Monday, August 20, 2012

ಹೈಸ್ಕೂಲು ಅಂಗಳದಲ್ಲಿ


ನ್ನ ಹೈಸ್ಕೂಲು ಶಿಕ್ಷಣ ಹೊಸಪೇಟೆಯ ಮುನಿಸಿಪಲ್ ಶಾಲೆಯಲ್ಲಿ ಆಯಿತು. ಅದು ತುಂಬ ಹಳೆಯ ಶಾಲೆ. ಬಹು ದೊಡ್ಡದು ಕೂಡಾ. ಊರ ಹೊರಗೆ ವಿಶಾಲ ಮೈದಾನದಲ್ಲಿದೆ. ಅಲ್ಲಿ   ಕನ್ನಡ, ತೆಲಗು. ತಮಿಳು, ಉರ್ದು, ಸಂಸ್ಕೃತ ಕಲಿಕೆಗೆ ಅವಕಾಶವಿತ್ತು. ಅವನ್ನೆಲ್ಲ ಓದುವವರೂ ಸಾಕಷ್ಟು ಇದ್ದರು. ಜಿಲ್ಲಾ ಕೇಂದ್ರವನ್ನು ಬಿಟ್ಟರೆ ಇದೆ ಅತಿ ಹಳೆಯ ಮತ್ತು ದೊಡ್ಡ ಶಾಲೆ. ಅದು ಪ್ರಾರಂಭವಾದದ್ದು ೧೯೩೭ರಲ್ಲಿ. ಅದರ ಕಟ್ಟಡದ ಶಂಕುಸ್ಥಾಪನೆ ಮಾಡಿದ್ದು ಆಗಿನ ಮದ್ರಾಸ್ ಪ್ರಾಂತ್ಯದ ಗವರ್ನರ್ ಆದ ಸ್ಟ್ಯಾನ್ಲಿ ಅವರು. ಇದರ ವಿಶೇಷತೆ ಎಂದರೆ ಬೃಹತ್ತಾದ  ಈ ಕಲ್ಲಿನ ಕಟ್ಟಡ ಮುಗಿಸಲು ತೆಗೆದುಕೊಂಡ ಕಾಲ ಕೇವಲ ೧೦೦ ದಿನ. ಆಗ ಜನಪ್ರತಿನಿಧಿಯಾಗಿದ್ದವರು ಡಾ. ನಾಗನಗೌಡ. ಅವರು ನಮ್ಮ ಭಾಗದ ಮೊದಲ ಪಿಎಚ್. ಡಿ  ಪದವೀಧರರು. ಅದೂ ಪ್ಯಾರಿಸ್ಸಿನ ಮೇರಿ ಕ್ಯೂರಿ ಇನ್ ಸ್ಟಿಟ್ಯೂಟಲ್ಲಿ ಕಲಿತವರು. ಕೃಷಿ ವಿಜ್ಞಾನದಲ್ಲಿ ಪರಿಣಿತರು. ಮಂತ್ರಿಗಳೂ ಆಗಿದ್ದರು. ಈಗ ನಮ್ಮ ಜಿಲ್ಲೆಯಲ್ಲಿ ಎಲ್ಲೆಲ್ಲೂ ಹರಡಿರುವ ಜಾಲಿ ಗಿಡದ ಬೀಜವನ್ನು ತಂದವರು ಅವರೆ. ಅದಕ್ಕೆ ಬಹುಕಾಲ ಅದಕ್ಕೆ ನಾಗನಗೌಡರ ಜಾಲಿ ಎಂದೆ ಹೆಸರಾಗಿತ್ತು. ಹೊಲ ಗದ್ದೆಗಳಿಗೆ ಬೇಲಿಯಾಗಿ ಮಾತ್ರವಲ್ಲ ಇತ್ತೀಚಿನ ವರೆಗೆ ಬಡಬಗ್ಗರ ಮನೆಯ ಒಲೆಗೆ ಉರುವಲಾಗಿಯೂ ಅದು ಬಹು ಉಪಕಾರಿಯಾಗಿತ್ತು.
ಬಳ್ಳಾರಿಯು ಮೊದಲಿನಿಂದಲೂ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟ ಪ್ರದೇಶ. ಅದು ಬರಗಾಲಕ್ಕೆ, ಬಡತನಕ್ಕೆ ಹೆಸರಾದ BACK ಜಿಲ್ಲೆಗಳಲ್ಲಿ ಒಂದು. B- ಬಳ್ಳಾರಿ, A- ಅನಂತಪುರ, C- ಕಡಪಾ ಮತ್ತು K- ಕರ್ನೂಲು. ಹೀಗಾಗಿ ಇಲ್ಲಿ ತೆಲಗು ಪ್ರಭಾವ ಬಹಳ. ಬಹುಶಃ ಬಳ್ಳಾರಿ ಬಹು ಜನರ ಮನೆ ಮಾತು ತೆಲುಗು. ಸುತ್ತ ಮುತ್ತಲಿನವರಿಗೆಲ್ಲ ಎರಡೂ ಭಾಷೆಗಳಲ್ಲಿ ಬಳಕೆ. ನಗರದಲ್ಲಂತೂ, "ರಾರಾ ಪೋರಾ" ಸಂಸ್ಕೃತಿ, ಎನ್ಟಿಆರ್ ಮತ್ತು ಎಎನ್ಆರ್ ಸಿನೆಮಾಗಳು ಆಂಧ್ರದ ಜತೆಯಲ್ಲಿಯೇ ಇಲ್ಲಿಯೂ ಬಿಡುಗಡೆ ಆಗುತ್ತಿದ್ದವು, ಅಷ್ಟೆ ಅಲ್ಲ ಜಯಭೇರಿ ಬಾರಿಸುತ್ತಿದ್ದವು. ಏಕೀಕರಣವಾದ ಮೇಲೆ ಬಳ್ಳಾರಿ ಮೈಸೂರು ರಾಜ್ಯದಲ್ಲಿ ವಿಲೀನವಾದರೂ ಮೂರು ನಾಲಕ್ಕು ವರ್ಷ ಅಂದರೆ ನಾನು ಹೈಸ್ಕೂಲು ಮುಗಿಸುವವರೆಗೂ ಶೈಕ್ಷಣಿಕವಾಗಿ ಮದರಾಸಿನ ನಿಯಾಮಾವಳಿಗಳೆ ಇಲ್ಲಿ ನಮಗೂ ಅನ್ವಯವಾಗುತ್ತಿದ್ದವು. ಆಗ ದೊಡ್ಡ ತಾಲೂಕಿನಲ್ಲಿ ಮಾತ್ರ ಪ್ರೌಢಶಾಲೆ. ಮುನಿಸಪಾಲಟಿ ಇದ್ದಲ್ಲಿ ಮುನಿಸಿಪಲ್ ಸ್ಕೂಲು. ಉಳಿದ ತಾಲೂಕುಗಳಲ್ಲಿ ಬೋರ್ಡು ಸ್ಕೂಲು. ಅಂದರೆ ಜಿಲ್ಲಾ ಬೋರ್ಡು ಶಾಲೆಗಳು.  ಖಾಸಗಿ ಶಾಲೆಗಳು ಅತಿ ಕಡಿಮೆ. ಬಹುಶಃ ಜಿಲ್ಲಾ ಕೇಂದ್ರದಲ್ಲಿನ ವಾರ್ಡ್ಲಾ ಶಾಲೆಯೊಂದೆ ಇತ್ತು ಅಂತ ಕಾಣುತ್ತೆ. ನಮ್ಮ ಪುಣ್ಯಕ್ಕೆ ಹೊಸಪೇಟೆಯಲ್ಲಿ ಮುನಿಸಿಪಲ್ ಸ್ಕೂಲ್ ಇತ್ತು.. ಉಳಿದವು ಬೋರ್ಡು ಸ್ಕೂಲುಗಳು. ಅವೂ ಇದ್ದದ್ದು ಮೂರೋ ನಾಲಕ್ಕೋ. ಬೋರ್ಡು ಎಂದರೆ ಡಿಸ್ಟ್ರಿಕ್ಟ್ ಬೋರ್ಡು ನಂತರ ಅವೆ ತಾಲೂಕು ಬೋರ್ಡು ಶಾಲೆಗಳಾದವು. ಆಗ ಪದವಿ ಕಾಲೇಜಿನ ಮಾತಂತೂ ದೂರ ಉಳಿಯಿತು. ಅದೇ ತಾನೆ ಬಳ್ಳಾರಿಯಲ್ಲಿ ವೀರಶೈವ ಕಾಲೇಜು ಕಣ್ಣು ಬಿಡುತ್ತಿತ್ತು. ಅದಕ್ಕೂ ಮೊದಲು ಅನಂತಪುರ ಅಥವ ಮದನಪಲ್ಲಿಗೆ ಕಾಲೇಜು ಶಿಕ್ಷಣಕ್ಕಾಗಿ ಹೋಗಬೇಕಿತ್ತು. ಕಾರಣ ನಮ್ಮದು ಗಡಿ ಜಿಲ್ಲೆ. ತೆಲುಗಿನ ಪ್ರಭಾವ ಜಾಸ್ತಿ. ಆದ್ದರಿಂದ ಹೆಚ್ಚಿನ ಶಿಕ್ಷಣಕ್ಕೆ ಬೆಂಗಳೂರು ನಮ್ಮವರಿಗೆ ದೂರ. ಪರ ಪ್ರಾಂತ್ಯವಿದ್ದಂತೆ. ಇನ್ನು ಕೆಲ ಭಾಗ ಹೈದ್ರಾಬಾದಿನ ನಿಜಾಮರ ಆಡಳಿತದಲ್ಲಿತ್ತು. ಆದ್ದರಿಂದ ಬ್ರಿಟಿಷರಿಂದ ಪ್ರಾರಂಭಿಸಲಾಗಿದ್ದ ಶಾಲೆ ಕಾಲೇಜುಗಳು ನಮ್ಮಲ್ಲಿನವರನ್ನು ಆಕರ್ಷಿಸುತ್ತಿದ್ದವು. ಹೆಚ್ಚು ಅನುಕೂಲಸ್ಥರಾದರೆ ಮದರಾಸಿನ ಪ್ರಸಿಡೆನ್ಸಿ ಕಾಲೇಜು ಹುಡುಗರಿಗೆ, ಹುಡುಗಿಯರಿಗೆ ಸ್ಟೆಲ್ಲಾ ಮೇರಿಸ್. ಅವು ಆಕ್ಸಫರ್ಡ  ಮತ್ತು ಕೇಂಬ್ರಿಡ್ಜಗಳ ಹೆಬ್ಬಾಗಿಲಿದ್ದಂತೆ. ಆದರೆ ಅಲ್ಲಿ ಕಾಲೇಜು ಓದುವವವರು ವಿರಳಾತಿ ವಿರಳ. ಅನಂತಪುರ ಇಲ್ಲವೆ ಮದನಪಲ್ಲಿಗೆ ಹೋಗುವವರೆ ಹೆಚ್ಚು. ಆದ್ದರಿಂದ ಆಂಧ್ರಪ್ರದೇಶದ ದೊಡ್ಡ ದೊಡ್ಡ ಹಿರಿಯ ನಾಯಕರ ಸಹಪಾಠಿಗಳು ನಮ್ಮ ಜಿಲ್ಲೆಯಲ್ಲಿದ್ದರು. ನಮ್ಮ ರಾಜ್ಯಪಾಲರಾಗಿದ್ದ ವೆಂಕಟ ಸುಬ್ಬಯ್ಯನವರ ಸಹಪಾಠಿ ನಮ್ಮ ಹತ್ತಿರದ ಗ್ರಾಮದ ಸಿರಿವಂತರ ಮಗ. ಆ ಗ್ರಾಮಕ್ಕೆ ಆತನೆ ಪ್ರಥಮ ಪದವೀಧರ. ಅಷ್ಟೆ ಏಕೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೈ. ಎಸ್ ರಾಜಶೇಖರರೆಡ್ಡಿಯವರು ಓದಿದ್ದು ನಮ್ಮ ಬಳ್ಳಾರಿಯಲ್ಲಿಯೇ. ಅವರು ಮುಖ್ಯಮಂತ್ರಿಯಾದ ಮೇಲೂ ತಮ್ಮ ಹೈಸ್ಕೂಲು ಸಹಪಾಠಿಗಳ ಜತೆ ಸಂಪರ್ಕ ಇಟ್ಟುಕೊಂಡಿದ್ದರು. ವಿಜಯನಗರದ ಅರಸ ಕೃಷ್ಣದೇವರಾಯನು ಕರ್ನಾಟಕಾಂಧ್ರ ಸಾರ್ವಭೌಮನಾಗಿದ್ದ ಎಂಬುದಕ್ಕೆ ನಮ್ಮ ಜಿಲ್ಲೆ ಜೀವಂತ ಸಾಕ್ಷಿಯಾಗಿದೆ.
ಒಂದು ದಿನ ಬೆಳಗ್ಗೆ ಪ್ರಾರ್ಥನೆ ಮುಗಿದು ಮೊದಲ ಪಿರಯಡ್ ನಲ್ಲಿ ತರಗತಿಯಲ್ಲಿ ಹಾಜರಿ ತೆಗೆದುಕೊಳ್ಳುತಿದ್ದರು. ಒಂದೆ ಸಲ ಬಹಳ ಜನ ಶಾಲೆಯಲ್ಲಿ ನುಗ್ಗಿದರು. ಎರಡು ಲಾರಿಗಳಲ್ಲಿ ಪಡ್ಡೆ ಹುಡುಗರು ಬಂದಿದ್ದರು. ಅವರೆಲ್ಲರೂ ಕರ್ನಾಟಕಕ್ಕೆ ಜಯವಾಗಲಿ ಎಂದು ಘೋಷಣೆ ಕೂಗುತಿದ್ದರು. ಪ್ರತಿ ತರಗತಿಯ ಮುಂದೆ ಬಂದು ಎಲ್ಲರನ್ನೂ ಹೊರಗೆ ಕರೆದರು. ನಾವೆಲ್ಲ ಎರಡು ಮಾತಿಲ್ಲದೆ ಶಾಲೆಯ ಹೊರಗೆ ಜಮಾಯಿಸಿದೆವು. ಅಲ್ಲಿ ನೆರೆದಾಗ ಗೊತ್ತಾಯಿತು. ಅದು ಏಕೀಕರಣದ ಚಳುವಳಿ ಎಂದು. ಆ ಮೆರವಣಿಗೆಯಲ್ಲಿ ಟಿಸಿಎಚ್ ಹುಡುಗರದೆ ಮುಂದಾಳುತನ. ಸ್ಥಳೀಯ ನಾಯಕರೂ ಇದ್ದರು. ಬಳ್ಳಾರಿ ಜಿಲ್ಲೆಯನ್ನು ವಿಶಾಲ ಮೈಸೂರಿನಲ್ಲಿ ಸೇರಿಸಬೇಕೆಂದು ಒತ್ತಾಯಿಸಲು ಚಳುವಳಿ ನಡೆದಿತ್ತು. ಅದು ಭಾಷಾವಾರು ಪ್ರಾಂತ್ಯ ರಚನೆಗೆ ಮುಂದಾದ ಕಾಲ. ಪೊಟ್ಟಿ ಶ್ರೀರಾಮುಲು ಅವರ ಪ್ರಾಣ ತ್ಯಾಗದಿಂದ ಕೇಂದ್ರ ಸರ್ಕಾರವು ಭಾಷಾವಾರು ಪ್ರಾಂತ್ಯ ರಚನಗೆ ಕೈ ಹಾಕಿತ್ತು. ಬಳ್ಳಾರಿ ಜಿಲ್ಲೆಯನ್ನು ಆಂಧ್ರ ಪ್ರದೇಶದಲ್ಲಿ ಸೇರಿಸಲು ಹುನ್ನಾರ ನಡೆದಿತ್ತು. ಮುಖ್ಯವಾಗಿ ಬಳ್ಳಾರಿ ನಗರ ಮತ್ತು ಸುತ್ತಮುತ್ತಲು ತೆಲುಗರ ಪ್ರಾಬಲ್ಯ ಬಹಳ. ಅವರದೆಲ್ಲ ಆಂಧ್ರದತ್ತ ಒಲವು. ಆದರೆ ಉಳಿದೆಲ್ಲ ತಾಲೂಕಿನವರು ಮತ್ತು ಗ್ರಾಮಾಂತರ ಪ್ರದೇಶದವರು ಕನ್ನಡಿಗರು. ಅದಕ್ಕೆಂದೆ ಚಳುವಳಿ ನಡೆದಿತ್ತು.
ಮಹಬಲೇಶ್ವರಪ್ಪ, ಟೆಕ್ಕೂರು ಸುಬ್ರಮಣ್ಯ, ಬೂದಿಹಾಳು ಅನಂತಾಚಾರ್ಯ, ಆರ್. ನಾಗನಗೌಡ, ಜೋಳದ ರಾಶಿ ದೊಡ್ಡನಗೌಡ ಮೊದಲಾದ ಗಣ್ಯರು ಒತ್ತಡ ಹಾಕಿ ಬಳ್ಳಾರಿ ಆಂಧ್ರದ ಪಾಲಾಗುವುದನ್ನು ತಪ್ಪಿಸಿದರು. ಅದರೂ ಆಲೂರು, ಆದೋನಿ ಮತ್ತು ರಾಯದುರ್ಗ ತಾಲೂಕುಗಳು ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಿದ್ದರೂ ಕೈಬಿಟ್ಟು ಹೋದವು.
ಏಕೀಕರಣದ ನಂತರ ಮುಂಬಯಿ, ನಿಜಾಮ, ಮದ್ರಾಸು ಪ್ರಾಂತ್ಯ ಹಳೆ, ಮೈಸೂರು ಮತ್ತು ಕೆಲ ಸಣ್ಣ ಪುಟ್ಟ ರಾಜರುಗಳ ಸಂಸ್ಥಾನಗಳೂ ಸೇರಿ ವಿಶಾಲ ಮೈಸೂರು ಆಯಿತು. ಅದರಿಂದ ಭಾವನಾತ್ಮಕವಾಗಿ ಕನ್ನಡ ಮಾತನಾಡುವ ಜನರೆಲ್ಲ ಒಂದಾದರು. ಅದಾಗಿ ಅರವತ್ತು ವರ್ಷಗಳೆ ಕಳೆದರೂ ಇನ್ನೂ ಸಮಾನ ಅಭಿವೃದ್ಧಿಯ ಅವಕಾಶ ದೊರೆತಿಲ್ಲ ಎಂಬ ಗೊಣಗಾಟ ತಪ್ಪಿಲ್ಲ. ಪ್ರತ್ಯೇಕ ಪ್ರಾಂತ್ಯ ಬೇಕೆಂಬ ಕೂಗು ಕೇಳಿ ಬಂದರೂ ಅದು ಅಷ್ಟೇನೂ ಗಟ್ಟಿಯಾಗಿಲ್ಲ. ನಂಜುಂಡಪ್ಪ ಸಮಿತಿ ಪ್ರಾದೇಶಿಕ ವ್ಯತ್ಯಾಸಗಳನ್ನು ನಿವಾರಿಸಲು ತಳಸ್ಪರ್ಶಿ ವರದಿ ನೀಡಿದರೂ ಅದಿನ್ನೂ ಅನುಷ್ಠಾನಕ್ಕೆ ಬರಬೇಕಿದೆ.. ಅದೆಲ್ಲ ಏನೆ ಇದ್ದರೂ ವಿಶಾಲ ಮೈಸೂರು ಆದದ್ದು ನಮ್ಮ ಭಾಗದ ಹೈಸ್ಕೂಲು ವಿದ್ಯಾರ್ಥಿಗಳಿಗೆ ಮಾತ್ರ ಬಹಳ ಅನುಕೂಲವಾಯಿತು. ಮೊದಲು ಮದರಾಸು ಪ್ರಾಂತ್ಯದಲ್ಲಿದ್ದಾಗ ಎಸ್ಎಸ್ ಎಲ್ ಸಿ ಎಂದರೆ ಮಿನಿ ಐಎಎಸ್ ನಂತೆ ಭಾಸವಾಗಿತ್ತು. ಅಂತಿಮ ಪರೀಕ್ಷೆಗೆ ಕೂಡಲು ಮೊದಲು ಪೂರ್ವ ತಯಾರಿ ಪರೀಕ್ಷೆಯನ್ನು ಶಾಲೆಯವರೆ ನಡೆಸುವರು. ಅದರಲ್ಲಿ ಪಾಸಾದವರಿಗೆ ಮಾತ್ರ ಪಬ್ಲಿಕ್‌ ಪರೀಕ್ಷೆ ಕಟ್ಟಲು ಅವಕಾಶ. ಆ ವಿಷಯದಲ್ಲಿ ಮುಖ್ಯೋಪಾಧ್ಯಾಯರದೆ ಕೊನೆ ಮಾತು. ವಶೀಲಿಬಾಜಿಗೆ ಅವಕಾಶವೆ ಇರಲಿಲ್ಲ. ಕಾರಣ ಪರಿಕ್ಷೆಗೆ ಕುಳಿತರೆ ಅವರಿಗೆ ಮೂರೆ ಅವಕಾಶ. ಅದಲ್ಲದೆ ಒಂದೆ ಸಲ ಎಲ್ಲ ಏಳು ವಿಷಯಗಳಲ್ಲೂ ಪಾಸಾಗಲೆಬೇಕು. ಒಂದು ವಿಷಯದಲ್ಲಿ ಅನುತ್ತೀರ್ಣನಾದರೆ ಇಪಿಎಸ್ ಎಂದು ಪ್ರಮಾಣ ಪತ್ರ ಕೊಡುವರು. ಅವರು ಸಾರ್ವಜನಿಕ ಸೇವೆಗೆ ಅರ್ಹರು. ಅಂದರೆ ಸರಕಾರಿ ಕೆಲಸದ ಮಟ್ಟಿಗೆ ಅವರು ಪಾಸಾದ ಲೆಕ್ಕ. ಎಲ್ಲ ವಿಷಯದಲ್ಲಿ ಪಾಸದವರು ಮಾತ್ರ ಇಸಿಪಿಎಸ್ ಅಂದರೆ ಎಲಿಜಿಬಲ್ ಪಾರ್ ಕಾಲೇಜ್ ಅಂಡ್ ಪಬ್ಲಿಕ್ ಸರ್ವಿಸ್. ಅವರು ಕಾಲೇಜೂ ಸೇರಬಹುದು. ಕೆಲಸಕ್ಕೂ ಅರ್ಹರು. ಯಾರೆ ಪರಿಕ್ಷೆಗೆ ಕುಳಿತರೆ ಅವರಿಗೆ ಮೂರೆ ಅವಕಾಶ. ನಾಲಕ್ಕನೆ ಸಾರಿ ಪರೀಕ್ಷೆ ಕಟ್ಟುವ ಹಾಗಿಲ್ಲ. ಫಲಿತಾಂಶದ ಪ್ರಮಾಣವೂ ಬಹು ಕಡಿಮೆ. ಹೀಗಾಗಿ ಇನ್ನೊಂದು ವರ್ಷ ಓದಿದರೂ ಸರಿ ಎಂದು ಪೋಷಕರು ಸುಮ್ಮನಾಗುವರು. ಅದರಿಂದ ಎಸ್ಎಸ್ ಎಲ್ ಸಿಯಲ್ಲಿ ಬಲಿತ ಬಾಲಕರು ಬಹಳ. ಎಷ್ಟೋ ಜನ ಮದುವೆಯಾದವರೂ ಇರುವರು. ಇದರಿಂದ ಹೈಸ್ಕೂಲು ದಾಟದೆ ಎಡವಿ ಬಿದ್ದ ಗಾಯಾಳುಗಳು ದಂಡು ಬಹುದೊಡ್ಡದಾಗಿತ್ತು. ಎಷ್ಟೊ ಜನ ನಮ್ಮ ಹುಡುಗ ಹೈಸ್ಕೂಲು ಮುಗಿಸಿದ್ದಾನೆ ಎನ್ನುವರೆ ವಿನಃ ಪಾಸಾಗಿದ್ದಾನೆ ಎನ್ನುತ್ತಿರಲಿಲ್ಲ. ಆದರೆ ಆಗ ಅದೆ ದೊಡ್ಡದು ಎನಿಸಿತ್ತು. ಏಕೀಕರಣಕ್ಕೆ ಮೊದಲು. ಹೈಸ್ಕೂಲು ಅಂತಿಮ ವರ್ಷಕ್ಕೆ ಎಸ್ಎಸ್ಎಲ್ ಸಿ, ಎಸ್ಎಸ್ಸಿ ಮತ್ತು ಎಚ್ ಎಸ್‌ ಸಿ ಎಂದು ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ಹೆಸರು ಕೆಲವು ಕಡೆ ಅವಧಿ ಹತ್ತು ವರ್ಷವಾದರೆ ಕೆಲವುಕಡೆ ಹನ್ನೊಂದು ವರ್ಷ. ನಿಜಾಂ ಪ್ರಾಂತ್ಯದಲ್ಲಂತೂ ಉರ್ದು ಕಡ್ಡಾಯ.. ಅಲ್ಲಿನ ಮುಲ್ಕಿ ನಿಯಮದ ಪ್ರಕಾರ ಉರ್ದು ಬರದವರಿಗೆ ಸರ್ಕಾರಿ ನೌಕರಿಯೆ ಇಲ್ಲ. ಇಂಗ್ಲಿಷ್ ಬರಲೆಬೇಕೆಂತಲೂ ಇರಲಿಲ್ಲ. ಅಲ್ಲಿನ ಅಧಿಕಾರಿಗಳ ನೇಮಕವಂತೂ ನಿಜಾಂರ ಮರ್ಜಿಯ ಮೇರೆಗೆ ಆಗುತ್ತಿದ್ದುದರಿಂದ ಆಡಳಿತಭಾಷೆ ಉರ್ದು. ಆದ್ದರಿಂದ ಅಲ್ಲಿ ಕಲಿತ ನಮ್ಮ ಹಿಂದಿನ ನಾಯಕರುಗಳಿಗೆಲ್ಲ ಉರ್ದುಭಾಷೆ ಚೆನ್ನಾಗಿ ಬರುವುದು.. ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ತಲೆದೂಗುವಂತೆ ಉರ್ದುವಿನಲ್ಲಿ ಭಾಷಣ ಮಾಡುತ್ತಿದ್ದರು. ಈಗಲೂ ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮ ಸಿಂಗ್ ಉರ್ದುವಿನಲ್ಲಿ ಉತ್ತಮ ವಾಗ್ಮಿಗಳು. ಏಕಿಕರಣವಾದ ಹೊಸದರಲ್ಲಿ ಗುಲ್ಬರ್ಗ ರಾಯಚೂರು ಬೀದರುಗಳಲ್ಲಿ ಸಣ್ಣ ಸಮಸ್ಯೆಯೆ ತಲೆ ಎತ್ತಿತು. ನೈಜಾಂ ಪ್ರಾಂತ್ಯದ ಅಧಿಕಾರಿಗಳು ಮೈಸೂರಿಗೆ ಸೇರಬೇಕಾಯಿತು. ಅವರಿಗೆ ಕನ್ನಡವೂ ಬರಲ್ಲ ಇಂಗ್ಲಿಷೂ ಅಷ್ಟಕಷ್ಟೆ. ಆಧೀನ ನೌಕರರಿಗೆ ಅದರಲ್ಲೂ ಹಳೆಯ ಮೈಸೂರಿನವರಿಗೆ ಉರ್ದು ಅಡ್ಡ ಗೋಡೆ.  ಆಡಳಿತದ ವೈಖರಿ ಹೇಳುವ ಹಾಗೆ ಇಲ್ಲ. ಅಲ್ಲದೆ ಅವರ ಸೇವಾ ಪುಸ್ತಕಗಳೂ ಹಿಂಬದಿಯಿಂದ ಪ್ರಾರಂಭ. ಅವು ಉರ್ದು ಭಾಷೆಯಲ್ಲಿದ್ದವು. ಅವರ ಭಾಷಾ ಪ್ರೇಮ ಅಸೀಮ. ಅದೂ ಎಷ್ಟು ಕಟ್ಟುನಿಟ್ಟು ಆಗಿದ್ದವೆಂದರೆ ಅಂಕೆಗಳನ್ನು ಕೂಡಾ ಉರ್ದುವಿನಲ್ಲೆ ಬರೆಯುವರು. ಅವರ ಪಿಂಚಣಿಯನ್ನು ನಿಗದಿ ಮಾಡಲು ಬೆಂಗಳೂರಿನಲ್ಲಿ ತಿಣುಕುವಂತಾಗಿತ್ತು. ದಾಖಲೆಗಳನ್ನು ಇಂಗ್ಲಿಷ್ ಗೆ ತರ್ಜುಮೆ ಮಾಡಲು ವಿಶೇಷ ವಿಭಾಗವನ್ನೆ ತೆರೆಯಬೇಕಾಯಿತು. ನಾನು ಗುಲ್ಬರ್ಗ ಕಾಮಲಾಪುರದ ಕಾಲೇಜಿನಲ್ಲಿ  ಕೆಲಸ ಮಾಡುವಾಗ ಕಾಶಿಂ ಎಂಬ ನಾಲಕ್ಕನೆ ದರ್ಜೆ ನೌಕರನು ಸೇವಾವಧಿ ಮುಗಿದ ಮೇಲೆ ಒಂದುವರ್ಷ ಹೆಚ್ಚಾಗಿ ಕೆಲಸ ಮಾಡಿದ್ದ. ಕಾರಣ ಅವನ ಜನ್ಮ ದಿನಾಂಕ ಉರ್ದವಿನಲ್ಲಿ ನಮೂದಾದ್ದರಿಂದ ಆ ತಪ್ಪಾಗಿತ್ತು. ಅದು ಬೆಳಕಿಗೆ ಬಂದ ಮೇಲೆ ತಕ್ಷಣ ನಿವೃತ್ತಿ ಮಾಡಲಾಯಿತು. ಅಷ್ಟೆ ಅಲ್ಲ ಬಡಪಾಯಿಯ ನಿವೃತ್ತಿಯಾಗಬೇಕಾದ ದಿನಾಂಕದ ನಂತರ ಕೆಲಸ ಮಾಡಿದ ಅವಧಿಯಲ್ಲಿನ ಪಡೆದ ವೇತನವನ್ನೂ ಕಟಾಯಿಸಲಾಯಿತು...

ಮದ್ರಾಸು ಪ್ರಾಂತ್ಯದಿಂದ ಬಂದವರಿಗೆ ಮಾತ್ರ ಸಮಸ್ಯೆಯೆ ಇರಲಿಲ್ಲ. ಅಲ್ಲಿ ಎಲ್ಲ ಇಂಗ್ಲಿಷ್ ಭಾಷೆಯದೆ ಮೇಲಾಟ. ಏಕೀಕರಣವಾದ ಮೇಲೆ ಮೈಸೂರು ರಾಜ್ಯದಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ತಮ್ಮದೆ ನಿಯಮ ಜಾರಿಗೆ ತಂದರು. ಅದರ ತಕ್ಷಣದ ಲಾಭ ನಮಗೆ ಆಯಿತು. ಕಾರಣ ಮೈಸೂರು ರಾಜ್ಯದಲ್ಲಿಎಸ್ಎಸ್ಎಲ್ ಸಿ ಪರೀಕ್ಷೇಯ ನಿಯಮಾವಳಿಗಳು ಸರಳವಾಗಿದ್ದವು. ಅಲ್ಲಿ ಎಲ್ಲ ವಿಷಯಗಳಲ್ಲೂ ಒಟ್ಟಿಗೆ ಪಾಸಾಗಬೇಕೆಂಬ ನಿಯಮ ಇರಲಿಲ್ಲ. ಪಾರ್ಟ ಬೈ ಪಾರ್ಟ ಸಬಜೆಕ್ಟ ಬೈ ಸಬ್ಜೆಕ್ಟ್ ಪರಿಕ್ಷೆಗೆ ಕಟ್ಟಬಹುದಿತ್ತು. ಎಂ ಎಸ್ ಎಂ ಗಾಡಿಯಲ್ಲಿ ಏರಬಹುದಿತ್ತು ಅಂದರೆ ಮಾರ್ಚ- ಸೆಪ್ಟೆಂಬರ್ -ಮಾರ್ಚ ಪರೀಕ್ಷೆಗೆ ಕೂಡಬಹುದಿತ್ತು ಹಾಸ್ಯಕ್ಕೆ ಆ ಹೆಸರು. ಅಲ್ಲದೆ ಪರೀಕ್ಷೆಗೆ ಕುಳಿತುಕೊಳ್ಳಲು ಮೂರೆ ಅವಕಾಶದ ಮಿತಿ ಇರಲಿಲ್ಲ.  ಎಷ್ಟು ಸಾರಿ ಬೇಕಾದರೂ ಪರೀಕ್ಷೆ ಬರೆಯಬಹುದಿತ್ತು ಈ ಅವಕಾಶವನ್ನು ಮದ್ರಾಸು ಎಸ್ಎಸ್ಎಲ್‌ಸಿ ಗೆ ಮೂರುವರ್ಷ ಮಣ್ಣು ಹೊತ್ತು ಮನೆಯಲ್ಲಿ ಕುಳಿತವರು ಚೆನ್ನಾಗಿ ಬಳಸಿಕೊಂಡರು. ಬಹುತೇಕರು ಪರೀಕ್ಷೆ ಕಟ್ಟಿ ಪಾಸಾದರು. ಕೆಲವರು ಪ್ರಥಮ ದರ್ಜೆಯನ್ನೂ ಪಡೆದರು. ಅವಧಿಯಲ್ಲಿನ ವ್ಯತ್ಯಾಸ ಸರಿಪಡಿಸಲು ಎಲ್ಲರಿಗೂ ೧೧ನೆ ವರ್ಷದಲ್ಲೆ ಎಸ್ಎಸ್ ಎಲ್ ಸಿ ಕಟ್ಟಲು ನಿಯಮ ಬಂದಿತು. ಅದರಿಂದ 4+3+3 ಇದ್ದವರು ಇನ್ನು ಒಂದು ವರ್ಷ ಹೆಚ್ಚುವರಿಯಾಗಿ ಕಲಿಯಬೇಕಾಯಿತು. ಅದಕ್ಕೆ ಓಲ್ಡ ಎಯ್ತ್ ಮತ್ತು ನ್ಯು ಎಯ್ತ್ ಎಂದು ಎಂಟನೆ ತರಗತಿಯನ್ನೆ ಎರಡು ಸಲ ಓದಬೇಕಾಯಿತು. ನಂತರ ಪಿಯುಸಿ ಒಂದೆ ವರ್ಷ. ಕೆಲವೆ  ಕಾಲದ ನಂತರ ಪುನಃ ೧೦ವರ್ಷ ಹೈಸ್ಕೂಲು ಮತ್ತು ಎರಡುವರ್ಷ ಪದವಿ ಪೂರ್ವ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿ ಬಂದಿತು. ಈಗಲೂ ಅದೆ ಇದೆ.

No comments:

Post a Comment