Monday, August 20, 2012

ಹಳ್ಳಿಯ ಆಣೆ ಹಣ ಲೆಕ್ಕ


ಪ್ರ 
ತಿ ವರ್ಷ ಯುಗಾದಿಯ ಸಂಜೆಯೆ ಮುಂಬರುವ ವರ್ಷದ ಮುನ್ಸೂಚನೆಯನ್ನು ಊರಿನ ಗುಡಿಯಲ್ಲಿ ಪಂಚಾಂಗ ಶ್ರವಣದ ಮೂಲಕ ಹಿರಿಯರು ತಿಳಿಯುವರು. ಮಳೆ ಬೆಳೆಗಳ ಅಂದಾಜನ್ನು ಆಣೆ ಲೆಕ್ಕದಲ್ಲಿ ಅರಿಯುವರು. ನಾಲಕ್ಕಾಣೆ ಮಳೆ ಎಂದರೆ ಕೊರತೆ, ೮ ಆಣೆ ಮಳೆ ಎಂದರೆ ಪರವಾ ಇಲ್ಲ, ಹನ್ನೆರಡಾಣೆ ಎಂದರೆ ಸಮೃದ್ಧಿ ಅದಕ್ಕೂ ಹೆಚ್ಚಾದರೆ ಅತಿವೃಷ್ಟಿ. ಇದೆ ರೀತಿಯಲ್ಲಿ ಬೆಳೆಗಳ ಅಂದಾಜು. ಹೆಂಗಸರು ಮಕ್ಕಳು ಸಹ ಮಾರನೆ ದಿನ ಚಂದ್ರನನ್ನು ನೋಡಿ ಧನ ಮತ್ತು ಧಾನ್ಯದ ಅಂದಾಜು ಮಾಡುವರು. ಅಂದು ಕತ್ತಲಾಗುತ್ತಿದ್ದಂತೆಯೆ ಎಲ್ಲ ಮುಗಿಲ ಕಡೆ ಮುಖ ಮಾಡಿ ಚಂದ್ರದರ್ಶನಕ್ಕೆ ಹಂಬಲಿಸುವರು. ಹೇಳಿ ಕೇಳಿ ಬಿದಿಗೆ ಚಂದ್ರ. ಕಾಣುವುದು ತುಸು ಕಷ್ಟ. ಕಂಡೊಡನೆ ಸಂಭ್ರಮದಿಂದ ಎಲ್ಲರಿಗೂ ತೋರಿಸುವರು. ನಂತರ ಹಿರಿಯರಿಗೆ ನಮಿಸುವರು. ಆ ದಿನ ಚಂದ್ರ ಯಾವ ಕಡೆ ಹೆಚ್ಚು ವಾಲಿರುವನೋ ಎಂಬುದರ ಮೇಲೆ ಹಣದ ಬೆಲೆ ಜಾಸ್ತಿ ಇಲ್ಲವೆ ಧಾನ್ಯದ ಬೆಲೆ ಹೆಚ್ಚು ಎಂದು ವ್ಯಾಖ್ಯಾನವಾಗುವುದು.
ಧಾನ್ಯದ ಸಮೃದ್ಧಿ ಇದ್ದರೂ ಜನಕ್ಕೆ ಹಣದ ಪರದಾಟ ಬಹಳ. ಹಳ್ಳಿಯಲ್ಲಿ ತಿಂಗಳ ಸಂಬಳದವರು ವಿರಳ. ಸಾಲಿ ಮಾಸ್ತರು, ಸಕ್ಕರೆ ಜಿನ್ನಿನಲ್ಲಿನ ನೌಕರರು ತಿಂಗಳು ತಿಂಗಳು ಹಣದ ಮುಖ ನೋಡುವರು. ಅಂಗಡಿಯ ಒಂದೊ ಎರಡೊ ಮನೆಯವರನ್ನು ಬಿಟ್ಟರೆ ಉಳಿದವರೆಲ್ಲ ಆಯಗಾರರಾದ ಕಸಬುದಾರರು. ಇನ್ನೆಲ್ಲ ವಾರದ ಕೂಲಿಯವರು. ದೊಡ್ಡ ರೈತರನ್ನು ಬಿಟ್ಟರೆ ಉಳಿದವರು ದೊಡ್ಡ ಮೊತ್ತದ ನಗದು ಹಣ ಕಾಣುವುದು ಸುಗ್ಗಿಯಲ್ಲಿ ಕಾಳು ಮಾರಿದಾಗಲೆ.
ಹತ್ತಿರದ ಹೊಸಪೇಟೆಯಲ್ಲಿ ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಸ್ಟೇಟ್ ಬ್ಯಾಂಕು ಬಿಟ್ಟರೆ ದಕ್ಷಿಣ ಕನ್ನಡದ ಮೂಲದ ಒಂದೋ ಎರಡೋ ಖಾಸಗಿ ಬ್ಯಾಂಕುಗಳು ಇದ್ದವು. ಅಲ್ಲಿರುವವರು ಕಿಣಿ, ಪ್ರಭು, ಪೈ ಮತ್ತು ಕಾಮತ್‌. ಅವರು ಪಕ್ಕಾ ವ್ಯವಹಾರಸ್ಥರು. ಅಲ್ಲಿ ಹಣವಿದ್ದವರಿಗೆ ಮಣೆ. ಅಲ್ಲಿಗೆ ಹೋಗುವವರು ಹಣವಂತರು ಮತ್ತು ದೊಡ್ಡ ವ್ಯಾಪಾರ ವ್ಯವಹಾರ ಮಾಡುವವರು ಮಾತ್ರ. ಶಿಕ್ಷಕರೂ ಕೂಡಾ ಚೆಕ್‌ ಮೂಲಕ ಸಂಬಳ ಪಾವತಿಯಾಗುವ ಪದ್ದತಿ ಬರುವ ತನಕ ಬ್ಯಾಂಕಿನ ಕಟ್ಟೆ ಹತ್ತಿರಲಿಲ್ಲ. ಜನ ಸಾಮಾನ್ಯರಿಗಂತೂ  ಅಲ್ಲಿ ಕಾಲಿಡಲೆ ಭಯ. ಹಾಗಿದ್ದರೆ ಹಣಕಾಸಿನ ವ್ಯವಹಾರ ನಡೆಯುತ್ತಿರಲಿಲ್ಲ ಎಂದಲ್ಲ. ಹಳ್ಳಿಗಳಲ್ಲಿ ಸಾಕಷ್ಟು ಹಣಕಾಸಿನ ವ್ಯವಹಾರ ನಡೆಯುತಿತ್ತು. ಆದರೆ ಅದು ಖಾಸಗಿ ಸಾಹುಕಾರರ ಕಪಿಮುಷ್ಟಿಯಲ್ಲಿತ್ತು..
ರೈತರಿಗೆ ಹೊಲಮನೆ ಬಿಟ್ಟರೆ ಗೊತ್ತಿದ್ದುದು ದಲಾಲಿ ಅಂಗಡಿ ಮಾತ್ರ. ಅವರ ವ್ಯವಹಾರವೆಲ್ಲ ಅಲ್ಲಿಯೆ. ವರ್ಷದುದ್ದಕ್ಕೂ ಖರ್ಚಿಗೆ ಬೇಕಾದಾಗ ಅವರಲ್ಲಿಗೆ ಹೋಗಿ ಹಣ ಪಡೆಯುವರು. ಸುಗ್ಗಿಯಲ್ಲಿ ಮಾಲು ಅವರಿಗೆ ಹೊಡೆಯಬೇಕೆಂದು ಕರಾರು. ದವಸ ಧಾನ್ಯ ಬಂದಾಗ ಅಂಗಡಿ ಧಣಿ ತಮ್ಮ ದಲಾಲಿ, ಬಡ್ಡಿ, ಗಂಟು ಮುರಿದುಕೊಂಡ ಮಿಕ್ಕ ಹಣ ಕೊಡುವರು. ಅಂಗಡಿಯವರಿಗೆ ಎರಡು ಪಟ್ಟು ಲಾಭ. ಮಾರುವ ಮಾಲಿಗೆ ಅವರು ಹೇಳಿದ್ದೆ ದರ. ಅದನ್ನು ಮಾರಿಸಿದ್ದಕ್ಕೆ ದಲಾಲಿ ಬೇರೆ. ಕೊಟ್ಟ ಹಣಕ್ಕೆ ಬಡ್ಡಿ ಬರುವುದು.

ಇದರಿಂದ ನಗರದಲ್ಲಿನ ದಲಾಲಿ ಅಂಗಡಿಗಳು ಸುತ್ತಮುತ್ತಲಿನ ಹಳ್ಳಿಗರ ಪಾಲಿಗೆ ಅಕ್ಷಯ ಭಂಡಾರ. ವಾರ ವಾರವೂ ಅಂಗಡಿ ಕಟ್ಟೆ ಕಾದು ಹಣ ಪಡೆದು ಕೂಲಿ ಬಟವಾಡೆ ಮಾಡುವುದು ರೈತಾಪಿ ಮನೆತನದ ಹಿರಿಯನ ಕೆಲಸ. ಊರಲ್ಲಿ ಒಂದೆರಡು ಮನೆತನ ಬಿಟ್ಟರೆ ಎಲ್ಲರೂ ಬಾಕಿದಾರರೆ.. ಅನೇಕ ಮನೆತನಗಳಲ್ಲಿ ತಲೆ ತಲೆಮಾರಿನಿಂದ ಈ ವ್ಯವಹಾರ ನಡೆದಿರುವುದು. ಅವರು ಮಾತ್ರ ಸರಿ ರಾತ್ರಿ ಕೇಳಿದರೂ ಇಲ್ಲ ಎನ್ನದೆ ಕೊಡುವವರೂ ಇದ್ದರು.
ಹೆಚ್ಚು ಹಣ ಇದ್ದವರೂ ಅದನ್ನು ಬ್ಯಾಂಕಿನಲ್ಲಿ ಇಡುತ್ತಿರಲಿಲ್ಲ. ದಲಾಲಿ ಅಂಗಡಿಯಲ್ಲಿ ಇಡುವರು. ನನ್ನ ಗೆಳೆಯ ನಾರಾಯಣದೇವರ ಕೇರಿಯವನು. ಅದು ತುಂಗಭದ್ರಾ ನದಿಯ ಹಿನ್ನೀರಿನಲ್ಲಿ ಮುಳುಗಿದಾಗ, ನಮ್ಮ ಊರ ಹತ್ತಿರವೆ ಜಾಗ ಕೊಟ್ಟು ಹೊಸ ಊರು ಕಟ್ಟಿದರು. ಅದಕ್ಕೆ ಹೊಸ ಮಲಪನ ಗುಡಿ ಎಂದೆ ಹೆಸರು. ಅವರಿಗೆ ದೊಡ್ಡ ಮೊತ್ತದ ಪರಿಹಾರ ಬಂದಿತು. ಅದನ್ನು ಅವರು ಅಡತಿ ಅಂಗಡಿಯ ದಣಿಯಲ್ಲಿ ಇಟ್ಟಿದ್ದರು, ಬೇಕು ಬೇಕಾದಾಗ ಹೋಗಿ ಹಣ ತರುವರು. ಆದರೆ ಅದಕ್ಕೆ ಇವರಿಗೆ ಬಡ್ಡಿ ಕೊಡುತ್ತಿರಲಿಲ್ಲ. ಬದಲಾಗಿ ಹಣ ಸುರಕ್ಷಿತವಾಗಿ ಇಟ್ಟುಕೊಂಡುದಕ್ಕೆ ಇವರೆ ತುಸು ಹಣ ಕೊಡಬೇಕಾಗಿತ್ತು ಈಗ ಬ್ಯಾಂಕಿನಲ್ಲಿರುವ ಸೇಫ್ಟಿ ಲಾಕರ್‌ ತರಹ. ಇಲ್ಲವೆ ಸ್ವಿಸ್‌ ಬ್ಯಾಂಕ್‌ ನಂತೆ ಎನ್ನಬಹದು. ಅದೂ ಕಾಗದ ಪತ್ರ ಏನೂ ಇಲ್ಲ. ಬರಿ ನಂಬುಗೆಯ ವ್ಯವಹಾರ. ಒಂದು ಪುಸ್ತಕದಲ್ಲಿ ಹಚ್ಚಿಕೊಡುವರು. ಆದರೆ ಎಂದೂ ಧೋಕಾ ಮಾಡುತ್ತಿರಲಿಲ್ಲ.
ರೈತರಿಗೆ ಹಬ್ಬ ಹುಣಿಮೆ, ಮದುವೆ, ಒಳ್ಳೆಯದು ಕೆಟ್ಟದು ಎಲ್ಲದಕ್ಕೂ ಇಲ್ಲ ಎನ್ನದೆ ದುಡ್ಡು ಸಿಗುವುದು. ಆದರೆ ಮಳೆ ಬೆಳೆ ಕೈಕೊಟ್ಟಾಗ ಮಾತ್ರ ಫಜೀತಿ. ಬಾಕಿ ಉಳಿಸಿಕೊಂಡಾಗ ಚಕ್ರ ಬಡ್ಡಿ ಬೀಳುವುದು. ಅಲ್ಲದೆ ಸಾಲ ಕೊಡುವವರು ಕೈ ಹಿಡಿತ ಮಾಡುವರು. ಎರಡು ಮೂರು ವರ್ಷವೂ ಬೆಳೆ ಕೈಗೆ ಹತ್ತದಿದ್ದರೆ ಮಾತ್ರ ದಣಿಗಳು ನಿಷ್ಠುರವಾಗುವರು. ಜಮೀನು ಅವರ ಹೆಸರಿಗೆ ಒತ್ತೆ ಬೀಳುವುದು. ಜಮೀನು ಸಾಗು ಮಾಡಬಹುದು. ಆದರೆ ಸಾಲ ತೀರುವ ತನಕ ಅವರ ಹೆಸರಲ್ಲೆ ಇರುವುದು ನಮ್ಮ ಊರಲ್ಲಿ ಬಹುತೇಕ ಎಕರೆ, ಎರಡೆಕರೆ ಇದ್ದ ರೈತರ ಜಮೀನುಗಳು ಅವರ ಹೆಸರಲ್ಲಿ ಇರುತ್ತಿರಲಿಲ್ಲ. ಆದರೆ ಸಾಲ ಹೊರೆಯಾದಾಗ ಖಂಡಿತ ಖರೀದಿ ಮಾಡಿಸಿಕೊಂಡು ಮಾರುಕಟ್ಟೆ ದರಕ್ಕಿಂತ ತುಸು ಹೆಚ್ಚು ಬೆಲೆ ನಿಗದಿ ಮಾಡಿಕೊಳ್ಳುವರು. ಅಸಲು ಬಡ್ಡಿ ಚುಕ್ತಾ ಆದಮೇಲೆ ಉಳಿದರೆ ಹಣ ನೀಡುವರು. ರೈತರು ಮಾತ್ರ ಯಾವುದೆ ಕಾರಣಕ್ಕೂ ಜಮೀನು ಪರಭಾರೆಯಾಗಲು ಬಿಡುತ್ತಿರಲಿಲ್ಲ. ಧಣಿಗೆ ಗುತ್ತಿಗೆ ನೀಡಿ ಜೀವ ವತ್ತೆ ಇಟ್ಟು ಅದರಲ್ಲೆ ದುಡಿದು ಜಮೀನು ಉಳಿಸಿಕೊಳ್ಳುವರು. ಮೈಮುರಿದು ದುಡಿಯುವವರಿಗೆ ಭೂಮಿ ಕಳೆದುಕೊಳ್ಳುವ ಭಯವಿರಲಿಲ್ಲ. ಒಂಬತ್ತು ವರ್ಷದ ವರಿಂದ ಹಿಡಿದು ಎಂಬತ್ತು ವರ್ಷದವರಗೆ ಮನೆಯವರೆ ಒಂದಲ್ಲ ಒಂದು ಕೃಷಿ ಕೆಲಸ ಮಾಡುವರು. ಹಾಗಾಗಿ ಅವರ ಕೂಲಿಯೆ ಸಾಕಷ್ಟು  ಉಳಿತಾಯವಾಗುತಿತ್ತು. ಎತ್ತುಗಳು ಇದ್ದವರು ಇನ್ನೊಬ್ಬರ ಕೆಲಸಕ್ಕೆ ಉಚಿತವಾಗಿ ಹೋಗುವರು. ಅವರು ಅದಕ್ಕೆ ಪ್ರತಿಯಾಗಿ ಇವರಲ್ಲಿಗೆ ಬರುವರು. ಬಹುತೇಕ ಕೊಟ್ಟಿಗೆ ಗೊಬ್ಬರವನ್ನೆ ಬಳಸುವರು. ಇದರ ಪರಿಣಾಮ ಉಳಿತಾಯ. ಮೇಲಾಗಿ ವೈಭೋಗದ ವಸ್ತುಗಳಿಗೆ ಹಣ ವೆಚ್ಚವಾಗುತ್ತಿರಲಿಲ್ಲ. ಎಲ್ಲ ವಸ್ತುಗಳನ್ನು ಬೆಳೆಯುವರು. ಸೋಪು ಎಣ್ಣೆ  ಮತ್ತು ಬಟ್ಟೆಗೆ ಮಾತ್ರ ಹಣ. ಅಗಸರು, ಕ್ಷೌರಿಕರು, ಕುಂಬಾರರು, ಬಡಿಗೇರರು ಕಮ್ಮಾರರು ಮೊದಲಾದ ಎಲ್ಲ ಆಯಗಾರರಿಗೂ ಸುಗ್ಗಿಯಲ್ಲಿ ಧಾನ್ಯವನ್ನೆ ಕೊಡುವ ರೂಢಿ. ಹಣದ ಚಲಾವಣೆ ಕಡಿಮೆ. ಕೂಲಿ ಕೆಲಸಗಾರರ ಕೊರತೆ ಕಾಡುತ್ತಿರುಲಿಲ್ಲ. ಗೊಚಗಾರರು ತಂಡ ಕಟ್ಟಿಕೊಂಡು ನಾಟಿ ಮಾಡುವ, ಕಳೆತೆಗೆಯುವ, ಕೆಲಸ ಮಾಡುವರು. ಗೌಳೇರು ಗಾಡಿ ಕಟ್ಟಿಕೊಂಡು ಬಂದು ಕಬ್ಬು ಕಡಿದು ಕೊಟ್ಟು ಸೋಗೆಯನ್ನು ಮೇವಿಗಾಗಿ ಬಂಡಿಯಲ್ಲಿ ಹೇರಿಕೊಂಡು ಹೋಗುವರು. ಇದರಿಂದ ಕೃಷಿ ಖರ್ಚು ಕಡಿಮೆಯಾಗುತಿತ್ತು. ಬಂದ ಬೆಳೆ ಕೈಗೆ ಹತ್ತುತಿತ್ತು.
ನಮಗೂ ಎರಡೆಕರೆ ಗದ್ದೆ ಇತ್ತು. ನಾವು ಎತ್ತು ಬಂಡಿ ಇಟ್ಟಿರಲಿಲ್ಲ. ಕೂಲಿ ಬೇಸಾಯ. ಹಾಗಾಗಿ ಖರ್ಚು ಜಾಸ್ತಿ. ನಮ್ಮ ಅಪ್ಪನೂ ದಲಾಲಿ ಅಂಗಡಿಯ ಗಿರಾಕಿ. ಅಲ್ಲದೆ ಬೇಸಾಯದ ಖರ್ಚಿನ ಜತೆಗೆ ಇತರ ವೆಚ್ಚಕ್ಕೂ ಹಣ ಪಡೆಯುವರು. "ಸಾಲ ಮಾಡಿ ತುಪ್ಪ ತಿನ್ನು, ಕಡ ತಂದು ಕಡುಬು ಮಾಡು" ಎಂಬ ಗುಂಪಿಗೆ ಸೇರಿದವರು. ಧಣಿಯದೆ ಬಟ್ಟೆ ಅಂಗಡಿಯೂ ಇತ್ತು. "ಹೊರಬೇಡ ಅಂಗಡಿ ಸಾಲ ಊರ ಹೊಣೆಯ" ಎಂಬ ಹಿತವಚನ ನಮ್ಮ ಅಪ್ಪನಿಗೆ ಹಿಡಿಸದು. ಅಂಗಡಿಯಲ್ಲಿ ಅಪ್ಪ ಸೋದರ ಮಾವನ ಮಕ್ಕಳ ಮದುವೆಗೆ ಜಾಮೀನಾಗಿ ಉದ್ದರಿ ಜವಳಿ ಕೊಡಿಸಿದ. ಅವರು ಬಾಕಿ ಕಟ್ಟಲಿಲ್ಲ. ನಾಲಕ್ಕು ವರ್ಷದಲ್ಲಿ ಬಡ್ಡಿ ಬೆಳೆದು ಬೆಟ್ಟವಾಯಿತು, ಜಾಮೀನುದಾರನಾಗಿದ್ದ ಅಪ್ಪನಿಗೆ  ಧಣಿ, ತಾಯಿಯಷ್ಟೆ ಮಗಳು ದೊಡ್ಡವಳಗಿದ್ದಾಳೆ ಬಾಕಿ ಚುಕ್ತಾ ಮಾಡಿ ಎಂದು ವರಾತ ಹಚ್ಚಿದರು. ಅಂದರೆ ಅಸಲಿನ ಸಮ ಸಮ ಬಡ್ಡಿಯಾಗಿದೆ. ವಾರಕ್ಕೊಮ್ಮೆ ಅಂಗಡಿ ಆಳು ಬಾಕಿವಸೂಲಿಗೆ ಮನೆ ಬಾಗಿಲಿಗೆ ಬರುವನು. ಅವನಿಗೆ ಚಾ ಕಾಫಿ ಕೊಟ್ಟು ಕಳುಹಿಸುವುದಲ್ಲದೆ ಬಂದ ಕೂಲಿ ಬೇರೆ ಕೊಡಬೇಕು. ಅವನನ್ನು ನೋಡಿದರೆ ಪುರಾಣದ ನಕ್ಷತ್ರಿಕನ ನೆನಪಾಗುವುದು. ಅದನ್ನು ನೋಡಿಯೇ ಏನೋ ನನಗೆ ಸಾಲ ಎಂದರೆ ಪುಕು ಪುಕು. ಆ ಭಯ ಇಂದಿಗೂ ಇದೆ. ಸಾಲದ ಒಜ್ಜೆ ಜಾಸ್ತಿಯಾಗಿ ಒಂದು ದಿನ ಗದ್ದೆ ಧಣಿಯ ಪಾಲಾಯಿತು. ನಮ್ಮದೆ ಕಮತ ಇಲ್ಲ. ಇನ್ನು ಗುತ್ತಿಗೆ ಕೊಟ್ಟು ಸಾಗು ಮಾಡಿಸಿದರೆ ಗಿಟ್ಟುವುದಿಲ್ಲ. ಅಲ್ಲಿಗೆ ನಮಗೆ ಭೂಮಿಯ ಋಣ ಹರಿಯಿತು.
ಬಹಳ ಜನ ಅಲ್ಪತೃಪ್ತರು. ಹಾಸಿಗೆ ಇದ್ದಷ್ಟು ಕಾಲು ಚಾಚುವ ರೂಢಿಯವರು. ಹೆಚ್ಚಿನ ಮಹತ್ವಾಕಾಂಕ್ಷಿಗಳಲ್ಲ. ಆದರೆ ಅನೀರೀಕ್ಷಿತ ಖರ್ಚು ಬಂದಾಗ ಮಾತ್ರ ಕಣ್ಣು ಕಣ್ಣು ಬಿಡಬೇಕಾಗಿತ್ತು. ಆದರೆ ಭೂಮಿ ಇಲ್ಲದವರಿಗೂ ಸಾಲ ಸಿಗುತಿತ್ತು. ಆದರೆ ಮನೆ ಆಧಾರ ಹಾಕಬೇಕು. ವರ್ಷಕೊಮ್ಮೆ ಬಡ್ಡಿ ಕಟ್ಟಿದರೂ ಸಾಕು. ಯಾವುದೆ ಕಿರಿ ಕಿರಿ ಇಲ್ಲ. ಅದರ ಸರ್ಕಾರಿ ಸ್ವರೂಪವೆ ಭೂ ಅಡಮಾನ ಬ್ಯಾಂಕು.
ಆದರೆ ಸಾಧಾರಣವಾಗಿ ಯಾರೂ ಬಡ್ಡಿ ಬಾಕಿಬಿದ್ದರೂ ಮನೆ ಖಾಲಿ ಮಾಡಿಸುತ್ತಿರಲಿಲ್ಲ. ಒಂದೊಂದು ಸಾರಿ ಮನೆ ಮಾರಾಟವಾಗಿರುವುದು ಯಜಮಾನನಿಗೆ ಬಿಟ್ಟು ಬೇರೆಯವರಿಗೆ ಗೊತ್ತೆ ಆಗುತ್ತಿರಲಿಲ್ಲ. ನಮ್ಮ ಬೇಕಾದವರೊಬ್ಬರು ತೀರಿಕೊಂಡ ಸುದ್ದಿಕೇಳಿ ಮೂರನೆ ದಿನ ನಾನು ಮಾತನಾಡಿಸಿಕೊಂಡು ಬರಲು ಹೊರಟೆ..  ಹಾದಿಯಲ್ಲಿ ಒಬ್ಬ ವ್ಯಕ್ತಿ ಅವರ ವಿಳಾಸ ಕೇಳಿದ. ನಾನೂ ಅಲ್ಲೆ ಹೋಗುವೆ, ಜತೆಗೆ ಬಾ ಎಂದು ಕರೆದೊಯ್ದೆ. ಅವನು ಅಲ್ಲಿಗೆ ಹೋದ ತುಸು ಸಮಯದ ನಂತರ ಹಿರಿಯ ಮಗನನ್ನು ಕರೆದು, "ನಿಮ್ಮ ಅಪ್ಪ ನಮ್ಮ ದಣಿಯ ಗಿರಾಕಿ. ಬಹಳ ಒಳ್ಳೆಯವರು" ಎಂದ. ನಂತರ ಮೆಲ್ಲಗೆ "ನೀವಿರುವ ಮನೆ ನಮ್ಮ ದಣಿಯ ಹೆಸರಿಗಿದೆ. ನಿಮ್ಮ ಅಪ್ಪ ಸಾಲ ಮಾಡಿ ಬರೆದು ಕೊಟ್ಟಿದ್ದರು. ಆತ ಬಹಳ ಸಾಚಾ ಮನುಷ್ಯ. ಹಿರಿಯರ ನೆರಳು ಕಳೆಯಬಾರದು. ಅದಕ್ಕೆ ಅಸಲು ಕಟ್ಟಿದರೆ ಸಾಕು ಬಡ್ಡಿ ಮಾಫಿ ಮಾಡಿ ಮನೆ ನಿಮ್ಮ ಹೆಸರಿಗೆ ಮಾಡಿಸಿಕೊಳ್ಳಿ. ಅದನ್ನು ಹೇಳಲು ಧಣಿ ಕಳುಹಿಸಿದರು". ಎಂದ.
ಮನೆಯವರಿಗೆ ಗಾಬರಿ ಆಯಿತು. ಆದರೆ ಧಣಿಯ ಉದಾರತೆಗೆ ಮಾರು ಹೋದರು. ಸ್ವಲ್ಪ ಸಮಯ ಪಡೆದು ಅಸಲು ಕಟ್ಟಿ ಮನೆ ಉಳಿಸಿಕೊಂಡರು.

ಸಣ್ಣ ಪುಟ್ಟ ಸಾಲ ಬೇಕಾದರೆ ಕೊಡುವವರು ಇದ್ದರು. ಪಟ್ಟಣದಲ್ಲಿ ಗಿರವಿ ಅಂಗಡಿಗಳು ಇದ್ದವು. ಅಲ್ಲಿನ ಮಾರವಾಡಿಗಳು ಬಂಗಾರ ಬೆಳ್ಳಿವತ್ತೆ ಇಟ್ಟುಕೊಂಡು ಕೊಡುವರು. ಬಡ್ಡಿ ದರ ಜಾಸ್ತಿ ಅವರ ವ್ಯವಹಾರ ಬೆಣ್ಣೆಯಲ್ಲಿನ ಕೂದಲು ತೆಗೆಯುವಂತೆ. ಮಾತು ಮೃದು. ನಡೆ ಕಠಿನ. ಅವಧಿ ಒಳಗೆ ಬಿಡಿಸಿಕೊಂಡರೆ ಸರಿ. ಇಲ್ಲವಾದರೆ ದಕ್ಕು ಆಗುವುದು.. ಹಳ್ಳಿಯಲ್ಲಿಯೇ ಕೆಲವರು ಹಣವಿದ್ದವರು ಹಿತ್ತಾಳೆ ಪಾತ್ರೆ ಪಡಗ ಒತ್ತೆ ಇಟ್ಟುಕೊಂಡು ಹಣ ಕೊಡುವರು. ಕೆಲವರಂತೂ ರೇಷ್ಮೆ ಸೀರೆಯನ್ನೂ ಅಡ ಇಡುವವರಿದ್ದರು. ಋಣ ಪರಿಹಾರ ಕಾಯಿದೆ ಕಟ್ಟುನಿಟ್ಟಾಗಿ ಜಾರಿಗೆ ಬಂದಾಗ ಸರಕಾರಿ ಅಧಿಕಾರಿಗಳೆ ಬಂದು ನಿಂತು ಅಡ ಇಟ್ಟವರ ದಾಗಿನ ಕೊಡಿಸಿದರು. ಆದರೆ ನಂತರ ಜನರಿಗೆ ದುಡ್ಡು ಮುಖ ಕೆರದುಕೊಂಡರೂ ಹುಟ್ಟದಾಯಿತು. ಅಂದಿನಿಂದ ಹಳ್ಳಿಗಳಲ್ಲಿ  ಸತ್ತೆ ವ್ಯವಹಾರ ಬಂದಾಯಿತು. ಆದರೆ ಈಗ ಅದೆ ಕೆಲಸವನ್ನು ಕಾರ್ಪೊರೇಟ್ ಸಂಸ್ಥೆಯಾದ ಮುತ್ತೂಟ್ ಫೈನಾನ್ಸ್ ಮಾಡುತ್ತಿದೆ. ಅದಕ್ಕೆ ಸಿನೆಮಾ ನಟರು ಲಕ್ಷ ಲಕ್ಷ ಅಂಭಾವನೆ ಪಡೆದು ಪ್ರಚಾರ ಮಾಡುತ್ತಾರೆ.
ಇನ್ನು ಕೂಲಿ ನಾಲಿ ಮಾಡುವವರಿಗೂ ವಾರದ ಸಾಲ ಸಿಗುವುದು. ಅವರನ್ನು ವಾರದ ಬಡ್ಡಿ ಎನ್ನುವರು. ಹೆಚ್ಚಾಗಿ ಪಠಾಣರು ಮತ್ತು ಲಬ್ಬೇರರು ಈ ದಂಧೆ ಮಾಡುವರು. ಅವರದು ಮೂರಾಣೆ ಬಡ್ಡಿ. ಬಾಕಿ ಚುಕ್ತಾ ಆಗದಿದ್ದರೆ ಗಿರಾಕಿಯನ್ನು ಹಿಡಿದು ಕೂಡಿಸುವರು. ಅಲ್ಲಿ ಏನು ಮಾಡುತಿದ್ದರೋ ಏನೋ. ಬಾಕಿದಾರರಂತೂ ಹಣ್ಣು ಹಣ್ಣು ಆಗಿರುವರು. ಮನೆಯವರು ಹೋಗಿ ಹಣ ಕೊಟ್ಟು ಬಿಡಿಸಿಕೊಂಡು ಬರುವರು. ಕುಡುಕರು, ಹೊಣೆಗೇಡಿಗಳು ಚಟಗಾರರು ಇವರ ಖಾಯಂ ಗಿರಾಕಿಗಳು. ಒಂದು ರೀತಿಯಲ್ಲಿ ಈಗ ಸಿನೇಮಾರಂಗದಲ್ಲಿ ಚಾಲತಿಯಲ್ಲಿರುವ ಮೀಟರ್‌ ಬಡ್ಡಿ ದಂಧೆ ಅದಾಗಿತ್ತು.
ರೈತರಿಗೆ ಧಾನ್ಯದ ಕೊರತೆ ಬಿದ್ದರೆ ಇತರೆ ರೈತರಲ್ಲಿ  ಕಡ ತರುವರು. ಸುಗ್ಗಿಯಲ್ಲಿ ಗೂಡಿ ನೆಲ್ಲಿಗೆ ಹತ್ತು ಸೇರು ಸೇರಿಸಿ ಕೊಡಬೇಕಿತ್ತು. ಹಣ ಬೇಕಿದ್ದರೆ ನೂರು ರೂಪಾಯಿ ಪಡೆದರೆ ಸುಗ್ಗಿಯಲ್ಲಿ ಬೇರೆಯವರಿಗಿಂತ ಕಡಿಮೆ ದರದಲ್ಲಿ ಅವರಿಗೆ ನೆಲ್ಲು ಕೊಡಬೇಕು.
ಇನ್ನೊಂದು ಅಮಾನವಿಯ ಪದ್ದತಿ ಇದ್ದಿತು. ಅದು ಜೀತ ಪದ್ದತಿ. ದೊಡ್ಡ ವಕ್ಕಲತನವಿರುವವರು ಸಾಲ ಕೊಟ್ಟು ದುಡಿಯಲು ಇಟ್ಟುಕೊಳ್ಳುವರು. ಅವರಿಗೆ ಹೊಟ್ಟೆ ಬಟ್ಟೆಗೆ ಕೊಡುವರು. ಆದರೆ ಕೂಲಿ ಮಾತ್ರ ನೆಪ ಮಾತ್ರಕ್ಕೆ. ವರ್ಷಕ್ಕೆ ಇಷ್ಟು ಎಂದು ನಿಗದಿಯಾಗಿರುವುದು. ತಂದೆಯ ಮದುವೆಗೆ ಮಾಡಿದ ಸಾಲಕ್ಕೆ ಮಕ್ಕಳೂ ಜೀತ ಮಾಡಿದ ಉದಾಹರಣೆಗಳು ಬಹಳ.
ಸಾಮಾನ್ಯರು ಸಾಲ ಮಾಡಲು ಸಾಧಾರಣವಾಗಿ ಅಂಜುವರು. "ಸಾಲ ಮಾಡಲಿ ಬೇಡ, ಸಾಲದೆನ ಬೇಡ, ನಾಳಿಗೆ ಏನೆಂಬ  ಚಿಂತೆ ಬೇಡ" ಎಂಬ ಮಾತನ್ನು ತಾಯಿ ಮಗುವಿಗೆ ತೊಟ್ಟಿಲಲ್ಲಿರುವಾಗಲೆ ಹಾಡಿನ ಮೂಲಕ ತಿಳಿಸುವಳು. ಜನರಲ್ಲಿ  ಋಣಪ್ರಜ್ಞೆ ಅತಿ ಗಾಢವಾಗಿತ್ತು. ಮನೆಯ ಹಿರಿಯರು ಸಾಯುವಾಗ ಮಕ್ಕಳಿಗೆ ಸಾಲದ ವಿವರ ತಿಳಿಸಿ ತೀರಿಸಲು ಹೇಳುವರು. ಮಕ್ಕಳೂ ಸಹ ಸಾಲ ತೀರಿಸಿದ ಮೇಲೆ ನಿಟ್ಟುಸಿರುಬಿಟ್ಟು ಇವತ್ತು ನಾವು ನಮ್ಮ ಅಪ್ಪನ ಮಕ್ಕಳಾದೆವು ಎನ್ನುವರು. ಬಡ್ಡಿ ಮಗ ಎನ್ನುವುದು ಸಾಮಾನ್ಯವಾದ ತೆಗೆಳಿಕೆಯಾಗಿತ್ತು ವಾರಸುದಾರರಿಲ್ಲದವರು ಮಂದಿನ ಜನ್ಮದಲ್ಲಿ ಸಾಲ ಕೊಟ್ಟವರ ಮಗನಾಗಿ ಹುಟ್ಟಿ ಋಣ ತೀರಿಸುವೆ ಎಂದು ಅಲವತ್ತುಕೊಳ್ಳುವರು. ಎಷ್ಟೆ ಕಷ್ಟ ಇದ್ದರೂ ಸಾಲ ತೀರಿಸಲು ಹೆಣುಗುತಿದ್ದರೇ ವಿನಃ ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ. ಪ್ರಾಣ ಒತ್ತೆ ಇಟ್ಟಾದರೂ ಬಾಕಿ ಚುಕ್ತಾ ಮಾಡುವ ಗುಣ ಇತ್ತು. ಸತ್ಯ ಹರಿಶ್ಚಂದ್ರನ ಕಥೆ ಅವರ ಪಾಲಿಗೆ ಉತ್ತಮ ಉದಾಹರಣೆಯಾಗಿತ್ತು.

ಅರವತ್ತರ ದಶಕದಲ್ಲಿ ಸಹಕಾರಿ ಚಳುವಳಿ ಬಲವಾಯಿತು. "ಒಬ್ಬರಿಗಾಗಿ ಎಲ್ಲರು, ಎಲ್ಲರಿಗಾಗಿ ಒಬ್ಬರು" ಎಂಬ ತತ್ವದಮೇಲೆ ರೈತರಿಗೆ ಸೊಸೈಟಿಗಳ ಮೂಲಕ ಸಾಲ ಸೌಲಭ್ಯ ದೊರೆಯತೊಡಗಿತು. ಕರ್ನಾಟಕವು ಸಹಕಾರಿ ಚಳುವಳಿಯಲ್ಲಿ ಮುಂಚೂಣಿಗೆ ಬಂತು. ಪ್ರತಿ ಗ್ರಾಮಕ್ಕೂ ಸಹಕಾರಿ ಸಂಘ ಕಾಲಿಟ್ಟಿತು. ಊರಿನ ಹಿರಿಯನೆ ಅದರ ಅಧ್ಯಕ್ಷನಾದ. ಆತ ಹೆಬ್ಬಟ್ಟಿನ ಗಿರಾಕಿ. ಅಕ್ಷರಸ್ಥ  ಕಾರ್ಯದರ್ಶಿಯ ಕೈಗೊಂಬೆಯಾದ.. ಅವನು ತಾನು ಮೊಸರು ತಿಂದು ಅಧ್ಯಕ್ಷರ ಬಾಯಿಗೆ ಒರಸತೊಡಗಿದ. ಇದರಿಂದ ಸೊಸೈಟಿಗಳು ಮುಚ್ಚತೊಡಗಿದವು. ಸುಧಾರಣೆಗಾಗಿ ಹಲವು ಕಾನೂನು ಬಂದವು. ಅಧಿಕಾರದ ಅವಧಿ ಸೀಮಿತವಾದಾಗ ಅಧ್ಯಕ್ಷರ ಸಂಬಂಧಿಗಳು ಕುರ್ಚಿ ಹಿಡಿದರು. ವಂಶ ಪಾರ್ಯಂಪರೆಯಾಗಿ ಅಧಿಕಾರ ಹಿಡಿಯುವ ಪ್ರವೃತ್ತಿ ಬಲವಾಯಿತು. ಅದರ ಜತೆ ಅಕ್ಕಿ ಸಕ್ಕರೆ ನೀಡತೊಡಗಿದಾಗ ಹಿತಾಸಕ್ತಿ ಹೆಚ್ಚಾಯಿತು. ಸಹಕಾರ ಸಂಘಗಳು ರಾಜಕೀಯ ಮೇಲಾಟದ ಮೊದಲ ಮೆಟ್ಟಿಲಾದವು. ಸಹಕಾರಿ ಚಳುವಳಿಗೆ ಹಿನ್ನೆಡೆಯಾಯಿತು. ಆದರೆ ಇದರಿಂದ ಜನರಲ್ಲಿ ಕೊಟ್ಟವನು ಕೋಡಂಗಿ ಇಸುಕೊಂಡವನು ಈರಭದ್ರ ಎಂಬ ಭಾವನೆ ಬಲಿಯಿತು. ಐಷಾರಾಮಿ ಜಿವನದ ಹಂಬಲ ಹೆಚ್ಚಾಯಿತು. ದಣಿಯದೆ ದುಡ್ಡು ಗಳಿಸುವ ಹಂಬಲ ಹೆಚ್ಚಾಯಿತು. ಸುಸ್ತಿದಾರರು ಹೆಚ್ಚಿದರು. ಬ್ಯಾಂಕುಗಳೂ ಆದ್ಯತೆಯ ಮೇಲೆ ಸಾಲ ನೀಡತೊಡಗಿದವು. ಸರಕಾರಿ ಸಾಲ ಎಂದರೆ ತೀರಿಸಬೇಕಿಲ್ಲ. ಮನ್ನಾ ಆಗುವುದು ಎಂದುಕೊಂಡು ಅಪವ್ಯಯ ಹೆಚ್ಚಾಯಿತು.
ಸಾಲದ ಶೂಲಕ್ಕೆ ಜನ ಬಲಿಯಾಗುವುದನ್ನು ತಪ್ಪಿಸುವ ಬದ್ಧತೆಯಿಂದ ಸರಕಾರ ಅನೇಕ ಕ್ರಮ ತೆಗೆದುಕೊಂಡಿದೆ..  ಋಣಮುಕ್ತ ಕಾಯಿದೆ, ಜೀತಮುಕ್ತ ಕಾಯಿದೆ ಜಾರಿಗೆ ಬಂದಿವೆ. ಬ್ಯಾಂಕುಗಳ ರಾಷ್ಟ್ರೀಕರಣದಿಂದ ಜನಸಾಮಾನ್ಯರಿಗೆ ಅವು ಮುಕ್ತವಾಗಿವೆ. ಇಪ್ಪತ್ತು ಅಂಶದ ಕಾರ್ಯಕ್ರಮದಲ್ಲಿ ದನಕ್ಕೆ, ಕುರಿಗೆ ಕೋಳಿಗೆ ಕರೆ ಕರೆದು ಸಾಲ ಕೊಡುವರು.
ವಿಪರ್ಯಾಸ ಎಂದರೆ ಸಾಕಷ್ಟು ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು ಅನಷ್ಠಾನವಾಗುತ್ತಿವೆ. ಪ್ರಗತಿಪರ ಕಾನೂನು ಜಾರಿಗೆ ಬಂದಿವೆ. ಆದರೆ ಹಳ್ಳಿ ಹಾಳಾತ್ತಲಿವೆ. ನಗರಕ್ಕೆ ವಲಸೆ ಹೋಗುವುದು, ಕೂಲಿ ಅರಸಿ ಗುಳೆ ಹೊರಡುವುದು ಮಿತಿ ಮೀರಿದೆ. ಬೇಸಾಯ ಬೇಡದ ಬದುಕಾಗಿದೆ. ರೈತರ ಆತ್ಮಹತ್ಯ ಪ್ರಕರಣಗಳು ಹೆಚ್ಚಾಗುತ್ತಲೆ ಇವೆ. ಸಾಲ ಮನ್ನಾ, ಕಡಿಮೆ ಬಡ್ಡಿ, ಕಡಿತದ ದರದಲ್ಲಿ ಬೀಜ, ಕೃಷಿ ಉಪಕರಣ ಬೆಳೆ ಸಾಲ, ಬೆಳೆ ವಿಮೆ, ಅನುದಾನ, ಪ್ರೋತ್ಸಾಹ ಧನ  ಮೊದಲಾದ  ಸೌಲಭ್ಯಗಳ ನಡುವೆಯೂ ರೈತನ ಸಾವು  ತಪ್ಪಿಲ್ಲ.  ಅನ್ನದಾತನ ಆತ್ಮಹತ್ಯೆಯು ಇಂದು ನಾವೆಲ್ಲ ಚಿಂತೆನೆ ಮಾಡಬೇಕಾದ ಗಂಭೀರ ವಿಷಯವಾಗಿದೆ

No comments:

Post a Comment