Saturday, March 23, 2013

ಆರರಿಂದ ಅರವತ್ತು - ಸರಣಿ


                                        ಲೋಕಾಯುಕ್ತರು ಬಲೆ ಬೀಸಿದರು
ಅಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಎಂದರೆ ನಡುಕ. ವೆಂಕಟಾಚಲ ಅವರು ಲೋಕಾಯಕ್ತರಾಗಿದ್ದಾಗ ಪತ್ರಿಕೆಗಳಿಗೆ ರಸಕವಳ. ಸಾರ್ವಜನಿಕರಿಗೆ ಮೆರೆಯುತ್ತಿದ್ದ ಅಧಿಕಾರಿಗಳು ಕುರಿಯಂತೆ ತಲೆ ತಗ್ಗಿಸಿ ಲೋಕಾಯುಕ್ತರ ವಿಚಾರಣೆ ಎದುರಿಸುವದನ್ನು ನೋಡುವುದೇ ಒಂದು ಮನರಂಜನೆ. ಈಗಿನ ಲೋಕಾಯುಕ್ತರಂತೂ ತಿಮಿಂಗಿಲಗಳಿಗೂ ಬಲೆ ಬೀಸಿದ್ದಾರೆ. ಐ..ಎಸ್,  ಐಪಿ ಎಸ್, ಅಧಿಕಾರಿಗಳಿಗೆ ಹೇಗೋ ಗಳಿಸಿದ ಅಪಾರ ಆಸ್ತಿ, ಸಂಪತ್ತು ಉಳಿಸಿಕೊಳ್ಳುವುದೇ ದುಸ್ತರ ಎನಿಸಿದೆ. ಈ ಲೋಕಾಯುಕ್ತರ ಭಯ ಇಂದು ನಿನ್ನೆಯದಲ್ಲ. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಿನಿಂದ ಮೊದಲಾದ ಭ್ರಷ್ಟಾಚಾರ ನಿಯಂತ್ರಣ ವ್ಯವಸ್ಥೆ ಹಲವು ಹತ್ತು ಮಜಲು ದಾಟಿ ಬಂದಿದೆ. ಕೆಲವು ಕಾಲ ಗುಮಾಸ್ತ, ಅಧಿಕಾರಿ, ಗ್ರಾಮ ಲೆಕ್ಕಿಗರಂಥಹ ಪುಡಿ ಮೀನುಗಳು ಮಾತ್ರ  ಇವರ ಗುರಿಯಾಗಿದ್ದೂ ಉಂಟು. ಅಂತೂ ಗುಮ್ಮ ಬರುವುದು ಎಂಬ ಭಯವಂತೂ ಇದ್ದೇ ಇತ್ತು.
ಮಂಡ್ಯ ಜಿಲ್ಲೆಯಲ್ಲಿದ್ದಾಗ  ಒಂದುವಿಶೇಷ ಅನುಭವ ಆಯಿತು. ಆಗಲೇ ವೃತ್ತಿ ಶಿಕ್ಷಣವನ್ನು +2 ಹಂತದಲ್ಲಿ ಪ್ರರಂಭಿಸಿ ದಶಕಗಳೇ ಕಳೆದಿದ್ದವು. ಪದವಿಪೂರ್ವ ಶಿಕ್ಷಣಕ್ಕೆ ಅದು ಪರ್ಯಾಯ. ಮುಂದೆ ಓದಲು ಆಗದವರಿಗೆ ವೃತ್ತಿ ತರಬೇತಿ ನೀಡಿ ಸ್ವಾವಲಂಬಿ ಮಾಡುವದೆ ಅದರ  ಉನ್ನತ ಗುರಿ. ಅದಕ್ಕೆಂದೇ ಇಂಗ್ಲೀಷ್ ಮತ್ತು ಕನ್ನಡ ಭಾಷೆಗಳು ಮಾತ್ರ ಇರುವ  ಉಳಿದಂತೆ ವಿಭಿನ್ನ ವೃತ್ತಿಯ ವಿಷಯಗಅಳವಡಿಸಿ ಮೆಟ್ರಿಕ್ ನಂತರ ಸ್ವಯಂ ಉದ್ಯೋಗಿಗಳಾಗಲು ತರಬೇತಿ ನೀಡಲಾಗುತ್ತಿತ್ತು. ನಾನು ಆರಂಭದಿಂದಲೂ ವೃತ್ತಿ ಶಿಕ್ಷಣ ವಿಭಾಗದಲ್ಲಿ  ಕೆಲಸ ಮಾಡಿದ ಅನುಭವಿ. ಹೀಗಾಗಿ ಇಂಗ್ಲೀಷ ಮೌಲ್ಯಮಾಪಕನಾಗಿ ನಿಯುಕ್ತನಾಗುತ್ತಿದೆ. ಪಿಯುಸಿ ಮತ್ತು ಜೆಒಸಿ ಗಳಿಗೆ ಭಾಷೆಯ ಪಠ್ಯಕ್ರಮ ಒಂದೇ ಆದರೂ,  ಈ ವಿದ್ಯಾರ್ಥಿಗಳ ಸಾಧನೆ ಮಟ್ಟ ತುಂಬ ಕಡಿಮೆ. ಅಲ್ಲದೆ, ವೃತ್ತಿ ಶಿಕ್ಷಣವಾದ್ದರಿಂದ ಮೌಲ್ಯಮಾಪನ ಉದಾರವಾಗಿಯೇ ಇರುತ್ತದೆ. ಉತ್ತರ ಪತ್ರಿಕೆ ಖಾಲಿ ಕೊಟ್ಟರೆ ಮಾತ್ರ ಅಂಕ ಕೊಡುವುದು ಹೇಗೆ.  ಆದರೂ ಹೀಗಾಗಿ ಇಂಗ್ಲೀಷ್ ವಿಷಯ ಒಂದು ಬಿಟ್ಟು ಉಳಿದ ಎಲ್ಲದರಲ್ಲೂ ೭೦-೮೦ ಅಂಕ ಪಡೆದರೂ ಪಾಸಾಗುತ್ತಿರಲಿಲ್ಲ.
ಒಂದು ಭಾನುವಾರ 10 ಗಂಟೆ ಸಮಯ. ಒಬ್ಬ ಹುಡುಗ ಮನೆ ಬಾಗಿಲಿಗೆ ಬಂದ. ಪ್ರಿನ್ಸಿಪಾಲರಿದ್ದಾರೆಯೇ ಎಂದು ಕೇಳಿದ. ನನಗೆ  ಅವನನ್ನು ನಮ್ಮ ಕಾಲೇಜಿನಲ್ಲಿ ನೋಡಿದ ನೆನಪಿರಲಿಲ್ಲ.
 ಯಾರು ನೀನು ?ಎಂದೆ.
ನಾನು ಜೆ.ಒ.ಸಿ. ವಿದ್ಯಾರ್ಥಿ
ಯಾವ ವಿಭಾಗ, ನಿನ್ನ ನೋಡಿದ ಹಾಗಿಲ್ಲವಲ್ಲ.
ನಾನು ಹಳೆಯ ವಿದ್ಯಾರ್ಥಿ. ಆದರೆ ನಿಮ್ಮ ಕಾಲೇಜಿನಲ್ಲಲ್ಲ
ಸರಿ ಏಕೆ ಬಂದೆ, ಏನಾಗಬೇಕಿತ್ತು
ಸಾರ್ ನಿಮ್ಮಿಂದ ನನಗೆ ಒಂದು  ಉಪಕಾರ ಆಗಬೇಕಿತ್ತುಎಂದು ಕೈ ಮುಗಿದ.
ವಿಷಯ ಏನು ಹೇಳು ನನ್ನ ವ್ಯಾಪ್ತಿಯಲ್ಲಿ ಇದ್ದರೆ ಮಾಡಬಹುದು
ನೀವು ಮನಸ್ಸು ಮಾಡಿದರೆ ಆಗುತ್ತದೆ
ಸರಿ ಏನು ಬೇಕು ಹೇಳಪ್ಪ ಎಂದೆ.
ನನ್ನನ್ನು ಈ ಬಾರಿ ನೀವು ಪಾಸು ಮಾಡಿಸಬೇಕು. ಹೇಗೂ ಮೌಲ್ಯಮಾಪನಕ್ಕೆ ಹೋಗುತ್ತೀರಿ ಎಂದ.
ನಾನು ಹೋಗುವುದನ್ನು ಯಾರು ಹೇಳಿದರು ? ನೀವು  ಇಲಾಖೆಯಲ್ಲಿ ತುಂಬ ಪ್ರಭಾವಿಗಳು ಪ್ರತಿವರ್ಷ ಮೌಲ್ಯಮಾಪನಕ್ಕೆ ಹೋಗುತ್ತೀರಿ.ಆದು ಎಲ್ಲರಿಗೂ ಗೊತ್ತು. ಹೇಗಾದರೂ ಪಾಸು ಮಾಡಿಸಿ.

ಅದೆಲ್ಲಾ ಆಗದ ಮಾತು ಎಂದು ಗದರಿದೆ.
ನನಗೆ ಗೊತ್ತು ಸಾರ್, ನೀವು ಬಹಳ ಪ್ರಭಾವಶಾಲಿಗಳು. ನಿಮ್ಮ ಮಾತು ನಡೆಯುತ್ತದೆ. ಹೇಗಾದರೂ ಮಾಡಿ. ಎಷ್ಟು ಖರ್ಚಾದರೂ ಸರಿಎಂದ
ನನಗೆ ಇನ್ನಿಲ್ಲದ ಕೋಪ ಬಂದಿತು. ಮೊದಲು ಮನೆಯಿಂದ ಆಚೆ ನಡೆ ಎಂದು ಗದರಿಸಿದೆ.
ತೆಗೆದುಕೊಳ್ಳಿ ಸಾರ್ , ಸಂಕೋಚ ಬೇಡ, ಎಂದೂ ಗೋಗರೆದ.
ಎಯ್ ಹೋಗುತ್ತೀಯೋ ಇಲ್ಲವೋ.. ಪೋಲೀಸರನ್ನು ಕರೆಸುತ್ತೇನೆ  ನೋಡು, ಎಂದು ಕೂಗು ಹಾಕಿದೆ.  ಅವನು ಅಲ್ಲಿಂದ ಕಾಲ್ಕಿತ್ತ
ಈ ಘಟನೆಯಾಗಿ ಒಂದು ವಾರ ಕಳೆಯಿತು. ಮಂಡ್ಯದಿಂದ ದೂರವಾಣಿ ಕರೆ ಬಂದಿತು. ಅಲ್ಲಿನ ಲೋಕಾಯುಕ್ತ ಅಧಿಕಾರಿ ತಕ್ಷಣ ತಮ್ಮ ಕಚೇರಿಗೆ ಬರಬೇಕು ಎಂದು ತಿಳಿಸಿದರು.
ನನಗೆ ತುಸು ಗಾಬರಿ. ಏನು ಕಾರಣವೋ ತಿಳಿಯಲಿಲ್ಲ. ಸ್ಥಳೀಯ ಆರಕ್ಷಕ ಅಧಿಕಾರಿ ತುಂಬ ಪರಿಚಿತರು. ಅವರನ್ನು ವಿಚಾರಿಸಿದೆ. ಅವರಿಗೂ ಏನೂ ಗೊತ್ತಿರಲಿಲ್ಲ. ಹೇಗಿದ್ದರೂ ಒಂದು ಹೆಜ್ಜೆ ಹೋಗಿ ಬನ್ನಿ. ಕರೆದಿದ್ದಾರೆ ಎಂದರು
ಏನೋ ವಿಶೇಷ ಇರಬೇಕು ಎಂದು ಭಾವಿಸಿದೆ.
ಜತೆಗೆ ಯಾರನ್ನಾದರೂ ಕರೆದುಕೊಂಡು ಹೋಗಲು ಯೋಚಿಸಿದೆ. ಏನೋ ನಡೆದಿದೆ.ಹೆಚ್ಚು ಕಡಿಮೆಯಾದರೆ, ತಮ್ಮ ಮೈಮೇಲೆ ಬರಬಹುದು ಎಂಬ ಭಾವನೆ ಸಿಬ್ಬಂದಿಯ ಮುಖದ ಮೇಲಿತ್ತು. ಸರಿ ಆದದ್ದು ಆಗಲಿ, ಬಂದದ್ದನ್ನು ಎದುರಿಸೋಣ ಎಂದು ತಾತ್ಕಾಲಿಕ ಹೊಣೆಯನ್ನು ಹಿರಿಯ ಉಪನ್ಯಾಸಕರಿಗೆ ವಹಿಸಿ ಹೊರಟೆ.
ಮಂಡ್ಯ ನಗರ ತಲುಪಲು ಸುಮಾರು ಎರಡು ತಾಸೇ ಹಿಡಿಯುತು. ಆದರೆ,  ಆಗಲೇ ತಲೆ ಧಿಮ್ಮೆನ್ನುತಿತ್ತು.ನಾನು ನಿಯತ್ತಾಗಿ ಕೆಲಸ ನಿರ್ವಹಿಸುತ್ತಿರುವೆ. ಕೆಲಸ ತೆಗೆಯುವಾಗ ನಿಷ್ಠುರವಾಗಿ ನಡೆದುಕೊಂಡಿರುವುದು ನಿಜ. ಒಬ್ಬಿಬ್ಬರಿಗೆ ನಿಯಮಾನುಸಾರ ಕ್ರಮ ತೆಗೆದುಕೊಂಡದರಿಂದ ತೊಂದರೆ ಆಗಿರುವುದೂ ನಿಜ. ಆದರೆ, ಎಲ್ಲವನ್ನು ಆಡಳಿತದ ಹಿತದೃಷ್ಟಿಯಿಂದ ಮಾಡಿದ್ದು. ಅದರ ಬಗ್ಗೆ ವಿಚಾರಣೆ ಎಂದರೆ ಕೆಲಸ ಮಾಡುವ ಬಗೆ ಹೇಗೆ? ಎಂಬ ಯೋಚನೆಯಿಂದ ತಲೆ ಧಿಮ್ಮೆನ್ನುತ್ತಿತ್ತು.
ಲೋಕಾಯುಕ್ತರ ಕಚೇರಿಗೆ ಹೋಗಿ, ನಾನು ಬಂದಿರುವ ಬಗ್ಗೆ ತಿಳಿಸಿದೆ. ತಕ್ಷಣ ಅವರು ನನ್ನನ್ನು ಒಳಗೆ ಬರಲು ಹೇಳಿದರು. ಕುಳಿತುಕೊಳ್ಳಿ ಎಂದು ತಿಳಿಸಿದರು. ಗಿರಿಜಾ ಮೀಸೆ ಹೊತ್ತ ದುಂಡನೆಯ ಮುಖ, ಅಜಾನುಬಾಹು, ಸೈಂದವನಂಥಹ ದೇಹ. ಹುಲಿಯ ಮುಂದೆ ಕುರಿಯಂತೆ ಕುಳಿತೆ.
ನೀವೇ ಏನು ಆ ಕಾಲೇಜಿನ ಪ್ರಿನ್ಸಿಪಾಲರು ಎಂದರು
ಹೌದು ಸಾರ್
ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೆ ಇಷ್ಟು ಹೊತ್ತಿಗೆ ಕಂಬಿ ಎಣಿಸುತ್ತಿದ್ದಿರಿ
ನನಗೆ ಅರ್ಥ ಆಗಲಿಲ್ಲ.
ಅದೃಷ್ಟ ಚೆನ್ನಾಗಿದೆ. ನಿಮ್ಮ ಹೆಂಡತಿ ಮಕ್ಕಳ ಪುಣ್ಯ ಎನ್ನುತ್ತ,  ದಪ್ಪನೆಯ ಕಡತವೊಂದನ್ನು ನನ್ನ ಕೈಗೆ ಕೊಟ್ಟರು.
ನಿಮ್ಮ ಮೇಲೆ ಭ್ರಷ್ಟಾಚಾರದ ದೂರು ಬಂದಿದೆ. ಅದರ ವಿಚಾರಣೆಯ ಕಡತ ಎಂದು ವಿವರಿಸಿದರು.
ಯಾರು ದೂರು ಕೊಟ್ಟರು ಏನು ಆಪಾದನೆ, ನಾನು ತಿದುಕೊಳ್ಳಬಹುದೇ ? ಎಂದು ಅಳುಕುತ್ತಾ ಕೇಳಿದೆ.
ನಿಮ್ಮಲ್ಲಿ ನಾರಾಯಪ್ಪ ಎಂಬ ಉಪನ್ಯಾಸಕರಿದ್ದಾರೆಯೇ?
ಇದ್ದಾರೆ ಸಾರ್. ವೃತ್ತಿ ಶಿಕ್ಷಣ ವಿಭಾಗದಲ್ಲಿ. ಅಲ್ಲಿ ತಾತ್ಕಾಲಿಕ ಉಪನ್ಯಾಸಕರಾಗಿ. ಆದರೆ, ದುರ್ನಡೆಯಿಂದ ಅವರನ್ನು ಕೆಲಸದಿಂದ ಇಲಾಖೆ ವಜಾ ಮಾಡಿದೆ.
ಅವರಿಂದಲೇ ದೂರು ಬಂದಿದೆ.  ನೀವು ಲಂಚ ತುಂಬ ತೆಗೆದುಕೊಳ್ಳುತ್ತೀರಿ.. ಕೆಲಸಕ್ಕೆ ಸರಿಯಾಗಿ ಹೋಗುತ್ತಿಲ್ಲ. ತುಂಬ ಹಣ ಮಾಡಿದ್ದೀರಿ. ಒಂದು ಬೇಕರಿ ನಡೆಸುತ್ತಿದ್ದೀರಿ. ಹಿಂದಿನ ಸ್ಥಳಗಳಲಿ ಸಾಕಷ್ಟು ಅವ್ಯವಹಾರ ಮಾಡಿರುವಿರಿ ಎಂಬುದು ದೂರಿನ ಸಾರಾಂಶ.
ಇವೆಲ್ಲ ಸತ್ಯಕ್ಕೆ ದೂರ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ, ಎಂದು ಅಲವತ್ತು ಕೊಂಡೆ.
ಹೌದ್ರಿ. ಅದಕ್ಕೆ ನಿಮ್ಮನ್ನೆ ಇಲ್ಲಿಗೆ ಕರೆಸಿದ್ದು. ಸದ್ರಿ ವ್ಯಕ್ತಿ  ಪದೇ ಪದೇ ದೂರು ನೀಡುತ್ತಿದ್ದ. ನಾವೂ ಸ್ಥಳೀಯವಾಗಿ ವಿಚಾರಣೆ ನಡೆಸಿ, ಈ ಎಲ್ಲ ಆಪಾದನೆಗಳೂ ಸತ್ಯಕ್ಕೆ ದೂರವೆಂದು ದಾಖಲೆ ಮಾಡಿಕೊಂಡೆವು.
ಆದರೆ, ಆ ವ್ಯಕ್ತಿ ಸುಮ್ಮನಾಗಲಿಲ್ಲ. ಪೋಲೀಸ್ ಇಲಾಖೆಯಲ್ಲಿ ಅತ್ಯುನ್ನತ ಹುದ್ದೆಯಲ್ಲಿರುವ ಇಬ್ಬರು ಕುಲ ಬಾಂಧವರನ್ನು ಸಂಪರ್ಕಿಸಿದಲಿತನಾದುದರಿಂದ ತನಗೆ ಅನ್ಯಾಯವಾಗುತ್ತಿದೆ,  ಜಿಲ್ಲಾಹಂತದಲ್ಲಿ  ದೂರು ನೀಡಿದರೂ ಪ್ರಯೋಜನವಿಲ್ಲ ,ಎಂದು ಅವರನ್ನು ತಪ್ಪು ಮಾಹಿತಿ ನೀಡಿ ಮನವೊಲಿಸಿದ. ಹಾಗಾಗಿ ನಮಗೆ ಮೇಲಿಂದ ಮೇಲೆ ಸೂಕ್ತ ಕ್ರಮಕ್ಕಾಗಿ ಒತ್ತಡ ಹೆಚ್ಚಿತು. ನೀವು ಹಿಂದೆ ಕೆಲಸ ಮಾಡಿದ ಎಲ್ಲ ಕಡೆ ವಿಚಾರಿಸಲಾಯಿತು. ನಿಮ್ಮ ಮಗ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದಾನೆ. ಮಗಳು ಜೆಒಸಿ . ಮನೆಯಲ್ಲಿ ಟಿ.ವಿ  ಸಹ ಇಲ್ಲ. ಒಂದು ಹಳೆಯ ಸೈಕಲ್ಲು ಮಾತ್ರ  ಇದೆ.ನಿಮ್ಮ  ಮನೆಯಿಂದ. ನೀವು ಕಾಲೇಜಿಗೆ ಬಸ್ಸು ಸಿಕ್ಕರೆ ಬಸ್ಸು, ಲಾರಿ ಸಿಕ್ಕರೆ ಲಾರಿ, ಒಟ್ಟಿನಲ್ಲಿ  ಹೇಗಾದರು ಸರಿ ಹೊತ್ತಿಗೆ ಸರಿಯಾಗಿ ಕಾಲೇಜಿಗೆ ಹೋಗುತ್ತೀರಿ ’ಎಂದರು.
ಮೊನ್ನೆ ತಾನೆ ನಾವು ಒಬ್ಬರನ್ನು ನಿಮ್ಮ ಹತ್ತಿರ ಹಣ ಕೊಟ್ಟು ಕಳುಹಿಸಿದ್ದೆವು ಅಂದರು.
ನನಗೆ ಗೊತ್ತಿಲ್ಲ ಯಾರೂ ಬಂದಿಲ್ಲ ಎಂದೆ ಅಚ್ಚರಿಗೊಂಡು.
ಒಬ್ಬ ಹುಡುಗ ಪಾಸು ಮಾಡಿಸಿ ಎಂದು ಹಣಕೊಡಲು ಬಂದಿದ್ದ. ಆಗಲೇ ಮರೆತಿರಾ ಎಂದು ಚುಚ್ಚಿದರು.
ಹಲವು ವಿದ್ಯಾಥಿಗಳು ತಮ್ಮ ಕಷ್ಟ ಹೇಳಿಕೊಂಡು ಬಂದಿರುತ್ತಾರೆ. ಅವನೂ ಹಾಗೇ ಎಂದುಕೊಂಡಿದ್ದೆ.
ಇಲ್ಲಾ ನಾವೇ ಕಳುಹಿಸಿದ್ದೆವು. ಆ ದಿನ ನೀವು ಒಪ್ಪಿಕೊಂಡಿದ್ದರೆ ಈಗ ಜೈಲಿನಲ್ಲಿರುತ್ತಿದ್ದಿರಿ.ಇಷ್ಟೆಲ್ಲಾ ವಿಚಾರಣೆಯಾದ ಮೇಲೆ ನಿಮ್ಮಲ್ಲಿ ಯಾವುದೇ ಭ್ರಷ್ಟಾಚಾರದ ವಾಸನೆ ಇಲ್ಲ” ಎಂದು  ವರದಿ ಮಾಡಿದೆವು.
ಆದರೆ, ಆ ವ್ಯಕ್ತಿ ಎರಡು ದಿನದ ಹಿಂದೆ ಪುನಃ ಬಂದಿದ್ದ.ಅವನ  ಹೆಂಡತಿ ಸರಕಾರಿ ಹೈಸ್ಕೂಲು ಮುಖ್ಯೋಪಾಧ್ಯಿಯನಿ, ಸಹ ಜತೆ  ಬಂದಿದ್ದರು. ನಿಮಗೆ ತುಂಬ ಪರಚಿತರಂತೆ,ಎಂದರು.
ಹೌದು ಸ್ವಾಮಿ, ಆಕೆ ನಮ್ಮ ಹತ್ತಿರದ ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಒಳ್ಳೆಯ ಜನ ಎಂದೆ.
ನಿಜ ಆ ತಾಯಿ ತುಂಬ ಒಳ್ಳೆಯವರು. ಆದರೆ, ಆ ವ್ಯಕ್ತಿ ಮಾತ್ರ ಲೋಫರ್.  ಹೇಗಾದರೂ ಮಾಡಿ ನಿಮ್ಮನ್ನು  ಲಂಚದ ಬಲೆಗೆ ಬೀಳಿಸಲು ಉಪಾಯ ಹೇಳಿದ.” ನಾನು ದುರ್ವರ್ತನೆಯಿಂದ ಕೆಲಸ ಕಳೆದುಕೊಂಡಿದ್ದರೂ ವೈಯಕ್ತಿಕವಾಗಿ ನನ್ನೊಂದಿಗೆ ಚೆನ್ನಾಗಿಯೇ ಇದ್ದಾರೆ. ವಿಶ್ವಾಸದಿಂದ ಮಾತನಾಡಿಸುತ್ತಾರೆ. ಪ್ರತಿದಿನ ಬಸ್ಸಿನಲ್ಲಿ ಕಾಲೇಜಿಗೆ ಬರುತ್ತಾರೆ. ಬಸ್ ನಿಲ್ದಾಣದಲ್ಲಿ ಅವರನ್ನು ಕಂಡು ನಾನು ,ಬನ್ನಿ ಸಾರ್ ಸ್ಕೂಟರಿನಲ್ಲಿ ಕಾಲೇಜಿಗೆ ಬಿಡುತ್ತೇನೆ ಎನ್ನುವೆ.
ಬೇಡ ಕಣಪ್ಪ ನಡೆದು ಹೋಗುತ್ತೇನೆ ನಿನಗ್ಯಾಕೆ ತೊಂದರೆ ಎಂದರೂ ಬಿಡುವುದಿಲ್ಲ. ಇಲ್ಲ ಸಾರ್ ಆ ಕಡೆ ಹೋಗುತ್ತಿರುವೆ. ಹಾದಿಯಲ್ಲಿ ಕಾಲೇಜಿದೆ. ನಿಮಗೆ ಡ್ರಾಪ್ ಕೊಡುವೆ ಎಂದು ಮಾಡಿ ಹತ್ತಿಸಿಕೊಳ್ಳುತ್ತೇನೆ. ಕಾಲೇಜಿನ ಹತ್ತಿರ ಸ್ಕೂಟರ್ ನಿಲ್ಲಿಸಿ ಅವರು ಇಳಿದಾಗ ಕೈಯಲ್ಲಿರುವ ಕವರ್ ಕೆಳಗೆ ಬೀಳಿಸುವೆ.
ಅವರನ್ನು ಸರ್, ಕವರ್ ಬಿತ್ತು, ದಯಮಾಡಿ ಎತ್ತಿಕೊಡಿ ಎಂದು ಕೇಳುವೆ. ಆಗ ಅವರು ಹೇಗೂ ಎತ್ತಿ ಕೊಡುತ್ತಾರೆ. ತಕ್ಷಣ ನೀವು ಅವರನ್ನು ಆ ಕವರ್ ಸಮೇತ ಹಿಡಿಯಬಹುದು” ಎಂದು ಸೂಚಿಸಿದ.
ಇದನ್ನು ಕೇಳಿದ ಅವನ ಹೆಂಡತಿ ಸಾರ್, ಈ ಮೂರ್ಖನ ಮಾತು ಕೇಳಬೇಡಿ. ನಮಗೆ ಒಂದೇ ಗಂಡು ಮಗುವಿದೆ. ಅಂಥವರಿಗೆ ಅನ್ಯಾಯವಾಗಿ ತೊಂದರೆ ಮಾಡಿದರೆ, ದೇವರು ನಮಗೆ ಒಳ್ಳೆಯದು ಮಾಡುವುದಿಲ್ಲ. ಏನೂ ಅರಿಯದ ಒಳ್ಳೆಯ ಮನುಷ್ಯರಿಗೆ ನೋವು ಅನುಭವಿಸುವಂತಾಗಬಾರದು. ಇವರು ನನ್ನ ಗಂಡ ನಿಜ, ಆದರೆ ಮನುಷ್ಯ ಸರಿಯಾಗಿಲ್ಲ, ಎಂದು ಜೋರಾಗಿ ಅಳತೊಡಗಿದಳು.
.

ಈ ಎಲ್ಲ ವಿಷಯ ಕೇಳಿ ನನಗೆ ತುಂಬ ಆಶ್ಚರ್ಯವಾಯಿತು. ನನಗೆ ಗೊತ್ತಿಲ್ಲದೇ ಏನೆಲ್ಲಾ ನಡೆದಿದೆ. ಸುಮಾರು ನೂರಾರು ಪುಟಗಳಷ್ಟು ಮಾಹಿತಿ ಸಂಗ್ರಹವಾಗಿದೆ.
ದೇವರು ದೊಡ್ಡವನು. ಏನೂ ತೊಂದರೆಯಾಗಲಿಲ್ಲ
ಕೊನೆಯಲ್ಲಿ ತಮ್ಮ ಜವಾನನ್ನು ಕರೆದು ಇವರಿಗೆ ಸಕ್ಕರೆಯಿಲ್ಲದ ಬಾದಾಮಿ ಹಾಲು, ನನಗೆ ಕಾಫಿ ತನ್ನಿ ಎಂದು ಹೇಳಿದರು. ‍ಸಾರ್,  ನಾನು ಕಾಫಿ ಕುಡಿಯುವುದಿಲ್ಲ ಎಂಬುದು ನಿಮಗೆ ಗೊತ್ತಾ ಎಂದು ಬೆರಗಿನಿಂದ ಕೇಳಿದೆ. ಬರೀ ನೀವು ಯಾಕೆ, ನಿಮ್ಮ ಮನೆಯಲ್ಲಿ ಯಾರೂ ಕಾಫಿ-ಟೀ ಕುಡಿಯುವುದಿಲ್ಲ ಎನ್ನುವದೂ ಗೊತ್ತು, ನೀವು ಕುಡಿಯುವ ಹಾಲಿಗೆ ಸಕ್ಕರೆ ಹಾಕಿಕೊಳ್ಳುವುದಿಲ್ಲ, ಡಯಾಬಿಟೀಸ್ ಇದೆ ಎಂಬದೂ ಗೊತ್ತು ಎಂದರು.
ಹೌದೆಂದು ತಲೆಯಾಡಿಸಿದೆ. ನೀವು ಏನು ತಿನ್ನುತ್ತೀರಿ, ಏನು ಕುಡಿಯುತ್ತೀರಿ ಎಂಬುದನ್ನೂ ತಿಳಿದುಕೊಂಡಿರದಿದ್ದರೆ ಲೋಕಾಯುಕ್ತರ ಕಚೇರಿ ಕೆಲಸ ಮಾಡುವುದು ಹೇಗೆ ? ಎಂದು ಗಹಗಹಿಸಿ ನಕ್ಕರು

No comments:

Post a Comment