Saturday, February 1, 2014

ಜಲ್ಲಿ ಕಟ್ಟು-ಜಾನಪದ ಕ್ರೀಡೆ

ಜಲ್ಲಿ ಕಟ್ಟು ( ಹೋರಿ ಹಿಡಿ)
ಎಚ್‌.ಶೇಷಗಿರಿರಾವ್‌








ಸಾವಿರಾರು ಜನರ ಕಣ್ಣೆಲ್ಲಾ ಮೈದಾನದ ಮೇಲೆ, ಕಣದಲ್ಲಿ ನೂರಾರು ಮಂದಿ ಸಮವಸ್ತ್ರ ಧಾರಿ  ವೀರರು.ಚಿಕ್ಕ ಬಾಗಿಲಿನಿಂದ ಹೊರ ಚಿಮ್ಮುವ ಹೋರಿ... ಹೋ ಎನ್ನುವ ಜನರ ಅಬ್ಬರ... ಅದನ್ನು ಹಿಡಿಯಲು ಮುಗಿಬೀಳುವ ವೀರರು... ಆದರೂ ಕಡೆಗೆ ಹೋರಿಯನ್ನು ಮಣಿಸ ಬೇಕಾದದ್ದು ಒಬ್ಬನೇ...ಮುಗಿಬೀಳುವವರ ತೆಕ್ಕೆಗೆ ದಕ್ಕದೆ ಹೋರಿ ಓಡಿದರೆ  ಗೆಲವು ಮಾಲೀಕನಿಗೆ.. ಅದನ್ನು ಹಿಡಿದರೆ ವೀರನಿಗೆ ಬಹುಮಾನ.. ಇದು ತಮಿಳು ನಾಡಿನ ಶುದ್ಧ ದೇಸಿ ಕ್ರೀಡೆ ಜಲ್ಲಿ ಕಟ್ಟುವಿನ ಝಲಕ್‌. ಜಲ್ಲಿಕಟ್ಟುವಿನ ಹುಚ್ಚಿಗೆ ಬಿದ್ದವರೆಷ್ಟೋ ಇದನ್ನು ನೋಡಲೆಂದೇ ಈ ಸೀಜನ್‌ನಲ್ಲಿ ತಮಿಳುನಾಡಿಗೆ ವಿಶ್ವದ ಮೂಲೆಮೂಲೆಗಳಿಂದ ಪ್ರವಾಸಿಗರು ಇಲ್ಲಿಗೆ ಧಾವಿಸುತ್ತಾರೆ. 
ಜಲ್ಲಿ ಕಟ್ಟು ವೀರಗಲ್ಲು

ಜಲ್ಲಿ ಕಟ್ಟು  ದಕ್ಷಿಣ ತಮಿಳುನಾಡಿನಲ್ಲಿ ಬಹು ಜನಪ್ರಿಯ ಸಾಹಸ ಕ್ರೀಡೆ. ಈ ದೇಶೀಯ ಜಾನಪದ ಕ್ರೀಡೆಗೆ ಅದರದೇ ಆದ ಇತಿಹಾಸವಿದೆ. ನೂರಾರು ವರ್ಷದಿಂದ ನಡೆದು ಬಂದಿರುವದಕ್ಕೆ ವೀರಗಲ್ಲು ಮತ್ತು ಪೇಂಟಿಂಗ್‌ಗಳು ಸಾಕ್ಷಿ.. ಸಂಗಮಸಾಹಿತ್ಯದಲ್ಲೂ ಇದರ ಉಲ್ಲೇಖವಿದೆ. ಜಲ್ಲಿ ಎಂದರೆ  ಬೆಳ್ಳಿ ಅಥವ ಬಂಗಾರದ   ನಾಣ್ಯ,  ಹೋರಿಯ ಕೊಂಬಿಗೆ   ಕಟ್ಟಿ ಅವುಗಳನ್ನು ಪಡೆಯುವುದೆ ಈ ಕ್ರೀಡೆಯ ಗುರಿ ಎಂದರ್ಥ., ಹೋರಿಯನ್ನು ಅದರ ಬೆನ್ನಮೇಲಿನ ಎದ್ದುಕಾಣುವ ಡುಬ್ಬ ಅಥವ ಹಿಣಿಲು ಹಿಡಿದು ನಿಲ್ಲಿಸಿದರೆ ಗೆದ್ದಂತೆ. ಕೊಂಬು ಹಿಡಿದು ತಡೆದವನಂತು ಪರಮವೀರ. ಕ್ರೀಡಾಪಟುಗಳನ್ನು  ವೀರರು ಎಂದೇ ಕರೆಯುವರು. ಅವರಿಗೆ ಸಮಾಜದಲ್ಲಿ ದೊಡ್ಡ  ಗೌರವ. ಮದುವೆ ಮಾರುಕಟ್ಟೆ ಯಲ್ಲಿ ಅವರಿಗೆ ಎಲ್ಲಿಲ್ಲದ ಬೇಡಿಕೆ.
ಜಲ್ಲಿಕಟ್ಟು ವರ್ಣ ಚಿತ್ರ.

ಮಾಟ್ಟು ಪೊಂಗಲ್‌ದಿನಪ್ರಾರಂಭವಾಗುವ ಹೋರಿ ಹಿಡಿ ಅಥವ ಹೋರಿ ಪಳಗಿಸುವ ಗ್ರಾಮೀಣ ಕ್ರೀಡೆ. ಇದು ಜನವರಿ  ೧೫ ರಿಂದ  ಜೂನ್‌ವರೆಗೆ ತಮಿಳುನಾಡಿನ ಹಲವೆಡೆ ನಡೆಯುವುದು. ಮೊದಲ ಕ್ರೀಡೆ ಪಾಲಮೇಡುವಿನಲ್ಲಿ ನಂತರದ ಅತಿಪ್ರಖ್ಯಾತ ಅಲಂಗನಲ್ಲೂರಿನಲ್ಲಿ  ನಂತರ  ಜಲ್ಲಿಕಟ್ಟಿನ ವಿಭಿನ್ನ ಪ್ರಕಾರಗಳು ಪಾಲಮೆಡು, ಅಳಂಗನಲ್ಲೂರು, ತಿರುಚಿ, ಪುದುಚರಿ,ತೇಣೀ, ತಂಜಾವೂರು, ಸೇಲಂಗಳಲ್ಲಿ ಪ್ರಚಲಿತವಾಗಿವೆ.
.ಮಾಡು, ಪಲಿಂಗು,ಉಂಬಚೆರಿ, ನಾಟುಮಾಡು, ಮಲೈಮಾಡು ಮೊದಲಾದ ಸುಮಾರು ೧೯ ತಳಿಯ ಹೋರಿಗಳು ಭಾಗವಹಿಸುತ್ತವೆ ಅದರಲ್ಲಿ ಪುಲಿಕುಲಂ ಹೋರಿಗಳು  ಬಹು ಪ್ರಖ್ಯಾತ. 




ಜಲ್ಲಿಕಟ್ಟುವಿನ ಇನ್ನೊಂದು ರೂಪ ವೇಲಿವಿರಟ್ಟುವಿನಲ್ಲಿ ಹೋರಿಗಳನ್ನು  ಯಾವುದೇ ನಿರ್ಬಂಧವಿಲ್ಲದೆ ಮುಕ್ತವಾಗಿ ಬಯಲಿನಲ್ಲಿ ಬಿಡುವರು. ಅವು ಯಾವುದೇ ದಿಕ್ಕಿನಲ್ಲಾದರೂ ಓಡಬಹುದು. ಕೆಲವು ತಪ್ಪಿಸಿಕೊಳ್ಳದೆ ಮೈದಾನದಲ್ಲೇ ನಿಲ್ಲುವವು.ಅವುಗಳನ್ನು ಮಣಿಸಲು ವೀರರು ಪ್ರಯತ್ನಿಸುವರು. ಈ ಪ್ರಯತ್ನ ಹಲವು ನಿಮಿಷದಿಂದ ಗಂಟೆಗಳವರೆಗೆ ಸಾಗಬಹುದು.

ಮೂರನೆಯ ರಿತಿಯ ಜಲ್ಲಿಕಟ್ಟು ವಟಂ ಮಂಜುವಿರಟ್ಟು. ಇದರಲ್ಲಿ ಹೋರಿಗೆ ೫೦ ಅಡಿಯ ಹಗ್ಗ ಕಟ್ಟಿರುವರು. ೪-೫ ಜನರ ತಂಡ . ಅದನ್ನು ೩೦ ನಿಮಿಷದಲ್ಲಿ ಕಟ್ಟಿಹಾಕ ಬೇಕು. ಇದು ಜಲ್ಲಿಕಟ್ಟುವಿಗೆ ಹೋಲಿಸಿದರೆ ಹೆಚ್ಚು ಸುರಕ್ಷಿತ



ಜಲ್ಲಿಕಟ್ಟು ಕ್ರೀಡೆಯನ್ನು ಸ್ಪೇನಿನ ಮೆಟಡಾರ್‌ (ಗೂಳಿ ಕಾಳಗ, ) ಪ್ರಾಚೀನ ಗ್ರೀಸ್‌ನ ಗ್ಲಾಡಿಯೇಟರ್‌ಗಳಿಗೆ ಹೋಲಿಸಿ ಇದು ಒಂದು ಹಿಂಸಾತ್ಮಕ ಕ್ರೀಡೆ, ಇದನ್ನು  ನಿರ್ಬಂಧಿಸ ಬೇಕು ಎಂದು ಪ್ರಾಣಿದಯಾ ಸಂಘಟನೆಯವರು ಹುಯಿಲೆಬ್ಬಿಸಿ ೨೦೦೪ ರಲ್ಲಿ  ಸುಪ್ರೀಂಕೋರ್ಟವರೆಗೆ ದೂರು ನೀಡಿದ್ದರು. ಈ ಕ್ರೀಡೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಒಬ್ಬಿಬ್ಬ ಕ್ರೀಡಾಪಟುಗಳು ಮೃತರಾಗಿರುವುದೂ ಉಂಟು.ಹೊರಿಗಳನ್ನು ಉತ್ತೇಜಿಸಲು ಅವುಗಳಿಗೆ ಮಧ್ಯ ಪಾನ ಮಾಡಿಸುವುದು ಹಾಗೂ ಅವುಗಳ ಕಣ್ಣಿಗೆ ಖಾರದ ಪುಡಿ ತುಂಬುವುದು ಮತ್ತು ಬಿಡುವು ಮುನ್ನ ಅವುಗಳ ಮರ್ಮಾಂಗಗಳಿಗೆ ಚೂಪಾದ ಆಯುಧಗಳಿಂದ ಚುಚ್ಚಿ ಕೆರಳಿಸುವರು ಎಂಬ ಆರೋಪ ಇದ್ದವು. .ಸುಪ್ರೀಮ್‌ ಕೋರ್ಟ ನ್ಯಾಯಪೀಠಕ್ಕೆ  ಮಧುರೈನ ತಮಿಳು ’ವೀರವಿಳಯತ್ತು ಪೆರವೈ”ಮತ್ತು ತಮಿಳುನಾಡು ಸರ್ಕಾರವು ಜಲ್ಲಿ ಕಟ್ಟುವಿನಲ್ಲಿ ಪ್ರಾಣಿಗಳಿಗೆ ಯಾವುದೇ ರೀತಿಯ ಹಿಂಸೆ ಆಗುತ್ತಿಲ್ಲ .ಇದೊಂದು  ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆ ಸುಮಾರು ನಾಲ್ಕುಶತಮಾನದ ಹಿನ್ನೆಲೆಯಿರುವ ಜಾನಪದ  ಮತ್ತು ಪರಂಪರಾಗತ ಆಚರಣೆ ಎಂದು ಮನವಿ ಮಾಡಿಕೊಂಡರು. ಈ ಎಲ್ಲ ಅಂಶಗಳನ್ನು ಪರಿಶಿಲಿಸಿ ಸುಪ್ರೀಮ್‌ ಕೋರ್ಟ ೨೦೧೦ ರಲ್ಲಿ ಕೆಲವು ನಿಬಂಧನೆಗಳೊಡನೆ ಜಲ್ಲಿಕಟ್ಟನ್ನು ಜನವರಿಯಿಂದ ಮೇ ವರೆಗೆ ಐದು ತಿಂಗಳ ಕಾಲ ನಡೆಸಲು ಅನುಮತಿಸಿತು


ಅದರಂತೆ ಸ್ಥಳೀಯ ಸಮಿತಿಯು ಜಿಲ್ಲಾಕಲೆಕ್ಟರ್‌ಅನುಮತಿ ಮತ್ತು ಉಪಸ್ಥಿತಿಯೊಂದಿಗೆ ನಿಗದಿತ ಸಮಯದ ವರೆಗೆ ಅಂದರೆ ಮಧ್ಯಾಹ್ನ ೨ ಗಂಟೆಯವರೆಗೆ ಮಾತ್ರ ಜಲ್ಲಿಕಟ್ಟು ನಡೆಸುವವು. ಜಿಲ್ಲಾ ಪೋಲೀಸ್‌ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ಮೇಲ್ವಿಚಾರಣೆ ನಡೆಸುವುದು, ಪಶುವೈದ್ಯರ ತಂಡ ಪ್ರಾಣಿಗಳ ಆರೋಗ್ಯ ತಪಾಸಣೆ ಮಾಡಿ ಪರವಾನಿಗೆ ನೀಡಿದರೆ ಮಾತ್ರ ಹೋರಿಗಳು ಭಾಗವಹಿಸಬಹುದು. ಕ್ರೀಡಾಳುಗಳಿಗೂ ವೈದ್ಯ ಪರೀಕ್ಷೆ ಇದೆ.  ೧೮ರಿಂದ ೪೦ ವರ್ಷದೊಳಗಿನ ಆರೋಗ್ಯವಂತರು ಮಾತ್ರ ಭಾಗವಹಿಸಬಹುದು.ಗಾಯಾಳುಗಳಿಗೆತಕ್ಷಣದ ಚಿಕಿತ್ಸೆಯವ್ಯವಸ್ಥೆ ಇದೆ. ಅವರಿಗಾಗಿಯೇ ಪರಿಹಾರ ನೀಡಲು ಒಂದರಿಂದ ಎರಡುಲಕ್ಷ ಠೇವಣಿಯನ್ನು ಸಂಘಟಕರು ಇಡುವರು
ಆನೇಕ ಕಾರಣಗಳಿಂದ ಪತ್ರಿಕೆಗಳಲ್ಲಿ ಅತಿಪ್ರಚಾರ ಪಡೆದಿರುವ ಜಲ್ಲಿಕಟ್ಟು ನೋಡಲು  ಈಸಲ ಸಂಕ್ರಾಂತಿಗೆ ಮಧುರೈಗೆ ಹೊರಟೆವು. ಮಕರ ಸಂಕ್ರಾಂತಿಯ ದಿನ ಮೊದಲ ಜಲ್ಲಿಕಟ್ಟು ನಡೆಯುವುದು ಪಾಲಮೆಡು ಎಂಬ ಮಧುರೈಗೆ ೩೫ ಕಿ.ಮೀ. ಗ್ರಾಮದಲ್ಲಿ. ಮಾರನೆಯ ದಿನ ಅತಿ ಪ್ರಸಿದ್ಧ ಜಲ್ಲಿಕಟ್ಟು ಅಂಗನಲ್ಲೂರಿನಲ್ಲಿ. ಅಂದು ಪ್ರಾಂಭವಾದಕ್ರೀಡೆ ಮೇತಿಂಗಳಕೊನೆ ವರೆಗ ಐದು ತಿಂಗಳು ದಕ್ಷಿಣ ತಮಿಳುನಾಡಿನ ಹಲವೆಡೆ ನಡೆಯುವುದು .ಕೃಷಿಆಧಾರಿತ ಸಮಾಜದಲ್ಲಿ ಸಂಕ್ರಮಣಕ್ಕೆ ಒಂದು ವಿಶೇಷ ಸ್ಥಾನವಿದೆ..ಆ ದಿನ ರೈತನ ಕೃಷಿಗೆ ಸಹಾಯಕರಾದ ದನಕರುಗಳಿಗೆ ವಿಶೇಷ ಅಲಂಕಾರ. ಮತ್ತು ಗೌರವ. ನಮ್ಮಲ್ಲಿ ಕಿಚ್ಚು ಹಾಯಿಸುವುದು, ಕರಿಹರಿಸುವುದುಮತ್ತು ಬಂಡಿ ಓಟದ ಸ್ಪರ್ದೆ ನಡೆಯುವುದು. ಹೀಗೆ ಗ್ರಾಮೀಣ ಪ್ರದೇಶದಲ್ಲಿ ಜನ-ದನಗಳ ಸಂಭ್ರಮ. ಆದರೆ ತಮಿಳುನಾಡಿನ ಜಲ್ಲಿಕಟ್ಟು ಇತ್ತೀಚೆಗೆ ದೊಡ್ಡ  ಪ್ರವಾಸಿ ಆಕರ್ಷಣೆಯಾಗಿದೆ.ದೇಶವಿದೇಶಗಳಿಂದ ಕೈನಲ್ಲಿ ಕ್ಯಾಮರಾ ಹಿಡಿದ ಪ್ರವಾಸಿಗರನ್ನು ಕಾಣ ಸಿಗುವರು.
ಜಲ್ಲಿಕಟ್ಟು ಸಾಮಾನ್ಯವಾಗಿ ಊರ ಮಧ್ಯದ ಬಯಲಲ್ಲಿ ವಿಶೇಷವಾಗಿ ನಿರ್ಮಿಸಿ ತಾಣದಲ್ಲಿ ನಡೆಯುವುದು. ಅಗಲವಾದ ಕ್ರೀಡಾಂಗಣದಿಂದ ಪ್ರಾರಂಭವಾಗಿ  ಮೈಲುಗಟ್ಟಲೆ ಉದ್ದದ ಭದ್ರವಾದ ತಡೆಗೋಡೆಯನ್ನು ಹೊಂದಿರುವುದು.ನೋಡುಗರಿಗೆ ಯಾವುದೇ ತೊಂದರೆ ಆಗದಂತಿರಲು ಈ  ವ್ಯವಸ್ಥೆ..ಒಂದು ಹೋರಿ ಮಾತ್ರ ನುಸುಳ ಬಹುದಾದ ಕಿರುಬಾಗಿಲು ಅದರ ಮೇಲೆ ವೇದಿಕೆ, ಸುತ್ತಲೂ ಭದ್ರವಾದ ಎರಡು ಆವರಣದ ತಡೆಗೋಡೆ. ಅದರ ಹಿಂದ ಗ್ಯಾಲರಿ. ಸಾವಿರಾರು ಪ್ರೇಕ್ಷಕರು ಅಲ್ಲಿ ಕುಳಿತು ನೋಡಬಹುದು ಬಾಗಿಲ ಮುಂದಿನ ಆವರಣದಲ್ಲಿ  ತೆಂಗಿನ ನಾರನ್ನು ಹರಡಿ ಬಿದ್ದರೂ ಪೆಟ್ಟುಆಗದಂತೆ ವ್ಯವಸ್ಥೆ.ಅಲ್ಲಿಯೇ ಜಮಾಯಿಸಿದ ನೂರಾರು ಸಮವಸ್ತ್ರ ಧಾರಿ .ಬಾಗಿಲ ಮುಂದೆ ವೀರರ ಪಡೆ. ಒಂದೊಂದು ಊರಿನಲ್ಲಿ ಅವರದೇ ನಿಗದಿತ ಸಮವಸ್ತ್ರ ಇರುವುದು.ಕ್ರೀಡಾಳುಗಳು ಅವರೆಲ್ಲರೂ ವೈದ್ಯಕೀಯ ಪ್ರಮಾಣಪತ್ರ ಪಡೆದಿರುತ್ತಾರೆ ಹಾಗೂ ಮಾದಕ ಪಾನಿಯ ಸೇವನೆ ಮಾಡಿರಬಾರದು. ಜೊತೆಗೆ ನಿಗದಿತ ನಿಯಮವಾಳಿಗಳನ್ನು ಪಾಲಿಒಸ ಬೇಕು..ಅಂದರೆ ಮಾತ್ರಅವಕಾಶ. ಹೋರಿ ಹೊರ ಬರುವುದನ್ನೇಕಾಯುತ್ತಿರುವರು. ಅದು ಬಂದೊಡನೆ ಅದರ ಬೆನ್ನಿನ ಮೇಲಿರುವ ಮಾಂಸಲ ಡುಬ್ಬ ಅಥವ ಹಿಣಿಲು ತಬ್ಬಿ ಹಿಡಿಯುವರು. ಬೆದರಿದ ಹೋರಿಯಾದರೂ ಮೈಕೊಡವಿ ತನ್ನನ್ನು ಯಾರೂ ಮುಟ್ಟಲು ಬಿಡದೆ ಅಲ್ಲಿಂದ ಓಡಲುಯತ್ನಿಸುವುದು. ಆ ಹೋರಿಯನ್ನು ಹಿಡಿದು ನಿಲ್ಲಿಸಿದವೆನೇ ವಿಜಯಿ. ಕನಿಷ್ಟಪಕ್ಷ ಬಾಗಿಲಿನಿಂದ ಐವತ್ತು ಮೀಟರ್‌ ದೂರದಲ್ಲಿ ಒಂದು ತೋರಣ ಕಟ್ಟಿರುವರು. ಅಲ್ಲಿಯ ತನಕ ಬಿಡದೆ ಹಿಡಿದಿದ್ದರೆ ಪ್ರಶಸ್ತಿ ಖಂಡಿತ. ಇನ್ನು ಕೋಡು ಹಿಡಿದು ನಿಲ್ಲಿಸಿದರೆ ಅವನು ಪರಮ ವೀರ.ಇದು ಒಂದು ರೀತಿಯಲ್ಲಿ ಪ್ರಾಣಿ ಮತ್ತು ಮಾನವಶಕ್ತಿಯ ಸಂಘರ್ಷ. ಒಂದಂತೂ ನಿಜ ಬಹುತೇಕ ಗೆಲ್ಲುವುದು ಪ್ರಾಣಿಯೇ. 
ಕ್ರೀಡೆಯಲ್ಲಿ ಭಾಗವಹಿಸಿದವರಿಗೆ. ಬಹುಮಾನಗಳ ಸುರಿಮಳೆ.ಕಿಟ್‌ಬ್ಯಾಗು, ವೇಷ್ಠಿ, ತಾಮ್ರ ಹಿತ್ತಾಳೆ ಪಾತ್ರೆಗಳು ವಾಚ್‌ ಇಸ್ತ್ರಿ  ಪೆಟ್ಟಿಗೆ, ಸೈಕಲ್ಲು, ಮೋಟರ್‌ಸೈಕಲ್‌,ನಗದು ಹಣ, ಬೆಳ್ಳಿ ಮತ್ತು ಚಿನ್ನದ ಪದಕ ಹೀಗೆ ಹೋರಾಟದ ಗಂಭೀರತೆಗೆ ಅನುಗುಣವಾಗಿ ಬಹುಮಾನ.ಬಹುಮಾನ ನೀಡಲು ಪ್ರಾಯೋಜಕರು ತುದಿಗಾಲ್ಲಿ ನಿಂತಿರುವರು. ಅದರಿಂದಾಗಿ ಸಾವಿರಾರುರೈತರು ಜಲ್ಲಿಕಟ್ಟುವಿನಲ್ಲಿ ಭಾಗವಹಿಸಲೆಂದೇ ವಿಶೇಷ ತಳಿಯಹೋರಿಗಳನ್ನು ಸಾಕುವರು. ಕೆಲವು ಹೋರಿಗಳ ಬೆಲೆ ಲಕ್ಷಾಂತರ ರುಪಾಯಿ. ಅವನ್ನು ಮನೆಯ ಮಗನಂತೆ ಆರೈಕೆ ಮಾಡುವರು.ಅನೇಕರಿಗೆ ಗೆಲ್ಲುವ ಹೋರಿ ಸಾಕುವುದು ಪ್ರತಿಷ್ಠೆಯ ಸಂಕೇತ. ಅವುಗಳ ಸಾಕಣೆ ವೆಚ್ಚವೇ ತಿಂಗಳಿಗೆ ಹತ್ತರಿಂದ ಹದಿನೈದು ಸಾವಿರ.ವಿವಿಧ ಸ್ಪರ್ಧೆಗಳಿಗೆ ಅವನ್ನು ಟೆಂಪೋಗಳಲ್ಲಿ ತರುವರು. ಒಂದೆರಡು ಹವಾನಿಯಂತ್ರಿತ ದನಸಾಗಣೆ ವಾ
ಹನಗಳೂ ಕಂಡುಬಂದವು. ಬಹುಶಃ ರೇಸ್‌ ಕುದರೆಗಳನ್ನು ಸಾಗಿಸುವ ವಾಹನಗಳಿಗೆ ಹವಾನಿಯಂತ್ರಣ ಅಳವಡಿಸಿರಬಹುದು. ಕಾರಣ ಇಲ್ಲಿನ ಬಿರು ಬಿಸಿಲಿಗೆ ಹೋರಿ ಬಸವಳಿಯಬಾರದು ಎಂಬ ಎಚ್ಚರಿಕೆ. ..ಇಷ್ಟೆಲ್ಲ ಕಾಳಜಿಗೆ ಕಾರಣ ಅದರಿಂದ ದೊರಕುವ ಗೌರವ. ಜೊತೆಗೆ ಆ ಹೋರಿಯನ್ನು ಯಾರೂ ಹಿಡಿಯಲಾಗದಿದ್ದರೆ ಬಹುಮಾನವೆಲ್ಲ ಮಾಲಿಕನ ಪಾಲು.

ಜಲ್ಲಿಕಟ್ಟು ಒಂದು ಜಾತ್ರೆಯ ಸ್ವರೂಪ ಪಡೆದಿದೆ. ಜನ ಸೇರಿದಾಗ ಏನೇನು ಅಗತ್ಯವೋ ಅವೆಲ್ಲವಕ್ಕೂ ಭಾರಿ ಬೇಡಿಕೆ.ಆಹಾರ, ಪಾನೀಯ, ಆಟಿಕೆ,ಒಂದೇ ಎರಡೇ. ವಿಶೇಷವಾಗಿ ಗಮನಸೆಳೆದುದು. ನೀರಾ ಮಾರಾಟ.  ತಾಳೆರಸದ ಮಾರಾಟದ ವೈಖರಿ. ಅದನ್ನುತಾಳೇಗರಿಯ ಕುಡಿಕೆಯಲ್ಲೇ ಕೊಡುವುದು ವಿಶೇಷ.ನಮಗೆ ಅದು ಹೆಂಡವೇನೋ ಎಂಬ ಶಂಕೆ ಬಂದಿತು ಆದರೆ ನಂತರ ಗೊತ್ತಾಯಿತು ಅದು ತಂಪು ಪಾನೀಯ. ಅದು ಸ್ಯಾಕರಿನ್‌ಹಾಕಿದ ಸಿಹಿ ಪಾನೀಯ ಅಂದು ಇನ್ನು ಊರ ಜನಕ್ಕು  ಅದೇನೋ ಒಂದು ರೀತಿಯ ಸಂಭ್ರಮ. ಅಲ್ಲಿನ ಅನೇಕರು ಜನರು ಬಂದವರಿಗೆಲ್ಲಾ ನೀರ ಮಜ್ಜಿಗೆ ಹಂಚುವರು, ಶಿವಗಾಮಿ ಎಂಬ ಮಹಿಳೆಯನ್ನು ವಿಚಾರಿಸಿದಾಗ ಊರಿನಲ್ಲಿ ಸೋಂಕು ರೋಗಗಳಿಂದ ಮಕ್ಕಳು ತೀರಿ ಹೋಗುತ್ತಿದ್ದಾಗ ಕಾಳಿಯಮ್ಮನ ಮಾತಿನಂತೆ ಜಲ್ಲಿಕಟ್ಟು ನಡೆಸಿಕೊಂಡು ಬಂದಿರುವ. ಧಾರ್ಮಿಕ ಸಂಪ್ರದಾಯ..
ಸ್ಥಳೀಯ ಜನರ ಎಲ್ಲವರ್ಗದ ಪ್ರತಿನಿಧಿಗಳ ಸಮಿತಿಯೊಂದುಜಿಲ್ಲಾಆಧಿಕಾರಿಯ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಸುವುದು. ಅದಕ್ಕೆ ಲಕ್ಷಾಂತರ ಹಣ ಸಂಗ್ರಹವಾಗುವುದು.ಸುಮಾರು ೧೫೦೦ ಪೋಲೀಸ್‌ ಸಿಬ್ಬಂದಿ ರಕ್ಷಣಾವ್ಯವಸ್ಥೆ ನೋಡಿ ಕೊಳ್ಳುವುದು ವೈದ್ಯರು, ಪಶುವೃದ್ಯರ ತಂಡ, ಆಂಬ್ಯುಲೆನ್ಸ್ ಜೊತೆಗೆ ಗಾಯಾಳುಗಳ ಸುರಕ್ಷತೆಗೆ ಕಾದುನಿಂತಿರುವರು. ಒಂದಂತೂ ನಿಜ ಪ್ರಾಣಿಗಳಿಗೆ ಯಾವುದೇ ರೀತಿಯ ಹಿಂಸೆ ಇಲ್ಲ ಆದ್ದರಿಂದ ಸ್ಪೇನಿನ ಗೂಳಿ ಕಾಳಗಕ್ಕೆ ಹೋಲಿಕೆ ಸಮಂಜಸ. ಅಪಾಯ ಏನಿದ್ದರೂ ಕ್ರೀಡಾಳುಗಳಿಗೆ. ಅದೂಎಲ್ಲ ಕ್ರೀಡೆಡಗಳಲ್ಲೂ ಇರುವಂತೆ ಆದರೆ ಇಲ್ಲಿ ತುಸು ಅಧಿಕಪ್ರಮಾಣದಲ್ಲಿರುವುದು. ಅದನ್ನು ತಡೆಯಲು ನೂರಾರು ಸ್ವಯಂಸೇವಕರು ಶ್ರಮಿಸುವರು. ಇದೊಂದು ಕೃಷಿಕ ಸಮಾಜದ ಹೆಮ್ಮೆಯ ಕ್ಷಣ .ಗ್ರಾಮೀಣ ಸಂಸ್ಕೃತಿಯ ಅನಾವರಣ. ಪರಂಪರೆಯ ಪ್ರದರ್ಶನ. ಆದ್ದರಿಂದಲೇ ನ್ಯಾಯಾಲಯವು ಇದನ್ನು ನಿಷೇಧಿಸಲು ನಿರಾಕರಿಸಿ ನಿಯಂತ್ರಣದೊಂದಿಗೆ ನಡೆಸಲು ಒಪ್ಪಿರುವುದು ಅರ್ಥಪೂರ್ಣ ಎನಿಸಿತು. ಸಹಸ್ರಾರು ಜನರನ್ನು ಒಟ್ಟಿಗೆ ತರುವ ಸಾರ್ಥಕ ಸಮುದಾಯ ಕ್ರೀಡೆ ಜಲ್ಲಿ ಕಟ್ಟು ಎನ್ನುವುದಂತೂ ನಿಜ..


No comments:

Post a Comment