Tuesday, March 19, 2013

ಆರರಿಂದ ಅರವತ್ತು-ಸರಣಿ


ನನ್ನ ಸಾವಿಗೆ ನೀವೇ ಹೊಣೆ !
ಕಾಲೇಜಿಗೆ ಮಧ್ಯಾಹ್ನದ ವಿರಾಮದ ಸಮಯ. ಜವಾನ ಬೆಲ್ಲು ಹೊಡೆದು ಕುಡಿಯುವ ನೀರನ್ನುಟೇಬಲ್‌ ಮೇಲೆ ತಂದಿಟ್ಟ. ಎಲ್ಲರೂ ಊಟಕ್ಕೆ ಧಾವಿಸಿದ್ದರು. ನಾನೂ ಲಂಚ್‌ ಬಾಕ್ಸ ತೆರೆದೆ. ಚಪಾತಿ ಪಲ್ಯ ಮತ್ತು ಚಟ್ಟಣಿ ಇತ್ತು ಸಾವಧಾನವಾಗಿ ತಿನ್ನತೊಡಗಿದೆ. ಊಟ ಮುಗಿಯಿತು. ಕೈ ತೊಳೆದು ಇನ್ನೇನು ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಿದ್ದೆ, ಧಡಕ್ಕನೆ  ಸ್ವಿಂಗ್ ಬಾಗಿಲು ತೆಗದು ಕೊಂಡಿತು. ಅಲ್ಲಿ ನಮ್ಮ ಗುಮಾಸ್ತ ಮಾದಯ್ಯ ನಿಂತಿದ್ದ
ಅಮಾನತ್ತಾಗಿದ್ದ  ಅವನನ್ನು ನಾನು ನೋಡಿ ಹದಿನೈದು ದಿನಗಳಾಗಿದ್ದವು .ಅವನ ಕಣ್ಣುಗಳು ಕೆಂಡದ ಉಂಡೆಗಳಾಗಿದ್ದವು. ತಲೆ ಕೆದರಿತ್ತು.ಬಟ್ಟೆ ಗಳು ಮಾಸಿದ್ದವು .
ಏನು ಮಾದಯ್ಯ,   ಹೇಗಿದ್ದೀಯಾ? ಈಗ ಇಲ್ಲಿಗೆ ಯಾಕೆ ಬಂದೆ?
“ಇವತ್ತು ಏನಾದರೂ ಒಂದು ಇತ್ಯರ್ಥವಾಗಲೇ ಬೇಕು , ಸಾರ್‌  ನಿಮ್ಮನ್ನು ಕೊನೆ ಮಾತು ಕೇಳಲು ಬಂದೆ..
ನನಗೆ ಸಹಾಯ ಮಾಡುವಿರಾ ಇಲ್ಲವಾ  ಹೇಳಿ ಬಿಡಿ”
“ನಾನು ಹೇಳುವುದು ಇದರಲ್ಲಿ ಏನು ಇಲ್ಲ. ನೀನುಂಟು ಇಲಾಖೆ ಉಂಟು” , ಉತ್ತರಿಸಿದೆ.
 ಹಾಗಾದರೆ ಇದೆ ನಿಮ್ಮ  ಕೊನೆ ಮಾತೆ? ಮುಂದಿನ ಪರಿಣಾಮಕ್ಕೆ ನೀವೆ ಹೊಣೆಗಾರರು.!
 ಮಾದಯ್ಯ ನಮ್ಮಲ್ಲಿ ಎರಡನೆ ದರ್ಜೆ ಗುಮಾಸ್ತ  ಹದಿನೈದು ದಿನದ ಹಿಂದೆ ಅಮಾನತ್ತು ಆಗಿದ್ದ.
ಅವನ ಪರಿಚಯವಾದದ್ದು ಈ ಕಾಲೇಜಿಗೆ ಬಂದ ಮೇಲೆ. ಇನ್ನೂ ೨೫ ರ ಹರೆಯದ ಹುಡುಗ. ಅನುಕಂಪದ ಆಧಾರದ  ಮೇಲೆ ಬೇಗನೆ   ಕೆಲಸ ಸಿಕ್ಕಿತ್ತು. ಸ್ಥಳಿಕ. ರಾಜಕಾರಣಿಗಳ ಪರಿಚಯವಿತ್ತು ಬಹಳ ಉಡಾಫೆಯ ವರ್ತನೆ.
ನಾನು ಈ ಕಾಲೇಜಿಗೆ ಬಂದಾಗ ನನ್ನ ಕೋಣೆಯಲ್ಲಿನ ದೊಡ್ಡ ಟ್ರಜರಿ ನೋಡಿ ದಂಗಾದೆ.ಬಹು ಹಳೆಯ ಸಂಸ್ಥೆಯಾದ್ದರಿಂದ ಅದು ಇದ್ದಿತು. ಈಗ ಅದರ ಉಪಯೋಗ ಇರಲಾರದು ಎಂದುಕೊಂಡೆ.
ಆಗ ಮಾದಯ್ಯನೆ ವಿವರಣೆ ನೀಡಿದ್ದ. ಇಲ್ಲ ಸಾರ್‌, ಇದು ನಮಗೆ ಬಹಳ ಅಗತ್ಯ .. ಹಿಂದಿನ ಸಾಹೇಬರು ಲಕ್ಷ ಗಟ್ಟಲೆ ಹಣ ಇಡುತಿದ್ದರು.
ಯಾಕಯ್ಯಾ, ಈಗ ಬ್ಯಾಂಕು ಇದೆಯಲ್ಲಾ. ಅದರಲ್ಲಿ ಹಣ ಇಡುವ ಅಗತ್ಯ ಏನಿದೆ?
ಹಾಗಲ್ಲ  ಸಾರ್‌. ನಮ್ಮಕಾಲೇಜಿಗೆ ಲಕ್ಷಾಂತರ ರೂಪಾಯಿ ವಿದ್ಯಾರ್ಥಿ ವೇತನ ಬರುವುದು .ಎಲ್ಲ ಹಣ ಇದರಲ್ಲೆ ಇಟ್ಟು ಅವರು ಬಂದು ಬಂದಾಗ ಕೊಡಲು ಅನುಕೂಲ, ಎಂದ
ನನಗೆ ತಲೆ ಬುಡ ತಿಳಿಯಲಿಲ್ಲ.  ಆಗ ಸುಮ್ಮನಾದೆ.
ಕೆಲ ದಿನಗಳ ನಂತರ ಅದರ ಅಂತರಾಳದ ಅರಿವಾಯಿತು. ನಮ್ಮದು ಸಾವಿರಾರು ವಿದ್ಯಾರ್ಥಿಗಳು ಇರುವ ಕಾಲೇಜು. ಅವರಲ್ಲಿ ೯೦% ವಿದ್ಯಾರ್ಥಿ ವೇತನ ಕೊಡಲೆ ಬೇಕಾದ ಸಮುದಾಯಕ್ಕೆ ಸೇರಿದವರು.ಹಾಗಾಗಿ ಲಕ್ಷಾಂತರ ಹಣ ಬರುವುದು ನಿಜವಾಗಿತ್ತು.
ಅಲ್ಲಿ ನಾನು ಗಮನಿಸಿದ ವಿಶೇಷವೆಂದರೆ ದಾಖಲಾದವರಿಗೆಲ್ಲ  ಅವರು  ಕಾಲೇಜಿಗೆ ಬರಲಿ ಬಿಡಲಿ ವಿದ್ಯಾರ್ಥಿ ವೇತನ ಸಂದಾಯವಾಗುತಿತ್ತು.ಅರ್ಜಿ ಹಾಕಿದವರಿಗೆಲ್ಲ ತಪ್ಪದೆ ಹಣ ಬರುತಿತ್ತು. ನಂತರ ಗೊತ್ತಾಯಿತು. ಅವರು ಸಂಬಂಧಿಸಿದ ಇಲಾಖೆ ಯವರಿಗೆ ಒತ್ತಡಹಾಕಿ ಮಂಜೂರು ಮಾಡಿಸುವರು.
ನಂತರ ವಿದ್ಯಾರ್ಥಿಯ ಹಾಜರಾತಿ ಸರಿಯಾಗಿದ್ದರೂ ಅವನಿಗೆ ಏನೋ ಒಂದು ನೆಪ ಹೇಳಿ ತುಸು ಹಣ ಕಡಿತ ಮಾಡುವರು. ಹಾಜರಾತಿ ಕಡಿಮೆ ಇದ್ದರೆ ಮುಗಿಯಿತು ಅವರಿಗೆ ನಿನಗೆ ಹಾಜರಾತಿ ಇಲ್ಲ ಹಣ ವಾಪಸ್ಸು ಕಳುಹಿಸುವೆವು ಎಂದು ಧಮಕಿ ಹಾಕುವರು. ಅವನು ದಮ್ಮಯ್ಯ ಗುಡ್ಡೆ ಹಾಕಿದ ಮೇಲೆ ಅವನಿಗೆ ಅರ್ಧಹಣ  ಕೊಟ್ಟು ಸಹಿ ಮಾಡಿಸಿಕೊಳ್ಳುವರು. ಇನ್ನು ಕಾಲೇಜು ಬಿಟ್ಟವರದೂ ಹಣ ಇಲಾಖೆಗೆ ವಾಪಸ್ಸು ಕಟ್ಟುತ್ತಿರಲಿಲ್ಲ.. ವರ್ಷದ ಕೊನೆಯಲ್ಲಿ ದಾಖಲೆಗೆ ಸಹಿ ಹಾಕಿ ಹಣ ವಿತರಣೆಯಾದಂತೆ ತೋರಿಸುತಿದ್ದರು. ಇದರಲ್ಲಿ ಗುಮಾಸ್ತರು ಭಾಗಿ ಹೀಗಾಗಿ ನಗದು ಕೊಡುವುದು ಮಕ್ಕಳ  ಹಿತವೆನಿಸಿದರೂ ಮಕ್ಕಳಿಗೆ ಅನುಕೂಲ ಮಾಡಿಕೊಡುವ ಹೆಸರಲ್ಲಿ  ಇವರಿಗೂ ಆದಾಯವಿತ್ತು. ಇದೆಲ್ಲ ಜನರಿಗೆ  ಗೊತ್ತಿದ್ದರೂ,.   ನಮ್ಮ ಕುಲ ಬಾಂಧವರು  ಎಂಬ ಕಕುಲಾತಿ  ಅವರಿಗೆ..
 ಈ ಸಲ ಅರ್ಜಿ ಹಾಕುವಾಗಲೆ ಕಾಲೇಜಿನ ಎಲ್ಲರಿಗೂ  ವಿದ್ಯಾರ್ಥಿ ವೇತನವನ್ನು  ಕ್ರಾಸ್ದ ಚೆಕ್‌ ಮೂಲಕ ಕೊಡುವುದಾಗಿಯೂ ಅವರು ನಿಗದಿತ ಬ್ಯಾಂಕಿನಲ್ಲಿ ಖಾತೆ ತೆರೆಯಬೇಕೆಂದು ತಿಳಿಸಲಾಯಿತು.   ಆ ಕುರಿತು ಬ್ಯಾಂಕಿನವರಿಗೂ ಸಹಕರಿಸಲು ಕೋರಲಾಯಿತು. ಆದರೆ ಹೈಸ್ಕೂಲು ಮಕ್ಕಳಿಗೆ ಖಾತೆ ತೆರೆಯಲು ಆಗಲಿಲ್ಲ . ಅವರಿಗೆ ಬರುವ ಹಣ ಕೆಲವೆ ನೂರು ರೂಪಾಯಿಗಳು. ಆದರೆ ಅವರಿಗೂ ಬೇರರ್ ಚೆಕ್‌ ಮೂಲಕ ಹಣ ನೀಡಿದರೆ ಅದನ್ನು ಖಾತೆ ಇರುವ ನಮ್ಮ ಶಿಕ್ಷಕರು ದೃಢೀಕರಿಸಿದರೆ ಹಣ ನೀಡಲು ಬ್ಯಾಂಕಿನವರು  ಒಪ್ಪಿದರು.
ನನಗೂ ಸಮಸ್ಯೆ  ಪರಿಹಾರವಾಯಿತು. ನಮ್ಮ ಟ್ರೆಜರಿ ಯಲ್ಲಿ ಹಣ ಇಡುವ ಹೊಣೆ ತಪ್ಪಿತು.
ಈ ವಿಧಾನದಿಂದ ಮಕ್ಕಳು ಖುಷಿಯಾದರು. ಅವರಿಗೆ ಮೊದಲಿನಂತೆ ಕಡಿತವಾಗದೆ  ಪೂರ್ಣ ಹಣ ಕೈಗೆ ಬಂದಿತು. ಅವರ ಪೋಷಕರನ್ನು ಕರೆದು ತರಬೇಕಿದ್ದುದರಿಂದ ಮಕ್ಕಳು ಅಪವ್ಯಯ ಮಾಡುವುದಕ್ಕೆ ಕಡಿವಾಣ ಬಿದ್ದು ಅವರಿಗೂ ನೆಮ್ಮದಿಯಾಯಿತು .
 ವಿದ್ಯಾರ್ಥಿ ವೇತನ ಬಂದನಂತರ ಆ ಹಣವನ್ನು ಖಾತೆಗೆ ಜಮಾ ಮಾಡಿ ಎಲ್ಲರಿಗೂ ಚೆಕ್‌ ಮೂಲಕವೆ ಪಾವತಿ ಮಾಡಿದುದರಿಂದ ಅವ್ಯವಹಾರಕ್ಕೆ ಕಡಿವಾಣ ಬಿತ್ತು. ಆದರೆ ಕೆಲವೆ ದಿನಗಳ ನಂತರ ಅನೇಕ ಹೈಸ್ಕೂಲು  ವಿದ್ಯಾರ್ಥಿಗಳು ಅರ್ಜಿ ಹಾಕಿದರೂ  ವಿದ್ಯಾರ್ಥೀ ವೇತನ  ತಮಗೆ  ಬಂದಿಲ್ಲ ಎಂದು ದೂರಿದರು. ಹೊಸಬರದು ಮಾತ್ರವಲ್ಲ ಕೆಲವು ನವೀಕರಣ ದವೂ ಬಂದಿರಲಿಲ್ಲ. ನಮ್ಮ ಶಿಕ್ಷಕ್ಕರೊಬ್ಬರನ್ನು ಇಲಾಖೆಗೆ ಕಳುಹಿಸಲಾಯಿತು. ಸಲ್ಲಿಸಿದ ಅರ್ಜಿಗಳಿಗೆಲ್ಲಾ ಮಂಜೂರಾತಿ ದೊರಕಿತ್ತು. ದಾಖಲೆ ತರಿಸಿ ನೋಡಿದಾಗ ಅದು ನಿಜವಾಗಿತ್ತು ಎಲ್ಲರಿಗೂ ವಿದ್ಯಾರ್ಥಿ ವೇತನ ಬಂದಿತ್ತು ಮಾತ್ರವಲ್ಲ ಅವರಿಗೆ ಚೆಕ್‌ ಸಹಾ ತಲುಪಿಸಲಾಗಿದೆ.
 ಮಕ್ಕಳನ್ನು ಕರಸಿ ವಿಷಯ ತಿಳಿಸಿದಾಗ ತಾವು ಚೆಕ್‌ ಪಡೆದೆ ಇಲ್ಲ ಎಂದರು. ಅವರು ಮಾಡಿದ ಸಹಿ ತೋರಿಸಿದಾಗ ಅದು ನಮ್ಮ ಸಹಿಯಲ್ಲ ಎಂದು ನಿರಾಕರಿಸಿದರು
ಉಪನ್ಯಾಸಕರೊಬ್ಬರನ್ನು ವಿಚಾರಣೆ ನಡೆಸಿ ವರದಿ ನೀಡಲು ನೇಮಿಸಿದಾಗ ವಿವರ ಹೊರಬಂದಿತು.ಸುಮಾರು ನಲವತ್ತು ಹೈಸ್ಕೂಲು ಮಕ್ಕಳ ವಿದ್ಯಾರ್ಥಿ ವೇತನದ ಹಣ ದುರ್ಬಳಕೆ ಯಾಗಿದೆ. ಅವರ ಹೆಸರಿನಲ್ಲಿ ಚೆಕ್‌ ನೀಡಲಾಗಿದೆ. ದಾಖಲೆಗಳಲ್ಲಿ ಅವರ ಸಹಿ ಫೋರ್ಜರಿ ಮಾಡಲಾಗಿದೆ. ಬ್ಯಾಂಕಿನಲ್ಲಿ ವಿಚಾರಿಸಲಾಗಿ ಆ ಎಲ್ಲ  ಚೆಕ್‌ಗಳಿಗೆ ನಮ್ಮ ಲ್ಲಿನ ವೃತ್ತಿ ಶಕ್ಷಣ ಉಪನ್ಯಾಸಕರೊಬ್ಬರು ದೃಢೀಕರಿಸಿದ್ದಾರೆ. ಅವರನ್ನೂ ಕರೆಸಿ ವಿಚಾರಿಸಿದಾಗ ಅವರಿಗೆ ಗುಮಾಸ್ತರು ಸಹಿ ಮಾಡಲು ಕೇಳಿದಾಗ  ಒಂದೆ ದಿನ ಎಲ್ಲವಕ್ಕೂ ಸಹಿ ಮಾಡಿದ್ದಾರೆ. ಅವರು ವಿದ್ಯಾರ್ಥಿಗಳನ್ನು ನೋಡಿಯೆಇಲ್ಲ. ಹೇಗಿದ್ದರೂ ಪ್ರಿನ್ಸಿಪಾಲರ ಸಹಿ ಇದೆ ಎಂದು ಕೊಂಡು ಅವರೂ ಸಹಿ ಮಾಡಿದುದಾಗಿ ತಿಳಿದು ಬಂತು
 ಮಾದಯ್ಯ ಅವರ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡಿರುವನು.
ಆ ಚೆಕ್ಕುಗಳನ್ನು ಬೇರೆ ಯಾವುದೋ ಹುಡುಗರಿಗೆ ಹೇಳಿ ನಗದು ಮಾಡಿಸಿದೆ. ಬ್ಯಾಂಕಿನವರು ಬೇರರ್ ಚೆಕ್‌ ಆದ್ದರಿಂದ ಹಣ ವೂ ಕೆಲವೆ ನೂರು ರೂಪಾಯಿಗಳಾದ್ದರಿಂದ ಶಿಕ್ಷಕರ ದೃಢೀ ಕರಣ ನೋಡಿ ಮರು ಮಾತಾಡದೆ ಹಣ ನೀಡಿದ್ದಾರೆ.
ಸಬಂಧಿಸಿದ ಗುಮಾಸ್ತರ ಕೈವಾಡದಿಂದ ನಲವತ್ತು ಮಕ್ಕಳಿಗೆ ವಂಚನೆ ಯಾಗಿದೆ. ಸುಮಾರು ಆರು ಸಾವಿರರೂಪಾಯಿ ನುಂಗಿಹಾಕಿರುವರು.
ಈ ಎಲ್ಲ ವಿಚಾರಗಳ ಸಮೇತ ಮಾದಯ್ಯನನ್ನು  ವಿಚಾರಿಸಿದರೆ. ಅವನು ತನ್ನತಪ್ಪು ಒಪ್ಪಿಕೊಂಡ.  ಎಲ್ಲರಿಗೂ ಹಣ ವಾಪಸ್ಸು ನೀಡುವುದಾಗಿ ತಿಳಿಸಿದ. ಸಂಬಳದ ಹಣದಲ್ಲಿ ಕಡಿತ ಮಾಡಲು ವಿನಂತಿಸಿದ.ಅದರಂತೆ ಬರಹದಲ್ಲಿ ಹೇಳಿಕೆಯನ್ನೂ ನೀಡಿದ. ವಿಷಯವನ್ನು ಇಲಾಖೆಯ ಗಮನಕ್ಕೆ ತರಲಾಯಿತು.
 ಈ ಮಧ್ಯ ಅವನು ಎಸ್‌ಎಸ್ ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ಶೂಲ್ಕವನ್ನೂ ದುರುಪಯೋಗ ಪಡಿಸಿಕೊಂಡ ವಿಷಯ ಬೆಳಕಿಗೆ ಬಂತು. ಅದರಂದ ಸುಮಾರು ೫೧ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಬರಲೆ ಇಲ್ಲ. ನಾನೆ ಮಧ್ಯ ಪ್ರವೇಶಿಸಿ ಅವರಿಗೆ ಪರೀಕ್ಷೆಗೆ ತೊಂದರೆಯಾಗದಂತೆ ನೋಡಿಕೊಳ್ಳ ಲಾಯಿತು. ಇದರ ಪರಿಣಾಮವಾಗಿ ಮಾದಯ್ಯ ಅಮಾನತ್ತು ಆಗಿದ್ದ.
 ಈಗ ಹದಿನೈದು ದಿನದ  ಮೇಲೆ ಬಂದು ಏನಾದರೂ ತೀರ್ಮಾನ ಮಾಡಲು ಒತ್ತಾಯಿಸುತಿದ್ದ.
ಅವನ ವಿಷಯ ಇಲಾಖೆಯ ಗಮನಕ್ಕೆ ಹೋಗಿ ಅವರು ಕ್ರಮ ತೆಗೆದುಕೊಂಡಿರುವರು. ನಾನು ಏನೂ ಮಾಡಲಾರೆ. ಸುಮ್ಮನೆ ಮನಗೆ ಹೋಗು. ಇಲಾಖೆಯನ್ನೆ ಸಂಪರ್ಕಿಸು, ಎಂದು ತಿಳಿ ಹೇಳಿದ.
ನೀವು  ದೂರನ್ನು ವಾಪಸ್ಸು ಪಡೆಯದಿದ್ದರೆ  ನಾನು ಸಾಯುವೆ.  ಅದರ  ಹೊಣೆ  ನಿಮ್ಮದು" ಎನ್ನುತ್ತಾ ಜೇಬಿನಿಂದ ಚಿಕ್ಕಬಾಟಲಿ ತೆಗೆದ.
 ಆ ರೀತಿ ಹುಚ್ಚಚ್ಚಾರ ಮಾಡ ಬೇಡ. ಎಂದು ಹೇಳುತಿದ್ದಂತೆಯೆ , ಬಾಟಲಿಯ ಮುಚ್ಚಳ ತೆಗೆದು ಅದರೊಳಗಿರುವುದನ್ನು ಗಟಗಟನೆ ಕುಡಿದ.
 ಬೇಡ , , ಹಾಗೆ ಮಾಡ ಬೇಡ ಎನ್ನುತ್ತಾ ನಾನು ಕರೆಗಂಟೆಯನ್ನು ಬಾರಿಸಿದೆ. ಜವಾನರಿಬ್ಬರು ಧಾವಿಸಿ ಬಂದರು
ಅವರು ಅವನ ಕೈ ಹಿಡಿಯುವುದರೊಳಗೆ ಪೂರ್ಣ ಕುಡಿದು ಬಿಟ್ಟ.
ನಾನು ಗಾಬರಿಯಿಂದ ಹಿರಿಯ ಶಿಕ್ಷಕರನ್ನು ಕರೆಸಿದೆ. ಪೋಲಿಸರಿಗೆ ಫೋನು ಮಾಡಿದೆ. ವೈದ್ಯರನ್ನು ಕರೆಸಲು ತಿಳಿಸಿದೆ.
 ನನ್ನ ಕಣ್ಣೆದುರೆ ಒಬ್ಬ ವ್ಯಕ್ತಿ ಸಾಯುತ್ತಿರುವುದಕ್ಕೆ ಬಹಳ ವ್ಯಥೆಯಾಯಿತು.
ಅವನಿಗೆ ಏನಾದರೂ ಪ್ರಥಮ ಚುಕಿತ್ಸೆ ಕೊಡಲು ಹೇಳಿದೆ. ತೂರಾಡುತಿದ್ದ ಅವನನ್ನು ಅಲ್ಲಿಯೆ ಬೆಂಚಿನ ಮೇಲೆ ಕೂಡಿಸಿದರು. ಅಷ್ಟರಲ್ಲಿ ಪೋಲಿಸರು ಬಂದರು.
 ವಿಷಯ ತಿಳಿದ ಅವರು ಏನು  ಕುಡಿದೆ ? ಏಕೆ ಹೀಗೆ ಮಾಡಿದೆ ? ಎಂದರು.
ಅವನು  ಸರಿಯಾಗಿ ಮಾತು ಆಡಲೆ ಇಲ್ಲ.
"ಒಳ್ಳೆಯ ಮಾತಲ್ಲಿ ತಿಳಿಸುವೆಯಾ, ಇಲ್ಲವಾದರೆ ಸ್ಟೇಷನ್ನಿಗೆ ನಡೆ, ನಿನ್ನಮೇಲೆ ಆತ್ಮ ಹತ್ಯೆಯ ಕೇಸು ಹಾಕುವೆವು,"  ಗದರಿಸಿದರು.
ಇಲ್ಲ ಸಾರ್‌, ನಾನು ಏನೂ ಮಾಡಿಲ್ಲ. ಸ್ಟೇಷನ್ನಿಗೆ ಕರೆದು ಕೊಂಡುಹೋಗಬೇಡಿ, ಎಂದು ಗೋಗರೆದ.
ಅಲ್ಲಿಯೆ ಇದ್ದ ಬಾಟಲಿಯನ್ನು ಮೂಸಿ ನೋಡಿದರು. ಏನಯ್ಯಾ ಯಾವುದೆ ವಾಸನೆ ಇಲ್ಲ, ಏನು ಕುಡಿದೆ ? ಯಾಕೆ ಕುಡಿದೆ ?ಎಂದು ಕೇಳಿದರು.
ಇಲ್ಲ ಸಾರ್‌, ವಿಷ ಕುಡಿದಿಲ್ಲ. ನಾನು ಕುಡಿದದ್ದು ಬರಿ ನೀರು, ಪ್ರಿನ್ಸಿಪಾಲರನ್ನು ಹೆದರಿಸಲು ಹಾಗೆ ಮಾಡಿದೆ, ಎಂದ.





No comments:

Post a Comment