Wednesday, February 12, 2014

ಹಸ್ತಪ್ರತಿ ಅಭಿಯಾನ-೨


ಎಚ್‌.ಶೇಷಗಿರಿರಾವ್‌
    
ಹಸ್ತಪ್ರತಿ ಕಾರ್ಯಾಗಾರ-ದಿನ 2






ಹಸ್ತಪ್ರತಿಕಾರ್ಯಾಗಾರದ ಎರಡನೆಯ ದಿನ ವಿಭಿನ್ನವಾಗಿತ್ತು. ಮೊದಲನೆಯ ದಿನ ಕಾರ್ಯಾಗಾರ  ತಡವಾಗಿ ಪ್ರಾರಂಭಮಾಡ ಬೇಕಾದಾಗ ವಿದ್ಯಾರ್ಥಿಗಳ ಶಿಸ್ತು ಮತ್ತು ಆಸಕ್ತಿಯ  ಬಗ್ಗೆ ತುಸು ಅನುಮಾನ 
ಮೂಡಿತ್ತು..


    
ಮಂಗಳವಾರ ಮುಂಜಾನೆ ಹತ್ತುಗಂಟೆಗೆ ಹೋದಾಗ ಬಹುತೇಕ ಎಲ್ಲ ವಿದ್ಯಾರ್ಥಿಗಳು ಹಾಜರಿದ್ದರು.
 ಹಿಂದಿನ ದಿನ ನೀಡಿದ್ದ ಹಿತ ವಚನ ಫಲ ಕೊಟ್ಟಿತ್ತು.  ಅಚ್ಚರಿ ಎಂದರೆ ಹತ್ತುವರೆ ಗಂಟೆಯ ವೇಳೆಗೆ ನಮ್ಮಗುರಿಯ ಸಂಖ್ಯೆಮೀರಿ ವಿದ್ಯಾರ್ಥಿಗಳು ಹಾಜರಿದ್ದರು. ಹಿಂದಿನ ದಿನದ ಕಾರ್ಯಾಗಾರದ ವಿವರ ಪಡೆದು  ಅದರಲ್ಲಿ ಭಾಗಿಗಳಾಗಲು ಕಾತುರದಿಂದ ಹೊಸಬರೂ ಬಂದಿದ್ದರು.ಅವರ ಆಸನ ವ್ಯವಸ್ಥೆಗೆ ತುಸು ತಲೆಗೆಡಿಸಿ ಕೊಳ್ಳ ಬೇಕಾಯಿತು. ಹಾಗೂ ಹೀಗೆ ವ್ಯವಸ್ಥೆ ಮಾಡಿದೆವು..
ಪೂರ್ವ ಸಿದ್ಧತೆ ಯ ಬಗ್ಗೆ ಯೋಚನೆಯೇ ಇರಲಿಲ್ಲ. ಗುರುಪ್ರಸಾದರ ತಂಡ ಎರಡನೆಯ ದಿನದ ಕಾರ್ಯಕ್ಕೆ ಸರ್ವ ಸನ್ನದ್ಧವಾಗಿತ್ತು. ದಿನಕ್ಕೆ ಮೂರುತಾಸು ಕೆಲಸ ಮಾಡಬೇಕಾಗಿರುವ ಶ್ರೀಮತಿ ವೀಣಾ  ಎಂಟು ತಾಸಿಗೂ ಮಿಗಿಲು ಚುರುಕಾಗಿ ಆಯಾಸ ಅರಿಯದೆಕೆಲಸ ಮಾಡುತಿದ್ದರು. ತಇತ್ತೀಚೆಗೆ ಉದ್ಯೋಗಕ್ಕೆ ಸೇರಿದ್ದ ಯವಕ ರಾಘವೇಂದ್ರ  ಅನುಭವಿಯಂತೆ ಅತಿ ಉತ್ಸಾಹದಿಂದ  ಕೆಲಸದಲ್ಲಿ ಕೈ ಜೋಡಿಸಿದ್ದರು..ಎರಡನೆಯ ದಿನದ ಕೆಲಸ ಹಸ್ತಪ್ರತಿಗಳ ಶುದ್ಧೀಕರಣ ಮಾಡುವುದೇ ಆಗಿತ್ತು.  ಎರಡನೆಯ ದಿನ ಬಳಸ ಬೇಕಾದ ಹಸ್ತಪ್ರತಿಗಳನ್ನು ಸಿದ್ಧಪಡಿಸಿದ್ದರು. ಪ್ರತಿಯೊಬ್ಬರಿಗೆ ನೀಡುವ ಹಸ್ತಪ್ರತಿಗಳ ದಾಖಲೆ ಮಾಡಿಕೊಂಡಿದ್ದರು.ಅಂದಿನ ಕಾರ್ಯಕ್ಕೆ ಅಗತ್ಯ ಉಪಕರಣಗಳೂ ಮೇಜಿನ ಮೇಲಿದ್ದವು.
ಅನ್ಯರಿಗೆ ಬೆಲೆ ಬಾಳದ್ದು ಎನಿಸುವ ಹಸ್ತಪ್ರತಿಗಳು ಗರಿಗಳು ಒಂದು ರೀತಿಯಲ್ಲಿ ಬೆಲೆ ಕಟ್ಟಲಾಗದವು. ಆದ್ದರಿಂದ ನಾವು ಅವುಗಳ ಸುರಕ್ಷತೆಯ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಿತ್ತು. ಇದರ ಅರ್ಥ ವಿದ್ಯಾರ್ಥಿಗಳ ಮೇಲೆ ಅನುಮಾನ ಎಂದಲ್ಲ. ಆದರೆ ಎಷ್ಟೆಂದರೂ ಅವರು ಮಕ್ಕಳು.  ವಿಷಯದ ಗಂಭೀರತೆ ಅರಿವಿರಲಾರದು.  ಹುಡುಗಾಟದಲ್ಲಿ ಗರಿಗಳು ಹಾಳಾಗಬಾರದು. ಅದಕ್ಕೆಂದೆ ವಿದ್ಯಾರ್ಥಿಗಳಿಗೆ ಕೆಲಸ ಮಾಡುವಾಗ ಗರಿಗಳನ್ನು ಎಚ್ಚರಿಕೆ ವಹಿಸಲು ತಿಳಿಸಲಾಯಿತು ಜೊತೆಗೆ ದಿನದ  ಕೊನೆಯವರೆಗೆ ತಮಗೆ ಒಪ್ಪಿಸಿದ ಕಟ್ಟುಗಳ ಸುರಕ್ಷತೆ ಅವರದೇ ಹೊಣೆ ಎಂದು ಮನದಟ್ಟು ಮಾಡಲಾಯಿತು.
ಕೆಲವು ಕಟ್ಟುಗಳು ದೊಡ್ಡವಾಗಿದ್ದವು. ಅವುಗಳಲ್ಲಿನ ಗರಿಗಳನ್ನು ಇಬ್ಬರಿಗೆ ಹಂಚಲಾಯಿತು.ಇಬ್ಬರೂ ಒಂದು ತಂಡವಾಗಿಕೆಲಸ ನಿರ್ವಹಿಸುವುದು ಅಗತ್ಯವಾಗಿತ್ತು ಸಹಕಾರ ತತ್ವ ತನ್ನಿಂದ ತಾನೆ ಜಾರಿಗೆ ಬಂದಿತು.
ಈ ಅವಧಿಯಲ್ಲಿ ಗರಿಗಳ ಶುಷ್ಕ ಶುದ್ಧೀಕರಣ ನಮ್ಮ ಗುರಿಯಾಗಿತ್ತು.  ಹಲವಾರು ವರ್ಷಗಳಿಂದ ಕಟ್ಟಿ ಇಡಲಾಗಿದ್ದ ಗರಿಗಳ ಮೇಲೆ ಧೂಳು , ಕುಟ್ಟೆ ಹುಳ, ಗರಿಕೊರಕ, ಸಿಲ್ವರ್‌ಫಿಷ್‌  ಮೊದಲಾದ ಕೀಟಗಳ ದಾಳಿಯಿಂದ ಶಿಥಿಲವಾಗಿರುವಿಕೆ ಸಹಜ. ಅವನ್ನು ಮೊದಲು ಶುಚಿಗೊಳಿಸ ಬೇಕಿದೆ. ಅದಕ್ಕೆ ಸಾಧಾರಣ ಮೃದುವಾದ ಬ್ರಷ್‌ಗಳನ್ನು ಬಳಸಲಾಗುವುದು. ಆದರೆ ವಿದ್ಯಾರ್ಥಿಗಳ ಸಂಖ್ಯೆ ನಮ್ಮ ಅಂದಾಜಿಗಿಂತ ಹೆಚ್ಚಿದ್ದರಿಂದ ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು. ನಮ್ಮ ತಂಡದ ಸಮಯ ಪ್ರಜ್ಞೆಯಿಂದ ಸಮಸ್ಯೆ ಸುಲಭವಾಗಿ ಪರಿಹಾರವಾಯಿತು.. ಅವಶ್ಯಕತೆಯೇ ಅವಿಷ್ಕಾರದ ತಾಯಿ ಎಂಬಮಾತು ನಿಜವೆಂದು ಸಾಬೀತಾಯಿತು. ಬ್ರಷ್‌ಗಳಿಗೆ ಪರ್ಯಾಯವಾಗಿ  ಹತ್ತಿಯನ್ನು ಮೃದುವಾದ ಬಟ್ಟೆಯಲ್ಲಿ ಸುತ್ತಿ  ಮಾಡಿದ ಅನೇಕ ದೇಶಿಯ ಬ್ರಷ್‌ ಗಳು ಸಹಾಯಕ್ಕೆ ಬಂದವು.. ಧೂಳು, ಕಾಣುವುದು, ಕೀಟಗಳ ಮೊಟ್ಟೆಗಳೂ ಇರಬಹುದು  ಸಾಮಾನ್ಯ. ಅಲ್ಲಿಲ್ಲಿ ಬಿಳಿಯ ಪುಡಿಯೂ ಇರುವುದು. ಆದರೆ ಅದನ್ನು ನಿವಾರಿಸಲು ಬೇಕಾಬಿಟ್ಟಿ ಬ್ರಷ್‌ಮಾಡುವಂತಿಲ್ಲ.  ಗರಿಯಮೇಲೆ ಒಂದು ತುದಿಯಿಂದ ಇನ್ನೊಂದು ತುದಿಯ ತನಕ ಆಡಿಸ ಬೇಕು.ಅದೂ  ಒಂದೇ ದಿಕ್ಕಿನಲ್ಲಿ .. ಹಿಂದೆ ಮುಂದೆ ಆಡಿಸಬಾರದು. ಅಡ್ಡ ಅಡ್ಡ ಬ್ರಷ್‌ಮಾಡಿದರೆ ಗರಿ ಮುರಿಯು ಸಾಧ್ಯತೆ ಇದೆ.   ಆದ್ದರಿಂದ ಏಕ ಮುಖವಾಗಿ ಕೈ ಚಲಿಸುವುದು. ಅಗತ್ಯ.  ಅಲ್ಲದೇ ಕೆಳಗೆ ಧೂಳು ಬೀಳುವುದರಿಂದ ಸಾಧಾರಣವಾಗಿ ಬಿಳಿಯ ಅಗಲವಾದ ಡ್ರಾಯಿಂಗ್‌ ಪೇಪರ್‌ಹಾಕಿಕೊಂಡು ಅದರ ಮೇಲೆ ಗರಿಗಳ ಕಟ್ಟುಗಳನ್ನು ಇಟ್ಟುಕೊಂಡು ಕೆಲಸ ಮಾಡುವರು. ಅಲ್ಲದೆ ಬಿಳಿ ಹಾಳೆಯ ಎರಡೂ ಬದಿಯಲ್ಲು ಒಂದೂವರೆ ಇಂಚು ಮೇಲ್ಮುಖ ವಾಗಿ ಮಡಿಚಿರುವುದರಿಂದ ಸಂಗ್ರಹವಾದ ಧೂಳು ಹೊರಚೆಲ್ಲುವುದಿಲ್ಲ.ಆದರೆ ನಮ್ಮದು ಹಣಕಾಸುರಹಿತ ಯೋಜನೆ. ಹೆಚ್ಚು ವೆಚ್ಚದ ಬಾಬ್ತು ಇಲ್ಲವೇಇಲ್ಲ. ಸಮಸ್ಯೆ ಸರಳವಾಗಿ ಬಗೆ ಹರಿಯಿತು. ನಮ್ಮಸಂಸ್ಥೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಗಳು. ಬಹಳ ಕಾಲದಿಂದ ನಡೆಯುತ್ತಲೇ ಬಂದಿವೆ...ಆ ಸಮಯದಲ್ಲಿ ವೇದಿಕೆಯಮೇಲೆ , ಮುಂಬಾಗಿಲ್ಲಿ   ಕಟ್ಟುವುದಕ್ಕಾಗಿ ಮಾಡಿಸಿದ್ದ  ಹಳೆಯ ಬಟ್ಟೆಯ ಮತ್ತು ಪ್ಲಾಸ್ಟಿಕ್‌ ಪ್ರಚಾರ ಫಲಕಗಳು ಇದ್ದವು. ಅವನ್ನೇ 2’X2 ‘ ಕತ್ತರಿಸಿ ಗರಿಗಳನ್ನು ಇಡಲುಬಳಸಿದೆವು. ಇದರಿಂದ ಧೂಳು ಸಂಗ್ರಹದ ಸಮಸ್ಯೆ ತನ್ನಿಂದ ತಾನೇ ಪರಿಹಾರವಾಯಿತು

ಮಕ್ಕಳ ಉತ್ಸಾಹ ಎಷ್ಟರ ಮಟ್ಟಿಗೆ ಇದ್ದಿತೆಂದರೆ ಕೆಲಸ ಮಾಡುತ್ತಾ ಮಾಡುತ್ತಾ  ಕಾಲಕಳೆದುದೇ ಗೊತ್ತಾಗಲಿಲ್ಲ. ಲಂಚ್‌ ಸಮಯಕ್ಕಿಂತ ಮೊದಲೇ ಆ ಅವಧಿಯ ಕೆಲಸ ಮುಗಿಯಿತು. ಅವರಿಗೆಲ್ಲ ಹಿಂದಿನ ದಿನ ಬ್ಲಾಗ್‌ನಲ್ಲಿ ಬಂದಿದ್ದ ಚಿತ್ರಲೇಖನ ನೋಡಿ ಖುಷಿಯಾಯಿತು. ಪತ್ರಿಕಾಛಾಯಾಗ್ರಾಹಕರು  ಹಿಂದಿನ ದಿನ ಅನೇಕ ಫೋಟೋ ತೆಗೆದಿದ್ದರು. ವಿಜಯವಾಣಿಯಲ್ದಿ  ಪ್ರಕಟವಾಗಿತ್ತು.ಮತ್ತು  ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಒಂದು ಚಿತ್ರವೂ ಬಂದಿತ್ತು. ಅದರಲ್ಲಿ ಮೂರು ನಾಲ್ಕು ಹುಡುಗರು  ಮತ್ತು ಒಬ್ಬ ಹುಡುಗಿ ಮಾತ್ರ ಇದ್ದರು. ಆ ಚಿತ್ರದಲ್ಲಿ ಇರುವ ಹುಡುಗಿ ಸೌಮ್ಯ ಒಬ್ಬಳೇ.. ಅವಳು ಸುಂದರವಾಗಿರುವುದರಿಂದ ಆ ಚಿತ್ರಮಾತ್ರ ಹಾಕಿರುವರು ಎಂದು ಹಾಸ್ಯ ಮಾಡಿದರು. ಫೋಟೋದಲ್ಲಿದ್ದ ಎಲ್ಲರೂ ಉಳಿದವರಿಗೆ ಟ್ರೀಟ್‌ ಕೊಡಿಸ ಬೇಕು. ಊಟ ಹಾಕಿಸ ಬೇಕು ಎಂದಾಗ  ಹುಡುಗರು ತಡಬಡಿಸಿದರು  ಸೌಮ್ಯ ಮಾತ್ರ ತಾನೊಬ್ಬಳೇ ಕೊಡಿಸುವುದಾಗಿ ಮಾತುಕೊಟ್ಟಳು. ಮಧ್ಯಾಹ್ನ ನಾವು ಊಟ ಏರ್ಪಾಟು ಮಾಡಿದ್ದ ಚಿಕ್ಕ ಮೆಸ್ಸಿಗೆ ಹೋದೆವು.ಕುರ್ಚಿ ಮೇಜುಗಲ ವ್ಯವಸ್ಥೆ ಇರಲಿಲ್ಲ. ಆದರೆ ಮನೆಯ ಊಟ. ಗಂಡ ಹೆಂಡತಿ ಇಬ್ಬರೇರುಚಿಯಾದ ಸೋವಿದರದಲ್ಲಿ ನಮಗೆ ಊಟ ಒದಗಿಸುತಿದ್ದರು. ಅಲ್ಲಿಗೆ ಹೊದಾಗ ಸೌಮ್ಯ   ತಾನೊಬ್ಬಳೇ  ಎಲ್ಲರಿಗೂ  ಊಟದ  ತಟ್ಟೆ ಸಿದ್ಧ ಪಡಿಸಿಕೈಗೆ ಕೊಟ್ಟಳು. ತಾನು ಕೊನೆ ಊಟ ಮಾಡಿದಳು.ಚಾಲಾಕಿತನದಿಂದ ತನ್ನ ಮಾತು ಊಟ ಕೊಡಿಸುವ ಮಾತು ಉಳಿಸಿಕೊಂಡಿದ್ದಳು. ಊಟ ರುಚಿಕರವಾಗಿತ್ತು. ಹಿಂದಿನ ದಿನ ಬೆಳ್ಳುಳ್ಳಿ ಹಾಕಿದ್ದರಿಂದ ಹಿರಿಯ ವಿದ್ವಾಂಸೆ ಒಬ್ಬರು ಸರಿಯಾಗಿ ಊಟ ಮಾಡಿರಲಿಲ್ಲವಂತೆ. ಆದಕ್ಕೆ ಇಂದು ಬೆಳ್ಳುಳ್ಳಿ ಬಳಸಿರಲಿಲ್ಲ. ಆದರೆ ಅವರೇ ಬಂದಿರಲಿಲ್ಲ.. ಗುಂಪಿನಲ್ಲಿರುವ ಉಳಿದವರಿಗೆ ಅದರ ಬಗ್ಗೆ ಗಮನ ಇರಲಿಲ್ಲ ಎಲ್ಲರೂ ನಗುತ್ತಾ ಹರಟುತ್ತಾ ಊಟ ಮುಗಿಸಿದೆವು.ನಾನೂ ಅವರೊಡನೆ ಸೇರಿಕೊಂಡೆ.
ಮಧ್ಯಾಹ್ನದ ಕೆಲಸ ಆದ್ರ ಶುಚೀಕರಣ. ಅಂದರೆ ಗರಿಗಳಿಗೆ ಗಟ್ಟಯಾಗಿ ಅಂಟಿಕೊಂಡಿರುವ ಕೀಟಗಳ ಮೊಟ್ಟೆ, ಬೂಸ್ಟು ಮೊದಲಾದವನ್ನು ಒದ್ದೆ ಬಟ್ಟೆಯಿಂದ ಶುಚಿಗೊಳಿಸುವುದು. ಅದಕ್ಕೆ  ಡಿಸ್ಟಿಲ್ಡ್‌ ವಾಟರ್‌ ಹಾಕಿ . ಪ್ಲಾಸ್ಟಿಕ್‌ಬಟ್ಟಲುಗಳನ್ನು ಇಬ್ಬರಿಗೆ ಒಂದರಂತೆ ಕೊಡಲಾಯಿತು.  ಜೊತೆಗ ಪ್ರತಿಒಬ್ಬರಿಗೂ ಹತ್ತಿಗೆ ಬಟ್ಟೆ ಸುತ್ತಿಮಾಡಿದ  ಒಂದು ದೇಶೀಯ ಬ್ರಷ್‌ ಮತ್ತು ಒಂದು ಒಣ ಬಟ್ಟೆ,. ಆದ್ರ ಶುಚೀಕರಣಕ್ಕೂ ಒಂದು ಕ್ರಮವಿದೆ.. ಮೊದಲು ಐದು ಅಥವ ಆರುಗರಿಗಳನ್ನು ಕ್ರಮವಾಗಿ ಎದುರಿಗೆ ಜೋಡಿಸಿಕೊಳ್ಳುವುದು. ನಂತರ ಒಂದು ಕಡೆಯಿಂದ ಒದ್ದೆ ಬಟ್ಟೆಯಿಂದ ಒರಸಿಕೊಳ್ಳುತ್ತಾ ಬರುವುದು. ಐದು. ಗರಿಗಳನ್ನು ಒರಸಿಯಾದ ಮೇಲೆ ಒಣ ಬಟ್ಟೆಯಿಂದ ಕ್ರಮವಾಗಿ ನೀರಿನ ಅಂಶ ತೆಗೆದು ಹಾಕುವುದು. . ನಂತರ ಅವನ್ನು ಪುನಃ ತಿರುವಿ ಹಾಕುವುದ. ಮೊದಲಿನ  ಕ್ರಮವನ್ನು ಪುನರಾವರ್ತಿಸುವುದು. ಹೀಗೆ ಅಂಟಿದ ಕೊಳೆ ತೆಗೆದ ಮೆಲೆ ಹಾಗೆಯೇ ಕಟ್ಟಿನಲ್ಲಿ ಜೋಡಿಸುವಂತಿಲ್ಲ. ಅವನ್ನು ನೆರಳಲ್ಲಿ ಒಣಗಿಸ ಬೇಕು ಅದನ್ನುಜೋಡಿಸುವ ಕ್ರಮವನ್ನು ನಮ್ಮ ಗುರುಪ್ರಸಾದ ಕಂಡುಕೊಂಡಿದ್ದರು.. ಇವೆಲ್ಲ ಮಾಡಿ ಕಲಿತ ಗುಟ್ಟುಗಳು. ಕಾಗದದ ಮೇಲೆ ಐದು ಅಥವ ಆರು ಗರಿಗಳನ್ನು ಸಮಾಂತರವಾಗಿ ತುಸು ಅಂತರ ಬಿಟ್ಟು ಜೋಡಿಸಿ ನಂತರ ಅದರ ಮೇಲೆ ಅಡ್ಡಲಾಗಿ ಐದು ಗರಿಗಳನ್ನು ಅದೇ ರೀತಿಯಲ್ಲಿ ಜೊಡಿಸ ಬೇಕು. ಹೀಗೆ ಅನೇಕ ಲೇಯರ್‌ಗಳನ್ನು ಜೋಡಿಸ ಬಹುದು. ಈ ರೀತಿಯ ವಿನ್ಯಾಸದಲ್ಲಿಟ್ಟಾಗ  ಒಣಗಿಸುವುದ ಸುಲಭ. ಅರ್ಧ ದಿನ ಬಿಟ್ಟರೂ ಸಾಕು. ಸಾವಿರಾರು ಗರಿಗಳನ್ನು ಈವಿನ್ಯಾಸದಲ್ಲಿ ಜೋಡಿಸಿದಾಗ ಹೆಚ್ಚಿನ ನ ಜಾಗ ಬೇಕಿಲ್ಲ.
ಮಧ್ಯಾಹ್ನದ ಕೆಲಸದಲ್ಲಿ ನಲಿನಲಿಯುತ್ತಾ ಕಲಿಯುವ ತತ್ವ  ನುಸುಳಿತು. ಉದ್ದಕ್ಕೆ ಜೋಡಿಸಿದ್ದ ಮೇಜುಗಳ ಎರಡೂ ಬದಿಯಲ್ಲಿ ಹತ್ತು ಹತ್ತು ಜನ ಎದುರು ಬದುರಾಗಿ ಕೂತಿದ್ದರು  ಅವರನ್ನೆ ಎರಡು ತಂಡವಾಗಿಸಿ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಯಿತು.  ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಪ್ರಶ್ನೆಗಳನ್ನು ಮಕ್ಕಳು ಖುಷಿ ಖುಷಿಯಿಂದ ಉತ್ತರಿಸುತ್ತಾ ಕೆಲಸ ಮಾಡುವಾಗ ಅವರಿಗೆ ನೀಡಿದ್ದ ಗುರಿ ಅರ್ಧ ಸಮಯದಲ್ಲೇ ಸಾಧಿತವಾಯಿತು. ಕೆಲವರು  ಎರಡು ಕಟ್ಟು ಶುಚಿ ಮಾಡಿದರು. ಅವರೊಂದಿಗೆ  ಕುಳಿತು ಕೈ ಜೊಡಿಸಿದಾಗ   ಕೆಲಸಕ್ಕೆ ಇನ್ನೂ ಹೆಚ್ಚಿನ  ವೇಗ ಬಂದಿತು. ಒಂದೆರಡು  ತಂಡಗಳು ಮೂರು ಕಟ್ಟುಗಳ ಶುಚೀಕರಣ ಮಾಡಿದರು.
ಕನ್ನಡ ಪ್ರಾಧ್ಯಾಪಕರಾದ ಡಾ. ಲಕ್ಷ್ಮಿಪ್ರಸಾದರಿಗೆ ಯಾವುದೋ ಕಾರಣದಿಂದ ಹೊರಡುವ ಮುಂಚೆ ತುಸು ಕಿರಿಕಿರಿಯಾಗಿ ಭಾಗವಹಿಸುವ ಬಗ್ಗೆ ದ್ವಂದ್ವದಲ್ಲಿದ್ದವರು. ಇಲ್ಲಿಗೆ ಬಂದ ಮೇಲೆ ಅವರಿಗೆ ದೊರೆತ ತಾಳೆಗರಿ ಕಟ್ಟು ನೋಡಿದಾಗ  ಖಿನ್ನತೆ ಮಾಯವಾಯಿತು.. ಅವರು ಈ ವರೆಗೆ  ಕೇಳಿರದ ಕೃತಿ ಅವರ ಕೈಗೆ ಬಂದಿತ್ತು ಮೈಸೂರೊಡೆಯ ಚಿಕ್ಕದೇವರಾಯ ವಿರಚಿತ ಮಹಾಭಾರತ ಅದಾಗಿತ್ತು.ಅದನ್ನು ಕೂಲಂಕುಷವಾಗಿ ಅಧ್ಯಯನ ಮಾಡ ಬೇಕಿದೆ.  ಅವರು ಮೊದಲೇ ಸಂಶೋಧಕಿ. ಈಗಾಗಲೇಒಂದು ಪಿ. ಎಚ್‌ಡಿ ಪಡೆದು ಇನ್ನೊಂದು ಸಂಪ್ರಬಂಧವನ್ನು ವಿಶ್ವ ವಿದ್ಯಾಲಯಕ್ಕೆ ಸಲ್ಲಿಸಿರುವರು.ಅವರಿಗೆ ಮತ್ತೊಂದು ಸಂಶೋಧನೆಗೆ ಯೋಗ್ಯವಾದ ವಿಷಯ ದೊರೆತಂತಾಯಿತು.ಇದು ಪ್ರಕಟಿತ ಕೃತಿಯೋ ಅಪ್ರಕಟಿತ ಕೃತಿಯೋ ಎಂಬ ಜಿಜ್ಞಾಸೆ ಎದ್ದಿತುಆಬಗ್ಗೆ ನಂತರ ವಿವರವಾದ ಮಾಹಿತಿ ಪಡೆಯಲು ಆಕೃತಿಯನ್ನ ಎತ್ತಿ ಇಡಲಾಯಿತು.ಕೆಲವರ ಅನಿಸಿಕೆಯಂತೆ ಸಂಗ್ರಹದಲ್ಲಿನ ಬಹುತೇಕ ಹಸ್ತಪ್ರತಿಗಳು ಈಗಾಲೇ ಪ್ರಕಟವಾಗಿರ ಬಹುದು ಆದರೆ ಚಿನ್ನದ ಗಣಿಯಲ್ಲಿ ಟನ್‌ಗಟ್ಟಲೇ ಮಣ್ನೂ ಕಲ್ಲು ಅಗೆದು ಪುಡಿಮಾಡಿದರೆ ಒಂದೋ ಎರಡೋ ಗ್ರಾಂ ಚಿನ್ನ ಸಿಕ್ಕರೂ ಸಾಕು ಶ್ರ ಮ ಸಾರ್ಥಕ. ಹಸ್ತಪ್ರತಿ ಅಭಿಯಾನವೂ ಅದೇ ತರಹದ್ದು. ನಮ್ಮ ಶ್ರಮ ಅನೇಕ ರೀತಿಯಲ್ಲಿ ಫಲ ಕೊಡಲಾರಂಬಿಸಿತು ಪತ್ರಿಕೆಯಲ್ಲಿನ ಸುದ್ಧಿ ಓದಿ ಯಾರೋ ಎರಡು ಹಸ್ತಪ್ರತಿಗಳನ್ನು ತಂದುಕೊಟ್ಟರು. ಹೊಸದುರ್ಗದ ತಿಪ್ಪೆಸ್ವಾಮಿ  ಎಂಬ  ಮಧ್ಯವಯಸ್ಕರು. ಜೀವನದಲ್ಲಿ ಸ್ಥಿರತೆ ಕಂಡು ಕೊಂಡಿರುವರು.  ತಾವೂ ಈ ಕೆಲಸದಲ್ಲಿ ಭಾಗಿಯಾಗಲು ಬಂದಿದ್ದರು. ನಮ್ಮ   ವಿದ್ಯಾರ್ಥಿಗಳಲ್ಲಿ ಕಾಂಪ್ಯೂಟರ್‌ ಮತ್ತು ಇಂಟರ್‌ನೆಟ್‌ ಸೌಲಭ್ಯ  ಇರುವ ಎಂಟುಮಂದಿ ತಾವೂ ಆನ್‌ಲೈನ್‌ ಕೆಲಸದಲ್ಲಿ ಸಹಕರಿಸಲು ಬಯಸಿದರು. ಅವರಿಗೆ ಕಾರ್ಯಾಗಾರದ ನಂತರ ಎರಡು ದಿನದ  ವಿಶೇಷ ತರಬೇತಿನೀಡಿ ನಮ್ಮ ಗುಂಪಿಗೆ ಸೇರಿಸಿ ಕೊಳ್ಳುವ ವ ಆಶ್ವಾಸನೆ ನೀಡಲಾಯಿತು.

ಸಂಜೆ ಕೊಡಬೇಕಿದ್ದ ಟೀ  ಹೊಂದಾಣಿಕೆಯ ಕೊರತೆಯಿಂದ ಬರಲಿಲ್ಲ. ಆದರೆ ಯಾರಿಗೂ ಅದರ ಬಗ್ಗೆ ಚಿಂತೆಯೇ ಇರಲಿಲ್ಲ. ಎಂ. ಇ .ಎಸ್‌. ಕಾಲೇಜಿನ ಪ್ರಾಧ್ಯಾಪಕರಾದ ಡಾ.ರಂಗಾರೆಡ್ಡಿಯವು ಕಾರ್ಯಾಗಾರಕ್ಕೆಬಂದು ತಮ್ಮವಿದ್ಯಾರ್ಥಿಗಳ ಕೆಲಸ ಕುರಿತು ತಿಳಿದುಕೊಂಡರು. ಭೇಟಿ ನೀಡಿ ಮಕ್ಕಳು ಸಕ್ರಿಯವಾಗಿ ಭಾಗವಹಿಸುವುದನ್ನು ನೋಡಿ ಸಂತೋಷ ಪಟ್ಟರು.ಮಕ್ಕಳ ಬೇಡಿಕೆಯಂತೆ ಕಾರ್ಯಾಗಾರವನ್ನು ಇನ್ನೂ ಎರಡು ದಿನ ವಿಸ್ತರಿಸಲು ಕೋರಿದರು.  ”ನಮ್ಮ ಕಾಲೇಜಿನಲ್ಲಿಯೂ ಹಸ್ತ ಪ್ರತಿ ಸಂಗ್ರಹವಿರುವುದು..ಅದನ್ನು ಭದ್ರವಾಗಿ ಕೊಟ್ಟಡಿಯಲ್ಲಿ ಇಡಲಾಗಿದೆ. ನಮ್ಮಲ್ಲಿಯೂ ಈ ಕೆಲಸ ಮುಂದುವರಿಸಿ  “ ಎಂದು  ಕೋರಿದರು . ತಕ್ಷಣವೇ ತಮ್ಮ ಕಾಲೇಜಿನ ಪ್ರಿನ್ಸಿಪಾಲರಿಗೆ ಫೋನುಮಾಡಿ ವಿಷಯ ತಿಳಿಸಿ ಕಾರ್ಯಾಗಾರದ ನಿರ್ದೇಶಕರೊಡನೆ ಮಾತನಾಡಲು ಕೋರಿದರು.ಅವರು ತಾವೂ ಒಂದುದಿನದ ಕಾರ್ಯಾಗಾರಕ್ಕೆ ಭೇಟಿ ನೀಡುವೆವು ಮತ್ತು ತಮ್ಮ ಕಾಲೇಜಿಗೆ ಬಂದು  ಸಲಹೆ ನೀಡಲು ಆಹ್ವಾನಿಸಿದರು.ಈ ಕಾರ್ಯಾಗಾರ ಮುಗಿದ ಮೇಲೆ ಯೋಚನೆ ಮಾಡಲು ನಿರ್ಧರಿಸಿಲಾಯಿತು. ನಮ್ಮ  “ No cost , Low cost” .ಹಸ್ತ ಪ್ರತಿ ಅಭಿಯಾನಕ್ಕೆ  ಎರಡೇ ದಿನದಲ್ಲಿ ಇಷ್ಟರ ಮಟ್ಟಿಗೆ  ಸಕಾರಾತ್ಮಕ ಸ್ಪಂದನ ದೊರೆತಿರುವುದು  ಭರವಸೆಯ ಬೆಳಕು ಮಾಡಿಸಿತು.












No comments:

Post a Comment