Monday, August 20, 2012

ಕುಡುಮಿ ಕಾಲೇಜಿನಲ್ಲಿ ಕಡಮೆ ಅಂಕದವರು!


ನ್ಯಾ
ಷನಲ್‌ ಕಾಲೇಜಿನಲ್ಲಿ ಘಟಾನುಘಟಿ ಉಪನ್ಯಾಸಕರು. ಎಚ್‌ಎನ್‌, ಆರ್‌ಆರ್‌ಕೆ, ಡಿಎನ್‌, ಎನ್‌ಎನ್‌, ಎಂಎಸ್‌ವಿ.. ಹೀಗೆ ಹೆಸರು ಹೇಳುತ್ತಾ ಹೋಗುವುದು ಆಕಾಶದಲ್ಲಿನ ನಕ್ಷತ್ರಗಳನ್ನು ಎಣಿಸುವ ಪ್ರಯತ್ನ. ಅಲ್ಲದೆ ಅಲ್ಲಿ ಯಾರನ್ನೂ ಹೆಸರು ಹಿಡಿದು ಸಂಬೋಧಿಸುವ ಪದ್ಧತಿ ಇರಲಿಲ್ಲ. ಎಲ್ಲರನ್ನೂ ಅವರ ಇನ್ಷಿಯಲ್‌ಗಳಿಂದ ಗುರುತಿಸುವರು. ಹಾಗಾಗಿ ಅನೇಕರ ಹೆಸರು ಏನೆಂದೆ ಗೊತ್ತಾಗುತ್ತಿರಲಿಲ್ಲ. ಆಗಿನ್ನು ಹಳ್ಳಿಯಿಂದ ಹೊರಬಂದ ನನಗೆ ಅವರೆದರು ನಿಂತು ನೋಡುವುದಕ್ಕೆ ಭಯ. ಮಾತನಾಡಿಸುವುದಂತೂ ಕನಸಿನ ಮಾತು. ದೂರದಿಂದ ನೋಡಿ ಮನಸ್ಸಿನಲ್ಲೆ ಕೈ ಮುಗಿಯಬೇಕು.
ಅದು ಏಕೋ ನಮ್ಮ ಕಾಲೇಜಿಗೆ ಕುಡುಮಿ ಕಾಲೇಜು ಎಂದು ಅಡ್ಡ ಹೆಸರು ಬಿದ್ದಿತ್ತು. ಅದು ಅಲ್ಲಿ ಪ್ರವೇಶ ಸಿಗದವರ ಅಸಹನೆಯ ಮಾತು ಇರಬಹುದು. ಅಲ್ಲಿ ಸೇರುವವರೆಲ್ಲ ಪ್ರಥಮ ದರ್ಜೆಯಲ್ಲಿ, ಅದೂ ಅತಿ ಹೆಚ್ಚು ಅಂಕ ಪಡೆದು ಪಾಸಾದವರೆ. ಆದ್ದರಿಂದಲೆ ಅಲ್ಲಿ ಉತ್ತಮ ಫಲಿತಾಂಶ ಬರುವುದು ಎಂಬದು ಹಲವರ ಅಂಬೋಣ. ಜತೆಗೆ ಜಾಣರನ್ನು ಸೇರಿಸಿಕೊಂಡು ಜಾಣರನ್ನಾಗಿಸುವುದು ಯಾವ ದೊಡ್ಡ ವಿಷಯ ಎಂಬ ಆಕ್ಷೇಪಣೆ. ಮೂರನೆ ದರ್ಜೆಯಲ್ಲಿ ಪಾಸಾದವರನ್ನೂ ಸೇರಿಸಿಕೊಂಡು ಅವರೂ ಪ್ರಥಮದರ್ಜೆಯಲ್ಲಿ ಬರುವಂತೆ ತರಬೇತಿ ಕೊಡಲಿ ಎಂಬ ಸವಾಲು ಬೇರೆ.
ಕಾಲೆಜು ಸೇರಿದ ನಂತರ ನಾನು `ಕುಡುಮಿಎಂಬ ಪದದ ಅರ್ಥ ತಿಳಿಯಲು ಪ್ರಯತ್ನಿಸಿದೆ. ತಮಿಳಿನಲ್ಲಿ ಕುಡಮಿ ಎಂದರೆ ಜುಟ್ಟು. ಆದರೆ ಇಲ್ಲಿ ಯಾರೂ ಜುಟ್ಟು ಬಿಟ್ಟವರು ಇರಲೆ ಇಲ್ಲ. ಬಹುಶಃ ಹಿಂದೆ ಸಂಪ್ರದಾಯಬದ್ಧ ವಿದ್ಯಾರ್ಥಿಗಳು ಗುರುಕುಲದಲ್ಲಿ ಜುಟ್ಟು ಬಿಟ್ಟುಕೊಂಡು ಸದಾ ಓದು ಬರಹ ಎಂದುಕೊಂಡು ಕ್ರೀಡೆ ಮನರಂಜನೆ ಎಂದು ಬೇರೆ ಕಡೆ ಗಮನ ಕೊಡದೆ ಇರುತ್ತಿದ್ದರಂತೆ. ಅವರನ್ನು ಹಾಸ್ಯ ಮಾಡಲು ಈ ಪದ ಬಳಕೆಗೆ ಬಂದಿರಬೇಕು. ಅಂದರೆ ಓದು ಬಿಟ್ಟು ಇನ್ನು ಯಾವುದಕ್ಕೂ ಗಮನ ಹರಿಸದವರು ಎಂಬುದು ಅವರ ಅನಿಸಿಕೆಯಾಗಿರಬಹುದು. ಆದರೆ ವಾಸ್ತವವಾಗಿ ನ್ಯಾಷನಲ್‌ ಕಾಲೇಜಿನ ವಾತಾವರಣ ಹಾಗಿರಲಿಲ್ಲ. ಅದು ಕ್ರೀಡೆ, ನಾಟಕ, ಭಾಷಣ ಇತ್ಯಾದಿಗಳಿಗೆ ಕೇಂದ್ರವಾಗಿತ್ತು ಮತ್ತು ಇತರೆ ಚಟುವಟಿಕೆಗಳಿಗೆ ಬಹಳ ಹೆಸರಾಗಿತ್ತು. ಆದರೆ ಪಿಯುಸಿ ಮಟ್ಟದಲ್ಲಿ ಮಾತ್ರ ಆ ಕುಡುಮಿ ಎಂಬ ಮಾತು ಭಾಗಶಃ ಸತ್ಯವಾಗಿತ್ತು.
ಅಂದಿನ ಕಾಲದಲ್ಲಿ ಒಂದೆ ವರ್ಷದ ಪಿಯುಸಿಯೆ ಮುಂದಿನ ಜೀವನಕ್ಕೆ ತಿರುವು ಕೊಡುವ ಹಂತ. ಆಗಿನ್ನೂ ಪ್ರವೇಶ ಪರೀಕ್ಷೆಗಳು ಇರಲಿಲ್ಲ. ಯಾವುದೆ ವೃತ್ತಿ ಶಿಕ್ಷಣ ಕೋರ್ಸಿಗೆ ಪ್ರವೇಶ ಪಡೆಯಲು ಪಿಯುಸಿಯಲ್ಲಿ ಪಡೆದ ಅಂಕಗಳೆ ಆಧಾರ. ಮುಂದೆ ವೈದ್ಯ, ಇಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ ಮತ್ತು ಟೆಕ್ಸಟೈಲ್ ಪದವಿ ಪಡೆಯಲು ಪಿಯುಸಿ ಅಂಕಗಳೆ ಹೆಬ್ಬಾಗಿಲು ತೆರೆಯುತಿದ್ದವು. ಸ್ವಾಭಾವಿಕವಾಗಿ ಅಧ್ಯಯನಕ್ಕೆ ಹೆಚ್ಚು ಒತ್ತು ಇರುತಿತ್ತು.
ಆದರೆ ಅಲ್ಲಿ ಸೇರಿದ ಮೇಲೆ ನನಗೆ ಗೊತ್ತಾಯಿತು ಅಲ್ಲಿರುವವರೆಲ್ಲ ಪ್ರಥಮ ದರ್ಜೆಯಲ್ಲಿ ಪಾಸಾದವರೆ ಆಗಿರಲಿಲ್ಲ. ಅವರ ನಿಯಮಾವಳಿಗಳ ಪ್ರಕಾರ ಅವರದೆ ಆದ ನ್ಯಾಷನಲ್‌  ಪ್ರೌಢಶಾಲೆಯಲ್ಲಿ ಓದಿದ ಮಕ್ಕಳಿಗೆ ಅವರು ಆದ್ಯತೆಯ ಮೇಲೆ ಅಂಕಗಳ ಪರಿಗಣನೆ ಇಲ್ಲದೆ ಸೀಟುಕೊಡುತಿದ್ದರು. ಮೂರನೆ ದರ್ಜೆಯಲ್ಲಿ ಪಾಸಾದವರೂ ಧೈರ್ಯವಿದ್ದರೆ  ಪಿಯುಸಿ ವಿಜ್ಞಾನದ ವಿಷಯಕ್ಕೆ ಪ್ರವೇಶ ಪಡೆಯಬಹುದಿತ್ತು. ಆದರೆ ಅಂಥವರ ಸಂಖ್ಯೆ ಬಹು ಕಡಿಮೆ. ಹೊರಗಿನಿಂದ ಹೊಸದಾಗಿ ಪ್ರವೇಶ ಬಯಸಿದವರಿಗೆ ಮಾತ್ರ ಅರ್ಹತೆಯ ಮೇಲೆ ಅವಕಾಶ ಸಿಗುತಿತ್ತು.
ಹೋದ ಹೊಸದರಲ್ಲೆ ನನಗೆ ನನ್ನ ಮಿತಿ ಅರ್ಥವಾಯಿತು. ಅಲ್ಲಿ ತರಗತಿಯಲ್ಲಿ ಇಂಗ್ಲಿಷ್‌ ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡುವ ಹಾಗಿಲ್ಲ. ಮೊದ ಮೊದಲು ನನಗೆ ಬಹಳ ಹಿಂಜರಿಕೆ. ಮಾತನಾಡಲೂ ಹಿಂದು ಮುಂದು ನೋಡುವಂತಾಗುತಿತ್ತು. ಬಹಳ ಜನ ಅಲ್ಲಿ ಇಂಗ್ಲಿಷ್‌ನಲ್ಲಿಯೆ ಮಾತನಾಡುವರು. ನಾನು ಕನ್ನಡ ಮಾಧ್ಯಮದಿಂದ ಅದೂ ಹಳ್ಳಿಗಾಡಿನಿಂದ ಬಂದವ. ನಾನು ಮಾತನಾಡುವ ಕನ್ನಡವೂ ಅನೇಕರಿಗೆ ಅದರಲ್ಲೂ ಹಳೆ ಮೈಸೂರಿಗರಿಗೆ ಅರ್ಥವಾಗುತ್ತಿರಲಿಲ್ಲ. ಹೇಳಿಕೇಳಿ ನಮ್ಮದು ಜವಾರಿ ಭಾಷೆ. ಹಾಗಾಗಿ ನನಗೆ ಆ ಅವಧಿಯಲ್ಲಿ ಗೆಳೆಯರು ಹೆಚ್ಚು ಇರಲಿಲ್ಲ.
ಅಲ್ಲಿ ನೋಟ್ಸು ಕೊಡುವ ಪದ್ಧತಿ ಇರಲಿಲ್ಲ. ಅವರು ಪಾಠ ಮಾಡುತ್ತಿರುವಂತೆಯೇ ಬರೆದುಕೊಳ್ಳಬೇಕು. ನನಗೆ ಅದೂ ಅಷ್ಟು ತೊಂದರೆ ಎನ್ನಿಸಲಿಲ್ಲ. ಕಾರಣ ಹೈಸ್ಕೂಲಿನಲ್ಲಿ ನಮ್ಮ ಸೈನ್ಸ್‌ ಮಾಷ್ಟ್ರು ಆ ಪದ್ಧತಿಗೆ ಬುನಾದಿ ಹಾಕಿದ್ದರು. ಆಗ ನಮಗೆ ಕಿರಿಕಿರಿ ಎನಿಸಿದರೂ ಈಗ ಅವರನ್ನು ನಾನು ಕೃತಜ್ಞತೆಯಿಂದ ನೆನಪಿಸಿಕೊಂಡೆ.
ಒಂದು ದಿನ ಕೆಮಿಷ್ಟ್ರಿ ತರಗತಿ ನಡೆಯುತಿತ್ತು. ಉಪನ್ಯಾಸಕರು ಪಾಠ ಮಾಡುತ್ತಾ ಹಾಗೆಯೆ ವಿದ್ಯಾರ್ಥಿಗಳು ಬರೆದುಕೊಳ್ಳುತ್ತಿರುವುದನ್ನು ಗಮನಿಸುತ್ತಿದ್ದರು. ಅವರು ಹಾಗೆ ಒಂದು ಕ್ಷಣ ನನ್ನ ಹತ್ತಿರ ನಿಂತು ನೋಡಿದರು. ಆ ನಂತರ ನನ್ನನ್ನು: ``Are you from Kannada medium?’’ ಎಂದು ಕೇಳಿದರು. ನಾನು ಎದ್ದುನಿಂತು ಸಂಕೋಚದಿಂದ ಹೌದು ಎಂದು ತಲೆ ಹಾಕಿದೆ. ಅವರು ನಗುತ್ತಾ ಹೇಳಿದರು “Buy a dictionary and pay attention to spellings’’ ಎಂದು ಸಲಹೆ ನೀಡಿದರು. ನಾನು ನನ್ನ ಪುಸ್ತಕದಲ್ಲಿ Oxygen ಎಂದು ಬರೆಯಬೇಕಾದಲ್ಲಿ Oxigen ಎಂದು ಬರೆದಿದ್ದೆ.
ಒಂದಂತೂ ನಿಜ. ಗ್ರಾಮೀಣ ವಿದ್ಯಾರ್ಥಿಗಳಿಗೆ ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಇಂಗ್ಲಿಷ್‌ ಕಬ್ಬಿಣದ ಕಡಲೆ. ಅದರ ಮೇಲೆ ಪ್ರಭುತ್ವ ಸಾಧಿಸಲು ವಿಶೇಷ ಪ್ರಯತ್ನ ಅತಿ ಅಗತ್ಯ. ಭಾಷಾ ಪ್ರಭುತ್ವ ಬರುವ ತನಕ ವಿಷಯ ಮಂಡನೆ ಸಾಧ್ಯವಾಗದು. ಗೊತ್ತಿದ್ದರೂ ಬರೆಯಲಾಗದು. ಹೇಳಲಂತೂ ಬಹಳ ಕೀಳರಿಮೆ. ಇನ್ನು ತರಗತಿಯಲ್ಲಿ ಪ್ರಶ್ನೆ ಕೇಳುವುದಂತೂ ಆಗುತ್ತಲೆ ಇರಲಿಲ್ಲ. ಬಾಯಿ ತೆಗೆದರೆ ಎಲ್ಲಿ ಬಣ್ಣಗೇಡು ಆಗುವುದೋ ಎಂಬ ಭಯ. ಅವರ ಸಲಹೆ ನನಗೆ ಬಹು ಉಪಕಾರಿಯಾಯಿತು.
ಅಲ್ಲಿ ನಾನು ಕಂಡ ಇನ್ನೊಬ್ಬ ಉಪನ್ಯಾಸಕರು ಗಣಿತದಲ್ಲಿ ತ್ರಿಕೋನಮಿತಿ (ಟ್ರಿಗ್ನಾಮಿಟ್ರಿ)  ಕಲಿಸುವವರು ಬಹು ಜನಪ್ರಿಯರು. ಅವರ ತರಗತಿಯಲ್ಲಿ ಮಹಾಮೌನ.. ಅವರು ತಮ್ಮ ಪ್ರಥಮ ತರಗತಿಯಲ್ಲೆ ಎಲ್ಲ ವಿದ್ಯಾರ್ಥಿಗಳಿಗೂ ಒಂದು ಸವಾಲು ಹಾಕಿದರು. ಪಾಠ ಮಾಡುವಾಗ A/2, B/2, C/2  ಬರುವುದು ಸಾಮಾನ್ಯ. ಎಲ್ಲರೂ ಅವನ್ನು ಎ ಬೈ ಟು, ಬಿ ಬೈ ಟು ಮತ್ತು ಸಿ ಬೈಟು ಎನ್ನುವರು. ಆದರೆ ಇವರು ಮಾತ್ರ ಸಿ ಬೈ ಟು ಅನ್ನುತ್ತಿರಲಿಲ್ಲ. ಯಾವಾಗಲೂ ಸಿ ಓವರ್‌ ಟು ಎಂದೆ ಹೇಳುವರು. ವರ್ಷದಲ್ಲಿ ಪಾಠ ಮಾಡುವಾಗ ಒಮ್ಮೆಯಾದರೂ ಸಿ ಬೈ ಟು ಎಂದರೆ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೂ ಸಿಹಿ ಖಾರ ಕೊಡಿಸುವುದಾಗಿ ವಾಗ್ದಾನ ಮಾಡಿದ್ದರು. ನಾವೆಲ್ಲ ಅವರ ತರಗತಿಗಳಲ್ಲಿ ಮೈಎಲ್ಲ ಕಿವಿಯಾಗಿ ಕುಳಿತಿರುತಿದ್ದೆವು. ಒಬ್ಬರೂ ತರಗತಿ ತಪ್ಪಿಸುತ್ತಿರಲಿಲ್ಲ. ತರಗತಿ ಪ್ರಶಾಂತವಾಗಿರುತಿತ್ತು. ಅವರು ಬಾಯ್ತಪ್ಪಿಯಾದರೂ ಸಿ ಬೈಟು ಎನ್ನುವರೇನೋ ಎಂದು ಕಿವಿ ಗೊಟ್ಟು ಪಾಠ ಕೇಳುತಿದ್ದೆವು. ಆದರೆ ಕೊನೆಗೂ ನಮಗೆ ಅವರಿಂದ ಸಿಹಿ ಖಾರ ಪಡೆಯಲಾಗಲಿಲ್ಲ. ನಮಗೆಲ್ಲ ನಾವೆ ಸಿ ಬೈಟುಗಳಾದೆವೇನೋ ಎನಿಸಿತು. ಸಿ ಬೈ ಟು ಎಂದರೆ ಅರೆ ಹುಚ್ಚ ಎಂಬ ಅರ್ಥ ಇದೆ. ಆದರೆ ನಂತರ ನನಗೆ ಗೊತ್ತಾಯಿತು ಅವರು ಮಕ್ಕಳ ಗಮನ ಸೆಳೆಯಲು ಈ ರೀತಿಯ ಸವಾಲು ಹಾಕಿದ್ದರೆಂದು. ಪಾಠ ಮಾಡುವಾಗ ನಾಟಕೀಯತೆಯೂ ಇದ್ದರೆ ಪರಿಣಾಮಕಾರಿ ಆಗುವುದೆಂದು ನನಗೆ ಆಗ ಅರ್ಥವಾಯಿತು.
ಅನಲಿಟಿಕಲ್ ಜ್ಯಾಮಿಟ್ರಿ ನನಗೆ ಮೊದಲಲ್ಲಿ ಬಹಳ ಕಠಿಣ ಎನಿಸಿತು. ನಾವು ರೇಖಾ ಗಣಿತದಲ್ಲಿ ಕಲಿತ ಪ್ರಮೇಯ, ದತ್ತ, ರಚನೆ, ಸಾಧನೆ, ಸ್ಪರ್ಶಕ, ಛೇದಕಗಳೆ ಇದ್ದರೂ ಅಲ್ಲಿನ ಪದಗಳು ಇಂಗ್ಲಿಷ್‌ನಲ್ಲಿ ಇದ್ದದರಿಂದ ನನಗೆ ಹೊಸದೆನಿಸಿದವು. ಟ್ಯಾಂಜೆಟು, ಸಿಕೆಂಟು, ಸೆಗ್ಮೆಂಟುಗಳು ನನ್ನ ತಲೆಗೆ ಹೋಗಲು ತುಸು ಸಮಯ ಹಿಡಿಯಿತು. ಕ್ಯಾಲುಕಲಸ್‌ ಹೊಸದೆ ಆದ್ದರಿಂದ ಬೇಗ ಅರ್ಥವಾಯಿತು.
ವಿಜ್ಞಾನ ಮತ್ತು ಗಣಿತವನ್ನು ಹೈಸ್ಕೂಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಸುವಾಗ ಅತಿ ಮಡಿವಂತಿಗೆ ಅಥವ ಹಿಂಜರಿಕೆ ಬಿಟ್ಟು ಪಾರಿಭಾಷಿಕ ಪದಗಳಿಗೆ ಕನ್ಡಡದ ಜತೆ ಜತೆಯಲ್ಲಿಯೆ ಇಂಗ್ಲಿಷ್‌ ಪದಗಳನ್ನೂ ಹೇಳಿದರೆ ಮತ್ತು ಕಲಿಸಿದರೆ ಅನುಕೂಲ. ತಾಮ್ರದ ಭಸ್ಮ ಎಂದು ಹೈಸ್ಕೂಲಲ್ಲಿ ಕಲಿತವರಿಗೆ ಕಾಲೇಜಿಗೆ ಬಂದಾಗ ಅದನ್ನೆ ಕಾಪರ್‌ ಆಕ್ಸೈಡ್‌ ಎಂದರೆ ಕಣ್ಣು ಕಣ್ಣು ಬಿಡುವ ಹಾಗಾಗುತ್ತದೆ. ಭಾಷೆಯ ತೊಡಕು ತಪ್ಪಿದರೆ ಸಹಜವಾಗಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಕಾಲೇಜಿಗೆ ಬಂದಾಗ ಪ್ರಾರಂಭದ ಪರಿಶ್ರಮ  ಕಡಿಮೆಯಾಗಿ ನಿರಾಯಾಸವಾಗಿ ಮಿಂಚಬಲ್ಲರು.
ನನಗೆ ಅಚ್ಚರಿ ಮೂಡಿಸಿದವರು ಕೆಡಿಎನ್‌. ಅವರ ಇಂಗ್ಲಿಷ್‌ ಪಾಠ ಎಂದರೆ ಬಣ್ಣಿಸಲು ಬಾಯಿ ಸಾಲದು ಎನ್ನುವಷ್ಟು ಸೊಗಸು. ಅವರು ತುಂಬ ಸ್ಪುರದ್ರೂಪಿ. ಸದಾ ಸೂಟುಧಾರಿ. ಅವರ ಬಾಯಲ್ಲಿ Queens English. ನಾನಂತೂ ಅವರು ಇಂಗ್ಲೆಂಡಿನಿಂದ ಬಂದವರೇನೋ ಎಂದೆ ಬಹಳ ದಿನ ಭಾವಿಸಿದ್ದೆ. ಆದರೆ ಆ ವರ್ಷದ ಅವರ ಕೊನೆಯ ಪಿರಿಯಡ್‌ನಲ್ಲಿ ಹತ್ತು ನಿಮಿಷ ಅಸ್ಖಲಿತ ಕನ್ನಡದಲ್ಲಿ ಮಾತನಾಡಿದರು. ಅಲ್ಲದೆ ಎಲ್ಲರಿಗೂ ಶುಭಾಶಯಗಳು ಎಂದು ಬೋರ್ಡಿನ ಮೇಲೆ ಮುತ್ತಿನಂತಹ ಅಕ್ಷರಗಳಲ್ಲಿ ಬರೆದುದನ್ನು ನೋಡಿ ನಾವು ದಂಗಾದೆವು. ತರಗತಿಯಲ್ಲಿ ಅವರು ಮೂಡಿಸಿದ್ದ ಇಂಗ್ಲಿಷ್‌ ವಾತಾವರಣ  ಅಷ್ಟು ಪ್ರಭಾವಕಾರಿಯಾಗಿತ್ತು.
ಆದರೆ ಇಂದು ಏಕೋ ಕಾಣೆ ಇಂಗ್ಲಿಷ್‌ ಕಬ್ಬಿಣದ ಕಡಲೆ ಎನಿಸಿದೆ. ಕಥೆ ಗೊತ್ತಾದರೆ ಸಾಕು ಪಾಠ ಅರ್ಥವಾಯಿತು ಎಂದುಕೊಳ್ಳುವವರೆ ಹೆಚ್ಚು. ಇಂಗ್ಲಿಷ್‌ ಅವಧಿಯು  ಇರುವುದು ಭಾಷೆ ಕಲಿಯಲು, ಕಥೆ ತಿಳಿಯಲು ಅಲ್ಲ ಎಂಬ ಭಾವನೆ ಬಹಳ ಜನರಲ್ಲಿ ಬರಬೇಕಿದೆ. ಕನ್ನಡದಲ್ಲಿ ಅರ್ಥ ತಿಳಿದರೆ ಸಾಕು ಹೇಗಾದರೂ ಬರೆಯಬಹುದು ಎಂಬ ಭಾವನೆ ಇದೆ. ಆದರೆ ಅದು ಸರಿ ಅಲ್ಲ. ಅದಕ್ಕಾಗಿಯೆ ಇಂಗ್ಲಿಷ್‌ ಅನ್ನು ಕನ್ನಡದಲ್ಲಿ ಬೋಧಿಸುವವರ ಸಂಖ್ಯೆಯೆ ಹೆಚ್ಚಿದೆ ಮತ್ತು ಅವರೆ ಬಹಳ ಜನಪ್ರಿಯರು ಕೂಡಾ. ಪರಿಣಾಮ ಪದವೀಧರರಾದವರಿಗೂ ಇಂಗ್ಲಿಷ್ ಜ್ಞಾನ ಅಷ್ಟಕಷ್ಟೆ.
ನಮಗೆ ಆಗ ಪ್ರಯೋಗಾಲಯದ ತರಬೇತಿಗೆ ಅಷ್ಟು ಒತ್ತು ಇರಲಿಲ್ಲ ಎಂದು ನೆನಪು. ಜತೆಗೆ ಆಂತರಿಕ ಮೌಲ್ಯಮಾಪನಕ್ಕೂ ಅವಕಾಶವಿರಲಿಲ್ಲ. ಏನಿದ್ದರೂ ನಾವು ಪರೀಕ್ಷೆಯಲ್ಲಿ ಬರೆದೆ ಅಂಕಗಳನ್ನು ಸಂಪಾದಿಸಬೇಕಿತ್ತು. ಅದಕ್ಕೆ ಅಧ್ಯಯನಕ್ಕೆ ಹೆಚ್ಚು ಆದ್ಯತೆ. ಆಗಿನ್ನೂ ಖಾಸಗಿ ಪಾಠದ ಹಾವಳಿ ಇರಲಿಲ್ಲ. ಮತ್ತು ಮಾರ್ಗದರ್ಶಿ, ಬಂಧು, ಸ್ನೇಹಿತ ಎಂಬ ಹಲವು ಹೆಸರಿನ ರೆಡಿಮೇಡ್ ಗೈಡುಗಳು ಮಾರುಕಟ್ಟೆಯಲ್ಲಿ ಇರಲಿಲ್ಲ. ನಾವು ಏನಿದ್ದರೂ ಒಬ್ಬರು ಅಲ್ಲದಿದ್ದರೆ ಇಬ್ಬರು ಮೂವರು ಲೇಖಕರ ಪಠ್ಯ ಪುಸ್ತಕಗಳನ್ನು ಕೊಂಡು ಪರಾಮರ್ಶನ ಮಾಡಬೇಕಿತ್ತು. ಮತ್ತು ಗ್ರಂಥಾಲಯದಲ್ಲೂ ಪುಸ್ತಕ ಧಾರಾಳವಾಗಿ ಕೊಡುತಿದ್ದರು. ಜತೆಗ ಬುಕ್‌ಬ್ಯಾಂಕ್ ವ್ಯವಸ್ಥೆ ಬೇರೆ ಇರುತಿತ್ತು. ಅಲ್ಲಿ ಅವರು ಕೊಡುವ ಎರಡು ಪುಸ್ತಕಗಳನ್ನು ವರ್ಷ ಪೂರ್ತಿ ಇಟ್ಟುಕೊಂಡು ಪರೀಕ್ಷೆ ಸಮಯದಲ್ಲಿ ಕೊಡಬಹುದಿತ್ತು. ವಿಶೇಷವಾಗಿ ಗಣಿತದ ವಿಷಯದಲ್ಲಿ ಮಾತ್ರ ನಾವು ಎರಡು ಮೂರು ಲೇಖಕರ ಪುಸ್ತಕಗಳನ್ನು ಪರಾಮರ್ಶನ ಮಾಡಿ ಅದರಲ್ಲಿನ ಲೆಕ್ಕಗಳನ್ನು ಬಿಡಿಸುತಿದ್ದೆವು. ಜತೆಗ ಇಬ್ಬರು ಮೂವರು ಹುಡುಗರು ಒಂದು ಗುಂಪಾಗಿ ಬೇರೆ ಬೇರೆ ಲೇಖಕರ ಪುಸ್ತಕಗಳನ್ನು ಎರವಲು ಪಡೆದು ಅವುಗಳನ್ನು ನಾವೆ ಪರಸ್ಪರ ವಿನಿಮಯ ಮಾಡಿಕೊಳ್ಳುತಿದ್ದೆವು. ಅದರಿಂದ ಕನ್ನಡ ಇಂಗ್ಲಿಷ್ ಭಾಷಾ ಪುಸ್ತಕ ಬಿಟ್ಟರೆ ಬೇರೆ ವಿಷಯದ ಪುಸ್ತಕಗಳನ್ನು ಕೊಳ್ಳುವ ಪ್ರಮೇಯ ಬರುತ್ತಿರಲಿಲ್ಲ. ಮೇಲಾಗಿ ತರಗತಿಯಲ್ಲಿ ಪಾಠ ಪ್ರವಚನಗಳು ಕ್ರಮವಾಗಿ ಜರಗುತಿದ್ದವು. ನಾವೂ ತರಗತಿಗಳಿಗೆ ಚಕ್ಕರ್ ಹೊಡೆಯುತ್ತಿರಲಿಲ್ಲ. ಜತೆಗೆ ಅದಕ್ಕೆ ಅವಕಾಶವವೂ ಇರುತ್ತಿರಲಿಲ್ಲ. ಹಾಗಾಗಿ ನಮಗೆ ಹೊರಗಿನ ಖಾಸಗಿ ಪಾಠದ ಅಗತ್ಯವೆ ಬೀಳುತ್ತಿರಲಿಲ್ಲ. ಕಾಲೇಜೆ ಶಿಕ್ಷಣ ಸಾಗರ.  ಅವಕಾಶಗಳ ಆಗರ. ನಮಗೆ ಅರ್ಥವಾಗಿಲ್ಲ ಎಂದು ಕೇಳಿದರೆ ನಮ್ಮ ಪ್ರಯತ್ನ ವ್ಯರ್ಥವಾಗುತ್ತಿರಲಿಲ್ಲ. ನಮಗೆ ಸ್ಪಷ್ಟವಾಗುವವರೆಗೆ ಅವರು ಬಿಡುತ್ತಿರಲಿಲ್ಲ. ಆದರೆ ನಮ್ಮಲ್ಲಿನ ಹಿಂಜರಿಕೆಯಿಂದ ತರಗತಿಯ ನಂತರ ಉಪನ್ಯಾಸಕರಲ್ಲಿಗೆ ಹೋಗುತ್ತಿದ್ದುದು ವಿರಳ. ನಮ್ಮ ಗ್ರಹಿಕೆಯ ಸಾಮರ್ಥ್ಯದ ಮೇಲೆ ನಮ್ಮ ಪರೀಕ್ಷಾ ಫಲಿತಾಂಶ ಬರುತಿತ್ತು. ಅಲ್ಲಿ ಅವಕಾಶವು ಅನಂತವಾಗಿತ್ತು. ಆದರೆ ಆದರೆ ಅದರ ಉಪಯೋಗ ಪಡೆವ ನಮ್ಮ ಸಾಮರ್ಥ್ಯ ಮಿತವಾಗಿತ್ತು.

No comments:

Post a Comment