Sunday, August 19, 2012

ಸಾಲಿ ಗುಡಿ


ನಾ ನು ಮೊದಲು ಅಕ್ಷರ ಕಲಿತದ್ದು ನಮ್ಮೂರಿನ ದುರುಗಮ್ಮನ ಗುಡಿಯಲ್ಲಿ. ಅದಕ್ಕೆ ಕಾರಣ ಸ್ಕೂಲು ನಡೆಯುತ್ತಿದುದೇ ಗುಡಿಯಲ್ಲಿ. ಅದನ್ನು ನಾವು ಸಾಲಿಗುಡಿ ಎನ್ನುತ್ತಿದ್ದೆವು. ಅಲ್ಲಿ ಒಬ್ಬ ಅಯ್ಯನವರು ನಮಗೆ ಗುರುಗಳು. ಅಯ್ಯ ಎನ್ನುವುದು ವೃತ್ತಿ ವಾಚಕವೋ, ಜಾತಿ ಸೂಚಕವೋ ಎಂದು ಯೋಚಿಸುವ ವಯಸ್ಸು ಅದಲ್ಲ. ಎಲ್ಲರೂ ಅವರನ್ನು ಗೌರವಪೂರ್ವಕವಾಗಿ `ಅಯ್ಯನೋರೆ’ ಎನ್ನುತ್ತಿದ್ದರು. ಅದೇನೂ ಸರಕಾರದಿಂದ ಮಂಜೂರಾತಿ ಪಡೆದ ಶಾಲೆಯಲ್ಲ. ಅಲ್ಲಿ ಇಂದಿನ ಹಾಗೆ ಹಲವು ಹತ್ತು ವಿಷಯಗಳಿರಲಿಲ್ಲ. ಭಾಷೆ ಮತ್ತು ಲೆಕ್ಕ. ಎರಡನ್ನು ಮಾತ್ರ ಖಚಿತವಾಗಿ ಕಲಿಸುತಿದ್ದರು. ಭಾಷೆ ಎಂದರೆ ಕನ್ನಡ. ಅಕ್ಷರ ಕಲಿಯುವ ಮೊದಲು ಅಲ್ಲಿ ಪ್ರಭವ, ವಿಭವ ಇತ್ಯಾದಿ ಅರವತ್ತು ಸಂವತ್ಸರಗಳು, ಆರು ಋತುಗಳು, ಚೈತ್ರದಿಂದ ಶುರುವಾಗುವ ಹನ್ನೆರಡು ಮಾಸಗಳ ಹೆಸರುಗಳು, ಇಪ್ಪತ್ತನಾಲಕ್ಕು ಪಕ್ಷ, ಹದಿನೈದು ತಿಥಿ ಮತ್ತು ಅಶ್ವಿನಿ ಭರಣಿ ಮೊದಲಾದ ಇಪ್ಪತ್ತೇಳು ನಕ್ಷತ್ರಗಳು ಬಾಯಿ ಪಾಠವಾಗಬೇಕಿತ್ತು. ಅದರಲ್ಲೂ ಚೈತ್ರ ಶುದ್ಧ ದವನದ ಹುಣ್ಣಿಮೆ, ವೈಶಾಖ ಶುದ್ಧ ಆಗಿ ಹುಣ್ಣಿಮೆಯಿಂದ ಹಿಡಿದು ಪಾಲ್ಗುಣ ಶುದ್ಧ ಹೋಳಿ ಹುಣಿಮೆಯವರೆಗೆ, ಅದೇ ರೀತಿ ಚೈತ್ರ ಬಹುಳ ಯುಗಾದಿ ಅಮವಾಸ್ಯೆಯಿಂದ ಹಿಡಿದು ಆಶ್ವೀಜದ ಬಹುಳದ ದೀಪಾವಳಿ ಅಮವಾಸ್ಯೆಯ ವರೆಗಿನ ಹನ್ನೆರಡು ಅಮವಾಸ್ಯೆಗಳ ಹೆಸರನ್ನು ಕೇಳಿದಲ್ಲಿ ಪಟ್ಟನೆ ಹೇಳದಿದ್ದರೆ ಛಡಿ ಏಟು ಬೀಳುತಿತ್ತು. ಅಲ್ಲಿ ಹೆಚ್ಚು ಕಲಿತವರು ಎಂದರೆ ಅಮರಕೋಶ ಹೇಳುವವರು. ರಾಜ, ಭುಪ, ಅವನಿಪ, ಒಡೆಯ, ಅರಸ, ಭೂಪಾಲ ಹೀಗೆ ಒಂದು ಪದಕ್ಕೆ ಹತ್ತು ಹಲವಾರು ಪರ್ಯಾಯ ಪದಗಳು. ಪದ ಭಂಡಾರವೇ ಕಂಠಸ್ಥವಾಗಿರುತಿತ್ತು. ನಾಲಿಗೆಯ ಮೇಲೆ ಸರಸತಿಯ ನರ್ತನ. ಅಮರವನ್ನು ಅರಿತವರಿಗೆ ಶಬ್ದ ದಾರಿದ್ರ್ಯವಿರುತ್ತಿರಲಿಲ್ಲ. ಗದುಗಿನ ಭಾರತ ವಾಚನ ಮಾಡುವ ಹಂತಕ್ಕೆ ಬಂದರೆ ಪರವಾ ಇಲ್ಲ ಎಂದೂ, ಜೈಮಿನಿ ಭಾರತ ಓದಿ ಅರ್ಥ ವಿವರಣೆ ಕೊಡಬಲ್ಲವರಾದರೆ ಕಲಿತವರೆಂದೂ ಕರೆಯುತ್ತಿದ್ದರು. ಅಂಥವರು ವಿರಳಾತಿ ವಿರಳ. ದುರುಗಮ್ಮನ ಗುಡಿ (ಸಾಲಿ ಗುಡಿ) ಇನ್ನು ಲೆಕ್ಕ ಎಂದರೆ ಮಗ್ಗಿ ಕಲಿಯುವುದು. ಕನಿಷ್ಟ 20 ರವರೆಗೆ ಮಗ್ಗಿ ಕಡ್ಡಾಯ. ಅದರ ಮೇಲೆ ಚುರುಕಾದವರು ಎರಡ ಹತ್ತಲೆ ಇಪ್ಪತ್ತು ಎಂದು ಮುಗಿಸುತ್ತಿರಲಿಲ್ಲ. ಎರಡ ಹನ್ನೊಂದಲೆ ಇಪ್ಪತ್ತೆರಡು ಎಂದು ಶುರುಮಾಡಿ ಎರಡ ಇಪ್ಪತ್ತಲೆ ನಲವತ್ತು ಎಂದು ಹೇಳುವಷ್ಟು ಕಲಿತರೆ ಅಯ್ಯನವರು ಹುಡುಗ ಪರವಾಯಿಲ್ಲ ಎನ್ನುತ್ತಿದ್ದರು. ಇನ್ನೂ ಜಾಣರು ಮಗ್ಗಿಯನ್ನು ಬುಡದಿಂದ ಪ್ರಾರಂಭಿಸಿ ಮೊದಲವರೆಗೂ ಹೇಳುತ್ತಲಿದ್ದರು. ನನಗಂತೂ ಮೊದಲಿಂದ ಕೊನೆಯವರೆಗ ಹೇಳುವಾಗಲೇ ಸಾಕು ಬೇಕಾಗುತ್ತಿತ್ತು. ಮಧ್ಯಾಹ್ನ ಮೂರು ಗಂಟೆಯ ಮೇಲೆ ಗುಡಿಯು ಮಕ್ಕಳ ಮಗ್ಗಿಯ ಉದ್ಘೋಷದಿಂದ ಗದ್ಘಲಿಸುತಿತ್ತು. ಮೊದಲು ಸಾಮೂಹಿಕವಾಗಿ ಹೇಳಿ ನಂತರ ಒಬ್ಬೊಬ್ಬರಾಗಿ ಒಪ್ಪಿಸಬೇಕಿತ್ತು. ತಪ್ಪಿದರೆ ಪಕ್ಕದವನಿಗೆ ತಿದ್ದಲು ಅವಕಾಶ. ಅವನು ಸರಿಯಾಗಿ ಹೇಳಿ ತಪ್ಪಿದವನ ಕೆನ್ನೆಗೆ ಎರಡು ಬಾರಿಸಬೇಕಿತ್ತು. ಅದೂ ಮುಟ್ಟಿದಂತೆ ಮಾಡಿದರೆ ಸಾಕಾಗುತ್ತಿರಲಿಲ್ಲ. `ಚಟೀರ್‌...’ ಎಂದು ಶಬ್ದ ಕೇಳಿ ಬರುವಂತೆ ಹೊಡೆತ ಇರಬೇಕು. ಎಷ್ಟೋ ಸಲ ಸದಾ ಏಟು ತಿನ್ನುವ ಹುಡಗ ಹೊಂದಾಣಿಕೆ ಮಾಡಿಕೊಳ್ಳುವದೂ, ಶಾಲೆ ಮುಗಿದ ಮೇಲೆ ಬಾರಿ ಬೆಲ್ಲ, ಕಡಲೆ, ಬಾರಿ ಹಣ್ಣು, ಬಕ್ಕಿ ಹಣ್ಣು, ಹುಣಿಸೆ ಕಾಯಿ, ಮಾವಿನ ಕಾಯಿ ಲಂಚದ ಆಮಿಷ ಒಡ್ಡಿ ಹೊಡೆತದ ಜೋರು ತುಸು ಕಡಿಮೆಯಾಗುವಂತೆ ಮಾಡಿಕೊಳ್ಳುತ್ತಿದ್ದವರೂ ಇದ್ದರು. ಆದರೆ ಅದು ಅಯ್ಯನವರ ಗಮನಕ್ಕೆ ಬಂದರೆ ಇಬ್ಬರಿಗೂ ಲತ್ತೆಯ ಮೇಲೆ ಲತ್ತೆ. ಇನ್ನು ಬರಹಕ್ಕೆ ಪೆನ್ನು ಪೆನ್ಸಿಲ್‌ ಬಳಕೆ ಬಹಳ ಇರಲಿಲ್ಲ. ಮೊದಲಲ್ಲಿ ಸ್ಲೇಟೂ ಬಳಸುವ ಹಾಗಿಲ್ಲ. ಹೊಸದಾಗಿ ಸೇರಿದ ಪ್ರತಿ ಹುಡುಗರ ಮುಂದೂ ಮೂರು ಬೊಗಸೆ ನುಣ್ಣನೆ ಮರಳು. ಅದನ್ನು ಅವರೆ ತಂದುಕೊಳ್ಳಬೇಕಿತ್ತು. ಮುಗಿದ ಮೇಲೆ ಗುಡಿಯ ಮೂಲೆಯಲ್ಲಿ ಗುಡ್ಡೆ ಹಾಕಬೇಕಿತ್ತು. ಆ ಮರಳನ್ನು ಹರಡಿ ಅದರಲ್ಲಿ ತೀಡಬೇಕು. ಅದೂ ಒಂದು ಎರಡು ದಿನವಲ್ಲ. ತಿಂಗಳುಗಟ್ಟಲೆ. ಅ ನಿಂದ ಕ್ಷ ವರೆಗೆ ಸ್ಪುಟವಾಗ ಬರೆಯುವವರೆಗೆ ತೀಡಲೇಬೇಕು. ಕೊಕ್ಕೆ ಕೋರೆ ಬರೆಯುವ ಹಾಗಿಲ್ಲ. ಅಯ್ಯನವರು ಒಪ್ಪುವ ತನಕ ಅದು ಮುಂದುವರೆಯುತಿತ್ತು. ಎಷ್ಟೋ ಸಲ ಬೆರಳಿಗೆ ಪೋಟು ಬೀಳುತಿತ್ತು. ತುಸು ಸುಧಾರಿಸಿದ ಮೇಲೆ ಕಡ್ಡಿ ಹಿಡಿದು ಬರೆಯಬಹುದು. ಅಂತೂ ಬರವಣಿಗೆಯ ಬುನಾದಿ ಬಹು ಭದ್ರವಾಗಿ ಬೀಳುತಿತ್ತು. ಆ ನಂತರವೆ ಹಲಗೆ ಬಳಪದ ಬಳಕೆ. ಮಲಪನಗುಡಿ ಮೊದಲ ನೋಟ ಶಾಲೆ ಪ್ರಾರಂಭವಾಗುತ್ತಿದ್ದುದು ರೈತರೆಲ್ಲ ಬದುಕಿಗೆ ಹೊಂಟ ಮೇಲೆ. ಬದುಕು ಎಂದರೆ ಹೊಲದ ಕೆಲಸ. ಸಾಲಿಯಲ್ಲಿಯ ಹಿರಿಯ ಹುಡುಗರಿಗೆ ಆಗ ಬಹು ಹುರುಪು. ಅವರು ಸಾಲಿ ತಪ್ಪಿಸುತ್ತಿದ್ದ ಹುಡುಗರನ್ನು ಹುಡುಕಿ ತರಬೇಕು. ಎಷ್ಟೋ ಹುಡುಗರು ಇಲ್ಲಿನ ಹೊಡೆತ ತಾಳದೆ ಹುಲ್ಲಿನ ಮೆದೆಯಲ್ಲೋ, ಅಟ್ಟದ ಮೇಲೋ, ಅಡಕಲ ಕೋಣೆಯಲ್ಲೋ, ದನದ ಕೊಟ್ಟಿಗೆಯಲ್ಲೋ, ಅಜ್ಜಿಯ ಹಿಂದೋ ಅಡಗಿರುತ್ತಿದ್ದರು. ಅವರನ್ನು ಹುಡುಕಿ ಅಲ್ಲಿಯೇ ನಾಲಕ್ಕು ತದುಕಿ ಕರೆತರುತ್ತಿದ್ದರು. ಅದಕ್ಕೂ ಬಗ್ಗದಿದರೆ ಹೊತ್ತು ತಂದು ಗುಡಿಯಲ್ಲಿ ಕೆಡವುತ್ತಿದ್ದರು. ಅದಕ್ಕೆ ಪೋಷಕರ ಸಹಕಾರವೂ ಪೂರ್ತಿ ಇರುತ್ತಿತ್ತು. `ನಮ್ಮ ಹೈವಾನ, ಅನ್ನ ಉಂಡು ಅಕ್ಷರ ಕಲಿಯೋ ಅಂದರೆ, ನವಣೆ ಬಾನ ಉಂಡು ನೇಗಿಲ ಹಿಡಿತಿನಿ ಅಂತಾನಲ್ಲ ಅಯ್ಯನೋರೆ, ನೀವೆ ಎಂಗಾನ ಮಾಡಿ ನಾಲಕಕ್ಷರ ಕಲಿಸಿ. ಕೊನೆಗೆ ಹೆಬ್ಬೆಟ್ಟು ಒತ್ತೋದು ಬಿಟ್ಟು ರುಜು ಹಾಕೋದು ಕಲಿತರೂ ಸಾಕು’ ಎಂದು ಹಲುಬುತ್ತಿದ್ದರು. ಇನ್ನು ಆಗಿನ ಶಿಕ್ಷಾ ವಿಧಾನವು ಬಹು ವೈವಿಧ್ಯಮಯವಾಗಿತ್ತು. ಆಗ ಗುರುಗಳು ಹೆಚ್ಚು ದಂಡಿಸಿದರೆ ಮಕ್ಕಳು ಹೆಚ್ಚು ಕಲಿಯುವರು ಎಂಬ ನಂಬಿಕೆ ಬಲವಾಗಿತ್ತು. ತಂದೆ ತಾಯಿಯರೆ ಬಂದು `ಅವನಿಗೆ ನಾಲಕ್ಕು ಬಿಗಿದು, ಬುದ್ಧಿ ಕಲಿಸಿ’ ಎಂದು ಗೋಗರೆಯುತ್ತಿದ್ದರು. ಒಂಟಿಕಾಲಲ್ಲಿ ನಿಲ್ಲಿಸುವುದು, ಇನ್ನೊಬ್ಬನನ್ನು ಹೊತ್ತು ನಿಲ್ಲುವುದು, ಮೊಣಕೈ ಸಂದಿಯಲ್ಲಿ ಕೈ ತೂರಿಸಿಕೊಂಡು ಎರಡೂ ಕಿವಿಯನ್ನು ಹಿಡಿದು ಕುಕ್ಕರಗಾಲಿನಲ್ಲಿ ಕೂಡುವುದೂ, ಹಲ್ಲು ಹಚ್ಚಿ ಕಿವಿ ಹಿಂಡುವುದು, ಆಗ ಚಾಲ್ತಿಯಲ್ಲಿದ್ದ ದಂಡನೆಯ ವಿಧಾನಗಳು. ಅತಿ ಮೊಂಡರಿಗೆ ಕೈ ಕಾಲು ಕಟ್ಟಿ ಕೆಡವುತ್ತಿದ್ದರು. ಅದನ್ನು ಕೋದಂಡ ಹಾಕುವುದು ಎನ್ನುವ ವಾಡಿಕೆ ಇತ್ತು. ಅದು ಹೇಗೆ ಆ ರೀತಿ ಬಳಕೆಯಾಯಿತೋ ನನಗಂತೂ ಹೊಳೆದಿಲ್ಲ. ಬಹುಶಃ ಕೈ ಕಾಲು ಒಟ್ಟಿಗೆ ಕಟ್ಟಿದಾಗ ಬಿಲ್ಲಿನಂತೆ ಬಾಗುವುದರಿಂದ ಆ ಹೆಸರು ಬಂದಿರಬಹುದು. ಆದರೆ ಅದು ಬಹು ವಿರಳ. ಒಂದೆ ಹುಡುಗ ಹಾದಿಗೆ ಬರುತ್ತಿದ್ದ. ಇಲ್ಲವೆ ಸಾಲಿ ಬಿಡುತ್ತಿದ್ದ.ಗ್ರಾಮದೇವತೆ ಅಯ್ಯನವರಿಗೆ ಶಾಲಾ ಶುಲ್ಕವನ್ನು ಇಷ್ಟೇ ನೀಡಬೇಂಬ ನಿಗದಿಯಾದ ಕಟ್ಟು ಪಾಡು ಇರಲಿಲ್ಲ. ಅವರು ದೂರದ ಯಾವುದೋ ಗ್ರಾಮದವರು. ಅವರಿಗೆ ನಮ್ಮೂರ ಹಿರಿಯ ರೈತನ ಹನ್ನೊಂದಂಕಣದ ಮನೆಯಲ್ಲಿ ಒಂದು ಕೋಣೆಯಲ್ಲಿ ಉಚಿತ ವಸತಿ. ಇನ್ನು ಊಟ, ಕರೆದವರ ಮನೆಯಲ್ಲಿ. ಅದಕ್ಕೆ ಬಿನ್ನ ಎನ್ನುತ್ತಿದ್ದರು. ಹೀಗಾಗಿ ಅವರು ಮನೆಗೆ ಊಟಕ್ಕೆ ಬರುವುದೆಂದರೆ ದೇವರೆ ಬಂದಂತೆ. ಆದರೆ ಅವರು ಬಹುತೇಕ ಜಂಗಮರಿರಬೇಕು. ಹಾಗಾಗಿ ಲಿಂಗಾಯಿತರೊಬ್ಬರ ಮನೆಯಲ್ಲಿ ಬಿನ್ನವಾಗುತಿತ್ತು. ಅವರ ಊಟದ ಪರಿಯೆ ಬಹು ಚಂದ. ಅವರನ್ನು ಅಟವಾಳಿಗೆಯಲ್ಲಿ ಚಾಪೆ ಇಲ್ಲವೆ ಕಂಬಳಿಯ ಗದ್ದುಗೆಯ ಮೇಲೆ ಕೂಡಿಸುತ್ತಿದ್ದರು. ಅವರ ಎದುರಲ್ಲಿ ಒಂದೂವರೆ ಅಡಿ ಎತ್ತರ ಹಿತ್ತಾಳೆಯ ಮೂರು ಕಾಲಿನ ಸ್ಟೂಲು. ಅದನ್ನು ಅಡ್ಡಣಿಗೆ ಎನ್ನುವರು. ಅದರ ಮೇಲೆ ಕಂಚಿನ ಗಂಗಾಳ. ಪಕ್ಕದಲ್ಲೆ ಥಳ ಥಳ ಹೊಳೆಯುವ ಕಂಚಿನ ಚೊಂಬು ಮತ್ತು ವಾಟಗ. ಕುಳಿತ ಕೂಡಲೆ ವಿಭೂತಿ ಉಂಡೆ ಎದುರು ಬರುತಿತ್ತು. ಅದನ್ನು ಕೈನ ಮೂರೂ ಬೆರಳಿಗೆ ಗಾಢವಾಗಿ ಬಳಿದುಕೊಂಡು ಹಣೆಗೆ ಲೇಪಿಸಿಕೊಂಡರೆ ಬಡಿಸಲು ಸಂಕೇತ. ರೊಟ್ಟಿಯೋ, ಅನ್ನವೋ, ಹೋಳಿಗೆಯೋ, ಮಾದಲಿಯೋ ಏನು ಹಾಕಿದರೂ ಶಿವಾರ್ಪಣ ಎಂದು ಮೊದಲ ತುತ್ತು ಎತ್ತುತಿದ್ದರು. ಊಟ ಮಾಡುವಾಗ ಒಂದೆ ಒಂದು ಅಗಳೂ ಚೆಲ್ಲುತ್ತಿಲಿಲ್ಲ. ಊಟವಾದ ಮೇಲೆ ಗಂಗಾಳದೊಳೊಗೆ ಕೈ ತೊಳೆದು ಆ ನೀರನ್ನೂ ಒಂದು ತೊಟ್ಟು ಬಿಡದೆ ಕುಡಿಯುತ್ತಿದ್ದರು. ಶಿವಾಯನಮಃ ಎಂದು ಎದ್ದರೆ ಊಟ ಮುಗಿದಂತೆ. ದಿನಕ್ಕೆ ಅವರದು ಎರಡೆ ಊಟವಾದರೆ ಮುಗಿಯಿತು. ನಂತರ ಏನನ್ನು ತಿನ್ನುತ್ತಿರಲಿಲ್ಲ. ಹಗಲಿನ ಶಾಲೆ ರಾತ್ರಿ ಭಜನಾ ಮಂದಿರ. ಯಾರೂ ಸಂಗೀತಗಾರರು ಇರಲಿಲ್ಲ. ಬಹುತೇಕ ಹಾಡುತಿದ್ದುದು ತತ್ವ ಪದಗಳು. ವಾದ್ಯ ಎಂದರೆ ಒಂದು ಏಕತಾರಿ. ಅಂದರೆ ಒಂದು ತರಹದ ತಂಬೂರಿ. ಎರಡು ಮೂರು ಜತೆ ತಾಳಗಳು. ಕೈ ತಮಟೆಗಳು. ನೇಕಾರ ಭರಮಪ್ಪ. ಕೆಲಸೇರ ಉದ್ದಾನಪ್ಪ. ಕುರುಬರ ಗೌಡಜ್ಜ, ಮಜ್ಜಿಗೆ ಬಸಪ್ಪ ಖಾಯಂ ಸದಸ್ಯರು. ಅಯ್ಯನವರದು ಮುಮ್ಮೇಳವಾದರೆ ಇವರೆಲ್ಲರದು ಹಿಮ್ಮೇಳ. ಅವರು ಹಾಡಿದ ಸಾಲನ್ನೆ ಮತ್ತೆ ಮತ್ತೆ ಒಟ್ಟಾಗಿ ಹಾಡುವರು. ವಿಶೇಷ ಎಂದರೆ ಆಗ ಹೊತ್ತು ಕಂತುತಿದ್ದಂತೆ ಊಟ ಮುಗಿಯುತಿತ್ತು. ಭಜನೆ ಮಾಡಲು ಊಟವಾಗಿರಬಾರದೆಂದು ಕಡ್ಡಾಯವಿರಲಿಲ್ಲ. ಎಲ್ಲರೂ ಊಟ ಮುಗಿಸಿ ದೇವರ ಬಾಗಿಲ ಆಚೆ ಈಚೆ ಸಾಲಾಗಿ ಕುಳಿತು ಸುಮಾರು ಒಂದು ಗಂಟೆಯವರೆಗೆ ಭಜನೆ ಮಾಡುವರು. ಸುಮಾರು ಹತ್ತಿಪ್ಪತ್ತು ಜನ ಸೇರಿರುತಿದ್ದರು. ಕೆಲವರು ತಮ್ಮ ಕಟ್ಟೆಯ ಮೇಲೆ ಕುಳಿತೆ ಕಿವಿಗೊಡುತಿದ್ದರು. ನೀರವ ರಾತ್ರಿಯ ಮೌನದಲ್ಲಿ ಇವರ ಭಜನೆಯ ಸದ್ದು ದೂರದ ವರೆಗೆ ಕೇಳಿಸುತಿತ್ತು. ಮಂಗಳವಾರ ಶುಕ್ರವಾರ ದೇವಿಗೆ ಊದು ಬತ್ತಿ ಬೆಳಗುತಿದ್ದರು. ಕಾರ್ತಿಕ ಮಾಸದಲ್ಲಿ ಮಾತ್ರ ಕೊಬ್ಬರಿ ಮಂಡಾಳಿನ ಚರಪು ಇರುತಿತ್ತು. ಆಗ ನಾವು ಹುಡುಗರೂ ಮುಕುರುತಿದ್ದೆವು. ಏನಾದರೂ ಊರ ಪಂಚಾಯತಿ ಆಗಬೇಕೆಂದರೆ ಅಲ್ಲಿಯೇ ಆಗಬೇಕು. ನಮ್ಮ ಊರಲ್ಲಿ ಬಹುತೇಕ ಕುರುಬರೆ ಜಾಸ್ತಿ. ಅವರ ವಿಳೇವು, ಮದುವೆ ಮಾತುಕತೆ, ಉಡಿಕೆ, ಬಿಡುಗಡೆ, ಗಂಡ ಹೆಂಡಿರ ಜಗಳ, ಅಣ್ಣ ತಂದಿರ ಪಾಲು ಎಲ್ಲವನ್ನೂ ಕುಲಸ್ಥರು ಸೇರಿ ತಿರ್ಮಾನ ಮಾಡುವರು. ಮತ್ತು ಬಹುತೇಕ ಅವರದೇ ಅಂತಿಮ ಮಾತು. ತಪ್ಪು ಮಾಡಿದವರಿಗೆ ದಂಡ ಹಾಕುವುದು, ನೊಂದವರಿಗೆ ಪರಿಹಾರ ನೀಡುವದು. ಕಿತ್ತಾಡಿದವರನ್ನು ರಾಜಿ ಮಾಡಿಸುವುದು ಹಿರಿಯರಾದ ಪಂಚಾಯತಿದಾರರ ಹೊಣೆ. ಅವರ ಕಟ್ಟಳೆ ಮೀರಿ ಯಾರೂ ನಡೆಯುವಂತಿಲ್ಲ. ಅಷ್ಟು ಅದಕ್ಕೆ ಗೌರವ, ಕೋರ್ಟು ಕಚೇರಿ ಪೊಲೀಸು ಊರಿಗೆ ಬಹುದೂರ. ಎಲ್ಲ ದೇವರ ಎದುರಲ್ಲೆ ಇತ್ಯರ್ಥವಾಗುವವು. ಗುಡಿ ಸಾಮಾಜಿಕ ನೆಮ್ಮದಿಯ ಕೇಂದ್ರವೂ ಆಗಿತ್ತು. ಅಯ್ಯನವರು ಗುಡಿಯಲ್ಲೆ ಇದ್ದರೂ ಊರ ಪಂಚಾಯತಿಯಲ್ಲಿ ಅವರು ಭಾಗವಹಿಸುವಂತಿರಲಿಲ್ಲ. ಲೇಖಕರುಅಯ್ಯನವರು ಬಾಯಿಬಿಟ್ಟು ಕೇಳದಿದ್ದರೂ ಅವರಿಂದ ಯಾರೂ ಬಿಟ್ಟಿ ಪಾಠ ಹೇಳಿಸಿಕೊಳ್ಳುತ್ತಿಲಿಲ್ಲ. ಕೆಲವರು ವರ್ಷಕ್ಕೆ ಇಷ್ಟು ಎಂದು ಹಣ ನೀಡಿದರೆ ಇನ್ನುಳಿದವರು ದವಸ ಧಾನ್ಯ, ಕಾಳು ಕಡಿ ಕೊಡುತ್ತಿದ್ದರು. ಅದೂ ಈಗಿನಂತೆ ತಿಂಗಳು ತಿಂಗಳಿಗೆ ಅಲ್ಲ. ಸುಗ್ಗಿಯ ಹಂಗಾಮದಲ್ಲಿ ಜೋಳ ಭತ್ತ ಸೆಂಗಾ ಅದು ಇದು ಸಂಗ್ರಹವಾಗುತಿತ್ತು. ಅದನ್ನು ಅವರು ಯಾರದಾದರೂ ಹಗೇವಲ್ಲಿ ಇಡುತ್ತಿದ್ದರು. ಉಳಿದವು ಊರ ಗೌಡರ ಕಣಜದಲ್ಲಿ, ಅವರ ಹೆಸರಲ್ಲಿ ಇರುತಿತ್ತು. ವರ್ಷಕ್ಕೋ ಆರು ತಿಂಗಳಿಗೋ ಒಂದು ಸಾರಿ ಅವರು ಊರಿಗೆ ಹೋಗುವಾಗ ಬಂಡಿ ಕಟ್ಟಿಕೊಡುತ್ತಿದ್ದರು. ಅದರಲ್ಲಿ ಅವರನ್ನು, ಅವರ ದವಸ ಧಾನ್ಯವನ್ನು ಅವರ ಊರಿಗೆ ತಲುಪಿಸುತಿದ್ದರು.  

No comments:

Post a Comment