Saturday, November 3, 2012

ಘಟಿಕಾಚಲದ ಗವಿಯಲ್ಲಿರುವ ನರಸಿಂಹ



ದೇವರುಗಳಲ್ಲೆಲ್ಲ ವೈವಿದ್ಯಮಯನಾದವನೆಂದರೆ ನರಸಿಂಹ. ವಿಷ್ಣುವಿನ ದಶಾವತಾರಗಳಲ್ಲಿ ಭಯ ವಿಸ್ಮಯ ಮೂಡಿಸುವ ದೇವರು ಎಂದರೆ ನರದೇಹ ಮತ್ತು ಸಿಂಹದ ಮೊಗ ಹೊಂದಿರುವನು. ದಶಾವತಾರಗಳಲ್ಲಿ ಇದು ನಾಲಕ್ಕನೆ ಅವತಾರ. ಒಂದುರೀತಿಯಲ್ಲಿ ಮಾನವನ ವಿಕಾಸದ ಹಂತದಲ್ಲಿ ಹೆಚ್ಚು ಕಡಿಮೆ ನಾಲಕ್ಕನೆ ಹಂತ. ಜಲಚರ, ಉಭಯವಾಸಿ, ಚತುಷ್ಪಾದಿಯ ನಂತರದ ಹಂತವೆ ಅರೆಮಾನವ ಮತ್ತು ಪ್ರಾಣಿ. ಆದ್ದರಿಂದ ದಶಾವತಾರವು ಡಾರ್ವಿನ್‌ನ ಜೀವ ವಿಕಾಸ ತತ್ವದ  ಭಾರತೀಯ ಆವೃತ್ತಿ ಎಂಬ ವಿವಾದಕ್ಕೆ ಅವಕಾಶಕೊಡುವ ವಾದವೂ ಇದೆ. ಒಂದಂತೂ ನಿಜ ನರಸಿಂಹವತಾರವು ಕುಬ್ಜ ಮಾನವನ ಹಿಂದಿನ ರೂಪವಾಗಿದೆ.



ನರಸಿಂಹನಿಗೆ ಮನೋಭೂಮಿಕೆಗೆ ಅನುಗುಣವಾಗಿ  ನವರೂಪಗಳಿವೆ ಎಂದು ನಂಬಿರುವರು. ಆ ಒಂಬತ್ತು, ರೂಪಗಳು ಬೇರಬೇರೆ ಉಲ್ಲೇಖಗಳಲ್ಲಿ ವಿಭಿನ್ನವಾಗಿವೆ.ಆದರೆ ನವರಸಗಳಲ್ಲಿ ಪ್ರಮುಖವಾದ,ಕ್ರೋಧ,ಕ್ರೌರ್ಯ, ವೀರರಸಗಳೆ ಪ್ರಧಾನ ಭಾವಗಳು. ಯೋಗಾನರಸಿಂಹ ಲಕ್ಷ್ಮಿನರಸಿಂಹ,ಮೊದಲಾದವು ಉಗ್ರದೇವರ ಸೌಮ್ಯಮತ್ತುಶಾಂತರೂಪಗಳು.   ಭಾರತದ್ಯಾಂತ. ಅನೇಕ ನರಸಿಂಹ ಕ್ಷೇತ್ರಗಳಿವೆ ಆದರೆ ದಕ್ಷಿಣಭಾರತದಲ್ಲೆ ಅವುಗಳ ಸಂಖ್ಯೆ ಹೆಚ್ಚು..
ಅದೇಕೋ ಕಾಣೆ ಬೆಟ್ಟದ ಮೇಲಿನ ನರಸಿಂಹ ಬಹುಜನಪ್ರಿಯ. ಆಂಧ್ರದ ಮಂಗಳಗಿರಿ, ಕರ್ನಾಟಕದ ಮೇಲುಕೋಟೆ ಮತ್ತು ತಮಿಳುನಾಡಿನ ಷೋಲಿಂಗರ್ ಬಹುಪ್ರಸಿದ್ಧ.ಈ ದೇವರು ಅರೆಸಿಂಹವಾದ್ದರಿಂದ ನಾಡಿಗಿಂತ ಕಾಡು, ಬಯಲಿಗಿಂತ ಬೆಟ್ಟ ವಾಸಕ್ಕೆ ಉಚಿತಸ್ಥಳ ಎಂದು ಕೊಂಡಿರಬಹುದು

,
ಚನ್ನೈನಿಂದ ಸುಮಾರು ೧೨೦ ಕಿಮಿ. ದೂರದ ರೈಲು ಮತ್ತು ರಸ್ತೆ ಸಂಪರ್ಕವಿರುವ ಷೋಲಿಂಗರ್ ‌ಆಕರ್ಷಿಸುವುದು  ಧಾರ್ಮಿಕ ಮಹತ್ವದ ಜೊತೆಗೆ ಅದರ ಚಾರಿತ್ರಿಕ ಮತ್ತು ಪ್ರಕೃತಿ ದತ್ತ ಸೌಂದರ್ಯ.ಟಿಪ್ಪುಸುಲ್ತಾನ್‌ ಮತ್ತು ಹೈದರ್‌ಅಲಿಯಮೇಲೆ ಎರಡನೆ ಮೈಸೂರು ಯುದ್ಧದಲ್ಲಿ ಬ್ರಿಟಿಷರ ಸರ್.ಐರ್‌ಕೂಟ್‌ ಕದನದಲ್ಲಿ ಮೇಲುಗೈ ಸಾಧಿಸಿದ  ಸ್ಥಳ ಇದು. ನಂತರ ಮೈಸೂರಿಗೆ ಅನೂಲಕರ ಒಪ್ಪಂದವಾಯಿತು.
ಇಲ್ಲಿ ಶಿಲಾಬೆಟ್ಟಗಳು ವಿಶೇಷ.ದೊಡ್ಡ ಬೆಟ್ಟದಮೇಲೆ ಲಕ್ಷ್ಮೀಸಮೇತನಾದ ನರಸಿಂಹನು ಶಾಂತರೂಪದಲ್ಲಿ ದರ್ಶನ ನೀಡಿದನೆಂದು ಪ್ರತೀತಿ.ಸಪ್ತ ಋಷಿಗಳು ಘಟಿಕೆಕಾಲ ದರ್ಶನ ಪಡೆದು ಮೋಕ್ಷ ಸಂಪಾದಿಸಿದರಂತೆ.ಅದಕ್ಕೆ ಇದು ಘಟಿಕಾಚಲ. ಬೆಟ್ಟದ ತುದಿ ಮುಟ್ಟಲು ೧೩೦೭ ಮೆಟ್ಟಲು ಹತ್ತಬೇಕು..
ಬೆಟ್ಟದ ಬುಡದಲ್ಲಿ ವಾಹನದಿಂದ ಇಳಿದ ಕೂಡಲೆ ತುಳಸಿಹಾರ, ಮಲ್ಲಿಗೆಮಾಲೆ ಮಾರಾಟ ಮಾಡುವವರ ದಂಡು.ಜೊತೆಗೆ ಉಚಿತವಾಗಿ ಕೈಗೊಂದು ಕೋಲುನೀಡುವ ಆಮಿಷ.ಮೊದಲು ಆ ಕೊಡುಗೆಯ ತಳ ಬುಡ ತಿಳಿಯಲಿಲ್ಲ. ಆದರೆ ಬಹುತೇಕರ ಕೈನಲ್ಲಿ ಕೋಲು ಇದೆ.ನಿಜ ಚಾರಣಕ್ಕೆ ಹೋಗುವಾಗ, ಕಡಿದಾದ ಬೆಟ್ಟ ಏರುವಾಗ ಕೋಲಿನ ಆಸರೆ ವಯಸ್ಸಾದವರಿಗೆ ಅಗತ್ಯವಾಗಬಹುದು. ಆದರೆ ಇಲ್ಲಿ ಮೆಟ್ಟಿಲುಗಳಿವೆ. ಮತ್ತು ವಯೋಬೇದವಿಲ್ಲದೆಹುಡುಗರಿಂದ ಮುದುಕರವರೆಗೆ ಕೈಗೋಲು ಹಿಡಿದಿರುವುದ ಕಾಣುತ್ತದೆ. ಅದರ ಮರ್ಮ ನೂರು ಮೆಟ್ಟಲು ಹತ್ತುವಾಗಲೆ ಅರಿವಾಯಿತು. ಚಿಕ್ಕ ಬೆಟ್ಟದ ಮೇಲೆ ಯೋಗಾಂಜನೇಯನು ಧ್ಯಾನಮಗ್ನಾಗಿ ಕುಳಿತಿದ್ದರೆ ಇಲ್ಲಿ ನೂರಾರು ಹನುಮರು ಯಾತ್ರಿಗಳಿಗೆ ಸಾಕ್ಷಾತ್‌ದರ್ಶನ ನೀಡಲು ಪೈಪೋಟಿ ನಡೆಸುವರು. ಗ್ರಾಮೀಣ ಭಾಷೆಯಲ್ಲಿ ಹೇಳಬೇಕೆಂದರೆ ಇಲ್ಲಿ ಕೋತಿಗಳ ಕಾಟ ವಿಪರೀತ. ಅದೂ ಭಯ ಭೀತಿ ಇಲ್ಲದವು. ಹತ್ತುತ್ತಾ ಹೋದಂತೆ ಗೊತ್ತಾಯಿತು ಅವುಗಳ ಸಾಹಸ. ತಿಂಡಿ ತೀರ್ಥ ಹಾಗಿರಲಿ ತುಲಸಿ ಹಾರ, ಮಲ್ಲಿಗೆ ಮಾಲೆಯನ್ನೂ ನೇರ ದೇವರಿಗೆ ಮುಟ್ಟಿಸುವ ಹೊಣೆ ವಹಿಸಿಕೊಳ್ಳುವವು. ಬೆಟ್ಟ ಹತ್ತುವವರನ್ನು ತಡೆದು ಬಟ್ಟೆ ಹಿಡಿದು ನಿಲ್ಲಿಸಿ ಕೈನಿಂದ ಕಿತ್ತು ಕೊಂಡ ಮೇಲೆಯೆ ಬಿಡುಗಡೆ ಮಾಡುವವು.ಕೈನಲ್ಲಿನ ಕೋಲಿನ ಭಯವೂ ಅವಕ್ಕಿಲ್ಲ.ವಾನರಗಳ ಬದುಕಿನ ವಿವಿಧಮುಖಗಳನ್ನು ಸೆರೆಹಿಡಿಯ ಬಯಸುವ ಛಾಯಾ ಚಿತ್ರಗಾರರಿಗೆ ಇಲ್ಲಂತೂ ಅಸದಳ ಅವಕಾಶ, ಎರಡುದಿನವಿದ್ದರೂ ಸಾಕು ಅವುಗಳ ಜೀವನ ಶೈಲಿಯ ಸರಣಿಚಿತ್ರಣ ಮಾಡಬಹುದು.
ಬೆಟ್ಟ ಏರುವವರನ್ನು ನೋಡುವುದೆ ಒಂದು ಸೊಗಸು.ಒಂದೆ ಸಲಕ್ಕೆ ಎರಡೆರಡು ಮೆಟ್ಟಿಲೇರುತ್ತಾ ತಮ್ಮ ಹರೆಯದ ಹುರುಪನ್ನು ತೋರುವ ಯುವಜನ, ಹೆಜ್ಜೆ ಹೆಜ್ಜೆಗೂ ಏದುಸಿರು ಬಿಡುತ್ತಾ ಅದರೂ ದರ್ಶನ ಮಾಡಲೇ ಬೇಕೆಂಬ ಭಕ್ತಿಭಾವದಿಂದ ಹೊರಟಿರುವ ವಯಸ್ಸಾದವರು, ಮೆಟ್ಟಿಲೇರುವುದೇ ಕಠಿನವಾಗಿರುವಾಗ ಹರಕೆ ತೀರಿಸಲು ಪ್ರತಿ ಮೆಟ್ಟಿಲಿಗೂ ಬಾಗಿ ಬಾಗಿ ಅರಿಷಿಣ ಕುಂಕುಮ ಹಚ್ಚಿ ಸೇವೆಯ ಹರಕೆ ಪೂರೈಸುತ್ತಿರುವ ಮಹಿಳೆಯರು,
 
 ಬೆಟ್ಟ ಏರಲಾಗದಿದ್ದರೂ ದೇವರದರ್ಶನಮಾಡಲು ಎಷ್ಟೆ ಹಣ ಖರ್ಚಾದರೂ ಲೆಕ್ಕಿಸದೆ ಹತ್ತಿರ ಹತ್ತಿರ ಸಾವಿರ ರೂಪಾಯಿ ಹಣ ತೆತ್ತವರನ್ನು ಡೋಲಿಯಲ್ಲಿ ಕೂಡಿಸಿ ದಡದಡನೆ ಬರಿ ಮೈನಲ್ಲಿ ಬೆವರು ಸುರಿಸುತ್ತಾ ದೌಡಾಯಿಸುವ ಶ್ರಮಜೀವಿಗಳು.. ಅಲ್ಲಿನ ಶುಲ್ಕ ತೂಕಾನುಸಾರ. ಡೋಲಿಯಲ್ಲಿ ಕೂಡುವ ವ್ಯಕ್ತಿ ತೂಕದವರಾದರೆ  ಕೊಡಬೇಕಾಗುವ ಹಣವೂ ಹೆಚ್ಚಾಗುತ್ತದೆ. ಇದು ನನಗೆ ಚಿಂತನೆಯ ವಿಷಯವೆನಿಸಿತು. ಹಣ ನೀಡಿ ಜೀವನದಲ್ಲಿ ಒಂದುಸಲ ದರ್ಶನಮಾಡಿದರೆ ಪಾಪ ಪರಿಹಾರವಾಗಿ ಪುಣ್ಯ ಸಂಪಾದನೆ ಯಾಗುವುದಾದರೆ ನಿತ್ಯವೂ ನಾಲಕ್ಕಾರು ಬಾರಿ ದರ್ಶನಾರ್ಥಿಗಳನ್ನು ಹೊತ್ತು ಸಾಗಿಸುವ ಶ್ರಮಜೀವಿಗಳ ಪುಣ್ಯದಪಾಲೆಷ್ಟು? ಬಹುಶಃಅವರಿಗೆ ಪುನರ್‌ಜನ್ಮವೇ ಇರದೇನೋ ಎನ್ನಿಸಿತು.ಒಂಟಿಯಾಗಿ ಹತ್ತುವವರಿಗಿಂತ ಗುಂಪಿನೊಡನೆ ಹೋಗುವವರಿಗೆ ಶ್ರಮದ ಅರಿವೆ ಆಗದು. ಅದರಲ್ಲೂ ಆಸ್ತಿಕರಾದವರಂತೂ ತಾಳ, ಡೋಲು,ಢಕ್ಕೆ ಗಳ ಸಮೇತ ದೇವರನಾಮ ಸಂಕೀರ್ತನೆ  ಮಾಡುತ್ತಾ ಹೋಗುವವರು ತಾವು ಮಾತ್ರ ಶ್ರಮದ ಕೆಲಸವನ್ನು ಸುಖಿಸುವುದಲ್ಲದೆ ನೋಡುಗರಿಗೂ, ಕೇಳುಗರಿಗೂ ತುಸು ಸಮಯ ನೆಮ್ಮದಿ ನೀಡುವರು.
ಕೆಲವೇ ವರ್ಷಗಳ ಹಿಂದೆ ಬೆಟ್ಟವೇರುವ ಶ್ರಮದ ಜೊತೆ ಸುಡು ಬಿಸಿಲಿನ ಪರಿಣಾಮವಾಗಿ ತಲೆ ಕಾಲು ಎರಡಕ್ಕೂ ಬಿಸಿಲ ತಾಪ ತಟ್ಟುತಿತ್ತು.. ಈಗ ಮೆಟ್ಟಿಲ ಮೇಲೆ ಸದಾ ನೆರಳು ಬೀಳುವ ವ್ಯವಸ್ಥೆಯಾಗಿದೆ.ಇದರಿಂದ ಯಾತ್ರಿಕರಿಗೆ ಅನುಕೂಲ. ಜೊತೆಗೆ ಮಧ್ಯಮಧ್ಯ ತಿಂಡಿ ತಿನಿಸೂ  ಸಿಗುವುದು. ಭಾವುಕರಿಗೆ ಇದರಿಂದ ತುಸು ಕಿರಿಕಿರಿ ಎನಿಸುವುದು. ಅಲ್ಲದೆ ಏರುತ್ತಾಏರುತ್ತಾ ಕಾಣ ಬರುತ್ತಿದ್ದ ಪ್ರಕೃತಿಸೌಂದರ್ಯ ಸವಿಯುವ ಅವಕಾಶ  ಇಲ್ಲವಾಗಿದೆ.
ಬೆಟ್ಟದ ಮೆಟ್ಟಿಲು ಏರುತ್ತಾ ಆಸ್ತಿಕ ಜನರ ನಂಬಿಕೆಯ ಇನ್ನೊಂದು ಮುಖದ ಅನಾವರಣವಾಯಿತು. ಅಲ್ಲಿ ಮೆಟ್ಟಿಲುಗಳ ಪಕ್ಕದಲ್ಲೆ ಇದ್ದ ಮರಗಳಿಗೆ ಕಟ್ಟಿದ ಬಟ್ಟೆಯ ತೊಟ್ಟಿಲು ಮತ್ತು ಅರಿಷಣದ ದಾರ. ಅಲ್ಲಿ ಅರಿಷಣಕುಂಕುಮ ಹಚ್ಚಿದದಾರ ಕಟ್ಟಿದರೆ ಮದುವೆಯಾಗುವುದು ಮತ್ತು ಬಟ್ಟೆಯ ತೊಟ್ಟಿಲು ಕಟ್ಟಿದರೆ ಮಕ್ಕಳಾಗುವುದು ಎಂಬ ಐತಿಹ್ಯವಿದೆ. ಬಹುಶಃ ಕೆಲವರ ಪಾಲಿಗೆ ಅದು ಸತ್ಯವಾಗಿರಬೇಕು. ಅದಕ್ಕೇ ಗಿಡಗಳ ಬೊಡ್ಡೆ ಕಾಣದಷ್ಟು ಅರಷಿಣ ಹಚ್ಚಿದ ಬಟ್ಟೆಚೂರುಗಳು.
ಇನ್ನೊಂದು ವಿಶೇಷವೆಂದರೆ ಅಲ್ಲಿ ಕಾಣಸಿಗುವ ಕಲ್ಲಿನ ಮೇಲೆ ಕಲ್ಲು ಜೋಡಿಸಿ ಕಟ್ಟಿದ ಆಟದ ಮನೆಗಳಂತಹ ರಚನೆಗಳು. ಎರಡುಕಲ್ಲು ಇಟ್ಟು ಗೋಡೆ ಮಾಡಿ ಅವುಗಳ ಮೇಲೆ ಮಾಡೆಂದು ಅಗಲವಾದ ಕಲ್ಲು ಇಟ್ಟವರು ಬಹಳ. ಅದರಲ್ಲೂ ಕೆಲವರು ಎರಡಂತಸ್ಥಿನ ಮನೆ ಮಾಡಲು ಪ್ರಯತ್ನಿಸಿದ್ದರು. ಕಾರಣ ಅಲ್ಲಿ ಆ ರೀತಿ ಕಟ್ಟಿದರೆ ನಿಜ ಜೀವನದಲ್ಲೂ ಸ್ವಂತ ಮನೆ ಕಟ್ಟಿಸುವ ಯೋಗ ಬರುವುದೆಂಬ ನಂಬಿಕೆ. ಹೇಗಿದ್ದರೂ ಅಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಲ್ಲುಗಳಿವೆ. ಆರಿಸಿ ಜೋಡಿಸಿದರೆ ಅಕಸ್ಮಾತ್‌ ಫಲ ಸಿಕ್ಕರೆ ಅದೃಷ್ಟ.
ಅಲ್ಲಂತೂ ನೂರಾರು ಅಂಥಹ ಕಲ್ಲುಜೋಡಣೆಗಳು ಜನರ ಸುಪ್ತ ಆಸೆಯ  ಪ್ರತೀಕವಾಗಿ ಇದ್ದವು. ಸುಮಾರು ಐದುನೂರು ಮೆಟ್ಟಿಲು ಹತ್ತಿರಬಹುದು ಅಲ್ಲಿನ ಕಲ್ಲು ಮಂಟಪದ ಮೂಲೆಯಲ್ಲಿ ನಾಯಿಯೊಂದು ಮೂರು ಎಳೆ ಮರಿಗಳೊಂದಿಗೆ ಮುದುರಿ ಮಲಗಿತ್ತು. ಅದು ಹಿಂದಿನ ದಿನವೇ ಮರಿಹಾಕಿದೆ ಅದರಲ್ಲಿ ಒಂದು ಈಗಾಗಲೇ ಸತ್ತು ಹೋಗಿದೆ ಎಂದು ಯಾರೋ ತಿಳಿಸಿದರು. ಆಗ ನನಗೆ ಕನಕದಾಸರ “ತಲ್ಲಣಿಸದಿರು ಕಂಡ್ಯಾ ಮನವೇ”  ಕೀರ್ತನೆ ನೆನಪಾಯಿತು ಬೆಟ್ಟದಾ ತುದಿಯಲ್ಲಿ ಹುಟ್ಟಿದಾ  ಮರಿಗಳಿಗೆ ಆಹಾರ ಕೊಡುವವರು ಯಾರು? ಎಂದು ಕೊಳ್ಳುತ್ತಾ ದೇವರ ದರ್ಶನಕ್ಕೆ ಧಾವಿಸಿದೆವು.
ಬೆಟ್ಟದ ತುದಿ ತಲುಪಿದಾಗ ಗುಡಿ ನೋಡಿ ಅಂತೂ ಕೊನೆಗೂ ಹತ್ತಿ ಬಂದೆವಲ್ಲಾ ಎಂಬ ಸಂತೋಷ. ಅಲ್ಲಿಂದ ಸುತ್ತಲೂ ನೋಡಿದರೆ  ದೂರದೂರದವರೆಗೆ ಹರಡಿರುವ ಹಸಿರು ನೆಲ, ಮಧ್ಯ ಮಧ್ಯ ಎದ್ದು ನಿಂತಿರುವ ಕಲ್ಲಿನ ಬೆಟ್ಟಗಳು,ಅಲ್ಲಲ್ಲಿ ಕಾಣುವ ಜಲರಾಶಿಗಳ ನೋಟ  ಆಯಾಸವನ್ನು ಇಲ್ಲವಾಗಿಸಿತು. ದೇಗುಲದಲ್ಲಿ ವಿಶೇಷ  ಎಂದರೆ ಅಲ್ಲೊಂದು ಕಿಟಕಿಇದೆ. ಅದರ ಮೂಲಕ  ಚಿಕ್ಕಬೆಟ್ಟದ ಮೇಲಿನ ಆಂಜನೇಯನ ಗುಡಿ ಕಾಣುವುದು. ದೇವಸ್ಥಾನವೂ ಗವಿಯಂತೆಯೇ ಕತ್ತಲು ಕತ್ತಲು, ಸುತ್ತಿ ಬಳಸಿ ದೇವರ ಸನ್ನಿಧಿಗೆ ಹೋಗಬೇಕು. ಗರ್ಭ ಗುಡಿಯ  ಮಂದಿನ ಆವರಣ ಥಳಥಳನೆ ಹೊಳೆವ ಹಿತ್ತಾಳೆ ತಗಡಿನಿಂದ ಆವೃತವಾಗಿತ್ತು.ಅರೆ ಗತ್ತಲ ಗರ್ಭಗುಡಿಯಲ್ಲಿನ ನರಸಿಂಹದೇವರಿಗೆ ಮಂಗಳಾರತಿ ಬೆಳಗುವಾಗ ಶಾಂತಸ್ವರೂಪಿಯಾದ ದೇವನು ಭಕ್ತರ ಮನದಲ್ಲಿನ ಕಸಿರು ಕಳೆದು ಅಭಯ ನೀಡುವಂತೆ ಕಂಡಿತು. ದರ್ಶನ ಮಾಡಿಕೊಂಡು ಬಂದನಂತರ ಹೊಟ್ಟೆಯಲ್ಲಿ ಚಿಟ್ಟೆ ಹಾರಾಡಿದ ಅನುಭವ. ಸುಸ್ತಿನಭಾವ ಶುರುವಾಯಿತು. ಕೋತಿರಾಯರ ಕಾಟದಿಂದ ಯಾವುದೆ ತಿಂಡಿ ತೀರ್ಥ ತರುವಹಾಗಿರಲಿಲ್ಲ,ನಮ್ಮ ಕಣ್ಣೆದುರೆ ಹೂವು ಹಣ್ಣು, ಕೊಬ್ಬರಿ ಬಟ್ಟಲುಮಾತ್ರವಲ್ಲ ಮೊಬೈಲು, ಕ್ಯಾಮರಾಗಳನ್ನೂ ಕಿತ್ತುಕೊಂಡು ಹೋಗುವ ಪ್ರಯತ್ನ ಕಂಡು ಬಂದವು. ನಮ್ಮ ಪುಣ್ಯ. ಅಲ್ಲಿಯೇ ದಣಿದು ಬಂದ ಭಕ್ತರ ದಾಹ ತೀರಿಸಲು,ತಾಳ ಕುಟ್ಟುವ ಹೊಟ್ಟೆಯ ಹಸಿವು ತಣಿಸಲು ಪುಳಿಯೋಗರೆ, ಮೊಸರನ್ನ, ಸಿಹಿ ಪೊಂಗಲ್‌,ಮೈಸೂರುಪಾಕು ಮತ್ತು ಕುರುಕಲುತಿಂಡಿ ಮಾರುವ ಅಂಗಡಿಯೊಂದಿತ್ತು ಅದಕ್ಕೆ ಕೈನಲ್ಲಿಕೋಲು ಹಿಡಿದ ನಾಲ್ವರ ಭದ್ರಕಾವಲಿತ್ತು.. ಜತೆಗೆ ಜನ ತಿನ್ನುವಾಗ ಕೋತಿಗಳ ಕೀಟಲೆ ತಪ್ಪಿಸಲು ಒಂದು ಭದ್ರವಾದ ಮಂಟಪದ ಅವರಣದಲ್ಲಿ ಸೂಕ್ತ ರಕ್ಷಣೆ. ಅಲ್ಲಿ ಕುಳಿತು ಎಲ್ಲರೂ ತಿಂಡಿ ತಿಂದು ಶಕ್ತಿಯ ಮರುಪೂರಣ ಮಾಡಿಕೊಂಡೆವು
ಬೆಟ್ಟ ಇಳಿಯುವಾಗ ದಾರಿ ಸರಾಗವಾಗಿ. ಸಾಗಿತು. ಜೀವನವೇ ಹಾಗೆ .ಔನತ್ಯಕ್ಕೆ ಏರಲು ಇಡುವ ಪ್ರತಿ ಹಜ್ಜೆಯೂ ಪ್ರಯಾಸಕರ.ಕೆಳಗೆ ಹೋಗಲು ತುಸು ಜಾರಿದರೂ ಸಾಕು. ತಳ ಮುಟ್ಟುವುದು ಸುಲಭ. ಎಚ್ಚರ ವಹಿಸದಿದ್ದರೆ  ಗಾಯವಾಗುವ ಅಪಾಯವೂ ಇದೆ.
ಅರ್ಧ ಹಾದಿ ಬಂದಾಗ ಮತ್ತೆ ಅದೇ ಶ್ವಾನಸಂಸಾರ  ಕಾಣಿಸಿತು.ಅದು ಯಥಾ ರೀತಿ ಮುದುಡಿ ಮಡಿಲಲ್ಲಿ ಮರಿಗಳನ್ನು ಮರೆಮಾಡಿ ಮಲಗಿತ್ತು ಎರಡು ದಿನದಿಂದ ಉಪವಾಸ. ಮರಿಗಳನ್ನು ಬಿಟ್ಟು ಆಹಾರ ಅರಸಿ ಹೋಗಲು ಮಮತೆ ಬಡ್ಡಿಯಾಗಿತ್ತು.ಹಸಿದ ಹೊಟ್ಟೆಯಲ್ಲಿ ಬಸವಳಿದು ಕಣ್ಣು ಕೂಡಾ ತೆರೆಯಲಾರದೆ ಒರಗಿತ್ತು. ಬೆಟ್ಟ ಏರುವಾಗ  ನೆನಪಿಗೆ ಇರಲಿ ಎಂದು ಅದರ ಕರುಣಾಜನಕ ಭಂಗಿಯಫೋಟೋ ತೆಗೆದ ನಮಗೆ ಬೆಟ್ಟದ ಮೇಲೆ ತಿಂಡಿತಿನ್ನುವಾಗ ಅದರ ನೆನಪೆ ಬಂದಿರಲಿಲ್ಲ. ಆಕ್ಷಣಕ್ಕೆ ಅಯ್ಯೋ ಪಾಪ ಎಂದವರು ನಂತರ ಮರೆತೇ ಬಿಟ್ಟಿದ್ದೆವು.ಇಳಿಯುವಾಗ ಅದನ್ನು ನೋಡಿ ಆಹಾರ ಕೊಡಬೇಕು ಎನಿಸಿತು  ಆದರೆ ಅವಕಾಶವೆ ಇರಲಿಲ್ಲ.ಆಹಾರ ತರಲು ಒಂದೇ ಅರ್ಧ ಬೆಟ್ಟ ಏರಿ ಇಳಿಯಬೇಕು  ಇಲ್ಲವೆ ಅರ್ಧ ಬೆಟ್ಟ ಇಳಿದು ಮತ್ತೆ ಏರಬೇಕು.ನನಗಂತೂ ಸಮಯ ಶಕ್ತಿ ಎರಡೂ ಇರಲಿಲ್ಲ,ಕರುಣೆ ಬಿಸಿಲು ಮೂಡುವ ಮುಂಚಿನ ಮಂಜಿನಂತೆ.ಸ್ವಲ್ಪ ಸಮಯದಲ್ಲೇ ಮಾಯವಾಗಿತ್ತು..  ಅಯ್ಯೋ ಪಾಪ! ಎಂದು ಲೊಚಗುಟ್ಟುತ್ತಾ ಕಳಗೆ ಇಳಿದೆವು. ನಮ್ಮಅನಾಸಕ್ತಿ ಮತ್ತು ಅಸಹಾಯಕತೆ ಮನ ಕೊರೆಯುತ್ತಲೇ ಇತ್ತು
 ಬೆಟ್ಟ ಇಳಿದ ಮೇಲೂ ಕಣ್ಣು ಮುಚ್ಚಿ ಮರಿಗಳೊಡನೆ ಮಲಗಿದ ನಾಯಿಯೇ ಕಾಣುತಿತ್ತು .ತುಸು ಯೋಚನೆ ಮಾಡಿದ ಮೇಲೆ ಹೊಳೆಯಿತು. ತಿರುಪತಿಗೆ ಹೋಗಲಾರದವರು, ಅಲ್ಲಿಗೆ  ಹೋಗುವವರ ಕೈನಲ್ಲಿ ಕಾಣಿಕೆ ಕೊಟ್ಟು ಹುಂಡಿಯಲ್ಲಿ ಹಾಕುವಂತೆ ಮನವಿ ಮಾಡುತಿದ್ದುದರ ನೆನಪು ಬಂತು.ತಕ್ಷಣ ಅಲ್ಲಿಯೇ ಬನ್ನುಗಳನ್ನು ಖರೀದಿಸಿ ಬೆಟ್ಟವೇರುತಿದ್ದ ಒಬ್ಬರನ್ನು ನಿಲ್ಲಿಸಿದೆವು ಅವರು ಆಂಧ್ರದವರು. ಅವರ ಕೈಗೆ ಬನ್ನುಗಳನ್ನು ನೀಡಿ ಐದು ನೂರನೆ ಮೆಟ್ಟಿಲ ಆಸು ಪಾಸಿನಲ್ಲಿ ಎಡಭಾಗದ ಮಂಟಪದಲ್ಲಿ ಶ್ವಾನ ಸಂಸಾರ  ಒಂದು ಮಲಗಿದೆ. ಮರಿಹಾಕಿ ಎರಡು ದಿನವಾಗಿದೆ. ಆಹಾರವಿಲ್ಲದೆ ಸುಸ್ತಾಗಿದೆ ದಯಮಾಡಿ ಈ ಆಹಾರ ಹಾಕಿ ಎಂದು ಕೋರಲು ನನ್ನ ತೆಲುಗು ತಿಳಿದಿರುವ ಮಡದಿಗೆ ತಿಳಿಸಿದೆ. ಜತೆಗೆ ಕೈನಲ್ಲಿ ಕೋಲು ಅವರಿಗೆ ಕೊಟ್ಟು ಮಧ್ಯದಾರಿಯಲ್ಲೇ ಮಂಗಗಳು ಕಸಿದುಕೊಂಡು ಹೋಗದಂತೆ ಎಚ್ಚರ ವಹಿಸಲು ತಿಳಿಸಿದೆವು. ಆ ವ್ಯಕ್ತಿ ಒಪ್ಪಿಕೊಂಡ. ಬನ್ನುಗಳನ್ನು ತನ್ನ ಜರ್ಕಿನ್‌ಒಳಬಾಗದಲ್ಲಿ ಕಾಣಿಸದಂತೆ ಸೇರಿಸಿಕೊಂಡು ಮೆಟ್ಟಿಲು ಹತ್ತತೊಡಗಿದ. ಇನ್ನುಅರ್ಧ ಗಂಟೆಯಲ್ಲಿ ಹಸಿದ ನಾಯಿ ಆಹಾರವನ್ನು ಗಬಗಬನೆ ತಿನ್ನುವ ದೃಶ್ಯದ ಕಲ್ಪನೆಯೇ ನೆಮ್ಮದಿ ತಂದಿತು. ಭಕ್ತ  ಕನಕದಾಸರು ಹೇಳಿದ “ತಲ್ಲಣಿಸದಿರು ಕಂಡ್ಯಾ ತಾಳುಮನವೇ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ” ಎಂಬ ಮಾತು ಸತ್ಯ ಎಂದು ಮತ್ತೊಮ್ಮೆ ಸಿದ್ಧವಾಯಿತು.. ಬೆಟ್ಟದಾತುದಿಯಲ್ಲಿ ಹುಟ್ಟಿರುವ ಪ್ರಾಣಿಗೂ  ಲಕ್ಷ್ಮಿ ನರಸಿಂಹನೆ ಭಕ್ತರ ಮೂಲಕ ಆಹಾರ ಕಳುಹಿಸಿದ..




No comments:

Post a Comment