Monday, August 20, 2012

ಹಾಸ್ಟೆಲಿನಲ್ಲಿ ಹರತಾಳ


ಕಾಲೇಜಿಗೆ ಸೇರಿದ ಮಾರನೆದಿನ ಬೆಳಗಿನ ಏಳು ಗಂಟೆಗೆ ಗಣನಗಣ ಗಂಟೆ ಕೇಳಿಸಿತು.. ಎಲ್ಲರು ಗಬಗಬನೆ ಡೈನಿಂಗ್‌ ಹಾಲ್‌ಗೆ ಹೋಗುತಿದ್ದರು. ನಾನು ಅವರ ಜತೆ ಹೋದೆ. ಪ್ರತಿಯೊಬ್ಬರೂ ಕೈನಲ್ಲಿ ಲೋಟ ಹಿಡಿದಿದ್ದರು. ನಂತರ ಗೊತ್ತಾಯಿತು. ಅದು ಕಾಫಿಗಂಟೆ ಎಂದು. ನಾನು ಕಾಫಿ ಕುಡಿಯುವುದಿಲ್ಲ ಎಂದು ಮೊದಲ ದಿನವೆ ಹೇಳಿದೆ. ಮಾರನೆ ದಿನ ಪುನಃ ಬೆಲ್‌ ಆದ ತಕ್ಷಣ ನನಗೆ ಹೋಗುವ ಅಗತ್ಯ ಇರಲಿಲ್ಲ. ಆದರೆ ನನ್ನ ರೂಮು ಮೇಟುಗಳು ಬಿಡಲಿಲ್ಲ.
ನೀನು ಕುಡಿದರೆ ಕುಡಿ, ಬಿಟ್ಟರೆ ಬಿಡು. ಆದರೆ ಬರಲೆಬೇಕು, ಎಂದು ಒತ್ತಾಯ ಮಾಡಿದರು. ಸರಿ ಅವರ ಸಮಾಧಾನಕ್ಕೆ ಹೋದೆ. ಕಾಫಿ ಕಡ್ಡಾಯ ಮಾಡಿ ಹಾಕಿಸಿದರು. ನಂತರ ಒಬ್ಬ ಗೆಳೆಯ ತನ್ನದು ಕುಡಿದಾದ ಮೇಲೆ ನನ್ನ ಕಾಫಿಯನ್ನೂ ಕುಡಿದ. ಆಗ ಅವರ ಒತ್ತಾಯದ ಅರ್ಥವಾಯಿತು. ಅದರಿಂದ ಗೆಳೆಯರ ಬಳಗ ಹೆಚ್ಚಿತು.
ಅಲ್ಲಿ ಹೋದ ಹೊಸದರಲ್ಲಿ ಭಾಷಾ ವಿಭಿನ್ನತೆಯಿಂದ ನಗೆ ಕಾರಂಜಿ ಚಿಮ್ಮುತಿತ್ತು. ಒಂದು ರಾತ್ರಿ ಊಟವಾದ ನಂತರ ಹಾಸಿಗೆಯ ಮೇಲೆ ಒರಗಿದೆ. ನಮ್ಮ ಕೋಣೆಯ ಸಹ ನಿವಾಸಿ,
`ಏನ್ರೀ ಹಾಗೆ ಮಲುಗುತ್ತಿರುವಿರಿ, ಹಾಸಿಗೆ ಒದರಿ ಮಲಗಿಎಂದ.
ನನಗೆ ಹಾಸಿಗೆಯನ್ನು ಹೇಗೆ ಒದರುವುದು ಎಂದು ತಿಳಿಯಲಿಲ್ಲ. ನಮಗೆ ಜನರನ್ನು ಒದರುವುದು ಗೊತ್ತು. ನಮ್ಮಲ್ಲಿ ಒದರು ಎಂದರೆ ಕೂಗಿ ಕರೆ ಎಂಬ ಅರ್ಥವಿದೆ.
ಆದರೂ ಬುದ್ಧಿ ಉಪಯೋಗಿಸಿ, `ನೀವು ಹಾಸಿಗೆ ಒದರಿದಿರಾ?’ ಎಂದೆ.
ಈಗ ಒದರುವೆ, ಎನ್ನುತ್ತಾ ಹಾಸಿಗೆ ಝಾಡಿಸಿದ. ಆಗ ನನಗೆ ತಿಳಿಯಿತು ಒದರು ಎಂಬ ಪದಕ್ಕೆ ಹಳೆ ಮೈಸೂರಿನಲ್ಲಿ ಝಾಡಿಸು ಎಂಬ ಅರ್ಥವಿದೆ ಎಂದು ಅವನಿಗೆ ವಿಷಯ ತಿಳಿಸಿದಾಗ ಬಿದ್ದುಬಿದ್ದು ನಕ್ಕ.
ಇನ್ನೊಂದು ಸಾರಿ ಅಪ್ಪ ಅಮ್ಮನನ್ನು ಕುರಿತು ಮಾತನಾಡುವ ರೀತಿ ಚರ್ಚೆಯಾಯಿತು. ಅಪ್ಪ ಬಂದ, ಅಮ್ಮ ಕೊಟ್ಟಳು, ಎಂದು ನಾವುಗಳು ಆಡುವ ಮಾತು ಅನಾಗರಿಕ ಎಂಬುದು ಅವರ ವಾದ.. ಆದರೆ ಅಲ್ಲಿ ಹಾಗಲ್ಲ. ಹಿರಿಯರಿಗೆಲ್ಲ ಬಹುವಚನ ಪ್ರಯೋಗ. ತಂದೆಯವರು ಹೇಳಿದರು. ತಾಯಿ ಕೊಟ್ಟರು ಇತ್ಯಾದಿ
ಹಿರಿಯರೆಂದರೆ ನಿಮಗೆ ಗೌರವ ಇಲ್ಲ, ಎಂದು ಆಕ್ಷೇಪಿಸಿದರು. ಒಂದುಕ್ಷಣ ನನಗೂ ನಿಜ ಎನಿಸಿತು. ತುಸು ಬೇಸರವಾಯಿತು. ಆದರೆ ಯೋಚನೆ ಮಾಡಿದಾಗ ಹೊಳೆಯಿತು.
ಅವರನ್ನು ಕೇಳಿದೆ. ನೀವು ದೇವರ ಪ್ರಾರ್ಥನೆ ಹೇಗೆ ಮಾಡುವಿರಿ?
`ದೇವರೇ ಆರೋಗ್ಯ ಕೊಡು, ದೇವಿ ಸಂಪತ್ತು ನೀಡು ಇತ್ಯಾದಿಎಂದರು.
ಆಗ ಚಕ್ಕನೆ ಕೇಳಿದೆ. ನೀವು ದೇವರಿಗೆ ಏಕವಚನ ಬಳಸುವಿರಿ ಅಲ್ಲವೆ? ಎಂದೆ. ಅವರು ಅಹುದು ಎಂದರು.
ನಾನು ಹೇಳಿದೆ. ಅಪ್ಪ ಅಮ್ಮ ನಮಗೆ ದೇವರು, ಅದಕ್ಕೆ ಏಕವಚನ ಬಳಸುವುದು. ಅದು ಆತ್ಮಿಯತೆ, ಅಗೌರವದ ಅಲ್ಲ, ಎಂದಾಗ ಅವರ ಟೀಕೆ ನಿಂತಿತು.
ಅನ್ಯಭಾಷೆಯ ಬಳಕೆ ಕೆಲವು ಸಲ ಅನರ್ಥಕ್ಕೆ ಕಾರಣವಾಗುತ್ತದೆ. ಒಂದು ಚರ್ಚಾ ಸ್ಪರ್ಧೆಯಲ್ಲಿ ಒಬ್ಬ ಆಗ ಪ್ರಖ್ಯಾತವಾಗಿದ್ದ ಲಾಲ್ ಬಹದ್ದೂರ್‌ ಶಾಸ್ತ್ರಿಯವರ. `ಜೈ ಜವಾನ್ ಜೈ ಕಿಸಾನ್ಘೋಷಣೆ ಬಳಸಿದ. ನಂತರ ಮಾತನಾಡಿದ ಹಿಂದಿ ಬಾರದ ಹುಡುಗ. ನಮ್ಮ ದೇಶದ ಬೆನ್ನೆಲುಬಾದ ರೈತನನ್ನು ಜವಾನರ ಜತೆ ಸೇರಿಸಿ ಜೈ ಎಂದಿರುವುದನ್ನು ಖಂಡಿಸಿದ. ಪಾಪ, ಅವನಿಗೆ ಜವಾನ್‌ ಎಂದರೆ ಸೈನಿಕ ಎಂಬುದು ಗೊತ್ತಿರಲೆ ಇಲ್ಲ.
ನಮ್ಮ ಸಹನಿವಾಸಿಯಾದ ತೆಲಗು ಹುಡುಗನೊಬ್ಬ ಭಾಷಣದಲ್ಲಿ ಗಾಂಧೀಜಿಯವರು  ದೊಡ್ಡ ಜಾತೀಯ ನಾಯಕರು ಎಂದ. ನಾವೆಲ್ಲ ಕಣ್ಣುಕಣ್ಣು ಬಿಟ್ಟೆವು. ಬಹು ಸಂಕುಚಿತ  ದೃಷ್ಟಿ ಎಂದುಕೊಂಡೆವು. ಆದರೆ ನಂತರ ತೆಲುಗಿನಲ್ಲಿ ಜಾತೀಯ ಎಂದರೆ ರಾಷ್ಟ್ರೀಯ  ಎಂಬುದು ನಂತರ ಗೊತ್ತಾಯಿತು.
ಹಾಸ್ಟೆಲ್‌ನಲ್ಲಿ ಪಿಯುಸಿ, ಡಿಪ್ಲೊಮಾ, ಬಿಇ ಮತ್ತು ಪದವಿ ವಿದ್ಯಾರ್ಥಿಗಳೂ ಸುಮಾರು ೧೦೦ ಜನ ಇದ್ದರು. ವಸತಿ ಚೆನ್ನಾಗಿಯೆ ಇತ್ತು. ಬೆಳಗ್ಗೆ ಕಾಫಿ, ೯ಕ್ಕೆ ಊಟ ನಂತರ ರಾತ್ರಿ ೮ ಗಂಟೆಗೆ ಊಟ ಕೊಡುತಿದ್ದರು. ಅಲ್ಲಿ ಅಂತಹ ವಿಶೇಷ ಕಟ್ಟು ಕಟ್ಟಲೆಗಳು ಇರಲಿಲ್ಲ. ವಾರ್ಡನ್‌ ಆಗೀಗ ಬಂದು ಹೋಗುತಿದ್ದರು. ಆಂಧ್ರ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿಯೆ ಇದ್ದರು. ಅವರೆಲ್ಲ ಸೇರಿ ಆಂಧ್ರಪ್ರಭ ಎಂಬ ವಾರಪತ್ರಿಕೆ ತರಿಸುವರು. ಮತ್ತು ಘಂಟಸಾಲ ಅಭಿಮಾನಿಗಳ ಸಂಘ ಮಾಡಿಕೊಂಡಿದ್ದರು. ವಾರಕ್ಕೊಂದು ಸಲ ಎಲ್ಲರೂ ಯಾವುದಾದರು ಒಂದು ರೂಮಿನಲ್ಲಿ ಸೇರಿ ತೆಲಗು ಹಾಡುಗಳನ್ನು ಹಾಡುತಿದ್ದರು.
ಕನ್ನಡ ಹಾಡುಗಳನ್ನು ಸುಮಧುರವಾಗಿ ಹಾಡುವವರೂ ಒಬ್ಬಿಬ್ಬರಿದ್ದರು. ಕಾರ್ಯಕ್ರಮದಲ್ಲಿ  ಅವನ ಹಾಡಿಗೆ ಬಹಳ ಬೇಡಿಕೆ ಇತ್ತು. ಎರಡು ಭಾಷೆಯವರಲ್ಲಿ ಸ್ಪರ್ಧೆ ಇದ್ದರೂ ಒಂದು ವಿಷಯದಲ್ಲಿ ಒಮ್ಮತ ಇತ್ತು. ನಾವೆಲ್ಲ ಬುಧುವಾರ ರಾತ್ರಿ ೮ ಗಂಟೆಗೆ ರೇಡಿಯೋ ಸಿಲೋನಿನಲ್ಲಿ ಬಿತ್ತರವಾಗುವ ಬಿನಾಕ ಗೀತಮಾಲೆಯನ್ನು ತಪ್ಪದೆ ಕೇಳುತಿದ್ದೆವು. ಹಾಸ್ಟೆಲಿನಲ್ಲಿ ರೇಡಿಯೋ ಇರಲಿಲ್ಲ. ಟ್ರಾನ್ಸಿಟರ್‌ ವಿರಳ. ನಾವೆಲ್ಲ ಹಾಸ್ಟೆಲಿನ ಕಾಂಪೌಂಡು ಗೋಡೆಯ ಮೇಲೆ ಕುಳಿತು ಪಕ್ಕದ ಮನೆಯವರು ಹಾಕಿರುವ ರೇಡಿಯೋದಲ್ಲಿ ಬರುವ ಹಾಡುಗಳನ್ನು ಕೇಳುತಿದ್ದೆವು. ಅವರಿಗೆ ಯಾವುದೆ ಕಿರಿಕಿರಿಯಾಗದಂತೆ ಎಚ್ಚರ ವಹಿಸುತಿದ್ದೆವು. ಅವರು ರೇಡಿಯೋ ಹಾಕಿದರೆ ತಾನೆ ನಮಗೆ ಹಾಡು ಕೇಳುವ ಅವಕಾಶ. ರಾತ್ರಿ ಎಂಟರಿಂದ ಒಂಬತ್ತರವರೆಗೆ ಯಾರೆ ಬಂದರೂ ಅವರಿಗೆ ಕಾಂಪೌಂಡಿನ ಗೋಡೆ ಕಾಣುತ್ತಿರಲಿಲ್ಲ. ಬದಲು ಅದರ ಮೇಲೆ ಕೋತಿಗಳಂತೆ ಏರಿ ಕುಳಿತ ಹುಡುಗರೆ ಇರುತಿದ್ದರು. ಎಲ್ಲರೂ ಅಮೀನ್‌ ಸಹಾನಿಯ ದನಿ ಎಂದರೆ ಮುಗಿಬೀಳುತಿದ್ದೆವು. ಪರೀಕ್ಷೆ ಸಮಯ ಹೊರತುಪಡಿಸಿ ಉಳಿದೆಲ್ಲ ಬುಧವಾರ ರಾತ್ರಿ ಇದು ಸಾಮಾನ್ಯ.
ಮೊದಲ ವರ್ಷದ ಹಾಸ್ಟೆಲ್‌ ಡೇ ಅಂಗವಾಗಿ ಭಾಷಣ ಸ್ಪರ್ಧೆ ಇತ್ತು. ನಾನೂ ಹೆಸರು ಕೊಟ್ಟೆ. ಆದಿನ ಹಾಲಿನಲ್ಲಿ ಕಾರ್ಯಕ್ರಮ ಇತ್ತು. ಸರಿಯಾಗಿ ತಯಾರಿ ಮಾಡಿಕೊಂಡಿದ್ದೆ. ನನ್ನದೆ ಎರಡನೆ ಹೆಸರು. ಮೊದಲನೆಯವ ಬಂದು ಸುಮಾರಾಗಿ ಮಾತನಾಡಿದ. ನಂತರ ನನ್ನ ಸರದಿ ಬಂತು. ಹೋಗಿನಿಂತೆ ಕಾಲುಗಡ ಗಡ ನಡುಗತೊಡಗಿತು. ಉರು ಹೊಡೆದಿದ್ದು ಮರೆತುಹೋಯಿತು. ಒಂದು ನಿಮಿಷ ಹಾಗೆಯೆ ನಿಂತೆ. ನಂತರ `ಥೂ ತ್ತೇರಿಎಂದು ಅಲ್ಲಿಂದ ಕಾಲು ಕಿತ್ತೆ. ಸಭೆಯಲ್ಲಿ ನಗುವೆ ನಗು. ಅದಾದ ನಂತರ ಸುಮಾರು ದಿನ ನನ್ನನ್ನು ಕಂಡಾಗ `ಥುತ್ ತ್ತೇರಿಎಂದೆ ಅಣಕಿಸುತಿದ್ದರು.
ನನಗೆ ತುಂಬ ಬೇಸರವಾಯಿತು. ಮುಂದಿನ ವರ್ಷ ಯಾವುದೆ ಸಮಾರಂಭ ಬಂದರೂ ಭಾಗವಹಿಸಿ ಸ್ಟೇಜ್‌ ಫಿಯರ್‌ ಕಳೆದುಕೊಂಡೆ. ಅಂತರ್ ಹಾಸ್ಟೆಲುಗಳ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸತೊಡಗಿದೆ. ಎರಡನೆ ವರ್ಷದ ಹಾಸ್ಟೆಲ್‌ ಡೇ ಸಮಯದಲ್ಲಿ ಎಲ್ಲ ಸಾಹಿತ್ಯಕ ಸ್ಪರ್ಧೆಗಳಲ್ಲಿ ಬಹುಮಾನ ಪಡೆದೆ. ಆಗ ಬಹುಮಾನದ ಮೊತ್ತ ಮೊದಲನೆಯ ಸ್ಥಾನಕ್ಕೆ ೫ ರೂಪಾಯಿ ಎರಡನೆಯ ಸ್ಥಾನಕ್ಕೆ ೩ ಮತ್ತು ಮೂರನೆ ಸ್ಥಾನಕ್ಕೆ ೧ ರೂಪಾಯಿ ಎಂದು ನಿಗದಿ ಮಾಡಿದ್ದರು. ನನಗೆ ಸುಮಾರು ನಲವತ್ತು ರೂಪಾಯಿ ಬಹುಮಾನ ಬಂದಿತು. ಆ ಮೊತ್ತಕ್ಕೆ ನಾನು ಕ್ಯಾಲುಕಲಸ್‌ ಪುಸ್ತಕ ತೆಗೆದುಕೊಂಡ ನೆನಪು. ಇದರಿಂದ ನಾನು ಹಾಸ್ಟೆಲ್‌ನಲ್ಲಿ ಚಿರಪರಿಚಿತನಾದೆ. ಪರಿಣಾಮವಾಗಿ ಮರುವರ್ಷ ಸಂಘದ ಉಪಾಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾದೆ.
ಅದೆ ನನ್ನ ಸಮಸ್ಯೆಗೆ ಕಾರಣವಾಗಬಹುದೆಂಬ ಕಲ್ಪನೆ ನನಗಿರಲಿಲ್ಲ. ಸಂಘದ ಪದಾಧಿಕಾರಿಗಳು ಸಾಧಾರಣವಾಗಿ ಆಡಳಿತ ವರ್ಗದ ಪರವಾಗಿರಬೇಕೆಂಬುದು ಅಲಿಖಿತ ನಿಯಮ. ಅವರು ವಿದ್ಯಾರ್ಥಿಗಳ ನಡುವೆ ಇರುವ `ಟ್ರೋಜನ್‌ ಕುದುರೆ’. ಆಡಳಿತ ಮಂಡಳಿಯ ಒಬ್ಬರ ಮಗಳ ಮದುವೆಯನ್ನು ನಮ್ಮ ಹಾಸ್ಟಲ್‌ನಲ್ಲಿ ಮಾಡುವರೆಂದು ಮೂರು ದಿನ ಎರಡು ಕೋಣೆಯಲ್ಲಿ ಎಲ್ಲರ ಸಾಮಾನು ಇಟ್ಟುಕೊಳ್ಳಬೇಕೆಂದು ವಿದ್ಯಾರ್ಥಿಗಳ ಸಭೆ ಕರೆದು ತಿಳಿಸಿದರು. ಮೇಲಾಗಿ ಆ ಮೂರುದಿನವೂ ನಮಗೆಲ್ಲ ಭೂರಿ ಭೋಜನ ಸಿಗುವುದೆಂಬ ಆಸೆ ತೋರಿಸಿದರು. ಕೆಲವರು ಅದಕ್ಕೆ ತಲೆದೂಗಿದರು. ಆದರೆ ನನಗೆ ಅದು ಸರಿ ಎನಿಸಲಿಲ್ಲ. ಮದುವೆ ಊಟ ಸಿಗುವುದೆಂದು ಮೂರು ದಿನ ನಾವೆಲ್ಲ ಓದು ಬರಹ ಬಿಡುವುದು ಅಸಮಂಜಸ ಎನಿಸಿತು. ನಾನು ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ಒಪ್ಪಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದೆ. ಅದುವರೆಗೂ ಸುಮ್ಮನಿದ್ದ ಬಹುತೇಕರು ದನಿಗೂಡಿದರು. ಪರಿಣಾಮವಾಗಿ ಅವರಿಗೆ ಆಡಳಿತ ಮಂಡಳಿಗೆ ನನ್ನ ಮೇಲೆ ಮುನಿಸು ಮೂಡಿತು.
ಅಲ್ಲದೆ ಅಡುಗೆಗೆ ಬಳಸುವ ತರಕಾರಿಯ ಬಗ್ಗೆ ಮೊದಲಿನಿಂದಲೂ ತಕರಾರು ಇತ್ತು. ಎಷ್ಟೊ ಸಲ ಹುಡುಗರಿಗೆ ಸಾಂಬಾರಿನಲ್ಲಿ ಹುಳುಗಳು ಸಿಗುತಿದ್ದವು. ಕೆಲವರು ಅಸಹ್ಯ ಮಾಡಿಕೊಂಡು ಊಟ ಬಿಟ್ಟರೆ ಹಲವರು ಓಹೋ ಇವತ್ತು ನಾನ್‌ವೆಜಿಟೇರಿಯನ್‌ ಊಟ ಎಂದು ಕುಶಾಲು ಮಾಡುತ್ತಾ ಅದನ್ನು ಎತ್ತಿ ಇಟ್ಟು ಊಟ ಮುಂದುವರಿಸುವರು. ಹಿಂದಿನ ಪ್ರತಿನಿಧಿಗಳು ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಆಸಕ್ತಿ ತೋರಿರಲಿಲ್ಲ.
ಈ ವಿಷಯ ನನ್ನ ಗಮನಕ್ಕೂ ಬಂದಿತು. ಒಂದೆರಡು ಸಾರಿ ಅಡುಗೆಯವನಿಗೆ ಹೇಳಿದೆ. ಆದರೆ ಅವನು ಇದು ಕಾರ್ಯದರ್ಶಿಯವರ ಕೆಲಸ. ಅವರು ತಂದದ್ದು ಬೇಯಿಸಿ ಹಾಕುವೆ. ಬೇಕಾದರೆ ತಿನ್ನಿ ಬೇಡವಾದರೆ ಬಿಡಿ ಎಂದು ಉದ್ಧಟತನದಿಂದ ಉತ್ತರಿಸಿದ. ಕಾರ್ಯದರ್ಶಿಯವರನ್ನು ವಿಚಾರಿಸಿದರೆ, `ಇಷ್ಟು ದಿನ ಇಲ್ಲದಿದ್ದ ಸಮಸ್ಯೆ ಈಗ ಏಕೆ ಬಂದಿದೆ? ಯಾವಾಗಲೂ ನಾವು ಸಿಟಿ ಮಾರುಕಟ್ಟೆಯ ಸಗಟು ವಿಭಾಗದಲ್ಲೆ ತರುವುದುಎಂದು ಜಾರಿಕೊಂಡರು. ಅಲ್ಲಿ ನಡೆಯುತ್ತಲಿದ್ದುದೆ ಬೇರೆ. ಅವರು ಉದ್ದೇಶಪೂರ್ವಕವಾಗಿ ಯಾರೂ ಕೊಳ್ಳದ ಅರೆಬರೆ ಕೊಳೆತಿರುವ ತರಕಾರಿಯನ್ನು ಅಗ್ಗವಾಗಿ ದೊರಕುವುದು ಎಂದು ತರುತ್ತಿದ್ದರು.
ಒಂದು ದಿನ ತರಕಾರಿ ಹೆಚ್ಚುತ್ತಿರುವಾಗಲೆ ಬದನೆಕಾಯಿ ಮತ್ತು ಈರುಳ್ಳಿಗಳು ಪೂರ್ಣವಾಗಿ ಕೊಳೆತಿರುವುದನ್ನು ನಮ್ಮ ಗೆಳೆಯರು ನೋಡಿದರು. ಮತ್ತು ನಾವೆಲ್ಲ ಹೋಗಿ ಅದನ್ನು ಬಳಸಬಾರದೆಂದು ತಿಳಿಸಿದೆವು. ಆದರೆ ಅಡುಗೆಯವನು ಸೊಕ್ಕಿನಿಂದ ಇದನ್ನೆ ನಾನು ಮಾಡುವುದು ಎಂದು ಒಂದು ಕೋಳಗದ ತುಂಬ ಸಾಂಬಾರು ಮಾಡಿದ. ನಮಗೆ ರೇಗಿ ಹೋಯಿತು. ಎಲ್ಲರೂ ಸೇರಿ ಆದಿನ ಊಟ ಮಾಡದೆ ಹರತಾಳ ಮಾಡಬೇಕೆಂದು ತೀರ್ಮಾನಿಸಿದೆವು. ಊಟದ ಗಂಟೆ ಹೊಡೆದರೂ ಯಾರೂ ಹೋಗಲಿಲ್ಲ. ಒಬ್ಬಿಬ್ಬರು ಹೋಗಲು ಸಿದ್ಧರಿದ್ದರೂ ಉಳಿದವರು ಅವರನ್ನು ಬಿಡಲಿಲ್ಲ. ಅಂದು ಭಾನುವಾರ ಬೇರೆ. ಮಧ್ಯಾಹ್ನ ೨ ಗಂಟೆಯಾದರೂ ಬೇರೆ ವ್ಯವಸ್ಥೆ ಮಾಡಲಿಲ್ಲ. ಎಲ್ಲರ ಹೊಟ್ಟೆಯಲ್ಲಿ ದೊಂಬರಾಟ ಶುರುವಾಗಿತ್ತು. ಕೊನೆಗೆ ಒಂದು ತೀರ್ಮಾನಕ್ಕೆ ಬಂದೆವು. ಸರದಿಯ ಮೇಲೆ ಬಡಿಸಬೇಕಾಗಿತ್ತು. ಆದಿನ ಸರದಿ ಇದ್ದವರಿಗೆ ಸಾಂಬಾರು ಮುಟ್ಟಬಾರದು ಮತ್ತು ಎಲ್ಲರೂ ಬರಿ ಮಜ್ಜಿಗೆ ಅನ್ನ ಊಟಮಾಡಬೇಕೆಂದು ನಿರ್ಧರಿಸಿದೆವು. ಅದರಂತೆ ೨.೩೦ ಸುಮಾರಿಗೆ ಹೋಗಿ ಎಲ್ಲರೂ ಬರಿ ಮಜ್ಜಿಗೆ ಅನ್ನ ಊಟ ಮಾಡಿದೆವು. ಅಲ್ಲಿಗೆ ಬಂದಿದ್ದ ಹಾಸ್ಟೆಲಿನ ಕಾರ್ಯದರ್ಶಿಗಳು ರೇಗಿಕೊಂಡು, ಈಗ ಊಟ ಮಾಡದಿದ್ದರೂ ಪರವಾಯಿಲ್ಲ ರಾತ್ರಿಗೂ ಅದೆ ಸಾಂಬಾರನ್ನೆ ಬಿಸಿ ಮಾಡಿ ಬಡಿಸಿ ಎಂದು ಅಡುಗೆಯವರಿಗೆ ಆಣತಿ ನೀಡಿದರು. ಇದುವರೆಗೂ ತಾಳ್ಮೆಯಿಂದ ಇದ್ದ ನಾವು ರೇಗಿದೆವು. ನಾಲಕ್ಕು ಜನ ಒಳಗೆ ಹೋಗಿ ಸಾಂಬಾರಿನ ದೊಡ್ಡ ಪಾತ್ರೆಯನ್ನು ಹೊರಗೆ ಹೊತ್ತು ತಂದು ಎಲ್ಲವನ್ನು ಚೆಲ್ಲಿದೆವು. ಸುಮಾರು ನೂರಾರು ಜನರಿಗಾಗಿ ಮಾಡಿದ್ದ ಸಾಂಬಾರು ನೆಲದ ಪಾಲಾಯಿತು. ಅದನ್ನು ನೋಡಿದ ಆಡಳಿತವರ್ಗದವರು ಗಾಬರಿಯಾದರು. ಅವರು ತುರ್ತಾಗಿ ಸಭೆ ಸೇರಿ ನಮ್ಮನ್ನೂ ಕರೆಸಿದರು. ನಾವು ಕೊಳೆತ ತರಕಾರಿ ಬಳಕೆಯನ್ನು ಖಂಡಿಸಿದೆವು. ಕೊನೆಗೆ ಅವರು ಎಲ್ಲವನ್ನೂ ಸರಿ ಮಾಡುವ ವಾಗ್ದಾನ ಮಾಡಿದರು. ಹೇಗಿದ್ದರೂ ಪರೀಕ್ಷೆಗೆ ಕೆಲವೆ ತಿಂಗಳುಗಳು ಇದ್ದವು. ನಾವು ಆಹಾರದ ಗುಣಮಟ್ಟದ ಬಗ್ಗೆ ಕಣ್ಣಿಟ್ಟಿರಬೇಕೆಂದು ಅದೆಲ್ಲ ಅಡುಗೆಯವನ ಕೆಲಸವೆಂದು ಸಬೂಬು ಹೇಳಿದರು. ಅಂದಿನಿಂದ ಊಟದ ಗುಣಮಟ್ಟ ಸುಧಾರಿಸಿತು.
ಆದರೆ ಮಾರನೆ ವರ್ಷ ಪದವಿಯ ಕೊನೆವರ್ಷದಲ್ಲಿದ್ದ ನನಗೆ ಮತ್ತು ಇತರ ಮೂರು ಜನರಿಗೆ ಹಾಸ್ಟೆಲಿನಲ್ಲಿ ಪ್ರವೇಶ ಕೊಡಲಿಲ್ಲ. ನನಗೆ ಕಮ್ಯುನಿಸ್ಟ್ ಎಂಬ ಪಟ್ಟ ಬಂದಿತು. ನಾನು ಆ ವರ್ಷ ಟ್ಯಾಂಕ್ ಬಂಡ್‌ ರಸ್ತೆಯಲಿದ್ದ ವಿದ್ಯೋದಯ ಎಂಬ ಹಾಸ್ಟೆಲ್‌ ಸೇರಿದೆ. ಅಲ್ಲಿ ವಸತಿಗೆ ಮಾತ್ರ ಅವಕಾಶವಿತ್ತು, ಅಡುಗೆ ನಾವೆ ಮಾಡಿಕೊಂಡು ಊಟ ಮಾಡುತಿದ್ದೆವು.
ಅಲ್ಲಿಯೆ ನನಗೆ ನಮ್ಮ ಊರಿನ ಮಾಜಿಮಂತ್ರಿಗಳಾದ ಡಾ. ನಾಗನಗೌಡರ ಮಗನ ಸಾಂಗತ್ಯ ಲಭ್ಯವಾಯಿತು. ರವಿ ಅವರ ಕಿರಿಯ ಮಗ. ಯಾವುದೋ ಕಾರಣಕ್ಕೆ ಅವನು ಪದವಿ ಪಡೆದಿರಲಿಲ್ಲ. ಆದರೆ ಬೆಂಗಳೂರಿನಲ್ಲಿ ಖಾಸಗಿಯಾಗಿ ತರಬೇತಿ ಪಡೆಯಲು ಬಂದಿದ್ದ. ಮೊದಲು ನನಗೆ ನಂಬಲೆ ಆಗಲಿಲ್ಲ. ಅಧಿಕಾರ, ಅಂತಸ್ತು ಮತ್ತು ಹಣ ಉಳ್ಳವರ ಮಗ ಬಂದು ನಮ್ಮ ಜತೆ ಇರುವುದು ಅಚ್ಚರಿ ಎನಿಸಿತು. ನಮ್ಮ ಗೆಳೆತನ ಊರಿಗೆ ಹೋದ ಮೇಲೆಯೂ ಮುಂದುವರಿಯಿತು. ಅವರ ಮನೆಯಲ್ಲಿ ಸಾಕಷ್ಟು ಪುಸ್ತಕಗಳ ಸಂಗ್ರಹವಿತ್ತು. ಅದರಲ್ಲೂ ಮೈಸೂರ ಒಡೆಯರು ಪ್ರಕಟಿಸಿದ ವೇದಗಳ ದೊಡ್ಡ ದೊಡ್ಡ ಪುಸ್ತಕಗಳ ಬಗ್ಗೆ ಕುತೂಹಲ ಬೆಳೆಯಿತು. ಅವು ಬೇರೆ ಎಲ್ಲೂ ಸಿಗುತ್ತಿರಲಿಲ್ಲ. ಅವನ್ನು ಓದಲು ಪ್ರಯತ್ನಿಸಿದೆ. ಅವು ಬಹುತೇಕ ಸಂಸ್ಕೃತ ಶ್ಲೋಕಗಳ ಲಿಪ್ಯಂತರ ಮತ್ತು ಅರ್ಥವಿವರಣೆ ಹೊಂದಿದ್ದವು. ಎಲ್ಲವೂ ದೇವತಾರಾಧನೆಯ ಸ್ತೋತ್ರಗಳಂತೆ ಗೋಚರವಾದವು. ಬಹುಶಃ ನಾನು ಅವುಗಳ ಅರ್ಥ ಗ್ರಹಿಸುವ ಮಟ್ಟದಲ್ಲಿ ಇರಲಿಲ್ಲ. ಸ್ಥಳೀಯ ಲೋಕಲ್‌ ಲೈಬ್ರರಿಯಲ್ಲಿನ ಪುಸ್ತಕಗಳು ಸಮಯ ರಜೆಯಲ್ಲಿ ಕಳೆಯಲು ಸಹಾಯವಾದವು..
ನನ್ನ ಕಾಲೇಜು ಕಲಿಕೆಯೂ ಮುಗಿದಿತ್ತು. ಪದವಿಯ ಫಲಿತಾಂಶ ಬರಬೇಕಿತ್ತು. ಬೆಂಗಳೂರಿಗೆ ವಿದಾಯ ಹೇಳಿ ಹಳ್ಳಿ ಸೇರಿದೆ.

No comments:

Post a Comment