Monday, August 20, 2012

ವೀರಾಭಿಮಾನ


ಮ್ಮ ಶಾಲೆಯ ಫುಟ್‌ ಬಾಲ್ ಮತ್ತು ಕಬ್ಬಡಿ ತಂಡಗಳು ಬಹು ಜನಪ್ರಿಯ. ಪ್ರತಿವರ್ಷವೂ ಜಿಲ್ಲಾ ಕ್ರೀಡಾ ಕೂಟದಲ್ಲಿ ಬಹುತೇಕ ನಮ್ಮ ತಂಡವೆ ಅಂತಿಮ ಘಟ್ಟಕ್ಕೆ ಬರುತಿತ್ತು. ಅದಕ್ಕೆ ಕಾರಣ ನಮ್ಮ ದೈಹಿಕ ಶಿಕ್ಷಕರು. ನಮಗೆ ಮೂವರು ದೈಹಿಕ ಶಿಕ್ಷಕರಿದ್ದರು. ದೈಹಿಕ ಶಿಕ್ಷಕರಲ್ಲಿ ಎದ್ದು ಕಾಣುತಿದ್ದವರು ಪಂಪಾಪತಿಶಾಸ್ತ್ರಿ. ಅವರು ಆರೂವರೆ ಅಡಿ ಎತ್ತರದ ಆಜಾನುಬಾಹು ಆಳು. ಉತ್ತಮ ಫುಟ್‌ ಬಾಲ್ ಆಟಗಾರರು ಮತ್ತು ಒಳ್ಳೆಯ ತರಬೇತಿದಾರರು. ಅವರು ಒಂದು ಬದಿಯ ಗೋಲಿನಿಂದ ಚೆಂಡು ಒದ್ದರೆ ಅದು ಇನ್ನೊಂದು ಬದಿಯ ಗೋಲಿನಲ್ಲಿ ಸಲೀಸಾಗಿ ತೂರುತಿತ್ತು. ಅಷ್ಟು ಶಕ್ತಿಯುತವಾದ ನಿಖರ ಹೊಡೆತ ಅವರದು. ಅವರು ಶಾಲೆಯಲ್ಲಿ, ಶಿಕ್ಷಕರ ಕೋಣೆಯಲ್ಲಿ ಕಾಣುವುದು ಬಹು ಕಡಿಮೆ. ಪ್ರಾರ್ಥನೆಯಾದ ಮೇಲೆ ಸಹಿ ಮಾಡಿದರೆ ಮುಗಿಯಿತು. ಕೊನೆ ಬೆಲ್‌ ಆಗುವವರೆಗೆ ಅವರ ಠಿಕಾಣಿ ಆಟದ ಮೈದಾನದಲ್ಲೆ. ನಮ್ಮದು ಮುನಿಸಿಪಲ್  ಹೈ ಸ್ಕೂಲ್‌ ಆಟದ ಮೈದಾನ ಬಹು ದೊಡ್ಡದು. ಫುಟ್‌ ಬಾಲ್‌, ಹಾಕಿ, ವಾಲೀಬಾಲ್, ಬೇಸ್‌ ಬಾಲ್‌ಗಳಿಗೆ ಪ್ರತ್ಯೇಕ ಸುಸಜ್ಜಿತ ಅಂಗಳಗಳೆ ಇವೆ. ಕಬ್ಬಡಿ, ಖೋ ಖೋ ಕ್ರೀಡಾಂಗಣಗಳಂತೂ ಮೂರು ನಾಲಕ್ಕು. ಈಗ ಮೈದಾನದಲ್ಲಿ ನಾಲಕ್ಕು ನೂರು ಮೀಟರ್‌ ಟ್ರಾಕ್‌ ಸಲೀಸಾಗಿ ಹಾಕುತಿದ್ದರು. ಹಿಂದಿನವರ ದೂರದೃಷ್ಟಿಯಿಂದ ಊರಿನಿಂದ ಮೈಲು ದೂರದಲ್ಲಿ ಬೃಹತ್‌ ಕಲ್ಲು ಕಟ್ಟಡದ ಶಾಲೆ ಕಟ್ಟಿದ್ದರು. ಅದಕ್ಕೆ ತಕ್ಕಂತೆ ವಿಶಾಲವಾದ ಮೈದಾನ ಸಾವಿರಾರು ಮಕ್ಕಳು ಒಟ್ಟಿಗೆ ಆಡಿದರೂ ಅನಾನುಕೂಲವಾಗದು. ಒಂದು ತುದಿಯಿಂದ ಇನ್ನೊಂದು ತುದಿಯಲ್ಲಿ ನಿಂತವರು ಸರಿಯಾಗಿ ಕಾಣುವದು ಕಷ್ಟ. ಪ್ರತಿ ಕ್ರೀಡಾಂಗಣದ ಅಂಚಿನಲ್ಲೂ ಬೆಳೆದ ಹೆಮ್ಮರಗಳು. ನಮ್ಮ ಶಾಸ್ತ್ರಿ ಮೇಷ್ಟ್ರು ಸದಾ ಮೈದಾನದಲ್ಲೆ, ಹುಡುಗರಿಗೆ ಆಟದ ಗುಟ್ಟು ಹೇಳಿ ಕೊಡುವುದರಲ್ಲಿ ಅವರು ಎತ್ತಿದ ಕೈ. ಆದರೆ ಸಾಧಾರಣ ಬೆಳಗಿನ ಮೊದಲೆರಡು ಪಿರಿಯಡ್‌ಗಳಲ್ಲಿ ಪಾಠಗಳು ನಡೆಯುತಿರುತ್ತವೆ. ಆಗ ಅವರು ಮರ ಒಂದರ ಕೆಳಗೆ ನೆಮ್ಮದಿಯಿಂದ ಸಿಗರೇಟು ಸೇದುತ್ತಾ ಕುಳಿತಿರುತ್ತಿದ್ದರು. ಅವರು ಊರಿನ ಗಣ್ಯ ಕುಟುಂಬಕ್ಕೆ ಸೇರಿದವರು. ಊರ ಮಧ್ಯದಲ್ಲಿ ವಿಶಾಲವಾದ ಆವರಣದಲ್ಲಿ ಇದ್ದ ಬಂಗ್ಲೆಯಲ್ಲಿ ಅವರ ವಾಸ. ಸಾಕಷ್ಟು ಆಸ್ತಿ ಪಾಸ್ತಿ ಇದ್ದವು. ನೌಕರಿ ಮಾಡುವ ಜರೂರತ್ತೆ ಅವರಿಗೆ ಇರಲಿಲ್ಲ. ಅವರ ಮನೆಯ ಮುಂದೆ ರಾವ್ ಬಹದ್ದೂರ್‌ ಎಂಬ ಕಮಾನು ಒಳಬರುವ ಕಾರನ್ನು ಸ್ವಾಗತಿಸುತಿತ್ತು. ಆದರೆ ಅದೇನು ಅವರಿಗೆ ಆಟದ ಮೇಲಿನ ಮೋಹವೋ, ಸಂಸಾರದಲ್ಲಿನ ನಿರ್ಮಮತೆಯೋ ಯಾರಿಗೂ ಸರಿಯಾಗಿ ಗೊತ್ತಿರಲಿಲ್ಲ. ಬೆಳಗಿನಿಂದ ಸಂಜೆಯ ತನಕ ಒಂಟಿ ಸಲಗದಂತೆ ಆಟದ ಮೈದಾನದಲ್ಲೆ ಇರುತ್ತಿದ್ದರು. ಅವರನ್ನು ಮಾತನಾಡಿಸಲು ಒಂದು ರೀತಿಯ ಭಯ. ಸದಾ ಕೆಂಪೇರಿದ ಕಣ್ಣುಗಳು, ಬಾಯಲ್ಲಿ ಹೊಗೆ ಕಾರುವ ಸಿಗರೇಟು. ಮಾತು ಬಹು ಕಡಿಮೆ. ಸದಾ ನಶೆಯಲ್ಲೆ ಇರುತ್ತಾರೆ ಎಂದು ಅನೇಕರು ಆಡಿಕೊಳ್ಳುತಿದ್ದರು ಆದರೆ ಎಲ್ಲದಕ್ಕೂ ಅವರದು ದಿವ್ಯ ನಿರ್ಲಕ್ಷ. ಅವರು ಯಾರೊಂದಿಗೂ ಜಗಳವಿರಲಿ ಹೆಚ್ಚು ಮಾತನಾಡಿದ್ದೂ ಬಹು ಕಡಿಮೆ.  ತಾವಾಯಿತು. ತಮ್ಮ ಆಟವಾಯಿತು. ಆಟಗಾರರಿಗೆ ಮಾತ್ರ ಅವರು ಅತಿ ಅಚ್ಚು ಮೆಚ್ಚು. ಒಳ್ಳೆಯ ಆಟಗಾರರನ್ನು ಕಂಡರೆ ಅವರಿಗೆ ಪ್ರೀತಿ. ಆಟವೆಲ್ಲ ಮುಗಿದ ಮೇಲೆ ಅಗತ್ಯವಿದ್ದವರಿಗೆ ಆಗಾಗ ತಿಂಡಿ ಕೊಡಿಸುತ್ತಿದ್ದರು ಎಂಬ ಮಾತೂ ಕೇಳಿ ಬರುತಿತ್ತು. ಆದರೆ ಸಾಮಾನ್ಯ ವಿದ್ಯಾರ್ಥಿಗಳಿಗೆ ಅವರ ಹತ್ತಿರ ಹೋಗದಷ್ಟು ಭಯಮಿಶ್ರಿತ ಗೌರವ.
ಶಿವರಾಮ ಮೇಷ್ಟ್ರು ಸೊಗಸುಗಾರ ಪುಟ್ಟಸ್ವಾಮಿ. ಸದಾ ಕೊಕ್ಕರೆ ಬಿಳುಪಿನ ಷಾರ್ಟ, ಟಕ್‌ ಮಾಡಿದ ಬಿಳಿ ಅರ್ಧ ತೋಳಿನ ಅಂಗಿ. ಕಾಲಲ್ಲಿ ಸುಣ್ಣದ ಬಿಳುಪನ್ನು ನಾಚಿಸುವ ಮೊಣ ಕಾಲಿನವರೆಗ ಬರುವ ಕಾಲು ಚೀಲ. ಅದರ ಮೇಲೆ ಬಿಳಿ ಕ್ಯಾನವಾಸ್‌ ಷೂಸ್.. ಪ್ರಮಾಣಬದ್ದ ದೇಹ. ತಿಳಿಗೆಂಪು ಬಣ್ಣ. ಯಾರೆ ಬಂದರೂ ಇನ್ನೊಂದು ಸಲ ನೋಡಬೇಕು ಎನ್ನಿಸುವ ವ್ಯಕ್ತಿತ್ವ. ಸದಾ ಚಟುವಟಿಕೆ. ಸರಸರ ನಡೆ. ಚಟಪಟ ಮಾತು. ಹಾರುವ, ಎಸೆಯುವ, ಓಡುವ ಕ್ರೀಡೆಗಳಲ್ಲಿ ಅವರು ಪರಿಣಿತರು. ಲೇಝಿಂ ನೃತ್ಯದಲ್ಲಿ ತೊಡಗಿದಾಗ ಮೈ ಜುಮ್‌ ಎನಿಸುವ ಚಲನೆ. ಅವರಿಂದ ಲೇಝೀಂ ಕಲಿಯುವುದೆ ಒಂದು ಅನುಭವ. ಸ್ವಾತಂತ್ರ್ಯದಿನಾಚರಣೆ, ಗಣ ರಾಜ್ಯೋತ್ಸವದ ಮೆರವಣಿಗೆಗಳಲ್ಲಿ ನಮ್ಮಶಾಲೆಯ ತಂಡ ಲೇಝಿಂ ನೃತ್ಯ ಮಾಡುತಿದ್ದರೆ ನೋಡುಗರು ತೆರೆದ ಬಾಯಿ ಮುಚ್ಚದೆ ನೆಟ್ಟ ನೋಟದಲ್ಲಿ ನೋಡುತ್ತಾ ನಿಲ್ಲುತಿದ್ದರು. ಅಷ್ಟು ಮೋಹಕವಾಗಿರುತಿತ್ತು. ಅವರು ತರಬೇತಿ ನೀಡಿದ ತಂಡದ ನೃತ್ಯ.
ಅವರನ್ನು ನೋಡಿದರೆ ಅನೇಕ ಶಿಕ್ಷಕರಿಗೆ ಒಳಗೊಳಗೆ ಅಸೂಯೆ. ಅಷ್ಟೆ ಏಕೆ ಕೆಲವು ಹಿರಿಯ ಹುಡುಗರೂ ಅವರನ್ನು ಇಷ್ಟಪಡುತ್ತಿರಲಿಲ್ಲ. ನಮ್ಮದು ಅತಿ ದೊಡ್ಡ ಶಾಲೆ. ತೆಲುಗು, ತಮಿಳು ಮೀಡಿಯಂಗಳೂ ಇದ್ದವು ಕನ್ನಡ ವಿಭಾಗದಲ್ಲಿ ಮಾತ್ರ ಬರಿ ಗಂಡು ಹುಡುಗರು. ಕಾರಣ ನಮ್ಮ ಊರಲ್ಲಿ ಇನ್ನೊಂದು ಹುಡುಗಿಯರಿಗಾಗಿಯೆ ಬೇರೆ ಪ್ರೌಢಶಾಲೆ ಇತ್ತು. ಆದರೆ ತಮಿಳು ಮತ್ತು ತೆಲುಗು ಮಾಧ್ಯಮದವರದು ಮಾತ್ರ ಸಹ ಶಿಕ್ಷಣ. ಹತ್ತಿರದಲ್ಲೆ ತುಂಗಭದ್ರ ಅಣೆಕಟ್ಟು ಇತ್ತು. ಕಮಲಾಪುರದ ಹತ್ತಿರ (ಎಚ್‌ ಪಿಸಿ) ಹೈಡ್ರೋಪವರ್‌ ಸ್ಟೇಷನ್‌ ಇತ್ತು. ಅಲ್ಲಿನ ಅಧಿಕಾರಿಗಳು ಕಾರ್ಮಿಕರು ಹೆಚ್ಚಾಗಿ ಅನ್ಯ ಭಾಷೆಯವರೆ. ಅವರಿಗಾಗಿಯೆ ಅಲ್ಲಿ ವಿಶೇಷ ವಸತಿ ಸಮೂಹ ಬೇರೆ. ಅಲ್ಲಿನವರು ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಬಂದವರು. ಎಲ್ಲರೂ ಆಧುನಿಕ ಸಂಸ್ಕೃತಿ ಮೈಗೂಡಿಸಿಕೊಂಡವರು ಅದು ಒಂದು ನಗರದ ಆಧುನಿಕ ವಿಸ್ತರಣೆಯಂತಿತ್ತು ಅವರಿಗೆ ಪ್ರತ್ಯೇಕ ಬಸ್ಸಿನ ವ್ಯವಸ್ಥೆ ಇತ್ತು ಅವನ್ನು ಸ್ಟೋರ್‌ ಬಸ್ಸು ಎನ್ನುತಿದ್ದೆವು. ಅಲ್ಲಿನ ವಿದ್ಯಾರ್ಥಿನಿಯರು ಹೈಸ್ಕೂಲಿಗೆ ನಮ್ಮಲ್ಲಿಗೆ ಬರುವರು. ಅವರು ಬಹಳ ಚುರುಕು. ಬಟ್ಟೆ ಬರೆಯಲ್ಲೂ ಬಹು  ಅಚ್ಚುಕಟ್ಟು. ಸ್ವಾಭಾವಿಕವಾಗಿ ಓದಿನಂತೆ ಆಟೋಟಗಳಲ್ಲೂ ಆಸಕ್ತರು. ಹೀಗಾಗಿ ನಮ್ಮಲ್ಲಿ ಮಹಿಳಾ ಕ್ರೀಡಾತಂಡ ಬಹು ಸಶಕ್ತವಾಗಿತ್ತು. ಅವರ ತರಬೇತುದಾರ ನಮ್ಮ ಶಿವರಾಂ ಮೇಷ್ಟ್ರು. ಕಾರಣ ಅವರಿಗೆ ತಮಿಳು, ತೆಲುಗು ಭಾಷೆಗಳು ಕರಗತ. ಆ ಹುಡುಗಿಯರು ಸದಾ ಇವರ ಸುತ್ತ ಮುತ್ತಿಕೊಂಡಿರುತ್ತಿದ್ದರು. ಇದೆ ಅನೇಕರ ಹೊಟ್ಟೆಯುರಿಗೆ ಕಾರಣ. ಮೇಲಾಗಿ ನಮ್ಮ ಕನ್ನಡ ಮಾಧ್ಯಮದ ಉಪಾಧ್ಯಾಯರಿಗೆ ಆ ವಿದ್ಯಾರ್ಥಿನಿಯರತ್ತ ಕಣ್ಣು ಹಾಯಿಸುವ ಅವಕಾಶವೆ ಇರುತ್ತಿರಲಿಲ್ಲ. ಅವರ ತರಗತಿಗಳು ಮುಖ್ಯ ಕಟ್ಟಡಕ್ಕೆ ಹೊಂದಿಕೊಂಡಿರುವ ವಿಸ್ತರಿಸಲಾದ ವಿಭಾಗದಲ್ಲಿ ನಡೆಯುತಿದ್ದವು. ಅವರಿಗೆ ಪ್ರತ್ಯೇಕ ಸಿಬ್ಬಂದಿ ಇತ್ತು. ಪ್ರಾರ್ಥನೆ ಮತ್ತು ಸಾಮೂಹಿಕ ಕವಾಯತು ಬಿಟ್ಟರೆ ಉಳಿದಂತೆ ಯಾರಿಗೂ ಅವರ ಮುಖ ನೋಡಲೂ ಸಿಗುತ್ತಿರಲಿಲ್ಲ. ಸಾವಿರಾರು ಗಂಡು ಪಾಳಯದಲ್ಲಿರುವ ಆ ನೂರಾರು ಹುಡುಗಿಯರು ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದರು. ಬಹುತೇಕ ಜನರ ಪಾಲಿಗೆ ಅವರು ನಿಲುಕದ ನಕ್ಷತ್ರ. ಅದಕ್ಕೆ ಇರಬೇಕು ಅವರ ಜತೆ ನಗನಗುತ್ತಾ ಕಲಿಸುತಿದ್ದ ದೈಹಿಕ ಶಿಕ್ಷಕರ ಮೇಲೆ ಬಹುತೇಕ ಜನರಿಗೆ ಅಸಹನೆ.
ಇನ್ನೊಬ್ಬ ದೈಹಿಕ ಶಿಕ್ಷರಿದ್ದರು. ಅವರು ಕುಳ್ಳಗೆ ಗುಂಡುಗುಂಡಗೆ ಸದಾ ನಗುನಗುತ್ತಾ ಇರುವರು. ಅವರಿಗೆ ಎಲ್ಲರೂ ಚಟ್ನಿಪುಡಿ ಮಾಸ್ಟರ್‌ ಎಂದೆ ಕರೆಯುತ್ತಲಿದ್ದರು. ಅಡ್ಡಹೆಸರು ಹೇಗೆ ಬಂದಿತು ಎಂಬುದಕ್ಕೆ ಬೇರೆ ಇತಿಹಾಸವೆ ಇದೆ. ಅವರು ಕಬ್ಬಡಿ, ಖೋಖೋ ಆಟಗಳಲ್ಲಿ ನಿಷ್ಣಾತರು. ನಮ್ಮ ಶಾಲೆಯ ಕಬ್ಬಡಿ ತಂಡ ಬಹು ಹೆಸರುವಾಸಿ. ಹತ್ತಾರು ವರ್ಷಗಳಿಂದ ಜಿಲ್ಲಾ ಮಟ್ಟದ ಅಂತಿಮ ಪಂದ್ಯದಲ್ಲಿ ಅದರ ಸ್ಥಾನ ಕಟ್ಟಿಟ್ಟಬುತ್ತಿ. ಬೇರೆ ಊರ ತಂಡಗಳನ್ನು ನಮ್ಮ ಮೈದಾನದಲ್ಲಿ ಎದುರಿಸಿದಾಗ ನಮ್ಮ ಆಟಗಾರರ ಮೈ ದುಂಬಿಬರುತಿತ್ತು. ಸಾವಿರಾರು ಜನ ಆಟ ನೋಡಲು ನೆರೆಯುತಿದ್ದರು ಅವರ ಕೇಕೆ, ಸಿಳ್ಳು, ಚಪ್ಪಾಳೆ, ಕೂಗಾಟದ ಉತ್ತೇಜನ ನಮ್ಮ ತಂಡಕ್ಕೆ ಮೀಸಲು. ಅದರಿಂದ ಹೊರಗಿನಿಂದ ಬಂದ ತಂಡ ಎಷ್ಟೆ ಬಲವಾಗಿದ್ದರೂ ಫಂಕ್‌ ಹೊಡಿಯುವಂತೆ ಮಾಡುತಿದ್ದರು ಸ್ಥಳೀಯರು. ಸಾಧಾರಣವಾಗಿ ನಮಗೆ ಜಯ ಮೀಸಲು. ಬಂದವರು ಗೊಣುಗುತ್ತಾ ಗಾಡಿಬಿಡುತಿದ್ದರು. ಒಂದೊಂದು ಸಲ ಸ್ಥಳೀಯ ಪಟೇಲ್‌ ಹೈಸ್ಕೂಲ್‌ ತಂಡವೆ ಅಂತಿಮ ಪಂದ್ಯದಲ್ಲಿ ಎದುರಾದರೆ ಚಿಕ್ಕ ಕುರುಕ್ಷೇತ್ರವೆ ಜರುಗುತಿತ್ತು. ಅವರಿಗೂ ಸಾಕಷ್ಟು ಬೆಂಬಲಿಗರು. ಕೂಗಾಟ, ಕೈಚಪ್ಪಾಳೆಯ ಸದ್ದು ಕಿವಿ ಗಡಚಿಕ್ಕುತಿತ್ತು. ಆಗ ಯಾರು ಗೆಲ್ಲುವರೋ ಹೇಳುವುದು ಕಷ್ಟ. ನಿರ್ಣಾಯಕರದ್ದು ಕತ್ತಿಯ ಮೇಲೆ ಸಾಮು ಮಾಡುವ ಕೆಲಸ. ತುಸು ಹೆಚ್ಚು ಕಡಿಮೆಯಾದರೂ ಹೊಡದಾಟ. ಅದಕ್ಕಾಗಿ ಅನೇಕ ಶಿಕ್ಷಕರೂ ಹಾಜರಿರುತಿದ್ದರು. ಒಂದೊಂದು ಸಲ ಹೆಡ್‌ ಮಾಸ್ಟರ್‌ ಅವರೆ ಖುದ್ದಾಗಿ ಆಟದ ಅಂಗಳದಲ್ಲಿ ನಿಂತು ಗುಂಪನ್ನು ನಿಯಂತ್ರಿಸಬೇಕಾಗುತಿತ್ತು.
ಇನ್ನು ಹಾಕಿ ಮತ್ತು ಫುಟ್‌ ಬಾಲ್ ಪಂದ್ಯಗಳ ಕಥೆ ಮತ್ತೂ ರೋಚಕ. ಆ ಆಟಗಳಿಗೆ ತಂಡಗಳು ಹೆಚ್ಚು ಇರುತ್ತಿರಲಿಲ್ಲ. ಅಬ್ಬಬ್ಬಾ ಎಂದರೆ ಐದಾರು ಮಾತ್ರ. ಅವೂ ನಗರ ಪ್ರದೇಶದವು. ಬಳ್ಳಾರಿಯಿಂದಲೆ ಎರಡು ಮೂರು ತಂಡಗಳು.. ಆ ಆಟದಲ್ಲಿ ಒರಟುತನ ಹೆಚ್ಚು. ಈಗೀಗ ನಾವು ಬ್ರಜಿಲ್‌ ಜರ್ಮನಿ ತಂಡಗಳು ಆಟಕ್ಕಿಂತ ಜಗಳಾಟವನ್ನೆ ಮಾಡುವದನ್ನು ನೋಡಿದ್ದೇವೆ. ಆದರೆ ಆಗಲೂ ಅಂತಹ ವ್ಯತ್ಯಾಸವಿರಲಿಲ್ಲ.. ಸೋಲುವ ಸುಳಿವು ಸಿಕ್ಕರೆ ಸಾಕು ರೊಳ್ಳಿ ತೆಗೆಯುತಿದ್ದರು. ಉತ್ತಮ ಆಟಗಾರನನ್ನೆ ಗುರಿಯಾಗಿಸಿ ಮೇಲೆ ಬೀಳುತಿದ್ದರು.
ನಿರ್ಣಾಯಕರದಂತೂ ಬಹು ಫಜೀತಿ. ಪೆನಾಲ್ಟಿ ಕಾರ್ನರ್‌, ಆಫ್ ಸೈಡ್‌ ಗೋಲು ಕೊಟ್ಟಾಗಲಂತೂ ಯುದ್ಧವೆ ಆಗುತಿತ್ತು. ಆಟಗಾರರು ಹೊಡೆದಾಡುವುದಿರಲಿ ನೋಡುವವರೆ ಆಟದ ಮೈದಾನಕ್ಕೆ ನುಗ್ಗುತ್ತಿದ್ದರು. ಪೊಲೀಸರೂ ಅವರನ್ನು ನಿಯಂತ್ರಿಸಲು ಹರಸಾಹಸ ಮಾಡಬೇಕಾಗುತಿತ್ತು. ಹೊರ ಊರಿನ ಆಟಗಾರರು ಪೊಲೀಸರ ರಕ್ಷಣೆಯಲ್ಲಿ ಬಸ್ಸು ರೈಲು ಹಿಡಿದು ಬದುಕಿದೆಯಾ ಬಡಜೀವವೆ ಎಂದು ತಮ್ಮ ಊರು ಸೇರುತಿದ್ದರು.. ನಮ್ಮ ತಂಡವು ಬಳ್ಳಾರಿಗೆ ಹೋದಾಗಲೂ ಇದೆ ದೃಶ್ಯ. ಮರುಕಳಿಸುತಿತ್ತು. ಅಲ್ಲಿನ ತಂಡಾಭಿಮಾನಿಗಳಿಂದ ನಮ್ಮವರು ಚಳ್ಳೆ ಹಣ್ಣು ತಿನ್ನುವ ಸಂಭವ ಬರುತಿತ್ತು.
ಹಾಕಿ ಪಂದ್ಯವೂ ಸಣ್ಣ ಪ್ರಮಾಣದಲ್ಲಿ ಗಲಭೆಗೆ ಅವಕಾಶ ಕೊಡುತಿತ್ತು. ಅಲ್ಲಿ ಹೊರಗಿನವರ ಪ್ರವೇಶ ಕಡಿಮೆ. ಆದರೆ ಆಟಗಾರರೆ ಕೈನಲ್ಲಿದ್ದ ಹಾಕಿ ಸ್ಟಿಕ್‌ಗಳನ್ನು ಧಾರಾಳವಾಗಿ ಬೀಸುತ್ತಿದ್ದರು. ಹಾಕಿ ತುಸು ಪ್ರತಿಷ್ಠಿತ ಶಾಲೆಗಳ ಆಟವಾಗಿದ್ದರಿಂದ ಹೆಚ್ಚು ದೊಂಬಿಯಾಗುತ್ತಿರಲಿಲ್ಲ. ಈಗಿನ ವಾತಾವರಣದಲ್ಲಿ ನೋಡಿದರೆ ಇದೆಲ್ಲಕ್ಕೆ ಕಾರಣ ಕ್ರೀಡಾ ಮನೋಭಾವದ ಕೊರತೆ ಎನಿಸುವುದು. ಆದರೆ ಅದು ವೀರ ಕ್ರೀಡಾಭಿಮಾನ. ಬೇರೆ ಯಾವುದೆ ಇತರೆ ಮನರಂಜನೆ ಇಲ್ಲದ ಕಾಲ ಅದು. ಅನ್ಯಾಯವಾಗಿದೆ ಎನಿಸಿದರೆ ಸಾಕು ಸರಿಯೋ ತಪ್ಪೋ ಎಂದು ತಾಳ್ಮೆಯಿಂದ ವಿಮರ್ಶಿಸದೆ ಪ್ರತಿಕ್ರಿಯಿಸುತ್ತಿದ್ದರು. ಅಷ್ಟು ಭಾವ ಜೀವಿಗಳು.
ಫುಟ್‌ ಬಾಲ್‌ ಎಷ್ಟು ಜನಪ್ರಿಯವಾಗಿತ್ತೆಂದರೆ, ಹತ್ತಾರು ವರ್ಷ ಫುಟ್‌ ಬಾಲ್‌ ಆಡಿ ಜನರಿಗೆ ಚಿರಪರಿಚಿತನಾಗಿದ್ದ ಗೂಡೂ ಸಾಬ್ ಎಂಬ ಎಸ್‌ಎಸ್ ಎಲ್‌ ಸಿ ಸಹ ಮುಗಿಸಲಾರದ ಸಾಧಾರಣ ವ್ಯಕ್ತಿಯೊಬ್ಬ ಎಂ ಎಲ್‌ ಎ ಆದನು. ಆವನು ಹಣವಂತನೂ ಅಲ್ಲ. ವೃತ್ತಿಯಿಂದ ಕಟುಕರವನು. ಕುರಿ ಚರ್ಮ ಮಾರಿ ಬದಕು ಸಾಗಿಸುತ್ತಿದ್ದ. ಎಪ್ಪತ್ತರ ದಶಕದಲ್ಲಿ ಇಂಡಿಕೇಟ್‌ ಸಿಂಡಿಕೇಟ್‌ಗಳ ಗುದ್ದಾಟದಲ್ಲಿ ಅವನಿಗೆ ಹೇಗೋ ಕಾಂಗ್ರೆಸ್‌ ಟಿಕೆಟ್‌ ಸಿಕ್ಕಿತು. ಅವನು ಚುನಾವಣೆಗೆ ನಿಂತಾಗ ಎಲ್ಲರೂ ನಕ್ಕವರೆ. ಇವನ ಪ್ರತಿಸ್ಪರ್ಧಿ ಬಹು ಗಟ್ಟಿ ಕುಳ. ಅಲ್ಲದೆ ಪ್ರಬಲ ಜಾತಿಗೆ ಸೇರಿದವನು. ಆದರೆ ಆಟಗಾರನ ವೀರ ಕ್ರೀಡಾಭಿಮಾನಿಗಳು ಅವನ ಪರ  ಪ್ರಚಾರಕ್ಕೆ ಇಳಿದರು. ಇಂದಿರಾ ಗಾಳಿಯ ಜತೆ ಅವನ ಫುಟ್‌ ಬಾಲ್‌ ಆಟಗಾರನೆಂಬ ಪ್ರಭಾವಳಿಯೂ ಸೇರಿ ಅವನು ಸುಲಭವಾಗಿ ಶಾಸಕನಾದ. ನವಜೋತ್‌ ಸಿಂಗ್ ಸಿದ್ದು, ಕೀರ್ತಿ ಅಜಾದ್‌, ಅಜರುದ್ದೀನ್‌ ಮೊದಲಾದ ಹೆಸರಾಂತ ಕ್ರೀಡಾಪಟುಗಳು ರಾಜಕೀಯಕ್ಕೆ ದುಮುಕುವ ಮೊದಲೆ ಕ್ರೀಡಾಪಟುವೊಬ್ಬನನ್ನು ಶಾಸಕನಾಗಿಸಿದ ಹಿರಿಮೆ ನಮ್ಮ ಊರಿನದಾಗಿದೆ. ಆದರೆ ಈ ಫುಟ್ ಬಾಲ್ ಆಟಗಾರ ರಾಜಕೀಯದಾಟದಲ್ಲಿ ಯಶಸ್ವಿಯಾಗಲಿಲ್ಲ. ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ಸಿಗಲಿಲ್ಲ. ನಂತರ ಹೆಚ್ಚು ಕಾಲ ರಾಜಕೀಯದಲ್ಲಿ ಉಳಿಯಲಿಲ್ಲ ಎಂಬುದು ಬೇರೆ. ನಮ್ಮ ರಾಜ್ಯದಲ್ಲಂತೂ ಶಾಸಕನಾದ ಮೊದಲ ಕ್ರೀಡಾಪಟು ನಮ್ಮ ಶಾಲೆಯ ಅಂಗಳದಲ್ಲಿ ಆಡಿದ ಹುಡುಗ.



No comments:

Post a Comment