ಬೆಳಕು ಧ್ವನಿ ಮತ್ತು ಲೇಸರ್‌ತಂತ್ರ ಜ್ಞಾನದ ಜೊತೆ ದೈಹಿಕ ಕಸರತ್ತನ್ನೂ ಬಳಸಿ ಅಪೂರ್ವ ಲೋಕವನ್ನೆ ಸೃಷ್ಟಿಸುವ ಪ್ರಯತ್ನ. ಅದೂ ಕೋಟಿ ಕೋಟಿ ಡಾಲರು ಖರ್ಚಿನಲ್ಲಿ ಮಾಡಿದ ಮಹಾನ್‌ ಯೋಜನೆ. ಅಲ್ಲಿ ಮನರಂಜನೆಯು ಪರಾಕಾಷ್ಠೆ ಮುಟ್ಟುವುದು. ಈಗ ಅದು ನ್ಯೂಯಾರ್ಕನಲ್ಲಿ ಬಹು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಯೂರೋಪಿನಲ್ಲೂ ಸಂಚರಿಸುವ ಯೋಜನೆ ಇದೆ. ಅದು ಭಾರತಕ್ಕೆ ಅದರಲ್ಲೂ ಗ್ರಾಮಾಂತರ ಪ್ರದೇಶಕ್ಕೆ ಬರುವುದು ಕನಸಿನ ಮಾತು. ಅದರ ಕನಿಷ್ಟ ಪ್ರವೇಶದರ ಐದು ಸಾವಿರ ರೂಪಾಯಿಗೂ ಮಿಗಿಲು ಅಂದರೆ ಜನಸಾಮಾನ್ಯರ ಒಂದು ತಿಂಗಳ ಆದಾಯಕ್ಕೂ ತುಸು ಹೆಚ್ಚೆ. ಆದ್ದರಿಂದ ನಮಗಂತೂ ಅದು ಗಗನ ಕುಸುಮ.
ಸಕರ್ಸ್‌ ಮತ್ತು ನಾಟಕಗಳ ಬಗ್ಗೆ ಇಷ್ಟು ಆಸಕ್ತಿ ವಹಿಸಲು ಕಾರಣ ಅವು ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣದ ಭಾಗವಾಗಿದ್ದವು. ಹುಡುಗರು ನೋಡಿರಲಿ ಬಿಟ್ಟಿರಲಿ ಕಂಪನಿಗಳು ಕ್ಯಾಂಫು ಮುಗಿಸುವ ಮುನ್ನ ಶಾಲೆಗೆ ಬಂದು ಮಕ್ಕಳಿಗೆ ರಿಯಾಯಿತಿ ದರದ ಟಿಕೆಟ್‌ ನೀಡುವರು. ಶಿಕ್ಷಕರೆ ಹಣ ವಸೂಲು ಮಾಡಿ ಮಕ್ಕಳನ್ನು ಒಟ್ಟಿಗೆ ಕರೆದುಕೊಂಡು ಹೋಗುವರು. ಆಗಾಗಲೇ ನೋಡಿದ್ದರೂ ಯಾವ ವಿದ್ಯಾರ್ಥಿಯೂ ಎಲ್ಲರ ಜೊತೆ ಒಟ್ಟಿಗೆ ನೋಡುವ ಅವಕಾಶ ತಪ್ಪಿಸಿಕೊಳ್ಳುತ್ತಿರಲಿಲ್ಲ. ಪ್ರವೇಶ ದರ ಕಡಿಮೆ ಮಾಡಿದರೂ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್‌ ಖರ್ಚಾಗಿ ಅವರಿಗೆ ದೊಡ್ಡ ಮೊತ್ತವೆ ಸಿಗುತಿತ್ತು. ಜತೆಗೆ ಕಲೆಗೆ ಉತ್ತೇಜನ ನೀಡಿದ ತೃಪ್ತಿ ಶಾಲೆಗಳವರಿಗೂ ಇತ್ತು.
ಅದೂ ಅಲ್ಲದೆ ನಾಟಕ ಕಂಪನಿಗಳು ಸಾಮಾಜಿಕ ಕಾರ್ಯಗಳಿಗಾಗಿ ಸಂಘ ಸಂಸ್ಥೆಗಳಿಗೆ (ಬೆನಿಫಿಟ್‌ ಷೋ), ಸೇವಾರ್ಥ ಪ್ರದರ್ಶನ ಕೊಡುತಿದ್ದವು. ಅವರಿಗೆ ದೈನಂದಿನ ಖರ್ಚು ಕೊಟ್ಟರೂ ಸಾಕು. ಕೆಲವು ಸಲ ಅದನ್ನೂ ತೆಗೆದು ಕೊಳ್ಳುತ್ತಿರಲಿಲ್ಲ. ಸಂಬಂಧಿಸಿದವರು ಟಿಕೆಟ್ ಮಾರಿ ಬಂದ ಹಣವನ್ನೆಲ್ಲಾ  ಸಂಘಟನೆಯ ಬೆಳವಣಿಗೆಗೆ ಉಪಯೋಗಿಸುವರು.
ರೋಟರಿ ಕ್ಲಬ್ಬಿನವರು ನಡೆಸುವ ನಾಟಕ ಸ್ಪರ್ಧೆ ಬಹು ಜನಪ್ರಿಯವಾಗಿತ್ತು. ಅಲ್ಲಿನ ಜನಕ್ಕೆ ಅದು ಹಬ್ಬದ ಹುಮ್ಮಸ್ಸಿಗೆ ಕಾರಣವಾಗಿತ್ತು. ವಾರಗಟ್ಟಲೆ ನಡೆಯುವ ಸ್ಪರ್ಧೆಗಳಲ್ಲಿ ಜಿಲ್ಲೆಯ ಎಲ್ಲ ಕಡೆಯಿಂದ ತಂಡಗಳು ಬಂದು ಪ್ರದರ್ಶನ ನೀಡುತಿದ್ದವು. ನಾನೂ ನಮ್ಮ ಹಳ್ಳಿಯ ವಿದ್ಯಾರ್ಥಿಗಳೂ ಸೇರಿ `ರಾಘಣ್ಣನ ರಥಎಂಬ ನಾಟಕ ಮಾಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆವು. ಅದರಲ್ಲಿ ನಾನು ನಾಯಕಿ ಪಾತ್ರ ವಹಿಸಿದ್ದೆ. ನಾಟಕದ ದಿನ ನನಗೆ ಮೀಶೆ ಬೋಳಿಸುವಂತೆ ಹೇಳಿದರು. ಆಗಿನ್ನೂ ನನಗೆ ಮೀಸೆ ಮೂಡುತಿದ್ದ ಕಾಲ. ಅವಿನ್ನೂ ಎಳೆಗೂದಲುಗಳು. ಕಪ್ಪೂ ಆಗಿರಲಿಲ್ಲ. ನನಗೆ ಇನ್ನೂ ಸರಿಯಾಗಿ ಬೆಳೆಯದ ಮೀಸೆ ಬೋಳಿಸುವುದು ಅವಮಾನ ಎನಿಸಿತು. ಅದೂ ಅಲ್ಲದೆ ಯಾರೋ ಹೇಳಿದ್ದರು ಒಂದು ಸಾರಿ ಮೀಸೆಗೆ ಕತ್ತಿ ತಗುಲಿಸಿದರೆ ಸಾಕು ಅವು ಹುಲುಸಾಗಿ ಬೆಳೆಯುತ್ತವೆ. ನಂತರ ನಿತ್ಯವೂ ಮುಖ ಕ್ಷೌರ ಮಾಡಿಸಿಕೊಳ್ಳಲೆ ಬೇಕಾಗುವುದು. ನನಗೋ ತಿಂಗಳಿಗೆ ಒಂದು ಸಲ ಮನೆಗೆ ಬರುವ  ಕೆಲಸೇರ ಮುಂದೆ ಕೂತು ತಲೆ ಮಾಡಿಸಿಕೊಳ್ಳುವುದೆ ಪ್ರಯಾಸದ ಕೆಲಸ. ಅದಕ್ಕೆ ಮೀಸೆ ಬೋಳಿಸಬೇಕೆಂದರೆ ನನಗೆ ನಾಟಕವೆ ಬೇಡ ಎಂದೆ. ಯಾರು ಎಷ್ಟು ಹೇಳಿದರೂ ಕೇಳದೆ ಹಠ ಹಿಡಿದೆ.
`ನೀವು ನನಗೆ ಮೊದಲೆ ಹೇಳಬೇಕಿತ್ತು. ನಾನು ಬಹಳ ಚೆನ್ನಾಗಿ ಪಾತ್ರಕ್ಕೆ ಹೊಂದುವೆ ಎಂದು ಹೊಗಳಿ ಈಗ ಈ ರೀತಿ ಮಾಡುತ್ತಿರುವಿರಿಎಂದು ಕೂಗಾಡಿದೆ. ನಿಜ ನಾನು ತೆಳ್ಳಗೆ, ಕುಳ್ಳಗೆ ಇದ್ದುದರಿಂದ ದನಿ ಎಳಸಾಗಿರುವುದರಿಂದ ನಾಯಕಿಯ ಪಾತ್ರಕ್ಕೆ ನಾನೆ ಲಾಯಕ್ಕು ಎಂದು ಎಲ್ಲರೂ ಒಮ್ಮತದಿಂದ ಒಪ್ಪಿಸಿದ್ದರು. ಎಳೆ ಮೀಸೆಯೆ ನಾಟಕಕ್ಕೆ ಮುಳುವಾಗುವುದೆಂದು ಯಾರೂ ಯೋಚಿಸಿರಲಿಲ್ಲ. ನಮ್ಮ ಗುಂಪಿಗೆ ಪಿಕಲಾಟಕ್ಕೆ ಇಟ್ಟುಕೊಂಡಿತು. ನಮ್ಮ ಊರಲ್ಲಿ  ವಿದ್ಯಾವಂತರೆ ಕಡಿಮೆ. ತಯಾರಿಗೆ ಸಮಯವೂ ಇಲ್ಲ. ನಾಟಕ ನಿಲ್ಲಿಸಿದರೆ ನಾಲಕ್ಕು ಮಂದಿಯಲ್ಲಿ ಅವಮಾನ. ಊರಿಗೆ ಕೆಟ್ಟಹೆಸರು. ಎಲ್ಲರೂ ತಲೆಗೆ ಕೈ ಇಟ್ಟು ಕೂತರು.
ಆಗ ಯಾರೋ ಒಬ್ಬರು `ಎಷ್ಟೊ ಜನ ಹೆಂಗಸರಿಗೆ ಎಳೆ ಮೀಸೆ ಇರುವುದಲ್ಲ ಅವರು ಏನು ಕೆಲಸೇರ ಹತ್ತಿರ ಹೋಗುವರೆ. ಅವರಿಗೇನು ಮದುವೆಯಾಗಿ ಮಕ್ಕಳಾಗಿಲ್ಲವೆ. ಇದೂ ಹಾಗೆಯೆ ಎಂದುಕೊಂಡರಾಯಿತು, ತುಸು ಬಣ್ಣ ಹೆಚ್ಚಾಗಿ ಹಚ್ಚಿಸಿದರಾಯಿತುಎಂದು ಸಮಾಧಾನ ಮಾಡಿದರು. ಅಂತೂ ಇಂತೂ ಮೀಸೆ ಬೋಳಿಸದೆ ಬಣ್ಣ ಹಚ್ಚಿಸಿಕೊಳ್ಳಲು ಕುಳಿತೆ. ಆದರೆ ಕೂದಲು ಇದ್ದುದರಿಂದ ತುಟಿಯ ಮೇಲೆ ಏನು ಮಾಡಿದರೂ ಬಣ್ಣ ಅಂಟಲಿಲ್ಲ. ಕೊನೆಗೆ ಹೇಗೋ ಮುಸಿ ಮುಸಿ ನಗುತ್ತಾ ಮುಖಕ್ಕೆ ಬಣ್ಣ ಹಚ್ಚಿದರು. ಈ ನಾಟಕದ ನಾಯಕಿ ಮೀಸೆಯ ಮಹಿಳೆ ಎಂದು ಹಿಂದೆ ನಗಾಡಿದರು. ನನಗೂ ತುಸು ಮುಜುಗರವಾಯಿತು. ನಾಟಕವೇನೋ ಯಶಸ್ವಿಯಾಯಿತು. ದೂರದಲ್ಲಿ ಕುಳಿತವರಿಗೆ ಮೀಸೆ ಕಂಡಿರಲಿಕ್ಕಿಲ್ಲ. ಯಾರೂ ಏನೂ ಅನ್ನಲಿಲ್ಲ. ಅಂತೂ ನನ್ನ ಹಠಮಾರಿತನದ ಪರಿಚಯ ಎಲ್ಲರಿಗೂ ಆಯಿತು. ನನಗಂತೂ ಯಾರು ಏನೆ ಅನ್ನಲಿ ಮೀಸೆ ಉಳಿಯಿತಲ್ಲ ಎಂದು ಸಂತೋಷವೆ ಆಯಿತು. ಆದರೆ ಮುಂದೆ ಇನ್ನೊಂದು ಸಲ ಅಚಾನಕ್ಕಾಗಿ ನಾಟಕವಾಡಲು ಕುಡಿ ಮೀಸೆ ತೆಗೆಸಬೇಕಾಗುವುದೆಂಬ ಕಲ್ಪನೆಯೂ ನನಗೆ ಆಗ ಇರಲಿಲ್ಲ.

No comments:

Post a Comment