Monday, August 20, 2012

ಊರಿಗೆ ಅಪ್ಪ ಉಪಕಾರಿ


ಪ್ಪ ಪೇಟೆಯ ಸಕ್ಕರೆ ಜಿನ್ನಿನಲ್ಲೆ ಫೀಲ್ಡ್‌ ಮೇಸ್ತ್ರಿ. ಅವರಿಗೆ ಜಿನ್ನಿಗೆ ಕಬ್ಬು ಒದಗಿಸುತಿದ್ದ ಸುತ್ತಲ ಹಳ್ಳಿಗಳ ರೈತರ ಗದ್ದೆಯಲ್ಲಿನ ಬೆಳೆಯ ಉಸ್ತುವಾರಿ ಕೆಲಸ. ಕಬ್ಬು ನಾಟಿ  ಮಾಡಿದಾಗ, ಕಟಾವಿಗೆ ಚೀಟಿ ಕೊಡುವಾಗ ಅವರ ಮಾತೆ ವೇದವಾಕ್ಯ. ಅವರಿಗೆ ಕಬ್ಬಿನ  ಚೀಟಿ ಕೊಡೋ ಸಾಮಿ ಎಂದೆ ಅಡ್ಡ ಹೆಸರು. ನಮ್ಮ ಮನೆ ಇದ್ದದ್ದು ಜಿನ್ನಿನಿಂದ ಮೂರು ಮೈಲು ದೂರದ ಹಳ್ಳಿಯಲ್ಲಿ. ಅಲ್ಲಿಂದ ಬೆಳ್ಳಂಬೆಳಗ್ಗೆ ಸೈಕಲ್‌ ಏರಿ ತಮ್ಮ ವ್ಯಾಪ್ತಿಯ ಗದ್ದೆಗಳಿಗೆ ಸುತ್ತು ಹಾಕುತ್ತಿದ್ದರು. ಯಾವ ಗದ್ದೆಯಲ್ಲಿ ಎಷ್ಟು ಪ್ರಮಾಣದಲ್ಲಿ ನಾಟಿಯಾಗಿದೆ ಎಂದು ದಾಖಲು ಮಾಡುವುದು ಅವರ ಕೆಲಸ. ಅವರ ವರದಿಯ ಮೇಲೆ ರೈತರಿಗೂ ಸಕ್ಕರೆ ಜಿನ್ನಿನವರಿಗೂ ಒಪ್ಪಂದವಾಗುತ್ತಿತ್ತು. ಕಬ್ಬು ತುಳಿದ ಮೇಲೆ ಆ ರೈತರಿಗೆ ಉಪ್ಪು, ಹಿಂಡಿ ಕೊಡುತ್ತಿದ್ದರು. ರಸಗೊಬ್ಬರಕ್ಕೆ ಉಪ್ಪು ಎನ್ನವರು. ಎಣ್ಣೆ ತೆಗೆದ ಕಾಳಿನ ಚರಟ ಹಿಂಡಿ. ಅಪ್ಪ ಪ್ರತಿ ರೈತರಿಗೆ ಸಣ್ಣ ಪುಸ್ತಕ ಕೊಡುತ್ತಿದ್ದ. ಅದರಲ್ಲೇ ಅವರ ಕಬ್ಬು ತುಳಿದ ದಿನ, ಭೂಮಿಯ ಅಳತೆ, ಸರ್ವೇ ನಂ., ಗೊಬ್ಬರ ಕೊಟ್ಟ ದಿನಾಂಕವನ್ನು ದಾಖಲಿಸಿಜಿನ್ನಿನವರ ಸಿಕ್ಕೆ ಹಾಕಿ ಕೊಡುತ್ತಿದ್ದರು. ಕಬ್ಬು ತುಳಿಯುವ ಕೆಲಸ ಮೂರು ನಾಲ್ಕು ದಿನ ನಡೆದರೂ, ಒಂದೆರಡು ದಿನ ಮುಂಚೆ ಮಾಡಿದ್ದಾರೆ ಎಂದರೆ ರೈತರಿಗೆ ಕಬ್ಬು ಒದಗಿಸುವ ಅವಕಾಶ ಸ್ವಲ್ಪ ಬೇಗನೇ ಸಿಗುತ್ತಿತ್ತು. ಅಪ್ಪ ಆ ವಿಷಯದಲ್ಲಿ ಬಹು ಉದಾರಿ ರೈತರಿಗೆ ಅನುಕೂಲವಾಗಲಿ ಎಂದು ಹಿಂದಿನ ದಿನಾಂಕವನ್ನೇ ಹಾಕುತ್ತಿದ್ದರಿಂದ ರೈತರಿಗೆ ಅಪ್ಪನ ಬಗ್ಗೆ ತುಂಬಾ ವಿಶ್ವಾಸ. ಅನೇಕ ರೈತರು ಈ ನಾಲ್ಕಾಣೆ ಪುಸ್ತಕಕ್ಕೆ ರೈತರು ಎಂಟಾಣೆ, ರುಪಾಯಿ ಕೊಡುತ್ತಿದ್ದರು. ದುಡ್ಡಿಲ್ಲ ಸಾಮಿ ಅಂದ್ರೆ ಅಪ್ಪನೇ ಕೈಯಿಂದ ದುಡ್ಡು ಹಾಕಿ ಅವರಿಗೆ ದಾಖಲೆ ಪುಸ್ತಕ ಕೊಡುತ್ತಿದ್ದರು. ಈ ಪುಸ್ತಕವನ್ನು ರೈತರು ಜೋಪಾನವಾಗಿ ಇಟ್ಟುಕೊಳ್ಳಬೇಕಿತ್ತು. ಈ ಪುಸ್ತಕ ನೋಡಿಯೇ ಅವರಿಗೆ ಕಬ್ಬಿನ ಚೀಟಿ ಕೊಡುತ್ತಿದ್ದರು. ಹಾಗಾಗಿ ರೈತರು ಚೀಟಿ ಸಾಮಿ ದೇವ್ರಂತ ಮನಸ್ಯಾ ಅಂತಿದ್ರು. ಅವರು ತಾವು ಮನೆಗಂತ ಹೊಲದಲ್ಲಿ ಬೆಳೆದ ಪಟ್ಲಕಾಯಿ, ತುಪ್ಪೀರಿ ಕಾಯಿ, ಹೆಸರುಕಾಯಿ, ಪುಂಡಿಪಲ್ಯ, ಹಕ್ರಿಕಿ, ಕೋಳಿ ಜುಟ್ಟು, ಅಣ್ಣಿ ಸೊಪ್ಪು, ಚಪ್ಪರ ಬದನೆ ಮೊದಲು ಸ್ವಾಮೇರ ಮನಿಗೆ ತಂದು ಕೊಡುತ್ತಿದ್ದರು. ಅವರು ಮನೆಗೆಂದು ತಂದಾಗ ನಮ್ಮ ಮನೆಗೂ ಕಾಯಿಪಲ್ಲೆ  ಬರುತ್ತಿದ್ದವು. ರಾಶಿಯಾದ ಮೇಲೆ ಆಯಗಾರರಿಗೆ ಕೊಡುವಂತೆ ಪುಟ್ಟಿ ಎರಡು ಪುಟ್ಟಿ ಜೋಳ ನೆಲ್ಲು, ಬೆಲ್ಲ ಮನೆಗೆ ತಂದು ಕೊಡುತ್ತಿದ್ದದು ವಾಡಿಕೆಯಾಗಿತ್ತು. ಅಪ್ಪ ದಿಲ್ದಾರಾಗಿ ಎಲ್ಲರಿಗೂ ಖರ್ಚು ಮಾಡುತ್ತಿದ್ದರು.
ಕಬ್ಬು ಬೆಳೆದ ಮೇಲೆ ಬೆಲ್ಲಕ್ಕೇನಾದರೂ ರೇಟು ಬಂದಿದೆ ಅಂತ ಕೆಲ ರೈತರು ಕಬ್ಬು ಕಡಿದು ಗಾಣ ಆಡದಂತೆ ನಿಗಾ ಇಡಬೇಕು. ಸೀಜನ್ನು ಸುರು ಆದಾಗ ಸರತಿ ಮೇಲೆ ಕಬ್ಬು ಒದಗಿಸಲು ಪರ್ಮಿಟ್‌ ಕೊಡುತ್ತಿದ್ದರು. ಅದನ್ನು ಕಬ್ಬಿನ ಚೀಟಿ ಅಂತಿದ್ರು. ಗದ್ದೆಗೆ ಕೊಟ್ಟ ಚೀಟಿಯಷ್ಟೆ ಬಂಡಿ ಕಬ್ಬು ಕಡಿಯಬೇಕು. ಗದ್ದೆಯ ಎಳೆವರಿ ಕಬ್ಬು ಕಡಿದು ಈ ಚೀಟಿಯಲ್ಲಿ ಸಾಗಿಸುವ ಹಾಗಿಲ್ಲ. ಬೆಳಗ್ಗೆ ಇದರ ಉಸ್ತುವಾರಿ ಮಧ್ಯಾಹ್ನ ೨ ಗಂಟೆಯಿಂದ ೫ ರ ವರೆಗೆ ಕಚೇರಿಯಲ್ಲಿ ವರದಿ. ಮತ್ತು ಮರುದಿನದ ಚೀಟಿ ಪಡೆಯುವುದು ರೈತರಿಗೆ ವಿತರಿಸುವರು. ಅಪ್ಪಗೂ, ರೈತರಿಗೂ ಗಳಸ್ಯ ಕಂಠಸ್ಯ, ಮನೆಯಲ್ಲಿ ಚಾ ಮಾಡುವಾಗ ಬಂದವರಿಗೂ ಒಂದು ಕಪ್ಪು. ಕುಡಿಯುತ್ತಿದ್ದರೆ ಅದರಲ್ಲೆ ಅರ್ಧ ಕಪ್ಪು. ಅವರೂ ಎಂಜಲು ಎಂಬ ಎಗ್ಗಿಲ್ಲದೆ ಕುಡಿಯುವರು. ಅಕ್ಕಪಕ್ಕದವರು ಮಳೆ ಬಂದಾಗ ನಮಗೆ ಗವಾಕ್ಷಿ ಮುಚ್ಚಲೂ ಅವಕಾಶ ಕೊಡದೆ ತಾವೆ ಮುಚ್ಚುತಿದ್ದರು. ವರ್ಷಕೊಮ್ಮೆ ಮಾಳಿಗೆಗೆ ಕರಲು ಹಾಕುವಾಗ ನಾಲ್ಕಾರು ಜನ ಬಂದು ಹಾಕುವರು. ಚಾ ವಗ್ಗಣ್ಣಿ ಮಂಡಾಳು ಕೊಟ್ಟರೆ ಸಾಕು. ಅವರಿಗೆ ಖುಷಿ. ಸ್ವಾಮೇರ ಮನೆಯವರು ಹಿಟ್ಟಿನ ಗಿರಣಿಗೂ ಹೋಗಲೂ ಅವರು ಬಿಡುತ್ತಿರಲಿಲ್ಲ. ಯಾರ ಮನೆಯಲ್ಲಿ ದನ ಈದರೂ ಮೊದಲ ಗಿಣ್ಣದ ಹಾಲು ಬರುತಿತ್ತು. ಆ ಪಾತ್ರೆಯಲ್ಲಿ ಜೋಳ ಹಾಕಿ ಕಳುಹಿಸುವರು. ಹೀಗೆ ಎಲ್ಲರೊಡನೆ ಒಂದಾಗಿದ್ದೆವು.
ತಂಗಿಯ ಮನೆಗೆ ಮೊದಲಿನಿಂದಲೂ ಆಗಾಗ ಹೋಗುವರು. ಮಗನನ್ನು ಬಿಟ್ಟ ಮೇಲೆಸಂಜೆಯ ದಿನಾ ಸಂಜೆಗೆ ತಪ್ಪದೆ ಭೇಟಿ. ಅಲ್ಲಿ ಒಂದು ಕಪ್ಪು ಚಹಾ. ಆಗೀಗ  ಮಂಡಾಳು, ವಡೆ ಮೆಣಸಿನ ಕಾಯಿ ತರಸಿ ತಾನೂ ತಿಂದು ಎಲ್ಲರಿಗೂ ಹಂಚಿದಾಗಲೆ ತೃಪ್ತಿ. ಒಂದು ದಿನ ತಂಗಿಯನ್ನು ನೋಡದಿದ್ದರೆ ಮನಸ್ಸಿಗೆ ನೆಮ್ಮದಿ ಇಲ್ಲ. ಕಾರಣ ಇರುವವರು ಅವರಿಬ್ಬರೆ. ನಮ್ಮ ತಾತ ಹೆಣ್ಣು ಮಗು ಹುಟ್ಟಿದಾಗಲೆ ತೀರಿ ಹೋದರು. ಹಾಗಾಗಿ ಅನಾಥ ಮಕ್ಕಳು ಸೋದರ ಮಾವನ ಮನೆಯಲ್ಲಿ ಬೆಳೆದವು. ಬಡತನವಿದ್ದರೂ ಕಡು ಪ್ರೀತಿ. ಅದಕ್ಕೆಂದೆ ನಾನೂ ಅಲ್ಲಿಯೇ ಓದಲು ಇದ್ದದ್ದು. ತಂಗಿಗೆ ತೊಂದರೆಯಾಗಬಾರದೆಂದು ಅಲ್ಲಿಯೆ ಒಂದು ಅಂಗಡಿಯಲ್ಲಿ ಉದ್ದರಿ ಲೆಕ್ಕ ಇತ್ತು. ತಾನು ಬಂದಾಗ ನಗದು ಇದ್ದರೆ ಪರವಾ ಇಲ್ಲ. ಇಲ್ಲದಿದ್ದರೆ ಉದ್ದರಿ ಅಂಗಡಿಯಿಂದ ಸಾಮಾನು ತರಸಿ ತಿಂಡಿ ಮಾಡಿಸುತ್ತಿದ್ದರು. ಅದಕ್ಕೆ ಎಲ್ಲ ಅಳಿಯಂದಿರಿಗೂ ಮಾವ ಎಂದರೆ ಜೀವ.
ಅಪ್ಪ ಬಹು ಧಾರಾಳಿ. ಸಾಲಮಾಡಿ ತುಪ್ಪತಿನ್ನು ಎಂಬ ಮಾತಿಗೆ ಮನ್ನಣೆ ಕೊಟ್ಟವರು. ಹಾಸಿಗೆ ಇದ್ದಷ್ಟು ಕಾಲುಚಾಚು ಎಂಬ ಮಾತಿಗೆ ಅವರಲ್ಲಿ ಕಿಮ್ಮತ್ತಿಲ್ಲ. ಕೊಡುಗೈ ದಾನಿ.  ಬೇಕು ಅಂತ ಬಂದವರಿಗೆ ಇಲ್ಲ ಎಂದು ಹೇಳಿದ್ದೆ ವಿರಳ. ಕೈಯಲ್ಲಿದ್ದರೆ ಕೊಟ್ಟು ಬಿಡುವುದು. ಇಲ್ಲವಾದರೆ ಸಾಲ ಮಾಡಿಯಾದರೂ ಕೊಡುವರು. ಕಾರಣ ಕೇಳಿದರೆ ನನಗಾದರೆ ಸಾಲಹುಟ್ಟುವುದು. ಪಾಪ ಅವರಿಗೆ ಅದೂ ಇಲ್ಲ. ಅಷ್ಟು ಸಹಾಯ ಮಾಡದಿದ್ದರೆ ಹೇಗೆ? ಅವರೇನು ಓಡಿ ಹೋಗುವರೆ? ಕೊಟ್ಟೆಕೊಡುವರು ಎಂಬುದು ಅವರ ಸಮಜಾಯಿಷಿ. ಹಾಗಾಗಿ ಬಂಧು ಬಳಗದಲ್ಲಿ ನೆಂಟರಿಷ್ಟರಲ್ಲಿ ಬಹು ಜನಪ್ರಿಯ. ಅಲ್ಲದೆ ಅವರು ಸಾಲದ ಮರು ಪಾವತಿ ಮಾಡದಿದ್ದರೆ ಸಾಲ ವಸೂಲಿಗೆ ದಣಿಯ ಆಳು ಬರುತಿದ್ದುದು ನಮ್ಮ ಮನೆಗೆ. ಸದಾ ಬಡ್ಡಿ ವಸೂಲಿಗೆ ಬರಿತಿದ್ದವರನ್ನು ನೋಡಿ ನೋಡಿ. ನನಗೆ "ಹೊರ ಬೇಡ ಅಂಗಡಿ ಸಾಲ ಊರ ಹೊಣೆಯ" ಎಂಬ ಮಾತು ಮನದಲ್ಲಿ ನಾಟಿಬಿಟ್ಟಿತ್ತು. ಯಾವುದೆ ಸಮಾರಂಭ ಆದರೂ ಭೀಮಣ್ಣ ಇರಲೇಬೇಕು. ಮದುವೆ ಮುಂಜಿಗೆ ಹೊದಾಗಲಂತೂ ಹೆಂಗಸರ ಕಣ್ಮಣಿ. ಅಲ್ಲಿ ಮಕ್ಕಳು ಹಸಿವೆ ಎಂದು ಆಳುತ್ತಿದ್ದರೆ, ನೋಡು ಭೀಮಣ್ಣ, ಮಗು ಹಟಮಾಡುತ್ತಿದೆ ಎನ್ನುವರು. ಇವರು ಆ ಮಗುನ್ನು ಮಾತ್ರವಲ್ಲ ಅಲ್ಲಿರುವ ಹುಡುಗರನ್ನೆಲ್ಲ ಹೋಟಲಿಗೆ ಕರೆದೊಯ್ಯುವರು. ತಿಂಡಿ ತಿನಿಸಿ ಬರುವರು. ಜೊತೆಗೆ ಬಿಸ್ಕತ್ತೂ ಸಿಗುವುದು.ಆಗಿನ ತಿಂಡಿ ಮೆಣಸಿಕಾಯಿ, ಒಗ್ಗಣ್ಣಿ ಮಾತ್ರ.
ಅವರ ಇನ್ನೊಂದು ಗುಣ ವೆಂದರೆ ತಾವು ಕೊಂಡುತಂದ ಯಾವುದೇ ವಸ್ತುವಿನ ಬೆಲೆ ಎಷ್ಟು ಎಂದರೆ ಸದಾ ಕಡಿಮೆ ಮಾಡಿ ಹೇಳುವರು. ಕೇಳಿದವರು ಪರವಾ ಇಲ್ಲ ನೀನು  ಬಿಡಪ್ಪಾ ಭಾಳ ಸೋವಿಗೆ ಸಿಕ್ಕದೆ, ನಮಗೆ ಒಂದು ತಂದು ಕೊಡು ಎಂದರೆ. ಕಮಕ್‌ ಕಿಮಕ್‌ ಎನ್ನದೆ ತಂದು ಕೊಡುವರು. ಹೆಚ್ಚುವರಿ ದುಡ್ಡು ಕೈಯಿಂದ ಕೊಟ್ಟರೂ ಇದ್ದ ವಿಷಯ ಹೇಳುತ್ತಿರಲಿಲ್ಲ.
ವೇಷ ಭೂಷಣದಲ್ಲಿ ಅವರದೆ ಆದ ಛಾಪು. ಯಾವಾಗಲು ತುಂಬುತೋಳಿನ ಅಂಗಿ. ಉಡಲು ಮಲ್ಲು ಧೋತರ. ವಾಚು, ಉಂಗುರ, ಬಂಗಾರದ ಸರ ಯಾವು ಇಲ್ಲ. ಅವರಿಗೆ ಗಂಧೆಣ್ಣಿ ಮಾತ್ರ ಇರಲೆಬೇಕು. ಆಗ ಗಂಧದ ಎಣ್ಣಿಯನ್ನು ಚಿಕ್ಕ ಬಾಟಲಿಯಲ್ಲಿ ಮಾರುತಿದ್ದರು ಅದನ್ನು ಹತ್ತಿಯ ಚೂರಲ್ಲಿ ಅದ್ದಿ ಅಂಗಿಗೆ ಅಂಟಿಸಿಕೊಂಡು ಕಿವಿಯ ಮೇಲ್ಭಾಗದಲ್ಲಿ ಇಡುವುದು ವಾಡಿಕೆ. ಮಗ್ಗುಲಲ್ಲಿ ಬಂದವರಿಗೆ ಘಮ್ ಅಂಬ ವಾಸನೆ ಹೊಡಿಯಬೇಕು. ಎತ್ತರದ ಆಳು. ತಿಳಿ ಕೆಂಪು ಬಣ್ಣ. ಅರ್ಧ ಬಕ್ಕ ತಲೆ. ಕಾಲಿಗೆ ಚಪ್ಪಲಿಯೂ ಇಲ್ಲ. ಎಂಥ ಬಿರು ಬಿಸಿಲು ಇದ್ದರೂ ಬರಿ ತಲೆ, ಬರಿ ಗಾಲು. ಆದರೆ ಸದಾ ಸೈಕಲ್‌ ಮಾತ್ರ ಇರಲೇಬೇಕು. ಕಾರಣ ಅದು ಅವರ ಕೆಲಸದ ಅವಿಭಾಜ್ಯ ಅಂಗ. ಸಿಟ್ಟು, ಸಿಡಿಮಿಡಿ ಗೊತ್ತೆ ಇಲ್ಲ. ಇದ್ದಾಗ ಹಿಂದೆ ಮುಂದೆ ನೋಡದೆ ಕೊಡುವುದು. ಇಲ್ಲದಾಗ ಸಾಲ ಮಾಡವುದು. ಬಡ್ಡಿಯ ಬಗ್ಗೆ ಚೌಕಾಸಿ ಇಲ್ಲ.
ಆಗಾಗ ನಮ್ಮ ಅಮ್ಮ ಅವರ ಜತೆ  ಮಾತಿಗೆ ಇಳಿಯುತ್ತಿದ್ದರು. ಕಚ್ಚೆ ಹಾಕಿದಾಗ ನವಾಬ ಸಾಬ, ಕಚ್ಚೆ ಬಿಚ್ಚಿದಾಗ ಫಕೀರ ಸಾಬರಂತೆ ಆಡುವುದು ಬೇಡ, ಕೈ ತುಸು ಹಿಡಿತವಿರಲಿ ಎಂಬುದು ಅವರ ವಾದ. ಆದರೆ ಅದನ್ನು ನಮ್ಮ ಅಪ್ಪ ಈ ಕಿವಿಯಿಂದ ಕೇಳಿ ಆ ಕಿವಿಯಲ್ಲಿ ಬಿಡುತ್ತಿದ್ದರು. ಆದರೆ ಅವರಿಬ್ಬರ ಅನ್ಯೋನ್ಯತೆ ಬಹಳ. ಏನೇ ಮಾಡಿದರು ಗಂಡನನ್ನು ಬಿಟ್ಟು ಕೊಡುತ್ತಿರಲಿಲ್ಲ. ಗಂಡನಿಗೆ ಹಲವು ಹೆಂಗಸರ ಗೆಳೆತನ ಇರುವುದು ಅವರು ಬಲ್ಲರು. ಆಳುವ ಗಂಡಸಿಗೆ ಅರವತ್ತು ಮಂದಿ ಎಂಬ ಮಾತಿನಲ್ಲಿ ನಂಬಿಕೆ. ಆ ಬಗ್ಗೆ ಮನೆಯಲ್ಲಿ ಕರಿಕಿರಿಯಾದ ನೆನೆಪೆ ಇಲ್ಲ. ಅಗತ್ಯ ಬಿದ್ದಾಗ ಕಿವಿಯಲ್ಲಿನ ಬೆಂಡಾಲೆಯನ್ನೂ   ತುಟಿಪಿಟಕ್‌ ಎನ್ನದೆ ಬಿಚ್ಚಿ ಕೊಡುವರು ಅದರ ಜಾಗದಲ್ಲಿ ತಿಂಗಳುಗಟ್ಟಲೆ ಕಿವಿಯಲ್ಲಿ ಒಣ ಬೇವಿನ ಕಡ್ಡಿ ಇರುತಿತ್ತು.
ಹಳ್ಳಿಯಿಂದ ನಾನು ಪಟ್ಟಣಕ್ಕೆ ಹೋದಾಗ, ಚಿತ್ತವಾಡಿಗೆಯ ಶಾಲೆಯಲ್ಲಿ ಐದನೆ ತರಗತಿಗೆ ಸೇರಿದೆ. ಅಲ್ಲಿನ ಓದು ಅಷ್ಟೇನು ಕಷ್ಟವೆನಿಸಲಿಲ್ಲ. ಸಾಧಾರಣವಾಗಿ ನನಗೆ ಅಲ್ಲಿ ಹತ್ತಕ್ಕೆ ಹತ್ತು ಅಂಕಗಳು ಬರುತಿದ್ದವು.  ಶಾಲೆಗಿಂತ ಮನೆಯಲ್ಲಿ ಮತ್ತು ಹೊರಗೆ ಮಾತ್ರ ನಾನು ಕಲಿತದ್ದು ಬಹಳ ನಮ್ಮ ಊರಿನಲ್ಲಿದ್ದಾಗ ಮನೆಯಲ್ಲಿ ನಾನೊಬ್ಬನೆ. ನಮ್ಮಕ್ಕ ಅಮ್ಮನ ತವರು ಮನೆಯಲ್ಲಿದ್ದಳು ಹಾಗಾಗಿ ನಾನು ಒಂಟಿ ಬಡಕ. ಇಲ್ಲಿ ಹಾಗಲ್ಲ. ಮನೆಯಲ್ಲಿ ಸದಾ ಜನ. ನಾನು ಗುಂಪಿನಲ್ಲಿ ಗೋವಿಂದ. ಅಲ್ಲದೆ ಊಟ ಸ್ನಾನ ಎಲ್ಲ ಸಾಮೂಹಿಕ. ರಜಾದಿನಗಳಲ್ಲಿನಮ್ಮ ಜಳಕದ ಮನೆ ಕಾಲುವೆ. ಗಂಟೆಗಟ್ಟಲೆ ನೀರಾಟ. ಅಲ್ಲಿಯೆ ನಾನು ಈಜು ಕಲಿತದ್ದು. ಹಳ್ಳಿಯಿಂದ ನಾನು ಪಟ್ಟಣಕ್ಕೆ ಹೋದಾಗ. ಚಿತ್ತವಾಡಿಗೆಯ ಶಾಲೆಯಲ್ಲಿ ಐದನೆ ತರಗತಿಗೆ ಸೇರಿದೆ. ಅಲ್ಲಿ ನಾವು ಬೆಳಗ್ಗೆ ಖುಷಿಯಿಂದ ಮಾಡುತಿದ್ದ ಕೆಲಸ ಒಂದಿತ್ತು. ಮನೆಯಲ್ಲಿ ಇಷ್ಟೊಂದು ಜನರಿಗೆ ನೀರು ಕಾಸಬೇಕು. ಜತೆಗೆ ಅತ್ತೆಯ ಬಾಣಂತನದಲ್ಲಿ ಮೂರುತಿಂಗಳು ದಿನವೂ ಅಗ್ಗಿಷ್ಟಿಕೆಗೆ ಕಾಯಿಸಬೇಕು. ಅದಕ್ಕೆ ಬಳಸುತಿದ್ದದು ಕುಳ್ಳು. ಸೆಗಣಿಯನ್ನು ಭತ್ತದ ಹೊಟ್ಟು ಬೆರಸಿ ಉಂಡೆ ಮಾಡಿಕೊಂಡು ಬಿಸಿಲು ಬೀಳುವ ಜಾಗದಲ್ಲಿ ಗೋಡೆಗೆ ತಟ್ಟುವರು. ಮುಖ್ಯವಾಗಿ ನೀರೊಲೆಗೆ ಅದೆ ಉರುವಲು. ಅದಕ್ಕೆ ಸೆಗಣಿ ಬೇಕು. ಮನೆಯಲ್ಲಿ ದನ ಇದ್ದವರಿಗೆ ಸಮಸ್ಯೆ ಇಲ್ಲ. ದಿನವೂ ಅವರಿಗೆ ಸೆಗಣಿ ಸಿಗುವುದು. ಇಲ್ಲದವರು ಸೆಗಣಿ ಸಂಗ್ರಹಿಸಬೇಕು. ನಮ್ಮ ಮನೆ ಮುಂದೆಯೆ ರಸ್ತೆ. ಮತ್ತು ದೊಡ್ಡ ಆಲದ ಮರ. ರಸ್ತೆಯಲ್ಲಿ ಹೋಗುವ ಕಬ್ಬಿನ ಬಂಡಿಯನ್ನು ಎಳೆಯುವ ಎತ್ತುಗಳ ಸೆಗಣಿ ಸಂಗ್ರಹಿಸಲು ನಾ ಮುಂದು ತಾಮುಂದು ಎಂದು ಓಡುತಿದ್ದೆವು. ಅಲ್ಲದೆ ಬೆಳಗು ಮುಂಜಾನೆ ಮನೆ ಮುಂದಿನ ಬಯಲಲ್ಲಿ ಮಲಗಿದ್ದ  ಬೀಡಾಡಿ ದನಗಳು ಹಾಕುವ ಸೆಗಣಿಯನ್ನೂ ಸಂಗ್ರಹಿಸುವೆವು. ಅದಕ್ಕೆ ನಾವು ಕಾದು ನಿಂತಿರುವೆವು. ದನ ಬಾಲ ಎತ್ತಿದರೆ ಸಾಕು ಅದರ ಹಿಂದೆ ಹೋಗಿ ಹಳೆಯ ಮೊರ ಹಿಡಿದು ಸೆಗಣಿ ಕೆಳಗೆ ಬೀಳುವ ಮೊದಲೆ ಸಂಗ್ರಹಿಸುವೆವು. ಆ ಕೆಲಸದಲ್ಲಿ ಅಕ್ಕಪಕ್ಕದ ಹಲವು ಮನೆಯ ಮಕ್ಕಳು ಕೂಡಾ ಜತೆಯಾಗುತಿದ್ದರು.
ಅದರಿಂದ ತಟ್ಟಿದ ಕುಳ್ಳು ಬಾಣಂತಿಗೆ ಮಗುವಿಗೆ ಎರೆಯಲು ಮತ್ತು ಎರಡೂ ಹೊತ್ತು ಬೆಂಕಿ ಕಾಯಿಸಿಕೊಳ್ಳುವ ಅಗ್ಗಿಷ್ಟಿಕೆಗೆ ಆಗುತಿತ್ತು. ಯಾರ ಮನೆಯ ಮುಂದಾದಾರೂ ಬೆಳಗ್ಗೆ ಮತ್ತು ಸಂಜೆ ಅಗ್ಗಿಷ್ಟಿಕೆ ಅಂಗಳದಲ್ಲಿ ಹೊಗೆಯಾಡುತಿದ್ದರೆ ಅಲ್ಲಿ ಹಸಿ ಬಾಣಂತಿ ಇರುವಳು ಎಂದು ಲೆಕ್ಕ. ಅಗ್ಗಿಷ್ಟಿಕೆಯನ್ನು ಹೊತ್ತಿಸಲು ಅರ್ಧ ಗಂಟೆಯಾದರೂ ಹೊರಗೆ ಗಾಳಿಗೆ ಇಡಬೇಕಾಗುವುದು. ಮೊದಲಲ್ಲಿ ಹೊಗೆ ಬಂದರೂ ನಂತರ ನಿಗಿ ನಿಗಿ ಕೆಂಡ. ಬಾಣಂತಿ ಎರೆದುಕೊಂಡ ಕೂಡಲೆ ಮೇಲೆ ಕಾಯಿಸಿಕೊಳ್ಳುವುದು ನಂತರ ಹೊರಸಿನ ಕೆಳಗೆ ಇಟ್ಟರೆ ಬೆಚ್ಚಗೆ ಇರುತಿತ್ತು. ಬಾಣಂತಿಗೆ ಬಿಸಿ ನೀರು, ಕೆಂಡ ಹೆಚ್ಚಾದದ್ದಷ್ಟೂ ಒಳ್ಳೆಯದು ಎಂಬ ಭಾವನೆ ಇತ್ತು.
ನಮ್ಮ ಅತ್ತೆಯ ಮಕ್ಕಳಲ್ಲಿ ಎರಡನೆಯವನು ಆಟಗುಳಿ. ಚಿಣ್ಣಿ ದಾಂಡು, ಬುಗುರಿ, ಲಗೋರಿ, ವಟ್ಟೆಪ್ಪ ಆಟದಲ್ಲಿ ಪರಿಣಿತ. ಮರಕೋತಿ ಆಟದಲ್ಲಿ ಮಂಗನೆ ನಾಚಬೇಕು ಅವನು ಮರ ಏರುವುದನ್ನು. ಕೊಂಬೆಯಿಂದ ಕೊಂಬೆಗೆ ಜಿಗಿಯುವ ಪರಿಕಂಡು. ಅವನ ಚೀಲದಲ್ಲಿ ಪುಸ್ತಕಗಳಿಗಿಂತ ಅನೇಕ ರೀತಿಯ ಗೋಲಿಗಳೆ ಜಾಸ್ತಿ ಇರುತಿದ್ದವು. ಹಿಟ್ಟಿನ ಗೋಲಿ, ಗಾಜಿನ ಗೋಲಿ, ಕಬ್ಬಿಣದ ಗೋಲಿ, ಅದನ್ನು ಚೆರ್ರ ಎನ್ನುತಿದ್ದೆವು. ಕಲ್ಲಿನ ಗೋಲಿಯನ್ನು ಗೇಟಿ ಎನ್ನುವರು. ಅದರಿಂದ ಹೊಡೆದರೆ ಸಾಧಾರಣ ಗೋಲಿಗಳು ಪುಡಿ ಪುಡಿ. ನಾನೂ ಎಲ್ಲ ಆಟದಲ್ಲಿ ಅವನ ಅನುಯಾಯಿ. ಆದರೆ ಗೋಲಿಯಾಟ ಮಾತ್ರ ನನಗೆ ಒಲಿಯಲೆ ಇಲ್ಲ. ಬೆರಳತುದಿಗೆ ಗೋಲಿ ಇಟ್ಟು ಇನ್ನೊಂದು ಕೈನಿಂದ ಮೀಟಿ ಹೊಡೆಯವ ಕಲೆ ನನಗೆ ಸಿದ್ದಿಸಲೇಇಲ್ಲ. ಮಾರು ದೂರವಿರುವ ಗೋಲಿಯನ್ನು ಚಟ್ಟನೆ ಹೊಡೆವ ಅವನ ಪರಿಯನ್ನು ನೋಡಿ ಬೆಕ್ಕಸ ಬೆರಗಾಗುತಿದ್ದೆ. ಇನ್ನು ಬುಗುರಿಯಂತು ಕಲಾತ್ಮಕ ಆಟ. ಅಂಗಡಿಯಲ್ಲಿ ಸಿಗುವ ಬಣ್ಣದ ಬುಗರಿಯನ್ನು ತಂದು ಅದಕ್ಕೆ ತಲೆ ಕತ್ತರಿಸಿದ ಮೊಳೆಯನ್ನು ಹೊಡೆದು ಚಾಟಿಯನ್ನ ಹೊಸೆದು ಅಡಿಸುವುದೆಂದರೆ ಸಣ್ಣ ಮಾತೆ. ಅದರಲ್ಲೂ ಚಾಟಿಯನ್ನು ಸುತ್ತಿ ಅಂತರಿಕ್ಷದಲ್ಲೆ ಅದನ್ನು ರೊಯ್ಯನೆ ಬೀಸಿ ಅಂಗೈ ಮೇಲೆ ಆಡಿಸುವ ನಿಪುಣತೆ ಬಹಳ ಹುಡುಗರಿಗೆ ಇಲ್ಲ. ಬುಗುರಿಯಾಟದಲ್ಲಿ ಎದುರಾಳಿಯ ಬುಗರಿಗೆ ಗಿಚ್ಚ ಕೊಡುವುದೆಂದರೆ ಹೆಮ್ಮೆಯ ವಿಷಯ. ಅದಕ್ಕಾಗಿ ಬುಗುರಿ ತಿರುಗುವ ಕಬ್ಬಿಣದ ಮೊಳೆಯನ್ನು ಬಂಡೆಗೆ ಮಸೆದು ಮಸೆದು ಚೂಪಾಗಿಸಬೇಕಿತ್ತು. ಬುಗುರಿಯಲ್ಲಿ ಪರಿಣಿತರು ಒಂದೆ ಏಟಿಗೆ ತಮ್ಮ ಎದುರಾಳಿಯ ಬುಗರಿಯನ್ನು ಎರಡು ಹೋಳು ಮಾಡುವರು. ಆಗ ನೋಡಬೇಕು ಸೋತವರ ಮುಖ.
ನನಗೆ ಈ ಎಲ್ಲ ಆಟಗಳ ದೀಕ್ಷೆ ಸಿಕ್ಕಿದ್ದು ಅಲ್ಲಿಯೆ. ಚಿಣ್ಣಿ ದಾಂಡು ಇನ್ನೊಂದು ಜನಪ್ರಿಯ ಆಟ. ಒಂದ ಮೊಳದುದ್ದ ಕೋಲು ಅದನ್ನೆ ದಾಂಡು ಎನ್ನವರು. ಗೇಣದ್ದದ  ಚಿಣ್ಣಿ. ದಾಂಡಿನಿಂದ ಚಿಣ್ಣಿಯನ್ನು ಮೊದಲು ಚಿಮ್ಮಬೇಕು. ಅದನ್ನು ಬುತ್ತಿ ಹಿಡಿದರೆ ಆಟಗಾರನು ಸೋತಂತೆ. ಇಲ್ಲದಿದ್ದರೆ ಅಲ್ಲಿಂದ ಅದನ್ನು ಹೊಡೆಯಬೇಕು. ಅದು ಎಷ್ಡು ದೂರ ಹೋಗುವುದೋ ಅಲ್ಲಿಂದ ಎದುರಾಳಿ ಕುಂಟಬೇಕು. ಆ ಅಟವೆ ಇಂದಿನ ಕ್ರಿಕೆಟ್ಟಿನ ಅಪ್ಪ ಎಂದರೂ ಅಡ್ಡಿ ಇಲ್ಲ. ನನಗೆ ಅವುಗಳ ಪರಿಚಯವಾಯಿತೆ ವಿನಃ ಪರಿಣಿತಿ ಬರಲಿಲ್ಲ ಆದರೆ ಒಂದು ರೀತಿಯಲ್ಲಿ ಅದು ಒಳ್ಳೆಯದೆ ಆಯಿತು. ಓದಿನಲ್ಲಿ ನಾನು ಎಷ್ಟೆ ಮುಂದಿದ್ದರೂ ಆಟಗಳಲ್ಲಿ ಅವರೆ ಗೆಲ್ಲುವರು. ನನಗೆ ಸದಾ ಸೋಲು. ಆಗ ಅವರಿಗೆ  ನೆಮ್ಮದಿ. ಶಾಲೆಯಲ್ಲಿ ಹೆಚ್ಚು ಅಂಕ ಪಡೆವ ನನ್ನನ್ನು ಆಟದಲ್ಲಿ ಸೋಲಿಸಿದೆ ಎಂದು  ಅವರು ಹಿಗ್ಗಿ ಹೀರೆ ಕಾಯಿ ಆಗುತಿದ್ದರು. ಸೋಲಿನಲ್ಲೂ ಸುಖವಿದೆ ಎಂದು ಆಗ ನನಗೆ ಗೊತ್ತಾಯಿತು. ಎಲ್ಲದರಲ್ಲೂ ಗೆಲ್ಲಬೇಕೆಂಬ ಹುಚ್ಚು ಹಂಬಲಕ್ಕೆ ಆಗಲೆ ಕಡಿವಾಣ ಬಿದ್ದಿತು.

No comments:

Post a Comment