ಬಳ್ಳಾರಿ ಜಿಲ್ಲೆಯ ತಾಲೂಕು
ಕೇಂದ್ರದಲ್ಲಿನ ಕಾಲೇಜಿನ ಒಂದು ಅನುಭವ ನನಗೆ ಜೀವನದಲ್ಲಿ ದೊಡ್ಡ ಪಾಠ ಕಲಿಸಿತು. ಸಮಸ್ಯೆ
ಎದುರಾದಾಗ ಬೆನ್ನು ತೋರಿಸುವದಕ್ಕಿಂತ ಮುಖಾಮುಖಿಯಾದರೆ ಪರಿಹಾರ ಸುಲಭ ಎಂದು ಅರಿತೆ. ಅದು ತುಂಬ
ಹಿಂದುಳಿದ ಪ್ರದೇಶ. ಹೊಸ ಕಾಲೇಜು. ಅದೆ ತಾನೆ ಸ್ನಾತಕೋತ್ತರ ಪದವಿ ಪಡೆದು ಮೊದಲ ಬಾರಿ
ಕೆಲಸಕ್ಕೆ ಸೇರಿದ ತರುಣ ಉಪನ್ಯಾಸಕರು. ಎಲ್ಲ ಮಕ್ಕಳು ಗ್ರಾಮಾಂತರ ಪ್ರದೇಶದವರು. ನಯ ನಾಜೂಕು
ಇಲ್ಲ. ಬಹುಶಃ ಅವರ ವಂಶದಲ್ಲೆ ಕಾಲೇಜು ಕಟ್ಟೆ ಹತ್ತಿದ ಮೊದಲ ಪೀಳಿಗೆಯವರು. ಕೆಲವರು
ಮೂರನಾಯಲಕ್ಕು ವರ್ಷ ಮನೆಯಲ್ಲಿ ಇದ್ದು ಹತ್ತಿರದಲ್ಲೆ ಕಾಲೇಜು ಬಂದಿದೆ ಎಂದು ಸೇರಿದವರು.
ಗುರು ಶಿಷ್ಯರ ನಡುವೆ
ವಯಸ್ಸಿನ ಅಂತರ ಬಹಳವೇನೂ ಇರಲಿಲ್ಲ. ಆದರೆ ನಗರದಲ್ಲಿ ಕಲಿತು ಮೈಸೂರು, ಬೆಂಗಳೂರು, ಶಿವಮೊಗ್ಗದಂತಹ ದೂರದ ಊರಿಂದ ಬಂದು ಅವರೊಂದಿಗೆ ಬೆರೆತು ಕಲಿಸಲು ಶತಪ್ರಯತ್ನ
ಮಾಡುತ್ತಿದ್ದ ಯುವ ಉಪನ್ಯಾಸಕರ ಬಗ್ಗೆ ಅಪಾರ ಅಭಿಮಾನ. ಏನೇ ಕೆಲಸವಿದ್ದರೂ ಉತ್ಸಾಹದ
ಬುಗ್ಗೆಗಳಾಗಿ ಮಾಡಿ ಮುಗಿಸುತಿದ್ದರು. ಉಪನ್ಯಾಸಕರು ಬಹುತೇಕ ಅವಿವಾಹಿತರು. ಕಲಿತದನ್ನೆಲ್ಲ
ಪ್ರಯೋಗಿಸಬೇಕೆಂಬ ಹೊಸ ಹುರುಪಿನವರು. ಪಾಠಗಳ ಜತೆ ಆಟ, ನಾಟಕ, ಭಾಷಣ ಹೀಗೆ ಹಲವು ಪಠ್ಯೇತರ ಚಟುವಟಿಕೆಗಳನ್ನು
ಹಮ್ಮಿಕೊಳ್ಳತ್ತಿದ್ದರು. ಮಾತಿಗೆ ಮಾತು ಬಂದು ಶೈಕ್ಷಣಿಕ ಪ್ರವಾಸದ ಪ್ರಸ್ತಾಪ ಬಂದಿತು.
ವಿದ್ಯಾರ್ಥಿಗಳಿಗೆ ಅಪಾರ ಆನಂದ. ಅನೇಕರು ರೈಲನ್ನೂ ಸಹಾ ನೋಡಿದವರಲ್ಲ. ಜಿಲ್ಲಾ ಕೇಂದ್ರವನ್ನು
ಕೆಲವರು ಕಂಡಿರಲಿಲ್ಲ. ಒಂದೆ ಮಾತಿಗೆ ಎಲ್ಲ ಮುಗಿಬಿದ್ದರು. ಎಲ್ಲಿಗೆ ಹೋಗಬೇಕೆಂದು ಚರ್ಚೆ
ನಡೆಯಿತು.
ಹಂಪೆ, ಬಿಜಾಪುರ, ಮೈಸೂರು
ಮೊದಲಾದವುಗಳ ಹೆಸರು ಬಂದಾಗ ವಿದ್ಯಾರ್ಥಿಗಳೇನೋ ಎಲ್ಲಾದರು ಸರಿ ಎಂದರು. ಆದರೆ ಯುವ
ಉಪನ್ಯಾಸಕರಿಗೆ ಅವು ಹಳೆಯ ಜಾಗ. ಅವರು ಬರಲು ಮೂಗೆಳೆದರು. ಎಲ್ಲರೂ ಬರಬೇಕೆಂಬುದು ಹುಡುಗರ
ಬೇಡಿಕೆ. ಕೊನೆಗೆ ಗೋವಾಕ್ಕೆ ಹೋಗುವುದು ಎಂದು ನಿರ್ಧಾರವಾಯಿತು. ಹಾಗೆಯೇ ಕಾರವಾರ, ಬೆಳಗಾಂ, ಧಾರವಾಡ, ಗದಗ ಮೊದಲಾದ
ಪ್ರೇಕ್ಷಣೀಯ ಸ್ಥಳಗಳನ್ನು ನೋಡಬೇಕೆಂದು ಒಪ್ಪಲಾಯಿತು. ಎಲ್ಲ ಬೋಧಕರು ಮತ್ತು ಹುಡುಗಿಯರು
ಬರುತ್ತಿರುವುದರಿಂದ ಮದುವೆಯಾದ ಶಿಕ್ಷಕರು ತಮ್ಮ ಮಡದಿಯರನ್ನೂ ಕರೆ ತರಬೇಕೆಂದು ತಿಳಿಸಲಾಯಿತು.
ಇವರೆಲ್ಲರ ವೆಚ್ಚದ ಹೊರೆ ಮಕ್ಕಳ ಮೇಲೆ ಹಾಕಲು ಸರಿ ಎನಿಸಲಿಲ್ಲ. ಐದು ದಿನದ ಪ್ರವಾಸ.
ಅದಕ್ಕಾಗಿ ಪ್ರಯಾಣದ ವೆಚ್ಚವನ್ನು ಮಕ್ಕಳ ಮೇಲೆ ಹಾಕಬಾರದು. ಎಲ್ಲರೂ ಹಣ ನೀಡಬೇಕು.
ಮೇಲ್ವಿಚಾರಣೆ ಮಾಡುವ ಶಿಕ್ಷಕರ ಊಟ ಮತ್ತು ವಸತಿ ಮಾತ್ರ ಒಟ್ಟಿನ ಲೆಕ್ಕದಲ್ಲಿ ಭರಿಸಲು ಎಲ್ಲರೂ
ಸಮ್ಮತಿಸಿದರು. ಶೈಕ್ಷಣಿಕ ಪ್ರವಾಸದಲ್ಲಿ ಸಾಧಾರಣವಾಗಿ ಶಿಕ್ಷಕರು ಹಣ ನೀಡುವುದಿಲ್ಲ.
ಆದರೆ ಈಗಿನ ಪರಿಸ್ಥಿತಿ
ಬೇರೆ. ಎಲ್ಲರೂ ಸೇರಿ ಪ್ರವಾಸದ ಹೊಣೆಯನ್ನು ನನ್ನ ಹೆಗಲಿಗೆ ಹಾಕಿದರು. ಆಗಲೇ ಜನವರಿ
ಬಂದಿತ್ತು. ಕೊನೆ ವಾರದಲ್ಲಿ ಪ್ರವಾಸ ಹೊರಡಲು ಇಲಾಖೆಗೆ ಅನುಮತಿಗಾಗಿ ಪತ್ರ ಬರೆಯಲಾಯಿತು.
ಶನಿವಾರ, ಭಾನುವಾರ
ಸೇರಿದಂತೆ ಐದು ದಿನ ಹೋಗುವುದು, ಕೆಲಸದ ದಿನದ ನಷ್ಟವನ್ನು ಮುಂದೆ
ಬರುವ ಭಾನುವಾರಗಳಲ್ಲಿ ಕೆಲಸ ಮಾಡಿ ಸರಿದೂಗಿಸುವುದಾಗಿ ಇಲಾಖೆಗೆ ತಿಳಿಸಲಾಯಿತು. ಆಂಧ್ರದ
ಉರವಕೊಂಡದಿಂದ ಬಸ್ಸು ಗೊತ್ತು ಮಾಡಲಾಯಿತು. ಎಲ್ಲರೂ ಒಂದು ದಿನದ ಮಟ್ಟಿಗೆ ಬುತ್ತಿ ತರಲು
ತಿಳಿಸಿದೆವು. ಹೋಗುವ ದಿನ ಬಂದಿತು. ಬಾಳೆಗೊನೆ, ಅವಲಕ್ಕಿ, ಬೇಕರಿ ತಿಂಡಿಗಳನ್ನು ಧಂಡಿಯಾಗಿ ಕಾಲೇಜಿನ
ವತಿಯಿಂದ ಕೊಳ್ಳಲಾಯಿತು. ಇಲಾಖೆಯಿಂದ ಅನುಮತಿ ಪತ್ರ ಬರಲಿಲ್ಲ. ಮೊದಲೆ ಜಿಲ್ಲಾ ಕಛೇರಿ
ಸಮುದ್ರದಂತೆ ನಮಗೆ ಉತ್ತರಿಸಲು ಅವರಿಗೆ ಎಲ್ಲಿ ಸಮಯವಿರುವುದು ಎಂದುಕೊಂಡೆವು. ನಾವು ಹೋಗಿ
ಅನುಮತಿ ತರಬೇಕಿತ್ತು.
ಆದರೆ ಅಲ್ಲಿ ಹೋಗಿ
ಮೇಜಿನಿಂದ ಮೇಜಿಗೆ ಅಲೆದು ಸಂಬಂಧಿಸಿದವರ ಮರ್ಜಿ ಹಿಡಿದು ಕೈಯಲ್ಲಿ ಆದೇಶ ತರುವ ತಾಳ್ಮೆ, ಮನಸ್ಸು ಎರಡೂ ಇರಲಿಲ್ಲ. ಅವರಿಂದ
ಏನೂ ಬರದೆ ಇದ್ದುದರಿಂದ ನಮ್ಮ ಪ್ರವಾಸಕ್ಕೆ ತೊಂದರೆಯಿಲ್ಲ ಎಂದು ಯೋಚಿಸಿ ಎಲ್ಲ ಸಿದ್ಧತೆ
ಮುಗಿಸಿದೆವು. ಪ್ರವಾಸ ಹೊರಡುವ ದಿನ ಮೂರರ ಹೊತ್ತಿಗೆ ಹಳ್ಳಿಮಕ್ಕಳು ತಮ್ಮ ಲಗೇಜು ಸಹಿತ
ಬಂದಿಳಿದರು. ಬಸ್ಸೂ ಬಳ್ಳಾರಿ ಬಿಟ್ಟ ಸುದ್ದಿ ಬಂದಿತು. ಅಷ್ಟರಲ್ಲಿ ಉಪನಿರ್ದೇಶಕರ ಪತ್ರ
ಬಂದಿತು. ನಮಗೆಲ್ಲ ಖುಷಿಯೋ ಖುಷಿ. ಅನುಮತಿ ತಾನಾಗೆ ಬಂದಿತಲ್ಲ ಎಂದು. ಪ್ರಿನ್ಸಿಪಾಲು ಲಕೋಟೆ
ಒಡೆದು ಪತ್ರ ಓದಿ ತಲೆ ಮೇಲೆ ಕೈಹೊತ್ತು ಕುಳಿತರು. ಜನವರಿ ತಿಂಗಳಾದ್ದರಿಂದ ಶೈಕ್ಷಣಿಕ
ಪ್ರವಾಸಕ್ಕೆ ಹೋಗಕೂಡದು. ಅದನ್ನು ಏನಿದ್ದರೂ ಡಿಸೆಂಬರ್ ಒಳಗೆ ಮುಗಿಸಬೇಕಾಗಿತ್ತು ಎಂದು
ತಿಳಿಸಿದ್ದರು. ಪ್ರಾಂಶುಪಾಲರು ಹೋಗುವುದ ಬೇಡ ಎಂದರು.
ಆದರೆ ಕೊನೆ
ಗಳಿಗೆಯಾದ್ದರಿಂದ ಶಾಲೆಯ ಹೆಸರು,
ಮಕ್ಕಳ ಹಿತ ಗಮನಿಸಿ, ಹಣಕಾಸಿನ ತೊಡಕು ಗಮನಿಸಿ
ಆದದ್ದಾಗಲಿ ಹೊರಡಬೇಕೆಂದು ನಿರ್ಧರಿಸಲಾಯಿತು. ಪ್ರಾಂಶುಪಾಲರು ಬರಲು ಹಿಂದೇಟು ಹಾಕಿದರು. ಸರಿ
ಪ್ರವಾಸದ ವ್ಯವಸ್ಥಾಪಕನಾದ ನಾನೇ ಪೂರ್ಣ ಹೊಣೆ ಹೊರುವುದಾಗಿ ಸಮಾಧಾನ ಹೇಳಿದೆ. ಪ್ರವಾಸ
ಹೊರಟೆವು. ಕಡಲ ತಡಿಯಲ್ಲಿ ಎಲ್ಲರೂ ಸಂತಸದಿಂದ ಕುಣಿದಾಡಿದರು. ಈ ಖುಷಿ ನಡುವೆ ಒಂದು ಕಟು
ಅನುಭವವಾಯಿತು. ಗೋವಾದಲ್ಲಿ ವಿಶೇಷ ಆಕರ್ಷಣೆ ಎಂದರೆ ಸಂತ ಕ್ಸೇವಿಯರನ ಶರೀರ ಇರುವ ಪುರಾತನ
ಭವ್ಯ ಚರ್ಚು. ಶತಮಾನಗಳೇ ಕಳೆದರೂ ಇನ್ನೂ ಹಾಗೆಯೇ ಇರುವ ಅದರ ದರ್ಶನಕ್ಕೆ ದೇಶ ವಿದೇಶಗಳಿಂದ
ಪ್ರವಾಸಿಗರು ಮುಕುರಿರುತ್ತಾರೆ. ನಾವು ಹೋದಾಗ ಆಗಲೇ ಸಂಜೆಯ ಸಮಯ. ವಿಶೇಷ ಅನುಮತಿ ಪಡೆದು
ಎಲ್ಲರನ್ನೂ ಒಳಗೆ ಕಳುಹಿಸಲಾಯಿತು. ಶತ ಶತಮಾನಗಳ ಆ ಭವ್ಯತೆ, ದಿವ್ಯತೆ
ನಮ್ಮೆಲ್ಲರನ್ನೂ ಮೂಕರನ್ನಾಗಿತು. ಯಾರೋ ಕೆಲ ಹುಡುಗರು ಅಯ್ಯೋ ಹೆಣ ನೋಡಲು ಇಷ್ಟೇಕೆ
ಕಷ್ಟಪಡಬೇಕಾಗಿತ್ತು ಎಂದು ಗೊಣಗಿದ್ದರು. ಅಲ್ಲಿಯ ಜನರಿಗೆ ಕನ್ನಡ ಬಾರದು, ನಮ್ಮ ಮಾತು ತಿಳಿಯದು ಎಂದು ಅವರ ಭಾವನೆ. ಆದರೆ ಹೊರ ಬಂದಾಗ ಅಲ್ಲಿ ಪಾದ್ರಿಯೊಬ್ಬರು
ನಿಂತಿದ್ದರು. ಅವರು ನಮ್ಮನ್ನು ನೋಡಿ, ನಿಮ್ಮ ವಿದ್ಯಾರ್ಥಿಗಳಲ್ಲಿ
ಶಿಸ್ತು ಇಲ್ಲ. ನೀವು ಅವರಿಗೆ ಮೊದಲು ಮಾತನಾಡುವ ರೀತಿ ಕಲಿಸಬೇಕು ಎಂದು ಕಟುವಾಗಿಯೇ ಹೇಳಿದರು.
ಏನೂ ಗೊತ್ತಿರದ ನಮಗೆ ಗಾಬರಿ. ವಿವರವಾಗಿ ಪರಿಶೀಲಿಸಿದಾಗ ಭಾಷೆ ಬಾರದೆಂಬ ಒಂದೇ ಕಾರಣಕ್ಕೆ ಅವರ
ಬಗ್ಗೆ ಅಸಭ್ಯವಾಗಿ ಮಾತನಾಡಿದ್ದರು. ಆ ಪಾದ್ರಿ ಪೋರ್ಚುಗೀಸರಾದರೂ ಅವರಿಗೆ ಕನ್ನಡ ಚೆನ್ನಾಗಿ
ಬರುವುದರಿಂದ, ನಮ್ಮ ಹುಡುಗರ ಕಪಿಚೇಷ್ಟೆ ಬಯಲಿಗೆ ಬಂದಿತ್ತು. ನಮಗೆ
ತಲೆತಗ್ಗಿಸುವಂತಾಯಿತು. ನಾವು ಕ್ಷಮೆ ಯಾಚಿಸಿದೆವು.
ಪ್ರವಾಸದ ಕೊನೆ ಹಂತದಲ್ಲಿ
ಎಲ್ಲ ಲೆಕ್ಕ ಪತ್ರ ಒಪ್ಪಿಸಿಲು ಎಲ್ಲರ ಸಭೆ ಕರೆಯಲಾಯಿತು. ಸುಮಾರು 1,000 ರೂ ಉಳಿತಾಯವಾಗಿರುವುದು ಕಂಡು
ಬಂತು. ಸಾಧಾರಣ ಶಾಲಾ ಪ್ರವಾಸಗಳಲ್ಲಿ ಉಳಿತಾಯದ ಪ್ರಶ್ನೆ ಬರುವುದೇ ಇಲ್ಲ. ಕಾರಣ ಎಲ್ಲರಿಗೂ ಗೊತ್ತು.
ಆದರೆ, ಪಾರದರ್ಶಕತೆಯ ಉದ್ದೇಶದಿಂದ ಸಂಗ್ರಹಿಸಲಾದ ಹಣ ಉಪನ್ಯಾಸಕರ
ಹತ್ತಿರವಿದ್ದು, ಇಬ್ಬರು ವಿದ್ಯಾರ್ಥಿಗಳಿಗೆ ಅದನ್ನು ಖರ್ಚು ಮಾಡುವ
ಹೊಣೆ ಮತ್ತು ಲೆಕ್ಕ ಇಡುವ ಜವಾಬ್ದಾರಿ ನೀಡಲಾಗಿತ್ತು. ಅವರು ಆ ಕೆಲಸವನ್ನು ತುಂಬ
ಪ್ರಾಮಾಣಿಕವಾಗಿ ನಿರ್ವಹಿಸಿದ್ದರು. ಹಣವನ್ನು ಹಿತಮಿತವಾಗಿ ಬಳಸಿ, ಅಪವ್ಯಯಕ್ಕೆ
ಅವಕಾಶವಿಲ್ಲದೆ ಸುಮಾರು ಸಾವಿರ ರೂಪಾಯಿ ಉಳಿಸಿದ್ದರು. ಉಳಿದ ಹಣ ಏನು ಮಾಡಬೇಕು ಎಂಬುದು ದೊಡ್ಡ
ಪ್ರಶ್ನೆಯಾಯಿತು. ಹಿಂದೆ ಶಿಕ್ಷಕರು ಉಚಿತವಾಗಿ ಪ್ರವಾಸ ಮಾಡುತ್ತಿದ್ದರು. ಈ ಬಾರಿ ಅವರೂ ಸಹ
ಪ್ರಯಾಣದ ವೆಚ್ಚ ನೀಡಿದ್ದರಿಂದ ಅದನ್ನು ಅವರಿಗೆ ವಾಪಸು ಮಾಡಬೇಕೆಂಬ ಸಲಹೆ ಬಂದಿತು. ಆದರೆ,
ಬಹುತೇಕ ಉಪನ್ಯಾಸಕರು ಅದನ್ನು ಬೆಂಬಲಿಸಲಿಲ್ಲ. ಇಲ್ಲವಾದರೆ ಉಳಿತಾಯವನ್ನು
ಎಲ್ಲರಿಗೂ ಸಮಾನವಾಗಿ ಹಂಚಬೇಕು ಎಂದು ಕೆಲವರು ವಾದಿಸಿದರು.
ಆದರೆ, ವಿದ್ಯಾರ್ಥಿಗಳು ಪ್ರವಾಸದ ಯಶಸ್ಸಿನ
ಖುಷಿಯಲ್ಲಿದ್ದರು. ಅಲ್ಲದೇ, ಆ ಹಣವನ್ನು ಎಲ್ಲರಿಗೆ ಹಂಚಿದರೆ
ಪ್ರತಿಯೊಬ್ಬರಿಗೆ ಅಂತಹ ದೊಡ್ಡ ಮೊತ್ತವೇನೂ ಸಿಗುತ್ತಿರಲಿಲ್ಲ. ಅದರ ಬದಲು ಶಾಲೆಗೆ
ಅಗತ್ಯವಿದ್ದ ವಸ್ತು ನೀಡಬಹುದೆಂದು ಒಮ್ಮತಕ್ಕೆ ಬರಲಾಯಿತು. ನಮ್ಮ ಶಾಲೆ ಊರ ಹೊರಗೆ ಇದ್ದಿತು.
ವಿಶಾಲವಾದ ಪರಿಸರದಲ್ಲಿದ್ದರೂ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಜವಾನರು ಕೊಡದಲ್ಲಿ ತಂದು ಹಿತ್ತಾಳೆಯ ಟ್ಯಾಂಕುಗಳಲ್ಲಿ ತುಂಬುತ್ತಿದ್ದರು. ಆದರೆ,
ಅದು ಯಾವ ಮೂಲೆಗೂ ಆಗದು. ವಿಶೇಷವಾಗಿ ಮಧ್ಯಾಹ್ನದ ಬಿಡುವಿನಲ್ಲಿ, ಊಟದ ಸಮಯದಲ್ಲಿ ನೂರಾರು ಹುಡುಗರು ಒಟ್ಟಿಗೆ ಬರುತ್ತಿದ್ದರು. ದಾಹ ತೀರಿಸಲು
ಹಾಹಾಕಾರ. ಹುಡುಗರು ಹತ್ತಿರದಲ್ಲೇ ಇದ್ದ ಹಾಸ್ಟೆಲಿಗೆ ಹೋಗುತ್ತಿದ್ದರು. ಇಲ್ಲವೇ ಅಕ್ಕಪಕ್ಕದ
ಮನೆಯವರನ್ನು ಆಶ್ರಯಿಸುತ್ತಿದ್ದರು. ಆಗಿನ್ನೂ ಬಿಸ್ಲೇರಿ ಯುಗ ಅಂದರೆ, ನೀರು ಮಾರುವ ಕಾಲ ಬಂದಿರಲಿಲ್ಲ. ಹೀಗಾಗಿ ತುಂಬ ತೊಂದರೆ. ಪಟ್ಟಣ ಪಂಚಾಯ್ತಿಯಲ್ಲಿ
ನೀರು ಯಾವಾಗ ಬರುತ್ತದೆ ಎಂದು ಹೇಳುವ ಹಾಗಿಲ್ಲ. ವಿದ್ಯುತ್ತಿನ ಕಣ್ಣುಮುಚ್ಚಾಲೆ. ನೀರು
ಬಿಡುವವನು ಅವನಿಗೆ ಖುಷಿ ಬಂದಾಗ ಬಿಡುತ್ತಿದ್ದ. ಸಂಗ್ರಹಿಸುವ ವ್ಯವಸ್ಥೆ ಇಲ್ಲ. ಹೀಗಾಗಿ
ಸುಮಾರು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಕುಡಿಯುವ ನೀರಿಗೆ ಹಾಹಾಕಾರ. ಇದನ್ನು ನಿವಾರಿಸಲು
ಉಳಿಕೆ ಹಣವನ್ನು ದಾನ ಮಾಡಲು ಎಲ್ಲರೂ ಒಮ್ಮತದಿಂದ ಒಪ್ಪಿಕೊಂಡರು. ಒಂದು ದೊಡ್ಡ ಸಿಮೆಂಟ್
ನೀರಿನ ತೊಟ್ಟಿಯನ್ನು ನಿರ್ಮಿಸುವುದು, ಸುಮಾರು 6 ನಳಗಳನ್ನು ಜೋಡಿಸಿದರೆ ಸರಿ ಎಂದು
ತೀರ್ಮಾನಿಸಲಾಯಿತು. ಹೀಗೆ ಪ್ರವಾಸದಿಂದ ಕುಡಿಯುವ ನೀರಿನ ಪ್ರಯಾಸ ಪರಿಹಾರ ಆಗಬಹುದೆಂಬ ಸಂತಸ
ನಮ್ಮದಾಯಿತು.
ನಾಲ್ಕನೇ ದಿನ
ರಾತ್ರಿಯೆಲ್ಲ ಪ್ರಯಾಣಿಸಿ ಮುಂಜಾವಿನ ಹೊತ್ತಿಗೆ ಕಾಲೇಜಿನ ಬಂದಾಗ, ಸಿಡಿಲಿನಂಥ ಸುದ್ದಿ ಕಾದಿತ್ತು.
ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳು ಅವರ ಆದೇಶ ಮೀರಿ ನಾವು ಪ್ರವಾಸ ಹೊರಟ ವಿಷಯ
ವಿದಿತವಾಗಿತ್ತು. ಯಾರೋ ಟೆಲಿಗ್ರಾಂ ಮೂಲಕ ಅವರಿಗೆ ದೂರು ನೀಡಿದ್ದರು. ಅವರು ಬೆಂಕಿನವಾಬ.
ಹಿಂದಿನ ದಿನ ರಾತ್ರಿ ಬಂದು ಪ್ರವಾಸಿ ಮಂದಿರದಲ್ಲಿ ತಂಗಿದ್ದರು. ಮರುದಿನ ಬೆಳಿಗ್ಗೆ ವಿಚಾರಣೆ
ನಡೆಸಿ ತಪ್ಪಿತಸ್ಥರಿಗೆ ದಂಡಿಸುವರೆಂಬ ವದಂತಿ ದಟ್ಟವಾಗಿತ್ತು. ಮೊದಲೇ ಅಧಿಕಾರಿ ಶಿಸ್ತಿನ
ಸಿಪಾಯಿ. ಅವರ ಭೇಟಿ ಎಂದರೆ ಅಧಿಕಾರಿಗಳಲ್ಲಿ ನಡುಕ. ಹೊರಡುವ ಹೊತ್ತಿನ ತನಕ ಕಾರಿನ ಚಾಲಕನಿಗೂ
ಎಲ್ಲಿಗೆ ಹೋಗುವರು ಎಂದು ಹೇಳುತ್ತಿರಲಿಲ್ಲ. ಗುರುತರ ತಪ್ಪಿಗೆ ಅಮಾನತ್ತು, ಅನಧಿಕೃತ ಗೈರುಹಾಜರಿಗೆ ವೇತನಕಡಿತ. ಅವರು ಬರಹದಲ್ಲಿ ನೀಡಿದ್ದ ಆದೇಶವನ್ನು ಮೀರಿದ್ದೆವು.
ಅವರಿಗೆ ರೇಗಿ ಹೋಗಿರುವುದು ಸ್ವಾಭಾವಿಕ. ಜತೆಗೆ ಕೆಲವು ಪಿಸುಣರ ಒಗ್ಗರಣೆ. ವಾತಾವರಣ ಬಹಳ
ಬಿಸಿಯಾಗಿತ್ತು. ಪ್ರಾಶುಂಪಾಲರು ಪೂರ್ತಿ ತಣ್ಣಗಾಗಿದ್ದರು.
ಅಯ್ಯೋ ನಿಮ್ಮ ಮಾತು ಕೇಳಿ
ನಾನು ಕೆಟ್ಟೆ. ನಿವೃತ್ತಿ ಅಂಚಿನಲ್ಲಿರುವ ನನ್ನ ಗತಿ ಏನು? ಎಂಬುದು ಅವರ ಅಳಲು. ಇದೆಲ್ಲ ನನ್ನ ದುರಿಸಿನ ನಡೆಯ ಪರಿಣಾಮ
ಎಂಬುದು ಅನೇಕರ ಭಾವನೆ. ಆದದ್ದು ಆಗಿದೆ, ಪರಿಣಾಮ ಎದುರಿಸುವುದು
ಅನಿವಾರ್ಯ. ಕೈಕಾಲು ಕಳೆದುಕೊಳ್ಳುವುದು ಅರ್ಥಹೀನ ಎನಿಸಿ, ನಾನೇ
ಮುಂದಾಗಿ, ಸಾರ್ ಈ ಪ್ರವಾಸದ ಪೂರ್ಣ ಹೊಣೆ ನನ್ನದು. ಪರಿಣಾಮವನ್ನು
ನಾನೇ ಎದುರಿಸುವೆ. ಇದರ ಬಗ್ಗೆ ಚಿಂತಿಸಬೇಡಿ, ಎಂದು ಧೈರ್ಯ ಹೇಳಿದೆ.
ಮನೆಗೆ ಹೋಗುವಾಗ ಆಗಲೇ
ಬೆಳಗಾಗುತಿತ್ತು. ತುಸು ವಿರಾಮದ ನಂತರ ಸ್ನಾನ ಮಾಡಿ ಹೊರಟೆ. ಅವರಾಗಿ ಬಂದು ವಿಚಾರಣೆ
ನಡೆಸಿದಾಗ ಹೇಗಿದ್ದರೂ ಇದ್ದ ವಿಷಯ ಹೊರಬರಬಹುದು, ನಂತರದ ಪರಿಣಾಮ ಗೊತ್ತೇ ಇದೆ. ಅದರ ಬದಲು ನಾನೇ ಹೋಗಿ
ಅವರಿಗೆ ಖುದ್ದಾಗಿ ವಿಷಯ ನಿವೇದಿಸಿಕೊಳ್ಳುವುದೇ ಸರಿಯಾದ ಮಾರ್ಗ ಎನಿಸಿತು.
ಇನ್ನೊಬ್ಬ ಗೆಳೆಯರೊಡನೆ ಎಂಟು ಗಂಟೆಗೆ ಸರಿಯಾಗಿ ಪ್ರವಾಸಿ ಮಂದಿರಕ್ಕೆ ಹೋದೆ. ಹುಲಿಯ ಗುಹೆಗೆ ಹೋಗುವ ಮೊಲದಂತೆ ನನ್ನ ಎದೆ ಗುಂಡಿಗೆ ಬಡಿದು ಕೊಳ್ಳುತ್ತಿತು. ಅವರು ಅದೇ ತಾನೇ ಉಪಾಹಾರ ಮುಗಿಸಿ ಕುಳಿತಿದ್ದರು. ನಾನು ವಂದಿಸಿ ಪರಿಚಯ ಮಾಡಿಕೊಂಡೆ.
ಪ್ರಿನ್ಸಿಪಾಲರು ಇಲ್ಲವೇ
ಎಂದರು. ಇದ್ದಾರೆ ಸಾರ್ ಬರುತ್ತಾರೆ. ಆದರೆ, ಅವರು ತುಂಬ ಗಾಬರಿಯಾಗಿದ್ದಾರೆ. ತಮ್ಮ ಆದೇಶ ಪರಿಪಾಲಿಸದೇ
ಇರುವುದರಿಂದ ಭಯಭೀತರಾಗಿದ್ದಾರೆ ಎಂದೆ. ಶೈಕ್ಷಣಿಕ ಪ್ರವಾಸಕ್ಕೆ ಕರೆದುಕೊಂಡು ಹೋದವನು ನಾನು,
ತಮ್ಮನ್ನು ಕಾಣಲು ಬಂದೆ. ಅನುಮತಿ ನಿರಾಕರಿಸಿದರೂ, ಅದು
ಹೇಗೆ ಪ್ರವಾಸಕ್ಕೆ ಹೊರಟಿರಿ? ಇದು ತೀವ್ರ ಅಶಿಸ್ತು ಎಂದು
ಗುಡುಗಿದರು.
`ಸಾರ್,
ಪ್ರಾಂಶುಪಾಲರು ಪ್ರವಾಸ ರದ್ದುಗಳಿಸಲು ತಿಳಿಸಿದರು. ನಾನೇ ಒತ್ತಾಯ ಮಾಡಿ
ಅವರನ್ನು ಒಪ್ಪಿಸಿದೆ. ಕೊನೇ ಗಳಿಗೆಯಲ್ಲಿ ಆದೇಶ ಬಂದಿತು. ಬಸ್ಸು ಬಂದಾಗಿತ್ತು. ಪ್ರವಾಸ
ರದ್ದು ಮಾಡುವ ಅವಕಾಶವೇ ಇರಲಿಲ್ಲ. ದಯಮಾಡಿ ಕ್ಷಮಿಸಿ, ಏನಾದರೂ ಕ್ರಮ
ತೆಗೆದುಕೊಳ್ಳುವ ಹಾಗಿದ್ದರೆ ಅದಕ್ಕೆ ನಾನು ಮಾತ್ರ ಅರ್ಹ’ ಎಂದು
ವಿನಂತಿಸಿದೆ.
ಅವರ ಹುಬ್ಬು ಗಂಟು ತುಸು ಸಡಲಿಸಿದಂತೆ ಕಂಡಿತು. ಕಾಲೇಜು ಪ್ರಾರಂಭವಾದ ಮೇಲೆ 10.30ಕ್ಕೆ ಬರುವೆ ಯಾವುದಕ್ಕೂ ಅಲ್ಲಿ ವಿಚಾರಿಸೋಣ, ಎಂದರು.
ಈ ಪ್ರವಾಸದ ಉಳಿತಾಯದ
ಹಣದಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಯೋಜನೆಯಿದೆ. ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು
ತಾವೆ ಪರಿಹರಿಸಿಕೊಂಡಿದ್ದಾರೆ ಎಂದು ನಿವೇದಿಸಿದೆ. ಪ್ರತಿಕ್ರಿಯೆ ಬರಲಿಲ್ಲ. ಕಾಲೇಜಿಗೆ ಬಂದು
ಪ್ರಾಚಾರ್ಯರಿಗೆ ವಿಷಯ ತಿಳಿಸಿದೆ. ಬೀಸುವ ದೊಣ್ಣೆ ತಪ್ಪಿತಲ್ಲಾ ಎಂದು ನಿಟ್ಟುಸಿರಿಟ್ಟರು.
ಅಷ್ಟರಲ್ಲಿ ಅಧಿಕಾರಿಗಳ
ಸವಾರಿ ಆಗಮಿಸಿತು. ಎಲ್ಲರೂ ಕೈ ಕಟ್ಟಿಕೊಂಡು ನಿಂತೆವು. ಅನುಮತಿ ಇಲ್ಲದೆ ಪ್ರವಾಸ ಕ್ಕೆ
ಹೋದಿರೆಂದು ದೂರು ಬಂದಿದೆ ಎಂದರು
ಮತ್ತೆ ನಡೆದ ಸಂಗತಿ ಅವರ ಗಮನಕ್ಕೆ ತರಲಾಯಿತು.
ಅನುಮತಿ ಇಲ್ಲದೇ
ಹೋಗಬಾರದು. ಇನ್ನು ಮೇಲೆ ಸಾಕಷ್ಟು ಮುಂಚಿತವಾಗಿ ಮನವಿ ಸಲ್ಲಿಸಿ ಎಂದರು.
ನಮ್ಮೆಲ್ಲರ ಮನಸು
ನಿರಾಳವಾಯಿತು.
ನಾನು “ಸಾರ್ ಕುಡಿವ ನೀರಿನ ತೊಟ್ಟಿ
ಕಟ್ಟಿಸಲು ಗುತ್ತಿಗೆದಾರ ಬಂದಿದ್ದಾನೆ. ಎಲ್ಲ ಮಾತುಕತೆ ಮುಗಿದಿದೆ. ತಮ್ಮ ಅಮೃತಹಸ್ತದಿಂದ
ಗುದ್ದಲಿ ಪೂಜೆಯಾದರೆ ನಮಗೆಲ್ಲ ಸಂತೋಷ” ಎಂದೆ. ಸರಿ ಅರ್ಧ
ಗಂಟೆಯಲ್ಲಿ ನಾನು ಹೊರಡಬೇಕು ತಡಮಾಡದೆ ಸಿದ್ಧತೆ ಮಾಡಿ ಎಂದರು.
ತಕ್ಷಣ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು ನೀರಿನ ತೊಟ್ಟಿ
ನಿರ್ಮಿಸುವ ತಾಣದಲ್ಲಿ ಸಭೆ ಸೇರಿಸಿದ್ದಾಯಿತು. ಸಾಹೇಬರು ಗುದ್ದಲಿ ಪೂಜೆ ಮಾಡಿ, ಕುಡಿವ ನೀರಿನದು ಎಲ್ಲ ಕಡೆ ಸಮಸ್ಯೆ, ಎಲ್ಲವನ್ನೂ ಇಲಾಖೆಯ
ಮಾಡಲಾಗುವುದಿಲ್ಲ. ಅದನ್ನು ನೀವಾಗಿಯೇ ಪರಿಹರಿಸಿಕೊಂಡಿದ್ದಕ್ಕೆ ಇಲಾಖೆಗೆ ಸಂತೋಷವಾಗಿದೆ.
ನಿಮ್ಮ ಒಳ್ಳೆಯ ಕಾರ್ಯಕ್ಕೆ ಇಲಾಖೆಯಿಂದ ನೂರು ರೂಪಾಯಿ ಅನುದಾನ ಮಂಜೂರು ಮಾಡಿದೆ ಎಂದರು.
ಎಲ್ಲರೂ ಖುಷಿಯಿಂದ
ಚಪ್ಪಾಳೆ ತಟ್ಟಿದರು. ಇಲ್ಲದ ಉಸಾಬರಿ ಮಾಡಿದ ಇವನಿಗೆ ಗತಿ ಕಾಣಿಸುತ್ತಾರೆ ಎಂದು ಮನಸ್ಸಿನಲ್ಲಿ
ಮಂಡಿಗೆ ತಿನ್ನುತ್ತಿದ್ದವರಿಗೆ ನಿರಾಶೆಯಾಯಿತು. ಶಿಕ್ಷೆ ಅನುಭವಿಸಲು ಸಿದ್ಧನಾಗಿದ್ದ ನನಗೆ
ಅವರ ಹಾರೈಕೆಯಿಂದ ಹೆಚ್ಚು ಕೆಲಸ ಮಾಡಬೇಕೆಂಬ ಹುರುಪು ಹುಟ್ಟಿತು.
ಸುಮಾರು ಮೂರು ದಶಕಗಳ ಕಾಲ
ಸಾವಿರಾರು ಮಕ್ಕಳ ದಾಹ ತಣಿಸಿದ ನೀರಿನ ತೊಟ್ಟಿ ಇತ್ತೀಚೆಗೆ ಕಾಲೇಜಿನ ಮುಂದಿನ ರಸ್ತೆ
ಅಗಲೀಕರಣದ ಸಮಯದಲ್ಲಿ ಕಾಲೇಜಿನ ಕಾಂಪೌಂಡಿನೊಳಗೆ ಇದ್ದುದು ಹೊಸ ಕಾಂಪೌಂಡಿನ ಹೊರಗೆ ರಸ್ತೆ
ಬದಿಗೆ ಬಂದಿತು. ಆದರೂ ಇನ್ನೊಂದು ರೀತಿಯಲ್ಲಿ ಉಪಯುಕ್ತವಾಗಿದೆ. ನೀರು ಸಂಗ್ರಹಿಸುತಿದ್ದ
ತೊಟ್ಟಿ ಈಗ ಕಸ ಕಡ್ಡಿ ಹಾಕಲು ಬಳಕೆಯಾಗಿ ಶುಚಿತ್ವ ಕಾಪಾಡಲು ಸಹಾಯವಾಗಿದೆ.
|
Monday, August 20, 2012
ಹಿಡಿಯ ಬಂದವರು ಹಾರೈಸಿ ಹೋದರು
Subscribe to:
Post Comments (Atom)
No comments:
Post a Comment