Thursday, September 6, 2012

ಹಾಲುತುಪ್ಪಕ್ಕೆ ಹೋಗಲೇ ಇಲ್ಲ !



ಮಂಡ್ಯ ಜಿಲ್ಲೆಯ ಹಳ್ಳಿಯ ಕಾಲೇಜಿನಲ್ಲಿ ಪ್ರಭಾರೆ ಪ್ರಾಂಶುಪಾಲನಾಗಿದ್ದೆ.. ಅದು ಹೇಳಿ ಕೇಳಿ ಗೌಡರ ಪಾಳ್ಯ. ಬಹಳ ಹುಷಾರಾಗಿರಿ ಎಂದು ಅನೇಕರು ಎಚ್ಚರಿಕೆ ನೀಡಿದ್ದರು. ನಾನಿದ್ದ ಊರು ಒಕ್ಕಲಿಗರ ಗಂಡು ಮೆಟ್ಟಿನ ಪ್ರದೇಶ. ಮಂಡ್ಯದ ಗಂಡು ಅಂಬರೀಷ್‌ ಹುಟ್ಟಿದ ಊರಿಗೆ ಹತ್ತಿರ. ಮಂಡ್ಯದ ಗೌಡರೆಂದರೆ ಯಾಕೋ ಹಲವರಿಗೆ ಪುಕಪುಕ.ಅವರು ಅನ್ಯಾಯ ಸಹಿಸುವರಲ್ಲ. ಕಾನೂನು ಕಟ್ಟಳೆ ಎಂದು ಕೈ ಕಟ್ಟಿ ಕೂಡುವರಲ್ಲ.ತಪ್ಪು ಕಂಡರೆ ಇಕ್ರಲಾ, ಒದಿರಲಾ ಎನ್ನುವ ಪೈಕಿ.ನಯವಂಚಕತನ ಕಂಡರೆ ಅವರಿಗೆ ಮೈ ಉರಿ. ಬಾಯಿಗಿಂತ ಕೈ ಯೇ ಮುಂದು. ಅದೆಲ್ಲ ನಿಜ. ಆದರೆ ಕೆಡುಕರಲ್ಲ. ನಂಬಿಕೆ ಮೂಡಿದರೆ ಏನು ಬೇಕಾದರೂ ಮಾಡುವ ಮುಗ್ದರು. ನಮ್ಮ ಕಾಲೇಜಿನ  ಎಲ್ಲ ವಿದ್ಯಾರ್ಥಿಗಳು ರೈತರ ಮಕ್ಕಳು . ಎಲ್ಲರೂ ಹಳ್ಳಿಗರು. ಮಾತು ಒರಟು. ನಯ ನಾಜೂಕು ಗೊತ್ತಿಲ್ಲ. ಆದರೆ ಅವರ  ಹೃದಯ ಹಾಲಿನಂತಹದು ಒಳ್ಳೆಯದನ್ನು ಪ್ರೀತಿಸುವ ಗೌರವಿಸುವ ಅವರ ಸ್ವಭಾವ ಕೆಲವೆ ದಿನಗಳಲ್ಲಿ ನನ್ನ ಅನುಭವಕ್ಕೆ ಬಂದಿತು.
 ಕಾಲೇಜು ಶುರುವಾಗಿ ಅರ್ಧ ಗಂಟೆಯಾಗಿರಬಹದು. ಹತ್ತಿರದ ಹಳ್ಳಿಯಿಂದ ಬರುವ ಹುಡುಗರು ಗುಂಪಾಗಿ ಬಂದರು.
ಎನ್ರೀ ಇದು,ಎಲ್ಲರೂ  ಇಷ್ಟು ತಡವಾಗಿ ಬಂದಿರುವುದು, ನಾನು  ಕೇಳಿದೆ.
ದೊಡ್ಡ ಅನಾಹುತವಾಗಿದೆ ಸಾರ್, ನಮ್ಮೂರಲ್ಲಿ . 
ನನಗೆ ಏನು ಹೇಳಲು ತೋಚಲಿಲ್ಲ. ಸುಮ್ಮನೆ ಅವರ ಮುಖ ನೋಡಿದೆ.
ಸಾರ್ , ನಮ್ಮ ಕ್ಲಾಸ್‌ನಲ್ಲಿ ಓದುತಿ ದ್ದನಲ್ಲ ಸಿದ್ದಪ್ಪಾಜಿ , ಅವನು  ಇವತ್ತೆ ತೀರಿಹೋದ .
ನಿನ್ನೆ ಕಾಲೇಜಿಗೆ ಬಂದಿದ್ದನಲ್ಲ. ಚೆನ್ನಾಗೆ ಇದ್ದ. ಏನಾಯಿತು ಅವನಿಗೆ ?
ನಿನ್ನೆ ರಾತ್ರಿನೂ ಒಂತ್ತರ ತನಕ ನಮ್ಮ ಜತೆ ಓದುತ್ತಿದ್ದ. ನಂತರ ತಮ್ಮ ಮನೆಗೆ ಮಲಗಲು ಹೋದ. ಬೆಳಗ್ಗೆ ನೋಡಿದರೆ ಅವನ ಹೆಣ ಬಾವಿಯಲ್ಲಿ ಇತ್ತು , ಎಂದರು
 ರಾತ್ರಿ ಅವನ ತಾಯಿಯ ಜತೆ ಮಾತು ಆಯಿತಂತೆ. ಬೆಳಗ್ಗೆ  ಬೇಗ ಎದ್ದವನೆ ಹತ್ತಿರದ ಪಂಪಿನ ಭಾವಿಗೆ ಹೋಗಿ ಬಿದ್ದಿದ್ದಾನೆ. .ಅವನಿಗೆ ಈಜು ಬರುತ್ತಿರಲಿಲ್ಲ. ಅವನ ತಾಯಿ ಸದ್ದು ಕೇಳಿ ಬಂದು ನೊಡಿದಾಗ ಮುಳುಗುತ್ತಿರುವುದು ಕಾಣಿಸಿದೆ. ಅವರು ಅಳುತ್ತಾ ಕೂಗಿ ಕೊಂಡಿದ್ದಾರೆ. ಜನ ಬಂದು ನೋಡಿದರೆ ಆಗಲೆ ಮುಳುಗಿಹೋಗಿದ್ದ. ಯಾರೋಇಬ್ಬರು ಬಾವಿಗೆ ಇಳಿದು ಹುಡುಕಿದಾಗ ದೇಹ ಸಿಕ್ಕಿದೆ. ನನಗೆ ಜಾಣ ಹುಡುಗನೊಬ್ಬ ಈ ರೀತಿ ಪ್ರಾಣ ಕಳೆದುಕೊಂಡುದ್ದು ತುಂಬ ನೋವು ಉಂಟು ಮಾಡಿತು.ಎಲ್ಲರನ್ನೂ ಸೇರಿಸಿ ಸಂತಾಪ ಸಭೆ ಮಾಡಲಾಯಿತು ಮೌನಾಚರಣೆಯ ನಂತರ ಎಲ್ಲರೂ ನೋಡಿಕೊಂಡು ಬರಲು ಹೊರಟೆವು.
ಅವರ ಹಳ್ಳಿ ಹತ್ತಿರದಲ್ಲೆ ಇತ್ತು. ಅದು  ಒಂದು ಚಿಕ್ಕಹಳ್ಳಿ. ಸುತ್ತಲೂ ಹಸಿರು ಮುರಿಯುವ ಕಬ್ಬು. ಅದು .ಕೃಷಿ ಪ್ರಧಾನ ಗ್ರಾಮ.  ಅವನು ತಂದೆ ಇಲ್ಲದ ಹುಡುಗ. ತಾಯಿಯೊಂದಿಗೆ ಊರ ಮುಂದಿನ ತೋಟ ಗುಡಿಸಲಲ್ಲಿ  ಇವರ ವಾಸ.. ಊರ ತುಂಬ ಗೌಡರಮನೆಗಳು.ಎಲ್ಲರೂ ಕೃಷಿಕರೆ. ಇವರು ಆಚಾರರು. ಇವರ ಕುಲಸ್ಥರು ಯಾರೂ ಇಲ್ಲ. ಜಮೀನು ಇಲ್ಲ. .ಅವನ ತಾಯಿಗೆ ಐವತ್ತಕ್ಕೂ ಮಿಕ್ಕಿದ ವಯಸ್ಸು.  ಗಟ್ಟಿಮುಟ್ಟಾದ  ಹೆಂಗಸು. ಕೂಲಿ ನಾಲಿ ಮಾಡಿ ಮಗನನ್ನು ಸಾಕುತ್ತಿದ್ದರು. ರಟ್ಟೆ ಮುರಿದು ದುಡಿದರೆ  ಹೊಟ್ಟೆಗೆ ಏನೂ ತೊಂದರೆ ಇಲ್ಲ. ಆಗಾಗ ಇವನೂ  ಕೆಲಸಕ್ಕೆ ಹೋಗುತಿದ್ದ..
ತೋಟದಲ್ಲೆ ಬಾವಿ ಅದು ಸುಮಾರು ದೊಡ್ಡದೆ. ಕಲ್ಲು ಕಟ್ಟಡ. ಇಳಿಯಲು ಅವಕಾಶವಿರಲಿಲ್ಲ. ಮೂಲೆಯಲ್ಲಿ  ಮೋಟಾರು ಕೂಡಿಸಲಾಗಿತ್ತು. ಬಾವಿಯಿಂದ ತುಸು ದೂರದಲ್ಲೆ ಇವರ ಗುಡಿಸಲು..
ನಾವು ಹೋದಾಗ ಆಗಲೆ ದೇಹವನ್ನು ಎತ್ತಿ  ಗುಡಿಸಲ ಮುಂಭಾಗದಲ್ಲೆ ಹಾಕಿದ್ದರು..
ಅಯ್ಯೋ ಸಾಲಿಗೆ ಹೋಗ ಬೇಡ ಅಂದರೆ ನೀರಪಾಲಾದೆಯಲ್ಲೋ, ಈಗ ನಾನು  ಏನು ಮಾಡಲಿ , ಸ್ವಾಮೇರಾ, ನೀವಾದರೂ ಹೇಳಿ  ನಾನು ಇನ್ನು ಯಾಕಿರ ಬೇಕು ಎಂದು ಭೋರಾಡಿ ಅಳ ತೊಡಗಿದರು.ಅವನ ತಾಯಿ
ಹಿಂದಿನ ದಿನ ರಾತ್ರಿ ತಾಯಿ, “  ಸಿದ್ದಯ್ಯ , ನಾಳೆ ಕಾಲೇಜಿಗೆ ಹೋಗಬೇಡ  ಗೌಡರು ಕೆಲಸಕ್ಕೆ ಬರಲು ಹೇಳಿದ್ದಾರೆ. ಇಬ್ಬರೂ ಹೋಗಲೇ ಬೇಕು”.    ಎಂದರಂತೆ.
ಇಲ್ಲ ನಾನು ಕಾಲೇಜಿಗೆ ಹೋಗುವೆ. ಕೆಲಸಕ್ಕೆ  ಬರಲ್ಲ , ಎಂದು ಸಿದ್ದಯ್ಯ  ಹಠ ಮಾಡಿದ್ದಾನೆ.
ಏನು ಕಾಲೇಜು ಕಾಲೇಜು ಅಂತ ಬಡಕಂತಿಯಾ,ಕಾಲೇಜು ಹೊಟ್ಟೆಗೆ ಹಿಟ್ಟು ಕೊಡತೈತಾ ,ನಾನೊಬ್ಬಳೆ ಎಷ್ಟೂಂತ ಗೇಯಲಿ. ಮುಚ್ಕಂಡು ನನ್ನ  ಕೂಡ ಕೆಲಸಕ್ಕೆ ಬಾರಲಾ,ದೇವ್ರಂತ ಗೌಡರು ಮನೆತಾವ ಬಂದು ಹೇಳವ್ರೆ ನನ್ನ ಮರ್ವಾದೆ ಪ್ರಸ್ನೆ , ಎಂದು ತಾಯಿ ಬಾಯಿ ಜೋರುಮಾಡಿದ್ದಾಳೆ
ಅಮ್ಮಿ , ನಾನು ಪ್ರಾಣ ಕೊಟ್ಟೇನು ಓದು ಬಿಡಂಗಿಲ್ಲ ..
ಕಂಡಿವ್ನಿ ಸುಮ್ನಿರಲಾ,ಸತ್ರೆ ಅಚ್ಚೇರು ಹಿಟ್ಟು ಉಳಿತೈತೆ.  ಈಗ ಬಿದ್ಕಾ , ಹೊತ್ತಾರೆ ಕೆಲಸಕ್ಕೆ ಹೊಗಾಣ, ಗದರಿ ತಾಯಿ ಮಲಗಲು ಗೋಣಿತಾಟು ಅವನ ಕಡೆ ಎಸೆದು ತಾನೂ ಮಲಗಿದ್ದಾಳೆ
ಬೆಳಗ್ಗೆ ಮಗ  ಬೇಗ ಎದ್ದದ್ದು ನೋಡಿ,  ಪರವಾಇಲ್ಲ, ಇವತ್ತೊಂದಿನ ಬಂದ್ರೆ ಸಾಕು.ನಾಳೆಯಿಂದ ಒಬ್ಬಳೇ ದುಡಿದು ಹಿಟ್ಟು, ಸೊಪ್ಪು ಸಾರು ತಿಂದು ಕಾಲ ಹಾಕಿದರಾಯಿತು. ಅವನ ಪಾಡಿಗೆ ಅವನು ಓದಿಕೊಂಡಿರಲಿ ಎಂದು ನಿಟ್ಟುಸಿರು ಬಿಟ್ಟಿದ್ದಾಳೆ.
ಎದ್ದವನೆ  ಗುಡಿಸಲ ಹೊರಗೆ ನಡೆದಾಗ,ನೀರಕಡೆ ಹೋಗಬಹುದು ಎಂದುಕೊಂಡು  ಕಸ ಗುಡಿಸಲು ಬಾರಿಗೆ ಕೈಯಲ್ಲಿ ಹಿಡಿದಾಗ ದುಡಮ್ ಎಂಬ ಶಬ್ದ ಕೇಳಿದೆ.,
ದಡಕ್ಕನೆ ಸಿದ್ದ, ಸಿದ್ದಪ್ಪಾ , ಸಿದ್ದಪ್ಪಾಜಿ ಏನಾತು ಎಂದು  ಹೊರಗೆ  ಬಂದು  ನೋಡಿದರೆ  ಬಾವಿಯಲ್ಲಿ ಮಗ  ಮುಳುಗಿ ಮುಳುಗಿ ಏಳುತ್ತಿರವುದು ಕಂಡಿದೆ. ಕೂಗಾಟ ಕೇಳಿ ಬಂದ ಜನ ನಾನು ನೀನು ಎಂದು ಬಾವಿಗೆ ಇಳಿಯುವುದರಲ್ಲಿ ಎಲ್ಲ ಮುಗಿದಿದೆ ಹೋಗಿದೆ.
ಅವನೆ ಹಾರಿದನೋ , ಕಾಲು ಜಾರಿ ಬಿದ್ದನೋ ಒಂದೂ ತಿಳಿಯದಾಗಿದೆ.  ಎಲ್ಲರ ಬಾಯಲ್ಲೂ ಒಂದೆ ಮಾತು. ಕಬ್ಬಿನಂಥಾ ಹುಡುಗ. ಕೈಗೆ ಬಂದ ಮಗ, ಇದ್ದ ಒಂದೆ ಅಸರೆ.  ತಾಯಿಯನ್ನು ಅನಾಥೆಯನ್ನಾಗಿ ಮಾಡಿಹೋದನಲ್ಲಾ. ಎಂತಹ ಒಳ್ಳೆಯ ಹುಡುಗ ಹೀಗಾಗಬಾರದಿತ್ತು . ಎಲ್ಲ  ಮರಮರ ಮರಗುವವರೆ.
ಊರಿನ ಹಿರಿಯರೆಲ್ಲ ಸೇರಿದ್ದರು. ಎನೋ ಅನಾಹುತವಾಗಿದೆ.  ಇವರಿಗೆ ಹಿಂದಿಲ್ಲ ಮುಂದಿಲ್ಲ. ಇನ್ನು ಪೋಲೀಸು ಕೇಸು ಅಂತ  ಇಲ್ಲದ ತೊಂದರೆ ಬೇಡ. ನಾವೆಲ್ಲ  ಸೇರಿ ದಫನ್‌ ಕೆಲಸ ಮುಗಿಸೋಣ , ಬಾವಿಗೆ ಬಿದ್ದು ಸತ್ತ ಅಂತ ಹೇಳುವುದೆ ಬೇಡ. ,ಎಂದು  ತೀರ್ಮಾನಿಸಿದರು.
ಅಪ್ಪಾ,  ದಿನಾ ನಿಮ್ಮಗೆಣೆಕಾರನ್ನ ನೊಡಾಕೆ ಬತಿದ್ದಿರಿ , ಇನ್ನು ಯಾರಿದ್ದಾರೆ ಅಂಥ ಬತ್ತೀರಪ್ಪಾ, ಮಣ್ಣಿಗಂತೂ ಬಂದಿವ್ರಿ.ಹಂಗೆ  ಹಾಲು ತುಪ್ಪಕ್ಕೂ ಬಂದೂ ಹೋಗ್ರಿ . ಎಂದು ಕರಳು ಕರಗುವಂತೆ ತಾಯಿ ಅಳತೊಡಗಿದಳು.
ನಾವೆಲ್ಲರೂ ಕೊನೆ ಋಣ ತೀರಿಸಿ , ಆ ತಾಯಿಗೆ ಸಮಾಧಾನ ಹೇಳಿ  ಕಾಲೇಜಿಗೆ ಬಂದಾಗ ಆಗಲೆ ಕಾಲೇಜು ಬಿಡುವ ಹೊತ್ತಾಗಿತ್ತು.
ಮರು ದಿನ ಕಾಲೇಜು ಶುರುವಾದ ಮೇಲೆ ಎಲ್ಲರದೂ ಅದೇ ಮಾತು.” ಎಂಥ ಅನ್ಯಾಯವಾಯಿತು. ಮೊದಲೆ ಗೊತ್ತಾಗಿದ್ದರೆ ಅವನ ಓದಿಗೆ ಏನಾದರೂ ಅನುಕೂಲ ಮಾಡಿಕೊಡ ಬಹುದಾಗಿತ್ತು ’  ಮಾಡುವುದೇನು ?  ಕಾಲ ಮಿಂಚಿಹೋಗಿತ್ತು.
ಇದ್ದಾಗಲಂತೂ ಏನೂ ಮಾಡಲಿಲ್ಲ. ಈಗ ಅವನ ಹಾಲು ತುಪ್ಪಕ್ಕಾದರೂ ಎಲ್ಲರೂ ಸೇರಿ ಜೋರಾಗಿ ಮಾಡೋಣ  ಎಂಬ ಮಾತು ಬಂದಿತು. ನನಗೆ ಅದು ಏನೂ ಎಂದು ತಿಳಿಯಲಿಲ್ಲ. ಒಂಬತ್ತನೆ ದಿನ ಪರ ಮಾಡಬೇಕು. ಅಂದರೆ ಊರಿಗೆ ಊಟಹಾಕಬೇಕು .ಎಲ್ಲರೂ ಪಟ್ಟಿಹಾಕಿ ಹಣ ಹೊಂದಿಸೋಣ  ನಾವು ಪಿಯುಸಿಯ ನೂರು ಜನರೂ ಸೇರಿ  ಊರವರಿಗೂ ಊಟಹಾಕಿಸಿದರೆ ಅವನ ಆತ್ಮಕ್ಕೆ ತೃಪ್ತಿಯಾಗುವುದು. ಗತಿ ಇಲ್ಲ ಎಂದು ಅವರು ಗೋಳಾಡುವುದು ಬೇಡ. ಅವನ ನೆನಪಿಗೆ ಅಷ್ಟಾದರೂ ಮಾಡೋಣ, ಸಲಹೆ ಬಂದಿತು.
ಹುಡುಗರೆಲ್ಲ ಒಂದೆ ಮಾತಿಗೆ ವಂತಿಗೆ ನೀಡಲು ಒಪ್ಪಿದರು. ಗೆಳೆಯನ ನೆನಪಿನಲ್ಲಿ ಐವತ್ತು, ನೂರು ನೀಡಿದರು. ಬೋಧಕರೂ ಕೈ ಜೋಡಿಸಿದರು. ಸುಮಾರು ಹತ್ತು ಸಾವಿರ ಹಣ ಸಂಗ್ರಹ ವಾಗಬಹುದೆಂಬ ಅಂದಾಜು ಬಂದಿತು.ಮುಂದಿನ ವ್ಯವಸ್ಥೆ ಮಾಡಲು  ಮೂರು ಜನರ ಸಮಿತಿ ರಚಿಸಿ ಸೂಕ್ತ ಕ್ರಮ  ಕೈಯಕೊಳ್ಳಲು ತಿಳಿಸಲಾಯಿತು. ಅದರಲ್ಲಿ ನಾನೂ ಭಾಗಿಯಾದೆ.ಮೂರೆ ದಿನದಲ್ಲಿ ಹಣ ಸಂಗ್ರಹವಾಯಿತು. ನಾವು ಕುಳಿತು  ಮುಂದೇನು ಮಾಡಬೇಕೆಂದು ಸಮಾಲೋಚನೆ ನಡೆಸಿದೆವು. ಅ ಹಣವನ್ನು ನಾವೆ ನಿಂತು  ಅಂತಿಮ ಕಾರ್ಯಗಳಿಗಾಗಿ ಖರ್ಚು ಮಾಡುವುದೆ, ಇಲ್ಲವೆ ಅವನ ತಾಯಿಗೆ ನೀಡುವುದೆ,  ಎಂದು ಯೋಚಿಸಿದೆವು .
ದುಃಖದಲ್ಲಿರುವ ಅವರು ಏನು ತಾನೆ ಮಾಡಬಲ್ಲರು ? ಅದಕ್ಕೆ ಆ ಊರ ಹಿರಿಯರಿಗೆ ಕೊಟ್ಟು ವ್ಯವಸ್ಥೆ  ಮಾಡಲು ತಿಳಿಸಿ ನಾವೆಲ್ಲ ಆದಿನ ಹೋಗಿಬರಬಹುದು ಎಂಬ  ಸಲಹೆ ಬಂದಿತು. ನಾನು ಕುತೂಹಲಕ್ಕೆ ಕೇಳಿದೆ. ಆ ಹಣವನ್ನು ಹೇಗೆ ಖರ್ಚು ಮಾಡುವರು ಎಂದು. ಅಲ್ಲಿನ ಸಂಪ್ರದಾಯದಂತೆ ಮಣ್ಣಿಗೆ ಬಂದವರಿಗೆಲ್ಲ ಸಿಹಿ ಊಟಹಾಕಬೇಕು. ನಂತರ ಬಾಡೂಟವನ್ನು ಹಾಕುವರು. ನಾವೇ ಐವತ್ತು ಜನ ಹೋಗಿದ್ದೆವು. ಇನ್ನು ಊರವರೂ ನೂರಾರು ಜನ  ಬಂದಿದ್ದರು. ಏನಿಲ್ಲ ಎಂದರೂ ೩೦೦ ಕ್ಕೆ ಕಡಿಮೆ ಇಲ್ಲದೆ ಊಟದ ವ್ಯವಸ್ಥೆಯಾಗಬೇಕಿತ್ತು. ಒಂದಂತೂ ಸತ್ಯ  ಅವನ ತಾಯಿ ನಿರ್ಗತಿಕಳು. ರಟ್ಟೆಮುರಿದು ಹೊಟ್ಟೆ ತುಂಬಿಸಿಕೊಳ್ಳ ಬೇಕು. ನಾವು ಕೊಟ್ಟ ಹಣದ ಜತೆ ಸಾಲ ಸೋಲ ಮಾಡಬೇಕಿತ್ತು. ಇಂಥ ಕೆಲಸಕ್ಕೆ ಯಾರೂ ಇಲ್ಲ ಎನ್ನುವುದಿಲ್ಲ. ಅದರೆ ಮುಂದೆ ವರ್ಷಗಟ್ಟಲೆ ಸಾಲವನ್ನು ತೀರಿಸಲು ಮೂಗಿಗೆ ಕವಡೆ ಹಚ್ಚಿಕೊಂಡು ದುಡಿಯ ಬೇಕು.   ಪೂರ್ತಿ ಗತಿ ಇಲ್ಲದವರು ಎನು ಮಾಡುವರು  ಎಂದು ನನಗೆ ಹೊಳೆಯಲೆ ಇಲ್ಲ. ಒಂದೆ ಸಾಲ ಮಾಡುವರು. ಇಲ್ಲವಾದರೆ ಮನೆ ಪೂರ್ತಿ  ಆದಷ್ಟು ಮಾಡುವರು. ಆಗ ಊಟದ ಮಾತೆ ಇಲ್ಲ, ಎಂದು ಮಾಹಿತಿ ನೀಡಿದರು
ಸಿದ್ದಯ್ಯನ ತಾಯಿ ಹೇಳಿ ಕೇಳಿ ಕೂಲಿ ಕೆಲಸ ಮಾಡಿ ಬದುಕ ಬೇಕು. ಈ ಮೊದಲು ಮಗನಾದರೂ ಇದ್ದ. ಈಗ  ಅವನೂ ಇಲ್ಲ. ಇಂದಲ್ಲ ನಾಳೆ ದುಡಿದು  ಸಾಕುತ್ತಾನೆ ಎಂಬ ನಂಬಿಕೆ ಇತ್ತು. ಈಗ ಅದೂ ಇಲ್ಲ. ಈಗಿನ ಕಾರ್ಯಕ್ಕೆ ನಾವೆಲ್ಲ ಹಣ ಹೊಂದಿಸಿದ್ದೇವೆ ಮುಂದೆ ಅವರ ಗತಿ ? ನಮ್ಮವರಿಗೆ ನಾನು ಹೇಳಿದೆ. ಹೇಗಿದ್ದರೂ ಅವರು ನಿರ್ಗತಿಕರು. ಆ ತಾಯಿ  ಈಗ ನಾವು ನೀಡಿದ ಹಣ , ಅದರ ಜೊತೆ ಸಾಲ  ಮಾಡಿ ಕೊನೆಯ ಕಾರ್ಯ ಜೋರಾಗಿ ಮಾಡಬಹುದು. ಆದರೆ ಮುಂದೆ ಗತಿ ಏನು? ಅದರ ಬದಲು ನಾವು ಹಣ ಕೂಡಿಸಿ ಕೊಡದಿದ್ದರೆ, ಅವರೇನು ಮಾಡುತಿದ್ದರು ?  . 
ಅವರು ಹಾಲು ತುಪ್ಪದ ಕೆಲಸ ಸರಳವಾಗಿ ಮುಗಿಸುತ್ತಿದ್ದರು.
ಈಗಲೂ ಹಾಗೆಯೇ ಮಾಡಲಿ. ನಾವು ಯಾರೂ ಹೋಗುವುದು ಬೇಡ , ಎಂದೆ
ಎಲ್ಲರೂ ಗಾಬರಿಯಿಂದ ಕೇಳಿದರು, ಸಾರ್‌ ಈಗ ನಮ್ಮಲ್ಲಿ ಅದಕ್ಕಾಗಿ ಹಣ ಇದೆಯಲ್ಲ. ಅದನ್ನು ಕೊಡದಿದ್ರೆ ವಿದ್ಯಾರ್ಥಿಗಳು ಸುಮ್ಮನಿರುತ್ತಾರಾ? ಅದು ತಪ್ಪು. ಹಣ ಅವರಿಗೆ ಮುಟ್ಟಲೆ ಬೇಕು , ಎಂದು ಗಟ್ಟಿಸಿ ಹೇಳಿದರು.
ನೀವು ಹೇಳಿದದ್ದು ನಿಜ. ಆ ಹಣ ಅವರಿಗೆ ತಲುಪ ಬೇಕು. ಅದರಲ್ಲಿ ಎರಡನೆ ಮಾತೆ ಇಲ್ಲ. ಅದರೆ ಅದರಿಂದ ಅವರಿಗೆ ಉಪಯೊಗವಾಗ ಬೇಕು. ಅಲ್ಲದೆ ಸತ್ತವನ ಆತ್ಮಕ್ಕೂ ತೃಪ್ತಿಯಾಗಬೇಕು.
ಅದನ್ನೆ ನಾವು ಹೇಳುವುದು, ಎಲ್ಲರೂ ದನಿ ಗೂಡಿಸಿದರು.
ಈಗ ನಾವೆಲ್ಲ ಹಣ ನೀಡಿ ಅಲ್ಲಿಗೆ ಹೋಗಿ ಉಂಡು ಬಂದರೆ ಅ ಕ್ಷಣಕ್ಕೆ ಆ ತಾಯಿಗೆ ತೃಪ್ತಿಯಾಗುವುದು. ನಿಜ ಆದರೆ ಮರುದಿನದಿಂದಲೆ  ಜೀವನಕ್ಕಾಗಿ ಅವರ ಹೋರಾಟ ಶುರು. ಅವರ ಕಷ್ಟವನ್ನು  ತುಸುವಾದರೂ ಕಡಿಮೆ ಮಾಡೋಣ .ಎಂದೆ
ಅದಕ್ಕೆ ನಾವು ಏನು ಮಾಡಬಹುದು ? ಪ್ರಶ್ನೆ ತೂರಿ ಬಂದಿತು.
ನಾವು ಒಂದು ಕೆಲಸ ಮಾಡಬಹುದು. ಅದೆ ಹಣದಿಂದ ಒಂದು  ಹಾಲು ಕರೆವ ಹಸುವನ್ನು ಕೊಂಡು ಅವರಿಗೆ ನೀಡಿದರೆ ಹೇಗೆ ? , ಅದೆ ಊರಲ್ಲಿ  ಹೇಗೂ ಡೈರಿ ಇದೆ. ಅವರು ಅಲ್ಲಿಯೇ ಹಾಲು ಹಾಕಿ ಹಣ ಸಂಪಾದಿಸಬಹುದು.ಅದು ಹಳ್ಳಿಯಾದ್ದರಿಂದ ಹುಲ್ಲು ಮೇವಿನ ಕೊರತೆ ಇಲ್ಲ.ಸಾಕುವುದು ದೊಡ್ಡ ತೊಂದರೆ   ಏನಲ್ಲ,   ಅದರಿಂದ ಅವರಿಗೆ ತುಸು ಆಧಾರ ಸಿಗುವುದು , ಎಂದೆ
ಆದರೆ ನಾವು ಅವನ ಗೆಳೆಯರಿಗೆ ಏನು ಹೇಳುವುದು ? ಅವರು ಹಣ ನೀಡಿರುವುದು ಅವನ ಹಾಲು ತುಪ್ಪದ ಕಾರ್ಯಕ್ಕಾಗಿ . ಅದಕ್ಕೆ ಬಳಸದಿದ್ದರೆ ಅದು ದಾನದ ಹಣದ ದುರುಪಯೋಗ.. ಸತ್ತವನ ಅತ್ಮಕ್ಕೂ ಶಾಂತಿ ಸಿಗುವುದಿಲ್ಲ, ಎಂಬುದು ಅನೇಕರ ವಾದ..
“ಸತ್ತವನ ಅತ್ಮಕ್ಕೆ ಶಾಂತಿ ಸಿಗುವುದು ನಾವೆಲ್ಲ ಒಂದು ದಿನ ಅಲ್ಲಿ ಹೊಗಿ ಉಂಡು ಬರುವುದರಿಂದ ಮಾತ್ರ ಅಂದು ಕೊ ಳ್ಳ ಬಾರದು . ಅವನ  ತಾಯಿ ಅವನಿಲ್ಲದಿದ್ದರೂ  ಕೂಡಾ ದಿನಾ  ನೆಮ್ಮದಿಯಿಂದ ಮುದ್ದೆ ಮುರಿಯುತ್ತಾಳೆ ಎಂದರೆ ಅವನ ಆತ್ಮಕ್ಕೆ  ನಿಜವಾದ ಸಂತೃಪ್ತಿ ಸಿಗುವುದು.  ಮಗನಾಗಿ ಅವನು ಮಾಡಬಹುದಾಗಿದ್ದ ಕೆಲಸವನ್ನು ಅವನ ಪರವಾಗಿ ಗೆಳೆಯರೆಲ್ಲ ಮಾಡಿದರು ಎಂಬ ತೃಪ್ತಿ ಯಾಗುವುದು.” ತಿಳಿ ಹೇಳಿದೆ.
 ಈ ಮಾತು ಅವರ ಮನ ಕಲಕಿತು. ಈ ವಿಷಯವನ್ನು ಮಕ್ಕಳ ಸಭೆ ಸೇರಿಸಿ ಅವರಿಗೆ ತಿಳಿಸಲಾಯಿತು.ಮೊದಲು ಅವರಿಗೆ  ನಾವು ಹೇಳಿದುದರ ತಲೆ ಬುಡ ತಿಳಿಯಲಿಲ್ಲ.    ವಿವರಿಸಿದಾಗ ಅವರೂ ಸಂತೋಷದಿಂದ ಒಪ್ಪಿದರು.    ಹಾಲು ತುಪ್ಪಕ್ಕೆ ಹೊಗದಿದ್ದರೂ  ಪರವಾ ಇಲ್ಲ. ನಂತರ ಅವರ ಊರಿಗೆ ಹೋಗಿ ಕರೆಯುವ ರಾಸನ್ನು ಎಲ್ಲರ ಪರವಾಗಿ ಕೊಡಲು ಒಪ್ಪಿದರು.ಹತ್ತಿರದ ಹಳ್ಳಿಯಲ್ಲಿದ್ದ  ಯಾವುದಾದರೂ ಕರೆಯುವ ರಾಸು ಇದ್ದರೆ ಹುಡುಕಲು ತಿಳಿಸಲಾಯಿತು. ನಾವು ಯಾರೂ ಹಾಲು ತುಪ್ಪಕ್ಕೆ ಹೋಗಲೆ ಇಲ್ಲ.ನಮ್ಮ ಜವಾನ ವೆಂಕಟಪ್ಪ ತಮ್ಮ ಊರಿನಲ್ಲಿನ ಒಂದು ರಾಸಿನ ಬಗ್ಗೆ ತಿಳಿಸಿದ. ಅದನ್ನು  ನೋಡಿ ಸರಿಯಾಗಿದೆ ಎಂದು ಖಚಿತ ಪಡಿಸಿಕೊಂಡು    ಖರೀದಿ ಮಾಡಿದೆವು. ಇದನ್ನು ಕಾಲೇಜು  ಮಕ್ಕಳು  ತಮ್ಮ ಗೆಳೆಯನ ತಾಯಿಗೆ ಸಹಾಯ ಮಾಡಲು ಖರೀದಿಸುವರೆಂಬ ಸುದ್ದಿ ಗೊತ್ತಾಗಿ ಅವರೂ ಬೆಲೆಯಲ್ಲಿ ರಿಯಾಯಿತಿ ತೋರಿದರು. ಸಿದ್ದಯ್ಯ ಹೋದ ೧೫ ದಿನದಲ್ಲಿ ಅವರ ಗುಡಿಸಲ  ಮುಂದೆ ಹಸು  ಕರು ನಿಂತಿದ್ದವು. ವಿಷಯ ತಿಳಿದ ಅ ತಾಯಿ,ಆ ಕರುವಿನ ಕೊರಳು ತಬ್ಬಿಕೊಂಡು “ ನಮ್ಮ ಸಿದ್ದಪ್ಪಾಜಿನೆ ನನ್ನನ್ನು ಸಲಹಲು ಮನೆಗೆ ಬಂದವ್ನೆ , ಒಬ್ಬ ಮಗ ಹೋದರೆ ನೀವು ಇಷ್ಟೂ ಜನ ಮಕ್ಕಳಾದಿರಿ”  ಎಂದು ಕಣ್ಣೀರು ಸುರಿಸ ತೊಡಗಿದಳು.  

No comments:

Post a Comment