Thursday, February 13, 2014

ಹಸ್ತಪ್ರತಿ ಅಭಿಯಾನ-೩

ಎಚ್‌  ಶೇಷಗಿರಿರಾವ್‌



                            ಹಸ್ತಪ್ರತಿಕಾರ್ಯಾಗಾರ-ಮೂರನೆಯ ದಿನ

                ಶಿಥಿಲ ಗರಿಗಳ ಪುನಶ್ಚೇತನ

ಬಿ. ಎಂ.ಶ್ರೀ ಪ್ರತಿಷ್ಠಾನವು  “ Save  & study  Manuscripts”  ಸಂಘಟಿಸಿದ ” ದೇಶದಲ್ಲೇ ಪ್ರಥಮ ಎನ್ನಬಹುದಾದ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿರುವ ಹಸ್ತಪ್ರತಿ ಅಭಿಯಾನವು ಯುವ ವಿದ್ವಾಂಸರ ಗಮನ ಸೆಳೆಯುವಲ್ಲಿ ಬಹಳ ಯಶಸ್ವಿಯಾಯಿತು.  ಕಾರ್ಯಾಗಾರದ ಮೂರನೆಯ ದಿನವೂ  ತರಬೇತಿ ಪಡೆಯಲು ಹೊಸ ಹೊಸ ಅಭ್ಯರ್ಥಿಗಳು ತಮ್ಮನ್ನು ಸೇರಿಸಿಕೊಳ್ಳಲು ಮನವಿ ಮಾಡಿಕೊಂಡರು.. ಆಗಲೇ ಮೂರು ದಿನ ಮುಗಿದರೂ , ಪರವಾಯಿಲ್ಲ ಉಳಿದಷ್ಟು ದಿನವಾದರೂ ಕಲಿಯುತ್ತೇವೆ ಎನ್ನುವ ಅವರ ಆಸಕ್ತಿಯನ್ನು ಕಂಡು ಅಭಿಯಾನ ಪ್ರಭಾವ ಬೀರಿರುವುದು ಸ್ಪಷ್ಟವಾಯಿತು.ಆಗಲೇ ಮೂರುದಿನ ಮಗಿಯುತ್ತಾ ಬಂದಿದ್ದರೂ  ಅವರು ಬಿಡಲಿಲ್ಲ.ಕೊನೆಗೆ ಇಬ್ಬರು ವಿದ್ಯಾರ್ಥಿಗಳನ್ನು ಮಾತ್ರ ಸೇರಿಸ ಕೊಳ್ಳಲಾಯಿತು.. ಇನ್ನುಳಿದವರಿಗೆ ಮುಂದೆ ಇನ್ನೊಂದು ಕಾರ್ಯಾಗಾರ ನಡೆಸಿದಾಗ  ಖಂಡಿತ ಅವಕಾಶ ಕೊಡುವುದಾಗಿ ತಿಳಿಸಲಾಯಿತು. ಮಾನಸ ಎಂಬ ಪಿ.ಎಚ್‌ಡಿ ವಿದ್ಯಾರ್ಥಿನಿಯು ಈ ರೀತಿಯ  ತರಬೇತಿಯು ತಮ್ಮ ಸಂಶೋಧನೆಯಲ್ಲಿ ತುಂಬ ಉಪಯುಕ್ತವಾಗುವುದು. ಈ ರೀತಿಯ ಕಲಿಕೆ ತರಗತಿಯಲ್ಲಿ ದೊರೆಯುವುದಿಲ್ಲ..  ತನ್ನಂತೆ ಇನ್ನೂಅನೇಕ  ಪಿ.ಎಚ್‌ಡಿ ವಿದ್ಯಾರ್ಥಿಗಳು ಇರುವರು ಎಲ್ಲರಿಗೂ ಅವಕಾಶ ಕಲ್ಪಿಸಿ ಕೊಡಬೇಕೆಂದು ಕೋರಿಕೆ ಸಲ್ಲಿಸಿದಳು. ಕಾರ್ಯಾಗಾರದ ನಿರ್ದೇಶಕರು ಕನಿಷ್ಟ ಇಪ್ಪತು ಜನ ಅಭ್ಯರ್ಥಿಗಳು ಬರುವುದಾದರೆ ಅವರಿಗೆ ಪ್ರತ್ಯೇಕ ಕಾರ್ಯಾಗಾರವನ್ನು ಸಂಘಟಿಸುವ ಆಶ್ವಾಸನೆಯನ್ನು ನೀಡಿದರು.
 ಮೂರನೆಯ ದಿನ ಶಿಥಿಲ ಗರಿಗಳ ಸಂರಕ್ಷಣೆಗೆ ಗಮನ ಕೊಡಲಾಯಿತು. ಕಾಲನ ಹೊಡೆತಕ್ಕೆ ಸಿಲುಕಿ , ಕ್ರಿಮಿ ಕೀಟಗಳ ಹಾವಳಿಗೆ ತುತ್ತಾಗಿ, ಮುಟ್ಟಿದರೆ ಮುರಿಯುವ ಸ್ಥಿತಿಯಲ್ಲಿದ್ದ ಗರಿಗಳಿಗೆ ಪುನರ್‌ ಜೀವ ಕೊಡುವ ಕ್ರಿಯೆಯ ತೈಲ ಲೇಪನ. ಈ ಮೊದಲು ಗರಿಗಳನ್ನುಧೂಮ್ರಕವಾಟದಲ್ಲಿ ಇಟ್ಟು ಥೈ ಮೋನ್‌ ಅನಿಲದಪ್ರಭಾವಕ್ಕೆ ಒಳಗಾಗುವಂತೆ ಮಾಡಿ ಕ್ರಿಮಿಕೀಟಗಳ ನಾಶಕ್ಕೆ ಪ್ರಯತ್ನ ಮಾಡಲಾಗುತಿತ್ತು. ಆದರೆ ಇತ್ತೀಚಿನ ಸಂಶೋಧನೆಗಳಿಂದ ಅದೂ ಸಹಾ ದೀರ್ಘಕಾಲೀನ ಪರಿಣಾಮ ಬೀರುವುದೆಂಬ ಅಂಶ ಪತ್ತೆಯಾದ ಮೇಲೆ ಆ ವಿಧಾನವನ್ನು ತಾಳೆಗರಿಗಳ ಸಂರಕ್ಷಣೆಗೆ ಬಳಸುವುದನ್ನು ಕೈ ಬಿಡಲಾಗಿದೆ. ರಾಸಾಯನಿಕ ವಸ್ತು ಬಳಸುವ ಬದಲು ಸಾವಯವ ತೈಲವನ್ನು ಬಳಸಿದರೆ ಗರಿಗಳ ಸಂರಕ್ಷಣೆ ಹೆಚ್ಚು ಪರಿಣಾಮಕಾರಿ ಎಂದು ಕಂಡು ಕೊಂಡರು. ಈಗ ಸಿಟ್ರನಾಲ್‌ಯಿಲ್‌ ಅಂದರೆ ಕನ್ನಡದಲ್ಲಿ ನಿಂಬೆ ಹುಲ್ಲಿನ ಎಣ್ಣೆ  ಬಳಸಿ ಸಂರಕ್ಷಣೆ ಮಾಡುವರು. ಇದರಿಂದ ಕ್ರಿಮಿ ಕೀಟಗಳು ನಾಶವಾಗುವವು. ಅಲ್ಲದೆ ಗರಿಯು ತನ್ನ ಪೆಡಸುತನ ಕಳೆದುಕೊಂಡು ಮೃದುವಾಗುವುದು. ಅದು ತಕ್ಕ ಮಟ್ಟಿಗೆ  ಸ್ಥಿತಿಸ್ಥಾಪಕತ್ವ ಗುಣ ಪಡೆದು ಮುಟ್ಟದರೆ ಮುರಿಯುವುದಿಲ್ಲ.. ಸುಮಾರು ಇಪ್ಪತ್ತೆಂಟು ಜನ ಕೆಲಸದಲ್ಲಿ ತೊಡಗಬೇಕಿದ್ದುರಿಂದ ಅವರನ್ನು ಗ್ರಂಥಗಳಲ್ಲಿರುವ ಗರಿಗಳ ಸಂಖ್ಯೆಗೆ ಅನುಗುಣ ಇಬ್ಬರು ಅಥವಾ ಮೂವರು ಸದಸ್ಯರಿರುವ  ತಂಡಗಳನ್ನು ರಚಿಸಲಾಯಿತು.

ಈ ಕಾರ್ಯಕ್ಕೆ ಮುಖ್ಯವಾಗಿ ಶಿಥಿಲವಾಗಿರವ ಮತ್ತು ಬರಹ  ಮಸಕಾಗಿರುವ ಗರಿಗಳ ಕಟ್ಟುಗಳನ್ನೇ ಆಯ್ಕೆ ಮಾಡಿಕೊಳ್ಳಲಾಯಿತು .ಯಥಾ ರೀತಿ ಹತ್ತಿ ಮತ್ತು ಬಟ್ಟೆ ಬಳಸಿದ  ದೇಶೀಯ ಬ್ರಷ್‌ಗಳನ್ನು ಬಳಕೆ ಮಾಡಲಾಯಿತು .ವಿದ್ಯಾರ್ಥಿಗಳಂತು ಉತ್ಸಾಹದ ಬುಗ್ಗೆ ಗಳಾಗಿದ್ದರು. ಕೆಲಸ ಮಾಡುವಾಗ ನಿಂಬೆ ಹುಲ್ಲಿನ ಎಣ್ಣೆಯ ವಾಸನೆ ಒಂದು ರೀತಿಯ ಉತ್ತೇಜನ ನೀಡುತಿತ್ತು. ತೈಲೀಕರಣವನ್ನು ಗಾಜಿನ ಮೇಲುಹೊದಿಕೆ ಇರುವ ಮೇಜಿನ ಮೇಲೆ ಮಾಡುವರು.ಅದೇ ವಿಧಾನವನ್ನುಹಸ್ತಪ್ರತಿ ಸಂಗ್ರಹಾಲಯದ  ಪರಿಣಿತರು ಶಿಫಾರಸ್ಸು ಮಾಡುವರು. ಆದರೆ ಸುಮಾರು ಮೂವತ್ತು ಜನರಿಗೆ ಪ್ರತ್ಯೇಕ ವಾಗಿ ಕೆಲಸ ಮಾಡಲು ಮೂವತ್ತು ಟೇಬಲ್‌ಗಳೇ ಇಲ್ಲ. ಇನ್ನು ಗ್ಲಾಸ್‌ಟೇಬಲ್‌ಗಳನ್ನೇ ಪೂರೈಸುವುದು ಹೇಗೆ ಸಾಧ್ಯ? ಅಸ ಇದ್ದ ಮೇಜುಗಳನ್ನೇ ಹಂಚಿಕೊಂಡು ಕೆಲಸ ಮಾಡುವಂತ ಸೂಚಿಸಿಲಾಯಿತುಗಾಜಿನ ಬದಲು ನಮ್ಮಲ್ಲಿದ್ದ ಫ್ಲೆಕ್ಸಗಳನ್ನೇ ಬಳಸಲಾಯಿತು. ಗುರಿತಲುಪಲು ರಾಜಮಾರ್ಗದಲ್ಲಿ ಹೊದರೆ ಸಲೀಸು. ಅದಿಲ್ಲವೆಂದರೆ ಹೋಗುವುದನ್ನೇ ಬಿಡಲಾಗದು ಕಚ್ಚಾರಸ್ತೆ ಇದ್ದರೆ ಅದನ್ನೇ ಬಳಸಬಹುದು. ಇಲ್ಲವಾದರೆ ದಾರಿ ಮಾಡಿಕೊಂಡಾದರೂ ಗುರಿ ತಲುಪಬೇಕು.ಅಂತೂ ಇಂತೂ ಗರಿಗಳಿಗೆ ಪುನಶ್ಚೇತನ ಕೊಡುವ ಕೆಲಸ ಶುರುವಾಯಿತು.ಗರಿಗಳಿಗೆ ತೈಲ ಲೇಪನ ಮಾಡಿದ ಮೇಲೆ ಅದನ್ನು ತುಸು ಸಮಯ ಹಿರಿಕೊಳ್ಳಲು ಬಿಡಬೇಕು. ಆದರೆ ಕೆಲವು ಸಲ ಅನೇಕರು ತೈಲ ಲೇಪನ ಮಾಡಿ ತುಸು ಸಮಯದದ ನಂತರ ಅದನ್ನು ಒಣ ಬಟ್ಟೆಯಿಂದ ಒರಸುವರು.ಅವರ ಕಳಕಳಿ ಅರ್ಥ ವಾಗುವುದು. ಕಾರಣ ಗರಿಯನ್ನು ತಿರುಗಿಸಿ ಹಿಂಭಾಗಕ್ಕೂ ತೈಲ ಲೇಪನ ಮಾಡುವ ಅಗತ್ಯವಿದೆ.
ಅದರ ಬದಲು ಎಂಟು ಹತ್ತು ಗರಿಗಳನ್ನು ಮೇಜಿನ ಮೇಲೆ ಒಂದರ ಅಂಚಿಗೆ ಇನ್ನೊಂದು ಬರುವಂತೆ  ಜೊಡಿಸಿ ಕೆಳಗಿನಿಂದ ತೈಲ ಲೇಪನ ಮಾಡುತ್ತಾ ಮೇಲಿನ ಗರಿಯ ತನಕ ಮುಂದುವರಿಯಬೇಕು. ಅದಕ್ಕೆ ಕೆಲವು ನಿಮಿಷಗಳೇ ಬೇಕಾಗಬಹದು. ನಂತರ ಎಲ್ಲವನ್ನೂ ತಿರುವಿಹಾಕಿ ಮತ್ತೆ ಕೆಳಗಿನ  ಗರಿಯಿಂದ  ತೈಲ ಲೇಪನ ಮಾಡುತ್ತಾ ಹೋಗಬೇಕು.  ಹಾಗೆ ಮಾಡಿದಾಗ ಗರಿಗಳು ತೈಲವನ್ನು ಹೀರಿಕೊಂಡು ಇನ್ನಷ್ಟು ಗಟ್ಟಿಯಾಗುವವು.ನಂತರ ಅವನ್ನು ನೆರಳಲ್ಲಿ ಒಂದು ದಿನ ಒಣಗಲು ಬಿಡಬೇಕು. ಮುಂದಿನ ಹಂತವೆಂದರೆ  ಮಸಿಹಾಕುವುದು. ತಾಳೆ ಗರಿಗಳ ಮೇಲೆ ಅಕ್ಷರ ಕೊರೆದಾದ ಮೆಲೆ ಅವುಗಳಿಗೆ ಬಣ್ಣ ತುಂಬಿದರೆ ಮಾತ್ರ ಓದಲು ಇದ್ದುಕಾಣುತ್ತವೆ..
ಹಿಂದಿನಕಾಲದಲ್ಲಿ ಮಸಿತಯಾರಿಕೆ ಅವರು ರಸಾಯನಿಕಗಳನ್ನು ಬಳಸದೆ  ನೈಸರ್ಗಿಕವಾಗಿ ದೊರೆಯುವ ಗಿಡ ಮೂಲಿಕೆಗಳನ್ನು ರಸವನ್ನು ಬಳಕೆ ಮಾಡಿ ಕಾಡಿಗೆ ತಯಾರಿಸುತಿದ್ದರು.ಅವರದು ಒಂದು ವಿಶೇಷ ವಿಧಾನವೇ ಇದ್ದಿತು.ಒಂದು ಅಗಲವಾದ ಮಣ್ಣಿನ ಪ್ರಣತಿಯಲ್ಲಿ ಹರಳೆಣ್ಣೆ ತೆಗೆದುಕೊಳ್ಳುತಿದ್ದರು. ಆ ಹಣತೆಯು ಎರಡು ದಿನ ದೀಪ ಉರಿಯಲು ಅಗತ್ಯವಾದಷ್ಟು  ಎಣ್ಣೆ ಹಿಡಿಯುವಷ್ಟು ದೊಡ್ಡ ದಾಗಿರವುದು. ಅದರಲ್ಲಿಹರಳೆಣ್ನೆ ತುಂಬುವರು . ಶುದ್ಧವಾದ ಹತ್ತಿಯನ್ನು ತೆಗೆದುಕೊಂಡು ದಪ್ಪನೆಯ ಬತ್ತಿ ಮಾಡುವರು. ಹಾಗೆ ಬತ್ತಿ  ಮಾಡುವಾಗ ಕಾಡಿಗೆಗರಗು ಎಂಬ ಸಸ್ಯದ ರಸದಲ್ಲಿ ಬತ್ತಿಯನ್ನು ನೆನಸಿ ಒಣಗಿಸುವರು. ಕಾರಣ ಆ ರಸದ ಪ್ರಭಾವದಿಂದ ಬತ್ತಿಯು ಉರಿಯುವಾಗ ದಟ್ಟವಾದ ಹೊಗೆ ಬಿಡುವುದು. ಹೀಗೆ ಸಿದ್ದ ಪಡಿಸಿದ ಹಣತೆಯ  ಬತ್ತಿಗೆ ದೀಪ ಹಚ್ಚಿ ಅದನ್ನು ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಇರುತಿದ್ದ ಕಲ್ಲಿನ ಒರಳಿನಲ್ಲಿ ಇಡುವರು. ಒರಳಿನ ಅಂಚಿನಲ್ಲಿ ಒಂದು ಗಚಿಕ್ಕಗಾತ್ರದ ಗುಂಡುಕಲ್ಲನ್ನು ಇಟ್ಟು ಅದರ ಮೇಲೆ   ಒಂದು  ಹಿತ್ತಾಳೆಯ ಪರಾತವನ್ನು ಬೋರಲು ಹಾಕುವರು. ಒರಳು ಮತ್ತು ಬೊರಲು ಹಾಕಿದ ಪರಾತದ ನಡುವೆ ಸಾಕಷ್ಟು ಅವಕಾಶವಿದ್ದೂ ಗಾಳಿಯಾಡಲುತೊಂದರೆ ಇರುವುದಿಲ್ಲ. ಪರಾತದ ಒಳ ಮೇಲ್‌ಮೈ ಮೇಲೆ ಉರಿಯುತ್ತಿರುವ ಪ್ರಣತಿಯದೀಪದ ಕುಡಿಯಿಂದ ಹೊರಡುವ ದಟ್ಟವಾದ ಹೊಗೆಯು ನೇರವಾಗಿ ಹೋಗಿ ಬೀಳುವುದು .  ಅಲ್ಲಿ ಕಾಡಿಗೆ ಸಂಗ್ರಹವಾಗುವುದು. ಬೋರಲು ಹಾಕಿದ ಪರಾತದ ಮೇಲೆ ಬಿದಿರಿನ ಕಡ್ಡಿಯಿಂದ ಮಾಡಿದ ಬುಟ್ಟಿಯನ್ನು ಬೋರಲು ಹಾಕಿ ತೆಳುವಾದ  ಹತ್ತಿಯ ಬಟ್ಟೆ ಹಾಕಿರುವರು  ಇದನ್ನು ಎರಡುದಿನ ಬಿಡುವರು. ಆ ಅವಧಿಯಲ್ಲಿ ಸತತ ದೀಪ ಉರಿಯುತ್ತಲೇ ಇರವುದು .ಪರಾತದ ಒಳ ಮೈ ಮೇಲೆ ಕಾಡಿಗೆಯ ನುಣುಪಾದ ಪುಡಿ ಸಂಗ್ರಹವಾಗುವುದು.ಅದರನ್ನು ನಿರನಲ್ಲಿ ಕಲಸಿ ಅದಕ್ಕೆ ತುಸು ಜಾಲಿಯ ಅಂಟಿನ ದ್ರಾವಣ ಹಾಕಿ ಗರಿಗಳಿಗೆ ಲೇಪನ ಮಾಡುತಿದ್ದರು ಇದರಿಂದ ಬಹುಕಾಲದ ವರೆಗೆ ಅಕ್ಷರಗಳು ಸ್ಪಷ್ಟವಾಗಿರುತಿದ್ದವು.ಈ ವಿಧಾನವೂ ಅಲ್ಲದೇ ಇಜ್ಜಲನ್ನು ನುಣ್ಣಗೆ ಪುಡಿಮಾಡಿ ಅದನ್ನು ಹತ್ತಿಯ ತೆಳು ಬಟ್ಟೆಯಲ್ಲಿ ಸೋಸಿ ಆ ಪುಡಿಯನ್ನ ಕಾಡಿನಲ್ಲಿ ಲಭ್ಯವಿದ್ದ ಕೆಲವು ಹಣ್ಣುಗಳ ರಸದಲ್ಲಿ ಸೇರಿಸುತಿದ್ದರು ಆ ಹಣ್ಣುಗಳು ನೀಲಿಬಣ್ಣದ್ದವಾಗಿದ್ದು ರಸವೂ ನೇರಳೆ ಬಣ್ಣದ್ದಾಗಿರುತಿತ್ತು.ಆರಸಕ್ಕೆ ನುಣುಪಾದ ಇಜ್ಜಿಲ ಪಡಿ ಸೇರಿಸಿದಾಗ ನಮಸಿ ಸಿಗುತಿತ್ತು.

ಈಗ ಅದು ಆಗದ ಮಾತು.  ಅಂಗಡಿಯಲ್ಲಿಯೇ ಬ್ಲಾಕ್‌ ಲೆಡ್‌ ಪೌಡರ್‌ ಸಿಗುವುದು. ಅದನ್ನು ನೀರಿನಲ್ಲಿ ಬೆರಸಿ  ದಟ್ಟವಾದ ದ್ರಾವಣ ಮಾಡುವರು. ಅದಕ್ಕೆ ತುಸು ಅಂಟಿನ ದ್ರಾವಣವನ್ನೂ ಸೇರಿಸಿದಾಗ ಮಸಿ ಸಿದ್ಧವಾಗುವುದು.
ಮಸಿ ಹಚ್ಚಲು ತೈಲಲೇಪನಕ್ಕೆ ಬಳಸಿದ ವಿಧಾವನ್ನೇ ಅನುಸರಿಸಬಹುದು. ಆದರೆ ಒಮದು ಚಿಕ್ಕ ವ್ಯತ್ಯಾಸವಿದೆ. ಒಟ್ಟಿಗೆ ಹತ್ತು ಗರಿಗಳ ಬದಲು ನಾಲ್ಕು ಗರಿಗಳನ್ನು ಜೋಡಿಸಿ ಕಳಕೊಳ್ಳಬೇಕು.ಕ್ರಮವಾಗಿ ಒಂದರಿಂದ ನಾಲ್ಕನೆಯ ಗರಿಯವರೆಗೆ ಮಸಿಯನ್ನು ಈ ಮೊದಲೇ ತಯಾರಿಸಿರುವ ಬಟ್ಟೆಯ  ಬ್ರನಿಂದ ಮಸಿಹಚ್ಚ ಬೇಕು. ನಾಲ್ಕೂ ಗರಿಗಳಿಗೂ ಮಸಿ ಹಚ್ಚಿದ ನಂತರ ಮೊದಲಿನಿಂದ ಒಣ ಬಟ್ಟೆ ಯಿಂದ ಒರೆಸತ್ತಾ ಬರಬೇಕು . ಈ ಅವಧಿಯಲ್ಲಿ ಮಸಿಯು ಗರಿಯಲ್ಲಿ ಕೊರೆದಿರುವ ಅಕ್ಷರಗಳ ಒಳಗೆ ಇಳಿದಿರುವುದು. ಗರಿಯ ಮೇಲ್ಬಾಗದಲ್ಲಿರು ಮಸಿಯನ್ನು ಒರೆಸಿ ತೆಗೆದಾಗ ಅಕ್ಷರಗಳ ಸ್ಪಷ್ಟತೆ ಅಧಿಕವಾಗುವುದು.ಈ ಗರಿಗಳನ್ನು ನೆರಳಲ್ಲಿ ಎರಡು ದಿನಗಳ ಕಾಲ ಒಣಗಿಸ ಬೇಕು..ಒಣಗಿಸಲು ಗರಿಗಳನ್ನು ಜೋಡಿಸುವಾಗ ವಿದ್ಯಾರ್ಥಿಗಳ ಕಲಾಭಿರುಚಿ ಹೊರ ಹೊಮ್ಮಿತು. ಕೆಲವರಂತೂ ಗರಿಗಳನ್ನು ಸುಂದರ ವಿನ್ಯಾಸದಲ್ಲಿ ಜೋಡಿಸಿ ಕಲಾಕೃತಿಳಂತೆ ಮಾಡಿದ್ದರು.
 ಮಸಿ ಹಚ್ಚುವಾಗ ಕೆಲವುರು ಅನುಭವಿಸಿದ ಆನಂದ ಹೇಳ ತೀರದು ಒಂದು ತಂಡದವರು ಮಸಿ ಹಚ್ಚಿಯಾದ ಮೇಲೆ “ಶ್ರೀರಾಮಾರ್ಪಿತಂ ಮಸ್ತು ಸುಂದರ ಕಾಂಡ ಸಂಪೂರ್ಣಂ” ಎಂಬ ಮಂಗಳ ವಾಕ್ಯವನ್ನು ಓದಿ ಪುಳಕಗೊಂಡು ತಮ್ಮ ಗೆಳೆಯರಿಗೆಲ್ಲ “ ನಮಗೆ ಸುಂದರ ಕಾಂಡ ಬಂದಿದೆ”  ಎಂದು ಹೇಳಿಕೊಂಡು ಸಂಭ್ರಮಿಸಿದರುರ. ಜೊಡಿಸಿದ ಗರಿಗಳ  ಜೊತೆ ನಿಂತು ಕೂತು  ಫೋಟೋ ತೆಗೆಸಿಕೊಂಡರು ಕೆಲಸದ ಭರಾಟೆಯಿಂದ ಗರಿಗಳನ್ನು ಒಣಗಿಸಲು ಸ್ಥಳದ ಕೊರತೆ ಕಂಡುಬಂದಿತು ಮೇಜುಗಳು ಸಾಕಾಗಲಿಲ್ಲ. ಪ್ಲಾಸ್ಟಿಕ್‌ ಕ ಕುರ್ಚಿಗಳನ್ನು ಎದುರು ಬದುರಾಗಿ ನಮ್ಮ ನೆಲ ಮಹಡಿಯಲ್ಲಿರುವ ವಿಶಾಲ ಸಭಾ ಮಂಟಪದಲ್ಲೇ     ಹೋಡಿಸಿದಾಗ ಎಲ್ಲೆಲ್ಲೂ  ಗರಿಗಳೇ ಗರಿಗಳು . ಇದರಿಂದ  ಪ್ರತಿಷ್ಠಾನದ ಗೇಟು ತೆಗೆದು ಒಳ ಬಂದೊಡನೆ ಘಂ ಎಂಬ ವಾಸನೆ.. ಅದೇ ಇಲ್ಲಿ ಹಸ್ತ ಪ್ರತಿಗಳ ಕೆಲಸ ಸಾಗಿದೆ ಎಂಬುದರ ಸೂಚಕವಾಗಿತ್ತು ಕಣ್ಣಿಗೆ  ಮಾತ್ರವಲ್ಲ ಮೂಗಿಗೂ ಹಸ್ತಪ್ರತಿಗಳ ಇರುವಿನ ಅನುಭವವಾಗುವಂತಾಯಿತು.
ಈ ಕೆಲಸದ ನಡುವೆ ವಿದ್ಯಾರ್ಥಿಯೊಬ್ಬನು ತನ್ನ ಕವನಗಳನ್ನು ತೋರಿಸಿದ. ಅವನಿಂದ ಟೀ ಬಿಡುವಿನ  ಸಮಯದಲ್ಲಿ ಕವನ ವಾಚನ ಮಾಡಿಸಿದಾಗ ಇನ್ನೂ ಹಲವರು ತಾವೂ ಕವನ ಬರೆದಿರುವುದಾಗಿ ತೀಳಿಸಿದರು. ದಿನವೂ ಬಿಡುವಿ ಸಮಯದಲ್ಲಿಕವನ ನಿವೇದನೆ ಮಾಡಲು ಯೋಜಿಸಲಾಯಿತು.ಇಲ್ಲಿನ ಅನುಭವಗಳನ್ನು ಛಾಯಾಚಿತ್ರಗಳನ್ನು ತಮ್ಮ ಕಾಲೇಜಿನ  ಸಂಚಿಕೆಯಲ್ಲಿ Face book  ನಲ್ಲಿ ಹಾಕಲು ಬಳಸಿಕೊಳ್ಳುವುದಾಗಿ ಕೆಲವರು ಅನುಮತಿ ಕೇಳಿದರು. ನಮ್ಮ ಅಭಿಯಾನದ ಉದ್ದೇಶವೇ ಹಸ್ತಪ್ರತಿಗಳಬಗ್ಗೆ ಜಾಗೃತಿ ಮೂಡಿಸುವುದು. ಯುವ ಜನರ ಉತ್ಸಾಹ ನಮ್ಮ ಗುರಿ ಅದು ಯಶ ಕಂಡ ಬಗ್ಗೆ ಸ್ಪಷ್ಟ ಪುರಾವೆ ಯಾಗಿತ್ತು..






















1 comment:

  1. ಬಹಳ ಒಳ್ಳೆಯ ಕಾರ್ಯ. ಇದಕ್ಕಾಗಿಯೇ ಸೃಷ್ಟಿಗೊಂಡ, ಸಾಕಷ್ಟು ಸಂಪನ್ಮೂಲವನ್ನೊಳಗೊಂಡ ಸರ್ಕಾರೀ ಸಂಸ್ಥೆಗಳು ಮಾಡಬೇಕಾದ ಕೆಲಸವನ್ನು ನೀವು ಮಾಡುತ್ತಿದ್ದೀರಿ. ಇದೊಂದು ಹೆಮ್ಮೆಯ ಕೆಲಸ. ಮುಂದುವರೆಯಲಿ.

    ReplyDelete