Tuesday, August 21, 2012

ಶಿಕ್ಷಣವೆಂಬ ಮಲ್ಲಿಗೆ ಶಿಕ್ಷಣವೆಂಬ ಹಿಟ್ಟು

http://kendasampige.com/images/trans.gif
http://kendasampige.com/images/trans.gif
ನರಸಿಂಹರಾಜ ಪುರದಲ್ಲಿ ವರದಿ ಮಾಡಿಕೊಂಡ ತಿಂಗಳೊಪ್ಪತ್ತಿನಲ್ಲೆ ಮನೆ ಮಾಡಿದೆ. ಬಹುತೇಕರು ಪರಕೀಯ ವಾತಾವರಣದೊಳಗೆ ಹೆಂಡತಿ ಮಕ್ಕಳು ಕಷ್ಟಪಡುವುದನ್ನು ಸಹಿಸಲಾರರು. ತಾವೊಬ್ಬರೆ ಹೋಗಿ ತಿಂಗಳಿಗೆ ಒಂದೆರಡು ಸಲ ರಜಾದಲ್ಲಿ ಮನೆಗೆ ಭೇಟಿ ನೀಡುವರು. ಸಾಧ್ಯವಾದಷ್ಟು ಬೇಗ ಹತ್ತಿರದ ಸ್ಥಳಕ್ಕೆ ವರ್ಗಾವಣೆ ಮಾಡಿಕೊಳ್ಳುವರು. ಆದರೆ ನಾನು ಕುಟುಂಬ ವತ್ಸಲ. ಮನೆ ಹಕ್ಕಿ. ಇತರೆ ಹವ್ಯಾಸಗಳಿಲ್ಲ. ಕೆಲಸ ಮುಗಿಸಿ ಮನೆಗೆ ಬಂದಾಗ ಹೆಂಡತಿ ನಗುತ್ತಾ ಬಾಗಿಲು ತೆರೆದರೆ ಆಯಾಸ ಮಟಾ ಮಾಯ. ಕಾಲೇಜಿಗೆ ಹೋಗುವಾಗ ಬಾಗಿಲತನಕ ಬಂದು best of luck ಹೇಳಿದರೆ ಸಾಕು ಆನೆಯ ಬಲ ಬಂದಂತೆ. ಆದರೆ ಮನೆಯ ನೆನಪು ಮಾತ್ರ ಮರಳಿ ಬಂದು ಹೆಂಡತಿಯ ಮುಖ ಕಂಡಾಗಲೆ! ಅದರಿಂದ ನನ್ನದು ಗುಡಿ ಗುಂಟೆ ಜೋಗೇರ ಸಂಸಾರ. ಎಲ್ಲಿಗೆ ಹೋಗಲಿ ಮಡದಿ ಮಕ್ಕಳು ಜೊತೆಗೆ ಇರಬೇಕು. ನನ್ನ ಎಲ್ಲ ಮಕ್ಕಳ ಶಿಕ್ಷಣವೂ ಸರ್ಕಾರಿ ಶಾಲೆಗಳಲ್ಲೆ. ನನ್ನ ಓದುವ ಹವ್ಯಾಸ ಮತ್ತು ವಾಯು ಸಂಚಾರ ಗಾಳಿ ಅವರಿಗೂ ತಗುಲಿತು. ಇದರಿಂದ ಮಕ್ಕಳು ದೇಶಸುತ್ತಿ, ಕೋಶ ಓದಿ ಸಾಕಷ್ಟು ಕಲಿತರು.
ಒಂದು ರೀತಿಯಲ್ಲಿ ನಾನು ಅದೃಷ್ಟಶಾಲಿ. ಚಿಕ್ಕಂದಿನಲ್ಲಿ ನನಗೆ ಮದುವೆಯಾಗಿ ಮಕ್ಕಳಾಗುವ ತನಕ  ಮನೆಯ ಹೊಣೆ ಅಪ್ಪನದು. ಸಂಬಳ ತಂದು ಕೈಗೆ ಹಾಕಿದರೆ ಮುಗಿಯಿತು. ನನಗೆ ಬೇಕಾದಾಗ ಬೇಕಾದಷ್ಟು ಹಣ ಪಡೆಯುತಿದ್ದೆ. ಎಷ್ಟೋ ಸಲ ಅವರ ಸಡಿಲ ಕೈನಿಂದಾಗಿ ಅಗತ್ಯವಿದ್ದಾಗ ಹಣವೆ ಇರುತ್ತಿರಲಿಲ್ಲ. ಆ ಕ್ಷಣಕ್ಕೆ ತುಸು ರೇಗಾಡಿದರೂ ಮತ್ತೆ ಮೊದಲಿನಂತೆ ಆಗುತಿತ್ತು. ಹನ್ನೆರಡು ಜನರಲ್ಲಿ ಉಳಿದವರು ಇಬ್ಬರು ತಮ್ಮಂದಿರು ಇಬ್ಬರು ತಂಗಿಯರು. ನನಗೂ ನನ್ನ ಕೊನೆ ತಮ್ಮನಿಗೂ ಇಪ್ಪತ್ತು ವರ್ಷಗಳ ವ್ಯತ್ಯಾಸ. ಅವರೆಲ್ಲರ ಓದು ಬರಹ ಯೋಗಕ್ಷೇಮದ ಹೊಣೆ ನನ್ನದೆ. ಜತೆಗೆ ತಾಯಿಲ್ಲದ ನಮ್ಮ ಅಕ್ಕನ ಮಗನೂ ನಮ್ಮಲ್ಲಿಯೆ ಇದ್ದ. ಇನ್ನು ಶಿಷ್ಯ ಬಳಗವಂತೂ ಸದಾ ಜೊತೆಗೆ ಇರುತಿದ್ದರು. ಸ್ವಂತ ಊರಿನಿಂದ ದೂರದ ಊರಿಗೆ ಹೋದಾಗ ನನ್ನ ತಮ್ಮಂದಿರ ಸಹಾಯದಿಂದ ಮನೆ ವಾರ್ತೆಯನ್ನು ಹೆಂಡತಿಯೆ ಸಾಗಿಸುತ್ತಿದ್ದಳು. ನಂತರ ಮಕ್ಕಳು ದೊಡ್ಡವರಾದಾಗ ಅವರು ಸಹಾಯ ಮಾಡುತಿದ್ದರು. ಹಾಗಾಗಿ ನಾನು ಅಕ್ಕಿಬೇಳೆ ಬೆಲೆ ಬಗ್ಗೆ ತಲೆ ಕೆಡಸಿಕೊಂಡವನೆ ಅಲ್ಲ. ಇದರಿಂದ ನನಗೆ ಮನೆಯ ಕಾಷ್ಟ ವ್ಯಸನದ ಬಿಸಿ ತಾಕಲೆ ಇಲ್ಲ. ಪಾಠ ಪ್ರವಚನ ಕೆಲಸದಲ್ಲೆ ಪೂರ್ತಿ ಮಗ್ನ.
ಹೊಸ ಊರಿಗೆ ನನ್ನ ಜೊತೆ ಮಲ್ಲಿಕಾರ್ಜುನ ಎಂಬ ವಿದ್ಯಾರ್ಥಿ ಬಂದ. ಜಗ್ಗಲಿ ಮಲ್ಲಪ್ಪ ನಮ್ಮ ಅಪ್ಪನಿಗೆ ಬೇಕಾದ ರೈತನೊಬ್ಬನ ಮಗ. ಓದಿ ಬ್ಯಾಂಕಿನಲ್ಲಿ ಕೆಲಸ ಮಾಡಲಿ ಎಂದು ಅವನ ಹಂಬಲ. ಊರಲ್ಲಿರುವ ತನಕ ಅವನ ವಾಸ ನಮ್ಮಲ್ಲೆ. ಊಟಕ್ಕೆ ಮಾತ್ರ ಮನೆಗೆ ಹೋಗುತಿದ್ದ. ಆದರೆ ನನಗೆ ಬಡ್ತಿ ಬಂತು ಓದಿದರೆ ಬ್ಯಾಂಕು, ಫೇಲಾದರೆ ಬಾರುಕೋಲು ಎಂದು ಹೇಳಿ ನನ್ನ ಜೊತೆಗೆ ಕಳುಹಿಸಿದ್ದ. ಅದೇನೋ ಕೊನೆತನಕ ನಾನು ಎಲ್ಲಿಗೇ ಹೋಗಲಿ ಒಂದಲ್ಲ ಒಂದು ಬಾಲಂಗೋಚಿ ಇದ್ದೆ ಇರುತಿತ್ತು. ಕುರುಬರ ಹೇಮಪ್ಪ, ಕೊರಚರ ತಿಮ್ಮಪ್ಪ, ನಾಯಕರ ಹುಲುಗಪ್ಪ, ಲಚಿನಕೇರಿ ಸಿದ್ದರಾಮ, ಅಂಗಡಿ ವಿಜಯ್, ಜತೆಗೆ ನನ್ನ ಹೆಂಡತಿಯ ಸೋದರರ ಮಕ್ಕಳು ಹಲವು ಹಂತದಲ್ಲಿ ವರ್ಷಗಳ ವರೆಗೆ ಕುಟುಂಬದ ಭಾಗವಾಗಿದ್ದರು. ನಮ್ಮ ಮನೆ ಒಂದು ಕಿರು ಗುರುಕುಲ. ಅವರಲ್ಲಿ ಕೆಲವರು ತಮ್ಮ ವೆಚ್ಚವನ್ನೂ ಭರಿಸುತಿದ್ದರು.
ಇಲ್ಲಿ ಎಲ್ಲ ನಾಡ ಹಂಚಿನ ಮನೆಗಳು. ಮಳೆಗಾಲ ಒಂದು ರೀತಿಯಾದರೆ ಚಳಿಗಾಲದಲ್ಲಂತೂ ಬಾಗಿಲ ಸಂದಿಯಿಂದ ಚಾಕುವಿನಂತೆ ಚುಚ್ಚುವ ಚಳಿ. ಅದಕ್ಕೆ ಅವಕ್ಕೆ ಎರಡು ಪದರ ಕಾಗದ ಅಂಟಿಸುವರು. ಅಲ್ಲಿ ಎಲ್ಲರ ಮನೆಯಲ್ಲೂ ಒಲೆಯ ಮೇಲೆ ಬಿಸಿಬಿಸಿ ಕಾಫಿ ಡಿಕಾಷನ್‌ ಇರಲೇಬೇಕು. ಆದರೆ ನಾವಂತೂ ಆ ಚಳಿಯಲ್ಲೂ ಕಾಫಿ ಕುಡಿವ ಅಭ್ಯಾಸ ಕಲಿಯಲಿಲ್ಲ.
ಮಳೆಯಷ್ಟೆ ಪುಷ್ಕಳ ಅಲ್ಲಿನ ಕಟ್ಟಿಗೆ. ಎಲ್ಲಿ ನೋಡಿದರೂ ಮುಗಿಲೆತ್ತರದ ಮರಗಳು. ಹತ್ತು ರಾಪಾಯಿ ಕೊಟ್ಟರೆ ಗಾಡಿ ಕಟ್ಟಿಗೆ. ಅಲ್ಲಿರುವ ಸಾಮಿಲ್ಲಿನಲ್ಲಿ ನಾಟಾಗಳು ರಾಸಿ ರಾಸಿ. ಅವುಗಳ ದಪ್ಪ ತೊಗಟೆಗಳು ಉಚಿತ. ಮಲ್ಲಿಕಾರ್ಜುನ ಅವನ್ನು ತಾನೆ ತಂದು ಚಿಕ್ಕ ಕೊಡಲಿಯೊಂದರಿಂದ ಕಡಿದು ಉರುವಲು ಒದಗಿಸುತಿದ್ದ. ಅಲ್ಲಿ ಹಾವುಗಳ ಹರಿದಾಟ ಬಹಳ ನಮಗೆ ಗಾಬರಿ. ನಮ್ಮಲ್ಲಿ ಹಾವು ಕಂಡರೆ ಗುಲ್ಲೆ ಗುಲ್ಲು. ಅದನ್ನು ಕೊಲ್ಲುವ ತನಕ ಯಾರಿಗೂ ನೆಮ್ಮದಿಯೆ ಇಲ್ಲ. `ಕಲ್ಲುನಾಗರ ಕಂಡರೆ ಹಾಲನೆರೆ ಎಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾಎಂದು ಬಸವಣ್ಣನವರ ವಚನವೆ ಇದೆ. ಇಲ್ಲಿ ಹಾಗಲ್ಲ. ಅವುಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಒಂದು ಸಲವಂತೂ ನಮ್ಮ ಪಕ್ಕದ ಮನೆಯವರು ಹಾವೊಂದನ್ನು ಉದ್ದನೆಯ ಕೋಲು ಹಿಡಿದು ನಾಗಪ್ಪಾ ಹೋಗು ಎಂದು ದೂರ ತಳ್ಳುತ್ತಾ ಇರುವುದು ನೋಡಿ ನಂಬಲೆ ಆಗಲಿಲ್ಲ. ಬಹುಶಃ ಹಾವುಗಳು ಹೊಟ್ಟೆ ತುಂಬಿ ಜಡವಾಗಿದ್ದವೋ ಇಲ್ಲವೆ ಪೊರೆ ಬಂದುದರಿಂದ ಚುರುಕಾಗಿರಲಿಲ್ಲವೋ ತಿಳಿಯದು. ಚಳಿಪ್ರದೇಶದಲ್ಲಿ ಹಾವುಗಳು ವಿಷಪೂರಿತವಲ್ಲ, ಅವು ಹೆಚ್ಚಾಗಿ ಕಚ್ಚುವುದೂ ಇಲ್ಲ ಎಂದು ನಂತರ ಗೊತ್ತಾಯಿತು. ಆದರೆ ಹಾವು ಕಚ್ಚಿ ಸತ್ತ ಸುದ್ದಿಯನ್ನಂತೂ ನಾನು ಅಲ್ಲಿ ಕೇಳಲೆ ಇಲ್ಲ. ಪರಿಸರ ಸಮತೋಲನದಲ್ಲಿ ಹಾವುಗಳ ಪಾತ್ರ ಹಿರಿದು. ಅದು ಜೈವಿಕ ಕೀಟ ನಿಯಂತ್ರಕ. ಬೆಕ್ಕನ್ನು ಕೊಂದರೆ ಪಾಪ ಸುತ್ತಿಕೊಳ್ಳುವುದು ಎಂಬ ನಂಬಿಕೆಯೂ ಇಲಿ ಹೆಗ್ಗಣ ಮೊದಲಾದ ಕೀಟ ಭಾಧೆಗಳನ್ನು ತಡೆಯುವ ಜೈವಿಕ ಕೀಟ ನಿಯಂತ್ರಣದ ಒಂದು ವಿಧಾನ. ನಮ್ಮಲ್ಲಿ ಕೋತಿ ಸಾಕ್ಷಾತ್‌ ಭಗವಂತ. ಅವುಗಳ ಕಾಟ ಹೆಚ್ಚಾದರೆ ಹಿಡಿದು ಕಾಡಿಗೆ ಬಿಡುವರೆ ವಿನಹ ಕೊಲ್ಲುವುದಿಲ್ಲ. ಹಸುವಿನಲ್ಲಿ ಮೂವತ್ತು ಮೂರುಕೋಟಿ ದೇವತೆಗಳಿರುವರು ಎಂಬ ನಂಬಿಕೆಗೂ ಉತ್ಥಾನ ದ್ವಾದಶಿಯಂದು ನೆಲ್ಲಿ ಗಿಡದ ಪೂಜೆ, ದಸರೆಯಲ್ಲಿ ಬನ್ನಿ ಗಿಡದ ಪೂಜೆ, ಅಶ್ವತ್ಥ ಕಟ್ಟೆ, ನಾಗರ ಬನ, ದೇವರ ಕಾಡುಗಳ ಹಿಂದೆ ಪರಿಸರಪ್ರಜ್ಞೆ ಕೆಲಸ ಮಾಡಿರುವಂತೆ ಕಾಣುತ್ತದೆ. ಇದೂ ದೈವಭೀತಿ ಹುಟ್ಟಿಸಿ ಅರಣ್ಯನಾಶ ತಡೆಯುವ ಪ್ರಯತ್ನ.
ಅಲ್ಲಿ ಕಾಡು ಎಷ್ಟು ದಟ್ಟವಾಗಿತ್ತೆಂದರೆ ಕಡಿಯಲು ಕೂಲಿಗಳದೆ ಅಭಾವ. ಅದಕ್ಕೆಂದೆ ಕೇರಳದಿಂದ ಕಾರ್ಮಿಕರು ಬರುತಿದ್ದರು. ಅದರಲ್ಲೂ ಮಾಪಿಳ್ಳೆಗಳು, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರೆ ಅಧಿಕ. ಅದರಿಂದ ನಮ್ಮ ಕಾಲೇಜಿನಲ್ಲೂ ಇಬ್ಬರು ಮೂವರು ವರ್ಗೀಸ್‌, ಜೋಸೆಫ್, ಮ್ಯಾಥ್ಯೂ ಹೆಸರಿನವರು ಇರುತಿದ್ದರು. ಸ್ಥಳೀಯರಾದ ಗೌಡರು ಕೃಷಿಕರು. ಎರಡು ಸಮುದಾಯದ ನಡುವೆ ಸದಾ ದುಸು ಮುಸು. ಕಾಲೇಜಿನಲ್ಲೂ ಅದರ ನೆರಳು ಕಾಣತಿತ್ತು
ದಿನವೂ ವಾಯು ವಿಹಾರಕ್ಕೆ ಹೋದಾಗ ಮನೆಯೊಂದರ ಮುಂದೆ ಹಾದು ಹೋಗುವಾಗ ಸುವಾಸನೆ ಸೂಸುತಿತ್ತು. ಅದು ಅಲ್ಲಿನ ಸ್ಥಳೀಯ ನಾಯಕರೊಬ್ಬರ ಮನೆ. ದೇವರ ಪೂಜೆಗೆ ಗಂಧ ತೇಯಲು ಗಂಧದ ಚಕ್ಕೆ ನೋಡಿದ್ದ ನನಗೆ ಅವರ ಮನೆಯ ಕಿಟಕಿ ಚೌಕಟ್ಟು ಬಾಗಿಲು, ಮಂಚ ಕುರ್ಚಿಗಳೆಲ್ಲವೂ ಶುದ್ಧ ಶ್ರೀಗಂಧದೆಂದು ಕೇಳಿ ಬಹಳ ಅಚ್ಚರಿಯಾಯಿತು. ಒಂದು ಬಾರಿ ಗುಡಿಸಲ ಪಕ್ಕದಲ್ಲಿ ಹೋಗುತ್ತಿರುವಾಗಲೂ ಗಂಧದ ವಾಸನೆ ಮೂಗಿನ ಸೆಲೆ ಒಡೆಯುವಷ್ಟು ಬಂದಿತು. ಇಣುಕಿ ನೋಡಿದಾಗ ಒಲೆಯಲ್ಲಿ ಹಸಿರೆಲೆ ತುಂಬಿದ ರೆಂಬೆ ಧಗಧಗನೆ ಉರಿಯುತಿತ್ತು. ಅದರಿಂದ ಹೊಗೆ ಬರುತಿತ್ತು. ನಂತರ ತಿಳಿಯಿತು ಗಂಧದ ಕೊಂಬೆ ರೆಂಬೆಗಳು ಹಸಿಯಿದ್ದಾಗಲೂ ಅದರಲ್ಲಿನ ಎಣ್ಣೆಯ ಅಂಶದಿಂದಾಗಿ ಚೆನ್ನಾಗಿ ಹತ್ತಿ ಉರಿಯುವವು. ಈ ರೀತಿಯಾಗಿ ಬಡವ ಬಲ್ಲಿದರಿಬ್ಬರೂ ಎಗ್ಗಿಲ್ಲದೆ ಅರಣ್ಯ ಸಂಪತ್ತನ್ನು ದುರ್ಬಳಕೆ ಮಾಡಿಕೊಳ್ಳುತಿದ್ದರು. ಇನ್ನು ಸಾಗುವಾನಿ ಮತ್ತು ಬೀಟೆ ಮರಗಳ ಮಾರಣಹೋಮ ಸತತ ಸಾಗಿತ್ತು. ಇತ್ತೀಚೆಗೆ ಹೋದಾಗ ಅಲ್ಲಿನ ದಟ್ಟ ಅರಣ್ಯದ ಬದಲು ಕಾಂಕ್ರೀಟ್‌ ಕಾಡು ಎದ್ದಿದೆ. ಅನೇಕ ವರ್ಷಗಳ ಕಾಡು ಕಡಿತದ ಪರಿಣಾಮ, ಈಗ ಮಲೆನಾಡಿನಲ್ಲೆ ಜಲಕ್ಷಾಮ.
ಪಿಯುಸಿ ತರಗತಿಗೆ ತುಸು ಅಳುಕಿನಿಂದಲೆ ಹೊರಟೆ. ಕಾಲೇಜಿಗೆ ಪಾಠ ಮಾಡಿದ ಅನುಭವ ಇರಲಿಲ್ಲ. ತರಗತಿಗೆ ಹೋದ ಕೂಡಲೆ ಬೋರ್ಡಿನ ಮೇಲೆ ನನ್ನದೇ ವ್ಯಂಗ್ಯ ಚಿತ್ರ ಕಂಡಿತು. ಕ್ಷಣ ಹೊತ್ತು ಅಪ್ರತಿಭನಾದೆ. ಏನೂ ಪ್ರತಿಕ್ರಿಯೆ ವ್ಯಕ್ತಪಡಿಸದೆ ಹಾಜರಿ ಹಾಕಿದೆ. ನಂತರ ಡಸ್ಟರ್‌ ಹಿಡಿದು ಬೋರ್ಡಿನ ಕಡೆ ನಡೆದೆ. ಅಲ್ಲಿ ತುಸು ನಿಂತು ತರಗತಿಯ ಕಡೆ ತಿರುಗಿ ನನಗೆ ಈ ಚಿತ್ರ ಅಳಿಸಲು ಮನಸ್ಸು ಬರುತ್ತಿಲ್ಲ. ತುಂಬ ಚೆನ್ನಾಗಿದೆ. ಬಹುತೇಕ ನನ್ನನ್ನೆ ಹೋಲುತ್ತದೆ. ಇದನ್ನು ಬರೆದ ಪ್ರತಿಭಾವಂತ ಯಾರು ಎಂದೆ. ನನ್ನ ಈ ಪ್ರತಿಕ್ರಿಯೆಯಿಂದ ಅವರು ದಂಗಾದರು.
ಸಾಮಾನ್ಯ ಶಿಕ್ಷಣ ಎಲ್ಲರಿಗೂ ಸಿಗುವುದು ಆದರೆ ಕಲೆ ಕೆಲವರಿಗೆ ಮಾತ್ರ ಒಲಿಯುವುದು. ನಮ್ಮಲ್ಲಿ ಒಬ್ಬ ಕಲಾವಿದ ಇರುವುದು ಹೆಮ್ಮೆಯ ವಿಷಯ ಯಾರು ಅವರು ಎಂದೆ. ಹಿಂದಿನ ಬೆಂಚಿನಿಂದ ಒಬ್ಬ ಎದ್ದುನಿಂತ. ಅವನ ಹೆಸರು ವರ್ಗೀಸ್‌.
ಇದಲ್ಲದೆ ಬೇರೆ ಏನಾದರೂ ಚಿತ್ರಗಳನ್ನು ರಚಿಸಿರುವೆಯಾ ಕೇಳಿದೆ. ಅವನು ತಲೆಯಾಡಿಸಿದ. ಹಾಗಿದ್ದರೆ ಅವನ್ನು ನಂತರ ತಂದು ತೋರಿಸು ಎಂದೆ.
ಮಾರನೆ ದಿನ ಅವನು ಹತ್ತಾರು ಚಿತ್ರಗಳನ್ನು ತಂದು ತೋರಿಸಿದ. ರೇಖಾಚಿತ್ರಗಳು ಚೆನ್ನಾಗಿದ್ದವು. ವರ್ಣ ಸಂಯೋಜನೆ ಕೈ ಕುದರಬೇಕಿತ್ತು. ಅವನಿಗೆ ಆಸಕ್ತಿ ಇದ್ದರೆ ಚಿತ್ರಕಲಾ ಶಾಲೆ ಸೇರಲು ತಿಳಿಸಿದೆ. ಇಲ್ಲವೆ ಆಚಾರ್ಯ ಅವರ ABC ಅಂಚೆ ತೆರಪಿನ ಶಿಕ್ಷಣ ಪಡೆಯಬಹುದು ಎಂದು ಸಲಹೆ ನೀಡಿದೆ. ಅವನೂ ಅವನ ಜತೆ ಬಂದ ಇನ್ನೊಬ್ಬನೂ ಅದರಿಂದ ಉತ್ತೇಜಿತರಾದರು. ನಂತರ ತರಗತಿಯಲ್ಲಿ ಗೊಂದಲವಾಗಲೆ ಇಲ್ಲ.
ಗ್ರಾಮಾಂತರ ವಿದ್ಯಾರ್ಥಿಗಳಿಗೆ ಆಂಗ್ಲಭಾಷೆ ಕಲಿಕೆ ಕಬ್ಬಿಣದ ಕಡಲೆ. ಒಬ್ಬ ಹೈಸ್ಕೂಲು ವಿದ್ಯಾರ್ಥಿ ಕೇಳಿದ. `Fragile ಪದದ ಉಚ್ಛಾರಣೆ ಫ್ರಾಜೈಲ್‌ಎಂದು ಏಕೆ ಅನ್ನಬೇಕು? ಫ್ರಾಗೈಲ್‌ ಏಕೆ ಅನ್ನಬಾರದು? ಇಂಗ್ಲಿಷ್‌ನಲ್ಲಿ ಬರೆಯುವುದು ಒಂದು ಮತ್ತು ಓದುವುದು ಮತ್ತೊಂದು. Put ಪುಟ್‌ ಆದರೆ But ಬಟ್‌ ಏಕೆ? ಇದಕ್ಕೆ ವೈಜ್ಞಾನಿಕ ವಿವರಣೆ ಕೊಡುವುದು ಸರಳವಲ್ಲ. ವಿಶೇಷವಾಗಿ C ಮತ್ತು J ಅಕ್ಷರಗಳ ಬಳಕೆ ಬಹಳ ಸಂದಿಗ್ದ. ಸಿ ಬಳಸಿದರೆ ಸ ಮತ್ತು ಕ ಎರಡೂ ವ್ಯಂಜನಗಳು ಬರುವವು. ಜೆ ಬಳಸಿದರೆ ಗ ಮತ್ತು ಜ ವ್ಯಂಜನಗಳು ಬರುತ್ತವೆ. ಅದು ಹೇಗೆ? ಎಂದು ಹಳ್ಳಿಯ ಮಕ್ಕಳಿಗೆ ತಿಳಿಸಿ ಹೇಳುವುದು ಅಷ್ಟು ಸಲೀಸಲ್ಲ. ಇನ್ನು ಕೆಲವು ಅಕ್ಷರಗಳು silent ಆಗುವವು. ಅನೇಕರು ವಿದ್ಯಾವಂತರೂ ಕೂಡಾ Psychology ಯನ್ನು ಪಿಸ್ಕಾಲಜಿ ಎನ್ನುವುದನ್ನು ಕೇಳಿರುವೆ. ಇದಕ್ಕೆ ಇರುವ ಏಕೈಕ ಪರಿಹಾರ ಆ ಭಾಷೆಯ ಸತತ ಬಳಕೆ. ಓದು, ಬರಹ, ಮಾತು ಮತ್ತು ಆಲಿಸುವ ಅವಕಾಶ.
ಅನೇಕರು ಇಂಗ್ಲಿಷ್‌ ಪಾಠವನ್ನೂ ಭಾಷಾಂತರ ಪದ್ಧತಿ ಬಳಸಿ ಮಾಡುವರು. ಕನ್ನಡದಲ್ಲಿ ಹೇಳಿದರೆ ಮಕ್ಕಳಿಗೆ ಅರ್ಥವಾಗುವುದು ಎಂಬ ಮಾತು ನಿಜ. ಆದರೆ ಬಳಸಲು ಬರುವುದೆ ಎಂದಾಗ ಮಹಾ ಮೌನ. ಹಿಂದುಳಿದ ಜಿಲ್ಲೆಗಳ, ಹಳ್ಳಿಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ತರಗತಿಯ ಹೊರಗೆ ಇಂಗ್ಲಿಷ್‌ ಕೇಳುವ ಮತ್ತು ಓದುವ ಸೌಲಭ್ಯವಿಲ್ಲ ಮಾತನಾಡುವ ಅವಕಾಶ ಮೊದಲೆ ಇಲ್ಲ. ವಿಪರ್ಯಾಸ ಎಂದರೆ ಕನ್ನಡ, ಹಿಂದಿ, ಗಣಿತ, ಶಿಕ್ಷಕರಿಗೆ ಅವರ ವಿಷಯದಲ್ಲಿ ಪದವಿ ಮತ್ತು ತರಬೇತಿ ಕಡ್ಡಾಯ ಆದರೆ ಇಂಗ್ಲಿಷ್‌ ಪಾಠ ಯಾರಾದರೂ ಮಾಡಬಹುದು. ಪರಿಣಾಮ ಹೇಗೆ ಮಾಡಿದರೂ ನಡೆಯುವುದು. ಉರು ಹಚ್ಚಿ ಪರೀಕ್ಷೆಯಲ್ಲಿ ಬರೆದು ಪಾಸಾದವರು ಆಂಗ್ಲ ಮಾಧ್ಯಮಕ್ಕೆ ಬಂದಾಗ ತ್ರಿಶಂಕುಗಳು. ಎಳವೆಯಲ್ಲೆ ಮಕ್ಕಳ ಕಿವಿಯ ಮೇಲೆ ಇಂಗ್ಲಿಷ್‌ ಭಾಷೆ ಬೀಳುತಿದ್ದರೆ ಮತ್ತು ಹೆಚ್ಚುವರಿಯಾಗಿ ಓದಲು ಅವಕಾಶ ದೊರೆತರೆ ಬರಹ ಮತ್ತು ಮಾತು ಸುಧಾರಿಸುತ್ತವೆ.
ಕನ್ನಡ ಅಭಿಮಾನದಿಂದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಮತ್ತು ಪ್ರಾಥಮಿಕ ಹಂತದಲ್ಲಿ ಕಲಿಸುವುದಕ್ಕೆ ವಿರೋಧವಿದೆ. ಇದರ ನೇರ ಪರಿಣಾಮ ಬಡ ಮತ್ತು ಹಳ್ಳಿಯ ಮಕ್ಕಳ ಮೇಲೆ. ಸಿರಿವಂತ ಮತ್ತು ಸುಶಿಕ್ಷಿತರ ಮಕ್ಕಳು ಕಿಂಡರ್‌ ಗಾರ್ಡನ್‌ ಹಂತದಿಂದಲೆ ಲಕ್ಷಗಟ್ಟಲೆ ಶುಲ್ಕ ನೀಡಿ ಖಾಸಗಿ ಶಾಲೆಗಳಲ್ಲಿ ಕಲಿತು ನವಬ್ರಾಹ್ಮಣರಾಗುವರು. ಜಾಗತೀಕರಣದಿಂದ ಅವಕಾಶಗಳನ್ನೆಲ್ಲ ಭಾಷೆ ಬಲ್ಲವರೆ ಬಾಚಿಕೊಳ್ಳುವರು. ಸಮಾಜ ಇದರಿಂದ ಇಂಗ್ಲಿಷ್‌ ಬಲ್ಲವರು ಮತ್ತು ಬಾರದವರು ಎಂದು ಎರಡು ಸೀಳಾಗಿದೆ. ಕನ್ನಡ ಮಾತ್ರ ಕಲಿತವರು ದೈಹಿಕ ಕೆಲಸಗಳಿಗೆ ಮಾತ್ರ ಲಾಯಕ್ಕು ಎಂಬ ವಾತಾವರಣವಿದೆ. ಹಳ್ಳಿಗರು ಪಡೆದ ಪದವಿ ಅಲಂಕಾರಕ್ಕೆ ಮಾತ್ರ ಉದ್ಯೋಗಾವಕಾಶ ಕಡಿಮೆ.
ಮಂಡ್ಯ, ಕೋಲಾರ, ಗುಲ್ಬರ್ಗ, ಬೀದರ್‌ ಗಳಲ್ಲಿ ಅದರಲ್ಲೂ ಎಲ್ಲ ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯ. ಪಠ್ಯಕ್ರಮ ರೂಪಿಸುವಾಗ ಒಂದು ನಿರ್ದಿಷ್ಟ ಪೂರ್ವ ಜ್ಞಾನದ ಆಧಾರದ ಮೇಲೆ ಮುಂದಿನ ಕಲಿಕೆಯ ಪ್ರಮಾಣ ನಿರ್ಧರಿಸುವರು. ಆದರೆ ಬಹುತೇಕ ಮಕ್ಕಳಿಗೆ ಪೂರ್ವ ಜ್ಞಾನದ ಕೊರತೆ. ಅವರಿಗೆ ಕಲಿಸುವುದು ನೀರಿಳಿಯದ ಗಂಟಲಲ್ಲಿ ಕಡಬು ತುರುಕಿದಂತೆ. ಈವಿಷಯವನ್ನು ಕುರಿತು ಅನೇಕ ಇಂಗ್ಲಿಷ್‌ ಬೋಧನಾ ಶಿಬಿರಗಳಲ್ಲಿ ಪರಿಣಿತರನ್ನು ಕೇಳಿದಾಗ ಮೌನವೆ ಅವರ ಉತ್ತರ. ಸೇವಾಂತರ್ಗತ ತರಬೇತಿ ಶಿಬಿರಗಳಲ್ಲಿ  `What does the man from Mandya say?’ ಎಂದು ವಿಚಾರಿಸುವ ಮಟ್ಟಿಗೆ ನಾನು ಈ ಪ್ರಶ್ನೆ ಚರ್ಚಿಸಿರುವೆ. ಫಲಿತಾಂಶ ಮಾತ್ರ ನಿಲುಕದ ನಕ್ಷತ್ರ. ಕನ್ನಡ ಮಾಧ್ಯಮದಲ್ಲಿ ಓದಿ ಉನ್ನತ ಮಟ್ಟಕ್ಕೆ ಏರಿದವರೂ ಇದ್ದಾರೆ. ಅವರ ಸಂಖ್ಯೆ ಕಡಿಮೆ. ಅದಕ್ಕೆ ಅವರ ವಿಶೇಷ ಪರಿಶ್ರಮ, ಬದ್ದತೆ ಇರುವ ಶಿಕ್ಷಕರು ಮತ್ತು ಕೌಟುಂಬಿಕ ಹಿನ್ನಲೆ ಕಾರಣ. ಆದರೆ ಎಲ್ಲರಿಗೂ ಅವು ಲಭ್ಯವಿಲ್ಲ. ಭಾಷೆ ಭಾವನಾತ್ಮಕ ವಿಷಯವಾಗದೆ ವಾಸ್ತವಾಂಶಗಳ ನೆಲಗಟ್ಟಿನ ಮೇಲೆ ನಿಂತಾಗ ಮಾತ್ರ ಶಿಕ್ಷಣ ಸಾರ್ಥಕವಾಗುವುದು. `ನ ಹಿ ಜ್ಞಾನೇನ ಸದೃಶ್ಯಂಎಂಬ ನುಡಿ  ಸತ್ಯ. ಆದರೆ ಶಿಕ್ಷಣ ಜುಟ್ಟಿಗೆ ಮಲ್ಲಿಗೆ ಮುಡಿಸಿದರೆ ಸಾಲದು ಹೊಟ್ಟೆಗೆ ಹಿಟ್ಟೂ ಕೊಡಬೇಕು.
ಸರ್ಕಾರಿ ಶಾಲೆಗಳಲ್ಲಿ ಪ್ರತಿಭೆಯ ಆಧಾರದ ಮೇಲೆಯೆ ಶಿಕ್ಷಕರ ಆಯ್ಕೆ. ಅವರಿಗೆ ಕೈತುಂಬ ಸಂಬಳವೂ ಇದೆ. ಆದರೂ ಫಲಿತಾಂಶ ಶೋಚನೀಯ ಮತ್ತು ವಿದ್ಯಾರ್ಥಿಗಳ ಸಂಖ್ಯೆ ಇಳಿಯುತ್ತಲೆ ಇದೆ. ಶುಲ್ಕವೂ ಅತಿ ಕಡಿಮೆ. ಆದರೆ ಶಾಲೆಗಳು ಒಂದೊಂದೆ ಬಾಗಿಲು ಹಾಕುತ್ತಿರುವುದು ಇಂದಿಗೂ ಚಿದಂಬರ ರಹಸ್ಯ. ಸಮಸ್ಯೆಯ ಪರಿಹಾರಕ್ಕೆ ನಿವೃತ್ತನಾಗುವರೆಗೂ ನಡೆಸಿದ ಪ್ರಯತ್ನ ಇನ್ನೂ ಫಲ ಕಾಣಬೇಕಿದೆ. ಇಂದು ಶಿಕ್ಷಣ ಸೇವಾಕ್ಷೇತ್ರವಾಗಿ ಉಳಿದಿಲ್ಲ, ಬೃಹತ್‌ ಉದ್ಯಮವಾಗಿದೆ.
ನಮ್ಮ ಕಾಲೇಜಿನಲ್ಲಿ ಮಕ್ಕಳು ಬಹು ಚುರುಕು. ಹಸ್ತಪ್ರತಿ ಪತ್ರಿಕೆ ಹೊರತಂದರು. ತ್ಯಾಗಿ ಎಂಬ  ನಾಟಕ ಕಲಿಸಿದೆ. ಅದರಲ್ಲಿ ಅಮೋಘವಾಗಿ ನಟಿಸಿದ ಪುರುಷೋತ್ತಮ ಎಂಬ ವಿದ್ಯಾರ್ಥಿ ಮುಂದೆ ಸಿನೆಮಾರಂಗದಲ್ಲಿ ಮಿಂಚಿದ. ನಾನು ಕ್ರಮೇಣ ಹೊಸ ವಾತಾವರಣಕ್ಕೆ ಹೊಂದಿಕೊಂಡೆ. ಆದರೆ ಮನೆಯವರಿಗೆ ಹವಾಗುಣ ಹಿಡಿಸಲಿಲ್ಲ. ಹಸಿರು ಕಾಮಣಿಯಾಗಿ ಉಟ್ಟ ಬಟ್ಟೆಯೂ ಹಳದಿ ಕಾಣುತಿತ್ತು. ಸೂಕ್ತ ವೈದ್ಯಕೀಯ ಸೌಲಭ್ಯದ ಕೊರತೆ. ಎರಡೆ ವರ್ಷದಲ್ಲಿ ಬಯಲುಸೀಮೆಗೆ ವರ್ಗ ಮಾಡಿಸಿ ಕೊಂಡೆ. ಈಗಲೂ ಅಲ್ಲಿನ ದಟ್ಟ ಕಾಡು, ಹಿನ್ನೀರು, ಆಗುಂಬೆ, ಶೃಂಗೇರಿ, ಮಂಡಗದ್ದೆ ಪಕ್ಷಿಧಾಮಗಳು ಆಗಾಗ ನನ್ನ ಮನದಲ್ಲಿ ಮೂಡಿ ಮುದ ಕೊಡುತ್ತವೆ.
( ಮುಂದುವರಿಯುವುದು)


No comments:

Post a Comment