Monday, August 20, 2012

ಓದಿನ ಜೊತೆಗೇ ನಗರ ಪ್ರದಕ್ಷಿಣೆ

http://kendasampige.com/images/trans.gif
http://kendasampige.com/images/trans.gif
ಬಿಎಸ್ಸಿ ಪದವಿಗೆ ಮೊದಲ ವರ್ಷ ಪರೀಕ್ಷೆ ಇರಲಿಲ್ಲ. ಮೈನರ್‌ ವಿಷಯಗಳಿಗೆ ಭಾಷೆಗಳಿಗೆ  ಎರಡನೆ ವರ್ಷ ಪರೀಕ್ಷೆ. ಮೇಜರ್‌ ವಿಷಯಗಳಿಗೆ ಕೊನೆ ವರ್ಷದಲ್ಲಿ ಅದರಿಂದ ನಮಗೆ ಒತ್ತಡ ಕಡಿಮೆ. ಬೆಂಗಳೂರಿನ ಪರಿಚಯ ಆ ವರ್ಷ ಮೊದಲಾಯಿತು. ವಾರಾಂತ್ಯದಲ್ಲಿ ಗೆಳೆಯರೊಡನೆ ಸುತ್ತತೊಡಗಿದೆ. ಹೊಸ ಜಾಗಕ್ಕೆ ಹೋಗುವುದು ಮತ್ತು ಅಲ್ಲಿನ ಹೆಸರಾಂತ ಹೋಟೆಲಿನಲ್ಲಿ ತಿಂಡಿ ತಿನ್ನುವುದು ನಮ್ಮ ಕಾಯಕವಾಯಿತು.
ಆ ಕಾಲದಲ್ಲಿ ಈಗಿನಂತೆ ಆಗ ಹೆಜ್ಜೆಗೆ ಒಂದು ಹೋಟೆಲ್‌ ಇರಲಿಲ್ಲ. ಸುಭೆದಾರ ಛತ್ರಂ ರಸ್ತೆಯಲ್ಲಿ ರಾಮಕೃಷ್ಣ ಲಂಚ್ ಹೋಂ ಬಹು ಜನಪ್ರಿಯ. ಅದು ಬಿಟ್ಟರೆ ಕೆಂಪೆಗೌಡ ಥೇಟರ್‌ನ ಕೆಳಭಾಗದಲ್ಲಿದ್ದ ವಿಷ್ಣು ಭವನ. ಅಲ್ಲಿ ಕಾಫಿ ಬಹು ಹೆಸರುವಾಸಿ. ಅದಕ್ಕೆ ಅಫೀಮು ಸೇರಿಸುವರು ಅದರಿಂದ ಈ ಪಾಟಿ ರುಚಿ ಇರುವುದು ಎಂದು ಜನರ ಹೇಳಿಕೆ. ಆದರೆ ಅಲ್ಲಿನ ವಿಶೇಷ ತಿಂಡಿ ಎಂದರೆ ಬ್ರೆಡ್‌ ಟೋಸ್ಟು. ಅದು ಬೇರೆ ಎಲ್ಲೂ ಸಿಗುತ್ತಿರಲಿಲ್ಲ. ಬಳೆಪೇಟೆಯಲ್ಲಿನ ಉಡುಪಿ ಕೃಷ್ಣ ಭವನ ಅದರ ಗುಣಮಟ್ಟಕ್ಕೆ ಹೆಸರಾಗಿತ್ತು. ಅಲ್ಲಿನ ದೋಸೆ ತಿನ್ನದಿದ್ರೆ ಬೆಂಗಳೂರಿಗೆ ಬಂದದ್ದು ಸಾರ್ಥಕವಾಗಿಲ್ಲ ಎನ್ನುವರು. ಅಲ್ಲಿನ ಮಾಣಿಗಳು ಪದವೀಧರರು, ಕೆಲವರು ಸ್ನಾತಕೋತ್ತರ ತರಗತಿಗಳಿಗೂ ಹಾಜರಾಗುತ್ತಾರೆ. ಸಂಜೆಯ ವೇಳೆ ಅಲ್ಲಿ ಕೆಲಸ ಮಾಡುವರು ಎಂಬ ಪ್ರತೀತಿ ಇತ್ತು. ಅದಕ್ಕಿಂತ ಮುಂಚೆ ಮಲಬಾರ್‌ ಲಾಡ್ಜು. ಬಹುಶಃ ಆಗ ಬೆಂಗಳೂರಿನಲ್ಲಿದ್ದ ಏಕೈಕ ಸ್ವಸೇವಾ ಪದ್ಧತಿಯ ಹೋಟೆಲ್‌ ಅದು.
ಲಾಲ್‌ ಬಾಗ್‌ಗೆ ಹೋದರೆ ಹತ್ತಿರದ ಮಾವಳ್ಳಿ ಟಿಫಿನ್‌ ರೂಂಗೆ ಭೇಟಿ ಕಡ್ಡಾಯ. ಅದು ಹೋಟೇಲುಗಳ ರಾಜ. ಬಹು ಬೇಡಿಕೆ ಅದಕ್ಕೆ. ಅಲ್ಲಿ ಬೆಳ್ಳಿಯ ಲೋಟದಲ್ಲಿ ಕಾಫಿ ಕೊಡುವರು ಎಂಬುದೆ ವಿಶೇಷ ಆಕರ್ಷಣೆ. ಅಲ್ಲಿ ತಿಂಡಿತಿಂದ ಲೋಟ ಪ್ಲೇಟುಗಳನ್ನು ಬಿಸಿನೀರಲ್ಲಿ ತೊಳೆಯುವರು ಎಂಬುದೆ ದೊಡ್ಡ ವಿಷಯ. ಅಲ್ಲಿನ ರವಾಇಡ್ಲಿಗೆ ಚಿಕ್ಕ ಬಟ್ಟಲಲ್ಲಿ ಶುದ್ಧ ತುಪ್ಪ ಕೊಡುತಿದ್ದ ಹೋಟೆಲ್‌ ಅದೊಂದೆ. ಅದರ ಮುಂದೆ ಯಾವಾಗಲೂ ಕಾರುಗಳ ಸಾಲುಸಾಲು. ಅಲ್ಲಿ ಹೋದವರು ಹೆಸರು ಬರೆಸಿ ಕಾಯುತ್ತಾ ಸರದಿಯಲ್ಲಿ ಹೋಗಬೇಕು. ಅವರು ಕೂಗಿದಾಗಲೆ ತಿಂಡಿ ತಿನ್ನುವ ಭಾಗ್ಯ. ಅಲ್ಲಿ ಬೆಂಗಳೂರಿನಲ್ಲಿನ  ನಾನು ತಾನು ಎನ್ನುವ ಕೆನೆ ಪದರದ ಜನರ ಬರುತಿದ್ದರು. ಅಲ್ಲಿ ಒಂದೆ ಸಮಾಧಾನ ಎಲ್ಲರೂ ಬಾಯಿಚಪಲ ತೀರಿಸಲು ಬಂದಾಗ ಎಲ್ಲರೂ ಸಮಾನರು. ಆ ಹೋಟೆಲಿನಲ್ಲಿ ನನಗೆ ಆಗತಾನೆ ಕನಸಿನರಾಣಿ ಎಂದು ಹಿಂದಿ ಚಿತ್ರರಂಗದಲ್ಲಿ ಹೆಸರು ಮಾಡುತಿದ್ದ ಹೇಮಮಾಲಿನಿಯನ್ನು ನೋಡುವ ಅವಕಾಶ ಸಿಕ್ಕಿತು. ಹೇಮಾ ಇಡ್ಲಿ ದೋಸೆ ಪ್ರಿಯೆ. ಅದಕ್ಕಾಗಿಯೆ ಬೆಂಗಳೂರಿಗೆ ಬಂದಾಗ ಎಂಟಿಆರ್ ಗೆ ಭೇಟಿ ನೀಡಿದ್ದಳು.
ಎಂಟಿಆರ್‌ ನವರಿಗೆ ಗುಣಮಟ್ಟ ಕುರಿತು ಅತೀವ ಕಾಳಜಿ. ಯಾರ ಕಾಲದಲ್ಲೋ ಖಚಿತವಾಗಿ ನೆನಪಿಲ್ಲ, ಆಗಿನ ಆಹಾರಮಂತ್ರಿಯಾಗಿದ್ದವರು ಶ್ರೀ ರಾಮುಲು (ಗಣಿ ಖ್ಯಾತಿಯವರಲ್ಲ) ಎಂಬ ನೆನಪು. ಆಗ ಸರ್ಕಾರವು ಪ್ರತಿ ತಿಂಡಿಗೂ ತೂಕ ಮತ್ತು ಬೆಲೆ ನಿಗದಿ ಪಡಿಸಿದರು. ಹೆಚ್ಚಿನ ಬೆಲೆಗೆ ಮಾರುವ ಹಾಗಿರಲಿಲ್ಲ
.ಆ ಕಾನೂನು ಜಾರಿಯಲ್ಲಿ ಬಂದಾಗ ಎಂಟಿಆರ್‌ನವರು ತಾವು ನೀಡುವ ಗುಣಮಟ್ಟದ ತಿಂಡಿಯನ್ನು ಸರಕಾರ ನಿಗದಿ ಪಡಿಸಿದ ದರದಲ್ಲಿ ಮಾರುವುದು ಸಾಧ್ಯವಿಲ್ಲ ಎಂದು ಕೆಲ ಕಾಲ ವ್ಯವಹಾರವನ್ನೆ ಸ್ಥಗಿತಗೊಳಿಸಿದರು ಎಂದು ಕೇಳಿದ ಜ್ಞಾಪಕ. ಅವರು ಗುಣಮಟ್ಟ ಮತ್ತು ರುಚಿಯ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧರಿರಲಿಲ್ಲ. ಅದೆ ಸಮಯದಲ್ಲಿ ಅವರು ಇನಸ್ಟೆಂಟ್ ಆಹಾರ ತಯಾರಿಕೆ ಉದ್ಯಮ ಪ್ರಾರಂಭಿಸಿದರು. ಅವರ ದಿಢೀರ್‌ ಆಹಾರ ಬಹು ಜನಪ್ರಿಯವಾಯಿತು. ಈಗಂತೂ ದೇಶ ವಿದೇಶದಲ್ಲೂ ಅದು ಬಹು ಬೇಡಿಕೆ ಹೊಂದಿದೆ. ಮತ್ತು ಲಭ್ಯವಾಗಿತ್ತಲಿದೆ. ಅನಿವಾಸಿ ಭಾರತೀಯರಿಗಂತೂ ಅದು ಮನೆ ಊಟ ಕೊಡುವುದು ಅದು ತಾಯಿಯನ್ನು ನೆನಪಿಸುವುದು. ಇತ್ತೀಚೆಗೆ ಅದರ ಮಾಲಿಕರಾದ ಸದಾನಂದ ಮಯ್ಯ ಅವರು ಅದನ್ನು ಬಹುರಾಷ್ಟ್ರೀಯ ಬ್ರಾಂಡ್ ಆಗಿ ಬೆಳಸಿ ಪರಭಾರೆ ಮಾಡಿರುವರು. ಮತ್ತೆ ಹೊಸ ಉದ್ಯಮ ಶುರು ಮಾಡಿ ಯಶಸ್ವಿಯಾಗಿರುವುರು. ಮಯ್ಯಾಸ್‌ ಈಗ ಅತ್ಯಾಧುನಿಕ ಹೋಟೆಲ್‌ ಆಗಿದೆ.
ಗಾಂಧಿ ಬಜಾರಿನಲ್ಲಿ ವಿದ್ಯಾರ್ಥಿ ಭವನವಂತೂ ಸಾಹಿತಿಗಳ ಕಲಾಕಾರರ ನೆಚ್ಚಿನ ತಾಣ. ಅದರ ಮಸಾಲೆ ದೋಸೆಯ ರುಚಿ ದಶಕಗಳಿಂದ ಒಂದೆ ತೆರನಾಗಿದೆ. ಗರಿಗರಿಯಾಗಿ ಬೆಣ್ಣೆ ವಾಸನೆ ಬೀರುತ್ತ ರುಚಿಯಲ್ಲಿ ತುಸುವೂ ವ್ಯತ್ಯಾಸವಿಲ್ಲ. ಮುಖ್ಯಮಂತ್ರಿಗಳೂ ಬಿಂಕ  ಬಿಗುಮಾನ ಬಿಟ್ಟು ಇಲ್ಲಿ ಬಿಸಿ ದೋಸೆ ಸವಿಯಲು ಬಂದಿರುವರು. ಅವರು ಅಲ್ಲಿ ಹಾಕಿರುವ ಭಾವಚಿತ್ರಗಳು ನಮ್ಮ ಕನ್ನಡ ನಾಡಿನ ಸಾಹಿತ್ಯ ಲೋಕದ ದಿಗ್ಗಜಗಳದೆ ಆಗಿವೆ.
ವುಡ್‌ ಲ್ಯಾಂಡ್ ಬಹುಪ್ರಖ್ಯಾತ. ಅಲ್ಲಿಗೆ ಸಿನಿಮಾ ನಟರು ಸಿರಿವಂತರು ಮಾತ್ರ ಹೋಗುವರು. ಹಾಗಾಗಿ ಯಾವಾಗಲೋ ಒಂದು ಸಾರಿ ಹೋಗಿ ಅಲ್ಲಿ ಬಾಳೆ ಎಲೆಯಲ್ಲಿ ಹಾಕುವ ಭೂರಿಭೋಜನ ಸವಿದು ಬೆರಗಾಗಿದ್ದೆ. ಈಗ ಅದೂ ಬದಲಾಗಿದೆ. ಮಲ್ಲೇಶ್ವರದ ಅಯ್ಯರ್‌ ಮೆಸ್‌, ಶೇಷಾದ್ರಿ ಪುರದ ಅಜಂತಾ ಮೆಸ್‌, ಗಾಂಧಿನಗರದ ಸರಸ್ವತಿ ಲಾಡ್ಜ್‌ ಮತ್ತು ಬಳೆ ಪೇಟೆಯಲ್ಲಿನ ಸುಬ್ರಮಣ್ಯ ಲಾಡ್ಜ್ ಪರ ಊರಿನಿಂದ ಬಂದವರಿಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ಮತ್ತು ನೌಕರ ವರ್ಗದವರಿಗೆ ಸುಲಭ ದರದಲ್ಲಿ ಊಟ ಸರಬರಾಜಿಗೆ ಹೆಸರಾಗಿದ್ದವು. ಸರಸ್ವತಿ ಲಾಡ್ಜು ಮತ್ತು ಸುಬ್ರಮಣ್ಯ ಲಾಡ್ಜು ತಿಂಗಳ ಟೋಕನ್‌ ಪಡೆದರೆ ಒಂದು ರೂಪಾಯಿಯ ಒಳಗೆ ಊಟ ನೀಡುತಿದ್ದವು. ಈಗ ಅವು ಕಾಣೆಯಾಗಿವೆ. ಬೇರೆ ಕೆಲವು ಇದ್ದರೂ ಕಾಲಕ್ಕೆ ತಕ್ಕಂತೆ ಬದಲಾಗಿವೆ. ನಾನು ಹೆಚ್ಚಾಗಿ ಹೋಗುತಿದ್ದ ಮತ್ತು ಜನಪ್ರಿಯವಾದವುಗಳ ವಿವರಣೆ ಮಾತ್ರ ಕೊಟ್ಟಿರುವೆ. ಮಾಂಸಾಹಾರಿ ಹೋಟೆಲ್‌ಗಳ ಮಾಹಿತಿ ನನಗೆ ಆಗಲೂ ಇರಲಿಲ್ಲ. ಈಗಲೂ ಇಲ್ಲ. ಕಂಟೋನ್‌ ಮೆಂಟ್‌ ಅಂತೂ ನಮಗೆ ವಿದೇಶವಿದ್ದಂತೆ. ಹಾಗಾಗಿ ನನಗೆ ಅಲ್ಲಿನ ಮಾಹಿತಿ ಶೂನ್ಯ. ಆದರೆ ಕೆಂಪೆಗೌಡ ವೃತ್ತದಲ್ಲೆ ಇದ್ದ ಟಾಕ್ ಅಫ್ ದಿ ಟೌನ್, ಎಲೈಟ್‌ ಮತ್ತು ನೆಪೋಲಿ ಹೋಟೆಲ್‌ಗಳ ಬಣ್ಣದ ಬಣ್ಣದ ಬೋರ್ಡು ನೋಡಿ, ಅಲ್ಲಿಂದ ಹೊರಹೊಮ್ಮುವ ಸಂಗೀತ ಕೇಳಿ. ಒಂದು ಸಲ ಧೈರ್ಯ ಮಾಡಿ ಗೆಳೆಯನೊಬ್ಬನೊಡನೆ ಒಳಗೆ ನೋಡಿಯೆ ಬಿಡೋಣ ಎಂದು ಹೋದೆವು. ಸಮವಸ್ತ್ರ ಧಾರಿಯಾದ ಮಾಣಿ ಬಂದ ನಿಂತನು. ಏನಿದೆ ಎಂದು ಗತ್ತಿನಲ್ಲಿ ಕೇಳಿದೆವು ಅವನು ದೊಡ್ಡ ಪಟ್ಟಿಯನ್ನ ಕೈಗೆ ಕೊಟ್ಟ. ನಾವು ಕಕ್ಕಾಬಿಕ್ಕಿಯಾದೆವು ಮಾನ ಮುಚ್ಚಿಕೊಳ್ಳಲು ಒಂದು ಪ್ಲೇಟ್‌ ಚಿಪ್ಸ್‌ ತೆಗೆದುಕೊಂಡು ಬಾ ಎಂದೆವು ಅವನು ನಸುನಕ್ಕ. ಇಲ್ಲಿ ಚಿಪ್ಸ್ ಸಿಗುವುದಿಲ್ಲ ಚಾಪ್ಸ್ ಸಿಗುವುದು ಕೊಡಲೆ ಎಂದ. ನಾವು ಬೆಪ್ಪಾಗಿ ಕುಳಿತಿದ್ದೆವು. ಅವನಿಗೆ ಗೊತ್ತಾಯಿತು ಇವು ಪುಳಿಚಾರು ಗಿರಾಕಿಗಳು ಎಂದು.. ಇದು ನೀವು ಬರುವ ಹೋಟೆಲ್‌ ಅಲ್ಲ. ಮುಖದ ಮೇಲೆ ಹೊಡೆದಂತೆ ಹೇಳಿದ. ಇಂಗು ತಿಂದ ಮಂಗನ ಮುಖ ಮಾಡಿಕೊಂಡು ಹೊರಗೆ ಬಂದವರು ಮತ್ತೆ ಆ ಕಡೆ ಸುಳಿಯಲೆ ಇಲ್ಲ. ಅಲ್ಲಿ ಲೈವ್‌ ಬ್ಯಾಂಡು ಮತ್ತು ಕ್ಯಾಬರೆ ನಡೆಯುವುದು ಎಂದು ಕೇಳಿ ಬಲ್ಲೆವು. ನೋಡುವ ಯೋಗ ಮತ್ತು ಧೈರ್ಯ ಎರಡೂ ಇರಲಿಲ್ಲ. ನಂತರ ಕೆಲವು ಹೋಟೆಲ್‌ಗಳಲ್ಲಿ ನಾಲಕ್ಕಾಣೆ ಹಾಕಿ ಬೇಕಾದ ಹಾಡು ಕೇಳಬಹುದಾದ ಜ್ಯೂಕ್‌ ಬಾಕ್ಸ್ ಬಂದವು. ಅನೇಕರಿಗೆ ಅಲ್ಲಿಹೋಗಿ ಬೈಟೂ ಕಾಫಿ ಕುಡಿದು ಗಂಟೆಗಟ್ಟಲೆ ಹಾಡು ಕೇಳುವುದೆ ಹವ್ಯಾಸವಾಗಿತ್ತು. ಅಲ್ಲಿ ಬರಿ ಹಿಂದಿ ಹಾಡಿನ ಹಾವಳಿ. ನಾನೂ ಒಂದೆರಡು ಸಲ ಹಾಡು ಕೇಳಲೆಂದೆ ಹೋಗಿ ಕೇಳಿಬಂದೆ.
ಕ್ರೀಡಾ ಚಟುವಟಿಕೆಗಳಲ್ಲೂ ಭಾಗವಹಿಸಿದೆ. ಕಾಲೇಜಿನಲ್ಲಿ ಕ್ರೀಡಾ ತರಬೇತಿ ಇರಲಿಲ್ಲ. ಮೊದಲನೆಯದಾಗಿ ಮೈದಾನವೆ ಇರಲಿಲ್ಲ. ಕ್ರೀಡಾಶುಲ್ಕ ಸಂಗ್ರಹಿಸುವುದರಿಂದ ಅಂತರ್‌ ಕಾಲೇಜು ಕ್ರೀಡಾ ಸ್ಪರ್ಧೆಗಳು ನಡೆದಾಗ ಇದ್ದವರೆ ಹೋಗಿ ಆಡುತಿದ್ದೆವು. ನಾನೂ ಕಬ್ಬಡಿ ಮತ್ತು ಖೋಕೋ ತಂಡದಲ್ಲಿ ಇದ್ದೆ. ಖೊಖೊ ಮೂರು ಸುತ್ತಿನ ತನಕ ಹೋದೆವು. ಕಬ್ಬಡಿಯಲ್ಲಿ ಮೊದಲ ಪಂದ್ಯದಲ್ಲಿ ಆರ್‌ಸಿ ಕಾಲೇಜಿನ ತಂಡ ಎದುರಾಳಿಗಳು. ಅವರ ಜತೆ ಆಡಿದುದು ಹುಲಿಗಳ ಜತೆ ಹುಲ್ಲೆಗಳು ಆಡಿದಂತೆ ಇತ್ತು. ಒಂದೂ ಪಾಯಿಂಟ್‌ ಪಡೆಯಲಾಗಲಿಲ್ಲ. ಆದರೆ ನಮಗೆ ಗೆಲವು ಸಿಗುವುದೆಂಬ ಭ್ರಮೆ ಇರಲಿಲ್ಲ. ಪಂದ್ಯ ಮುಗಿದರೆ ಸಾಕು ಎಂದು ಕಾಯುತಿದ್ದೆವು. ಮುಗಿದ ತಕ್ಷಣ ಹೊಟ್ಟೆ ತುಂಬ ತಿಂಡಿ ಇರುತಿತ್ತು. ಅದೆ ನಮಗೆ ಮುಖ್ಯವಾಗಿತ್ತು.
ಅಂತರ್ ಕಾಲೇಜು ಕ್ರೀಡಾ ಚಟುವಟಿಕೆಗಳು ನಡೆಯುತಿದ್ದುದು ಸೆಂಟ್ರಲ್‌ ಕಾಲೇಜಿನ ಮೈದಾನದಲ್ಲಿ. ಅದು ಹಾಸ್ಟೆಲ್‌ ಹಿಂಭಾಗದಲ್ಲಿದ್ದಿತು. ಇದೆ ೧೯೭೨ ರತನಕ  ಬೆಂಗಳೂರಿನ ಪ್ರಮುಖ ಕ್ರೀಡಾ ಚಟುವಟಿಕೆ ಕೇಂದ್ರ. ಆಗ ಇನ್ನೂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣವಾಗಿರಲಿಲ್ಲ. ರಾಷ್ಟ್ರೀಯ ಅಂತರರಾಷ್ಟ್ರೀಯ ಕ್ರಿಕೆಟ್‌ ಮ್ಯಾಚ್‌ಗಳೂ ಅಲ್ಲಿಯೆ ನಡೆಯುತಿದ್ದವು. ಒಂದು ಸಾರಿಯಂತೂ ಅಲ್ಲಿ ಸಿಕ್ಸರ್‌ ಹೊಡೆದಾಗ ಚೆಂಡು  ಸ್ಟೇಟ್ಸ್ ಥೇಟರಿನಲ್ಲಿ ಸಿನೆಮಾ ಟಿಕೆಟ್‌ ಕೊಳ್ಳಲು ಸರದಿಯಲ್ಲಿ ಸಾಲಾಗಿ ನಿಂತ ಜನರ ನಡುವೆ ಬಿದ್ದಿತ್ತು. ಕ್ರಿಕೆಟ್‌ಮ್ಯಾಚಿನ ಪ್ರವೇಶ ಶುಲ್ಕ ಎಷ್ಟೆ ಇರಲಿ ನಮಗಂತೂ ಚಿಂತೆಯೆ ಇರಲಿಲ್ಲ. ನಾವು ಕಾಸು ಖರ್ಚಿಲ್ಲದೆ ಮ್ಯಾಚು ನಡೆಯುವಾಗ ಕಾಲೇಜು ಹಾಸ್ಟೆಲ್‌ನ ಮಹಡಿಯ ಮೇಲೆ ನಿಂತು ಕದ್ದು ಆಟ ನೋಡಬಹುದಾಗಿತ್ತು. ನನಗಂತೂ ಆಗ ನಡೆದ ಒಂದು ಪಂದ್ಯ ಇನ್ನೂ ಕಣ್ಣಿಗೆ ಕಟ್ಟಿದಂತೆ ನೆನಪಿದೆ. ಅದು ಮೂರು ದಿನದ ಪಂದ್ಯ. ವೆಸ್ಟ್ ಇಂಡೀಸ್ ಮತ್ತು ಕರ್ನಾಟಕ ರಾಜ್ಯ ತಂಡದ ನಡುವಿನ ಪಂದ್ಯ. ಆಗ ಕರ್ನಾಟಕದ ಕಸ್ತೂರಿ ರಂಗನ್‌ ತಂಡದ ನಾಯಕ, ಸುಬ್ರಮಣ್ಯಂ ಅಂತ ಆಟಗಾರರು ಇದ್ದ ಎಂದು ನೆನಪು. ಬುಧಿ ಕುಂದರನ್‌ ವಿಕೆಟ್‌ ಕೀಪರ್‌. ಉಳಿದ ಆಟಗಾರರ ಹೆಸರು ಮರೆತಿದೆ. ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿದವರು ವೆಸ್ಟ್‌ ಇಂಡೀಸ್‌ ತಂಡ. ಕರ್ನಾಟಕದ ಬೌಲಿಂಗ್‌ ದಾಳಿಗೆ ಅವರು ಸುಲಭ ತುತ್ತಾದರು. ಹಾಗೂ ಹೀಗೂ ತಿಣುಕಾಡಿ ಇನ್ನೂರು ರನ್ನಿನ ಒಳಗೆ ಎಲ್ಲರೂ ಔಟಾದರು. ನಮಗಂತೂ ಖುಷಿಯೋ ಖುಷಿ. ಕ್ರಿಕೆಟ್‌ ದೈತ್ಯರನ್ನು ನಮ್ಮವರು ಕಟ್ಟಿಹಾಕಿದ ಪರಿಗೆ ಬೆಕ್ಕಸ ಬೆರಗಾದೆವು. ಅದೂ ಸೋಬರ್ಸನಂಥ ಘಟಾನುಘಟಿಗಳಿದ್ದ ತಂಡ. ಆಗಂತೂ ಅವರೆ ವಿಶ್ವದಲ್ಲಿನ ನಂಬರ್‌ ಒಂದನೆ ತಂಡ. ನಮ್ಮವರು ಬ್ಯಾಟಿಂಗ್‌ ಇಳಿದರು. ಬುಧಿ ಕುಂದರನ್‌ ಬಿರುಸಿನ ಆಟಕ್ಕೆ ಹೆಸರುವಾಸಿ ಬಾಲನ್ನು ಬ್ಯಾಟು ಮುಟ್ಟಿದರೆ ನಾಲಕ್ಕು ರನ್ನು. ಬ್ಯಾಟಿನಿಂದ ತಟ್ಟಿದರೆ ಆರು ರನ್ನು. ಅಂತಹ ಸ್ಪೋಟಕ ದಾಂಡಿಗರಾಗಿದ್ದರು. ಭಾರತದ ಬ್ಯಾಟಿಂಗ್‌ ಶುರುವಾಯಿತು. ಅವರಲ್ಲಿ ವೇಗದ ಬೌಲರುಗಳು ವೆಸ್ಲಿ ಹಾಲ್‌ ಮತ್ತು ಚಾರ್ಲೀ ಗಿಲ್‌ ಕ್ರಿಷ್ಟ್‌. ಇಬ್ಬರೂ ಆರು ಅಡಿಗಿಂತ ಎತ್ತರದ ಧಾಂಡಿಗರು. ಅವರ ದೇಹದ ಗಾತ್ರವೂ ದೈತ್ಯರ ನೆನಪು ತರುವುದು. ಗಿಲ್‌ ಕ್ರಿಷ್ಟ್ ಅಂತೂ ಟೆರರ್. ಅವರ ಬಾಲಿಗೆ ಭಾರತದ ಕ್ರಿಕೆಟ್‌ ತಂಡದ ನಾಯಕ ನಾರಿ ಕಂಟ್ರಾಕ್ಟರ್‌ ತಲೆ ಬುರುಡೆ ಬಿರಿದು ಅವರ ಕ್ರೀಡಾ ಜೀವನವೆ ಕೊನೆಗೊಂಡಿತ್ತು. ನಮ್ಮ ಅನೇಕ ಆಟಗಾರರು ಅವರ ಭುಜಕ್ಕೂ ಬರುತ್ತಿರಲಿಲ್ಲ. ಅವರು ಸಲೀಸಾಗಿ ಇಬ್ಬರನ್ನು ಕೊಂಕುಳಲ್ಲಿ ಎತ್ತಿಕೊಂಡು ನಡೆಯಬಲ್ಲ ದೇಹದಾರ್ಢ್ಯ ಉಳ್ಳವರು ಎನಿಸುವಂತಹ ಆಕಾರದವರು. ಅವರಿಬ್ಬರೂ ಅಂಗಿಬಿಚ್ಚಿ ನಿಂತರು. ಆಗಿನ್ನೂ ಸಮವಸ್ತ್ರ ಈಗಿನಂತೆ ಕಡ್ಡಾಯವಾಗಿರಲಿಲ್ಲ ಎನಿಸುವುದು. ಅದೂ ಅಲ್ಲದೆ ಅದು ಕೌಂಟಿ ಪಂದ್ಯ. ಅವರನ್ನು ನೋಡಿಯೇ ನಾವೆಲ್ಲ ದಂಗಾದೆವು. ಅವರು ಬೌಂಡರಿ ಗೆರೆಯತನಕ ಹೋಗಿ ಅಲ್ಲಿಂದ ಓಡಿ ಬಂದು ಚೆಂಡು ಎಸೆಯುವ ರೀತಿ ನೋಡಿ ಹಾಸ್ಟೆಲ್‌ನ ಮಹಡಿಯ ಮೇಲೆ ನಿಂತ ನಮಗೆ ಎದೆ ಢವ ಢವ ಎನ್ನುವಂತಿತ್ತು. ಒಂದು ಓವರ್‌ ಹೇಗೋ ಎದುರಿಸಿದರು. ಎರಡನೆ ಓವರ್‌ನಲ್ಲಿ ಬ್ಯಾಟಿಗೆ ಚೆಂಡು ತಗುಲಿ ತಾನಾಗೆ ಬೌಂಡರಿಗೆ ಹೋಯಿತು. ಚೆಂಡಿನ ವೇಗ ನೂರು ಮೈಲಿಗೂ ಮೇಲಿರಬಹುದು. ಗಿಲ್‌ಕ್ರಿಷ್ಟ್ ಆ ಕಾಲದ ಅತ್ಯಂತ ವೇಗದ ಬೌಲರ್‌ ಎನಿಸಿಕೊಂಡಿದ್ದರು. ಬೌಲಿಂಗ್‌ ಪ್ರಾರಂಭಿಸಲು ಅವರಿಬ್ಬರದು ವಿಶ್ವ ವಿಖ್ಯಾತವಾದ ಜೋಡಿ. ಮುಂದಿನ ಓವರ್‌ನಲ್ಲಿ ಕುಂದರನ್‌ ಔಟ್‌. ನಂತರ ಬಂದ ಸುಬ್ರಮಣ್ಯಂ ಎರಡು ಮೂರು ಓವರ್‌ ಎದುರಿಸುವರೋ ಇಲ್ಲವೋ ಚೆಂಡು ತಗುಲಿ ಅಲ್ಲೆ ಕುಸಿದರು. ನಂತರ ಬಂದವರು ತರಗೆಲೆಗಳಂತೆ ಉದುರಿದರು. ಒಬ್ಬರಂತೂ ಬಾಲು ಬರುವ ಮೊದಲೆ ಕ್ರೀಸ್‌ ಬಿಟ್ಟು ದೂರ ಓಡಿದರು. ಹೀಗೆ ಬ್ಯಾಟ್ಸ್ ಮನ್‌ಗಳು ನಾಮುಂದು ತಾಮುಂದು ಎಂದು ಪೆವಿಲಿಯನ್‌ಗೆ ಪರೇಡು ಮಾಡಿದರು. ಐವತ್ತು ರನ್ನಿನ ಒಳಗೆ ಎಲ್ಲರೂ ಔಟ್‌, ಅಂದು ಫಾಲೋ ಆನ್‌ ಆಗಿ ಪುನಃ ಬ್ಯಾಟ್‌ ಮಾಡಿದಾಗಲೂ ಇತಿಹಾಸ ಮರುಕಳಿಸಿತು. ನಮ್ಮವರು ಇನ್ನಿಲ್ಲದ ಸೋಲು ಅನುಭವಿಸಿದರು. ಅಲ್ಲಿ ಅನೇಕ ಪಂದ್ಯಗಳನ್ನು ನೋಡಿದರೂ ಅಷ್ಟು ರೋಚಕವಾದ ಪಂದ್ಯ ನಾನಂತೂ ಕಾಣಲಿಲ್ಲ.
ಆಗ ಚೀನದ ಆಕ್ರಮಣ ನಡೆಯಿತು. ಎನ್‌ಸಿಸಿ ಕಡ್ಡಾಯವಾಗಿತ್ತು. ಆಗಿನ ಒಂದು ಅನುಭವ ಇಗಲೂ ನೆನಪಿದೆ. ಒಂದು ದಿನ ಬೆಳಗ್ಗೆ ಎನ್‌ಸಿಸಿ ದಿರಿಸು ಹಾಕಿಕೊಂಡು ಶೇಷಾದ್ರಿಪುರದಿಂದ ಕಾಲೆಳೆದುಕೊಂಡು ಹೊರಟಿದ್ದೆ. ಹಾದಿಯಲ್ಲಿ ನಾಲಕ್ಕು ಕಾಲೇಜು ಹುಡುಗಿಯರೂ ಹೊರಟಿದ್ದರು. ಜನ ಸಂಚಾರ ಕಡಿಮೆ ಇದ್ದಿತು. ನಾನು ಅವರ ಹಿಂದೆ ಹೋಗುವುದ ಬೇಡ ಎಂದು ಭರಭರನೆ ಹೆಜ್ಜೆಹಾಕಿ ಅವರನ್ನು ದಾಟಿ ಮುಂದೆ ನಡೆದೆ. ಬಹುಶಃ ಸುಂದರ ಮುಂಜಾನೆ ಅವರ ಮುಖದರ್ಶನದ ಸುಪ್ತ ಆಶೆಯೂ ಅದಕ್ಕೆ ಕಾರಣವಿರಬಹುದು. ಅವರನ್ನು ದಾಟಿ ಆರು ಮಾರು ದೂರ ಹೋಗಿರಬಹುದು, ಲೆಫ್ಟ ರೈಟ್ ಎಂಬ ಆದೇಶಗಳು ಬರತೊಡಗಿದವು. ಮುಜುಗರವಾಯಿತು. ತಕ್ಷಣ ನಿಂತೆ. ಹಾಲ್ಟ್‌ ಎಂಬ ಆದೇಶ ತೇಲಿ ಬಂತು. ತುಸು ಕೋಪ ಬಂದಿತು. ದಬಾಯಿಸೋಣ ಎಂದು ಹಿಂತಿರುಗಿದೆ. ರೈಟ್‌ ಅಬೌಟ್‌ ಟರ್ನ್ ಎಂಬ ಆದೇಶ. ತಲೆ ಎತ್ತಿ ನೋಡಿದೆ. ಲುಕ್‌ ಸ್ಟ್ರೈಟ್ ಎಂದರು. ಈ ಗಂಡುಬೀರಿಯರನ್ನು ಎದುರಿಸುವುದು ಆಗದು, ನಾವೂ ನಾಲಕ್ಕು ಜನ ಇದ್ದರೆ ಒಂದು ಕೈ ನೋಡಿಕೊಳ್ಳಬಹುದಿತ್ತು, ಎಂದು ಮನದಲ್ಲಿ ಅಂದುಕೊಂಡು. ಕಾಲಿಗೆ ಬುದ್ಧಿ ಹೇಳಿದೆ. ಅವರು ಕ್ವಿಕ್‌ಮಾರ್ಚ್ ಎಂದು ಧ್ವನಿ ಹೊರಡಿಸಿದರು. ಆ ಕ್ಷಣಕ್ಕೆ ಅಸಮಾಧಾನವಾದರೂ ಪರವಾ ಇಲ್ಲ ಹುಡುಗಿಯರೂ ಗಟ್ಟಿಗಿತ್ತಿಯರು ಅವಕಾಶ ಸಿಕ್ಕರೆ ಚುಡಾಯಿಸಬಲ್ಲರು ಎಂಬ ಮೆಚ್ಚಿಗೆ ಮೂಡಿತು.
ಆದರೆ ಈ ವಿಷಯ ಯಾರಿಗೂ ಹೇಳಿಕೊಳ್ಳಲಿಲ್ಲ. ಮದುವೆಯಾದ ಮೇಲೆ ನನ್ನ ಪುಣ್ಯ ಲೆಫ್ಟ್ ರೈಟ್‌ ಮಾಡಿಸುವ ಮಡದಿ ಸಿಗಲಿಲ್ಲ. ಅನೇಕ ವರ್ಷಗಳ ನಂತರ ಮಾತಿಗೆ ಮಾತು ಬಂದಾಗ ಅವಳಿಗೆ ವಿಷಯ ತಿಳಿದು ಏನ್ರಿ, ನೀವು ಬೇರೆ ಹುಡುಗಿಯರು ಹೇಳಿದಂತೆ ಹೆಜ್ಜೆ ಹಾಕಿರುವಿರಿ, ನನ್ನ ಮಾತು ಕೇಳುವುದೆ ಇಲ್ಲಎಂದು ನಗುತ್ತಾ ಆಕ್ಷೇಪಿಸಿದಳು. ಅವರು ನಾಲಕ್ಕು ಜನರು ಇದ್ದರು. ಆದರೆ ನೀನು ಇರುವುದು ಒಬ್ಬಳೆಎಂದು ಸಮಜಾಯಿಷಿ ನೀಡಿದೆ.



No comments:

Post a Comment