Tuesday, August 21, 2012

ಧಾರವಾಡದಲ್ಲಿ ದಮ್ಮು ಹಿಡಿದು ಓದಿದ್ದು


http://kendasampige.com/images/trans.gif
ಬಿಎಡ್‌ ಫಲಿತಾಂಶ ಬಂದು ಹತ್ತು ದಿನ ಆಗಿರಬಹುದು. ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪತ್ರ ಬಂದಿತು. ನನಗೆ ಬಿಎಡ್‌ನಲ್ಲಿ Rank ಬಂದಿರುವುದರಿಂದ ಯುನಿವರ್ಸಿಟಿ ಶಿಕ್ಷಣ ಕಾಲೇಜಿನಲ್ಲಿ ಎಂಎಡ್‌ ಕೋರ್ಸಿಗೆ ವಿದ್ಯಾರ್ಥಿವೇತನ ನೀಡಿ ನಿಯುಕ್ತಿಯಾಗಿತ್ತು. ಖರ್ಚುವೆಚ್ಚ ಎಲ್ಲ ಸರ್ಕಾರದ್ದೆ. ಬಹಳ ಖುಷಿಯಾಯಿತು. ಧಾರವಾಡಕ್ಕೆ ಹೋಗಿ ಕಾಲೇಜಿನಲ್ಲಿ ವಿಚಾರಿಸಿದೆ. ಕಾಲೇಜು ಶುಲ್ಕ ಹಾಸ್ಟೆಲ್‌ ವೆಚ್ಚ ಜತೆಗೆ ಕೈಗೆ ತುಸು ಹಣವೂ ಸಿಗುತಿತ್ತು. ಒಂಬತ್ತು ತಿಂಗಳು ಧಾರವಾಡದಲ್ಲೆ ಇರಬೇಕಿತ್ತು. ಇಲಾಖೆಯಲ್ಲಿ ವಿಚಾರಿಸಿದಾಗ ಹೈಸ್ಕೂಲು ಶಿಕ್ಷಕರಿಗೆ ಬಿಎಡ್‌ ಪದವಿ ಅಗತ್ಯ ಆದರೆ ಎಂಎಡ್‌ ಬೇಕಿಲ್ಲ. ಆದ್ದರಿಂದ ರಜೆ ನೀಡಲಾಗುವುದಿಲ್ಲ. ಬೇಕೆಂದರೆ ವೇತನ ರಹಿತ ರಜೆ ಪಡೆದು ಹೋಗಬಹುದು, ಎಂದರು. ಆದರೆ ಬರುವ ಸಂಬಳ ಬಿಟ್ಟು ಹೋಗುವ ಸ್ಥಿತಿಯಲ್ಲಿ ನಾನಿರಲಿಲ್ಲ. ಅದಲ್ಲದೆ ಹೊಸದಾಗಿ ಮದುವೆಯಾಗಿತ್ತು. ಈಗಾಗಲೆ ಒಂದು ವರ್ಷ ಬಿ.ಎಡ್‌ಗಾಗಿ ಬಳ್ಳಾರಿಗೆ ಹೋಗಿ ವಿರಹದ ಬೇಗೆ ಅನುಭವಿಸಿದ್ದೆ. ಆದ್ದರಿಂದ ಈ ಅವಕಾಶವನ್ನು ಬಳಸಿಕೊಳ್ಳಲಿಲ್ಲ. ಹಿರಿಯರೊಬ್ಬರು ಎಂ.ಎಡ್‌ ಮಾಡಿದರೆ ಅಂತಹ ಅವಕಾಶವೇನೂ ಇಲ್ಲ. ಎಂಎ ಮಾಡಿದರೆ ಎರಡು ವಾರ್ಷಿಕ ಬಡ್ತಿ ಕೊಡುವರು ಎಂದರು. ಅದೂ ಪಾಠ ಮಾಡುವ ವಿಷಯದಲ್ಲೆ ಸ್ನಾತಕೋತ್ತರ ಪದವಿ ಪಡೆಯಬೇಕಿತ್ತು. ನಾನು ವಿಜ್ಞಾನದ ಪದವೀಧರ. ಬಾಹ್ಯವಾಗಿ ಎಂಎಸ್ಸಿ ಮಾಡುವ ಅವಕಾಶ ಆಗಿನ್ನೂ ಇರಲಿಲ್ಲ. ಅದಕ್ಕೆಂದೆ ಇಂಗ್ಲಿಷ್‌ ಎಂಎ ಆಯ್ದುಕೊಂಡೆ. ಕರ್ನಾಟಕ ವಿಶ್ವ ವಿದ್ಯಾಲಯದ ಪ್ರಸ್ಪೆಕ್ಟಸ್‌ ನೋಡಿದಾಗ ಪಠ್ಯ ವಿಷಯಗಳು ಬಹುತೇಕ ನಾನು ಓದಿದ ಪುಸ್ತಕಗಳೆ ಆಗಿದ್ದವು. ಒಂದು ರೀತಿಯಲ್ಲಿ ಧೈರ್ಯ ಬಂದಿತು. ನಂತರ ಗೊತ್ತಾಯಿತು. ಆ ಕಾಲದಲ್ಲಿ ಇಂಗ್ಲಿಷ್‌ ಸ್ನಾತಕೋತ್ತರ ಪದವೀಧರರ ಕೊರತೆ ಬಹಳ ಇತ್ತು. ನಮ್ಮ ಜಿಲ್ಲೆಯ ಪದವಿ ಕಾಲೇಜುಗಳಲ್ಲಿ ಎಲ್ಲ ಇಂಗ್ಲಿಷ್‌ ಪ್ರಾಧ್ಯಾಪಕರೂ ಕೇರಳದವರೆ. ಇನ್ನು ಪದವಿ ಪೂರ್ವ ಕಾಲೇಜುಗಳಲ್ಲಂತೂ ಖಾಲಿಖಾಲಿ. ಒಳ್ಳೆಯ ಅವಕಾಶವಿದೆ ಎಂದು ಅನೇಕರು ಇಂಗ್ಲಿಷ್‌ ಎಂಎ ಮಾಡಲು ನೋಂದಾವಣಿ ಮಾಡಿಸಿದ್ದರು.
ನಮ್ಮ ಸುತ್ತಮುತ್ತಲಿನವರೆ ನಾಲಕ್ಕು ಜನರಿದ್ದೆವು. ಅವರು ಪ್ರತಿವಾರ ಬಳ್ಳಾರಿಗೆ ಹೋಗಿ ಅಲ್ಲಿ ಪ್ರೊ. ಶೇಷಾದ್ರಿ ಅವರಿಂದ ಮಾರ್ಗದರ್ಶನ ಪಡೆಯುತಿದ್ದರು. ಶೇಷಾದ್ರಿಯವರು ಹಿಂದುಳಿದ ಬಡ ಕುಟುಂಬದವರು. ಪದವಿಯಾದೊಡನೆ ಕರ್ನಾಟಕ ವಿದ್ಯುತ್‌ ಮಂಡಲಿಯಲ್ಲಿ ಉದ್ಯೋಗಿಯಾದರೂ. ಅವರು ಬಹಳ ಪರಿಶ್ರಮಿ. ಬಾಹ್ಯವಾಗಿಯೆ ಇಂಗ್ಲಿಷ್‌ ಎಂಎ ಮಾಡಿಕೊಂಡರು. ನಂತರ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತಿದ್ದರು. ಅವರು ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಕಾರಣ ಜನಜೀವನಕ್ಕೆ ಹಣಕಾಸು ಹತ್ತಿರವಾದ ವಿಷಯ. ಅವರ ತರಗತಿ ಎಂದರೆ ಗ್ರಾಮೀಣ ಅಭಿವೃದ್ಧಿಯ ಮುನ್ನೋಟವಾಗಿರುತಿತ್ತು. ಅವರು ಉತ್ತಮ ಶಿಕ್ಷಕರೆಂದು ಹೆಸರುವಾಸಿ. ಅವರ ಸಾಮಾಜಿಕ ಕಳಿಕಳಿ ಮೆಚ್ಚುವಂತಹದು. ತಾವು ಹೇಗೆ ಉನ್ನತ ಶಿಕ್ಷಣ ಪಡೆಯಲು ಕಷ್ಟಪಟ್ಟರು ಎಂಬದು ಅವರ ನೆನಪಲ್ಲಿ ಅಚ್ಚಳಿಯದೆ ಉಳಿದಿತ್ತು. ಅದಕ್ಕೆಂದೆ ಯಾರೆ ಇಂಗ್ಲಿಷ್ ಎಂಎ ಮಾಡಲು ಮುಂದಾದರೆ ಅವರಿಗೆ ಉಚಿತ ಮಾರ್ಗದರ್ಶನ ಮಾಡುವರು. ಬಳ್ಳಾರಿಯ ಅವರ ಮನೆಯಲ್ಲಿ ರಜಾ ದಿನಗಳಂದು ಈ ರೀತಿಯ ಶಿಕ್ಷಣಾಸಕ್ತರು ಸೇರುತಿದ್ದರು. ನಾನೂ ಅವರ ಜತೆ ಒಂದಾದೆ. ಸುಮಾರು ೧೯ ಜನರಿದ್ದೆವು, ಅದರಲ್ಲಿ ಶಿಕ್ಷಕರು ಅರ್ಧ ಜನರಾದರೆ ಉಳಿದವರು ಅದೆ ಪದವಿ ಮುಗಿಸಿದವರು. ಅವರಿಗೆ ಇಂಗ್ಲಿಷ್ ಪ್ರಧಾನ ವಿಷಯವಾಗಿರದೆ ಇರುವುದರಿಂದ ಎಂಎಗೆ ನೇರ ಪ್ರವೇಶ ಸಿಗುತ್ತಿರಲಿಲ್ಲ. ಅದಕ್ಕೆ ಖಾಸಗಿಯಾಗಿ ಅಭ್ಯಾಸ ಮಾಡಲು ಬರುತ್ತಿದ್ದರು.
ಅವರು ಪ್ರಚಂಡ ವಾಗ್ಮಿ. ಜೋಗದ ಜಲಪಾತದಂತೆ ಅವರ ವಾಗ್ಝರಿ. ಜತೆಗೆ ವಿಚಾರವಾದಿ. ಕಂದಾಚಾರ ಮೂಢನಂಬಿಕೆಗಳ ವಿರೋಧಿ. ಯುವಜನರಲ್ಲಿ ಅವರು ಮಾತು ಬೆಲ್ಲದ ಅಚ್ಚು. ಅವರ ಪ್ರಭಾವ ಜಿಲ್ಲೆಯಲ್ಲಿ ಬಹಳವಾಗಿತ್ತು. ಯಾವುದೆ ಸಮಾರಂಭಕ್ಕೂ ಅವರು ಕಳಶ ಪ್ರಾಯ. ಅವರು ನಿತ್ಯ ವಿದ್ಯಾರ್ಥಿ. ನಮಗೆಲ್ಲ ಮಾರ್ಗದರ್ಶನ ನೀಡಲು ಅಧ್ಯಯನ ಮಾಡಿ ಸತತ ನಾಲಕ್ಕು ತಾಸು ಪಾಠ ಮಾಡುತಿದ್ದರು. ಅವರ ತರಗತಿಗಳನ್ನು ತಪ್ಪಿಸಿಕೊಂಡರೆ ಏನೋ ಕಳೆದುಕೊಂಡ ಅನುಭವ. ನಾವು ಕೆಲವರು ನಲವತ್ತು-ಐವತ್ತು ಮೈಲು ದೂರದಿಂದ ಅವರ ಪಾಠ ಕೇಳಲು ಹೋಗುತ್ತಲಿದ್ದೆವು. ಕಾರಣ ಇಂಗ್ಲಿಷ್ ಮತ್ತು ಅರ್ಥಶಾಸ್ತ್ರ ಎರಡೂ ವಿಷಯಗಳಲ್ಲೂ ನಿಷ್ಣಾತರು. ಸ್ನಾತಕೋತ್ತರ ಪದವಿ ಪಡೆಯುವುದು ಆ ಕಾಲದಲ್ಲಿ ಬಹಳ ಕಠಿಣವಾಗಿತ್ತು. ಪ್ರಥಮ ದರ್ಜೆ ಬಂದರೆ Rank ಬಂದಂತೆ. ಎಷ್ಟೋ ಸಲ ಬರಿ ದ್ವಿತೀಯ ದರ್ಜೆ ಬಂದರೂ ಸಾಕಿತ್ತು ಆದರೆ ಬಹಳ ಜನರಿಗೆ ಅದೂ ಬರುತ್ತಿರಲಿಲ್ಲ. ವಿಶೇಷವಾಗಿ ಪದವಿ ಪೂರ್ವಕಾಲೇಜುಗಳಲ್ಲಿ ಪಾಸಾದವರು ಸಿಕ್ಕರೂ ಸಾಕು ಎನ್ನುವ ಪರಿಸ್ಥಿತಿ ಇತ್ತು.
ಅವರ ಪ್ರಖರ ಬುದ್ಧಿಶಕ್ತಿ ಮತ್ತು ಮರಳು ಮಾಡುವ ಭಾಷಣ ಕಲೆಯ ಕೀರ್ತಿ ವಿಧಾನ ಸೌಧದವರೆಗೂ ಹರಡಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಶ್ರೀ ಗುಂಡೂರಾಯರು ಸಮಾರಂಭ ಒಂದರಲ್ಲಿ ಇವರ ವಾಗ್ವೈಖರಿಗೆ ಮನ ಸೋತರು. ತಮ್ಮ ಪತ್ರಿಕಾ ಸಲಹೆಗಾರರಾಗಿ ವಿಶೇಷ ಅಧಿಕಾರಿಯ ಹುದ್ದೆಯಲ್ಲಿ ಕೆಲಸ ಮಾಡಲು ವಿನಂತಿಸಿದರು. ಇವರು ಹಿಂದು ಮುಂದು ನೋಡಿದರು. ಆದರೆ ಆತ್ಮೀಯರು ಸುವರ್ಣಾವಕಾಶ ಕೈ ಬೀಸಿ ಕರೆದಿದೆ ಬಿಡಬಾರದು ಎಂದು ಒಪ್ಪಿಕೊಳ್ಳಲು ಒತ್ತಾಯ ಮಾಡಿದರು. ಕಾಲೇಜಿನ ವ್ಯವಸ್ಥಾಪಕ ವರ್ಗಕ್ಕೂ ಸಂತೋಷ. ನಮ್ಮವರೊಬ್ಬರು ಅಧಿಕಾರ ಕೇಂದ್ರದ ಹತ್ತಿರವಾಗುವರಲ್ಲ ಎಂದು. ಈ ಕಾಲದಲ್ಲೂ ಯೋಗ್ಯರಿಗೆ ಬೆಲೆ ಬಂತಲ್ಲ ಎಂದು ಅವರ ಅಭಿಮಾನಿಗಳು ಸಂಭ್ರಮಿಸಿದರು. ಆದರೆ ಆ ಸಂತೋಷ ಮೂರೆ ತಿಂಗಳಲ್ಲಿ ಮಣ್ಣು ಪಾಲಾಯಿತು. ಅಲ್ಲಿನ ವಾತಾವರಣ ಅವರಿಗೆ ಉಸಿರುಕಟ್ಟಿಸಿತು. ವ್ಯವಸ್ಥೆಯ ಭಾಗವಾಗಿ ಅವರು ಬೆಳೆಯುವ ಮಾತು ದೂರ ಉಳಿಯಿತು, ಅದನ್ನು ನೋಡಿಕೊಂಡು ಸುಮ್ಮನೆ ಸಹಿಸುವ ತಾಳ್ಮೆಯೂ ಅವರಿಗೆ ಇರಲಿಲ್ಲ. ರಾಜಿನಾಮೆ ಸಲ್ಲಿಸಿ ಪುನಃ ಬಳ್ಳಾರಿಗೆ ಬಂದಿಳಿದರು. ಅವರಿಗೆ ಮುಖ್ಯಮಂತ್ರಿಗಳ ಕಚೇರಿ ಮುಳ್ಳ ಹಾಸಿಗೆಯಾಗಿತ್ತು. ಬಹುತೇಕರು ಕನಸಲ್ಲೂ ಕಾಣದ ಅವಕಾಶವನ್ನು ಕೈಯಾರೆ ದೂಡಿ ಮತ್ತೆ ಪಾಠಮಾಡಲು ಕಾಲೇಜಿಗೆ ಬಂದಾಗ ಎಲ್ಲರಿಗೂ ಆಶ್ಚರ್ಯ. ವ್ಯವಹಾರ ಜ್ಞಾನವಿಲ್ಲದವ ಎಂದು ಹೀಗಳೆದವರು ಹಲವರು. ಆದರೆ ಅವರ ಅಭಿಮಾನಿಗಳ ದೃಷ್ಟಿಯಲ್ಲಿ ಅವರ ಔನ್ನತ್ಯ ಇನ್ನೂ ಹೆಚ್ಚಾಯಿತು. ಅವರು ಹೇಳಿದ್ದು ನನಗೆ ಆರೋಗ್ಯ ಸರಿ ಇರಲಿಲ್ಲ ಅದಕ್ಕೆ ಬಂದೆ ಎಂದು. ಆದರೆ ನಿಜವಾದ ಕಾರಣ ಬೇರೆಯೆ ಇದ್ದಿತು. ಯಥಾರೀತಿ ಆಸಕ್ತರಿಗೆ ಮಾರ್ಗದರ್ಶನ ಮತ್ತು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ ಸುಧಾರಣೆಗೆ ಕೈ ಜೋಡಿಸುವ ಕೆಲಸ ಮುಂದುವರಿಸಿದರು. ಬಳ್ಳಾರಿ ಜಿಲ್ಲೆಯ ಬುದ್ಧಿಜೀವಿಗಳಲ್ಲಿ ಅವರದು ಎತ್ತರದ ಸ್ಥಾನ. ಬಹುಶಃ ಅವರ ನಡೆ ಒಂದು ರೀತಿಯಲ್ಲಿ ಅನೇಕ ಯುವ ಜನರಿಗೆ ವರವಾಯಿತು. ಅವರಿಂದ ಸ್ಪೂರ್ತಿ ಪಡೆದು ಜೀವನದಲ್ಲಿ ಅನೇಕರು ಮುಂದೆ ಬಂದರು. ಕಲಿಯುವ ತುಡಿತ ಮತ್ತು ಕಲಿಸುವ ಮಿಡಿತ ಮೇಳೈಸಿದಾಗಲೆ ಉತ್ತಮ ಶಿಕ್ಷಕ ಒಡಮೂಡುವನು. ಅವರು ಅದಕ್ಕೆ ವೃತ್ತಿ ಜೀವನದಲ್ಲಿ ನನಗೆ ದಾರಿದೀಪವಾದರು.
ಅವರಲ್ಲಿಗೆ ವಾರವಾರವೂ ಹೋಗಿ ಬರುತ್ತಿದ್ದೆ. ನಂತರ ಜನವರಿಯಲ್ಲಿ ಎರಡು ತಿಂಗಳು ರಜೆ ಹಾಕಿ ಧಾರವಾಡಕ್ಕೆ ಹೋಗಿ ನೆಲಸಿದೆ. ಮೂರು ತಿಂಗಳು ವ್ರತ. ಕಡ್ಡಾಯ ಬ್ರಹ್ಮಚರ್ಯ. ಮನೆಯವರಿಗೂ ಪತ್ರವನ್ನು ಬರೆಯದಂತೆ ತಾಕೀತು ಮಾಡಿದ್ದೆ. ಮನಸ್ಸಿನ ಏಕಾಗ್ರತೆಗೆ ಭಂಗ ಬರಬಾರದೆಂದು ಎಲ್ಲ ಮುಂಜಾಗ್ರತೆ. ಅಲ್ಲಿ ಇಂಗ್ಲಿಷ್‌ ವಿಭಾಗದ ಕೆಲ ವಿದ್ಯಾರ್ಥಿಗಳು ಪರಿಚಯವಾದರು. ಅವರ ಸಹಾಯದಿಂದ ತರಗತಿಯಲ್ಲಿ ನಡೆಯುವ ಪಾಠಗಳ ವಿವರ ತಿಳಿಯಿತು. ಅಲ್ಲಿಯೂ ಒಳಗುಟ್ಟು ಇದೆ. ಪಠ್ಯಕ್ರಮದ ವ್ಯಾಪ್ತಿ ದೊಡ್ಡದು. ತರಗತಿಯಲ್ಲಿ ಎಲ್ಲವನ್ನೂ ಮಾಡಿಮುಗಿಸಲು ಆಗದ ಮಾತು. ಅವರು ಮುಖ್ಯವಾದವುಗಳಿಗೆ ಹೆಚ್ಚು ಒತ್ತು ಕೊಡುವರು. ಅದನ್ನು ಗಮನಿಸಿದರೆ ಸಾಕು. ಪರೀಕ್ಷೆಯಲ್ಲಿ ಅವು ಬಂದೆ ಬರುತ್ತಿದ್ದವು. ಆಗ ಪಾಠ ಮಾಡದೆ ಇರುವುದು ಬಂದಿದೆ ಎಂಬ ದೂರಿಗೆ ಅವಕಾಶವೂ ಇರುತ್ತಿರಲಿಲ್ಲ. ಅನೇಕ ಸಲ ಅವರು ಕೊಟ್ಟ ನೋಟ್ಸನ್ನು ಯಥಾರೀತಿ ಇಳಿಸಿದರೂ ಸಾಕಿತ್ತು  ಪಾಸಿಗೆ ದೋಖಾ ಇರಲಿಲ್ಲ. ಇಂಗ್ಲಿಷ್‌ ಡಿಪಾರ್ಟಮೆಂಟಿನಲ್ಲಿ ಪ್ರೊ.ನಾಯಕ್, ಪ್ರೊ. ಶಂಕರ ಮೊಕಾಶಿ ಮತ್ತು ಇನ್ನೊಬ್ಬ ಮೇಡಂ ಇದ್ದ ನೆನಪು. ಅನುಮತಿ ಪಡೆದು ಒಂದೆರಡು ತರಗತಿಗೂ ಹಾಜರಾಗಿದ್ದೆ. ಚಂಪಾ ಅದೇ ತಾನೆ ವಿದೇಶಕ್ಕೆ ತೆರಳಿದ್ದರು. ಚಂಪಾ, ಗಿರಡ್ಡಿ ಮತ್ತು ಪಟ್ಟಣಶೆಟ್ಟರು ಸೇರಿ ಹೊರ ತರುತಿದ್ದ ಸಂಕ್ರಮಣ ಪತ್ರಿಕೆ  ಜನಮನ ಸೆಳೆದಿತ್ತು. ದೇವೇಂದ್ರ ದೇಸಾಯಿ ಎಂಬ ಗೆಳೆಯನ ಜೊತೆಗೆ ಪಟ್ಟಣಶೆಟ್ಟಿಯವರ ಮನೆಗೆ ಹೋಗಿದ್ದ ನೆನಪು. ಅವನ ಜೊತೆಯಲ್ಲಿದ್ದಾಗಲೆ ಇಂಗ್ಲಿಷ್‌ ಎಂಎ ಓದುತಿದ್ದ  ಗುರುಪ್ರಸಾದ್‌  ಸಿಕ್ಕಿದ್ದರು. ಜಯಂತ ಕಾಯ್ಕಿಣಿ ಎಂಎಸ್‌ಸಿ ಮಾಡುತಿದ್ದರು. ಅವರ ಹಾಸ್ಟೆಲ್‌ಗೂ ಭೇಟಿ ನೀಡಿದ್ದೆ. ನಂತರ ಹಳ್ಳಿ ಸೇರಿ ಎಲ್ಲರ ಸಂಪರ್ಕ ಕಡಿಯಿತು.
ಆ ಸಮಯದಲ್ಲಿ ನಾನು ಧಾರವಾಡದ ಮಿಶನ್‌ ಕಾಂಪೌಂಡಿನಲ್ಲಿ ನನ್ನ ವಾಸ. ಅಲ್ಲಿ ಎಲ್ಲರೂ ಕ್ರಿಶ್ಚಿಯನ್ನರೆ. ಬಹುತೇಕರು ಮನೆಯ ಆವರಣದಲ್ಲೆ ನಾಲಕ್ಕಾರು ಕೋಣೆಗಳನ್ನು ಕಟ್ಟಿಸಿ ವಿದ್ಯಾರ್ಥಿಗಳಿಗೆ ಬಾಡಿಗೆ ಕೊಡುವರು. ಧಾರವಾಡ ವಿದ್ಯಾನಗರಿ. ಬಾಡಿಗೆಯಿಂದ ನಿಗದಿತ ಆದಾಯ ಖಚಿತವಾಗಿತ್ತು. ಅವರ ಒಂದು ವಿಶೇಷ ಗುಣವೆಂದರೆ ಉದಾರತೆ ಮತ್ತು ಮುಕ್ತತೆ. ಮನೆಯಿಂದ ದೂರವಿರುವ ವಿದ್ಯಾರ್ಥಿಗಳ ಬಗ್ಗೆ ತುಸು ಕಾಳಜಿಯನ್ನೂ ತೋರುತಿದ್ದರು ಯಾವುದಾದರೂ ಸಮಾರಂಭವಾದರೆ ಕರೆ ಬರುತಿತ್ತು. ಹೋಟಲಿನ ಊಟ, ಸ್ವಯಂ ಪಾಕಿಗಳಿಗೆ ಸಂತೋಷವೋ ಸಂತೋಷ. ಅಲ್ಲಿರುವಾಗ ನಮ್ಮ ಆವರಣದಲ್ಲೆ ಮದುವೆಯೊಂದಾಯಿತು. ಮಧ್ಯಾಹ್ನ ಚರ್ಚಿನಲ್ಲಿ ಮದುವೆ. ಸಂಜೆ ಮನೆಯಲ್ಲಿ ಕಾರ್ಯಕ್ರಮ. ಅಲ್ಲಿ ಹಿಂದೂ ಸಂಪ್ರದಾಯದಂತೆ ಕೆಲ ಆಚರಣೆಗಳು ನಡೆದವು. ನವ ದಂಪತಿಗಳ ಹೆಗಲ ಮೇಲೆ ನೊಗವನ್ನು ಸಾಂಕೇತಿಕವಾಗಿ ಇಟ್ಟದ್ದು ನೋಡಿ ಅಚ್ಚರಿಯಾಯಿತು. ಜತೆಗೆ ಬಂದವರೆಲ್ಲ ಅವರಿಗೆ ಹಾಲೆರೆದರು. ಅವರು ಮತಾಂತರವಾಗಿ ದಶಕಗಳೆ ಕಳೆದಿದ್ದರೂ ಹಿಂದಿನ ಅನೇಕ ಸಂಪ್ರದಾಯ ಪಾಲಿಸುವುದು ನೋಡಿ ಅಚ್ಚರಿಯಾಯಿತು. ನಂತರ ಗೊತ್ತಾಯಿತು. ಮದುವೆಯಲ್ಲೂ ಸಹಾ ಹಿರಿಯರು ತಮ್ಮವರಿಗೆ ಆದ್ಯತೆ ಕೊಡುವರು. ಅಂದರೆ ಬ್ರಾಹ್ಮಣ ಕ್ರಿಶ್ಚಿಯನ್‌, ಲಿಂಗಾಯಿತ ಕ್ರಿಶ್ಚಿಯನ್ ಇತ್ಯಾದಿ. ಸಾಧ್ಯವಾದಷ್ಟೂ ದಲಿತ ಕ್ರಿಶ್ಚಿಯನ್‌ರೊಡನೆ ಕೊಟ್ಟು ಕೊಳ್ಳುವುದು ಇರಲಿಲ್ಲ. ಹೊಕ್ಕು ಬಳಕೆ ಕಡಿಮೆ. ಅದನ್ನು ನೋಡಿದ ಮೇಲೆ ಅನ್ನಿಸಿತು ಹಳೆಯ ವಾಸನೆ ಹೋಗಲು ಬಹಳ ಸಮಯ ಬೇಕು. ಈಗ ಬಹುತೇಕ ಎಲ್ಲರೂ ಸುಧಾರಿಸಿರುವರು. ಮದುವೆಗೆ ಇರುವುದು ಎರಡೆ ಜಾತಿ. ಗಂಡು ಹೆಣ್ಣು ಆಗಿದ್ದರೆ ಸಾಕು, ಅವರಿಬ್ಬರೂ ಮದುವೆ ಆಗಬಹುದು. ವಿದೇಶಗಳಲ್ಲಿ ಇನ್ನೂ ಒಂದು ಹೆಜ್ಜೆ ಮುಂದು. ಗಂಡು, ಹೆಣ್ಣು ಎಂಬ ತಾರತಮ್ಯವೂ ಇಲ್ಲ. ಯಾರನ್ನಾದರೂ ಕಾನೂನು ಪ್ರಕಾರ ಮದುವೆಯಾಗಬಹುದು. ಮಾನವರಾಗಿದ್ದರೆ ಸರಿ. ಐವತ್ತೆ ವರ್ಷದಲ್ಲಿ ಎಂತಹ ಬದಲಾವಣೆ!
ನನಗೆ ಕೇರಳದ ವಿದ್ಯಾರ್ಥಿಗಳಿಂದ ತುಂಬ ಸಹಾಯವಾಯಿತು. ಅವರೆಲ್ಲರೂ ಪಾದ್ರಿಗಳು. ಸ್ನಾತಕೋತ್ತರ ಪದವಿಗಾಗಿ ಇಲ್ಲಿ ಬಂದಿದ್ದರು. ಬಹಳ ಶಿಸ್ತಿನ ಜನ. ಒಂದು ದೊಡ್ಡ ಮನೆ ಮಾಡಿ ಹತ್ತಾರು ಜನ ಒಟ್ಟಿಗೆ ಇದ್ದರು. ಅದು ಹೇಗೋ ಅವರ ಪರಿಚಯವಾಯಿತು. ಶಿಕ್ಷಕನಾಗಿದ್ದುಕೊಂಡು, ನವ ವಿವಾಹಿತನಾದರೂ ಹೆಚ್ಚಿನ ಜ್ಞಾನಸಾಧನೆಗಾಗಿ ಓದುತ್ತಿರುವುದು ಅವರಿಗೆ ಮೆಚ್ಚಿಗೆಯಾಯಿತು. ಅವರು ತರಗತಿಯಲ್ಲಿನ ಪಾಠ ಪ್ರವಚನಗಳ ಎಲ್ಲ ಮಾಹಿತಿಗಳನ್ನೂ ಎಗ್ಗಿಲ್ಲದೆ ನೀಡಿದರು. ಹಾಗಾಗಿ ನನಗೆ ಪರೀಕ್ಷೆ ಎದುರಿಸುವುದು ಸರಳವಾಯಿತು.
ಅಲ್ಲಿ ನನ್ನ ಜೊತೆ ಹೊಸಪೇಟೆಯ ಇನ್ನೊಬ್ಬ ಶಿಕ್ಷರೂ ಇದ್ದರು. ನನಗಿಂತ ಹತ್ತಾರು ವರ್ಷ ದೊಡ್ಡವರು ಆಗಲೆ ಇತಿಹಾಸದಲ್ಲಿ ಎಂಎ ಮಾಡಿದ್ದರು. ಅವರ ಛಲ ಒಂದೆ. ಹೇಗಾದರೂ ಇಂಗ್ಲಿಷ್‌ ನಲ್ಲೂ ಕನಿಷ್ಠ ದ್ವಿತೀಯದರ್ಜೆಯಲ್ಲಿ ಪಾಸಾಗುವುದು. ಹಗಲುರಾತ್ರಿ ನಿದ್ದೆಗೆಟ್ಟು ಓದುತ್ತಿದ್ದರು, ಫ್ಲಾಸ್ಕನಲ್ಲಿ ಸದಾ ಬಿಸಿ ಬಿಸಿ ಚಹಾ ಜತೆಗೆ ಕೈನಲ್ಲಿ ಹೊಗೆಯಾಡುವ ಬೀಡಿ. ಅತಿಯಾಗಿ ಕಣ್ಣೊತ್ತರಿಸಿದರೆ ನಿದ್ರೆ ಬಾರದಂತೆ ಮಾತ್ರೆ. ರಾತ್ರಿ ೧೧ಕ್ಕೆ ನಾನು ನಿದ್ದೆ ಹೋಗುತ್ತಿದ್ದೆ. ಆಗಲೂ ಅವರು ಎದ್ದಿರುವರು. ಬೆಳಗಿನ ಜಾವ ಕಣ್ಣು ಬಿಟ್ಟಾಗಲೂ ಅವರ  ಬೀಡಿಯ ಬೆಂಕಿ ಕಾಣುವುದು. ನನಗಂತೂ ಅಷ್ಟು ಕಷ್ಟಪಟ್ಟು ಸಾಧಿಸುವುದು ಏನು ಎಂದು ತಿಳಿಯಲೆ ಇಲ್ಲ. ಪರೀಕ್ಷೆ ದಿನ ಬೆಳಗ್ಗೆ ೧೦ ಗಂಟೆಗೆ ಹೋಗಬೇಕಿತ್ತು. ಬೇಗನೆ ಎದ್ದು ಸ್ನಾನ ಮುಗಿಸಿ ಉಪಹಾರಕ್ಕೆಂದು ಹೋಟೇಲಿಗೆ ಹೊರಟೆವು. ಅವರು ಹಾದಿಯಲ್ಲೆ ಓಲಾಡ ತೊಡಗಿದರು. ಹೇಗೋ ಕೈ ಹಿಡಿದು ಕರೆದೊಯ್ದೆವು. ನಮ್ಮನ್ನು ನೋಡಿದವರು, ಬೆಳಗ್ಗೆ ಎದ್ದೊಡನೆ ಫುಲ್‌ ಎಣ್ಣೆ ಹೊಡೆದಿದ್ದಾನೆ, ಎಂದು ಆಡಿಕೊಳ್ಳುವುದು ಕೇಳಿಸಿತು. ಆದರೆ ಪಾಪ ಇವರು ರಾತ್ರಿ ಇಡಿ ನಿದ್ದಗೆಟ್ಟು ಓದಿರುವುದು ನಮಗೆ ಗೊತ್ತು. ಹಾಗೂ ಹೀಗೂ ಪರೀಕ್ಷಾ ಕೋಣೆಗೆ ಕರೆದೊಯ್ದೆವು. ಇನ್ನೇನು ಪ್ರಶ್ನೆ ಪತ್ರಿಕೆ ಹಂಚಬೇಕು. ಅವರು ಡೆಸ್ಕಿಗೆ ತಲೆ ಇಟ್ಟವರು ಹಾಗೆ ನಿದ್ದೆಗೆ ಜಾರಿದರು. ಎಚ್ಚರವೇ ಆಗಲಿಲ್ಲ. ಕೋಣೆಯ ಮೇಲ್ವಿಚಾರಕರಿಗೆ ಅಚ್ಚರಿ. ಇದ್ದ ವಿಷಯ ತಿಳಿಸಿದೆವು ಅವರೂ ಸುಮ್ಮನಾದರು. ಪರೀಕ್ಷೆ ಮುಗಿದ ಮೇಲೂ ಇನ್ನೂ ಅವರಿಗೆ ಮಂಪರು. ಅವರನ್ನು ರೂಂಗೆ ಕರೆತರುವುದರಲ್ಲಿ ಕುರಿಕೋಣ ಬಿದ್ದು ಹೋಯಿತು. ಒಂದುವರ್ಷ ಅವರು ಹಗಲುರಾತ್ರಿ ನಿದ್ದೆಗೆಟ್ಟು ಓದಿದ್ದು ನೀರಲ್ಲಿ ಹೋಮ ಮಾಡಿದಂತಾಯಿತು. ಅತಿಯಾದರೆ ಗತಿ ಗೇಡು ಎಂಬ ಮಾತು ನಿಜವಾಯಿತು ಅವರ ವಿಷಯದಲ್ಲಿ. ಮುಂದಿನ ವರ್ಷ ಅವರು ತಮ್ಮ ಹಠ ಸಾಧಿಸಿದರು. ನಂತರ ಖಾಸಗಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರೂ ಆಗಿ ಒಳ್ಳೆಯ ಹೆಸರು ಮಾಡಿದರು.
ಧಾರವಾಡದಲ್ಲಿ ಎರಡು ವರ್ಷ ಈ ರೀತಿ ದಮ್ಮು ಹಿಡಿದು ಓದಿದ್ದು ಫಲ ನೀಡಿತು. ಪರೀಕ್ಷೆಗೆ ನಮ್ಮ ಜಿಲ್ಲೆಯಿಂದ ಕೂತಿದ್ದ ಹತ್ತೊಂಬತ್ತು ಜನರಲ್ಲಿ ಪಾಸಾದವನು ನಾನೊಬ್ಬನೆ. ಆದರೂ ಖಾಸಗಿಯಾಗಿ ಅಧ್ಯಯನ ಮಾಡುವುದರ ದೌರ್ಬಲ್ಯ ನನಗೆ ತಿಳಿಯಿತು “No college, no knowledge“ ಎಂಬ ಮಾತು ಚಾಲತಿಯಲ್ಲಿದೆ. ಹಳ್ಳಿಯಿಂದ ಬಂದ ನನನ್ನ ಗೆಳೆಯನೊಬ್ಬ ಬಹಳ ಪ್ರತಿಭಾನ್ವಿತ, ರಾಜ್ಯಶಾಸ್ತ್ರ ಎಂಎ ಮಾಡುತಿದ್ದ. ಅವನು ಪೇಪರ್‌ ಮಂಡಿಸುವಾಗ china ಎಂಬುದನ್ನು ಚೈನಾ ಎನ್ನುವ ಬದಲು ಚೀನಾ ಎಂದು ಪದೇ ಪದೇ  ಅಂದಾಗ ಎಲ್ಲರೂ ಘೊಳ್ಳನೆ ನಕ್ಕಿದ್ದರು. ಆದರೆ ಆ ವರ್ಷ ಅವನೆ Rank ಗಿಟ್ಟಿಸಿದ. ಹಳ್ಳಿಗಾಡಿನಿಂದ ಬಂದವರಿಗೆ ಉಚ್ಛಾರಣೆಯ ಸಮಸ್ಯೆ ಸಹಜ. ಸಾಹಿತ್ಯದ ಆಳ ಅಗಲಗಳ ಅರಿವಿದ್ದರೂ, ಬರಹದ ಮೇಲೆ ಪ್ರಭುತ್ವ ಸಾಧಿಸಿದರೂ ಮೋಡಿ ಮಾಡುವ ಮಾತುಗಾರಿಕೆ ಕಲಿಯಲು ಸತತ ಸಂವಹನ ಅಗತ್ಯ.

No comments:

Post a Comment