Sunday, August 19, 2012

ರೂಪಾಯಿಗೆ ತೊಂಬತ್ತಾರು ಪೈಸೆಗಳು!


“ ಮಕ್ಕಳನ್ನು ಮಾರಿಯಾದರೂ ಮಾರ್ನವಮಿ ಮಾಡು" ಎಂಬುದು ಒಂದು ಕಾಲದಲ್ಲಿ ಹಳ್ಳಿಗಳಲ್ಲಿ ಇದ್ದ ರೂಢಿಯ ಮಾತು. ಮಾರ್ನವಮಿ ದೊಡ್ಡ ಹಬ್ಬ. ಅದೂ ಹತ್ತು ದಿನದ್ದು. ಅದಕ್ಕೆ ಮಾರ್ನವಮಿಗೆ ಹೊಸ ಬಟ್ಟೆ ಬೇಕೆ ಬೇಕು. ಆಗಿನ್ನೂ ರಾಜಾಸ್ತಾನದ ಮಾರವಾಡಿಗಳು ಬಟ್ಟೆ ಅಂಗಡಿಗಳನ್ನು ಎಲ್ಲೆಂದರೆ ಅಲ್ಲಿ ತೆರದಿರಲಿಲ್ಲ. ಆಗ ವ್ಯಾಪಾರ ಏನಿದ್ದರೂ ಸೆಟ್ಟರ ಸ್ವತ್ತು. ಹೊಸಪೇಟೆಯಲ್ಲಿ ಕಾಕುಬಾಳ ಸೆಟ್ಟರು ಮತ್ತು ಪೆಂಡಕೂರು ಸೆಟ್ಟರ ಅಂಗಡಿ ಬಹು ಹೆಸರುವಾಸಿ. ಆದರೆ ಅವರ ವ್ಯಾಪಾರ ಪಟ್ಟಣಕ್ಕೆ ಸೀಮಿತ. ಅದಕ್ಕೆ ನಮ್ಮ ಹಳ್ಳಿಯಲ್ಲಿ ಯಾರೋ ಆಂಧ್ರದ ಕಡೆಯವರು ರಾಮಯ್ಯ ಅಂತ ಅವರ ಹೆಸರು. ಅವರು ಬಟ್ಟೆ ತಂದು ಉದ್ದರಿಯಲ್ಲಿ ಕೊಡುತ್ತಿದ್ದರು. ಆಗ ಅವರ ಅಂಗಡಿ ದುರುಗಮ್ಮನ ಗುಡಿ. ಆಗ ನಮ್ಮ ಶಾಲೆಗೆ ರಜೆ. ಅದಕ್ಕೆ ನಮಗೆ ದಸರೆಗೆ ಮುಂಚೆ ಹತ್ತು ದಿನದಿಂದ ದೀಪಾವಳಿವರೆಗೆ ರಜೆ. ಕಾರಣ ಆಗ ಗುಡಿಯಲ್ಲಿ ಬಟ್ಟೆ ಅಂಗಡಿ ಬಿಡಾರ ಹೂಡುತಿತ್ತು. ಆದರೆ ನಮ್ಮ ಅಯ್ಯನವರು ನಮ್ಮನ್ನು ಸುಮ್ಮನೆ ಬಿಡುತ್ತಿರಲಿಲ್ಲ. ಆಯ್ದ ಮತ್ತು ಆಸಕ್ತಿ ಇದ್ದವರಿಗೆ ದಸರೆ ಹಾಡುಗಳನ್ನು ಕೋಲಾಟವನ್ನು ಕಲಿಸಿ, ತಾವು ಜತೆಯಲ್ಲಿದ್ದು ಮನೆ ಮನೆಗೆ ಕೋಲು ಹಾಕಲು ಕರೆದೊಯ್ಯುವುದು ವಾಡಿಕೆ. ನಾವೂ ಉತ್ಸಾಹದಿಂದಲೆ ಹೋಗುತ್ತಿದ್ದೆವು. ರೈತರು ತಮ್ಮ ಅಗತ್ಯಕ್ಕೆ, ಯೋಗ್ಯತಾನುಸಾರವಾಗಿ ನೂರು ಇನ್ನೂರು ರೂಪಾಯಿಯ ಬಟ್ಟೆಯನ್ನು ಹಬ್ಬಕ್ಕೆ ಕೊಳ್ಳುತ್ತಿದ್ದರು. ಅವರ ಜೊತೆಯಲ್ಲಿಯೇ ಒಬ್ಬ ಸಿಂಪಿಗನೂ ಬರುತ್ತಿದ್ದ. ಅವನು ಅಲ್ಲಿಯೇ ಹುಡುಗರಿಗೆ ಅಂಗಿ, ಚೊಣ್ಣ; ಹುಡುಗಿಯರಿಗೆ ಪರಕಾರ, ಜಂಪರ್‌, ಪೋಲಕ; ಹೆಂಗಸರಿಗೆ ಕುಬುಸ ಹೊಲಿದು ಕೊಡುತಿದ್ದ. ಆಗ ರೈತ ಮಹಿಳೆಯರಲ್ಲಿ ಏಕ ಬಗಲಿನ ಕುಬಸ ಸಾರ್ವತ್ರಿಕವಾಗಿತ್ತು. ಅದು ಫ್ಯಾಷನ್‌ ಅಂತ ಅಲ್ಲ. ಹೊಲದಲ್ಲಿ ದುಡಿಯುವ, ಮನೆಯಲ್ಲಿ ಕುಟ್ಟಿ ಬೀಸಿ ಮಾಡುವ ಹೆಂಗಸರು ರಟ್ಟೆ ಮುರಿಯುವ ಹಾಗೆ ಕೆಲಸ ಮಾಡುತ್ತಿದ್ದರು. ಅದರಿಂದ ಬೆವರೂ ಜಾಸ್ತಿ. ಹಾಗಾಗಿ ಅದು ಬೇಗ ಹರಿಯದೆ ಬಾಳಿಕೆ ಬರಲೆಂದು ಆ ಉಪಾಯ. ರೈತರು ಕೊಳ್ಳುವಾಗ ಬಟ್ಟೆಯ ಬೆಲೆಯಲ್ಲಿ ಆಗ ಅಷ್ಟೋ ಇಷ್ಟೋ ಕೊಟ್ಟು ಉಳಿದುದನ್ನು ಸುಗ್ಗಿಯಾದ ಮೇಲೆ ಕೊಡುತ್ತಿದ್ದರು. ದಸರೆಗೆ ಕೊಂಡವರ ಬಾಕಿಯನ್ನು ವಸೂಲಿ ಮಾಡಲು ಉಗಾದಿ ಹೊತ್ತಿಗೆ ಬರುತ್ತಿದ್ದರು. ಅದಕ್ಕೆ ಉಗಾದಿ ಉದ್ದರಿ ಎಂಬ ಮಾತು ಚಾಲ್ತಿಯಲ್ಲಿ ಬಂದಿರುವುದು. ಅಷ್ಟು ಹೊತ್ತಿಗೆ ಕಾಳು ಕಡಿ ಹೊಲದಿಂದ ಮನೆಗೆ ಬಂದು ಚೀಲಗಟ್ಟಲೆ ಬಿದ್ದಿರುತಿತ್ತು. ಗಿದ್ನ ಧಾನ್ಯವನ್ನು ಹೊರಗೆ ಹಾಗೆ ಅಟ್ಟಣಿಗೆಯ ಮೇಲೆ ಇಡುತ್ತಿದ್ದರು. ಗಿದ್ನ ಅಂದರೆ ಮೂವತ್ತೆರಡು ಸೇರು, ಗೂಡಿ ಎಂದರೆ ೬೪ ಸೇರು, ಪಲ್ಲ ಎಂದರೆ ೧೦೦ ಸೇರು. ಆಗ ಧಾನ್ಯಗಳನ್ನು ಚಿಟಿಕೆ, ಮುಷ್ಟಿ, ಬೊಗಸೆ, ಅರಪಾವು, ಪಾವು, ಅಚ್ಚೇರು, ಸೇರು, ಗಿದ್ನ, ಗೂಡಿ, ಪಲ್ಲ ಮತ್ತು ಖಂಡುಗ ಎಂಬ ಅಳತೆಗಳಲ್ಲಿ ಕೊಟ್ಟು-ತಗಂಡು ಮಾಡುತ್ತಿದ್ದರು. ಗಿದ್ನ ಎಂಬ ಪದ ಚಿಕ್ಕಪುಟ್ಟ ವ್ಯವಹಾರಕ್ಕೆ ಬಳಕೆಯಾಗುತಿತ್ತು. "ಗಿದ್ನ ಜೋಳ ಕೊಟ್ಟು ಗೌಡನ ಗೆಣಕಾತಿ ಅನಿಸಿಕೊಳ್ಳುತ್ತಾಳೆ" ಎಂದು ಹೆಸರಿನ ಹಪಹಪಿ ಇರುವ ಹೆಂಗಸನ್ನು ಹಂಗಿಸುವರು. ಗೂಡಿಗಟ್ಟಲೆ ಜೋಳ ಇದ್ದರೆ ಹಗೇವು ಬೇಕು. ಜೋಳವನ್ನು ಹಗೇವಿನಲ್ಲಿ ಹಾಕಿದ್ದರೆ, ಉಳಿದ ಧಾನ್ಯಗಳನ್ನು ಪಲ್ಲಗಟ್ಟಲೆ ನೆಲ್ಲನ್ನು ಗುಮ್ಮಿ, ಕೆರಸಿಯಲ್ಲಿ, ಖಂಡುಗಗಟ್ಟಲೆ ಭತ್ತವನ್ನು ಕಣಜದಲ್ಲಿ ಸಂಗ್ರಹಿಸುವುದು ವಾಡಿಕೆ. ಪ್ರತಿ ದೊಡ್ಡ ರೈತನದೂ ಅಂಗಳದಲ್ಲೆ ಒಂದು ಹಗೇವು ಇದ್ದೆ ಇರುತ್ತಿತ್ತು. ನಾಲಕ್ಕು ಅಡಿ ಆಳ ಅಗೆದ ನಂತರ ಕಲ್ಲಿನಲ್ಲಿ ಒಬ್ಬರು ಇಳಿಯುವಷ್ಟು ಬಾಯಿ, ನಂತರ ಅಗಲವಾದ ಭಾವಿಯಂತಹ ಟೊಳ್ಳು ಪ್ರದೇಶ. ಅದರಲ್ಲಿ ನೂರರಿಂದ ನೂರೈವತ್ತು ಚೀಲ ಜೋಳ ಸಂಗ್ರಹಿಸಬಹುದು. ಅದರಲ್ಲಿ ಜೋಳ ಹಾಕಿ ಬಾಯಿಯ ಮೇಲೆ ಭದ್ರವಾದ ಬಂಡೆ ಇಟ್ಟು ಮೇಲೆ ಮಣ್ಣು ಹಾಕಿದರೆ ಮುಗಿಯಿತು. ಅದರ ಮೇಲೆ ಹತ್ತು ಚೀಲ ಹೊತ್ತ ಬಂಡಿ ಓಡಿಸಿದರೂ ಜಪ್ಪಯ್ಯ ಅನ್ನುತ್ತಿರಲಿಲ್ಲ. ಜಡಿ ಮಳೆ ಬಂದು ಮೂರಡಿ ನೀರು ಹರಿದರೂ ಒಂದು ಹನಿಯೂ ಒಳ ಹೋಗುತ್ತಿರಲಿಲ್ಲ. ಮೂರು ತಿಂಗಳಿಗೋ ಆರು ತಿಂಗಳಿಗೋ ಒಮ್ಮೆ ಹಗೇವು ತೆಗೆದು ಮೂರುನಾಲಕ್ಕು ಚೀಲ ಒಟ್ಟಿಗೆ ಜೋಳ ಹೊರತೆಗೆಯುತ್ತಿದ್ದರು. ಎಲ್ಲರಿಗೂ ಹಗೇವೂ ಇರುತ್ತಿರಲಿಲ್ಲ. ಆಗ ಈಗಿನಂತೆ ಹೊಲದಿಂದ ಮಾರುಕಟ್ಟೆಗೆ ಧಾನ್ಯವನ್ನು ಸಾಗಹಾಕಿ ಮಾರುವ ಪದ್ಧತಿಯಿರಲಿಲ್ಲ. ಒಂದು ವರ್ಷ ಒಳ್ಳೆಯ ಮಳೆಯಾಗಿ ಸಮೃದ್ಧಿಯಾಗಿ ಬೆಳೆ ಬೆಳೆದರೆ ಮುಂದಿನ ಮೂರು ವರ್ಷಕ್ಕಾದರೂ ಅದೆ ಧಾನ್ಯವನ್ನು ಬಳಸುತಿದ್ದರು. ಧಾನ್ಯವನ್ನು ಸಂಗ್ರಹಿಸಲು ಹಗೇವು ಅತ್ಯುತ್ತಮ ಗೋಡೌನ್‌ ಆಗಿರುತ್ತಿತ್ತು. ಅದಕ್ಕೆ ಇಲಿಗಳ, ಕ್ರಿಮಿಕೀಟಗಳ ಬಾಧೆ ಇಲ್ಲ. ಕಳ್ಳಕಾಕರ ಭಯ ಇಲ್ಲ. ನೆಲದೊಳಗಣ ನಿಧಾನ ಅದು. ಹಾಕುವ ಮುಂಚೆ ಬೇವಿನ ಎಲೆಯ ಹೊಗೆ ಹಾಕಿ ತಳದಲ್ಲಿ ಹುಲ್ಲು ಹರವಿ ಈಚಲ ಚಾಪೆ ಹಾಕಿ ಗೋಡೆಗೆ ಜೋಳದ ಸಿವಿಡಿನಿಂದ ಮಾಡಿದ ಆವರಣವಿದ್ದರೆ ತೀರಿತು. ಜೋಳ ಸುರಕ್ಷಿತ. ಬಹಳ ಎಂದರೆ ಮೂರು ನಾಲಕ್ಕು ವರ್ಷವಾದ ಮೇಲೆ ತುಸು ಮುಗ್ಗಲು ವಾಸನೆ ಬರಬಹುದೆ ಹೊರತು ತಿನ್ನಲು ಏನೂ ತೊಂದರೆ ಇರುತ್ತಿರಲಿಲ್ಲ. ಜಡಿ ಮಳೆ ಬಂದು ಹಗೇವಿನ ಮೇಲೆ ಮೊಳಕಾಲಮಟ ನೀರು ಹರಿದರೂ ಹಗೇವಿನಲ್ಲಿ ಒಂದು ಹನಿ ನೀರು ಸೋರುತ್ತಿರಲಿಲ್ಲ. ಹಾಗೆ ಕಟ್ಟಿರುತ್ತಿದ್ದರು ಅವುಗಳನ್ನು. ಇನ್ನು ಕೆರಸಿ, ಕಣಜ ಭತ್ತದ ಸಂಗ್ರಹಕ್ಕೆ ಹತ್ತು ಇಪ್ಪತ್ತು ಗೂಡಿ ಭತ್ತವಿದ್ದರೆ ಬಿದಿರಿನ ಚಾಪೆಯಿಂದ ಕೆರಸಿ ಕಟ್ಟುತ್ತಿದ್ದರು. ಇನ್ನೂ ಹೆಚ್ಚಿನ ಸ್ಥಿತಿವಂತರಾದರೆ ಗಚ್ಚು ಗಾರೆಯಿಂದ ಗಾಳಿ, ತೇವ, ಇಲಿ, ಹೆಗ್ಗಣ ಹೋಗದಂತಹ ಬಂದೋಬಸ್ತು ಕೋಣೆಯ ತರಹ ಮೇಲಿನಿಂದ ಇಳಿಯಬಹುದಾದ ರಚನೆ ಹೊಂದಿರುತ್ತಿತ್ತು. ಅದರಲ್ಲಿ ಭತ್ತ ಸುರಿದರೆ ಬೇಕಾದಾಗ ಒಬ್ಬರು ಇಳಿದು ಪುಟ್ಟಿಯಲ್ಲಿ ತುಂಬಿಕೊಡಬೇಕು. ಇನ್ನು ನವಣೆ, ಸಾವೆ, ಹೆಸರು ಅಲಸಂದಿ, ಎಳ್ಳು, ಕುಸುಬಿ, ಗುರೆಳ್ಳುಗಳನ್ನು ಅಡಕಲ ಗಡಿಗೆಗಳಲ್ಲಿ ಸಂಗ್ರಹಿಸಿಡುತ್ತಿದ್ದರು. ಆ ಕೋಣೆಗೆ ಅಡಕಲ ಕೋಣೆಯೆಂದೆ ಹೆಸರಿತ್ತು. ಐವತ್ತು ಅರವತ್ತು ಸೇರು ಹಿಡಿಯಬಹುದಾದ ದೊಡ್ಡ ಗಡಿಗೆಯ ಮೇಲೆ ಕ್ರಮವಾಗಿ ಕಿರಿದಾಗುತ್ತಾ ಹೋಗುವ ಆರೇಳು ಗಡಿಗೆಗಳನ್ನು ಒಂದರ ಮೇಲೆ ಒಂದು ಜೋಡಿಸಿರುವುದನ್ನು ನೋಡುವುದೆ ಒಂದು ಚಂದ. ಪೂರ್ತಿ ಮೇಲಿರುವುದನ್ನು ಮಗಿ ಎಂದು ಕರೆಯುತಿದ್ದರು. ಅಡಕಲ ಗಡಿಗೆಯು ಅನೇಕ ಸಲ ಹಣ ಬಚ್ಚಿಡುವ ಸುರಕ್ಷಿತ ಜಾಗವಾಗಿತ್ತು. ಯಾವುದೋ ಗಡಿಗೆಯಲ್ಲಿನ ಧಾನ್ಯದಲ್ಲಿ ಬಟ್ಟೆಯಲ್ಲಿ ಕಟ್ಟಿ ಇಟ್ಟ ಗಂಟನ್ನು ಹುಡುಕುವುದು ಸರಳವಾಗಿರಲಿಲ್ಲ. ಇಟ್ಟವರಿಗೆ ಮಾತ್ರ ಗೊತ್ತಿರುತಿತ್ತು. ಮಗಿ ಅದು ಸಾಧಾರಣ ಒಂದು ತಂಬಿಗೆಯ ಗಾತ್ರದ್ದಾಗಿರುತ್ತಿತ್ತು. ಶುಭ ಕಾರ್ಯದಲ್ಲಿ ಅದನ್ನು ಬಹುವಾಗಿ ಬಳಸುತ್ತಿದ್ದರು. ಸಾಧಾರಣ ಅವುಗಳಿಗೆ ಸುಣ್ಣ ಹಚ್ಚಿರುತ್ತಿದ್ದರು. ಕಾರಣ ಅವು ಕತ್ತಲಲ್ಲಿ ಕಾಣಲಿ ಎಂದಿರಬೇಕು. ಮೇಲೆ ಕೆಮ್ಮಣ್ಣಿನ ಸಿಂಗಾರ ಬೇರೆ. ಅದು ಅಂದ ಚಂದ ಹೆಚ್ಚಿಸಿದರೂ, ಸುಣ್ಣಕ್ಕೆ ಕ್ರಿಮಿನಾಶಕ ಗುಣವಿರುವುದೂ ಒಂದು ಮುಖ್ಯ ಕಾರಣ. ಚೀಲಗಳನ್ನು ಅಟ್ಟಣಿಕೆಯ ಮೇಲೆ ಒಟ್ಟಿರುತ್ತಿದ್ದರು. ಅದು ಒಂದು ರೀತಿಯಲ್ಲಿ ಮಂಚ ಮತ್ತು ಬೆಂಚುಗಳ ಹೈಬ್ರೀಡ್‌ ನಂತಿರುತಿತ್ತು. ಬಟ್ಟೆ ರಾಮಯ್ಯ ಉಗಾದಿಗೆ ಬಂದವನು ತಿಂಗಳೆರಡು ತಿಂಗಳು ಬಾಕಿ ವಸೂಲಿಗೆ ಗ್ರಾಮದಲ್ಲೆ ತಂಗುತಿದ್ದ. ಪ್ರತಿ ದಿನ ಬಾಕಿದಾರರ ಬಾಗಿಲಿಗೆ ಹೋಗಿ ನಮಸ್ಕಾರ ಮಂಡಿ ಎಂದು ಅಟವಾಳಿಗೆಯಲ್ಲಿ ಕುಳಿತುಕೊಳ್ಳುತ್ತಿದ್ದ. ಅವರು ಹಾಲನ್ನೋ ಮಜ್ಜಿಗೆಯನ್ನೋ ಕುಡಿಯಲು ಕೊಟ್ಟರೆ ನೆಮ್ಮದಿಯಿಂದ ಕುಡಿದು ಅವರು ಕೊಟ್ಟಷ್ಟು ಹಣ ಪಡೆದು ಹೋಗುತ್ತಿದ್ದ. ಸಾಧಾರಣವಾಗಿ ಯಾರೂ ಒಟ್ಟಿಗೆ ಬಾಕಿ ಚುಕ್ತಾ ಮಾಡುತ್ತಿರಲಿಲ್ಲ. ವಾರಕ್ಕೆ ಇಷ್ಟು ಕೊಟ್ಟು ತಿಂಗಳುಗಟ್ಟಲೆ ಸತಾಯಿಸುತ್ತಿದ್ದರು. ಆದರೆ ಆ ಮುದುಕ ಬೇಸರಿಸದೆ ನಗುನಗುತ್ತಾ ವಸೂಲಿ ಮಾಡಿಕೊಳ್ಳುತ್ತಿದ್ದ. ನಮ್ಮ ಹಳ್ಳಿಯ ಕಡೆ ಉಗಾದಿ ಉದ್ರಿ ಎಂಬ ಮಾತು ಚಾಲ್ತಿಯಲ್ಲಿದೆ. ಬಹುಶಃ ಅದಕ್ಕೆ ಮೂಲ ಈ ರಾಮಯ್ಯನೇ ಇರಬಹುದೇನೋ ಎಂಬ ಗುಮಾನಿ ನನಗೆ. ಯಾರು ಎಷ್ಟೆ ಸತಾಯಿಸಿದರೂ ಮತ್ತೆ ದಸರೆಗೆ ಬಂದಾಗ ಆತನೇ ಕರೆದು ಏನಪ್ಪಾ, ಮಗಳಿಗೆ ಹೊಸ ಸೀರೆ ದಿವಿನಾದದ್ದು ಬಂದಿದೆ ತೆಗೆಸಿಕೊಡು ಎಂದು ಬಣ್ಣಾ ಬಣ್ಣಿಸಿ ಮಾರಾಟ ಮಾಡುತ್ತಿದ್ದ. ನನಗೆ ನೆನಪಿದ್ದಂತೆ ನಾನು ಹೈಸ್ಕೂಲಿಗೆ ಬರುವ ಹೊತ್ತಿಗೆ ಈ ರೀತಿಯ ವ್ಯಾಪಾರ ಕೊನೆಗೊಂಡಿತ್ತು. ಆತನಿಗೆ ವಯಸ್ಸಾದ್ದರಿಂದ ಬರಲಿಲ್ಲವೋ ಅಥವ ಅವನ ಮಕ್ಕಳು ಬೇರೆ ವ್ಯವಹಾರ ಶುರು ಮಾಡಿದರೋ ತಿಳಿಯದು. ಇಲ್ಲವೆ ಹತ್ತಿರದ ಹೊಸಪೇಟೆಯ ಸ್ಪರ್ಧೆ ಹೆಚ್ಚಾಯಿತೋ ಗೊತ್ತಿಲ್ಲ. ಆದರೆ ಪ್ರತಿವರ್ಷ ಕಾಣುತಿದ್ದ ಆ ನಗು ಮೊಗದ ಮುದುಕ ವ್ಯಾಪಾರಿ ಮಾತ್ರ ಕಾಣೆಯಾಗಿದ್ದ. ದಸರೆ ಸಮಯದ ಇನ್ನೊಂದು ವಿಶೇಷವೆಂದರೆ ಮಕ್ಕಳ ಕೋಲಾಟ. ನಮಗೆ ಈಗಾಗಲೆ ತರಬೇತಿಯಾಗಿರುತಿತ್ತು. ಹೊಸ ಬಟ್ಟೆ ಉಡಿಸಿ ಕಾಲಿಗೆ ಗೆಜ್ಜೆ ಕಟ್ಟಿಸಿ ಕೈಗೆ ಬಣ್ಣ ಬಳಿದ ಕೋಲುಗಳನ್ನು ಕೊಟ್ಟು ನಮ್ಮ ಅಯ್ಯ ಮನೆ ಮನೆಗೆ ದಸರಾ ಕೋಲು ಹಾಕಲು ಕರೆದೊಯ್ಯುತ್ತಿದ್ದರು. ಅದೂ ಎಲ್ಲರ ಮನೆಗಳಿಗಲ್ಲ, ಸ್ಥಿತಿವಂತರ ಮನೆಗೆ ಮಾತ್ರ. ಆದರೆ ಸಾಧಾರಣ ಜನರು ಮಕ್ಕಳು ತಮ್ಮ ಮನೆಗೆ ಬಂದು ಕೋಲು ಹಾಕಿ ಹಾಡು ಹಾಡುವುದು ಶುಭಸೂಚಕ ಎಂದು ಕರೆದು ಕೋಲು ಹಾಕಲು ಹಾಡು ಹೇಳಲು ಉತ್ತೇಜನ ನೀಡುತ್ತಿದ್ದರು ಎಂದು ನಾವು ಎಳೆಯರು ಅಲ್ಲಿ ಹೋಗಿ ಕೋಲು ಕುಟ್ಟುತ್ತಾ ಕುಣಿಕುಣಿದು ಹಾಡುತ್ತಿದ್ದೆವು. ನಮಗೆ ಹಿಮ್ಮೇಳವಾಗಿ ವಾದ್ಯ ಇರುತ್ತಿತ್ತು. ಆಶ್ವೀಜ ಶುದ್ಧ ಮಾರ್ನವಮಿ ಬರಲೆಂದು ಧನ ಧಾನ್ಯ ಸಮೃದ್ಧಿ ನಿಮಗೆ ತರಲೆಂದು ಹಾರೈಸುವೆವು ನಾವು ಬಾಲಕರು ಬಂದು... ಎಂದು ಮೊದಲಾಗಿ ಹಾಡುತ್ತಾ ಕೋಲು ಹೊಯ್ಯುತ್ತಿದ್ದೆವು. ಅದಕ್ಕೆ ಜೊತೆಯಾಗಿ ಒಂದು ಕೊರಳಿಗೆ ಜೋತು ಹಾಕಿದ ಹಾರ್ಮೊನಿಯಂ. ಕಿವಿಗೆ ಒತ್ತುತ್ತಿದ್ದ ಪಿಟೀಲು ಕುಯ್ಯುತ್ತಾ ಇದ್ದ ಬಗ್ಗುರಪ್ಪ, ದೊಡ್ಡದನಿಯಲ್ಲಿ ದಸರೆ ಹಾಡುವ ನಮ್ಮ ಅಯ್ಯನವರೂ ಇರುತ್ತಿದ್ದರು. ಮಾರ್ನವಮಿ ದಿಬ್ಬ (ಹಂಪೆ) ಮನೆ ಮನೆಯಲ್ಲು ಕಾಳು ಕಡಿ, ಜತೆಗೆ ಎಂಟಾಣೆ, ರೂಪಾಯಿ ದಕ್ಷಿಣೆ ಸಿಗುತಿತ್ತು. ನಮಗೂ ಆಗೀಗ ಮಜ್ಜಿಗೆ, ಕಡಲೆ, ಮಂಡಾಳಿನ ಸಮಾರಾಧನೆಯಾಗುತ್ತಿತ್ತು. ಒಮ್ಮೊಮ್ಮೆ ಬೆಂಡು ಬತ್ತಾಸು. ಕೆಲವರ ಮನೆಯಲ್ಲಿ ಮಾದಲಿ, ಕಡಬು, ಸಿಗುತ್ತಾ ಇತ್ತು. ಎಗ್ಗಿಲ್ಲದೆ ಎಲ್ಲರೂ ತಿನ್ನುತಿದ್ದರು. ಒಬ್ಬಿಬ್ಬರು ಮಾತ್ರ ಬಿಂಕ ಮಾಡಬೇಡ ಎಂದು ಬಾಯಲ್ಲಿ ನೀರು ಸುರಿಸುತ್ತಾ ಸುಮ್ಮನೆ ನೋಡುತ್ತಿದ್ದರು. ದಸರೆಯ ಹತ್ತು ದಿನ ಬೆಳಗಿನ ಹೊತ್ತು ಸಾಲಿ ಹುಡುಗರ ಗಡಿಬಿಡಿಯಾದರೆ ರಾತ್ರಿ ಏಳಕ್ಕೆ ಪ್ರಾರಂಭವಾಗುತಿತ್ತು ಹದಿ ಹರೆಯದವರ ಹುಡುದಿ. ಬೆಳದಿಂಗಳ ರಾತ್ರಿಯಲ್ಲಿ ಉಪ್ಪಿನಾಟ, ಅಕ್ಕಿ ಆಟ, ಗುಂಡು ಎತ್ತುವುದು, ಅದಕ್ಕೂ ಮಿಗಿಲಾಗಿ ಕೋಲಾಟದ ಅಭ್ಯಾಸ. ಸುಮಾರು ೨-೩ ತಾಸು ಓಣಿಯಲ್ಲಿ ಅವರ ಕಂಚಿನ ಕಂಠದ ಹಾಡು ಮತ್ತು ಕೋಲಿನ ಕಟಕಟ ಶಬ್ದ ಮಾರ್ದನಿಸುತ್ತಿದ್ದವು. ಅವು ಮುಗಿಯುತ್ತಿದ್ದದ್ದೂ ದೇವರ ಬನ್ನಿ ದಿನ. ಅಂದು ಸುಮಾರು ಆರು ಮೈಲು ದೂರದ ಗುಡ್ಡದಲ್ಲಿನ ದೇವರ ದರ್ಶನಕ್ಕೆ ಸುತ್ತಲ ಹತ್ತು ಹಳ್ಳಿಯವರು ಹೋಗುವರು. ಆಗ ಹಾದಿಯುದ್ದಕ್ಕೂ ಕೋಲು ಹಾಕುತ್ತಾ ಹೋಗುವ ಅವರ ಸಂಭ್ರಮ ಮತ್ತು ಶಾರೀರಿಕ ಶಕ್ತಿಯನ್ನು ಇಂದು ನೋಡಲು ಸಾಧ್ಯವೇ ಇಲ್ಲ. ಒಬ್ಬರಿಗಿಂತ ಒಬ್ಬರು ಪೈಪೋಟಿಯಲ್ಲಿ ಕೋಲು ಹಾಕುತ್ತಿದ್ದರೆ ನಿಂತು ನೋಡುವ ಹೆಂಗಳೆಯರಿಗೆ ಅದೇನು ಗಮ್ಮತ್ತು. ಅವರ ನಗೆ, ಉದ್ಗಾರಗಳಿಂದ ಯುವಕರು ನೆಲದ ಮೇಲೆ ಕಾಲೆ ಇಡುವುದಿಲ್ಲವೇನೋ ಎನ್ನುವಂತೆ ಕುಣಿಯುತ್ತಾ ಕೋಲಾಟವಾಡುತ್ತಿದ್ದರು. ಅವರ ವೇಗ, ಕೋಲು ಬೀಸುವ ರಭಸ, ವಿವಿಧ ವಿನ್ಯಾಸದಲ್ಲಿ ನಿಂತು, ಕುಂತು ಕೋಲೂ ತಾಗಿಸುವ ವರಸೆ ಕಣ್ಣಿಗೆ ಒಂದು ಹಬ್ಬ. ಇದು ಕೊನೆಗೊಂಡಾಗ ಎಲ್ಲರಿಗೂ ಅಯ್ಯೋ ಮುಗಿಯಿತಲ್ಲಾ ಎನ್ನುವ ಕೊರಗು. ಮತ್ತೆ ಮುಂದಿನ ದಸರೆಗೆ ಬರುವುದಲ್ಲಾ ಎಂಬ ಭರವಸೆ. ಹಬ್ಬದ ಬನ್ನಿಯಾದ ಮಾರನೆ ದಿನ ಊರ ಬನ್ನಿ. ಅಂದು ಊರೆಲ್ಲ ಸಡಗರ. ಸಂಜೆಯ ಹೊತ್ತಿಗೆ ಗಂಡಸರು ಮಕ್ಕಳೂ ಹೊಸ ಬಟ್ಟೆ ಉಟ್ಟು ಗುಡಿಯಿಂದ ಗೌಡರ ನೇತೃತ್ವದಲ್ಲಿ ಮೆರವಣಿಗೆ ಹೊರಡುತ್ತಿದ್ದರು. ಆಗ ಕೈನಲ್ಲಿ ಕತ್ತಿ ಕಠಾರಿ, ಭರ್ಚಿ ಹಿಡಿದಿರುತ್ತಿದ್ದರು. ಅವು ಇದ್ದವರ ಮನೆಯಲ್ಲಿ ಬೇರೆ ದಿನಗಳಲ್ಲಿ ಅವನ್ನು ಮಾಳಿಗೆಯ ಚಾಪೆ ಕೆಳಗೆ ಸಿಕ್ಕಿಸಿರುತಿದ್ದರು. ಆಯುಧ ಪೂಜೆಯ ದಿನ ಅವನ್ನು ಹೊರತೆಗೆದು ತೊಳೆದು ವಿಭೂತಿ ಹಚ್ಚಿ ಭರ್ಜರಿ ಪೂಜೆ ಮಾಡುವರು. ಬನ್ನಿ ಮುಡಿಯುವಾಗ ಅವನ್ನು ಹಿಡಿದು ಹೊರಡುತ್ತಿದ್ದರು. ಆಗ ಗೌಡರ ಮನೆಯಲ್ಲಿದ್ದ ಕೋವಿಯೊಂದು ತಳವಾರನ ಹೆಗಲಮೇಲೆ ರಾರಾಜಿಸುತಿತ್ತು. ಚಿಕ್ಕ ಮಕ್ಕಳಿಗೆಲ್ಲ ಅದು ಒಂದು ಕೌತುಕದ ವಸ್ತು. ಹೀಗೆ ಡೊಳ್ಳು ತಮಟೆ, ಶಹನಾಯಿಯೊಡನೆ ಮೆರವಣಿಗೆ ಮೊದಲಾಗುತಿತ್ತು. ಆ ದಿನ ವಿಜಯದಶಮಿ. ಅಂದರೆ ಸೀಮೋಲ್ಲಂಘನೆ ಮಾಡುವ ದಿನ. ಮೈಸೂರ ಅರಸರ ವಿಜೃಂಭಣೆಯ ದಸರಾ ಮೆರವಣಿಗೆಗೆ ಇದೆ ಮೂಲ. ಕಾರಣ ವಿಜಯನಗರದ ಅರಸರ ದಸರಾ ಆಚರಣೆ ಜಗತ್‌ ಪ್ರಸಿದ್ದ. ಈಗಲೂ ಹಾಳು ಪಟ್ಟಣದಲ್ಲಿ ಮಾರ್ನವಮಿ ದಿಬ್ಬ ಅದಕ್ಕೆ ಸಾಕ್ಷಿ. ಅದೂ ಅಲ್ಲದೆ ಇದಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಅಂದು ಪಾಂಡವರು ಅಜ್ಞಾತವಾಸ ಮುಗಿಸಿ ವಿರಾಟ ನಗರದಿಂದ ಹೊರಟು ಶಮೀ ವೃಕ್ಷದಲ್ಲಿ ಅಡಗಿಸಿದ್ದ ಆಯುಧಗಳನ್ನು ಪಡೆದು ಯುದ್ಧಕ್ಕೆ ಹೊರಟರೆಂದು ನಂಬಿಕೆ. ಅದರ ಸಂಕೇತವಾಗಿ ಊರವರೆಲ್ಲ ಹಿರಿಯರೊಡನೆ ಸೇರಿ ಊರ ಹೊರಗಿನ ಹೊಲದಲ್ಲಿನ ಒಂದು ಬನ್ನಿಗಿಡಕ್ಕೆ ಹೋಗಿ ಆಯುಧಗಳನ್ನು ಅಲ್ಲಿ ಇಟ್ಟು ಪೂಜೆ ಮಾಡಿ ನಂತರ ಬನ್ನಿ ಸೊಪ್ಪನ್ನು ಹರಿದುಕೊಂಡು ಊರ ಕಡೆ ಹೊರಡುವರು. ಊರಿನಲ್ಲಿ ಮೊದಲು ಹನುಮಂತರಾಯನಿಗೆ ಬನ್ನಿ ನೀಡಿ ನಂತರ ಹಿರಿಯರಿಗೆಲ್ಲ ಬನ್ನಿ ನೀಡಿ ನಮಸ್ಕರಿಸುವುದು ವಾಡಿಕೆ. ಎಲ್ಲರ ಬಾಯಲ್ಲೂ "ಬನ್ನಿ ತೊಗಂಡು ಬಂಗಾರದ ಹಾಗಿರಿ" ಎನ್ನುವ ಮಾತು. ಎಷ್ಟೆ ಹಳೆಯ ಜಗಳ ಇರಲಿ ರಾಜಿಯಾಗಲು ಅಂದು ಒಳ್ಳೆಯ ಸಂದರ್ಭ. ಮನಸ್ತಾಪ ಮರೆಯಲು ಉತ್ತಮ ಅವಕಾಶ. ದಸರೆಯ ದಿನ ಮನೆ ಮನೆಗೆ ಹೋಗಿ ಬನ್ನಿ ಕೊಡುವುದರೊಂದಿಗೆ ಹಬ್ಬದ ಹುರುಪು ಇಳಿಯುತಿತ್ತು. ಅಂದು ಸಂಜೆ ನಾವು ಹುಡುಗರಿಗೆ ಖುಷಿಯೋ ಖುಷಿ. ಅದರಲ್ಲೂ ಅಂಗಡಿಯವರು, ಕೆಲ ಯಜಮಾನರು ಬನ್ನಿ ತೆಗೆದುಕೊಂಡು ನಮಗೆ ವಾಪಸ್ಸು ಬನ್ನಿಯ ಜೊತೆಗೆ ಕಾಸು ಕೊಡುತ್ತಿದ್ದರು. ಅದೂ ಬಟ್ಟು ಅರ್ಧಾಣೆ ಕೊಡುವರು. ಯಾರಿಗೆ ಎಷ್ಟು ಹಣ ಬಂದಿದೆ ಎಂದು ಲೆಕ್ಕ ಹಾಕುವುದರಲ್ಲೆ ಮುಂದಿನ ಎರಡು ದಿನ ಕಳೆದುಹೋಗುತ್ತಿತ್ತು. ನಾವು ಪೈಪೋಟಿಯಲ್ಲಿ ಎಲ್ಲರ ಮನೆಗೆ ಹೋಗಿ ಬನ್ನಿ ಕೊಡುತ್ತಿದ್ದೆವು. ರಾತ್ರಿ ಊಟದ ಮುಂಚೆ ನಮ್ಮನ್ನೆಲ್ಲ ಕೂಡಿಸಿಕೊಂಡು ನಮ್ಮ ಅಜ್ಜಿ, `ಶಮೇ ಶಮಯತೆ ಪಾಪಂ ಶಮೆ ಶತ್ರು ನಿವಾರಣಂ ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯದರ್ಶನಂ' ಎಂಬ ಶ್ಲೋಕ ಹೇಳಿಸುತಿದ್ದರು. ನಮಗೋ ಸಂಗ್ರಹವಾದ ಕಾಸನ್ನು ಎಣಿಸುವ ಆತುರ. ಆದರೂ ಅವರು ಬಿಡುತ್ತಿರಲಿಲ್ಲ. ಅದರಿಂದ ಒಳ್ಳೆಯದಾಗುವುದು ಎನ್ನುತ್ತಿದ್ದರು.
ನಮಗಂತೂ ಆಗಲೆ ದಸರೆಯಿಂದ ಒಳ್ಳೆಯದಾಗಿತ್ತು. ಯಾರಿಗೆ ಎಷ್ಟು ಬಂದಿದೆ ಎಂದು ಎಣಿಸುವುದು ಬಾಕಿ ಇತ್ತು. ಅಬ್ಬಬ್ಬಾ ಎಂದರೆ ಐದಾರು ಆಣೆ ಬಂದರೆ ಹೆಚ್ಚು. ಅಂದ ಹಾಗೆ ಆಗ ರೊಕ್ಕದ ಲೆಕ್ಕವೆ ಬೇರೆ. ಒಂದು ರೂಪಾಯಿಗೆ 16 ಆಣೆ. ಒಂದು ಆಣೆಗೆ 12 ಪೈಸೆ. ಒಂದು ರೂಪಾಯಿಗೆ 192 ಪೈಸೆ. ಅದನ್ನು ಕಾಸು ಎಂದೂ ಎನ್ನುವರು. ಮೂರು ಪೈಸೆಗೆ ಒಂದು ಬಟ್ಟು ಅಥವ ಬಿಲ್ಲಿ ಎಂದು ಕರೆಯತಿದ್ದರು. ಕಾಸಿಗೆ ದಮ್ಮಡಿ ದುಗ್ಗಾಣಿ ಎಂದೂ ಹೆಸರಿತ್ತು. ಯಾರಾದರೂ ಬಹಳ ಜಿಪುಣನಿದ್ದರೆ ಅವನು ಕಿಲುಬು ದುಗ್ಗಾಣಿಯನ್ನೂ ಬಿಡುವವನಲ್ಲ ಎಂದು ಹಾಸ್ಯ ಮಾಡುತಿದ್ದರು. ಅದೆ ಅತಿ ಕನಿಷ್ಠ ಬೆಲೆಯ ನಾಣ್ಯ. ಆಗ ಹಣಕ್ಕೆ ಬೆಲೆ ಬಹಳ. ಪುರಂದರದಾಸರ ಪದವೆ ಇದೆ, "ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ ತಾರೆ ಬಿಂದಿಗೆ, ಬಿಂದಿಗೆ ಒಡೆದರೆ ಒಂದೆ ಕಾಸು ತಾರೆ ಬಿಂದಿಗೆಯ" ಐವತ್ತರ ದಶಕದಲ್ಲಿ ನಯಾ ಪೈಸೆ ಬಂದವು. ಆಣೆ, ಎರಡಾಣೆ, ಪಾವಲಿಗಳ ಬಳಕೆ ಬಂದಾಯಿತು. ಮೈಸೂರು ದಸರಾ ಮೆರವಣಿಗೆ (ಸಂಗ್ರಹ) ಬಹುಶಃ ಸಾಲಿಗುಡಿಯ ನಂತರ ಹೊಸ ಪೈಸೆಗಳು ಬಂದವು ಎಂದು ಕಾಣುತ್ತದೆ. ಆಗಿನಿಂದ ರುಪಾಯಿಗಳಿಗೆ ನೂರು ಪೈಸೆಗಳು. ನಮಗೆ ರೊಕ್ಕದ ಲೆಕ್ಕಾಚಾರ ಸರಳವಾಯಿತು. ರೂಪಾಯಿ, ಆಣೆ, ಪೈಗಳ ಬದಲಾಗಿ ಸರಳವಾಗಿ ರುಪಾಯಿ ಮತ್ತು ಪೈ ಲೆಕ್ಕ ಮಾಡುವುದು ಸುಲಭ. ಆದರೆ ಹೊಸ ವಿಧಾನಕ್ಕೆ ಒಗ್ಗಲು ಹಳ್ಳಿಗರಿಗೆ ಕೆಲ ವರ್ಷಗಳೆ ಬೇಕಾದವು. ಒಂದು ಆಣೆಗೆ ಎಷ್ಟು ಪೈ ಎಂದು ಕೇಳಿದರೆ ಆರು ಎಂದಾಗ ರೂಪಾಯಿಗೆ 96 ಆಗುವುದಲ್ಲ ಎಂದು ತಲೆ ಕೆರೆದುಕೊಳ್ಳುವರು. ನನಗೆ ಸಾಲಿಗುಡಿ ಅನುಭವ ಬಹಳ ದಿನ ದೊರಕಲಿಲ್ಲ. ಅದು ಬೇಗ ಮುಗಿದುಹೋಯಿತು. ನಮ್ಮ ಊರಲ್ಲಿ ಬೋರ್ಡು ಸ್ಕೂಲು ಪ್ರಾರಂಭವಾಯಿತು. ಐದನೆ ತರಗತಿಯ ತನಕ ಕಲಿಸುವ ಸರಕಾರಿ ಶಾಲೆ ಶುರುವಾಯಿತು. ನನ್ನನ್ನು ಅಲ್ಲಿ ಸೇರಿಸಿದರು.  

No comments:

Post a Comment