Sunday, October 14, 2012

ಒಟ್ಟಾಗಿ ದುಡಿ ಮತ್ತು ಒಟ್ಟಾಗಿ ಪಡೆ



ಬಾದಲ್‌ಸರ್ಕಾರರ “ Beyond The Land of Hattamala”  ನಾಟಕವನ್ನು ಸಿಎಫ್ ಡಿ ತಂಡವು ಸುಚಿತ್ರ ಫಿಲ್ಮ ಸೊಸೈಟಿಯಲ್ಲಿನ ಸಭಾಂಗಣದಲ್ಲಿ ಶನಿವಾರ ಸಂಜೆ  ಅಭಿನಯಿಸಿತು.ಬಾದಲ್‌ ಸರ್ಕಾರ ನಾಟಕಗಳು  ನಗೆ,  ವಿಡಂಬನೆ ಮತ್ತು ಚುರುಕಾದ ಸಂಭಾಷಣೆಗಳ  ಮೂಲಕ ಸಾಮಾಜಿಕ ಸಮಸ್ಯೆಗಳ ಬಗ್ಗೆ  ಹೊಸ ನೋಟ ಬೀರುವವು. ಇದೂ ಅದಕ್ಕೆ ಹೊರತಲ್ಲ. ಮೂಲತಃ ಇದು ಇಂಗ್ಲಿಷ್‌ ನಾಟಕವಾದರೂ ಅಲ್ಲಿ ಇಲ್ಲಿ ಬಳಸಿದ ಪ್ರಾದೇಶಿಕ ಭಾಷೆಯು ಸಂಭಾಷಣೆಯ  ಸೊಗಡು ಹೆಚ್ಚಿಸಿ, ಭಾವನೆಯ ಅಭಿವ್ಯಕ್ತಿಗೆ  ಭಾಷೆಯ ಚೌಕಟ್ಟಿನ ಮಿತಿ ಇರದು ಎಂಬುದನ್ನು ಸಾದರ ಪಡಿಸಿತು  ಜಗದ್ವಿಖ್ಯಾತ .ನಾರ್ವೇಜಿಯನ್‌  ನಾಟಕಕಾರ  ಹೆನ್ರಿಕ್‌ ಇಬ್ಸನ್‌ ಹೇಳಿದಂತೆ “ಪ್ರಶ್ನೆ ಮಾಡುವುದು ನಾಟಕದ ಕೆಲಸ, ಸಮಸ್ಯೆಗೆ ಪರಿಹಾರ ಕೊಡುವುದಲ್ಲ.”  ಈ ಮಾತು ಸರ್ಕಾರರ ನಾಟಕಗಳಲ್ಲೂ ನಿಜ. ಅದರಲ್ಲೂ “Beyond the land of Hattamala “ ನಾಟಕದಲ್ಲಂತೂ ನೂರಕ್ಕೆ ನೂರಷ್ಟು ಸತ್ಯ. ಇದು ಒಂದು ಆದರ್ಶಮಯ ಸಮಾಜದ ಚಿತ್ರಣ. ಅಲ್ಲಿ ಕೊಳ್ಳುವುದು, ಮಾರುವುದು, ಸ್ವಂತದ ಆಸ್ತಿ , ಕದಿಯುವುದು ಕಾಪಾಡುವುದು , ಕಳ್ಳ,  ಪೋಲೀಸ್‌ ಮೊದಲಾದ ನಾಗರೀಕ ಸಮಾಜದ ಯಾವುದೆ ಪರಿಕಲ್ಪನೆಗಳಿಗೆ ಜಾಗವಿಲ್ಲ. ಅಲ್ಲಿ ನೆಲ ,ಜಲ, ಗಾಳಿ, ಆಹಾರ, ಅಗತ್ಯ ವಸ್ತುಗಳು  ಎಲ್ಲವೂ   ಮುಕ್ತ. ಉಚಿತ.  ಅವು ಎಲ್ಲರವೂ ಹೌದು. ಯಾರವೂ ಅಲ್ಲ. .”Work together and take together “ ಅಲ್ಲಿನ  ಸಮಾಜಿಕ ವ್ಯವಸ್ಥೆಯ ಅಡಿಪಾಯ.  ಚುರುಕಾದ ಸಂಭಾಷಣೆ,ಮಾರ್ಮಿಕ ಮಾತುಗಳು, ವಿನೋದಮಯ ಸನ್ನಿವೇಶಗಳು, ರಂಗದ ಮೇಲೆ ತಮ್ಮಹಾವ, ಭಾವ ಚಲನೆಯಿಂದ ಅಗತ್ಯ ರಂಗಸಜ್ಜಿಕೆಗಳನ್ನು ನಿರ್ಮಿಸುವ ನಟರ ಚಾಕಚಕ್ಯತೆ, ಕಾಡು, ನಾಡು, ನದಿ, ಗೋಡೆಗಳನ್ನು ಕಣ್ಣಿಗೆ ಕಟ್ಟುವಂತೆ ನಟರನ್ನೆ ಬಳಸಿ, ಅತಿ ಕಡಿಮೆ ರಂಗಪರಿಕರಗಳನ್ನು ಉಪಯೋಗಿಸಿ ಸೂಕ್ತ ವಾತಾವರಣ ನಿರ್ಮಿಸುವ ನಿರ್ದೇಶಕರ ಕೌಶಲ ನೋಡುಗರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಯಿತು.
’ಹಟ್ಟಮಾಲ ನಾಡಿನ ಆಚೆ” ಶುರುವಾಗುವುದೆ ಕೆನಾ ಮತ್ತು ಬೇಚಾ ಎಂಬ ಇಬ್ಬರು ಕಳ್ಳರು ಪೋಲೀಸರ ಕೈನಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿ ಒಂದು ಅನಾಮಿಕ ನಾಡನ್ನುತಲುಪುವ ಸನ್ನಿವೇಶದಿಂದ. ಅವರು ಕೈನಲ್ಲಿ  ಗೊಡೆ ಒಡೆಯಲು, ಬೀಗ ಮುರಿಯಲು ಸಹಾಯಕವಾಗುವ ಚಿಕ್ಕ ಹಾರೆ ಹಿಡಿದಿರುವರು.ಅವರ ಅನುಮಾನದ ನೋಟ, ಅಭದ್ರತೆಯ ಹಾವ ಭಾವ , ಸಿಕ್ಕಿ ಬಿದ್ದೇವು ಎಂಬ ಶಂಕೆ ನಾಟಕಕ್ಕೆ ಉತ್ತಮ ಪ್ರಾರಂಭ ಒದಗಿಸುವುದು. ಅವರ ಮೊದಲ ಗುರಿ ಹಸಿದ ಹೊಟ್ಟೆಗೆ ಏನಾದರೂ ಆಹಾರ ಹುಡುಕುವುದು. ಹಣ್ಣಿನ ಅಂಗಡಿಯವನಿಗೆ ಯಾಮಾರಿಸಿ  ತಿಂದೆವು ಅಂದುಕೊಂಡಿದ್ದ  ಅವರಿಗೆ ಹಣ್ಣು ಉಚಿತವಾಗಿ ಲಭ್ಯ ಎಂದು ಅರಿತಾಗ ಅಪಾರ ಅಚ್ಚರಿ.  ನಂತರ ಉಪಹಾರ ಸ್ಥಳದಲ್ಲೂ ಅದೆ ಅನುಭವ.ಇಲ್ಲಿನ ಜನರೆಲ್ಲ ಮೂರ್ಖರು ಎಂದು ಅವರ ಅನಿಸಿಕೆ.ಅವರ ದಡ್ಡತನದ ಲಾಭ ಪಡೆಯುವ ಹೊಂಚು. ಅವರಿಗೆ ಒಂದೆ ಅನುಮಾನ ಇದೆಲ್ಲ ತಮ್ಮನ್ನು ಹಿಡಿಯಲು ಗುಪ್ತ ಚರರು ಹೂಡಿದ ಜಾಲ ಎಂದು. ಉಪಹಾರ ಗೃಹದ ಗೋಡೆಗೆ ಕನ್ನ ಹಾಕಿ ಒಳಗಿರುವ ತಟ್ಟೆ ಬಟ್ಟಲು ಕದಿಯಲು ಹೋದಾಗ ಅಲ್ಲಿ ಹಿಂಬಾಗಿಲು ಹೆಬ್ಬಾಗಿಲು ಎರಡೂ ತೆರೆದೆ ಇರುವುದುರಿಂದ ಅವರಿಗೆ ಅಯೋಮಯ. ಅಷ್ಟೆ ಅಲ್ಲ ಬಾಗಿಲಿನಿಂದಲೆ ಒಳ ಬರಬಹುದಿತ್ತಲ್ಲ? ಗೋಡೆಗೆ ಕನ್ನ ಹಾಕುವ ಕಷ್ಟ ಯಾಕೆ ಬೇಕಿತ್ತು? ಏನು ಬೇಕಿದ್ದರೂ ತೆಗೆದುಕೊಂಡು ಹೋಗಿ ಆದರೆ ಅದರಿಂದ ಏನು ಉಪಯೋಗ ? ಎಂದಾಗ  ಅವರಿಗೆ ದಿಗ್ಭ್ರಮೆ. ಅವರು ಹಾಕಿದ ಕನ್ನವನ್ನು ಮೆಚ್ಚಿ ಅದನ್ನೊಂದು ಕಲೆ ಎಂದು ಹೊಗಳಿದಾಗ ತಲೆ ಬುಡ ತಿಳಿಯಲಿಲ್ಲ.. ಲೈಬ್ರರಿಯಲ್ಲಿ ಚಿನ್ನದ ಒಡವೆಗಳನ್ನು ಎರವಲು ಕೊಡುವ ಪದ್ದತಿ ಗಾಬರಿ ಗೊಳಿಸಿತು. ಬೆಳ್ಳಿ ಬಂಗಾರದ ಒಡವೆಗಳಿಗಿಂತ ಪುಸ್ತಕಗಳಿಗೆ ಅವರು ನೀಡುವ ಪ್ರಾಧಾನ್ಯತೆ ಕಕ್ಕಾವಿಕ್ಕಿಯಾಗಿಸಿತು.ವೈದ್ಯರೂ ಕೂಡಾ ಅವರಿಂದ ಗೋಡೆ ಒಡೆಯುವ ಕಲೆ ಕಲಿಯಲು ಆಸಕ್ತರು. ಕೊನೆಗೆ ಅವರಿಗೆ ಅರಿವಾಯಿತು. “ಹಟ್ಟಮಾಲದ ಆಚೆಗಿನ ನಾಡಿ” ನಲ್ಲಿನ  ರೀತಿ ನೀತಿ. ಒಡೆಯುವುದನ್ನು ಅರಿತಿರುವ ಅವರು ಗೋಡೆಯನ್ನು ಕಟ್ಟಲೂ ಬಹುದು ಎಂದು.ಅಲ್ಲಿನ ಜನರೆಂದಾಗ ಅವರೂ ಬದಲಾದರು.
“ ಎಲ್ಲರೂ ಒಟ್ಟಾಗಿ ದುಡಿಯೋಣ ಮತ್ತು ಒಟ್ಟಾಗಿ ಪಡೆಯೋಣ” ಎಂಬ ಘೋಷ ವಾಕ್ಯವನ್ನು ಕಳ್ಳರೂ ಸೇರಿದಂತೆ ಎಲ್ಲರೂ ಹೇಳುವುದರೊಂದಿಗೆ ನಾಟಕ ಮುಗಿಯಿತು.
ಬಹುತೇಕ ಹದಿವಯಸ್ಸಿನವರೆ ನಟಿಸಿರುವ ಈ ನಾಟಕದಲ್ಲಿ ಕಳ್ಳರಿಬ್ಬರನ್ನೂ ಹೊರತು ಪಡಿಸಿ ಉಳಿದೆಲ್ಲರೂ ಒಂದೆ ರೀತಿಯ ಬಿಳಿಯುಡುಪು ಧರಿಸಿ. ಮುಖಕ್ಕೆ ಬಿಳಿಬಣ್ಣ ಬಳಿದು ಕೊಂಡಿರುವುದು ಆ ನಾಡಿನಲ್ಲಿನ ಸಮಾನತೆಯ ಸಂಕೇತವಾಗಿದೆ ಎನ್ನಬಹುದು. ವಿಶೇಷವಾಗಿ ಅವರ ಮಾತಿನಲ್ಲಿನ ಮುಗ್ಧತೆ ಮನತಟ್ಟುವಂತೆ ಇದೆ.ಅವರಿಗೆ ಕಳ್ಳತನ  ಗೊತ್ತಿಲ್ಲ. ಪೋಲೀಸು ತಿಳಿದಲ್ಲ. ಹಣ ಅರಿಯರು.ಮಾರಾಟ, ಕೊಳ್ಳುವುದು ಕೂಡಾ ಅವರ ಅಳಿವಿಗೆ ಸಿಗದ ಕ್ರಿಯೆಗಳು.
ಇಂಥಹ ಆದರ್ಶ ಸಮಾಜವನ್ನು ರಂಗದಮೇಲೆ ಕಟ್ಟಿಕೊಡುವ ಪ್ರಯತ್ನದಲ್ಲಿ ನಿರ್ದೇಶಕ ಪ್ರಕಾಶ ಬೆಳಕವಾಡಿ ಯಶಸ್ವಿಯಾದರು ಎನ್ನಬಹುದು. ಹಿನ್ನೆಲೆ ಸಂಗಿತವೂ ಸನ್ನಿವೇಶಕ್ಕೆ ತಕ್ಕ ವಾತಾವರಣ ಮೂಡಿಸುವಲ್ಲಿ ಪೂರಕವಾಗಿತ್ತು.ಅತಿಯಾದ ಸಂಕೀರ್ಣತೆ ಇಲ್ಲದೆ ಬೆಳಕಿನ ಸಂಯೋಜನೆ ಸರಳ ಮತ್ತು ಸಹಜವಾಗಿತ್ತು. ನಟರಂತೂ ನಾಟಕದ ಉದ್ಧೇಶವನ್ನು ನಗುತ್ತಾ ನಗಿಸುತ್ತಾ ನೋಡುಗರಿಗೆ ಮುಟ್ಟಿಸುವಲ್ಲಿ ಯಶಗಳಿಸಿದರು. ವಾರಾಂತ್ಯದ ಸಮಯ ಕಳೆಯಲು ಮತ್ತು ಸಮಾಜದ ಸಮಸ್ಯೆಗಳತ್ತ  ಹೊಸ ನೋಟ ಬೀರಲು ಮಾಡಿದ ಉತ್ತಮ ಪ್ರಯತ್ನ  ಎನಿಸಿತು ಈ ನಾಟಕ.

No comments:

Post a Comment