Monday, August 20, 2012

ಸರಳ ಪ್ರಾಂಶುಪಾಲರ ವಿರಳ ಕಾಲೇಜು


ಮೊ
ದಲ ನೋಟಕ್ಕೆ ಬೆಂಗಳೂರು ನನಗೆ ನಮ್ಮ ಊರಿಗಿಂತ ಬೇರೆಯಾಗಿ  ಕಾಣಲಿಲ್ಲ. ಅಲ್ಲದೆ ನಾವು ರೈಲಿನಿಂದ ಇಳಿದ ಯಶವಂತಪುರ ಬೆಂಗಳೂರಿನ ಹೊರ ವಲಯದಲ್ಲಿದ್ದು ಚಿಕ್ಕ ಹಳ್ಳಿಯಂತೆ ಕಾಣುತಿತ್ತು. ಒಂದೆ ವ್ಯತ್ಯಾಸವೆಂದರೆ ಒಂದೋ ಎರಡೋ ಬಸ್ಸು ಇದ್ದವು. ಜಟಕಾ ಬಿಟ್ಟರೆ ಬೇರೆ ವಾಹನ ಸೌಕರ್ಯವೂ ಹೆಚ್ಚಿರಲಿಲ್ಲ. ಅಲ್ಲಿ ಒಂದು ಉಡುಪಿ ಹೋಟೆಲ್‌ ನಲ್ಲಿ ವಾಸ್ತವ್ಯ ಹೂಡಿದೆವು. ಅದು ಮೂಲತಃ ಊಟ ತಿಂಡಿಯ ಹೋಟೆಲ್‌. ಹೆಚ್ಚು ಪರಿಚಯವಿದ್ದವರಿಗೆ ವಸತಿ ಸೌಕರ್ಯವೂ ಇತ್ತು. ಅದೂ ಒಬ್ಬಿಬ್ಬರಿಗೆ. ಆದರೆ ಮಂಚ ಹಾಸಿಗೆ ಇಲ್ಲ. ಮನೆಯವರಂತೆ ಅಲ್ಲಿದ್ದ ರೂಮಿನಲ್ಲಿಯೆ ಜಮಖಾನ ಹಾಸಿಕೊಂಡು ಮಲಗಬೇಕಿತ್ತು. ನಮ್ಮ ಮಾವ ಖಾಯಂ ಗಿರಾಕಿ. ಸದಾ ಬೆಂಗಳೂರಿಗೆ ಬರುವವರು.. ಅಲ್ಲದೆ  ಕೆಂಪು ಹಂಚುಗಳಿಗೆ ಮಂಗಳೂರು ಹಂಚು ಎಂದು ಹೆಸರಿದ್ದರೂ ಅವು ಬೆಂಗಳೂರಿನಲ್ಲೂ ಕೂಡಾ ತಯಾರಾಗುತ್ತಿದ್ದವು. ಅದೂ ಯಶವಂತಪುರದ ಆಸುಪಾಸಿನಲ್ಲಿ. ಅಲ್ಲಿಂದ ರೈಲಿನ ವ್ಯಾಗನ್ನುಗಳಿಗೆ ಹರಿಹರಕ್ಕೆ ರವಾನೆಯಾಗುತಿದ್ದವು. ಅದರಿಂದ ಆ ಭಾಗ ನಮ್ಮ ಮಾವನಿಗೆ ಸುಪರಿಚಿತ. ಅಲ್ಲದೆ ನಾವು ಉಳಿದುಕೊಂಡ ಹೋಟೆಲ್‌ ನಲ್ಲಿ ಬಾಡಿಗೆಯೂ ನಾಮ ಮಾತ್ರ. ನಗರದ ಮಧ್ಯ ಭಾಗದಲ್ಲಿರುವಂತೆ ದುಬಾರಿ ಅಲ್ಲ. ಒಂದು ರೀತಿಯಲ್ಲಿ ಪೇಯಿಂಗ್‌ಗೆಸ್ಟ್‌ ತರಹ. ಬೆಳಗ್ಗೆ ಎದ್ದು ಸ್ನಾನ ಮಾಡಿ ತಿಂಡಿ ಮುಗಿಸಿ ಹೊರಟೆವು. ಯಾವ ಕಾಲೇಜು ಸೇರುವುದು ಎಂದು ಆಗಲೆ ನಿರ್ಧರಿಸಿದ್ದೆವು. ಆಗ ಕಾಲೇಜುಗಳ ಸಂಖ್ಯೆಯೂ ಹೆಚ್ಚಿರಲಿಲ್ಲ. ದೊಡ್ಡದು ಎಂದರೆ Government Arts and Science college ಅದನ್ನು ಸಂಕ್ಷೇಪಿಸಿ GAS ಕಾಲೇಜು ಎಂದೆ ಕರೆಯಲಾಗುತಿತ್ತು. ಕಾಮರ್ಸಿಗೆ ಸೇರಲು ರಾಮನಾರಾಯಣ್‌ ಚೆಲ್ಲಾರಾಮ್‌ ಕಾಲೇಜು. ಸೆಂಟ್ರಲ್‌ ಕಾಲೇಜಿನಲ್ಲಿ ಪದವಿ ಮಾತ್ರ ಇದ್ದ ನೆನಪು. ಖಾಸಗಿ ಕಾಲೇಜುಗಳು ಮೂರೋ ನಾಲಕ್ಕೋ ಇದ್ದವು. ಹೆಸರುವಾಸಿ ಎಂದರೆ ನ್ಯಾಷನಲ್ ಕಾಲೇಜು, ವಿಜಯ ಕಾಲೇಜು ಮತ್ತು ಸೆಂಟ್‌ ಜೊಸೆಫ್ ಕಾಲೇಜು. ನ್ಯಾಷನಲ್‌ ಕಾಲೇಜು   ಬಸವನಗುಡಿಯಲ್ಲಿ ನ್ಯಾಷನಲ್‌ ಹೈಸ್ಕೂಲಿನ ಪಕ್ಕದಲ್ಲಿನ ಅಷ್ಟೇನೂ ದೊಡ್ಡದಲ್ಲದ ಕಟ್ಟಡದಲ್ಲಿತ್ತು. ಅಲ್ಲಿ ಪ್ರವೇಶ ಬರಿ ಗಂಡು ಹುಡುಗರಿಗೆ ಮಾತ್ರ. ಆಗ ಅಲ್ಲಿ ಒಂದು ವರ್ಷದ ಪಿಯುಸಿ. ಅದರಲ್ಲಿ ಸೈನ್ಸ್‌ ವಿಭಾಗ ಇದ್ದಿತು. ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗಗಳಿಲ್ಲ. ವಿಜ್ಞಾನದಲ್ಲೂ ಈಗಿನಂತೆ ಹಲವಾರು ಆಯ್ಕೆಗಳಿರಲಿಲ್ಲ. ಪಿಸಿಎಮ್ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ) ಮತ್ತು ಪಿಸಿಬಿ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ)  ಮಾತ್ರ. ಇಂಜನಿಯರ್‌ ಆಗಬೇಕೆಂದರೆ ಪಿಸಿಎಂ, ವೈದ್ಯ, ಕೃಷಿ ಮತ್ತು ಪಶುವೈದ್ಯ ಅಧ್ಯಯನಕ್ಕೆ ಪಿಸಿಬಿ ಬುನಾದಿಯಾಗುತಿದ್ದವು. ನನಗೆ ವೈದ್ಯನಾಗಬೇಕೆಂಬ ಆಶೆ ಒಳ ಮನಸ್ಸಿನಲ್ಲಿ ಇತ್ತು.
ನಮ್ಮ ಊರ ಹತ್ತಿರದ ದೊಡ್ಡ ಗ್ರಾಮದಲ್ಲಿ ದಾಸುರಾವ್‌ ಎಂಬ ವೈದ್ಯರಿದ್ದರು. ಅವರು ಆಂಧ್ರ ಮೂಲದವರು. ಆದರೆ ಅಲ್ಲಿಯೆ ನೆಲಸಿದ್ದರು. ಮದ್ರಾಸಿನ ಸ್ಟ್ಯಾನ್ಲಿ ಕಾಲೇಜಿನ ಪ್ರಾರಂಭ ದಿನಗಳಲ್ಲಿ ಓದಿದವರು. ಆಗ ನಮ್ಮ ಊರು ಮದ್ರಾಸ್‌ ಪ್ರಾಂತ್ಯದಲ್ಲಿ ಇದ್ದುದರಿಂದ ಸರ್ಕಾರಿ ವೈದ್ಯರಾಗಿ ಜಿಲ್ಲಾ ಬೋರ್ಡು ಆಸ್ಪತ್ರೆಗೆ ನೇಮಕವಾಗಿ ಬಂದಿದ್ದರು. ಸೇವಾ ಮನೋಭಾವದ ವ್ಯಕ್ತಿ.  ಹಗಲುರಾತ್ರಿ ಎನ್ನದೆ ರೋಗಿಗಳ ಆರೈಕೆ ಮಾಡುವರು. ಅದರಲ್ಲೂ ಪ್ರಸೂತಿ ಮಾಡಿಸುವುದರಲ್ಲಿ ಎತ್ತಿದ ಕೈ.
ಅವರು ಸಾಯಿಬವ್ವ ಎಂಬ ಮಹಿಳೆಗೆ ತರಬೇತಿ ನೀಡಿ ಹೆರಿಗೆಗೆ ಕರೆ ಬಂದರೆ ಅವಳ ಜತೆ ಹೊರಡುತಿದ್ದರು. ಅವರ ಕೈ ಮೇಲೆ ಸರಿ ಸುಮಾರು ಒಂದು ಪೀಳಿಗೆಯೆ ಹುಟ್ಟಿದೆ ಎನ್ನಬಹುದು. ತಾಯಿ ತನ್ನ ಮಗಳಿಗೆ ಹೆರಿಗೆ ಸಮಯದಲ್ಲಿ, `ನೀನು ಹುಟ್ಟಿದಾಗ ಈ ದಾಕ್ಟರೆ ಬಂದಿದ್ದರು, ಸುಗಮವಾಗಿ ಹೆರಿಗೆಯಾಯಿತು, ನಿನ್ನ ಮಗು ಹುಟ್ಟುವಾಗಲೂ ಇವರೆ ಇದ್ದಾರೆ ಯಾವುದೆ ಚಿಂತೆ ಬೇಡಎಂದು ಧೈರ್ಯ ನೀಡುವುದೂ ಇತ್ತು. ಅವರು ಇದ್ದರೆ ಅವರು ಸುತ್ತಮುತ್ತಲ ಹಳ್ಳಿಗರಿಗೆ ದೇವರೆ ಇದ್ದಂತೆ. ರೋಗಿ ಕಷ್ಟದಲ್ಲಿ ಇರುವ ಎಂದರೆ ಬಂದವರೊಡನೆ ಧಾವಿಸುವರು. ಇಂತಹದೆ ವಾಹನವಾಗಬೇಕೆಂಬ ಕಡ್ಡಾಯವಿಲ್ಲ. ಆಗಿನ ಕಾಲದಲ್ಲೆ ಅವರು ಕಾರು ಇಟ್ಟಿದ್ದರೂ ರೋಗಿಗಳನ್ನು ನೋಡಲು ಎತ್ತಿನ ಬಂಡಿ, ಸೈಕಲ್ಲು, ಲಾರಿ ಯಾವುದೂ ಇಲ್ಲದಿದ್ದರೆ ನಡೆದೆ ಹೋಗಿ ಬಿಡುವರು. ನದಿ ಆಚೆಯ ಆನೆಗುಂದಿಯ ರಾಜರಿಗೆ ಅವರು ರಾಜವೈದ್ಯರು. ವಾರಕ್ಕೆ ಎರಡು ದಿನ ಅವರಲ್ಲಿಗೆ ಭೇಟಿ ನೀಡುವರು. ಅವರು ಹೋಗುವಾಗ ಒಂದೊಂದು ಸಲ ನದಿ ದಾಟಿಸಲು ಅಂಬಿಗರು ಇಲ್ಲದೆ ಇದ್ದರೂ ತಾವೆ ಹುಟ್ಟು ಹಾಕಿಕೊಂಡು ಹೋಗುವ ಗಟ್ಟಿಗರು. ಆಗ ಓಡಾಡುವ ಒಂದೆರಡು ಬಸ್ಸುಗಳಲ್ಲಿ ಅವರಿಗೆ ಉಚಿತ ಪ್ರಯಾಣ. ಹಾದಿಯಲ್ಲಿ ಅವರು ಎಲ್ಲೆ ಹೋಗುತಿದ್ದರೂ ಬಸ್ಸು ನಿಲ್ಲಿಸಿ ಕರೆದುಕೊಂಡು ಹೋಗುವರು. ಅವರಾದರೂ ರೋಗಿಯೆ ದೇವರು ಎಂದು ಕೊಂಡವರು. ಅವರಿಗೆ ರೋಗ ಗುಣವಾಗುವುದು ಮುಖ್ಯ. ಇನ್ನೆಲ್ಲ ಗೌಣ. ಎಷ್ಟೋ ಸಲ ಬಸ್ಸಿನಲ್ಲೆ ಇಂಜೆಕ್‌ಷನ್ ಕೊಟ್ಟದ್ದೂ ಇದೆ. ಅವರಲ್ಲಿರುವ ಸ್ಪಿರಿಟ್‌ ದೀಪವನ್ನು ಹತ್ತಿಸಿ ಸಿರಂಜಿನ ಸೂಜಿಯನ್ನು ಕಾಯಿಸಿ ಸ್ಟರ್‌ಲೈಜ್ ಮಾಡಿ ಚುಚ್ಚಿ ಬಿಡುವರು. ಯಾವುದೆ ಗಾಯವಾಗಿದ್ದರೆ ಹೊಸ ಬ್ಲೇಡು ತೆಗೆದುಕೊಂಡು ಅಲ್ಲಿಯೆ ಶುಚಿ ಮಾಡಿ ಹೊಲಿಗೆ ಹಾಕುವರು. ಅವರ ಈ ಅಸಂಪ್ರದಾಯಿಕ ನಡೆಯನ್ನು ನೋಡಿ ಹಿಂದೆ ಮುಂದೆ ಆಡಿಕೊಳ್ಳುವವರೂ ಒಬ್ಬಿಬ್ಬರು ಇದ್ದರು. ಕಾರಣ ಅವರಿಗೆ ಬಟ್ಟೆ ಬರೆಯ ಮೇಲೆ ಅಷ್ಟು ಗಮನ ಇರಲಿಲ್ಲ. ಸಾದಾ ಪ್ಯಾಂಟು, ಇನ್‌ ಸರ್ಟ ಮಾಡಿದ ಅಂಗಿಗೆ ಇಸ್ತ್ರಿ ಇರತ್ತಿರಲಿಲ್ಲ. ಕಾಲಲ್ಲಿ ಹಳೆಯ ಬೂಟ್ಸು. ಅವು ಹರಿದಿವೆ ಎಂಬುದೂ ಅವರು ಲೆಕ್ಕಕ್ಕೆ ಇಡುತ್ತಿರಲಿಲ್ಲ. ಅಂಥ ಸರಳ ಜೀವಿ.
ಜತೆಗೆ ಅವರು ಒಳ್ಳೆಯ ಗುರಿಗಾರರು. ಎರಡು ನಳಿಗೆ ಕೋವಿ ಹೊಂದಿದ್ದರು. ಕಾಡು ಪ್ರಾಣಿಗಳ ಕಾಟದಿಂದ ತೊಂದರೆಗೆ ಒಳಗಾದ ರೈತರು ಯಾರೆ ಬಂದು ಬೆಳೆ ಹಾಳಾಗುತ್ತಿದೆ, ದನಕರುಗಳು ಕಾಣೆಯಾಗುತ್ತಿವೆ ಎಂದು ಗೋಳಾಡಿದರೆ ಬಿಡುವು ಮಾಡಿಕೊಂಡು ಹೆಗಲಿಗೆ ಕೋವಿ ಏರಿಸಿ ಅರ್ಧರಾತ್ರಿಯಾದರೂ ಕಾಡಿಗೆ ಹೊರಡುವವರು. ಜಲಾಲ್ ಸಾಬ್ ಅವರ ಜಿಗರಿದೋಸ್ತಿ. ಬ್ಯಾಡರ ಬರಮಪ್ಪ, ಗೌಡರ ಕೃಷ್ಣಮೂರ್ತಿ ಮತ್ತು ಹರಿಜನ ಬಸಪ್ಪ ಅವರ ಜೊತೆಗಾರರು. ಅವರ ಮನೆ ಮತ್ತು ಆಸ್ಪತ್ರೆಯಲ್ಲಿ ಪುನುಗಿನ ಬೆಕ್ಕು, ಚಿರತೆ ಮರಿ, ಮೊಸಳೆ ಮರಿಗಳು ಇದ್ದೆ ಇರುತಿದ್ದವು. ಯಾರಿಗೆ ಯಾವುದೆ ಕಾಡುಪ್ರಾಣಿ ಕಂಡರೂ ಅದರಲ್ಲೂ ಮರಿಗಳಾಗಿದ್ದರೆ ಅದನ್ನು ಕೊಲ್ಲಲು ಬಿಡುತ್ತಿರಲಿಲ್ಲ. ಜನರೂ ಕೂಡಾ ಅವನ್ನು ತಂದು ಡಾಕ್ಟರಿಗೆ ಕೊಡುವರು. ಅವರು ಅವು ದೊರೆತ ಕೆಲವು ದಿನ ಮನೆಯಲ್ಲಿ ಸಾಕಿ ನಂತರ ಪ್ರಾಣಿ ಸಂಗ್ರಹಾಲಯಕ್ಕೆ ಕೊಡುವರು. ಅವರಿಂದ ನನಗೆ ಸ್ಪೂರ್ತಿ ಬಂದಿತ್ತು. ಇದ್ದರೆ ಹಾಗೆ ಇರಬೇಕು ಎಂದು ಕೊಂಡಿದ್ದೆ. ಆದರೆ ವೈದ್ಯನಾದರೆ ಹೆಣ ಕೊಯ್ಯಬೇಕಲ್ಲ ಎಂಬ ಹಿಂಜರಿಕೆ ನಮ್ಮವರದು. ಅದಕ್ಕೆ ಪಿಸಿಬಿ ತೆಗೆದುಕೊಳ್ಳುವ ಪ್ರಶ್ನೆಯೆ ಇರಲಿಲ್ಲ.
ಮೇಲಾಗಿ ನಮ್ಮ ಮಾವ ಸಿವಿಲ್‌ ಕಂಟ್ರಾಕ್ಟರ್‌. ಆತನಿಗೆ ಅಳಿಯನನ್ನು ಸಿವಿಲ್  ಇಂಜನಿಯರ್‌ ಮಾಡಬೇಕೆಂಬ ಹಂಬಲ. ಅವರು ಜೀಪಿನಲ್ಲಿ ಓಡಾಡುತಿದ್ದ ಜೋರು, ಪ್ರವಾಸಿ ಬಂಗಲೆಯಲ್ಲಿ ಅವರ ಜರ್ಬು, ದೊಡ್ಡ ದೊಡ್ಡ ಗುತ್ತಿಗೆದಾರರು ಅವರ ಮುಂದೆ ಕೈಕಟ್ಟಿ ಓಲೈಸುವ ಪರಿ ಅವರನ್ನು ಮರಳು ಮಾಡಿತ್ತು. ಏನಾದರೂ ಆಗಲಿ ನಮ್ಮ ಹುಡುಗ ಜಾಣನಿದ್ದಾನೆ. ಅವನು ಇಂಜಿನಿಯರ್‌ ಆಗಬೇಕು ಎಂದು ಹಟ ಅವರದು. ಅದಕ್ಕೆ ತಲೆಯಾಡಿಸಿದರು ನಮ್ಮ ತಂದೆ. ಅದಕ್ಕೆ ನನಗೆ ಪಿಸಿಬಿ ಸೇರಲು ಉತ್ತೇಜನ ಸಿಗಲಿಲ್ಲ. ನಾನು ಪಿಸಿಎಂ ತೆಗೆದುಕೊಂಡು ನ್ಯಾಷನಲ್‌ ಕಾಲೇಜು ಸೇರುವುದು ಎಂದಾಯಿತು. ನ್ಯಾಷನಲ್‌ ಕಾಲೇಜಿನಲ್ಲಿ ಸೀಟು ಸಿಕ್ಕುವುದು ಖಾತ್ರಿ ಇತ್ತು. ಅಲ್ಲಿ ಡೊನೇಷನ್‌ ಇರಲಿಲ್ಲ. ಯಾರ ಪ್ರಭಾವವೂ ಬೇಕಿರಲಿಲ್ಲ. ಆಗಿನ್ನೂ ಮೀಸಲಾತಿ ಇಲ್ಲ. ಪ್ರತಿಭೆಯ ಆಧಾರದ ಮೇಲೆ ಸೀಟು ಕೊಡುವರು. ಪಡೆದಿರುವ ಅಂಕಗಳು ಉತ್ತಮವಾಗಿರುವುದರಿಂದ ನನಗೆ ಸೀಟು ಸಿಗುವುದು ಖಾತ್ರಿ ಇತ್ತು. ನನಗೆ ಕೊನೆಯ ಇಪ್ಪತ್ತರಲ್ಲಿ ಒಂದು ಸೀಟು ಸಿಕ್ಕಿತು.
ಅದು Rank ಕಾಲೇಜು ಎಂದೆ ಹೆಸರಾಗಿತ್ತು. ಫಲಿತಾಂಶವೂ ಅತ್ಯುತ್ತಮವಾಗಿತ್ತು. ಮೂರು ನೂರು ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತರೆ  ೨೦೦ ಜನ ಪ್ರಥಮ ದರ್ಜೆಯಲ್ಲಿ ೭೫ ಜನ ದ್ವಿತಿಯ ದರ್ಜೆಯಲ್ಲಿ ೨೫ ಜನ ತೃತಿಯದರ್ಜೆಯಲ್ಲಿ ಪಾಸಾಗುವರು. ಫೇಲು ಎನ್ನುವ ಮಾತೆ ಇಲ್ಲ. ನ್ಯಾಷನಲ್‌ ಕಾಲೇಜಿನ ವಿದ್ಯಾರ್ಥಿ ಎಂಬುದೆ ಪ್ರತಿಷ್ಠೆಯ ವಿಷಯ. ಕಾಲೇಜು ಸೇರಲು ಅರ್ಜಿ ತುಂಬುವಾಗಿನ ಒಂದು ಘಟನೆ ಇಂದಿಗೂ ನನ್ನ ಮನಸ್ಸಿನಲ್ಲಿ ಹಚ್ಚ ಹಸುರಾಗಿದೆ. ಪ್ರವೇಶ ಅರ್ಜಿಯನ್ನು ಪಡೆದೆವು. ಅದನ್ನು ತುಂಬುವಾಗ ಮೊದಲ ಕಾಲಂನಲ್ಲಿ ಹೆಸರು ಬರೆಯಬೇಕಿತ್ತು. ಅಲ್ಲಿ ಹೆಸರನ್ನು  block letterನಲ್ಲಿ ಬರೆಯಿರಿ ಎಂದಿತ್ತು. ನಾನು ನಮ್ಮ ಮಾವನನ್ನು ಕೇಳಿದೆ. ಮಾವ! ಬ್ಲಾಕ್ ಅಕ್ಷರಗಳಲ್ಲಿ ಬರೆ ಎಂದಿದೆ, ನನ್ನ ಹತ್ತಿರ  ಬ್ಲಾಕ್‌ ಇಂಕಿನ ಪೆನ್‌ ಇಲ್ಲ. ನೀಲಿ ಇಂಕಿನ ಪೆನ್‌ ಇದೆ. ಈಗ ಏನು ಮಾಡುವುದು? ಯಾರ ಹತ್ತಿರವಾದರೂ ಕರಿ ಮಸಿಯ ಪೆನ್ನು ಇಸಿದುಕೊಳ್ಳೆ?” ನಮ್ಮ ಮಾವ ಮುಗಳ್‌ ನಕ್ಕರು.
ಏಯ್‌, ಅದು ಕರಿ ಮಸಿಯಿಂದ ಬರೆ ಎಂದು ಹೇಳಿದ್ದಲ್ಲ. ಮೊದಲ ವರ್ಗದ ಅಕ್ಷರಗಳಲ್ಲಿ ಬರೆ ಎಂದು. ನೀನು  block ಅನ್ನು black ಎಂದು ಕೊಂಡಿದ್ದೀಯ ಎಂದು ಹೇಳಿದರು. ಒಂದು ಕೇಂದ್ರಕ್ಕೆ ಪ್ರಪ್ರಥಮನಾಗಿ ಬಂದಿದ್ದ ನನಗೆ ಅದು ಗೊತ್ತಿರಲೆ ಇಲ್ಲ. ಅಧ್ಯಯನದ ಜೊತೆ ಅವಕಾಶ ಮತ್ತು ವಾತಾವರಣವೂ ಉತ್ತಮ ಕಲಿಯುವಿಕೆಗೆ ಅನುಕೂಲ ಮಾಡಿಕೊಡುವುದು ಎಂಬುದರ ಪ್ರಥಮ ಪಾಠ ನಾನು ಆ ಘಟನೆಯಿಂದ ಕಲಿತೆ.
ಅಲ್ಲಿನ ಪ್ರಾಂಶುಪಾಲರು ಎಚ್‌. ನರಸಿಂಹಯ್ಯನವರು. ಅವರ ಉಡುಪು ಸದಾ ಖಾದಿಯ ಬಿಳಿ ಜುಬ್ಬಾ, ಲುಂಗಿ, ತಲೆಯ ಮೇಲೆ ಗಾಂಧಿ ಟೋಪಿ. ಕಾಲಲ್ಲಿ ಸಾಧಾರಣ ಚಪ್ಪಲಿ. ಅವರ ವಾಸ ಮಕ್ಕಳೊಡನೆ ಕಾಲೇಜಿನ ಆವರಣದಲ್ಲೆ ಹಿಂದೆ ಇದ್ದ ಹಾಸ್ಟೆಲ್ಲಿನ ಒಂದು ಕೋಣೆಯಲ್ಲಿ. ಸಂಸಾರವಿಲ್ಲದ ಒಂಟಿ ಬಡಕ ಎನ್ನುವ ಹಾಗಿಲ್ಲ. ಎಲ್ಲ ವಿದ್ಯಾರ್ಥಿಗಳು ಅವರ ಕುಟುಂಬದವರೆ. ಒಂದು ಕಡ್ಡಿ ಚಾಪೆ ಮತ್ತು ಬರೆಯಲು ಒಂದು ಹಳೆಕಾಲದ ಶ್ಯಾನುಬೋಗರ ಇಳಿಜಾರು ಮೈ ಇರುವ ಪುಟ್ಟ ಡೆಸ್ಕ್ ಅವರಲ್ಲಿದ್ದ ಪೀಠೋಪಕರಣಗಳು. ವಿದ್ಯಾರ್ಥಿಗಳ ಜೊತೆಯ ಊಟ ತಿಂಡಿ. ಆಹಾರದಲ್ಲೂ ಅಪ್ಪಟ ಸಸ್ಯಾಹಾರಿ. ಅಮೇರಿಕಾದಲ್ಲಿ ವರ್ಷಗಟ್ಟಲೆ ಇದ್ದರೂ ತಮ್ಮ ವ್ರತ ಬಿಡದ ಕಟ್ಟಾ ಗಾಂಧಿವಾದಿ. ಪಟ್ಟು ಬಿಡದೆ ಬರಿ ಉಪ್ಪಿಟ್ಟು ತಿಂದು ಕಾಲ ಹಾಕಿದವರು. ಕಾಲೇಜು ಮುಗಿದ ನಂತರ ಅಲ್ಲಿರುವ ವಿದ್ಯಾರ್ಥಿಗಳ ಮೇಲೆ ಹದ್ದಿನ ಕಣ್ಣು. ಅವರ ಅಭ್ಯಾಸದ ಮೇಲುಸ್ತುವಾರಿ. ವಿದ್ಯೆಗೆ ಎಷ್ಟೆ ಒತ್ತು ಕೊಟ್ಟರೂ ಸಂಜೆ ಆಟದ ಮೈದಾನದಲ್ಲಿ ಹಾಜರು.
ಎಷ್ಟೋ ಜನ ಪೋಷಕರು ಮಕ್ಕಳನ್ನು ಕಾಲೇಜಿಗೆ ಸೇರಿಸಲು ಬಂದಾಗ ಕಾರಿನಿಂದ ಇಳಿದು ಅಲ್ಲೆ ಇದ್ದ ಇವರನ್ನು ಯಾರೋ ನಾಲ್ಕನೆ ದರ್ಜೆ ನೌಕರರೆಂದು ಭಾವಿಸಿದ್ದುಂಟು. ಒಬ್ಬರು ಪ್ರಿನ್ಸಿಪಾಲರು ಇದ್ದಾರೆನಯ್ಯ? ಯಾವಾಗ ಬರುವರು?” ಎಂದು ಕೇಳಿದರೆ ಅವರಿಗೆ ಮುಗುಳ್ ನಗುತ್ತಾ ಈಗ ಬರುವರು ಸ್ವಾಮಿಎಂಬ ಉತ್ತರ ಸಿಕ್ಕುವುದು.
ತುಸು ಸಮಯದ ನಂತರ ಅವರು ಪ್ರಾಂಶುಪಾಲರ ಕೋಣೆಗೆ ಹೋದಾಗ ಕುರ್ಚಿಯಲ್ಲಿ ಕುಳಿತವರನ್ನು ನೋಡಿ ದಂಗಾಗುವರು. ಅವರು ಆಗ  ಏಕವಚನದಲ್ಲಿ ಮಾತನಾಡಿಸಿದವರೆ ಈಗ ಪ್ರಾಂಶುಪಾಲರ ಕುರ್ಚಿಯಲ್ಲಿ ಕುಳಿತಿರುವರು. ಬಂದವರು ಕೈ ಕೈ ಹಿಚುಕಿಕೊಂಡರು. ಅದಕ್ಕೆ ಅವರ ಪ್ರತಿಕ್ರಿಯೆ ಮುಸಿ ನಗೆ. ಅವರನ್ನು ಕುರಿತ ಇಂತಹ ಅನೇಕ ಕಥೆಗಳು  ಪ್ರಚಲಿತವಿದ್ದವು. ಆದರೆ, ಅವರ ಸಹೃದಯತೆ, ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸಹಾಯಮಾಡುವ ದಯಾಪರತೆ, ಹಾಸ್ಟಲ್ಲಿನಲ್ಲಿ ಆರೋಗ್ಯ ತಪ್ಪಿದವರ ಆರೈಕೆ ಮಾಡುವ ಪರಿ ಎಲ್ಲರೊಡನೆ ಬೆರೆಯುವ ಸರಳತೆ ಪಠ್ಯೇತರ ಚಟುವಟಿಕೆಗಳಲ್ಲಿನ ಅವರ ಅತೀವ ಆಸಕ್ತಿ ಎಲ್ಲರ ಬಾಯಿಯಲ್ಲಿ ನಲಿದಾಡುತ್ತಿದ್ದವು. ಅವರು ಅಲ್ಲಿ ಕಾಲೇಜಿನ ಆವರಣದಲ್ಲಿರುವರು ಎಂಬುದೆ ಒಂದು ರೀತಿಯ ಪ್ರಭಾವವನ್ನು ಎಲ್ಲರ ಮೇಲೆ ಬೀರುತಿತ್ತು.
ನಮ್ಮ ರಾಜ್ಯದಲ್ಲಿ ವಿಜ್ಞಾನ ಪರಿಷತ್ತು ಮೊದಲಾಗಲು ಅವರೆ ಕಾರಣ. ನಂತರದಲ್ಲಿ ಅವರ ಮತ್ತು ದೇವ ಮಾವನರೆಂದೆ ವಿಶ್ವಾದ್ಯಂತ ಹೆಸರಾಗಿದ್ದ ಪುಟ್ಟಬರ್ತಿ ಸಾಯಿಬಾಬ ಅವರೊಡನೆ ಅವರ ಸಂಘರ್ಷ ನನ್ನ ವಿಚಾರಪರತೆಯನ್ನು ಪ್ರಖರಗೊಳಿಸಿತು. ಶ್ಯೂನ್ಯದಿಂದ ಬಡವರಿಗೆ ಭಸ್ಮ, ಉಳ್ಳವರಿಗೆ ಉಂಗುರ ಸೃಷ್ಟಿ ಮಾಡಿ ನೀಡುತಿದ್ದ ಅವರ ಕ್ರಮವನ್ನು ಕೈಚಳಕ ಎಂದು ಕರೆದರು. ಅವರಿಗೆ ಕುಂಬಳಕಾಯಿ ಸೃಷ್ಟಿಸಲು ಸವಾಲು ಹಾಕಿದರು. ಅವರ ಖುದ್ದು ಭೇಟಿಗೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವರ ನಡೆಯಿಂದ ಸಾಯಿ ಭಕ್ತರಿಗೆ ಅಸಮಾಧಾನವಾದರೂ ಅವರು ಲೆಕ್ಕಿಸಲಿಲ್ಲ. ಪವಾಡಗಳ ರಹಸ್ಯ ಬೇಧಿಸಲು, ಭಾನಾಮತಿಯನ್ನು ಬಯಲು ಮಾಡಲು ಅವರು ಉಪಕುಲಪತಿಗಳಾದ ನಂತರ ಸಮಿತಿಯೊಂದನ್ನೆ ರಚಿಸಿದರು. ಎಲ್ಲಿಯೆ ಅಂಥ ಶ್ರದ್ಧೆ. ಮೂಢನಂಬಿಕೆ ಇದ್ದರೂ ಅದನ್ನು ನಿವಾರಿಸಲು ಇಳಿವಯಸ್ಸಿನ ತನಕ ಅವರು ಶ್ರಮಿಸಿದರು.
ಅವರ ನೇರ ಪರಿಚಯದ ಭಾಗ್ಯ ನನಗೆ ದೊರಕಲೆ ಇಲ್ಲ. ಅವರು ಪದವಿ ತರಗತಿಗಳಿಗೆ ಮಾತ್ರ ಪಾಠ ಮಾಡುತ್ತಿದ್ದಂತೆ ಕಂಡುಬಂದಿತು. ಅವರು ಅಲ್ಲಿಯೆ ಇದ್ದ ಹಾಸ್ಟೆಲಿನ ಕೋಣೆಯಲ್ಲಿ ಚಾಪೆಯ ಮೇಲೆ ಕುಳಿತು ಓದುತ್ತಾ ಇರುವುದನ್ನು, ಸಂಜೆ ವಿದ್ಯಾರ್ಥಿಗಳೊಡನೆ ಬ್ಯಾಡಮಿಂಟನ್‌ ಆಡುತ್ತಿರುವುದನ್ನು ಆಗಾಗ ಕಾಣುತಿದ್ದೆ.
ನಾನು ನಿವೃತ್ತನಾದ ಮೇಲೂ ಎರಡು ವರ್ಷ ಚಿತ್ರದುರ್ಗದ ಬೃಹನ್‌ಮಠದಲ್ಲಿ ವಿಶೇಷ ಅಧಿಕಾರಿಯಾಗಿರುವಾಗ ಅಲ್ಲಿ ವಿಜ್ಞಾನ ಮೇಳ ನಡೆಸಲಾಯಿತು. ಎಚ್‌ ಎನ್‌ ನೆನಪಲ್ಲಿ ನಡೆದ ಸಮಾರಂಭದಲ್ಲಿ ಅಲ್ಲಿ ಅವರ ಫೋಟೊ ಬದಲಾಗಿ ವೇದಿಕೆಯ ಮೇಲೆ ದೊಡ್ಡದಾಗಿ ಪ್ರಶ್ನೆಯ ಗುರುತನ್ನು ಪ್ರದರ್ಶಿಲಾಗಿತ್ತು. ಅದು ಏನೆಂದು ಎಲ್ಲರೂ ಕೇಳುವವರೆ. ಅದು ಎಲ್ಲವನ್ನೂ ಪ್ರಶ್ನಿಸಿ ಅರ್ಥ ಮಾಡಿಕೊಂಡು ನಂತರ ಒಪ್ಪಿಕೋ ಎಂಬ ಅವರ ಧ್ಯೇಯದ ಸಂಕೇತವಾಗಿತ್ತು.
ಸೂರ್ಯನಿಂದ, ಬೆಳಕು ಪಡೆಯಲು ಹತ್ತಿರ ಹೋಗಬೇಕೆಂದೇನೂ ಇಲ್ಲ, ಕಣ್ಣು ತೆರೆದರೆ ಸಾಕು ಬೆಳಕು ತಾನೆ ತಾನಾಗಿ ಬರುವುದು. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಎಚ್‌.ಎನ್‌ ಸಾವಿರಾರು ಮನದಲ್ಲಿ ಸೇವೆಯ ಕಿಡಿ ಮೂಡಿಸಿದರು. ಅವರ ಶಿಷ್ಯ ಎಂದು ಹೇಳಿಕೊಳ್ಳುವದರಲ್ಲಿ ಇಂದಿಗೂ ನನಗೆ ಹೆಮ್ಮೆ. ಅದು ದಿನ ದಿನಕ್ಕೆ ಹೆಚ್ಚಾಗುತ್ತಲೆ ಇದೆ...



No comments:

Post a Comment