Sunday, March 24, 2013

ಹಂ. ಪ. ನಾ- ಹೊಸ ಕೃತಿ

                     ಚಾರು -ವಸಂತ ಒಂದು ಅನಿಸಿಕೆ


ಪ್ರಚಲಿತ ಸಮಸ್ಯೆಗಳನ್ನು ಪ್ರತಿನಿಧಿಸುವ ಪ್ರಾಚೀನಕಾವ್ಯ  ಹಂ. ಪ. ನಾ. ಅವರ   “ಚಾರು- ವಸಂತ  “
ಹಂ. ಪ. ನಾ ಅವರ ಇತ್ತೀಚಿನ ಕಾವ್ಯ ಚಾರು ವಸಂತ ಭಾಷಾತಜ್ಞ, ಸಂಶೋಧಕ , ಸಂಘಟಕ ಹಂ.ಪಾ.ನಾಗರಾಜಯ್ಯ  ಅವರಲ್ಲಿಯ  ಕವಿಹೃದಯವನ್ನು,. ಇತ್ತೀಚಿನ ಕೃತಿ. ಅನಾವರಣಗೊಳಿಸಿದೆ .ಸಹಸ್ರ ವರ್ಷಕ್ಕೂ ಮುಂಚಿನಿಂದಲೂ ಸಹೃದಯರ ಪ್ರೀತಿಗೆ ಪಾತ್ರವಾದ ಗುಣಾಡ್ಯನ   ಪೈಶಾಚಿಕ ಭಾಷೆಯ  ಬೃಹದ್‌ಕಥಾ, ನಂತರ ಸಂಸ್ಕೃತದಲ್ಲಿ ರಸಿಕರ ಮನ ಸೂರೆಗೊಂಡ ಶೂದ್ರಕ ಕವಿಯ ನಾಟಕ  ಮೃಚ್ಛಟಿಕಾ , ಭವಭೂತಿಯ ದೆಂದು ಹೇಳಲಾದ ದರಿದ್ರಚಾರುದತ್ತನ ಅಪುರ್ಣ ನಾಟಕ ಇವರ ಕೃತಿಗೆ ಮೂಲವಾದರೂ ಇದರ ಹಿರಿಮೆ ಇರುವುದು ,ಕಥಾವಸ್ತುವನ್ನು ಹೊಸ ಕಾಲಕ್ಕೆ ಅಳವಡಿಕೆಮಾಡಿರುವ ರೀತಿಯಲ್ಲಿ. ಅವರೇ ಹೇಳುವಂತೆ ಕೃತಿಯಲ್ಲಿ ಮಹಾಕಾವ್ಯದ ಮುಖ್ಯ ಲಕ್ಷಣಗಳಾದ ಅಷ್ಟಾದಶ ವರ್ಣನೆಗಳು ಇದ್ದರೂ ಮಹಾಕಾವ್ಯ ರಚಿಸುವ ಹಂಬಲ ಅವರಿಗೆ ಇರಲಿಲ್ಲ. ಅವರ ಗುರಿ ಜನರಿಂದ ಜನರಿಗಾಗಿ ಜನರ ಕಾವ್ಯ ರಚಿಸುವುದು. ಜನಸಾಮಾನ್ಯನ ಮನ ಮಿಡಿಯುವುದು, ಪೂರ್ವ ಸೂರಿಗಳು ಹೇಳಿದ ಹಾಗೆ ಶೃತಿ ಮಾಡಿದ ವೀಣೆ ಯುಗಳಗಳಲ್ಲಿ ಒಂದನ್ನು ಮಿಡಿದಾಗ ಇನ್ನೊಂದು ತನ್ನಿಂದ ತಾನೆ ಝೇಂಕಾರಮಾಡುಂತೆ ಇಂದಿನ ಸಮಸ್ಯೆಗಳಿಗೆ ಹಿಂದಿನ ಕಾಲದ ಕಥೆಯ ಚೌಕಟ್ಟನ್ನು ಬಳಸಿ ಹೊಸ ದೃಷ್ಟಿಯಲ್ಲಿ ನೋಡುವ ಪ್ರಯತ್ನ.ದಿಂದ ಜನರ ಮನ ಮಿಡಿಯುವ ಪ್ರಯತ್ನದಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದಾರೆ.ಅವರ ಈ ಪ್ರಯತ್ನ ಸಾಮಾನ್ಯರ ಕೈನಲ್ಲಿ  ಸಕ್ಕರೆಯ ನಡುವಿನ ಹರಳಾಗಬಹುದಿತ್ತು. ಆದರೆ ಇಲ್ಲಿ ಕಲ್ಲುಸಕ್ಕರೆಯ ನಡುವಿನ ದ್ರಾಕ್ಷಿಯಂತೆ ಸಮರಸವಾಗಿ ಸೇರಿ ರುಚಿ ಹೆಚ್ಚಿಸಿದೆ. ಕಥಾ ಹೂರಣ ಹಳೆಯದಾದರೂ ಅದನ್ನು ಬರೆದುದು ಮುಕ್ತ ಛಂದಸ್ಸಿನಲ್ಲಿ . ಕಾವ್ಯದಲ್ಲಿ ಮೂರುಮಾತ್ರೆಯ ಗಣದಿಂದ ಹಿಡಿದು ಮೂವತ್ತು ಮಾತ್ರೆಯ ವರೆಗಿನ ಸಾಲುಗಳು ಇಲ್ಲಿ ಉಂಟು ಅವರ ಸಹಪಾಠಿ ಪ್ರೊ. ಎಂಎಚ್‌ಕೃಷ್ಣಯ್ಯನವರು ಗಮನಿಸಿದಂತೆ ಕೃತಿಯಲ್ಲಿ ವಿದ್ವಾಂಸರಾದ ಹಂ.ಪ.ನಾ ಶಿಷ್ಟ ಭಾಷೆಯ ಕಟ್ಟುಪಾಡಿಗೆ ಒಳ ಪಟ್ಟಿಲ್ಲ. ಅಗತ್ಯ ಬಿದ್ದಾಗ ಇಂದಿನ ಆಡು ಮಾತನ್ನೂ ಕಾವ್ಯದಲ್ಲಿ ಸಂದರ್ಭೋಚಿತವಾಗಿ ಬಳಸಿದ್ದಾರೆ.. ಮಹಾಕಾವ್ಯದ ವಸ್ತುವಿನಲ್ಲಿ ಮಲವನ್ನು ತಲೆಯ ಮೇಲೆ ಹೊರುವ ಪದ್ದತಿಯಂಥಹ ಕೀಳು ಕಾಯಕದ ನಿರ್ಮೂಲನೆಯ ವಿಷಯ ತಂದಿರುವರು. ಇನ್ನು ಜೀತ ಪದ್ದತಿಯ ರದ್ದತಿಯೂ ಇಲ್ಲಿ ಅವರ ಸ್ವಾತಂತ್ರ್ಯ ಪ್ರಜ್ಞೆಯ ಪ್ರತೀಕವಾಗಿ ಮೂಡಿಬಂದಿದೆ.
 ಖೇಚರಿಯೊಬ್ಬಳ ಕಥೆಯು ಇತ್ತೀಚೆಗೆ ಮಾದ್ಯಮಗಳಲ್ಲಿ ಸುದ್ಧಿಯಾಗಿರುವ ಅತ್ಯಾಚಾರಗಳತ್ತ ಒಳ ನೋಟ ಬೀರಿದೆ. ಪರಿಹಾರವು ಸರಳಿಕೃತವಾಗಿರುವಂತೆ ತೋರಿದರೂ ಆಳವಾಗಿ ಯೋಚಿಸಿದರೆ ಮಹಿಳಾ ಸಬಲೀಕರಣವು ಈ ಸಮಸ್ಯೆಯನ್ನು ಸಮೂಲವಾಗಿ ನಾಶಮಾಡಲು ಇರುವ ರಾಜಮಾರ್ಗ ಎಂಬ ಆಶಯ ಕೇವಲ ಆದರ್ಶ ಎನಿಸಿದರೂ , ಅದರಲ್ಲಿ ಹುರುಳುಇಲ್ಲದಿಲ್ಲ.ಸದ್ಯಕ್ಕೆ ಅಲ್ಲದಿದ್ದರೂ ದೂರಗಾಮಿ ಗುರಿಯಾಗಿಸಿದರೆ ಒಂದು ಪರಿಹಾರ ಸಿಗಬಹುದು. ,ಚಾರದತ್ತ ಮತ್ತು ವಸಂತಸೇನೆಯರ ಪ್ರಣಯ ಪ್ರಸಂಗದ ವಿವರಣೆ ರಸಿಕರಿಗೆ ರಸದೌತಣ. ಶಂಗಾರರಸ ಕಾವ್ಯದ ಉದ್ದಕ್ಕೂ ಓತ  ಪ್ರೋತವಾಗಿ ಹರಿದಿದೆ.ಒಬ್ಬ ಅಭಿಮಾನಿ ಹೇಳಿದಂತೆ ಈ ಕೃತಿಯನ್ನು ಎರಡು ಭಾಗ ಮಾಡಿ ಒಂದು ವಯಸ್ಕರಿಗೆ ಇನ್ನೊಂದು ಸಾಮಾನ್ಯ ಓದುಗರಿಗೆ ಎಂದು ಎರಡು ಸಂಪುಟಗಳಲ್ಲಿ ತಂದಿದ್ದರೆ ಹದಿಹರೆಯದವರು ಮುಗಿ ಬಿದ್ದು ಕೊಂಡು ಓದುತಿದ್ದರು ಎಂಬಮಾತು ಹಾಸ್ಯ ಕ್ಕೆಂದು ಹೇಳಿದ್ದಾದರೂ ಅದರಲ್ಲಿ ಹುರುಳು ಇಲ್ಲದಿಲ್ಲ.ವೇಶ್ಯಾ ವಾಟಿಕೆಯ ವರ್ಣನೆಯ  ಮತ್ತು ಅವರ ಮಿಲನ ಸಂದರ್ಭದಲ್ಲಿ ಕವಿಯ ಶಂಗಾರ ಪ್ರಜ್ಞೆ ವಿಜೃಂಭಿಸುತ್ತದೆ.ಹಾಗೆಂದು ಇದು ಬರಿ ಶೃಂಗಾರ ಕಾವ್ಯವೂ ಅಲ್ಲ. ಇಲ್ಲಿನ ಸಾಮಾಜಿಕ ಕಳಕಳಿ, ಮಾನವ ಸಂಬಂಧಗಳ ವಿಶ್ಲೇಷಣೆ,ವ್ಯಕ್ತಿಯೊಬ್ಬನ ವಿವೇಚನಾರಹಿತ ವರ್ತನೆಯಿಂದ  ಅವನ ಕುಟುಂಬ ಆರ್ಥಿಕ ಮತ್ತು ಸಾಮಾಜಿಕ ಸಂಕಷ್ಟಕ್ಕೆ ಒಳಗಾಗುವುದು ತಂದೆ, ತಾಯಿ,ಹೆಂಡತಿಯರು ಅನುಭವಿಸುವ ಯಾತನೆಯ ವರ್ಣನೆಯಲ್ಲಿ  ಕರುಣಾರಸ ಹರಳು ಗಟ್ಟಿದೆ.ಇದು  ಒಂದು ರೀತಿಯಲ್ಲಿ ಆಧುನಿಕ ಕಾಲದ ಸಮಸ್ಯೆಯ  ಪ್ರತಿಬಿಂಬ  ಎನಿಸುವುದು.
ಇಲ್ಲಿ ಅದೇಕೋ ಹಾಸ್ಯರಸ ತುಸು ಅವಗಣನೆಗೆ ಒಳಗಾಗಿದೆ ಎಂಬ ಭಾವ ಮೂಡುವುದು.. ಮೂಲಕಥೆಯಲ್ಲಿನ ಶಕಾರ ಇಲ್ಲಿ ಕಾಣೆಯಾಗಿದ್ದಾನೆ.ಸಾಮಾಜಿಕ ಸಮಸ್ಯೆಗಳ ತ್ತ  ಕ್ಷ- ಕಿರಣ ಬೀರಿದ  ಕವಿಗಳು ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಬಳಸಿದ್ದರೆ ವಿಡಂಬನೆಗೆ ವಿಫುಲ ಅವಕಾಶವಿದ್ದಿತು.  ಇಂದಿನ ವಿಕಾರಿಗಳ ಮಾತು ವರ್ತನೆಗಳು ಅಂದಿನ  ಶಕಾರನ ಅಪದ್ದ ಮಾತು ಅಸಂಬದ್ದ ವರ್ತನೆಗಳಿಗೆ ಯಾವ ರೀತಿಯಲ್ಲಿಯೂ ಕಡಿಮೆ ಏನಲ್ಲ.

 
ಒಂದು ಮಾತು ಸತ್ಯ.ಈ ಅಂತರ್‌ಜಾಲ ಯುಗದಲ್ಲಿ  ಪುಸ್ತಕ ಓದುವವರು ಯಾರು.? ಹಳೆ ಕಾಲದ ಕಬ್ಬ ಇಂದು ಕಗ್ಗ ಎಂಬ ಭಾವನೆಯನ್ನು ಈ ಕೃತಿ ಬುಡಮೇಲು ಮಾಡುವುದು..ಇದುಯಾವುದೇ ಜನಪ್ರಿಯ ಕಾದಂಬರಿಗೂ ಸವಾಲು ಹಾಕಬಲ್ಲ ಶಕ್ತಿ ಹೊಂದಿದೆ ಎಂದರೆ ಅತಿಶಯೋಕ್ತಿ  ಅಲ್ಲ.ಈಗಾಲೇ ಮೂರು ಭಾಷೆಗಳಿಗ ಅನುವಾದವಾಗಿದೆ ಎಂಬುದೇ ಇದರ ಜನಪ್ರಿಯತೆಯ ಮಾನ ದಂಡವಾಗಿದೆ.ಇದಂತೂ ಪುಸ್ತಕ  ಪ್ರಪಂಚದಲ್ಲಿ ಸ್ವಾಗತಾರ್ಹ ಹೊಸ ಪ್ರಯತ್ನ..

(ದಿನಾಂಕ ೨೩ಮಾರ್ಚನಂದು ಸುಚಿತ್ರ ಫಿಲ್ಮ ಸೊಸೈಟಿಯಲ್ಲಿ ನಡೆದ ಹಂಪ. ನಾ.ಕೃತಿಯ ಓದು ಮತ್ತು ಸಂವಾದದ ನಂತರ ಅನಿಸಿದ್ದು)

No comments:

Post a Comment