Monday, August 20, 2012

ಶಿಸ್ತು ಮೂಡಿಸುವ ಸುಸ್ತಿನ ಕೆಲಸ

                                                                           ಶಿಸ್ತು ಮೂಡಿಸುವ ಸುಸ್ತಿನ ಕೆಲಸ 
ಶಿಕ್ಷಣ ಎಂದರೆ ಮಕ್ಕಳಲ್ಲಿ ಶಿಸ್ತು ಮೂಡಿಸುವುದು ಎಂದೆ ಹಲವರು ದೃಢವಾಗಿ ನಂಬಿರುವರು. ಕಲಿಯುವುದು ಬಿಡುವುದು ನಂತರದ ಮಾತು ತರಗತಿಯಲ್ಲಿ ತೆಪ್ಪಗೆ ಕುಳಿತರೆ ಅರ್ಧ ಕಲಿತಂತೆ ಎನ್ನುವವರೂ ಇಲ್ಲದಿಲ್ಲ. ಬೆತ್ತ ಬೀಸಿಯೋ, ಬಾಯಿ ಜೋರಿನಿಂದಲೋ ತರಗತಿಯಲ್ಲಿ ತೆಪ್ಪಗೆ ಕುಳಿತಿರುವಂತೆ ಮಾಡುತ್ತಾರೆ. ಆದರೆ ಕಲಿಕೆಯ ಮಟ್ಟ ಸುಧಾರಿಸಿದೆಯೋ ಎಂದು ಕೇಳಿದರೆ ಬಾಯಿ ಬಂದಾಗುತ್ತದೆ. ಮಕ್ಕಳಲ್ಲಿ ಶಿಸ್ತು ಮೂಡಿಸುವುದು ಬಹಳ ಸುಸ್ತಿನ ಕೆಲಸ. ಅವರು ಹಕ್ಕಿಗಳ ತರಹ. ಗಟ್ಟಿಯಾಗಿ ಹಿಡಿದರೆ ಉಸಿರುಗಟ್ಟುತ್ತದೆ, ಸಡಿಲವಾದರೆ ಹಾರಿ ಹೋಗುತ್ತದೆ. ಶಿಸ್ತಿನ ವ್ಯಾಖ್ಯೆ ಕಾಲದಿಂದ ಕಾಲಕ್ಕೆ, ತಾಣದಿಂದ ತಾಣಕ್ಕೆ, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಅನುಭವದ ಹಿನ್ನೆಲೆಯಲ್ಲಿ ಹಲವು ಘಟನೆಗಳನ್ನು ಗಮನಿಸಿದಾಗ ಒಂದು ಸ್ಥೂಲ ಕಲ್ಪನೆ ಮೂಡುತ್ತದೆ.
ಮೊದಲನೆಯದಾಗಿ ಗುರುಗಳು ತರಗತಿಗೆ ಬರುವಾಗ ವಿದ್ಯಾಥಿಗಳು ಎದ್ದು ನಿಲ್ಲುವುದು ಪದ್ಧತಿ. ಅದು ಎಲ್ಲ ಕಡೆ ಚಾಲತಿಯಲ್ಲಿದೆ. ಅಷ್ಟೆ ಏಕೆ ಕೆಲವು ಸಭೆ  ಸಮಾರಂಭಗಳಲ್ಲಿ ಮುಖ್ಯ ಅತಿಥಿಗಳು ಬಂದಾಗ ಸಭಿಕರು ಎದ್ದುನಿಂತು ಗೌರವ ಸೂಚಿಸುವ ವಾಡಿಕೆ ಇದೆ.
ಆದರೆ ಈ ಸಂಪ್ರದಾಯ ಉನ್ನತ ತರಗತಿಗೆ ಹೋದಂತೆಲ್ಲ ಕಡಿಮೆಯಾಗುತ್ತಾ ಹೋಗುವುದು. ಕೆಲವರಂತೂ ಕಾಟಾಚಾರಕ್ಕೆ ಎದ್ದಂತೆ ಮಾಡಿ ಹಾಗೆ ಕುಳಿತೆ ಇರುವರು. ಅದಕ್ಕೆ ಒಬ್ಬರು ಜಾಣತನದಿಂದ ಒಂದು ಬದಲಾವಣೆ ತಂದರು, ನಾನು ಬಂದಾಗ ಎದ್ದು ನಿಲ್ಲುವುದು ನಿಮ್ಮಸೌಜನ್ಯ. ಅದಕ್ಕೆ ನಾನು ನಿಮಗೆ ದಯಮಾಡಿ ಕುಳಿತುಕೊಳ್ಳಿ ಎಂದು ಹೇಳಲೆಬೇಕು. ನಂತರ ನೀವು ಕುಳಿತುಕೊಳ್ಳಬಹುದು, ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಬಂದ ತಕ್ಷಣ ಹೇಳದೆ ಅರ್ಧನಿಮಿಷ ತಡೆದು `Please sit down’ ಎನ್ನುವರು.. ಆಗ ಯಾರು ನಿಂತಿಲ್ಲ ಎಂದು ಗಮನಕ್ಕೆ ಬರುವುದು. ಆಗ ನಿಂತಿರುವವರು ಕುಳಿತುಕೊಳ್ಳಿ ಮತ್ತು ಕುಳಿತಿರುವವರು ನಿಂತುಕೊಳ್ಳಿ ಎಂದು ಹೇಳಿದಾಗ ಅರೆ ಮನಸ್ಸಿನವರ ಬಣ್ಣ ಬಯಲಾಗಿ ಮುಂದಿನ ತರಗತಿಯಿಂದ ಸಮಸ್ಯೆ ತನ್ನಿಂದ ತಾನೆ ಇಲ್ಲವಾಯಿತು.
ತರಗತಿಯಲ್ಲಿ ಇನ್ನೊಂದು ಸಮಸ್ಯೆ ಎಂದರೆ ಮೊದಲ ಅವಧಿಯಲ್ಲಿ ಶಿಕ್ಷಕರು ಬಂದ ಮೇಲೆ ಒಬ್ಬೊಬ್ಬರೆ ತಡವಾಗಿ ಬರುವರು. ಮತ್ತು ಕೊನೆ ಅವಧಿಯಲ್ಲಿ ಪಾಠ ಮುಗಿಯುತ್ತಿದ್ದಂತೆಯೆ ದುಬಕ್ಕನೆ ಎದ್ದುಹೊರಡುವ ತಯಾರಿ ನಡೆಸುವರು. ಬಾಗಿಲ ಹತ್ತಿರ ಕುಳಿತವರಂತೂ ಎಲ್ಲರಿಗಿಂತಲೂ ಮೊದಲೆ ಹಾರಗ್ಗಾಲಿನಲ್ಲಿ ಹೊರಗೆ ಹೆಜ್ಜೆ ಹಾಕುವರು.
ನಾನು ಮೊದಲು ಇದನ್ನು ಗಮನಿಸಿದೆ. ೫-೧೦ ನಿಮಿಷ ತಡವಾಗಿ ಬಂದವರನ್ನು ತರಗತಿಯೊಳಗೆ ಬಿಡಲಾಗುತಿತ್ತು. ಅವರಿಂದ ಮಾನೀಟರ್‌ ಒಂದಾಣೆ ದಂಡ ವಸೂಲು ಮಾಡಿ ವಾರಕೊಮ್ಮೆ ಲೆಕ್ಕ ಒಪ್ಪಿಸುವನು. ಆ ಹಣವನ್ನು ತರಗತಿಯ ಸಾಮೂಹಿಕ ಅಗತ್ಯಕ್ಕಾಗೆ ಬಳಸಲು ಯೋಜಿಸಲಾಯಿತು. ಹಣ ಕೊಡಬೇಕಾಗುವುದಲ್ಲ ಎಂದು ಬಹುತೇಕರು ಸಮಯದೊಳಗೆ ಬರುತಿದ್ದರು. ವಾರಕ್ಕೆ ಒಂದು ರೂಪಾಯಿ ದಂಡದ ಹಣ ಆದರೆ ಹೆಚ್ಚು. ಎರಡುವಾರದ ನಂತರ ಒಮ್ಮೆ ಮಾನಿಟರ್‌ ಹತ್ತು ರೂಪಾಯಿಗೂ ಮಿಕ್ಕಿ ಹಣದ ಲೆಕ್ಕ ಕೊಟ್ಟ. ಇದೇಕೆ ಹೀಗಾಯಿತು ಎಂದು ಅಚ್ಚರಿ. ವಿಚಾರಿಸಿದಾಗ ಒಂದಿಬ್ಬರು ತಡವಾಗಿ ಬರುವುದನ್ನೆ ಹವ್ಯಾಸವಾಗಿ ಮಾಡಿಕೊಂಡು ಮುಂಗಡವಾಗಿ ಐದೈದು ರೂಪಾಯಿ ನೀಡಿದ್ದರಂತೆ. ಇಬ್ಬರು ತಡವಾದಾಗಲೆಲ್ಲ ತಮ್ಮ ಲೆಕ್ಕದಲ್ಲಿ ಹಿಡಿದುಕೊಳ್ಳಲು ತಿಳಿಸಿದ್ದರು. ಅಂದರೆ ಹಣ ನೀಡಿದರೆ ಶಿಸ್ತಿನ ಸಂಕೋಲೆ ಕಡಿಯಬಹುದು ಎಂಬ ಎಣಿಕೆ ಅವರದು. ಇದನ್ನು ಗಮನಿಸಿ ಆ ದಂಡ ವಸೂಲಿಯನ್ನೆ ಕೈ ಬಿಡಲಾಯಿತು. ನಂತರ ತುಸು ಯೋಚನೆ ಮಾಡಿ ಹೇಳಿದೆ. ಪ್ರತಿ ತರಗತಿಯಲ್ಲೂ ವಿದ್ಯಾರ್ಥಿಗಳು ತರಗತಿಗೆ ಶಿಕ್ಷಕರು ಬಂದನಂತರ ಬರುವ ಹಾಗಿಲ್ಲ ಮತ್ತು ಅವಧಿ ಮುಗಿದ ಮೇಲೆ ಶಿಕ್ಷಕರಿಗಿಂತ ಮುಂಚೆ ಹೊರ ಹೋಗುವ ಹಾಗಿಲ್ಲ, ಮತ್ತು ಅದನ್ನು ಬಿಗಿಯಾಗಿ ಆಚರಣೆಗೆ ತರಲಾಯಿತು.
ಇದರಿಂದ ಮೊದ ಮೊದಲು ಕೆಲ ಮಕ್ಕಳು ತರಗತಿಯ ಹೊರಗೆ ನಿಲ್ಲಬೇಕಾಗಿಬಂದರೂ ನಂತರ ಸಮಯಕ್ಕೆ ಸರಿಯಾಗಿ ತರಗತಿಯಲ್ಲಿ ಹಾಜರಾದರು. ನನ್ನ ತರಗತಿಯಲ್ಲಿ ಕೊನೆ ಅವಧಿಯಲ್ಲಿ ಕೊನೆ ಗಂಟೆಯಾದ ಮೇಲೆ ಅಕಸ್ಮಾತ್‌ ಯಾರಾದರೂ ಹೋಗಲು ಎದ್ದು ನಿಂತರೆ ನಾನು ಏನೂ ಮಾತನಾಡದೆ ಸುಮ್ಮನೆ ಕುರ್ಚಿಯಲ್ಲಿ ಕುಳಿತು ಬಿಡುತಿದ್ದೆ. ಬೇಕೆಂದೆ ಎರಡು ನಿಮಿಷ ತಡ ಮಾಡಿ ಹೊರ ಹೋಗುವೆ. ಬೇಗ ಹೋಗಬೇಕೆಂಬ ಅವರ ಆತುರದಿಂದ ಎಲ್ಲರಿಗೂ ಇನ್ನಷ್ಟು ತಡವಾಗುವುದು. ಅವರಿಗೆ ನಾಚಿಕೆಯಾಗಿ ತಮ್ಮ ಆತುರಕ್ಕೆ ಕಡಿವಾಣ ಹಾಕಿಕೊಳ್ಳುವರು.
ಆಗ ಎದುರಾದ ಇನ್ನೊಂದು ಸಮಸ್ಯೆ ಎಂದರೆ ಗೃಹ ಪಾಠ ಕುರಿತದ್ದು. ಗೃಹ ಪಾಠ ಕೊಟ್ಟಾಗ ಅರ್ಧಕ್ಕಿಂತ ಹೆಚ್ಚು ಜನ ಮಾಡುತ್ತಲೆ ಇರಲಿಲ್ಲ. ಮಾಡಿದವರಲ್ಲೂ ಹಲವು ದೋಷಗಳಿರುತಿದ್ದವು. ಐವತ್ತು ಮಕ್ಕಳ ಪುಸ್ತಕ ನೋಡುವುದು, ಮಾಡದೆ ಇರದವರ ಮೇಲೆ ಕ್ರಮ ತೆಗೆದುಕೊಳ್ಳುವುದರಲ್ಲಿ ಅರ್ಧ ಸಮಯ ಆಗಿ ಹೋಗುತಿತ್ತು. ಅದರಲ್ಲೂ ಕೆಲ ವಿದ್ಯಾರ್ಥಿಗಳು ಪಾಠ ಅರ್ಥವಾಗಿಲ್ಲ, ಲೆಕ್ಕ ಮಾಡಲು ಬರಲಿಲ್ಲ ಎಂದಾಗ ಅವರನ್ನು ಶಿಕ್ಷಿಸುವುದು ಸರಿಯಲ್ಲ  ಎನಿಸುವುದು. ಮೇಲಾಗಿ ಅವರಿಗೆ ಮನೆಯಲ್ಲಿ ಹೇಳಿಕೊಡುವವರು ಯಾರೂ ಇರಲಿಲ್ಲ. ತಂದೆ ತಾಯಿಗಳಿಗೆ ಆಗದು. ಬಹುತೇಕರು ಹಳ್ಳಿಯ ಜನ. ಶಿಕ್ಷಣ ಅವರ ಪಾಲಿಗೆ ಗಗನ ಕುಸುಮ. ಪ್ರತಿಯೊಬ್ಬರರಿಗೂ ತಿದ್ದುತ್ತಾ ಹೋದರೆ ಜಾಣ ಮಕ್ಕಳಿಗೆ ಬೇಸರ. ಮಾಡಬೇಕಾದ ಪಾಠ ಪ್ರವಚನ ನಿಗದಿತ ಸಮಯದಲ್ಲಿ ಮುಗಿಸಲಾಗದು. ಹಾಗೆಂದು ಗೃಹಪಾಠ ಕೈ ಬಿಡುವ ಹಾಗಿಲ್ಲ. ಅವರಿಗೆ ಮನದಟ್ಟಾಗಲು ಪುನರಾವರ್ತನೆ ಅಗತ್ಯ. ಅದಕ್ಕಾಗಿ ಒಂದು ಉಪಾಯ ಹೊಳೆಯಿತು. ಅನೇಕ ಸಲ ಶಿಕ್ಷಕರನ್ನು ಕೇಳಲು ಮಕ್ಕಳಿಗೆ ಹಿಂಜರಿಕೆ ಮತ್ತು ಭಯ. ಅದೆ ತಮ್ಮ ಗೆಳೆಯನನ್ನು ಕೇಳಲು ಸಂಕೋಚವಿರದು. ಅದಕ್ಕೆ ಜಾಣ ವಿದ್ಯಾರ್ಥಿಗಳನ್ನು ಆಯ್ದು ಅವರ  ನಾಯಕತ್ವದಲ್ಲಿ ಐದು ಜನರ ತಂಡ ರಚಿಸಲಾಯಿತು. ತಂಡದ ಸದಸ್ಯರು ಗೃಹಪಾಠ ಮಾಡಿ ನಾಯಕನಿಗೆ ಕೊಡಬೇಕು ಅನುಮಾವಿದ್ದರೆ ಅವನ ಸಲಹೆ ಸಹಾಯ ಪಡೆಯಬಹುದು. ಅವನು ಅವರ ಎಲ್ಲರ ಗೃಹಪಾಠ ಪರಿಶೀಲನೆ ಮಾಡುವನು. ಆ ನಾಯಕರ ಗೃಹಪಾಠದ ಪುಸ್ತಕವನ್ನು ಮೊದಲೆ ತಿದ್ದಲಾಗುತಿತ್ತು. ಜತೆಗೆ ಅವರ ತಂಡದಲ್ಲಿನ ಒಂದು ಪುಸ್ತಕವನ್ನು ಅನಾಮತ್ತಾಗಿ ಆರಿಸಿ ನೋಡಲಾಗುತಿತ್ತು. ಇದರಿಂದ ಅವರೂ ನಿರ್ಲಕ್ಷ್ಯ ಮಾಡಲು ಆಗುತ್ತಿರಲಿಲ್ಲ.
ಹುಡುಗಿಯರದೆ ಪ್ರತ್ಯೇಕ ತಂಡವಿರುತಿತ್ತು. ತಮ್ಮ ತಂಡದಲ್ಲಿ ಯಾರಾದರೂ ಲೆಕ್ಕ ಮಾಡದೆ ಇದ್ದರೆ ತಿಳಿಸಬೇಕಿತ್ತು. ಅವರ ಮೇಲೆ ಕ್ರಮ ಜರುಗುತಿತ್ತು. ಮೊದಮೊದಲು ಜಾಣ ಮಕ್ಕಳು ಹೆಚ್ಚಿನ ಹೊರೆ ಎಂದು ಗೊಣಗಿದರೂ ಅದರಿಂದ ದೊರೆಯುವ ಪ್ರತಿಷ್ಠೆ ಅವರಿಗೆ ಖುಷಿ ಕೊಟ್ಟಿತು. ಜತೆಗೆ ನಾಲಕ್ಕು ಜನರ ಮೇಲ್ವಿಚಾರಣೆ ಮಾಡುವುದರಿಂದ ಅವರಿಗೂ ಪಾಠ ಮನದಟ್ಟಾಗುವುದು. ಇದರ ಪರಿಣಾಮವಾಗಿ ಬಹುತೇಕರು ಸುಧಾರಿಸಿದರು, ಮತ್ತು ಎಲ್ಲ ತಂಡದ ನಾಯಕರೂ ಮೊದಲಿಗಿಂತ ೮-೧೦ ಅಂಕಗಳನ್ನು ಹೆಚ್ಚು ಪಡೆದರು.
ಪಾಠ ಮಾಡುವಾಗ ತರಗತಿಯಲ್ಲಿ ಕೆಲವು ಶಿಕ್ಷಕರು ಇದ್ದಾಗ ಪಿನ್‌ಡ್ರಾಪ್‌ ನಿಶಬ್ದವಾದರೆ ಇನ್ನು ಹಲವು ಶಿಕ್ಷಕರ ತರಗತಿಗಳಲ್ಲಿ ಡ್ರಮ್‌ ಡ್ರಾಪ್‌ ಶಬ್ದ. ಅದೇ ತರಗತಿ ಅದೇ ಮಕ್ಕಳು. ಕಾರಣ ದೋಷ ಖಂಡಿತ ಮಕ್ಕಳದ್ದಲ್ಲ. ಶಿಕ್ಷಕರು ತರಗತಿಗೆ ಪೂರ್ಣ ತಯಾರಿಯಿಂದ ಹೋದರೆ ಯಾವುದೆ ಗಲಾಟೆಗೆ ಅವಕಾಶವಿಲ್ಲ. ಅನೇಕರು ಉಡಾಫೆಯಿಂದ ತರಗತಿಗೆ ಹೋಗುವರು. ಸಹಜವಾಗಿ ವಿಷಯಾಂತರವಾಗುವುದು. ಮಕ್ಕಳು ನಗುವರು. ಸಲಿಗೆ ಬೆಳೆಯುವುದು. ಅದರ ದುರುಪಯೋಗವೂ ಆಗುವುದು. ಬೋಧನೆ ಮಾಡುವಾಗ ಗಲಾಟೆ ಮಾಡಿದರೆ ಶಿಕ್ಷಕ ತುಸು ಹೊತ್ತು ಪಾಠ ನಿಲ್ಲಿಸಿ ದಿಟ್ಟಿಸಿ ನೋಡಿದರೆ ಸಾಕು. ತರಗತಿ ನಿಯಂತ್ರಣಕ್ಕೆ ಬರುವುದು `ನಲಿ ಮತ್ತು ಕಲಿಉತ್ತಮ ಪಾಠವಿಧಾನ. ಆದರೆ ಬರಿ ನಲಿಯುವುದೇ ಆದರೆ ಕಲಿಕೆ ಕಾಲು ಕಸವಾಗುವುದು. ಹಾಗೆಂದು ಮೋರೆ ಸಿಂಡರಿಸಿಕೊಂಡು ಹುಬ್ಬು ಗಂಟು ಹಾಕಿಕೊಂಡು ಗುರ್‌ ಎನ್ನುತ್ತಾ ಇದ್ದರೂ ವಿದ್ಯಾರ್ಥಿಗಳ ಕಲಿಕೆಗೆ ಉತ್ತೇಜನ ಸಿಗುವುದಿಲ್ಲ. ಇನ್ನು ಕೆಲವರು ಊದುವ ಶಂಖ ಊದಿದರಾಯಿತು ಮಾದೇವನ ಪೂಜೆ ಆದರೆಷ್ಟು ಬಿಟ್ಟರೆಷ್ಟು ಎಂಬ ಮನೋಭಾವದವರು. ಆಗ ಆ ಬೋಧನೆ ಬರಿ ಕಂಠಶೋಷಣೆ. ಶಿಕ್ಷಕರಿಗೆ ಎಷ್ಟು ತಿಳಿದಿದೆ ಎಂಬುದಕ್ಕಿಂತ ಹೇಗೆ, ತಿಳಿಸುವರು ಅತಿ ಮುಖ್ಯ. ಇನ್ನೊಂದು ಮುಖ್ಯ ಅಂಶವೆಂದರೆ ಮಕ್ಕಳ ಮನಸ್ಸು. ಮೇಣದ ಮುದ್ದೆ. ಅವರು ಅನುಕರಣೆಯಿಂದ ಕಲಿಯವರು. ಆದ್ದರಿಂದಲೆ ಶಿಕ್ಷಕರು ಉತ್ತಮ ಮಾದರಿ ಹಾಕಿಕೊಡಬೇಕು.
ವಿದ್ಯಾರ್ಥಿಗಳು ತಪ್ಪುಮಾಡಿದರೆ ತಿದ್ದುವುದಕ್ಕೆ ಯಾವುದೆ ಸಿದ್ಧ ವಿಧಾನವಿಲ್ಲ. ಮೊದಲು ಅವರ ತಪ್ಪಿನ ಅರಿವು ಅವರಲ್ಲಿ ಮೂಡಿಸಬೇಕಾಗುವುದು. ಅರಿತೋ ಅರಿಯದೆಯೋ ತಪ್ಪು ಮಾಡಿದರೆ ದೋಷಕ್ಕೆ ದಂಡನೆಯಾಗಬೇಕೆ ವಿನಃ ದೋಷಿಗೆ ಅಲ್ಲ. ಸಹ ಶಿಕ್ಷಣವಿರುವ ಶಾಲೆಯಲ್ಲಿ ಸಹಜವಾಗಿ ಗಂಡು ಹುಡುಗರು ತಮ್ಮ ಹಿರಿಮೆ ಮೆರೆಯಲು ನೋಡುತ್ತಾರೆ. ಯಾರೆ ಆಗಲಿ ಶಿಕ್ಷಕರು ವಿದ್ಯಾರ್ಥಿನಿಗೆ ಹೆಚ್ಚಿನ ಆದ್ಯತೆ ಕೊಟ್ಟರೆ ಹುಡುಗರ ಮನದಲ್ಲಿ ಅಸೂಯೆಯ ಕಿಡಿ ಮೂಡುವುದು. ಅದು ಬೇರೆ ರೂಪವನ್ನೆ ಪಡೆಯಬಹುದು, ಗುಸು ಗುಸು ಪಿಸಿಪಿಸಿಗೆ ಕಾರಣವಾಗುವುದು. ಯಾವಾಗಾದರೊಮ್ಮೆ ಹುಡುಗಿಯರನ್ನು ಲಘುವಾಗಿ ಟೀಕಿಸಿದರೆ ಹುಡುಗರಿಗಾಗುವ ಸಂತೋಷವನ್ನು ನೋಡಿಯೇ ತಿಳಿಯಬೇಕು. ಆದರೆ ಅದು ಸದಭಿರುಚಿಯ, ಸಾರ್ವತ್ರಿಕ ಅಭಿಪ್ರಾಯವಾಗಿರುವುದು  ಅಗತ್ಯ. ಅಂದಾಗ ಎಲ್ಲರೂ ನಗುನಗುತ್ತಾ ಸ್ವೀಕರಿಸುವರು.
ಅದರಿಂದ ಶಿಕ್ಷಕನು ದಂಡಿಸುವಾಗಲೂ ನಗು ನಗುತ್ತಾ ಇದ್ದರೆ, ವಿದ್ಯಾರ್ಥಿಯ ಆತ್ಮಗೌರವಕ್ಕೆ ಧಕ್ಕೆ ತಾರದಿದ್ದರೆ ಯಾವುದೆ ಸಮಸ್ಯೆ ಬರುವುದಿಲ್ಲ. ಮಾಡಿದ ತಪ್ಪನ್ನು ತೋರಿಸಿದಾಗ ತಲೆಬಾಗುವುದು ಖಂಡಿತ. ಅದರ ಅನುಭವ ನನಗಾಯಿತು. ಒಂದು ದಿನ ಅದೇಕೋ ನನಗೆ ಶಾಲೆಗೆ ಬರುವುದು ತುಸು ತಡವಾಯಿತು. ಎಷ್ಟೆ ಜೋರಾಗಿ ಸೈಕಲ್ಲು ತುಳಿದರೂ ಬರುವಷ್ಟರಲ್ಲಿ ಪ್ರಾರ್ಥನೆ ಮುಗಿದು ಹೋಗಿತ್ತು. ಆಫೀಸು ರೂಮಿನಲ್ಲಿ ಏರಿದ ದನಿಯಲ್ಲಿ ಚರ್ಚೆ. ಹೆಡ್‌ ಮಾಸ್ಟರ್‌ ಯಾಕೋ ಕೋಪದಿಂದ ಕೆಂಪಾಗಿದ್ದರು. ನಮ್ಮ ದೈಹಿಕ ಶಿಕ್ಷಕರು ಕೈಕೈ ಹಿಚುಕಿಕೊಳ್ಳುತ್ತಾ ನೀಂತಿದ್ದರು. ನಮ್ಮ ಹೆಡ್‌ಮಾಸ್ಟರ್‌ ಹಳೆ ಮೈಸೂರು ಕಡೆಯವರು. ಬಹಳ ಮೆದು. ಆದರೆ ಇಂದು ವೀರಭದ್ರಾವತಾರ ತಾಳಿರುವರು.
ಕಾರಣ ತಿಳಿಯಿತು. ಪ್ರಾರ್ಥನೆ ಸಮಯದಲ್ಲಿ ಸಮವಸ್ತ್ರ ಹಾಕಿಕೊಂಡು ಬಾರದವರನ್ನು ಬೇರೆ ನಿಲ್ಲಿಸಿ ನಂತರ ಲಘುವಾದ ಶಿಕ್ಷೆಕೊಡುವುದು ವಾಡಿಕೆ. ಅಂದು ಪ್ರಾರ್ಥನೆ ನಡೆಸಿಕೊಡಬೇಕಾದ ಶಾಲಾ ವಿದ್ಯಾರ್ಥಿ ನಾಯಕನೆ ಸಮವಸ್ತ್ರ ಧರಿಸಿರಲಿಲ್ಲ. ಅದನ್ನು ಗಮನಿಸಿದ ಹೆಡ್‌ ಮಾಸ್ಟರು ಅವನನ್ನು ಎಲ್ಲರ ಹಿಂದೆ ಹೋಗಿ ನಿಲ್ಲುವಂತೆ ಗದರಿದರು.
ಪ್ರಾರ್ಥನೆಯಾದ ಮೇಲೆ ಎಲ್ಲರ ಎದುರಲ್ಲೆ `ಲೀಡರನೆ ಹೀಗಾದರೆ ಉಳಿದವರ ಗತಿ ಏನು. ನಿನಗೆ ಚೆನ್ನಾಗಿ ಬುದ್ಧಿ ಕಲಿಸುವೆಎಂದು ಜವಾನನಿಗೆ ಬೆತ್ತ ತರಲು ತಿಳಿಸಿದರು. ಅವನು ತಪ್ಪಾಯಿತು ಎನ್ನುತಿದ್ದರೂ ನೂರಾರು ಮಕ್ಕಳ ಎದುರೆ ಎರಡು ಏಟು ಬಾರಿಸಿಯೆ ಬಿಟ್ಟರು.
ಪ್ರತಿ ಸಲ ದೈಹಿಕ ಶಿಕ್ಷಕರು ಪ್ರಾರ್ಥನೆ ಮುಗಿದ ಮೇಲೆ ಒಂದೋ ಎರಡೋ ಏಟುಕೊಟ್ಟು ತರಗತಿಗೆ ಕಳುಹಿಸುವರು. ಸಾಧಾರಣವಾಗಿ ಮಕ್ಕಳು ತಪ್ಪಾಯಿತು, ಬಟ್ಟೆ ಒಗೆದಿರಲಿಲ್ಲ, ಹೀಗೆ ಏನೋ ಕಾರಣ ಹೇಳುವುದು ವಾಡಿಕೆ. ಇರುವುದನ್ನೆ ಹಾಕಿಕೊಂಡು ಬಾ ಎಂದು ಮನೆಗೆ ಕಳುಹಿಸುವುದೂ ಇತ್ತು. ಆದರೆ ಎಸ್‌ಪಿಎಲ್‌ ತುಸು ಸೊಕ್ಕಿನಿಂದಲೆ ನಿಂತಿರುವ. ಏಕೆ ಸಮವಸ್ತ್ರ ಹಾಕಿಕೊಂಡಿಲ್ಲ ಎಂದರೆ ಉತ್ತರಿಸುವ ಗೋಜಿಗೆ ಹೋಗಿಲ್ಲ. ಎಲ್ಲರೆದರು ಅದರಲ್ಲೂ ಹುಡುಗಿಯರ ಎದುರು ಅವಮಾನವಾಯಿತು ಎಂದು ಅವನ ಅಸಮಾಧಾನ. ಅವನು ಉತ್ತರ ಕೊಡದೆ ಇರುವುದು ಹೆಡ್‌ಮಾಸ್ಟರಿಗೆ ಕೋಪ ತರಿಸಿದೆ. ಇವನ ಸೊಕ್ಕು ಮುರಿಯಬೇಕು. ತರಗತಿಗೆ ಸೇರಿಸಬೇಡಿ ಹೊರಹಾಕಿ ಎಂದು ಗುಡುಗಿದ್ದಾರೆ. 
ನೀನೇನು ಹೊರ ಹಾಕುವುದು ನಾನೆ ಹೋಗುವೆ, ಎಂದು ಮರು ನುಡಿದಿರುವನು. ಇದರಿಂದ ಅವರಿಗೆ ರೇಗಿದೆ.
ನೋಡಿ ಮಾಸ್ಟ್ರೆ ಅವನಿಗೆ ಪರಿಜ್ಞಾನವೆ ಇಲ್ಲ ಏಕವಚನದಲ್ಲಿ ಮಾತನಾಡುತ್ತಾನೆ, ಶಾಲೆಯಿಂದ ಸಸ್ಪೆಂಡು ಮಾಡುವೆ ಎಂದು ಗದರಿರುವರು. ಅವನೂ ರೇಗಿ ನನ್ನನ್ನು ಸಸ್ಪೆಂಡು ಮಾಡುವೆಯಾ, ಮಾಡು, ನಿನ್ನ ಶಾಲೆ ಯಾರಿಗೆ ಬೇಕು, ಹೊರಗೆ ಬಾ ನೋಡಿಕೊಳ್ಳುವೆ ಎಂದು ಗುಡುಗಿ ಕಾಂಪೌಂಡಿನ ಹೊರಗೆ ಗೇಟಿನ ಹತ್ತಿರ ವಟಗುಡುತ್ತಾ ನಿಂತಿದ್ದಾನೆ.
ಎಲ್ಲರೂ ಐದು ಹತ್ತು ನಿಮಿಷಗಳಲ್ಲಿ ನಡೆದ ಘಟನೆಗಳಿಂದ ಕಂಗಾಲಾಗಿದ್ದಾರೆ. ಹೆಡ್‌ ಮಾಸ್ಟರ್‌ ಗುಮಾಸ್ತರಿಗೆ ಅವನನ್ನು ಶಾಲೆಯಿಂದ ಅಮಾನತ್ತು ಮಾಡಿದ ನೋಟೀಸು ಬರೆಯಲು ಆದೇಶಿಸಿರುವರು. ಅದೆ ಸಮಯದಲ್ಲಿ ನಾನು ಒಳ ಹೋದೆ. ವಿಷಯ ತಿಳಿಯಿತು. ಅವನು ಶಾಲಾ ವಿದ್ಯಾರ್ಥಿ ನಾಯಕ. ಅಂತಹ ಜಾಣ ವಿದ್ಯಾರ್ಥಿಯಲ್ಲ. ಆದರೆ ಉತ್ತಮ ಕ್ರೀಡಾಪಟು ತುಸು ದುಡುಕ ಸ್ವಭಾವ. ಆದರೆ ಕೆಡುಕನಲ್ಲ. ನಮ್ಮ ದೈಹಿಕ ಶಿಕ್ಷಕರಿಗೆ ಪಟ್ಟದ ಶಿಷ್ಯ.
ನಾನು ಹೇಳಿದೆ, `ಸಾರ್‌, ಈ ಘಟನೆಯನ್ನು ಇನ್ನೂ ದೊಡ್ಡದು ಮಾಡುವುದು ಬೇಡ. ಅವನನ್ನು ಅಮಾನತ್ತಿನಲ್ಲಿಟ್ಟರೆ ವೈಮನಸ್ಸು ಇನ್ನೂ ಹೆಚ್ಚುವುದು. ಇದೊಂದು ಸಲ ಕ್ಷಮಿಸಿ ಬಿಡಿಎಂದು ವಿನಂತಿ ಮಾಡಿಕೊಂಡೆ.
`ಅವನು ತಪ್ಪಾಯಿತು ಎಂದು ಹೇಳಿದರೆ ತಾನೆ ಕ್ಷಮಿಸುವುದು. ಅವನ ಗುಂಡಾಗಿರಿಗೆ ಹೆದರಬೇಕೆ? ಆದದ್ದಾಗಲಿ ಇಂತಹ ಕೆಟ್ಟ ಹುಳುಗಳನ್ನು ಹೊರಗೆ ಹಾಕಬೇಕು.
`ಏನೋ ಅಚಾತುರ್ಯವಾಗಿದೆ. ಅವನು ತಪ್ಪಾಯಿತು ಎಂದು ಹೇಳಿದರೆ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ನೀವು ಭರವಸೆ ನೀಡಿದರೆ ನಾನು ಅವನ ಜೊತೆ ಮಾತನಾಡುವೆ. ಸಣ್ಣ ವಿಷಯಕ್ಕೆ ಬೀದಿ ಜಗಳವಾಗುವುದು ಬೇಡ.'
`ಡ್ರಿಲ್‌ ಮಾಸ್ಟರ್‌ ಇದ್ದರು, ಅವರನ್ನೆ ಕೇಳಿ, ಅವನ ಮಾತು ಮತ್ತು ವರ್ತನೆ ಹೇಗಿತ್ತು ಅಂತ. ಅವನು ಕೈ ನೋಡಿಕೊಳ್ಳೂವೆ, ಹೊರಗೆ ಬನ್ನಿ ಎಂದು ಧಮಕಿ ಹಾಕುತ್ತಿರುವನು, ರಸ್ತೆಯಲ್ಲಿ ನಿಂತು ಕೂಗಾಡುತ್ತಿರುವನು' ಎಂದರು.
`ಸಾರ್‌, ಖಂಡಿತವಾಗಿಯೂ ಅವನು ನಿಮ್ಮ ಕಾಲು ಹಿಡಿದು ಕ್ಷಮೆ ಕೇಳುವಂತೆ ಮಾಡುವೆ. ನೀವು ದಯಮಾಡಿ ಕ್ಷಮಿಸಿರಿ' ಎಂದೆ.
`ನಿಮಗೆಲ್ಲೋ ಭ್ರಮೆ, ಆದರೂ ಒಂದು ಅವಕಾಶ ಕೊಡುವೆ ಪ್ರಯತ್ನಿಸಿ' ಎಂದರು.
ಹೊರಗೆ ಬಂದು `ಏನಪ್ಪಾ ಇದು ನಿನ್ನ ಪ್ರತಾಪ?' ಎಂದು ಪ್ರಶ್ನಿಸಿದೆ.
`ನೋಡಿ ಸಾರ್‌, ನನಗೆ ಹೊರ ಹಾಕುವರಂತೆ, ಯೂನಿಫಾರಂ ಹಾಕಿಲ್ಲ ಎಂದು ಬಾಯಿಗೆ ಬಂದಂತೆ ಬೈದರು. ಅದೂ ಹುಡುಗಿಯರ ಎದುರಲ್ಲಿ. ಇಂಥ ಶಾಲೆ ಯಾರಿಗೆ ಬೇಕು' ಎಂದ.
`ದೊಡ್ಡವರ ಒಂದು ಮಾತು ಅಂದರೆ ಸಹಿಸಬೇಕು.'
`ಸಾರ್‌, ಅದೆ ಮಾತನ್ನು ನಗುತ್ತಾ ಹೇಳಿದ್ದರೆ, ಸುಮ್ಮನಿರುತಿದ್ದೆ. ನೀವು ಎಷ್ಟುಸಲ ಹೊಡೆದಿಲ್ಲ. ನಾನು ಎದುರು ಮಾತನಾಡಿರುವೆನಾ? ಕೊನೆಗೆ ನಮ್ಮ ಡ್ರಿಲ್‌ ಮಾಸ್ಟರ್ ಆದರೂ ನನ್ನ ಪರವಾಗಿ ಒಂದು ಮಾತನಾಡಲಿಲ್ಲ.'
`ಅದೆಲ್ಲ ಸರಿ. ಈಗ ನಾನು ಖಾತ್ರಿ ಕೊಟ್ಟಿರುವೆ. ನೀನು ಕೆಟ್ಟ ಹುಡುಗನಲ್ಲ. ದುಡುಕಿ ಮಾತನಾಡಿರುವೆ, ಇನ್ನೊಮ್ಮೆ ಹೀಗೆ ಮಾಡುವುದಿಲ್ಲ' ಎಂದು.
`ಹೌದು ಸಾರ್‌ ಕೋಪದಲ್ಲಿ ಹಾಗೆ, ಅಂದೆ.'
 
`ಈಗ ಬಂದು ತಪ್ಪಾಯಿತು ಎಂದು ಹೇಳು ಎಲ್ಲ ಸರಿಯಾಗುವುದು' ಎಂದೆ.
ಅವನು ಹಿಂದೆ ಮುಂದೆ ನೋಡಿದ.
`ಈಗ ನನ್ನ ಮಾತು ಉಳಿಸುವೆಯೋ ಇಲ್ಲವೋ ಅಷ್ಟು ಹೇಳು. ನಿನ್ನ ಪರವಾಗಿ ಮಾತನಾಡಿರುವೆ. ಬಂದು ಗುರುಗಳ ಕಾಲಿಗೆ ಬಿದ್ದು  ಕ್ಷಮಿಸಲು ಕೇಳು' ಎಂದೆ. 
`ಆಯ್ತು ನಿಮ್ಮ ಮಾತಿಗೆ ಕಟ್ಟುಬಿದ್ದು ಕ್ಷಮೆ ಕೇಳುವೆ' ಎಂದ.
ಶಾಲೆಯೊಳಗೆ ಬಂದು ಸೀದಾ ಹೆಡ್‌ ಮಾಸ್ಟರ್‌ ಕಾಲಿಗೆ ಬಿದ್ದ. ಅವರು ದೊಡ್ಡ ಮನಸ್ಸು ಮಾಡಿ ಸುಮ್ಮನಾದರು, ಕೈ ನೋಡಿಕೊಳ್ಳುವೆ ಎಂದವನು ಕಾಲು ಹಿಡಿದ.
ಒಂದು ಒಳ್ಳೆಯ ಮಾತು ಆಗಬಹುದಾದ ಅನಾಹುತ ತಪ್ಪಿಸಿತು.


No comments:

Post a Comment