Monday, August 20, 2012

ಗುರುಗಳ ಗರಿಮೆ


ಮ್ಮಶಾಲೆಯ ಶಿಕ್ಷಕರಲ್ಲಿ ಸ್ಥಳೀಯರೆ ಹೆಚ್ಚು. ಅದರಲ್ಲೂ ಮೇಲುವರ್ಗದ ಶಿಕ್ಷಕರೇ ಜಾಸ್ತಿ. ಆದರೆ ಗಣಿತ ಮತ್ತು ವಿಜ್ಞಾನಕ್ಕೆ ಮಾತ್ರ ಮೈಸೂರು ಸೀಮೆಯವರಿದ್ದರು. ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಕ್ಕೆ ರಂಗನಾಥನ್, ಜೀವಶಾಸ್ತ್ರ ಪಾಠ ಮಾಡಲು ವೆಂಕಟಸುಬ್ಬಯ್ಯ ಹೆಸರುವಾಸಿ. ಅವರು ಕಪ್ಪೆ ಜಿರಳೆ ಕೊಯ್ಯುವಾಗ ನಮಗೆಲ್ಲ ಒಂದು ರೀತಿ. ವಿವಿಧ ಪಕ್ಷಿಗಳ ಮೊಟ್ಟೆಗಳನ್ನೂ, ವಿವಿಧ ಆಕಾರದ ಎಲೆಗಳನ್ನೂ, ಬಣ್ಣ ಬಣ್ದ ಹೂಗಳನ್ನೂ ಸಂಗ್ರಹಿಸಿ ಸಂರಕ್ಷಿಸುವ ಆಸಕ್ತಿಯನ್ನು ಅವರು ಬೆಳಸಿದರು. ಅವರ ತರಗತಿ ಎಂದರೆ ಸೂಜಿ ಬಿದ್ದರೂ ಕೇಳಬಹುದಾದ ಮೌನ. ಕಾರಣ ಅವರು ಬಹು ಮೆಲುದನಿಯಲ್ಲಿ ಪಾಠ ಮಾಡುವರು. ಅದರಲ್ಲೂ ರಂಗನಾಥನ್ ಅವರು ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ಪಾಠ ಎಂದರೆ ಎಲ್ಲಿಲ್ಲದ ಶಿಸ್ತು. ಅವರದು ಒಂದು ವಿಶೇಷ... ಅವರು ಪಾಠವನ್ನು ಬಹಳ ಚೆನ್ನಾಗಿ ಮಾಡುವವರು. ಆದರೆ ನೋಟ್ಸ್ ಮಾತ್ರ ಕೊಡುತ್ತಿರಲಿಲ್ಲ. ಎಲ್ಲರಿಗೂ ಪಾಠ ಮಾಡುವಾಗಲೇ ಟಿಪ್ಪಣಿ ಮಾಡಿಕೊಳ್ಳಬೇಕೆಂದು ಕಡ್ಡಾಯ ಮಾಡುತ್ತಿದ್ದರು. ಅದರಿಂದ ಅವರು ಪಾಠ ಮಾಡುವಾಗ ಕಮಕ್‌ ಕಿಮಕ್‌ ಎನ್ನುವ ಹಾಗಿಲ್ಲ. ಅದರಿಂದ ಜಾಣ ಮಕ್ಕಳಿಗೆ ಒಂದು ಅನುಕೂಲವಿತ್ತು. ಅವರು ಮಾಡಿಕೊಂಡ ಟಿಪ್ಪಣಿಗಳಿಗೆ ಶಾಲೆಗೆ ಸರಿಯಾಗಿ ಬರದವರಿಂದ, ಬಂದರೂ ಬರೆದುಕೊಳ್ಳಲಾಗದವರಿಂದ ಬಹು ಬೇಡಿಕೆ. ಅವರು ಬಹಳ ವಿಶ್ವಾಸದಿಂದ ಮಾತನಾಡಿಸಿ ಬೆಣ್ಣೆ ಹಚ್ಚಿ ನೋಟ್ಸ್ ಪಡೆದು ಕಾಪಿ ಮಾಡಿಕೊಳ್ಳುತ್ತಿದ್ದರು. ಕೆಲವರು ಮಾತ್ರ ಧಿಂ ರಂಗ ಎಂದು ಆರಾಮಾಗಿ ಇರತ್ತಿದ್ದರು. ಪರೀಕ್ಷೆ ಹತ್ತಿರ ಬಂದಾಗ ಮಾತ್ರ ಯಾರದಾದರೂ ನೋಟ್ಸನ್ನು ಕದ್ದು ಅಭ್ಯಾಸ ಮಾಡುತ್ತಿದ್ದರು. ಡಿಸೆಂಬರ್‌ ತಿಂಗಳು ಬಂದಾಗ ಇದ್ದಕ್ಕಿದ್ದಂತೆ ನೋಟ್ಸುಗಳು ಮಾಯವಾಗುವ ಘಟನೆಗಳು ಬಹಳ. ಎಲ್ಲರಿಗೂ ಗೊತ್ತು ಅವು ಏನಾಗಿವೆ ಎಂದು. ಆದರೆ ಹೇಳುವ ಹಾಗಿಲ್ಲ. ಪೂರ್ವ ಕಾಲದ  ಸಂಪ್ರದಾಯಸ್ಥ ಹೆಂಗಸರು, ಗಂಡನ ಹೆಸರು ಗೊತ್ತಿದ್ದರೂ ಹೇಳಲು ನಾಚಿಕೆ ಪಟ್ಟುಕೊಳ್ಳುವಂತೆ ಸುಮ್ಮನಿರಬೇಕಿತ್ತು. ತುಟಿ ಪಿಟಕ್‌ ಎನ್ನದೆ ಸಹಿಸಿಕೊಳ್ಳಲೇಬೇಕು. ಕಾರಣ ಆ ಕೆಲಸ ಮಾಡಿರಬಹುದಾದವರು ಎಲ್ಲರೂ ದಾಂಡಿಗರೆ. ಎಲ್‌ಎಲ್‌ ಬಿಗಳೇ. `ಲಾರ್ಡ್ಸ ಆಫ್‌ ಲಾಸ್ಟ್‌ ಬೆಂಚಸ್' -ಕೊನೆಯ ಬೆಂಚಿನ ಕಟ್ಟಾಳುಗಳೇ. ದೂರು ನೀಡಿದರೆ ಶಾಲೆ ಬಿಟ್ಟ ಮೇಲೆ ಸರಿಯಾದ ಉಡುಗೊರೆ ತಪ್ಪದೆ ಸಿಗುತಿತ್ತು. ಪಾಠ ಮಾಡುವಾಗಲೇ ನೋಟ್ಸ್ ಮಾಡಿಕೊಳ್ಳುವ ಅವರ ಕಡ್ಡಾಯ ಆಗ ತುಸು ಕಷ್ಟ ಎನಿಸಿದರೂ, ಕಾಲೇಜಿಗೆ ಹೋದಾಗ ಬಹು ಅನುಕೂಲವಾಯಿತು. ಅಲ್ಲಿ ಪಾಠ ಮಾಡುವಾಗ ಕಣ್ಣು ಕಣ್ಣು ಬಿಡುವ ಪ್ರಸಂಗ ಬರಲಿಲ್ಲ.
ಸಾಮಾಜಿಕ ಅಭ್ಯಾಸದ ಗುರುಗಳು ಇದಕ್ಕೆ ತದ್ವಿರುದ್ಧ. ಅವರು ಕೊಡುವ ನೋಟ್ಸ್ ಬಹು ಜನಪ್ರಿಯ. ಅದನ್ನು ಇದ್ದಕಿದ್ದಂತೆ ಬರದರೆ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಖಾಯಂ.
ಆಗಿನ ಇತಿಹಾಸವೆಂದರೆ ಘಜನಿ, ಘೋರಿ, ಮೊಗಲರು ಮತ್ತು ಬ್ರಿಟಿಷ ಗವರ್ನರ್‌ಗಳ ರಾಜ್ಯಭಾರದ ವಿವರ. ಕರ್ನಾಟಕದ ಬಗ್ಗೆ ಒಂದಕ್ಷರವೂ ಇಲ್ಲ. ಇನ್ನು ಭೂಗೋಳವಂತೂ ಅಯೋಮಯ. ಆಫ್ರಿಕಾ, ಆಸ್ಟ್ರೇಲಿಯಾ, ಯೂರೋಪಿನ ಬಗ್ಗೆ ಓದಿದರೂ ಅಮೇರಿಕಾ, ಏಷಿಯಾಗಳ ಬಗ್ಗೆ ವಿವರ ಅಷ್ಟಕಷ್ಟೆ. ಅಂದರೆ ಬ್ರಿಟಿಷ್‌ ಸಾಮ್ರಾಜ್ಯದ ವಸಾಹತುಗಳ ಬಗ್ಗೆ ಅಧ್ಯಯನಕ್ಕೆ ಆದ್ಯತೆ. ಅಮೆಜಾನ್ ಮತ್ತು ನೈಲ್‌ಗಳ ತಿಳಿಯಬೇಕಿದ್ದ ನಮಗೆ ಕಾವೇರಿ ಮತ್ತು ಕೃಷ್ಣಾ ನದಿಗಳ ಬಗ್ಗೆ ತುಸುವೂ ತಿಳಿದಿರಲಿಲ್ಲ. ಕಿಂಬರ್ಲಿ ಕುರಿತು ಓದುವ ನಮಗೆ ಕೋಲಾರದ ಚಿನ್ನದ ಗಣಿಯ ಮಾಹಿತಿ ತಿಳಿಯಬೇಕಿರಲಿಲ್ಲ. ಇದಕೆಲ್ಲ ಕಾರಣ ಅಂದಿನ ಪಠ್ಯ ಕ್ರಮ.  ನಾವಿನ್ನೂ ಮೆಕಾಲೆ ಮಹಾಶಯನ ವರದಿಗೆ ಅನುಗುಣವಾದ ಶಿಕ್ಷಣ ಕ್ರಮದ ಅಡಿಯಲ್ಲಿದ್ದೆವು. `ರಕ್ತ ಮಾಂಸದಿಂದ ಭಾರತೀಯರು ಮತ್ತು ನಡೆ ನುಡಿಗಳಿಂದ ಯುರೋಪಿಯನರು' ಆಗಬೇಕಿತ್ತು. `ಶಾಲೆ ಕಾಲೇಜುಗಳು ಗುಮಾಸ್ತರನ್ನು ತಯಾರಿಸುವ ಕಾರ್ಖಾನೆಗಳಾಗಿದ್ದವು' ಅದಕ್ಕಾಗಿಯೆ ನಮ್ಮ ಇತಿಹಾಸ ಮತ್ತು ಭೂಗೋಳ ಗೌಣವಾಗಿದ್ದವು. ಇತ್ತೀಚೆಗೆ ಬದಲಾವಣೆ ಬಂದಿರುವುದು ಗಮನಾರ್ಹ.
ಇತಿಹಾಸದ ತರಗತಿ ಬಂದರೆ ಮಾನೀಟರನಿಗೆ ಒಂದು ಹೆಚ್ಚಿನ ಕೆಲಸ. ಅವನು ತರಗತಿ ಪ್ರಾರಂಭವಾಗುವ ಮೊದಲೆ ಆ ದಿನದ ಪಾಠಕ್ಕೆ ಸಂಬಂಧಿಸಿದ ನಕ್ಷೆ ತಂದು ತರಗತಿಯಲ್ಲಿ ನೇತು ಹಾಕಬೇಕಿತ್ತು. ಭೂಗೋಳದ ಪಾಠವಾದರಂತೂ ಭೂಗೋಳದ ವೈವಿಧ್ಯಮಯ ನಕ್ಷೆ ಇದ್ದೆ ಇರಬೇಕು. ಜತೆಗೆ ಒಮ್ಮೊಮ್ಮೆ ದುಂಡನೆಯ ಗ್ಲೋಬು ಟೇಬಲ್ಲಿನ ಮೇಲೆ ಪ್ರತ್ಯಕ್ಷವಾಗುತಿತ್ತು. ಆ ದಿನ ಎಲ್ಲರೂ ಅಟ್ಲಾಸು ತರಲೇಬೇಕು. ಪಾಠವಾದ ಮೇಲೆ ನಮ್ಮನ್ನು ಒಬ್ಬೊಬರನ್ನಾಗಿ ಕರೆದು ನದಿ, ನಗರ, ಪರ್ವತ, ಗುರುತಿಸಲು ಹೇಳುವರು. ಅವರು ಅಷ್ಟೆಲ್ಲ ಹೇಳಿದರೂ ಹಿಮಾಲಯ ಪರ್ವತವನ್ನು ಹಿಂದೂ ಮಹಾಸಾಗರದಲ್ಲಿ, ಕನ್ಯಾಕುಮಾರಿಯನ್ನು ಕಾಶ್ಮೀರದಲ್ಲಿ ಬಂದರು ನಗರವನ್ನು ಮಧ್ಯಪ್ರದೇಶದಲ್ಲಿ ಹುಡುಕುವ ಭೂಪರೂ ಇದ್ದರು. ಆಗ ತರಗತಿಯಲ್ಲಿ ನಗುವೆ ನಗು. ಹಾಗೆ ತಪ್ಪು ಆಗಲು ಒಂದು ಬಲವಾದ ಕಾರಣವಿತ್ತು ನಕಾಶೆಯಲ್ಲಿನ ಹೆಸರುಗಳೆಲ್ಲ ಇಂಗ್ಲಿಷ್‌ನಲ್ಲೆ ಇರುತಿದ್ದವು. ನೇಕರ ಇಂಗ್ಲಿಷ್‌ ಬಹು ತುಟ್ಟಿ. ಅದಕ್ಕೆ ಮೊದಲ ಅಕ್ಷರ ನೆನಪಿಟ್ಟುಕೊಂಡು ಅಂದಾಜಿನಮೇಲೆ ಗುರುತಿಸಲು ಪ್ರಯತ್ನಿಸುತಿದ್ದರು. ಅದಕ್ಕೆ ಅಸಂಗತವಾಗುತಿತ್ತು.
ಪರೀಕ್ಷೆಯಲ್ಲಿ ನಾವು ನಕ್ಷೆ ಎಳೆದು ಕೊಟ್ಟದ್ದ ಸ್ಥಳ ಗುರುತಿಸಲು ನಾಲಕ್ಕು ಅಂಕಗಳುಇದ್ದವು. ಅದಕ್ಕೆ ಈ ತಯಾರಿ. ಒಂದೊಂದು ಸಾರಿ ನಕ್ಷೆಯಲ್ಲಿ ಗುರುತಿಸಲು ಬಳಸುವ ಪಾಯಿಂಟರ್‌ನಿಂದ ತಪ್ಪು ಮಾಡದವರಿಗೆ ಏಟು ಬೀಳುತಿತ್ತು. ನಾವೆಲ್ಲರೂ ಭಾರತದ ನಕಾಶೆಯನ್ನು ಹಾಕುವುದನ್ನು ಅಭ್ಯಾಸ ಮಾಡಲೇಬೇಕಿತ್ತು. ಬಂದರುಗಳನ್ನು ಸಾಗರದ ಹತ್ತಿರ ಗುರುತಿಸಬೇಕು ಮತ್ತು ನದಿಗಳನ್ನು ಸಮುದ್ರ ಸೇರಿಸಬೇಕು ಎಂಬ ಮೂಲಪಾಠವನ್ನಂತೂ ಅವರು ಮನದಟ್ಟು ಮಾಡಿಸಿದ್ದರು.
ಸಾಮಾಜಿಕ ಅಭ್ಯಾಸದ ಮಾಷ್ಟ್ರು ಕೊಡುತಿದ್ದ ನೋಟ್ಸು ಬಹಳ ಜನಪ್ರಿಯವಾಗಿದ್ದರೂ ಒಬ್ಬಿಬ್ಬರು ಬರೆದುಕೊಳ್ಳುತ್ತಲೇ ಇರಲಿಲ್ಲ. ಕಾರಣ ನಂತರ ತಿಳಿಯಿತು. ಅವರ ಅಣ್ಣ ಅಥವಾ ಹಿರಿಯ ನಂಟರೊಬ್ಬರು ಇದೇ ಶಾಲೆಯಲ್ಲಿ ಅಭ್ಯಾಸ ಮಾಡುವಾಗ, ಇದೇ ಮಾಷ್ಟ್ರು ಕೊಟ್ಟ ನೋಟ್ಸನ್ನು ಬರೆದು ಕಂಡಿದ್ದನ್ನು ಹೊಂದಿದ್ದರು. ಅದನೆ ಇವರೂ ಓದುತಿದ್ದರು. ಕಾರಣ ಕಳೆದ ಹತ್ತು ವರ್ಷದಲ್ಲಿ ಅದರಲ್ಲಿ ಒಂದಕ್ಷರವೂ ಬದಲಾವಣೆಯಾಗಿರಲಿಲ್ಲ.
ನಾನು ನಿವೃತ್ತನಾಗಿ ಹತ್ತು ವರ್ಷ ಕಳೆದರೂ ಇನ್ನು ನೆನಪಿರುವುದು ನಮ್ಮ ಕನ್ನಡ ಮೇಷ್ಟ್ರು. ಬಾಲಕೃಷ್ಣ ಭಟ್ಟರು ಎಂದು ಅವರ ಹೆಸರು. ಬಹಳ ಮಜಭೂತಾದ ಆಕಾರ. ತರಗತಿಗೆ ಬಂದು ಕುರ್ಚಿಯಲ್ಲಿ ಕುಳಿತರೆ ಇರುವೆ ನುಸಿಯಲೂ ಜಾಗ ಇರದು. ಅವರು ತುಂಬ ಸಂಪ್ರದಾಯಪ್ರಿಯರು. ಫುಟ್‌ ಬಾಲನಂತೆ ದುಂಡಗಿನ ಮುಖ. ಮಿರಮಿರನೆ ಮಿಂಚುವ ನುಣ್ಣಗಿನ ತಲೆ. ಹಿಂಭಾಗದಲ್ಲಿ ಕಿರುಬೆರಳ ಗಾತ್ರದ ಶಿಖೆ. ವಿಶಾಲವಾದ ಹಣೆಯ ಮೇಲೆ ಎದ್ದು ಕಾಣುವ ಬಿಳಿಯ ಮೂರು ಭಸ್ಮದ ಸಾಲು. ಮಧ್ಯದಲ್ಲಿ ದುಂಡಗೆ ಗಂಧದ ಬೊಟ್ಟು. ಬೊಟ್ಟು ಅಂಚಿನ ಮೇಲು ಕೋಟೆ ಪಂಚೆ. ತುಂಬುತೋಳಿನ ಅಂಗಿ ಕೊರಳ ಸುತ್ತು ಶಿವನ ಕೊರಳಲಲ್ಲಿರುವ ಹಾವಿನಂತೆ ಸುತ್ತಿಕೊಂಡಿರುವ ಜರಿ ಅಂಚಿನ ಶಲ್ಯ. ಅವರು ಎದುರು ಬಂದರೆ ಸಾಕು ಎಂಥವರೂ ಎರಡೂ ಕೈ ಎತ್ತಿ ಮುಗಿಯ ಬೇಕೆನಿಸುವ ವಿದ್ವತ್‌ ಕಳೆಯಿಂದ ಕೂಡಿದ ವ್ಯಕ್ತಿತ್ವ. ಅವರ ಪಾಠದ ರೀತಿ ಮೋಡಿ ಮಾಡುವಂತಹದು. ವ್ಯಾಕರಣ ಬೋಧನೆಯಲ್ಲಿ ಎತ್ತಿದ ಕೈ. ಹೈಸ್ಕೂಲ್ ನಂತರ ಇಂಗ್ಲಿಷ್‌ಗೆ ಶರಣಾಗಿ ನಂತರ ಆಂಗ್ಲ ಭಾಷೆಯ ಉಪನ್ಯಾಸಕನಾಗಿ ವೃತ್ತಿ ಪ್ರಾರಂಭಿಸಿ, ಪ್ರಾಂಶುಪಾಲನಾಗಿ ನಿವೃತ್ತನಾದ ಹತ್ತು ವರ್ಷದ ಮೇಲೂ ಕನ್ನಡ ಪದ್ಯ ಒಂದಕ್ಕೆ ಪ್ರಸ್ತಾರ ಹಾಕಿ ಗಣ ವಿಭಜನೆ ಮಾಡುವಾಗ  ಅವರು ಕಲಿಸಿ ಕೊಟ್ಟ `ಯಮಾತಾ ರಾಜ ಭಾನ ಸಲಗಮ' ತಟ್ಟನೆ ನೆನಪಿಗೆ ಬರುತ್ತದೆ. ಅವರ ಬಾಯಲ್ಲಿ ಹಳೆಗನ್ನಡ ಸುಲಿದ ಬಾಳೆಹಣ್ಣು. ಅಷ್ಟು ಸರಳವಾಗಿ ಪದವಿಭಜನೆ ಮಾಡಿ ಅರ್ಥ ವಿವರಣೆ ನೀಡುವರು. ಇನ್ನು ನಡು ಗನ್ನಡವನ್ನಂತೂ ದ್ರಾಕ್ಷಿ ಹಣ್ಣು ತಿಂದಂತೆರುಚಿಕಟ್ಟಾಗಿ ಪಾಠ ಮಾಡುತ್ತಿದ್ದರು. ಅವರು ಸದಾ ಶಾಂತಮೂರ್ತಿ. ಕಡು ಕೋಪದಲ್ಲಿ ಅವರು ಬೈದರೂ ಬಳಸುತ್ತಿದ್ದುದು, ಭ್ರಷ್ಟ, ಪಾಪಿಷ್ಟ ಎಂಬ ಪದಗಳು ಮಾತ್ರ. ಅದೂ ತಿಂಗಳಿಗೆ ಒಂದೋ ಎರಡು ಸಾರಿ. ನಮಗೆ ಕೊನೆ ಕೊನೆಗೆ ಗೊತ್ತಾಗಿತ್ತು ಅವರ ಕೋಪ ಉಕ್ಕುವ ದಿನ. ಅವರು ತಿಥಿ ನಕ್ಷತ್ರ ನೋಡಿ ನಾಪಿತನ ಕೈಗೆ ತಲೆ ಕೊಡುತ್ತಿದ್ದರು. ತಲೆಯ ಮುಂಡನ, ಮುಖ ಕ್ಷೌರ ಒಟೊಟ್ಟಿಗೆ ಆಗುತಿತ್ತು. ಅಂದು ಅವರ ಶಿರೋಭಾಗ, ಮುಖ ಮಿರಿ ಮಿರಿ ಮಿಂಚುತಿತ್ತು. ಆ ದಿನ ಮಾತ್ರ ಮುಟ್ಟಿದರೆ ಮುನಿ. ತುಸು ತಂಟೆ ಮಾಡಿದರೂ ಸಾಕು ಕೋಪ ಉಕ್ಕುತಿತ್ತು. ಬಹುತೇಕ ಕ್ಷೌರಿಕನ ಕತ್ತಿಯ ಪರಿಣಾಮವಾಗಿ ಮುಖ ತಲೆ ಉರಿತ ಮೂಡಿರಬಹುದು. ಅದಕ್ಕೆ ಸದಾ ಶಾಂತ ಮೂರ್ತಿಯಾದ ಅವರು ವೀರಭದ್ರನಂತೆ ಘರ್ಜಿಸುತ್ತಿದ್ದರು.
ಅವರದು ಬಹು ವಿನಯಶೀಲ ವ್ಯಕ್ತಿತ್ವ. ಯಾರೆ ನಮಸ್ಕಾರ ಮಾಡಿದರೂ ಎರಡೂ ಕೈ ಎತ್ತಿ ನಮಸ್ಕಾರ ಎನ್ನುವುದು ಅವರಿಗೆ ರಕ್ತಗತವಾಗಿತ್ತು. ಅದಕ್ಕೆ ಹಿರಿ ಕಿರಿಯರೆಂಬ ಭೇದವಿಲ್ಲ. ಎಂಟನೆ ತರಗತಿಯ ಎಳೆ ಹುಡುಗನು `ನಮಸ್ಕಾರ್‌ ಸಾರ್‌' ಎಂದರೆ  ಅವರು ಆತ್ಮೀಯತೆಯಿಂದ `ನಮಸ್ಕಾರ ಅಪ್ಪ, ಚೆನ್ನಾಗಿದ್ದೀಯ' ಎನ್ನುವರು. ಅವರ ಈ ಸದ್ಗುಣವನ್ನು ದುರುಪಯೋಗ ಪಡಿಸಿಕೊಳ್ಳುವ ಕಿಡಿಗೇಡಿಗಳೂ ಇದ್ದರು. ಅವರು ಮನೆಯಿಂದ ಶಾಲೆಗೆ ಸುಮಾರು ಎರಡು ಮೈಲು ದೂರ. ಅವರು ಹಳೆಯ ಸೈಕಲ್ಲನ್ನು ಏರಿ ಸಾವಕಾಶವಾಗಿ ರಸ್ತೆಯಲ್ಲಿ ಬರುವುದೆ ಒಂದು ಮೋಜಿನ ವಿಷಯ. ಅಷ್ಟು ಸ್ಥೂಲಕಾಯದ ಅವರು ಹೇಗೋ ಹಳೆಯ ಸೈಕಲ್ಲ ಮೇಲೆ ಏರಿ ಬರುತ್ತಿರುವುದನ್ನು ನೋಡಿದರೆ ಸರ್ಕಸ್‌ ನಲ್ಲಿ ಆನೆ ಸೈಕಲ್‌ ಸವಾರಿ ಮಾಡುವ ದೃಶ್ಯ ನೆನಪಿಗೆ ಬರುವುದು.
ಅವರು ಸೈಕಲ್‌ ಹತ್ತಿ ಗಂಭಿರವಾಗಿ ರಸ್ತೆಯಲ್ಲಿ ಸಾಗುತ್ತಿರುವಾಗ ಯಾರಾದರೂ ನಮಸ್ಕಾರ ಎಂದರೆ ಸಾಕು ಗಡಿ ಬಿಡಿಗೊಳ್ಳುತ್ತಿದ್ದರು ಎಂದಿನ ಅಭ್ಯಾಸದಂತೆ ನಮಸ್ಕಾರ ಎನ್ನಲು ಕೈ ಎತ್ತುತಿದ್ದರು. ಮೊದಲೆ ಮಹಾಕಾಯ. ಸೈಕಲ್ಲಿನ ಸಮತೋಲನ ತಪ್ಪುತಿತ್ತು. ಹೇಗೋ ಸಂಭಾಳಿಸಿಕೊಂಡು ಬೀಳದಂತೆ ಮುಂದೆ ಸಾಗುತಿದ್ದರು. ಅವರ ಆಗಿನ ಗಲಿಬಿಲಿ ನೋಡುವವರಿಗೆ ನಗೆಯ ವಸ್ತುವಾಗುತಿತ್ತು ಆದರೂ ಅವರು ಪ್ರತಿ ನಮಸ್ಕಾರ ಮಾಡುವುದನ್ನು ಬಿಡುತ್ತಿರಲಿಲ್ಲ. ನಮಸ್ಕಾರ  ಹೇಳಿದ ಹುಡುಗ ತರಗತಿಯಲ್ಲಿ ಸಿಕ್ಕರೆ ಮಾತ್ರ ಅವನಿಗೆ ಮಹಾ ಮಂಗಳಾರತಿ ಮಾಡುತ್ತಿದ್ದರು. ಆದರೆ ಮೊದಲೆ ಆಗುವ ಅನಾಹುತ ಗೊತ್ತಿದ್ದ ಆ ಹುಡುಗ ಅಂದು ಅವರ ತರಗತಿಗೆ ಬರುತ್ತಲೆ ಇರಲಿಲ್ಲ. ಮಾರನೆ ದಿನ ಅವರಿಗೆ ಅದರ ನೆನಪೆ ಇರುತ್ತಿರಲಿಲ್ಲ. ಈ ಹಾಸ್ಯ ಪ್ರಸಂಗ ತಿಂಗಳಿಗೆ ಒಂದೆರಡು ಸಾರಿ ಮರುಕಳಿಸುತಿತ್ತು. ಹುಡುಗರು ಮಾತ್ರ ಬೇರೆ ಬೇರೆಯವರು. ನಿವೃತ್ತರಾದ ಮೇಲೂ ಅವರು ಜ್ಯೋತಿಷ್ಯ, ಪ್ರವಚನ, ಪಂಚಾಗದ ಕೈಪಿಡಿ ರಚನೆ ಹೀಗೆ ಹಲವು ಜನೋಪಯೋಗಿ ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಸಾರ್ಥಕ ಜೀವನ ನಡೆಸಿದರು.

No comments:

Post a Comment