Monday, August 20, 2012

ಸಮಯಕ್ಕೊಂದು ಸುಳ್ಳಿನಿಂದ ಶಾಲೆಗೆ ಸಿಕ್ಕ ಸೌಲಭ್ಯ

ಅಮೇರಿಕಾದಲ್ಲಿನ ಮಗಳ ಮನೆಗೆ ಹೋದಾಗ ನನಗೆ ಒಂದು ವಿಶೇಷ ಅನುಭವ ಆಯಿತು. ಒಂದು ದಿನ ಎಲ್ಲರೂ ಪಾರ್ಕ್‌ಗೆ ಹೋಗಿದ್ದೆವು. ಅಲ್ಲಿ ಒಂದು ಮುದ್ದಾದ ಮಗು ಆಟವಾಡುತ್ತಿತ್ತು. ಅದನ್ನು ನೋಡಿ ಅಕ್ಕರೆ ಉಕ್ಕಿ ಬಂದಿತು. ಹತ್ತಿರ ಹೋದೆ ಇನ್ನೇನು ಅದರ ಗಲ್ಲ ಸವರಿ ಮಾತನಾಡಿಸಬೇಕು. ಪಕ್ಕದಲ್ಲೆ ಇದ್ದ ಮಗಳು ಅಪ್ಪಾಜಿ, ಬೇಡ, ಬೇಡ ಎಂದು ಅರಚಿದಳು. ಇವಳಿಗೆ ಏನಾಯಿತಪ್ಪಾ ಎಂದು ಗಾಬರಿಯಿಂದ ಹಾಗೆ ನಿಂತೆ. ಅವಳು ಬಂದವಳೆ ನನ್ನ ಕೈ ಹಿಡಿದು ದೂರ ಕರೆದುಕೊಂಡು ಹೋದಳು. 
ಏನಾಯಿತಮ್ಮ? ಎಂದು ಗಾಬರಿಯಿಂದ ಕೇಳಿದೆ.
ಅಪ್ಪಾಜಿ ಇಲ್ಲೆಲ್ಲ ಹಾಗೆ ಮಕ್ಕಳನ್ನು ಮುಟ್ಟುವ ಹಾಗಿಲ್ಲ. ಮುಟ್ಟಿದರೆ ಪೊಲೀಸ್‌ಗೆ ದೂರು ನೀಡುತ್ತಾರೆ ಎಂದಳು. ನಾನು ಕಕ್ಕಾಬಿಕ್ಕಿಯಾದೆ. ನಾನೇನು ಆ ಮಗುವಿಗೆ ತೊಂದರೆ ಕೊಡಲು ಹೋಗಿಲ್ಲ, ಗಲ್ಲ ಸವರಿ ಮುದ್ದಿಸಲು ಮುಂದಾಗಿದ್ದೆ, ಎಂದು ಸಮರ್ಥಿಸಿಕೊಂಡೆ.
ತೊಂದರೆ ಆಗುವುದೋ ಇಲ್ಲವೋ ಅದು ಬೇರೆ ಮಾತು, ಆದರೆ ಮಕ್ಕಳಿಗೆ ಇಲ್ಲಿ ವಿಶೇಷ ಹಕ್ಕುಗಳಿವೆ. ಅವರ ರಕ್ಷಣೆಗೆ ಕಾನೂನುಗಳಿವೆ. ಹೊರಗಿನವರು ಮಾತ್ರ ಅಲ್ಲ, ತಂದೆ ತಾಯಿಯರೆ ಮಕ್ಕಳನ್ನು ಹೊಡೆದು ಬೈದು ಮಾಡುವ ಹಾಗಿಲ್ಲ, ಮಕ್ಕಳಿಗೆ ಸಹಾಯ ಮಾಡಲು ಪ್ರತ್ಯೇಕ ಪೊಲೀಸು ವಿಭಾಗವೆ ಇದೆ. ಒಂದು ಪ್ರತ್ಯೇಕ ದೂರವಾಣಿ ಸಂಖ್ಯೆ ಇದೆ. ಅದಕ್ಕೆ ಫೋನು ಮಾಡಿದರೆ ಸಾಕು ಧಾವಿಸಿ ಬರುವರು, ಮಕ್ಕಳ ಮೇಲೆ ದೌರ್ಜನ್ಯವಾಗಿದೆ ಎಂದರೆ ಸಾಕು ಬಂಧಿಸುವರು, ಎಲ್ಲ ಮಕ್ಕಳಿಗೂ ಆ ಸಹಾಯವಾಣಿಯ ಸಂಖ್ಯೆಯನ್ನು ಶಾಲೆಗೆ ಸೇರಿದ ಕೂಡಲೆ ತಿಳಿಸುವರು, ಅವರು ಎಲ್ಲೆ ಇರಲಿ ಒಂದು ದೂರವಾಣಿ ಕರೆ ಮಾಡಿದರೆ ಸಾಕು ಕ್ರಮ ತೆಗೆದುಕೊಳ್ಳುವರು ಎಂದು ವಿವರಿಸಿದಳು. ನಮ್ಮಲ್ಲಿ ಮಹಿಳಾ ಸಹಾಯವಾಣಿ ನಗರಗಳಲ್ಲಿ ಇತ್ತೀಚೆಗೆ ಬಂದಿದೆ. ಅದರೆ ಮಕ್ಕಳ ದೂರು ನೀಡಿದರೆ ಅಥವಾ ಮಕ್ಕಳ ಪರವಾಗಿ ಅಕ್ಕ ಪಕ್ಕದವರು ದೂರು ನೀಡಿದರೆ ತಂದೆ ತಾಯಿಯರ ಮೇಲೆ ಕ್ರಮ ತೆಗೆದುಕೊಳ್ಳುವ ಸಂಗತಿ ನನಗೆ ದಿಗ್‌ಭ್ರಮೆ ಮೂಡಿಸಿತು. ಸಹಜವಾಗಿ ಅಪರಿಚಿತರು ಮುಟ್ಟಿದರೆ ಸೋಂಕು ತಗಲೀತು ಎಂಬ ಶಂಕೆ ಅಲ್ಲಿನ ತಾಯ್ತಂದೆಗಳದು.
ಇದಕ್ಕೆ ಕಾರಣ ಮಕ್ಕಳ ಬಗೆಗಿನ ಕಾಳಜಿ. ಮಕ್ಕಳ ಸುರಕ್ಷತೆಗಾಗಿ ಇತ್ತೀಚೆಗೆ ನಮ್ಮಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವುದನ್ನು ನಿಷೇಧಿಸಿ ಕಾನೂನು ಬಂದಿದೆ. ಆದರೆ ಅದು ಇನ್ನೂ ಅಷ್ಟು ಪರಿಣಾಮಕಾರಿಯಾಗಿ ಆಚರಣೆಯಲ್ಲಿ ಇಲ್ಲ. ಆಗೀಗ ಶಿಕ್ಷಕರ ಅನಿಯಂತ್ರಿತ ಕೋಪಕ್ಕೆ ಬಲಿಯಾದ ವಿದ್ಯಾರ್ಥಿಗಳ ವರದಿ ಬರುತ್ತಲೇ ಇರುತ್ತವೆ. ಆಗ ಸರ್ಕಾರ ಕ್ರಮಕ್ಕೆ ಮುಂದಾಗುವುದು.
ನಮ್ಮಲ್ಲಿ ಇನ್ನೂ `ಬೆತ್ತ ಬಳಸು ವಿದ್ಯ ಕಲಿಸುಎಂಬ ಮಾತು ಮರೆಯಾಗಿಲ್ಲ. ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ಪೋಷಕರೆ ಬಂದು, ಇವನು ಬಹಳ ತುಂಟತನ ಮಾಡುತ್ತಾನೆ, ಹೇಳಿದ ಮಾತು ಕೇಳುವುದಿಲ್ಲ ಸಮಾ ಹೊಡೆದು ಬುದ್ಧಿ ಹೇಳಿ ಎನ್ನುವುದೂ ಉಂಟು.
ನನ್ನ ಸೇವೆಯ ಮೊದಲಲ್ಲಿ ಅದೇಕೋ ವಿದ್ಯಾರ್ಥಿಗಳಿಗೆ ಗುರುಗಳನ್ನು ಕಂಡರೆ ಪ್ರೀತಿಗಿಂತ ಭೀತಿಯ ಜಾಸ್ತಿ ಎನಿಸುತಿತ್ತು. ಮದುವೆಯಾದ ಹೊಸದರಲ್ಲಿ ನಾನು ಪ್ರತಿ ಭಾನುವಾರವೂ ಪತ್ನಿಯೊಡನೆ ಸಿನೆಮಾಕ್ಕೆ ಹೋಗುವುದು ವಾಡಿಕೆಯಾಗಿತ್ತು. ತುಸು ಮಂಚೆಯೆ ಹೋದಾಗ ಅನೇಕರು ದುಬುದುಬನೆ ಎದ್ದು ಹೊರಹೋಗುವುದು ಕಂಡುಬಂದಿತು. ನಂತರ ಗಮನಿಸಿದಾಗ ಅವರೆಲ್ಲ ನನ್ನ ವಿದ್ಯಾರ್ಥಿಗಳು. ಊರಲ್ಲಿ ಇದ್ದುದು ಒಂದೆ ಥೇಟರ್‌. ಥೇಟರ್‌ ಮ್ಯಾನೇಜರು ಪರಿಚಿತರು. ಒಂದು ಸಲ ಅವರೆ ಬಂದು ಸಾರ್‌ ನೀವು ಬಂದರೆ ಹುಡುಗರೆಲ್ಲ ಎದ್ದು ಹೋಗುತ್ತಾರೆ. ದಯವಿಟ್ಟು ಏನಾದರೂ ಮಾಡಿ, ಎಂದು ಮನವಿ ಮಾಡಿದರು. ನಾನು ಸಂದಿಗ್ಧದಲ್ಲಿ ಬಿದ್ದೆ. ಒಂದು, ಮಕ್ಕಳಿಗೆ ಕರೆದು `ಪರವಾಇಲ್ಲ ಸಿನೆಮಾಕ್ಕೆ ಹೋಗಿಎಂದು ಉತ್ತೇಜನ ಕೊಡಬೇಕು. ನಾನೆ ಸಿನಮಾ ನೋಡುವಾಗ ವಿದ್ಯಾರ್ಥಿಗಳಿಗೆ ಅದು ತಪ್ಪು ಎಂದು ಹೇಳುವುದು ಮನಕೊಪ್ಪದ ಮಾತು. ಇಲ್ಲವಾದರೆ ನಾನೆ ಹೋಗುವುದನ್ನು ಬಿಡಬೇಕು. ಅವಿಭಕ್ತ ಕುಟುಂಬದಲ್ಲಿ ವಾರವೆಲ್ಲ ಮನೆಯಲ್ಲೆ ಇದ್ದ ಹೆಂಡತಿಯ ಜೊತೆ ನಾಲಕ್ಕಾರು ತಾಸು ಸಮಯ ಏಕಾಂತ ಸಿಗುವುದೆ ಆಗ. ಕೊನೆಗೆ ಹಾವೂ ಸಾಯಬಾರದು ಕೋಲೂ ಮುರಿಯಬಾರದು ಎಂದುಕೊಂಡು ಒಂದು ತೀರ್ಮಾನಕ್ಕೆ ಬಂದೆ. ನಾವು ಸಿನೆಮಾಕ್ಕೆ ಹೋಗುವುದು ಬಿಡಲಿಲ್ಲ. ಆದರೆ ಸಿನೆಮಾ ಶುರುವಾದ ಮೇಲೆ ಹೋಗುತಿದ್ದೆವು ಮತ್ತು ಸಿನೆಮಾ ಬಿಡುವ ಮುಂಚೆಯೆ ಅಲ್ಲಿಂದ ಹೊರಗೆ ಬರುತಿದ್ದೆವು. ಹಾಗಾಗಿ ಸಿನೆಮಾ ಹಾಲಿನಲ್ಲಿ ವಿದ್ಯಾರ್ಥಿಗಳೊಡನೆ ಮುಖಾಮುಖಿಯಾಗುವುದು ತಪ್ಪಿತು. ಆದರೂ ಇಂಟರ್‌ವೆಲ್‌ನಲ್ಲಿ ನಾನು ಅತ್ತಿತ್ತ ನೋಡದೆ ಕುಳಿತಿರುತಿದ್ದೆ. ಆದರೂ ಅಲ್ಲಿಲ್ಲಿ ಮುಖ ಮುಚ್ಚಿ ಕುಳಿತವರು ಕಾಣುತಿದ್ದರು. ಬಹುಶಃ ನಮ್ಮನ್ನು ಗಮನಿಸಿದ ವಿದ್ಯಾರ್ಥಿಗಳು ನನಗೆ ಕಾಣಬಾರದೆಂದು ಮಂಡಿಗೆ ತಲೆಯೂರಿ ಸೀಟಿನಲ್ಲಿ ಕುಳಿತಿರುತ್ತಿದ್ದರು.
ಹುಡುಗರದು ಹೀಗಿದ್ದರೆ ಹುಡುಗಿಯರದು ಇನ್ನೊಂದು ರೀತಿ. ಸಂಜೆ ಮನೆ ಮುಂದಿನ ಕಟ್ಟೆಯ ಮೇಲೆ ಹೆಂಗಸರು ಮಕ್ಕಳು ಕುಳಿತು ಹರಟೆ ಹೊಡೆಯುವುದು ಆಗ ಸಾಮಾನ್ಯ. ನಾನು ಬೀದಿಯಲ್ಲಿ ಹೋಗುತ್ತಿರುವಾಗ ನಾನು ಬರುವುದನ್ನು ಕಂಡೊಡನೆ ಧಡಕ್ಕನೆ ಎದ್ದು ಒಳ ಓಡುತಿದ್ದರು. ಅದೇನು ಭಯವೋ ಗೌರವವೋ ಎಂದು ನನಗೆ ಗೊತ್ತಾಗಲೆ ಇಲ್ಲ. ಹಲವು ತಾಯಂದಿರು ಮನೆಯಲ್ಲಿ ಎದೆಯುದ್ದ ಬೆಳೆದ ಮಗಳಿಗೆ, ಎದುರು ಮಾತನಾಡಿದಾಗ, ನಿಮ್ಮ ಮಾಸ್ಟರಿಗೆ ಹೇಳುತ್ತೇನೆ ನೋಡು, ಎಂದರೆ ಮಂತ್ರ ಹಾಕಿದ ಹಾವಿನಂತೆ ಹೆಡೆಮುದುರಿಕೊಳ್ಳುವಂತೆ ಅವರ ಪ್ರತಿಭಟನೆ ಕರಗಿ ನೀರಾಗುವದು. ಆಗ ನನಗೆ ಅದು ಮುಜುಗರ ತರುತಿತ್ತು. ಆದರೆ ನಲವತ್ತು ವರ್ಷಗಳ ತರುವಾಯ  ಸಿಂಗಾಪುರ ವಾಸಿಯಾದ ಮಹಿಳೆಯೊಬ್ಬಳು ನಾನಿರುವುದನ್ನು ತಿಳಿದು ಮನೆಗೆ ಹುಡುಕಿಕೊಂಡು ಬಂದಳು. ಎಷ್ಟು ಹೇಳಿದರೂ ನನ್ನ ಎದುರು ಕುರ್ಚಿಯಲ್ಲಿ ಕೂಡಲು ಹಿಂದುಮುಂದು ನೋಡಿದಳು. ಅವಳು ನಲವತ್ತು ವರ್ಷದ ಹಿಂದೆ ನನ್ನ ವಿದ್ಯಾರ್ಥಿನಿ. ಸರ್‌, ನಾನಿಷ್ಟು ಮುಂದುವರೆಯಲು ನೀವೆ ಕಾರಣ, ನಮ್ಮ ಮಕ್ಕಳಿಗೂ ನಿಮ್ಮ ಸುದ್ದಿ ಸದಾ ಹೇಳುತ್ತಾ ಇರುವೆ. ಅವಳಿಗೂ ಆಶೀರ್ವಾದ ಮಾಡಿ ಎಂದು ಆ ಆಧುನಿಕ ತರುಣಿಗೂ ನಮಸ್ಕರಿಸಲು ಸೂಚಿಸಿದಳು. ಹಳೆಯ ಹುಡುಗರು ಯಾವಾಗ ಕಂಡರೂ ಇದೆ ಮಾತು. ನಿಮ್ಮಂಥವರು ಈಗ ಇಲ್ಲ.
ಅಮೇರಿಕಾದಲ್ಲಂತೂ ಶಿಕ್ಷಕರ ಪರಿಸ್ಥಿತಿ ಬಹುಸೂಕ್ಷ್ಮ. ನಾನು ಅಲ್ಲಿದ್ದಾಗಲೆ ಹದಿ ಹರೆಯದ ವಿದ್ಯಾರ್ಥಿಯೊಬ್ಬ ಕಡಿಮೆ ಗ್ರೇಡು ಬಂದಿದೆ ಎಂದು ಸಹಪಾಠಿಗಳ ಮತ್ತು ಶಿಕ್ಷಕರ ಮೇಲೆ ಶಾಲಾ ಆವರಣದಲ್ಲೆ ಗುಂಡಿನ ಮಳೆ ಕರೆದ. ಸುದ್ದಿ ಓದಿ ದಂಗಾದೆ. ಅಷ್ಟುದೂರ ಏಕೆ, ಇತ್ತೀಚಿಗೆ ಅವಮಾನ ಮಾಡಿದರು ಎಂದು ವಿದ್ಯಾರ್ಥಿಯೊಬ್ಬ ಚನ್ನೈನಲ್ಲಿ ಶಿಕ್ಷಕಿಗೆ ಚೂರಿ ಹಾಕಿದ. ಕಳೆದ ತಿಂಗಳು ರಾಮನಗರ ಹತ್ತಿರ ಮಹಿಳಾ ಪ್ರಿನ್ಸಿಪಾಲರೊಬ್ಬರ ಮೇಲೆ ಹುಡುಗನಿಗೆ ಶಿಕ್ಷೆ ಕೊಟ್ಟರು ಎಂದು ಸಾರ್ವಜನಿಕರೆ ಟಿವಿ ಕ್ಯಾಮರಾ ಎದುರೆ ಹಲ್ಲೆ ನಡೆಸಿದರು. ಇದೆಲ್ಲ ಬದಲಾದ ಮೌಲ್ಯಗಳ ಸಂಕೇತ. ನಾನೂ ಮೊದಲು ಬೆತ್ತ ಬಳಸುತಿದ್ದೆ. ಕೊನೆ ಕೊನೆಗೆ ಬಹಳ ಬದಲಾಗಿದ್ದೆ. ಪ್ರಾಂಶುಪಾಲನಾದ ಮೇಲೂ ಕೈನಲ್ಲಿ ಬೆತ್ತ ಹಿಡಿದು ಕಾಲೇಜಿನಲ್ಲಿ ಓಡಾಡಿದರೂ ಅದನ್ನು ಬಳಸಿದ ನೆನಪಿಲ್ಲ. ಅದು ಒಂದು ರೀತಿಯ ತೋರಿಕೆಯ ಅಧಿಕಾರ ದಂಡ ಮಾತ್ರ. ದೈಹಿಕ ಶಿಕ್ಷೆಗಿಂತ ಮಾನಸಿಕ ಪ್ರಭಾವ ಅತಿ ಮುಖ್ಯ. ಕೋಲಿನ ಭೀತಿಗಿಂತ ಕಣ್ಣಿನ ನೋಟ ಸಾಕು ಎಂತಹ ಒರಟರನ್ನು ಮೃದುವಾಗಿಸಲು ಎಂಬ ಪಾಠವನ್ನು ಅನುಭವ ಕಲಿಸಿತ್ತು. ತರಗತಿಯಲ್ಲೂ ಅಷ್ಟೆ. ಪಾಠದ ಮಧ್ಯ ತುಸುವೆ ದನಿ ಕೇಳಿದರೂ ಪಾಠ ನಿಲ್ಲಿಸಿ ಎರಡುಕ್ಷಣ ಸುಮ್ಮನೆ ನಿಂತು ದಿಟ್ಟಿಸಿ ನೋಡಿದರೆ ಸಾಕು ಮಹಾಮೌನ ನೆಲಸುತಿತ್ತು. ಪಾಠ ಆಸಕ್ತಿದಾಯಕವಾಗಿದ್ದರೆ ಶಿಸ್ತಿನ ಸಮಸ್ಯೆಯೆ ಬಾರದು.
ಈ ಘಟನೆಯ ನಂತರ ನನಗೆ ನಲವತ್ತು ವರ್ಷದ ಹಿಂದಿನ ನೆನಪು ಮರುಕಳಿಸಿತು. ಆಗ ತಾನೆ ಗ್ರಾಮಾಂತರ ಪ್ರದೇಶದಲ್ಲಿ ಹೈಸ್ಕೂಲು ಶಿಕ್ಷಕನಾಗಿದ್ದೆ. ಎಲ್ಲವನ್ನೂ ಒಮ್ಮೆಗೆ ಕಲಿಸುವ ಹಂಬಲ. ತಪ್ಪು ಮಾಡಿದ ಮಕ್ಕಳಿಗೆ ಏಟಿನ ಭೀತಿ ಮೂಡಿಸಿದರೆ ಶಿಸ್ತು ತನ್ನಿಂದ ತಾನೆ ಬರುವುದು ಎಂದು ನಂಬಿದ್ದ ಕಾಲ. ಅದರಲ್ಲೂ ಗಣಿತದ ತರಗತಿ ಎಂದರೆ ಮೇಜಿನ ಮೇಲೆ ಬೆತ್ತ ಇರಲೆಬೇಕು. ಏಕೆಂದರೆ ಹಳ್ಳಿಯ ಮಕ್ಕಳಿಗೆ ಗಣಿತ ಕಬ್ಬಿಣದ ಕಡಲೆ. ತರಗತಿ ಮಾನೀಟರ್‌ನ ಕೆಲಸ ಅಂದರೆ ಶಿಕ್ಷಕರು ತರಗತಿಗೆ ಬರುವ ಮೊದಲೆ ಬೋರ್ಡನ್ನು ಒರಸುವುದು. ಡಸ್ಟರ್‌ ಮತ್ತು ಬೆತ್ತವನ್ನು ಮೇಜಿನ ಮೇಲೆ ತಂದಿರಿಸುವುದು. ಅವನು ಸೋಮಾರಿಯಾಗಿದ್ದರೆ ಅವನ ಕರವಸ್ತ್ರವೆ ಡಸ್ಟರ್‌. ಅದು ಇಲ್ಲದಿದ್ದಾಗ ಅವನ ಅಂಗಿಯನ್ನೆ ಡಸ್ಟರ್‌ ಆಗಿ ಬಳಸುವೆವು ಎಂದು ಹೆದರಿಸುತ್ತಿದ್ದರು. ಅದಕ್ಕೆ ಅವನು ಸಾಧಾರಣವಾಗಿ ತನಗೆ ಗೊತ್ತಿದ್ದ ಸಿಂಪಿಗನೊಬ್ಬನ ಹತ್ತಿರ ಹೋಗಿ ಡಸ್ಟರ್‌ ಹೊಲಿಸಿ ತಂದಿಡುತ್ತಿದ್ದ. ಅದು ಹಳ್ಳಿಗಾಡು. ಅಲ್ಲಿ ಹೊನ್ನಂಬರಿಕೆ ಗಿಡ ಜಾಸ್ತಿ. ಮಾನೀಟರ್‌ ಶಾಲೆಗೆ ಬಂದರೆ ಮಾಡುವ ಮೊದಲ ಕೆಲಸ ಎಂದರೆ ಉದ್ದನೆ ಹೊನ್ನಂಬರಿಕೆ ಟೊಂಗೆಯನ್ನು ಕಿತ್ತು ತಂದು ಅದರ ಎಲೆಗಳನ್ನೆಲ್ಲ ಸವರಿ ಇಡುವುದು. ಅದು ಮುರಿದರೆ ಮತ್ತೊಂದು ತರುವುದು. ಅದರಿಂದ ಹೊಡೆದರೆ ಚುರು ಚುರು ನೋವಾಗುತ್ತಿತ್ತೆ ವಿನಃ ಅಂತಹ ಅಪಾಯವೇನೂ ಆಗುತ್ತರಲಿಲ್ಲ. ಒಂದು ಸಲ ಹುಡುಗಿಯೊಬ್ಬಳು ಮನೆ ಲೆಕ್ಕ ಮಾಡಿಕೊಂಡು ಬಂದಿರಲಿಲ್ಲ. ಯಥಾರೀತಿ ಬೆತ್ತ ಬೀಸಿದಾಗ ಅವಳು ತಲೆ ಮುಂದೆ ತಂದಳು ಕೈಗೆ ಬೀಳಬೇಕಾದ ಏಟು ತಪ್ಪಿತು. ಆದರೆ ಬೆತ್ತದ ತುದಿ ಕಣ್ಣಿಗೆ ತಾಗಿತು. ಅಲ್ಲಿ ತುಸು ತೆರೆದಂತಾಯಿತು. ತುಸುವೆ ಪೆಟ್ಟಾಗಿತ್ತು. ಹುಡುಗಿ ಅಳತೊಡಗಿದಳು. ಅವಳ ಕಣ್ಣಿಗೆ ತಣ್ಣೀರು ಹಾಕಿ ತೊಳೆದು ಪ್ರಥಮ ಚಿಕಿತ್ಸೆ ಮಾಡಲಾಯಿತು. ತುಸು ಹೊತ್ತಿನ ನಂತರ ಅಳು ನಿಲ್ಲಿಸಿದಳು.
ಮಾರನೆಯ ದಿನ ಮೂರು ನಾಲಕ್ಕು ಜನ ಊರ ಹಿರಿಯರು ಮುಖ್ಯೋಪಾಧ್ಯಾಯರಲ್ಲಿಗೆ ಬಂದರು. ಶಾಲೆಯಲ್ಲಿ ಹೀಗಾದರೆ ಹೇಗೆ? ನೋಡಿ ಹುಡುಗಿಯ ಕಣ್ಣಿಗೆ ಪೆಟ್ಟು ಬಿದ್ದಿದೆ. ಮಗುವಿನ ಕಣ್ಣಿಗೆ ಏನಾದರೂ ಆಗಿದ್ದರೆ ಗತಿ ಏನು? ಎಂದು ದೂರತೊಡಗಿದರು. ಮುಖ್ಯೋಪಾಧ್ಯಾಯರಿಗೆ ಅವರ ಮಾತಿನ ತಲೆ ಬುಡ ತಿಳಿಯಲಿಲ್ಲ. ಅವರಿಗೆ ಹಿಂದಿನ ದಿನದ ಘಟನೆ ಗೊತ್ತಿರಲಿಲ್ಲ. ಆ ಹುಡುಗಿಯನ್ನೆ ಕರೆಸಿ ಕೇಳಿದರು. ಏನಮ್ಮ, ಏನಾಯಿತು? ನಿನ್ನ ಕಣ್ಣಿಗೆ ತೆರಚಿದ್ದು ಹೇಗೆ? ಎಂದು ಪ್ರಶ್ನಿಸಿದರು. ಅವಳು ಏನನ್ನೂ ಹೇಳದೆ ಹಾಗೆ ನಿಂತಿದ್ದಳು. ಭಯಪಡಬೇಡ ಆದದ್ದನ್ನು ಹೇಳು. ಇಲ್ಲದಿದ್ದರೆ ನಮಗೆ ಗೊತ್ತಾಗುವುದು ಹೇಗೆ, ಎಂದು ಒತ್ತಾಯ ಮಾಡಿದರು. ಅವಳು ನಾಚುತ್ತಾ ನಿನ್ನೆ ಇಂಟರ್‌ ವೆಲ್‌ನಲ್ಲಿ ಹೊರಗೆ ಹೋದಾಗ ಆಯಿತು ಎಂದಳು. ಯಾರು ಮಾಡಿದರು ಹೇಳು, ಭಯಪಡಬೇಡ ಎಂದು ಧೈರ್ಯ ತುಂಬಿದರು.
ಯಾರೂ ಏನು ಮಾಡಿಲ್ಲ, ಸಾರ್‌ ತಾನಾಗಿಯೆ ಆಗಿದೆ ಎಂದಳು. ಅದು ಹೇಗೆ ತಾನಾಗಿಯೇ ಆಗುವುದು, ನಿಜ ಹೇಳು ಒತ್ತಾಯ ಮಾಡಿದರು. ಅಲ್ಲ ಸಾರ್, ಇಂಟರ್‌ವೆಲ್ ಆದಾಗ ನಾವೆಲ್ಲ ಒಂದಕ್ಕೆ ಜಾಲಿಗಿಡದ ಕಂಟಿಯ ಮರೆಯಲ್ಲಿ ಹೋಗುತ್ತೇವೆ. ಅಲ್ಲಿ ಮುಳ್ಳಿನ ಗಿಡದ ತುದಿ ತೆರೆಚಿತು ಎಂದು ನಾಚುತ್ತಾ ತಿಳಿಸಿದಳು. ಸರಿ ಹೋಗಮ್ಮ ಇನ್ನು ಮೇಲೆ ಸ್ವಲ್ಪ ಹುಷಾರಾಗಿರು. ಕಣ್ಣಿಗೆ ಏನಾದರೂ ತೊಂದರೆಯಾಗಬಹುದಿತ್ತು ಎಂದು ಅವಳನ್ನು ತರಗತಿಗೆ ಕಳುಹಿಸಿದರು.
ನಮ್ಮದು ಹಳ್ಳಿಯಲ್ಲಿನ ತಾಲೂಕು ಬೋರ್ಡ ಶಾಲೆ. ಶೌಚಾಲಯದ ಸೌಲಭ್ಯವಿರಲಿಲ್ಲ. ಅದು ಎಲ್ಲರಿಗೂ ಗೊತ್ತಿದ್ದ ವಿಷಯ. ಅದನ್ನು ಊರ ಹಿರಿಯರ ಗಮನಕ್ಕೆ ಆಗಾಗ ತಂದಿದ್ದರೂ ಕಿವಿಯ ಮೇಲೆ ಹಾಕಿಕೊಂಡಿರಲಿಲ್ಲ. ಮುಖ್ಯೋಪಾಧ್ಯಾಯರು, ನೋಡಿ, ಶೌಚಾಲಯವಿಲ್ಲ. ಹೆಣ್ಣು ಮಕ್ಕಳು ಬಯಲಲ್ಲಿ ಹೋಗಬೇಕು, ಏನಾದರೂ ಮಾಡಿ, ಎಂದು ಬಂದವರಿಗೆ ವಿನಂತಿ ಮಾಡಿಕೊಂಡರು.
ಬಂದವರು ಸ್ವಲ್ಪ ಹೊತ್ತು ಯೋಚಿಸಿ, ಮಾಷ್ಟ್ರೆ, ನಾವು ತಾಲೂಕು ಬೋರ್ಡು ಅಧ್ಯಕ್ಷರ ಹತ್ತಿರ ಮಾತನಾಡುತ್ತೇವೆ. ಆದರೆ ಅದು ಅಗುವುದು ಯಾವ ಕಾಲಕ್ಕೋ, ಸದ್ಯಕ್ಕೆ ಏನು ಮಾಡಬೇಕು ಹೇಳಿ ಮಾಡೋಣ ಎಂದರು. ಅವರೆಲ್ಲರೂ ಸೇರಿ ಐದಾರು ಅಡಿ ಎತ್ತರದ ಎಂಟು ಬಂಡೆಗಳನ್ನು ಗೋಡೆಯ ಬದಿಗೆ ನೆಡಿಸಿ ಮರೆಮಾಡಿ ತಾತ್ಕಾಲಿಕ ಮೂತ್ರಾಲಯದ ಅನುಕೂಲ ಮಾಡಿಕೊಡಬೇಕೆಂದು ನಿರ್ಧಾರ ಮಾಡಿದರು.
ಇದೆಲ್ಲ ನಡೆದಾಗ ನಾನು ಅಲ್ಲಿಯೇ ಕುಳಿತಿದ್ದೆ. ನನಗೆ ಬಾಯಿಗೆ ಹೃದಯ ಬಂದಿತ್ತು. ಏನಾಗುವುದೋ ಎಂದು ಎದೆ ಢವಢವ ಹೊಡೆದುಕೊಳ್ಳುತ್ತಿತ್ತು. ಆ ಹುಡುಗಿಯ ಮಾತು ಕೇಳಿ ಹೋದ ಜೀವ ಮತ್ತೆ ಬಂದಂತಾಯಿತು. ಬದುಕಿದೆಯಾ ಬಡಜೀವವೆ ಎಂದುಕೊಂಡೆ. ನಂತರ ಆ ವಿದ್ಯಾರ್ಥಿನಿಯನ್ನು ತರಗತಿಯಲ್ಲಿ ಕೇಳಿದೆ. ಯಾಕಮ್ಮ ಸುಳ್ಳು ಹೇಳಿದೆ. ನಾನು  ಹೊಡೆದೆ ಎಂದು ಏಕೆ ಹೇಳಲಿಲ್ಲ?
ಸಾರ್‌, ನೀವು ನನಗೆ ಬೇಕೆಂದೇನೂ ಹೊಡೆದಿಲ್ಲ. ನನ್ನ ಒಳ್ಳೆಯದಕ್ಕೆ ಹೊಡೆದಿರಿ. ಪಾಠ ಕಲಿಸಲು  ಹಾಗೆ ಮಾಡಿದಿರಿ. ನಿಮ್ಮ ಮೇಲೆ ನಾನು ಹೇಗೆ ದೂರು ಕೊಡಲಿ? ಮತ್ತೆ ಊರ ಜನ ಶಾಲೆಗೆ ಬಂದಿದ್ದರಲ್ಲ? ಕೇಳಿದೆ. ಮನೆಯಲ್ಲೂ ನಾನು ಹಾಗೆಯೇ ಹೇಳಿದ್ದೆ. ಆದರೆ ಮುಳ್ಳು ಕಣ್ಣಿಗೆ ತಾಗಿ ಅಪಾಯವಾಗಿದ್ದರೆ ಏನು ಗತಿ? ಏನಾದರೂ ವ್ಯವಸ್ಥೆಯಾಗಬೇಕು ಎಂದು ನಮ್ಮ ಅಪ್ಪ ಅವರೆಲ್ಲರನ್ನೂ ಕರೆದುಕೊಂಡು ಬಂದರು ಎಂದು ಹೇಳಿದಳು. ನಾನು ಬೆತ್ತ ಬಳಸುವುದನ್ನು ಬಿಟ್ಟೆನೆಂದು ಹೇಳುವ ಅಗತ್ಯವಿಲ್ಲ. ಕೆಲವೆ ದಿನಗಳಲ್ಲಿ ಬಂಡೆ ನೆಡಿಸಿ ಮರೆಯ ವ್ಯವಸ್ಥೆ ಮಾಡಿದರು. ಹುಡುಗಿಯರಿಗೆ ಮುಳ್ಳು ಕಂಟಿಗಳ ಮರೆಯಲ್ಲಿ ಕೂಡುವ ತೊಂದರೆ ತಪ್ಪಿತು.
ಆ ವಿದ್ಯಾರ್ಥಿನಿ ಸಮಯಕ್ಕೊಂದು ಸುಳ್ಳು ಹೇಳಿದ್ದರಿಂದ ಶಾಲೆಗೆ ಸೌಲಭ್ಯ ದೊರೆಯಿತು.


No comments:

Post a Comment