Monday, August 20, 2012

ಹಳ್ಳಿ ಹುಡುಗ ಬೆಂಗಳೂರಿಗೆ ಬಂದ ವೃತ್ತಾಂತ


ಎಸ್ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಬರುವವರಗೆ ಒಂದು ರೀತಿಯ ನೆಮ್ಮದಿ ಇತ್ತು. ನಂತರ ಮುಂದೇನು ಮಾಡಬೇಕು ಎಂಬ ಪ್ರಶ್ನೆ ಎದುರಾಯಿತು. ನಾನು ಪಾಸಾದಾಗಲೆ ನಮ್ಮ ಅಕ್ಕ ಹೆರಿಗೆಯಾಗಿ ಏಳುದಿನದ ಎಳೆ ಮಗುವನ್ನು ಬಿಟ್ಟು ತೀರಿಕೊಂಡಳು. ನಮ್ಮ ಅಕ್ಕನ ಗಂಡನ ಮನೆಯವರು ಮಗುವನ್ನು ನೋಡಿಕೊಳ್ಳಲು ಸಿದ್ಧರಿರಲಿಲ್ಲ. ನಮ್ಮ ಅಮ್ಮನಿಗೂ ಆಗ ಮೊಲೆ ಹಾಲು ಕುಡಿಯುವ ಒಂದುವರ್ಷದ ಹೆಣ್ಣು ಮಗು. ಮಗಳಿಗೆ ಒಂದು ಮೊಲೆ ಮೊಮ್ಮಗುವಿಗೆ ಇನ್ನೊಂದು ಮೊಲೆ ಮೀಸಲು ಮಾಡಿ ಅವೆರಡನ್ನೂ ಬೆಳಸಬೇಕಿತ್ತು. ಮನೆಯಲ್ಲಿ ಹಣಕಾಸಿನ ಅಂತಹ ಅನುಕೂಲವಿರಲಿಲ್ಲ. ಅಪ್ಪ ದಿಕ್ಕು ತೋಚದೆ ಕುಳಿತಿದ್ದ. ಹಲವರು ತಮಗೆ ತಲೆಗೆ  ತೋಚಿದ ಯೋಚನೆಗಳನ್ನೆಲ್ಲ ನಮಗೆ ರವಾನಿಸಿದರು. ಅಪ್ಪನ ಕೆಲವು ಗೆಳೆಯರು ಹೇಗಿದ್ದರೂ ಉತ್ತಮ ಅಂಕ ಪಡೆದು ಎಸ್‌ಎಸ್ಎಲ್ಸಿ ಪಾಸಾಗಿದ್ದಾನೆ. ಯಾರಾದರೂ ಕೆಲಸ ಕೊಡುವರು ಸೇರಿಸುಎಂದರು.
ಅದರಲ್ಲೆ ತುಸು ತಿಳುವಳಿಕೆ ಇದ್ದವರು, ``ಹೇಗಿದ್ದರೂ ಬ್ಯಾಂಕಿನಲ್ಲಿ ಜಾಣ ವಿದ್ಯಾರ್ಥಿಗಳಿಗೆ ಅವಕಾಶ ಕೊಡುವರು. ದಣೇರಿಂದ ಯಾವುದಾದರೂ ಒಂದು ದಕ್ಷಿಣ ಕನ್ನಡದ ಬ್ಯಾಂಕಿನ ಮೇನೇಜರಿಗೆ ಹೇಳಿಸಿದರೆ ಸಾಕು ಗುಮಾಸ್ತನ ಕೆಲಸ ಸಿಗುವುದು. ಸುಖವಾಗಿ ಇರಬಹುದು. ನಿನ್ನ ಚಿಂತೆ ತಪ್ಪುವುದು’’ ಎಂದು ಸಲಹೆ ನೀಡಿದರು. ನಿಜ ಆಗ ಬ್ಯಾಂಕುಗಳು ಖಾಸಗಿ ಒಡೆತನದಲ್ಲಿದ್ದವು. ಎಲ್ಲ ದಕ್ಷಿಣ ಕನ್ನಡ ಮೂಲದ ಬ್ಯಾಂಕುಗಳು ಮೇಲಾಗಿ ನಮ್ಮ ಅಪ್ಪನಿಗೆ ಪ್ರಭು ಹೋಟಲಿನ ಮಾಲಕರು ಹತ್ತಿರದವರು. ಅವರಿಗೆ ದಕ್ಷಿಣ ಕನ್ನಡದವರೆಲ್ಲ ಬಹು ಬೇಕಾದವರು. ಆದರೆ ನಮ್ಮ ಅಪ್ಪ ಒಪ್ಪಲಿಲ್ಲ. ಇನ್ನು ಹುಡುಗ, ಮೇಲಾಗಿ ಬುದ್ಧಿವಂತ ಮುಂದೆ ಬೇಕಾದರೆ ಓದಲಿ ಎಂದುಕೊಂಡರು.
ಅಲ್ಲದೆ ಮೊದಲೆ ಗಡಿಬಿಡಿ ಹುಡುಗ, ಬ್ಯಾಂಕಿನಲ್ಲಿ ತುಸು ಹೆಚ್ಚು ಕಡಿಮೆಯಾದರೆ ಮೈ ಮೇಲೆ ಬರುವುದು ಅದರ ಸಹವಾಸವೆ ಬೇಡ ಎಂದ. ಇನ್ನೂ ಕೆಲವರು ಅಂಚೆ ಕಚೇರಿಯಲ್ಲಿ ಕೆಲಸಕ್ಕೆ ಪ್ರಯತ್ನಿಸಲು ಸೂಚಿಸಿದರು. ಆಗ ಅಂಚೆ ಕಚೇರಿಯಲ್ಲಿ ಬರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ನೇರವಾಗಿ ನೇಮಕ ಮಾಡುತಿದ್ದರು. ನಾನು ಪಡೆದ ಅಂಕಗಳಿಗೆ ಕೆಲಸ ಖಂಡಿತ ದೊರೆಯುತಿತ್ತು. ಮೇಲಾಗಿ ಅದು ಸೆಂಟ್ರಲ್‌ ಗವರ್ನಮೆಂಟ್‌ ನೌಕರಿ. ಆ ಕಾಲದಲ್ಲಿ ಅದಕ್ಕೆ ಅದೇಕೋ ವಿಶೇಷ ಗೌರವ. ಆದರೆ ಆ ಸಲಹೆಯೂ ಒಪ್ಪಿತವಾಗಲಿಲ್ಲ. ಅಂಚೆ ಕಚೇರಿಯ ಕೆಲಸವೆಂದರೆ ಜೀತವಿದ್ದಂತೆ. ಬೆಳಗಿನಿಂದ ಸಂಜೆಯವರೆಗ ಬಿಡುವಿಲ್ಲದ ದುಡಿತ. ಒಂದು ದಿನ ರಜೆ ಬೇಕೆಂದರೂ ಮೇಲಿನವರ ಅನುಮತಿ ಪಡೆದು ಬದಲಿಯವನು ಬಂದರೆ ಮಾತ್ರ ಹೋಗಬೇಕು. ಚಿಕ್ಕಪುಟ್ಟ ಊರಿಗೆ ಹಾಕಿದಾಗ ಎಲ್ಲ ಕೆಲಸ ಒಬ್ಬರೆ ನಿರ್ವಹಿಸಬೇಕು. ದಿನದ ಹಣಕಾಸಿನ ವ್ಯವಹಾರದಲ್ಲಿ ಹತ್ತು ಪೈಸೆ ವ್ಯತ್ಯಾಸ ಬಂದರೂ ಅದು ಸರಿಮಾಡಿ ಹೆಡ್‌ ಆಫೀಸಿಗೆ ವರದಿ ಮಾಡುವ ತನಕ ಜಾಗ ಬಿಟ್ಟು ಕದಲುವಹಾಗಿಲ್ಲ. ಅದಕ್ಕೆ ಅದರ ಗೊಡವೆ ಬೇಡ ಎನಿಸಿತು.
ನಮ್ಮ ಅಮ್ಮನ ತಾಯಿ ಅಚ್ಚಮ್ಮ. ಅಂದರೆ ನಮ್ಮ ಹೆಣ್ಣು ಅಜ್ಜಿ. ನಮ್ಮ ಅಕ್ಕನ ಬಾಣಂತನಕ್ಕ ಅಂತ ಬಂದವರು ಅವಳ ಸಾವಿನ ನಂತರ ನಮ್ಮಲ್ಲೆ ಇದ್ದರು. ಅವರು ನನ್ನನ್ನ ಕಾಲೇಜಿಗೆ ಕಳುಹಿಸಲೇಬೇಕೆಂದು ಪಟ್ಟು ಹಿಡಿದರು. ಅವರು ಬಹು ಚುರುಕಾದ ಹೆಣ್ಣು ಮಗಳು.. ಚಿಕ್ಕವಯಸ್ಸಿನಲ್ಲೆ ತನಗಿಂತ ಎರಡು ಪಟ್ಟು ವಯಸ್ಸಾದ ಎರಡನೆ ಸಂಬಂಧದ ಮದುವೆಯಾಗಿತ್ತು, ಮೇಲಾಗಿ ನಮ್ಮ ತಾತ ಬಹು ರಸಿಕ. ಅವರಿಗೆ ಮನೆಯಲ್ಲಿ ಹಿರಿಯರು  ಇರಲಿಲ್ಲ. ಏಳು ಹಳ್ಳಿಯ ಶ್ಯಾನುಭೋಗರು.. ಅವರಿಗೆ ಹೇಳುವವರೂ ಕೇಳುವವರು ಯಾರು.. ಹೆಂಡತಿ ಸತ್ತ ಮೇಲೆ ಒಬ್ಬಳನ್ನು ಮನೆಯಲ್ಲೆ ಇರಿಸಿಕೊಂಡು ಆರಾಮಾಗಿದ್ದರು. ನೆಂಟರ ಒತ್ತಾಯಕ್ಕೆ ಕಟ್ಟು ಬಿದ್ದು ಇನ್ನೂ ಒಂದು ಮದುವೆಯಾದರು. ಅದೂ ಶರತ್ತಿನ ಮೇಲೆ. ಈಗಿರುವವಳ ಕೈ ಬಿಡುವುದಿಲ್ಲ ಎಂದು.. ಆದರೆ ಆಗಿನ ಕಾಲದಲ್ಲಿ ಅವೆಲ್ಲ ಯಾರೂ ಲೆಕ್ಕಿಸುತ್ತಿರಲಿಲ್ಲ. ಆಳುವವನಿಗೆ ಅರವತ್ತ ಮಂದಿ ಎಂಬ ಮಾತು ಪ್ರಚಲಿತವಿತ್ತು. ಅಜ್ಜಿ ಬಂದ ಹೊಸತರಲ್ಲಿ ಮಕ್ಕಳಾಗುವ ತನಕ ಅನಧಿಕೃತ ಸವತಿಯಂತಿದ್ದವಳ ಕೈಯಲ್ಲಿ ಏಗಿದ್ದಳು. ಅವಳದೆ ಯಜಮಾನಿಕೆ. ದಿನಾ ಬೆಳಗ್ಗೆ ಅವಳು ದವಸಧಾನ್ಯ ಕೊಡಬೇಕು ನಂತರ ರಾಗಿ ಬೀಸಿ ಇವರು ಒಲೆ ಹೊತ್ತಿಸಬೇಕು. ಕೊಟ್ಟಷ್ಟರಲ್ಲೆ ಅಡಿಗೆ ಮಾಡಬೇಕಿತ್ತು. ಮೂರು ಮಕ್ಕಳಾದ ಮೇಲೆ ಮನೆ ಮತ್ತು ಗಂಡ ಹತೋಟಿಗೆ ಬಂದರು. ಆಗಿನ್ನೂ ಅದು ಬರಡು ಸೀಮೆ. ಭದ್ರಾ ಅಣೆಕಟ್ಟು ಆಗಿರಲಿಲ್ಲ. ಅಡುಗೆ ಏನಿದ್ದರೂ ಹುರುಳಿ ಸಾರು ರಾಗಿ ಮುದ್ದೆ. ಬೇರೆಯವರು ಅಲ್ಲಿನ ಜನಕ್ಕೆ ರಾಗಿ ಮುದ್ದೆಗೆ ಲಟಿಗೆ ಹೊಡೆಯುವವರು ಎಂದೆ ಹಾಸ್ಯ ಮಾಡುತಿದ್ದರು. ನಂತರ ಎಲ್ಲ ಬದಲಾಯಿತು. ಸಸ್ಯಶ್ಯಾಮಲವಾಗಿದೆ. ಆರು ಮಕ್ಕಳಾದ ಮೇಲೆ ತಾತ ತೀರಿಹೋದರು. ಏಳು ಹಳ್ಳಿ ಶ್ಯಾನುಬೋಗರಾದರೂ ಹೊಲ ಮನೆ ಇದ್ದರೂ ಪರಿಸ್ಥಿತಿ ಚೆನ್ನಾಗಿಲಿಲ್ಲ. ಅಂಥ ಸಮಯದಲ್ಲಿ ದೊಡ್ಡ ಮಗನಿಗೆ ಶಾನುಭೋಕಿ ಕೊಡಿಸಿ ಇನ್ನೂ ಹುಡುಗನಾದ ಅವರನ್ನ ಸಂಭಾಳಸಿ ಒಂದು ಹಂತಕ್ಕೆ ತಂದುನಿಲ್ಲಿಸಿದ ಗಟ್ಟಿಗಿತ್ತಿ ನಮ್ಮ ಅಜ್ಜಿ. ಅವರ ಮಾತಿಗೆ ಮೂವರು ಮಕ್ಕಳು ಎದುರಾಡುತ್ತಿರಲಿಲ್ಲ. ಅವರು ಆಗಲೆ ಬೆಂಗಳೂರು ಕಂಡವರು. ಅವರ ಕೊನೆಯ ಮಗ ರಾಜಾಮಿಲ್ಲಿನಲ್ಲಿ ಕೆಲಸ ಮಾಡುತಿದ್ದಾಗ ಮೂರುನಾಲಕ್ಕು ವರ್ಷ ಬೆಂಗಳೂರಿನಲ್ಲೆ ಇದ್ದರು. ಮಲ್ಲೇಶ್ವರದ ೮ನೆ ಅಡ್ಡ ರಸ್ತೆಯಲ್ಲಿ ದತ್ತಾತ್ರೇಯ ದೇವಸ್ಥಾನದ ಆವರಣದಲ್ಲಿ ಮನೆ ಇದ್ದ ನೆನಪು. ಅವರು  ಹಟ ಹಿಡಿದು ಹೇಳಿದರು. ನಮ್ಮ ವಂಶದಲ್ಲೆ ಎಸ್‌ಎಸ್ಎಲ್ಸಿ ಪಾಸಾದವರಿಲ್ಲ. ಅದೂ ನಮಗೆ ಗೊತ್ತಿರವವರಲ್ಲಿ ಇಷ್ಟು ಉತ್ತಮ ಅಂಕ ಪಡೆದವರು ಇಲ್ಲವೆ ಇಲ್ಲ.. ಇವನನ್ನು ಮುಂದೆ ಓದಿಸಲೇಬೇಕು. ಯಾರು ಆಗದು ಎಂದರೆ ನಾನೆ ಹಣ ಕೊಡುವೆ. ಬೆಂಗಳೂರಲ್ಲೆ ಓದಲಿ ಎಂದು ಗಟ್ಟಿಯಾಗಿ ಪಟ್ಟುಹಿಡಿದರು..
ಅಲ್ಲದೆ ನಮ್ಮ ಸೋದರ ಮಾವರು ಹರಿಹರದಲ್ಲಿ ಮಂಗಳೂರು ಹಂಚಿನ ವ್ಯಾಪಾರ, ಕಂಟ್ರಾಕ್ಟು ಮಾಡುತಿದ್ದರು. ಅವರಿಗೆ ಬೆಂಗಳೂರು ಎಂದರೆ ಅಡುಗೆ ಮನೆ ಪಡಸಾಲೆ ಇದ್ದಂತೆ. ಅಷ್ಟು ಸುಪರಿಚಿತ. ಹಾಗಾಗಿ ಮುಂದೆ ಓದಲು ಬೆಂಗಳೂರೆ ಉತ್ತಮ. ಅಲ್ಲಿ ಯಾವುದಾದರೂ ಹಾಸ್ಟೆಲ್‌ನಲ್ಲಿ ಇರಿಸಬಹುದು ಎಂದು ಸಲಹೆ ಮಾಡಿದರು. ಹೇಗೂ ನಮ್ಮ ಊರಿನಲ್ಲಿ ಕಾಲೇಜು ಇರಲಿಲ್ಲ. ಬಳ್ಳಾರಿಯಲ್ಲಿ ಇದ್ದುದು ವೀರಶೈವ ಕಾಲೇಜು ಅದೇ ತಾನೆ ಕಣ್ಣು ಬಿಡುತಿತ್ತು. ಅನ್ಯ ಪಂಗಡದವರಿಗೆ ಅಲ್ಲಿ ಅಷ್ಟು ಉತ್ತೇಜನ ಕಡಿಮೆ. ಮೇಲಾಗಿ ಬಳ್ಳಾರಿಯೂ ನಮಗೆ ಬೆಂಗಳೂರಿನಷ್ಟೆ ಹೊಸದು. ಇನ್ನು ಅಲ್ಲಿ ಸೌಲಭ್ಯಗಳ ಕೊರೆತೆ ಬಹಳ. ಬೆಂಗೂಳರಲ್ಲಾದರೆ ಒಂದಲ್ಲ ಒಂದು ವಿದ್ಯಾರ್ಥಿ ನಿಲಯಗಳಲ್ಲಿ ಸೇರಬಹುದಿತ್ತು. ಅದಕ್ಕೆ ಅದಕ್ಕೆ ಸೋದರ ಮಾವನ ಜತೆ ಬೆಂಗಳೂರಿಗೆ ಹೊರಟೆ.
ಹೋಗುವ ಮುಂಚೆ ಮಾಡಿದ ಕಾಲೇಜು ಸೇರಲು ಪೂರ್ವ ತಯಾರಿ ಶುರುವಾಯಿತು. ಮೊದಲು ಮಾಡಿದ ಕೆಲಸವೆಂದರೆ ಒಂದು ಜತೆ ಪ್ಯಾಂಟು ಷರ್ಟು ಹೊಲಿಸಿದ್ದು. ಅದಲ್ಲದೆ, ಪ್ಯಾಂಟು  ಹೊಲಿಸಿದ್ದು ಅದೆ ಮೊದಲು. ದರ್ಜಿಯು ಬಾಟಮ್ ಹೇಗಿರಬೇಕು ಎಂದು ಕೇಳಿದಾಗ ನಾನು ಗಟ್ಟಿಯಾಗಿರಬೇಕು ಎಂದೆ. ಅಲ್ಲಿನವರು ಗೊಳ್ಳನೆ ನಕ್ಕರು. ಬಾಟಮ್‌ ಅಂದರೆ ಕಾಲಿನ ಕೆಳ ಭಾಗ. ಆಗ ಬೆಲ್‌ಬಾಟಮ್‌, ನ್ಯಾರೋ ಬಾಟಮ್‌, ಎಲಿಫೇಟ್‌ ಬಾಟಮ್ ಎಂದು ಏನೇನೋ ವೈವಿಧ್ಯಮಯವಾದ ಹಲವು ಡಿಜೈನುಗಳು ಇದ್ದವು. ಅವೆಲ್ಲ ನನಗೇನು ಗೊತ್ತು? ನಮ್ಮ ಮಾವ, ನಮ್ಮ ಹುಡುಗ ಬೆಂಗೂಳೂರಲ್ಲಿ ಕಾಲೇಜಿಗೆ ಓದಲು ಹೋಗುವನು, ಕಾಲೇಜಿನ ಹುಡುಗರು ಹಾಕುವಂತಿರುವ ಬಟ್ಟೆ ಹೊಲಿ ಎಂದನು. ಅಂಗಿಯ ಬದಲು ಬುಷ್‌ ಷರ್ಟ  ಹೊಲಿಸಬೇಕಾಯಿತು. ಅದರಲ್ಲೂ ಅರ್ಧ ತೋಳಿನ ಬುಷ್‌ಷರ್ಟ, ಪೂರ್ಣ ತೋಳಿನ ಬುಷ್ ಷರ್ಟ ಎಂಬ ಬೇಧ ಬೇರೆ. ನಾನು ಅರ್ಧ ತೋಳಿನದನ್ನೆ ಹೊಲಿಸಿಕೊಂಡೆ. ಕಾರಣ ಅದಕ್ಕೆ ತುಸು ಕಡಿಮೆ ಬಟ್ಟೆ ಬೇಕಾಗುತಿತ್ತು. ಮೊದಲಬಾರಿಗೆ ಬನಿಯನ್ನು, ಅಂಡರ್‌ವೇರ್‌  ಹೊಲಿಸಿಕೊಂಡೆ. ಬನಿಯನ್‌ ಮಲ್‌ ಬಟ್ಟೆಯಲ್ಲಿ ಹೊಲಿಸಿದರೆ ಡ್ರಾಯರ್‌ಗೆ ಪಟ್ಟಾಪಟ್ಟೆ ಬಟ್ಟೆ ಬಳಸಲಾಗುತಿತ್ತು.
ನಂತರದ ಅತಿ ಮುಖ್ಯ ಖರೀದಿ ಎಂದರೆ ಚಪ್ಪಲಿಯದು. ಆ ವರೆಗೂ ನಾನು ಚಪ್ಪಲಿ ಹಾಕಿದವನೆ ಅಲ್ಲ. ನಮ್ಮ ಅಪ್ಪನೂ ಬರಿಗಾಲು ಬಂಟ. ಅದೇಕೋ ಶಿಲ್ಕು ಜುಬ್ಬ, ಮಲ್ಲಿನ ಪಂಚೆ ಉಟ್ಟು ಸೆಂಟು ಹಾಕಿಕೊಂಡರೂ ಕಾಲಿಗೆ ಚಪ್ಪಲಿ ಹಾಕುತ್ತಲೆ ಇರಲಿಲ್ಲ. ನಮ್ಮಕಡೆ ಚಪ್ಪಲಿ ಬೇಕಾಗುತ್ತಿದ್ದುದು ಬೇಲಿಮುಳ್ಳು ಕಡಿಯಲು ಅಥವ ಬೇಲಿಕಟ್ಟಲು ಹೋಗುವವರಿಗೆ ಮಾತ್ರ. ಅವರು ಮುಳ್ಳು ಚುಚ್ಚುವುದೆಂದು ಚಪ್ಪಲಿ ಹಾಕಿಕೊಳ್ಳುವರು. ಅವನ್ನೂ ನಮ್ಮ ಊರಿನ ಕೇರಿಯವರೆ ಮಾಡಿ ಕೊಡುವರು. ಅದೂ ನಮ್ಮ ಸತ್ತ ದನ ಅವರೆ ಒಯ್ದು ಅದರ ಚರ್ಮದಿಂದ  ಮಾಡಿದ ಮೆಟ್ಟುಗಳೆ ನಮ್ಮವರ ಪಾದರಕ್ಷೆಗಳು. ಅವುಗಳ ಅಂದ ಚಂದಕ್ಕಿಂತ ಗಟ್ಟಿ ಮುಟ್ಟಾಗಿದ್ದು ಬಾಳಿಕೆ ಬಂದರೆ ಸಾಕಿತ್ತು. ಅವುಗಳ ವಿನ್ಯಾಸದ ಗೊಡವೆ ಯಾರಿಗೂ ಬೇಕಿರಲಿಲ್ಲ. ಮೊದಲಬಾರಿಗೆ ಚಪ್ಪಲಿ ಅಂಗಡಿಗೆ ಹೋಗಿ ಅಲ್ಲಿ ವಿವಿಧ ವಿನ್ಯಾಸದ ಚಪ್ಪಲಿಗಳನ್ನು ಕಂಡೆ. ಯಾವುದು ಕೊಳ್ಳಬೇಕು, ಯಾವುದು ಬಿಡಬೇಕು ಎಂದು ತಿಳಿಯಲಿಲ್ಲ. ನಮ್ಮ ಮಾವನನು ಯಾವುದು ಚೆನ್ನಾಗಿದೆ ಎಂದು ಹೇಳಿದನೋ ಅದನ್ನೆ ಕೊಂಡು ಕೊಂಡೆ. ಅದರ ಜೊತೆ ನನಗೆ ಲುಂಗಿ ಮೂಹರ್ತವಾಯಿತು. ನಮ್ಮಲ್ಲಿ ಸಾಬರು ಮಾತ್ರ ಲುಂಗಿ ಉಡುವುದು ವಾಡಿಕೆ. ಅದರಲ್ಲೂ ಸಾಬರ ಹುಡುಗರು ಮುಂಜಿಯಾದ ಮೇಲೆ ಕೆಲ ದಿನ ಲುಂಗಿಯನ್ನೆ ಉಡಬೇಕಿತ್ತು. ಅದು ಆಗ ಅವರಿಗೆ ಅನುಕೂಲಕರವೂ ಆಗುವುದು. ನಾನು ಹಾಸ್ಟೆಲ್‌ ಸೇರಿದರೆ ಲುಂಗಿ ಬೇಕಾಗಬಹುದು ಎಂದು ಎರಡು ಲುಂಗಿ ಕೊಂಡರು. ಹಾಸಲು ಕಂಬಳಿ, ಜಮಕಾನ, ಷೊಲ್ಲಾಪುರ ಹೊದಿಕೆ, ತಟ್ಟೆ ಲೋಟ, ಕೊಂಡರು. ನಮ್ಮಲ್ಲಿ ಹೆಣ್ಣುಮಗಳ ಮದುವೆ ಮಾಡಿದಾಗ ಮೊದಲ ಸಾರಿ ಗಂಡನ ಮನೆಗೆ ಕಳುಹಿಸುವಾಗ ಕೊಡುವಂತೆ ಹಾಸಿಗೆ ಬಟ್ಟೆ ಪಾತ್ರೆ ಪಡಗ, ಹೊಸ ಬಟ್ಟೆ ಜತೆಗೆ ಅವೆಲ್ಲವನ್ನೂ ಇಟ್ಟುಕೊಳ್ಳಲು ಅಮ್ಮನ ಮದುವೆಯಲ್ಲಿದ್ದ ಪೆಟ್ಟಿಗೆ ಕೆಲಸಕ್ಕೆ ಬಂದಿತು. ಅದಕ್ಕೆ ಚಿಕ್ಕ ಬೀಗದ ಖರೀದಿಯಾಯಿತು. ಮೊಂಡ ಅಂಗಿ ಲಂಡ ಅಂಗಿ ಚಣ್ಣ ಎರಡು ಹಾಕಿಕೊಂಡು ಧಿಂ ರಂಗ ಎಂದು ಹೋಗುತಿದ್ದ ನನಗೆ ಇಲ್ಲದ ಬಂಧನಗಳು ಗಂಟುಬಿದ್ದವು.
ಇವೆಲ್ಲವುಗಳ ಜೊತೆ ಹಲ್ಲು ಪುಡಿ ಸಾಬೂನು, ಕೊಬ್ಬರಿಎಣ್ಣೆ, ಹಣಿಗೆ ಕನ್ನಡಿ ಕೊಳ್ಳಲಾಯಿತು. ಹಲ್ಲುಪುಡಿ ಕೊಳ್ಳುವಾಗ ನನಗೆ ಹೇಗೆ ಹೇಗೋ ಆಯಿತು. ಇದುವರೆಗೆ ನಾವು ಇಜ್ಜಲನ್ನು ಚೂರನ್ನು ಕರಕರನೆ ಕಡಿದು ಬೆರಳಿನಿಂದ ಹಲ್ಲು ಉಜ್ಜುತಿದ್ದೆವು. ಆಗೀಗ ಬೇವಿನಕಡ್ಡಿಯನ್ನು ಕಚಕಚನೆ ಕಡಿದು ಹಲ್ಲು ಉಜ್ಜುವುದೂ ಇತ್ತು. ಆದರೆ ಈಗ ಹಲ್ಲು ಉಜ್ಜಲೂ ಹಣ ಕೊಡಬೇಕಾಯಿತು. ಅದನ್ನು ದುಡ್ಡುಕೊಟ್ಟು ಕೊಳ್ಳ ಬೇಕಾಯಿತು. ಅದು ನಂಜನಗೂಡು ದಂತ ಧಾವನಚೂರ್ಣ, ಮಂಕಿಬ್ರಾಂಡ್ ಹಲ್ಲುಪುಡಿ, ಕಾಲ್ಗೇಟ್‌ನ ಡಬ್ಬದಲ್ಲಿ ಸಿಕ್ಕುವ ಬಿಳಿ ಬಿಳಿಯಾದ ನುಣ್ಣನೆಯ ಪುಡಿ ಯಾವುದನ್ನಾದರೂ ಆರಿಸಿಕೊಳ್ಳಬಹುದಿತ್ತು. ನಮ್ಮ ಊರಲ್ಲಿಯೂ ಹೆಂಗಸರು ಹಲ್ಲಿಗೆ ಪುಡಿ ತಿಕ್ಕಿಕೊಳ್ಳುವುದನ್ನು ನೋಡಿದ್ದೆ. ಆದರೆ ಅದು ಹಲ್ಲು ಪುಡಿಯಲ್ಲ. ನಸಿ ಪುಡಿ. ಅದರಿಂದ ತಿಕ್ಕಿತಿಕ್ಕಿ ಅವರ ಹಲ್ಲುಗಳು ಫಳ ಫಳ ಬೆಳ್ಳಗೆ ಹೊಳೆಯುವ ಬದಲು ಕಪ್ಪಗೆ ಮಿರಿಮಿರಿ ಮಿಂಚುತಿದ್ದವು. ಆದರೆ ಈ ಹಲ್ಲುಪುಡಿ ಬಳಸುವದರಲ್ಲಿ ನನಗೆ ಪರಿಣಿತಿ ಇರಲಿಲ್ಲ. ಸರಿ ಯಾವುದೋ ಒಂದು ಹಲ್ಲು ತಿಕ್ಕಲು ಇದ್ದರೆ ಸಾಕು ಎಂದುಕೊಂಡೆ. ಹಾಸ್ಟೆಲ್‌ ಸೇರಿದ ಮೇಲೆ ಗೊತ್ತಾಯಿತು ಹಲ್ಲು ಉಜ್ಜಲು ಬಚ್ಚಲು ಉಜ್ಜಲು ಇರುವಂತೆ ಇದಕ್ಕೂ ಬೇರೆಯಾದ ಬ್ರಷ್ ಗಳು ಇರುತ್ತವೆ ಎಂದು. ಜತೆಗೆ ಬಿನಾಕ ಗೀತ ಮಾಲಿಕಾ ಕೇಳಿದ ಮೇಲೆ ಟೂತ್‌ ಪೇಸ್ಟನ್ನು ಬಳಸಬಹುದೆಂಬ ಅರಿವು ಮೂಡಿತು.
ನಮ್ಮಲ್ಲಿ ಸಾಧಾರಣವಾಗಿ ಎಲ್ಲರೂ ಬೆಂಗಳೂರು ಮೈಸೂರನ್ನೆ ಮುಂದಿನ ವ್ಯಾಸಂಗಕ್ಕೆ ಆಯ್ದುಕೊಳ್ಳುತಿದ್ದರು. ಆಗಲೆ ಆಂಧ್ರದ ಪ್ರಭಾವ ಕಡಿಮೆಯಾಗಿತ್ತು. ಮದನಪಲ್ಲಿ, ಅನಂತಪುರಕ್ಕೆ ಹೆಚ್ಚಿನ ಓದಿಗೆ ಹೋಗುವವರು ವಿರಳ. ಒಂದು ಮುಂಜಾನೆ ಮಾವನ ಸಮೇತ ರೈಲು ಹತ್ತಿ ಬೆಂಗಳೂರಿಗೆ ಹೊರಟೆ. ಇನ್ನೂ ಆಗ ಬೆಂಗಳೂರಿಗೆ ರೈಲೆ ಗತಿ. ಬಸ್ಸು ಬಹಳ  ಇರಲಿಲ್ಲ. ಮಧ್ಯಾಹ್ನ ನಮ್ಮೂರಿನಲ್ಲಿ ರೈಲು ಏರಿದವರು ಇನ್ನೂ ಚುಮು ಚುಮು ಅನ್ನುವಾಗಲೆ ಬೆಂಗಳೂರಿನ ಯಶವಂತಪುರದಲ್ಲಿ ಇಳಿದೆವು..


No comments:

Post a Comment