Monday, October 1, 2012

ಹುಡುಗಿಯ ಕನಸಲ್ಲಿ ನಡೆದ ಸಂಗತಿ


ಈ ಮೊದಲು ಹಳ್ಳಿ ಶಾಲೆಯಲ್ಲಿ ಶಿಕ್ಷಕನಾಗುವುದೆ ಒಂದು ಶಿಕ್ಷೆ ಎಂಬ ಭಾವನೆ ಬಲವಾಗಿತ್ತು. ಈಗಲೂ ಅದು ಬದಲಾಗಿಲ್ಲ. ಯಾವುದೆ ಶೈಕ್ಷಣಿಕ ಹಿನ್ನೆಲೆ ಇಲ್ಲದ ಮಕ್ಕಳಿಗೆ ಕಲಿಸುವುದೆಂದರೆ ಬಹಳ ಕಠಿಣ ಕೆಲಸ ಎನ್ನುತ್ತಿದ್ದವರು ಅನೇಕ. ಅದರಲ್ಲೂ ಶಿಕ್ಷಣ ಪಡೆಯುವ ಮಕ್ಕಳು ಮೊದಲ ಪೀಳಿಗೆಯವರಾದರೆ ತೀರಿತು ಹೇಳಿ ಕೊಡುವುದರಲ್ಲಿ ಕುರಿ ಕೋಣ ಬೀಳುವುದು. ಅವರಿಗೆ ಆಸಕ್ತಿ ಮೂಡಿಸುವಲ್ಲಿ ಸಾಕು ಬೇಕಾಗುತ್ತದೆ. ಜತೆಗೆ ಅಲ್ಲಿರಲು ಮೂಲ ಸೌಲಭ್ಯ ಇಲ್ಲ. ಯಾರದಾದರೂ ಮನೆಯ ಒಪ್ಪಾರದಲ್ಲಿ ಇರುವ ಕೋಣೆಯಲ್ಲೆ ವಸತಿ. ಇದ್ದ ಒಂದು ತಟ್ಟಿಯ ಹೋಟೆಲ್ ನಲ್ಲಿ ಊಟ ತಿಂಡಿ. ಅದಕ್ಕೆಂದೆ ಬಹುತೇಕ ನೌಕರರು ಜಂಗಮರು. ಜಾತಿಯಿಂದ ಅಲ್ಲ. ತಮ್ಮ ನಿತ್ಯದ ಓಡಾಟದಿಂದ. ಅದಕ್ಕಾಗಿ ನಗರವಾಸಿಗಳಾಗಲು ಇನ್ನಿಲ್ಲದ ಪ್ರಯತ್ನ ಮಾಡುವರು. ಹಳ್ಳಿಯಲ್ಲೆ ಕೆಲಸ ಮಾಡಿದರೂ ಹತ್ತಿರದ ಪಟ್ಟಣದಲ್ಲೆ ವಾಸ. ನಿತ್ಯ ಓಡಾಟ. ಒಳಗೆ ಕಿಕ್ಕಿರಿಯುವಂತೆ ಜನ ತುಂಬಿಸಿಕೊಂಡು ಬರುವ ಬಸ್ಸಿನ ಪ್ರಾಣ ಬಹುದುಸ್ತರ. ಅದಕ್ಕೆ ಸೈಕಲ್‌ ಸವಾರಿ ಮಾಡಿಕೊಂಡು ಬರುವವರೆ ಹೆಚ್ಚು. ಆದ್ದರಿಂದಲೆ ಏನೋ ನೌಕರಿದಾರರು ಮದುವೆಯಾದರೆ ಅವರಿಗೆ ಕೊಡುತಿದ್ದ ಕಾಣಿಕೆ ಎಂದರೆ ಲಕಲಕ ಹೊಳೆವ ಹರಕ್ಯುಲಸ್‌ ಬೈಸಿಕಲ್ಲು ಮತ್ತು ಮುಂಗೈಗೆ ಕಟ್ಟಿಕೊಳ್ಳಲು ಫೆವರ್‌ಲುಬಾ ವಾಚು. ಬರುವ ಬಹುಶಃ ಅಳಿಯ ವಾಚು ನೋಡಿಕೊಂಡು ಬೇಗ ಮನೆಗೆ ಬರಲಿ ಎಂಬುದು ಹೆಣ್ಣು ಕೊಟ್ಟ ಮಾವನ ಒಳ ಉದ್ದೇಶವೂ ಇರಬಹುದು. ಜತೆಗೆ ಸರ್ಜ ಬಟ್ಟೆ ಸೂಟು. ಮದುವೆಯಲ್ಲಿ ತೆಗೆಯುತಿದ್ದ ಒಂದೆರಡು ಫೋಟೋಗೆ ಹಾಕಿದ್ದು ಬಿಟ್ಟರೆ ಬಿರು ಬೇಸಿಗೆಯ ಬಳ್ಳಾರಿ ಜಿಲ್ಲೆಯಲ್ಲಿ ಅದನ್ನು ಧರಿಸುವ ಬಗೆ ಹೇಗೆ? ಆದರೂ ಮದುವೆಗೆ ಸೂಟು ಇರದಿದ್ದರೆ ಹೇಗೆ? ಅದಕ್ಕೆ ವರ್ಷಕ್ಕೊಂದೆರಡು ಸಲ ಸಮಾರಂಭಗಳಲ್ಲಿ ಪೆಟ್ಟಿಗೆಯಿಂದ ಅದಕ್ಕೆ ಹೊರ ಬರುವ ಯೋಗ. ಉಳಿದ ಸಮಯದಲ್ಲಿ ಡಂಬಾರು ಗುಳಿಗೆ ಹಾಕಿ ಮಡಿಚಿ ಇಡಲಾಗುತಿತ್ತು.
ಯಾರು ಏನೆ ಅನ್ನಲಿ ಹಳ್ಳಿಯ ಮಕ್ಕಳಿಗೆ ಕಲಿಸುವುದರಲ್ಲೂ ಒಂದು ರೀತಿಯ ಖುಷಿ ಇದೆ. ಅವರಲ್ಲಿ ಥಳಕು ಬಳುಕು ಇಲ್ಲ. ಮೇಷ್ಟ್ರೆ ಅವರಿಗೆ ಎಲ್ಲ. ಅಪ್ಪ ಅವ್ವನ ಮಾತೂ ಲೆಕ್ಕಕ್ಕಿಲ್ಲ. ಅಷ್ಟು ನಂಬಿಗೆ ವಿಶ್ವಾಸ. ಮೊದಲನೆಯದಾಗಿ ಶಿಕ್ಷಕ ಎಂದರೆ ಅಲ್ಲಿ ಅವರ ಪಾಲಿನ ಸರ್ವಜ್ಞ. ಎಲ್ಲ ಬಲ್ಲವ. ಅವರು ಹೇಳಿದ್ದೆ ವೇದವಾಕ್ಯ. ಅದಕ್ಕೆ ಅಲ್ಲಿ ಮೈ ಎಲ್ಲ ಕಣ್ಣಾಗಿರಬೇಕಾದ ಅವಶ್ಯಕತೆ. ಶಾಲೆಯಲ್ಲಿ ಮಾತ್ರವಲ್ಲ ಹೊರಗೂ ಅವನನ್ನು ಗಮನಿಸುವವರು ನೂರಾರು ಜನ. ಯಾರು ಹೇಗೆ ಬೇಕಾದರೂ ಇರಲಿ ಅಭ್ಯಂತರ ಇಲ್ಲ. ಆದರೆ ಪಾಠ ಹೇಳುವ ಮೇಷ್ಟ್ರು ಮಾತ್ರ ಮಾದರಿಯಾಗಿರಬೇಕೆಂದು ಸಮಾಜದ ನಿರೀಕ್ಷೆ.
ಅದಕ್ಕೆ ಹಳ್ಳಿ ಕಡೆ ಒಂದು ಆಡು ಮಾತಿನ ಗಾದೆ ಬೇರೆ ಇದೆ. `ಗುರು ನಿಂತು ಒಂದಾ ಮಾಡಿದರೆ, ಶಿಷ್ಯ ಓಡಾಡುತ್ತಾ ಮಾಡುತ್ತಾನೆನಲವತ್ತು ವರ್ಷದ ಹಿಂದೆ ನಾನು ಶಿಕ್ಷಕ ವೃತ್ತಿಗೆ ಕಾಲಿಟ್ಟಾಗ ಇದ್ದ ಪರಿಸ್ಥಿತಿ ಅದು.
ನಾನು ಓದುವಾಗಲಂತೂ, ಅಂದರೆ ಅರವತ್ತು ವರ್ಷದ ಹಿಂದಿನ ಮಾತು. ಶಿಕ್ಷಕರ ಬಗೆಗಿನ ಜನರ ನಂಬುಗೆ ಅನೇಕ ಬಾರಿ ಹಾಸ್ಯಕ್ಕೆ ವಸ್ತುವಾದದ್ದೂ ಇದೆ. ಆಗಿನ್ನೂ ವಿದ್ಯುತ್ ದೀಪ ಇರಲಿಲ್ಲ. ಊರ ನಡುವೆ ಪೆಟ್ರೋಮ್ಯಾಕ್ಸ್ ಹತ್ತಿಸಿ ಅಲ್ಲಿರುವ ಕಬ್ಬಿಣದ ಕಂಬಕ್ಕೆ ತೂಗು ಹಾಕುತ್ತಿದ್ದರು. ಓಣಿಗೊಂದರಂತೆ ಸೀಮೆಎಣ್ಣೆಯ ದೀಪವನ್ನು ಕಟ್ಟಿಗೆಯ ಕಂಬಕ್ಕೆ ಕೂಡಿಸಿದ ಗಾಜಿನ ಪೆಟ್ಟಿಗೆಯಲ್ಲಿ ಇಡುತ್ತಿದ್ದರು. ಊರಿಗೆ ಅವು ಎಂಟೋ ಹತ್ತೋ ಇದ್ದರೆ ಹೆಚ್ಚು. ಸಂಜೆ ಆರಕ್ಕೆ ಕೈನಲ್ಲಿ ಸೀಮೆಎಣ್ಣೆ ಡಬ್ಬ ಹಿಡಿದು ಪ್ರತಿ ದೀಪದ ಕಂಬದಲ್ಲಿನ ದೀಪಕ್ಕೆ ಎಣ್ಣೆ ತುಂಬಿ ಬತ್ತಿ ಸರಿ ಮಾಡಿ ದೀಪ ಅಂಟಿಸುತ್ತಿದ್ದ ನರೇರು ಬರಮಪ್ಪ ನೇಮಕವಾಗಿದ್ದ. ಆ ದೀಪಗಳೂ ರಾತ್ರಿ ೯ ರವರೆಗೆ ಮಿಣಕ್‌ ಮಿಣಕ್‌ ಉರಿದು ನಂತರ ನಂದಿಹೋಗುತ್ತಿದ್ದವು. ಆಗ ಬರ ಹೋಗುವವರು ಯಾರೂ ಇರತ್ತಿರಲಿಲ್ಲ. ಇನ್ನು ಬೆಳದಿಂಗಳ ಕಾಲದಲ್ಲಿ ಅವನ್ನು ಅಂಟಿಸಿ ಚಂದ್ರನಿಗೆ ಅಪಮಾನ ಮಾಡುತ್ತಿರಲಿಲ್ಲ.
ಗ್ರಾಮಗಳಲ್ಲಿ ಕಕ್ಕಸಿನ ಕಲ್ಪನೆಯೇ ಇರಲಿಲ್ಲ. ಗಂಡಸರೆಲ್ಲಾ ಹೊಲದ ಕಡೆ ಹೋಗಿ ಗೊಬ್ಬರ ಹಾಕಿ ಬಂದರೆ ಹೆಂಗಸರು ಊರ ವಾರೆಯ ಬಯಲಲ್ಲಿ ಹೊಗುತ್ತಿದ್ದರು. ಹೋಗುವಾಗ, `ಯಕ್ಕಾ ಬರ್ತಿಏನಬೆ, ಚಂಬಗಿ ತಗಂಡು ಹೋಗಾನಎನ್ನುತ್ತಿದ್ದರು. ಅಗತ್ಯವಿರಲಿ ಬಿಡಲಿ ಹೋಗುವುದನ್ನು ತಪ್ಪಿಸುತ್ತಿರಲಿಲ್ಲ. ನಡೆಯಲು ಬಂದ ಹೊಸ ಸೊಸೆಗಂತೂ ಅದು ಒಂದು ರೀತಿಯ ವಿರಾಮ ಸಮಯ. ಕಷ್ಟ ಸುಖ ಹೇಳಿಕೊಳ್ಳಲು ಅದು ಒಳ್ಳೆಯ ಅವಕಾಶವಾಗಿತ್ತು. ಅವರು ಹೋಗುವುದು ಹೆಚ್ಚಾಗಿ ಹೊತ್ತು ಕಂತಿದ ಮೇಲೆ. ರಾತ್ರಿಯಾದರಂತೂ ಊರಿಗೆ ಬರುವ ದಾರಿಯ ಎರಡು ಕಡೆ ತಂಬಿಗೆ ಇಟ್ಟುಕೊಂಡು ಕುಳಿತಿರುವುದು ಸಾಮಾನ್ಯವಾಗಿರುತ್ತಿತ್ತು. ಇನ್ನೂ ಹಾಗೆ ಕುಳಿತಿರುವವರು ಯಾರಾದರೂ ಗಂಡಸರು ಆ ದಾರಿಯಲ್ಲಿ ಬಂದರೆ ತುದಿಯಲ್ಲಿದ್ದವರು ಸೂಚನೆ ನೀಡುವರು. ಆಗ ಎಲ್ಲರೂ ಎದ್ದು ನಿಲ್ಲುತ್ತಿದ್ದರು. ಒಂದು ರೀತಿಯಲ್ಲಿ ಗಾರ್ಡ್ ಆಫ್‌ ಆನರ್‌ ನೀಡುವವರ ಹಾಗೆ. ಒಂದು ಸಲ ಊರಿಗೆ ಹೊಸದಾಗಿ ಬಂದ ಹೆಂಗಸೊಬ್ಬಳು ಹಾಗೆ ಕುಳಿತಿರುವಾಗ, ಯಾರೋ ಬಂದದನ್ನು ನೋಡಿ ಯಕ್ಕಾ ಯಾರೋ ಗಂಡಸು ಬತ್ತಾ ಅವ್ರೆ ಎಂದು ಧಡಕ್ಕನೆ ಎದ್ದು ನಿಂತಾಗ, ಪಕ್ಕದವಳು, ಅಯ್ಯೋ, ಅದು ನಮ್ಮ ಸಾಲಿ ಮೇಷ್ಟ್ರು, ಕುಂದ್ರು ಎಂದಳಂತೆ. ಆಗ ಶಾಲಾ ಶಿಕ್ಷಕ ಅಷ್ಟು ನಿರುಪದ್ರವಿ ಪ್ರಾಣಿ ಎಂಬ ಪ್ರತೀತಿ ಇತ್ತು.
ಇನ್ನು ಹದಿಹರೆಯದ ಹುಡುಗರಿಗೆ ಹೊರಕಡಿಗೆ ಹೋಗುವುದು ಎಂದರೆ ಪಿಕ್ನಿಕ್‌ ಇದ್ದಂತೆ. ನಾಲ್ಕಾರು ಜನ ಒಟ್ಟಿಗೆ ಸೇರಿ ಎರಡೋ, ಮೂರೂ ತಂಬಿಗೆ ನೀರಿನ ಸಮೇತ ಬಯಲಿಗೆ ಹೋಗುವರು. ಅಲ್ಲಿಯೆ ಮಾತು ಕಥೆ ಜತೆಗೆ ಚೇಷ್ಟೆ. ಒಂದುಸಲ ನೆನಪಿದೆ, ಎಲ್ಲರದೂ ಮುಗಿಯಿತು. ಕೊನೆಗೆ ನೀರು ಬಳಸುವ ಸರದಿ ನನ್ನದು. ಕೈ ಜಾರಿ ತಂಬಿಗೆ ನೆಲಕ್ಕೆ ಬಿದ್ದಿತು. ಎಲ್ಲ ನೀರು ಚೆಲ್ಲಿ ಹೋಯಿತು. ಚಣ್ಣ ಬಿಚ್ಚಿಕೊಂಡು ಮನೆಗೆ ಹೋಗಲು ನಾಚಿಕೆ. ಸರಿ ಅತ್ತಿತ್ತ ನೋಡಿದೆ. ಅಲ್ಲಿಯೆ ಕಾದದ ತುಂಡುಗಳು ಹಾರಾಡುತಿದ್ದವು. ಅವನ್ನೆ ಬಳಸಿ ಶುಚಿ ಕಾರ್ಯ ಮುಗಿಸಲಾಯಿತು. ಎಲ್ಲರೂ ಬಾಯ್ತುಂಬ ನಕ್ಕರು. ಅಂತೂ ಕೆಲಸ ಮುಗಿದಿತ್ತು.
ಆ ಅನುಭವದ ಲಾಭ ಐವತ್ತು ವರ್ಷದ ಮೇಲೆ ಉಪಯೋಗಕ್ಕೆ ಬಂತು. ಅಮೇರಿಕಾಕ್ಕೆ ಮೊದಲ ಸಲ ವಿಮಾನ ಯಾನ. ೨೪ ಗಂಟೆಗಳ ಪಯಣ. ಕಕ್ಕಸಿಗೆ ಹೋದಾಗ ಅಲ್ಲಿ ನೀರಿನ ಸುಳಿವಿಲ್ಲ. ಮೊದಲು ಕಕ್ಕಾಬಿಕ್ಕಿಯಾದೆ. ನಂತರ ಅಲ್ಲಿಯೆ ಸುರುಳಿಸುರಳಿಯಾಗಿದ್ದ ಟಿಸ್ಯೂ ಕಾಗದ ಕಂಡಿತು. ತಕ್ಷಣ ಹಳೆಯದು ನೆನಪಾಗಿ ಸಮಸ್ಯೆ ಪರಿಹರಿಸಿಕೊಂಡೆ. ಇಂದು ಹಳ್ಳಿಗಳು ಹಾಗಿಲ್ಲ. ಅದು ಬೇರೆ ಮಾತು. ಬೀದಿ ದೀಪಳನ್ನು ಹೊತ್ತ ಕಂಬಗಳು ಹಗಲಲ್ಲಂತೂ ಎಲ್ಲ ಕಡೆ ಎದ್ದು ಕಾಣುತ್ತವೆ. ರಾತ್ರಿ ಕರೆಂಟ್ ಇದ್ದರೆ ಮಿಣಕ್‌ ಮಿಣಕ್‌ ಎನ್ನುತ್ತಿರುತ್ತವೆ. ಹಳ್ಳಿ ಹಳ್ಳಿಗೂ ಹೈಸ್ಕೂಲುಗಳೂ ತಲೆ ಎತ್ತಿವೆ. ಅದರಂತೆ ಸ್ಥಿತಿಗತಿಗಳೂ ಬಹಳ ಬದಲಾಗಿವೆ.
ನಾನು ಕೆಲಸ ಮಾಡಿದ್ದು ನಾಲ್ಕು ದಶಕಗಳ ಹಿಂದೆ. ಅದರಲ್ಲೂ ನಾನು ಗಣಿತದ ಮಾಸ್ತರನಾಗಿ. ನಾನು ಶಿಸ್ತಿನ ಶಿಪಾಯಿ ಎಂದು ಎಲ್ಲರಿಗೂ ಗೊತ್ತು. ಒಂದು ದಿನ ಹತ್ತನೆ ತರಗತಿಯಲ್ಲಿ ರೇಖಾ ಗಣಿತದ ಪಾಠ. ನಾನು ಕಪ್ಪುಹಲಗೆಯ ಮೇಲೆ ಚಿತ್ರ ಬಿಡಿಸುವಲ್ಲಿ ತಲ್ಲೀನ. ಅಷ್ಟರಲ್ಲಿ ಹುಡುಗಿಯರ ಗುಂಪಿನಲ್ಲಿ ಗುಸು ಗುಸು ಪಿಸ ಪಿಸ ಮಾತು ಕೇಳಿಸಿತು. ಹುಬ್ಬು ಗಂಟು ಹಾಕಿ ಅವರ ಕಡೆ ತಿರುಗಿದೆ. ಆಗ ಹುಡುಗರೂ ಹುಡುಗಿಯರೂ ಒಟ್ಟಿಗೆ ಕಲಿಯುತ್ತಿದ್ದ ಕಾಲ. ಹುಡುಗಿಯರ ಸಂಖ್ಯೆ ಹೆಚ್ಚಿಲ್ಲ. ತರಗತಿಯಲ್ಲಿ ಎಂಟು ಹತ್ತು ಮಾತ್ರ. ಆದರೆ ಹುಡುಗಿಯರು ಮಾತ್ರ ಶಾಲೆಗೆ ತಪ್ಪದೆ ಬರುತ್ತಿದ್ದರು. ಅದೂ ಹತ್ತೂವರೆ ಗಂಟೆಯ ತರಗತಿಗೆ ಹತ್ತು ಗಂಟೆಗೆ ಬಂದು ಕೂಡುತಿದ್ದರು. ಅದಕ್ಕೆ ಕಾರಣ ಅವರಿಗೆ ಕಲಿಯುವುದರ ಮೇಲಿನ ಆಸಕ್ತಿ. ಜತೆಗೆ ಮನೆಗೆಲಸ ತಪ್ಪಿಸಿಕೊಳ್ಳಲು ಬೇಗ ಬರುವುರು. ಮನೆಯಲ್ಲಿದ್ದರೆ ಕಸ ಗುಡಿಸು, ಪಾತ್ರೆ ತೊಳೆ, ಕೊನೆಗೆ ತಮ್ಮತಂಗಿಯರಂತೂ ಇದ್ದೆ ಇರುತಿದ್ದರು. ಆಗಿನ್ನೂ ಹೊಟ್ಟೆಯಲ್ಲೊಂದು, ಕೈನಲ್ಲೊಂದು ಮತ್ತು ಕೊಂಕುಳಲ್ಲಿ ಒಂದು ಮಗುವಿರುವ  ಕಾಲ. ಸರ್ಕಾರದ ಕುಟುಂಬ ಯೋಜನೆಯ ಘೋಷಣೆಯೆ ಎರಡು ಬೇಕು ಮೂರು ಸಾಕು ಎಂದಿತ್ತು. ಆದರೆ ಅದು ಗೋಡೆಗಳ ಮೇಲೆ ಬರಹದಲ್ಲಿ ಮಾತ್ರ.
ಹಿರಿಯ ತಲೆಗಳಂತೂ `ಯಾರಾದರೂ ನಿನ್ನ ಆಸ್ತಿ ಎಷ್ಟು? ಬಂಗಾರ ಎಷ್ಟಿದೆ?’ ಎಂದು ಕೇಳುತ್ತಾರೆಯೆ, ಅವರು ಕಂಡ ಕೂಡಲೆ ಕೇಳುವುದು ಮಕ್ಕಳೆಷ್ಟು? ಎಂದು. ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ. ಎಂದು ಬಲವಾಗಿ ನಂಬಿದ್ದರು. ಅಷ್ಟೆ ಅಲ್ಲ ದಂಪತಿಗಳು ನಮಸ್ಕರಿಸಿದರೆ `ಅಷ್ಟ ಪುತ್ರ ಪ್ರಾಪ್ತಿ ರಸ್ತುಎಂದು ಹರಸುತಿದ್ದರು. ಧನಲಕ್ಷ್ಮಿ, ಧಾನ್ಯಲಕ್ಷ್ಮಿ ಇಲ್ಲದಿದ್ದರೂ ಸಂತಾನಲಕ್ಷ್ಮಿಯ ಕೃಪಾಕಟಾಕ್ಷ ಯಥೇಚ್ಛವಾಗಿರುತಿತ್ತು. ಆದರೆ ಶಿಶು ಮರಣದ ಪ್ರಮಾಣವೂ ಅಧಿಕವಾದ್ದರಿಂದ ಅರ್ಧಕರ್ಧ ಬದುಕುಳಿದರೆ ಅದೆ ದೊಡ್ಡದು. ತಾಯಿಯ ಹೊಟ್ಟೆ ತಣ್ಣಗಿದೆ ಎನ್ನುತಿದ್ದರು. ಹಾಗಾಗಿ ಮನೆಯಲ್ಲಿ ಹಿರಿಯ ಮಗಳಾಗಿದ್ದರೆ ಕೆಲಸದ ಹೊರೆ ಬಹಳ. ಕೊನೆಗೆ ಏನಿಲ್ಲವೆಂದರೂ ಚಿಕ್ಕ ಮಗುವಿನ ತೊಟ್ಟಿಲು ತೂಗುವ ಕೆಲಸವಾದರೂ ಇದ್ದೆ ಇರುತಿತ್ತು. ಅದಕ್ಕೆಂದೆ ಹುಡುಗಿಯರು ಶಾಲೆಗೆ ಮುಂಚಿತವಾಗಿಯೆ ಬರುತಿದ್ದರು. ತರಗತಿಯಲ್ಲಿ ಅವರ ಸಂಖ್ಯೆ ಮೂವತ್ತಕ್ಕೂ ಮಿಕ್ಕಿರುತಿತ್ತು. ಹುಡುಗಿಯರನ್ನು ಪ್ರತ್ಯೇಕವಾಗಿ ಕೂಡಿಸಲಾಗುತ್ತಿತ್ತು. ಮಾತನ್ನೂ ಆಡುವಂತಿರಲಿಲ್ಲ. ಯಾರಾದರೂ ಹುಡುಗ ಹುಡುಗಿಯ ಜತೆ ಮಾತನಾಡಿದರೆ ಅದು ದೊಡ್ಡ ಸುದ್ದಿ. ಅದು ಏಕೋ ಏನೋ, ಹುಡುಗಿಯರಿಗಿಂತ ಹುಡುಗರೆ ಮಾತನಾಡಿಸಲು ನಾಚಿಕೆ ಪಡುತಿದ್ದರು. ಆದರೂ ಗಂಡು ಹುಡುಗರು ನೇತ್ರಾನಂದ ಮಾತ್ರ ಕಳೆದುಕೊಳ್ಳುತ್ತಿರಲಿಲ್ಲ.
ಗಣಿತ ತರಗತಿ ನಡೆಯುತಿತ್ತು. ಅದೂ ಭೂಮಿತಿ ಪಾಠ. ಬೋರ್ಡಿನ ಮೇಲೆ ಚಿತ್ರ ಹಾಕಲು ಅತ್ತ ತಿರುಗಿದೆ. ಹುಡುಗಿಯರ ಗುಂಪಿನಿಂದ ಕಿಲಕಿಲ ನಗುವಿನ ಸದ್ದು ಕೇಳಿಸಿತು. ನಾನು ಅವರತ್ತ ತಿರುಗಿ ದುರುಗುಟ್ಟಿ ನೋಡಿದೆ. ಅವರ ಮುಸು ಮುಸಿ  ನಗು ನಿಲ್ಲಲಿಲ್ಲ. ಪಾಠದ ಕಡೆ ಗಮನ ಕೊಡದೆ ಏಕೆ ನಗುತ್ತಿದ್ದೀರಿ, ಇಲ್ಲೇನು ಕೋತಿ ಕುಣಿಯುತ್ತಿದೆಯೇ? ಎಂದು ಗದರಿದೆ. ಎಲ್ಲರೂ ಗಪ್ಪಾದರೂ ಮಧ್ಯದ ಬೆಂಚಿನವವರ ಕಿಸಿ ಕಿಸಿ ನಗು ಕಡಿಮೆಯಾಗಲಿಲ್ಲ. ನೀವೆಲ್ಲ ಎದ್ದು ನಿಂತುಕೊಳ್ಳಿ, ಎಂದು ಗದರಿದೆ. ಎಲ್ಲರೂ ಎದ್ದು ನಿಂತರು. ತಲೆ ತಗ್ಗಿಸಿದ್ದರೂ ಮುಖದಲ್ಲಿನ ಮುಗುಳನಗೆ ಎದ್ದು ಕಾಣುತಿತ್ತು. ಏನಾಗಿದೆ ನಿಮಗೆ? ಯಾಕೆ ನಗುತ್ತಿದ್ದೀರಿ? ಎಂದೆ. ಅವರೆಲ್ಲ ಶಾಂತಳ ಕಡೆಗೆ ನೋಡಿದರು. ಶಾಂತ ತರಗತಿಯಲ್ಲಿ ಅಂತಹ ಜಾಣೆ ಅಲ್ಲ. ಅವಳ ತಂದೆ ಸ್ಥಿತಿವಂತರು. ಅವಳು ನೀಟಾಗಿ ಉಡುಪು ಧರಿಸಿ ಶಾಲೆಗೆ ಬರುತ್ತಿದ್ದಳು. ಅಂತಹ ಗಲಾಟೆಯ ಹುಡುಗಿಯಲ್ಲ. ಕಷ್ಟಪಟ್ಟು ಓದುತಿದ್ದಳು.
ಏನು ಶಾಂತ ಏನದು ಯಾಕೆ ಎಲ್ಲರೂ ನಿನ್ನ ಕಡೆ ನೋಡಿ ನಗುತ್ತಿದ್ದಾರೆ? ಪಾಠ ಮಾಡುವಾಗ ನಿನ್ನದು ಏನಿದು? ಗದರಿದೆ. ಅವಳು ತಗ್ಗಿಸಿದ ತಲೆ ಎತ್ತಲಿಲ್ಲ. ಉತ್ತರ ಕೊಡಲಿಲ್ಲ. ಆದರೆ ಅವಳು ನಗುತ್ತಿರಲಿಲ್ಲ.
ಪಕ್ಕದ ಹುಡುಗಿಯನ್ನು ಕೇಳಿದೆ. ಏನು, ಏಕೆ ನಗುತ್ತಿರುವಿರಿ. ಅವಳು ಮುಸಿ ಮುಸಿ ನಗುತ್ತಾ ಸಾರ್‌, ನಿನ್ನೆ ರಾತ್ರಿ ಬಿದ್ದ ಕನಸನ್ನು ಶಾಂತ ಹೇಳುತಿದ್ದಳು. ಅವಳ  ಕನಸಿನಲ್ಲಿ ನೀವು ಬಂದಿದ್ದಿರಂತೆ. ಅವಳ ಮಾತು ಕೇಳಿ ತರಗತಿಯಲ್ಲಿ ಎಲ್ಲರೂ ಗೊಳ್ಳನೆ ನಕ್ಕರು. ನಾನು ಒಂದು ಕ್ಷಣ ದಿಗ್ಮೂಢನಾದೆ. ನನಗಿನ್ನೂ ಇಪ್ಪತೆರಡರ ಹರೆಯ. ಮದುವೆಯಾಗಿರಲಿಲ್ಲ. ನನ್ನ ಕನಸಲ್ಲಿ ಬರುವವರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಕನಸು ಕಾಣಲು ಕಾಸು ಕೊಡಬೇಕಿಲ್ಲವಲ್ಲ. ಸುಪ್ತ ಮನಸ್ಸಿನ ಆಶೆಗಳು ಸ್ವಪ್ನರೂಪದಲ್ಲಿ ಕಾಣಿಸಿಕೊಳ್ಳುವುದು ವಯೋ ಸಹಜಕ್ರಿಯೆ. ಆದರೆ ಆ ಭಾವನೆ ನಡೆಯಲ್ಲಿ, ನುಡಿಯಲ್ಲಿ ನುಸಳಬಾರದೆಂಬ ವಿವೇಚನೆ ರಕ್ತಗತವಾಗಿತ್ತು. ಅದಕ್ಕೆಂದೆ ವಿದ್ಯಾರ್ಥಿಗಳ ಜತೆ ಸೂಕ್ತ ಅಂತರ ಕಾದುಕೊಂಡಿದ್ದೆ. ಅದರಲ್ಲೂ ವಿದ್ಯಾರ್ಥಿನಿಯರ ಜತೆ ಸಲಿಗೆಯಂತೂ ಇರಲೇ ಇಲ್ಲ. ಪಾಠದ ವಿಷಯ ಬಿಟ್ಟು ಬೇರೆ ಮಾತನ್ನೂ ಆಡುತ್ತಿರಲಿಲ್ಲ.
ಅವರ ಮಾತು ಕೇಳಿ ನನಗೆ ಗಾಬರಿಯಾಯಿತು. ಇದೇನಪ್ಪಾ ಫಜೀತಿ ಎನಿಸಿತು. ಕನಸಲ್ಲಿ ಏನಾಯಿತು ಎಂದು ಕೇಳಿದರೆ ಒಂದು ಸಮಸ್ಯೆ, ಕೇಳದೆ ಇದ್ದರೆ ಕೆಟ್ಟ ಕುತೂಹಲ ತಣಿಯುವ ಬಗೆ ಹೇಗೆ? ಹುಡುಗಿಯ ಕನಸಿನಲ್ಲಿ ಏನು ನಡೆಯಿತು ಎಂದು ನನಗೆ ಗೊತ್ತಾಗದಿದ್ದರೂ ಎಲ್ಲರಿಗೂ ಹೇಳಿಯೆ ಹೇಳಿರುತಿದ್ದಳು. ಸುದ್ದಿ ಊರೆಲ್ಲ ಹರಡುತಿತ್ತು. ಜತೆಗೆ ಒಂದಕ್ಕೆ ಹತ್ತು ಊಹಾಪೋಹಗಳು. ನಾನೇನೂ ಸುರ ಸುಂದರಾಂಗನೆಂಬ ಭ್ರಮೆ ಇರಲಿಲ್ಲ. ಆದರೂ ನನ್ನ ಬಗ್ಗೆ ಹುಡುಗಿಯರೂ ಕನಸು ಕಾಣುವರೆಂದರೆ ಸಾಮಾನ್ಯ ಮಾತೆ? ಅದೂ ಚಂದದ ಹುಡುಗಿಯರ ಕನಸಲ್ಲೂ ನಾನು ಹೋಗುವೆನೆಂದರೆ ಹೆಮ್ಮೆಯ ಸಂಗತಿ ಎನಿಸಿತು. ಒಂದು ಕ್ಷಣ ಎದೆಯುಬ್ಬಿತು. ಆದರೆ ಮರುಗಳಿಗೆಯಲ್ಲೆ ವೃತ್ತಿ ಸಂಹಿತೆ ನೆನಪಾಯಿತು. ಇಂತಹ ಯೋಚನೆಗಳಿಗೆ ಎಡೆಕೊಡಬಾರದು. ಕುಡಿಯಲ್ಲೆ ಚಿವುಟಿ ಹಾಕಲು ನಿರ್ಧರಿಸಿದೆ. ಬಂದದ್ದನ್ನು ಎದುರಿಸಲೆಬೇಕಿತ್ತು. ಅದಕ್ಕೊಂದು ಕೊನೆ ಮುಟ್ಟಿಸಬೇಕಿತ್ತು. ಆದದ್ದಾಗಲಿ ಎಂದು ನೇರವಾಗಿ ಅವಳನ್ನೆ ನೊಡುತ್ತಾ ಕೇಳಿದೆ.
ಹೌದೇನಮ್ಮಾ ನಾನು ನಿನ್ನ ಕನಸಿನಲ್ಲಿ ಬಂದಿದ್ದೆ, ಎಂದು ಇವರಿಗೆಲ್ಲ ಹೇಳಿದೆಯಾ? ಹೌದು ಎಂದು ತಲೆಯಾಡಿಸಿದಳು. ಇನ್ನು ಹಿಂಜರಿಕೆಯ ಮಾತೆ ಇಲ್ಲ. ಅನಿವಾರ್ಯವಾಗಿ ಕೇಳಲೇಬೇಕಾಯಿತು. ಎದೆ ಗಟ್ಟಿ ಮಾಡಿಕೊಂಡು ಕೇಳಿದೆ. ಕನಸಿನಲ್ಲಿ ಏನು ನಡೆಯಿತಮ್ಮಾ? `ಸಾರ್, ನೀವು ಹೋಮ್‌ವರ್ಕ್ ಕೊಟ್ಟಿದ್ದಿರಿ. ನಾನು ಲೆಕ್ಕ ಮಾಡಿರಲಿಲ್ಲ ಅಂತ ಜೋರಾಗಿ ಹೊಡೆದಿರಿ. ನಾನು ಬೆಚ್ಚಿಬಿದ್ದು ಎಚ್ಚತ್ತೆ...ನಾಚುತ್ತಾ ಹೇಳಿದಳು. ಆದರೆ ನೀನು ಹೋಮ್‌ ವರ್ಕ್ ತೋರಿಸಿದೆಯಲ್ಲಾ, ಕೇಳಿದೆ. ಕನಸು ಬಿದ್ದ ಮೇಲೆ ಎದ್ದು ಮಾಡಿದೆ. ಎಂದಳು.
ತರಗತಿಯಲ್ಲಿ ಗೊಳ್ಳೆಂದು ನಗೆ ಬುಗ್ಗೆ ಉಕ್ಕಿತು. ಅವಳ ಉತ್ತರದಿಂದ ನನ್ನ ಆವೇಗ, ಆತಂಕ ದೂರವಾಯಿತು. ನನ್ನ ಭ್ರಮಾಲೋಕದ ಬಲೂನು ಠುಸ್‌ ಎಂದಿತು. ಮನಸ್ಸು ನಿರಾಳವಾಯಿತು. ನಿನಗೆ ಕನಸಿನಲ್ಲಿ ಹೊಡೆದನೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ತರಗತಿಯಲ್ಲಿ ಪಾಠಕ್ಕೆ ತೊಂದರೆ ಮಾಡಿದರೆ ಖಂಡಿತವಾಗಿಯೂ ಈಗ ಏಟು ಬೀಳುತ್ತವೆ, ಎಂದು ಬೋರ್ಡಿನ ಕಡೆ ಚಿತ್ರ ಬರೆಯಲು ತಿರುಗಿದೆ.

No comments:

Post a Comment