Monday, August 20, 2012

ಕೇಳಿದ್ದು ಗಾಳಿಗೆ ನೋಡಿದ್ದು ಮನಸಿಗೆ


ನಾ
ವು ಬಾಯಿ ಹೊಲಿದುಕೊಂಡು ಕೂಡುತಿದ್ದ ತರಗತಿ ಎಂದರೆ ಇಂಗ್ಲಿಷ್‌ ಅವಧಿ. ಆಗ ಗೊಣಗಿದರೂ ಈಗಲೂ ನೆನಸುವ ಶಿಕ್ಷಕರೆಂದರೆ ಶಾಬಾದಿಮಠ ಎಂಬ ಹೆಸರಿನ ಗುರುಗಳು. ಅವರು ಹೊಸದಾಗಿ ಇಂಗ್ಲಿಷ್‌ ಮಾಷ್ಟರ್‌ ಆಗಿ ಬಂದರು. ಅವರದು ಧಾರವಾಡ ಅಂತ ಕಾಣುತ್ತದೆ. ಬಹಳ ಟಿಪ್‌ ಟಾಪ್‌ ಉಡುಪು. ಯಾವಾಗಲೂ ಬಿಳಿಯ ಪೂರ್ತಿ ತೋಳಿನ ಅಂಗಿ, ಬಿಳಿಯ ಪ್ಯಾಂಟು, ಸದಾ ಇನ್‌ಸರ್ಟ್ ಮಾಡಿರುವರು. ಗರಿಗರಿ ಇಸ್ತ್ರಿಯ ಉಡುಪು. ಜತೆಗೆ ಕೆಂಪು ಕೊರಳಪಟ್ಟಿ ಅದಕ್ಕೊಂದು ಸುಂದರ ಪಿನ್‌. ಕಾಲಲ್ಲಿ ಮಿರಿ ಮಿರಿ ಮಿಂಚು ಕರಿ ಷೂಗಳು. ಎದುರಿಗೆ ನಿಂತವರ ಮುಖ ಅದರಲ್ಲಿ ಕಾಣಬಹುದಿತ್ತು. ಅವರಿಗೆ ಹಿರಿಯ ಹುಡುಗರು ಟಿನೋಪಾಲ್‌ ಎಂದು ಅಡ್ಡ ಹೆಸರು ಇಟ್ಟಿದ್ದರು. ಬಿಳಿ ಬಟ್ಟೆಗಳನ್ನು ಒಗೆದ ಮೇಲೆ ಅವುಗಳಿಗೆ ಥಳ ಥಳ ಹೊಳೆಯುವ ಬಿಳಿಬಣ್ಣ ತರಲು ಟಿನೋಪಾಲ್ ಬಳಸುತಿದ್ದರು. ಅದಕ್ಕೆ ಅವರಿಗೆ ಆ ಹೆಸರು.
ನಮ್ಮ ಸಮಸ್ಯೆ ಎಂದರೆ ಅವರು ತರಗತಿಯಲ್ಲಿ ಕನ್ನಡ ಮಾತನಾಡುತ್ತಲೆ ಇರಲಿಲ್ಲ. ಆಗ ತಾನೆ ಇಂಗ್ಲೆಂಡಿನಿಂದ ಇಳಿದು ಬಂದವರಂತೆ ಸದಾ ಇಂಗ್ಲಿಷ್‌ನಲ್ಲೆ ಅವರ ಮಾತು ಕತೆ. ಈವರೆಗೆ ಎಲ್ಲರೂ ಇಂಗ್ಲಿಷ್ ಪಾಠ ಓದಿದ ಮೇಲೆ ಅದರ ಸಾರವನ್ನು ಕನ್ನಡದಲ್ಲೆ ಹೇಳುತಿದ್ದರು. ಕಥೆ ಗೊತ್ತಾಯಿತು ಎಂದರೆ ಪಾಠ ತಿಳಿದಂತೆ ಎಂದು ನಮ್ಮೆಲ್ಲರ ಭಾವನೆ. ಅದನ್ನು ಇವರು ಬುಡಮೇಲು ಮಾಡಿದರು. ಅವರು ಇಂಗ್ಲಿಷ್‌ಗೆ ಇಂಗ್ಲಿಷ್‌ನಲ್ಲೆ ಅರ್ಥ ಹೇಳುತ್ತಿದ್ದರು.
Have you understood? ಎಂಬ ಅವರ ಪ್ರಶ್ನೆಗೆ ನಾವು ತಲೆ ಅಲ್ಲಾಡಿಸಿದಾಗ ಮತ್ತೆ ಮತ್ತೆ ಇಂಗ್ಲಿಷ್‌ನಲ್ಲೆ ಹೇಳುತ್ತಿದ್ದರೆ ವಿನಃ ಕನ್ನಡದ ಅರ್ಥ ಹೇಳುತ್ತಿರಲಿಲ್ಲ. ಅವರು ಯಾವ ಭಾಷೆಯಲ್ಲಾದರೂ ಮಾತನಾಡಿಕೊಳ್ಳಲಿ ನಾವು ತಿಳಿದಷ್ಟು ಅರ್ಥ ಮಾಡಿಕೊಂಡರಾಯಿತು ಎಂದು ಸುಮ್ಮನಿರಲೂ ಬಿಡುತ್ತಿರಲಿಲ್ಲ. ನಾವೂ ಇಂಗ್ಲಿಷ್‌ನಲ್ಲೆ ಮಾತನಾಡಬೇಕೆಂದು ಕಡ್ಡಾಯ ಮಾಡಿದ್ದರು. ಏನನ್ನಾದರೂ ಕೇಳಲು ನಮಗೆ ಸ್ವಾತಂತ್ರ್ಯವಿತ್ತು. ಅವರು ಹೊಡೆಯುವುದು ಬಡಿಯುವುದ ಕಡಿಮೆ. ಅವರು ಬೈದರೂ ನಮಗೆ ಮೋಜು. ಕಾರಣ ಯಾವಾಗಲಾದರೂ ಗದರಿದರೆ ಇಂಗ್ಲಿಷ್‌ನಲ್ಲೆ ಇರುವುದರಿಂದ ಅದು ನಮಗೆ ತಿಳಿಯುತ್ತಲೆ ಇರಲಿಲ್ಲ. ಅವರ ಇಂಗ್ಲಿಷ್‌ ತರಗತಿಯಲ್ಲಿ ಕನ್ನಡದಲ್ಲಿ ಮಾತನಾಡುವ ಹಾಗಿಲ್ಲ. ಹಾಗೇನಾದರೂ ಯಾರಾದರೂ ಕನ್ನಡದಲ್ಲಿ ಮಾತನಾಡಿದರೆ ಅರ್ಧ ಆಣೆ ದಂಡ ತೆರಬೇಕು. ಇಲ್ಲವೆ ಅವರ ತರಗತಿಯಲ್ಲಿ ಕೂಡುವ ಹಾಗಿಲ್ಲ. ಅನಿವಾರ್ಯವಾಗಿ ನಾವು ಹರಕು ಮುರುಕ ಇಂಗ್ಲಿಷ್‌ನಲ್ಲಿ ಮಾತನಾಡಲು ಮೊದಲು ಮಾಡಿದೆವು. ಇನ್ನು ಬೇರೆ ಮಾಷ್ಟ್ರ ತರಗತಿಯಂತೆ ಅವರ ತರಗತಿಯಲ್ಲಿ ಗಲಾಟೆ ಸದ್ದು ಗದ್ದಲ ಇರತ್ತಿಲಿಲ್ಲ. ಅವರ ಭಾಷೆಯಲ್ಲಿಯೇ ಹೇಳ ಬೇಕೆಂದರೆ pin drop silence. ಅದರ ಅರ್ಥ ಹುಡುಗರೆಲ್ಲ ರಾತ್ರೋ ರಾತ್ರಿ ಸಭ್ಯರಾದರು ಎಂದಲ್ಲ. ಏನೆ ಮಾತನಾಡಿದರೂ ಇಂಗ್ಲಿಷ್‌ ನಲ್ಲಿ ಮಾತನಾಡಬೇಕಲ್ಲ. ಅಪ್ಪಿತಪ್ಪಿ ಕನ್ನಡ ಬಳಸಿದರೆ ನಕ್ಷತ್ರಿಕನಂತೆ ಕಾಡುತಿದ್ದ ಕ್ಲಾಸ್‌ ಲೀಡರ್‌ ಅವನು ಹೇಳಿದರೆ ದಂಡ ನೀಡಬೇಕು. ಇಲ್ಲವೆ ಹೊರಗೆ ಹೋಗಬೇಕು. ಆಗಿನ್ನೂ ತರಗತಿಯಿಂದ ಹೊರಗೆ ಹಾಕಿದರೆ ದೊಡ್ಡ ಅವಮಾನ ಎಂಬ ಭಾವನೆ ಇತ್ತು ಈಗಿನಂತೆ ನಗು ನಗುತ್ತಾ ಹೊರ ನಡೆಯುವ ಗೈರತ್ತು ನಮಗಿರಲಿಲ್ಲ. ಅದಕ್ಕೆ ಯಾಕಪ್ಪ ಇಲ್ಲದ ಉಸಾಬರಿ ಎಂದು ಮೂಕರಂತೆ ಕುಳಿತು ಕೊಳ್ಳುತಿದ್ದೆವು. ಅಬ್ಬಬ್ಬಾ ಎಂದರೆ ನಮ್ಮಮಾತು ಎಸ್‌ ಸರ್‌, ನೋ ಸರ್‌ ಅಷ್ಟರಲ್ಲೆ ಮುಕ್ತಾಯವಾಗುತಿತ್ತು.
ಅವರ ಇನ್ನೊಂದು ಸೂಚನೆ ನಮಗೆ ಮಾತ್ರವಲ್ಲ ಮನೆಯವರಿಗೂ ತುಸು ಬಿಸಿ ಮುಟ್ಟಿಸಿತು. ಅವರು ವ್ಯಾಕರಣ ಬೋಧನೆಗೆ ಬಹಳ ಪ್ರಾಧಾನ್ಯ ಕೊಡುತ್ತಿದ್ದರು. ವಾರದಲ್ಲಿ ಒಂದು ಅವಧಿ ಅದಕ್ಕೆ ಮೀಸಲು. ಅದಕ್ಕಾಗಿ ಪ್ರತಿಯೊಬ್ಬರೂ ರೆನ್‌ & ಮಾಟಿರ್ನ್‌ರ ಗ್ರಾಮರ್‌ ಪುಸ್ತಕ ಖರೀದಿಸಬೇಕೆಂದು ಒತ್ತಾಯ ಮಾಡಿದರು. ಪಠ್ಯ ಪುಸ್ತಕವನ್ನು ಕೊಳ್ಳುವುದೆ ನಮಗೆ ಏಳು ಹನ್ನೊಂದು. ಬಹುತೇಕ ಸೆಕೆಂಡ್‌ ಹ್ಯಾಂಡ್‌ ಪುಸ್ತಕಗಳನ್ನೆ ಬಳಸುತ್ತಿದ್ದೆವು. ಆಗ ಈಗಿನಂತೆ ಪದೇ ಪದೇ ಪಠ್ಯಕ್ರಮ ಬದಲಾಗುತ್ತಿರಲಿಲ್ಲ. ಮುರುನಾಲಕ್ಕು ಮಂದಿ ಅಣ್ಣತಮ್ಮಂದಿರು ಇದ್ದ ಮನೆಯಲ್ಲಿ ತಮ್ಮದೆ ಪುಸ್ತಕ ಬಳಸುತ್ತಿದ್ದ ಹಿರಿಮೆ ಕೆಲವರ ಕುಟುಂಬಕ್ಕೆ ಇತ್ತು. ಅಣ್ಣ ಕೊಂಡಿದ್ದ ಪುಸ್ತಕವನ್ನೆ ಅವನಿಗಿಂತ ಒಂದೋ ಎರಡೋ ವರ್ಷ ಚಿಕ್ಕವನಾದ ತಮ್ಮ ಮತ್ತೆ ಬಳಸುತಿದ್ದ. ಇಲ್ಲದಿದ್ದರೆ ಪಾಸಾದ ಕೂಡಲೆ ಹಿಂದಿನ ವರ್ಷದ ಪುಸ್ತಕಗಳನ್ನು ಅರ್ಧ ಬೆಲೆಗೆ ಕೊಂಡು ಓದುವವರು ಬಹಳ. ಹೀಗಿರುವಾಗ ಹತ್ತು ರೂಪಾಯಿ ಬೆಲೆಯ ಗ್ರಾಮರ್‌ ಪುಸ್ತಕ ಕೊಡಿಸಲು ತಂದೆ ತಾಯಿಯರು ಸುಲಭವಾಗಿ ಒಪ್ಪುತ್ತಿರಲಿಲ್ಲ. ಆದರೆ ವಾರಕ್ಕೆ ಒಂದು ದಿನದ ಆ ಅವಧಿಯಲ್ಲಿ ತರಗತಿಗೆ ಹೋಗುವಂತಿರಲಿಲ್ಲ. ಕೊನೆಗೆ ಹೇಗೋ ತಿಪ್ಪಲು ಬಿದ್ದು ಕೊಡಿಸುತ್ತಿದ್ದರು. ಅವರು ತರಗತಿಯಲ್ಲಿ ಮಾಡಿದ ವ್ಯಾಕರಣದ ಅಂಶಗಳಿಗೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳನ್ನು ಮನೆಯಲ್ಲಿ ಮಾಡಿ ತರುವುದನ್ನು ಕಡ್ಡಾಯ ಮಾಡಿದ್ದರು. ತರಗತಿಯಲ್ಲಿ ಗ್ರಾಮರ್‌ ಪುಸ್ತಕ ಹಿಡಿದು ಪ್ರಶ್ನೆ ಓದಿ ಅಲ್ಲಿಯೇ ಉತ್ತರ ಹೇಳಬೇಕಿತ್ತು. ಒಂದು ಕ್ರಿಯಾ ಪದವನ್ನು 72 ರೀತಿಯಲ್ಲಿ (3 persons, 2 numbers, 12 tenses, 2 voices) ಬಳಸಿ ಹೇಳಬೇಕಿತ್ತು ಆಗ ಅದು ನಮಗೆ ತೊಂದರೆ ಎನಿಸಿದರೂ ಮುಂದೆ ಕಾಲೇಜಿಗೆ ಬಂದಾಗ ಅವರ ದೂರ ದೃಷ್ಟಿಗೆ ನಮನ ಸಲ್ಲಿಸಿದೆ.
ಮೊದಲಿನಂತೆ ಈಗ ವ್ಯಾಕರಣಕ್ಕೆ ಪ್ರತ್ಯೇಕ ಅವಧಿ ಇಲ್ಲ. ಅದು ಪಾಠದ ಒಂದು ಭಾಗವಾಗಿರಬೇಕು. Incidental ಆಗಿರಬೇಕು ಎಂಬುದ ಶಿಕ್ಷಣ ತಜ್ಞರ ಆಶಯ. ಆದರೆ ಅದರ ಫಲವಾಗಿ ಇಂಗ್ಲಿಷ್ ವ್ಯಾಕರಣ accidental ಆಗಿದೆ ಎಂಬುದು ವಾಸ್ತವ. ಉದ್ದೇಶ ಒಳ್ಳೆಯದೆ. ಆದರೆ ಆಚರಣೆಗೆ ತರುವಾಗ ಆಗುವ ಅನಾಹುತಗಳಿಂದಾಗಿ ಕನ್ನಡ ಮಾಧ್ಯಮ ಶಾಲೆಗಳ ಇಂಗ್ಲಿಷ್ ಕಲಿಕೆಯ ಮಟ್ಟ ಪಾತಾಳ ಮುಟ್ಟಿರುವುದೂ ಒಂದು ವಿಪರ್ಯಾಸವಾಗಿದೆ. ಶಿಸ್ತಿನ ಸಿಪಾಯಿಯ ಬಾಯಲ್ಲಿ ತರಗತಿಯಲ್ಲಿ ಇಂಗ್ಲಿಷ್‌ ಪದ ಬಿಟ್ಟು ಬೇರೆ ಭಾಷೆ ಬಳಸುವಂತೆ ಮಾಡಿದ ಕೀರ್ತಿ ನಮ್ಮ ಸಹಪಾಠಿ ಇಮಾಮ್‌ ಸಾಬನಿಗೆ ಸಲ್ಲಬೇಕು. ಅವರು agreement of verb ಪಾಠ ಮಾಡಿದ್ದರು. ಇಮಾಮ್ ಎಷ್ಟೆ ಹೇಳಿಕೊಟ್ಟರೂ ಅವನು I go, you go, He go ಎನ್ನುತಿದ್ದ. ಅವರು ಪದೇ ಪದೇ He goes, she goes, it goes, Imam goes ಎಂದು ಹೇಳಿದರೂ ಅವನ ತಲೆಗೆ ಹೋಗಲೆ ಇಲ್ಲ. ಮತ್ತೆ ಅವನು teacher go ಎಂದುಬಿಟ್ಟ. ಅವರು ದನಿ ಏರಿಸಿ `ಇಮಾಮ್‌, third person present tense singular verb ಕೊ ಎಸ್‌ ಲಗಾನಾ ರೆ ಎಂದುಬಿಟ್ಟರು' ತರಗತಿಯಲ್ಲಿ ನಗುವಿನ ಹಳ್ಳ ಹರಿಯಿತು.. ಇದರಿಂದ ಮಾತೃ ಭಾಷೆಯಲ್ಲಿ ಕಲಿಸಿದರೆ ಬೇಗ ಅರ್ಥವಾಗುವುದು ಎಂದು ವಾದಿಸುವವರಿಗೆ ಉತ್ತಮ ಉದಾಹರಣೆ ಸಿಕ್ಕಂತಾಗಬಹದು.
ವಿಜ್ಞಾನ ತರಗತಿಗಳು ಯಾವಾಗಲೂ ದೊಡ್ಡ ಸುಸಜ್ಜಿತ ಪ್ರಯೋಗಾಲಯದಲ್ಲಿ ನಡೆಯುತ್ತಲಿದ್ದವು. ವಿಜ್ಞಾನದ ತರಗತಿ ಬಂದಾಗ ಎಲ್ಲರೂ ಸಾಲಾಗಿ ಹೋಗಿ ಅಲ್ಲಿ ಕುಳಿತಿರಬೇಕಿತ್ತು. ಭೌತ ಶಾಸ್ತ್ರ ಮತ್ತು ರಸಾಯನ ಶಾಸ್ತ್ರದ ಪಾಠಗಳನ್ನು ಕಲಿಸುವಾಗ ನಾವು ಹೋಗುವ ಮೊದಲೆ ಪ್ರಯೋಗಾಲಯ ಸಹಾಯಕನು ಉಪಕರಣಗಳನ್ನು ಜೋಡಿಸಿ ಇಡುತಿದ್ದ. ವಿಶೇಷವಾಗಿ ರಸಾಯನ ಶಾಸ್ತ್ರದ ಅನಿಲಗಳ ಅಭ್ಯಾಸ ಮಾಡಲು ಬಹು ಖುಷಿ ಎನಿಸುತಿತ್ತು. ನೀರಿನ ಕೆಳ ಮುಖ ಸ್ಥಾನ ಪಲ್ಲಟನೆಯಿಂದ ಅನಿಲವನ್ನು ಸಂಗ್ರಹಿಸಬೇಕಾದರೆ. ದೊಡ್ಡ ಪ್ರನಾಳದಲ್ಲಿ ಹಾಕಿದ ರಸಾಯನಿಕ ವಸ್ತುಗಳನ್ನು ಕಾಯಿಸಿದಾಗ ಬಿಡುಗಡೆಯಾದ ಅನಿಲವು ನೀರು ತುಂಬಿದ ತೊಟ್ಟಿಯಲ್ಲಿ ಇಟ್ಟ ಅನಿಲ ಗವಾಕ್ಷಿಯ ಮೇಲೆ ಬೋರಲು ಹಾಕಿದ ನೀರು ತುಂಬಿದ ಜಾಡಿಯಲ್ಲಿ ಬುಳಬುಳನೆ  ತುಂಬುವುದನ್ನು ನೋಡಲು ಬಹು ಕುತೂಹಲ ವಾಗುತಿತ್ತು. ಆಮ್ಲ ಜನಕದ ಭೌತಿಕ ಲಕ್ಷಣಗಳಾದ ಬಣ್ಣ ವಾಸನೆ, ರುಚಿಯನ್ನು ಎಲ್ಲರೂ ಕಣ್ಣಾರೆ ಕಂಡು ಸ್ವಾನುಭವದಿಂದ ಹೇಳಬಹುದಿತ್ತು. ಇನ್ನು ದಹನಾನು ಕೂಲಿ, ದಹ್ಯ ವಸ್ತು ಎಂದು ತೋರಿಸುವಾಗ ಮೈ ಜುಮ್‌ ಎನ್ನುತಿತ್ತು. ಆ ಅನಿಲ ಜಾಡಿಯ ಬಾಯಿಯನ್ನು ತುಸುವೆ ತೆರೆದು ಉರಿವ ಕಡ್ಡಿಯನ್ನು ಹಿಡಿದಾಗ ಅದು ಪ್ರಕಾಶ ಮಾನವಾಗಿ ಉರಿದರೆ ದಹನಾನುಕೂಲಿ, ಧಗ್‌ ಎಂದು ಹತ್ತಿಕೊಂಡು ಉರಿದರೆ ದಹ್ಯವಸ್ತು ವಾದ ಜಲಜನಕ. ಬೆಂಕಿ ಆರಿಹೋದರೆ ಅದು ದಹನಾನು ಕೂಲಿಯಲ್ಲದ ಇಂಗಾಲದ ಡೈ ಆಕ್ಸೈಡ್‌ ಎಂದು ಆಗ ಕಲಿತದ್ದು ಅರವತ್ತು ವರ್ಷವಾದರೂ ಇನ್ನೂ ಕಣ್ಣ ಮುಂದೆ ಕಟ್ಟಿದಂತಿದೆ. ಉರಿವ ಮೆಗ್ನೀಷಿಯಂ ರಿಬ್ಬನ್‌ ಅನ್ನು ಆಮ್ಲಜನಕದ ಜಾಡಿಯಲ್ಲಿ ಇಟ್ಟಾಗ ಧೀಫಾವಳಿಯ ಸುರು ಸುರು ಬತ್ತಿಯಂತೆ ಅದು ಉರಿಯುವುದು ಮೋಜಿನ ವಿಷಯವಾಗಿತ್ತು. ಅದರ ಬೂದಿಯೆ ಮೆಗ್ನೀಷಿಯಂ ಆಕ್ಸೈಡು ಎಂದರೆ ಅಚ್ಚರಿ ಮೂಡುತಿತ್ತು.
ಅವರು ಪ್ರಯೋಗ ಮಾಡುವಾಗ ಒಬ್ಬಿಬ್ಬರು ವಿದ್ಯಾರ್ಥಿಗಳನ್ನು ಸಹಾಯಕ್ಕೆ ಕರೆಯುತಿದ್ದರು. ನಮಗೆ ಅವಕಾಶ ಸಿಕ್ಕಾಗ ಸ್ವರ್ಗ ಮೂರೆ ಗೇಣು. ಹೈಡ್ರೊಜನ್ ಸಲಫೈಡ್‌ ಅನಿಲ ತಯಾರಿಕೆ ಮಾಡಿದಾಗ ಪ್ರಯೋಗಾಲಯದ ತುಂಬ ನಗುವಿನ ಹೊಳೆ. ಅದಕ್ಕೆ ಕಾರಣ ಅದರ ದುರ್ವಾಸನೆ. ಅದರದು ಕೊಳೆತ ಕೋಳಿ ಮೊಟ್ಟೆಯ ವಾಸನೆ. ಆ ವಾಸನೆಯು ಬಹುಮಟ್ಟಿಗೆ ಹೊಟ್ಟೆ ಕೆಟ್ಟಾಗ ಹೊರ ಬರುವ ಅಪಾನ ವಾಯುವಿನಂತೆ ಇದ್ದದ್ದೆ ನಮಗೆಲ್ಲ ಮೋಜಿನ ಸಂಗತಿ. ನಮ್ಮ ತರಗತಿಯಲ್ಲಿದ್ದ ಪಾಡುರಂಗ ಶೆಟ್ಟಿ ಸದಾ ಜೇಬಿನಲ್ಲಿ ಕಡಲೆ, ಬಟಾಣಿ ತುಂಬಿಕೊಂಡು ಕಟಂ ಕಟಂ ಎಂದು ತಿನ್ನುತ್ತಲೆ ಇರುತ್ತಿದ್ದ. ಅದಕ್ಕೆ ಯಾರದೂ ದೂರಿಲ್ಲ. ಆದರೆ ಅವನು ಯಾರಿಗೂ ಕೊಡದ  ಜಿಪುಣ. ಬಾಯಿ ಬಿಟ್ಟು ಕೇಳಿದರೂ ಒಂದೊ ಎರಡೊ ಕಾಳು ಕೈಗೆ ನೀಡುತಿದ್ದ.. ಆದರೆ ಅವನ ಪಕ್ಕದಲ್ಲಿ ಕುಳಿತುಕೊಳ್ಳಲು ಬಹಳ ಪೈ ಪೋಟಿ. ಯಾವಾಗಲಾದರೂ ಒಮ್ಮೆ ಅಪ್ಪಿತಪ್ಪಿ ತಾನು ತಿನ್ನುವಾಗ ಕೊಡವುದಿತ್ತು. ಆದರೆ ಅ ಅವಕಾಶ ಸಿಗದವರು ಅವನನ್ನು H2S ಎಂದು ಅಡ್ಡ ಹೆಸರಿನಲ್ಲಿ ಕರೆದು ಅಪಹಾಸ್ಯ ಮಾಡುತ್ತಿದ್ದರು. ಅದು ಸಕಾರಣ ವಾಗಿಯೂ ಇತ್ತು. ಅವನ ಹಿಂದೆ ಕುಳಿತವರಿಗೆ ತಿಪ್ಪೆಗುಂಡಿಯ ಪಕ್ಕದಲ್ಲಿ ಹೋದ ಅನುಭವ. ಆ ಪ್ರಮಾಣದಲ್ಲಿ ಹೂಸು ಬಿಡುತಿದ್ದ. ಅವನು ನಗರದ ದೊಡ್ಡ ವ್ಯಾಪಾರಿಯೊಬ್ಬರ ಮಗ. ಜತೆಗೆ ಅವನ ಜೇಬಿನಲ್ಲಿನ ಕಡಲೆಯ ಆಸೆ, ಅನ್ನಲೂ ಆಗದೆ, ಅನುಭವಿಸಲೂ ಆಗದೆ ಎಲ್ಲರೂ ಸಹಿಸುತಿದ್ದೆವು.
ನಮಗೆಲ್ಲ ಗುರುಗಳ ಮೇಲಿನಷ್ಟೆ ಗೌರವ ಪ್ರಯೋಗಾಲಯದ ಸಹಾಯಕರ ಮೇಲೆ. ಅವರ ಹೆಸರುನ ರಾಮ ಸಿಂಗ್‌. ಕಾರಣ ಪ್ರಯೋಗಾಲಯದಲ್ಲಿ  ಚಿಕ್ಕ ಸಿನೆಮಾ ತೋರಿಸುವ ಪ್ರೊಜೆಕ್ಟರ್‌ ಇತ್ತು. ವಿಜ್ಞಾನ ಮತ್ತು ಇತಿಹಾಸಕ್ಕೆ ಸಂಬಂಧಿಸಿದ ಕಿರುಚಿತ್ರಗಳನ್ನು ಅಲ್ಲಿ ಪ್ರದರ್ಶಿಸುತ್ತಿದ್ದರು. ಆ ಪ್ರದರ್ಶನದ ಹೊಣೆ ಅವರದು.. ಹೊರಗರ ಸಿನೆಮಾ ನೋಡಲು ನೆಲಕ್ಕೆ ನಾಲಕ್ಕಾಣೆ ನೀಡಬೇಕಿತ್ತು. ಹಳ್ಳಿಯಿಂದ ಬರುವುದೂ ಕಷ್ಟವಿತ್ತು. ಹಾಗಾಗಿ ನಾವು ಕಂಡರಿಯದ ಹೊಸ ಪ್ರಪಂಚಕ್ಕೆ ಕರೆದೊಯ್ಯುವ  ಹರಿಕಾರನಂತೆ ಅವರು ಭಾಸವಾಗುತ್ತಿದ್ದರು. ಎಲ್ಲವೂ ಮೊದಲೆ ನಿಗದಿಪಡಿಸಿದ ವೇಳಾಪಟ್ಟಿಯಂತೆ ನಡೆಯುತಿತ್ತು ಆದರೆ ನಮಗೆ ಅವರು ಮನಸ್ಸು ಮಾಡಿದರೆ ನಮಗೆ ಸಿನೆಮಾ ತೋರಿಸಬಲ್ಲರು ಅವರಿಲ್ಲದೆ ಸಿನೇಮಾ ನೋಡುವುದು ಸಾದ್ಯವಿಲ್ಲ ಎಂಬ ಗಾಢ ನಂಬಿಕೆ.
ಪಾಠ ಕೇಳಿ ಕಲಿತಿರುವುದನ್ನು ಮರೆತರೂ ಮರೆಯಬಹುದು ಆದರೆ ಪ್ರಯೋಗ ನೋಡಿ, ಸಿನೆಮಾ ನೋಡಿ ಮನದಟ್ಟಾಗಿರುವುದು ಬಹುಕಾಲ ನೆನಪಿನಲ್ಲಿರುತಿತ್ತು.

No comments:

Post a Comment