Monday, August 20, 2012

ಕೊಳ್ಳಿದೆವ್ವಗಳ ಕಾಟ!


ಳ್ಳಿಯ ಕಡೆ ದೆವ್ವ, ಭೂತ ಪಿಶಾಚಿ, ಗಾಳಿಗಳಿಗೆ ದೇವರಿಗಿಂತ ಹೆಚ್ಚಿಗೆ ಭಯ ಪಡುವರು. ಆ ಬಗ್ಗೆ ನಾವು ಬಹಳ ಕಂಡು ಕೇಳಿದ್ದೆವು. ನಮ್ಮಲ್ಲಿ ದಕ್ಷಿಣ ಕನ್ನಡಜಿಲ್ಲೆಯಂತೆ ಭೂತಾರಾಧನೆ ಇಲ್ಲದಿದ್ದರೂ ದೆವ್ವದ ಕಾಟದ ಬಗ್ಗೆ ನಂಬಿಕೆ ಬಹಳ. ಅದರಲ್ಲೂ ಅರಳಿ ಮರದಲ್ಲಿ ಬ್ರಹ್ಮರಾಕ್ಷಸ, ಹುಣಿಸೆ ಮರ ದೆವ್ವಗಳ ಖಾಯಂ ನಿವಾಸ ಸ್ಥಳ ಎಂಬ ದೃಢವಾಗಿ ನಂಬಿಕೆ.. ಅಮವಾಸ್ಯೆ ಬಂದರೆ ಎಲ್ಲರಿಗೂ ರಾತ್ರಿಯ ಹೊತ್ತು ಅರಳಿ ಮರ, ಹುಣಿಸೆ ಮರದ ಕೆಳಗೆ ಹಾದು ಹೋಗಲೂ ಹೆದರಿ ಉಚ್ಚೆ ಹೊಯ್ದುಕೊಳ್ಳುವರು. ಆದಿತ್ಯವಾರ, ಅಮವಾಸ್ಯೆ ರಾತ್ರಿ ಮತ್ತು ಅರಳಿ ಮರ ಒಂದಾದರೆ ಬ್ರಹ್ಮರಾಕ್ಷಸನು ಖಂಡಿತ ಪ್ರತ್ಯಕ್ಷನಾಗುವನು ಎಂಬುದು ಎಲ್ಲ ಅಜ್ಜಿಯರು ಹೇಳುವ ಕಥೆಯ ಸಾರ. ಯಾರೂ ತಮ್ಮಲ್ಲಿದ್ದ ವಿದ್ಯಯನ್ನು ಶಿಷ್ಯರಿಗೆ ಮನಃಪೂರ್ವಕವಾಗಿ ಹೇಳಿಕೊಡುವುದಿಲ್ಲವೋ ಅವರು ಬ್ರಹ್ಮರಾಕ್ಷಸರಾಗುವರು ಎಂಬ ನಂಬಿಕೆ ಇತ್ತು. ಇನ್ನು ದೆವ್ವವಾಗುವವರು ಗಂಡಸರಿಗಿಂತ ಹೆಂಗಸರೆ ಜಾಸ್ತಿ. ಅದೂ ಮದುವೆಯಾಗದೆ ಹರೆಯದಲ್ಲಿ ಅಕಾಲ ಮರಣಕ್ಕೆ ತುತ್ತಾದವರು ದೆವ್ವವಾಗುವುದು ಹೆಚ್ಚು. ದೆವ್ವ ಹಿಡಿಯುವುದೂ ಹೆಚ್ಚಾಗಿ ಹಸಿ ಮೈಯವರಿಗೆ. ಅಂದರೆ ಹೊಸದಾಗಿ ಹರೆಯಕ್ಕೆ ಬಂದ ಹದಿಹರೆಯದ ಹುಡುಗಿಯರು, ಅದೆ ತಾನೆ ಹೆರಿಗೆಯಾದ ಬಾಣಂತಿಯರು, ಹೊಸದಾಗಿ ಮದುವೆಯಾದವರು. ಅದಕ್ಕೆ ಅವರನ್ನು ಮುರೊ ಸಂಜೆಯ ಹೊತ್ತಿನಲ್ಲಿ ಹೊರಗೆ ಹೋಗದಿರಲು ಹೇಳುತಿದ್ದರು. ಇನ್ನು ರಾತ್ರಿಯಾದರಂತೂ ದೆವ್ವ ಓಡಾಡುವ ಕಾಲ. ಅವರು ಒಬ್ಬರೆ ಮನೆ ಬಿಟ್ಟು ಕದಲುವ ಹಾಗಿರಲಿಲ್ಲ. ಆಗ ಅಂತೂ ನಾನು ಅದನ್ನೆಲ್ಲ ಅಕ್ಷರಶಃ ನಂಬಿದ್ದೆ. ದೆವ್ವಬಡಿದವರೂ ಆಡಿದ ಆಟ, ಆಡುವ ಮಾತು ನಮ್ಮಲ್ಲಿ ಅಚ್ಚರಿ ಹುಟ್ಟಿಸುತಿತ್ತು ಆ ಸಮಯದಲ್ಲಿ ನಯ ನಾಜೂಕಿಗೆ ಹೆಸರಾದ ಹುಡುಗಿಯರೂ ಸಹಾ ಅಪಾರ ಶಕ್ತಿ ಪ್ರದರ್ಶಿಸುತ್ತಿದ್ದರು. ಅವರನ್ನು ಹಿಡಿಯಲು ಒಬ್ಬರಿಂದ ಸಾಧ್ಯವೆ ಆಗುತ್ತಿರಲಿಲ್ಲ. ಹಿರಿಯರು ಗುರುಗಳು ಎಂಬ ಗೌರವವಿಲ್ಲದೆ ಮಾತನಾಡುತ್ತಿದ್ದರು. ಗಂಡನನ್ನು ಬೈಯುವರು. ಅತ್ತೆಯನ್ನು ಹೊಡೆಯುವರು. ಅರಪಾವು ಅನ್ನ ಉಣ್ಣುವ ಹುಡುಗಿ ಸೇರಕ್ಕಿ ಅನ್ನ ತಿಂದರೂ ಇನ್ನೂ ಬೇಕು ಎಂದು ಆರ್ಭಟಿಸಿದ್ದನ್ನೂ ನಾನು ನೋಡಿದ್ದೇನೆ. ಅದಕ್ಕೆ ಯಾರಾದರೂ ಅಳತೆ ಮೀರಿ ತಿನ್ನುವವರನ್ನು ನೋಡಿದರೆ ಅವನೇನು ದೆವ್ವ ತಿಂದಂತೆ ತಿನ್ನುವನು, ದಣಿವಿಲ್ಲದೆ ದುಡಿಯುವವರಿಗೆ ಅವನು ದೆವ್ವದಂತೆ ಕೆಲಸ ಮಾಡುವನು ಎಂಬ ಮಾತು ರೂಡಿಯಲ್ಲಿ ಬಂದಿದೆ. ದೆವ್ವ ಹಿಡಿದ ಅವಿದ್ಯಾವಂತೆಯು ಇಂಗ್ಲಿಷ್ ಮಾತನಾಡಿದ್ದು, ತಾನು ಹೋಗದೆ ಇದ್ದ ಊರಿನ ವಿವರ ಹೇಳಿದ್ದು ಉಂಟು. ಇದಕ್ಕೆಲ್ಲ ಮಂತ್ರ ಮಾಟ ಮಾಡಿ, ಯಂತ್ರ ಕಟ್ಟಿಸಿ ಭೂತೋಚ್ಛಾಟನೆ ಮಾಡಿಸುತ್ತಿದ್ದರು. ಕೊಳ್ಳೆಗಾಲದ ಮಾಂತ್ರಿಕರು, ಮಲೆಯಾಳಿ ಮಾಂತ್ರವಾದಿಗಳು ದೆವ್ವ ಬಿಡಿಸುವುದರಲ್ಲಿ ಎತ್ತಿದ ಕೈ. ಇನ್ನಂದು ವಿಶೇಷವೆಂದರೆ ಅವುಗಳಿಗೆ ದೇವರ ಸಾನಿಧ್ಯ ಸಹನೆಯಾಗುವುದಿಲ್ಲ. ಸಾಧ್ಯವಾದಷ್ಟೂ ದೂರವಿರಲು ಪ್ರಯತ್ನಿಸುತ್ತವೆ. ಕೆಲವು ದರಗಾಗಳ ಮುಲ್ಲಾಗಳು ದೆವ್ವ ಬಿಡಿಸುವುದರಲ್ಲಿ ಹೆಸರಾಗಿದ್ದರು. ನವಿಲುಗರಿಯ ಪಿಂಛಾದಿಂದ ಹೊಡೆಯುತ್ತಾ ಬೂದಿ ಊದಿದರೆ ಎಂಥಹ ದೆವ್ವವೂ ದಿಕ್ಕೆಟ್ಟು ಓಡುವುದು. ಇನ್ನೂ ಎರಡು ಸ್ಥಳಗಳು ದೆವ್ವ ಬಿಡಿಸಲು ತುಂಬ ಹೆಸರುವಾಸಿ. ಗುಲ್ಬರ್ಗಾ ಜಿಲ್ಲೆಯ ಗಾಣಗಾಪುರ ಮತ್ತು ದಾವಣಗೆರೆ ಜಿಲ್ಲೆಯ ಉಕ್ಕಡಗತ್ರಿ ಗಾಣಗಾಪುರದಲ್ಲಿ ದತ್ತಾತ್ರೇಯನ ಪೂಜಾ ಸಮಯದಲ್ಲಿ ಘಂಟಾನಾದ ಮತ್ತು ಚರ್ಮವಾದ್ಯಗಳ ಶಬ್ದ ಶುರುವಾದೊಡನೆ ಶಕೆ ಇರುವವರು ಓಲಾಡುವರು, ತಲೆಬಿರು ಹೊಯ್ದುಕೊಂಡು ಕುಣಿಯುವರು. ಕಂಬ ಹತ್ತುವರು. ಗಂಡು ಹೆಣ್ಣು ಎಂಬ ಭೇದವಿಲ್ಲ. ಅಸ್ತಿ ಅಂತಸ್ತುಗಳ ಪರಿವೆ ಇಲ್ಲ. ದೆವರ ತೀರ್ಥ ಮೈ ಮೇಲೆ ಹಾಕಿದಾಗ ಓಡುತ್ತಾ ನದಿ ತಟ ಸೇರಿ ನೀರಲ್ಲಿ ಬೀಳುವರು. ಅಲ್ಲಿಂದ ಎದ್ದ ಮೇಲೆ ಅವರಿಗೆ ಇದೆಲ್ಲದರ ಅರಿವೆ ಇರುವುದಿಲ್ಲ.
ಉಕ್ಕಡಗತ್ರಿಯ ಅಜ್ಜಯ್ಯನದೂ ಅದೆ ಪ್ರಬಾವ. ಆದಿತ್ಯವಾರ, ಅಮವಾಸ್ಯೆಯ ದಿನ ಅಲ್ಲಿ ಜನಜಾತ್ರೆ. ಪೂಜಾಸಮಯದಲ್ಲಿ ಮೈನಲ್ಲಿನ ಗಾಳಿ ಹೊರಹೊಮ್ಮುವುದು. ಅಲ್ಲಿಯೂ ಹತ್ತಿರದ ನದಿಯಲ್ಲಿ ಮುಳುಗಿ ಎದ್ದ ನಂತರ ಮಾಮೂಲಿನಂತಾಗುವುರು ಎಂಬ ನಂಬಿಕೆ. ಅಲ್ಲಿನ ವಿಶೇಷವೆಂದರೆ ಹಾಕಿದ್ದ ಚಪ್ಪಲಿ ಅಲ್ಲಿಯೆ ಬಿಡಬೇಕು. ಅಲ್ಲಿನ ರಾಸಿ ರಾಸಿ ಚಪ್ಪಲಿ ನೋಡಿದರೆ  ಸಾಕು, ಭೂತ ಪೀಡಿತರ ಪ್ರಮಾಣದ ಅರಿವಾಗುವುದು. ಆಗ ನಾನು ತೆರೆದ ಬಾಯಿಯಿಂದ ಅದನ್ನೆಲ್ಲ ನೋಡಿ ಆಶ್ಚರ್ಯಚಕಿತಾನಾದರೂ ಕ್ರಮೇಣ ಕಾರಣ ಹೊಳೆಯಿತು. ಇದು ಒಂದು ಮಾನಸಿಕ ಸಮಸ್ಯೆ. ದೈಹಿಕ ಬದಲಾವಣೆಯ ಸಂದರ್ಭದಲ್ಲಿ ದೇಹದ ಜೊತೆ ಮನಸ್ಸೂ ದುರ್ಬಲವಾಗಿರುವುದು. ಮನಕ್ಕೊಪ್ಪದ ಒತ್ತಾಯ, ಒತ್ತಡಗಳನ್ನು ಪ್ರತಿಭಟಿಸುವ ಪ್ರಕ್ರಿಯೆಯ ದೆವ್ವ ಹಿಡಿಯುವುದು. ಪುರುಷ ಪ್ರಧಾನ ಸಮಾಜದಲ್ಲಿ, ಕಾಟ ಕೊಡುವ ಅತ್ತೆಯರ ಕಾಲದಲ್ಲಿ, ದೇವರಿಗೆ ಹೆದರದವರು ದೆವ್ವಕ್ಕೆ ಭಯಪಡುವ ಸಮಯದಲ್ಲಿ ಅತೃಪ್ತ ಮನಸ್ಸು ಈ ರೀತಿ ಮಾಡುತಿತ್ತು ಎಂದು ನನ್ನ ಅನಿಸಿಕೆ. ಇದೂ ಒಂದು ರೀತಿಯ ಹಿಸ್ಟೀರಿಯಾ ಅಥವ ಮನೋವ್ಯಾಧಿ. ಇತ್ತೀಚೆಗೆ ಇವುಗಳ ಪ್ರಭಾವ ಕ್ಷೀಣ ವಾಗುತ್ತಿದೆ. ದೆವ್ವ ಹಿಡಿದಿದೆ ಅದನ್ನು ಬಿಡಿಸಬೇಕು ಎಂಬ ಮೂಢನಂಬಿಕೆ ಮಾಯವಾಗಿ ಮನೋವೈದ್ಯ ರಲ್ಲಿಗೆ ಕರೆದೊಯ್ಯುವರ ಸಂಖ್ಯೆ ಹೆಚ್ಚಿದೆ. ಆಪ್ತ ಸಲಹೆ ಮತ್ತು ಔಷಧಗಳಿಂದ ವಿಚಿತ್ರ ಮತ್ತು ಅಸಹಜ ನಡವಳಿಕೆಯನ್ನು ನಿಯಂತ್ರಿಸಬಹುದಾಗಿದೆ.
ಹುಡುಗರಾಗಿದ್ಧಾಗ ನಮ್ಮನ್ನು ಕಾಡಿದ್ದ ಎರಡು ಬಹುದೊಡ್ಡ ವಿಷಯ ಎಂದರೆ ಕೊಳ್ಳಿದೆವ್ವಗಳು ಮತ್ತು ಥಳ ಥಳನೆ ಕತ್ತಲ್ಲೂ ಹೊಳೆವ ನಾಗಮಣಿ. ನಾವುರಾತ್ರಿಯಲ್ಲಿ ನಮ್ಮ ಅಜ್ಜಿ ಸುತ್ತ ಕುಳಿತಾಗ ಅವಳು ಹೇಳುತಿದ್ದ ಕಥೆಗಳಲ್ಲಿ ಅವುಗಳ ಪ್ರಸ್ತಾಪ ಪದೇ ಪದೇ ಬರುತಿತ್ತು.ಹಾದಿ ಹೋಕರನ್ನು ಸರಿ ರಾತ್ರಿಯಲ್ಲಿ ಕೊಳ್ಳಿದೆವ್ವಗಳು ಹೇಗೆ ದಾರಿತಪ್ಪಿಸುವವು ಎಂಬುದನ್ನಂತೂ ಮನ ಮಟ್ಟುವಂತೆ ವರ್ಣಿಸುತ್ತಿದ್ದರು. ಕಗ್ಗತ್ತಲ ರಾತ್ರಿಯಲ್ಲಿ ಅರಿಯದ ಊರಿಗೆ ಬರುವ ಪ್ರವಾಸಿಗರೆ ಆ ಕೊಳ್ಳಿದೆವ್ವಗಳಿಗೆ ಹೇಳಿ ಮಾಡಿಸಿದ ಗುರಿ. ಆಗ ಬಹುತೇಕ ರಸ್ತೆಗಳಿಲ್ಲದ ಕಾಲ. ಬಂಡಿ ಜಾಡು ಇದ್ದರೆ ಬಹುದೊಡ್ಡದು. ಇಲ್ಲವಾದರೆ ಕಾಲುದಾರಿ  ಸಿಕ್ಕರೂ ಸಾಕಿತ್ತು.ಅನೇಕ ಸಾರಿ ಅದೂ ಕಾಣುತ್ತಿರಲಿಲ್ಲ. ನಕ್ಷತ್ರಗಳ ಬೆಳಕೆ ದಾರಿ ದೀಪ. ಮೋಡ ಮುಸುಕಿದರೆ ಅದೂ ಇಲ್ಲ. ಹಾಗಾಗಿ ಯಾರೆ ಆದರೂ ಕತ್ತಲಾಗುವ ಮುಂಚೆ ಗೂಡು ಸೇರತಿದ್ದರು. ಇಲ್ಲವಾದರೆ ಹತ್ತಿರದ ಹಳ್ಳಿಗೆ ಹೋಗಿ ಆಶ್ರಯ ಪಡೆಯುತಿದ್ದರು.
ಅವರ ಕಥೆಗೆ ಪ್ರತ್ಯಕ್ಷ ಪುರಾವೆ ಸಹ ಅವರ ಬಳಿ ಇದ್ದಿತು. ಅದು ಬೇರೆ ಯಾರು ಅಲ್ಲ. ಸಾಕ್ಷಾತ್ ನಮ್ಮ ತಾತನೆ. ಒಂದು ಸಾರಿ ನಮ್ಮ ತಾತನಿಗೆ ಅವುಗಳ ಪ್ರತ್ಯಕ್ಷ್ಯ ಅನುಭವವಾಯಿತಂತೆ. ಅವರಿಗೆ ಮದುವೆಯಾದ ಹೊಸದು. ಹೆಂಡತಿ ತೌರಿಗೆ ಹೋಗಿದ್ದಾಳೆ. ಆದೂ ಏನು ದೂರದ ಊರಲ್ಲ. ಮೂರು ಹರದಾರಿ ಇರಬಹುದು. ಅವರಿಗೆ ಇಳಿ ಹೊತ್ತಿಗೆ ಹೆಂಡತಿಯ ನೆನಪಾಗಿದೆ. ಹೆಂಡತಿಯನ್ನು ನೋಡ ಬೇಕೆಂದು. ಯಾರು ಏನು ಹೇಳಿದರೂ ಕೇಳದೆ ಇಲ್ಲೆ ಎರಡು ತಾಸಿನ  ಹಾದಿ ರಾತ್ರಿ ಮಲಗುವ ಮುನ್ನ ತಲುಪುವೆ ಎಂದು ಹೊರಟಿರುವರು. ಅವರಿಗ ಬೀಡಿ ಸೇದುವ ಚಟ ಇಲ್ಲ. ಅಂದ ಮೇಲೆ ಬೆಂಕಿ ಪೊಟ್ಟಣ ವೂ ಇಲ್ಲ. ಇನ್ನು ಬ್ಯಾಟರಿ ಮಾತೆಲ್ಲಿ. ಹತ್ತಾರು ಸಾರಿ ಓಡಾಡಿದ ಹಾದಿ. ಕಣ್ಣು ಕಟ್ಟಿ ಬಿಟ್ಟರೂ ಆ ಊರಿಗೆ ಹೋಗಿ ಮುಟ್ಟ ಬಲ್ಲೆ ಎಂಬ ಆತ್ಮ ವಿಶ್ವಾಸ.. ಹೊರಟೆ ಬಿಟ್ಟಿದ್ದಾರೆ. ಊರಿಂದ ಇನ್ನೂ ಹರದಾರಿ ಹೋಗಿಲ್ಲ ಕತ್ತಲು ಆವರಿಸಿದೆ. ಅಮವಾಸ್ಯೆಯು ಮುಂದಿದೆ. ಚಂದ್ರನ ಸುಳಿವಿಲ್ಲ. ಅಲ್ಲೊಂದು ಇಲ್ಲೊಂದು ಕಣ್ಣು ಮಿಟುಕಿಸುವ ನಕ್ಷತ್ರಗಳು. ತುಸು ದೂರ ಹೋದರೆ ಹೆಂಡತಿಯ ಊರಿನ ದೀಪ ಕಾಣುತ್ತದೆ ಅದರ ಜಾಡು ಹಿಡಿದು ಹೋದರಾಯಿತು ಎಂದು ಭರ ಭರನೆ ಸಾಗಿದ್ದಾರೆ. ತುಸು ದೂರ ಹೋದ ನಂತರ ಪಂಜಿನ ಬೆಳಕು ಕಂಡಿದೆ. ಆಗ ರಾತ್ರಿಯಲ್ಲಿ ದೂರ ಪ್ರಯಾಣ ಮಾಡುವವರು ಕೈನಲ್ಲಿ ಉರಿವ ಪಂಜು ಹಿಡಿದು ಹೊರಡುತಿದ್ದರು. ದಾರಿ ಕಾಣಲಿ ಎಂಬದಕ್ಕಿಂತ ಕಾಡು ಪ್ರಾಣಿಗಳು ಹತ್ತಿರ ಬರಬಾರದೆಂಬ ಮುನ್ನೆಚ್ಚರಿಕೆ. ಸರಿ, ತುಸು ಜೋರಾಗಿ ನಡೆದು ಅವರನ್ನು ಸೇರಿ ಕೊಂಡರೆ ಜತೆಯೂ ಆಗುತ್ತದೆ ಮಾತನಾಡುತ್ತಾ ಪ್ರಯಾಣದ ಆಯಾಸವೂ ಕಾಣುವುದಿಲ್ಲ ಎಂದು ಬಿರುಸಾಗಿ ಹೆಜ್ಜೆ ಹಾಕಿದ್ದಾರೆ. ಆದರೆ ಮುಂದಿರುವವನು ಇವರಿಗಿಂತ ಜೋರಾಗಿ ನಡೆದಿರುವಂತೆ ಕಾಣುತ್ತದೆ. ಇವರು ವೇಗ ಹೆಚ್ಚಿಸಿದಂತೆ ಅವನೂ ವೇಗ ಹೆಚ್ಚಿಸಿದ್ದಾನೆ. ಎಷ್ಟುಹೊತ್ತು ನಡೆದರೂ ಅವನನ್ನು ಹಿಡಿಯಲಾಗಿಲ್ಲ. ಅಲ್ಲೆ ಸಿಕ್ಕ ಕಲ್ಲಿನ ಮೇಲೆ ಕುಳಿತು ದಣಿವಾರಿಸಿಕೊಂಡಿದ್ದಾರೆ. ಪುನಃ ಅವನ ಬೆಳಕು ಕಂಡಿದೆ. ಇವರು  ಎದ್ದವರೆ  ಧಾವಿಸಿದ್ದಾರೆ. ಹೀಗೆ ಅನೇಕ ಬಾರಿ ಬೆನ್ನಟ್ಟಿದರೂ ಅವನು ಕೈಗೆ ಸಿಕ್ಕಿಲ್ಲ. ಕೊನೆಗೆ ಸುಸ್ತಾಗಿ ಅಲ್ಲೆ ಕುಳಿತಿದ್ದಾರೆ.ಚುಮುಚುಮು ಬೆಳಗಾಗಿದೆ. ತಂಗಾಳಿ ಬೀಸಿದೆ. ಕುಳಿತಲ್ಲೆ  ನಿದ್ರೆ ಮಂಪರು ತುಸು ಹೊತ್ತಿನ ನಂತರ ಎದ್ದು ನೋಡಿದಾಗ ರಾತ್ರಿಯೆಲ್ಲ ನಡೆದರೂ ಅವರು ಮೊದಲು ಹೊರಟ ಸ್ಥಳದಲ್ಲೆ ಇದ್ದಾರೆ. ಬರಿ ದಣಿವಾದದ್ದೆ ಬಂತು ಊರು ದೂರದಲ್ಲೆ ಇದೆ. ಆವರಿಗೆ ಆಗ ದಿಗ್ಭ್ರಭ್ರಮೆ ಯಾಗಿದೆ. ಮನೆಗೆ ಬಂದು ಹೇಳಿದಾಗ ಅವರ ಹಿರಿಯರು 'ಇದೆಲ್ಲ ಕೊಳ್ಳಿದೆವ್ವದ  ಆಟ . ಅದು ಹೀಗೆಯೆ  ಗೋಳಾಡಿಸುವುದು. ಆದರೆ ಏನೂ ಅಪಾಯ ಮಾಡದು, ಎಂದು ವಿವರಿಸಿದರಂತೆ. ದೇವರು ದೊಡ್ಡವನು. ಹೆಚ್ಚು ತೊಂದರೆ ಯಾಗಲಿಲ್ಲ. ಅಂದಿನಿಂದ ನಮ್ಮ ಅಜ್ಜ ಕತ್ತಲಾದ ಮೇಲೆ ಹೊರಗೆ ಕಾಲಿಡುತ್ತಿದ್ದಿಲ್ಲ', ಎಂದು ಅವರು ಕಥೆ ಮುಗಿಸುತ್ತಿದ್ದರು. ಯಾಕಜ್ಜಿ ತಾತ ಅಷ್ಟು ರಾತ್ರಿ ಹೊರಟಿದ್ದ? ಎಂದು ನಾವೆಲ್ಲ ಕೇಳಿದಾಗ ಸುಕ್ಕು ಬಿದ್ದ ಅವರ ಬಿಳಿಕೆನ್ನೆ ಕೆಂಪಾದಂತೆ ಕಂಡಿತು.
ಅದಕ್ಕೆ ಪುಟ ಕೊಡುವಂತೆ ರಾತ್ರಿಯ ಹೊತ್ತು ನಮ್ಮ ಮನೆಯ ಮಾಳಿಗೆಯ ಮೇಲೆ ಕುಳಿತಾಗ ನಮಗೆ ಅಗೀಗ ಅನತಿ ದೂರದಲ್ಲಿದ್ದ ಗುಡ್ಡಗಳ ಸಾಲಿನಲ್ಲ್ಲಿ ಮಿಣಮಿಣ ಮಿನುಗುವ ದೀಪ ಓಡಾಡಿದಂತೆ ಕಾಣುತಿತ್ತು. ನಾವು ಕೇಳಿದ ಕಥೆಗೂ ಕಾಣುತ್ತ ಇರುವ ನೋಟಕ್ಕೂ ತಾಳೆ ಹಾಕಿ ಅವೂ ಕೂಡಾ ಕೊಳ್ಳಿದೆವ್ವ ಇರಬಹುದು ಎಂದು ಕೊಳ್ಳತಿದ್ದೆವು. ಇದೆ ನಂಬಿಕೆ ನಾನು ವಿಜ್ಞಾನದ ಪದವಿ ಸೇರುವುವರೆಗೂ ಇತ್ತು. ಆಲ್ಲಿ ಗೊತ್ತಾಯಿತು. ಕುರುಚಲು ಕಾಡಿನಲ್ಲಿ ಜವಗು ಪ್ರದೇಶದಲ್ಲಿ ಮೀಥೇನ್ಅನಿಲ ಉತ್ಪಾದನೆ ಆಗುತ್ತದೆ. ಅದು ಕೆಲವು ಸಲ ಹತ್ತಿ ಉರಿಯುವುದು ಎಂದು.ಆಗ ಈ ಕೊಳ್ಳಿದೆವ್ವದ ಕಥನದ ರಹಸ್ಯ ಬಯಲಾಯಿತು.
ಇತ್ತೀಚೆಗೆ ನಮ್ಮ ಹಳ್ಳಿಯ ಮನೆಗೆ ಹೋದಾಗ ರಾತ್ರಿ ಮೊಮ್ಮಕ್ಕಳೊಡನೆ ಮಾಳಿಗೆ ಏರಿ ಕುಳಿತಿದ್ದೆವು. ಈಗಲೂ ಬೆಟ್ಟಗಳಲ್ಲಿ ಬೆಳಕು ಚಲಿಸಿದಂತೆ ಕಾಣುತಿತ್ತು ಆಗ ಯಾವಾಗಾದರೊಮ್ಮೆ ಕಾಣುತ್ತಿದ್ದುದು ಈಗ ಮಾಮೂಲು ಮಾತಾಗಿದೆ. ಅದು ಒಂದು ಎರಡು ಕಡೆ ಅಲ್ಲ. ಹತ್ತಾರು ಕಡೆ. ಗುಡ್ಡಗಳ ಎತ್ತರವೂ  ಕಡಿಮೆಯಾದಂತೆ ತೋರಿತು.. ನನ್ನ ಮೊಮ್ಮಕ್ಕಳು ಅದೇನೆಂದು ನನ್ನನ್ನು ಕೇಳಲಿಲ್ಲ. ನಿತ್ಯ ಅವರು ಟಿವಿ ನೋಡವವರು ತಾನೆ. ಅಕಸ್ಮಾತ್  ಅವರು ಕೇಳಿದರು ನಾನು ಕೊಳ್ಳಿದೆವ್ವ ಅಂದರೆ ಖಂಡಿತ ಗೊಳ್ಳನೆ ನಗುತಿದ್ದರು. ಅವು ಕಳ್ಳ ದೆವ್ವಗಳು ಎಂದು ಅವರಿಗೂ ತಿಳಿದಿದೆ. ಕದ್ದ ಕಬ್ಬಿಣದ ಅದಿರನ್ನ ಸಾಗಿಸುವ ಕಳ್ಳ ಲಾರಿಗಳೆಂದು ಧಾರಾಳವಾಗಿ ಹೇಳುತಿದ್ದರು. ರಾತ್ರಿಯೆಲ್ಲ ರಾಜಾರೋಷವಾಗಿ ಅದಿರು ತುಂಬಿಕೊಂಡು ಸಾಗುವ ಲಾರಿಗಳ ಹೆಡ್ ಲೈಟುಗಳ ಚಲನೆ ಗುಡ್ಡಗಳ ತುಂಬಾ ನಮಗೆ ಚಲಿಸುವ ದೀಪಗಳಂತೆ ಕಾಣುವವು. ಆದರೆ ಇವು ಹಿಂದೆ ಕೇಳುತ್ತಿದ್ದ, ಹುಡುಗರು ನಂಬುತ್ತಿದ್ದ ಅಮಾಯಕ ಹಾದಿ ತಪ್ಪಿಸುವ ಹುಡುಗಾಟದ ಕೊಳ್ಳಿ ದೆವ್ವಗಳಂತೆ ನಿರಪಾಯಕಾರಿಗಳಲ್ಲ.ಹಸಿರು ಗುಡ್ಡಗಳನ್ನು ಬಗೆದು ಕೆಂಪುಕೊರಕಲನ್ನು ಮಾಡಿ ಅಲ್ಲ ಕಡೆ ಕೆಂಧೂಳು ಹರಡಿರುವುರು. ಸರಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಮಾಡಿ ದೇಶದ ಸಂಪತ್ತನ್ನು ಲೂಟಿ ಮಾಡಿ ಪರಿಸರವನ್ನು ಕುಲಗೆಡಿಸಿ ಸಮಾಜವನ್ನು ಪತನದ ಅಂಚಿಗೆ ತಂದು ನಿಲ್ಲಿಸಿರುವ ಈ ಖದೀಮ ಅದಿರು ಸಾಗಣಿಕೆದಾರ ಕಳ್ಳ ದೆವ್ವಗಳು!

No comments:

Post a Comment