Tuesday, August 21, 2012

ಇಬ್ಬರು ಅಧ್ಯಾಪಕರ ಕುರಿತು

http://kendasampige.com/images/trans.gif
http://kendasampige.com/images/trans.gif
ಬಳ್ಳಾರಿ ಜಿಲ್ಲೆಯ ಕಾಲೇಜು ಒಂದರಲ್ಲಿ ಧಾರ್ಮಿಕ ಆಚರಣೆ ಮತ್ತು ಸಾಮಾಜಿಕ ನಡವಳಿಕೆಗಳ ನಡುವಿನ ತಾಕಲಾಟದಿಂದ ಆಗುವ ವಿಚಿತ್ರ ಘಟನೆಯೊಂದು ಅನುಭವಕ್ಕೆ ಬಂದಿತು. ಅಲ್ಲಿನ ಪ್ರಾಂಶುಪಾಲರು ತುಂಬ ಸಜ್ಜನರು. ಧರ್ಮಭೀರು. ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು. ಆದರೆ ನಮಾಜಿಗೆಂದು ಕಾಲೇಜು ಸಮಯದಲ್ಲಿ ಹೊರಗೆ ಹೋಗುತ್ತಿರಲಿಲ್ಲ. ಮನೆಯಲ್ಲಿ ನಿತ್ಯ ನಮಾಜು ತಪ್ಪಿಸುತ್ತಿರಲಿಲ್ಲ. ವಿಶೇಷ ದಿನಗಳಲ್ಲಿ ತಮ್ಮ ಚೇಂಬರ್‌ನಲ್ಲಿ ಜಮಖಾನ ಹಾಕಿ ತಲೆಗೆ ಕರವಸ್ತ್ರ ಕಟ್ಟಿ ಮಂಡಿಯೂರುತಿದ್ದರು. ನಮಗೆ ಮೊದ ಮೊದಲು ಅದು ಅತಿ ಎನಿಸಿದರೂ ಅವರ ಶ್ರದ್ಧೆ ಮತ್ತು ಕರ್ತವ್ಯಪರತೆ ಮೆಚ್ಚುಗೆಯಾಯಿತು. ಅವರು ಬಂದ ಹೊಸತರಲ್ಲಿ ಕೆಲ ವಿದ್ಯಾರ್ಥಿಗಳು ಪ್ರತಿ ಶುಕ್ರವಾರ ಮಧ್ಯಾಹ್ನ ನಮಾಜಿಗೆ ಹೋಗಲು ಅವಕಾಶ ಕೊಡಲು ಬೇಡಿಕೆ ಸಲ್ಲಿಸಿದಾಗ, ಈವರೆಗೆ ಹೋಗದೆ ಇದ್ದವರು ಈಗ ಏಕದಂ ಅವಕಾಶ ಕೇಳುತ್ತಿರುವ ಕಾರಣ ಅವರಿಗೆ ವಿದಿತವಾಯಿತು. ದಿನವೂ ಎಷ್ಟುಸಲ ನಮಾಜು ಮಾಡುವಿರಿ ಎಂದು ಮಕ್ಕಳನ್ನು ವಿಚಾರಿಸಿದರು. ಮಕ್ಕಳು ಮೂಕರಾಗಿ ನಿಂತರು. ಬಹುತೇಕ ಯಾರೂ ಮಾಡುತ್ತಿರಲಿಲ್ಲ. ಅವರಿಗೆ ಪಾಠ ತಪ್ಪಿದರ ತೊಂದರೆಯಾಗುವುದೆಂದು ತಿಳಿಹೇಳಿ ನಯವಾಗಿ ರಿಯಾಯತಿ ನೀಡಲು ನಿರಾಕರಿಸಿದರು. ಅದಕ್ಕೆ ಇಲಾಖೆಯಲ್ಲಿ ಅವಕಾಶವಿದ್ದರೂ ವಿದ್ಯಾರ್ಥಿಗಳ ಹಿತದೃಷ್ಟಿ ಅವರಿಗೆ ಮುಖ್ಯವಾಗಿತ್ತು. ಅವರು ಬಹಳ ಸ್ವಚ್ಛ ಕನ್ನಡ ಮಾತನಾಡುತಿದ್ದರು, ಹಿಂದೂ ಧರ್ಮ ಕುರಿತಾಗಿ ನಮ್ಮ ಸಂಸ್ಕೃತ ಶಿಕ್ಷಕರೊಂದಿಗೆ ನಿರರ್ಗಳವಾಗಿ ರಾಮಾಯಣ ಮತ್ತು ಮಹಾಭಾರತದ ಪ್ರಸಂಗಗಳನ್ನು ಚರ್ಚಿಸುವರು. ಅವರು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಪಿಯುಸಿ ಮಕ್ಕಳಿಗೆ ಇತಿಹಾಸವನ್ನು ರಸವತ್ತಾಗಿ ಬೋಧನೆ ಮಾಡುವರು. ಯಾವುದೆ ಬೇಧವಿಲ್ಲದೆ ಎಲ್ಲರೊಂದಿಗೆ ಬೆರೆಯುವರು. ಉಗಾದಿ, ಮಹಾರ್ನವಮಿ ಬಂದರಂತೂ ಎಲ್ಲರ ಸಂಭ್ರಮದಲ್ಲಿ ಭಾಗಿಯಾಗುವರು. ಕರೆದವರ ಮನೆಗೆ ಹೋಗಿ ಖುಷಿಯಾಗಿ ಬೆರೆಯುವರು. ಹೀಗಾಗಿ ಅವರು ಸಹೋದ್ಯೋಗಿಗಳಲ್ಲಿ ಬಹು ಜನಪ್ರಿಯರಾಗಿದ್ದರು. ಅವರ ಹಬ್ಬಗಳಲ್ಲಂತೂ ಎಲ್ಲರಿಗೂ ಆಮಂತ್ರಣ.
ಅವರಂತೆ ಸಂಸ್ಕೃತ ಶಿಕ್ಷಕರೂ ಧಾರ್ಮಿಕ ಶ್ರದ್ಧಾಳು. ಸದಾ ಪಂಚೆ, ಪೂರ್ಣ ತೋಳಿನ ಅಂಗಿ. ತಲೆಯ ಮೇಲೆ ಟೋಪಿ. ಅದರ ಒಳಗಿಂದ ಇಣುಕಿನೋಡುವ ಜುಟ್ಟು. ವಾರತಿಥಿ ನೋಡಿ ಕ್ಷೌರ ಮಾಡಿಸುವರು. ಅದರಿಂದ ಬಹುತೇಕ ಅಕ್ಕಿ ಎಳ್ಳು ಬೆರೆಸಿದಂತಹ ಅರೆ ಬರೆ ಬೆಳೆದ ಗಡ್ಡ. ಅವರದೂ ಎರಡು ಹೊತ್ತು ಸಂಧ್ಯಾವಂದನೆ. ಹೊರಗೆ ಏನನ್ನೂ ಸೇವಿಸುತ್ತಿರಲಿಲ್ಲ. ಮನೆಯಲ್ಲಿ ಉಂಡ ಊಟ ಕುಡಿದ ನೀರು. ಮೌಲ್ಯಮಾಪನಕ್ಕೆ ಹೋದಾಗಲೂ ಯಾವುದೋ ಮಠದಲ್ಲಿ ವಸತಿ ಮತ್ತು ಊಟ. ಆದರೆ ಕೆಲಸದಲ್ಲಿ ಮಾತ್ರ ಇನ್ನಿಲ್ಲದ ಶ್ರದ್ಧೆ. ಯಾವುದೆ ಹೊಣೆ ನೀಡಿದರೂ ನಿರ್ವಂಚನೆಯಿಂದ ಕಾರ್ಯ ನಿರ್ವಹಣೆ. ಅದಕ್ಕೆ ಪ್ರಾಂಶುಪಾರಿಗೆ ಅವರ ಮೇಲೆ ಪ್ರೀತಿ. ಅವರು ಮನೆಗೆ ಬೇರೆಯವರನ್ನು ಕರೆಯುತ್ತಿರಲಿಲ್ಲ. ಆದರೆ ಅವರ ಮನೆಯಲ್ಲಿ ವಿಶೇಷವಾದಾಗ ಆತ್ಮೀಯರಿಗೆ ಅದರಲ್ಲೂ ಪ್ರಿನ್ಸಿಪಾಲರಿಗೆ ತಿಂಡಿಯ ಸರಬರಾಜು. ಗೋಕುಲಾಷ್ಟಮಿಯಂದು ಚಕ್ಕುಲಿ, ಕೋಡುಬಳೆ ತೆಂಗೊಳಲು ಬರುತಿತ್ತು. ನಾಗರ ಪಂಚಮಿಯಾದರೆ ತಂಬಿಟ್ಟು ಖಾತ್ರಿ. ಅವರಿಗೂ ಪ್ರಾಂಶುಪಾಲರಿಗೂ ಗಳಸ್ಯ ಗಂಠಸ್ಯ.
ಅವರಿಬ್ಬರನ್ನು ನಾವು ಉತ್ತರ ಧೃವ ಮತ್ತು ದಕ್ಷಿಣ ಧೃವ ಎಂದು ಕರೆಯುತ್ತಿದ್ದೆವು. ಅವರೂ ಪ್ರಾಂಶುಪಾಲರ ಮನೆಗೆ ಕರೆ ಬಂದಾಗ ನಮ್ಮ ಜತೆ ಸೇರುತಿದ್ದರು. ಅದರಲ್ಲೂ ರಂಜಾನ್‌ ತಿಂಗಳಲ್ಲಿ ಅವರದು ರೋಜಾ. ಕಟ್ಟುಪವಾಸ. ಸಂಜೆ ಊಟ. ಉಪನ್ಯಾಸಕರೆಲ್ಲರಿಗೂ ಆಮಂತ್ರಣ. ಅವರು ಊಟ ತಿಂಡಿ ಮಾಡದಿದ್ದರೂ ‌ಒಣ ಫಲಗಳಾದ ದ್ರಾಕ್ಷಿ, ಗೋಡಂಬಿ, ಪಿಸ್ತಾ ಬದಾಮುಗಳನ್ನು ತಿನ್ನುವರು. ಇನ್ನು ಆ ಕಾಲದಲ್ಲಿ ದೊರೆಯುವ ಹಣ್ಣುಹಂಪಲಂತೂ ಇದ್ದೆ ಇರುತಿದ್ದವು. ಪ್ರಾಂಶುಪಾಲರೂ ಅವರಿಗೆ ಏನನ್ನೂ ತಿನ್ನಲು ಕುಡಿಯಲು ಒತ್ತಾಯ ಮಾಡುತ್ತಿರಲಿಲ್ಲ. ನಾವೆಲ್ಲ ಚಿತ್ರಮಯವಾಗಿರುವ ಗೇಣೆತ್ತರ ಲೋಟಗಳಲ್ಲಿ ಸುರುಕುಂಬ ಸುರಿದಿದ್ದೇ ಸುರಿದದ್ದು. ಮೊದಲು ನಮಗೆ ಅದೇನು ಎಂದು ಅನುಮಾನ ಕಾಡಿದರೂ ಅದು ನಮ್ಮ ಶ್ಯಾವಿಗೆ ಪಾಯಸದ ಇನ್ನೊಂದು ರೂಪ ಎಂದು ರುಚಿ ನೋಡಿದ ಮೇಲೆ ಗೊತ್ತಾಯಿತು. ಇನ್ನು ಅದರ ಜತೆ ಚುಂಗೈ. ಅದು ಒಂದು ರೀತಿಯ ತುಪ್ಪದಲ್ಲಿ ಮಾಡಿದ ಡಿಜೈನ್‌ ಚಪಾತಿ. ಅದರ ಮೇಲೆ ಬೀಸಿದ ಸಕ್ಕರೆ ಮತ್ತು ತುಪ್ಪ ಹಾಕಿಕೊಂಡು ತಿನ್ನಬೇಕು. ನಮ್ಮ ಮನೆಯಲ್ಲಿ ಬಂದು ಅದರ ವರ್ಣನೆ ಮಾಡಿದ ಮೇಲೆ ನಮ್ಮ ಮನೆಯಾಕೆಗೂ ಕುತೂಹಲ ಕಾಡಿತು. ಅವಳೆ ಪ್ರಿನ್ಸಿಪಾಲರ ಮನೆಗೆ ಹೋಗಿ ವಿಚಾರಿಸಿದಳು. ಪ್ರಿನ್ಸಿಪಾಲರ ಹೆಂಡತಿಗೆ ಬಹಳ ಸಂತೋಷವಾಯಿತು. ನಮ್ಮ ಚಪಾತಿಯಂತೆಯೆ ಗೋದಿ ಹಿಟ್ಟಿನಿಂದ ಮಾಡುವುದು. ಆದರೆ ಅದನ್ನು ಬಳಪದ ಕಲ್ಲಿನ ವಿವಿಧ ವಿನ್ಯಾಸ ಹೊಂದಿದ ಹಂಚಿನ ಮೇಲೆ ಮಾಡಿರುವರು. ಹಿಟ್ಟನ್ನು ಅದರ ಮೇಲೆ ಲಟ್ಟಿಸಿದಾಗ ಹಾಳೆಯ ಮೇಲೆ ಚಿತ್ತಾರ ಮೂಡುವುದು. ಎಂದು ಪಾಕ ವಿಧಾನವನ್ನು ಹೇಳಿಕೊಟ್ಟರು. ಅಷ್ಟೆ ಅಲ್ಲ ಕೆಲವು ಸಮಯದ ನಂತರ ಬಳಪದ ಕಲ್ಲಿನ ಚುಂಗೈ ಮಣೆಯನ್ನು ಕಾಣಿಕೆಯಾಗೂ ನೀಡಿದರು.
ಅವರ ಧಾರ್ಮಿಕ ನಿಷ್ಠೆ ಮಾತ್ರ ಮೆಚ್ಚುವಂತಹದು. ಆಚರಣೆಯಲ್ಲಿ ತುಸುವೂ ವಿನಾಯತಿ ಇಲ್ಲ. ರೋಜಾ ಇರುವಾಗ ತಿನ್ನುವ ಮಾತು ಹಾಗಿರಲಿ, ನೀರನ್ನೂ ಕುಡಿಯುವುದಿಲ್ಲ. ಉಗಳನ್ನೂ ನುಂಗದ ನಿಯಮಪರತೆ ಅವರದು. ಆದರೆ ಕಾಲೇಜಿನ ಕೆಲಸದಲ್ಲಿ ಯಾವುದೆ ಹೊಂದಾಣಿಕೆ ಮಾಡಿಕೊಳ್ಳದೆ ನಗು ನಗುತ್ತಾ ಇರುತಿದ್ದರು. ಆದರೆ ರಂಜಾನ್‌ ಸಮಯದಲ್ಲಿ ಯಾವುದೆ ಸಂತೋಷ ಕೂಟವಾದರೂ ಬಂದು ಕೂಡುತಿದ್ದರೆ ಹೊರತು ಏನನ್ನೂ ತಿನ್ನುತ್ತಿರಲಿಲ್ಲ.
ನಮ್ಮ ಕಾಲೇಜಿನಲ್ಲಿ ಗಣಪತಿ ಉತ್ಸವವನ್ನು ಬಹಳ ವಿಜೃಂಭಣೆಯಿಂದ ಪ್ರತಿವರ್ಷವೂ ಆಚರಿಸುವ ಪದ್ದತಿ. ಮಕ್ಕಳೆ ಚಂದಾಹಾಕಿ ಪೂಜೆ ಮಾಡುವರು. ಆದಿನ ಪೂಜೆಯ ನಂತರ ತೀರ್ಥ ಮತ್ತು ಪ್ರಸಾದ ವಿತರಣೆಯಾಗುತಿತ್ತು. ಮೂರುದಿನದ ನಂತರ ಗಣಪತಿ ವಿಸರ್ಜನೆ. ಎಲ್ಲರಿಗೂ ಉಪಹಾರ.
ಪ್ರಿನ್ಸಿಪಾಲರು ತಾವು ರೋಜಾ ಇರುವುದರಿಂದ ಏನನ್ನೂ ಸೇವಿಸುವುದಿಲ್ಲ. ಸೂರ್ಯ ಮುಳಗುವ ತನಕ ಬಾಯಲ್ಲಿ ನೀರನ್ನೂ ಹಾಕದೆ ಇರುವುದು ತಮ್ಮ ವ್ರತ ಎಂದು ಮೊದಲೆ ತಿಳಿಸಿದ್ದರು. ಆದರೆ ನೀವೆಲ್ಲ ಏನೇನು ಮಾಡಬೇಕೊ ಎಲ್ಲವನ್ನೂ ಸಂಪ್ರದಾಯ ಬದ್ದವಾಗಿ ಮಾಡಿ ನಾನು ಬರಿದೆ ಭಾಗವಹಿಸುವೆ ಎಂದು ಆಶ್ವಾಸನೆ ನೀಡಿದರು. ವಿದ್ಯಾರ್ಥಿಗಳು ಖುಷಿಯಿಂದ ಹಣ ಸಂಗ್ರಹಿಸಿದರು. ನಮ್ಮ ಕ್ರಾಫ್ಟ ಮಾಸ್ಟರ್‌ ಮಾರ್ಗದರ್ಶನದಲ್ಲಿ ತಳಿರು ತೋರಣ ಕಟ್ಟಿದರು ಮತ್ತು ಬಣ್ಣದ ಕಾಗದದಿಂದ ಅಲಂಕೃತ ಮಂಟಪ ಸಿದ್ಧವಾಯಿತು. ಪೂಜೆಗೆ ಮಂತ್ರ ಹೇಳಲು ಹೇಗೂ ಸಂಸ್ಕೃತ ಮಾಷ್ಟ್ರು ಇದ್ದೆ ಇದ್ದರು. ಅವರು ಶಾಸ್ತ್ರಬದ್ಧವಾಗಿ ಮಂತ್ರಸಹಿತ ಗಣೇಶನ ಪೂಜೆಯನ್ನು ಸಾಂಗವಾಗಿ ಮಾಡಿಸಿದರು. ಅವರದೂ ಕಟ್ಟಾಧಾರ್ಮಿಕ ಆಚರಣೆ ಮನೆಯ ಹೊರಗೆ ಏನೂ ತಿನ್ನುತ್ತಿರಲಿಲ್ಲ. ಕೊನೆಗೆ ನೀರನ್ನೂ ಕುಡಿಯರು. ಅವರು ನಮ್ಮೊಡನೆ ಶಾಲೆಯಲ್ಲಿ ಊಟ ತಿಂಡಿ ತಿನ್ನುತ್ತಿರಲಿಲ್ಲ. ಆದರೆ ಸಮಾರಂಭದಲ್ಲಿ ಆಸಕ್ತಿಯಿಂದ ಭಾಗವಹಿಸುವರು. ಗಣಪತಿ ಪೂಜಾದಿವೂ ಅಷ್ಟೆ. ಅವರು ತಿಂಡಿತೀರ್ಥ ತೆಗೆದುಕೊಳ್ಳುತ್ತಿರಲಿಲ್ಲ ಆದರೆ ಹಣ್ಣು ಮತ್ತು ತೆಂಗಿನ ಕಾಯಿಹೋಳುನ್ನು ಪ್ರಸಾದವೆಂದು ಮನೆಗೆ ಒಯ್ಯುತಿದ್ದರು ಅದೇ ರೀತಿ ಪ್ರಾಂಶುಪಾಲರಿಗೂ ನಾವು ಅವರಿಗೆ ಪ್ರಸಾದವೆಂದು ಕಾಯಿ ಹಣ್ಣು ನೀಡುವುದಾಗಿಯೂ ಅವರು ಅದನ್ನು ಸ್ವೀಕರಿಸಬೇಕೆಂದು ಕೋರಿದೆವು. ಅವರು ಪ್ರಸಾದವನ್ನು ಸಂತೋಷವಾಗಿ ಮನೆಗೆ ತೆಗೆದುಕೊಂಡು ಹೋಗಿ ರಾತ್ರಿ ಉಪವಾಸ ಮುಗಿದ ಮೇಲೆ ಖಂಡಿತವಾಗಿ ಸಂಸಾರ ಸಮೇತ ಹಣ್ಣುಗಳನ್ನು ತಿನ್ನುವುದಾಗಿ ತಿಳಿಸಿದರು. ನಮಗೆಲ್ಲರಿಗೂ ಬಹಳ ಸಂತೋಷವಾಯಿತು. ಗಣೇಶ ಚತುರ್ಥಿಯ ದಿನ ಬೆಳಗ್ಗೆ ಒಂಬತ್ತಕ್ಕೆ ಹಾಜರಾಗಿದ್ದರು. ಮಕ್ಕಳು, ಸಿಬ್ಬಂದಿಯವರೂ ಸೇರಿದರು.
ಅಂದು ಹುಡುಗಿಯರ ಸಡಗರ ಹೇಳತೀರದು ಎಲ್ಲರೂ ಹೊಸ ಬಟ್ಟೆ, ರೆಷ್ಮೆ ಸೀರೆ ಧರಿಸಿ ಯಾರೋ ಹೊರಗಿನ ಮಹಿಳೆಯರು ಬಂದಿರುವರು ಎಂದು ತಿರುಗಿ ನೋಡುವಷ್ಟು ಅಲಂಕಾರ ಮಾಡಿಕೊಂಡು ಬಂದಿದ್ದರು.. ಆಚಾರ್ಯರು ಮಂತ್ರ ಹೇಳುತಿದ್ದರು ಹುಡುಗನೊಬ್ಬ ಪೂಜೆ ಮಾಡಿದ. ಪೂಜೆ ಪ್ರಾರಂಭಿಸಿದರು ಪೂಜೆ ಪ್ರಾರಂಭವಾಯಿತು. ಎಲ್ಲರೂ ಹೂವು ಮಂತ್ರಾಕ್ಷತೆ ಹಾಕಿದರು.ನಂತರ ಮಂಗಳಾರತಿ ಬಂದಿತು. ಪೂಜೆ ಮಾಡಿದ ಹುಡುಗನಿಗೆ ಖುಷಿಯೋ ಖುಷಿ. ಮಂಗಳಾರತಿ ತಟ್ಟೆಯಲ್ಲಿ ದಕ್ಷಿಣೆ ಅವನದು. ನಮ್ಮ ಪ್ರಾಂಶುಪಾಲರೂ ಐದು ರೂಪಾಯಿ ದಕ್ಷಿಣೆ ಹಾಕಿದರು. ನಂತರ ಅವನು ಎಲ್ಲರಿಗೂ ತೀರ್ಥ ಕೊಡಲು ಶುರು ಮಾಡಿದ. ಮೊದಲ ಗೌರವ ಕಾಲೇಜು ಮುಖ್ಯಸ್ಥರದು. ಅವನು ಬಂದ ಕೂಡಲೆ ಅವರೂ ಎದ್ದುನಿಂತು ಎಲ್ಲರಂತೆ ಕೈ ಒಡ್ಡಿದರು. ಅವನು ತೀರ್ಥ ನೀಡಿದ. ಅವರು ಭಕ್ತಿಯಿಂದ ಎರಡೂ ಕಣ್ಣಿಗೆ ಒತ್ತಿಕೊಂಡು ಕುಡಿದರು. ಹುಡುಗನು ನಾಲಕ್ಕಾರು ಮಂದಿ ಉಪನ್ಯಾಸಕರಿಗೆ ನೀಡಿದ. ಸಂಸ್ಕೃತ ಶಿಕ್ಷಕರು ತಾವೆ ಪೂಜೆ ಮಾಡಿಸಿದರೂ ತೀರ್ಥ ತೆಗೆದುಕೊಳ್ಳಲಿಲ್ಲ. ಆ ಹುಡುಗ ಎಲ್ಲರಿಗೂ ತೀರ್ಥ ಕೊಡುತ್ತಾ ಮುಂದೆ ಸಾಗಿದ ಪ್ರಾಂಶುಪಾಲರು ಧಡಕ್ಕನೆ ಎದ್ದು ಬಾಗಿಲ ಕಡೆ ಧಾವಿಸಿದರು. ಅವರು ಬೆಚ್ಚಿ ಬಿದ್ದು ಹೊರಗೆ ಧಾವಿಸಿದ್ದು ಕಂಡು ನಮಗೆ ಗಾಬರಿಯಾಯಿತು. ಹೊರಗೆ ಬಂದು ನೋಡಿದರೆ ಗಿಡದ ಬುಡದಲ್ಲಿ ಅವರು ವಾಂತಿ ಮಾಡಿಕೊಳ್ಳುತಿದ್ದಾರೆ. ಥೂ ಥೂ ಎಂದು ಒಂದೆ ಸಮನೆ ಉಗುಳುತಿದ್ದಾರೆ. ನಮಗೆ ಏನೂ ತೋಚಲಿಲ್ಲ. ಗಂಟಲಿಗೆ ಕೈ ಹಾಕಿ ವಾಂತಿ ಮಾಡಿಕೊಳ್ಳುತ್ತಿರುವರು. ಬಹುಶಃ ಜಲಮಾಲಿನ್ಯದಿಂದ ತೊಂದರೆಯಾಗಿದೆತೀರ್ಥದ ದೋಷದಿಂದ ಅವರಿಗೆ ಹೀಗೆ ವಾಂತಿಯಾಗಿದೆ ಎಂದು ಕೊಂಡೆವು. ಆದರೆ ತೀರ್ಥ ಕುಡಿದಿದ್ದ ಇತರರಿಗೆ ಏನೂ ಆಗಿಲ್ಲ. ಎಲ್ಲ ಸರಿಯಾಗೆ ಇದ್ದಾರೆ.
ಪ್ರಾಂಶುಪಾಲರಿಗೆ ಏನೋ ತೊಂದರೆ ಯಾಗಿರುವುದು ಖಚಿತವಾಯಿತು. ಅವರ ವಾಕರಿಕೆ ಮುಂದುವರೆದೇ ಇತ್ತು. ವೈದ್ಯರ ಹತ್ತಿರ ಹೋಗುವುದು ಒಳ್ಳೆಯದು ಇಲ್ಲವಾದರೆ ಅವರನ್ನೆ ಕರಸಿದರೂ ಸರಿ, ಎನಿಸಿತು. ಎಂದು ಜವಾನನ್ನು ಕರೆದು ತಕ್ಕಣ ಹತ್ತಿರದಲ್ಲೆ ಮನೆ ಇದ್ದ ವೈದ್ಯರನ್ನು ಕರೆತರಲು ಹೇಳಿದೆವು.. ಆದರೆ ಅವರು ಕೈ ಸನ್ನೆ ಬಾಯಿ ಸನ್ನೆ ಮಾಡಿ ಬೇಡ, ಬೇಡ  ಎಂದು ಸೂಚಿಸಿದರು. ನಾವು ಸುತ್ತ ಮುತ್ತ ನೋಡಿದೆವು. ನೂರಾರು ಜನ ತೀರ್ಥ ಕುಡಿದಿದ್ದರೂ ಯಾರಿಗೂ  ಏನೂ ಆಗಿರಲಿಲ್ಲ. ಎಲ್ಲರೂ ಧನ್ಯತಾ ಭಾವದಿಂದ ನೆಮ್ಮದಿಯಾಗಿದ್ದರು. ಆದ್ದರಿಂದ ಅಂತಹ ಅಪಾಯವಿಲ್ಲ ಎನಿಸಿತು. ಹತ್ತು ನಿಮಿಷದ ತರುವಾಯ ಸಾಹೇಬರು ಸಹಜ ಸ್ಥಿತಿಗೆ ಬಂದರು. ಆಮೇಲೆ ತಿಳಿಯಿತು. ಅವರು ರೊಜಾದಲ್ಲಿದ್ದಾರೆ. ಏನನ್ನೂ ಸೇವಿಸಬಾರದು. ಆದರೆ ಅದನ್ನು ಮರೆತು ಪೂಜೆಯ ನಂತರ ತೀರ್ಥವನ್ನು ಎಲ್ಲರಂತೆ ಕುಡಿದಿದ್ದಾರೆ. ನಂತರ ನೆನಪಾಗಿದೆ. ತಾವು ರಂಜಾನ್‌ ಉಪವಾಸ ವ್ರತದಲ್ಲಿರುವುದು. ಕಟ್ಟಾ ಧಾರ್ಮಿಕರಾದ ಅವರು ಸಹಜವಾಗಿ ಗಾಬರಿಯಾಗಿರುವರು. ಅದಕ್ಕೆ ತಕ್ಷಣ ಸೇವಿಸಿದ್ದನ್ನೆಲ್ಲ ಹೊರ ಹಾಕಲು ಪ್ರಯತ್ನಿಸಿದ್ದಾರೆ. ಅದು ನಮಗೆ ಆತಂಕ ಉಂಟು ಮಾಡಿದೆ. ಅವರ ಸಂಪ್ರದಾಯದ ಪ್ರಕಾರ ಉಗಳನ್ನೂ ನುಂಗಬಾರದು. ಆದರೆ ಅವರು ಒಂದು ಚಮಚ ನೀರನ್ನೆ ಕುಡಿದಿರುವರು. ಅವರು ಅಂದು ಸಂಜೆಯ ತನಕ ಉಗುಳುವುದನ್ನು ಮುಂದುವರಿಸಿದ್ದರು. ನಮಗೆ ಅವರ ಧಾರ್ಮಿಕ ಭಾವನೆ ಮತ್ತು ಆಚರಣೆಯಲ್ಲಿನ ಶ್ರದ್ಧೆ ಕಂಡು ಸೋಜಿಗವಾಯಿತು. ಅವರ ನಿಷ್ಠೆಗೆ ಸಲಾಂ ಎಂದೆವು ಎಂದೆವು. ಸಮಾಜದಲ್ಲಿ ಎಲ್ಲ ಆಚರಣೆಗಳನ್ನೂ ಡಂಭಾಚಾರಕ್ಕೆ, ತೋರಿಕೆಗೆ ಮಾಡುವ ಜನರೆ ಹೆಚ್ಚು. ಮೂರ್ತಿ ಪೂಜೆ ಅವರ ನಂಬಿಕೆಗೆ ವಿರುದ್ಧವಾದರೂ ತಾವೂ ಭಾಗವಹಿಸಿ ತಮ್ಮ ವೃತ್ತಿ ಧರ್ಮ ಮತ್ತು ಸಾಮಾಜಿಕ ಹೊಣೆಯನ್ನು ನಿರ್ವಹಿಸಿರುವುರ ಜತೆಗೆ ತಮ್ಮ ವೈಯುಕ್ತಿಕ ಆಚರಣೆಯನ್ನೂ ಪಾಲಿಸಿರುವರು. ಈ ಅವರ ಪರಧರ್ಮ ಸಹಿಷ್ಣುತೆ ನಮ್ಮೆಲ್ಲರ ಮೆಚ್ಚಿಗೆಗೆ ಪಾತ್ರವಾಯಿತು. ಅದೆ ತಾನೆ ನಮ್ಮ ಭಾರತದ ಐಕ್ಯತೆಯನ್ನು, ಜ್ಯಾತ್ಯಾತೀತತೆಯನ್ನು ಕಾಪಾಡುತ್ತಿರುವ ಮಂತ್ರ.
(ಮುಂದುವರಿಯುವುದು)


No comments:

Post a Comment