Wednesday, October 31, 2012

ಬಯಸದೆ ಬಂದ ಭಾಗ್ಯ !

                                                                 
                                  
http://www.kendasampige.com/images/trans.gif
                         ಮಂಡ್ಯ ಜಿಲ್ಲೆಯ ಹಳ್ಳಿಯಕಾಲೇಜು ಒಂದರಲ್ಲಿ  ಪ್ರಭಾರಿ ಪ್ರಾಂಶುಪಾಲನಾಗಿ ಕಾರ್ಯ ನಿರ್ವಹಿಸುತ್ತಿದ್ದೆ ಪ್ರಾಂಶುಪಾಲನಾಗಿ ಮುಂಬಡ್ತಿ ಬರುವುದೆಂದು ತಿಳಿಯಿತು. ನಾನು  ಅಲ್ಲಿಯೆ ಮುಂದುವರಿಯ ಬೇಕೆಂದು ಸ್ಥಳೀಯ ನಾಯಕರು ನನ್ನ ಮನ ಒಲಿಸಿದರು. ಎಲ್ಲ ಸಹಕಾರ ನೀಡುವುದಾಗಿ ಮಾತುಕೊಟ್ಟರು. ಜಿಲ್ಲಾ ಪಂಚಾಯತ್‌ ಸದಸ್ಯರು ತಮ್ಮ ಭಾವ ನೆಂಟರಾಗಿದ್ದ ಮಂತ್ರಿಗಳಿಗೆ ಹೇಳಿ ಮಿನಿಟ್ಸ ಹಾಕಿಸಿದ್ದರು. ಆರು ತಿಂಗಳಿಂದ ಪ್ರಾಂಶುಪಾಲನಾಗಿ ಕೆಲಸ ಮಾಡಿದ್ದರಿಂದ   ಆಡಳಿತ ಹಿಡಿತಕ್ಕೆ ಬಂದಿತ್ತು. ನಾನು ನಿರ್ಭೀತಿಯ ಮತ್ತು ದಿಟ್ಟನಿರ್ಧಾರಗಳಿಂದ ಜನರ ಮನ ಗೆದ್ದಿದ್ದೆ. ಮಕ್ಕಳೂ ತುಂಬ ಹಚ್ಚಿ ಕೊಂಡಿದ್ದರು. ನಮ್ಮಹುಟ್ಟೂರು  ಬಿಟ್ಟು ಬಂದ ಮೇಲೆ ಇದ್ದ ಊರೇ ನಮ್ಮದು ಎಂದು ಕೊಳ್ಳುವ ನಾನೂ ಅವರ ಮಾತಿಗೆ ಸಮ್ಮತಿ ಸೂಚಿಸಿದೆ.
ಒಂದೇ ವಾರದಲ್ಲಿ ಮುಂಬಡ್ತಿ ಆದೇಶ ಬಂದಿತು. ಆದರೆ ದೊಡ್ಡ  ಆಶ್ಚರ್ಯ ಕಾದಿತ್ತು. ಇಲ್ಲಿಗೆ ಮೈಸೂರು ನಿವಾಸಿಯೊಬ್ಬರು  ಪ್ರಾಂಶುಪಾಲರಾಗಿ ಹಾಕಿಸಿಕೊಂಡಿದ್ದರು. ನನಗೆ ಅದೇ ಜಿಲ್ಲೆಯ, ತಾಲೂಕು ಸ್ಥಳದಲ್ಲಿನ ಬಹು ದೊಡ್ಡ ಮತ್ತು ಅತಿ ಹಳೆಯ  ಕಾಲೇಜಿಗೆ ಪ್ರಾಂಶುಪಾಲನಾಗಿ ಮುಂಬಡ್ತಿ ನೀಡಿ ವರ್ಗವಾಗಿತ್ತು. ಇದು  ನಾನು ಕನಸು ಮನಸಿನಲ್ಲೂ ಊಹಿಸಿರದ  ಅವಕಾಶ. ಮೈಸೂರು ಮತ್ತು ಮೈಸೂರಿನಿಂದ ನಿತ್ಯ ಓಡಾಡ ಬಹುದಾದ ಸುತ್ತ ಮುತ್ತಲಿನ ಕಾಲೇಜುಗಳ ಹುದ್ದೆಗಳಿಗೆ ಬಹು ಬೇಡಿಕೆ. ಮೈಸೂರಲ್ಲಿ ನೆಲಸಿದ ಪ್ರಾಂಶುಪಾಲರು ಉಪನ್ಯಾಸಕರು ಜತೆಗೆ ಮಹಿಳಾ ಉಪನ್ಯಾಕರಿಗೆ ಮತ್ತು ಸರಕಾರಿ ನೌಕರಿಯಲ್ಲಿರುವ ದಂಪತಿಗಳಿಗೆ ಈ ಕಾಲೇಜುಗಳು ಮೀಸಲು. ಅದಕ್ಕಾಗಿ ತಮ್ಮ ಪ್ರಭಾವ, ಜಾತಿ, ಹಣ ಎಲ್ಲವನ್ನೂ ಧಾರಾಳವಾಗಿ ಬಳಸುವರು. ಹೀಗಿದ್ದಾಗ  ಏನೂ ಇಲ್ಲದ ದೂರದ  ಬಳ್ಳಾರಿಯಿಂದ ಬಂದ ನನಗೆ ಅಷ್ಟು ಉತ್ತಮ ಸ್ಥಳ ಸಿಕ್ಕಿದ್ದು ಹೇಗೆ ಎಂಬ ಅನುಮಾನ ಮೂಡಿತು.
ಕಾಲೇಜು ಹೇಗಿದೆ ಎಂದು ನೋಡಿ ಕೊಂಡು ಬರಲು ಪದವಿ ವಿದ್ಯಾರ್ಥಿಯಾಗಿದ್ದ ನನ್ನ ಮಗ ತನ್ನ ಗೆಳೆಯನ ಜೊತೆ ಹೋಗಿ ಬಂದ. ಅವನು ನೀಡಿದ ವರದಿ ಆಘಾತ ಕಾರಿಯಾಗಿತ್ತು.  ಆ ಕಾಲೇಜು ಸಮಸ್ಯೆಗಳ ಆಗರ. ಅದರ ಹಿಂದಿನ ಇಬ್ಬರು ಪ್ರಾಂಶುಪಾಲರೂ ಅಮಾನತ್ತಾಗಿದ್ದರು. ಅಲ್ಲಿ ಒಂದೇ ಜನಾಂಗದ ಪ್ರಾಭಲ್ಯ.  ದಲಿತ ಮತ್ತು ಹಿಂದುಳಿದ ಮಕ್ಕಳೆ ಹೆಚ್ಚು. ಸದಾ ಹೊಡೆದಾಟ ಬಡಿದಾಟ. ಕಳೆದ ಮೂರು ತಿಂಗಳಿಂದ ಅಮಾನತ್ತಾಗಿರುವ ಪ್ರಾಂಶಪಾಲರನ್ನ ಪುನಃ ಅಲ್ಲಿಗೆ  ನೇಮಿಸಬೇಕೆಂದು ಕಾಲೇಜಿನ ಮುಂದೆ ಟೆಂಟುಹಾಕಿಕೊಂಡು  ಸತ್ಯಾಗ್ರಹ ಬೇರೆ ನಡೆಸಿದ್ದರು. ಅಲ್ಲಿನ ಉಪನ್ಯಾಸಕರು ಯಾರೂ ಪ್ರಭಾರೆ ಮುಖ್ಯಸ್ಥರಾಗಿ ಕೆಲಸ ಮಾಡಲೂ ಸಿದ್ಧರಿದ್ದಿಲ್ಲ. ಅವರು ಆಯುಕ್ತರ ಬಳಿ ಹೋಗಿ ತಮ್ಮ ಗೋಳು ತೋಡಿಕೊಂಡಾಗ ಅವರಿಂದ ನಿಮ್ಮ ಕಾಲೇಜಿಗೆ ಒಬ್ಬ ಸಮರ್ಥ ವ್ಯಕ್ತಿಯನ್ನೆ ಕಳುಹಿಸುತ್ತೇವೆ. ಚಿಂತೆ ಮಾಡಬೇಡಿ. ಎಂದು ಆಶ್ವಾಸನೆ ನೀಡಿದ್ದರಂತೆ. ಅದರ ಫಲವಾಗಿ ಶಿಫಾರಸ್ಸಿನ ಹೊರತಾಗಿಯೂ ನನಗೆ ಈ ಚಿಕ್ಕ ಕಾಲೇಜಿನಿಂದ  ದೊಡ್ಡ ಕಾಲೇಜಿಗೆ ಬಡ್ತಿಯ ಮೇಲೆ ವರ್ಗ ವಾಗಿತ್ತು. ಇಲಾಖೆ ನನ್ನ ಸಾಮರ್ಥ್ಯಕ್ಕೆ ಸೂಕ್ತವಾದ  ಪ್ರಶಸ್ತಿ ನೀಡಿತ್ತು. ಆದರೆ ಅದು ವರವೋ ಶಾಪವೋ ಎಂದು ನನಗೆ  ಜಿಜ್ಞಾಸೆ ಎದ್ದಿತು.
ಕಾಲೇಜಿಗೆ ವರದಿ ಮಾಡಲು ಹೋದಾಗ ನನಗೆ ಭ್ರಮ ನಿರಸನವಾಯಿತು. ಮೊದಲನೆಯದಾಗಿ ಅಮಾನತ್ತಿನಲ್ಲಿದ್ದ  ಹಿಂದಿನ ಪ್ರಾಂಶುಪಾಲರು ಛೇಂಬರ್‌ನ ಬೀಗದ ಕೈನಿಂದ ಹಿಡಿದು ಯಾವುದೆ ಹೊಣೆಯನ್ನು ಹಸ್ತಾಂತರ ಮಾಡಿರಲಿಲ್ಲ. ನಾನು ಹೋಗಿ ಉಪನ್ಯಾಸಕರ ಕೋಣೆಯಲ್ಲಿ ಕುಳಿತು ಕೊಳ್ಳ ಬೇಕಾಯಿತು. ಅಲ್ಲಿನ ಬಹುತೇಕ ಉಪನ್ಯಾಸಕರು ಸ್ಥಳೀಯರು. ಅವರಿಗೆ ವರದಿ ಮಾಡಿಕೊಂಡ ನನ್ನನ್ನು ನೋಡಿ   ಅಚ್ಚರಿಯಾಯಿತು. ಖುದ್ದು ಆಯುಕ್ತರೆ ಅಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಸಶಕ್ತ ವ್ಯಕ್ತಿಯನ್ನು ನೇಮಿಸುವುದಾಗಿ ಭರವಸೆ ನೀಡಿದ್ದರು. ಐದು ಅಡಿ ಎರಡಿಂಚು ಇತ್ತರದ, ಐವತ್ತು ಕಿಲೋ ತೂಕದ ಮುಂದುವರಿದ ಜನಾಂಗದ ಯಾವುದೋ ಜಿಲ್ಲೆಯ ವ್ಯಕ್ತಿ ಅದು ಹೇಗೆ ಕಾಲೇಜು ನಿಭಾಯಿಸುವರು ಎಂಬ ಅವರ ಭಯ ಸಕಾರಣವಾಗಿತ್ತು. ಆದರೂ ತಮ್ಮ ತಲೆಯ ಮೇಲಿನ ಭಾರ ಇಳಿಯಿತಲ್ಲ , ಅಷ್ಟೆ  ಸಾಕು ಎಂದು ಎಲ್ಲ ಮಾಹಿತಿ ನೀಡಿ ಪೂರ್ಣ ಸಹಕಾರ ಕೊಡುವುದಾಗಿ ತಿಳಿಸಿ ತುಂಬು ಹೃದಯದಿಂದ ಸ್ವಾಗತಿಸಿದರು.
ನಾನು ಮೇಲಾಧಿಕಾರಿಗಳಿಗೆ ವಿವರವಾಗಿ ಅಲ್ಲಿನ ಪರಿಸ್ಥಿತಿಯನ್ನು ವರದಿ ಮಾಡಿ ನಾನು ಹಾಜರಾದ ವರದಿಯನ್ನೂ ಮತ್ತು ಅಲ್ಲಿನ ಪರಿಸ್ಥಿತಿಯನ್ನು ಕುರಿತ ಅರೆ ಸರ್ಕಾರಿ ಪತ್ರವನ್ನು ಆಯುಕ್ತರಿಗೆ ಕಚೇರಿಗೆ  ಹಿರಿಯ ಉಪನ್ಯಾಸಕರ ಕೈನಲ್ಲಿ ಬೆಂಗಳೂರಿಗೆ  ಕಳುಹಿಸಿದೆ.
ಮಾರನೆ ದಿನವೆ  ನಿರ್ದೇಶಕರು  ಕ್ರಮ ತೆಗದು ಕೊಂಡು ಪ್ರತಿಸ್ಪಂದಿಸಿದ್ದರು.ಅದೇ ಸಮಯದಲ್ಲಿ ಮೈಸೂರಿಗೆ ಬಂದಿದ್ದ ಶಿಕ್ಷಣ ಸಚಿವರನ್ನೂ ಊರಿನ ಗಣ್ಯರು ಸಂಪರ್ಕಿಸಿದ್ದರು. ಅಲ್ಲಿಂದಲೆ ಸಹಾಯಕ ಶಿಕ್ಷಣ ಅಧಿಕಾರಿಗೆ  ಪಂಚನಾಮೆ ಮಾಡಿ ಬೀಗ ಒಡೆದು ಪ್ರಭಾರಿ ವಹಿಸಬೇಕೆಂದು ಆದೇಶ  ಕಳುಹಿಸಿದರು.
ಅಲ್ಲಿನ ಸಹಾಯಕ ಶಿಕ್ಷಣಾಧಿಕಾರಿಗಳು ಯುವಕರು, ಉತ್ಸಾಹಿಗಳು ಮತ್ತು ಉತ್ತಮ ಕೆಲಸಗಾರರು. ಅವರು ಖುದ್ದಾಗಿ ಬಂದು ನಮ್ಮ ಉಪನ್ಯಾಸಕರು ಹಾಗೂ ಊರಿನ ಮುಖಂಡರಿಬ್ಬರ ಎದುರಿನಲ್ಲಿ ಛೇಂಬರಿನ ಬೀಗ ಒಡೆದು ಒಳಗೆ ಹೋಗಲು ಅನುವು ಮಾಡಿಕೊಟ್ಟರು. ಅಲ್ಲಿರುವ ಬೀಗದ ಕೈ ಗೊಂಚಲಿನಲ್ಲಿ ಬಹುತೇಕ ಬೀರುಗಳನ್ನು ತೆಗೆಯಬಹುದಾಗಿತ್ತು. ಆದರೆ ಕಬ್ಬಿಣದ ಪೆಟ್ಟಿಗೆ  ಮತ್ತು ಎರಡು ಬೀರುಗಳ ಬೀಗದ ಕೈ ಇರಲಿಲ್ಲ. ಅವನ್ನೂ ಬೀಗ ರಿಪೇರಿ ಮಾಡುವವನ ಸಹಾಯದಿಂದ ತೆಗೆಸಲಾಯಿತು. ನಂತರ ಪ್ರಾಂಶುಪಾಲರ ನೇರ ಪ್ರಭಾರೆಯಲ್ಲಿರುವ ಎಲ್ಲ ವಸ್ತುಗಳನ್ನೂ ಪಂಚನಾಮೆ ಮಾಡಿ  ಮೂರು ಪಟ್ಟಿ ತಯಾರಿಸಿ ಎಲ್ಲರೂ ಸಹಿ ಮಾಡಿದರು.  ಪ್ರಯೋಗ ಶಾಲೆಯ ಕೀಲಿಕೈ ಇರಲಿಲ್ಲ. ಅದನ್ನು ನಂತರ ತೆಗೆದುಕೊಳ್ಳಲು  ಸೂಚಿಸಿದರು. ಎಲ್ಲ ದಾಖಲೆಗಳನ್ನು ಅವು ಇದ್ದಂತೆ ನಾನು ವಹಿಸಿಕೊಂಡೆ. ಇದೆಲ್ಲ ಕೆಲಸ ಮಾಡಲು ಸಂಜೆ ಏಳು ಗಂಟೆಯಾಯಿತು.  ಹಿರಿಯ ಸಹಾಯಕರು ಹಾಗೂ ಉಪನ್ಯಾಸಕರೂ ಜೊತೆಯಲ್ಲೆ ಇದ್ದು ಸಹಕರಿಸಿದರು.
ಮಾರನೆ ದಿನ ತುಸು ಮೊದಲೆ ಬಂದೆ. ಅದು ಸಂಯುಕ್ತ ಪದವಿಪೂರ್ವ ಕಾಲೇಜು  ಜತೆಗೆ ನಾಲಕ್ಕು ವೃತ್ತಿ ಶಿಕ್ಷಣ ಕೋರ್ಸುಗಳು ಹಾಗೂ ಹಿಂದಿನ ಮಲ್ಟಿ ಪರ್ಪಸ್‌ ಹೈಸ್ಕೂಲು ಆದಾಗಿನ  ಆರನೆ ತರಗತಿಯಿಂದಲೆ ಕಾರ್ಪೆಂಟರಿ, ಫಿಟ್ಟರ್‌,ಮೆಷಿನಿಷ್ಟ್ ವಿವಿಧ ಕಸಬು ಕಲಿಸುವ ಮೂಲಶಿಕ್ಷಣದ ಯೋಜನೆಯ ಅಡಿಯಲ್ಲಿನ ವೃತ್ತಿ ವಿಭಾಗವೂ ಇದ್ದವು. ಎಲ್ಲ ಸೇರಿ ಬರೋಬ್ಬರಿ ನೂರರ ಹತ್ತಿರ  ಸಿಬ್ಬಂದಿ. ಸಾವಿರದ ಐದು ನೂರು ವಿದ್ಯಾರ್ಥಿಗಳು.
ಕಾಲೇಜಿನ ಕಟ್ಟಡದಲ್ಲೆ ಒಳಗೆ ಒಂದು ಸುತ್ತು  ಹೋಗಿ ಬಂದೆ. ಗೋಡೆಗಳ ತುಂಬ ಪ್ರೇಮ ಸಂದೇಶಗಳು. ಕೆಲವು ಕಡೆ ಸಾರ್ವಜನಿಕ ಶೌಚಾಲಯದ ಬರಹವನ್ನೂ ನಾಚಿಸುವಂತಿದ್ದವು. ಅಲ್ಲಿ ಎರಡು ಮೂತ್ರಾಲಯಗಳಿದ್ದವು. ಅವು ಇನ್ನೂ ದೂರಲ್ಲಿರುವಾಗಲೆ ಮೂಗು ಮುಚ್ಚಿಸುವ  ದುರ್ವಾಸನೆ. ಒಳಗೆ ಹೋಗಿ ನೋಡಿದರೆ ಸಾಕ್ಷಾತ್‌ ನರಕ. ತಕ್ಷಣ    ಜವಾನರನ್ನು ಕರೆಸಿ ಅದನ್ನು ಶುಚಿ ಮಾಡುವ ಜನರನ್ನು ಬರಹೇಳಿದೆ. ಫೆನಾಯಲ್‌ ಬ್ಲೀಚಿಂಗ್‌ಪೌಡರ್‌ ತರಿಸಿ ತಕ್ಷಣ ಕ್ರಮ ತೆಗೆದುಕೊಳ್ಳಲು ತಿಳಿಸಿದೆ. ನಮ್ಮ ಹಿರಿಯ ಸಹಾಯಕರಿಗೆ ಆ ಹೊಣೆ ವಹಿಸಲಾಯಿತು. ನಮ್ಮಲ್ಲಿ ಕೆಲವರು ಎಲ್ಲ ಬಿಟ್ಟು ಬಂದ ತಕ್ಷಣ  ಮೊದಲು ಸಂಡಾಸ ಶುಚಿ ಮಾಡಲು ಹೊರಟಿದ್ದಾರಲ್ಲ ಎಂದು ಗೊಣಗಿದರು.  ನಮ್ಮದು  ಆಯತಾಕಾರದ ಮುಚ್ಚಿದ ಆವರಣದಲ್ಲಿನ ಕಾಲೇಜು ಕಟ್ಟಡ. ಸಂಡಾಸವು  ದೂರದ ಒಂದು ಮೂಲೆಯಲ್ಲೆ ಇದ್ದರೂ  ಎಲ್ಲ ಕಡೆ ಅದರ ದುರ್ವಾಸನೆ ಹೊಡೆಯುತಿತ್ತು. ಅಲ್ಲದೆ ವಿದ್ಯಾರ್ಥಿಗಳ ಆರೋಗ್ಯ ಮತ್ತು ಆವರಣದ ಸ್ವಚ್ಛತೆ . ನನಗೆ ಮೊದಲ ಆದ್ಯತೆಯಾಗಿತ್ತು. ಆದರೆ ನಂತರ ನನಗೆ ಗೊತ್ತಾಯಿತು. ಆ ನನ್ನ ಚಿಕ್ಕ ಕಾಳಜಿ ಮಕ್ಕಳಿಗೆ ಒಂದು ಸಕರಾತ್ಮಕ ಸಂದೇಶ ನೀಡುವಲ್ಲಿ ಯಶಸ್ಸುಗಳಿಸಿತ್ತು. ವಿದ್ಯಾರ್ಥಿಗಳಲ್ಲಿ ಆತ್ಮೀಯತೆ ಬೆಳೆದು  ನನಗೆ ಹತ್ತಿರವಾದಾಗ . ಅವರೆ ಹೇಳಿದರು ನಮ್ಮ ಕಾಲೇಜಿನಲ್ಲಿ ನಮ್ಮ ಸೌಲಭ್ಯ ಕುರಿತು ಯೋಚಿಸದವರಲ್ಲಿ ನೀವೆ ಮೊದಲಿಗರು. ಇದುವರೆಗೂ ಎಷ್ಟೇ ಹೇಳಿದರೂ ಯಾರೂ ಕಿವಿಯ ಮೇಲೆ ಹಾಕಿಕೊಳ್ಳುತ್ತಿರಲಿಲ್ಲ. ಯಾರೂ ಕೇಳದೆ ಇದ್ದರೂ ನೀವು ಕ್ರಮ ತೆಗೆದುಕೊಂಡಿರಿ”  ನನ್ನ ಒಂದು ಚಿಕ್ಕನಡೆಯು ಈ ಮಟ್ಟಿನ ವಿಶ್ವಾಸ ಬೆಳೆಸುವುದೆಂಬ ಕಲ್ಪನೆಯೂ  ನನಗೆ ಇರಲಿಲ್ಲ.
ಪ್ರಾಂಶುಪಾಲರ ಕೋಣೆಯ ಬಾಗಿಲ ಮೇಲೆ “ No admission without permission” ಎಂಬ ಫಲಕ ಎದ್ದು ಕಾಣುತಿತ್ತು. ಬೋಧಕ ಸಿಬ್ಬಂದಿಗೂ ನಿರ್ಬಂಧವಿತ್ತು. ಯಾರೂ ಪ್ರವೇಶಿಸುವಂತಿರಲಿಲ್ಲ. ಅವರು ಹೇಳಿಕಳುಹಿಸಿದಾಗ ಮಾತ್ರ ಭೇಟಿ. ಅದನ್ನು ಮೊದಲು ತೆಗೆಸಿ ಹಾಕಿದೆ.ಯಾರು ಬೇಕಾದರೂ ಕೆಲಸವಿದ್ದಾಗ ಬರಬಹುದೆಂದು ಶಿಕ್ಷಕರ ಸಭೆಯಲ್ಲಿ ತಿಳಿಸಿದೆ. ಅಲ್ಲದೆ ಹೈಸ್ಕೂಲು ಮತ್ತು ಕಾಲೇಜು ವಿಭಾಗದ ಹಾಜರಿ ಪುಸ್ತಕಗಳು  ಗುಮಾಸ್ತರ ಹತ್ತಿರವಿದ್ದವು. ಅಲ್ಲಿಯೆ ಎಲ್ಲರೂ ಹೋಗಿ ಸಹಿ ಮಾಡ ಬೇಕಿತ್ತು ಕಾರಣ ಪ್ರಾಂಶುಪಾಲರು ಯಾವಾಗ ಬೇಕಾದರೂ ಬರುತಿದ್ದರು. ಸಹಜವಾಗಿ ಅವರ ಚಲನ ವಲನಕ್ಕೆ ಅಡಚಣೆ ಯಾಗದಿರಲೆಂದು ಆ ವ್ಯವಸ್ಥೆ ಮಾಡಲಾಗಿತ್ತು. ನಾನು ಎಲ್ಲರಿಗಿಂತ ಮುಂಚೆ ಬಂದು ಎಲ್ಲರೂ ಹೋದ ಮೇಲೆ ಕಾಲೇಜು ಬಿಡುವ ಹವ್ಯಾಸವನ್ನು ಅಳವಡಿಸಿ ಕೊಂಡಿರುವುದರಿಂದ , ಹಾಜರಿ ಪುಸ್ತಕಗಳನ್ನು  ನನ್ನ ವಶಕ್ಕೆ ತೆಗೆದು ಕೊಂಡೆ.  ಕಾಲೇಜು ಪ್ರಾರಂಭವಾಗುವ ಹದಿನೈದು ನಿಮಿಷ ಮೊದಲೆ ಅವನ್ನು ಶಿಕ್ಷಕ ಮತ್ತು ಉಪನ್ಯಾಸಕರ ಕೋಣೆಗೆ ಕಳುಹಿಸಿ ಅಲ್ಲಿಯೆ ಸಹಿ ಮಾಡಲು ಸೂಚಿಸಲಾಯಿತು. ತರಗತಿ ಪ್ರಾರಂಭವಾದನಂತರ ಅವು ನನ್ನ ಕೋಣೆಗೆ ಬರುತಿದ್ದವು. ತಡವಾಗಿ ಬಂದವರು ನನ್ನಕೋಣೆಗೆ ಬಂದು ಸಹಿ ಮಾಡಬಹುದಾಗಿತ್ತು.ಇದರಿಂದ ಸಿಬ್ಬಂದಿ ಯಾವಾಗಂದರೆ ಆವಾಗ ಬರುವ ಪದ್ದತಿಗೆ ಕಡಿವಾಣ ಬಿದ್ದಿತು. ಅಕಸ್ಮಾತ್ತಾಗಿ ತಡವಾಗಿ ಬಂದವರು ನನ್ನೆದುರೆ ಸಹಿ ಮಾಡಬೇಕಾದುದರಿಂದ ನಾನು ಏನೂ ಅನ್ನದಿದ್ದರೂ ಸಂಕೋಚ ಪಟ್ಟುಕೊಳ್ಳುತ್ತಿದ್ದರು. ಕ್ರಮೇಣ ಬಹುತೇಕರು ಸಮಯಕ್ಕೆ ಸರಿಯಾಗಿ ಬರತೊಡಗಿದರು.
ಕಾಲೇಜಿನ ಸಮಸ್ಯೆಯ ಮೂಲ ತುಸು ಮಟ್ಟಿಗೆ ತಿಳಿಯಿತು. ಅಲ್ಲಿರುವ ಬಹುಪಾಲು ಮಕ್ಕಳು ದಲಿತ ವರ್ಗಕ್ಕೆ ಸೇರಿದವರು. ಉಪನ್ಯಾಸಕರು ಮುಂದುವರಿದ ಜನಾಂಗದವರು. ಕೆಲವು ಜನ ಅದೇ ವರ್ಗದವರು ಇದ್ದರೂ ಅವರು ತಮ್ಮ ಹುದ್ದೆಯ ಘನತೆಯ ಬಗ್ಗೆ ಕಾಳಜಿವಹಿಸಿದವರು. ಇದರಿಂದ ಮಕ್ಕಳಲ್ಲಿ ಬೋಧಕರ ಬಗ್ಗೆ ವಿಶ್ವಾಸವೆ ಇರಲಿಲ್ಲ. ಬಹುತೇಕರು ಮೊದಲ ಪೀಳಿಗೆಯ ಕಾಲೇಜು ಕಟ್ಟೆ ಹತ್ತಿದವರು. ಹಳ್ಳಿ ಮತ್ತು ಬಡ ಮಕ್ಕಳೆ ಹೆಚ್ಚು. ಮತ್ತು ಅವರನ್ನು ಜಾತಿಯ ಹೆಸರಲ್ಲಿ ಹಾದಿ ತಪ್ಪಿಸುವವರೂ ಇದ್ದರು.  ಅಲ್ಲಿ ಹುಡುಕಿದರೂ ಅನುಕೂಲಸ್ಥ ಮತ್ತು ಅಧಿಕಾರಿಗಳ ಮಕ್ಕಳು ಸಿಗುವುದು ವಿರಳ. ಅನುಕೂಲಸ್ಥರು ಅಲ್ಲೆ ಇರುವ ಖಾಸಗಿ ಕಾಲೇಜಿಗೆ ಹೆಚ್ಚಿನ ಶುಲ್ಕ ಕೊಟ್ಟು ಸೇರುವರು. ಒಂದು ರೀತಿಯಲ್ಲಿ ನಮ್ಮದು ದೀನ ದಲಿತರ ಗೂಡು. ಸಹಜವಾಗಿಯೆ ಮಕ್ಕಳು ಹುಂಬರು, ಒರಟರು ಮತ್ತು ವಿನಯದಗಾಳಿ ಸೋಂಕದವರು.ನಮ್ಮ ಕಾಲೇಜು ಒಂದು ರೀತಿಯಲ್ಲಿ ವಿವಾಹ ವೇದಿಕೆಯಾಗಿತ್ತು ಪ್ರತಿ ವರ್ಷ ಒಂದೋ ಎರಡೋ ಗಾಂಧರ್ವ ವಿವಾಹಗಳು ನಡೆದೇ ನಡೆಯುತಿದ್ದವು. ಅಂತರ್‌ಜಾತಿಯಾದರೆ ಗುಲ್ಲೋ ಗುಲ್ಲು ಒಂದೆ ವರ್ಗದವರ ಉಪಪಂಗಡದವರ ನಡುವಿನ ಪ್ರೇಮ ಪ್ರಕರಣವು ಅನೇಕ ಸಲ ಹೊಡೆದಾಟಕ್ಕೆ ಕಾರಣ ವಾಗುತಿತ್ತು. ಅಲ್ಲಿ ಬೋಧಕ ವರ್ಗದವರು ಬಹುತೇಕ ಸ್ಥಳೀಯರು. ಮನೆ ಮಠ ವ್ಯವಹಾರವಿದೆ. ಮನೆ ಹತ್ತಿರ ಕೆಲಸ. ತಿಂಗಳಿಗೆ ಸರಿಯಾಗಿ ಸಂಬಳ ಬರುವುದು ಹೇಗೋ ಕಾಲ ಕಳೆದರಾಯಿತು ಎಂಬ ಮನೋಭಾವನೆಯವರೆ ಹೆಚ್ಚು.  ಹೀಗಾಗಿ ವಿದ್ಯಾರ್ಥಿಗಳ ಮತ್ತು ಬೋಧಕರ ನಡುವೆ ಕಂದಕ ಬೆಳೆದಿತ್ತು. ಅಲ್ಲದೆ ಅಲ್ಲಿನ ಎರಡು ದಲಿತ ಪಂಗಡಗಳ ಮಕ್ಕಳಲ್ಲೂ ವೈಷಮ್ಯ. ಕಾಲೇಜಿಗೆ ಹತ್ತಿರದಲ್ಲಿಯೆ ನೂರಾರು ಮನೆ ಇರುವ ಅವರ ಪ್ರತ್ಯೇಕ ಕೇರಿಗಳು. ಸಣ್ಣ ಪುಟ್ಟ ಘಟನೆಗೂ  ತೀವ್ರವಾಗಿ ಪ್ರತಿಸ್ಪಂದಿಸಿ ಕಾಲೇಜಿನಲ್ಲಿ ನುಗ್ಗಿ ಗಲಾಟೆ ಮಾಡುವರು.ಅದರೊಂದಿಗೆ ಪರಿಶಿಷ್ಟ ವರ್ಗಕ್ಕೆ ಸೇರಿದವರದು ಇನ್ನೊಂದು ಗುಂಪು. ಸಣ್ಣ ಕಾರಣಕ್ಕೂ ಗಲಭೆ ಹೊಡೆದಾಟ. ಅವರಲ್ಲಿ ಸಮನ್ವಯ ಮತ್ತು ನಂಬಿಕೆಯ 
ಕೊರತೆ ಎದ್ದುಕಾಣುತಿತ್ತು. ಮೇಲಾಗಿ ಮೆಲುವರ್ಗದವರು ತಮ್ಮನ್ನು ಶೋಷಿಸುತ್ತಾರೆ ಎಂಬ ಭಾವನೆ ಬಲವಾಗಿ ಬೇರೂರಿತ್ತು. ಈ ಊರು ಜಾತಿಸಾಮರಸ್ಯದ  ಕೊರತೆಯಿಂದಾಗಿ ಪದೇ ಪದೇ ಗಲಭೆಗಳಾಗುತ್ತಿದ್ದುರಿಂದ  ಅತಿ ಸೂಕ್ಷ್ಮ ಪ್ರದೇಶವೆಂದು ಪರಿಗಣಿತವಾಗಿತ್ತು.  ಅದರಿಂದ ಉಪನ್ಯಾಸಕರು ತರಗತಿಯಲ್ಲಿ ಮಕ್ಕಳಿಗೆ ಬುದ್ಧಿ ಹೇಳಿದರೆ ಸಾರ್‌, ಹೆಚ್ಚು ಮಾತನಾಡ ಬೇಡಿ. ನಿಮ್ಮ ಪಾಠವಷ್ಟೋ ಅಷ್ಟು ಮಾಡಿ .ಪಿರಿಯಡ್‌ಮುಗಿದ ತಕ್ಷಣ  ಜಾಗ ಖಾಲಿ ಮಾಡಿ ಎನ್ನುವ ಹಂತಕ್ಕೆ  ವಿದ್ಯಾರ್ಥಿಗಳು ತಲುಪಿದ್ದರು..
ಉತ್ತಮ ಉಪನ್ಯಾಸಕರಿದ್ದರೂ ಅವರಿಗೆ ಕೆಲಸದಲ್ಲಿ ತೃಪ್ತಿ ಇರಲಿಲ್ಲ. ಕಾಟಾಚಾರಕ್ಕೆ ಪಾಠ ಮಾಡುವಂತಾಗಿತ್ತು  ಭಯ  ಭಕ್ತಿ ಬಿಡಿ ಕೊನೆಗೆ ತುಸುವಾದರೂ ಗುರುಗಳೆಂಬ ಗೌರವ ಸಿಕ್ಕರೆ ಸಾಕು ಎನ್ನುವಂತಾಗಿತ್ತು. ಅವರೆಲ್ಲ ತರಗತಿಗೆ ಹೋದರೆ ಗಂಟೆ ಹೊಡೆಯುವುದನ್ನೆ ಕಾಯುತ್ತಾ , ತರಗತಿ ಮುಗಿದ ತ ಕ್ಷಣ ಒಂದು ದಿನ ಕಳೆಯಿತು ಎಂದು ವಿಶ್ರಾಂತಿ ಕೋಣೆಗೆ ಬಂದು ಇವತ್ತಿಗೆ ಗೆದ್ದೆ ಎಂದು ನಿಟ್ಟುಸಿರು  ಬಿಡುವರು.  ಕಲಿಕೆಯ ವಾತಾವರಣವೆ ಕಾಣೆಯಾಗಿತ್ತು ಕಾಲೇಜಿನಲ್ಲಿ. ಹೈಸ್ಕೂಲುವಿಭಾಗ ಇದ್ದುದರಲ್ಲೆ ಉತ್ತಮ. ಆದರೂ ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎನ್ನುವಂತೆ ಅವರೂ ಚಿಕ್ಕವರಾದರೂ ಆಗೀಗ ಬಾಲ ಬಿಚ್ಚುತಿದ್ದರು.
ಹೋದ ಎರಡು ಮೂರು ದಿನದಲ್ಲೆ ಅಮಾನತ್ತಿನಲ್ಲೆ ಇದ್ದ ಮಾಜಿ ಪ್ರಾಂಶುಪಾಲರು ಕಾಲೇಜಿಗೆ ಭೇಟಿಕೊಟ್ಟರು. ಜವಾನರಿಂದ ಹಿಡಿದು ಕೆಲ ಉಪನ್ಯಾಸಕರ ಸಂಭ್ರಮ ಹೇಳ ತೀರದು. ಸಾಹೇಬರು ಬಂದರು , ಸಾಹೇಬರು ಬಂದರು ಎಂದು ಹಿರಿ ಹಿರಿ ಹಿಗ್ಗಿದರು. ಅವರು ಅಮಾನತ್ತು ಆದೇಶ ರದ್ದು ಪಡಿಸಿ ಕೊಂಡು ಕೆಲಸಕ್ಕೆ ಹಾಜರಾಗಲು ಬಂದಿರಬಹುದು ಎಂಬ ಎಣಿಕೆ ಅವರೆಲ್ಲರದು.
ಅವರು ಪ್ರಿನ್ಸಿಪಾಲರ ಕೋಣೆಯ  ಒಳಗೆ ಬಂದರು.ಬನ್ನಿ ಸಾರ್‌, ಕುಳಿತು ಕೊಳ್ಳಿ ಎಂದೆ.
ನನ್ನನ್ನು ಒಂದು ಸಲ ಮೇಲಿನಿಂದ ಕೆಳಗೆ ನೋಡಿ ,"ನಾನು ಈಗ ಕುಳಿತು ಕೊಳ್ಳುವುದಿಲ್ಲ . ನಿನ್ನನ್ನು ಕುರ್ಚಿ ಸಮೇತ ಎತ್ತಿ ಹೊರ ಹಾಕಿಸಿ,ನಂತರ ಕುಳಿತು ಕೊಳ್ಳುವೆ" ಎಂದು ನುಡಿದು ಸ್ವಿಂಗ್‌ಡೋರ್‌ ಧಡಾರನೆ ತೆಗೆದು ಕೊಂಡು ಹೊರ ನಡೆದರು.
ನಾನು ಕಕ್ಕಾವಿಕ್ಕಿಯಾಗಿ ಕುಳಿತೆ.
ಇದೆಂಥಾ ಬಯಸದೆ ಬಂದ  ಭಾಗ್ಯ ! ಎಂದು ಕೊಂಡೆ.
  



No comments:

Post a Comment