Monday, August 20, 2012

ಹೀಗಿತ್ತು ನಮ್ಮೂರು


ಹಂ
ಪೆಯ ಹಾದಿಯಲ್ಲಿರುವ ನಮ್ಮ ಊರು ಹರಿಹರ ಕವಿ ಬರೆದ ರಗಳೆಯ ನಾಯಕ ನಾಯಕಿಯರಾದ ಮಲುಹಣ ಮಲುಹಣಿ ಎಂಬ ಯುವಪ್ರೇಮಿಗಳ  ತಾಣ ಎನ್ನುವರು. ಮಲುಹಣ ಎನ್ನುವುದು ಮಲಪನ ಗುಡಿ ಎಂದಾಗಿದೆ  ಎನ್ನುವರು. ಐತಿಹಾಸಿಕವಾಗಿ ಮಲ್ಲಯ್ಯನಾಯಕನ ಊರು ನಮ್ಮದು  ಎನ್ನಲಾಗಿದೆ. ನಮ್ಮಲ್ಲಿರುವ ನಾಲಕ್ಕು ಶತಮಾನ ಹಳೆಯದಾದ ಮಲ್ಲಿಕಾರ್ಜುನ ಗುಡಿಯೂ ಅಷ್ಟೇನು ಕಲಾಪೂರ್ಣವಾಗಿರದಿದರೂ ಬೃಹತ್ತ ಕಲ್ಲಿನ ವಿಜಯನಗರದ ಕಾಲದ ರಚನೆ. ಅದರ ಸುತ್ತಲೂ ಇರುವ ಕೋಟೆಯನ್ನು ಹೋಲುವ ಪ್ರಾಕಾರ ಇಂದಿಗೂ ಸುಭದ್ರ. ಊರ ಬರುವ ಮೊದಲೆ ಕಲ್ಲಿನಲ್ಲಿ ವಿಶಾಲವಾದ ಜಲಗರವಿದೆ. ಅದು ಬಹು ಕಲಾತ್ಮಕವಾಗಿದ್ದು ಅದನ್ನು ಸೂಳೆಬಾವಿ ಎನ್ನುವರು. ಊರ ಎರಡೂ  ಕೊನೆಯಲ್ಲಿ ಕಡೆ ಅಗಸಿ. ಅಂದರೆ ಕಲ್ಲಿನ ಬೃಹತ್‌ ಮಂಟಪಗಳು. ಈಗ ಹೆದ್ದಾರಿಯಲ್ಲಿ ವಾಹನ ಶುಲ್ಕಸಂಗ್ರಹಿಸುವ ಮಾದರಿಯ ಪುರಾತನ ರಚನೆಗಳು. ಅವುಗಳ ಮೂಲಕ ಹಿಂದೆ ರಥ ಆನೆ ಕುದುರೆ ಹೋಗುತಿದ್ದರೆ ಈಗ ಬಸ್‌ ಕಾರು ಚಲಿಸುವವು. ಊರ ಮಲ್ಲಿಕಾರ್ಜನನ ಸೇವೆಗೆ ಸಾಕಷ್ಟು ಭೂಮಿಯ ಕೊಡುಗೆ ಹಿಂದಿನಿಂದಲೂ ಇದೆ. ಅದರಿಂದ ಪೂಜೆ ಪ್ರವಚನ ಸಾಂಗವಾಗಿ ಸಾಗತಿದ್ದವು. ಆದರೆ ದೇವರಾಜ ಅರಸರ ಭೂ ಸುಧಾರಣೆ ನಮ್ಮಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ಬಂದಿತು. ಉಳುವವನೆ  ಹೊಲದೊಡೆಯನಾದ. ಮಲ್ಲಿಕಾರ್ಜುನನು ತನ್ನ ವಾಹನ ನಂದಿಯನ್ನು ನೇಗಿಲಿಗೆ ಹೂಡುವ ಹಾಗಿಲ್ಲವಲ್ಲ. ಹಾಗಾಗಿ ದೇವರ ಗದ್ದೆಯನ್ನು  ಸಾಗುಮಾಡುವವರೆ ಫಾರ್ಮ ನಂಬರ್‌ ಏಳು ಹಾಕಿ ಉಳುವವರೆ ನೆಲದೊಡೆಯರಾದರು. ನಂತರ ಹೇಳುವುದೇನು ದೇವರು ಅನಾಥನಾದ. ದೀಪಕ್ಕೆ ದಿಕ್ಕಿಲ್ಲದಾಗಿದೆ.
ಬಹಳ ಕಾಲದವರೆಗೆ ಊರಲ್ಲಿ ಮದುವೆ, ಮೊದಲಾದ ಸಾರ್ವಜನಿಕ ಸಮಾರಂಭಗಳಾದರೆ ಅಲ್ಲಿಯೆ ಅಡುಗೆ ಊಟ. ನಾಟಕಗಳು ಗುಡಿಯ ಪಕ್ಕದಲ್ಲಿನ ಜಾಗವನ್ನೆ ಥೇಟರ ಆಗಿ ಬಳಸಿಕೊಳ್ಳುತ್ತಿದ್ದವು. ವೃತ್ತಿ ನಾಟಕ ಕಂಪನಿಗಳು ಅದರ ಉಪಯೋಗ ಪಡೆಯುತಿದ್ದವು. ದೇಗುಲದ ಹಿಂಭಾಗದಲ್ಲಿದ್ದ ಮಂಟಪವೆ ರಂಗಮಂದಿರ. ಆಗ ಬಳಸುತ್ತಿದ್ದ ರಂಗ ಸಜ್ಜಿಕೆಗಳು ಬಹು ಮಿತ. ಒಂದು ಪರೆದೆ ರಸ್ತೆ ದೃಶ್ಯವಾಗಿದ್ದರೆ ಇನ್ನೊಂದು ಕಾಡು, ತೋಟ. ಕುರ್ಚಿಗಳ ಕಾಟ ಇಲ್ಲ. ಗಣ್ಯರಿಗೆ ಜಮಕಾನ ಉಳಿದವರಿಗೆ ಚಾಪೆ. ಇಲ್ಲದಿದ್ರೆ ಹಾಸು ಬಂಡೆಗಳಂತೂ ಇದ್ದೆ ಇದ್ದವು. ಊರ ಗೌಡರಿಗೆ  ಮಾತ್ರ ಅವರು ಬರುವಾಗ ಮನೆಯಿಂದ ಮರದ ಕುರ್ಚಿಯನ್ನು ಅವರ ತಳವಾರನೆ ತಂದು ಹಾಕಿ ಪುನಃ ವಾಪಸ್ಸು ಒಯ್ಯುತಿದ್ದ.
ಅಲ್ಲಿ ಆಡಿದ್ದ ಉತ್ತರಭೂಪ ಮತ್ತು ಶಿವ ಜಲಂಧರ, ಕಡ್ಲಿಮಟ್ಟಿ ಸ್ಟೇಷನ್‌ ಮಾಸ್ತರ್‌ ಮತ್ತು ಹೇಮರೆಡ್ಡಿ ಮಲ್ಲಮ್ಮ ಇನ್ನೂ ಮನದಲ್ಲಿ ಹಸಿರಾಗಿದೆ.
ನಮ್ಮ ಊರಿನಲ್ಲಿ ಹಾಲು ಮತದವರೆ ಬಹಳ. ದಲಿತರನ್ನ ಬಿಟ್ಟರೆ ಉಳಿದ ಜನಾಂಗದವರದು ಬೆರಳೆಣಿಕೆಯ ಮನೆಗಳು. ಅದರಿಂದ ನನ್ನ ಬಾಲ್ಯವೆಲ್ಲ ಅವರ ಒಡನಾಟದಲ್ಲೆ ಆಯಿತು. ನನ್ನ ಮಾತು ಬಹುಕಾಲ ಗ್ರಾಮ್ಯ ಛಾಯೆಯಿಂದ ಹೊರಬಂದಿರಲಿಲ್ಲ. ಅದರಿಂದ ಅಂದಿನ ಸಮಾಜದ ಪರಿಚಯ ಬಹು ಹತ್ತಿರದಿಂದ ಆಯಿತು. ಕುರುಬ ಗಡ್ಡಿಯಲ್ಲಿ ಉಣ್ಣೆ ಕಂಕಣ ಮತ್ತು ಹತ್ತಿ ಕಂಕಣ ಎಂಬ ಎರಡು ಪಂಗಡಗಳಿದ್ದರೂ ಸಾರ್ವಜನಿಕ ಕಾರ್ಯಕ್ಕೆ ಎಲ್ಲರೂ  ಒಂದಾಗುತಿದ್ದರು. ಊರಿನಲ್ಲಿ ಯಾವುದೆ ಸಮಸ್ಯೆ ಬರಲಿ ಅದನ್ನು ಕುಲಸ್ಥರೆಲ್ಲ ಕೂಡಿ ಬಗೆಹರಿಸುವರು. ಪಂಚರ ಮಾತೆ ಪ್ರಮಾಣ. ಅದನ್ನು ಎಲ್ಲರೂ ಪಾಲಿಸಲೆಬೇಕಿತ್ತು. ಕುರುಬಗೌಡನ ಮಾತು ಎಂದರೆ ಅದಕ್ಕೆ ಎದುರೆ ಇಲ್ಲ.  ಅದರ ತೂಕ ಹಾಗಿರುತಿತ್ತು. ಮದುವೆಯಾಗಬೇಕೆಂದರೆ ಅದು ಹಿರಿಯರ ಸಮ್ಮುಖದಲ್ಲೆ ಆಗಬೇಕು. ಸಂಬಂಧ ಕುದುರಿದರೆ ವೀಳ್ಯ ಶಾಸ್ತ್ರ ಮಾಡುವರು. ಹುಡುಗಿಯ ಮತ್ತು ಹುಡುಗನ ಊರಿನ ಹಿರಿಯರು ಎಲೆ ಅಡಿಕೆ ಬದಲಾಯಿಸಿಕೊಂಡರೆ ಅದುವೆ ಮದುವೆಗೆ ರಹದಾರಿ.
ಲಗ್ನದ ಕೆಲಸಕ್ಕೂ ಕುಲಸ್ಥರೆ ಮುಂದು. ಮದುವೆ ಇನ್ನೂ ಒಂದು ವಾರವಿದೆ  ಎನ್ನುವಾಗಲೆ ಐದಾರು ಜನರಿಗೆ ಕಂಕಣ ಕಟ್ಟುವರು. ಅದಕ್ಕೂ ಒಂದು ಅರ್ಹತೆ ಇರವುದು. ಅವರು ಯಾರೂ ಒಂಟಿಗಳಾಗಿರಬಾರದು. ಹೆಂಡತಿ ಸತ್ತವರು, ಬಿಟ್ಟವರು, ಮರು ಮದುವೆಯಾದವರು ಮತ್ತು ಎರಡು ಮದುವೆಯಾದವರು ಈ  ಕೆಲಸಕ್ಕೆ ಬರುವುದಿಲ್ಲ. ಮದುವೆ ಚಪ್ಪರ ಹಾಕುವುದರಿಂದ ಹಿಡಿದು ನೀರು ಹೊರುವುದು, ಅಡುಗೆ ಮಾಡಿ ಬಡಿಸುವವರೆಗೆ ಅವರದೆ ಹೊಣೆ. ಜತೆಗೆ ಇತರರೂ ಇರುವರು. ಅಡುಗೆಯೂ ಹೆಚ್ಚೇನಿಲ್ಲ. ಅನ್ನ, ಸಾರು, ಬದನೆಕಾಯಿ ಪಲ್ಯ ಮತ್ತು ಹುಗ್ಗಿ. ಬಂದವರೆಲ್ಲ ಉಂಡು ಹೋಗುವರು. ಬಡಿಸಲು ಬೇರೆ ಜಾಗ ಬೇಕಿರಲಿಲ್ಲ. ಅಕ್ಕಪಕ್ಕದ ಮನೆಗಳು ಮತ್ತು ಒಂದಕ್ಕೊಂದು ಹೊಂದಿಕೊಂಡಿರುವ ಮಾಳಿಗೆಯ ಮಾಲೆ ಕೂಡ್ರಿಸಿ ಬಡಿಸುವರು. ಒಬ್ಬೊಬ್ಬರಿಗೆ ಒಂದು ಎಲೆ ಎಂಬ ಕಡ್ಡಾಯವಿಲ್ಲ. ಒಂದೆ ಎಲೆಯಲ್ಲಿ ಇಬ್ಬರು ಮೂವರು ಕೂತು ಒಟ್ಟಾಗಿ ಉಣ್ಣುವುದೂ ಇತ್ತು.
ಸಾಧಾರಣವಾಗಿ ಗಂಡಿನ ಮನೆಯಲ್ಲೆ ಮದುವೆ. ವರದಕ್ಷಿಣೆ ಮಾತೆ ಇಲ್ಲ. ಒಂದೊಂದು ಸಲ ತೆರ ಕೊಟ್ಟು  ಹೆಣ್ಣು ಪಡೆಯುತಿದ್ದರು. ಹೆಣ್ಣಿನ ಕಡೆಯವರು ಮದುವೆ ಸಮಯಕ್ಕೆ ಗಾಡಿ ಕಟ್ಟಿಕೊಂಡು ತಮ್ಮವರ ಸಮೇತ ಬಂದರೆ ಸಾಕಿತ್ತು. ಹೆಣ್ಣಿಗೆ ವಾಲೆ, ಮುಗಬಟ್ಟು, ಬುಗುಡಿ, ಬೆಳ್ಳಿ ಕಾಲುಕಡಗ, ನಡುಪಟ್ಟಿ ಮತ್ತು ತಾಳಿ ಬೊಟ್ಟು ಮದುವೆ ಸೀರೆ ಹಾಕುವರು. ಹುಡುಗನಿಗೆ ಪಂಚೆ, ವಲ್ಲಿ ಅಂಗಿ ಎಲೆವಸ್ತ್ರ. ಅಂದರೆ ಕೆಂಪು ಮುಂಡಾಸು. ಮದುವೆ ಕಾರ್ಯಕ್ಕೆ ಕಂಬಳಿ ಮತ್ತು ಹಾಲಿನ ಧಾರೆಯದೆ ಪ್ರಮುಖ ಪಾತ್ರ. ಮದುವೆಯಾದ ದಿನವೆ ಹುಡುಗಿಯನ್ನು ತವರಿಗೆ ಕರೆದುಕೊಂಡು ಹೋಗುವರು. ಅವಳು ವಯಸ್ಸಿಗೆ ಬರುವವರೆಗೆ ಬೇರೆ ಬೇರೆ ಇರುವರು. ಕಾರಣ ಸಾಮಾನ್ಯವಾಗಿ ಬಾಲ್ಯವಿವಾಹಗಳೆ ಹೆಚ್ಚು.
ಉಡುಕೆಯಾಗಲಿ, ಬಿಡಕೆಯಾಗಲಿ ಪಂಚರ ಸಮಕ್ಷಮ ಆಗುವುದು. ಗಂಡ ಸತ್ತವರನ್ನು ಇಲ್ಲವೆ ಗಂಡ ಬಿಟ್ವವರನ್ನು ಮದುವೆಯಾಗುವುದಕ್ಕೆ ಸೀರೆ  ಉಡಿಸುವುದು ಎನ್ನುವರು. ಅನೈತಿಕತೆ ಆರೋಪ ಬಂದರೆ ಅದನ್ನು ಅಷ್ಟೇನೂ    ತೀವ್ರವಾಗಿ ಪರಿಗಣಿಸುತ್ತಿರಲಿಲ್ಲ. ಮಣ್ಣುತಿನ್ನದ ಬಾಯಿ ಯಾವುದು, ಎಂದು  ಸಮಾಧಾನ ಹೇಳಿ ದಂಡ ಹಾಕಿ ಒಂದು ಮಾಡುವರು. ಆಸ್ತಿ ಹಂಚಿಕೆ, ಭೂವ್ಯಾಜ್ಯ, ಸಾಲ ತಿರುವಳಿ ಎಲ್ಲ ಇಲ್ಲಿಯೆ ಫೈಸಲ್.
ಸಾವಿನ ಸಮಯದಲ್ಲಂತೂ ಸುದ್ದಿ ತಿಳಿದರೆ ಸಾಕು ಬಂದು ಸೇರುವರು.  ದೇಹವನ್ನು ಒಪ್ಪ ಮಾಡುವವರೆಗೆ ಅಲ್ಲಿಂದ ಕದಲುತ್ತಿರಲಿಲ್ಲ. ಸಾವಿಗೆ ಮಾತ್ರ  ಹಿರಿಯರು ತಪ್ಪಿಸುತ್ತಿರಲಿಲ್ಲ. ಅದನ್ನು ಶಿವನ ಬಿಟ್ಟಿ ಎಂದು  ಕರೆಯುತಿದ್ದರು.
ಕುರುಬರೆ ಆದರೂ ಕುರಿ ಕಡಿಯುವುದು ಕಡಿಮೆ. ಕೋಳಿ ಸಾರು ಆಗೀಗ ಮಾಡಿದರೂ ಬ್ಯಾಟಿ ಕಡಿಯುವುದು ಹಬ್ಬದ ದಿನಗಳಲ್ಲೆ. ಉಗಾದಿ, ಮಾರ್ನವಮಿ, ಜಾತ್ರೆ, ಮದುವೆ ದಿನ ಸಿಹಿ ಊಟ. ಆದರ ಮಾರನೆದಿನ  ಬಾಡೂಟ.. ಅಂದು ಕುರಿ ಕಡಿದು ಹಂಚಿಕೊಳ್ಳುವರು. ಮಾಂಸವನ್ನು  ಸಮಪಾಲು ಮಾಡುವರು. ಅದಕ್ಕೆ ತಕ್ಕಂತೆ ದುಡ್ಡು ಕೊಡುವರು. ಅದರೆ  ಯಾರ ಮಂದೆಯಿಂದ ಕುರಿ ಬಂದಿರುವುದೋ ಅವರಿಗೆ ತಲೆಯ ಮಾಂಸ ಮತ್ತು ಕುರಿ ಕಡಿದು ಚರ್ಮ ಸುಲಿದು ಒಪ್ಪಮಾಡಿದವರಿಗೆ ಅದರ ಚರ್ಮ ಕೊಡಲಾಗುತಿತ್ತು. ಕಾರಣ ಆ ಕೆಲಸ ಮಾಡಲು ಎಲ್ಲರಿಗೂ ಬರುತ್ತಿರಲಿಲ್ಲ.
ಊರಿನಲ್ಲಿ ಗದ್ದಲ ಇದ್ದೆ ಇರುತಿತ್ತು. ಅವರ ದನ ಇವರ ಹೊಲ ನುಗ್ಗಿತು, ಬದುವನ್ನು ಒತ್ತುವರಿ ಮಾಡಿದ, ನೆಲ್ಲು ಉಜ್ಜಿಕೊಂಡು ಹೋದ, ರಾಶಿ ತುಡುಗು ಮಾಡಿದ, ತೆನೆ ಕೊಯ್ದುಕೊಂಡ ಹೋದ, ಬಣವೆಗೆ ಬೆಂಕಿ ಬಿತ್ತು, ಹುಲ್ಲು ಕದ್ದ ಹೀಗೆ ದೂರುಗಳು ಬಂದಾಗ ಅವನ್ನು ಬಗೆಹರಿಸುವದು ಪಂಚರ ಕೆಲಸ. ಅವರು ದೂರು ಕೇಳಿ ವಿಚಾರಣೆ ನಡೆಸಿ ತಪ್ಪು ದಂಡ ಹಾಕಿ ಎಚ್ಚರಿಕೆ ನೀಡುವರು. ಅದು ಎಷ್ಟು ಸಾಮಾನ್ಯವಾಗಿತ್ತೆಂದರೆ "ಹಾರವ ಮಾಡೋದು ಪಿಂಡಕ್ಕೆ, ಕುರುಬ ದುಡಿಯೋದು ದಂಡಕ್ಕೆ, ಸಾಬ ದುಡಿಯೋದು ಖಂಡಕ್ಕೆ" ಎಂಬ ಮಾತು  ಚಾಲ್ತಿಯಲ್ಲಿತ್ತು.
ದಿನನಿತ್ಯದ  ಜೀವನದಲ್ಲಿ ಸೌಮ್ಯರು ಯಾರ ಗೊಡವೆಗೂ ಹೋಗರು.    ಉದಾರಿಗಳು ಊಟಕ್ಕೆ ಕುಳಿತಾಗ ಮನೆ ಮುಂದೆ ಹಾದು ಹೋಗುವವರನ್ನು ಯಕ್ಕಾ ಬಾರಬೆ, ಎಣ್ಣಾ ಬಾ ಎಂದು ಕರೆಕರೆದು ಜತೆಗೆ ತಾವು ಊಟ ಮಾಡುತ್ತಿರುವ ಗಂಗಾಳದಲ್ಲೆ ಹಂಚಿಕೊಂಡು ಉಣ್ಣುವವರು. ಎಂಜಲು ಮುಸುರೆ ಎಂಬ ಎಗ್ಗಿಲ್ಲ. ಎಲ್ಲರೂ ನಮ್ಮವರೆ ಎಂಬ ಏಕೋ ಭಾವ.
ಆದರೆ ಅವರಿಗೆ ಅನ್ಯಾಯ ಆಗಿದೆ ಅನಿಸಿದರೆ ಸಾಕು ಹಿಂದು ಮುಂದೆ  ಯೋಚಿಸದೆ ಕಣಗ ಹಿಡದು ಹೊಡೆದದ್ದೆ ಬಂತು. ಅದೂ ಜಗಳ ದಾಯಾದಿಗಳಲ್ಲೆ ಹೆಚ್ಚು. ಯಣ್ಣಾ, ಮಾವ ಎಂದು ಕರೆದು ಊಟ ಮಾಡಿಸುತಿದ್ದವರೂ ಕೌರವ ಪಾಂಡವರಂತೆ ಹೊಡೆದಾಡುವರು.
ಅದೇಕೋ ನಮ್ಮ ಊರಿನವರಲ್ಲಿ ದುಡುಕಿನ ಈ ಗುಣ ಮೈಗೂಡಿಹೋಗಿತ್ತು. ಅದು ತನಗೆ ಸಂಬಂಧಿಸಿರಲಿ, ಬಿಡಲಿ ಗಲಾಟೆ ಆಗುತಿದ್ದರೆ ನುಗ್ಗಿದ್ದೆ  ಬಂತು. ಅಕ್ಕಪಕ್ಕದ ಊರುಗಳಲ್ಲಿ ನಮ್ಮವರ ಈ ದುಡುಕುತನಕ್ಕೆ ಬಹಳ ಭಯ ಬೀಳುತಿದ್ದರು. ಯಾವುದಾದರೂ ಗಾಡಿಯಡಿಯಲ್ಲಿ ಕೋಳಿ ಸಿಕ್ಕು ಸತ್ತರೂ ಎಲ್ಲರೂ ಸೇರಿ ಅವರನ್ನು ಹಣಿಯುವವರೆ. ನಮ್ಮ ಊರಿನ ಮಧ್ಯವೆ ಹಂಪೆಗೆ  ಹೋಗುವ ರಸ್ತೆ ಹಾದು ಹೋಗಿದೆ. ಹಾಗಾಗಿ ವಾಹನ ಸಂಚಾರ ಹೆಚ್ಚು. ಆಗ ನಡೆದ ಒಂದು ಘಟನೆ ಇನ್ನೂ ನನಗೆ ನೆನಪಿದೆ. ಹಂಪೆಗೆ ಯಾರೋ ಒಬ್ಬ ನ್ಯಾಯಾಂಗದ ದೊಡ್ಡ ಹುದ್ದೆಯಲ್ಲಿದ್ದ  ವ್ಯಕ್ತಿ ಕಾರಿನಲ್ಲಿ ಹೋಗುವಾಗ ಅಕಸ್ಮಾತ್ತಾಗಿ ಚಿಕ್ಕ ಅಪಘಾತವಾಗಿದೆ, ಯಾರಿಗೂ  ಏನೂ ಆಗಿಲ್ಲ. ಯಥಾರೀತಿ ನಮ್ಮ ಊರ ಜನ ಮುಕುರಿಕೊಂಡು ಕಾರಿನಲ್ಲಿದ್ದವರನ್ನು  ಹೊರಗೆ ಎಳೆದು ಹೊಡೆದಿದ್ದಾರೆ. ಅವರು ಏನೆ ಹೇಳಿದರೂ ಕೇಳಿಸಿಕೊಂಡಿಲ್ಲ. ಆಗಲೆ ಮುರುಸಂಜೆ ಹೊತ್ತು. ಅವರು ವಾಪಸ್ಸು  ಹೋಗಿ ದೂರು ಸಲ್ಲಿಸಿದ್ದಾರೆ. ಪೋಲಿಸರಿಗೆ ಮೊದಲೆ ನಮ್ಮೂರಿನ ಮೇಲೆ ಒಂದು ಕಣ್ಣು. ಈಗ ದೂರು ಸಲ್ಲಿಸಿದವರು ತೊಂದರೆಗೊಳಗಾದ ಅತ್ಯುನ್ನತ ಹುದ್ದೆಯಲ್ಲಿನ ವ್ಯಕ್ತಿ. ಸುದ್ದಿ ತಿಳಿದೊಡನೆ ರಾತ್ರಿಯಲ್ಲೆ ಪೋಲಿಸರು ವ್ಯಾನಿನಲ್ಲಿ ಬಂದು ಕೈಗೆ   ಸಿಕ್ಕವರನ್ನೆಲ್ಲ ವ್ಯಾನಿನಲ್ಲಿ ಹಾಕಿಕೊಂಡು ರಾತ್ರಿ ಎಲ್ಲ ಆತಿಥ್ಯ ನೀಡಿದ್ದಾರೆ. ನಂತರ ಬಿಡುಗಡೆಯಾದರೂ ಅವರೆಲ್ಲ ಬಹುಕಾಲ ಕೋರ್ಟಿಗೆ ಅಲೆದಾಡಿ ಹೈರಾಣವಾದರು. ಈಗ ಆ ರೋಷಾವೇಶ ತುಸು ಕಡಿಮೆಯಾಗಿದೆ. ಚಿಕ್ಕಂದಿನಲ್ಲಿ ನನಗೆ ಕಣ್ಣಿಗೆ ಕಟ್ಟಿದಂತಿರುವ ನೋಟ ಎಂದರೆ ಹನ್ನೆರಡು ಗಂಟೆಯ ಹೊತ್ತಿಗೆ ಹೊಲದಲ್ಲಿ ಕೆಲಸ ಮಾಡುವವರು ಊಟ ಮಾಡುತಿದ್ದ ನೋಟ. ಬೆಳಗಿನ ಜಾವವೆ ಎದ್ದು  ರೊಟ್ಟಿ ಬಡಿದು ಎರಡು ರೊಟ್ಟಿ ಹುಣಚಿ ಚಟ್ನಿ ತಿಂದು ಬುತ್ತಿ ಕಟ್ಟಿಕೊಂಡು ಬದುಕಿಗೆ ಹೊರಡುವರು. ಬುತ್ತಿ ಎಂದರೆ, ಇದೆ  ಬೇಕು ಅಂತ ಇಲ್ಲ, ರೊಟ್ಟಿ, ಮುದ್ದೆ, ನವಣಕ್ಕಿ ಬಾನ, ಬಿಳಿಅಕ್ಕಿ ಅನ್ನ, ಸಂಗಟಿ, ನುಚ್ಚಕ್ಕಿ ಬಾನ ಯಾವುದಾದರೂ ಸರಿ. ಅದನ್ನೂ ಉಳ್ಳವರು ಸಿಲವರ ಟಿಫನಿಯಲ್ಲಿ ಒಯ್ಯುವವರು. ಸಿಲವರ ಎಂದರೆ ಬೆಳ್ಳಿ ಅಲ್ಲ, ಅಲ್ಯಮಿನಿಯಂ. ಉಳಿದವರು ಬಿಳಿ ಬಟ್ಟೆಯಲ್ಲೆ ಕಟ್ಟಿಕೊಂಡು ಹೋಗುವರು. ಸಾರು ಸಾಂಬಾರು ಇಲ್ಲವೆ ಇಲ್ಲ. ಮಧ್ಯಾಹ್ನ ಹೊತ್ತು ತಿರುಗಿದ ಮೇಲೆ ಎಲ್ಲರೂ ಒಟ್ಟಿಗೆ ಮರದಡಿಯಲ್ಲಿ, ಇಲ್ಲವೆ ಕಾಲವೆ ಬದಿಯಲ್ಲ ಕುಳಿತುಕೊಳ್ಳುವರು. ಒಂದು ದೊಡ್ಡ ಒಲ್ಲಿ ಹರಡಿ ಅದರಲ್ಲಿ ಎಲ್ಲರ ಬುತ್ತಿಯನ್ನೂ ಹಾಕುವರು. ಯಾವುದೆ ಭಿನ್ನ ಭೇದವಿಲ್ಲದೆ ಸುತ್ತಲೂ ಕುಳಿತು ಎಲ್ಲರೂ ನಗುತ್ತಾ ಕಲೆಯುತ್ತಾ ಕೈ ಹಾಕುವರು, ನಂತರ ಕುವಾಡ ಮಾಡುತ್ತಾ ಹೆಂಗಸರ ಹತ್ತಿರವಿರುವ ಎಲೆ ಅಡಿಕೆ ಸಂಚಿಯಿಂದ ಅಡಕೆ ಕೇಳಿ ಪಡೆದು ಹರಟುವರು. ಕೆಲವು ಹೆಂಗಸರು ನಶಿ ಪುಡಿಯಿಂದ ಹಲ್ಲನ್ನು ತಿಕ್ಕವವರೂ ಇದ್ದರು. ಹೀಗೆ ಖುಷಿ ಖುಷಿಯಾಗಿ ಅರ್ಧ ಮುಕ್ಕಾಲು ತಾಸು ಕಾಲ ಕಳೆದು ಮತ್ತೆ ಕೆಲಸ ಶುರುಮಾಡುವರು. ನಾಟಿ ಮಾಡುವ ಸಮಯದಲ್ಲಂತೂ ಬಗ್ಗಿಸಿದ ನಡು ಎತ್ತದೆ ಇದ್ದರೂ ಹಾಡಿನ ಸೊಲ್ಲಿಗೆ ದನಿಗೂಡಿಸುತ್ತಾ ಕೆಲಸ ಮಾಡುತಿದ್ದರೆ ಹೊತ್ತು ಕಂತಿದ್ದೆ ಗೊತ್ತಾಗುತ್ತಿರಲಿಲ್ಲ.
ಈಗ ಹೊಲಗಳೆಲ್ಲ ಸೈಟುಗಳಾಗಿವೆ, ಇಲ್ಲವೆ ಕಬ್ಬಿಣದ ಅದಿರು ತೆಗೆದು ಕುಳಿಗಳಾಗಿವೆ. ಗದ್ದೆಯ ಕೆಲಸಕ್ಕೆ ಬರುವವರೆ ಇಲ್ಲ. ಎಲ್ಲ ಪಟ್ಟಣದತ್ತ ಕಾಲು ಹಾಕುತಿದ್ದಾರೆ. ಎಲ್ಲ ಹೋಟೆಲಿನ ತಿಂಡಿಗೆ ಹಲ್ಲು ಹತ್ತಿದ್ದಾರೆ. ರೊಟ್ಟಿ ಮುದ್ದೆ ತಿನ್ನುವುದನ್ನೂ ಮರೆತೆ ಬಿಟ್ಟಿದ್ದಾರೆ. ಊರಿಗೆ ಊರೆ ಬದಲಾಗಿದೆ. ಊರಿನ ಪ್ರವೇಶ ಮಾಡುವಾಗ ಹಾದಿಯ ಮಧ್ಯದಲ್ಲಿನ ಲಿಂಗಾಕಾರದ ಇಷ್ಟೆತ್ತರದ  ಗುಡ್ಡೆಕಲ್ಲು ಈಗ ನೆಲಮಟ್ಟಕ್ಕಿಂತ ಕೆಳಗಿಳಿದು ಗೋಕರ್ಣದ ಪಾತಾಳ ಲಿಂಗದಂತಾಗಿದೆ. ಇದು ಬದಲಾದ ಮೌಲ್ಯಗಳ ಸಂಕೇತವೆನಿಸುವದು. ಗುಡ್ಡೆ ಕಲ್ಲಿನ ಆಚೆಯೂ ಊರು ಮೂರು ಪಟ್ಟು ಬೆಳೆದಿದೆ.
ನಾಗರಿಕತೆಯ ಗಾಳಿ ಸೋಂಕಿದರೂ ಈಗಲೂ ಮಾತಿಗೆ ತಪ್ಪದವರು ಎಂದು ಹೆಸರಾಗಿದ್ದಾರೆ. ಹಳೆಯ ತಲೆಗಳಿಗೆ ನಿಯತ್ತು  ತುಸು ಮಟ್ಟಿಗೆ ಇದೆ. ಚುನಾವಣಾ ಸಮಯದಲ್ಲಿ ಕಂಬಳಿಯ ಮೇಲೆ ಕುಳಿತು ಹಾಲು ಮುಟ್ಟಿ ಪ್ರಮಾಣ ಮಾಡಿದರೆ ಬೇರೆ ಅಭ್ಯರ್ಥಿ ವೋಟು ಒಂದಕ್ಕೆ ಸಾವಿರದ ನೋಟು ಕೊಟ್ಟರೂ ಮಾತು ತಪ್ಪದವರು ಎಂಬ ಹೆಸರು ಉಳಿಸಿಕೊಂಡಿದ್ದಾರೆ.

No comments:

Post a Comment