Wednesday, February 27, 2013

ಆರರಿಂದ ಅರವತ್ತು- ಶಿಕ್ಷಣ ಯಾನ


ಸೆಕೆಂಡ್‌ ಹ್ಯಾಂಡ್‌ ಬುಕ್‌ ಬ್ಯಾಂಕ್‌ .
ಕಾಲೇಜಿಗೆ ಬಂದು ಒಂದು ವಾರದವರೆಗೆ ತರಗತಿಗಳಿಗೆ ಹೋಗಲು ಆಗಿರಲಿಲ್ಲ. ಎರಡನೆ ವಾರದಲ್ಲಿ ನನ್ನ ಹಳೆಯ ಅಭ್ಯಾಸದಂತೆ ಪ್ರಾರ್ಥನೆಯಾದ ಮೇಲೆ  ಒಂದು ಸುತ್ತು ಎಲ್ಲ ತರಗತಿಗಳ ಮುಂದೆ ಹೋಗಿ ಬರುವುದು ನನ್ನ ರೂಢಿ. ಮುಂದುವರಿಸಿದೆ. ಹಾಗೆ ಹೋದಾಗ ಖಾಲಿ ಇರುವ  ತರಗತಿಗೆ ಸೀದಾ ಹೋಗುವೆ. ಯಾವಾಗಲೂ ಹೋದೊಡನೆ ಆ ಅವಧಿಯಲ್ಲಿ ಯಾವ ವಿಷಯವಿದೆ ಎಂದು ಕೇಳಿ  ಅಲ್ಲಿ ನಡೆಯುತಿದ್ದ ಪಾಠ ಮುಂದುವರಿಸುತಿದ್ದೆ. ಸುಮಾರು ೨೫ ವರ್ಷ ಅನುಭವದಿಂದ ಯಾವುದೆ ತರಗತಿಗೆ ಯಾವುದೆ ವಿಷಯವಾದರೂ ನಿರಾಳವಾಗಿ ಪಾಠ ಮಾಡಬಹುದಾಗಿತ್ತು. ಅದರಿಂದ ಒಂದು ಅನುಕೂಲವನ್ನು ನಾನು ಕಂಡುಕೊಂಡಿದ್ದೆ. ಬಹುತೇಕ ಪ್ರಾಂಶುಪಾಲರು  ಯಾವುದೆ ತರಗತಿಯಲ್ಲಿ ಗಲಾಟೆಯಾದರೆ ಹಿರಿಯ ಸಹಾಯಕರನ್ನು ಕರೆದು ,ಏನ್ರಿ, ಅದು ನೋಡಿ ಎನ್ನುವರು”  ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.ಕೆಲವರಂತೂ ಬಿಲು ಬೆಲ್ಲಿನ ಅಧಿಕಾರಿಗಳು.ನಾನು ಅವಕಾಶವಿದ್ದಾಗಲೆಲ್ಲ ತರಗತಿಗೆ ಹೋಗುತಿದ್ದುದರಿಂದ  ವಿದ್ಯಾರ್ಥಿಗಳೊಡನೆ ನಂಪರ್ಕ ಹೆಚ್ಚುತಿತ್ತು. ಪಾಠ ಪ್ರವಚನಗಳು ಹೇಗೆ ಸಾಗಿವೆ ಎಂಬ ಮಾಹಿತಿ ನಿಖರವಾಗಿ ಸಿಗುತಿತ್ತು. ಅಲ್ಲದೆ ಯಾವುದೆ ಶಿಕ್ಷಕರು ತರಗತಿಗೆ ತಡವಾಗಿ ಹೋಗುವುದು ತಪ್ಪಿತು.ನಾನು ತರಗತಿಗೆ ಹೋಗಿರುವನೆಂಬ ಮಾಹಿತಿ ತಲುಪುತ್ತಲೆ ಅವರು ಓಡೋಡಿ ತರಗತಿಗೆ ಬರುತಿದ್ದರು. ಅವರುಬಂದ ತಕ್ಷಣ ನಾನು ಏನೂ ಮಾತನಾಡದೆ ಅವರಿಗೆ ಅವಕಾಶನೀಡಿ   ಹೊರಬರುತಿದ್ದೆ.ಇದರಿಂದ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಮೇಲೆ ನಿಯಂತ್ರಣ ತಾನೆ ತಾನಾಗಿ ಸಿದ್ದಿಸಿತು. ಒಂದು ಸಲ ತರಗತಿಯೊಂದರಲ್ಲಿ ಕನ್ನಡದ ಪಾಠ ಮಾಡಬೇಕಿತ್ತು. ಎಲ್ಲರಿಗೂ ಪಠ್ಯ ಪುಸ್ತಕ ತೆರೆಯಲು ಹೇಳಿದೆ. ಬಹುತೇಕ ಜನರಲ್ಲಿ ಪಠ್ಯ ಪುಸ್ತಕ ಇಲ್ಲ. ಭಾಷೆ  ಮತ್ತು ಗಣಿತ ಬೋಧನೆಗೆ ಪಠ್ಯ ಪುಸ್ತಕ ಕಡ್ಡಾಯವಾಗಿ ಇರಲೆಬೇಕು.  ಅವರಿಗೆ ತರಗತಿಗೆ ತಪ್ಪದೆ ಪುಸ್ತಕ ತರಲು ತಿಳಿಸಿದೆ. ನಂತರ ತಿಳಿಯಿತು. ಎಲ್ಲ ತರಗತಿಗಳಲ್ಲೂ ಇದೆ ಪರಿಸ್ಥಿತಿ. ಕಾರಣ ಅವರ ಬಡತನ. ನಮ್ಮ ಲ್ಲಿಗೆ ಬರುವವರೆಲ್ಲ ಬಹುತೇಕ ಗ್ರಾಮಾಂತರದ , ಬಡ ಮತ್ತು ದಲಿತ ಮಕ್ಕಳು. ಹೀಗಾಗಿ ಅವರ  ತೊಂದರೆ ನೈಜವಾಗಿತ್ತು. ಕಾಲೇಜು ವಿಭಾಗದಲ್ಲಿ ಅಷ್ಟೇನೂ ತೊಂದರೆ ಇರಲಿಲ್ಲ. ಕಾಲೇಜು ಗ್ರಂಥಾಲಯದಲ್ಲಿ ಎಲ್ಲ ವಿಷಯಗಳ ಪುಸ್ತಕಗಳು ಲಭ್ಯ ವಿದ್ದವು. ಆದರೆ ಅಲ್ಲೂ ಭಾಷಾ ವಿಷಯದ ಪಠ್ಯ ಪುಸ್ತಕಗಳು ವಿರಳ. ಕಾರಣ ಭಾಷಾ ವಿಷಯದ ಪಠ್ಯ ಪುಸ್ತಕಗಳು ಮೂರು ನಾಲಕ್ಕುವರ್ಷಕೊಮ್ಮೆ ಬದಲಾಗುತಿದ್ದವು.ಏನದರೂ ಅನುಕೂಲ ಮಾಡಿಕೊಡಲು ಮನಸ್ಸಾಯಿತು. ಸದ್ಯಕ್ಕಂತೂ ಏನೂ ಮಾಡುವ ಹಾಗಿರಲಿಲ್ಲ. ಆದ್ದರಿಂದ ಹೇಗಾದರೂ ಮಾಡಿ ಭಾಷಾ ಪುಸ್ತಕಗಳನ್ನಾದರೂ ತರಲೆ ಬೇಕೆಂದು ಒತ್ತಾಯ ಮಾಡಲಾಯಿತು.ನಮ್ಮಲ್ಲಿ ಒಂದೊಂದು ತರಗತಿಗೆ ಮೂರು ವಿಭಾಗಗಳಿದ್ದುರಿಂದ ಕೊನೆಗೆ ಆ ಆವಧಿಯಲ್ಲಿ ಎರವಲನ್ನಾದರೂ ಪಡೆಯಬೇಕೆಂದು ತಿಳಿಸಲಾಯಿತು.
ಕಾಲೇಜಿನ ಆವರಣದಲ್ಲಿ ಸುತ್ತಾಡುವುದರಿಂದ ಸಮಸ್ಯೆಗಳ ಪರಿಚಯವಾಗಿ ಸ್ಥಳದಲ್ಲೆ ಪರಿಹಾರ ನೀಡಬಹುದಿತ್ತು. ಹಾಗೆ ಓಡಾಡುವಾಗ ಅಗೊಮ್ಮೆ ಈಗೊಮ್ಮೆ  ಬೋಧಕರ ಕೊಟ್ಟಡಿಯಲ್ಲಿ ಕುಳಿತು ಕೊಳ್ಳುವುದು  ನನ್ನ ಹವ್ಯಾಸ. ಅದರಿಂದ ನಮ್ಮ ನಡುವಿನ ಅಂತರ ಕಡಿಮೆಯಾಗುವುದು. ವಿಶ್ವಾಸ ಬೆಳೆಯುವುದು. ಅವರ  ಸಮಸ್ಯೆಗಳಿಗೆ ಸ್ಪಂದಿಸಲು ಸುಲಭ ವಾಗುವುದು.ಜೊತೆಗೆ ಅವರಿಂದ ಪೂರ್ಣ ಸಹಕಾರವೂ ದೊರೆಯುವುದು.
ಅರ್ಧ ವಾರ್ಷಿಕ ಪರೀಕ್ಷೆ ಮುಗಿದ ನಂತರ ಎಸ್‌ಎ ಎಲ್ ಸಿ ಮಕ್ಕಳ ಸಾಧನೆಯ ಪರಿಶೀಲನೆಗ ಸಭೆ ಕರೆಯಲಾಯಿತು. ಹುಡುಗರ ಸಾದನೆಗಳು ಅಷ್ಟು ಉತ್ತೇಜನಕರವಾಗಿರಲಿಲ್ಲ. ಅದರಲ್ಲೂ ಗಣಿತ ಮತ್ತು ಇಂಗ್ಲಿಷ್‌ವಿಷಯಗಳಲ್ಲಿ ಬಹಳ  ಕಳಪೆಯಾಗಿತ್ತು. ಆದ್ದರಿಂದ ಪ್ರಗತಿ ಪತ್ರವನ್ನು ನೀಡಿದ ಮೇಲೆ ಒಂದು ದಿನಾಂಕವನ್ನು ನಿಗದಿ ಪಡಿಸಿ ಅಂದು ಎಲ್ಲ ಮಕ್ಕಳು ತಮ್ಮ ಪೋಷಕರನ್ನು ಕರೆತರುವಂತೆ ತಿಳಿಸಲು ಕ್ಲಾಸ್‌ ಟೀಚರ್‌ಗೆ ಸೂಚಿಸಲಾಯಿತು. ಒಂದೊಂದು ತರಗತಿಗೆ ಬೇರೆ ಬೇರೆ ಸಮಯ ನಿಗದಿ  ಮಾಡಿದರು.ಎಸ್‌ಎಸ್ ಎಲ್‌ಸಿ ಮಕ್ಕಳ ಪೋಷಕರನ್ನು ಭೇಟಿಮಾಡಲೇ ಬೇಕಿತ್ತು. ಸಭೆಯಯ ದಿನದಂದೂ ಸಮಯಕ್ಕೆ ಸರಿಯಾಗಿ ನಾಲಕ್ಕಾರು ಜನ ಮಾತ್ರ ಬಂದಿದ್ದರು ಅವರೆಲ್ಲರೂ ಸ್ಥಳಿಯರೆ.
ನಮ್ಮ ಹಿರಿಯಸಹಾಯಕರನ್ನು ಕೇಳಿದರೆ , ಅವರು ಇಲ್ಲಿ   ಹೀಗೆಯೆ  ಸರ್‌ , ಯಾರು ಬರುವುದಿಲ್ಲ . ಅದಕ್ಕೆ ಸಭೆ ನಡೆಸುವುದೇ ಇಲ್ಲ. ಎಂದರು. ಹೀಗಾದರೆ ಹೇಗೆ ?  ಅವರ ಸಹಕರವಿಲ್ಲದೆ ಪಲಿತಾಂಶ ಬರುವುದುಷ್ಟ ಎಂದೆ. ಅದಕ್ಕೆ ಉತ್ತರವೆ ಇಲ್ಲ.
ನಾನು ಮಕ್ಕಳನ್ನೆ ಕೇಳಿದೆ. ’ ನಿಮ್ಮ ತಂದೆಗೆ ನೀವು ಸಭೆಯ ಸುದ್ದಿ ತಿಳಿಸಲಿಲ್ಲವೆ?
. ಅದಕ್ಕೆ ಎಲ್ಲರು ತಿಳಿಸಿದ್ದೇವೆ ಎಂದು ಒಕ್ಕೊರಲಿಂದ ಉತ್ತರಿಸಿದರು
ಹಾಗಿದ್ದರೆ ಯಾಕೆ ಬರಲಿಲ್ಲ ? ಎಂದರೆ
ಅನುಕೂಲವಿಲ್ಲ ಎನ್ನುವುದೆ ಅವರ ಉತ್ತರವಾಗಿತ್ತು. ಅದೇನು ಅಂತಹ ಅನಾನುಕೂಲ, ಎಂದು ಗದರಿದಾಗ ,ಬಂದರೆ ಒಂದು ದಿನದ ಕೂಲಿ ಹೊಗುವುದು ಎಂಬ ಉತ್ತರ ಕೇಳಿ ದಂಗಾದೆ.
ನಾನು ಅದರ್ಶ ಲೋಕದಿಂದ ವಾಸ್ತವಲೋಕಕ್ಕೆ ಬಂದೆ. ನಿಜ ಅವರು ಹೇಳುವುದು ಸತ್ಯವಾಗಿತ್ತು.
ಅದು ನನ್ನ ಅನುಭವಕ್ಕೂ ಬಂದಿತ್ತು ಅನೇಕ ಸಲ ಮಾರುಕಟ್ಟೆಗೆ ಹೋದಾಗ ಅಲ್ಲಿ ಸೊಪ್ಪು ,ಕೊತ್ತಂಬರಿ ,ಕರಿಬೆವು, ನಿಂಬೆ ಹಣ್ಣು ಮಾರುವ ಹುಡುಗರು “ನಮಸ್ತೆ ಸಾರ್‌”  ಎನ್ನುತ್ತಿರುವ ಚಿತ್ರ ಕಣ್ಣೆದರು ಬಂತು. ಅನೇಕ ಹಳ್ಳಿ ಹುಡುಗರು ಶಾಲೆಗೆ ಬರುವಾಗ ತಮ್ಮಲ್ಲಿ ಬೆಳೆದುದನ್ನ ತಂದು  ಬೆಳಗ್ಗೆ ಮಾರುಕಟ್ಟೆಯಲ್ಲಿ ತಾವೆ ಮಾರಾಟ ಮಾಡಿ ನಂತರ ಶಾಲೆಗೆ ಬರುತಿದ್ದರು.ಉಳಿದರೆ ಸಂಜೆ  ಮಾರಿ ಮನೆಗೆ ಹೋಗುತಿದ್ದರು. ಅದರಂತೆ ಗರಾಜುಗಳಲ್ಲಿ, ಅಚಾರಿಗಳಲ್ಲಿ, ಬಡಗಿಗಳಲ್ಲಿ ಕೆಲಸ ಮಾಡುವವರು ನಮ್ಮಲ್ಲಿದ್ದರು. ಅದು  ಒಂದು ವಿಧದಲ್ಲಿ ಹೆಮ್ಮೆಯ ವಿಷಯವಾಗಿತ್ತು.. ದುಡಿಮೆಯ ಗೌರವ ಅರಿತಿರುವರಲ್ಲ  ಅದೆ ದೊಡ್ಡ ದು ಎಂದುಕೊಂಡಿದ್ದೆ.. ಅದರೆ ಎಸ್‌ಎಸ್ ಎಲ್‌ ಸಿ ಪರೀಕ್ಷೆ ಎದುರಿಸಬೇಕಾದವರ ತಂದೆ ತಾಯಂದಿರು ತುಸುವೂ ಗಮನ ಹರಿಸದಿರುವುದು ಸರಿಯಲ್ಲ ಎನಿಸಿತು.
ನಿಜ ಆ ಮಕ್ಕಳಿಗೆ ಸಮಯದ ಅಭಾವದಿಂದ ಸರಿಯಾಗಿ ಅಂಕಗಳನ್ನು ಪಡೆದಿಲ್ಲ. ಅದರಿಂದ ಇನ್ನು  ಮೇಲಾದರೂ  ಕಷ್ಟಪಟ್ಟು ಮನೆಯಲ್ಲಿ ಓದಿದರೆ ಊತ್ತಮ ಫಲಿತಾಂಶ ಬರಲು ಸಾಧ್ಯ. ಅದಕ್ಕಾದರೂ ಅವರ ತಂದೆ ತಾಯಂದಿರನ್ನು ಭೇಟಿ ಮಾಡಲೇ ಬೇಕೆನಿಸಿತು, ನಾನು ಬಹಳ ಯೋಚಿಸಿ ಒಂದು ನಿರ್ಧಾರಕ್ಕೆ ಬಂದೆ. ಅವರಿಗೂ ತೊಂದರೆಯಾಗಬಾರದು. ಆದರೆ ಅವರಿಗೆ ನಾವು ಅಭ್ಯಾಸದ ಅಗತ್ಯವನ್ನು ಮನವರಿಕೆ ಮಾಡಿಕೊಡಲೆ ಬೇಕು. ಅದಕ್ಕಾಗಿ ನಾನುನ ಎಲ್ಲ ಮಕ್ಕಳಿಗೂ ಅವರ ತಂದೆ ತಾಯಿಯರಲ್ಲಿ ಯಾರನ್ನಾದರೂ ಮುಂದಿನ ವಾರದಲ್ಲಿ  ಅವರಿಗೆ ಅನುಕೂಲವಾದ ದಿನ. ಬಿಡುವಾದ  ಸಮಯದಲ್ಲಿ ಬಂದು ಕಾಣಲು ತಿಳಿಸಲಾಯಿತು.ಸಂಜೆಯ ಮೇಲೆ ಬಂದರೂ ಸರಿ.  ಹೇಗಿದ್ದರೂ ನನ್ನ ಮನೆ ಕಾಲೆಜಿನ ಪಕ್ಕದಲ್ಲೆ ಇದೆ. ಅಲ್ಲಿಗೆ ಬರಲಿ ಎಂದು  ಹೇಳಿದೆ.
ನಾನು ಅಂದುಕೊಂಡದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲೆ ತಂದೆ ತಾಯಯರು ಬಂದರು.ಬಹುಶಃ ಯಾವಾಗಲಾದರೂ ಬರಲಿ ಎಂಬ ನನ್ನ ಮಾತು ಅವರ ಮನ ತಟ್ಟಿರಬೇಕು. ಆದರೆ ಬಂದವರಿಗೆ ನಾನೂ ಬಗೆ ಬಗೆಯಲ್ಲಿ ಹೇಳಿದರೂ ಅವರದು ಒಂದೆ ರಾಗ. ಅವರಲ್ಲಿ ಬಹುತೇಕ ಜನರ ಮನೆ ಮಾತು ತೆಲುಗು
“ಮಾಕೇಮಿ ತೆಲುಸ್ತುಂದಿ ಸಾಮಿ? ಮೀರೆ ಏಮೈನಾ ಚೇಯಂಡಿ.”
 ಸರಿಯಪ್ಪಾ , ನಾವೂ ವಿಶೇಷ ಗಮನ ಹರಿಸುತ್ತೇವೆ. ಮನೆಯಲ್ಲಿ ನೀವು  ರಾತ್ರಿ ಮೂರು ತಾಸು ಬೆಳಗ್ಗೆ ಬೇಗನೆ ಎಬ್ಬಿಸಿ ಎರಡು ತಾಸಾದರೂ ಓದಿಸಿ, ಎಂದು ಒತ್ತಾಯ ಮಾಡಿದೆ.
ಮಾ ಇಂಟ್ಲೊ ಕರೆಂಟ್ ಎಕ್ಕಡುಂಟುಂದಿ ಸಾರು,  ಎಂಬದೆ ಹೆಚ್ಚು ಕಡಿಮೆ  ಎಲ್ಲರ ಮಾತಿನ ಸಾರ.
ಅದೂ ನಿಜ ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್‌ ಇರುವುದೆ ಇಲ್ಲ. ಬಂದರೂ ಫಕ್ ಅಂತ ಯಾವಾಗ ಹೋಗುವುದೋ ಹೇಳಲಾಗುವುದಿಲ್ಲ.
ನಾನು ಅವರಿಗೆ ಹೊಣೆ ಹೊರಿಸಲು ಕರಸಿದರೆ ಪುನಃ ಚೆಂಡು ನನ್ನ ಅಂಗಳಕ್ಕೆ ಬಂತು. ಆಯಿತು ನಾನು ಈವಿಷಯದಲ್ಲಿ ಏನಾದರೂ ಮಾಡಲು ಸಾಧ್ಯವಾ ಯೋಚಿಸುವೆ. ಆದರೆ ನೀವು ತುಸು ಗಮನಕೊಡಿ ಎಂದು ವಿನಂತಿಸಿದೆ.
ಹಿರಿಯ ಸಹಾಯಕರೊಡನೆ ಚರ್ಚಿಸಿದೆ. ನಮ್ಮಲ್ಲಿನ ಪಿಯುಸಿ. ವಿದ್ಯಾರ್ಥಿಗಳದು ಇದೆ ಸಮಸ್ಯೆ . ಕೊನೆಗೆ ಅಗತ್ಯವಿದ್ದ ಮಕ್ಕಳಿಗೆ ಕಾಲೇಜಿನಲ್ಲಿಯೆ ರಾತ್ರಿ ಅಭ್ಯಾಸ  ಮಾಡಲು ಅನುಕೂಲ ಮಾಡಿಕೋಡಲು ನಿರ್ಧಾರವಾಯಿತು.ಎಸ್ ಎಸ್ ಎಲ್‌ ಸಿ ಮಕ್ಕಳಿಗೆ ಮಾತ್ರ ಗಣಿತ, ಇಂಗ್ಲಿಷ್‌ ಮತ್ತು  ವಿಜ್ಞಾನ ವಿಷಯದಲ್ಲಿ ಶಾಲೆ  ಮುಗಿದ  ನಂತರ ಒಂದು ಗಂಟೆ ವಿಶೇಷ ಬೋಧನೆ ಮಾಡಬೇಕೆಂದು ನಿರ್ಧರಿಸಲಾಯಿತು.ಕಾರಣ ನಮ್ಮಲ್ಲಿ ಮಹಿಳಾ ಶಿಕ್ಷಕರೆ ಹೆಚ್ಚು. ಅವರು  ಸಂಜೆ   ಪಾಠ ಮಾಡಿ ಹೋದರೆ ಸರಿ ಪುರುಷ ಶಿಕ್ಷಕರು ಸರದಿಯಮೆಲೆ ರಾತ್ರಿ ಹತ್ತರ ವರೆಗೆ ಮೆಲ್ವಿಚಾರಣೆ ನಡೆಸ  ಬೇಕೆಂದು ಯೋಜಿಸಲಾಯಿತು. ಹೇಗಿದ್ದರೂ ರಾತ್ರಿ  ಕಾವಲುಗಾರ ನಮ್ಮಲ್ಲಿ ಇದ್ದ. ನಂತರ ಅವನು  ನೋಡಿಕೊಳ್ಳ ಬೇಕಿತ್ತು. ನಾಲಕ್ಕು ಕೋಣೆಗಳನ್ನು ಅವರಿಗೆ ಬಿಟ್ಟುಕೊಡಲಾಯಿತು.  ಲೈಟುಗಳ ವ್ಯವಸ್ಥೆ ಇದ್ದೆ ಇದ್ದಿತು. ನೀರಿನ ತೊಂದರೆಯೂ ಇರಲಿಲ್ಲ.. ಕಾಲೇಜುವಿಭಾಗದಲ್ಲಿ  ಮನೆ ಹತ್ತಿರವಿದ್ದ  ಮತ್ತು ಮದುವೆಯಾಗದ ಉಪನ್ಯಾಸಕರು ನಿಗಾವಹಿಸಲು ಒಪ್ಪಿದರು. ನಮ್ಮ ಆಂಗ್ಲ ಉಪನ್ಯಾಸಕರಾದ ಬೆಕ್ಕೇರಿಯವರು ತಾವೂ ರಾತ್ರಿ ಅಲ್ಲಿಯೇ ಮಲಗುವುದಾಗಿ ಮುಂದೆ ಬಂದರು. ಅವರು ಹಳ್ಳಿಯಿಂದ ಬಂದವರು. ವಿದ್ಯಾರ್ಥಿಗಳ ಬಗ್ಗೆ ಕಳಕಳಿ ಹೆಚ್ಚು. ಮೇಲಾಗಿ ಅವರ ಮನೆಯವರೂ ಹೆರಿಗೆಗಾಗಿ ತವರಿಗೆ ಹೋಗಿದ್ದರು.
ವಸತಿ ಸಮಸ್ಯೆ ಪರಿಹಾರವಾಯಿತು. ಇನ್ನು ಊಟದ ವಿಷಯ. ಕಾಲೇಜು ಮಕ್ಕಳಿಗೆ ಅದು ಸಮಸ್ಯೆ ಯಾಗಲಿಲ್ಲ. ಅವರಿಗೆ ಸಂಜೆ ಮೂರುಗಂಟೆಗೆ ಕಾಲೇಜು ಮುಗಿಯುವುದರಿಂದ ಊರಿಗೆ ಹೋಗಿ ಊಟ ಮುಗಿಸಿ ಬೇಕಾದರೆ ಬುತ್ತಿ ಕಟ್ಟಿಕೊಂಡು ಸಂಜೆಯವೇಳೆಗೆ ಬರುವರು. ಆದರೆ ಹೈಸ್ಕೂಲು ಹುಡುಗರು ಸಂಜೆ ಆರೂವರೆಯವರೆಗೆ ವಿಶೇಷ ತರಗತಿಗ ಹಾಜರಾಗಬೇಕಿತ್ತು. ಊರಿಗೆ ಹೋಗಿ ಬರುವುದರಲ್ಲಿ ಕತ್ತಲಾಗುತಿತ್ತು . ಅದಕ್ಕೆ  ಅವರ ಊರಿನಲ್ಲಿ ಕಾಲೇಜು ವಿದ್ಯಾರ್ಥಿ ಇದ್ದರೆ ಅವನೊಂದಿಗೆ ಊಟ ಕಳುಹಿಸುವರು. ಇಲ್ಲದೆ ಇದ್ದರೆ, ಊರಿನಲ್ಲಿ ಇಬ್ಬರಿಗಿಂತ ಹೆಚ್ಚು ಮಕ್ಕಳು ರಾತ್ರಿ ಇಲ್ಲೆ ಇರುವಾಗ ಅವರ ಪೋಷಕರಲ್ಲಿ ಒಬ್ಬರು ಎಲ್ಲರ ಬುತ್ತಿ ತರುವರು.. ಹಾಗೂ ಯಾರೂ ಇಲ್ಲವಾದರೆ ಅವರ ಮನೆಯವರೆ ಸೈಕಲ್‌ ಮೇಲೆ ಬಂದು ಕೊಟ್ಟು ಹೋಗುವಂತೆ ವ್ಯವಸ್ಥೆ ಮಾಡಲಾಯಿತು.
 ಡಿಸೆಂಬರ್‌ ಒಂದರಿಂದ  ತರಗತಿಗಳು ಶುರುವಾದವು. ಒಂದು ದೊಡ್ಡ ಅನುಕೂಲವೆಂದರೆ ನಮ್ಮ ಮನೆ ಹತ್ತಿರದಲ್ಲೆ ನತ್ತು. ಹಾಗಾಗಿ ನಾನು ಸಂಜೆ ಅಲ್ಲೆ  ಕಾಲ  ಕಳೆಯುತಿದ್ದೆ. ಹಲವು ಉಪನ್ಯಾಸಕರೂ ಜೊತೆ ಕೊಡುತಿದ್ದರು.  ಉಳಿದಂತೆ ಎಲ್ಲರೂ ಸಮಯಕ್ಕೆ ಸರಿಯಾಗಿ ಬಂದು ಪಾಠ ಮಾಡಿ ಹೋಗುತಿದ್ದರು, ರಾತ್ರಿಯ ವೇಳೆ ಊಟವಾದ ನಂತರ ನಾನು ಹವಾ ಸೇವನೆಗೆಂದು ಕಾಲೇಜು ಕಡೆ ಬರುತಿದ್ದೆ. ನನ್ನ ಹೆಂಡತಿಯೂ ಕೆಲಸ ಮುಗಿಸಿ ಜೊತೆ ಕೊಡುತಿದ್ದಳು. ನಾವಿಬ್ಬರೂ ಒಟ್ಟಿಗೆ ಬರುವುದು ಅಲ್ಲಿ ಒಳ್ಳೆಯ ಪರಿಣಾಮ ಬೀರಿತು. ಹತ್ತು ಗಂಟೆಯವರೆಗೆ  ಅಲ್ಲಿಯೆ ಇರುತಿದ್ದೆವು.ಹಾಗಾಗಿ ಯಾವುದೆ ಗಲಭೆ ಗಲಾಟೆ ಇಲ್ಲದೆ ರಾತ್ರಿ ಶಾಲೆ ಸುಗಮವಾಗ ಸಾಗಿತು. ಸರ್ಕಾರಿ ಶಾಲೆಯಲ್ಲಿ ಈ ರೀತಿ ವಿಶೇಷ ವ್ಯವಸ್ಥೆ ಮಾಡಿರುವುದು ಜನರ ಗಮನ ಸೆಳೆಯಿತು. ಅನೇಕರ ಮೆಚ್ಚುಗೆಗೆ ಪಾತ್ರವಾಯಿತು.
ಫಲಿತಾಂಶ ಬಂದಾಗ ಪವಾಡವೇನೂ ಆಗಿರಲಿಲ್ಲ. ಎಸ್ ಎಸ್ ಎಲ್‌ಸಿಯಲ್ಲಿ 10%   ಹೆಚ್ಚು ಫಲಿತಾಂಶ ಬಂದಿತು ಪಿಯುಸಿಯಲ್ಲಿ ಅದು 15% ಹೆಚ್ಚಾಯಿತು. ಆದರೆ ಬಂದವರೆಲ್ಲಾ ಉತ್ತಮ ಅಂಕಗಳಿಸಿದ್ದರು. ಈಗ ಇಲಾಖೆಯೆ ಶಿಕ್ಷಣ ಮಟ್ಟ ಸುಧಾರಿಸಲು ವಿಶೇಷ ತರಬೇತಿ ನಡೆಸಲೇಬೇಕೆಂದು ಆದೇಶ  ಮಾಡಿದೆ. ಅದನ್ನು ಗುಣುಗುತ್ತಾ ಜಾರಿಗೂ ತರಲಾಗಿದೆ.
ನಮ್ಮಲ್ಲಿ ವಿಶೇಷ ವ್ಯವಸ್ಥೆಯು ಮಾತ್ರ  ಹಿತಕರವಾದ ದೂರಗಾಮಿ ಪರಿಣಾಮ  ಬೀರಿತು. ವಿದ್ಯರ್ಥಿಗಳ ,ಸಿಬ್ಬಂದಿಯ ಮತ್ತು ನನ್ನ  ನಡುವಿನ  ಬಾಂಧವ್ಯ  ಸುಮಧುರವಾಯಿತು.. ಸಂಸ್ಥೆಯಲ್ಲಿ ಅಶಿಸ್ತಿನ ಮಾತೆ ಇರಲಿಲ್ಲ ಇದರಲ್ಲಿ ಭಾಗಿಗಳಾದ ಮಕ್ಕಳು ಮತ್ತು ಶಿಕ್ಷಕರು ಒಂದೂವರೆ ದಶಕದ ನಂತರವೂ ಖುಷಿಯಿಂದ ಆ ಅನುಭವವನ್ನು ನೆನಸಿಕೊಳ್ಳುವರು.
.ಅದಕ್ಕೂ ಮಿಗಿಲಾಗಿ ಪಠ್ಯ  ಪುಸ್ತಕ ಕೊಳ್ಳಲಾಗದವರಿಗೆ ಸಹಾಯ ಮಾಡುವ ನನ್ನ ಬಯಕೆ ಈಡೇರಿತು.  ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ನಾನು ಎಲ್ಲರಿಗೆ ಪರೀಕ್ಷೆಯಾದ ಮೇಲೆ ತಮ್ಮ ಪಠ್ಯ ಪುಸ್ತಗಳನ್ನುಶಾಲೆಗ ನೀಡಲು ತಿಳಿಸಿದೆ. ಅಕಸ್ಮಾತ್‌ ಅಗತ್ಯ ಬಿದ್ದರೆ ಹಿಂತಿರುಗಿಸುವುದಾಗಿ ತಿಳಿಸಿದೆ. ಎಸ್‌ ಎಸ್‌ ಎಲ್‌ ಸಿ ಮತ್ತು ಪಿಯುಸಿ ಯ ಮಕ್ಕಳು ಸಹಕರಿಸಲು ಒಪ್ಪಿದರು. ಇದೆ ಮಾತನ್ನು  ಉಳಿದ ತರಗತಿಯ ಮಕ್ಕಳಿಗೂ ತಿಳಿಸಲಾಯತು. ಎಲ್ಲರೂ ಪರೀಕ್ಷೆ ಮುಗಿದ ನಂತರ  ಕೊಡಬೇಕೆಂದು ಅವರ ಸೋದರರಿದ್ದರೆ ಅವರಿಗೆ ಕೊಡುವುದಾಗಿಯೂ ಮತ್ತು ನಮ್ಮಲ್ಲೆ ಓದುವ ಮಕ್ಕಳಿಗೆ ಅದ್ಯತೆಯ ಮೇಲೆ ಮುಂದಿನ ತರಗತಿಯ ಪುಸ್ತಕ ನೀಡುವುದಾಗಿಯೂ ಹೇಳಲಾಯಿತು ಪುಸ್ತಗಳ . ಸಂಗ್ರಹವನ್ನು   ಅಯಾ  ಕ್ಲಾಸ್‌ ಟೀಚರುಗಳು ಮಾಡಿದರು . ಸರಿಸುಮಾರು 75% ವಿದ್ಯಾಥಿಗಳು  ನಮ್ಮ ಯೋಜನೆಗೆ ಸ್ಪಂದಿಸಿದ್ದರು. ಮುಂದಿನ ವರ್ಷ ಕಾಲೇಜು ಪ್ರಾರಂಭವಾದ ಮೊದಲ ವಾರದಲ್ಲೆ ಮೊದಲು ಬಂದವರಿಗೆ ಮೊದಲ ಆದ್ಯತೆಯ ಮೇಲೆ ಉಚಿತವಾಗಿ ಪುಸ್ತಕ ಕೊಡುವುದಾಗಿ  ಸೂಚನಾಫಲಕದಲ್ಲಿ ಪ್ರಕಟಿಸಲಾಯಿತು.ಸೆಕೆಂಡ್‌ ಹ್ಯಾಂಡ್‌ ಬುಕ್‌ ಬ್ಯಾಂಕ್‌ ನಮ್ಮಲಿ ತಲೆ ಎತ್ತಿತು.  ಇದು ಅಂಥಹ ಮಹಾನ್‌ ಸಾಧನೆ  ಏನೂ ಅಲ್ಲ. ಪ್ರವೇಶಕ್ಕಾಗಿಯೆ ಸಾವಿರಾರು ರೂಪಾಯಿ ವಂತಿಗೆ ನೀಡುವವರಿಗಂತೂ  ಉಚಿತ ಪಠ್ಯ ಪುಸ್ತಕ  ಎಂದರೆ ನಗು ಬರಬಹುದು. ಆದರೆ ಅಲ್ಲಿನ ಪರಿಸ್ಥಿತಿಯಲ್ಲಿ ಅದೆ ಒಂದು ಪ್ರಮುಖ ಹೆಜ್ಜೆ ಯಾಗಿತ್ತು. ಈಗ ಅ ಸಮಸ್ಯೆಯೇ  ಇಲ್ಲ. ಸರ್ಕಾರವೆ ಉಚಿತವಾಗಿ ಪಠ್ಯ  ಪುಸ್ತಕಗಳ ಸರಬರಾಜು ಮಾಡುವುದು. ಆದರೆ  ಬಡ ಮಕ್ಕಳಿಗೆ ತಮ್ಮಿಂದ  ತುಸುವಾದರೂ ಸಹಾಯವಾಗಲಿ ಎಂದು ಸ್ಪಂದಿಸಿದ ವಿದ್ಯಾರ್ಥಿಗಳ ಗುಣವೇ ಅವರಿಗೆ ನೀಡಿದ  ಶಿಕ್ಷಣ ಸಾರ್ಥಕವಾಯಿತೆಂದು ತೋರಿಸುವುದು...







ದಿನದ ಕವಿತೆ







   Some ಕ್ರಾಂತಿ-some  ಭ್ರಮಾ

ಬೆಲೆ ಏರಿರಲು ಮುಗಿಲಿಗೆ
ಬದುಕು ಭಾರವಾಗಿರೆ ಹೆಗಲಿಗೆ
ಬದಲಾಗುವುದು ಬಾಳು, ಬಂದಾಗ  some ಕ್ರಾಂತಿ
ಎಂದು ಖುಷಿಯಾಗಿರುವುದೇ  some ಭ್ರಮಾ

Tuesday, February 26, 2013

ದಿನದ ಕವಿತೆ





                                       ಹವಾಲಾ ಎಂದರೆ ಏನು
                              ಅಂತತಿಳಿಯುವುದು ಬಹು ಸುಲಭ
                               ಹವೆಗೆ ತೂರಿ ಕಾನೂನು
                                 ಹಣ ಮಾಡುವುದೆ ಹವಾಲಾ

ದಿನದ ಕವನ



ಬೆಂಗಳೂರು

   ಉದ್ಯಾನಗಳ ನಗರ
ನಿವೃತ್ತರ ಸಗ್ಗ
ಕೈಗಾರಿಕೆಗಳ ಆಗರ
ಎಲ್ಲರೂ ಹೊಗಳುವರು ಬೆಂಗಳೂರ
ಹೆಚ್ಚಿರೆ ರೌಡಿಗಳ ಹಾವಳಿ
ಮಚ್ಚು ಲಾಂಗುಗಳ ದಾಳಿ
ಈಗ ಇದು
Bang –a –lore
ಜನರೆಲ್ಲ ಕೂಡಿ
 ಏನೆಲ್ಲ ಬೇಡಿ
ಮುಷ್ಕರ ಹೂಡಿ
ಬಂದ್‌ , ಹರತಾಳ  ಹೆಚ್ಚಿರಲು
Ban –galore

Monday, February 25, 2013

ಅನಿಕೇತನ ಜನುಮದಿನ





                                   ಹುಟ್ಟು ಹಬ್ಬದ ಹುಡುಗನನ್ನು ಎತ್ತಿಕೊಂಡವರು ಯಾರು ? ತಾತನಾ !

                           

                           ಕೇಕು ಬಹು ಸುಂದರ . ಬಾಯಿ ಗಿಡಬೇಕೋ? ಎದೆಗೆ ಅಪ್ಪಿಕೊಳ್ಳ ಬೇಕೋ?

Friday, February 22, 2013

ದಿನದ ಕವನ





                             ಆದಿ ಶಂಕರಾಚಾರ್ಯರು ಹೇಳಿದರು
                      ನೀನೂ ಬ್ರಹ್ಮ , ನಾನೂ ಬ್ರಹ್ಮ
                     ಅದು ಈಗ ಆಗಿದೆ ಖಂಡಿತ ನಿಜ
                     ಅದಕೆ ದೇಶದ ಜನ ಸಂಖ್ಯೆ ದಾಟಿದೆ
                     ನೂರು ಕೋಟಿ ತಮ್ಮಾ.

Thursday, February 21, 2013

ದಿನದ ಕವನ



        ಬರೆ
ಗೆಳೆಯರು ಹೇಳಿದರು
 ನೀನೂ ಕವನ ಬರೆ, ಬರೆ
 ಬರೆದುದ ಓದಿ ನುಡಿದರು
ಇದು ನಿಜವಾಗಿ ಓದುಗನಿಗೆ ಬರೆ, ಬರೆ     

Wednesday, February 20, 2013

ದಿನದ ಕವಿತೆ


      ಕವಿತೆ

ಮೇಲೆ ಧಗಧಗಿಸುವ ಭಾನು
ಜ್ವರರವೇರಿರುವ ಭೂಮಿ
ಕಣ್ಣೋಟ ಹರಿವವರೆಗ ಮರಳೇ ಮರಳು
ನಡುವೆ ಕಜ್ಜೂರದ ನೆರಳು
ತುಸುವೆ ಸಿಹಿ ನೀರ ಒರತೆ
ಅದುವೆ ಕವಿತೆ

Tuesday, February 19, 2013

ದಿನದ ಕವನ




   ಕನ್ನಡ ಸೇವೆ
ಕನ್ನಡದ ಸೇವೆ ಹೇಗೆ ಮಾಡಲಿ ಎಂದು
ಕೇಳುವೆಯಾ ನೀನು ಕನ್ನಡದ ಕಂದ
ಹಳೆಗನ್ನಡ ತಿಳಿಯದಿರೆ ಸಂಕೋಚವೇಕೆ? 
ಬೇಂದ್ರೆ, ಕುವೆಂಪು ಓದದಿರೆ ಬೇಡ ನಾಚಿಕೆ
ಕನ್ನಡೇತರರ ಜತೆಗೆ ಹೋರಾಡ ಬೇಕಿಲ್ಲ
ಚಳುವಳಿ , ಹರತಾಳ ಯಾವುದೂ ಸಲ್ಲ
ಮಕ್ಕಳು ಓದಿದರೂ ಕಾನ್ವೆಂಟಿನಲಿ,
ಮಡದಿ ಕೂಡಾ ಕ್ಲಬ್‌ಗೆ ಹೋಗಲಿ
ಎಲ್ಲ ಕಡೆ ಕನ್ನಡ ಮಾತಾಡು
ಎಲ್ಲ ವ್ಯವಹಾರ ಕನ್ನಡದಿ ಮಾಡು
ಓದಿದರೆ ದಿನಕ್ಕೊಂದು ಕನ್ನಡ ಪತ್ರಿಕೆ,
ಆಗೊಮ್ಮೆ ಈ ಗೊಮ್ಮೆ ಹೋಗು ಕನ್ನಡ ಚಿತ್ರಕೆ
ನೀನು ಇದ ಮಾಡುವುದೆ ಕನ್ನಡ ಸೇವೆ
ಧನ್ಯಳಾಗುವಳು ತಾ ಕನ್ನಡ ತಾಯೆ !       




Monday, February 18, 2013


ಸ್ವಾತಂತ್ರ್ಯ ಬರುವ ಮುಂಚೆ
ಗಾಂಧೀಜಿ  ಬಯಸಿದರು  ಬರಲೆಂದು
ಭಾರತಕೆ  ರಾಮರಾಜ್ಯ
ಸ್ವತಂತ್ರ್ದದ ನಂತರ ನಮಗೆ
ಬಂದಿತು ಆರಾಮರಾಜ್ಯ
ಸ್ವಾತಂತ್ರ‍್ಯ ಕ್ಕೆ ಅರವತ್ತಾದ ನಂತರ
ಈಗಿರುವುದು ಬರಿ ಹರಾಮ ರಾಜ್ಯ

Friday, February 15, 2013

ಅಮೇರಿಕಾ ಅನುಭವ


ಎಲ್ಲೀಸ್ ದ್ವೀಪ                                                                                                             
ಅಮೇರಿಕಾದ ಅತ್ಯಂತ ಪುರಾತನ ವೀಸಾ ಕೇಂದ್ರ  ಎಲ್ಲೀಸ್‌ ದ್ವೀಪ.   ಕಳೆದ ಶತಮಾನದ ತನಕ ಯೂರೋಪಿನಿಂದ  ಅಮೇರಿಕಾಗೆ ಬರುವವರಿಗೆ  ಇದ್ದ ಏಕೈಕ ಹೆಬ್ಬಾಗಿಲು.ಆರ್ಥಿಕ ಅವಕಾಶ ,ಧಾರ್ಮಿಕ ಸ್ವಾತಂತ್ರ್ಯ ನೀಡುವ  ಕನಸಿಸನನಾಡಿಗೆ ತೆರೆದ ಬಾಗಿಲು .  ಅಖಂಡ ೬೨ ವರ್ಷಗಳ ಕಾಲ.ಎಲ್ಲೀಸ್‌ ಐಲ್ಯಾಂಡ  ಅಮೇರಿಕಾದ ಮಹಾ ದ್ವಾರವಾಗಿತ್ತು.ನ್ಯೂಯಾರ್ಕ ನಿಂದ ಕೆಲವೇ ಮೈಲು ದೂರದಲ್ಲಿರುವ, ಹಡ್ಸನ್ ನದಿಯ ನಡುವೆ  ಇರುವ  ಇದು ಒಂದು ಪುಟ್ಟ   ದ್ವೀಪ.  ಅಟ್ಲಾಂಟಿಕ್ ಸಾಗರದಿಂದ ನೌಕೆಗಳು ನೇರ   ಬರಬಹುದಾದ  ಪುಟ್ಟ ದ್ವೀಪವು ೧೨ ಮಿಲಿಯನ್ ವಲಸಿಗರನ್ನು ಒಳಬಿಟ್ಟಿದೆ. ಅದರ ವಿಸ್ತೀರ್ಣ ಮೊದಲು ಕೇವಲ ೩೩.೩ ಎಕರೆ.  ಅಲ್ಲಿ ಇರುವುದು ಕೆಲವೇ  ಕೆಲವು ಸರ್ಕಾರಿ ಕಟ್ಟಡಗಳು . ಖಾಸಗಿ  ಜನರ ಮನೆಗಳು  ಅಲ್ಲಿ ಇಲ್ಲವೆ ಇಲ್ಲ. ವಲಸೆ ಕಚೇರಿ,ವಲಸಿಗರ ಅನುಕೂಲಕ್ಕಾಗಿ   ವಸತಿಗೃಹ, ಪಾಕಶಾಲೆ, ವೈದ್ಯಕೀಯ ಪರೀಕ್ಷೆಗಾಗಿ ಉನ್ನತ ದರ್ಜೆಯ ಆಸ್ಪತ್ರೆ ಅಲ್ಲಿರುವ  ಮುಖ್ಯ ಕಟ್ಟಡಗಳು.
ಸ್ಯಾಮ್ಯುಯಲ್ ಎಲೀಸ ಎಂಬ ಹೆಸರಿನ ವ್ಯಕ್ತಿ  ಸಾಗರಕ್ಕಿಂತ ಕೆಲವೇ ಅಡಿ ಮೆಲಿದ್ದ ಮರಳು ಮಿಶ್ರಿತವಾದ ನೆಲದ ಈ ಜಾಗವನ್ನು ೧೭೭೦ರಲ್ಲಿ ಕೊಂಡು ಕೊಂಡ.. ಅದರಿಂದ ಇದಕ್ಕೆ ಅವನ ಹೆಸರೆ ಇಟ್ಟರು.ಡಚ್ ಮತ್ತು ಇಂಗ್ಲಿಷರ ವಸಹಾತುಗಳ ಕಾಲದಲ್ಲಿ ಇದಕ್ಕೆ ಓಯಿಸ್ಟರ್ ದ್ವೀಪ ಎಂಬ ಹೆಸರಿತ್ತು.ಅದಕ್ಕೂ ಮೊದಲು ಅಮೇರಿಕಾದ ಮೂಲ ನಿವಾಸಿಗಳು ಅದನ್ನುಕೊಯಿಷ್ಕ ಅಥವಾ ಗಲ್ ದ್ವೀಪ ಎನ್ನುತ್ತಿದ್ದರು. ಅಮೇರಿಕಾದ ಸ್ವಾತಂತ್ರ್ಯಯುದ್ಧದ ಸಮಯದಲ್ಲಿ    ೧೭೯೪-೧೮೦೦ ರ ಅವಧಿಯಲ್ಲಿ  ಬ್ರಿಟಿಷ್ ನೌಕಾಪಡೆ ಎಡೆ ತಡೆಯಿಲ್ಲದೆ ಈ ಮಾರ್ಗವಾಗಿ ನ್ಯೂಯಾರ್ಕ ತೀರ ಸೇರುತ್ತಿದ್ದವು. ಇದರ ಮಹತ್ವ ಅರಿತ ಫೆಡರಲ್ ಸರ್ಕಾರವು  ಆಯಕಟ್ಟಿನ ಈ ದ್ವೀಪವನ್ನು ಖರೀದಿಸಿ ಕೋಟೆ ಕೊತ್ತಲ ಕಟ್ಟಿಸಿ ಸಾಗರತೀರವನ್ನು ಭದ್ರಪಡಿಸಿತು .ಆವಾಗಲೇ ಕ್ಲಿಂಟನ್ ಕೋಟೆ,ಬ್ಯಾಟರಿ ಪಾರ್ಕ,ಕ್ಯಾಸಲ್ ವಿಲಿಯಂ ಮೊದಲಾದವು ನಿರ್ಮಿತವಾದವು.
ಅಮೇರಿಕಾಗೆ ಬರುವ ವಲಸಿಗರನ್ನು೧೮೨೦ ಕ್ಕೆ ಮೊದಲು ಆಯಾರಾಜ್ಯಗಳೇ ನಿಯಂತ್ರಿಸುತ್ತಿದ್ದವು.ಇಂಗ್ಲೆಂಡ, ಐರಲೇಂಡ ಮತ್ತು ಇನ್ನಿತರ ಯುರೋಪಿನ ದೇಶಗಳಿಂದ ಬರುವವರ ಸಂಖ್ಯೆ ೧೮ನೇ ಶತಮಾನದ ಕೊನೆಯಲ್ಲಿ ತುಂಬ ಹೆಚ್ಚಾಯಿತು. ರಾಜ್ಯಗಳು ವಲಸೆಗಾರರ ನಿಯಂತ್ರಣ ಮಾಡುವಲ್ಲಿ ವಿಫಲವಾದವು. ಯುರೋಪಿನ ಕಳ್ಳ ಕಾಕರಿಗೆ, ಕ್ರಿಮಿನಲ್ ಗಳಿಗೆ ಕುಖ್ಯಾತರಿಗೆ ಅಮೇರಿಕಾ ಸುರಕ್ಷಿತ ಸ್ವರ್ಗವಾಯಿತು. ಅಮೇರಿಕಾದ ಕಾನೂನು  ಸುವ್ಯವಸ್ಥೆಗೆ ಭಂಗ ಬರಹತ್ತಿತು.  ಇದರಿಂದ ಎಚ್ಚೆತ್ತ ಫೆಡರಲ್ ಸರ್ಕಾರವು ವಲಸೆಗಾರರು ಅಮೇರಿಕಾವನ್ನು ಪ್ರವೇಶಿಸುವ ಎಲ್ಲ ಮಾರ್ಗಗಳನ್ನು ಮುಚ್ಚಿ  ಏಕಮೇವ ಜಲಮಾರ್ಗಕ್ಕೆ ಅವಕಾಶ ನೀಡಿತು. ಅಂದರೆ ಯಾರೇ ಅಮೇರಿಕಾಕ್ಕೆ ಬಂದರೂ  ಬರುವ ಮೊದಲೆ ತಪಾಸಣೆಗೆ ಒಳಗಾಗಬೇಕಾಯಿತು. ಅಲ್ಲಿ ಅನುಮತಿ ದೊರೆತರೆ ಮಾತ್ರ ಪ್ರವೇಶ. ಎಲೀಸ ಐಲೇಂಡ ೧೮೯೨ರ ಜನವರಿಯಿಂದ  ಅಮೇರಿಕಾದ ಅಧಿಕೃತ ಪ್ರವೇಶ  ದ್ವಾರವಾಯಿತು. ಅಪರಾಧದ ಹಿನ್ನೆಲೆ ಇರುವವರನ್ನು ವಾಪಸ್ಸು ಕಳುಹಿಸುತ್ತಿದ್ದರು. ಆರೋಗ್ಯಕ್ಕೂ ಅತ್ಯಂತ ಪ್ರಾಮುಖ್ಯತೆ ಇತ್ತು. ಬಹು ಕಠಿನವಾದ ಆರೋಗ್ಯ ತಪಾಸಣೆ ಆಗತಿತ್ತು. ತುಸು ಅನುಮಾನ ಬಂದರೂ ಅವರನ್ನು ಒಂದು ನಿರ್ಧಿಷ್ಟ ಅವಧಿಯವರೆಗೆ ಪ್ರತ್ಯೇಕ ವಾಗಿ ಇಡುತ್ತಿದ್ದರು.ಆನಂತರವೂ ತೃಪ್ತಿಕರವಾಗಿಲ್ಲದಿದ್ದರೆ ಅವರನ್ನು ಹಿಂತಿರುಗಿಸಿ ಬಂದಲ್ಲಿಗೆ ಕಳುಹಿಸುತ್ತಿದ್ದರು. ಅವರನ್ನು ವಾಪಸ್ಸು ಕರೆದೊಯ್ಯುವುದು  ಕಂಪೆನಿಯ ಹೊಣೆಯಾಗಿತ್ತು. ಅನೇಕ ಸಲ  ಗಂಡನಿಲ್ಲದೆ ಹೆಂಡತಿ, ಹೆಂಡತಿಯಿಲ್ಲದೆ ಗಂಡ , ಅಪ್ಪ ಅಮ್ಮ ಇಲ್ಲದೆ ಮಕ್ಕಳು ,ಮಗುವನ್ನುಬಿಟ್ಟು ತಾಯಿ ತಂದೆಯರಿಗೆ ಮಾತ್ರ ಪ್ರವೇಶದ ಅವಕಾಶ ಸಿಗತ್ತಿತ್ತು.  ಆಗ ಆ ಕುಟುಂಬದವರ ರೋಧನ ಮುಗಿಲು ಮುಟ್ಟುತ್ತಿತ್ತು. ಕುಟುಂಬದಲ್ಲಿನ  ಒಬ್ಬರನ್ನು ಆರೋಗ್ಯ ಕಾರಣಕ್ಕಾಗಿ ಪ್ರತ್ಯೇಕವಾಗಿ ಯಾರ ಸಂಪರ್ಕಕ್ಕೂ ಬರದಂತೆ ಇರಿಸಿದಾಗ ಆಗುವ ಅನಾಹುತೆ   ಕಲ್ಪನೆನಿಲುಕಲಾರದು..ತಾಯಿಗೆ ಅನಮತಿ ಸಿಕ್ಕು ಮಗುವಿಗೆ ಅನುಮತಿ ದೊರಯದಾದಾಗ ಇರುವಂತಿಲ್ಲ ವಾಪಸು ಹೋಗು ವಂತಿಲ್ಲ.   ಆದ್ದರಿಂದ ದನ್ನು ಕಣ್ಣೀರಿನ ದ್ವೀಪ ಎಂದೂ ಕರೆಯುತ್ತಿದ್ದರು. ಆನಿ ಮೂರ್ ಎಂಬ ೧೫  ವರ್ಷದ ಐರಿಷ್ ಯುವತಿ ಮತ್ತು  ಅವಳ ಇಬ್ಬರು ಸೋದರರು  ಇಲ್ಲಿ ದಾಖಲಾದ ಮೊಟ್ಟ ಮೊದಲ ವಲಸಿಗರು.ಆಗಿನಿಂದ ೬೨ ವರ್ಷದ ವರೆಗೆ   ೧೨ ಮಿಲಿಯನ್ ವಲಸಿಗರು ಇಲ್ಲಿಂದ ಪ್ರವೇಶ  ಪಡೆದಿದ್ದಾರೆ. ಇದನ್ನು ೧೯೫೪ ರಲ್ಲಿ  ಮುಚ್ಚಲಾಯಿತು.   ಅಮೆರಿಕಾ ಪ್ರವೆಶಿಸುವವರಿಗೆ ಪ್ರತ್ಯೇಕ  ವ್ಯವಸ್ಥೆ ಮಾಡಲಾಯಿತು.. ಈಗ ಜಲ ಮಾರ್ಗದಲ್ಲಿ ಬರುವವರ ಸಂಖ್ಯೆ ಬಹುವಿರಳವಾಯಿತು. .ವಾಯುಮಾರ್ಗವೇ ಜನಪ್ರಿಯ ವಾಗತೊಡಗಿತು. ಸಾಕಷ್ಟು ದುರಸ್ತಿಯ ನಂತರ ೧೯೯೦ ರಲ್ಲಿ ಎಲೀಸ್ ಐಲ್ಯಾಂಡನ್ನು ಸಂದರ್ಶಕರಿಗೆ  ತೆರೆಯಲಾಯಿತು.
ಎಲ್ಲೀಸ್ ಐಲ್ಯಾಂಡ,  ಇಂದಿನ ಅಮೇರಿಕನರ  ವಂಶಜರ ಮೂಲಬೇರು  ಮೂಡಿದ  ತಾಣ.  ಅಮೇರಿಕಾದಲ್ಲಿನ ಶೇಕಡಾ ೪೦  ರಷ್ಟು ಜನರ ಪೂರ್ವಜರು  ಇಲ್ಲಿಂದಲೇ ಪ್ರವೇಶ ಪಡೆದಿದ್ದಾರೆ. ಅಲ್ಲಿನ ಜನರಿಗೆ ವಂಶವೃಕ್ಷ ಅರಿಯುವ ಹಂಬಲ ಬಹಳ. ಅಮೇರಿಕಾಗೆ ವಲಸೆ ಬಂದವರ ಅಧಿಕೃತ ವಿವರ  ಇಲ್ಲಿ ಸಿಗುತ್ತವೆ, ಅನೇಕ ಜನ ನೂರಿನ್ನೂರು ವರ್ಷಗಳ ಎರಡು ಮೂರು ತಲೆಮಾರಿನ ಹಿಂದಿನ ತಮ್ಮ ಮುತ್ತಜ್ಜ ಎಲ್ಲಿಂದ ಬಂದರು,  ಯುರೋಪಿನ ಯಾವ ಭಾಗದಿಂದ ಬಂದರು ಎಂಬುದನ್ನು ಇಲ್ಲಿ ಬಂದು ತಿಳಿದು ಕೊಂಡು  ತಮ್ಮ ಮೂಲ ಬೇರನ್ನು ಅರಸಿ  ಅಲ್ಲಿಗೆ ಹೋಗುವುದೂ  ಉಂಟು.ಹಿಂದೆ ನಮ್ಮಲ್ಲಿಯೂ ವಂಶ ವೃಕ್ಷದ ಬಗ್ಗೆ ಅತೀವ ಕಾಳಜಿಇತ್ತು  ಹೆಳವರು   (ಹಳಬರು)  ಎಂಬ ಒಂದು ಸಮುದಾಯ ಇತ್ತು. ಇವರು ಆಯಗಾರರು. ಒಂದೊಂದು ವಂಶಕ್ಕೆ ಒಬ್ಬರು ಇರುತ್ತಿದ್ದರು ಇವರ ಕೆಲಸ ವಂಶ ಪಾರ್ಯಂಪರೆಯಾಗಿ  ತಲಾಂತರದಿಂದ ಮುಂದುವರೆಯುತ್ತಿತ್ತು.  ಊರಿನಲ್ಲಿನ ಎಲ್ಲ ಪ್ರಮುಖ  ಕುಟುಂಬಗಳ ದಾಖಲೆ  ಅವರಲ್ಲಿ ಇರುತ್ತಿತ್ತು  ವರ್ಷಕೊಮ್ಮೆ  ವಂಶದ ಮೂಲ ಮನೆಗೆ ಬಂದು ಅಲ್ಲಿ ಆಗಿರುವ  ಹುಟ್ಟು , ಸಾವು, ಮದುವೆ,ಮದುವೆಯಾಗಿ ಹೋದ ಹೆಣ್ಣು ಮಕ್ಕಳು ಮತ್ತು ಅವರ ಒಂದು ತಲೆಮಾರಿನ ಮಕ್ಕಳು , ಮನೆಗೆ ಬಂದ ಸೊಸೆ, ಅವರಿಗೆ ಆದ ಮಕ್ಕಳ ಹೆಸರು ಎಲ್ಲವನ್ನೂ ಅವರ ಕಡತದಲ್ಲಿ ದಾಖಲಿಸಿ . ಇಡುತ್ತಿದ್ದರು  ಕುಟುಂಬದ  ಕುಡಿಗಳು ವಲಸೆಹೋದರೆ ಅದನ್ನೂ ದಾಖಲಿಸಿ  ಆ ಊರಿಗೆ ಹೋಗಿ ಅವರ ಬೆಳವಣಿಗೆ  ವಿವರ ಸಂಗ್ರಹಿಸುತ್ತಿದ್ದರು.  ಅದಕ್ಕಾಗಿ ಅವರಿಗೆ ವರ್ಷಕ್ಕೆ ಇಷ್ಟು ದವಸ ಧಾನ್ಯ, ಹೊಸ ಬಟ್ಟೆ ,ಚಿಕ್ಕ ಪುಟ್ಟ ಕಾಣಿಕೆ ಸಂದಾಯವಾಗುತಿತ್ತು. ಇಬ್ಬರ ನಡುವಿನ ಬಾಂಧವ್ಯ ಮಧುರ ವಾಗಿರಿತ್ತಿತ್ತು. ನಾನು ಹೇಳುತ್ತಿರುವದು ಐವತ್ತು ಅರವತ್ತು ವರ್ಷದ ಹಿಂದಿನ ಮಾತು.ಇತಿಹಾಸದ ಅಧಿಕೃತ  ಮಾಹಿತಿಯ ಮೂಲವಾಗಬಹುದಾಗಿದ್ದ   ಈ ಪದ್ದತಿ ಬದಲಾದ ಕಾಲದಲ್ಲಿ ಕ್ರಮೇಣ ಕಣ್ಮರೆಯಾಗಿದೆ.ಪರಮಾಣು ಕುಟುಂಬ ವ್ಯವಸ್ಥೆ ತಲೆಎತ್ತಿದ ಮೇಲೆ,  ಮುತ್ತಾತನ ಮಾತು ಹಾಗಿರಲಿ ತಂದೆ ತಾಯಿಯರನ್ನೇ ವರ್ಷಗಳಾದರೂ  ನೋಡಲು ಬಾರದಿರುವ , ಇದ್ದ ಊರಿನಲ್ಲಿಯೇ ಮುದಿ ತಾಯಿ ತಂದೆಯರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವ ಈಗಿನರ ಕಾಲದಲ್ಲಿ ವಂಶವೃಕ್ಷವನ್ನು ಅರಿಯುವ ಆಸಕ್ತಿ ಯಾರಿಗಿದೆ ? ಹೀಗಾಗಿ   ಹೆಳವರ ಕುಲ ಕಸಬು ಹಾಳಾಗಿ ಹೋಯಿತು.

 ಆದರೆ ಅಮೇರಿಕಾದಲ್ಲಿ ವಲಸೆ ಬಂದ ತಮ್ಮ ಪೂರ್ವಜರ ವಿವರ ತೀಳಿಯುವ ಆಸಕ್ತಿ ಮತ್ತು ಪ್ರಯತ್ನ ಈಗ ಮರುಕಳಿಸಿದೆ. ಅದಕ್ಕೆ ಪೂರಕವಾಗಿದೆ ಎಲೀಸ್  ಐಲ್ಯಾಂಡನಲ್ಲಿನ ವಸ್ತು ಸಂಗ್ರಹಾಲಯ. ಅಮೇರಿಕದಲ್ಲಿನ ಒಟ್ಟು ಜನ ಸಂಖ್ಯೆಯ ಶೇಕಡಾ ನಲವತ್ತು ಜನರ ಪೂರ್ವಜರು ಈ ಬಾಗಿಲನ್ನು ದಾಟಿಯೇ ಹೋಗಿದ್ದಾರೆ.  ಸುಮಾರು ೧೨ ಮಿಲಿಯನ್ ಜನರ ಜಾತಕ ಇಲ್ಲಿದೆ. ಅವರೆಲ್ಲರ ದಾಖಲೆ ಇಲ್ಲಿ ಭದ್ರವಾಗಿದೆ. ಅವರು ಯಾವಾಗ ಬಂದರು, ಎಲ್ಲಿಂದ ಬಂದರು, ಎಲ್ಲಿಗೆ ಹೋದರು, ಬರುವ ಮುನ್ನ ಏನು ಮಾಡುತ್ತಿದ್ದರು  ಎಂಬ ಎಲ್ಲ ಮಾಹಿತಿಗಳು ಇಲ್ಲಿ ದೊರೆಯುತ್ತವೆ.
ಅಮೇರಿಕಾದ ಮೂಲನಿವಾಸಿಗಳು ರೆಡ್ ಇಂಡಿಯನ್ಸ ಎಂದು ಕರೆಯಲಾಗುತ್ತದೆ. ಯುರೋಪಿಯನ್ನರು ಕಾಲಿಡುವ ಮೊದಲು ಅವರು ಚಿಕ್ಕ ಪುಟ್ಟ ಹಳ್ಳಿಗಳಲ್ಲಿ ತಮ್ಮದೆ ಆದ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿ ಬಾಳುತ್ತಿದ್ದರು.   ಕೊಲಂಬಸನ ಅನ್ವೇಷಣೆಯಿಂದ ಮೊದಲಾಯಿತು ಅವರ ಏಳರ ಶನಿಕಾಟ. ಸ್ಪೇನಿನವರ ಜೊತೆ ಡಚ್ಚರ ಪ್ರವೇಶವಾಯಿತು.. ಫ್ರೆಂಚರು, ನಂತರ ಇಂಗ್ಲಿಷರು ಬಂದರು..ಬರುವಾಗ ಇಲ್ಲದ ಎಲ್ಲ ಕಾಳಜಿ ಬಂದು ನೆಲಸಿದ ಮೇಲೆ ಮೊದಲಾಯಿತು. ಆರೋಗ್ಯ ಮತ್ತು ಕಾನೂನಿನ ಸುವ್ಯಸ್ಥೆ ಗಾಗಿ ವಲಸೆ  ನಿಯಂತ್ರಣ ಅಗತ್ಯ ಎನಿಸಿತು.ಮೊದಮೊದಲು ಬಂದವರಿಗೆಲ್ಲ ಸ್ವಾಗತವಿತ್ತು.  ಯಾವಾಗ ಯುರೋಪಿನಲ್ಲಿ ಅಪರಾಧ  ಮಾಡಿ ತಲೆಮರಸಿಕೊಳ್ಳಲು ಅಮೇರಿಕಾಕ್ಕೆ ಬರುವುದು ಶುರುವಾಯಿತೋ ಆಗ ಎಲ್ಲರನ್ನು ಒಳ  ಬಿಡುವುದಕ್ಕೆ ಹಿಂದು ಮುಂದು ನೋಡಬೇಕಾಯಿತು ಅದರಿಂದ ಬರುವವರ ಹಿನ್ನೆಲೆಯ ಪರೀಶಿಲನೆ ಅಗತ್ಯವಾಯಿತು.

ಈ ಪರಿಶೀಲನೆಯಲ್ಲಿಯೂ ಬಡವಬಲ್ಲಿದ ಎಂಬ ಬೇಧ ಭಾವ ತಲೆತೂರಿಸಿತು. ಸಾಧಾರಣವಾಗಿ ನೌಕೆಯಲ್ಲಿ ಮೊದಲ ಮತ್ತು ಎರಡನೆ ದರ್ಜೆಯಲ್ಲಿ ಬರುವ  ಪ್ರಯಾಣಿಕರಿಗೆ ಯಾವುದೆ ಅಡೆತಡೆ ಇರಲಿಲ್ಲ. ಅವರ ಅಂದಾಜಿನಂತೆ  ಪ್ರಯಾಣಕ್ಕಾಗಿ ಅಷ್ಟು ಹಣ ಕೊಡಬಲ್ಲವರು,ಹೊಸ ದೇಶಕ್ಕೆ ಹೊರೆಯಾಗಲಾರರು. ಅವರಿಂದ ಯಾವುದೆ ಸಮಸ್ಯೆ ಬರುವುದಿಲ್ಲ ಎಂಬ ಭಾವನೆ ಬಲವಾಗಿತ್ತು
ಹೀಗಾಗಿ ಬಡವರು ಮಾತ್ರ ಅವರ ಗುರಿಯಾಗಿದ್ದರು. ವೈದಕೀಯ ಕಾರಣವಿದ್ದರೆ ಮಾತ್ರ ಯಾರೆ ಇರಲಿ ತಡೆ ಹಿಡಿಯಲಾಗುತಿತ್ತು.
ಮೂರನೆ ದರ್ಜೆಯ ಪ್ರಯಾಣಿಕರು ಮಾತ್ರ ತೀವ್ರ ತಪಾಸಣೆಗೆ ಒಳಗಾಗಬೇಕಿತ್ತು. ಅವರು ಗಂಟೆ ಗಟ್ಟಲೆ ಕಾಯಬೇಕಿತ್ತು. ಕೆಲವು ಸಲ ದಿನ ಗಟ್ಟಲೇಯೂ ಇರಬೇಕಿತ್ತು
ಬೇರೆ ಬೇರೆ ಹಡಗುಗಳುಲ್ಲಿ ಬಂದವರನ್ನು ಫೆರ್ರಿಗಳಲ್ಲಿ ದಡಕ್ಕೆ ಕರೆತರಲಾಗುತಿತತ್ತು. ಹಡಗು ಬಂದರಿನಿಂದ ದೂರದಲ್ಲೇ ಲಂಗರು ಹಾಕಬೇಕಿತ್ತು. ಯಾರಾದರೂ ಹಡಗಿನಿಂದ ಧುಮುಕಿ ಈಜಿ ದಡಕ್ಕೆ ಬಾರಬಾರದಿರಲು ಈ ಮುನ್ನೆಚ್ಚರಿಕೆ. ಕ್ರಮ.
ಎಲೀಸ್ದ್ವೀದ ಉತ್ತರ ಭಾಗದಲ್ಲಿ ವಲಸಿಗರು ಕಾಯುತ್ತ ಕುಳಿತಿರಲು ದೊಡ್ಡ  ಹಾಲು, ಅವರಿಗೆ ಆಹಾರ ತಯಾರಿಸಲು ಪಾಕಶಾಲೆ, ಸ್ನಾನ ಗೃಹ, ಬೇಕರಿ ಇದ್ದವು. ಅವರಿಗೆ ಮಲಗಲು ತಾಣ, ಸರಕು ಸಾಮಗ್ರಿಗಳನ್ನು ಇಡಲು ಸಾಕಷ್ಟು ಜಾಗ, ಮಕ್ಕಳಿಗೆ ಆಟ ಆಡಲು ವಿಶಾಲವಾದ  ಕ್ರೀಡಾ ಮೈದಾನವಿದೆ.
ದಕ್ಷಿಣ ಭಾಗದಲ್ಲಿನ ೨೯ ಕಟ್ಟಡಗಳು ಆಸ್ಪತ್ರೆಯ ಸಂಕೀರ್ಣವಾಗಿದೆ. ಸೋಂಕು ರೋಗ ಪೀಡಿತರು,ಮನ ಸ್ವಾಸ್ಥ್ಯ ವಿಲ್ಲದವರು, ಅನಾರೋಗ್ಯ ಪೀಡಿತರಿಗೆ ಇಲ್ಲಿ ಬೇರೆ ಬೇರೆ ಇಡಲಾಗುತ್ತಿತ್ತು. ಸಾಧಾರಣ ರೋಗಗಳಾದರೆ ಚಿಕಿತ್ಸೆ ನೀಡಿ ಗುಣವಾದ ಮೇಲೆ ಅವರಿಗೆ ದೇಶದಲ್ಲಿ ಪ್ರವೇಶ ನೀಡಲಾಗುತಿತ್ತು. ಗರ್ಭಿಣಿ ಮಹಿಳೆಯರಿಗೆ ಬೇರೆ ವಸತಿ ನಿಲಯ ಇತ್ತು. ಅಲ್ಲಿ ಒಟ್ಟು ೩೫೫ ಮಕ್ಕಳು ಜನಿಸಿವೆ. ಮಗು  ಆರೋಗ್ಯವಾಗಿದ್ದರೆ ಮಾತ್ರ ಹೊಸ ದೇಶಕ್ಕೆ ಪ್ರವೇಶ ಪಡೆಯಬಹುದಿತ್ತು  ಇಲ್ಲವಾದರೆ ತಾಯಿ ಮಗುವಿನ ಸ್ಥಿತಿ ಕರುಣಾಜನಕ .ಕುಟುಂಬ ಒಂದು ವಲಸೆ ಬಂದಾಗ ಅಕಸ್ಮಾತ ಸದಸ್ಯರೊಬ್ಬರು ಅನಾರೋಗ್ಯಪೀಡಿತರಾದಾರೆ ಅವರೊಬ್ಬರನ್ನೆ ತಿಂಗಳು ಗಟ್ಟಲೆ ಇಲ್ಲಿ ಬಿಟ್ಟು ಉಳಿದವರು ಹೋಗುವ ಹಾಗೂ ಇಲ್ಲ. ಅಲ್ಲಿಯೇ ಇರುವಹಾಗೂ ಇಲ್ಲ.ಹೊಸ ದೇಶ. ಗುರತು ಪರಿಚಯದವರಿಲ್ಲ. ಕೈಯಲ್ಲಿ ಹಣವಿಲ್ಲ. ದುಡಿದು ತಿನ್ನಬೇಕು. ಈ ಸಂದಿಗ್ಧಕ್ಕೆ ಒಳಗಾದ ಕುಟುಂಬಗಳು ಅನೇಕ.

ಈ ಎಲ್ಲ ಗೋಳಿನ ಕಾರಣ ಬಂದವರಿಗೆಲ್ಲ ಬಾಗಿಲು ತೆರೆವ ನೀತಿಗೆ ಅಲ್ಲಿನ ಮೂಲನಿವಾಸಿಗಳ ವಿರೋಧ. ರಾಜ ಕಾರಣಿಗಳೂ ಅದನ್ನು ಅನುಮೋದಿಸಿದರು.  ಅದಕ್ಕೆ.  ಕಾರಣ ಈಗಾಗಲೇ ಬಂದು ನೆಲಸಿರುವವವರ ಹಿತಾಸಕ್ತಿಗೆ ಧಕ್ಕೆ ಯಾಗುವ ಪ್ರಮಾಣದಲ್ಲಿ ಯುರೋಪಿಯನ್ನರಲ್ಲದೆ ಇತರರು ಬರತೊಡಗಿದರು. ಅದರಲ್ಲೂ ಏಷಿಯನ್ನರೂ ವಿಶೇಷವಾಗಿ ಚೀನಿಯರ ಪ್ರವೇಶ ನಿಯಂತ್ರಣಕ್ಕೆ ಒತ್ತಡ ಬಂದಿತು.ಅಲ್ಲಿ ನೆಲಸಿರುವ ವಿವಿಧ ಜನಾಂಗಗಳ ವೈವಿಧ್ಯೆತೆ ಕಾಪಾಡಲು ಶೇಕಾಡಾವಾರು ಪ್ರವೇಶವನ್ನು ನೀಡ ಬೇಕೆಂದು ೧೯೨೧ ರಿಂದ ೧೯೨೪ ರವರೆಗೆ ನಿರ್ಬಂಧ ಹೇರಲಾಗಿತ್ತು.  ಪುರಾತನ ವಲಸಿಗರ  ಸಂಖ್ಯೆಗೆ ಅನುಗುಣವಾಗಿ ಹೊಸ ವಲಸಿಗರ ಪ್ರವೇಶವನ್ನು ನಿಗದಿ ಪಡಿಸಿ ಸಮತೋಲನವನ್ನು ಸಾಧಿಸಲಾಯಿತು. .ಇದರಿಂದ ಅಲ್ಲಿನ ಹಳೆಯ ವಲಸಿಗರ ಎಲ್ಲ ದಾಖಲೆಗಳಿಂದ  ಅವರ ವಿವರವನ್ನು ಪಡೆದು  ಮೂಲ ಬೇರು ಎಲ್ಲಿದೆ ಎನ್ನುವುದನ್ನು ಪರಿಶಿಲಸಿ ಅನುಮತಿ ನೀಡುವ ಪದ್ದತಿ ಪ್ರಾರಂಭಿಸಿದರು.ಅದನ್ನೇ ಇಂದಿನ ವಿಸಾ  ಪದ್ದತಿಯ ತಾಯಿ ಬೇರು ಎನ್ನಬಹುದು.ಆಗಲೂ ವೈದ್ಯಕೀಯ ಪರೀಕ್ಷೆಯ ಅಗತ್ಯವಿರುವವರನ್ನು  ಮಾತ್ರ ಇಲ್ಲಿಗೆ ಕಳುಹಿಸುತ್ತಿದ್ದರು

ಕ್ರಮೇಣ ಇಲ್ಲಿನ ಕಾರ್ಯ ಭಾರ ಕಡಿಮೆ ಆಯಿತು.  ಆದರೂ ಕಡಲ ಪಡೆಯ ತರಬೇತಿ  ಮತ್ತು ಅನಧಿಕೃತವಾಗಿ ಬರಲೆತ್ನಸಿದ ನಾವಿಕರನ್ನು ನಿರ್ಬಂಧದಲ್ಲಿಡಲು ಈ ದ್ವೀಪವನ್ನು ಉಪಯೋಗಿಸುತ್ತಿದ್ದರು. ಇಲ್ಲಿನ ಕೊನೆಯ ಸೆರೆಯಾಳು ನಾರ್ವೆಯ ನಾವಿಕ. ಅವನು ೧೯೫೪ರಲ್ಲಿ ಬಿಡುಗಡೆಯಾದನಂತರ ಇದನ್ನು ಮುಚ್ಚಲಾಯಿತು.
ಇದನ್ನು  ಎರಡು ವರ್ಷದ ನಂತರ ದುರಸ್ತಿ ಮಾಡಿದರು.  ನಂತರ  ಸ್ವಾತಂತ್ರ್ಯ ಪ್ರತಿಮೆಯ ರಾಷ್ಟ್ರೀಯ ಸ್ಮಾರಕದ ಒಂದು ಭಾಗ ಎಂದು, ೧೯೫೬ ರಲ್ಲಿ ಅಮೇರಿಕಾದ ಅಧ್ಯಕ್ಷರಾದ ಲಿಂಡನ್  ಬಿ.ಜಾನಸನ್ ರು ಘೋಷಿಸಿದರು .ಅಲ್ಲಿ ವಲಸೆಗಾರರ ವಸ್ತು ಸಂಗ್ರಹಾಲಯ ಪ್ರಾರಂಭವಾಯಿತು. ಅಮೇರಿಕಾದ ಮೂಲ ವಲಸೆಗಾರರ ಮಾಹಿತಿ, ಅವಾಗಿನ ಜನ ಜೀವನ,ಮನೆ, ಪಾತ್ರೆ ಪಡಗ,ಅಯುಧಗಳು, ಉಪಕರಣಗಳು ಪತ್ರಿಕೆಯ ತಣಕುಗಳು, ಛಾಯಾಚಿತ್ರಗಳು ಕಣ್ಣಿಗೆ ಕಟ್ಟುವಂತೆ ಇವೆ.  ಅಲ್ಲದೆ ತಮ್ಮ ವಂಶದ ಮೂಲಪುರುಷರ ಹೆಸರು, ಛಾಯಾಚಿತ್ರಗಳನ್ನು ಒಳಗೊಂಡ ದತ್ತಾಂಶ ಅವರಲ್ಲಿದೆ. ಬೇಕಾದರೆ ನಮ್ಮವಲಸಿಗಾಗಿದ್ದ ಮೂಲ ಪುರಷರ ಸರ್ವ ಮಾಹಿತಿಯು ಅಲ್ಲಿ ಸಿಗುವುದು. ಹೆಸರು ಮತ್ತು ಅವರ ಭಾವ ಚಿತ್ರವನ್ನು ಅಲ್ಲಿನ ಫಲಕದಲ್ಲಿ ಪ್ರದರ್ಶನಕ್ಕೆ ಅವಕಾಶವಿದೆ ಸಹಸ್ರಾರು ಜನ ಹೆಮ್ಮೆಯಿಂದ ತಮ್ಮ ಮೂಲ ಪುರಷರನ್ನು ಅಲ್ಲಿ ಕಾಣತ್ತಾರೆ.



ದಿನದ ಕವನ



ಬೆತ್ತಲೆ ರಾಜ್ಯದಲಿ ಬಟ್ಟೆ ಹಾಕಿದವ ಬೆಪ್ಪ
ಕತ್ತಲೆಯ ಲೋಕದಲಿ ಬಿಳಿಯು ಕೂಡಾ ಕಪ್ಪು
ನಿಂತ ನೀರೆ ತೀರ್ಥ ಎನುವಾಗ
ಹರಿವ ನೀರದು  ವ್ಯರ್ಥ
ಕಗ್ಗತ್ತಲಲಿ   ಹಾದಿ ತೋರಲು
 ಹಿಡಿದುಬಂದರೆ ದೊಂದಿ
ಕೊಳ್ಳಿದೆವ್ವ ಎಂದು ಕಿರುಚಿ
ಓಡುವರು ಮಂದಿ
ಜಂಗುಳಿಯು ಮಾಡುತಿರೆ  ಚಪ್ಪಾಳೆ ಸದ್ದು
ಜಾಗಬಿಡುವುದು ಲೇಸು ಕೈ ಮುಗಿದು ಎದ್ದು

Thursday, February 14, 2013

ಆರರಿಂದ ಅರವತ್ತು ಸರಣಿ

 ಸಮಸ್ಯೆ  ಮೂಡಿಸಿದ  ಸಾಮರಸ್ಯ
ನಾನು ಪ್ರಾಂಶುಪಾಲನಾಗಿ ಹೊಸ ಕಾಲೇಜಿನಲ್ಲಿ ಅಧಿಕಾರ ವಹಿಸಿಕೊಂಡ ಹೊಸದು. ಅಲ್ಲಿ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿದೆ. ಪ್ರತಿ ತರಗತಿಯಲ್ಲಿ ನಾಲಕ್ಕು ಐದು ಜನ ಇದ್ದರು. ನಾನು ಹೋದ ತಿಂಗಳೊಪ್ಪತ್ತಿನಲ್ಲೆ ಗಣೇಶನ ಹಬ್ಬ ಬಂದಿತು.ಆ ಕಾಲೇಜಿನಲ್ಲೂ ಗಣಪತಿ ಉತ್ಸವದ ಆಚರಣೆಯ ಪದ್ದತಿ ಇತ್ತು. ಅದು ವಿದ್ಯಾರ್ಥಿ ಸಂಘದ ಚಟುವಟಿಕೆಯ ಒಂದು ಭಾಗವಾಗಿತ್ತು   ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ವಿದ್ಯಾರ್ಥಿ ಸಂಘದ ವಂತಿಗೆ ಜತೆಗೆ ವಿದ್ಯಾರ್ಥಿಗಳೂ ಚಂದಾ ಹಾಕಿ ಮೂರು ದಿನದ ಉತ್ಸವ ಮಾಡುವುದು ಎಂದು ತೀರ್ಮಾನವಾಯಿತು. ಹಬ್ಬ ಹತ್ತಿರ  ಬಂದಿತು .ಆದರೆ ವಂತಿಗೆ ಹಣ ಪೂರ್ಣವಾಗಿ ಸಂಗ್ರಹ ವಾಗಿರಲಿಲ್ಲ.  ಹಲವು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಇದು ನಮ್ಮ ಹಬ್ಬವಲ್ಲ ಆದುದರಿಂದ ನಾವು ಏಕೆ ವಂತಿಗೆ ಕೊಡಬೇಕು ಎಂದು ತಕರಾರು ತೆಗೆದಿದ್ದರು. ಅದನ್ನುನೋಡಿ ಇತರ ಕೆಲವರು ಅವರು ಕೊಡದಿದ್ದ ಮೇಲೆ ನಾವೂ ಕೊಡುವುದಿಲ್ಲ ಎಂದು ತಗಾದೆ ಮಾಡಿದ್ದರು.. ಇಗಾಗಿ ಹಣ ಸಂಗ್ರಹ ನೆನಗುದಿಗೆ ಬಿದ್ದಿತ್ತು. ವಿಚಾರಿಸಿದಾಗ ಅನೇಕ ವಿದ್ಯಾರ್ಥಿಗಳು ಅವರು ಕೊಡದಿದ್ದರೆ ಬೇಡ ನಾವೆ ಹೆಚ್ಚುವರಿಯಾಗಿ ಕೊಟ್ಟು ಮೊದಲಿಗಿಂತ ಜೋರಾಗಿ ಆಚರಿಸೋಣ ಎಂಬ ಹುಮ್ಮಸ್ಸಿನಲ್ಲಿದ್ದರು. ಆದರೆ ಈ ವಿಷಯ ನನ್ನ ಗಮನಕ್ಕೆ ಬಂದಾಗ ಈ ರೀತಿಯ ಯೋಚನೆ ಸರಿಯಲ್ಲ ಎನಿಸಿತು. ಇದರಿಂದ ಕಾಲೇಜಿನ ಒಗ್ಗಟ್ಟು ಮಾಯವಾಗಿ ಬಿಕ್ಕಟ್ಟು ಮೂಡುವ ಸಂಭವ ಇದೆ ಎನಿಸಿತು.ಇವರು ಈ ಹಬ್ಬ ತಮ್ಮದು ಎಂದು ಅವರನ್ನು ಬಿಟ್ಟು ತಾವೆ ಚಂದಾಹಾಕಿ ಆಚರಿದರೆ ನಾಳೆ ಅವರೂ  ಸಹಾ ನಮ್ಮಷ್ಟಕ್ಕೆ ನಾವೆ ನಮ್ಮ ಹಬ್ಬವನ್ನು ಆಚರಿಸುವೆವು ಎನ್ನಲು ಅವಕಾಶವಿತ್ತು. ಈ ಸಮಾರಂಭವು ವಿದ್ಯಾರ್ಥಿಗಳೆಲ್ಲರದು ಎಂಬ ಭಾವನೆಗೆ ಬಲವಾದ ಪೆಟ್ಟು ಕೊಡುತಿತ್ತು. ಇದರಿಂದ ಇಲ್ಲದ ಸಮಸ್ಯೆಯನ್ನು ನಾವೆ ಹುಟ್ಟಿಹಾಕಿದ ಹಾಗಾಗುತಿತ್ತು..  ಸರಕಾರಿ ಸಂಸ್ಥೆಯಲ್ಲಿ ಯಾವುದೆ ಒಂದು ಧರ್ಮಕ್ಕೆ ಸೀಮಿತವಾದ ಸಮಾರಂಭ ಆಚರಿಸಬಾರದು. ಹಾಗೆಂದು ಇದ್ದ ಸಂಪ್ರದಾಯ ಬಿಡಬಾರದು. . ನನಗೆ ಆ ತಕ್ಷಣ ಏನೂ ಹೊಳೆಯಲಿಲ್ಲ. ಆ ಸಮಸ್ಯೆಯು ಗುಂಗಿ ಹುಳ ದಂತೆ ರಾತ್ರಿಯೆಲ್ಲಾ ನನ್ನ ತಲೆಯಲ್ಲು ಗುಂಯ್‌ ಗುಡುತಿತ್ತು. ಕೊನೆಗೆ ಒಂದು ತೀರ್ಮಾನಕ್ಕೆ ಬಂದೆ . ಏನೆ ಆಚರಣೆ ಇರಲಿ ಅದು ಸಾರ್ವತ್ರಿಕ ವಾಗಿರಬೇಕು. ಅಂದಾಗ ಮಾತ್ರ ಅದು ಐಕ್ಯತೆಯ ಸಂಕೇತವಾಗುವುದು. ಮಾರನೆಯ ದಿನ ಎಲ್ಲ ಮಕ್ಕಳ ಸಭೆ ಕರೆಯಲಾಯಿತು.ಅಲ್ಲಿ ಈ ಆಚರಣೆಯ ವಿಧಾನ ಕುರಿತ ವಿಷಯ ವಿವರಿಸಲಾಯಿತು.ಇದು ಇಂದು ನಿನ್ನೆಯದಲ್ಲ. ಅನೇಕ ವರ್ಷಗಳಿಂದ ನಡೆದು ಬಂದ ಆಚರಣೆ.ಇದು ಸ್ವಾತಂತ್ರ್ಯ ಪೂರ್ವದಲ್ಲಿ ಲೋಕಮಾನ್ಯ ತಿಲಕರಿಂದ  ಇದು ಪ್ರಾರಂಭವಾಯಿತು. ಜನ ಮನದಲ್ಲಿನ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸಲು ಇದು ಸಾಧನವಾಯಿತು.ಭಾರತೀಯರ ಐಕ್ಯತೆಯ  ಸಂಕೇತ ವಾಯಿತು. ಆದ್ದರಿಂದ ಇದನ್ನು ಒಂದು ಧರ್ಮಕ್ಕೆ ಸೀಮಿತ ಗೊಳಿಸುವುದು ಸಲ್ಲದು ಎಂದು ಎಲ್ಲರಿಗೂ ಮನದಟ್ಟು ಅಗುವಂತೆ ವಿವರಿಸಿದೆ. ಇನ್ನು ಆಚರಣೆಯ ವಿಧಾನ , ಹೆಚ್ಚು ಹಣ ವೆಚ್ಚಮಾಡಿ ವೈಭವದಿಂದ ಮಾಡಬೇಕೆಂದೇನೂ ಇಲ್ಲ. ಸರಳವಾಗಿ ಆಚರಿಬಹುದು ಎಂದು ಸೂಚಿಸಿದೆ. ಆದರೆ ಬಹುತೇಕ ವಿದ್ಯಾರ್ಥಿಗಳಿಂದ ಆಚರಣೆ ಅದ್ಧೂರಿಯಾಗಿರಬೇಕು ಎಂಬ ಬೇಡಿಕೆ ಬಂತು. ಹಾಗಿದ್ದರೆ ನಾನು ಚಂದಾ ಸಂಗ್ರಹಕ್ಕೆ ಅನುಮತಿಸಿದೆ. ಆದರೆ ಕಡ್ಡಾಯ ಮಾಡ ಬಾರದು. ಯಾರೂ ಧಾರ್ಮಿಕ ಕಾರಣದ ಮೇಲೆ ಚಂದಾ ನಿರಾಕರಿಸಬಾರದು ಆರ್ಥಿಕವಾಗಿ ತೊಂದರೆ ಇದ್ದರೆ  ನಾಮಕಾವಾಸ್ತೆ ಕೈಲಾದುದನ್ನು ಕೊಡಲಿ. ಆದರೆ ಇಲ್ಲ ಎನ್ನಬಾರದು, ಎಂದು ಮನವರಿಕೆ ಮಾಡಲಾಯಿತು.
 ಅಷ್ಟರಲ್ಲಿ ಒಂದು ದನಿ ಬಂದಿತು. ನಾವೂ ಪೂಜೆ ಮಾಡಬಹುದೆ ?  ಕೇಳಿದವನು ದಲಿತವರ್ಗದವ. ನಾನು ಖಂಡಿತ ಎಂದೆ. ನಾವು ಗಣೇಶನ ಪೂಜೆಗೆ ಹೊರಗಿನಿಂದ ಬ್ರಾಹ್ಮಣರನ್ನೋ, ಅಯ್ಯನವರನ್ನು ಕರೆಸುವುದು ಬೇಡ. ವಿಗ್ರಹಕ್ಕೆ ಜನಿವಾರ, ಲಿಂಗಧಾರಣೆಯ ಹಂಗಿಲ್ಲ. ನಮಗೆ ಮಂತ್ರ ಸಹಿತ ಪೂಜೆ ಎಂದೇನೂ ಇಲ್ಲ. ಯಾರಾದರೂ ವಿದ್ಯಾರ್ಥಿ ಶುಚಿಯಾಗಿ ಬಂದು ಪೂಜೆ ಮಾಡಬಹುದು. ಅವನಿಗೆ ಯಾರು ಬೇಕಾದರೂ ಇಬ್ಬರು ಮೂವರು ಸಹಾಯ ಮಾಡಲಿ. ಅದನ್ನು ಮಕ್ಕಳೆ ನಿರ್ಧರಿಸಲಿ,  ಎಂದೆ.  ಸಾಧ್ಯವಾದರೆ ಅಲ್ಪ ಸಂಖ್ಯಾತ ಮತ್ತು ದಲಿತ ಮಕ್ಕಳೂ ಪೂಜಾ ತಂಡದಲ್ಲಿರಲಿ, ಎಂದು ತಿಳಿಸಿದೆ.
 ಆಗಾ ನಮ್ಮ ಸಹ ಶಿಕ್ಷಕರೊಬ್ಬರು , ಅದೆಲ್ಲಾ ಬೇಡ ಸಾರ್‌, ಅಲ್ಪ ಸಂಖ್ಯಾತರು ಮೂರ್ತಿ ಪೂಜೆ ಮಾಡುವುದು ಅವರ ಧರ್ಮದ ಪ್ರಕಾರ ನಿಷಿದ್ಧ,  ಹಾಗೇನಾದರೂ ಮಾಡಿಸಿದರೆ ಅವರ ಜನಾಂಗದಿಂದ ಆಕ್ಷೇಪಣೆ  ಬರಬಹುದು, ಎಂದು ಕೊಕ್ಕೆ ಹಾಕಿದರು.
ಒಂದು ಕ್ಷಣ ಅವರ ಮಾತು ನಿಜ ಎನಿಸಿತು. ಇದು ಇಲ್ಲದ ಸಮಸ್ಯೆಗೆ ಕಾರಣವಾಗಬಹುದು ಎನಿಸಿತು.ಆದರೆ ನನಗೆ ನಮ್ಮ ಊರಲ್ಲಿ ಆಚರಿಸುವ ಮೊಹರಂ ಹಬ್ಬದ ನೆನಪು ಬಂದಿತು. ಆ ಸಮಯದಲ್ಲಿ ಪಂಜಾಗಳಿಗೆ ಬಣ್ಣದ ಬಟ್ಟೆ ತೊಡಿಸಿ ಒಂಬತ್ತು  ದಿನ  ಅಹೋರಾತ್ರಿ ಪೂಜಿಸುವ ಪರಿಪಾಠ ಕಣ್ಣ ಮುಂದೆ  ಬಂದಿತು.ಕೆಲವು ಕಡೆ ಅದನ್ನು ಪೀರಲ ದೇವರು ಎಂದರೆ ಇನ್ನೂ ಕೆಲವು ಕಡೆ ಬಾಬಯ್ಯನ ಹಬ್ಬ ಎನ್ನುವರು.  ಈ ಹಬ್ಬವನ್ನು ಮುಸ್ಲಿಮರ ಜತೆ ಹಿಂದೂಗಳೂ ಆಚರಿಸುವರು. ಕೆಲವು ಗ್ರಾಮಾಂತರ  ಪ್ರದೇಶಗಳಲ್ಲಿ ಹಿಂದೂಗಳ ಸಂಖ್ಯೆಯೆ ಅಧಿಕ.  ಹೆಣ್ಣು ,  ಪಿಂಛಾದಿಂದ  ಮಗುವಿ ಮೈ ಸವರಿದರೆ ರೋಗ  ನಿವಾರಣೆಯಾಗುವುದು ಎಂಬುದು  ನಂಬಿಕೆ. ಐದನೆ ದಿನ ಏಳನೆ ದಿನ ದೇವರನ್ನು ಹೊತ್ತವರು ಮೆರವಣಿಗೆಯಲ್ಲಿ ಊರ ಸಂಚಾರಕ್ಕೆ ಹೊರಡುವುರು.ಆಗ ಅದರ ಪಾದದ ಮೇಲೆ ತುಂಬಿದ ಕೊಡದ ನೀರು ಹಾಕಿ ಅದನ್ನತಮ್ಮ ಮೈಮೇಲೆ ಸಿಡಿಸಿಕೊಳ್ಳುವರು.ಅದರ ಲೋಭಾನದ ಹೊಗೆ ಹಾಕಿಸಿಕೊಂಡರೆ ಅನಿಷ್ಟ ಪರಿಹಾರವಾಗುವುದು ಎಂದು ಬಲವಾಗಿ ನಂಬಿರುವರು. ಅಷ್ಟೆ ಅಲ ಆ ದೇವರುಗಳು ಹಳ್ಳಿಯಲ್ಲಿನ ದುರುಗಮ್ಮ , ಗಾಳೆಮ್ಮನ ಗುಡಿಗೆ ಬಂದು ತಮ್ಮ ತಂಗಿಯನ್ನು ನೋಡಿಕೊಂಡು ಹೋಗಬೇಂಬ ವಾಡಿಕೆ ಇದೆ.  ಊರಲ್ಲೆ ಎರಡು ಕಡೆ ಇಟ್ಟಿದ್ದರೆ , ಇಲ್ಲವೆ ಹತ್ತಿರದಲ್ಲೆ ಇರುವ ಊರಿಗೆ ಹೋಗಿ ತಮ್ಮ ಭಾಯಿಯನ್ನು ಭೇಟಿಯಾಗುವರು.ಅದನ್ನು ಅಲಾಯಿ ಬಿಲಾಯಿ ಕೊಡುವುದು ಎನ್ನುವರು. ಅಲ್ಲದೆ ದೇವರ ಮಂದೆ ತೆಗೆದ ಆಲಾಯಿ ಕುಣಿಯಲ್ಲಿ ಬೆಂಕಿಹಾಕಿ ಸುತ್ತಲೂ ರಾತ್ರಿ ಬಹು ಹೊತ್ತಿನ ತನಕ ಕುಣಿಯುವರು.ಬಹತೇಕ ಅವರೆಲ್ಲ ಹಿಂದುಗಳೆ. ಒಂಬತ್ತನೆ ದಿನ ರಾತ್ರಿ ಖತಲ್‌ ರಾತ್ರಿ. ಅದೂ ಕತ್ತಲ ರಾತ್ರಿ ಎಂದೆ ಪ್ರಸಿದ್ಧಿ. ಅಂದು ರಾತ್ರಿ  ಇಡೀ   ಅವುಗಳ ಓಡಾಟ. ಆಗಿನ  ಜನ ಜಂಗುಳಿ ಹೇಳ ತೀರದು. ಅಂದು ಬೆಂಕಿ ತುಳಿಯುವುದೂ ಇದೆ. ಹತ್ತನೆಯ ದಿನ ದೇವರು ಸಾಯುವ ದಿನ. ಅಂದು ಸಂಜೆ  ಎಲ್ಲರೂ ಮೆರವಣಿಗೆಯಲ್ಲಿ ನೀರಿನ ತಟಾಕಕ್ಕೆ ಹೋಗಿ ದೇವರಬಟ್ಟೆ ತೆಗೆದು  ಪೆಟ್ಟಿಗೆಯಲ್ಲಿಟ್ಟು ಕಂಡು ಶೋಕ ಗೀತೆ ಹಾಡುತ್ತಾ ಮೂಲ ಸ್ಥಾನಕ್ಕೆ ಬರುವರು. ಮತ್ತೆ ಮುಂದಿನ ವರ್ಷದವರೆಗೆ ಅವನ್ನು ಮಸೀದೆಯಲ್ಲಿ ಭದ್ರವಾಗ ನೇತು ಹಾಕುವರು. ಅಲ್ಲಿಗೆ ಮೊಹರಂ ಮುಕ್ತಾಯ. ಈ ಆಚರಣೆ ಅಲ್ಪ ಸ್ವಲ್ಪ ವ್ಯತ್ಯಾಸದೊಂದಿಗೆ ಎಲ್ಲ ಕಡೆ ಇದೆ.ದೇವರಿಗೂ ಮಾನವರಂತೆ ಅಕ್ಕ, ತಮ್ಮ, ಸಂಬಂಧ ಕಲ್ಪಿಸಿ, ಕೊನೆಗೆ ಸಾವೂ  ಇದೆ ಎಂದು ನಂಬುವ ಜನಪದದ ರೀತಿ ಬಹು ವಿಸ್ಮಯಕಾರಿ. ಅದೂ ಎಲ್ಲ ಜಾತಿ ಧರ್ಮದ ಕಟ್ಟು ಮೀರಿದ ಆಚರಣೆಯಾಗಿದೆ.ಈ ವಿಷಯವನ್ನು ನಮ್ಮ ಶಿಕ್ಷಕರ ಸಭೆಯಲ್ಲಿ ಚರ್ಚಿಸಿದೆ. ಎಲ್ಲರೂ ಈ ರೀತಿ ಆರಣೆ ಇರುವುದು ನಿಜ ಎಂದು ಒಪ್ಪಿಕೊಂಡರು. ಆದರೆ ಮೊದಲಿನ ಜೋರು ಇಲ್ಲ ಎಂದರು ಹಾಗಿರುವಾಗ ಗಣಪತಿಯೂ ಒಂದು ಸಾಂಕೇತಿಕ ಉತ್ಸವವಾಗಬೇಕು.ಅದನ್ನು ಯಾವುದೆ ಧರ್ಮಕ್ಕೆ ಸೀಮಿತ ಗೊಳಿಸಬಾರದು ಇದು ಪರಂಪರೆಯ ಒಂದು ಭಾಗ. ಶಾಲೆಯಲ್ಲಿನ ಆಚರಣೆ ಸಮಾಜಕ್ಕೆ ಮಾದರಿಯಾಗಬೇಕು. ಇದು ಜಾತಿ ಮತಗಳ ಸೋಂಕಿನಿಂದ ದೂರವಿರಬೇಕು  ಎಂದು ಅವರಿಗೆಲ್ಲ ಮನದಟ್ಟು ಮಾಡಿದೆ. ಆಕ್ಷೇಪಣೆ ಮಾಡಿದವರೂ  ತಲೆ ದೂಗಿದರು.
ಆ ವರ್ಷ ಗಣೇಶನ ಉತ್ಸವ ಚೆನ್ನಾಗಿಯೆ ನಡೆಯಿತು.ಎಲ್ಲ ಮಕ್ಕಳೂ ಉತ್ಸಾಹದಿಂದ ಭಾಗವಹಿಸಿದರು  ತಳಿರು ತೋರಣ ಕಟ್ಟುವಲ್ಲಿ , ಮಂಟಪ ಅಲಂಕಾರ ಮಾಡುವ  ಕೆಲಸದಲ್ಲಿ, ಬಣ್ಣದ ಕಾಗದ ಕತ್ತರಿಸಿ ಅಂಟಿಸುವಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಿದರು. ಫುಜೆಯ ದಿನ ಬಂದಿತು. ಅಂದು ಪೂಜೆಗೆ ಒಬ್ಬರ ಬದಲು ಮೂವರು ತಂಡವನ್ನು   ಪೂಜೆ ಮಾಡಲು  ನಿಯೋಜಿತವಾಯಿತು. ಪೂಜಾ ವಿಧಾನವನ್ನು ತಿಳಿದವನಿ ಜತೆ ಅಲ್ಪಸಂಖ್ಯಾತ ಮತ್ತು ದಲಿತ ವಿದ್ಯಾರ್ಥಿಇರುವ ತಂಡ  ಪೂಜೆ ಮಾಡಿತು. ಒಬ್ಬನು ಶ್ಲೋಕ ಹೇಳಿದರೆ ಇನ್ನೊಬ್ಬನು ಹೂ ಏರಿಸಿದ. ಮತ್ತೊಬ್ಬನು ಗಂಟೆಬಾರಿಸಿ  ಮಂಗಳಾರತಿ ಎತ್ತಿದ. ತೀರ್ಥ ಪ್ರಸಾದ ವಿತರಣೆಯೊಂದಿಗೆ ಉತ್ಸವವು ಯಾವುದೆ ಅಡೆ ತಡೆಯಿಲ್ಲದೆ ಸಾಂಗವಾಗಿ ಮುಗಿಯಿತು.
 ಗಣೇಶನ ವಿಸರ್ಜನೆಯನ್ನು  ಐದನೆ ದಿನ  ಏಳನೆ  ದಿನ  ಮಾಡುವುದು  ವಾಡಿಕೆ.ಅದರಿಂದ ಅಷ್ಟೂ ದಿನ ಪಾಠ ಪ್ರವಚನಕ್ಕೆ ತೊಂದರೆ. ಅದರಿಂದ ಅವದಿಯನ್ನು ಮೂರೆ  ದಿನಕ್ಕೆ ಇಳಿಸಲಾಯಿತು. ಪೂಜಾ ಸಮಯದಲ್ಲಿ ಬಿಡುವಿರುವ ತರಗತಿಯಮಕ್ಕಳು ಮಾತ್ರ ಇದ್ದರೆ ಸಾಕೆಂದು ವಿಧಿಸಲಾಯಿತು. ಜೊತೆಗ ವಿರಾಮವಿರುವ ಶಿಕ್ಷಕರು ಕೂಡಾ ಭಾಗವಹಿಸುವರು. ಮೂರನೆಯ ದಿನ ಮಾತ್ರ ಮಧ್ಯಾಹ್ನ ಎಲ್ಲರಿಗೂ ಪಾಠ ಇಲ್ಲ.   ಎಲ್ಲರೂ ಸೇರಿ ಅದ್ಧೂರಿಯಿಂದ ಮೆರವಣಿಗೆಯಲ್ಲಿ ಗಣೇಶನನ್ನು ಹತ್ತಿರದ ಕೆರೆಗೆ ಕೊಂಡೊಯ್ಯಲಾಯಿತು. ಶಾಲೆಯ ಡ್ರಮ್‌ ಸೆಟ್‌, ತತ್ತೂರಿ ಧ್ವನಿಯಜತೆಗೆ ನೂರಾರು ಕಂಠದಿಂದ ಹೊರಟ ಗಣಪತಿ ಬಪ್ಪಾ ಮೋರಯ್ಯಾ, ಮುಂದಿನ ವರ್ಷಕ್ಕೆ ಬಾರಯ್ಯಾ ಎಂಬ ಘೋಷಣೆ ನಿನದಿಸುತಿತ್ತು. ವಿಸರ್ಜನೆಯ ನಂತರ ಚರುಪು ಹಂಚಿ ಕಾಲೇಜಿಗೆ ವಾಪಸ್ಸಾದೆವು
ಸಮಸ್ಯೆ ಯಾಗಬಹುದಿದ್ದ ವಿಷಯ ಸಾಮರಸ್ಯಕ್ಕೆ ಕಾರಣವಾಯಿತು.   . 


Wednesday, February 13, 2013

ದಿನದ ಕವನ


 ಹೊರಗೆ ವಾಹನ ಮೈಕುಗಳ ಭರಾಟೆ
ಮನೆಯಲಿ ರೇಡಿಯೋ,ಟಿವಿ, ಮಕ್ಕಳ ಗಲಾಟೆ
ಕಿವಿಗಾಗಬಹುದ ತೂತು
ಎನುವಾಗ ಕೇಳುವ
ಇನಿಯಳ ಪಿಸು ಮಾತೆ
ಕವಿತೆ.

Tuesday, February 12, 2013

ದಿನದ ಕವನ



     ಬರೆ 
ಗೆಳೆಯರು ಹೇಳಿದರು
 ನೀನೂ ಕವನ ಬರೆ, ಬರೆ
 ಬರೆದುದ ಓದಿ ನುಡಿದರು
ಇದು ನಿಜವಾಗಿ ಓದುಗನಿಗೆ ಬರೆ

Monday, February 11, 2013

ದಿನದ ಕವನ




    ಚಿತ್ರ
ಅಂಗೈನಲ್ಲಿ ಅರಮನೆ
          ಮುಂಗೈಮೇಲೆ ಅರಗಿಣಿ
         ಸೆರೆಯಲ್ಲಿ ಸಾಗರ
         ಕಾಲನ ಕಾಲಿಗೆ ಸರಪಳಿ
        ನೆನಪಾದ ಕನಸು
          ಜಗವೆಲ್ಲ ಬರಿ ಸೊಗಸು
           ರಚಿಸೆ ವರ್ಣ ಚಿತ್ರ
           ತೆಗೆಯೆಛಾಯ ಚಿತ್ರ

Sunday, February 10, 2013

ಅಮ್ಮಾ! ನನ್ನ ಕೂಡ ಮಾತನಾಡೆ



ನಿವೃತ್ತನಾದ ಮೇಲೆ ಎರಡು ವರ್ಷ ಶಾಲಾ ಸಮೂಹಗಳಿಗೆ ವಿಶೇಷ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದೆ. ಅದರಲ್ಲೂ ಅವರ ಕಾನ್ವೆಂಟ್‌ಗೆ ವಿಶೇಷ ಗಮನ ನೀಡಬೇಕಿತ್ತು.ಅಲ್ಲಿ  ಶಿಶು ವಿಹಾರದಿಂದ ಪ್ರೌಢ ಶಾಲೆಯವರೆಗೆ  ತರಗತಿಗಳು ಇದ್ದವು.ಶಾಲೆ ಸುಸಜ್ಜಿತವಾಗಿತ್ತು. ಅವರದೆ ಆದ ಬಸ್ಸುಗಳಿದ್ದವು. ಅದರಿಂದ ಸುತ್ತ ಮುತ್ತಲಿನ ಹಳ್ಳಿಯಯಿಂದ ಸಹಾ ಮಕ್ಕಳು ಬರುತ್ತಿದ್ದರು. ನಾನು ಹೋದ ಮೊದಲ ವರ್ಷ ವಿಶೇಷ ಕಾಳಜಿ ವಹಿಸಿದೆವು. ಎಸ್  ಎಸ್ ಎಲ್‌ ಸಿ ಯಲ್ಲಿ  ೧೦೦% ಫಲಿತಾಂಶ ಬಂದಿತು. ಬಹುತೇಕ ಮಕ್ಕಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದರು.ಆ ಮಟ್ಟವನ್ನೆ ಕಾಪಾಡಿಕೊಂಡು ಹೋಗುವ ಹಂಬಲ ನಮಗಿತ್ತು. ಅದರಿಂದ ಅವರ ಬಗ್ಗೆ ವಿಶೇಷ ಕಾಳಜಿ ವಹಿಸಿದೆವು. ಹತ್ತನೆ ತರಗತಿಯ ಮಕ್ಕಳಿಗೆ ಪ್ರತಿ ತಿಂಗಳೂ ಪರೀಕ್ಷೆ ಮಾಡಿ ಅವರ ಪ್ರಗತಿ ಪರಿಶೀಲಿಸಲಾಗುತಿತ್ತು . ಎಲ್ಲ ಮಕ್ಕಳೂ ಆಸಕ್ತಿ ಯಿಂದ ಅಭ್ಯಾಸ ಮಾಡುತ್ತಿದ್ದರು. ಆ ಮಕ್ಕಳಲ್ಲಿ  ವಾಣಿ ಎಂಬ ಹುಡುಗಿಯ  ಪ್ರಗತಿ  ಕುಸಿಯುತ್ತಲೆ ಹೊಯಿತು.ಅಂಕಗಳು ಕಡಿಮೆಯಾಗುತ್ತಲೆ ಸಾಗಿದವು. ಅವಳು ನಿಜವಾಗಿಯೂ ಜಾಣೆ. ಹಿಂದಿನ ತರಗತಿಯಲ್ಲಿ ಮೊದಲ  ತಪ್ಪಿದರೆ ಎರಡನೆ ಸ್ಥಾನದಲ್ಲ್ಲಿ ಇರುತಿದ್ದಳು. ಅರ್ಧ ವಾರ್ಷಿಕ ಪರೀಕ್ಷೆಯಲ್ಲಂತೂ ಪಾಸು ಮಾರ್ಕ ಪಡೆಯುವುದಕ್ಕೂ ಹೆಣಗಾಡಿದ್ದಳು.  ಇದೇ ಮುಂದುವರೆದರೆ ನಮ್ಮ ದಾಖಲೆಯ ಫಲಿತಾಂಶ ಪಡೆಯುವುದು  ಕನಸು  ಎನಿಸಿತು.  ಅವರ ಕ್ಲಾಸ್‌ ಮಿಸ್‌ ಅವರನ್ನು ಕರೆದು ಚರ್ಚಿಸಿದೆ. ಅವರಿಗೂ ಅಚ್ಚರಿಯಾಗಿತ್ತು. ಅವಳು ಮಗುವಾಗಿದ್ದಾಗಿನಿಂದಲೂ ನಮ್ಮ ಸಂಸ್ಥೆಯಲ್ಲೆ ಓದಿದ್ದಾಳೆ. ಯಾವಾಗಲೂ ಚುರುಕಾಗಿಯೇ ಇದ್ದಳು. ಹತ್ತನೆ ತರಗತಿಗೆ ಬಂದಾಗ ದಿನೆ ದಿನೇ ಅವಳ ಸಾಧನೆ ಕಳಪೆಯಾಗುತ್ತಾ ಸಾಗಿತ್ತು.
ತರಗತಿಯಲ್ಲಿಯೂ ಮೊದಲಿನಂತೆ ಚುರುಕಾಗಿಲ್ಲವೆಂದು ತಿಳಿಯಿತು. ಹಾಜರಿ ಏನೋ ಸರಿಯಾಗಿಯೆ ಇತ್ತು. ಗೃಹ ಪಾಠಗಳನ್ನೂ ತಕ್ಕ ಮಟ್ಟಿಗೆ ಮಾಡಿಕೊಂಡು ಬರುತ್ತಿದ್ದಳು.ತರಗತಿಯಲ್ಲಿ ಸುಮ್ಮನೆ ಹೇಳಿದ್ದನ್ನು ಕೇಳುತಿದ್ದಳುತರಲೆ ತಾಪತ್ರಯದ ದೂರು ಇರಲಿಲ್ಲ.ನಮ್ಮ ಮುಖ್ಯೋಪಾಧ್ಯಾಯರನ್ನು ಕರೆದು ವಿಚಾರಿಸಿದೆ.
ವೀಣಾ ,ಬುದ್ದಿವಂತೆ. ಗಲಾಟೆಯ  ಹುಡುಗಿಯಲ್ಲ . ಅವಳ ಅಕ್ಕ ವಾಣಿಯೂ  ನಮ್ಮ ಶಾಲೆಯ ವಿದ್ಯಾರ್ಥಿನಿಯಾಗಿದ್ದಳು. ಅವಳು ಹತ್ತನೆ ತರಗತಿಯಲ್ಲಿ  ಶಾಲೆಗೆ ಪ್ರಪ್ರಥಮ  ಸ್ಥಾನ ಪಡೆದ ಪ್ರತಿಭಾನ್ವಿತೆ. ಮನೆಯಲ್ಲಿಯೂ ಉತ್ತಮ ವಾತಾವರಣವಿದೆ. ತಂದೆ ತಾಯಿ ಇಬ್ಬರೂ ಸುಶಿಕ್ಷಿತರು. ತಾಯಿ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ. ತಂದೆಯೂ ಶಿಕ್ಷಕರು.ಇಬ್ಬರೆ ಹೆಣ್ಣು ಮಕ್ಕಳು . ಮನೆಯಿಂದ  ಅನುಕೂಲವಾಗಿಯೆ ಇದ್ದಾರೆ ಎಂ ಮಾಹಿತಿ  ಅವರಿಂದ   ದೊರೆಯಿತು
ನನಗೆ ಬುದ್ದಿವಂತ  ಹುಡುಗಿಗೆ ಒಮ್ಮಿಂದೊಮ್ಮೆ ಹೀಗೇಕೆ ಆಯಿತು ಎಂದು  ತಿಳಿಯದಾಯಿತು. ಅವಳನ್ನೆ ನನ್ನಲ್ಲಿಗೆ ಕರೆಸಿದೆ
ಏನಮ್ಮ ವಾಣಿ ನಿನಗೆ ಏನು ತೊಂದರೆ, ಏಕೆ ಬಹಳ ಕಡಿಮೆ ಅಂಕಗಳು ಬಂದಿವೆ.?
ಅವಳು ಮೌನವಾಗಿ ತಲೆ ತಗ್ಗಿಸಿ ನಿಂತಳು.
ತರಗತಿಯಲ್ಲಿನ ಪಾಠ  ನಿನಗೆ ಸರಿಯಾಗಿ ಕಲಿಯಲು ಸಮಸ್ಯೆಯಗಿದೆಯಾ?   ಪಾಠ ಚೆನ್ನಾಗಿ ಅರ್ಥವಾಗುವುದು ತಾನೆ ? ಬೇಕಾದರೆ ವಿಶೇಷ ಕಾಳಜಿ ವಹಿಸಲು ಹೇಳುವೆ,
ತೊಂದರೆ ಇಲ್ಲ  ಸಾರ್‌, ಎಲ್ಲರೂ ಮನ ಮುಟ್ಟುವಂತೆ ಪಾಠ ಮಾಡುತ್ತಾರೆ.ನಾನೂ ಮನೆಯಲ್ಲಿ ಓದುತ್ತೇನೆ. ಆದರೆ ಏಕೋ ಪರೀಕ್ಷೆ ಬಂದಾಗ ಬರೆಯಲೆ ಅಗುವುದಿಲ್ಲ. ಎಂದು ಅಳತೊಡಗಿದಳು.

ಅಳ ಬೇಡ.   ಪರಿಹಾರ ಹುಡಕೋಣ, ಶ್ರಮ ವಹಿಸಿ ಶ್ರದ್ಧೆಯಿಂದ ಆಭ್ಯಾಸ ಮಾಡಿದರೆ ಎಲ್ಲ ಸರಿಹೋಗುವುದು. ಮನೆಯಲ್ಲಿ ಓದಲು ಸಾಕಷ್ಟು ಸಮಯ ಇಲ್ಲದಿರಬಹುದು. ನಿಮ್ಮ ಅಪ್ಪ ಅಮ್ಮನನ್ನು ಕರೆದುಕೊಂಡು ಬಾ  ವಿಚಾರಿಸುವೆ,
 ನಮ್ಮ ತಂದೆ  ಕರೆದರೆ ಬರುತ್ತಾರೆ ಸಾರ್‌ , ಅಮ್ಮನಿಗೆ ಬರಲಾಗುವುದಿಲ್ಲ , ಎಂದಳು.
ಸರಿ , ನಿಮ್ಮ ಅಪ್ಪನನ್ನೆ ನಾಳೆ ಕರೆದುಕೊಂಡು ಬಾ , ಮಾತನಾಡೋಣ . ನೀನು ಯಾವುದಕ್ಕೂಗಾಬರಿಯಾಗಬೇಡ,  ಸಮಧಾನ ಮಾಡಿ ಕಳುಹಿಸಿದೆ.
ಮಾರನೆ  ದಿನ ಸಂಜೆ ಅವಳ ತಂದೆ ಬಂದರು.ಅವರು ಬಹು ಮೆದು ಸ್ವಭಾವದವರಂತೆ ಕಂಡರು. ಅವರಿಗೂ ಮಗಳು ತರಗತಿಯಲ್ಲಿ  ಹಿಂದೆ ಬಿದ್ದಿರುವುದು ಗೊತ್ತಿತ್ತು. ಅವರೊಬ್ಬರನ್ನೆ ಕೂಡಿಸಿಕೊಂಡು  ವಾಣಿಯ ಸಮಸ್ಯೆ  ಏನು ಎಂದು ಕೇಳಿದೆ. ಯಾವುದೆ ಸಮಸ್ಯೆ ಇಲ್ಲ.  ಅವಳು ಯಾವುದೆ ತರಲೆ  ಮಾಡದೆ ಸದಾ ಪುಸ್ತಕ ಹಿಡಿದೆ ಕೂತಿರುವಳು. ಮನೆಯಲ್ಲಿ  ಕೆಲಸವನ್ನೂ ಹೇಳುವುದಿಲ್ಲ, ಎಂದರು.
ಅಲ್ಲ ಸ್ವಾಮಿ ವಾಣೀ ದಡ್ಡಳಂತೂ ಅಲ್ಲ. ಮನೆಯಲ್ಲಿಯೂ ಚೆನ್ನಾಗಿ ಓದುತ್ತಿದ್ದಾಳೆ ಎಂದು ನೀವೆ ಹೇಳುತ್ತೀರಿ. ಇಷ್ಟು ದಿನ ೭೦ -೮೦%  ಅಂಕ ಪಡೆದವಳಿಗೆ ಈಗ ಯಾಕೆ ಪರೀಕ್ಷೆಯಲ್ಲಿ  ಸರಿಯಾದ ಅಂಕಗಳು ಬರುತ್ತಿಲ್ಲ ?
ಅದೇ ನಮಗೂ ಚಿಂತೆಯಾಗಿದೆ, ಅವಳು ಬಾಯಿ ಬಿಡುವುದೆ ಇಲ್ಲ.ಎಂದುತಲೆ ತಗ್ಗಿಸಿದರು.
ಹೆಣ್ಣು ಮಗು, ಏನು ತೊಂದರೆಯೋ ಏನೋ , ನಿಮ್ಮ ಮನೆಯವರನ್ನು  ಗಮನ ಕೊಡಲು  ತಿಳಿಸಿ. ತಾಯಿಯ ಎದುರಿಗೆ ಮನ ಬಿಚ್ಚಿ ಮಾತನಾಡಬಹುದು.
“ತಾಯಿ ಮಗಳು ಮಾತನಡುವುದು ಬಿಟ್ಟು  ಮೂರು ತಿಂಗಳ ಮೇಲಾಗಿದೆ”. ಅವರು ಉತ್ತರಿಸಿದರು
 ನನಗೆ ಸಮಸ್ಯೆ ಯಾಕೋ ಗಂಭೀರವಾಗಿದೆ ಎನಿಸಿತು.
ಇದೇನು ವಿಚಿತ್ರ ಮಗಳ ಜತೆ ಮಾತನಾಡುವುದಿಲ್ಲ ಎಂದರೆ ಏನರ್ಥ ? ನಾನು ತುಸು ಗಡುಸಾಗಿಯೆ ಕೇಳಿದೆ.
 “ನೋಡಿ  ಸಾರ್‌  , ನಮಗೆ ಇರುವುದೆ ಎರಡು ಹೆಣ್ಣು ಮಕ್ಕಳು. ಆಸ್ತಿ ಪಾಸ್ತಿ ಅಂತ ಏನೂ ಇಲ್ಲ. ನಾವು.ಇಬ್ಬರೂ ಕೆಲಸ ಮಾಡುತ್ತೇವೆ. ಜೀವನ ಆರಾಮಗಿದೆ. ನಮ್ಮ ಮನೆಯವರಿಗೆ ಮಕ್ಕಳನ್ನು ಚೆನ್ನಾಗಿ ಓದಿಸ ಬೇಕೆಂಬ ಆಶೆ. ಹಿರಿಯ ಮಗಳು ವೀಣಾ  ಎಸ್ ಎಸ್‌ ಎಲ್‌ ಸಿ ನಿಮ್ಮ ಶಾಲೆಯಲ್ಲಿಯೇ  ಓದಿದಳು. ಶಾಲೆಗೆ  ಫಸ್ಟ್ ಬಂದಿದ್ದಳು. ಅವಳನ್ನು ತಲೆಯ ಮೆಲೆ ಇಟ್ಟುಕೊಂಡು ಕುಣಿದೆವು. ಒಳ್ಳೆ ಕಾಲೇಜಿಗೆ ಡೊನೇಷನ್‌ ಕೊಟ್ಟು ಪಿ ಯು.ಸಿ ಸೇರಿಸಿದೆವು ಟ್ಯೂಷನ್ ಹೇಳಿಸಿದೆವು. ಇಂಜನಿಯರ್‌ ಮಾಡಬೇಕೆಂದು ನಮ್ಮವಳ ಆಶೆ. ಆದರೆ ಅವಳು ಬರಿ ಸೆಕೆಂಡ್‌ ಕ್ಲಾಸಿನಲ್ಲಿ ಪಾಸಾದಳು. ಈಗ ಬಿಎಸ್ಸಿ ಕೊನೆ ವರ್ಷ. ಅದಕ್ಕೆ ಅವಳ ತಾಯಿಗೆ  ತುಂಬ  ನಿರಾಶೆಯಾಯಿತು ಅವಳ ಜತೆ ಮಾತೇ ಆಡುವುದಿಲ್ಲ. ಇವಳಾದರೂ ಚೆನ್ನಾಗಿ ದಲಿ ಎಂದು ಅವರ ಹಂಬಲ ಆದರೆ ಇವಳಿಗೂ  ಹತ್ತನೆ ತರಗತಿಗೆ ಬಂದ ಕೂಡಲೆ ಏನಾಯಿತೋ ಏನೊ   ಮೊದಲ ತಿಂಗಳ ಪರೀಕ್ಷೆಯಲ್ಲಿಯೇ ಕಡಿಮೆ ಅಂಕ ಪಡೆದಳು ನಮ್ಮವರು ಕೋಪಗೊಂಡರು. ಅವಳನ್ನು ದಂಡಿಸಿದರು.ವೀಣಾ ಆದರೂ ಸಮಾಧಾನವಾಗಿ  ಮಾತನಾಡಿ  ಅವರಿಗೆ ಭರವಸೆ ನೀಡಲಿಲ್ಲ. ಅವರು ಈ ಮಕ್ಕಳಿಂದ  ಏನೂ ಬಯಸುವುದು ಬೇಡ. ನಮ್ಮ ಕರ್ಮ. ಇದ್ದಷ್ಟು ದಿನ ದುಡಿಯೋಣ. ಆಮೇಲೆ ದೇವರಿಟ್ಟಂತೆ ಆಗಲಿ ಎಂದು ಅವರ ಜತೆ ಮಾತನಾಡುವುದನ್ನೆ ಬಿಟ್ಟರು.ನಾನು ಏನು ಹೇಳಿದರೂ ಸಮಾಧಾನ ಮಾಡಿಕೊಂಡಿಲ್ಲಹೀಗಾಗಿ ಮನೆಯಲ್ಲಿ ಮಕ್ಕಳ ಜತೆ ನಾನೊಬ್ಬನೆ ಮಾತನಾಡುವುದು. ಜತೆಗೆ ವೀಣಾಳ ಪ್ರಗತಿಯೂ ದಿನೇ ದಿನೇ ಇಳಿಮುಖ ವಾಗುತ್ತ  ಸಾಗಿದೆ.ನನಗೆ ದಿಕ್ಕೆ ತೋಚದಾಗಿದೆ “, ಹಲುಬಿದರು
ನನಗೆ ವೀಣಾಳ ಸಮಸ್ಯೆಯ ಮೂಲ ಇರುವುದೆಲ್ಲಿ ಎಂ  ಸುಳಿವು ಸಿಕ್ಕಿತು.ಅವಳನ್ನು ಛೇಂಬರಿಗೆ ಕರೆಸಿದೆ.
ವೀಣಾ , ನಿಜ ಹೇಳು . ನೀನು ನಿಮ್ಮತಾಯಿಯ ಜತೆ ಮಾತನ್ನು ಆಡುವದಿಲ್ಲ.ಹೌದಾ ?
ಅವಳು ತಲೆ ಎತ್ತದೆ ಹಾಗೆ ನಿಂತಿದ್ದಳು. ನಿಮ್ಮ ತಂದೆ ಎಲ್ಲ ತಿಳಿಸಿದ್ದಾರೆ . ಸಂಕೋಚ ಬೇಡ. ನೀನು ಮಾಡುತ್ತಿರುವುದು ಸರಿಯಾ ? ಅಮ್ಮನನ್ನು ಏಕೆ ಮಾತನಾಡಿಸುವುದಿಲ್ಲ ? ಪ್ರಶ್ನಿಸಿದೆ.
ಅವರೆ ನನ್ನನ್ನು ಮಾತನಾಡಿಸ ಬೇಡ ಎಂದು ಹೇಳಿದ್ದಾರೆ. ನನಗೆ ಆಶೆ ಇದೆ. ಆದರೆ ಭಯ.ಕೈನಲ್ಲಿ  ಪುಸ್ತಕ ಇದ್ದರೂ  ಯಾವಾಗಲೂ  ಅದೆ ಯೋಚನೆ. ಎಂದಳು.
ಏನೋ ಕೋಪದಲ್ಲಿ ಹಾಗಂದಿರಬಹುದು. ಅದನ್ನು ಮರೆಯಬೇಕು. ನೀನು ಫಸ್ಟ್ ಕ್ಲಾಸ್‌ ಪಾಸಾದರೂ ಅವರ ಮಗಳು, ಅಕಸ್ಮಾತ್‌  ಅಗದಿದ್ದರೂ  ಅವರ ಮಗಳೆ . ಸಿಟ್ಟು ಸೆಡವುಗಳಿಂದ ಯಾರಿಗೂ ನೆಮ್ಮದಿ ಇರುವುದಿಲ್ಲ್ಲ.ನಗುನಗುತ್ತಾ ಇರಬೆಕು . ಒಪ್ಪಿಗೆ ತಾನೆ ? ಕೇಳಿದೆ.
ಅವರು ಹೇಗೆ ಹೇಳಿದರೆ ಹಾಗೆ,  ತಲೆ ಯಾಡಿಸಿದಳು 
ಮಾರನೆ ದಿನ ವೀನಾಳ ತಾಯಿಯನ್ನು ಕರೆಸಿದೆ. ಅವರು ಸಂಕೋಚದಿಂದ ಬಂದು ಕುಳಿತರು. “ಮೆಡಮ್‌ ,ನೀವು ನೂರಾರು ಮಕ್ಕಳಿಗೆ ಪಾಠ ಹೇಳುವವರು.ನಿಮಗೆ ತೀಳಿಯದ್ದು ಏನಿದೆ. ಮಗಳ ಮೇಲಿನ ನಿಮ್ಮ ಮಮತೆ ನನಗೆ ಅರ್ಥ ವಾಗಿದೆ.  ಮಗಳು ಛಲ ಹಿಡಿದು ಚೆನ್ನಾಗಿ ಓದಲಿ ಎಂಬ ಒಳ್ಳೆಯ ಉದ್ದೇಶದಿಂದ ಅವಳ ಜತೆ ಮಾತನಾಡುತ್ತಿಲ್ಲ.  ಅದರೆ ಅದರ ಪರಿಣಾಮ ನೀವು ಅಂದುಕೊಂಡದ್ದಕ್ಕೆ ವಿರುದ್ಧ ವಾಗಿದೆ. ಅವಳು ಮನದಲ್ಲೆ  ಕೊರಗುತ್ತಿರುವಳು. ಅದರಿಂದ. ಪಾಠ ಪ್ರವಚನ ತಲೆಗೆ ಹತ್ತುತ್ತಿಲ್ಲ. ಹೀಗೆಯೆ ಮುಂದುವರಿದರೆ ಫೇಲಾದರೂ ಅಶ್ಚರ್ಯವಿಲ್ಲ. ಅವಳ  ಇಂಜನಿಯರ್‌ ಆದರೆ ಮಾತ್ರ ಜೀವನ ಸಾರ್ಥಕ ಎನ್ನುವುದು ಸರಿಯಲ್ಲ. ಅಲ್ಲದೆ ಮಕ್ಕಳು ಒಳ್ಳೆಯರಾಗುವುದು ಮುಖ್ಯ. ಬರಿ ಪರೀಕ್ಷಾ ಫಲಿತಾಂಶ  ಎಲ್ಲ  ಅಲ್ಲ.  ಹಾಗೆಯೆ  ಉತ್ತಮ ಫಲಿತಾಂಶ   ಬರಲು ಹಲವು ಹನ್ನೊಂದು ಕಾರಣ ಇರಬಹುದು. ಅದೊಂದೆ  ಜೀವನ  ಅಲ್ಲ. ಹುಡುಗಿ ಬಹಳ ಮನಸ್ಸಿಗೆ ಹಚ್ಚಿಕೊಂಡಿದ್ದಾಳೆ. ಪ್ರಿತಿಯಿಂದ ಮಾತನಾಡಿಸಿ. ಎಲ್ಲ ಸರಿ ಹೊಗುವುದು, ಎಂದೆ
ಅವರ ಕಣ್ಣು ತುಂಬಿ ಬಂತು.  ನೀವೇ  ನಮ್ಮ ಹುಡುಗಿಯ ಬಗ್ಗೆ  ಇಷ್ಟು  ಕಳಕಳಿ ತೋರಿಸುತ್ತಿರುವಿರಿ .ಖಂಡಿತ ಇನ್ನು ನಾನು ಆವೇಶದಿಂಧ ವರ್ತಿಸುವುದಿಲ್ಲ.  ಎಲ್ಲ ನಗು ನಗುತ್ತಾ ಇರುತ್ತೇವೆ. ನಮ್ಮ ಯಜಮಾನರೂ  ಹೇಳಿದರು ಯಾಕೊ ನನಗೆ  ಮನಸ್ಸಿಗೆ ತಟ್ಟಿರಲಿಲ್ಲ.ನಿಮ್ಮ ಮಾತಿಗೆ ನನ್ನ ಒಪ್ಪಿಗೆ ಇದೆ. ಇಂದಿನಿಂದ ನಮ್ಮ ಮನೆಯ ವಾತಾವರಣ ಬದಲಾಗುವುದು.ವೀಣಳನ್ನು ಕರಸಿ ಈಗಲೆ  ಮಾತನಾಡುವೆ .” ಎಂದರು .
ಜವಾನ ಹೋಗಿ ತರಗತಿಯಲ್ಲಿದ್ದ ವೀಣಾಳನ್ನು ಕರೆದು ತಂದ. ಅವಳು ಹಿಂಜರಿಕೆಯಿಂದಲೆ ಬಂದಳು. ವೀಣಾಳ ತಾಯಿ ಕುಳಿತಿದ್ದವರು ಎದ್ದು ನಿಂತು,
’ “ವೀಣಾ! ನೀನು ಪರೀಕ್ಷೆಯ ಚಿಂತೆ ಮಾಡಬೇಡ. ನಿನ್ನ ಪ್ರಯತ್ನ  ನೀನು ಮಾಡು.   ಫಲಿತಾಂಶ ಏನಾದರೂ ಸರಿ.   ಚಿಂತೆ ಬೇಡ .ನಿನ್ನ ಜತೆ  ನಾವಿದ್ದೇವೆ”
’ ಎನ್ನುತ್ತಾ ಅವಳನ್ನು ತಬ್ಬಿಕೊಂಡರು. ಅವಳ  ಕಣ್ಣಲ್ಲೂ ನೀರಾಡಿತು.
ಆ ವರ್ಷವೂ ನಮ್ಮ ಶಾಲೆಗೆ ನೂರಕ್ಕೆ ನೂರು ಫಲಿತಾಂಶ ಬಂದಿತು.ವೀಣಾಳು  ಶೇಕಡ ಎಂಬತ್ತು ಅಂಕ ಪಡೆದಿದ್ದಳು.