Thursday, October 18, 2012

ಸ. ರಘುನಾಥರೊಂದಿಗೆ -ಒಂದು ಸಾರ್ಥಕ ಸಂಜೆ



“ಜಗವೆಲ್ಲ ನಗುತಿರಲಿ  ಜಗದಳಲು ಎನಗಿರಲಿ” ಎಂಬ ಕವಿವಾಣಿಯನ್ನು ಬದುಕಿ ತೋರುತ್ತಿರುವ ವ್ಯಕ್ತಿಯೊಬ್ಬನನ್ನು ನೋಡುವ ,ಅವರ ಮನದಾಳದ ತುಮುಲವನ್ನು ಆಲಿಸುವ ಮತ್ತು ಕವನವಾಚನವನ್ನು ಕೇಳುವ ಅಪರೂಪದ ಅವಕಾಶ ಶನಿವಾರ ಸಂಜೆ ಕಿ.ರಂ ನುಡಿಮನೆಯಲ್ಲಿ ನಡೆಯುವ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಲಭಿಸಿತು.ಅವರನ್ನು ಚಿಂತಾಮಣಿಯ ಹತ್ತಿರದ ಹಳ್ಳಿಯಿಂದ ಕರೆತಂದವರು, ಅವರ  ಜೀವದ ಗೆಳೆಯ ಕವನದಿಂದ  ಕಚಗುಳಿ ಇಡುತ್ತಾ ಚಿಂತನೆಗೆ ತೊಡಗಿಸುವ,ಲಘುಧಾಟಿಯಲ್ಲೆ ಮನಸಿನ ಆಳಕ್ಕೆ ಲಗ್ಗೆ ಇಡುವ,ಕಾವ್ಯ ಘನ ಗಂಭೀರ ಭಾವಪ್ರಪಂಚಕ್ಕೆ ಸೇರಿದುದು ಎನ್ನುವವರ ಮೊಗದಲ್ಲೂ ಕೆಲವರು ಪೋಲಿ ಎನಬಹುದಾದ ಸಾಲುಗಳಿಂದ ಮುಗುಳುನಗೆ ಮೂಡಿಸುವ,  ಪ್ರೀತಿಯಿಂದ   ತುಂಟ ಕವಿ ಎಂದೂ ಕರೆಸಿಕೊಳ್ಳುವ  ಬಿ.ಆರ್‌.ಲಕ್ಷ್ಮಣ ರಾವ್‌.
ಕನ್ನಡ ಓದುಗ ಪ್ರಪಂಚಕ್ಕೆ ಸಂವೇದನಾಶೀಲ ಕವಿ ಮತ್ತು ಕಥೆಗಾರ ಎಂದು ಪರಿಚಿತವಾಗಿರುವ ಸ. ರಘುನಾಥ ಚಿಂತಾಮಣಿಯ ಹತ್ತಿರದ ಹಳ್ಳಿಯಾದ ಗೌನಿಪಲ್ಲಿಯಲ್ಲಿ ಪ್ರಾಥಮಿಕಶಾಲಾ ಶಿಕ್ಷಕರು.ಶಾಲೆಗೆ ಬಂದ ಮಕ್ಕಳಿಗೆ ಕಲಿಸುವುದು ಮಾತ್ರ ಅವರ ವೃತ್ತಿಯಾದರೆ. ಸುತ್ತಮುತ್ತಲ ಅನಾಥಮಕ್ಕಳ,ಪೋಲಿ ಅಲೆಯುವವರ,ಹೇಳುವವರು ಕೇಳುವವರು ಯಾರೂ ಇಲ್ಲದ ಮಕ್ಕಳು ಕಣ್ಣಿಗೆ ಬಿದ್ದರೆ ಅವರನ್ನು ಕರೆತಂದು ಆಶ್ರಯ ಕೊಟ್ಟು ಮೊದಲು ಹೊಟ್ಟೆಗೆ ಅನ್ನ ಹಾಕಿ ನಂತರ ಅಕ್ಷರ ಕಲಿಸಿ, ವೃತ್ತಿ ಮಾರ್ಗದರ್ಶನ ನೀಡಿ ತನ್ನ ಕಾಲಮೇಲೆ ತಾನು ನಿಲ್ಲುವಂತೆ ಮಾಡಿ, ದುಡಿಮೆಯ ದಾರಿಗೆ ಹತ್ತಿದ ಮೇಲೆ ಉಪಕಾರ ಸ್ಮರಣೆ ಮಾಡಲು, ಋಣ ಸಂದಾಯ ಮಾಡಲು ಪುನಃ ಬಂದು ಕಾಣಲೂ ಕೂಡದು ಎಂಬ ಕಟ್ಟುನಿಟ್ಟಿನ ನಿಷ್ಕಾಮ ಕರ್ಮಿ. .ಕಿಂಚಿತ್‌ ಸೇವೆ ಮಾಡಿದರೂ ಕೊಂಬು ಕಹಳೆ ಊದಿಸಿಕೊಳ್ಳುವ ಕಾಲಘಟ್ಟದಲ್ಲಿ, ಮಾಡಿದ ಕೂಡಲೆ ಮರೆತು ಬಿಡುವ ಮನಃಸತ್ವ ಅವರದು. ಅದಕ್ಕೆ ಪೂರಕವಾದದ್ದು ಅವರ “ನಮ್ಮ ಮಕ್ಕಳು”  ಎಂಬ ಸಂಘಟನೆ. ಅವರ ಗೆಳೆಯನ ಮಾತಿನಲ್ಲೆ ಹೇಳುವುದಾದರೆ ಅವರದು “ಏಕ ವ್ಯಕ್ತಿಯ ಸೈನ್ಯ.” ತನ್ನ ಸೇವಾಕಾರ್ಯಕ್ಕೆ ಅನ್ಯರ ನೆರವು ಕೇಳದ, ಸರಕಾರದ ಸಹಾಯ ಬಯಸದ,ಸಮಾಜದ ಸಹಕಾರ ನಿರೀಕ್ಷಿಸದ ಆರಿಸಿ ಕೊಂಡ ಹಾದಿಯಲ್ಲಿ ಅತ್ತಿತ್ತ ನೋಡದೆ ಮುನ್ನೆಡೆಯುತ್ತಿರುವ ಒಂಟಿ ಸಲಗ.
ಸಮುದ್ರ ಮಥನದಲ್ಲಿ ವಿಷ ಉದಿಸಿದ ಮೇಲೆಯೇ ಅಮೃತ ಬಂದಿದ್ದು ಎನ್ನು ನಂಬಿಕೆಗೆ ಅವರ ಜೀವನ ಪ್ರತ್ಯಕ್ಷ ಸಾಕ್ಷಿ. ಹುಟ್ಟುತ್ತಲೆ ಅನಾಥ. ಮಗುವಾಗಿದ್ದಾಗಲೆ ಹೆತ್ತವರ ಮಮತೆಯಿಂದ ವಂಚಿತ. ತಂದೆಗೆ ಮಾಟ,ಮಂತ್ರ ವಾಮಾಚಾರದ ಗೀಳು. ಹೆತ್ತ ತಾಯಿಗೆ ಹುಸಿಯಾಡುತ್ತಾ ಭ್ರಮಾ ಲೋಕದಲ್ಲಿರುವ ಚಟ. ಪರಿಣಾಮವಾಗಿ ಎಳೆಯ ಮಗುವಿಗೆ ಆಸರೆ ಅಜ್ಜಿ ತಾತ. ಬಾಲ್ಯದಲ್ಲಿ ಕಿತ್ತು ತಿನ್ನುವ ಬಡತನ. ಎಲ್ಲೆಲ್ಲೂ ವಿಷಾದದ ಛಾಯೆ. ಬದುಕೆ ಬೇಡವೆಂಬ ಭಾವದಿಂದ ಚಲಿಸುವ ರೈಲಿಗೆ ತಲೆ ನೀಡಿ ಶಾಶ್ವತ ಶಾಂತಿ ಪಡೆವ ಹತಾಶೆ. ಪರಿಣಾಮ ಕಾಲೊಂದು ಕಳೆದುಕೊಂಡು ಜೀವನ ಪರ್ಯಂತ ಎರಡು ಬಗಲು ಗೋಲು ಬಳಸಿ ನಡೆದಾಡುವ ಯೋಗ. ಒಂಟಿಕಾಲ ಬಂಟನಿಗೆ ತನಗಿಂತ ಸುತ್ತಮತ್ತಲ ನೊಂದವರ, ದೀನರ,ಅನಾಥರ ಕಷ್ಟ ಕೋಟಲೆಯ ಹೊರೆ ಹಗುರ ಮಾಡುವ ಹಂಬಲ. ಜೀವನದ ಉದ್ದಕ್ಕೂ.ಅದೆ ಕಾಯಕ
ಹುಟ್ಟಿದ್ದು ಮುಂದುವರಿದ ಜಾತಿಯಲ್ಲಿ. ಆದರೆ ಬೆಳೆದಿದ್ದು ಸುತ್ತಮುತ್ತಲಿನ ಸಹೃದಯಿ ತಾಯಿಯರ ನೀಡಿದ ಕೈತುತ್ತಿನಿಂದ. ಅವರು ತಿಂದ ಮುದ್ದೆಗೆ ಮುಸ್ಲಿಂ, ಹಿಂದು,ಆಜಾತಿ,ಈ ಜಾತಿ ಎಂಬ ಸೋಂಕೆ ಇಲ್ಲ. ಅವರೆ ಹೇಳಿದಂತೆ ಅವರ ದೇಹದಲ್ಲಿ ಹರಿಯುತ್ತಿರುವುದು ಎಲ್ಲ ಜಾತಿ ವರ್ಗದವರ ಋಣದ ರಕ್ತ.ಅದಕ್ಕೆ ಇರಬೇಕು ಸದಾ ಜಾಗೃತವಾಗಿರುವ ಋಣ ಪ್ರಜ್ಞೆ.ಮೇಲು ಕೀಳು ಎಂದು ಕಚ್ಚಾಡುವವರ ನಡುವೆ ನೌಕರಿ ನೀಡಿದ ದಲಿತ ಅಧಿಕಾರಿಯನ್ನು ನೆನವಾಗ ಕಣ್ಣಂಚಿನಲ್ಲಿ ಕಂಬನಿ.
ಅವರಿಗೆ ಕಥೆ,ಕವನ ಮನದಲ್ಲಿ ದಟ್ಟವಾಗಿ ಮೇಳೈಸಿದ ಭಾವಗಳನ್ನು ಅಭಿವ್ಯಕ್ತಗೊಳಿಸುವ ಸಾಧನ ಮಾತ್ರ. ಅದೆ ಜೀವನದ ಗುರಿಯಲ್ಲ. ಸಾಹಿತ್ಯಕ್ಕಿಂತ ಜೀವನ ಶ್ರೇಷ್ಟ ಎಂಬುದು ಅವರ ದೃಢವಾದ ನಂಬಿಕೆ. ನಂಬಿಕೆಗೆ ತಕ್ಕಂತೆ ನಡೆ. ಮೇಷ್ಟ್ರ ಕೆಲಸದ ಆದಾಯವನ್ನೂ ನಾಳೆಗೆ ಉಳಿಸಿಕೊಳ್ಳದೆ ಎಲ್ಲವನ್ನೂ “ನಮ್ಮ ಮಕ್ಕಳ”  ಯೋಗಕ್ಷೇಮಕ್ಕೆ ಮೀಸಲು. ಸಾಹಿತ್ಯ ಕೃಷಿಯಿಂದ ಬರುವ ಗೌರವಧನವೂ ಅದೇಕೆಲಸಕ್ಕೆ. ಒಂಡೆರಡು ಪತ್ರಿಕೆಗಳಲ್ಲಿ ಸತತ ಅಂಕಣ ಬರಹ. ಗೆಳೆಯರು, ಏನು ರಘುನಾಥ, ಹೀಗೆ ಬರೆಯುತ್ತಿರುವೆ ? ಎಂಬ ಮಾತಿಗೆ ನಮ್ಮ ಮಕ್ಕಳಿಗೆ ಅಷ್ಟೋ ಇಷ್ಟೋ ಅನುಕೂಲವಾಗುವುದಲ್ಲ, ಅದಕ್ಕೆ ಬರೆಯುವೆ ಎಂಬ ಉತ್ತರ. ಬಂದ ಸಂಭಾವನೆಎಲ್ಲಾ “ನಮ್ಮ ಮಕ್ಕಳ” ನಿಧಿಗೆ. ಅವರ ಗೆಳೆಯ ಮಯೂರದಲ್ಲಿ ಬರೆದ ಲೇಖನದಿಂದ ಪ್ರಭಾವಿತರಾದ ಓದುಗರು ಒಳ್ಳೆಯ ಕೆಲಸಕ್ಕೆ ಕೈಜೋಡಿಸಲು ಕಳುಹಿಸಿದ ಹಣ ಸುಮಾರು ೪೦ ಸಾವಿರ. ಆದರೆ ಯಾರೂ ಲೆಕ್ಕ ಪತ್ರ ಕೇಳದೆ ನಿಮಗೆ ತೋಚಿದ ಕೆಲಸಕ್ಕೆ ಖರ್ಚು ಮಾಡಿ ಎಂಬ ಮಾತು ಅವರನ್ನು ಕುಗ್ಗಿಸಿದೆ. ಈ ವಿಶ್ವಾಸದ ಋಣ ಮುಕ್ತನಾಗಲು ಯತ್ನಿಸದೆ ಅದನ್ನು ಕೊನೆ ತನಕ ನೆನಸುವ ಹಂಬಲ ಅವರದು.ಯಾವುದೋ ಸಮಾರಂಭದಲ್ಲಿ ಗೌರವ ಧನ ಎಂದು ನೀಡಿದ ಹಣದಿಂದ ಹೆಂಡತಿಗೆ ಸೀರೆ ಕೊಡಿಸಿದೆ. ಆಹಣ ಇನ್ನೂ ವಾಪಸ್ಸು ನೀಡಲಾಗಿಲ್ಲ ಎಂಬ ಹಳಹಳಿ.  ಅವರಿಗೆ ತಕ್ಕ ಮಡದಿ. ಅವರು ಸಾಹಿತಿ ವಿಜಯರಾಘವನ್‌ ಅವರ ಸೋದರಿ. ತನ್ನ ಗಂಡ ಮಗುವಿಗೆ ಮಾತ್ರವಲ್ಲ , ಗಂಡನ “ನಮ್ಮ ಮಕ್ಕಳ” ಸದಸ್ಯರಿಗೂ ಅಗತ್ಯಬಿದ್ದಾಗ  ಹೊಟ್ಟೆಗೆ ತುಂಬಿಸುವ  ಅನ್ನಪುರ್ಣೆ.ಊರಿಗೆಲ್ಲ ಶಾಂತ ಮೂರ್ತಿಯಾದರೂ, ಮನೆಯಲ್ಲಿ ಹಲವೊಮ್ಮೆ ದೂರ್ವಾಸನಾಗುವ ಪತಿಯ ವೈಚಿತ್ರಗಳನ್ನೆಲ್ಲ ಹೊಟ್ಟೆಗೆ ಹಾಕಿಕೊಂಡು ಕ್ಷಮಯಾ ಧರಿತ್ರಿಯಾಗುವ ದೊಡ್ಡ ಗುಣ
ಸಾಹಿತ್ಯ ಇವರ ಕಾರ್ಯದ ಉಪ ಉತ್ಪನ್ನವಾದರೂ ಅದರ ವ್ಯಾಪ್ತಿ ಬಹಳ. ಕಥೆ, ಕಾದಂಬರಿ, ಕನ್ನಡ ದಿಂದ ತೆಲುಗಿಗೆ ತೆಲುಗಿನಿಂದ ಕನ್ನಡಕ್ಕೆ ಅನುವಾದದ ಕೆಲಸ ನಡೆದ ಇರುವುದು.
ಹಾಗೆಂದು ಮಾಡುವ ಉದ್ಯೋಗಕ್ಕು ಪೂರ್ಣ ನ್ಯಾಯ ಒದಗಿಸದಿದ್ದರೆ ಊಟ ಸೇರದು. ಸರಕಾರದ “ಸರ್ವ ಶಿಕ್ಷಣ ಅಭಿಯಾನ,” “ಮರಳಿ ಶಾಲೆಗೆ ಬನ್ನಿ”   ಮೊದಲಾದ ಯೋಜನೆಗಳ ಹೊರತಾಗಿಯೂ ಶಿಕ್ಷಣ ವಂಚಿತರಾದರನ್ನು ಹುಡುಕಿ ಹಿಡಿದು ತಂದು ಅನ್ಣ ಬಟ್ಟೆ ವಸತಿ ನೀಡಿ ಅಕ್ಷರ ಕಲಿಸುವ ಕಾಯಕ.ಏನು ಮಾಷ್ಟ್ರೆ,ಮುಂದೆ  ಭಯೋತ್ಪಾದಕರಾಗಬಹುದಾದ  ಮಕ್ಕಳಿಗೆ ಉತ್ತೇಜನ ಕೊಡುವಿರಲ್ಲ?ಕಳ್ಳರು ಕೆಡಿಗಳ ಮಕ್ಕಳಿಗೆ ಆಶ್ರಯ ನೀಡುವಿರಲ್ಲಾ ಎಂಬ ಮಾತಿಗೆ ಮನದಲ್ಲೆ ಮರುಗುತ್ತಾ ಮುಗಳ್ನಗುವರು.ಹಸಿವೆಗೆ ಜಾತಿ ಇಲ್ಲ, ಅನಾರೋಗ್ಯಕ್ಕೆ ಮತವಿಲ್ಲ, ನೋವಿಗೆ ಧರ್ಮದ ಹಂಗಿಲ್ಲ, ಎಂಬ ಸತ್ಯವನ್ನು ಸ್ವಂತ ಅನುಭವದಿಂದ ಅರಿತಿರುವ ಅವರು,ಮಕ್ಕಳ, ವೃದ್ಧರ , ರೋಗಿಗಳ, ಮಹಿಳೆಯರ, ಶೋಷಿತರ ಕಣ್ಣಿರು ಒರೆಸುವ ಕೈಆಗುವ ಯತ್ನ ಅವರದು.ಪ್ರಾಥಮಿಕ ಅಗತ್ಯ ಒದಗಿಸಿ ಗಿಡ ಮೂಲಿಕೆಗಳ ಔಷಧಿ ನೀಡಿ ಸಾಂತ್ವನ ಹೇಳುವುದೆ ಅವರ ಗುರಿ. ದಿನದಿಂದ ದಿನಕ್ಕೆ ವಿನಾಶದತ್ತ ಸಾಗುತ್ತಿರುವ ಗ್ರಾಮ ಸಂಸ್ಕೃತಿ, ಹಾಳಾಗುತ್ತಿರುವ ಪರಿಸರ ಅವರನ್ನು ಬರೆಯಲಾರದಷ್ಟು ಕ್ಷೋಭೆಗೆ ಈಡು ಮಾಡಿದೆ.ನಗರಗಳ ಯುವಕರು ದುಶ್ಚಟಗಳ ದಾಸರಾಗುತ್ತಿದ್ದಾರೆ  ಎಂಬ ಮಾತು ಎಲ್ಲೆಲ್ಲೂ ಕೇಳಿಬರುತ್ತಿದೆ. ಆದರೆ ಹಳ್ಳಿಗಳೂ ಇದಕ್ಕೆ ಅಪವಾದ ಅಲ್ಲ. ಹಳ್ಳಿಗಳಲ್ಲಿನ ಅಕ್ಷರ ಕಲಿತ ಅನೇಕರು ಬೆಇಳಗಾದೊಡನೆ ಬಿಳಿ ಬಟ್ಟೆ ಹಾಕಿಕೊಂಡು ಹತ್ತಿರದ ಪಟ್ಟಣಕ್ಕೆ ಹೋಗುವರು.ಅಲ್ಲಿಅದೂ ಇದೂ ಮಾಡಿಸಂಜೆ ಬಟುಲಿಭಾಯಿಗಳಾಗಿ ಮನೆಬರುವರು.  ಮಧ್ಯ ,ಭಟ್ಟಿ ಸರಾಯಿಗಳ ಜೊತೆಗೆ ಇಂಕ್‌ ಎರೇಜರ್‌ಅನ್ನುಇನ್ನೊಂದು ರಸಾಯನಿಕದೊಡನೆ ಬೆರಸಿ ಮೂಸಿ ನೋಡುತ್ತಾ ಮತ್ತೇರಿಸಿಕೊಳ್ಳುವವರು, ಪೇಂಟಿನ ತಿಳಿಯ, ಎಸ್‌ಆರ್‌ ದ್ರಾವಣವನ್ನು ಬಳಸಿ ಮೈ ಮರೆಯುವ ಹಳ್ಳಿ ಹುಡುಗರು ಈಗ ಎಲ್ಲೆಲ್ಲಿಯೂ ಕಾಣುವರು ಈಗ ಚಿಕ್ಕ ಹಿಡುವಳಿಗಳು ಕಡಿಮೆ ಯಾಗಿ ಅಲ್ಲೆಲ್ಲ ಯಾಂತ್ರಿಕೃತ ಕೃಷಿ ಮೊದಲಾಗಿದೆ. ಆದರೆ ಅದನ್ನು ಮಾಡುತ್ತಿರುವವರು  ಸಣ್ಣ ರೈತರಲ್ಲ ಬದಲಾಗಿ ಕಾರ್ಪೊರೇಟ್‌ ಸಂಸ್ಥೆಗಳ ಜನ.ಬೇಸಾಯವೆ ಗ್ರಾಮ ಜೀವನದ ಬೆನ್ನೆಲುಬು ಎನ್ನುವ ಕಾಲ ಇನ್ನಿಲ್ಲ. ದಿನ ಬೆಳಗಾದರೆ ಹಳ್ಲೀಯ ಹೊರಗೆ ಗಟ್ಟಿ ಮುಟ್ಟಾದ ಯುವಕರು ಹತ್ತಿರದ ಪಟ್ಟಣಕ್ಕೆ ಕೋಲಿ ಕೆಲಸ ಮಾಲು ಸಾಲಹೋಗಲು ಸಾಲು ಗಟ್ಟಿ ನಿಂತಿರುವರು.ಸಂಜೆ ತನಕ ದುಡಿದು ಹಿಂತಿರುಗುವಾಗ ಕ್ವಾಟರ್‌ ಬಾಟಲಿ ಹಿಡಿದೆ ಬರುವರು. ಮನೆಯಲ್ಲಿ ಬೆಳಗಿನಿಂದ ಕಸಮುಸುರೆ ಮಾಡಿ, ದನ ಕರುನೋಡಿಕೊಂಡು, ಕೃಷಿಕೆಲಸಕ್ಕೆ ಗಮನ ಹರಿಸಿ ಸುಸ್ತಾದ ಹೆಂಗಸರ ಮೇಲೆ ಕುಡಿದ ಜೋರು ಮಾಡಿ. ಹೆಚ್ಚು ಮಾತನಾಡಿದರೆ ಹೊಡೆದು ಬಡಿದುಮಾಡುವುದು ದಿನ ನಿತ್ಯದ ಮಾತು ಲಿಂಗತಾರತಮ್ಯದ ವಿಷಯ ಭಾಷಣ ಬಿಗಿಯುವವರು ಹಳ್ಳಿಯ ಈ ಚಿತ್ರಣ ನೋಡಿದರೆ ಅದರ ದಾರುಣತೆ ತಿಳಿಯುವುದು.ಇನ್ನು ಅತೀವವಾದ ಹಿಂಸಾಚಾರವು ಮಕ್ಕಳ ಮುಗ್ದತೆಯನ್ನೂ ಕಸಿದುಕೊಂಡಿದೆ. ಶಾಲೆಗ ಬಾರದೆ ಇದ್ದ ಹುಡುಗನೊಬ್ಬನ್ನು ಏಕೆ ಒಂದುವಾರ ಬರಲಿಲ್ಲ, ಎಂದು ಮಾಷ್ಟ್ರು  ಕೇಳಿದಾಗ ಸಂಜೆ ಅಂಗಳದಲ್ಲಿ ಎಲ್ಲರೂ ಕುಳಿತಿದ್ದೆವು, ಸಾರು. ನಾಲಕ್ಕಾರು ಜನ ಗಾಡಿಯಲ್ಲಿ ಬಂದು ಅಪ್ಪನನ್ನು ಮಚ್ಚಿನಿಂದ ಕೊಚ್ಚಿ ಹಾಕಿದರು, ಅದಕ್ಕೆ ಬರಲಿಲ್ಲ ಎಂದು ತಣ್ಣಗೆ ಹೇಳುವ ಮಾತು ಬದಲಾದ ಪರಿಸ್ಥಿತಿಯ ಪ್ರತಿಕ. ಅಪ್ಪ ಕುಡುಕ, ಚಟಕ್ಕಾಗಿ ಇದ್ದಬದ್ದುದೆಲ್ಲವನ್ನೂ ಮಾರುತ್ತಾ ತಡೆಯೊಡ್ಡಿದ ಹೆಂಡತಿಗೆ ಹೊಡೆಯುತ್ತಾ ತಾನಾಯಿತು ತನ್ನ ಚಟವಾಯಿತು, ಎಂದಿರುವಾಗ, ಅವ್ವ, ನೋಡುವ ತನಕ ನೋಡಿ ಸಹನೆಯ ಕಟ್ಟೆ ಒಡೆದಾಗೊ ಯಾರೊಡನೋ ಓಡಿ ಹೋಗುವುದು ಅಪರೂಪವಲ್ಲ. ಅಗ ಮಕ್ಕಳ ಗತಿ ಏನು? ಅಂಥಹ ಒಡೆದ ಕುಟುಂಬಗಳ, ತಂದೆ ತಾಯಿಇದ್ದರೂ ಇಲ್ಲದಂತಾಗಿರುವವರ ಸಹಾಯಕ್ಕೆ  ಧಾವಿಸುವರು   “ನಮ್ಮ ಮಕ್ಕಳು” ಸಂಘಟನೆಯ  ರಘುನಾಥ..
ಗ್ರಾಮದಲ್ಲೂ ಕಾಡುತ್ತಿರುವ,ಕ್ರೌರ್ಯ,ಹೆಚ್ಚುತ್ತಿರುವ ಚಟಗಳು,ನಾಶವಾಗುತ್ತಿರುವ ಪರಿಸರ, ಮಾಯವಾಗುತ್ತಿರುವ ಮುಗ್ದತೆ ಮನ ಕಲಕುತ್ತದೆ.ಶಾಲೆಯಲ್ಲಿ ಮಧ್ಯಾಹ್ನದ ಊಟಮಾಡಿ ಕಣ್ಣು ಮುಚ್ಚಿ ತೂಕಡಿಸುವ ಎಳೆಯ ಮಕ್ಕಳನ್ನು ನೊಡಿ ರಾತ್ರಿ ಇವರೇನು ಮಾಡುತ್ತಾರೆ ನಿದ್ರೆ ಮಾಡದೆ, ಎಂದು ತನಿಖೆ ಮಾಡಿದಾಗ ತಿಳಿದ ಸತ್ಯ ಗಾಬರಿ ಹುಟ್ಟಿಸಿತು. ಗ್ರಾಮದ  ವಯಸ್ಕರು ಅರ್ಧ ರಾತ್ರಿಯವರೆಗೆ ಹುಣಿಸೆ ಬೀಜ , ಕಲ್ಲು ಕವಡೆಗಳ ಬಳಸಿ ಜೂಜಾಡವುದು ಸಾಮಾನ್ಯ. ಆಟಕ್ಕೆ ಕುಳಿತವರಿಗೆ  ತಿಂಡಿ ತೀರ್ಥ ,ಬೀಡಿ ಸಿಗರೇಟು,ಎಲೆ ಅಡಿಕೆ ತಂದುಕೊಡಲು ಈ ಮಕ್ಕಳ ಬಳಕೆ. ಪ್ರತಿಫಲವಾಗಿ ದೊರಕುವ ಪುಡಿಗಾಸಿನ ಆಶೆಗೆ ಮನೆಯವರ ಮೌನ ಸಮ್ಮತಿ. ಬಾಲ ಕಾರ್ಮಿಕ ನಿಷೇಧ  ಕಾಗದದಲ್ಲಿ ಮಾತ್ರ.ಅದು ಹಳ್ಳಿಯನ್ನು ತಲುಪುವುದೆ ಇಲ್ಲ..ಕೂಲಿಖಾತ್ರಿ ಯೋಜನೆಗೆ ಲಕ್ಷ ಲಕ್ಷ ಖರ್ಚು. ಮಾಡುವಕೈಗಳು ದುಡಿಯುವುದಿಲ್ಲ. ಅಲ್ಲಿ ಜೆಸಿಬಿ ಯಂತ್ರ ಬಳಸಿ ಕಾರ್ಯ ಪೂರೈಸುವರು. ಕೂಲಿಜನರ ಕಾರ್ಡುಗಳನ್ನು ಖರೀದಿಸಿ ಗುತ್ತಿಗೆ ದಾರರು ಹಣ ಹೊಡೆಯುವರು. ಬಂದ ಹಣದಲ್ಲಿ ಮೂರುದಿನ ಮಜಮಾಡಿದ ಜನ  ಕೆಲಸ ವಿಲ್ಲದೆ ಇದ್ದರೂ ಕೈ ಮುಟ್ಟಿ ಕೂಲಿ ಕೆಲಸ ಮಾಡಲು ತಯಾರಿಲ್ಲ. ದುಡಿಯದೆ ದೊರೆಯುವ ಹಣಕ್ಕೆ ಬಯಿ ಬಿಡುವರು.ಮನೆಯ ಹೆಂಗಸರು ಮಕ್ಕಳು ಇದರ ಪರಿಣಾಮ ಎದುರಿಸಬೇಕು ಇಂಥಹ ಪರಿಸರದಲ್ಲಿ ಬರೆಯುವುದು ಕಷ್ಟದ ಕೆಲಸ.ಅದರ ಬದಲು ನೋವಿನಿಂದ ನೆರಳುವ ಅಜ್ಜನ ಕಾಲಿಗೆ ಮುಲಾಮು, ಹಚ್ಚಿದರೆ, ಹಸಿವಿನಿಂದ ಬಳಲುವ ಹುಡುಗನ ಹೊಟ್ಟೆಗೆ ಹಾಕವುದೆ ಸಾರ್ಥಕ ಕೆಲಸ. ಅದನ್ನೆ  ಮಾಡತಿದ್ದಾರೆ ಸ. ರಘುನಾಥ. ಆದರೆ ಬರೆಯುವುದೆ ಇಲ್ಲ ಎಂಬ ಹಟವಿಲ್ಲ. ಗೆಳಯರ ಸಹೃದಯರ ಪ್ರೀತಿಯ ಒತ್ತಾಯ ಅವರನ್ನು ಬರವಣಿಗೆಗೆ ತೊಡಗಿಸುತ್ತದೆ.
ಇನ್ನು ಎರಡು ವರ್ಷದಲ್ಲಿ ನಿವೃತ್ತಿ. ನೆರಳಿಗೂ ಸ್ವಂತ ಮನೆ ಅಂತ ಇಲ್ಲ. ಉಳಿತಾಯವಂತೂ ಶೂನ್ಯ. “ನಮ್ಮ ಮಕ್ಕಳು” ಸಂಘಟನೆಯ ಅಡಿಯಲ್ಲಿ  ಮಾಡಿದ ಕೆಲಸ, ಕಥೆ ಕವನಗಳು ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಟ್ಟಿದೆ. ಅವರ ವಿಳಾಸ ನೀಡಿದರೆ, ವಿಷಯ ತಿಳಿಸಿ ಏನಾದರೂ ಒಂದು ವ್ಯವಸ್ಥೆಮಾಡಬಹುದು ಎಂಬ ಹಿತೈಷಿಗಳ ಮಾತಿಗೆ, ಮನೆ ಇಲ್ಲದಿದ್ದರೆ ಹಳ್ಳಿಯಲ್ಲಿರುವ ಹಲವರಂತೆ ಗುಡಿಸಲಲ್ಲಿ ಇರಬಹುದು. ಆದರೆ ಬೇಡುವ ಭಂಗ ಬೇಡ ಎಂಬುದು ಅವರ ದೃಢ ನಿಲುವು.ದುಡಿದುದನ್ನು ನೆಚ್ಚಿನ ಕೆಲಸವಾದ ದೀನರ, ಅನಾಥರ ಸೇವೆಗೆ ವೆಚ್ಚಮಾಡಿ ಕೆಡುತ್ತಿರುವ ಸಮಾಜದಲ್ಲಿ ಕೈಲಾದ ಮಟ್ಟಿಗೆ ನೊಂದವರ ಕಣ್ಣೀರು ಒರೆಸುವ ಅಪರೂಪದ ವ್ಯಕ್ತಿ  ಸ. ರಘುನಾಥ
.



No comments:

Post a Comment