Monday, August 20, 2012

ಹೋಗುವಾಗ ಹುರುಪು ಬರುವಾಗ ಅಳುಕು


ಹೈ
ಸ್ಕೂಲಿಗೆ ಬಂದನಂತರ ನಾನು ಶಾಲೆಗೆ ನಮ್ಮ ಹಳ್ಳಿಯಿಂದಲೆ ಹೋಗುತಿದ್ದೆ.. ಶಾಲೆ ನಮ್ಮ ಹಳ್ಳಿಗೆ ನಾಲಕ್ಕು ಮೈಲು ದೂರದಲ್ಲಿದೆ. ನಮ್ಮ ಊರಿನಿಂದ ನಾಲಕ್ಕು ಜನ ಮಕ್ಕಳು ಶಾಲೆ ಹೋಗುತಿದ್ದೆವು. ಕಾಲು ನಡಗೆಯಲ್ಲೆ ನಮ್ಮ ನಿತ್ಯ ಪ್ರಯಾಣ. ಗೌಡರ ಮೂರು ಮಕ್ಕಳು ಒಂಟೆತ್ತಿನ ಗಾಡಿಯಲ್ಲಿ ಹೋಗುವರು. ವಾಹನ ಸೌಕರ್ಯ ಕಡಿಮೆ. ಆಗ "ಬೋಂ ಬೊಂ" ಮತ್ತು "ಎಸ್‌.ವಿ.ಎಂ.ಎಸ್‌" ಎಂದು ಎರಡು ಬಸ್ಸುಗಳು ಇದ್ದವು. ಆದರೆ ಅವು ಶಾಲೆಯ ಸಮಯಕ್ಕೆ ಸರಿಯಾಗಿ ಇರಲಿಲ್ಲ. ಸ್ಟೋರ್‌ಬಸ್‌ ಮಾತ್ರ ಶಾಲೆಗೆ ಮಕ್ಕಳನ್ನು ಬಿಡಲು ಇದ್ದಿತು. ಅದನ್ನು ಹಂಪಿ ಕ್ಯಾಂಪಿನಲ್ಲಿರುವ ಕೆಇಬಿ ನೌಕರರ ಮಕ್ಕಳಿಗಾಗಿ ಓಡಿಸುತಿದ್ದರು. ಅದರಲ್ಲಿ ಕಮಲಾಪುರ ಮತ್ತು ಇತರ ಮಕ್ಕಳಿಗೂ ಅವಕಾಶ ಇತ್ತು. ಅದಕ್ಕೆ ತಿಂಗಳಿಗೆ ಐದು ರೂಪಾಯಿ ಕೊಟ್ಟು ಪಾಸು ಮಾಡಿಸಬೇಕಿತ್ತು. ಅಷ್ಟು ಹಣವನ್ನು ತಿಂಗಳು ತಿಂಗಳು ಕೊಡುವುದು ಕಷ್ಟವಿತ್ತು. ಆಗ ಶಾಲೆಯ ಶುಲ್ಕವೆ ತಿಂಗಳಿಗೆ ಎರಡು ರೂಪಾಯಿ ಹನ್ನೆರಡಾಣೆ. ಅದನ್ನೆ ದಂಡವಿಲ್ಲದೆ ಕಟ್ಟಿದ ನೆನಪೆ ಇಲ್ಲ. ಹಾಗಿದ್ದಾಗ ಇನ್ನು ಬಸ್ಸಿಗೆ ಹೋಗುವ ಮಾತೆಲ್ಲಿ. ಅಲ್ಲದೆ ಆ ಬಸ್ಸು ಕಿಕ್ಕಿರಿದು ತುಂಬಿರುತಿತ್ತು. ನಮ್ಮ ಊರಿಗೆ ಬರುವಾಗಲೆ ಆದರ ಫುಟ್‌ಬೋರ್ಡ ಮೇಲೂ ಬಾಗಿಲಲ್ಲೂ ಜನ ನೇತಾಡುತ್ತಾ ಬರುತ್ತಲಿದ್ದರು. ಆ ಗೋಡವೆಯೇ ಬೇಡ ಎಂದು ನಾವು ನೆಡೆದೆ ಶಾಲೆಗೆ ಹೋಗುತಿದ್ದೆವು.
ನಮಗೆ ಅದೇನೂ ಅಷ್ಟು ದೂರ ಎನಿಸುತ್ತಿಲಿಲ್ಲ. ಪಟ್ಟಣಕ್ಕೆ ನಮ್ಮ ಹಳ್ಳಿಯಿಂದ ಮೂರು ಮೈಲು. ಅಲ್ಲಿಂದ ಶಾಲೆಗೆ ಒಂದು ಮೈಲು. ಆದರೆ ಮಧ್ಯದಲ್ಲಿ ಮೂರು ಊರುಗಳು. ಅದೂ ಕೊರೆದು ಇಟ್ಟಂತೆ. ನಮ್ಮ ಊರ ಹೊರಗೆ ಕಡೆ ಅಗಸಿ ಮತ್ತು ಭವ್ಯವಾದ ವಿಜಯನಗರದ ಕಾಲದ ಎಂದೂ ಜಲ ಬತ್ತದ ಸೂಳೆ ಭಾವಿ ಅಲ್ಲಿಂದ ಅರ್ಧ ಮೈಲಿಗೆ ಕೊಂಡನಾಯಕನಹಳ್ಳಿ. ಅದೂ ಚಿಕ್ಕ ಊರೆ. ಅಲ್ಲಿ ರಸ್ತೆಯ ಪಕ್ಕದಲ್ಲೆ ಒಂದು ಹಿಟ್ಟಿನ ಜಿನ್ನು. ಮೂರು ಊರಿಗೂ ಅದು ಒಂದೆ. ವಿದ್ಯುತ್‌ ಇಲ್ಲದ ಕಾಲ. ಬಹುಶಃ ಅದು ಡಿಜಿಲ್‌ ನಿಂದ ನಡೆಯುತ್ತಲಿರಬೇಕು. ಅದು ಚಾಲು ಆದರೆ ಕು ಕು ಎಂಬ ಶಬ್ದ ದೂರದವರೆಗೆ ಕೇಳುತ್ತಲಿತ್ತು. ಹತ್ತು ಹದಿನೈದು ಸೇರು ಜೋಳ ತುಂಬಿದ ಬುಟ್ಟಿಯನ್ನು ಸಲೀಸಾಗಿ ತಲೆಯ ಮೇಲೆ ಇಟ್ಟುಕೊಂಡು ಹಿಟ್ಟು ಮಾಡಿಸಲು ಹೆಂಗಸರು ಬರುವರು. ಒಂದೊ ಎರಡೊ ಸೇರಾದರೆ ಮನೆಯಲ್ಲೆ ಬೀಸುವ ಕಲ್ಲಿನಲ್ಲಿ ಕೆಲಸ ಮುಗಿಸುತ್ತಿದ್ದರು. ಅಕ್ಕಿ ಹಾಕಿಸಲು ಮಾತ್ರ ಬಂಡಿಯಲ್ಲಿ ನೆಲ್ಲು ಚೀಲ ಹಾಕಿಕೊಂಡು ಬರುವರು.
ನಂತರ ಒಂದು ಮೈಲು ಹೋದರೆ ಅನಂತ ಶಯನ ಗುಡಿ. ಅಲ್ಲಿ ಭವ್ಯವಾದ ವಿಜಯನಗೆರದ ಶೈಲಿಯ ದೇಗುಲ. ಆದರೆ ಅಲ್ಲಿ ದೇವರೆ ಇಲ್ಲ. ಗುಡಿ ಕಟ್ಟಿಸಿದ ಗೋಸಾಯಿ ದೇವರನ್ನು ಕರತರಲು ಹೋದನಂತೆ. ಅನಂತಶಯನ ಶರತ್ತಿನ ಮೇಲೆ ಬರಲು ಒಪ್ಪಿದ.. ಭಕ್ತ ಮುಂದೆ ಮುಂದೆ ಹೋಗಬೇಕು ದೇವರು ಅವನ ಹಿಂದೆ ಬರುವ. ಆದರೆ ತಿರುಗಿ ನೋಡಿದರೆ ಅಲ್ಲಿಯೆ ನಿಲ್ಲುವ. ಅದರಂತೆ ಅವರು ಹೊರಟರು. ಹೊರಟಾಗ ದೇವರ ಕಾಲು ಗೆಜ್ಜೆಯ ಸದ್ದು ಕೇಳುತಿತ್ತು. ಹಡಗಲಿನ ಹತ್ತಿರದ ಹೊಳಲಿನ ನದಿ ತಟದಲ್ಲಿ ಮರಳು ಇದ್ದುದರಿಂದ ಗೆಜ್ಜೆಯ ಸದ್ದು ಕೇಳಲಿಲ್ಲ. ಭಕ್ತ ಹಿಂದಿರುಗಿ ನೋಡಿದ. ದೇವರು ಅಲ್ಲಿಯೆ ನೆಲಸಿದ ಎಂಬ ಕಥೆ ಇದೆ. ಇಲ್ಲಿ ಗುಡಿ ಇದೆ. ವಿಗ್ರಹ ಇಲ್ಲ. ಹೊಳಲಿನಲ್ಲಿ ನದಿ ದಡದಲ್ಲಿ ಸುಂದರ ಅನಂತಶಯನನ ವಿಗ್ರಹ ಇದೆ. ಇತ್ತೀಚಿನ ವರೆಗೂ ಅದು ಬಯಲಿನಲ್ಲೆ ಇತ್ತು ಈಗ ಗುಡಿ ಕಟ್ಟಿಸಿರುವರು. ಇದೆರ ಸತ್ಯಾಸತ್ಯತೆ ನಂಬುಗೆಯ ಮಾತು.ಅನಂತ ಶಯನ ಗುಡಿ
ಆಮೇಲೆ ಒಂದುಮೈಲಿ ದೂರದಲ್ಲಿ ಹೊಸಪೇಟೆ. ಆದ್ದರಿಂದ ಅಲ್ಲಿ ಸದಾ ಜನ ಸಂಚಾರ ಇರುತಿತ್ತು. ಅದರಲ್ಲೂ ಕಬ್ಬಿನ ಸೀಜನ್ನಿನಲ್ಲಂತೂ ಕಬ್ಬಿನ ಬಂಡಿಗಳ ಓಡಾಟ ತೆರಪಿಲ್ಲದೆ ಇರುತಿತ್ತು. ನಮಗೆ ಆಗ ಹಿಗ್ಗೆ ಹಿಗ್ಗು. ಗಾಡಿ ಹೊಡೆಯುವವರ ಕಣ್ಣು ತಪ್ಪಿಸಿ ಚಲಿಸುವ ಬಂಡಿಯಿಂದ ಕಬ್ಬು ಕಿತ್ತು ಹಾದಿ ಉದ್ದಕ್ಕೂ ಕಬ್ಬುತಿನ್ನುತ್ತಾ ಹೋಗುತಿದ್ದರೆ ದಾರಿ ಸವೆದದ್ದು  ಗೊತ್ತಾಗುತ್ತಲೆ ಇರಲಿಲ್ಲ. ಅನೇಕ ಸಲ ಶಾಲೆಗೆ ಹೋದ ಮೇಲೆ ಕಬ್ಬು ತಿನ್ನುವಾಗಿನ ಬಿಳಿಯ ಸಿಬ್ಬು ಬಾಯಿಗೆ ಗಲ್ಲಕ್ಕೆ ಅಂಟಿರುವುದು ನೋಡಿ ಮೇಷ್ಟ್ರು ತೊಳೆದುಕೊಂಡು ಬರಲು ತರಗತಿಯಿಂದ ಹೊರ ಹಾಕುತಿದ್ದರು. ಅದರಿಂದ ನಮಗೆ ಏನೂ ಪರಿಣಾಮವಾಗುತ್ತಿಲಿಲ್ಲ. ಇನ್ನು ಮಳೆಗಾಲದಲ್ಲಂತೂ ಸಂಭ್ರಮವೋ ಸಂಭ್ರಮ. ನಮ್ಮ ಊರ ಕಡೆ ಅಗಸಿ ದಾಟಿದರೆ ರಸ್ತೆಯ ಪಕ್ಕದಲ್ಲೆ ಕೆಮ್ಮಣ್ಣು ಗುಂಡಿ. ಗಾಬರಿ ಬೀಳ ಬೇಡಿ. ಅದರ ಹೆಸರು ಮಾತ್ರ. ಅದು ನಿಜವಾಗಲೂ ಕೆಮ್ಮಣ್ಣು ಕುಣಿ. ಅದೇನೂ ಗಿರಿಧಾಮವಾದ ಕೆಮ್ಮಣ್ಣು ಗುಂಡಿಯಂತಿಲ್ಲ. ಅಲ್ಲಿನ ಭೂಮಿ ಕೆಂಗಲು ಬಣ್ಣದ್ದು. ಅಲ್ಲಿನ ಮಣ್ಣನ್ನು ಸುಣ್ಣ ಬಳಿದ ಮೇಲೆ ಕೆಂಪು ಕಾರಣಿ ಮಾಡಲು ಬಳಸುತ್ತಿದ್ದರು. ಅಲ್ಲಿ ಬಂದು ಬಂಡಿಗಟ್ಟಲೆ ಮಣ್ಣನ್ನು ತೋಡಿಕೊಂಡು ಹೋಗುವರು. ಹಾಗಾಗಿ ಅಲ್ಲಿ ಮಳೆ ಬಂದಾಗ ಕೆಂಪನೆಯ ನೀರು ಇರುವುದು. ಅದರಲ್ಲಿ ಕಪ್ಪೆಗಳದೆ ಸಾಮ್ರಾಜ್ಯ. ಅದರ ಮುಂದೆ ನಿಂತು ಕೆಲಹೊತ್ತು ಕಪ್ಪೆಗಳಿಗೆ ಕಲ್ಲು ಹೊಡೆಯುವುದು ಮಳೆಗಾಲದಲ್ಲಿ ನಮ್ಮ ನಿತ್ಯ ದ ಆಟ. ನಮ್ಮ ಗುರಿ ಸರಿ ಇರುತ್ತಿಲಿಲ್ಲವೋ, ಇಲ್ಲವೆ ಕಪ್ಪೆಗಳೆ ಬಲು ಚುರುಕಾಗಿದ್ದವೂ ತಿಳಿಯದು ನಾವು ಹೊಡೆದ ಕಲ್ಲು ಕಪ್ಪೆಗಳಿಗೆ ತಗುಲುತ್ತಿದ್ದು ವಿರಳ. ನಾವು ಎಸೆದ ಕಲ್ಲಗಳು ಬೀಳುವುದರಲ್ಲೆ ಅವು ಟಣಕ್ಕನೆ ಜಿಗಿಯುತಿದ್ದವು ನಮ್ಮ ಕಲ್ಲು ಪುಳಕ್ಕನೆ ನೀರಿನಲ್ಲಿ ಬೀಳುತಿತ್ತು. ಅದೆ ನಮಗೆ ಸಂತೋಷ ಕೊಡುತಿತ್ತು. ಇನ್ನು ಮುಂದೆ ಹೋದರೆ ಹಿಪ್ಪೆ ಹಳ್ಳ. ಜೋರಾಗಿ ಮಳೆಬಂದರೆ ಅಲ್ಲಿನ ಪಣುವಿನ ಕೆಳಗೆ ನೀರು ಹರಿವ ರಭಸ, ಅದು ತುಸು ಎತ್ತರದಲ್ಲದ್ದುದರಿಂದ ನೀರು ಕೆಳಕ್ಕೆ ಬೀಳುವ ಜೋರು ಎಷ್ಟು ನೋಡಿದರೂ ಸಾಲದು. ಅದೆ ನಮಗೆ ಜೋಗದ ಜಲಪಾತ ನೋಡಿದಾಗಿನ ಖುಷಿ ಕೊಡುತಿತ್ತು. ಅಲ್ಲಿಂದ ಒಂದು ಊರು ದಾಟಿದರೆ ಟುಬಾಕಿ ಪಣುವು. ಅಲ್ಲಿನ ಹಳ್ಳವು  ನಗರದ ಮಧ್ಯದಲ್ಲಿ ಹರಿಯುವ ಬಸವನ ಕಾಲುವೆಯಲ್ಲಿ ಹೆಚ್ಚಾದ ನೀರನ್ನು ಹೊರ ತರುತಿತ್ತು. ಆ ನೀರು ಎಷ್ಟು ಹರಡಿದೆ ಎಂದು ಅಂದಾಜು ಮಾಡುವುದೆ ನಮ್ಮ ಕೆಲಸ. ಅದರ ಪಕ್ಕದಲ್ಲೆ ಇದ್ದ ಸುಣ್ಣದ ಭಟ್ಟಿಗಳು ಬೇಸಿಗೆಯಲ್ಲಿ ಸದಾ ಬಿಳಿ ಹೊಗೆ ಉಗುಳುತ್ತಾ ಘಾಟು ವಾಸನೆ ಹೊರಹಾಕುತ್ತಾ ಇರುವವು. ಮಳೆಗಾಲದಲ್ಲಿ ಮಾತ್ರ ತೆಪ್ಪಗೆ ಇರುತಿದ್ದವು. ಅಲ್ಲಿಗೆ ಬಂದರೆ ಪಟ್ಟಣ ಸೇರಿದಂತೆ. ಅಲ್ಲಿಂದ ತುಸು ಮುಂದೆ ಬಂದರೆ ಜಕಾತಿ ಕಟ್ಟೆ. ಅಲ್ಲಿ ಬಂಡಿಗೆ ಎರಡಾಣೆ ಜಕಾತಿ. ಸುಗ್ಗಿಯಲ್ಲಿ ಕಬ್ಬಿನ ಬಂಡಿಗಳ ಭರಾಟೆಯಾದರೆ  ಹಂಪೆಯ ಜಾತ್ರೆಯ ಸಮಯದಲ್ಲಿ ಜನರಬಂಡಿಗಳು. ತಿಂಗಳುಗಟ್ಟಲೆ ಗಿಜಿಗುಡುತ್ತಿದ್ದವು. ಸೈಕಲ್ಲಿಗೆ ಒಂದಾಣೆ ನಿತ್ಯ ಹೋಗುವವರು ತಂಗಳ ಲೆಕ್ಕದಲ್ಲಿ ಕೊಟ್ಟು ಅವರು ಕೊಡುತಿದ್ದ ಕಭ್ಭಿಣದ ಬಿಲ್ಲೆಯನ್ನಯ ಸೈಕಲ್ಲಿನ ಮುಂಭಾಗಕ್ಕೆ ನಟ್ಟಿನ ಮೂಲಕ ಕಾಣುವಂತೆ ಕಟ್ಟಲಾಗುತಿತ್ತು. ಸರಿ ಸುಮಾರು ನೂರಾರು ಬಂಡಿಗಳು ದಿನಾ ಜಾತ್ರೆಗೆ ಬರುತಿದ್ದವು. ನಮ್ಮ ಜಿಲ್ಲೆಯ ಎಲ್ಲ ಹಳ್ಳಿಗಳಿಂದಲೂ ಬರುವವರು ಹಂಪೆಗೆ ಹೋಗಲು ಇದ್ದುದು ಅದೊಂದೆ ದಾರಿ ಎಲ್ಲರೂ ಜಕಾತಿ ಕಟ್ಟಲೇಬೇಕು.ಆಗ ಎಲ್ಲಿ ನೋಡಿದರೂ ಜನವೋ ಜನ.
ಕಡೆ ಅಗಸಿಮಳೆಗಾಲ ಮೊದಲಾದ ಎರಡು ಮೂರುತಿಂಗಳು ಶಾಲೆಗೆ ಹೋಗಲು ನಮಗೆ ಎಲ್ಲಿಲ್ಲದ ಹುರುಪು. ಅದಕ್ಕೆ ಕಾರಣ ಹಾದಿಯುದ್ದಕ್ಕೂ ಇದ್ದ ಹುಣಿಸೆ ಮರಗಳು, ಅವು ಮಿಡಿ ಬಿಡುವುದು ಶುರವಾಗುತಿದ್ದಂತೆ ನಮ್ಮ ದಾಳಿ ಮೊದಲಾಗುತಿತ್ತು. ನಮ್ಮಲ್ಲಿ ಚುರುಕಾಗಿದ್ದ ಅಂಜನಿಗೆ ಆಗ ಬಹು ಮನ್ನಣೆ. ಅವನು ಸರಸರನೆ ಮರ ಏರಿ ನಿಮಿಷಾರ್ಧದಲ್ಲಿ ರೆಂಬೆ ಅಳ್ಳಾಡಿಸುತಿದ್ದ .  ಎಳೆ ಹುಣಿಸೆ ಕಾಯಿ ಉದರಿದವನ್ನು ಆಯುವ ಕೆಲಸ ನಮ್ಮದು. ನಾವು ಎಲ್ಲರೂ ಸೇರಿ ಹಾದಿಯುದ್ದಕ್ಕೂ ಒಗರಾದ ಅವನ್ನು ನಾವು ತಂದಿದ ಉಪ್ಪಿನ ಸಮೇತ ತಿನ್ನುತ್ತಾ ನಡೆಯುತಿದ್ದೆವು, ಆಗ ಇದ್ದ ಹುಣಿಸ ಮರ ಒಂದಲ್ಲ ಎರಡಲ್ಲ. ಹಾದಿಯುದ್ದಕ್ಕೂ ಇದ್ದವು ಆದರೆ ಕಾಯ ಬಲಿತ ಮೇಲೆ ನಮ್ಮ ಅಟ ನಡೆಯುತ್ತ ಇರಲಿಲ್ಲ. ಕಾಯಲು ಜನರು ಇರುತಿದ್ದರು. ನಮ್ಮ ಮುಂದಿನ ಆಕರ್ಷಣೆ ಎಂದರೆ ಬಾರಿ ಮರಗಳು. ಅಲ್ಲಿ ಒಂದೆ ತೊಂದರೆ. ಹತ್ತುವ ಹಾಗಿಲ್ಲ. ಬಾರಿಮುಳ್ಳು ಕಚಕ್ಕನೆ ಚುಚ್ಚುತಿತ್ತು. ಏನಿದ್ದರೂ ಕಲ್ಲು ಬೀಸಿ ಹಣ್ಣು ಕಾಯಿ ಉದರಿಸಬೇಕು. ಹತ್ತು ಕಲ್ಲು ಹೊಡೆದರೆ ಒಂದು ಬೀಳುವುದ ಕಷ್ಟ. ಆದರೆ ನಾವು ಛಲ ಬಿಡದೆ  ರಾಜಾ ವಿಕ್ರಮನಂತೆ ಪ್ರಯತ್ನಿಸುತಿದ್ದೆವು ಇಲ್ಲಿ ಮಾತ್ರ ಸಾಮೂಹಿಕವಾಗಿ ಕೆಲಸ ಮಾಡುತಿದ್ದೆವು ಒಬ್ಬರು ಕಲ್ಲು ಆರಿಸಿ ಕೊಡಬೇಕು. ಇದ್ದವರಲ್ಲೆ ಗುರಿವಾನ ಎನಿಸಿದವರು ಕಲ್ಲು ಬೀರ ಬೇಕು. ಇನ್ನುಉಳಿದ ಒಬ್ಬಿಬ್ಬರು ಹಣ್ಣು ಕಾಯಿ ಆರಿಸಬೇಕು. ಅವು ಬೇಲಿಯೊಳಗೋ, ಪೊದೆಯ  ಮಧ್ಯವೋ ಬಿದ್ದರೂ ಬಿಡದೆ ಹೋಗಿ ತರವೆವು. ನಂತರ ಎಲ್ಲರೂ ಹಂಚಿಕೊಂಡು ಜೇಬಿನಲ್ಲಿ ತುಂಬಿಕೊಂಡು ಹಾದಿ ಸವೆಸುತಿದ್ದವು ಅವನ್ನು ತಿನ್ನುವುದೂ ಒಂದುಕಲೆ. ಬಾಯಲ್ಲಿ ಹಾಕಿತಿಂದ ಮೇಲೆ ಬೀಜವನ್ನು ಗುರಿಇಟ್ಟು ಉಗಳ ಬೇಕು. ಅದರಲ್ಲೂ ಚಳ್ಳೆ ಹಣ್ಣ ತಿನ್ನುವಾಗಲಂತೂ ಮಜವೇ ಮಜ. ಅದು ಲೋಳೆ ಲೋಳೆ. ಒಂದು ರೀತಿಯಲ್ಲಿ ಸಿಂಬಳದಂತೆ ಅಂಟುವುದು. ಹಣ್ಣು ತಿಂದು  ಬೀಜವನ್ನು ಅವನ ಬೆನ್ನಿಗೆ ಇವನು, ಇವನ ಬೆನ್ನಿಗೆ ಅವನು  ಅಂಟುವಂತೆ ಉಗಳಿದರೆ ಗೊತ್ತೆ ಆಗುತ್ತಿರಲಿಲ್ಲ. ಹಾದಿಯ ಹೊಲದಲ್ಲಿ ಒಂದೋ ಎರಡೋ ಮಾವಿನ ಮರಗಳೂ ಇದ್ದವು ಆದರೆ ಅವು ನಮಗೆ ನರಿಯ ಪಾಲಿನ ಹುಳಿದ್ರಾಕ್ಷಿ. ಹತ್ತುವ ಮಾತು ದೂರ. ಅವು ಅಷ್ಟು ದಪ್ಪ ಮತ್ತು ಎತ್ತರ. ಮೇಲಾಗಿ ಅವನ್ನು ಹೊಲದ ಒಢೆಯರು ಅಜ್ಜು ಗಾವಲು ಕಾಯುತಿದ್ದರು. ಅಕಸ್ಮಾತ್ ನಾವು ಮಾವಿ ಕಾಯಿ ಕದಿಯಲು ಪ್ರಯತ್ನಿಸಿದರೆ ಬೆನ್ನಮೇಲೆ ಬಾಸುಂಡೆ ಬರುವಂತೆ ಬಾರಿಸುತಿದ್ದರು. ಅದಕ್ಕೆ ನಾವು ಆ ಸಾಹಸಕ್ಕೆ ಕೈ ಹಾಕುತ್ತಿರಲಿಲ್ಲ.
ಸೂಳಿಭಾವಿ
ಶಾಲೆಗೆ ಹೋಗುವಾಗಿನ ಖುಷಿ ಬರುವಾಗ ಇರುತ್ತಿರಲಿಲ್ಲ.. ಕಾರಣ ಕತ್ತಲಾಗುವ ಮೊದಲೆ ಮನೆ ಸೇರ ಬೇಕಿತ್ತು. ಹಳ್ಳಿಯ ಹುಡುಗರಾದ್ದರಿಂದ ನಮಗೆ ಕತ್ತಲೆ ಎಂದರೆ ಭಯವೇನೂ ಇರಲಿಲ್ಲ. ಆದರೆ ನಮ್ಮ ಭೀತಿಗೆ ಕಾರಣವೇ ಬೇರೆ. ನಾವು ಹೋಗುವ ಹಾದಿಯಲ್ಲಿನ ಎರಡು ಊರಗಳ ಸುಡುಗಾಡುಗಳು ರಸ್ತೆಯ ಪಕ್ಕದಲ್ಲೆ ಇದ್ದವು. ಹಗಲೆನೋ ಪರವಾಯಿಲ್ಲ. ಹೆಣ ಹೂಳುವ ಪ್ರಕ್ರಿಯೆಯನ್ನು ಹೆದರಿಕೆ ಇಲ್ಲದೆ ನೋಡುತಿದ್ದೆವು ನೂರಾರು ಜನರಿರುವರಲ್ಲ. ನಮಗೆ ಆಗ ಏನು  ಅನಿಸುತ್ತಿರಲಿಲ್ಲ. ಅದರೆ ಸಂಜೆ ಊರಿಗೆ ವಾಪಸ್ಸು ಬರುವಾಗ ಕತ್ತಲಾಗಿದ್ದರಂತೂ ಆ ಕಡೆ ನೋಡುವುದಕ್ಕೂ ಭಯ. ಹೋಗುವಾಗ ನಾಲಕ್ಕು ಐದು ಜನರಿರುತ್ತಲಿದ್ದೆವು. ಅವರಲ್ಲಿ ಒಬ್ಬಿಬರು ಬೇರೆ ಶಾಲೆಯವರು. ಎಲ್ಲರೂ ಬೇರೆ ಬೇರೆ ತರಗತಿ. ಆದ್ದರಿಂದ ಬರುವಾಗ ಒಟ್ಟಿಗೆ ಬರಲು ಆಗುತ್ತಿರಲಿಲ್ಲ. ಕಾಯುವುದು ಕಷ್ಟ ಎನಿಸುತಿತ್ತು. ಹಾಗಾಗಿ ಮನೆ ಬರುವಾಗ ಜತೆಯವರು ಸಿಗುವುದು ವಿರಳ. ಆದರೂ ಕೈನಲ್ಲಿ ಜೀವ ಹಿಡಿದುಕೊಂಡ ಬರುತಿದ್ದೆವು. ಆ ಜಾಗ ಹತ್ತಿರ ಬಂದಾಗ ಜೀವ ಪುಕು ಪುಕು. ಯಾರಾದರು ಬರುವರೆನೋ ಎಂಬ ಆಶೆ. ಯಾರೆ ಬಂದರೂ ಅವರ ಜತೆಯಲ್ಲಿ ಹೆಜ್ಜೆ ಹಾಕಿ ಆ ಜಾಗ ದಾಟುವ ತವಕ. ಯಾರೂ ಜತೆಯಲ್ಲಿಲ್ಲದಿದ್ದರೆ ಎದೆ ಢವ ಢವ ಹೊಡೆಯವ ಶಬ್ದ ಕಿವಿಗೆ ಕೇಳವಷ್ಟು ಗಟ್ಟಿಯಾಗಿರುತಿತ್ತು. ಸ್ಮಶಾನವು ಇನ್ನೂ ತುಸು ದೂರದಲ್ಲಿ ಇರುವಾಗಲೆ ಆ ಕಡೆ ತಪ್ಪಿಯೂ ನೋಡಬಾರದೆಂದು. ಅದರ ವಿರದ್ಧ ದಿಕ್ಕಿಗೆ ಮುಖ ತಿರುಗಿಸಿ ಜೋರಾಗಿ ಕಾಲು ಹಾಕುತಿದ್ದೆವು. ಅದು ದಾಟಿ ಬಹುದೂರ ಬಂದ ಮೇಲೆ ಉಸಿರಾಟ ಸಾಮಾನ್ಯವಾಗುತಿತ್ತು. ಈ ಅನುಭವ ಸುಮಾರು ಎರಡು ವರ್ಷದವರೆಗ ಹೋಗುವಾಗ ಅಲ್ಲಿ ನಡೆವ ಅಂತಿಮ ಕ್ರಿಯೆ ಕಣ್ಣಿಗೆ ಬಿದ್ದಾಗಲೆಲ್ಲ ಆಗುತಿತ್ತು. ಆದರೆ ನಮ್ಮ ಜತೆ ದುರುಗಪ್ಪ ಶಾಲೆಗೆ ಬರತೊಡಗಿದಾಗ ಆ ಭಯ ನಿವಾರಣೆಯಾಯಿತು. ಅವನದು ಗಟ್ಟಿ ಎದೆ ಗುಂಡಿಗೆ. ನಾವು ಶಾಲೆಗೆ ಹೋಗುವಾಗ ದಫನ ಕಾರ್ಯ ನೋಡಿದ್ದರೆ ಬರುವಾಗ ತಪ್ಪದೆ ನಮ್ಮ ಜತೆ ಬರುತಿದ್ದ. ಹಾಗೆ ಬಂದವನು ಹೆಣವನ್ನು ಸಮಾಧಿ ಮಾಡಿದ ಜಾಗಕ್ಕೆ ಹೋಗಿ ಅಲ್ಲಿರುವ ಪುಡಿಗಾಸು, ತೆಂಗಿನ ಹೋಳು ನಿಂಬೆ ಹಣ್ಣು ತರುತ್ತಿದ. ನಮ್ಮ ಎದುರಲ್ಲೆ ಆ ಕಾಯಿ ಹೋಳನ್ನು ತುಂಡು ಮಾಡಿ ನಗುತ್ತಾ ತಿನ್ನುತಿದ್ದ. ನಮಗೆ ಮೊದಲಲ್ಲಿ ಬಹಳ ಹೆದರಿಕೆ. ಮಾರನೆ ದಿನ ಅವನ ಮುಖ ಕಾಣುವ ತನಕ ರಾತ್ರಿ ಅವನಿಗೆ ಏನಾಗಿದೆಯೋ ಎಂಬ ಗಾಬರಿ. ಆದರೆ ಅವನು ಬೆಳಗ್ಗೆ ಹೆಗಲಿಗೆ ಚೀಲ ಹಾಕಿಕೊಂಡ ನಗುನಗುತ್ತಾ ಬಂದಾಗ ಎದೆ ಹಗುರವಾಗುವುದು. ಈ ರೀತಿ ಅವನು ಒಂದೆರಡು ಸಲ ಮಾಡಿದ ಮೇಲೆ ನಮಗೂ ಧೈರ್ಯ ಬಂದಿತು. ಆದರೂ ನಾವು ಅವನ ಜತೆ ಕೊಬ್ಬರಿ ಹಂಚಿಕೊಳ್ಳಲು ಮುಂದಾಗಲಿಲ್ಲ. ಆಗಿನಿಂದ ನಾವೂ ಅವನ ಜತೆಯಲ್ಲಿ ಸಮಾಧಿಮಾಡಿದ ಜಾಗಕ್ಕೆ ಹೋಗಿ ಬರುವ ಎದೆಗಾರಿಕೆ ತೋರಿದೆವು. ಸಾವು, ಹೆಣ, ಸುಡುಗಾಡು ಮತ್ತು ಕತ್ತಲ ಭಯವನ್ನು ಅವನು ನಮ್ಮ ಮನದಿಂದ ಬೇರು ಸಹಿತ ಕಿತ್ತುಹಾಕಿದ.


No comments:

Post a Comment