Monday, August 20, 2012

ಮನೆ ಮನುಷ್ಯರದು ಮಾತ್ರವಲ್ಲ


ಮು
ನ್ನೂರು ಮನೆಗಳಿರುವ ನಮ್ಮ ಹಳ್ಳಿಯ ಬಹುತೇಕ ಮನೆಗಳಿಗೆ ಮಣ್ಣಿನ ಮಾಳಿಗೆ. ಮನೆಯ ಮುಂದೆ ಕಟ್ಟೆ. ಅದಕ್ಕೆ ಹುಲ್ಲಿನ ಚಪ್ಪರ. ನಾಲಕೈದು ಗಾರೆ ಮನೆಗಳು. ಬಡಜನರ ಬಾಳೆಲ್ಲ ಗುಡಿಸಲಲ್ಲೇ. ಮನೆ ಎಂದರೆ ಅದು ಮನುಷ್ಯರ ವಾಸಕ್ಕೆ ಮಾತ್ರವೇ ಎಂದು ಭಾವಿಸಿದರೆ, ಅದು ತಪ್ಪು ಕಲ್ಪನೆ. ಪಶು, ಪಕ್ಷಿ , ಕ್ರಿಮಿ, ಕೀಟಗಳೊಂದಿಗಿನ ದೂರಲಾಗದ ಸಹಬಾಳ್ವೆ. ಮನೆಯೊಳಗೆ  ಹೋಗುವ ಮೊದಲೇ ಹೊಸ್ತಿಲ ಹೊರಗೆ ಇರುವ ಕಟ್ಟೆಯ ಕೆಳಗೆ ಕೋಳಿ ಗೂಡು. ಅಲ್ಲಿ ಏನಿಲ್ಲ ಎಂದರೂ ಒಂದು ಹುಂಜ, ಮೂರೋ ನಾಕೋ ಹೇಟೆಗಳ ವಸತಿ. ಮೊಟ್ಟೆ ಇಡುವ ಕಾಲ ಬಂದಾಗ, ಮೆತ್ತನೆಯ ಹುಲ್ಲು ಬಣವಿ ಇಲ್ಲವೇ ಸುರಕ್ಷಿತ ತಾಣವನ್ನು ಹುಡುಕಿಕೊಳ್ಳುವಷ್ಟು ಬುದ್ಧಿಮತ್ತೆ ಹಾಗೂ ಸ್ವಾತಂತ್ರ್ಯ ಅವಕ್ಕುಂಟು. ವಿದ್ಯುಚ್ಚಕ್ತಿ ಕಾಣದ, ಬಿಸಿ ಬಸಿಯುವ ಊರುಗಳಲ್ಲಿ, ರಾತ್ರಿಗಳು ಉರುಳುವುದು ಕಟ್ಟೆಯ ಮೇಲೆ. ಮಲಗಿದವರಿಗೆ ಹೇಟೆಯ ಗುಟುರ್‌ ಗುಟುರ್‌ ಜೋಗುಳದಂತೆ. ಬೆಳಗಿನ ಜಾವ ಬೇಗ ಏಳಲು ಗಡಿಯಾರದ ಗೊಡವೆ ಇಲ್ಲ.  ಅಲಾರಂ ಅನಾವಶ್ಯಕ. ಬೆಳಗಿನ ನಾಲಕ್ಕು ಗಂಟೆಯ ಹೊತ್ತಿಗೆ ಮುಂಗೋಳಿಯ ಕೂಗು. ಐದರ ಹೊತ್ತಿಗೆ ಹೀಂಗೋಳೀಯ ಕೂಗು. ಹೀಗೆ ಕೂಗುವುದು ಹುಂಜದ ಕೆಲಸ. ಅವು ಯಾವಾಗಲೂ ಕ್ರಮ ತಪ್ಪುವುದಿಲ್ಲ. ಸರಿಯಾಗಿ ಸ್ವರ ಹೊರಡಿಸುವವು. ಅಪ್ಪಿತಪ್ಪಿ ಅಡ್ಡ ಹೊತ್ತಿನಲ್ಲಿ ಸ್ವರವೆತ್ತಿದರೆ ಅದಕ್ಕೆ ಕೊನೆಗಾಲ ಬಂದಂತೆ. ಅಡ್ನಾಡಿ ಕೋಳಿಯನ್ನು ಅಪಶಕುನದ್ದು ಎಂದು ಪರಿಗಣಿಸಿ, ಯಾರಾದರೂ ನಂಟರು ಬರುವುದೆ ತಡ, ಬಂದವರ ಗಂಗಾಳದಲ್ಲಿ ಕೋಳಿ  ಸಾರಾಗಿರುತ್ತಿತ್ತು.
ಮನೆ ಹೊಸ್ತಿಲು ದಾಟಲಿಕ್ಕೆ ತಡವಿಲ್ಲ ಘಮ್ಮನೆ ಸೆಗಣಿ ವಾಸನೆ. ಅಲ್ಲಿರುವ  ಗೋದಲಿಯಲ್ಲಿ ಬಾಯಾಡಿಸುವ ನಾಲಕ್ಕಾರು ರಾಸುಗಳು. ಎತ್ತು, ಎಮ್ಮೆಹಸುಗಳಿಗೆ ಬೇರೆ ಬೇರೆ ಜಾಗ. ಕರೆಯುವ ಹಸುವಿಗೆ ವಿಶೇಷ ಗಮನ.  ಅವುಗಳ ತಲೆಯ ಮೇಲೆ ಇರುವ ಅಟ್ಟದಲ್ಲಿ ಹುಲ್ಲು, ಸೊಪ್ಪೆ, ದಂಟುಗಳ ಸಂಗ್ರಹ. ಅನುಕೂಲಸ್ಥ ರೈತರ ಮನೆಯ ರಾಸುಗಳಿಗೆ ಬೇರೆ ದನದ ಮನೆಯಲ್ಲಿರುವ ಭಾಗ್ಯ. ಆದರೆ ಸರ್ವೆ ಸಾಮಾನ್ಯವಾಗಿ ಕಣ್ಣೆದುರೇ ತಮ್ಮ ಪಶು ಸಂಪತ್ತು ಇರಲಿ ಎಂಬುದು ಅನೇಕರ ಆಶಯ. ಮೆಟ್ಟಿಲ ಪಕ್ಕವೇ ಕಲಗಚ್ಚು. ಅದರಲ್ಲಿ ಅಕ್ಕಿ ಬಸಿದ ನೀರಿನ ಜೊತೆ ಅಳಿದುಳಿದ ಆಹಾರ ಪದಾರ್ಥಗಳನ್ನೂ ಹಾಕುವರು. ಕೊನೆಗೆ ಹೆಚ್ಚಾದ ಮಜ್ಜಿಗೆ ಕೂಡಾ ಅದರಲ್ಲೇ. ದನಗಳು ಅವುಗಳನ್ನು ಕುಡಿಯುವುದನ್ನು ನೋಡುವುದು ಮಾತ್ರವಲ್ಲ ಅದರ ಸೊರ್‌ ಎಂದು ಹೀರುವ ಸದ್ದನ್ನೂ ಕೇಳಬಹುದಾಗಿತ್ತು. ಅವು ಕಲಗಚ್ಚು ಕುಡಿಯುವ ಪ್ರಮಾಣ ಹಾಗೂ ಸದ್ದಿನಿಂದಲೇ, ಅವುಗಳ ಆರೋಗ್ಯ ಸ್ಥಿತಿಯನ್ನು ಪತ್ತೆ ಹಚ್ಚಲಾಗುತ್ತಿತ್ತು. ಯಾರಾದರೂ ಸಶಬ್ದವಾಗಿ ಕುಡಿದರೆ ಕಲಗಚ್ಚು ಕುಡಿದಂತೆ  ಹೀರುತ್ತಾನೆ ಎಂದು ಹಾಸ್ಯ ಮಾಡುವರು.
ದನಗಳು ಮನೆಯಲ್ಲೆ ಇದ್ದರೆ ಅವುಗಳ ಕಾಳಜಿ ಮಾಡಲು ಅನುಕೂಲ. ಮತ್ತು ಮಧ್ಯರಾತ್ರಿ ಎದ್ದು ಇನ್ನೂ ಒಂದು ಒಬ್ಬೆ ಮೇವು ಹಾಕಲು ಅನುಕೂಲ. ಬೇರೆ  ಕಡೆ ಇದ್ದರೆ ಎದ್ದು ಹೋಗಿ ಹುಲ್ಲು ಹಾಕಲು ನಿದ್ದೆಗೇಡು. ಇಲ್ಲವೇ ಅದಕ್ಕೆ ಒಬ್ಬ ಆಳನ್ನೇ ಇಡಬೇಕು. ಅಲ್ಲಿಯೇ ಒಂದೋ ಎರಡೋ ಮೇಕೆಗಳು. ಕುರಿಗಳು ಸಾಮಾನ್ಯವಾಗಿ ಮನೆಯಲ್ಲಿ ಇರುವುದಿಲ್ಲ, ಕಾರಣ ಅವುಗಳನ್ನು ಹೆಚ್ಚು ಜತನದಿಂದ ಕಾಯಬೇಕು. ಜೊತೆಗೆ, ಮನೆತುಂಬ ಕೂದಲ ರಾಶಿ, ರಾಶಿ.  ಅವಕ್ಕೆ ಬೇರೆಯೇ ಆದ ವ್ಯವಸ್ಥೆ. ಕುರಿ ಹಟ್ಟಿಗಳಲ್ಲಿ ನೂರಾರು ಕುರಿಗಳನ್ನು ಒಟ್ಟಿಗೆ ತರಬುವರು. ಒಂದೋ ಎರಡೊ ಕುರಿ ಇದ್ದವರು ಯಾರದಾದರೂ  ಮಂದೆಯಲ್ಲಿ ಬಿಡುವರು. ಅದಕ್ಕೆ ಪ್ರತಿಫಲವಾಗಿ ಅವುಗಳ ಉಣ್ಣೆ ನೀಡಿದರೆ  ಸಾಕು. ಅವರೇ ಅವನ್ನು ಮೇಯಿಸುವರು. ಅವನ್ನು ಕಾಯಲು ನಾಯಿಗಳು.  ಕುರಿ ಕಾಯುವ ನಾಯಿಗಳು ಬಹು ಚುರುಕು. ತೋಳ, ನರಿಗಳ ಸುಳಿವು ಸಿಕ್ಕಿದರೂ ಸಾಕು ಹುಲಿಯಂತೆ ಮೇಲೆ ಬಿದ್ದು ಓಡಿಸುವವು. ಸದಾ ಮಂದೆಯ ಸುತ್ತು ತಿರುಗುತ್ತಾ ಯಾವುದೇ ಕುರಿಯೂ, ಮಂದೆಯಿಂದ ಅಗಲದಂತೆ ಅಜ್ಜಗಾವಲು ಇರುವವು. ಆದರೆ ಮನೆ ಕಾಯುವ ನಾಯಿಗಳೆ ಬೇರೆ. ಅವುಗಳು ಮನುಷ್ಯರನ್ನು ವಾಸನೆಯಿಂದಲೇ ಗುರುತಿಸಬಲ್ಲವು. ಹೊಸಬರು ಬಂದರೆ  ಒಳ ಬರದಂತೆ ತಡೆ ಹಾಕುವವು. ರಾತ್ರಿ ಹೊರಗೆ ಕಟ್ಟೆಯ ಮೇಲೆ ಮಲಗಿದಾಗ ಯಾವ ಮಾಯದಲ್ಲೋ ಬಂದು ಹೊದಿಕೆಯಲ್ಲಿ ಸೇರಿಕೊಂಡು  ಬಿಡುವುದು. ಪಾಪ ಅದಕ್ಕೂ ಬೆಳಗಿನ ಚಳಿಯಲ್ಲಿ ಬೆಚ್ಚಗೆ  ಮಲಗಬೇಕೆನಿಸುವುದು ಸಹಜ.  
ದನದಕ್ಕಿಯಿಂದ ಮುಂದೆ ಹೋದರೆ ತುಸು ಎತ್ತರದಲ್ಲಿ ಐದು ಅಂಕಣದ ಇಲ್ಲವೆ ಏಳು ಅಂಕಣಗಳ ಅಟವಾಳಿಗೆ. ಅಲ್ಲಿ ಎರಡು ಬದಿಯಲ್ಲಿ ನೆಲಗೊಣಿಗಳು.  ಅದಕ್ಕೆ ತೂಗುಹಾಕಿದ ಬಾರುಕೋಲು, ಕಣ್ಣಿ, ಹಗ್ಗ ಇತ್ಯಾದಿ ಕೃಷಿ ಉಪಕರಣಗಳು. ಮೊಳ ಅಗಲದ ಗೋಡೆಗಳಲ್ಲಿ ಗುಣೇವುಗಳು, ಅವುಗಳಲ್ಲಿಯೇ ಬಟ್ಟೆ ಬರೆ ಇಡುವುದು. ಅಂಕಣಕ್ಕೆ ಅನುಗುಣವಾಗಿ ಕಂಬಗಳು ಈಗಿನ ಬಹುಮಹಡಿ ಕಟ್ಟಡದ ವಿನ್ಯಾಸಕ್ಕೆ ಇವೇ ಮಾದರಿಯಾಗಿರಬಹುದು.  ಆದರೆ ಅಲ್ಲಿ ಗೋಡೆ ತೆಳು ಇಲ್ಲಿ ಬಹು ದಪ್ಪ. ಹೊರ ಗೋಡೆಗಳಂತೂ ಮಾರು ಅಗಲದವು. ಎಂತಹ ಘನಂದಾರಿ ಕಳ್ಳನು ಕೂಡಾ ಕನ್ನ ಹಾಕಲಾರ. ಇನ್ನು  ಕಂಬಗಳ ಮೇಲೆ ಬೋದಿಗೆ. ಅದು ಅವರಿವರ ಕೈಗೆ ಎಟುಕಬಾರದ ವಸ್ತುಗಳನ್ನು ಇಡಲು ಬಹು ಪ್ರಶಸ್ತ ಜಾಗ. ಎತ್ತರದ ಆಳಾದರೆ ಸರಿ, ಇಲ್ಲವಾದರೆ ಸ್ಟೂಲು ಹತ್ತಿ ನೋಡಬೇಕು. ಅಂದು ಹೆಣ್ಣು ಗಂಡು ಕೊಡುವ ಮುಂಚೆ ಮನೆತನ ನೋಡಲು ಬರುವ ಪದ್ಧತಿ. ಆಗ ಮನೆತನ ಪರವಾ ಇಲ್ಲ ಏಳು ಅಂಕಣದ ಮನೆ ಇದೆ ಎಂದು ಸಮಾಧಾನ ಪಡುವರು. ಬಡವರಾದರೆ ಅವನಿಗೆ ಏನಿದೆ ಅಂತ ಹೆಣ್ಣು ಕೊಡುವುದು, ಅಡವಿಯಲ್ಲಿ ಹೊಲವಿಲ್ಲ, ಊರಲ್ಲಿ ಮನೆ ಇಲ್ಲ, ಹುಡುಗಿ ಯಾವ ಸುಖ ಸುರಿದುಕೊಳ್ಳುವಳು ಎಂದು ನಿರಾಕರಿಸುವರು. ಮನೆಯೊಂದಿದ್ದರೆ ಸರಿ, ತಲೆಯ ಮೇಲೆ ನೆರಳಿದೆ, ರಟ್ಟೆ ಗಟ್ಟಿ ಇದೆ, ದುಡಿದು ತಿನ್ನುವರು ಎಂಬ ಧೈರ್ಯ ಅವರಿಗೆ.  ನಂತರ ಅಡುಗೆಮನೆ ಹಾಗೂ ಅಡಕಲ ಕೋಣೆ. ಕೆಲವು ಕಡೆಯಲ್ಲಿ ಅದೇ ದೇವರ ಮನೆಯೂ ಆಗಬಹುದು. ಹೊಸದಾಗಿ ಮದುವೆಯಾದವರ ಮಲುಗುವ ಮನೆಯೂ ಆಗುವುದು. ಅಟವಾಳಿಗೆ ಮಧ್ಯದಲ್ಲಿ ಕೆರಸಿ ಕಟ್ಟಲು, ಗುಮ್ಮಿ ಇಡಲು, ಕಾಳಿನಚೀಲ ಇಡಲು ಜಾಗ. ಆಗ ಮಲಗಲು ಸಾಧಾರಣವಾಗಿ ಕವದಿ. ಗುಡಾರ ಮತ್ತು ಚಳಿಗಾಲದಲ್ಲಿ ಕಂಬಳಿ. ಬೇಸಗೆಯಲ್ಲಂತೂ ಎಲ್ಲರ ನಿದ್ದೆ ಮನೆಯ ಹೊರಗೆ. ಕಟ್ಟೆಯ ಮೇಲೆ. ಇಲ್ಲವೆ ಅಂಗಳದಲ್ಲಿ ಹೊರಸು ಹಾಕಿಕೊಂಡು ಮಲಗುವುದು. ಮಾಳಿಗೆಯ ಮೇಲೆ ಮಲಗುವವರು  ಸಾಧಾರಣ ಈಚಲು ಚಾಪೆ ಹಾಸಿಕೊಂಡು ಕಂಬಳಿ ಮುಸುಗಿಟ್ಟು ಮಲಗಿದರೆ ಬಿಸಿಲು ಬೀಳುವ ತನಕ ಗಡದ್ದು ನಿದ್ದೆ. ಮಧ್ಯರಾತ್ರಿಯಲ್ಲಿ  ಜಡಿ ಮಳೆ ಬಂದರೂ ಗೊತ್ತಾಗದು. ಅಷ್ಟು ಗಟ್ಟಿಯಾದ ಕಂಬಳಿಗಳು. ಅವುಗಳ ಮುಂದೆ ಈಗಿನ  ಪ್ಲಾಸ್ಟಿಕ್‌ ಮಳೆ ಅಂಗಿ ಏನೇನೂ ಅಲ್ಲ.
ಮನೆಯಲ್ಲಿನ ಜನದ ಜತೆ ಇರುವ  ಸಹ ಜೀವಿಗಳು ಎಂದರೆ ದನ, ಮೇಕೆಸೊಳ್ಳೆ, ತಗಣಿ, ಹೇನು, ಕೂರೆ, ಉಣ್ಣಿ, ಇಲಿ, ಹೆಗ್ಗಣ, ಬೆಕ್ಕು ಮತ್ತು ನಾಯಿ.  ಸೆಗಣಿ ಇಲ್ಲದ ತಿಪ್ಪೆ ಇಲ್ಲ, ತಗಣಿ ಇಲ್ಲದ ಮನೆ ಇಲ್ಲ, ಎಂಬ ಮಾತು ಜನ ಜನಿತ. ಬಹುತೇಕ ಮನೆಗಳು  ಮಣ್ಣಿನ ಮಾಳಿಗೆಯವು. ಗೋಡೆಗಳಿಗೆ ಮಣ್ಣಿನ ಮಲ್ಲ. ಅವುಗಳಿಗೆ ವರ್ಷಕೊಮ್ಮೆ ಸುಣ್ಣ ಕೆಮ್ಮಣ್ಣುಗಳ ಸಾರಣೆ. ಇನ್ನು ಕಂಬ, ತೊಲೆ, ಕಿಟಕಿ, ಮಂಚ ಎಲ್ಲವೂ ಕಟ್ಟಿಗೆಯವು. ಅವುಗಳ ಸಂದಿಯಲ್ಲಿ ತಗಣಿಗಳ ವಾಸ. ಕತ್ತಲಾಯಿತೆಂದರೆ ಸಾಕು ತಗಣಿಗಳ ಹಿಂಡು ದಾಳಿ ಇಡುತಿದ್ದವು.  ಸೀಮೆ ಎಣ್ಣೆ ದೀಪದ ಮಸಕು ಬೆಳಕಿನಲ್ಲಿ ಅವುಗಳದೇ ಕಾರುಬಾರು. ಹಾಸಿಗೆ ಹೊದಿಕೆಗಳನ್ನು ಮಾಳಿಗೆಯ ಮೇಲೆ ಒಣ ಹಾಕುವುದರಿಂದ ಬಿಸಿಲಿನಲ್ಲಿ ಅವು ಇರುತ್ತಿರಲಿಲ್ಲ. ಆದರೆ ರಾತ್ರಿ ಹಾಸಿಗೆಗೆ ತಲೆ ಹಚ್ಚಿದ ಅರ್ಧಗಂಟೆಯಲ್ಲಿ ಬಂದು ಮುತ್ತಿಕ್ಕುತಿದ್ದವು. ಒಂದು ಜಂಪು ನಿದ್ರೆ ಆದ ನಂತರ ಶುರುವಾಗುವುದು ಮೈ ಕೆರೆತ. ಮಕ್ಕಳು, ಹರೆಯದವರಿಗೆ ಅದು ಗೊತ್ತೇ ಆಗದಷ್ಟು ಮರನಿದ್ರೆ. ಅವರಿಂದ ನಿತ್ಯ ರಕ್ತದಾನ. ಹುಡುಗರು ಹುಪ್ಪಡಿ  ಹೆಚ್ಚು ಇದ್ದ ಮನೆಯಲ್ಲಿ ತಗಣಿಗಳಿಗೆ ನಿತ್ಯ ಸಂತರ್ಪಣೆ. ಆದರೆ ಮಧ್ಯ ವಯಸ್ಕರು ಮತ್ತು, ವಯಸ್ಸಾದವರದೆ ಫಜೀತಿ. ಮನೆಯ ಹೆಂಗಸರು ಅರ್ಧರಾತ್ರಿ ಎದ್ದು ಚಿಮಣೀ ಬುಡ್ಡಿ ಹಿಡಿದು ತಗಣಿಯ ಬೇಟೆಗೆ ತೊಡಗುವರು. ದೀಪ ಹತ್ತಿತೆಂದರೆ ಸಾಕು ಅವು ಸಾಲುಗಟ್ಟಿ ಬರುವವು. ಅವನ್ನು ಹಿಡಿದು ಒರೆಯುವದೇ ಒಂದು ಕೆಲಸ. ತಾಳ್ಮೆ ಇದ್ದವರು ಅವನ್ನು ನೆಲಕ್ಕೆಹಾಕಿ ಕಾಲಿನಿಂದ ಒರೆಯುವರು. ಅವುಗಳ ಸಂಖ್ಯೆ ಹೆಚ್ಚಾಗಿದ್ದರೆ. ಕಂಡದ್ದನ್ನು ಕಂಡಲ್ಲೆ ಕೈನಿಂದ ಒರೆಯುವರು. ಅನೇಕರ ಮನೆಯ ಸುಣ್ಣದ ಗೋಡೆಗಳು ರಕ್ತಸಿಕ್ತ. ಎಲ್ಲೆಲ್ಲು ಕೆಂಪು ಕಲೆಗಳು... ನನ್ನ ಅಮ್ಮನಂತೂ ಒಂದು ನಿದ್ರೆಯಾದ ಮೇಲೆ ಎದ್ದು ತಗಣಿ ಸಂಹಾರಕ್ಕೆ ಸಿದ್ಧರಾಗುತ್ತಿದ್ದರು. ಅವರು ಒಂದು ಬಟ್ಟಲಲ್ಲಿ ಚಿಮಣಿ ಎಣ್ಣೆ ಹಾಕಿಕೊಂಡು  ತಗಣಿಗಳನ್ನು ಹಿಡಿದು ಹಿಡಿದು ಅದರಲ್ಲಿ ಮುಳುಗಿಸುವರು. ಅವು ರಕ್ತ ಬೀಜಾಸುರನ ವಂಶದವು. ಒಂದನ್ನು ವರೆದರೆ ಅದರ ರಕ್ತದಿಂದ ಹತ್ತು ಹುಟ್ಟತ್ತವೆ ಎಂದು ಹೇಳುವುದು ವಾಡಿಕೆ. ಅದಕ್ಕೆ ಅವುಗಳ ರಕ್ತ ಹೊರ ಬರದಂತೆ ಚಿಮಣಿ ಎಣ್ಣೆಯಲ್ಲಿ ಮುಳಗಿಸಿ ಕೊಲ್ಲುವರು. ತಗಣಿ ಬೇಟೆಯಲ್ಲಿ ಎಷ್ಟು ತಲ್ಲೀನರಾಗಿರುತ್ತಿದ್ದರೆಂದರೆ ಗಂಟೆಗಳು ಕಳೆದದ್ದೆ ಗೊತ್ತಾಗುತ್ತಲೇ ಇರಲಿಲ್ಲ. ಯಾರಾದರೂ ಹೊಸಬರು ಬಂದರೆ ಅವರ ಪಾಡು ದೇವರಿಗೇ ಪ್ರೀತಿ.  ಬೆಳಗಾಗುವುದರಲ್ಲಿ ಮೈ ಎಲ್ಲ ಗಾದರಿ.. ಪಟ್ಟಣದವರೊಬ್ಬರು ನಮ್ಮಲ್ಲಿಗೆ ಬಂದಾಗ  ಸೊಳ್ಳೆ ಪದರೆ ತಂದು  ಕಟ್ಟಿಕೊಂಡು ಮಲಗಿದರೆ  ಬೆಳಗಾಗುವುದರಲ್ಲಿ ಪರದೆಯ ಮೇಲುಭಾಗದ ನಾಲಕ್ಕು ಮೂಲೆಗಳಲ್ಲಿ ಕುಪ್ಪೆ ಕುಪ್ಪೆ ತಗಣಿಗಳು. ವಾರವಿರಬೇಕೆಂದು ಬಂದವರು ಮಾರನೆ ದಿನವೇ  ಪರಾರಿ. ಆ ನಮ್ಮ ಮಣ್ಣಿನ ಮನೆಯಲ್ಲಿ ನೇತು ಹಾಕಿದ್ದ ಭೂಪಟ, ಕ್ಯಾಲೆಂಡರುಗಳೆಲ್ಲವೂ, ಕಡುಗೆಂಪು ಬಣ್ಣದ ಸಾಲು ಸಾಲು. ಇರುವೆ ಸಾಲುಗಳಂತೆ, ತಗಣಿಯ ಕಾಲೋನಿ. ಅವುಗಳನ್ನು ನಾಶ ಮಾಡಲು ಸಾಧ್ಯವಾಗದೇ, ಅವುಗಳೊಂದಿಗೆ ಸಹಬಾಳ್ವೆ ಘೋಷಿಸಲಾಗಿತ್ತು.  ಹಾಸಿಗೆಯಲ್ಲಿ ಹಾಗೂ ಕಂಬದಲ್ಲಿ ಇರದಿದ್ದರೆ ಆಯಿತು ಎಂದು ಅಘೋಷಿತ ಒಪ್ಪಂದ ಜಾರಿಯಾಗಿತ್ತು.. ಅವುಗಳ ಸರ್ವನಾಶ ಆಗಲಂತೂ ಸಾಧ್ಯವೇ ಇರಲಿಲ್ಲ. ಏಕೆಂದರೆ, ಇಡೀ ಮನೆಯೇ ಮರ ಹಾಗೂ ಮಣ್ಣಿನಿಂದ ಮಾಡಿದ್ದಾಗಿತ್ತು. ಹಾಗಾಗಿ, ಎಲ್ಲಕ್ಕೂ ಔಷಧಿ ಹೊಡೆಯುವುದು ಸಾಧ್ಯವೇ ಇರಲಿಲ್ಲ. 
ನಮ್ಮಲ್ಲಿ ಆ ಸಮಯದಲ್ಲಿ ಕಳ್ಳರ ಕಾಟ ಹೆಚ್ಚು. ಅದೂ  ಕಳ್ಳತನ ಎಂದರೆ ಒಂದೆ ರೀತಿಯಲ್ಲಿ ಅಲ್ಲ. ಗೋಡೆಗೆ ಕನ್ನಹಾಕಿ ಒಳ ಬಂದು, ಕಳ್ಳತನ ಮಾಡುವವರು ಕೆಲವರಾದರೆ, ಮಣ್ಣಿನ ಮಾಳಿಗೆಯಾದ್ದರಿಂದ ಮೇಲಿನ ಮಣ್ಣು ತೆಗೆದು ಮನೆಯೊಳಗೆ ಇಳಿಯುವದು ಇನ್ನೊಂದು ರೀತಿ. ಕಿಟಕಿ ಇದ್ದರೆ ಅದರ ಸರಳನ್ನು ಕಿತ್ತು ಒಳಬಂದು ಕಳ್ಳತನ ಮಾಡುವವರೂ ಇದ್ದರು. ನಮ್ಮಅಜ್ಜಿ ಹೇಳುತಿದ್ದ  ಪಂಜುಗಳ್ಳರು ಮಾತ್ರ ಕಾಣೆಯಾಗಿದ್ದರು. ಅವರು ಮೊದಲೆ ಎಚ್ಚರಿಕೆ ನೀಡಿ ಬರುತಿದ್ದರಂತೆ. ಅದೂ ತಲೆಬಾಗಿಲನ್ನು ಚಪ್ಪ ಕೊಡಲಿಯಿಂದ ಕೊಚ್ಚಿ ಹಾಕಿ ಒಳಗೆ ಬರುವುರು. ಅವರು ಪಂಜು ಹಿಡಿದು ಬರುವರು. ಆಗ ಬ್ಯಾಂಕು ಇರಲಿಲ್ಲ. ಕಾಗದದ ನೋಟುಗಳೂ ಕಡಿಮೆ. ಎಲ್ಲ ಬರಿ ಬೆಳ್ಳಿ, ಬಂಗಾರ. ಅವರು ಮನೆ ನುಗ್ಗಿ ಎಲ್ಲರನ್ನೂ ಕಟ್ಟಿ ಹಾಕಿ ಪಂಜಿನಿಂದ ಮನೆಯ ಯಜಮಾನನ ಮುಖ ಸುಟ್ಟು, ಅಡಗಿಸಿ ಇಟ್ಟ ಬೆಳ್ಳಿ ಬಂಗಾರ ಹೊತ್ತು ಕೊಂಡು ಹೋಗುವರಂತೆ. ಅದಕ್ಕಾಗಿ ಅವರ ಕಾಲದಲ್ಲಿ ಗೋಡೆಯಲ್ಲಿ ನೆಲದಲ್ಲಿ ಬೆಳ್ಳ್ಳಿರೂಪಾಯಿ ಮತ್ತು ಬಂಗಾರವನ್ನು ಗಡಿಗೆಯಲ್ಲಿಟ್ಟು ನೆಲದಲ್ಲಿ ಹೂತಿಡಲು ಕಾರಣವಂತೆ. ಅವು ಮನೆ ಸುಟ್ಟರೂ ಬೆಳ್ಳಿ ಗಟ್ಟಿಯಾಗಿ ಬೆಲೆ ಹೆಚ್ಚಾಗುತಿದ್ದವು.

ಬಂಗಾರದ ಮಾತು ಹೇಳುವ ಹಾಗೆ ಇಲ್ಲ. ನೂರಾರು ವರ್ಷವಿಟ್ಟರೂ ಕಂದುವುದಿಲ್ಲ, ಕುಂದುವುದಿಲ್ಲ. ದೊಡ್ಡ ಮನೆತನದವರು ಹಳೆಯಮನೆ ಕೆಡವಿ ಹೊಸಮನೆ ಕಟ್ಟಿಸುವಾಗ ಸದಾ ಎದುರಲ್ಲೇ ಇರುವರು. ಹಿರಿಯರ ಹೂತಿದ್ದ ಹೊನ್ನು ಸಿಗಬಹುದು ಎಂಬ ಆಶೆ. ನಮ್ಮದು ವಿಜಯನಗರದ ಸಾಮ್ರಾಜ್ಯದ ಭಾಗ. ಹಾಗಾಗಿ ಗಾರೆಯ ಮನೆಗಳಲ್ಲಿ ಅನೇಕರಿಗೆ ಚಿನ್ನದ ವರಹ ತುಂಬಿದ ತಂಬಿಗೆ, ಬೆಳ್ಳಿನಾಣ್ಯ ತುಂಬಿದ ಕೊಡ ಸಿಕ್ಕಿದ ಇತಿಹಾಸವಿದೆ. ಅದಕ್ಕಾಗಿ ಹಳೆಯ ತಲೆಮಾರಿನ ಮನೆಯವರು ಹೆಬ್ಬಾಗಿಲನ್ನು ಹಲಸಿನಮರದಿಂದ ಮಾಡಿಸುತಿದ್ದರುಅದೂ ದೈತ್ಯ ಗಾತ್ರದವು. ಅದರ ವೈಶಿಷ್ಟ್ಯವೆಂದರೆ ಹೊರಭಾಗದಲ್ಲಿ ಕೊಡಲಿಯಿಂದ ಹೊಡೆಯಲು ಮೊದಲು ಮಾಡಿದಾಗ ಒಳಭಾಗದಲ್ಲಿ ಬಾಗಿಲಿಗೆ ನೀರು ಎರಚುತ್ತಾ ನಿಲ್ಲುತಿದ್ದರಂತೆ. ಹಲಸು ಹಸಿಯಾದಾಗ ಅದನ್ನು ಕತ್ತರಿಸುವುದು  ಬಹು ಕಷ್ಟ ಸಾಧ್ಯ. ಹೀಗಾಗಿ ಬೆಳ ತನಕ ಕಡಿಯಲು ಪ್ರಯತ್ನಿಸಿ ಸೋತು ಸುಣ್ಣವಾಗಿ ಶಾಪ ಹಾಕುತ್ತಾ ಹೋಗುತಿದ್ದರಂತೆ. ಈ ಘಟನೆ ನಮ್ಮ ಅಜ್ಜಿ ಚಿಕ್ಕವರಾಗಿನದು. ನಮ್ಮ ಕಾಲಕ್ಕೆ ಆಗಲೇ ಕಾಗದದ ಹಣ ಬಂದಿದ್ದರಿಂದ ಪಂಜುಗಳ್ಳರ ಹಾವಳಿ ಇಲ್ಲದಾಗಿತ್ತು.



No comments:

Post a Comment